೯೦೧
ವಿಶ್ವಮಯ ರೂಪು ನೀನಾಗಿ ಅರಿವ ಆತ್ಮ ಒಬ್ಬನಲ್ಲಿಯೇ ಅಡಗಿದೆಯಲ್ಲಾ
ಬೀಗದ ಎಸಳು ಹಲವಾದಡೇನು
ಒಂದು ದ್ವಾರದಲ್ಲಿ ಅಡಗಿ ಓತಂತೆ ಇಪ್ಪ ತೆರ ನೀನಾಗಿ
ಭಕ್ತರ ಚಿತ್ತದಲ್ಲಿ ನಿಶ್ಚಯನಾದೆ
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ

೯೦೨
ವಿಷಯ ಕೊಲುವಲ್ಲಿ ಹಾವೇನ ಮಾಡುವುದು
ಉಂಬ ಅನ್ನ ನಂಜಾಗಿಹಲ್ಲಿ ಇಕ್ಕಿದವಳಿಗೆ ಅಂಜಿಕೆಯುಂಟೆ
ತನ್ನ ಇಂದ್ರಿಯ ತನ್ನ ತಿಂಬಲ್ಲಿ
ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾ ಎಂದೆ
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು

೯೦೩
ವಿಷಯಕ್ಕೆ ಅಂಜುವರಲ್ಲದೆ
ಸರ್ಪಂಗೆ ಅಂಜುವರುಂಟೆ
ಕೊಲುವ ವ್ಯಾಘ್ರಂಗೆ ಅಂಜುವರಲ್ಲದೆ
ಸುಲಿದ ಬಣ್ಣಕ್ಕೆ ಅಂಜುವರುಂಟೆ
ಅರಿವು ಸಂಪನ್ನರಲ್ಲಿ ಇದಿರೆಡೆಯಡಗಬೇಕಲ್ಲದೆ
ಬರುಕಾಯದ ದರುಶನ ಬಿರುಬರಲ್ಲಿ ಉಂಟೆ
ನೆರೆಯರಿವಿನ ಹೊಲಬು ಕಾಯಕಾಂಡ ಕರ್ಮಕಾಂಡಿಗಳಲ್ಲಿ
ಜ್ಞಾನಹೀನ ಪಾಷಂಡಿಗಳಲ್ಲಿ ಆವ ಭಾವದ ಮಾರ್ಗವನು
ನಿಧಾನಿಸಿ ಉಪೇಕ್ಷಿಸಲಿಲ್ಲ
ಗೋರಕ್ಷಪಾಲಕ ಮಹಾಪ್ರಭು
ಸಿದ್ಧಸೋಮನಾಥ ಲಿಂಗವನರಿದವರಲ್ಲಿಯಲ್ಲದೆ

೯೦೪
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ
ಪಶುವೇನ ಬಲ್ಲುದು
ಹಸುರೆಂದೆಳಸುವುದು
ವಿಷಯರಹಿತನ ಮಾಡಿ
ಭಕ್ತಿರಸವ ದಣಿಯೆ ಮೇಯಿಸಿ
ಸುಬುದ್ಧಿಯೆಂಬ ಉದಕವನೆರೆದು
ನೋಡಿ ಸಲಹಯ್ಯಾ
ಕೂಡಲಸಂಗಮದೇವಾ

೯೦೫
ವೀರನಾದಡೆ
ಅಲಗಿನ ಮೊನೆಯಲ್ಲಿ ಕಾಣಬಹುದು
ಧೀರನಾದಡೆ
ತನ್ನ ಸೋಂಕಿದಲ್ಲಿ ಅರಿಯಬಹುದು
ಭಕ್ತನಾದಡೆ
ತಾಗು ನಿರೋಧದಲ್ಲಿ ಅರಿಯಬಹುದು
ಕೂಡಲಚೆನ್ನಸಂಗಯ್ಯಾ
ಸುಜ್ಞಾನಿಯಾದರೆ
ಸುಳುಹಿನಲ್ಲಿ ಅರಿಯಬಹುದು

೯೦೬
ವೃಕ್ಷ ಎಲೆಗಳೆವುದಲ್ಲದೆ
ತರುವಿನ ಸಲೆ ನೆಲೆ ಸಾರಗಳದು ಫಲಿಸುವುದುಂಟೆ
ಅಂಗದಲ್ಲಿ ಸೋಂಕಿದ ಮರವೆಯ ಕಳೆಯಬಹುದಲ್ಲದೆ
ಮನ ವಚನ ಕಾಯ ತ್ರಿಕರಣದಲ್ಲಿ ವೇಧಿಸಿದ
ಮರವೆಯ ಹರಿವ ಪರಿಯಿನ್ನೆಂತೊ
ಉರಿ ವೇಧಿಸಿದ ತರುವಿನಂತೆ ಅದಕ್ಕೆ ಪರಿಹರವಿಲ್ಲ
ಅರಿದು ಮಾಡುವ ದೋಷಕ್ಕೆ ಪಡಿಪುಚ್ಚವಿಲ್ಲ
ಆ ಭೇದವನರಿದು ಹರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ

೯೦೭
ವೇದ ಪ್ರಮಾಣಲ್ಲ ಶಾಸ್ತ್ರ ಪ್ರಮಾಣಲ್ಲ
ಶಬ್ದ ಪ್ರಮಾಣಲ್ಲ ಕಾಣಿಭೋಲಿಂಗಕ್ಕೆ
ಅಂಗಸಂಗದ ಮಧ್ಯದಲ್ಲಿದ್ದುದ
ಬೈಚಿಟ್ಟು ಬಳಸಿದ ಗುಹೇಶ್ವರ ನಿಮ್ಮ ಶರಣ

೯೦೮
ವೇದ ವೇಧಿಸಲರಿಯದೆ ಕೆಟ್ಟವು
ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು
ಪುರಾಣ ಪೂರೈಸಲರಿಯದೆ ಕೆಟ್ಟವು
ಹಿರಿಯರು ತಮ್ಮ ತಾವರಿಯದೆ ಕೆಟ್ಟರು
ತಮ್ಮ ಬುದ್ಧಿ ತಮ್ಮನೆ ತಿಂದಿತ್ತು
ನಿಮ್ಮನೆತ್ತ ಬಲ್ಲರು ಗುಹೇಶ್ವರ

೯೦೯
ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು
ಕಾಣಿಭೋ
ಇವ ಕುಟ್ಟಲೇಕೆ ಕುಸುಕಲೇಕೆ
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ

೯೧೦
ವೇದ ಶಾಸ್ತ್ರಕ್ಕೆ ಹಾರುವನಾಗಿ
ವೀರ ವಿತರಣಕ್ಕೆ ಕ್ಷತ್ರಿಯನಾಗಿ
ಸರ್ವವನಾರೈದು ನೋಡುವಲ್ಲಿ
ವೈಶ್ಯನಾಗಿ ವ್ಯಾಪಾರದೊಳಗಾಗಿ
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ
ಇಂತೀ ಜಾತಿಗೋತ್ರದೊಳಗಾದ ನೀಚ ಶ್ರೇಷ್ಠವೆಂಬ
ಎರಡು ಕುಲವಲ್ಲದೆ
ಹೊಲೆ ಹದಿನೆಂಟುಜಾತಿಯೆಂಬ ಕುಲವಿಲ್ಲ
ಬ್ರಹ್ಮವನರಿದಲ್ಲಿ ಬ್ರಾಹ್ಮಣ
ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ
ಈ ಉಭಯವನರಿದು ಮರೆಯಲಿಲ್ಲ
ಕೈಯುಳ್ಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ
ಅರಿ ನಿಜಾತ್ಮ ರಾಮ ರಾಮನಾ

೯೧೧
ವೇದ ಶಾಸ್ತ್ರವನೋದುವುದಕ್ಕೆ ಹಾರುವನಲ್ಲ
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ
ವ್ಯವಹಿಸುವುದಕ್ಕೆ ವೈಶ್ಯನಲ್ಲ
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ

೯೧೨
ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು
ಶಾಸ್ತ್ರ ಹುಟ್ಟುವುದಕ್ಕೆ ಮುನ್ನವೆ ಕಲಿತವರಾರು
ಪುರಾಣ ಹುಟ್ಟುವುದಕ್ಕೆ ಮುನ್ನವೆ ಕೇಳಿದವರಾರು
ಉತ್ಪತ್ತಿ ಸ್ಥಿತಿ ಲಯಕ್ಕೆ ಮುನ್ನವೆ ನಾನೆಂಬವರಾರು
ಮನಸಂದ ಮಾರೇಶ್ವರಾ

೯೧೩
ವೇದಕ್ಕೆ ಒರೆಯ ಕಟ್ಟುವೆ
ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ
ಆಗಮದ ಮೂಗ ಕೊಯಿವೆ
ನೋಡಯ್ಯಾ
ಮಹಾದಾನಿ ಕೂಡಲಸಂಗಮದೇವಾ
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ

೯೧೪
ವೇದವೆಂಬುದು ಓದಿನ ಮಾತು
ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಠಿ
ತರ್ಕವೆಂಬುದು ತಗರ ಹೋರಟೆ
ಭಕ್ತಿ ಎಂಬುದು ತೋರುಂಬ ಲಾಭ
ಗುಹೇಶ್ವರನೆಂಬುದು ಮೀರಿದ ಘನವು

೯೧೫
ವೇಷವ ತೊಟ್ಟಡೆ
ಜಗಕ್ಕಳುಕಲ್ಲದೆ ಎನಗಳುಕಿಲ್ಲ
ನೀ ಲಿಂಗವ ಕೊಟ್ಟಡೆ
ನೀ ನಿನ್ನನರಿದು
ನೀ ಭವಪಾಶಕ್ಕೆ ಹೊರಗಾಗಿ
ಎನ್ನ ಹೊರಗು ಮಾಡಬೇಕಲ್ಲದೆ
ಕುರುಡನ ಕಯ್ಯ ಕೋಲ ಕುರುಡಹಿಡಿದಂತೆ
ನೀ ಕರ್ತನಲ್ಲ
ನಾ ಭೃತ್ಯನಲ್ಲ
ನೀ ಮುಕ್ತನಲ್ಲ
ನಾ ಸತ್ಯನಲ್ಲ
ನಿಮ್ಮಯ ಚಿತ್ತ ನೊಂದಡೆ
ನಿಮ್ಮಲ್ಲಿಯೆ ಇರಲಿ
ಎನಗಾ ನೋವಿಲ್ಲ
ನೀನರಿದು ಬದುಕು
ಸದಾಶಿವಮೂರ್ತಿಲಿಂಗವಾಗಬಲ್ಲಡೆ

೯೧೬
ವ್ಯವಹಾರದ ಮಾಡಿದಲ್ಲಿ ಲಾಭವ ಕಾಣದಿರ್ದಡೆ
ಆ ವ್ಯವಹಾರವೇತಕ್ಕೆ
ಗುರುಲಿಂಗ ಜಂಗಮಕ್ಕೆ ಖ್ಯಾತಿಗೆ ಮಾಡಿದಡೆ
ಮೊದಲು ತಪ್ಪಿ ಲಾಭವನರಸುವಂತೆ
ಕಾಮಹರಪ್ರಿಯ ರಾಮನಾಥಾ

೯೧೭
ವ್ಯಾಧನ ಚಿತ್ತದಂತೆ
ಸಾಧನೆಯಯ್ಯನ ಮೈ ಲಾಗಿನಂತೆ
ಭೇದಿಸಿಯೈದುವ ಪನ್ನಗನಂತೆ
ಇಡುವ ತೊಡುವ ಕೊಡುವ ಕೊಂಬಲ್ಲಿ ಲಿಂಗಪ್ಪನ
ಒಡಗೂಡಬೇಕು
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ ಬೆಚ್ಚಂತಿರಬೇಕು

೯೧೮
ವ್ಯಾಧನೊಂದು ಮೊಲನ ತಂದಡೆ
ಸಲುವ ಹಾಗಕ್ಕೆ ಬಿಲಿವರಯ್ಯಾ
ನೆಲನಾಳ್ವನ ಹೆಣನೆಂದಡೆ
ಒಂದಡಕೆಗೆ ಕೊಂಬವರಿಲ್ಲ
ನೋಡಯ್ಯಾ
ಮೊಲನಿಂದ ಕರಕಷ್ಟ ನರನ ಬಾಳುವೆ
ಸಲೆ ನಂಬೊ ನಮ್ಮ ಕೂಡಲಸಂಗಮದೇವನ

೯೧೯
ವ್ಯಾಸ ಬೋಯಿತಿಯ ಮಗ
ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು
ಕುಲವನರಸದಿರಿಂ ಭೋ
ಕುಲದಿಂದ ಮುನ್ನೇನಾದಿರಿಂ ಭೋ
ಸಾಕ್ಷಾತ್‌ಅಗಸ್ತ್ಯ ಕಬ್ಬಿಲ
ದುರ್ವಾಸ ಮುಚ್ಚಿಗ
ಕಶ್ಯಪ ಕಮ್ಮಾರ
ಕೌಂಡಿನ್ಯನೆಂಬ ಋಷಿ
ಮೂರು ಭುವನರಿಯದೆ ನಾವಿದ ಕಾಣಿ ಭೋ
ನಮ್ಮ ಕೂಡಲಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು ಶಿವಭಕ್ತನೆ ಕುಲಜಂ ಭೋ

೯೨೦
ವ್ರತವೆಂಬ ಸೀಮೆಯ ವಿವರವೆಂತುಟೆಂದಡೆ
ಬೀಗಿ ಬೆಳೆದ ಹೊಲಕ್ಕೆ ಬೇಲಿಯ ಕಟ್ಟಿದಡೆ ಚೀಗೆಯುಂಟೆ
ಹಾವ ಪಶುವಿಂಗೆ ಮಾಣಿಸಿದಡೆ ದೋಷ ಉಂಟೆ
ಗಾವಿಲಂಗೆ ಭಾವದ ಬುದ್ಧಿಯ ಹೇಳಿದವಂಗೆ ನೋವುಂಟೆ
ಬೇವ ನೋವ ಕಾಯಕ್ಕೆ ಜೀವವೆಂಬ ಬೆಳಗೇ ವ್ರತ
ಭಾವವೆಂಬ ಬೇಲಿಯ ಸಾಗಿಸಿಕೊಳ್ಳಿ
ಲೂಟಿಗೆ ಮೊದಲೆ ಬಸವ ಚೆನ್ನಬಸವಣ್ಣ ಪ್ರಭುದೇವ ಮೊದಲಾಗಿ
ಶಂಕೆಗೆ ಮುನ್ನವೆ ಹೋದೆಹೆನೆಂಬ ಭಾವ ತೋರುತ್ತಿದೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ
ಏಲೇಶ್ವರದ ಗೊತ್ತು ಕೆಟ್ಟಿತ್ತು

೯೨೧
ವ್ರತವೆಂಬುದೇನು
ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು
ಜಗದ ಕಾಮಿಯಂತೆ ಕಾಮಿಸದೆ
ಜಗದ ಕ್ರೋಧಿಯಂತೆ ಕ್ರೋಧಿಸದೆ
ಜಗದ ಲೋಭಿಯಂತೆ ಲೋಭಿಸದೆ
ಮಾಯಾಮೋಹಂಗಳು ವರ್ಜಿತವಾಗಿ
ಮನಬಂದಂತೆ ಆಡದೆ ತನುಬಂದಂತೆ ಕೂಡದೆ
ವ್ರತದಂಗಕ್ಕೆ ಸಂಗವಾಗಿ ನಿಂದ ಸದ್ಭಕ್ತನ ಅಂಗವೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ

೯೨೨
ವ್ರತವೆಂಬುದೇನು ವಸ್ತುವ ಕಾಂಬುದಕ್ಕೆ ನಿಚ್ಚಣಿಕೆ
ವ್ರತವೆಂಬುದೇನು ಇಂದ್ರಿಯಗಳ ಸಂದಮುರಿದ ಕುಲಕುಠಾರ
ವ್ರತವೆಂಬುದೇನು ಸಕಲ ವ್ಯಾಪಕ್ಕೆ ದಾವಾನಳ
ವ್ರತವೆಂಬುದೇನು ಚಿತ್ತಸುಯಿಧಾನದಿಂದ
ವಸ್ತುವ ಕಾಂಬುದಕ್ಕೆ ಕಟ್ಟಿದ ಗುತ್ತಗೆ
ವ್ರತವೆಂಬುದೇನು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು
ಅವರಿಗೆ ತತ್ತಲಮಗನಾಗಿಪ್ಪನು

೯೨೩
ಶಬ್ದಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು
ತಮ್ಮ ತಾವರಿಯರು
ಇದು ಕಾರಣ
ಮೂರು ಲೋಕವೆಲ್ಲವು ಬರುಸೂರೆವೋಯಿತ್ತು
ಗುಹೇಶ್ವರ

೯೨೪
ಶಬ್ದಿಯಾದಾತ ತರುಗಳ ಹೋತ
ನಿಶ್ಯಬ್ದಯಾದಾತ ಪಾಷಾಣದ ಹೋತ
ಕೋಪಿಯಾದಾತ ಅಗ್ನಿಯ ಹೋತ
ಶಾಂತನಾದಾತ ಜಲವ ಹೋತ
ಬಲ್ಲೆ ಬಲ್ಲೆನೆಂಬಾತ ಇಲ್ಲವೆಯ ಹೋತ
ಅರಿಯೆನೆಂಬಾತ ಪಶುವ ಹೋತ
ಇದು ಕಾರಣ ಅರಿಯೆನೆನ್ನದೆ ಬಲ್ಲೆನೆನ್ನದೆ
ಅರಿವಿನ ಕುರುಹನಳಿದುಳಿದು
ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ

೯೨೫
ಶರಣ ತನ್ನ ಪ್ರಾರಬ್ಧಕರ್ಮ ತೀರಿದ ವಿಸ್ತಾರವನರಿದು
ಪ್ರಕಾಶಿಸುತ್ತಿದ ಕಾರಣ
ಶ್ವಾನ ಜಂಗಮರೂಪೆನಬೇಕಾಯಿತ್ತು
ಗಜ ಮಲೆಯಿಂದ ಪುರದಲ್ಲಿಗೆ ಬಂದು
ಆ ಪುರದಲ್ಲಿ ಎಷ್ಟು ಸುಖವಾಗಿದ್ದರೂ
ಮಿಗೆಮಿಗೆ ತನ್ನ ಮಲೆಯನೆ ನೆನೆವುತಿಪ್ಪುದು
ಆ ಜಂಗಮ ಮೊದಲು ಪರಬ್ರಹ್ಮದಿಂದ ದೇಹವಿಡಿದನಾಗಿ
ಆ ದೇಹದಲ್ಲಿ ಎಷ್ಟು ಸುಖವಾಗಿದ್ದರೆಯೂ
ಮಿಗೆಮಿಗೆ ಆ ಪರಬ್ರಹ್ಮವನೆ ನೆನೆವುತಿಹನು
ಇದು ಕಾರಣ ಶ್ವಾನ ಗಜ ಇವೆರಡೂ ಶರಣಂಗೆ
ಜಂಗಮಸ್ವರೂಪೆನಬೇಕಾಯಿತ್ತು
ಮನವೆ ಮರ್ಕಟ ಅರಿವೆ ಪಿಪೀಲಿಕ
ಮಹಾಜ್ಞಾನವೆ ವಿಹಂಗ
ನಿತ್ಯ ಎಚ್ಚರವೆ ಕುಕ್ಕುಟ
ತನ್ನ ತಾನರಿವುದೆ ಶ್ವಾನ
ತನ್ನ ಬುದ್ಧಿಯೆ ಗಜ
ಇಂತೀ ಷಡ್ವಿಧವ ಬಲ್ಲಾತನೆ ಬ್ರಹ್ಮಜ್ಞಾನಿ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಗೊಹೇಶ್ವರಪ್ರಿಯ ಬಂಕಣ್ಣ ನಿಟ್ಟ ಮುಂಡಿಗೆಯನೆತ್ತುವರಿಲ್ಲ
ಬಸವಪ್ರಿಯ ಮಹಾಪ್ರಭುವೆ