ವನ್ಯಜೀವಿಗಳು ಎಂದರೆ ತನ್ನ ಆವಾಸದಲ್ಲಿ ತಾನೇ ತಾನಾಗಿ ವಿಕಾಸಗೊಂಡು ಮಾನವನ ಹಸ್ತಕ್ಷೇಪವಿಲ್ಲದೆ ಜೀವಿಸುವ, ಸಂತಾನೋತ್ಪತ್ತಿ ಮಾಡುವ ಜೀವಿಗಳು. ಅಂದರೆ ಅವುಗಳ ಆಹಾರದಿಂದ ತೊಡಗಿ ಯಾವುದಕ್ಕೂ ಮಾನವನ ಸಹಾಯದ ಅವಶ್ಯಕತೆಯಿರುವುದಿಲ್ಲ. ಇದು ಪ್ರಾಣಿಯಿರಬಹುದು, ಸಸ್ಯವಿರಬಹುದು. ಒಂದು ಉದಾಹರಣೆಯಿಂದ ಇದನ್ನು ಸ್ಪಷ್ಟಪಡಿಸಿಕೊಳ್ಳೋಣ. ಕಾಡಿನಲ್ಲಿ ವಾಸಿಸುವ ಹುಲಿ ಒಂದು ವನ್ಯಜೀವಿ. ನಾಡಿನಲ್ಲಿನ ಹಸು ವನ್ಯಜೀವಿಯಲ್ಲ. ಈ ವಿಭಜನೆ ಅಧ್ಯಯನಕ್ಕಾಗಿ ಮಾಡಿಕೊಂಡಂತಹ ಒಂದು ವ್ಯವಸ್ಥೆ.

ಇನ್ನು ವನ್ಯಜೀವಿ ವಿಜ್ಞಾನವೆಂದರೆ ವನ್ಯಜೀವಿಗಳ ವೈಜ್ಞಾನಿಕ ಅಧ್ಯಯನ. ಅವು ತನ್ನ ಆವಾಸದಲ್ಲಿ ಯಾವುದೇ ತೊಂದರೆಯಿಲ್ಲದೆ ಜೀವಿಸಲು ಎಷ್ಟು ಸ್ಥಳಬೇಕಾಗುತ್ತದೆ (ಹೋಂ ರೇಂಜ್‍)? ಅದರ ಆಹಾರವೇನು? ಎಷ್ಟು ಅವಧಿಗೆ ಎಷ್ಟು ಆಹಾರ ಸೇವಿಸುತ್ತದೆ? ಸಂತಾನೋತ್ಪತ್ತಿಯ ಆವರ್ತವೆಷ್ಟು? ಅವುಗಳ ಸಂಖ್ಯಾಚಲನೆಗಳೇನು? ಆವಾಸದ ಮೇಲೆ ಈ ಜೀವಿಯ ಹಾಗೂ ಈ ಜೀವಿಗಳ ಮೇಲೆ ಆವಾಸದ ಪರಿಣಾಮಗಳೇನು ಎಂದು ತಿಳಿಯುವ ವಿಜ್ಞಾನವು ವನ್ಯಜೀವಿ ವಿಜ್ಞಾನವೆನಿಸಿಕೊಳ್ಳುತ್ತದೆ.ಇದಕ್ಕೂ ಒಂದು ಜೀವಿಯ ವರ್ಗೀಕರಣ ಹೇಗೆ? ಆ ಜೀವಿ ಹೇಗೆ ಉಸಿರಾಡುತ್ತದೆ? ಆಹಾರ ಹೇಗೆ ಜೀರ್ಣಿಸಿಕೊಳ್ಳುತ್ತದೆ? ಎಂಬಿತ್ಯಾದಿ ಪ್ರಶ್ನೆಗಳು ಪ್ರಾಣಿವಿಜ್ಞಾನ (ಜೂ಼ಆಲಜಿ)ಕ್ಕೆ ಸಂಬಂಧಿಸಿದ್ದು. ಕೆಲವು ವಿಷಯಗಳುವೈದ್ಯಕೀಯಕ್ಕೆ (ಮೆಡಿಸಿನ್‍) ಸಂಬಂಧಿತವಾದವು. ಇದಕ್ಕೂ ವನ್ಯಜೀವಿ ವಿಜ್ಞಾನಕ್ಕೂ ಇರುವ ವ್ಯತ್ಯಾಸವನ್ನು ಹಾಗೂ ಪೂರಕತ್ವವನ್ನು ಗಮನಿಸಬೇಕು. ಒಂದು ಜೀವಿಯನ್ನು ಸಂರಕ್ಷಿಸಲು ವನ್ಯಜೀವಿ ವಿಜ್ಞಾನದ ಅರಿವು ಅತೀ ಮುಖ್ಯ.

ವನ್ಯಜೀವಿ ವಿಜ್ಞಾನದಲ್ಲಿ ವನ್ಯಜೀವಿಗಳ ಅಧ್ಯಯನ, ಗಣತಿ, ವನ್ಯಜೀವಿ ಸಂರಕ್ಷಣೆ ಹಾಗೂ ಸಂರಕ್ಷಣೆಯ ವಿಧಿವಿಧಾನಗಳು ಸ್ಥಾನ ಪಡೆಯುತ್ತವೆ. ವನ್ಯಜೀವಿ ವಿಜ್ಞಾನವನ್ನು ವಿಜ್ಞಾನವೆಂದು ಕರೆದರೂ ಅದು ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಅನೇಕ ಧಾರೆಗಳ ಮಿಳಿತದಿಂದಾಗಿರುವ ತಂತ್ರಜ್ಞಾನ. ವನ್ಯಜೀವಿಗಳ ಸಂರಕ್ಷಣೆ ವೈಜ್ಞಾನಿಕವಾಗಿ ಆಗಬೇಕಾಗಿದೆ. ಅದಕ್ಕೆ ಬೆನ್ನೆಲೆಬು ಈ ವನ್ಯಜೀವಿ ವಿಜ್ಞಾನ.