೯೨೬
ಶರಣ ಸತಿ ಲಿಂಗ ಪತಿ ಎಂಬರು
ಶರಣ ಹೆಣ್ಣಾದ ಪರಿಯಿನ್ನೆಂತು
ಲಿಂಗ ಗಂಡಾದ ಪರಿಯಿನ್ನೆಂತು
ನೀರು ನೀರು ಕೂಡಿ ಬೆರೆದಲ್ಲಿ
ಬೇದಿಸಿ ಬೇರೆ ಮಾಡಬಹುದೆ
ಗಂಡು ಹೆಣ್ಣು ಯೋಗವಾದಲ್ಲಿ
ಆತುರ ಹಿಂಗೆ ಘಟ ಬೇರಾಯಿತ್ತು
ಇದು ಕಾರಣ
ಶರಣ ಸತಿ ಲಿಂಗ ಪತಿ ಎಂಬ ಮಾತು ಮೊದಲಿಂಗೆ
ಮೋಸ ಲಾಭಕ್ಕಧೀನವುಂಟೆ ಎಂದನಂಬಿಗ ಚೌಡಯ್ಯ

೯೨೭
ಶರೀರವುಳ್ಳನ್ನಕ್ಕ ನೆಳಲಿಲ್ಲದಿರಬಾರದು
ಭೂಮಿಯುಳ್ಳನ್ನಕ್ಕ ಆಕಾಶವಿಲ್ಲದಿರಬಾರದು
ನಾನುಳ್ಳನ್ನಕ್ಕ ನೀನಿಲ್ಲದಿರಬಾರದು
ಗುಹೇಶ್ವರಲಿಂಗವು ಶಕ್ತಿಗೊಳಗಾಯಿತ್ತಾಗಿ
ಬಚ್ಚಬರಿಯ ಬಯಲೆಂಬುದಕ್ಕೆ ಉಪಮಾನವಿಲ್ಲ

೯೨೮
ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ
ವಾಚಾರಚನೆಯೆಂಬ ಹುಲಿ ಹುಟ್ಟಿ
ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ
ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ
ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ
ಪರಿಭ್ರಮಣದ ತೋಳ ಹುಟ್ಟಿ
ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು
ಗಜ ಅಜದ ಮೆಲುಕಿನಲ್ಲಿ ಸಿಕ್ಕಿ
ತೋಳ ಉಡುವಿನ ಕಣ್ಣಿನೊಳಡಗಿತ್ತು
ತುರುವಿನ ಮುಂದೆ ಬರಿಕೆಯಿವುತ್ತಿದೆ
ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು

೯೨೯
ಶಾಸ್ತ್ರವೆ ಅಡ್ಡಣಿಗೆಯಾಗಿ ಆಗಮವೆ ಹರಿವಾಣವಾಗಿ
ಪುರಾಣವೆ ಓಗರವಾಗಿ ಉಂಬಾತ ವೇದವಾಗಿ
ಸಕಲ ರುಚಿಯನರಿದು ಭೋಗಿಸುವ ಪ್ರಣವ ತಾನಾಗಿ
ಅದರ ಭೇದ ಏತರಿಂದ ಅಳಿವು ಉಳಿವು ನಿನ್ನ ನೀನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

೯೩೦
ಶಿಖಿ ಬ್ರಾಹ್ಮಣ ನಯನ ಕ್ಷತ್ರಿಯ
ನಾಶಿಕ ಬಣಜಿಗ ಅಧರ ಒಕ್ಕಲಿಗ
ಕರ್ಣ ಗೊಲ್ಲ ಕೊರಳು ಕುಂಬಾರ
ಬಾಹು ಪಂಚಾಳ ಅಂಗೈ ಉಪ್ಪಾರ
ನಖ ನಾಯಿಂದ ಒಡಲು ಡೊಂಬ
ಬೆನ್ನು ಅಸಗ ಚರ್ಮ ಬೇಡ
ಪೃಷ್ಠಸ್ಥಾನ ಕಬ್ಬಿಲಿಗ ಒಳದೊಡೆ ಹೊಲೆಯ
ಮೊಣಕಾಲು ಈಳಿಗ ಕಣಕಾಲು ಸಮಗಾರ
ಮೇಗಾಲು ಮಚ್ಚಿಗ ಚಲಪಾದವೆಂಬ ಅಂಗಾಲು ಶುದ್ಧ ಮಾದಿಗ
ಕಾಣಿರೊ
ಇಂತೀ ಹದಿನೆಂಟುಜಾತಿ ತನ್ನಲಿ ಉಂಟು
ಇವು ಇಲ್ಲಾಯೆಂದು ಜಾತಿಗೆ ಹೋರುವ ಅಜ್ಞಾನಿಗಳ
ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ

೯೩೧
ಶಿಲೆ ಕಮ್ಮಾರನ ಹಂಗು
ಮಾತು ಮನಸ್ಸಿನ ಹಂಗು
ಮನಸ್ಸು ಆಕಾಶದ ಹಂಗು
ಆಕಾಶ ಬಯಲ ಹಂಗು
ಕುರುಹುವಿಡಿದು ಇನ್ನೇತರಿಂದರಿವೆ
ಅರಿವುದಕ್ಕೆ ಸ್ವಯಂಭುವಿಲ್ಲ
ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ
ಹೇಳಿದುದೆ ದಿಟವೆಂಬೆ

೯೩೨
ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ ನಿಮ್ಮ ಶರಣ ಸಂಬಂಧ

೯೩೩
ಶೀಲವಂತನಾದಡೆ
ಜಾತಿಯ ಬಿಡಬೇಕು
ಶಿವಜ್ಞಾನಿಯಾದಡೆ
ಈ ಸಮಯದ ಬಿಡಬೇಕು
ಹೀಂಗಲ್ಲದೆ
ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ
ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ

೯೩೪
ಸಂಗದಿಂದಲ್ಲದೆ ಅಗ್ನಿ ಹುಟ್ಟದು
ಸಂಗದಿಂದಲ್ಲದೆ ಬೀಜ ಮೊಳೆದೋರದು
ಸಂಗದಿಂದಲ್ಲದೆ ಹೂವಾಗದು
ಸಂಗದಿಂದಲ್ಲದೆ ಸರ್ವಸುಖದೋರದು
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ

೯೩೫
ಸಂಜೆಯ ಮಂಜಿನ ಕಪ್ಪು
ಅಂಜಿದಡೆ ಶಂಕೆ ತದ್ರೂಪವಾಗಿ ನಿಂದಿತ್ತು
ತನ್ನ ಭಾವದ ನಟನೆ ನಡೆವನ್ನಕ್ಕ ನಡೆಯಿತ್ತು
ಅದು ನಿಂದಲ್ಲಿಯೇ ನಿಂದಿತ್ತು
ಅದರಂತುವನರಿದಡೆ
ಹಿಂದೆ ಹುಸಿ
ಮುಂದೆ ಕೂಡಲಸಂಗಮದೇವನ ನಿಲವು ತಾನೆ

೯೩೬
ಸಂತವಿದ್ದ ಮನೆಗೆ ಕೊಂತವ ತಂದಂತೆ
ಇದನೆಂತು ಸಂತೈಸುವೆನು
ಸಂತೆಯ ಗುಡಿಲ ಸೂಳೆಗೆ ಕೊಂತವಳವಡುವುದೆ
ಕೂಡಲಸಂಗಮದೇವರ ಮಹತ್ತು
ಆರಿಗೆಯೂ ಅಳವಡದು

೯೩೭
ಸಂತೆಗೆ ಬಂದವರೆಲ್ಲ ಸಾವಧಾನಿಯಾಗಬಲ್ಲರೆ
ಪಸರವ ಹರಡುವರೆಲ್ಲ ರತ್ನದ ಬೆಲೆಯ ಬಲ್ಲರೆ
ಕುದುರೆಯ ಹಿಡಿದವರೆಲ್ಲ ರಾವುತಿಕೆಯ ಮಾಡಬಲ್ಲರೆ
ಅಮುಗೇಶ್ವರಾ

೯೩೮
ಸಂಸಾರವೆಂಬ ಸಾಗರವ ದಾಂಟುವಡೆ
ಅರಿವೆಂಬ ಹರುಗೋಲನಿಕ್ಕಿ ಜ್ಞಾನವೆಂಬ ಅಂಬಿಗ
ಹರುಗೋಲದಲ್ಲಿ ಕುಳ್ಳಿರ್ದು
ಸುಜ್ಞಾನವೆಂಬ ಘಾತದ ಗಳೆಯ ಪಿಡಿದು
ನಾನೀ ಹೊಳೆಯ ಕಂಡು ಅಂಬಿಗನು ಕೇಳಿದಡೆ
ನಾನು ಹಾಸಿಕೊಟ್ಟೆಹೆನೆಂದನು
ನಾನು ನಿನ್ನ ನಂಬಿ ಹರುಗೋಲನೇರಿದೆನು ಕಾಣಾ
ಅಂಬಿಗರಣ್ಣಾಯೆಂದು
ನಾನು ಹರುಗೋಲದಲ್ಲಿ ಕುಳ್ಳಿರ್ದು ಹೊಳೆಯೊಳಗೆ ಹೋಗಲಿಕೆ
ಕಾಮವೆಂಬ ಕೊರಡು ಅಡ್ಡಬಿದ್ದಿತ್ತು
ಕ್ರೋಧವೆಂಬ ಸುಳುಹಿನೊಳಗೆ
ಅಹಂಕಾರವೆಂಬ ಮೀನು ಬಂದು ನಿಂದಿತ್ತು
ಮಾಯೆಯೆಂಬ ಮೊಸಳೆ ಬಂದು ಬಾಯಬಿಡುತ್ತಿದ್ದಿತ್ತು
ಮೋಹವೆಂಬ ನೊರೆತೆರೆಗಳು ಹೆಚ್ಚಿ ಬರುತ್ತಿದ್ದಿತ್ತು
ಲೋಭವೆಂಬ ಕಾಳ್ಗಡಲು ಎಳೆದೊಯ್ವುತ್ತಿದ್ದಿತ್ತು
ಮರವೆಂಬ ಮೊರಹು ನೂಕುತ್ತಲಿದ್ದಿತ್ತು
ಮತ್ಸರವೆಂಬ ಗಾಳಿ ತಲೆಕೆಳಗು ಮಾಡುತ್ತಿದ್ದಿತ್ತು
ಇವೆಲ್ಲವನೂ ಪರಿಹರಿಸಿ
ಎನ್ನ ಹೊಳೆಯ ದಾಂಟಿಸಿದನು ಅಂಬಿಗರಣ್ಣನು
ಈ ಹೊಳೆಯ ದಾಂಟಿಸಿದ ಕೂಲಿಯ ನನ್ನ ಬೇಡಿದಡೆ
ಕೂಲಿಯ ಕೊಡುವಡೇನೂ ಇಲ್ಲೆಂದಡೆ
ಕೈಸೆರೆಯಾಗಿ ಎನ್ನನೆಳದೊಯ್ದನಯ್ಯಾ
ಅರುವೆಯ ಕೊಟ್ಟ ಕೂಲಿಗೆ ತನ್ನ ಕರುವ ಕಾಯಿಸಿಕೊಂಡನಯ್ಯಾ
ಅರಿಯದೆ ಹರುಗೋಲವ ನೆರೆತೊರೆಯ ದಾಂಟಿಸಿದ ಕೂಲಿಗೆ
ಕರುವ ಕಾಯಿದೆನು ಕಾಣಾ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ

೯೩೯
ಸಂಸರವೆಂಬ ಹಗೆಯಯ್ಯಾ ಎನ್ನ ತಂದೆ
ಎನ್ನ ವಂಶವಂಶದಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯಾ
ಎನ್ನುವನರಸಿಯರಸಿ ಹಿಡಿದು ಕೊಲುತ್ತಿದೆಯಯ್ಯಾ
ನಿನ್ನ ನಾ ಮರೆಹೊಕ್ಕೆ ಕಾಯಯ್ಯಾ
ಎನ್ನ ಬಿನ್ನಪವನವಧರಿಸಾ
ಚೆನ್ನಮಲ್ಲಿಕಾರ್ಜುನಾ

೯೪೦
ಸಂಸಾರವೆಂಬುದೊಂದು ಗಾಳಿಯ ಸೊಡರು
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ
ಇದ ನಚ್ಚಿ ಕೆಡಬೇಡ ಸಿರಿಯೆಂಬುದ
ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ

೯೪೧
ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಲಿದೆ
ಸಂಸಾರಸಾಗರ ಉರದುದ್ದವೆ ಹೇಳಾ
ಸಂಸಾರಸಾಗರ ಕೊರಳುದ್ದವೆ ಹೇಳಾ
ಸಂಸಾರಸಾಗರ ಶಿರದುದ್ದವಾದ ಬಳಿಕ
ಏನ ಹೇಳುವೆನಯ್ಯಾ
ಅಯ್ಯಾ ಅಯ್ಯಾ
ಎನ್ನ ಹುಯ್ಯಲ ಕೇಳಯ್ಯಾ
ಕೂಡಲಸಂಗಮದೇವಾ
ನಾನೇವೇನೇವೆನಯ್ಯಾ

೯೪೨
ಸಗಣೆಯ ಬೆನಕನ ಮಾಡಿ
ಸಂಪಗೆಯರಳಲ್ಲಿ ಪೂಜಿಸಿದಡೆ
ರಂಜನೆಯಹುದಲ್ಲದೆ ಅದರ ಗಂಜಳ ಬಿಡದಣ್ಣಾ
ಮಣ್ಣ ಪುತ್ಥಳಿಯ ಮಾಡಿ
ಜಲದಲ್ಲಿ ತೊಳೆದಡೆ
ನಿಚ್ಚಕೆ ನಿಚ್ಚ ಕೆಸರಹುದಲ್ಲದೆ ಅದರಚ್ಚುಗ ಬಿಡದಣ್ಣಾ
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆ
ಕೆಟ್ಟವನೇಕೆ ಸದ್ಭಕ್ತನಹನು
ಕೂಡಲಸಂಗಮದೇವಾ

೯೪೩
ಸಣ್ಣ ನನೆಯೊಳಗಣ ಪರಿಮಳವ
ಹೊರಸೂಸಿ ಇದಿರಿಂಗೆ ಅರುಹಿಸಬಲ್ಲುದೆ ವಾಯು
ಕೊಡಗೂಸಿನೊಳಗಣ ಮೊಲೆ ಮುಡಿಯ
ಹಡೆದ ತಾಯಿ ತಂದೆಗಳೆಂದಡೆ
ಕಾಣಿಸಿಕೊಡಬಲ್ಲರೆ ಕಾಬವರ ಕಣ್ಣಿಗೆ
ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು
ರಾಮನಾಥ

೯೪೪
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ
ರಾಮನಾಥ

೯೪೫
ಸತಿಯ ಗುಣವ ಪತಿ ನೋಡಬೇಕಲ್ಲದೆ
ಪತಿಯ ಗುಣವ ಸತಿ ನೋಡಬಹುದೆ ಎಂಬರು
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ
ಪತಿಯಿಂದ ಬಂದ ಸೋಂಕು ಸತಿಗೆ ಕೇಡಲ್ಲವೆ
ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ
ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು

೯೪೬
ಸತ್ತಾತನೊಬ್ಬ ಹೊತ್ತಾತನೊಬ್ಬ
ಈ ಇಬ್ಬರನೊಯ್ದು ಸುಟ್ಟಾತನೊಬ್ಬ
ಮದವಣಿಗನಾರೋ ಮದವಳಿಗೆ ಯಾರೋ
ಮದುವೆಯ ನಡುವೆ ಮರಣವಡ್ಡ ಬಿದ್ದಿತ್ತಲ್ಲಾ
ಹಸೆಯಳಿಯದ ಮುನ್ನ ಮದವಣಿಗನಳಿದ
ಗುಹೇಶ್ವರ ನಿಮ್ಮ ಶರಣನೆಂದೂ ಅಳಿಯ

೯೪೭
ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ
ಮಿಥ್ಯವನೊಳಕೊಂಡ ಸತ್ಯಕ್ಕೆ ಭಂಗ
ಸತ್ಯಮಿಥ್ಯವನೊಳಕೊಂಡ ಮನಕ್ಕೆ ಭಂಗ
ಮನವನೊಳಕೊಂಡ ಜ್ಞಾನಕ್ಕೆ ಭಂಗ
ಜ್ಞಾನವನೊಳಕೊಂಡ ನಿಜಕ್ಕೆ ಭಂಗವುಂಟೇ ಗುಹೇಶ್ವರ

೯೪೮
ಸತ್ಯವುಳ್ಳಲ್ಲಿ ಶಬುದ ಹಿಂಗದು
ಭಾವವುಳ್ಳಲ್ಲಿ ಭಕ್ತಿ ಹಿಂಗದು
ಮೂರುಲೋಕದ ಹಂಗಿನ ಶಬುದವೇನಯ್ಯಾ
ಮುಕುತಿಯನೇವೆನಯ್ಯಾ
ಎನ್ನ ಯುಕುತಿಯ ಮುಕುತಿಯ ಬಕುತಿಯಪದವನು ಕಂಡು
ನಾಚಿದನಜಗಣ್ಣತಂದೆ

೯೪೯
ಸಮಯಕ್ಕೆ ಹೋರಬೇಕು
ಜ್ಞಾನದಲ್ಲಿ ಸುಮ್ಮನಿರಬೇಕು
ಹೋರದಿದ್ದಡೆ ರುದ್ರಂಗೆ ದೂರ
ಹೋರಿದಡೆ ಪದವಸ್ತುವಿಗೆ ದೂರ
ಇದರಿಂದ ಬಂದುದು ಬರಲಿ
ಮನೊಯೊಳಗಿದ್ದು ಮನೆಯ ಸುಟ್ಟವರುಂಟೆ
ನಾರಾಯಣಪ್ರಿಯ ರಾಮನಾಥಾ

೯೫೦
ಸಮುದ್ರ ಘನವೆಂಬೆನೆ
ಧರೆಯ ಮೇಲಡಗಿತ್ತು
ಧರೆ ಘನವೆಂಬೆನೆ
ನಾಗೇಂದ್ರನ ಘಣಾಮಣಿಯ ಮೇಲಡಗಿತ್ತು
ನಾಗೇಂದ್ರನ ಘನವೆಂಬೆನೆ
ಪಾರ್ವತಿಯ ಕಿರುಕುಣಿಕೆಯ ಮುದ್ರಿಕೆಯಾಯಿತ್ತು
ಅಂತಹ ಪಾರ್ವತಿ ಘನವೆಂಬೆನೆ
ಪರಮೇಶ್ವರನ ಅರ್ಧಾಂಗಿಯಾದಳು
ಅಂತಹ ಪರಮೇಶ್ವರ ಘನವೆಂಬೆನೆ
ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು