೯೭೬
ಸುಡಲೀ ಮನವೆನ್ನನುಡುಹನ ಮಾಡಿತ್ತು
ನಡೆವಲ್ಲಿ ನುಡಿವಲ್ಲಿ ಅಧಿಕನೆಂದೆನಿಸಿತ್ತು
ಬೆಡಗಿನ ಕೀಲು ಕಳೆದು ಕೆಡೆದ ಬಳಿಕ
ಕಡುಗೂರ್ಪ ಮಡದಿ ತಾ ಮುಟ್ಟಲಮ್ಮಳು
ಒಡಲನುರಿಕೊಂಬುದು ಒಡವೆಯನರಸ ಕೊಂಬ
ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ
ಮುನ್ನ ಮಾಡಿದುದು ತನ್ನ ಬೆನ್ನ ಬಿಡದನ್ನಕ್ಕ
ಇನ್ನು ನಿಮ್ಮ ನೆನಹು ಬಯಸಿದಡುಂಟೆ
ಕೂಡಲಸಂಗಮದೇವಾ

೯೭೭
ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯ
ಗಮನವಿಲ್ಲದೆ ಸುಳಿಯ ಬಲ್ಲಡೆ
ನಿರ್ಗಮನಿಯಾಗಿ ನಿಲಬಲ್ಲಡೆ
ಅದಕ್ಕದೆ ಪರಿಣಾಮ
ಅದಕ್ಕದೆ ಸಂತೋಷ ಗುಹೇಶ್ವರಲಿಂಗದಲ್ಲಿ
ಅವರ ಜಗದಾರಾಧ್ಯರೆಂಬೆನು

೯೭೮
ಸುಳಿವ ಅನಿಲಂಗೆ ಮೈಯೆಲ್ಲ ಕೈ
ಸುಡುವ ಅನಲಂಗೆ ಭಾವವೆಲ್ಲ ಬಾಯಿ
ಹರಿವ ನೀರಿಂಗೆ ತನ್ಮಯವೆಲ್ಲ ಅಡಿ
ಅರಿಯದೆ ಮರೆಯದೆ ಮುಟ್ಟಿಹಂಗೆ
ಕಡೆ ನಡು ಮೊದಲೆಂದು ಅರ್ಪಿತವಿಲ್ಲ
ಇಲ್ಲಾ ಎಂಬ ಸೂತಕಕ್ಕೆ ಮುನ್ನವೆ ಇಲ್ಲ
ಕಾಮಧೂಮ ಧೂಳೇಶ್ವರನು

೯೭೯
ಸುಳಿವ ಸುತ್ತುವ ಮನದ ವ್ಯವಹರಣೆಯುಳ್ಳನ್ನಕ್ಕರ
ಅರಿಯೆನರಿಯ ನೆರೆ ಶಿವಪಥವ
ಗುಹೇಶ್ವರಲಿಂಗದ ನಿಜವನರಿದ ಬಳಿಕ
ಅರಿಯೆನರಿಯೆ ಲೋಕದ ಬಳಕೆಯ

೯೮೦
ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದಡೆಯೂ ಅಯ್ಯಾ ಅಯ್ಯಾ ಎನಲಾರೆ
ಚೆನ್ನಯ್ಯನೆಮ್ಮಯ್ಯನು ಚೆನ್ನಯ್ಯನ ಮಗ ನಾನು
ಕೂಡಲಸಂಗನ ಮಹಾಮನೆಯಲಿ
ಧರ್ಮಸಂತಾನ ಭಂಡಾರಿ ಬಸವಣ್ಣನು

೯೮೧
ಸ್ತ್ರೀಲಿಂಗ ನಾಸ್ತಿಯಾಗಿರಬೇಕು ಗುರುವಿನಿರವು
ಪುಲ್ಲಿಂಗ ನಾಸ್ತಿಯಾಗಿರಬೇಕು ಲಿಂಗದಿರವು
ನಪುಂಸಕಲಿಂಗ ನಾಸ್ತಿಯಾಗಿರಬೇಕು ಜಂಗಮದಿರವು
ತ್ರಿವಿಧಬಿಂದು ಲಿಂಗ ನಾಸ್ತಿ
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ನಾದ ಬಿಂದು ಕೆಳೆಗೆ ಹೊರಗಾಯಿತ್ತು

೯೮೨
ಸ್ಥಲಂಗಳನರಿದಿಹೆನೆಂದಡೆ ತ್ರಿವಿಧಸ್ಥಲ ಎನಗಿಲ್ಲ
ಷಡುಸ್ಥಲವ ಮುನ್ನವೆ ಅರಿಯೆ
ತತ್ವವನರಿದಿಹೆನೆಂದಡೆ ಇಪ್ಪತ್ತೈದರ ಗೊತ್ತಿನವನಲ್ಲ
ಮಿಕ್ಕಾದ ಸತ್ಕ್ರೀಯದಲ್ಲಿ ನಡೆದಿಹೆನೆಂದಡೆ
ಭಕ್ತಿ ಜ್ಞಾನ ವೈರಾಗ್ಯ ತ್ರಿವಿಧ ಲಕ್ಷ್ಯವಿಧ ನಾನಲ್ಲ
ನಿಷ್ಠೆಯಲ್ಲಿ ದೃಷ್ಟವ ಕಂಡಿಹನೆಂದಡೆ ವಿಶ್ವಾಸ ಎನಗಿಲ್ಲ
ವಿರಕ್ತಿಯಲ್ಲಿ ವೇಧಿಸಿಹೆನೆಂದಡೆ
ತ್ರಿವಿಧ ಮಲದ ಮೊತ್ತದೊಳಗೆ ಮತ್ತನಾಗಿದೇನೆ
ಮತ್ತೆ ನಿಶ್ಚಯವನರಿದಿಹೆನೆಂದಡೆ
ಆತ್ಮಂಗೆ ಲಕ್ಷವಿಡುವದೊಂದು ಗೊತ್ತ ಕಾಣೆ
ಇಂತೀ ಕಷ್ಟತನುವಿನಲ್ಲಿ ಬಂದು ಧೂರ್ತನಾಗಿ
ಕೆಟ್ಟುಹೋಗುತ್ತಿದ್ದೇನೆ
ಗುಡಿಸಿದ ಹಿಕ್ಕೆಯಲ್ಲಿ ಬಂದು ತನ್ನ ನಿಷ್ಠೆಯ ತೋರಿ
ಎನಗೆ ಸದ್ಭಕ್ತಿಯ ಬೀರಿ ವಿಶ್ವಾಸಿಗಳಿಗೆಲ್ಲಕ್ಕೆ ಕೃತ್ಯದೊಳಗಾಗಿ
ನಿತ್ಯನೇಮಂಗಳಲ್ಲಿ ಅಚ್ಚೊತ್ತಿದಂತಿರು
ನೀನೆ ಮುಕ್ತನಹೆ ನಿಜನಿತ್ಯನಹೆ ಜಗಕೆ ಕರ್ತೃವಹೆ
ಎನ್ನ ಹಿಕ್ಕೆಗೆ ಬಂದು ಸಿಕ್ಕಿದೆಯಲ್ಲಾ
ಮಹಾಮಹಿಮ ವೀರಬೀರೇಶ್ವರಾ

೯೮೩
ಸ್ಥಳ ಕುಳವನರಿಯಬೇಕೆಂಬರು
ಭಕ್ತನಾಗಿ ಮಾಹೇಶ್ವರನಾಗಬೇಕೆಂಬರು
ಮಾಹೇಶ್ವರನಾಗಿ ಪ್ರಸಾದಿಯಾಗಬೇಕೆಂಬರು
ಪ್ರಸಾದಿಯಾಗಿ ಪ್ರಾಣಲಿಂಗಿಯಾಗಬೇಕೆಂಬರು
ಪ್ರಾಣಲಿಂಗಿಯಾಗಿ ಶರಣಾಗಬೇಕೆಂಬರು
ಶರಣನಾಗಿ ಐಕ್ಯನಾಗಬೇಕೆಂಬರು
ಐಕ್ಯ ಏತರಿಂದ ಕೂಟ ನಾನರಿಯೆ
ಒಳಗಣ ಮಾತು ಹೊರಹೊಮ್ಮಿಯಲ್ಲದೆ ಎನಗೆ ಅರಿಯಬಾರದು
ಎನಗೆ ಐಕ್ಯನಾಗಿ ಶರಣಾಗಬೇಕು
ಶರಣನಾಗಿ ಪ್ರಾಣಲಿಂಗಿಯಾಗಬೇಕು
ಪ್ರಾಣಲಿಂಗಿಯಾಗಿ ಪ್ರಸಾದಿಯಾಗಬೇಕು
ಮಾಹೇಶ್ವರನಾಗಿ ಭಕ್ತನಾಗಬೇಕು
ಭಕ್ತನಾಗಿ ಸಕಲಯುಕ್ತಿಯಾಗಬೇಕು
ಯುಕ್ತಿ ನಿಶ್ಚಯವಾದಲ್ಲಿಯೆ
ಐಕ್ಯಸ್ಥಲ ಒಳಹೊರಗಾಯಿತ್ತು
ಎನಗೆ ಕಾಣಬಂದಿತ್ತು
ಅಲೇಖನಾದ ಶೂನ್ಯ ಶಿಲೆಯ ಹೊರಹೊಮ್ಮಿ
ಕಂಡೆ ನಿನ್ನನ್ನು

೯೮೪
ಸ್ಥಾವರಭಕ್ತಂಗೆ ಸೀಮೆಯಲ್ಲದೆ
ಘನಲಿಂಗಜಂಗಮಕ್ಕೆ ಸೀಮೆಯೆಲ್ಲಿಯದು
ಅಂಬುಧಿಗೆ ಸೀಮೆಯಲ್ಲದೆ
ಹರಿವ ನದಿಗೆ ಸೀಮೆಯೆಲ್ಲಿಯದು
ಭಕ್ತಂಗೆ ಸೀಮೆಯಲ್ಲದೆ
ಜಂಗಮಕ್ಕೆ ಸೀಮೆಯುಂಟೆ
ಕೂಡಲಸಂಗಮದೇವಾ

೯೮೫
ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರು ಕಂಬವ ನೆಟ್ಟು
ಆಗುಚೇಗೆಯೆಂಬ ದಡಿಗೋಲಿನಲ್ಲಿ
ಅಗಡದ ಎಮ್ಮೆಯ ಚರ್ಮವ ತೆಗೆದು
ಉಭಯನಾಮವೆಂಬ ನಾರಿನಲ್ಲಿ ತಿತ್ತಿಯನೊಪ್ಪವ ಮಾಡಿ
ಭಾವವೆಂಬ ತಿಗುಡಿನಲ್ಲಿ
ಸರ್ವಸಾರವೆಂಬ ಖಾರದ ನೀರ ಹೊಯಿದು
ಅಟ್ಟೆಯ ದುರ್ಗುಣ ಕೆಟ್ಟು
ಮೆಟ್ಟಡಿಯವರಿಗೆ ಮುಟ್ಟಿಸಬಂದೆ
ಮೆಟ್ಟಡಿಯ ತಪ್ಪಲ ಕಾಯದೆ
ಮೆಟ್ಟಡಿಯ ಬಟ್ಟೆಯ ನೋಡಿಕೊಳ್ಳಿ
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ
ಅರಿ ನಿಜಾತ್ಮ ರಾಮ ರಾಮನಾ

೯೮೬
ಸ್ವತಂತ್ರ ಪರತಂತ್ರಕ್ಕೆ ಆವುದು ಚಿಹ್ನ ನೋಡಾ
ತಾನೆಂಬುದಳಿದು ಇದಿರೆಂಬುದ ಮರೆದು
ಭಾವದಗ್ಧವಾಗಿರಬಲ್ಲಡೆ ಅದು ಸ್ವತಂತ್ರ
ನೀನೆಂಬುದ ಧಿಃಕರಿಸಿ ತಾನೆಂಬುದ ನಿಃಕರಿಸಿ
ಉಭಯಭಾವದಲ್ಲಿ ಸನ್ನಿಹಿತವಾಗಿರಬಲ್ಲಡೆ ಪರತಂತ್ರ
ಸ್ವತಂತ್ರ ಪರತಂತ್ರವೆಂಬೆರಡನೂ ವಿವರಿಸದೆ
ತನ್ನ ಮರೆದಿಪ್ಪನೆ ಉಪಮಾತೀತನು
ಗೊಹೇಶ್ವರನ ಶರಣರು ದೇಹವಿಲ್ಲದ ನಿರ್ದೇಹಿಗಳೆಂ[ಬುದು
ಇಂದನೆಗೆ ಕಾಣಬಂದಿತ್ತು ನೋಡಾ ಸಿದ್ಧರಾಮಯ್ಯ]

೯೮೭
ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ
ಎಂದೆಂದೂ ಅಳಿಯೆನೆಂದು ಗುಡಿಗಟ್ಟಿದೆಯಲ್ಲಾ ನಿನ್ನ ಮನದಲ್ಲಿ
ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆ
ಕೂಡಲಸಂಗಮದೇವನಲ್ಲದೆ

೯೮೮
ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದಡೆ
ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ
ಈ ಹಂದಿಯದು ಕೇಸರಿಯಪ್ಪುದೆ
ಚೆನ್ನಮಲ್ಲಿಕಾರ್ಜುನಾ

೯೮೯
ಹಂಸಪತಿ ಗರುಡಪತಿ ವೃಷಭಪತಿ
ಮೊದಲಾದ ಸರ್ವಜೀವಾಧಿಪತಿ
ದೇವರಾಯ ಮಹಾರಾಯನ ಅರಸುತನ ಹೊಸಲು
ಓಲಗಕ್ಕೆ ಬಾರ
ಸಿಂಹಾಸನದಲ್ಲಿ ಕುಳ್ಳಿರ
ಸ್ತ್ರೀಲಂಪಟನಾಗಿ ಅಂತಃಪುರದ ಬಿಟ್ಟು ಹೊರವಂಡ
ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ
ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು
ತೆರೆದ ಬಾಗಿಲ ಮುಚ್ಚುವರಿಲ್ಲ
ಮುಚ್ಚಿದ ಬಾಗಿಲ ತೆರೆವವರಿಲ್ಲ
ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು
ಭಕ್ತರೆಂಬವರಿನ್ನು ಬದುಕಲೇ ಬಾರದು

೯೯೦
ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ
ಇರುಳಿನ ಕೂಟದಲ್ಲಿ ಇಂಬರಿದು ಹತ್ತಿದೆ
ಕನಸಿನಲ್ಲಿ ಮನಸಂಗವಾಗಿ ಮೈಮರೆದಿರ್ದೆ
ಮನಸ್ಸಿನಲ್ಲಿ ಮೈಮರೆದು ಒರಗಿದೆ
ಚನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆ

೯೯೧
ಹಗಲು ಮನಸಿಗಂಜಿ
ಇರುಳು ಕನಸಿಗಂಜಿ
ಧ್ಯಾನ ಮೋನಿಯಾಗಿರ್ದಳವ್ವೆ
ಸಖಿ ಬಂದು ಬೆಸಗೊಂಡಡೆ
ಏನೆಂದು ಹೇಳುವಳವ್ವೆ
ಏನೆಂದು ನುಡಿವಳವ್ವೆ
ಸಾಕಾರದಲ್ಲಿ ಸವೆಸವೆದು
ನಿರಾಕಾರದಲರ್ಪಿಸಿದಡೆ
ಮಹಾಲಿಂಗ ಗಜೇಶ್ವರನುಮೇಶ್ವರನಾಗಿರ್ದನವ್ವೆ

೯೯೨
ಹಗಲು ಹಸಿವಿಂಗೆ ಕುದಿದು
ಇರುಳು ನಿದ್ರೆಗೆ ಕುದಿದು
ಉಳಿದಾದ ಹೊತ್ತೆಲ್ಲಾ ಅಶನ ವ್ಯಸನಕ್ಕೆ ಕುದಿದು
ಅಯ್ಯಾ ನಿಮ್ಮನರಿಯದ ಪಾಪಿ ನಾನಯ್ಯಾ
ಅಯ್ಯಾ ನಿಮ್ಮನರಿಯದ ಕರ್ಮಿ ನಾನಯ್ಯಾ
ಮಹಾಲಿಂಗ ಗಜೇಶ್ವರದೇವಾ
ಅಸಗ ನೀರಡಸಿದಂತಾಯಿತ್ತೆನ್ನ ಸಂಸಾರ

೯೯೩
ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು
ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು
ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು
ಚನ್ನಮಲ್ಲಿಕಾರ್ಜುನನರಿಯದ ಬಳಿಕ
ಆ ಕಾಯವ ನಾಯಿ ತಿಂದಡೇನು
ನೀರು ಕುಡಿದಡೇನು

೯೯೪
ಹತ್ತಿ ಕದಿರು ರಾಟಿ ಮೊದಲಿಲ್ಲ ನೂಲುಂಟು
ಸೆಲದಿಯ ಹೃದಯದಲ್ಲಿ ಲಿಂಗವುಂಟು
ಭಕ್ತರ ಭಾವದಲ್ಲಿ ಲಿಂಗವುಂಟು
ರೇಕಣ್ಣಪ್ರಿಯ ನಾಗಿನಾಥನ
ಶರಣರ ಮನದ ಕೊನೆಯನೆತ್ತಿದಡೆ ಲಿಂಗದ ಗೊಂಚಲುಂಟು

೯೯೫
ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ
ವ್ರತಹೀನನ ನೆರೆಯ ನರಕವಲ್ಲದೆ ಮುಕ್ತಿಯಿಲ್ಲ
ಅರಿಯದುದು ಹೋಗಲಿ ಅರಿದು ಬೆರೆದೆನಾದಡೆ
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ
ಒಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ

೯೯೬
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆಯಹೋಯಿತ್ತು
ಅದಂದೆ ಹುಟ್ಟಿತ್ತು ಅದಂದ ಹೊಂದಿತ್ತು
ಕೊಂದವರುಳಿವರೆ
ಕೂಡಲಸಂಗಮದೇವಾ

೯೯೭
ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರದು ನೋಡುವ ಮಿಸುನಿಯ ಚಿನ್ನದಂತೆ
ಅರದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇರ್ದಡೆ
ಕರವಿಡಿದೆತ್ತಿಕೊಂಬ
ನಮ್ಮ ರಾಮನಾಥ

೯೯೮
ಹಗಿರಣಂಗಳ ನೆರಹಿ ಮಾಡುವ ಮಾಟ
ಉರಿಯನಾಲಗೆ ಕೊರಳನಪ್ಪಿದಂತಾಯಿತ್ತಯ್ಯಾ
ಒಡೆದ ಮಡಕೆಯಲ್ಲಮೃತವ ತುಂಬಿ
ಮುರುವ ಕುಟ್ಟಿ ಅಟ್ಟುಂಬ ತೆರನಂತಾಯಿತ್ತಯ್ಯಾ
ಭಕ್ತದೇಹಿಕದೇವ ಮನೆಗೆ ಬಂದಡೆ ಮತ್ತೆ ಮಾಡಿಹೆನೆಂಬುದಿಲ್ಲವು
ಮೂಗಿಲ್ಲದ ಮುಖಕ್ಕೆ ಶೃಂಗಾರವ ಮಾಡಿದಂತಾಯಿತ್ತಯ್ಯಾ
ಶರಣಸನ್ನಹಿತ ಸಕಳೇಶ್ವರದೇವನ ಅರಿದೂ ಅರಿಯದಂತಿರ್ದಡೆ
ಮಳಲಗೌರಿಯ ನೋಂತು ನದಿಯಲ್ಲಿ ಬೆರಸಿದಂತಾಯಿತ್ತಯ್ಯಾ

೯೯೯
ಹರಿಗೋಲು ಹರಿದ ಮತ್ತೆ ಹೊಳೆಯೇನು ಮಾಡುವುದು
ಇರಿದವನಿದ್ದಂತೆ ಕೈದೇನ ಮಾಡುವುದು
ಎಚ್ಚವನಿದ್ದಂತೆ ಅಂಬಿಗೆ ಮುನಿವರೆ
ಎನ್ನ ಚಿತ್ತದಲ್ಲಿ ಕಲೆದೋರಿ ನೀನಾಡಿಸಿದಂತೆ ಆಡಿದೆ
ನೀ ಕೊಟ್ಟ ಕಾಯಕವ ಹೊತ್ತೆ ನೀ ಹೇಳಿದ ಬಿಟ್ಟಿಯ ಮಾಡಿದೆ
ಕುಳದವನಾದ ಮತ್ತೆ ಮಾನ್ಯರ ಒಲವರ ಎನಗೊಂದು ಗುಣವಿಲ್ಲ
ನೀನಾಡಿಸಿದಂತೆ ಆಡಿದೆ ಆತುರ ವೈರಿ ಮಾರೇಶ್ವರಾ

೧೦೦೦
ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಬೀಸುವ ಗಾಳಿಗೆ ಮೈಯೆಲ್ಲ ಕೈ
ಇದು ಕಾರಣ ಗುಹೇಶ್ವರ
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯವಯ್ಯ