೮೭೬
ಲಕ್ಷದ ಮೇಲೆ ತೊಂಬತ್ತಾರು ಸಾವಿರ ವಚನ
ನಿತ್ಯಭಂಡಾರಕ್ಕೆ ಸಂದಿತ್ತಯ್ಯಾ
ಬೆಟ್ಟಕ್ಕೆ ಬಳ್ಳು ಬಗುಳಿದಂತಾಯಿತ್ತಯ್ಯ
ಕರೆದುಕೊಳ್ಳಯ್ಯಾ
ಕರೆದುಕೊಳ್ಳಯ್ಯಾ
ಓ ಎನ್ನಯ್ಯಾ
ಓ ಎನ್ನಯ್ಯಾ
ಕೂಡಲ ಸಂಗಮದೇವ

೮೭೭
ಲತೆ ಹಲವು ಶಾಖೆಯಲ್ಲಿ ಹರಿದು ಸುತ್ತಿದಡೆ
ಮೂಲವ ಕಿತ್ತಲ್ಲಿಯೆ ಹಲವು ಬಳ್ಳಿ ಒಣಗುವಂತೆ
ಸ್ಥಲ ಕುಳಂಗಳು ಭಿನ್ನಭಾವವಾಗಿ ತೋರುವ ಇರವು
ಅರಿತಲ್ಲಿಯೇ ನಷ್ಟವಾಯಿತ್ತು
ಏಣಾಂಕಧರ ಸೋಮೇಶ್ವರಲಿಂಗ ತಾನು ತಾನೆ

೮೭೮
ಲಿಂಗ ಒಳಗೊ ಹೊರಗೋ
ಬಲ್ಲಡೆ ನೀವು ಹೇಳಿರೆ
ಲಿಂಗ ಎಡನೋ ಬಲನೋ
ಬಲ್ಲಡೆ ನೀವು ಹೇಳಿರ
ಲಿಂಗ ಮುಂದೋ ಹಿಂದೋ
ಬಲ್ಲಡೆ ನೀವು ಹೇಳಿರೆ
ಲಿಂಗ ಸ್ಥೂಲವೋ ಸೂಕ್ಷ್ಮವೋ
ಬಲ್ಲಡೆ ನೀವು ಹೇಳಿರೆ
ಲಿಂಗ ಪ್ರಾಣವೋ ಪ್ರಾಣ ಲಿಂಗವೋ
ಬಲ್ಲಡೆ ನೀವು ಹೇಳಿರೆ ಗುಹೇಶ್ವರಲಿಂಗವನು

೮೭೯
ಲಿಂಗವಿಡಿದು ಅರಿದರಿವು ಅರಿವಲ್ಲ
ಗುರುವಿಡಿದು ಅರಿದರಿವು ಅರಿವಲ್ಲ
ಗುರುವಿಡಿದು ಲಿಂಗ ಉಂಟೆಂಬುದು ಕಲ್ಪಿತ
ತನ್ನಿಂದ ತಾನಹುದಲ್ಲದೆ
ಗುಹೇಶ್ವರಲಿಂಗದಲ್ಲಿ ಹಂಗು ಹರಿಯದನ್ನಕ್ಕರ
ತಾನಾಗಬಾರದು ಕಾಣಾ [ಚೆನ್ನಬಸವಣ್ಣ]

೮೮೦
ಲೇಸ ಕಂಡು ಮನ ಬಯಸಿ ಬಯಸಿ ಆಸೆ ಮಾಡಿದಡಿಲ್ಲ
ಕಂಡಯ್ಯಾ
ತಾಳಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ
ಕೂಡಲಸಂಗಮದೇವಾ
ಕೇಳಯ್ಯಾ
ನೀನೀವ ಕಾಲಕ್ಕಲ್ಲದಿಲ್ಲ
ಕಂಡಯ್ಯಾ

೮೮೧
ಲೋಕ ತನ್ನೊಳಗಾದ ಬಳಿಕ
ಲೋಕದ ಸೊಮ್ಮುತನಗೇಕಯ್ಯಾ
ಪರುಷ ತಾನಾದ ಬಳಿಕ
ಸುವರ್ಣದ ಸೊಮ್ಮು ತನಗೇಕಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ

೮೮೨
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ
ಎನಗುಳ್ಳುದೊಂದು ಮನ
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ

೮೮೩
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ
ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ
ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ

೮೮೪
ಲೋಕದವರನೊಂದು ಭೂತ ಹಿಡಿದರೆ
ಆ ಭೂತದಿಚ್ಛೆಯಲ್ಲಿ ನುಡಿವುತ್ತಿಪ್ಪರು
ಲಾಂಛನಧಾರಿ ವೇಷವ ಧರಿಸಿ
ಆಶೆಯಿಂದ ಘಾಸಿಯಾಗಲೇಕಯ್ಯ
ಆನೆಯ ಚೋಹವ ತೊಟ್ಟು
ನಾಯಾಗಿ ಬೊಗಳುವ
ಮಾನವರನೇನೆಂಬೆ
ಗುಹೇಶ್ವರ

೮೮೫
ಲೋಕವ ತಾ ಹೇಸಿದ ಬಳಿಕ
ತನ್ನ ಲೋಕ ಹೇಸುವಂತಿರಬೇಕು
ಲೋಕದ ಚಾರಿತ್ರ ಶೃಂಗಾರವ ತಾ ಹೇಸಿದ ಬಳಿಕ
ತನ್ನ ಚಾರಿತ್ರ ಶೃಂಗಾರವ ಲೋಕ ಕಂಡು ಹೇಸುವಂತಿರಬೇಕು
ದೇಹಗುಣರಹಿತವಾದ ವಿರಕ್ತಿ
ಜ್ಞಾನಕ್ಕೆ ಇದೇ ಯುಕ್ತಿ
ಈ ಯುಕ್ತಿಯ ತಿಳಿದಡೆ ಅದೇ ಮುಕ್ತಿ
ಸಿಮ್ಮಲಿಗೆಯ ಚೆನ್ನರಾಮಾ

೮೮೬
ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ
ಆಕಾರವಿಡಿದು ಸಾಕಾರಸಹಿತ ನಡೆವೆ
ಹೊರಗೆ ಬಳಸಿ ಒಳಗೆ ಮರದಿಪ್ಪೆ
ಬೆಂದನುಲಿಯಂತೆ ಹುರಿಗುಂದದಿಪ್ಪೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ
ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ

೮೮೭
ಲೋಕಾಂತವಳಿದು ಏಕಾಂತ ಉಳಿದಲ್ಲಿ
ಏಕೈಕಮೂರ್ತಿಯ ಸಂಗ ಸಮನಿಸಿತ್ತೆನಗೆ
ಎನ್ನ ನುಡಿ ಆತನ ಕಿವಿಗೆ ಇನಿದಾಯಿತ್ತು
ಆತನ ನುಡಿ ಎನ್ನ ಕಿವಿಗೆ ಇನಿದಾಯಿತ್ತು
ಇಬ್ಬರ ನುಡಿಯೂ ಒಂದೇಯಾಗಿ ನಿಶ್ಯಬ್ದ ಛೇದಿಸಿತ್ತು
ಈ ಸುಖದ ಸೋಂಕಿನ ಪುಣ್ಯದ ಫಲದಿಂದ
ಅನುಪಮಚರಿತ್ರ ಪ್ರಭುದೇವರ ನಿಲವ ಕಂಡು
ನಾನು ಧನ್ಯನಾದೆನು ಕಾಣಾ
ಏಕಾಂತ ವೀರಸೊಡ್ಡಳಾ

೮೮೮
ವಚನದಲ್ಲಿ ನಾಯಾಮೃತ ತುಂಬಿ
ನಯನದಲ್ಲಿ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ಕೀರುತಿ ತುಂಬಿ
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಗಾನು ತುಂಬಿ

೮೮೯
ವಚನರಚನೆಯ ಅನುಭಾವವ ಬಲ್ಲೆವೆಂದೆಂಬರು
ವಚನವಾವುದು ರಚನೆಯಾವುದು ಅನುಭಾವವಾವುದು
ಹೇಳಿರಣ್ಣಾ
ವಚನ
ಆತ್ಮತುಷ್ಟಿಯನರಿಯ ಬಲ್ಲಡೆ
ರಚನೆ
ಸ್ಥಾವರ ಜಂಗಮದಲ್ಲಿ ದಯವಾಗಿರಲ್ಲಡೆ
ಅನುಭಾವ
ಇಂತಲ್ಲದೆ
ಅರಿಷಡ್ವರ್ಗಂಗಳ ಇಚ್ಛೆಗೆ ಹರಿಯದಿರಬಲ್ಲಡೆ
ನಾಲ್ಕು ವೇದಶಾಸ್ತ್ರಂಗಳ ಬಲ್ಲೆನೆಂದು ನುಡಿವಾತನನುಭಾವಿಯೆ
ಅಲ್ಲ ಅವು ಬ್ರಹ್ಮನೆಂಜಲು
ಇದನರಿಯದೆ ವಿದ್ಯಾಭ್ಯಾಸವ ಬಲ್ಲೆನೆಂದು
ನುಡಿವಾತನನುಭಾವಿಯೆ
ಅಲ್ಲ ಆತನು ಇದಿರ ನಂಬಿಸಿ ಉಂಬ ಉದರಪೋಷಕನಯ್ಯಾ
ಕೂಡಲಚೆನ್ನಸಂಗಮದೇವಾ

೮೯೦
ವಚನಾನುಭವ ವಾಗ್ರಚನೆಯಲ್ಲಿ ಮನವೆ
ವಚನಾನುಭವ ವಾಗ್ರಚನೆಯಲ್ಲ
ವಚನಾನುಭವೋ ವಚೋ ನ
ಎಂಬುದು ಶ್ರುತಿಸಿದ್ಧ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ

೮೯೧
ವಚನಾರ್ಥವ ಕಂಡಹರೆಂದು
ರಚನೆಯ ಮರೆಮಾಡಿ ನುಡಿಯಲೇತಕ್ಕೆ
ದಾರಿಯಲ್ಲಿ ಸರಕು ಮರೆಯಲ್ಲದೆ
ಮಾರುವಲ್ಲಿ ಮರೆ ಉಂಟೆ
ತಾನರಿವಲ್ಲಿ ಮರೆಯಲ್ಲದೆ
ಬೋಧೆಗೆ ಮರೆಯಿಲ್ಲ ಎಂದನಂಬಿಗ ಚೌಡಯ್ಯ

೮೯೨
ವನದ ಕೋಗಿಲೆ ಮನೆಗೆ ಬಂದಡೆ
ತನ್ನ ವನವ ನೆನೆವುದ ಮಾಣ್ಬುದೆ
ಮಲೆಯ ಗಜ ಮನೆಗೆ ಬಂದಡೆ
ತನ್ನ ಮಲೆಯ ನೆನೆವುದ ಮಾಣ್ಬುದೆ
ಕೂಡಲಸಂಗನ ಶರಣರು ಮರ್ತ್ಯಕ್ಕೆ ಬಂದಡೆ
ತಮ್ಮ ಆದಿಮಧ್ಯಾಂತರಂಗದ ಲಿಂಗವ ನೆನೆವುದ ಮಾಣ್ಬರೇ

೮೯೩
ವನವೆಲ್ಲಾ ನೀನೆ
ವನದೊಳಗುಣ ದೇವತರುವೆಲ್ಲಾ ನೀನೆ
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ
ಚೆನ್ನಮಲ್ಲಿಕಾರ್ಜುನಾ ಸರ್ವಭರಿತನಾಗಿ
ಎನಗೇಕೆ ಮುಖದೋರೆ

೮೯೪
ವಸುಧೆಯಿಲ್ಲದ ಬೆಳಸು
ರಾಜಾನ್ನದ ಹೆಸರಿಲ್ಲದ ಓಗರ
ವೃಷಭ ಮುಟ್ಟದ ಹಯನು
ಬೆಣ್ಣೆಯ ಹೊಸೆವರಿಲ್ಲದೆ ಕಂಡುಂಡೆ
ಶಿಶು ಕಂಡ ಕನಸಿನಂತೆ
ಗುಹೇಶ್ವರನೆಂಬುದು ಹೆಸರಿಲ್ಲದ ಬಯಲು

೮೯೫
ವಸ್ತುಕ ವರ್ಣಕ ತ್ರಿಸ್ಥಾನದ ಮೇಲೆ ನುಡಿವ ನುಡಿಗಳು
ಇತ್ತಿತ್ತಲಲ್ಲದೆ ಅತ್ತತ್ತಲಾರು ಬಲ್ಲರು
ಇವರೆತ್ತಲೆಂದರಿಯರು ಗಿಳಿವಿಂಡುಗೆಡೆವರು
ನಿಮ್ಮನೆತ್ತ ಬಲ್ಲರು ಗುಹೇಶ್ವರ

೮೯೬
ವಾದ್ಯಕ್ಕೆ ಬಂಧವಲ್ಲದೆ
ನಾದಕ್ಕೆ ಬಂಧವುಂಟೆ
ಅರಿವಿಂಗೆ ಬಂಧವಲ್ಲದೆ
ಅರುಹಿಸಿಕೊಂಬವಂಗುಂಟೆ ಬಂಧ
ಅರಿದೆಹೆನೆಂಬ ಭ್ರಮೆ
ಅರುಹಿಸಿಕೊಂಡೆಹೆನೆಂಬ ಕುರುಹು
ಉಭಯನಾಸ್ತಿಯಾಗಿಯಲ್ಲದೆ ಭಾವಶುದ್ಧವಿಲ್ಲ
ಕಾಮಧೂಮ ಧೂಳೇಶ್ವರಾ

೮೯೭
ವಾಯದ ಪಿಂಡಿಗೆ ಮಾಯದ ದೇವರಿಗೆ
ವಾಯಕ್ಕೆ ಕಾಯವ ಬಳಲಿಸದೆ ಪೂಜಿಸಿರೋ
ಕಟ್ಟುಗುಂಟಕ್ಕೆ ಬಂದ ದೇವರ ಪೂಜಸಿಲು
ಸೂಜಿಯ ಪೋಣಿಸಿ ದಾರವ ಮರದಡೆ
ಹೊಲಿಗೆ ಬಿಚ್ಚಿತ್ತು
ಗುಹೇಶ್ವರ

೮೯೮
ವಾಯದ ರಾಸಿಗೆ ಮಾಯದ ಕೊಳಗ
ಅಳೆವುದು ನೆಳಲು ಹೊಯಿವುದು ಬಯಲು
ತುಂಬಿಹೆನೆಂದಡೆ ತುಂಬಲು ಬಾರದು
ತುಂಬಿದ ರಾಸಿಯ ಕಾಣಲು ಬಾರದು
ಅಳತೆಗೆ ಬಾರದು ಹೊಯ್ಲಿಗೊಳಗಾಗದು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಮಿಗೆ ಬಯಲು

೮೯೯
ವಾಯು ಬಯಲೆಂದಡೆ
ತರುಗಿರಿಗಳೊದರುವ ಪರಿಯಿನ್ನೆಂತೊ
ನಾದ ಬಯಲೆಂದಡೆ ಶಬ್ದ ಬಯಲಹ ಪರಿಯಿನ್ನೆಂತೊ
ತನ್ಮಯವೆಲ್ಲವೂ ರೂಪು
ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪಾಗಿ
ಜಗದಲ್ಲಿ ಇಹನ್ನಬರ

೯೦೦
ವಿಚಾರವೆಂಬುದು ಸಂದೇಹಕ್ಕೊಳಗು
ನೋಡಾ
ವಿಚಾರಿಸುವನ್ನಕ್ಕರ ನೀ ನಾನೆಂಬುದನೆತ್ತ ಬಲ್ಲೆ
ಮರುಳೆ
ವಾಙ್ಮನೋತೀತವಾದ ಘನವು ವಿಚಾರಕ್ಕೆ ನಿಲುಕುವುದೇ
ಗೊಹೇಶ್ವರಲಿಂಗವು ತನ್ನ ತಿಳಿದು
ನೋಡಿಹೆನೆಂಬವರ ವಿಚಾರವೆಂಬ ಬಲೆಯಲ್ಲಿ ಕೆಡಹಿದನು