೯೫೧
ಸರವರದ ಮಂಡೂಕನು ತಾವರೆಯ ನೆಳಲ ಸಾರಿದಡೆ
ಪರಿಮಳವದಕೆ ಅಯ್ಯಾ
ಆ ಅರಿಯಬಾರದು
ಪರಿಮಳವದಕೆ ಅಯ್ಯಾ
ಆ ಅರಿಯಬಾರದು ಮದಾಳಿಗಲ್ಲದೆ
ಸಕಳೇಶ್ವರದೇವಾ ನಿಮ್ಮ ವೇದಿಸಿದ ವೇದ್ಯಂಗಲ್ಲದೆ
ನಿಮ್ಮ ನಿಲವನರಿಯಬಾರದು

೯೫೨
ಸರ್ಪನಲ್ಲಿ ವಿಷ ಇದ್ದಿತ್ತೆಂದಡೆ
ಸರ್ವಾಂಗದಲ್ಲಿ ವಿಷ ತಪ್ಪದಿಪ್ಪುದೆ ವಿಷವಿಪ್ಪ ಠಾವು ಒಂದಲ್ಲದೆ
ಪೃಥ್ವಿಯಲ್ಲಿ ನಿಕ್ಷೇಪವಿದ್ದಿತ್ತೆಂದಡೆ
ಅಲ್ಲಲ್ಲಿ ಎಲ್ಲಾ ಠಾವಿನಲ್ಲಿ ಅಡಗಿಪ್ಪುದೆ
ಸಮಯಕುಲದಲ್ಲಿ ವಸ್ತು ಪರಿಪೂರ್ಣವೆಂದಡೆ
ದರ್ಶನಪಾಷಂಡಿಗಳಲ್ಲಿ ವಸ್ತುಪರಿಪೂರ್ಣನಾಗಿಪ್ಪನೆ
ಇಪ್ಪ ಸತ್ಯಸನ್ಮುಕ್ತರಲ್ಲಿಯಲ್ಲದೆ ಪರಮವಿರಕ್ತನಲ್ಲಿಯಲ್ಲದೆ
ನೆಲದಲ್ಲಿದ್ದ ನಿಧಾನವನರಿದು ಆಗಿವುದು
ವಿಷವಿದ್ದ ಬಾಯ ಮುಚ್ಚಿಹಿಡಿವುದು
ನೆರೆ ವಸ್ತುವಿದ್ದ ಠಾವನರಿದು ಪೂಜಿಸುವುದು
ಇಂತೀ ಬಯಕೆಗೆ ಬಯಕೆ ಸಮೂಹಕ್ಕೆ ತ್ರಿವಿಧಮಲ
ಖ್ಯಾತಿ ಲಾಭಕ್ಕೆ ಭೂತಹಿತ
ಅರಿವುಳ್ಳವರಲ್ಲಿ ಎರವಿಲ್ಲದ ಕೂಟ
ಇಂತಿವು ಜಗದಲ್ಲಿ ಅರಿದು ಮಾಡುವನ ಪರಿತೋಷ
ಗಾರುಡೇಶ್ವರಲಿಂಗದಲ್ಲಿ ಎರಡಳಿದವನ ಕೂಟ

೯೫೩
ಸರ್ವವೂ ಶಿವನಿಂದ ಉದ್ಭವಿಸುವವೆಂದಡೆ
ಉದ್ಭವಿಸುವವೆಲ್ಲವೂ ಶಿವನೆ
ಸಕಲ ಬೀಜವ ಬಿತ್ತುವನೊಕ್ಕಲಿಗನೆಂದಡೆ
ಆ ಬೆಳೆ ತಾನೊಕ್ಕಲಿಗನೆ
ಮಡಕೆಯ ಮಾಡುವವ ಕುಂಬಾರನೆಂದಡೆ
ಆ ಮಡಕೆ ತಾ ಕುಂಬಾರನೆ
ಈ ಪರಿಯಲಿ ಸಕಲಚರಾಚರವನು ಮಾಡುವವ ಶಿವನೆಂದಡೆ
ಆ ಸಚರಾಚರವು ಶಿವನೆ
ಅಹಂಗಾದರೆ
ಅಷ್ಟಾದಶವರ್ಣವೇಕಾದವು
ಚೌರಾಸಿಲಕ್ಷ ಜೀವಂಗಳೇಕಾದವು
ಉತ್ತಮ ಮಧ್ಯಮ ಕನಿಷ್ಠಂಗಳೇಕಾದವು
ಪುಣ್ಯ ಪಾಪ ಸ್ವರ್ಗ ನರಕಂಗಳೇಕಾದವು
ಭವಿಭಕ್ತರೆಂದೇಕಾದರು
ಇದು ಕಾರಣ
ಸದಾಚಾರ ಸದ್ಭಕ್ತಿಯಲ್ಲಿಪ್ಪಾತನೆ ಶಿವನಲ್ಲದೆ
ಸರ್ವವೂ ಶಿವನೆಂದಡೆ
ಅಘೋರ ನರಕ ಕೂಡಲಚೆನ್ನಸಂಗಯ್ಯಾ

೯೫೪
ಸರ್ವಸಂಗಪರಿತ್ಯಾಗಿಯೆಂದಡೆ
ಭೋಗಕ್ಕೆ ಮರುಗಿಸುವೆ
ಪಾಕನೇಮಿಯೆಂದಡೆ
ಷಡರಸಾನ್ನಕ್ಕೆರಗಿಸುವೆ
ಮೌನವ್ರತಿಯೆಂದಡೆ
ಸನ್ನೆಯಲ್ಲಿ ಬೇಡಿಸುವೆ
ಬ್ರಹ್ಮಚಾರಿಯೆಂದಡೆ
ಅಂಗನೆಯರಿಗೆರಗಿಸುವೆ
ಸಕಳೇಶ್ವರದೇವಾ
ಎನ್ನನಾಳವಾಡಿ ಕಾಡುವೆ

೯೫೫
ಸಸಿಗೆ ನೀರೆರೆದಡೆ ಎಳಕುವುದಲ್ಲದೆ
ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ ಎಳಕುವುದೆ
ಮಾರಯ್ಯಾ
ನಿನ್ನ ವಿರಕ್ತಿ ನಷ್ಟವಾಗದ ಮುನ್ನವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಿರಯ್ಯಾ

೯೫೬
ಸಸಿಯ ಮೇಲೆ ಸಾಗರವರಿದಂತಾಯಿತ್ತಯ್ಯಾ ಎನ್ನ ಭಕ್ತಿ
ಆನಂದದಿಂದ ನಲಿನಲಿದಾಡುವೆನು
ಆನಂದದಿಂದ ಕುಣಿಕುಣಿದಾಡುವೆನು
ಕೂಡಲಸಂಗನ ಶರಣರು ಬಂದಡೆ
ಉಬ್ಬಿ ಕೊಬ್ಬಿ ಹರುಷದಲೋಲಾಡುವೆ

೯೫೭
ಸಾಂಖ್ಯ ಶ್ವಪಚ ಅಗಸ್ತ್ಯ ಕಬ್ಬಿಲ
ದೂರ್ವಾಸ ಮಚ್ಚಿಗ ದಧೀಚಿ ಕೀಲಿಗ
ಕಶ್ಯಪ ಕಮ್ಮಾರ ರೋಮಜ ಕಂಚುಗಾರ
ಕೌಂಡಿಲ್ಯ ನಾವಿದನೆಂಬುದನರಿದು
ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ
ಇಂತೀ ಸಪ್ತಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ
ಅಸತ್ಯದಲ್ಲಿ ನಡೆದು ವಿಪ್ರತು ನಾವು ಘನವೆಂದು
ಹೋರುವ ಹೊತ್ತುಹೋಕರ ಮಾತೇತಕ್ಕೆ
ಕೈಯುಳಿ ಕತ್ತಿ ಅಡಗೂಂಟಕ್ಕಡಿಯಾಗಬೇಡ
ಅರಿ ನಿಜಾತ್ಮ ರಾಮ ರಾಮನಾ

೯೫೮
ಸಕ್ಷಿ ಸತ್ತಿತ್ತು
ಪತ್ರ ಬೆಂದಿತ್ತು
ಲೆಕ್ಕ ತುಂಬಿತ್ತು
ಜೀವ ಜೀವಿತದ ಆಸೆ ನಿಂದುದು
ಭಾಷೆ ಹೋಯಿತ್ತು
ದೇಶವೆಲ್ಲರಿಯೆ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ನಂಬಿ
ಹಂಬಲ ಮರೆದೆನಾಗಿ

೯೫೯
ಸಾಗರದ ತಡಿಯಲ್ಲಿ ಒಂದು ಆರವೆ
ಆರವೆಯ ಬೇರಿನಲ್ಲಿ ಮೂರುಲೋಕ
ಲೋಕದೊಳಗೆ ಹೊತ್ತು ಬೆವಹಾರ ಮಾಡುವ ಅಣ್ಣಗಳೆಲ್ಲರೂ
ಹೇರಿನ ಮೂಲೆಗೆ ತೋಳಕೊಟ್ಟು
ಅಳೆವ ಕೊಳಗಕ್ಕೆ ಕೈಯನಿಕ್ಕಿದರು
ಗಡಿವಾಡದ ಸುಂಕವ ಕದ್ದು ಹೋಗಲರಿಯದೆ
ಬಂಕೇಶ್ವರಲಿಂಗವನರಿಯಿರಣ್ಣಾ

೯೬೦
ಸಾಗರದೊಳಗಣ ಕಿಚ್ಚಿನ ಸಾಕಾರದಂತೆ
ಸಸಿಯೊಳಗಣ ಫಲಪುಷ್ಪ ರುಚಿಯ ಪರಿಮಳದಂತೆ
ಮನದ ಮರೆಯ ಮಾತು
ನೆನಹಿನಲ್ಲಿ ಅರಿದು ನಾಲಗೆಯ ನುಡಿವಾಗಲಲ್ಲದೆ
ಕಾಣಬಾರದು ಕೇಳಬಾರದು
ಒಂದಂಗದೊಳಗಡಗಿದ ನೂರೊಂದರ ಪರಿ
ರಾಮನಾಥ

೯೬೧
ಸಾಗರದೊಳಗಿಪ್ಪ ಪ್ರಾಣಿಗಳು ಮತ್ತೊಂದೆಡೆಯಲ್ಲಿ ಇರಬಲ್ಲವೆ
ಭವಸಾಗರದೊಳಗಿಪ್ಪ ಜೀವಿಗಳಿಗೆ ಅದೇ ಗತಿಯಿಲ್ಲದೆ
ಬೇರೆ ಮತ್ತೊಂದೆಡೆಯುಂಟೆ
ಗೊಹೇಶ್ವರನ ಲೀಲೆ ಜಗನ್ನಯವಾದಡೆ
ನಾನು ಬೆರಗಾದೆನು

೯೬೨
ಸಾವ ಜೀವಕ್ಕೆ ಗುರು ಬೇಡ
ಸಾಯದ ಜೀವಕ್ಕೆ ಗುರು ಬೇಡ
ಗುರುವಿಲ್ಲದ ಕೊಡಲಿಕ್ಕೆ ಬಾರದು
ಇನ್ನಾವ ಠಾವಿಂಗೆ ಗುರು ಬೇಕು
ಸಾವುಜೀವಸಂಬಂಧದ ಠಾವ ತೋರಬಲ್ಲಾತನೇ
ಗುರುಗುಹೇಶ್ವರನು

೯೬೩
ಸಾವನ್ನಕ್ಕರ ಸರವ ಮಾಡಿದರೆ
ಇನ್ನು ಕಾದುವ ದಿನವಾವುದು
ಬಾಳುವನ್ನಕ್ಕರ ಭಜಿಸುತ್ತಿದ್ದರೆ
ತಾನಹ ದಿನವಾವುದು
ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದರೆ
ನಿಜವನೈದುವ ದಿನವಾವುದು
ಕಾರ್ಯಕ್ಕೆ ಬಂದು ಕಾರ್ಯ ಕೈಸಾರಿದ ಬಳಿಕ
ಇನ್ನು ಮರ್ತ್ಯಲೋಕದ ಹಂಗೇಕೆ
ತನಿರಸ ತುಂಬಿದ ಅಮೃತಫಲ ಒಮ್ಮೆಗೆ ತೊಟ್ಟು ಬಿಡುವುದು
[ನೋಡಿರೆ ದೃಷ್ಟಾಂತದ ಬಸವಣ್ಣ ಚೆನ್ನಬಸವಣ್ಣ ಮೊದಲಾದ ಪ್ರಮಥರು]
ಗೊಹೇಶ್ವರಲಿಂಗದಲ್ಲಿ ನಿಜವನೈದಿ ನಿಶ್ಚಿಂತರಾಗಿರಯ್ಯ

೯೬೪
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ
ನಾನೊಲಿದೆ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ
ನಾನೊಲಿದೆ
ಎಲೆ ಅವ್ವಗಳಿರಾ
ಭವವಿಲ್ಲವ ಭಯವಿಲ್ಲವ ನಿರ್ಭಯ ಚೆಲವುಂಗೊಲಿದೆ
ನಾನು ಸೀಮೆಯಿಲ್ಲದ ನಿಸ್ಸೀಮಂಗೊಲಿದೆ
ನಾನು ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ
ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ

೯೬೫
ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ
ನೋಡಾ ಬೇಟವ ಮಾಡಿಹನೆಂಬ ಪರಿಯ ನೋಡಾ
ತನ್ನನಿಕ್ಕಿ ನಿಧಾನವ ಸಾಧಿಸಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರ

೯೬೬
ಸಿಂಹದ ಮುಂದೆ ಜಿಂಕೆಯ ಜಿಗಿದಾಟವೆ
ಪ್ರಳಯಾಗ್ನಿಯ ಮುಂದೆ ಪತಂಗದಾಟವೆ
ಸೂರ್ಯನ ಮುಂದೆ ಕೀಟದಾಟವೆ
ನಿಮ್ಮ ಮುಂದೆ ಎನ್ನಾಟವೆ ಕಲಿಕದೇವರದೇವಾ

೯೬೭
ಸಿಡಿಲುಹೊಯ್ದ ಬಾವಿಗೆ ಸೋಪಾನವುಂಟೆ
ಷಡುವರ್ಣರಹಿತಂಗೆ ಬಣ್ಣವುಂಟೆ
ಕಡಲದಾಂಟಿದವಂಗೆ ಹರುಗೋಲುಂಟೆ
ಬಿಡದೆ ಕಟ್ಟಿದ ಒರೆಗೆ ಸಂಧಾನವುಂಟೆ
ಒಡಲಿಲ್ಲದವಂಗೆ ಒಡವೆಯುಂಟೆ
ನುಡಿಯುಂಟೆ ಎಮ್ಮ ಅಜಗಣ್ಣದೇವಂಗೆ

೯೬೮
ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮರೆಯೆ
ಪರ್ವತದ ಹೊರುವಂಗೆ ಸಿಂಬೆಯೊಂದು ಸಹಾಯವೆ
ಸಕ್ಕರೆಯ ಸವಿವುದಕ್ಕೆ ಬೇವೊಂದು ಪದಾರ್ಥವೇ
ಗೋಗೇಶ್ವರನನರಿವುದಕ್ಕೆ ಕುರುಹು ಮುನ್ನೇಕೆ

೯೬೯
ಸೀಮೋಲ್ಲಂಘನವೆಂಬುದ ನಾನರಿಯೆ ನೀವೆ ಬಲ್ಲಿರಿ
ಇದ್ದ ಮನೆಯ ಬಿಡಲಾರದೆ ತೊಟ್ಟಿದ್ದ ತೊಡಿಗೆಯ
ಅಳಿಯಲಾರದೆ
ಇದ್ದ ಠಾವ ಬಿಟ್ಟು ಹೋಗೆನೆಂಬುದು ಛಲವೆ
ಅದು ತನ್ನ ಸೀಮೆಯೂ ಜಗದ ಸೀಮೆಯೊ ಎಂಬುದ
ತಾನರಿಯಬೇಕು
ತನ್ನ ಸೀಮೆಯಲ್ಲಿ ಬಂದಂಗವ ಜಗದ ಸೀಮೆಯಲ್ಲಿ
ಅಳಿಯಬಹುದೆ
ತನ್ನಂಗಕ್ಕೆ ಕಂಟಕ ನೇಮ ತಪ್ಪಿ ಬಂದಲ್ಲಿ
ಅಂಗವ ಲಿಂಗದಲ್ಲಿ ಬೈಚಿಟ್ಟು ಕೂಡಿದ ಅಂಗ ಸೀಮೋಲ್ಲಂಘನ
ಇಂತೀ ನೇಮ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ
ಸಂದಿತ್ತು

೬೭೦
ಸುಖದ ಸುಖಿಗಳ ಸಂಭಾಷಣೆಯಿಂದ ದುಃಖ ವಿಶ್ರಾಮವಾಯಿತ್ತು
ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ ನೆನಹಕ್ಕೆ ವಿಶ್ರಾಮವಾಯಿತ್ತು
ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತು
ಚೆನ್ನಬಂಕನಾಥನ ಮಾಹೇಶ್ವರಂಗೆ

೯೭೧
ಸುಖದುಃಖಾದಿಗಳ ಮೀರುವ ಎನ್ನವರ ಕಾಣೆ
ಸುಖದುಃಖಾದಿಗಳ ಮೀರುವ ನಿನ್ನವರ ಕಾಣೆ
ಇನ್ನೇನು ಹೇಳುವೆ ನಡುಹೊಳೆಯಲ್ಲಿ ಹರುಗೋಲ ಹರಿದಂತೆ
ಅಂಬಿಗನ ಕೊರಳ ಸುತ್ತಿ ಬಂದವರೆಲ್ಲರೂ
ಉಭಯವು ಹೊಂದಿದಂತಾಯಿತ್ತು
ನೀ ಎನ್ನ ಬಟ್ಟೆ ನಾ ನಿನ್ನ ಬಟ್ಟೆ
ಉಭಯವು ಬಂದ ಬಟ್ಟೆಯಾದೆವಲ್ಲ
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ

೯೭೨
ಸುಖವ ನಿಶ್ಚೈಸಲಿಲ್ಲ ಅದು ದುಃಖಕ್ಕೆ ಬೀಜ
ದುಃಖವ ನಿಶ್ಚೈಸಲಿಲ್ಲ ಸುಖದೊಡಲು
ಸುಖದುಃಖವರೆಡು ಕಾಲನ ಸುಂಕಕ್ಕೆ ಒಳಗು
ಬಂಕೇಶ್ವರಲಿಂಗದೊಳಗೆ ಒಬ್ಬರೂ ಇಲ್ಲ

೯೭೩
ಸುಖವ ಬಲ್ಲಾತ ಸುಖಿಯಲ್ಲ
ದುಃಖದ ಬಲ್ಲಾತ ದುಃಖಿಯಲ್ಲ
ಸುಖದುಃಖವೆರಡನೂ ಬಲ್ಲಾತ ಜ್ಞಾನಿಯಲ್ಲ
ಹುಟ್ಟದ ಮುನ್ನ ಸತ್ತವರ ಕುರುಹ ಬಲ್ಲಡೆ ಬಲ್ಲ
ಗುಹೇಶ್ವರ

೯೭೪
ಸುಖವನನುಭವಿಸಿ ಆನು
ಸುಖದ ಹದನನು ಕಂಡೆ
ದುಃಖವನನುಭವಿಸಿ ಆನು
ದುಃಖದ ಹದನನು ಕಂಡೆ
ಸಾಕೆಂದು ನಿಂದೆ ನಿಃಭ್ರಾಂತನಾಗಿ
ಸಾಕೆಂದು ನಿಂದೆ ನಿಶ್ಚಿಂತನಾಗಿ
ಸಾಕೆಂದು ನಿಂದೆ
ಸಕಳೇಶ್ವರದೇವನಲ್ಲದೆ ಪೆರತೇನೂ ಇಲ್ಲೆಂದು
ಸಾಕೆಂದು ನಿಂದೆ

೯೭೫
ಸುಖವನರಿಯದ ಹೆಣ್ಣು ಸೂಳೆಯಾದಳು
ಲಿಂಗವನರಿಯದಾತ ಶೀಲವಂತನಾದ
ಸುಖವಿಲ್ಲ ಸೂಳೆಗೆ ಪಥವಿಲ್ಲ ಶೀಲಕ್ಕೆ
ಮಾಡಲಾಗದು ನೇಮವ ನೋಡಲಾಗದು ಶೀಲವ
ಸತ್ಯಸಹಜವೇ ಸತ್‌ಶೀಲ ಗುಹೇಶ್ವರನನರಿಯಬಲ್ಲವಂಗೆ