ಹೊಸಪೇಟೆ ಹತ್ತಿರದ ಕಮಲಾಪುರದಿಂದ ಆರೇಳು ಕಿಲೋಮೀಟರ್ ದೂರದಲ್ಲಿ ಸುಂಕಲಮ್ಮನ ಕೆರೆ ಇದೆ. ಆ ಕೆರೆ ದಡಕ್ಕೆ ಒಂದು ಎಕರೆಯಷ್ಟು ಆಲದ ಮರವಿದೆ. ಅದರ ಬಿಳಲುಗಳಲ್ಲಿಯೇ ಸುಂಕಲಮ್ಮ ದೇವಿ ಕುಳಿತಿದ್ದಾಳೆ. ನೋಡಲು ಮನೋಹರವಾಗಿದೆ. ಇದು ಕನ್ನಡ ವಿಶ್ವವಿದ್ಯಾಲಯಕ್ಕೆ ಸುಮಾರು ಮೂರು ಮೈಲಿ ದೂರ.

ನಾನು ಕಮಲಾಪುರದ ಬೇಡ ನಾಯಕರ ಕೃಷಿಯಲ್ಲಿನ ಬದಲಾವಣೆ ಗುರುತಿಸಲು ಕ್ಷೇತ್ರ ಕಾರ್ಯಕ್ಕೆಂದು ಅವರ ಹೊಲಗಳಲ್ಲಿ ಸುತ್ತಾಡುತ್ತಿದ್ದೆ. ಸುಂಕಲಮ್ಮನ ಕೆರೆಗೆ ಹೋದಾಗ, ಅಲ್ಲಿಗೆ ಸಮೀಪದಲ್ಲಿಯೇ ಶಂಕರತಾತನ ಮಠವಿರುವುದಾಗಿಯೂ, ಅದನ್ನು ವನ್ನೂರಸ್ವಾಮಿ ಪೂಜೆ ಮಾಡುವುದಾಗಿ ಹೇಳಿದರು. ಕುತೂಹಲಗೊಂಡ ನಾನು ಆತನನ್ನು ಮಾತನಾಡಿಸಲೆಂದು ಹೊಲಕ್ಕೆ ಹೋದೆ. ಆತ ತಲೆಗೆ ಟವೆಲ್ ಸುತ್ತಿಕೊಂಡು ಹೊಲದಲ್ಲಿ ಬೇಸಾಯ ಮಾಡುತ್ತಿದ್ದ. ನಾನು ಸೀದ  ಶಂಕರತಾತನ ದೇವಸ್ಥಾನದತ್ತ ಹೋಗಿ ಎಲ್ಲವನ್ನೂ ಗಮನಿಸಿದೆ. ಸ್ವಲ್ಪ ಹೊತ್ತಿನ ನಂತರ ವನ್ನೂರ ಸ್ವಾಮಿ ಬೇಸಾಯ ನಿಲ್ಲಿಸಿ ಬಂದರು. ನಾನು ಬಂದ ವಿಷಯ ಕೇಳಿದರು. ನಾನು ಅವರ ವಯಕ್ತಿಕ ಬದುಕಿನ ಬಗ್ಗೆ ವಿಚಾರಿಸುತ್ತಾ, ಶಂಕರ್ ತಾತ ಇಲ್ಲಿಗೆ ಬಂದದ್ದು ಹೇಗೆಂದು ಕೇಳಿದೆ.

ಆತ ನಿಧಾನಕ್ಕೆ ಕಥೆ ಹೇಳತೊಡಗಿದ. ಈತನ ಹೆಸರು ವನ್ನೂರ ಅಲಿ. ಕಮಲಾಪುರದ ಕುಂಟದಲ್ಲಿ ಇವರ ಮನೆ ಇದೆ. ಈತ ಒಮ್ಮೆ ವಡ್ಡರ ಮನೆಗೆ ಮಾತನಾಡಲೆಂದು ಹೋಗಿದ್ದಾನೆ. ಆ ಮನೆಯಲ್ಲಿ ಚಿಕ್ಕ ಹುಡುಗಿಗೆ ದೆವ್ವ ಹಿಡಿದು ಅದನ್ನು ಬಿಡಿಸಲು ಬಳ್ಳಾರಿ ಪಕ್ಕದ ಕುರುಗೋಡಿದೆ ಹೋಗಿದ್ದರಂತೆ. ಆಗ ಆ ಹುಡುಗಿಯಲ್ಲಿ ದೆವ್ವ ಹೋಗಿ ಶಂಕರ ತಾತ ನೆಲೆಸಿದ್ದನಂತೆ, ಆ ಹುಡುಗಿಯಲ್ಲಿರುವ ಶಂಕರ್ ತಾತ ಅವಳನ್ನು ಬಿಟ್ಟು ಮಾತನಾಡಲೆಂದು ಹೋದ ವನ್ನೂರ್ ಅಲಿ ಮೈಯಲ್ಲಿ ಸೇರಿಕೊಂಡಿದ್ದಾನೆ. ಇದು ತಿಳಿದು ವನ್ನೂರ ಅಲಿ ‘ನಾನು ಮುಸ್ಲೀಂ ಇದೀನಿ ನಿನಗೆ ನನ್ನೊಳಗೆ ವಾಸ ಮಾಡಾಕ ಆಗಲ್ಲ ಬಿಟ್ಟು ಹೋಗು’ ಅಂದನಂತೆ. ಆಗ ಶಂಕರ್ ತಾತ ‘ಇಲ್ಲ ನಾನು ನಿನ್ನಲ್ಲಿ ನೆಲಸಾಕ ಅಂತಾನ ಕುರುಗೋಡಿನಿಂದ ಬಂದೀನಿ, ನಿನ್ನ ಬಿಟ್ಟ ನಾ ಹೋಗಲ್ಲ’ ಎಂದು ತಾತ ಹಠ ಹಿಡಿದಿದ್ದಾನೆ. ಆಗ ವನ್ನೂರು ಅಲಿ ಸರಿ ಅಂಗಾದ್ರೆ ಎಲ್ಲಿ ನೆಲೆಸ್ತಿ ಅಂತ ಕೇಳಿದ್ದಾನೆ, ನಿಮ್ಮ ಹೊಲದಾಗ ನೆಲೆಸ್ತೀನಿ ಅಂದಿದ್ದಾನೆ. ಹಾಗೆ ಬಂದು ವನ್ನೂರು ಅಲಿ ಹೊಲದಲ್ಲಿ ನೆಲೆಸಿದ್ದಾನೆ. ಹೀಗೆ ನೆಲೆಸಿ ೧೨ ವರ್ಷಗಳೇ ಕಳೆದಿವೆ. ತಾತ ತನ್ನೊಳಗೆ ನೆಲೆಸಿದ್ದರಿಂದ ವನ್ನೂರು ಅಲಿ ಮದುವೆಯಾಗದೆ ಹಾಗೆ ಉಳಿದಿದ್ದಾರೆ. ಇಲ್ಲಿಗೆ ಹಲವಾರು ಸಮಸ್ಯೆಗಳನ್ನು ಹೊತ್ತು ಭಕ್ತಾದಿಗಳು ಬರುತ್ತಾರಂತೆ. ಊರು ಹೊಲಸು, ಕಾಡು ಸ್ವಚ್ಛ ಹಂಗಾಗಿ ಕಾಡೊಳಗೆ ನೆಲಸ್ತೀನಿ ಅಂದಿದ್ದ ತಾತ ಎಂದು ವನ್ನೂರು ಅಲಿ ಹೇಳುತ್ತಾರೆ.

ಹೀಗೆ ಮುಸ್ಲೀಮನೊಬ್ಬ ತನ್ನದೇ ಹೊಲದಲ್ಲಿ ಹಿಂದೂ ದೇವರ ಗುಡಿ ಕಟ್ಟುವುದು, ಪೂಜೆ ಮಾಡುವುದು, ಪೂರ್ತಿ ವನ್ನೂರಸ್ವಾಮಿಯೇ ಆಗುವುದು ಕಮಲಾಪುರದ ಮುಸ್ಲೀಮರಿಗೆ ಸಹಜವಾಗಿ ಸಹಿಸದ ಸಂಗತಿಯಾಗಿದೆ. ಹಾಗಾಗಿ ಮುಸ್ಲೀಂ ನಾಯಕರುಗಳು ವನ್ನೂರ್ ಅಲಿ ಯೊಂದಿಗೆ ಮಾತಾಡಿ ನೀ ಹೀಗೆ ಮಾಡುತ್ತಿರುವುದು ತಪ್ಪು, ಇದು ನಮ್ಮ ಧರ್ಮಕ್ಕೆ ಅವಮಾನ ಮಾಡಿದಂತೆ ಎಂದು ಹೇಳಿದ್ದಾರೆ. ಇದಕ್ಕೆ ‘ಅದೆಂಗ ಧರ್ಮಕ್ಕ ಅವಮಾನ ಮಾಡಿದಂಗಕ್ಕಾತಿ, ಅಲ್ಲಾನು ದೇವರ, ಶಂಕರತಾತನೂ ದೇವರ ನಾ ದೇವರನ್ನ ಪೂಜಿ ಮಾಡಾಕತ್ತೀನಿ ಅಷ್ಟ’ ಎಂದಿದ್ದಾನೆ. ಆಗ ಅವರು ನೀ ಪೂಜೆ ಮಾಡದು ಬಿಡಲಿಲ್ಲ ಅಂದ್ರ ಧರ್ಮದಿಂದ ಹೊರಗ ಹಾಕ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. ಆಗ ವನ್ನೂರ್ ಅಲಿ ಒಂದು ಮಾತನ್ನು ಎಲ್ಲರಲ್ಲಿಯೂ ಕೇಳಿದ್ದಾನೆ, ‘ಶಂಕರ್ ತಾತಗೆ ನನ್ನಲ್ಲಿ ನೆಲೆಗೊಳ್ಳಾಕ ಅಂತ ಬಂದು ನೆಲಿಸ್ಯಾನ, ನೀವೆಲ್ಲರೂ ಸೇರಿ ನನ್ನೊಳಗಿನ ತಾತನನ್ನು ಹೊರಗ ಕಳಸ್ರಿ..ನಾ ಇವತ್ತಾ ಪೂಜೆ ಮಾಡದು ಬಿಡ್ತೀನಿ, ಹೊಲದಾಗಿನ ದೇವಸ್ಥಾನನ ಕೆಡವತ್ತೀನಿ’ ಎಂದಿದ್ದಾನೆ.

ಒಗಟಿನಂಥಹ ಈ ಸವಾಲನ್ನು ಹೇಗೆ ತೆಗೆದುಕೊಳ್ಳುವುದೋ ಗೊತ್ತಾಗದೆ ಪೇಚಾಡಿ, ಕೊನೆಗೆ ಅವನೊಬ್ಬ ಏನಾದ್ರೂ ಮಾಡ್ಕಳ್ಳಿ ಬಿಡಿ ಅವನ ಪಾಡಿಗೆ ಎಂದು ಸುಮ್ಮನಾಗಿದ್ದಾರೆ. ಈಗ ವನ್ನೂರ ಅಲಿ ತನ್ನನ್ನು ತಾನು ಶಂಕರ್ ತಾತ ಎಂದೇ ಕರೆದುಕೊಳ್ಳುತ್ತಾನೆ. ಆತನೇನು ಯಾವುದೋ ವೇಷ ತೊಟ್ಟು ಸ್ವಾಮಿಯ ಹಾಗೆ ಇರುವುದಿಲ್ಲ. ಬದಲಾಗಿ ಸಾಮಾನ್ಯ ರೈತನ ಹಾಗೆ ಹೊಲದಲ್ಲಿ ದುಡಿಮೆ ಮಾಡಿಕೊಂಡು, ಒಂದಷ್ಟು ಪೂಜೆ ಮಾಡಿಕೊಂಡು ಬಂದ ಭಕ್ತರೊಂದಿಗೆ ಮಾತುಕತೆ ಮಾಡಿಕೊಂಡು ಜೀವನ ನಡೆಸಿದ್ದಾನೆ. ತಾನು ಶಂಕರ್ ತಾತನೊಂದಿಗೆ ಮನುಷ್ಯರ ಜತೆ ಮಾತನಾಡುವಂತೆಯೇ ಮಾತನಾಡುವುದಾಗಿ ಹೇಳುತ್ತಾನೆ.ಹೊಲಕ್ಕೆ ಏನು ಬಿತ್ತಬೇಕು, ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎನ್ನುವ ಬಗ್ಗೆ ಶಂಕರ ತಾತನಲ್ಲಿ ಕೇಳಿ ಆತ ಮಾಡು ಅಂದದ್ದನ್ನೆ ಮಾಡುತ್ತಾನಂತೆ. ಒಮ್ಮೊಮ್ಮೆ ತಾತನನ್ನು ಬೈಯುವುದೂ ಇದೆಯಂತೆ.

ಶಂಕರ ತಾತ ಬಳ್ಳಾರಿಯ ಹತ್ತಿರ ಇರುವ ಅಲ್ಲೀಪುರದ ತಾತನ ಶಿಷ್ಯನಂತೆ. ಆತ ಮನುಷ್ಯರಂತೆಯೇ ಬದುಕಿ ತೀರಿದನಂತೆ, ನಂತರ ಆತ ಎಲ್ಲಿ ನೆಲೆಸಬೇಕೆಂದು ಆಸೆಯಾಗುತ್ತದೆಯೋ ಅಲ್ಲಿಗೆ ಹೋಗಿ ನೆಲೆಸುತ್ತಾನಂತೆ, ಆತ ಮಾಂಸಾಹಾರಿ ಅಲ್ಲವಂತೆ, ಆತನಿಗೆ ನಡೆಯುವವರು ಅವರ ನಡೆ ಮುಗಿವವರೆಗೆ ಮಾಂಸಾಹಾರವನ್ನು ಸೇವಿಸುತ್ತಿಲ್ಲವಂತೆ ಇತ್ಯಾದಿ ಕಥೆಗಳಿವೆ.

ಇಂತಹ ಕಥೆಗಳ ಸತ್ಯಾಸತ್ಯತೆ ಏನೇ ಇರಲಿ, ಜನಸಮುದಾಯಗಳು ಧರ್ಮದ ಹಂಗಿಲ್ಲದೆ ಧರ್ಮಾತೀತವಾಗಿ ಜಿಗಿವ ಇಂತಹ ಕಥನಗಳು ನಮ್ಮ ಹಳ್ಳಿಗಳಲ್ಲಿ ಹಲವಾರು. ಇವುಗಳು ನಾವು ನಂಬುವ ಧರ್ಮದ ವ್ಯಾಖ್ಯಾನಗಳ ಹುಸಿತನವನ್ನು ಬಯಲುಗೊಳಿಸುತ್ತವೆ. ಇಲ್ಲಿ ವನ್ನೂರ ಅಲಿ ವನ್ನೂರಸ್ವಾಮಿಯಾಗುವಲ್ಲಿ ದೊಡ್ಡ ಪಲ್ಲಟವೇನು ಸಂಭವಿಸಿಲ್ಲ, ಬದಲಾಗಿ ಅದು ಆತನ ಜೀವನದಲ್ಲಿ ಒಂದು ಸಣ್ಣ ಬದಲಾವಣೆಯಷ್ಟೆ. ಇಂತಹ ಘಟನೆಗಳು ನಮ್ಮ ಕಾಲದ ಧರ್ಮದ ತಿಳುವಳಿಕೆಯನ್ನು ತಿಳಿಗೊಳಿಸಬಲ್ಲವು. ಮೇಲೆ ಹೇಳಿದ ಕಥೆ ತೀರಾ ಮೂಡನಂಬಿಕೆ ಎಂದು ಕಾಣಬಹುದು. ಆದರೆ ಅದರ ಹಿಂದೆ ಕೆಲಸಮಾಡಿದ ಮಾನಸಿಕ ಸ್ಥಿತಿ ಆರೋಗ್ಯವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.