ವನ್ಯಜೀವಿ ಸಂರಕ್ಷಣೆಯಲ್ಲಿ ಅತಿ ಮಹತ್ವದ ವಿಷಯಗಳಲ್ಲಿ ಒಂದು ವನ್ಯಜೀವಿಗಳ ಗಣತಿ (ಸೆನ್ಸಸ್). ಗಣತಿ ಮಾನವ ಗಣತಿಯನ್ನು ಒಂದೊಂದಾಗಿ ಎಣಿಸಿ ಒಟ್ಟಾರೆ ಸಂಖ್ಯೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅನೇಕ ವಿಧಾನಗಳನ್ನು ಅನುಸರಿಸಿ ಕೊನೆಗೆ ಯುಕ್ತಗಣಿತವನ್ನು ಬಳಸಿಕೊಂಡು ವೈಜ್ಞಾನಿಕವಾದ ಒಂದು ಅಂದಾಜು ಸಂಖ್ಯೆಯನ್ನು ತಲುಪಲಾಗುವುದು. ವರ್ಷಂಪ್ರತಿ ಗಣತಿಯನ್ನು ನಡೆಸುತ್ತಾ ಬಂದಾಗ ಒಂದು ಆಧಾರ ಸಂಖ್ಯೆ ದೊರೆಯುತ್ತದೆ. ಮುಂದೆ ಆ ಜೀವಿಯ ಸಂಖ್ಯೆ ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಬಂದರೆ ಕಾರಣಗಳನ್ನು ವಿಶ್ಲೇಷಿಸಲಾಗುವುದು. ಒಂದು ಜೀವಿ ಬದುಕಿ ಉಳಿಯಲು ಎಷ್ಟು ಆಹಾರ ಬೇಕು? ಅಷ್ಟು ಆಹಾರ ಸದರಿ ಕಾಡಿನಲ್ಲಿ ಲಭ್ಯವೇ? ಈ ಪ್ರಶ್ನೆಗಳಿಗೆಲ್ಲ ಉತ್ತರಗಳು ಗಣತಿಯಿಂದ ಕಂಡುಕೊಳ್ಳಬಹುದು. ಈ ವಿಶ್ಲೇಷಣೆಗೆ ಆ ಜೀವಿಯ ಜೀವಿವಿಜ್ಞಾನ, ವನ್ಯಜೀವಿ ವಿಜ್ಞಾನದ ತಿಳಿವಳಿಕೆ ಅತ್ಯಾವಶ್ಯ.

ಈಗ ಒಂದು ಕಾಡಿನಲ್ಲಿರುವ ಹುಲಿಗಳ ಸಂಖ್ಯೆಯನ್ನು ತಿಳಿದಿವಿ ಎಂದಿಟ್ಟುಕೊಳ‍್ಳೋಣ. ಉದಾಹರಣೆಗಾಗಿ ಆ ಕಾಡಿನಲ್ಲಿನ ಹುಲಿಗಳ ಸಂಖ್ಯೆ ಹತ್ತು ಎಂದಿರಲಿ. ಒಂದು ಹುಲಿಗೆ ವರ್ಷಕ್ಕೆ ಸುಮಾರು ಜಿಂಕೆಗಾತ್ರದ ಐವತ್ತು ಆಹಾರ ಪ್ರಾಣಿಗಳು (ಬಲಿ ಪ್ರಾಣಿಗಳು – ಪ್ರೇ) ಬೇಕೆಂದು ಹುಲಿಯ ವನ್ಯಜೀವಿ ವಿಜ್ಞಾನ ತಿಳಿಸುತ್ತದೆ. ಅಂದರೆ, ಆ ಕಾಡಿನಲ್ಲಿ ಹತ್ತು ಹುಲಿಗಳಿವೆ ಎಂದರೆ, ವರ್ಷವೊಂದಕ್ಕೆ ಐದುನೂರು ಜಿಂಕೆ ಗಾತ್ರದ ಪ್ರಾಣಿಗಳು ಹುಲಿಗಳಿಗೆ ಆಹಾರವಾಗುತ್ತವೆ ಎಂದಾಯಿತು. ಈ ಐವತ್ತು ಪ್ರಾಣಿಗಳ “ಕೊಯಿಲಿ”ಗೆ ಐದುನೂರು ಪ್ರಾಣಿಗಳ “ಬಂಡವಾಳ” ಬೇಕಾಗುತ್ತದೆ. (ಯಾವುದೇ ಪ್ರಾಣಿ ಮತ್ತೊಂದಕ್ಕೆ ಆಹಾರವಾಗಲು ಕಾದಿರುವುದಿಲ್ಲ! ಸಾಮಾನ್ಯವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ಮರಿಗಳು, ವಯಸ್ಸಾದ ಪ್ರಾಣಿಗಳು ಅಥವಾ ಕಾಯಿಲೆಯ ಪ್ರಾಣಿ ಸಿಕ್ಕಿಬೀಳುತ್ತದೆ. ಓಡಿ ತಪ್ಪಿಸಿಕೊಳ್ಳುವ ಯುವಪ್ರಾಣಿಗಳಿಂದ ಒಳ್ಳೆಯ ಸಂತತಿ ಬೆಳೆಯುತ್ತದೆ). ಅಂದರೆ ಒಂದು ಹುಲಿಯನ್ನು ಸಾಕಲು ಐದುನೂರು ಜಿಂಕೆ ಗಾತ್ರದ ಪ್ರಾಣಿಗಳು ಬೇಕು. ಆದ್ದರಿಂದ ಹತ್ತು ಹುಲಿಗಳು ಇವೆಯೆಂದರೆ ಐದು ಸಾವಿರ ಜಿಂಕೆಗಳು ಅಥವಾ ಆ ಗಾತ್ರದ ಬಲಿಪ್ರಾಣಿಗಳು ಆ ಕಾಡಿನಲ್ಲಿವೆ ಎಂದರ್ಥ. (ಇದರ ವನ್ಯಜೀವಿ ವಿಜ್ಞಾನ ಮತ್ತು ಗಣಿತವನ್ನು ಮತ್ತೊಮ್ಮೆ ನೋಡೋಣ). ಈ ಐದು ಸಾವಿರ ಪ್ರಾಣಿಗಳನ್ನು ಸಾಕಲು ಆ ಕಾಡು ಸಕ್ಷಮವಾಗಿರಬೇಕು ಎಂಬುದು ನಮಗೆ ಈಗ ಗೊತ್ತಾಯಿತು.

ಇಷ್ಟು ತಿಳಿಯಲು ನಮಗೆ ವನ್ಯವಿಜ್ಞಾನದ ಜೊತೆಗೆ ಎರಡು ಗಣತಿಗಳು ಬೇಕು. ಒಂದು ಹುಲಿಗಳನ್ನು ಎಣಿಸಲು ಮತ್ತೊಂದು ಬಲಿ ಪ್ರಾಣಿಗಳನ್ನು ಎಣಿಸಲು. ಇದಕ್ಕೆ ಬೇರೆ ಬೇರೆ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಬಲಿ ಪ್ರಾಣಿಗಳನ್ನು ಎಣಿಸಲು ಸೀಳುದಾರಿ ಗಣತಿ ಎಂಬ ಪದ್ಧತಿಯನ್ನು ಬಳಸಲಾಗುತ್ತದೆ. ಇದು ತುಂಬ ಪ್ರಸಿದ್ಧವಾದದ್ದು. ಇನ್ನು ಬೇಟೆಗಾರ ಪ್ರಾಣಿಗಳ ಗಣತಿಗೆ ಬೇರೆ ಬೇರೆ ಪದ್ಧತಿಗಳಿವೆ. ಗುರುತು ಮತ್ತು ಚುಕ್ಕೆಗಳಿರುವ ಪ್ರಾಣಿಗಳ ಗಣತಿಗೆ ಕ್ಯಾಮೆರಾ ಟ್ರಾಪ್ ಸೆರೆಹಿಡಿ ಮರುಸೆರೆಹಿಡಿ (ಕ್ಯಾಮೆರಾ ಟ್ರಾಪ್ ಕ್ಯಾಪ್ಚರ್ ರೀಕ್ಯಾಪ್ಚರ್) ಎಂಬ ಗಣತಿ ಪದ್ಧತಿಯನ್ನು ಬಳಸಲಾಗುತ್ತದೆ. ಈ ಪದ್ಧತಿಯನ್ನು ಅಭಿವೃದ್ಧಿಪಡಿಸಿದ್ದು ಕನ್ನಡಿಗರೇ ಆದ ಡಾ ಉಲ್ಲಾಸ ಕಾರಂತರು ಎಂಬುದು ಹೆಮ್ಮೆಯ ವಿಷಯ. ಇಂದು ಈ ಪದ್ಧತಿಯನ್ನು ಜಾಗತಿಕವಾಗಿ ಗುರುತುಳ್ಳ ಪ್ರಾಣಿಗಳ ಗಣತಿಗೆ ಬಳಸಲಾಗುತ್ತಿದೆ. ಇದರ ಜೊತೆಗೆ, ಗುರುತು-ಚಿಹ್ನೆಗಳ ಆಧಾರದ ಮೇಲೆ ಒಂದು ಬಗೆ ಗಣತಿಯನ್ನು ನಡೆಸಲಾಗುತ್ತದೆ. ಇತ್ತೀಚೆಗೆ ಡಿಎನ್‍ಎ ಆಧಾರಿತ ಗಣತಿ ಚಾಲ್ತಿಗೆ ಬರುತ್ತಿದ್ದು ತುಂಬ ಕರಾರುವಕ್ಕಾದ ಗಣತಿ ಸಾಧ‍್ಯವಾಗಿದೆ.

ಇನ್ನು ಪಕ್ಷಿಗಳ ಗಣತಿಗೆ ಬಿಂದು ಗಣತಿ (ಪಾಯಿಂಟ್‍ ಟ್ರಾನ್ಸಾಕ್ಟ್) ಎಂಬ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇನ್ನು ಕೆಲವು ಪದ್ಧತಿಗಳಿದ್ದು ಅಧ್ಯಯನಕ್ಕನುಗುಣವಾಗಿ ಯುಕ್ತವಾದ ಗಣತಿ ಪದ್ಧತಿಯನ್ನು ಅನುಸರಿಸಲಾಗುತ್ತದೆ.

ಒಟ್ಟಾರೆ, ಅರಣ್ಯ-ವನ್ಯಜೀವಿಗಳು-ಮಳೆ-ಕೃಷಿ ಒಂದು ಸರಪಳಿಯ ಮಹತ್ವದ ಕೊಂಡಿಗಳು. ಅರಣ್ಯವನ್ನು ಅನೇಕ ಕಾರಣಗಳಿಂದ ಛಿದ್ರಗೊಳಿಸುತ್ತಿರುವ (ಫಾರೆಸ್ಟ್ ಪ್ರಾಗ್ಮೆಂಟೇಷನ್) ಇಂದಿನ ದಿನಮಾನಗಳಲ್ಲಿ ನಿಜದಲ್ಲಿ ನಮ್ಮ ಅರಣ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯಲು, ಅರಿತು ವನ್ಯಪ್ರದೇಶಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿಲು (ಸೈಂಟಿಫಿಕ್ ಮ್ಯಾನೇಜ್‍ಮೆಂಟ್ ಆಫ್‍ ಪಾರ್ಕ್ಸ್) ಗಣತಿ ಮತ್ತು ವಿಶ್ಲೇಷಣೆ ಅತಿಮಹತ್ವದ ಪಾತ್ರವನ್ನು ವಹಿಸುತ್ತವೆ.

ಇಲ್ಲಿ ಪ್ರಸ್ತಾಪಿಸಲಾಗಿರುವ ಗಣತಿ ಪದ್ಧತಿಗಳು, ವಿಶ್ಲೇಷಣಾ ಮಾರ್ಗಗಳನ್ನು ಬೇರೆಯಾಗಿಯೇ ಅರಿಯಬೇಕು. ವನ್ಯಸಂರಕ್ಷಣೆ ಎಂದರೆ ಕೇವಲ ಪರಿಸರ ಪ್ರೀತಿಯಲ್ಲ ಅದೊಂದು ವಿಜ್ಞಾನ-ತಂತ್ರಜ್ಞಾನಾಧಾರಿತ ವ್ಯವಸ್ಥೆ ಎಂಬುದು ಇದರ ತಿರುಳು.

-ಕೆ.ಎಸ್. ನವೀನ್