೭೭೬
ಭಕ್ತರಿಗೆ ಅಕ್ಕೆ ಶೋಕ ದುಃಖವುಂಟೆ
ಅಯ್ಯಾ
ಅತ್ತು ಕಳೆವ ನೋವ ಹಾಡಿ ಕಳೆಯಲೇಕಯ್ಯಾ
ಈ ಮುಕ್ತಾಯಕ್ಕಗಳ ಕಕ್ಕುಲತೆಯ
ಶಂಭುಜಕ್ಕೇಶ್ವರನ ಶರಣರೊಪ್ಪರಯ್ಯಾ

೭೭೭
ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು
ದಾಸೋಹವ ಮಾಡಬಹುದೆ
ಒಮ್ಮನವ ತಂದು ಒಮ್ಮನದಲ್ಲಿಯೆ ಮಾಡಿ
ಇಮ್ಮನವಾಗದ ಮುನ್ನವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ಸಲಬೇಕು ಮಾರಯ್ಯಾ

೭೭೮
ಭಕ್ತಿ ಜ್ಞಾನ ವೈರಾಗ್ಯದಿಂದ ಅರಿಯಬೇಕೆಂಬುದು
ಭಕ್ತಿಯೊ ಜ್ಞಾನವೊ ವೈರಾಗ್ಯವೊ
ಮೂರಕ್ಕೆ ಬೇರೊಂದೆಡೆಯುಂಟೆ
ಅದರ ಎಡೆ ಗುಡಿಯ ತೋರಿ
ಬರಿಯ ಮಾತಿನ ಮಾಲೆ ಬೇಡ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

೭೭೯
ಭಕ್ತಿ ಸುಭಾಷೆಯ ನುಡಿಯ ನುಡಿವೆ
ನುಡಿದಂತೆ ನಡೆವೆ
ನಡೆಯೊಳಗೆ ನುಡಿಯ ಪೂರೈಸುವೆ
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು
ಕೂಡಲಸಂಗಮದೇವಾ

೭೮೦
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣು
ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ

೭೮೧
ಭಕ್ತಿಯೆಂಬುದ ಮಾಡಬಾರದು
ಕರಗಸದಂತೆ ಹೋಗುತ್ತ ಕೊಯ್ವುದು
ಬರುತ್ತ ಕೊಯ್ವುದು
ಘಟಸರ್ಪನಲ್ಲಿ ಕೈದುಡುಕಿದಡೆ
ಹಿಡಿವುದ ಮಾಬುದೆ
ಕೂಡಲಸಂಗಮದೇವಾ

೭೮೨
ಭಕ್ತಿಯೆಂಬುದು ಬೇರು
ವಿರಕ್ತಿಯೆಂಬುದೆ ಮರ
ಫಲವೆಂಬುದೆ ಜ್ಞಾನ
ಪಕ್ವಕ್ಕೆ ಬಂದಿತ್ತೆಂಬಾಗಲೆ ಅವಧಿಜ್ಞಾನ
ತೊಟ್ಟು ಬಿಟ್ಟಲ್ಲಿಯೆ ಪರಮಜ್ಞಾನ
ಸವಿದಲ್ಲಿಯೆ ಅಂತರೀಯಜ್ಞಾನ
ಸುಖ ತನ್ಮಯವಾದಲ್ಲಿಯೆ ದಿವ್ಯಜ್ಞಾನ
ದಿವ್ಯ ತೇಜಸ್ಸು ಹಿಂಗದಲ್ಲಿಯೆ ಪರಿಪೂರ್ಣಜ್ಞಾನ
ಅದು ಮಹದೊಡಲೆಂಬುದಕ್ಕೆ ಎಡೆಯಿಲ್ಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಅಪ್ರಮಾಣಾದ ಕಾರಣ

೭೮೩
ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ
ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು
ಒಂದೂರ ಭಾಷೆಯೊಂದೂರಲಿಲ್ಲ
ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ
ಇಂತೀ ಊರ ಹೊಕ್ಕ ತಪ್ಪಿಂಗೆ
ಕಾಯವ ಭೂಮಿಗೆ ಸುಂಕವ ತೆತ್ತು
ಜೀವವನುಳುಹಿಕೊಂಡು ಬರಬೇಕಾಯಿತ್ತು
ಇಂತೀ ಮಹಾಘನದ ಬೆಳಕಿನೊಳಗೆ
ಕಳೆದುಳಿದು ಸುಳಿದಾಡಿ
ನಿಮ್ಮ ಪಾದವ ಕಂಡು ಸುಯಿಧಾನಿಯಾದೆ ಕಾಣಾ
ಚೆನ್ನಮಲ್ಲಿಕಾರ್ಜುನಯ್ಯಾ

೭೮೪
ಭವಿ ಬೀಜವೃಕ್ಷದ ಫಲದೊಳಗೆ
ಭಕ್ತಿ ಬೀಜವೃಕ್ಷ ಪಲ್ಲವಿಸಿತ್ತು
ಆ ಭಕ್ತಿಬೀಜವೃಕ್ಷದ ಫಲದೊಳಗೆ
ಶರಣ ಬೀಜವೃಕ್ಷ ಪಲ್ಲವಿಸಿತ್ತು
ಆ ಶರಣ ಬೀಜವೃಕ್ಷದ ಫಲದೊಳಗೆ
ಕುಲನಾಶಕನಾದ ಶರಣ ಒಂದೆ ಬಸಿರಲ್ಲಿ ಬಂದ
ಬಂಧುಬಳಗಕ್ಕೆ ತನ್ನ ಕುಲಕ್ಕೆ ತಾನೆ ಮಾರಿಯಾದ ಶರಣ
ಭವಿ ಭಕ್ತ ಭವಿಬೀಜವೃಕ್ಷದ ತಂಪು ನೆಳಲನೆ ಬಿಟ್ಟು
ಕುಳ್ಳಿದ್ದಲ್ಲಿಯೆ ಬಳಿ ಬಳಿಯೆ ಬಯಲಾದ ಶರಣ
ನಾದ ಬಿಂದು ಬೀಜ ನಷ್ಟಹೊಳ್ಳಾಗಿ ಹಾರಿ ಹೋದಲ್ಲಿ
ಇನ್ನೇನ ಹೇಳಲುಂಟು
ಗುಹೇಶ್ವರನೆಂಬಲಿಂಗವನರಿದು
ಭವಿಗೆ ಭವಿಯಾದಾತಂಗೆ
ಇನ್ನೇನು ಪದವುಂಟಯ್ಯ

೭೮೫
ಭವಿ ಮಾಡಲಿಕ್ಕೆ ಪೃಥ್ವಿಯಾಯಿತ್ತು
ಭವಿ ಮಾಡಲಿಕ್ಕೆ ಅಪ್ಪುವಾಯಿತ್ತು
ಭವಿ ಮಾಡಲಿಕ್ಕೆ ತೇಜವಾಯಿತ್ತು
ಭವಿ ಮಾಡಲಿಕ್ಕೆ ವಾಯುವಾಯಿತ್ತು
ಭವಿ ಮಾಡಲಿಕ್ಕೆ ಆಕಾಶವಾಯಿತ್ತು
ಭವಿ ಮಾಡಲಿಕ್ಕೆ ಸೂರ್ಯಚಂದ್ರರಾದರು
ಭವಿ ಮಾಡಲಿಕ್ಕೆ ವಿಷ್ಣುವಾದ ರುದ್ರನಾದ ದೇವರ್ಕಳಾದರು
ಇದು ಕಾರಣ ಕೂಡಲಚೆನ್ನಸಂಗಯ್ಯ
ಭವಿಯಿಂದಾಯಿತ್ತು ಸಕಲ ಜಗವೆಲ್ಲ

೭೮೬
ಭವಿಯ ಕಳೆದೆವೆಂಬ ಮರುಳು ಜನಂಗಳು
ನೀವು ಕೇಳಿರೇ
ಭವಿಯಲ್ಲವೇ ನಿಮ್ಮ ತನುಗುಣಾದಿಗಳು
ಭವಿಯಲ್ಲವೇ ನಿಮ್ಮ ಪ್ರಾಣಗುಣಾದಿಗಳು
ಇವರೆಲ್ಲರು ಭವಿಗಳ ಹಿಡಿದು ಭವಭಾರಿಗಳಾದರು
ನಾನು ಭವಿಯ ಪೂಜಿಸಿ ಭವನಾಸ್ತಿಯಾದೆನು
ಗುಹೇಶ್ವರ

೭೮೭
ಭಸ್ಮವ ಹೂಸಿದಲ್ಲಿ ಶರಣನೆ ಅಲ್ಲಲ್ಲ
ಮಾಡುವ ಕ್ರಿಯೆ ಭಸ್ಮವಾದಡೆ ಶರಣ
ನೋಡುವ ಕೃತ್ಯ ರುದ್ರಾಕ್ಷಿಯಾದಡೆ ಶರಣ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ

೭೮೮
ಭಾವ ಬಲಿದಲ್ಲಿ ಲಿಂಗವೆನಿಸಿತ್ತು
ಭಾವ ವಿಭಾವವಾದಲ್ಲಿ ಪಾಷಾಣವೆನಿಸಿತ್ತು
ಭಾವ ನಿರ್ಭಾವವಾದಲ್ಲಿ ಏನೆಂದೆನಿಸದು ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

೭೮೯
ಭಾವದಲೊಬ್ಬ ದೇವರ ಮಾಡಿ
ಮನದಲೊಂದು ಭಕ್ತಿಯ ಮಾಡಿದರೆ
ಕಾಯದ ಕೈಯಲ್ಲಿ ಕಾರ್ಯವುಂಟೆ
ವಾಯಕ್ಕೆ ಬಳಲುವರು ನೋಡಾ
ಎತ್ತನೇರಿ ಎತ್ತನರಸುವರು
ಎತ್ತ ಹೋದರೈ
ಗುಹೇಶ್ವರ

೭೯೦
ಭಿಕಾರಿ ಭಿಕಾರಕ್ಕೆಳಸ
ಉಣ್ಣಲು ಉಡಲು ಕಾಣದಾತ ಭಿಕಾರಿ
ತನು ಮೀಸಲು ಮನ ಮೀಸಲು
ಬಾಯಿ ಬೋರು ಬೋರು
ಮರಣವಳಿದುಳಿತಾತ ಭಿಕಾರಿ
ಸಂಚಲದ ಪಂಚಕರಣಗಳ ತೆಗೆದುಂಡು
ರುಂಡಮಾಲೆಯ ರಣಮಾಲೆಯ
ಹೆಣಮಾಲೆಯ ಚಾರುಚ್ಚಿದಲ್ಲದೆ
ಭಿಕಾರಿ ಭೀಮೇಶ್ವರಲಿಂಗಕ್ಕೆ ದೂರ ಕಾಣಾ
ಕರುತಿರುವ ಗೊರವಾ

೭೯೧
ಭೂಪ ಗೋಪನ ನೆನೆದಡೆ ಗೋಪನಾಗಬಲ್ಲನೆ
ಅಂದಿನ ಗಣಂಗಳ ಕಂಡು ಇಂದಿನ ಜೀವಿಗಳು ನೆನೆನೆನೆದು
ಧನ್ಯರಾದೆವೆಂಬ ಪರಿಯ
ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ

೭೯೨
ಭೂಮಿ ಒಂದೆಂದಡೆ
ಬೆಳೆವ ವೃಕ್ಷ ಹಲವು ತೆರನುಂಟು
ಉದಕ ಒಂದೆಂದಡೆ
ಸವಿಸಾರದ ಸಂಪದ ಬೇರುಂಟು
ನಿನ್ನೊಳಗು ನಾನಾದಡೆ
ತಾಮಸದ ರಾಗವಿರಾಗವಾಗದು
ಕಪಿಲಸಿದ್ಧಮಲ್ಲಿಕಾರ್ಜುನಂಗವೆಂಬ ಪುರುಷರತಿ ಕೂಟಸ್ಥವಿಲ್ಲ

೭೯೩
ಭೂಮಿಯ ಕಠಿಣವನು
ಆಕಾಶದ ಮೃದುವನು
ತಿಳಿವ ಗಮನವಲ್ಲಿಯೆ ನಿಂದಿತ್ತು
ಉದಕದೊಳಗೆ ಹುಟ್ಟಿದ ತೃಷ್ಣೆ ಉದಕವನರಸಿತ್ತಲ್ಲಾ
ಒಳಗೆ ಸತ್ತು ಹೊರಗೆ ಆಡುತ್ತದೆ
ಗುಹೇಶ್ವರ ಬೆರಗಾಗಿ ಅಲ್ಲಿಯೆ ನಿಂದನು

೭೯೪
ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚಡೆ ಗರಿದೋರದಂತಿರಬೇಕು
ಅಪ್ಪಿದಡೆ ಅಸ್ತಿಗಳು ನಗ್ಗುನುಸಿಯಾಗಬೇಕು
ಬೆಚ್ಚಡೆ ಬೆಸುಗೆಯನರಿಯದಂತಿರಬೇಕು
ಮಚ್ಚು ಒಪ್ಪಿತ್ತು
ಚೆನ್ನಮಲ್ಲಿಕಾರ್ಜುನನ ಸ್ನೇಹ ತಾಯೆ

೭೯೫
ಮಡಕೆ ದೈವ ಮೊರ ದೈವ ಬೀದಿಯ ಕಲ್ಲು ದೈವ
ಹಣಿಗೆ ದೈವ ಬಿಲ್ಲನಾರಿ ದೈವ ಕಾಣಿರೊ
ಕೊಳಗ ದೈವ ಗಿಣ್ಣಿಲು ದೈವ ಕಾಣಿರೊ
ದೈವ ದೈವವೆಂದು ಕಾಲಿಡಲಿಂಬಿಲ್ಲ
ದೈವನೊಬ್ಬನೆ ಕೂಡಲಸಂಗಮದೇವ

೭೯೬
ಮಡದಿ ಎನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನ ಎನಗೆ
ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು
ಬಸವನೆನ್ನ ಶಿಶುವಾದನು
ಪ್ರಮಥರು ಪುರಾತರು ಸಾಕ್ಷಿಯಾಗಿ
ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಗಾನಡಗಿದೆ

೭೯೭
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದೀತ್ತೆ
ಒಡೆಯನ ಪ್ರಾಣಕ್ಕೆ ಇದ್ದೀತ್ತೆ ಯಜ್ಞೋಪವೀತ
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ
ನೀ ತೊಡಕಿಕ್ಕಿದ ತೊಡಕನೀ ಲೋಕದ ಜನರೆತ್ತ ಬಲ್ಲರೈ
ರಾಮನಾಥ

೭೯೮
ಮಣ್ಣೆಂಬ ಘಟದ ಮಧ್ಯದಲ್ಲಿ ಹೊನ್ನೆಂಬ ಸುರೆ ಹುಟ್ಟಿತ್ತು
ಹೆಣ್ಣೆಂಬ ಬಟ್ಟಲಲ್ಲಿ ಅಂತು ಈಂಟಲಾಗಿ ಲಹರಿ ತಲೆಗೇರಿತ್ತು
ಈ ಉನ್ಮತ್ತದಲ್ಲಿ ಮಗ್ನರಾದವರೆಲ್ಲರೂ ಅರುಹಿರಿಯರೆಂತಪ್ಪರೊ
ಭಕ್ತಿ ವಿರಕ್ತಿಯೆಂಬುದು ಇತ್ತಲೆ ಉಳಿಯಿತ್ತು
ಧರ್ಮೇಶ್ವರಲಿಂಗದತ್ತಮುಟ್ಟಿದಡಂತಿಲ್ಲ

೭೯೯
ಮದ್ದಿನ ಸುರೆಯ ತೊಗಲ ತಿತ್ತಿಯಲ್ಲಿ ತುಂಬಿ ಒಪ್ಪದಲ್ಲಿ ನಿಲಿಸಲಿಕೆ
ಅದು ತನ್ನ ಉತ್ಪಾತದಿಂದ ತಿತ್ತಿ ಹಾರಿ
ನೆಲಕ್ಕೆ ಅಪ್ಪಳಿಸಿ ಬೀಳೂದ ಕಂಡೆ
ದೃಷ್ಟವ ಕೇಳಲೇತಕ್ಕೆ
ಕಾಯದ ತಿತ್ತಿಯಲ್ಲಿ ಜೀವ ಹೊಕ್ಕು
ತ್ರಿವಿಧಮಲವಂ ಕಚ್ಚಿ ನಡೆವುದಕ್ಕೆ ಕಾಲಿಲ್ಲದೆ
ನುಡಿವುದಕ್ಕೆ ಬಾಯಿಲ್ಲದೆ
ನೋಡುವುದಕ್ಕೆ ಕಣ್ಣಾಲಿ ಮರೆಯಾಯಿತ್ತು
ಬೊಂಬೆ ಹೋಯಿತ್ತು
ದೃಷ್ಟಾಂತರ ಬೊಂಬೆ ಕೆಟ್ಟಲ್ಲಿ
ಮಣ್ಣಿಗೆ ಕಾದಿ ಹೊನ್ನಿಗೆ ಹೋರಿ
ಹೆಣ್ಣೆಂಗೆ ನಾಣುಗೆಟ್ಟ ಈ ಕುನ್ನಿಮನಕ್ಕೆ ಇನ್ನೇವೆ
ಧರ್ಮೇಶ್ವರಲಿಂಗಾ

೮೦೦
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ
ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ
ವಿಧಿಯ ಮೀರುವ ಅಮರರಿಲ್ಲ
ಕ್ಷುಧೆ ವಿಧಿ ವ್ಯಸನಕ್ಕಂಜಿ
ನಾ ನಿಮ್ಮ ಮರೆಹೊಕ್ಕು ಬದುಕಿದೆನು
ಚೆನ್ನಮಲ್ಲಿಕಾರ್ಜುನಾ