ವನ್ಯಜೀವಿ ಸಂರಕ್ಷಣೆಯಲ್ಲಿ ಅತಿ ಮಹತ್ವದ ವಿಷಯಗಳಲ್ಲಿ ಒಂದು ವನ್ಯಜೀವಿಗಳ ಗಣತಿ (ಸೆನ್ಸಸ್‍). ಇದು ನಮ್ಮ ಜನಗಣತಿಯಿದ್ದಂತೆ. ಜನಗಣತಿಯ ಮಹತ್ವ ಮತ್ತು ವಿಧಿ ವಿಧಾನಗಳು ನಮಗೆ ತಿಳಿದಿರುವುದೇ. ಜನಗಣತಿಯಿಂದ ನಮಗೆ ಒಂದು ಪ್ರದೇಶದ ಒಟ್ಟು ಜನಸಂಖ್ಯೆ ತಿಳಿಯುತ್ತದೆ. ದೇಶದ ಪ್ರಗತಿಗೆ ಈ ಸಂಖ್ಯೆಗಳು ಬಲು ಮುಖ್ಯ. ಯೋಜಿಸಲು, ಯೋಜನಾವೆಚ್ಚ ಅಂದಾಜು ಮಾಡಲು ಹಾಗೂ ಇನ್ನು ಅನೇಕ ವಿಷಯಗಳ ತೀರ್ಮಾನ ಈ ಸಂಖ್ಯೆಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ, ಅಭಿವೃದ್ಧಿಯ ಹಾದಿಯಲ್ಲಿ ಮೊದಲ ಹೆಜ್ಜೆ ಜನಗಣತಿ.

ಹಾಗೆಯೇ, ವನ್ಯಜೀವಿ ಸಂರಕ್ಷಣೆಯಲ್ಲಿಯೂ ಸಹ ಗಣತಿ ಬಹಳ ಮುಖ್ಯವಾದ ಪಾತ್ರವನ್ನುವಹಿಸುತ್ತದೆ. ಆದರೆ, ಜನಗಣತಿಗೂ ವನ್ಯಜೀವಿ ಗಣತಿಗೂ ಮೂಲಭೂತ ವ್ಯತ್ಯಾಸವಿದೆ. ಜನಗಣತಿಯಲ್ಲಿ ಸಂಖ್ಯೆ ನಿಖರವಾಗಿ ದೊರೆಯುತ್ತದೆ. ಅಂದಾಜು ಅಷ್ಟು ಮುಖ್ಯವಾಗುವುದಿಲ್ಲ. ಆದರೆ, ವನ್ಯಜೀವಿಗಳ ಗಣತಿಯಲ್ಲಿ ನಿಖರವಾದ ಸಂಖ್ಯೆ ಎಂದೂ ದೊರೆಯುವುದಿಲ್ಲ, ಅದು ಎಂದಿಗೂ ಒಂದು ಅಂದಾಜು ಮಾತ್ರ ಆಗಿರುತ್ತದೆ. ಇದು ಏಕೆಂದು ವಿವರವಾಗಿ ತಿಳಿಯೋಣ.

ಜನಗಣತಿ ತಾತ್ವಿಕವಾಗಿ ಸುಲಭ. ಪ್ರತಿ ಮನೆ, ಜನವಸತಿಗೆ ಹೋಗಿ ಗಣತಿ ಮಾಡಿಕೊಂಡು ಬರುವುದು ಪ್ರತಿಯೊಬ್ಬರನ್ನು ಒಮ್ಮೆ ಮಾತ್ರ ಗಣಿಸುವುದು ಜನಗಣತಿ. ಇದನ್ನು ಒಂದು ಗೊತ್ತಾದ ಪ್ರದೇಶದ ಮಾನವ ವಸತಿಯಿರುವೆಡೆಗಳಲ್ಲೆಲ್ಲಾ ನಡೆಸಿ ಸಂಖ್ಯೆಯನ್ನು ಕೂಡಿದರೆ ಅಲ್ಲಿನ ಜನಸಂಖ್ಯೆ ತಿಳಿಯುತ್ತದೆ. ಆದರೆ, ವನ್ಯಜೀವಿ ಗಣತಿಯಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ. ಈ ಗಣತಿಗೆ ಅನೇಕ ವಿಧಾನಗಳುಂಟು.

ವನ್ಯಜೀವಿ ಗಣತಿ ಹೇಗೆ ನಡೆಸಲಾಗುತ್ತದೆ ಎಂಬುದನ್ನು ತಿಳಿಯುವ ಮೊದಲು ವನ್ಯಜೀವಿಗಳ ಗಣತಿ ಏಕೆ ಎಂದು ತಿಳಿಯೋಣ. ಒಂದು ಕಾಡಿನಲ್ಲಿ ಇರುವ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ತಿಳಿದರೆ, ಆ ಕಾಡು ಎಷ್ಟು ಬೇಟೆಗಾರ ಪ್ರಾಣಿಗಳನ್ನು ಭರಿಸಬಹುದು ಎಂದು ಅಂದಾಜು ಮಾಡಬಹುದು. ಇದಕ್ಕೆ ಇನ್ನು ಕೆಲವು ಪೂರಕ ಮಾಹಿತಿ ಬೇಕಾಗುತ್ತದೆ.

ಉದಾಹರಣೆಗೆ ಒಂದು ಕಾಡಿನಲ್ಲಿ ಎರಡು ಸಾವಿರ ಜಿಂಕೆ ಗಾತ್ರದ ಸಸ್ಯಾಹಾರಿ ಪ್ರಾಣಿಗಳಿವೆ ಎಂದುಕೊಳ್ಳೋಣ. ಆಗ ಸದರಿ ಕಾಡು ಎಷ್ಟು ಹುಲಿಗಳನ್ನು ಭರಿಸಬಲ್ಲದು ಎಂದು ಸ್ಥೂಲವಾಗಿ ಲೆಕ್ಕಹಾಕಬಹುದು. ಒಂದು ಹುಲಿಗೆ ವಾರಕ್ಕೊಂದು ಜಿಂಕೆ ಗಾತ್ರದ ಬಲಿಪ್ರಾಣಿ ಬೇಕಾಗುತ್ತದೆ. ಅಂದರೆ ವರ್ಷಕ್ಕೆ ಐವತ್ತೆರೆಡು ಬಲಿಪ್ರಾಣಿಗಳು ಬೇಕು ಎಂದಾಯಿತು. ಈ ಐವತ್ತೆರೆಡು ಬಲಿಪ್ರಾಣಿಗಳು ಒದಗಲು ಸುಮಾರು ಐದುನೂರು ಬಲಿಪ್ರಾಣಿಗಳ “ಮೂಲಬಂಡವಾಳ” ಬೇಕಾಗುತ್ತದೆ. ಅಂದರೆ, ಎರಡು ಸಾವಿರ ಬಲಿಪ್ರಾಣಿಗಳುಳ್ಳ ಕಾಡು ನಾಲ್ಕಕ್ಕಿಂತ ಹೆಚ್ಚು ಹುಲಿಗಳನ್ನು ಭರಿಸಲು ಸಾಧ್ಯವೇ ಇಲ್ಲ!
ಇಂತಹ ಲೆಕ್ಕಾಚಾರಗಳು ಸಾಧ್ಯಲವಾಗುವುದು ವನ್ಯಜೀವಿ ವಿಜ್ಞಾನದ ಅರಿವು ಹಾಗೂ ಗಣತಿಗಳಿಂದ. ಈ ಗಣತಿಗಳು ತೀರಾ ಶಿಸ್ತುಬದ್ಧವಾಗಿ, ತಪ್ಪಿಲ್ಲದೆ ನಡೆಯಬೇಕಾದ ಅಗತ್ಯವಿದೆ.

ಈಗ ಮತ್ತೆ ಗಣತಿಗೆ ಮರಳೋಣ. ಮಾನವ ಗಣತಿಯಂತೆ ಇಲ್ಲಿ ನಿಖರವಾದ ಸಂಖ್ಯೆ ದೊರಕದು. ಒಂದೆಡೆ ಕಂಡ ಪ್ರಾಣಿ ಮತ್ತೊಂದೆಡೆ ಕಾಣುತ್ತದೆ. ಗಣತಿ ನಡೆಸುವವರಿಗೆ ಕಾಣದೆ ಉಳಿಯುವ ಪ್ರಾಣಿಗಳೂ ಇರುತ್ತವೆ. ಗಣತಿಯು ಮುಗಿದಾದ ಮೇಲೆ ಕೆಲವು ಸಂಖ್ಯಾಶಾಸ್ತ್ರೀಯ ಲೆಕ್ಕಾಚಾರಗಳಿಂದ ಇವನ್ನು ತುಸು ಸರಿಪಡಿಸಬಹುದಾದರೂ ಮಾನವ ಗಣತಿಯಲ್ಲಂತೆ ಒಂದು ನಿಖರವಾದ ಸಂಖ್ಯೆ ದೊರೆಯಲು ಸಾಧ್ಯಹವೇ ಇಲ್ಲ. ಅಂದರೆ, ಒಂದು ಕಾಡಿನಲ್ಲಿ ಇಷ್ಟು ಹುಲಿ, ಇಷ್ಟು ಜಿಂಕೆ, ಇಷ್ಟು ಸಾರಗ, ಇಷ್ಟು ಆನೆ ಎಂದು ಹೇಳಲು ಸಾಧ್ಯಿವಿಲ್ಲ. ಗಣತಿಯಲ್ಲಿ ಬರುವ ಸಂಖ್ಯೆ ಒಂದು ಅಂದಾಜು, ಅಷ್ಟೆ. ಆದ್ದರಿಂದ ವನ್ಯಜೀವಿಗಣತಿಯನ್ನು ಅತಿ ನಿಖರವಾಗಿ ಶಿಸ್ತುಬದ್ಧವಾಗಿ ನಡೆಸಬೇಕಾಗುತ್ತದೆ.

ವರ್ಷಗಟ್ಟಲೆ ಶಿಸ್ತುಬದ್ಧವಾಗಿ ನಡೆಸಲಾಗುವ ಗಣತಿಯಿಂದ ಒಂದು ನಂಬಲಾರ್ಹವಾದ ಅಂದಾಜು ಪ್ರಾಣಿ ಸಂಖ್ಯೆಗಳು ದೊರೆಯುತ್ತವೆ. ಇದನ್ನು ಮೂಲ ಸಂಖ್ಯೆಗಳಾಗಿ ಸ್ವೀಕರಿಸಲಾಗುತ್ತದೆ. ಮುಂದಿನ ವರ್ಷ ನಡೆಯುವ ಗಣತಿಯಲ್ಲಿನ ಸಂಖ್ಯೆಗೆ ಹೋಲಿಸಿ ತೀರ್ಮಾನಕ್ಕೆ ಬರಲಾಗುತ್ತದೆ. ಅಂದರೆ, ನಮ್ಮ ಹುಲಿಗಳ ಮೂಲಸಂಖ್ಯೆ ನೂರು ಎಂದಿಟ್ಟುಕೊಳಳೋೋಲಣ. ಮುಂದಿನ ಗಣತಿಗಳಲ್ಲಿ ಹೆಚ್ಚು ಹುಲಿಗಳು ಕಂಡು ಬಂದರೆ ಹುಲಿಗಳ ಸಂಖ್ಯೆ ಹೇಗೆ ಹೆಚ್ಚಾಯಿತು ಎಂದು ವೈಜ್ಞಾನಿಕ ವಿಶ್ಲೇಷಣೆ ಮಾಡಬೇಕಾಗುತ್ತದೆ. ಆವಾಸ ರಕ್ಷಣೆ ಹೆಚ್ಚು ದಕ್ಷವಾಯಿತೇ? ಕಳ್ಳಬೇಟೆಯನ್ನು ಯಶಸ್ವಿಯಾಗಿ ತಡೆಯಲಾಯಿತೇ ಎಂದೆಲ್ಲ ಯೋಚಿಸಬೇಕಾಗುತ್ತದೆ. ಇಲ್ಲಿ ಹೆಚ್ಚುವರಿ ಹುಲಿಗಳಿಗೆ ಅನುಸಾರವಾದ ಬಲಿಪ್ರಾಣಿಗಳ (ಜಿಂಕೆ ಇತ್ಯಾದಿ ಹುಲಿಗೆ ಆಹಾರವಾಗುವಂತಹ ಪ್ರಾಣಿಗಳು) ಸಂಖ್ಯೆ ಏರಿಕೆಯಾಗಿರಲೇ ಬೇಕು! ಸಸ್ಯಾಹಾರಿ ಹಾಗೂ ಬೇಟೆಗಾರ ಪ್ರಾಣಿಗಳ ಗಣತಿಯಿಂದ ಬರುವ ಸಂಖ್ಯೆಗಳು ಪರಸ್ಪರ ವನ್ಯಜೀವಿ ವಿಜ್ಞಾನದನ್ವಯ ತಾಳೆಯಾಗಲೇಬೇಕು.

ದೀರ್ಘಕಾಲೀನ ಶಿಸ್ತುಬದ್ಧ, ವೈಜ್ಞಾನಿಕ ಗಣತಿಯಿಂದ ಬಂದ ಅಂಕಿಸಂಖ್ಯೆಗಳು ಅರಣ್ಯದ ಆರೋಗ್ಯವನ್ನೇ ತಿಳಿಸುತ್ತದೆ. ಅಲ್ಲಿ ಏನು ನಡೆಯುತ್ತಿದೆ ಎಂಬ ನೋಟವನ್ನು ಒದಗಿಸುತ್ತದೆ. ಇಷ್ಟು ಮಾತ್ರವಲ್ಲ, ನಮಗೆ ಅರಣ್ಯ-ನೀರು-ಮಳೆ-ಕೃಷಿ ಇವುಗಳ ಸಂಬಂಧ ಗೊತ್ತಿದೆಯಲ್ಲವೆ? ಕಾಡಿನ ಆರೋಗ್ಯ ಎಂದರೆ ನಮ್ಮ ಕೃಷಿ ಹಾಗೂ ನಮ್ಮ ಆಹಾರ! ಇದೇ ಕಾರಣದಿಂದ ಶಿಸ್ತುಬದ್ಧ, ವೈಜ್ಞಾನಿಕವಾಗಿ ನಡೆಯುವ ವನ್ಯಜೀವಿ ಗಣತಿ ಬಹಳ ಮುಖ್ಯ.

-ಕೆ.ಎಸ್. ನವೀನ್