೮೨೬
ಮಳಲ ಮರೆಯ ನೀರ ಒಲವರವಿಲ್ಲದೆ ತೋಡಿ
ಚೆಲುಮೆಯ ಶೀಲವಂತರೆಂದು ಹಲುಬುತ್ತಿರಲೇತಕ್ಕೆ
ಸಲೆ ವಸ್ತುವನರಿತು ತ್ರಿವಿಧದ ಹೊಲಬಿನಾಸೆಯ ಬಿಟ್ಟು ಸಲೆಗೆದ್ದಡೆ
ಬೇರೊಂದು ಹೊಲಬ ತೋರಿಹನೆಂದನಂಬಿಗ ಚೌಡಯ್ಯ

೮೨೭
ಮಳಲಲ್ಲಿ ರಸ ಉಂಟೆ
ನೆಳಲಿಗೆ ತಡೆ ಉಂಟೆ
ರಣದಲ್ಲಿ ತಪ ಉಂಟೆ
ನೇಹ ತಪ್ಪಿದಲ್ಲಿ ಮೋಹವನರಸಲುಂಟೆ
ಮಹಾಲಿಂಗ ಚೆನ್ನರಾಮ
ಮನ ಮುರಿದ ಬಳಿಕ ಕಂಗಳಿಗೆ ವಿಷವಯ್ಯಾ

೮೨೮
ಮಾಗಿಯ ಹುಲ್ಲಿನ ಸೋಂಕಿನಂತೆ
ತನು ಪುಳಕಿತಳಾದಳವ್ವೆ
ನುಡಿ ತೊದಳು
ಆತನ ಒಲವೆ ಆಧಾರವಾಗಿದ್ದಳವ್ವೆ
ಬಿಳಿಯ ತುಂಬಿ ಕುಂಕುಮ ರಸದಲ್ಲಿ ಬಂಡುಂಡಂತೆ
ಮಹಾಲಿಂಗ ಗಜೇಶ್ವರನಲ್ಲಿ
ತನ್ನಲ್ಲಿ ತಾನೆ ರತಿಯಾಗಿರ್ದಳವ್ವೆ

೮೨೯
ಮಾಘಮಾಸದ ನವಿಲಿನಂತಾದೆ
ನೋಡವ್ವಾ
ಇರುಳು ತೊಲಗುವ ಜಕ್ಕವಕ್ಕಿಯಂತೆ ಹಲುಬುತಿರ್ದೆ
ನೋಡವ್ವಾ
ಮಾಗಿಯ ಕೋಗಿಲೆಯಂತೆ ಮೂಗಿಯಾಗಿರ್ದೆ
ನೋಡವ್ವಾ
ಮಹಾಲಿಂಗ ಗಜೇಶ್ವರನ ಅನುಭಾವ ಸಂಬಂಧಿಗಳ ಬರವು
ಎನ್ನ ಪ್ರಾಣದ ಬರವು
ನೋಡವ್ವಾ

೮೩೦
ಮಾಡಿ ಆಡಲೇತಕ್ಕೆ
ಸಲಹಿ ಕೊಲಲೇತಕ್ಕೆ
ಬಿತ್ತಿ ಕೀಳಲೇತಕ್ಕೆ
ಕಟ್ಟಿ ಒಡೆಯಲೇತಕ್ಕೆ
ಮಾಡಿ ಮಾಡಿ ಮನಗುಂದುವ
ನೀಡಿ ನೀಡಿ ನಿಜಗುಂದುವ ಬೇಡ
ಆ ಮಾಟವ ನಿನ್ನ ನೀನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

೮೩೧
ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೆ
ಮುಂದೊಂದ ಕಲ್ಪಿಸದೆ ಹಿಂದೊಂದ ಭಾವಿಸದೆ
ಸಲೆಸಂದಿದ್ದಾಗವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗವಿದ್ದ ಠಾವೆ ಕೈಲಾಸ

೮೩೨
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ ನೀಡುವ ನಿಜಗುಣವುಳ್ಳವರ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ

೮೩೩
ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ
ಮತ್ತಾರ ಹಿತಕ್ಕಲ್ಲ
ನೋಡಯ್ಯಾ
ನೋಡಿದರು ನೋಡಿದರು ತಮ್ಮ ಹಿತಕ್ಕಲ್ಲದೆ
ಮತ್ತಾರ ಹಿತಕ್ಕಲ್ಲ
ನೋಡಯ್ಯಾ ತನ್ನ ಬಿಟ್ಟನ್ಯಹಿತವ ನೋಡಿದಡೆ
ಕೂಡಿಕೊಂಬ ನಮ್ಮ ಕಪಿಲಸಿದ್ಧಮಲ್ಲಯ್ಯನವರ

೮೩೪
ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದಡೆ
ಒಳಗೆ ಕೆಚ್ಚಿಲ್ಲದಿರಬೇಕು
ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು
ಎನಗಿನ್ನಾವ ಭಯವಿಲ್ಲ ಕಾಣಾ
ಕೂಡಲಸಂಗಮದೇವಾ

೮೩೫
ಮಾಡುವ ಮಾಟವುಳ್ಳನ್ನಕ್ಕ ಬೇರೊಂದು ಪದವನರಸಲೇತಕ್ಕೆ
ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ
ಕೈಲಾಸವೆಂಬ ಆಸೆ ಬೇಡ
ಮಾರಯ್ಯಪ್ರಿಯ ಅಮಲೇಶ್ವರಲಿಂಗವಿದ್ದ ಠಾವೆ ಕೈಲಾಸ

೮೩೬
ಮಾಣಿಕವ ಕಂಡವರು ತೋರುವರೆ
ಅಯ್ಯಾ
ಮುತ್ತ ಕಂಡವರು ಅಪ್ಪಿಕೊಂಬರಲ್ಲದೆ
ಬಿಚ್ಚಿ ಬಿಚ್ಚಿ ತೋರುವರೆ
ಅಯ್ಯಾ
ಆ ಮುತ್ತಿನ ನೆಲೆಯನು ಮಾಣಿಕದ ಬೆಲೆಯನು
ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ
ಬಚ್ಚಬರಿಯ ಬೆಳಗಿನೊಳಗೋಲಾಡಿ
ನಿಮ್ಮ ಪಾದದೊಳಗೆ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ

೮೩೭
ಮಾತ ಅಲೇಖದ ಮೇಲಕೆ ಕುರುಹಿಟ್ಟಲ್ಲದೆ
ನೀತಿಲಕ್ಷಣವ ಕಾಣಬಾರದು
ಚಿತ್ತ ತಾ ಪೂಜಿಸುವ ವಸ್ತುವಿನಲ್ಲಿ ಲಕ್ಷಿಸಿಯಲ್ಲದೆ
ಮೇಲಣ ಅಲಕ್ಷವ ಕಾಣಬಾರದು
ಕಾಬನ್ನಕ್ಕ ಉಭಯದ ಆಚರಣೆ ತಾನುಳ್ಳನ್ನಕ್ಕ
ಕಾಲಾಂತಕ ಭೀಮೇಶ್ವರಲಿಂಗವ ಪೂಜಿಸಬೇಕು

೮೩೮
ಮಾತಂಗಿಯ ಹೊಳೆಯಲ್ಲಿ ಉತ್ತಮನ ನೆಳಲು ಸುಳಿದಡೆ
ರೂಪು ಹೊಲೆಯನಾಗಬಲ್ಲುದೆ
ಅಯ್ಯಾ
ಮರ್ತ್ಯಲೋಕದ ಮಾನವರೊಳಗೆ ಶರಣ ಸುಳಿದಡೆ
ಶರಣ ಸೂತಕಿಯಾಗಬಲ್ಲನೆ
ಅಯ್ಯಾ
ಮರ್ತ್ಯರ ಭವಿಯ ಮಾತ ವರ್ತಮಾನವೆಂಬ ಜೀವಿಗಳ
ಅಗೆದೊಗೆಯದೆ ಮಾಬನೆ ಮಹಾಲಿಂಗ ಗಜೇಶ್ವರಯ್ಯ

೮೩೯
ಮಾತನರಿದವಂಗೆ ಮಥನದ ಹಂಗೇಕೊ
ತೀರ್ಥವನರಿದವಂಗೆ ತೀರ್ಥದ ಹಂಗೇಕೊ
ಜ್ಯೋತಿಯನರಿದವಂಗೆ ಕತ್ತಲೆಯ ಹಂಗೇಕೊ
ಲೋಕವನರಿದವಂಗೆ ವ್ಯಾಕುಲದ ಹಂಗೇಕೊ
ಈ ತೆರನನರಿದವಂಗೆ ಮುಂದಾವ ಭೀತಿಯುಂಟು
ಹೇಳಾ ಬಸವಪ್ರಿಯ ಕೂಡಲಚೆನ್ನಬಸವಣ್ಣಾ

೮೪೦
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಆಳು ಕಂಡಾ
ವೇದವನೋದಿದವರ ಮುಂದೆ ಆಳು ಕಂಡಾ
ಶಾಸ್ತ್ರ ಕೇಳಿದವರ ಮುಂದೆ ಆಳು ಕಂಡಾ
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ

೮೪೧
ಮಾತಿನ ಹಂಗೇತಕ್ಕೆ ಮನವೇಕಾಂತದಲ್ಲಿ ನಿಂದ ಬಳಿಕ
ಬಸವಯ್ಯಾ
ಅಜಾತನ ಒಲುಮೆ ಏತಕ್ಕೆ ಅರ್ಪಿತದ ಹಂಗ ಹರಿದ ಬಳಿಕ
ಬಸವಯ್ಯಾ
ಎನಗೆ ಸಮಯಾಚಾರವಿನ್ನೇಕೆ ಭಕ್ತಿಭಾವ ನಷ್ಟವಾದ ಬಳಿಕ
ಬಸವಯ್ಯಾ
ಮಾತಿನ ಸೂತಕ ಹಿಂಗಿ ಮನೋಲೀಯವಾಯಿತ್ತಯ್ಯಾ
ಸಂಗಯ್ಯಾ
ಬಸವ ಕುರುಹಿಲ್ಲದ ಮೂರ್ತಿಯಾದ ಕಾರಣ

೮೪೨
ಮಾತಿಲ್ಲದ ಮಥನವ ಮಾಡಿ ಮೆರೆದೆ
ಬಸವಾ ನೀತಿಯಿಲ್ಲದೆ ನಿಜವ ತೋರಿ ಮೆರೆದೆ
ಬಸವಾ ಅನಿತನಿತು ತೃಪ್ತಿಯಮಾಡಿ ತೋದೆಯಯ್ಯಾ ಬಸವಾ
ನಿಮ್ಮಂಗ ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಲ್ಲಾ ಬಸವಾ

೮೪೩
ಮಾತು ಬ್ರಹ್ಮಾಂಡವ ಮುಟ್ಟಿ
ನೀತಿ ಮಾತಿನ ಬಾಗಿಲ ಕಾಯ್ವದು ಅದೇತರ ಮಾತು
ಆತುರವೈರಿ ಮಾರೇಶ್ವರಾ

೮೪೪
ಮಾತು ಮಾತಿಗೆ ಮಥನವ ಮಾಡುವಾತನೆ ಜಾತ
ಮಾತಿಗೆ ಮೊದಲ ಕಂಡಾತನೆ ಅಜಾತ
ಕಾತರಕ್ಕೆ ಕಂಗೆಟ್ಟು ಕಳವಳಿಸದಿಪ್ಪನೆ ಪರಮಾತ್ಮ
ನೀತಿ ನಿಜ ನೆಲೆಗೊಂಡಾತನೆ ಜಗನ್ನಾಥ
ಇವೇತರೊಳಗು ಸಿಕ್ಕದಿಪ್ಪಾತನೆ ಗುರುನಾಥ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ

೮೪೫
ಮಾತುಳ್ಳನ್ನಕ್ಕ ದೇಹ ಹಿಂಗದು
ನೆನಹುಳ್ಳನ್ನಕ್ಕ ಪ್ರಾಣ ಸೂತಕ ಬಿಡದು
ಕಾಯದ ಜೀವದ ಹೊಲಿಗೆಯ ಸಂದ ಬಿಚ್ಚಲರಿಯದು
ಆನು ನಿರ್ದೇಹಿ ಎಂದಡೆ ನಗರೆ ನಿಮ್ಮ ಪ್ರಮಥರು
ಎನ್ನ ಅಂತರಂಗದಲುಳ್ಳ ಅವಗುಣವ ಹಿಂಗಿಸಿ
ನಿಮ್ಮಂತೆ ಮಾಡಿದಡಾನುಳಿವೆನಲ್ಲದೆ
ಬೇರೆ ಗತಿಯ ಕಾಣೆ
ನೋಡಾ
ಅಯ್ಯಾ ಕಪಿಲಸಿದ್ಧಮಲ್ಲಿನಾಥಾ

೮೪೬
ಮಾತೆಂಬುದು ಜ್ಯೋತಿರ್ಲಿಂಗ
ಸ್ವರವೆಂಬುದು ಪರತತ್ತ್ವ
ತಾಳೋಷ್ಠ ಸಂಪುಟವೆಂಬುದೇ ನಾದಬಿಂದುಕಳಾತೀತ
ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ [ಕೇಳಾ ಮರುಳೆ]

೮೪೭
ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದಿತ್ತು
ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ
ಅದಕ್ಕೆ ಹೋಗಿ ಆಡುವ ನಾಟಕಸಾಲೆ
ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ ಕಾಲುಜಾರಿ
ನೆಲಕ್ಕೆ ಬಿದ್ದಳು
ಬಿದ ಘಾತಕ್ಕೆ ಯೋನಿ ಒಡೆಯಿತ್ತು
ಮೊಲೆ ಹರಿದು ಕಿವಿ ಕಿತ್ತು ಕಣ್ಣು ಹಿಂಚುಮುಂಚಾಯಿತ್ತು
ನೋಡುವ ಅಣ್ಣಗಳ ಬಯಕೆ ಹರಿಯಿತ್ತು
ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ ನೋಟಕ್ಕೆ ಬೆಂಬಳಿಯಿಲ್ಲ
ಪವನನ ಅಘಟ ಹೋಯಿತ್ತು ಕಾಲನ ಕಮಟಕ್ಕೆ
ನೀ ಅಲೇಖನಾದ ಶೂನ್ಯ
ಇವರಾಟದ ಬೆಂಬಳಿಯ ಬಿಡಿಸು
ಕಲ್ಲಿನೊಳಗಿಂದ ಇತ್ತ ಬಾರಯ್ಯ

೮೪೮
ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲಿದ್ದು
ಮೂಗ ಹಿಡಿದು ಧ್ಯಾನಮಾಡುವರಯ್ಯಾ
ಬಿಟ್ಟ ಮಂಡೆವೆರಸಿ ಬಾಯ ಮಿಡುಕಿಸುತ
ಕಣ್ಣ ಮುಚ್ಚಿ ಬೆರಳನೆಣಿಸುವರಯ್ಯಾ
ನಿಮ್ಮ ಕೈಯಲಿ ಕಟ್ಟಿದ ದರ್ಭೆಯ ಹುಲ್ಲು
ಕೂಡಲಸಂಗನನರಿಯದೆ ಮೊರೆಯಿಡುವಂತೆ

೮೪೯
ಮುಂಗೈಯಲ್ಲಿ ವೀರಗಂಕಣವಿಕ್ಕಿ
ಮುಂಗಾಲಲ್ಲಿ ತೊಡರು ಬಾವುಲಿಯ ಕಟ್ಟಿದೆ
ಗಂಡುಡಿಗೆಯನುಟ್ಟೆನೆಂಬ ಮಾತಿನ ಬಿರಿದ ನುಂಗಿದೆನು
ಚೆನ್ನಮಲ್ಲಿಕಾರ್ಜುನಾ
ನಿಮ್ಮಾಣೆಗೆ ಊಣೆಯವ ತಂದೆನಾದಡೆ
ನಿಮ್ಮ ತೊತ್ತಿನ ಮಗಳಲ್ಲಯ್ಯಾ

೮೫೦
ಮುಖವಿಲ್ಲದ ಕನ್ನಡಿಯ ನೋಡಲು
ಆ ಕನ್ನಡಿಯ ರೂಪಿನೊಳಗೆ ಸಂಗಯ್ಯನ ರೂಪು ಕಾಣಬಂದಿತ್ತು
ಆ ರೂಪನರಿದು ಪರಿಣಾಮವಕಂಡು ಬದುಕಿದೆನಯ್ಯಾ
ಪ್ರಸನ್ನದವಳಾಗಿ ಪ್ರಭಾಪರಿಣಾಮಿಯಾದೆನು
ಗಮನದಸಂಗ ನಿಸ್ಸಂಗವಾಗಿ ಎನಗಿರಪರವಿಲ್ಲವಯ್ಯಾ
ಸಂಗಯ್ಯಾ