೮೫೧
ಮುಟ್ಟಿತ್ತು ಕೆಟ್ಟತ್ತೆಂದಡೆ
ಇನ್ನರಸುವ ಠಾವಾವುದಯ್ಯಾ
ತನುವ ಮರೆದಡೆ ನೆನಹಿನೊಳಗದೇನೊ
ಹಾವು ಪರೆಗಳೆದಡೆ ವಿಷ ನಾಶವಪ್ಪುದೆ
ಶರಣನು ಕಾಯವೆಂಬ ಕಂಥೆಯ ಕಳೆದಡೆ ಗತ ಮೃತವಹನೆ
ಅರಿವು ಲಿಂಗದಲ್ಲಿ ಪ್ರತಿಷ್ಠೆಯಾಗಿ ನಿರ್ಲೇಪನಾಗಿ
ಮಹಾಲಿಂಗ ಕಲ್ಲೇಶ್ವರನಲ್ಲಿ ಲೀಯವಾದ ಶರಣ

೮೫೨
ಮುತ್ತು ನೀರಲಾಯಿತ್ತು
ವಾರಿಕಲ್ಲು ನೀರಲಾಯಿತ್ತು
ಉಪ್ಪು ನೀರಲಾಯಿತ್ತು
ಉಪ್ಪು ಕರಗಿತ್ತು ವಾರಿಕಲ್ಲು ಕರಗಿತ್ತು
ಮುತ್ತು ಕರಗಿದುದನಾರೂ ಕಂಡವರಿಲ್ಲ
ಈ ಸಂಸಾರಿ ಮಾನವರು
ಲಿಂಗವಮುಟ್ಟಿ ಭವಭಾರಿಗಳಾದರು
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ

೮೫೬
ಮುತ್ತು ನೀರೊಳಗೆ ಹುಟ್ಟಿ ಮರಳಿ ನೀರಾಗದಂತೆ
ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ
ತೊಟ್ಟುಬಿಟ್ಟ ಹಣ್ಣು ಹೂಮಿಡಿಯಾಗದಂತೆ
ಸಂಸಾರದಲ್ಲಿ ಹುಟ್ಟಿ ಅದ ಹೊದ್ದದೆ
ಸ್ವಯಂಪ್ರಕಾಶ ಲಿಂಗದ ಬೆಳಗಿನಲ್ಲಿ ಬೆಳೆದು
ತಲ್ಲೀಯವಾಗಿರ್ದರಯ್ಯಾ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು

೮೫೪
ಮುತ್ತು ಮೊಲೆಯ ನುಂಗಿತ್ತು
ಮೊಲೆ ಅಬಲೆಯ ನುಂಗಿತ್ತು
ಅಬಲೆಯ ಬಲೆಯಲ್ಲಿ ಬಲವಂತರೆಲ್ಲರು ಸಿಕ್ಕಿದರು
ಸುಂಕಕ್ಕಡಹಿಲ್ಲ ಬಂಕೇಶ್ವರಲಿಂಗಾ

೮೫೫
ಮುದ್ದ ನೋಡಿ ಮುಖವ ನೋಡಿ
ಮೊಲೆಯ ನೋಡಿ ಮುಡಿಯ ನೋಡಿ
ಕರಗಿ ಕೊರಗುವುದೆನ್ನ ಮನ
ಲಿಂಗದೇವನ ಧ್ಯಾನವೆಂದಡೆ
ಕರಗಿ ಕೊರಗದೆನ್ನ ಮನ
ಆನು ಭಕ್ತನೆಂಬಡೆ ಲಜ್ಜೆಯಿಲ್ಲ ನೋಡಯ್ಯಾ
ಎನ್ನ ತಂದೆ ಕೂಡಲಸಂಗಮದೇವಯ್ಯ
ಒಲಿದು ಒಪ್ಪಗೊಂಡನಾದಡೆ
ಆನು ಚೆಂಗಳೆಯ ಬಸುರಲ್ಲಿ ಬಾರದಿಹೆನೆ

೮೫೬
ಮುನ್ನೂರರುವತ್ತು ದಿನ ಶ್ರವವ ಮಾಡಿ
ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ
ಎನಿಸು ಕಾಲ ಲಿಂಗಾರ್ಚನೆಯ ಮಾಡಿ
ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ
ಕೊಡನ ತುಂಬಿದ ಹಾಲ ಕೆಡಹಿ
ಉಡುಗಲೆನ್ನಳವೆ
ಕೂಡಲಸಂಗಮದೇವಾ

೮೫೭
ಮುರು ಕೋಲ ಬ್ರಹ್ಮಂಗೆ ಅಳದು ಕೊಟ್ಟೆ
ನಾಲ್ಕು ಕೋಲ ವಿಷ್ಣುವಿಂಗೆ ಅಳದು ಕೊಟ್ಟೆ
ಐದು ಕೋಲ ರುದ್ರಂಗೆ ಆಳದು ಕೊಟ್ಟೆ
ಆರು ಕೋಲ ಈಶ್ವರಂಗೆ ಅಳದು ಕೊಟ್ಟೆ
ಒಂದು ಕೋಲ ಸದಾಶಿವಂಗೆ ಅಳದು ಕೊಟ್ಟೆ
ಇಂತೀ ಐವರು ಕೋಲಿನ ಒಳಗು ಹೊರಗಿನಲ್ಲಿ
ಅಳಲುತ್ತ ಬಳಲುತ್ತ ಒಳಗಾದರು
ಇಂತೀ ಒಳ ಹೊರಗ ಶೋಧಿಸಿಕೊಂಡು
ಅಳಿವು ಉಳಿವಿನ ವಿವರವನರಿಯಬೇಕು
ಧಾರೇಶ್ವರಲಿಂಗವನರಿವುದಕ್ಕೆ

೮೫೮
ಮೂರುವಣದ ಬೊಟ್ಟುಗ
ಆರು ವರ್ಣದ ಅಳಗ
ಐದು ವರ್ಣದ ಸಂಚಿಗ
ಇವರೊಳಗಾದ ನಾನಾ ವರ್ಣದ
ಅಜಕುಲ ಕುರಿವರ್ಗ
ಕೊಲುವ ತೋಳನ ಕುಲ
ಮುಂತಾದ ತ್ರಿವಿಧದ ಬಟ್ಟೆಯ ಮೆಟ್ಟದೆ
ಮೂರ ಮುಟ್ಟದೆ ಆರ ತಟ್ಟದೆ
ಐದರ ಬಟ್ಟೆಯ ಮೆಟ್ಟದೆ
ಒಂದೇ ಹೊಲದಲ್ಲಿ ಮೇದು
ಮಂದೆಯಲ್ಲಿ ನಿಂದು ಸಂದೇಹ ಕಳೆದು
ಉಳಿಯದ ಸಂದೇಹವ ತಿಳಿದು
ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು

೮೫೯
ಮೆಲ್ಲಮೆಲ್ಲನೆ ಭಕ್ತ
ಮೆಲ್ಲಮೆಲ್ಲನೆ ಮಾಹೇಶ್ವರ
ಮೆಲ್ಲಮೆಲ್ಲನೆ ಪ್ರಸಾದಿ
ಮೆಲ್ಲಮೆಲ್ಲನೆ ಪ್ರಾಣಲಿಂಗಿ
ಮೆಲ್ಲಮೆಲ್ಲನೆ ಶರಣ
ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು
ನಿಮ್ಮ ಶರಣರು
ತಾವೇನು ಮರುಜವಣಿಯ ಕೊಂಡರೇ
ಅಮೃತಸೇವನೆಯ ಮಾಡಿದರೇ
ಆವ ಸ್ಥಲದಲ್ಲಿ ನಿಂದಡೆಯೂ
ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ
ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ
ಕೂಡಲಚೆನ್ನಸಂಗಮದೇವ

೮೬೦
ಮೆಳೆಯ ಮೇಲಣ ಕಲ್ಲು
ಜಗದೆರೆಯನಾಗಬಲ್ಲುದೆ
ಮೆಳೆ ಶಿವಭಕ್ತನಾಗಬಲ್ಲುದೆ
ನಿಮ್ಮ ತನುಮನಧನವರಿಯದಿದ್ದಡೆ
ಸದುಭಕ್ತರಹರೆ
ರಾಮನಾಥ

೮೬೧
ಮೆಳೆಯ ಮೇಲೆ ಕಲ್ಲನಿಕ್ಕಿದಡೆ
ಮೆಳೆ ಭಕ್ತನಾಗಬಲ್ಲುದೆ
ಮೇಹನಿಕ್ಕಿ ಮೆಯ್ಯನೊರಸಿದಡೆ
ಪಶುಗಳೆಲ್ಲ ಮೆಚ್ಚುವವು
ಅನ್ನವನಿಕ್ಕಿ ಹಿರಣ್ಯವ ಕೊಟ್ಟಡೆ
ಜಗವೆಲ್ಲ ಹೊಗಳುವುದು
ಒಳಗನರಿದು ಹೊರಗೆ ಮರೆದವರ
ಎನಗೆ ತೋರಿಸಾ
ಸಕಳೇಶ್ವರದೇವಾ

೮೬೨
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದರೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ
ದೇವ ನಿಮ್ಮ ಪೂಜಿಸಿ ದಾವತಿಗೊಂಬಡೆ
ಆ ದಾವತಿಯಿಂದ ಮುನ್ನಿನ ವಿಧಿಯೇ ಸಾಲದೆ
ಗುಹೇಶ್ವರ
ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊರಗಣ ಜವನೆ ಸಾಲದೆ

೮೬೩
ಮೇಲನರಿತಲ್ಲಿ ಕೀಳಿಲ್ಲ
ಕೀಳನರಿತಲ್ಲಿ ಮೇಲಿಲ್ಲ
ಮೇಲು ಕೀಳೆಂಬ ಬೋಳು ಮಾಡಿ
ಧೂಳಾಗಬಲ್ಲರೆ ಹೇಳಲಿಲ್ಲ ಕೇಳಲಿಲ್ಲ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಮಿಗೆ ಮಿಗೆ ಬಯಲು

೮೬೪
ಮೇಲಾಗಲೊಲ್ಲೆನು ಕೀಳಾಗಲಲ್ಲದೆ
ಕೀಳಿಂಗಲ್ಲದೆ ಹಯನು ಕರೆವುದೆ
ಮೇಲಾಗಿ ನರಕದಲೋಲಾಡಲಾರೆನು
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು
ಮಹಾದಾನಿ ಕೂಡಲಸಂಗಮದೇವಾ

೮೬೫
ಮೈಗೆ ಕಾಹ ಹೇಳುವರಲ್ಲದೆ
ಮನಕ್ಕೆ ಕಾಹ ಹೇಳುವರೆ
ಅಣಕದ ಮಿಂಡನ ಹೊಸ ಪರಿಯ ನೋಡಾ
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು

೮೬೬
ಮೊದಲು ಬೀಜ ಬಲಿದು
ಕಡೆಯಲ್ಲಿ ಬೀಜ ಅಳಿದಲ್ಲದೆ ಅಂಕುರವಾಗದು
ಕ್ರೀಯಲ್ಲಿ ಆಚರಿಸಿ ಅರಿವಿನಲ್ಲಿ ವಿಶ್ರಮಿಸಿ
ತುರೀಯ ಆತುರ ಸಮನವೆಂಬ
ತ್ರಿವಿಧ ಲೇಪವಾಗಿ ಕಂಡ ಉಳುಮೆ
ಅರ್ಕೇಶ್ವರಲಿಂಗನ ಅರಿಕೆ

೮೬೭
ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು
ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು
ಭಾಷೆ ತಪ್ಪಿದ ಬಳಿಕ ದೇವಾ
ಬಲ್ಲಿದ ಭಕ್ತನೇನ ಮಾಡುವನು
ಭಾಷೆ ತಪ್ಪಿದ ಬಳಿಕ
ಪ್ರಾಣದಾಸೆಯನು ಹಾರಿದಡೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವಾ

೮೬೮
ಮೊಲೆ ಬಿದ್ದು ಮುಡಿ ಸಡಿಲಿ ಗಲ್ಲ ಬತ್ತಿ ತೋಳು ಕಂದಿದವಳ
ಎನ್ನನೇಕೆ ನೋಡುವಿರಿ ಎಲೆ ಅಣ್ಣಗಳಿರಾ
ಕುಲವಳಿದು ಛಲವಳಿದು ಭವಗೆಟ್ಟು ಭಕ್ತೆಯಾದವಳ
ಎನ್ನನೇಕೆ ನೋಡುವಿರಿ ಎಲೆ ತಂದೆಗಳಿರಾ
ಚನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದು ಛಲವಳಿದವಳು

೮೬೯
ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ
ರಾಮನಾಥ

೮೭೦
ಮೊಲೆ ಮುಡಿ ಮುಖದ ಅಸಿಯ ನಡುವಿನವಳ ಕಂಡಡೆ
ಬ್ರಹ್ಮಚಾರಿಯಾದಡೇನು ಮನದಿ ಅಳುಪದಿಪ್ಪನೆ
ತನುವಿನ ಮೇಲೆ ಬ್ರಹ್ಮಚಾರಿತ್ರವಳವಟ್ಟಡೇನು
ಮನದ ಮೇಲೆ ಬ್ರಹ್ಮಚಾರಿತ್ರವಳವಡದನ್ನಕ್ಕ
ಸಕಲೇಶ್ವರದೇವ ನೀ ಅರ್ಧನಾರಿಯಲ್ಲವೆ

೮೭೧
ರತ್ನದ ಸಂಕೋಲೆಯಾದಡೆ ತೊಡರಲ್ಲವೆ
ಮುತ್ತಿನ ಬಲೆಯಾದಡೆ ಬಂಧನವಲ್ಲವೆ
ಚಿನ್ನದ ಕತ್ತಿಯಲ್ಲಿ ತಲೆಯ್ದಡೆ ಸಾಯದಿರ್ಪರೆ
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ

೮೭೨
ರೂಪನೆ ಕಂಡರು
ನಿರೂಪನೆ ಕಾಣರು
ತನುವನೆ ಕಂಡರು
ಅನುವನೆ ಕಾಣರು
ಆಚಾರವನೆ ಕಂಡರು
ವಿಚಾರವನೆ ಕಂಡರು
ಗುಹೇಶ್ವರ
ನಿಮ್ಮ ಕುರುಹನೆ ಕಂಡು
ಕೂಡಲರಿಯದೆ ಕೆಟ್ಟರು

೮೭೩
ರೂಪಿಂಗೆ ಕೇಡುಂಟು
ನಿರೂಪಿಂಗೆ ಕೇಡಿಲ್ಲ
ರೂಪ ನಿರೂಪಿನೊಳೊಡಗೂಡುವ ಪರಿಯೆಂತು ಹೇಳಾ
ಸಂಬಂಧ ಅಸಂಬಂಧವಾಗಿದೆ
ಪಂಚೇಂದ್ರಿಯವೆಂಬ ಜಾತಿಸೂತಕವಿರಲು
ಗುಹೇಶ್ವರಲಿಂಗನ ಮುಟ್ಟ ಬಾರದು [ಕೇಳವ್ವಾ]

೮೭೪
ರೂಪಿಂಗೆ ನಿರೂಪೆಂದು ಕುರುಹಿಟ್ಟುಕೊಂಡಿಪ್ಪರು
ರೂಪಿನೊಳಗೆ ತಿರುಗಾಡುವ ನಿರೂಪೆಂದರಿಯದೆ
ರೂಪಡಗಿದಲ್ಲಿ ಹಿಡಿದೆ ಬಿಟ್ಟೆನೆಂಬ ಸಂದೇಹವಡಗಿತ್ತು
ಅಡಗುವನ್ನಬರ ತಾನೆ ಕುರುಹೆ
ಬೇವಿಂಗೆ ಕಹಿ ಬೆಲ್ಲಕೆ ಸಿಹಿ ಇವ ಎರಡಳಿದಲ್ಲಿ
ನಾನೀನೆಂಬನ್ನಕ್ಕ ಏನೂ ಎನಲಿಲ್ಲ
ಅದು ನಾಮ ನಷ್ಟವಾಗೆ ಆದಲ್ಲಿ
ಅದೆ ಕಳೆಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ

೮೭೫
ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದುವು
ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು
ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು
ಅಕ್ಷರದಲ್ಲಿಲ್ಲ ಶಬ್ದದಲ್ಲಿಲ್ಲ ಗ್ರಂಥಾನ್ವಯದಲ್ಲಿಲ್ಲ
ಏನೆಂಬುದಿಲ್ಲ ಮೊದಲೆ ಇಲ್ಲ
ಇಲ್ಲೆಂಬುವ ಅಹುದೆಂಬುವ ಉಭಯ ಶಬ್ದಕ್ಕೆ ಲೋಪವಿಲ್ಲ
ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ ಮಹಾಮಹಿಮನು