೮೦೧
ಮನ ಬಸುರಾದರೆ ಕೈ ಬೆಸಲಾಯಿತ್ತ ಕಂಡೆ
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ
ಒಂದು ನೀಲದೊಳಗೆ ಮೂರು ಲೋಕವಡಗಿತ್ತ ಕಂಡೆ
ಗುಹೇಶ್ವರ

೮೦೨
ಮನ ಮಂಕಾಯಿತ್ತು
ತನು ಮರೆಯಿತ್ತು
ವಾಯು ಬರತಿತ್ತು
ಉರಿ ಎದ್ದಿತ್ತು
ಹೊಗೆ ಹರಿಯಿತ್ತು
ಸರೋವರವೆಲ್ಲ ಉರಿದು ಹೋಯಿತ್ತು
ಒಳಕ್ಕೆ ಹೊಕ್ಕು ಕದವ ತೆಗೆದು
ಬಯಲು ನೋಡಿ ಬೆಳಗ ಕೂಡಿದಲ್ಲದೆ
ನಿಜಮುಕ್ತಿ ಇಲ್ಲವೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ

೮೦೩
ಮನಕ್ಕೆ ನಾಚದ ವಚನ
ವಚನಕ್ಕೆ ನಾಚದ ಮನ
ಕುಂದು ಹೆಚ್ಚ ನುಡಿವೆ
ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ
ಕೂಡಲಸಂಗನ ಶರಣರ ಎನ್ನಾಳ್ದರೆಂಬೆ

೮೦೪
ಮನದ ಕಾಲತ್ತಲು
ತನುವಿನ ಕಾಲಿತ್ತಲು
ಅನುಭಾವದನುವ ನೆನೆವುತ್ತ ನೆನೆವುತ್ತ ಗಮನಗೆಟ್ಟಿತ್ತು
ಲಿಂಗಮುಖದಲಾದ ಸೂಚನೆಯ ಸುಖವ ಕಂಡು ಗಮನಗೆಟ್ಟಿತ್ತು
ಅನುವಾಯಿತ್ತು ಅನುವಾಯಿತ್ತು
ಅಲ್ಲಿಯೇ ತಲ್ಲೀಯವಾಯಿತ್ತು
ಗುಹೇಶ್ವರನೆಂಬ ಲಿಂಗೈಕ್ಯಂಗೆ

೮೦೫
ಮನದ ಸುಖವ ಕಂಗಳಿಗೆ ತಂದರೆ
ಕಂಗಳ ಸುಖವ ಮನಕ್ಕೆ ತಂದರೆ
ನಾಚಿತ್ತು ಮನ ನಾಚಿತ್ತು
ಸ್ಥಾನಪಲ್ಲಟವಾದಡೆ ವ್ರತಕ್ಕೆ ಭಂಗ
ಗುಹೇಶ್ವರ

೮೦೬
ಮನವಿದ್ದಲ್ಲಿ ಮಹಾದೇವನಿಪ್ಪ
ಮನವಿದ್ದಲ್ಲಿ ಮಹಾದೇವನಿಲ್ಲವೋ
ಅಯ್ಯಾ
ಯಾತಾರ್ಥವಾಗಿ ಬಂದವರು
ಬಯಲಲ್ಲಿ ಬಯಲು ಬಿಟ್ಟು ಬಯಲಾರಿಸುವಂತೆ
ಮನೋವ್ಯಾಪಾರಕ್ಕದರಂತೆ ಇಪ್ಪ
ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ

೮೦೭
ಮನವೆ ಸರ್ಪ ತನು ಹೇಳಿಗೆ
ಹಾವಿನೊಡತಣ ಹುದುವಾಳಿಗೆ
ಇನ್ನಾವಾಗ ಕೊಂದಹುದೆಂದರಿಯೆ
ಇನ್ನಾವಾಗ ತಿಂದಹುದೆಂದರಿಯೆ
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೆ ಗಾರುಡ
ಕೂಡಲಸಂಗಮದೇವಾ

೮೦೮
ಮನೆ ನೋಡಾ ಬಡವರು
ಮನ ನೋಡಾ ಘನ
ಸೋಂಕಿನಲ್ಲಿ ಶುಚಿ ಸರ್ವಾಂಗ ಕಲಿಗಳು
ಪಸರಕ್ಕನುವಿಲ್ಲ ಬಂದ ತತ್‌ಕಾಲಕೆ ಉಂಟು
ಕೂಡಲಸಂಗನ ಶರಣರು ಸ್ವತಂತ್ರಧೀರರು

೮೦೯
ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ
ಬೇಡಿದಡೆ ಇಕ್ಕದಂತೆ ಮಾಡಯ್ಯ
ಇಕ್ಕಿದಡೆ ನೆಲಕ್ಕೆ ಬೀಳುವಂತೆ ಮಾಡಯ್ಯ
ನೆಲಕ್ಕೆ ಬಿದ್ದಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ
ಶುನಿಯೆತ್ತಿಕೊಂಬಂತೆ ಮಾಡಾ
ಚೆನ್ನಮಲ್ಲಿಕಾರ್ಜುನಯ್ಯ

೮೧೦
ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ
ಇರಿಯೆಂಬ ಮಾತಿಗೆ ಘಾಯವೊಡಲಾದುದುಂಟೆ
ಮಾತಿನ ಮಾಲೆಯ ನುಡಿದು ಅರ್ಕೇಶ್ವರಲಿಂಗವನರಿದವರುಂಟೆ

೮೧೧
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ
ಹೊಸ್ತಿಲೊಳಗೆ ಹುಲ್ಲು ಹುಟ್ಟಿ
ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ
ತನುವಿನೊಳಗೆ ಹುಸಿ ತುಂಬಿ
ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ
ಕೂಡಲಸಂಗಮದೇವಾ

೮೧೨
ಮರಕ್ಕೆ ಬೇರು ಬಾಯಿಯೆಂದು
ತಳಕ್ಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು
ನೋಡಾ
ಲಿಂಗದ ಬಾಯಿ ಜಂಗಮವೆಂದು
ಪಡಿಪದಾರ್ಥವು ನೀಡಿದಡೆ
ಮುಂದೆ ಸಕಳಾಥವನೀವನು
ಆ ಜಂಗಮವ ಹರನೆಂದು ಕಂಡು ನರನೆಂದು ಭಾವಿಸಿದಡೆ
ನರಕ ತಪ್ಪದು ಕಾಣಾ
ಕೂಡಲಸಂಗಮದೇವಾ

೮೧೩
ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ
ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ
ನೀ ಬೆರೆಸುವ ಭೇದಕ್ಕೆ ಬೆರಗಾದೆನಯ್ಯ
ರಾಮನಾಥ

೮೧೪
ಮರನ ತಾಳೂದಕ್ಕೆ ಪೃಥ್ವಿ ಆಧಾರವಾಗಿ
ಶಾಖೆಯ ತಾಳೂದಕ್ಕೆ ಮರನಾಧಾರವಾಗಿ
ಲತೆಯ ತಾಳೂದಕ್ಕೆ ಶಾಖೆ ಆಧಾರವಾಗಿ
ಲತೆಯ ಬಿಡುಮುಡಿಯಲ್ಲಿ ಕುಸುಮತೋರಿ
ಕುಸುಮದ ತೊಟ್ಟಿನಲ್ಲಿ ಕುಸುಮವಳಿದು
ಕಾಯಿ ಬಲಿದು ರಸ ಬಲಿದು ಹಣ್ಣಾದಂತೆ
ತೊಟ್ಟು ಬಿಡುವನ್ನಕ್ಕ ಕಾಯ ಶಿಲೆಯ ಪೂಜೆ
ಆತ್ಮ ಅರಿವಿನ ಪೂಜೆ
ಉಭಯಸ್ಥಲ ನಿರುತವಾಗಿ ಬಿಟ್ಟು ನಿಂದುದು ವಸ್ತುವಿನ ಉಳುಮೆ
ಆ ಉಳುಮೆ ಲೇಪವಾಗಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ

೮೧೫
ಮರನ ನೆಳಲಲಿದ್ದು ತನ್ನ ನೆಳಲನರಸಬಹುದೆ
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯಾ
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯಾ
ಆನು ಭಕ್ತನೆಂಬ ನುಡಿ ಸುಡದೆ ಕೂಡಲಸಂಗಮದೇವಾ

೮೧೬
ಮರನ ಹೂ ನುಂಗಿ
ಅಡಿಯೊಳಗಡಗಿ ಹಣ್ಣಾಯಿತ್ತು
ಹಣ್ಣು ಎಳೆಗಾಯಿ ನುಂಗಿ
ಹೂ ಮರನ ಉಗುಳಿತ್ತು
ಮರ ಮರಣಕ್ಕೆ ತೆರಹಿಲ್ಲ
ಏಣಾಂಕಧರ ಸೋಮೇಶ್ವರಲಿಂಗವನರಿತೆಹೆನೆಂದು

೮೧೭
ಮರನನೇರಿದ ಮರ್ಕಟನಂತೆ
ಹಲವು ಕೊಂಬಿಂಗೆ ಹಾಯುತ್ತಲಿದೆ
ಬೆಂದ ಮನವ ನಾನೆಂತು ನಂಬುವೆನಯ್ಯಾ
ಎಂತು ನಚ್ಚುವೆನಯ್ಯಾ ಎನ್ನ ತಂದೆ
ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯಾ

೮೧೮
ಮರನೊಳಗಣ ಕಿಚ್ಚು ಮರನ ಸುಟ್ಟಂತಾದೆನಯ್ಯ
ಬಯಲ ಗಾಳಿಯ ಪರಿಮಳ ನಾಸಿಕವನಪ್ಪಿದಂತಾದೆನಯ್ಯ
ಕರುವಿನ ಬೊಂಬೆಯನುರಿಗೊಂಡು ನಿಂದಂತಾದೆನಯ್ಯ
ಗುಹೇಶ್ವರನೆಂಬ ಲಿಂಗವ ಪೂಜಿಸಿ ಭವಗೆಟ್ಟೆ ನಾನಯ್ಯ

೮೧೯
ಮರನೊಳಗಣ ಪತ್ರೆಫಲಂಗಳು
ಮರಕಾಲವಶದಲ್ಲಿ ತೋರುವಂತೆ
ಹರನೊಳಗಣ ಪ್ರಕೃತಿಸ್ವಭಾವಂಗಳು
ಹರಭಾವದಿಚ್ಛೆಗೆ ತೋರುವವು
ಲೀಲೆಯಾದಡುಮಾಪತಿ
ಲೀಲೆ ತಪ್ಪಿದಡೆ ಸ್ವಯಂಭು
ಗುಹೇಶ್ವರ

೮೨೦
ಮರಮರ ಮಥನಿಸಿ ಕಿಚ್ಚು ಹುಟ್ಟಿ
ಸುತ್ತಣ ಮರುಮರಾದಿಗಳ ಸುಡಲಾಯಿತ್ತು
ಆತ್ಮ ಆತ್ಮ ಮಥನಿಸಿ ಅನುಭಾವ ಹುಟ್ಟಿ
ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು
ಇಂತಪ್ಪ ಅನುಭಾವರ ಅನುಭಾವವ ತೋರಿ
ಎನ್ನ ಒಡಲನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ

೮೨೧
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ
ಚೆನ್ನಮಲ್ಲಿಕಾರ್ಜುನಾ

೮೨೨
ಮರೆದವರ ಮನದಲ್ಲೆಲ್ಲವೂ ಮಾರಿ
ಅರಿದವರ ಮನದಲ್ಲೆಲ್ಲವೂ ಸ್ವಯಂಜ್ಯೋತಿ
ಡಕ್ಕೆಯ ದನಿ ಉಳ್ಳನ್ನಕ್ಕ ನಿಶ್ಚೈಸಿಕೊಳ್ಳಿ
ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ

೮೨೩
ಮರೆಯಲಾಗದು ಹರಿಯ
ಮರೆಯಲಾಗದು ಬ್ರಹ್ಮನ
ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ
ನಮ್ಮ ಕೂಡಲಸಂಗಮದೇವರ ಮರೆಯಲಹುದು

೮೨೪
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು
ಕೂಡಲಸಂಗಮದೇವಾ

೮೨೫
ಮಹಾರಾಜನನೆಲ್ಲರೂ ಬಲ್ಲರು
ಆ ರಾಜನು ಆರನೂ ಅರಿಯನು
ಅರಿಯನಾಗಿ ಪದವಿಲ್ಲ ಫಲವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ
ಮಹಾರಾಜಾಧಿರಾಜ ಶಿವನನೆಲ್ಲರೂ ಬಲ್ಲರು
ಆ ಶಿವನು ಅರಿಯನು
ಅರಿಯನಾಗಿ ಪದವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ
ಇದು ಕಾರಣ
ಶಿವನನರಿದ ಸದ್ಭಕ್ತರ ಸಂಗದಿಂದ
ಆ ಮಹಾಶಿವನು ತನ್ನನು ಅರಿವಂತೆ ಮಾಡಿಕೊಂಡನಾಗಿ
ಪದ ಫಲ ಭೋಗ ಪರಿಣಾಮ ಮತ್ತೆ ಉಂಟೇ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ