೧೯೪೮ – . ವಿಶ್ವವಿಖ್ಯಾತ ವನ್ಯಜೀವಿ ವಿಜ್ಞಾನಿ. ತಂದೆ ಶಿವರಾಮ ಕಾರಂತ. ತಾಯಿ ಲೀಲ ಕಾರಂತ.  ಕಳೆದ ಮೂರು ದಶಕಗಳಿಂದ ಹುಲಿ ಕುರಿತ ಸಂಶೋಧನೆಯಿಂದ ಪ್ರಸಿದ್ಧರು.  ಇವರು ಸಂಶೋಧನೆಗಷ್ಟೇ ಸೀಮಿತವಾಗದೆ, ವನ್ಯಜೀವಿಗಳ ವೈಜ್ಞಾನಿಕ ಸಂರಕ್ಷಣೆಯಲ್ಲೂ ತೀವ್ರವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಇವರ ವೈಶಿಷ್ಟ್ಯ.

ಬಾಲ್ಯದಿಂದಲೇ ವನ್ಯಜೀವಿಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಕಾರಂತರು, ತಂದೆ ಶಿವರಾಮ ಕಾರಂತರು ಓದಿ ಆ ಕೂಡಲೆ ಅನುವಾದಿಸಿ ಹೇಳುತಿದ್ದ, ಜಿಮ್ ಕಾರ್ಬೆಟ್ ಮತ್ತು ಕೆನೆತ್ ಆಂಡರ್‌ಸನ್ ಅವರ ಹುಲಿ ಬೇಟೆ ಕಥೆಗಳಿಂದ ರೋಮಾಂಚಿತರಾಗಿದ್ದರು.  ಮುಂದೆ ಕೆನೆತ್ ಆಂಡರ್‌ಸನ್ ಅವರ ಸಖ್ಯವನ್ನು ಸಹ ಬೆಳೆಸಿಕೊಂಡರು.  ಬಾಲವನದ ಸುತ್ತಮುತ್ತಲಿನ ಹಾಗೂ ರಾಜ್ಯದ ಅರಣ್ಯಗಳಲ್ಲಿ ಸುತ್ತಾಡಿ ಹವ್ಯಾಸಿ ವನ್ಯಜೀವಿ ಸಂರಕ್ಷಕರಾಗಿ ಭಾರತದ ಅಪೂರ್ವ ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಮುಂದೆ ಎಂಜಿನಿಯರಾಗಿ, ಕೃಷಿಕರಾಗಿ ಬದುಕಿನಲ್ಲಿ ನೆಲೆಕಂಡುಕೊಂಡರೂ, ಅದು ಅವರಿಗೆ ಮಾನಸಿಕ ತೃಪ್ತಿಕೊಡಲಿಲ್ಲ.

ಜಾರ್ಜ್ ಷಾಲರ್ ಅವರ ಪುಸ್ತಕ “ಡೀರ್ ಅಂಡ ದ ಟೈಗರ್” ಅವರ ಆಂತರ್ಯದಲ್ಲೇ ತುಡಿಯುತ್ತಿದ್ದ ವೈಜ್ಞಾನಿಕ ವನ್ಯಜೀವಿ ಸಂರಕ್ಷಣೆಯ ಮಹತ್ವಕ್ಕೆ ತೆರೆದಿಟ್ಟಿತು. ಇದರ ಬಗ್ಗೆ ಡಾ|| ಕಾರಂತರು ಹೇಳುತ್ತಾರೆ “ಮಬ್ಬುಗಣ್ಣಿನವನಿಗೆ ಕನ್ನಡಕ ತೊಡಿಸಿದಂತಾಗಿತ್ತು.” ತಮ್ಮ ಆಸಕ್ತಿಯ ಜಾಡು ಹಿಡಿದು, ವರ್ಜೀನಿಯಾದ ಫ್ರಂಟ್ ರಾಯಲ್‌ನಲ್ಲಿರುವ ಕನ್ಸರ್ವೇಶನ್ ಅಂಡ್ ರೀಸರ್ಚ್ ಸೆಂಟರ್‌ನಲ್ಲಿ ವನ್ಯಜೀವಿ ನಿರ್ವಹಣೆ ಕುರಿತ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಇವರು, ಮುಂದೆ  ಫ್ಲಾರಿಡಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಅಧ್ಯಯನ ಕೈಗೊಂಡರು. ನ್ಯೂಯಾರ್ಕ್ ಮೂಲದ ವೈಲ್ಟ್‌ಲೈಫ್ ಕನ್ಸರ್ವೇಷನ್ ಸೊಸೈಟಿಯ ಸಹಾಯದಿಂದ ಭಾರತದಲ್ಲಿ ಹುಲಿಗಳ ಅಧ್ಯಯನಕ್ಕೆ ತೊಡಗುವ ಮೂಲಕ ವೃತ್ತಿಪರ ವನ್ಯಜೀವಿ ವಿಜ್ಞಾನಿಯಾದ ಕಾರಂತರು, ಇದುವರೆಗೂ ೬೦ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು, ೫೦ಕ್ಕೂ ಹೆಚ್ಚು ಜನಪ್ರಿಯ ವಿಜ್ಞಾನ ಲೇಖನಗಳನ್ನು ಬರೆದಿದ್ದಾರೆ. ಐದು ಪುಸ್ತಕಗಳನ್ನು ಮತ್ತು ವನ್ಯಜೀವಿ ನಿರ್ವಾಹಕರಿಗೆ ಅನುಕೂಲವಾಗುವಂತಹ ಒಂದು ಕೈಪಿಡಿಯನ್ನು ಹೊರತಂದಿದ್ದಾರೆ. ಇತ್ತೀಚೆಗೆ ಈ ಕೈಪಿಡಿಗೆ ಒಂದು ವಿವರಣಾತ್ಮಕ ವಿಡಿಯೋ ಡಿವಿಡಿಯನ್ನು ಹೊರತರಲಾಗಿದ್ದು, ಗಂಭೀರ ಅಧ್ಯಯನಗಳಿಗೆ ತೊಡಗುವವರಿಗೆ ಮಾರ್ಗದರ್ಶಿಯಾಗಿದೆ.

ಇಂದು ಡಾ. ಉಲ್ಲಾಸ ಕಾರಂತರು ತಮ್ಮ ಹುಲಿ ಕುರಿತ ಸಂಶೋಧನೆಯಿಂದ ಜಗತ್ತಿನ ಅತಿ ಗೌರವಾನ್ವಿತ ವನ್ಯಜೀವಿ ವಿಜ್ಞಾನಿಗಳಲ್ಲಿ ಒಬ್ಬರೆಂಬ ಗೌರವಕ್ಕೆ ಭಾಜನರು. “ಟೈಗರ‍್ಸ್ ಫಾರ್ ಎವರ್” ಕಾರ್ಯಕ್ರಮದ ತಾಂತ್ರಿಕ ನಿರ್ದೇಶಕರು.  ಪ್ರತಿಷ್ಠಿತ ಸಂಸ್ಥೆಯಾದ ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸ್‌ರ‍್ವೇಷನ್ ಆಫ್ ನೇಚರ್ (ಐಯುಸಿಎನ್)ನ ಸ್ಪೇಷೀಸ್ ಸರ‍್ವೈವಲ್ ಕಮಿಷನ್‌ನ ಮಾರ್ಜಾಲ, ಆನೆ ಹಾಗೂ ಸಣ್ಣ ಸ್ತನಿ ಪರಿಣತರ ಗುಂಪಿನ ಸದಸ್ಯರು. ಲಂಡನ್ನಿನ ಜೂಅಲಾಜಿಕಲ್ ಸೊಸೈಟಿ ಆಫ್ ಲಂಡನ್‌ನ ಹಾಗೂ ಭಾರತದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಫೆಲೋ. ಸಂರಕ್ಷಣಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ ಪಾಲ್ ಗೆಟ್ಟಿ ಪ್ರಶಸ್ತಿ ವಿಜೇತ ಮೂರನೇ ಭಾರತೀಯರು ಹಾಗೂ ಪ್ರಪ್ರಥಮ ಕನ್ನಡಿಗರು.   ಇವರು ಅಭಿವೃದ್ಧಿಪಡಿಸಿದ ಕ್ಯಾಮೆರಾ ಟ್ರಾಕಿಂಗ್ ಪದ್ಧತಿ ಇಂದು ವಿಶ್ವದಾದ್ಯಂತ ಬಳಕೆಯಾಗುತ್ತಿದೆ. ಇವರ ಕಾರ್ಯ ವನ್ಯಜೀವಿ ವಿಜ್ಞಾನದ  ಜಾಗತಿಕ ನಕಾಶೆಯಲ್ಲಿ ಭಾರತಕ್ಕೆ ಭದ್ರ ಹಾಗೂ ಶಾಶ್ವತ ಸ್ಥಾನ ಕಲ್ಪಿಸಿದೆ.

ನಾಗರಹೊಳೆಯಲ್ಲಿ ಆರಂಭವಾದ ಅವರ ಹುಲಿ ಅಧ್ಯಯನಕ್ಕೆ ಅವರು ಸ್ಪಷ್ಟ ನಕಾಶೆ ಹಾಕಿಕೊಂಡಿದ್ದರು:

ನಾಗರಹೊಳೆಯ ಅಧ್ಯಯನದ ಪ್ರಮುಖ ಗುರಿ ಬೇಟೆಗಾರ ಪ್ರಾಣಿಗಳ ಬಗೆಗೆ ಮಾಹಿತಿ ಸಂಗ್ರಹಣೆ. ಅವರ ಅಧ್ಯಯನಕ್ಕೆ ಹಲವು ನಿರ್ದಿಷ್ಟ ಉದ್ದೇಶಗಳಿದ್ದವು:

(೧)     ಹುಲಿ, ಚಿರತೆ, ಕೆನ್ನಾಯಿಗಳ ಚಲನವಲನ ವರ್ತನೆ ಮತ್ತು ಚಟುವಟಿಕೆಗಳ ಪರಿಶೀಲನೆ; ಅವುಗಳ ನಿವಾಸ ನೆಲೆ (ಹೋಂ ರೇಂಜ್) ವಿಸ್ತೀರ್ಣ, ನೆಲೆಯ ಬಳಕೆಯ ವಿನ್ಯಾಸ, ಆಹಾರ ಕ್ರಮ ಮತ್ತು ಸಾಮಾಹಿಕ ವರ್ತನೆ ಇವುಗಳ ಕೂಲಂಕಶ ಅಧ್ಯಯನ.

(೨)     ರೇಡಿಯೋ ಟೆಲಿಮೆಟ್ರಿ ಮತ್ತು ಕ್ಯಾಮೆರಾ ಟ್ರ್ಯಾಪ್ ಉಪಕರಣಗಳ ಬಳಕೆಯ ಮೂಲಕ ಹುಲಿ, ಚಿರತೆ ಮತ್ತು ಕೆನ್ನಾಯಿಗಳ ಸಂಖ್ಯಾ ಸಾಂದ್ರತೆಯ ಗಣತಿ. ವೈಯಕ್ತಿಕವಾಗಿ ಕೆಲ ಪ್ರಾಣಿಗಳನ್ನು ಗುರುತಿಸಿ, ದೀರ್ಘಕಾಲ ಅವುಗಳನ್ನು ಗಮನಿಸಿ ಈ ಮಾಹಿತಿ ಸಂಗ್ರಹಿಸುವುದು.

(೩)     ಮಾನವನ ಕೈವಾಡದಿಂದ ಉಂಟಾಗುವ ಒತ್ತಡಗಳು ಈ ಮಾಂಸಾಹಾರಿ ಪ್ರಾಣಿಗಳ ನೆಲೆ ಮತ್ತು ಜೀವನದ ಮೇಲೆ ಯಾವ ಪ್ರಭಾವ ಬೀರುತ್ತದೆ ಎನ್ನುವುದನ್ನು ಪರಿಶೀಲಿಸುವುದು.

(೪)     ಹುಲಿ, ಚಿರತೆ, ಕೆನ್ನಾಯಿಗಳ ಬೇಟೆಗಾರಿಕೆಯು ಅವುಗಳ ಬಲಿಪ್ರಾಣಿಗಳ ಮೇಲೂ ಎಂತಹ ಪರಿಣಾಮ ಬೀರುತ್ತವೆ ಎನ್ನುವುದನ್ನು ಪರಿಶೀಲಿಸುವುದು.

(೫)     ವನ್ಯಪ್ರಾಣಿಗಳನ್ನು ಸೆರೆಹಿಡಿಯುವುದು, ಅವುಗಳಿಗೆ ಅರಿವಳಿಕೆಯಿಂದ ಮತ್ತುಬರಿಸಿ ರೇಡಿಯೋ ಕಾಲರ್ ತೊಡಿಸಿ ಜಾಡುಹಿಡಿಯುವುದರ ಬಗ್ಗೆ ಮಾಹಿತಿ ಪಡೆಯುವುದು ಮತ್ತು ಇದನ್ನು ಪ್ರಚುರಪಡಿಸುವುದು.

(೬)     ಅಂದರೆ, ೨೧ನೇ ಶತಮಾನದಲ್ಲಿ ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹುಲಿಯ ಜೀವನಚಿತ್ರವನ್ನು ರಚಿಸುವುದು ಇವರ ಉದ್ದೇಶವಾಗಿತ್ತು.

ಇವುಗಳ ಫಲಿತಾಂಶ ಅನೇಕ ಪ್ರತಿಷ್ಠಿತ ವೈಜ್ಞಾನಿಕ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ. ಪ್ರತಿಷ್ಠಿತ ಪ್ರೊಸೀಡಿಂಗ್ಸ್ ಆಫ್ ದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ಸ್, ಅಮೆರಿಕ, ಇಕಾಲಜಿ, ಜರ್ನಲ್ ಆಫ್ ಅನಿಮಲ್ ಇಕಾಲಜಿ, ಜರ್ನಲ್ ಆಫ್ ಜೂಅಲಜಿ, ಜರ್ನಲ್ ಆಫ್ ಟ್ರಾಪಿಕಲ್ ಇಕಾಲಜಿ, ಕನ್ಸ್‌ರ್ವೇಷನ್ ಬಯಾಲಜಿ ಮತ್ತು ಬಯಲಾಜಿಕಲ್ ಕನ್ಸ್‌ರ್ವೇಷನ್‌ಗಳಲ್ಲಿ ಇವರ ಲೇಖನಗಳು ಪ್ರಕಟವಾಯಿತು.  ನಾಗರಹೊಳೆ ಮಾತ್ರವಲ್ಲದೆ ಭಾರತದ ಇತರೆ ಹೆಸರಾಂತ ಹುಲಿ ಆವಾಸಗಳಾದ ಪೆಂಚ್, ಕಾನ್ಹ, ಕಾಜಿರಂಗ, ನಾಮದಫ, ಸುಂದರಬನ, ರಣಥಂಬೂರು, ಮೇಲ್ಘಾಟ್, ತಾಡೋಬ, ಕುದುರೇಮುಖ, ಭದ್ರಾ ಹಾಗೂ ಬಂಡೀಪುರ ಅಭಯಾರಣ್ಯಗಳಲ್ಲಿ ಸಂಖ್ಯಾ ಜೀವಿಪರಿಸ್ಥಿತಿ ವಿಜ್ಞಾನ (ಪಾಪ್ಯುಲೇಷನ್ ಇಕಾಲಜಿ) ಕುರಿತ ಅಧ್ಯಯನ ನಡೆಸಿದರು.  ರೇಡಿಯೋ ಕಾಲರ್ ತೊಡಿಸಿ ಬೇಟೆಗಾರ ಪ್ರಾಣಿಗಳ ಅಧ್ಯಯನ, ಕ್ಯಾಮೆರಾ ಟ್ರಾಪಿಂಗ್ ಬಳಸಿ ಗುರುತುಳ್ಳ ಪ್ರಾಣಿಗಳ ಗಣತಿ ಹಾಗೂ ಸೀಳುದಾರಿ ಗಣತಿ ಕಾರಂತರ ವಿಶೇಷ ಪರಿಣತಿಯ ಕ್ಷೇತ್ರಗಳು.  ಅದರಲ್ಲೂ ಕ್ಯಾಮೆರಾ ಟ್ರಾಪಿಂಗ್ ಬಳಸಿ ನಡೆಸುವ ಗಣತಿಯ ವಿಧಾನವನ್ನು ವಿಶೇಷವಾಗಿ ಕಾರಂತರು ಅಭಿವೃದ್ಧಿಪಡಿಸಿದರು. ಇಂದು ಈ ವಿಧಾನವನ್ನು ಜಗತ್ತಿನಾದ್ಯಂತ ವನ್ಯಜೀವಿ ತಜ್ಞರು ಬಳಸುತ್ತಿದ್ದಾರೆ. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಪಕರಾಗಿದ್ದಾರೆ. ಇವರ ತಾಂತ್ರಿಕ ಪರಿಣತಿಯನ್ನು ತಮ್ಮ ದೇಶದ ಮಾರ್ಜಾಲಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲು ಥೈಲ್ಯಾಂಡ್, ಮಲೇಷಿಯಾ ಮತ್ತು ಇಂಡೋನೇಷಿಯಾ ದೇಶಗಳು ಬಳಸಿಕೊಂಡಿವೆ. ಇತ್ತೀಚೆಗೆ ಹುಲಿಗಳ ಗಣತಿಗೆ ಉಪಯುಕ್ತವಾದ ಡಿಎನ್‌ಎ ಗಣತಿ ವಿಧಾನವನ್ನು ಡಾ|| ಕಾರಂತ ಹಾಗೂ ಸಂಗಡಿಗರು ಅಭಿವೃದ್ಧಿಪಡಿಸಿದ್ದು, ಇದೊಂದು ಮಹತ್ವದ ಸಂಶೋಧನೆಯಾಗಿದೆ.

ಈ ನಡುವೆ ದೇಶದಾದ್ಯಂತ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ತೀವ್ರವಾಗಿ ಕುಸಿಯತೊಡಗಿತ್ತು.  ಆಗ ಕಾರಂತರು ತಮ್ಮ ಸಂಶೋಧನೆಯ ದಿಕ್ಕನ್ನು ಬದಲಿಸಿ ಸಂರಕ್ಷಣಾ ತಂತ್ರಗಳ ಕುರಿತು ಅಧ್ಯಯನ ನಡೆಸತೊಡಗಿದರು. ಅದನ್ನು ನೆನೆಯುತ್ತಾ ಹೇಳುತ್ತಾರೆ ” ಹುಲಿ ಸಂರಕ್ಷಣೆಗೆ ಅವುಗಳ ವರ್ತನೆಯ ಮೂಲಭೂತ ವಿಜ್ಞಾನಕ್ಕಿಂತಲೂ ಹುಲಿಗಳ ಸಂಖ್ಯಾ ಏರಿಳಿತಗಳ ಅಧ್ಯಯನ ಹೆಚ್ಚು ಮುಖ್ಯವೆಂದು ನನಗೆ ಮನದಟ್ಟಾಗುವ ಪರಿಸ್ಥಿತಿ ತಲೆದೋರಿತು” ಅಂದರೆ, ಮೂಲಭೂತ ವಿಜ್ಞಾನವನ್ನು ಬಿಟ್ಟು ಸಂರಕ್ಷಣೆಗೆ ಅಗತ್ಯವಾದ ಮಾರ್ಗ ನಿರೂಪಿಸುವ ಸಂಶೋಧನೆಗಳ ಕಡೆಗೆ ಹೊರಳಿತೆ ಎಂಬ ಪ್ರಶ್ನೆಗೆ ” ೧೯೯೩ರಲ್ಲಿ ರೇಡಿಯೋ ಕಾಲರ್ ಅಧ್ಯಯನ ಮಾಡುತ್ತಿರುವಾಗ ಹುಲಿ ಸಂಖ್ಯೆಗಳ ಬಗ್ಗೆ ಕಾಳಜಿ ಬಂದಿತು. ಮೂಲಭೂತ ಸಂಶೋಧನೆ ಮನಸ್ಸಿಗೆ ಉಲ್ಲಾಸ ಕೊಡುತ್ತದೆ. ತಿಳಿವಳಿಕೆ ಕೊಡುತ್ತದೆ. ಮುಂದೆ ಅದರಿಂದ ಉಪಯೋಗವೂ  ಇದೆ. ಆದರೆ, ಆ ಕ್ಷಣದಲ್ಲಿ ನನಗೆ ಏನನಿಸಿತೆಂದರೆ, ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿರುವಾಗ ಸರಕಾರ ಕೆಲವು ಕಡೆ ಕಡಿಮೆ ತೋರಿಸಿ, ಕೆಲವೆಡೆ ಹೆಚ್ಚು ತೊರಿಸಿಕೊಂಡಿರುವ ಸಮಯದಲ್ಲಿ ಹುಲಿಗಳ ಸಂರಕ್ಷಣೆಗೆ ಹೆಚ್ಚು ಪ್ರಯೋಜನ ಆಗುವ ವಿಧಾನಗಳನ್ನು ಕಂಡುಹಿಡಿಯುವುದು ಹೆಚ್ಚು ಮುಖ್ಯ ಅಂತ. ನಾವು ಮೂಲಭೂತ ಸಂಶೋಧನೆ ಮಾಡುವಾಗ ತೊಂದರೆಗಳು ಬಂದರೆ ನಾವು ಆದ್ಯತೆಗಳನ್ನು ನಿಗದಿ ಮಾಡಬೇಕಾಗುತ್ತದೆ. ರೇಡಿಯೋ ಕಾಲರ್ ಸಂಶೋಧನೆಯನ್ನು ನಾನು ಕರ್ನಾಟಕದಲ್ಲಿ ನಿಲ್ಲಿಸಿದರೂ ಮಧ್ಯಪ್ರದೇಶದ ರಘು ಚಂದಾವತ್ ಅವರೊಂದಿಗೆ ಸೇರಿಕೊಂಡು ಅಧ್ಯಯನ ಮುಂದುವರಿಸಿದೆ. ಇಂತಹ ಮೂಲಭೂತ ಅಧ್ಯಯನಗಳು ಬಹಳ ಮುಖ್ಯ. ಈಗ ವೈಲ್ಡ್‌ಲೈಫ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ವಿಜ್ಞಾನಿಗಳೂ ಇಂದಿಗೂ (೨೦೦೭) ಕಾನ್ಹದಲ್ಲಿ ರೇಡಿಯೋ ಕಾಲರ್ ತೊಡಿಸಿ ಅಧ್ಯಯನ ಮಾಡುತ್ತಿದ್ದಾರೆ” ಎಂದರು. ಇದು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾರ್ಗದರ್ಶಿ ಸೂತ್ರ.

ವೈಜ್ಞಾನಿಕ ವಿಷಯಗಳು ಪ್ರಾದೇಶಿಕ ಭಾಷೆಯಲ್ಲಿದ್ದಾಗ ಮಾತ್ರ ಹೆಚ್ಚಿನ ಪ್ರಯೋಜನವಾಗುತ್ತದೆ ಎಂಬುದನ್ನರಿತ ಅವರು ಕನ್ನಡದಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ.  ಕನ್ನಡದಲ್ಲಿನ ತಮ್ಮ ಬರಹಗಳಿಗೆ ಹಿರಿಯ ಪತ್ರಕರ್ತರಾದ ವೈ.ಎನ್. ಕೆ. ಅವರ ಪ್ರೇರಣಯೇ ಕಾರಣ ಎಂದು ಅವರು ಹೇಳುತ್ತಾರೆ. ಲೇಖನಗಳಲ್ಲಿನ ಧ್ವನಿಮಾತ್ರ ಕಾರಂತರ ಅಂತರಾಳದ ವನ್ಯಜೀವಿ ಸಂರಕ್ಷಣೆಯ ಕಾಳಜಿಗಳು.  ಸಂರಕ್ಷಣೆಯನ್ನು ಸಾಧಿಸುವ ರೀತಿಯನ್ನು ಸಾಮಾನ್ಯ ಓದುಗನಿಗೂ ತಿಳಿಯುವಂತೆ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ.  ಅವರ ಇಂಗ್ಲಿಷ್ ಆಗಲಿ ಕನ್ನಡದ ಲೇಖನಗಳಲ್ಲೇ ಆಗಲಿ, ಒಂದೇ ಒಂದು ವಾಕ್ಯವೂ ಕೇವಲ ಸಾಹಿತ್ಯಾತ್ಮಕವಾಗಿರುವುದಿಲ್ಲ. ಅದರಲ್ಲಿ ವಿಜ್ಞಾನ  ಹಾಗೂ ಸಂರಕ್ಷಣೆಯ ನಿರೂಪಣೆ ಇರುತ್ತದೆ. ವಿವರಣೆಗಳು ’ಸತ್ಯವು ಸರಳವಾಗಿರುತ್ತz’ ಎಂಬ ಆಂಗ್ಲ ನುಡಿಯನ್ನು ಪೋಷಿಸುತ್ತವೆ. ಪರಿಸರದ ಸೂಕ್ಷ್ಮ ಕೊಂಡಿಗಳನ್ನು ವಿವರಿಸುವ ಅವರ ಬರಹಕ್ಕೆ ಒಂದು ಉದಾಹರಣೆ ನೋಡಿ: “ ಪರಿಸರ ವ್ಯವಸ್ಥೆಯಲ್ಲಿ “ಎ” ಎಂಬ ಸಸ್ಯ ಹುಟ್ಟಬೇಕಾದರೆ “ಬಿ” ಎಂಬ ಕೀಟದಿಂದ ಪರಾಗಸ್ಪರ್ಶವಾಗಬೇಕು. “ಬಿ” ಎಂಬ ಕೀಟವನ್ನು ನಿಯಂತ್ರಿಸುವ “ಸಿ” ಎಂಬ ಹಕ್ಕಿ “ಡಿ” ಎಂಬ ಸಸ್ಯದಲ್ಲಿ ಗೂಡು ಕಟ್ಟಬಹುದು. “ಡಿ” ಎಂಬ ಹಣ್ಣನ್ನು ಆಹಾರವಾಗಿಗಟ್ಟು ಕೊಂಡ “ಇ” ಎಂಬ ಸಸ್ಯಾಹಾರಿ ಪ್ರಾಣಿಯೂ ಅದನ್ನು ಬೇಟೆಯಾಡುವ “ಎಫ್” ಎಂಬ ಬೇಟೆಗಾರ ಪ್ರಾಣಿಯೂ ಇದೆ. ಇವೆಲ್ಲಾ ಮಣ್ಣಾದಾಗ ಕಾರ್ಯಶೀಲವಾಗುವ “ಜಿ” ಎಂಬ ಬ್ಯಾಕ್ಟೀರಿಯಾವಿಲ್ಲದೆ ಸಸ್ಯಗಳಿಗೆ ಮಣ್ಣಿನ ಸಾರ ದೊರಕಲಾರದು..” ಇದು ಯಾರಿಗೆ ಕುತೂಹಲ ಹುಟ್ಟಿಸುವುದಿಲ್ಲ?! ಇದೇ ಪರಿಸರದ ವೈಜ್ಞಾನಿಕ ವಿಶ್ವರೂಪ!

ವನ್ಯಜೀವಿಗಳ ಬಗ್ಗೆ ನಾವು ಇಂದು ಆಶಾವಾದಿಗಳಾಗಿದ್ದರೆ, ಅದಕ್ಕೆ ವೈಜ್ಞಾನಿಕ ಸಮರ್ಥನೆಯುಂಟೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು, “ಖಂಡಿತಾ ಉಂಟು!” ೧೯೬೦ರಲ್ಲಿ ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಪರಸ್ಥಿತಿ ಹೇಗಿತ್ತೆಂದರೆ, ಯಾವ ವನ್ಯಜೀವಿಗಳೂ ಕಾಡಿನಲ್ಲಿ ಉಳಿಯುತ್ತವೆ ಎಂದು ನಾನು ಭಾವಿಸಿರಲಿಲ್ಲ.  ಆಮೇಲೆ ಪರಿಸ್ಥಿತಿ ಉತ್ತಮವಾಯಿತು. ಈಗ ಮತ್ತೆ ಕೆಟ್ಟಿದೆ. ಆದರೆ, ಪರಿಸ್ಥಿತಿ ನಮ್ಮ ಕೈಲಿದೆ. ಶಕ್ತಿ ನಮ್ಮಲ್ಲಿದೆ. ನಾಗರಹೊಳೆಯಲ್ಲಿ ಚಿಣ್ಣಪ್ಪನವರ, ಭದ್ರಾದಲ್ಲಿ ಡಿ.ವಿ. ಗಿರೀಶ್‌ರವರ ಕಾರ್ಯ ಫಲಕಾರಿಯಾಗಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಇದು ಬೇರೆಡೆಯೂ ಸಾಧ್ಯ. ನಾವು ವಸ್ತುನಿಷ್ಠವಾಗಿ ಕೆಲಸ ಮಾಡಿದರೆ ಎಲ್ಲವೂ ಆಗುತ್ತದೆ. ನಿರಾಶೆ ಯಾಗುವಂತಹ ಪರಿಸ್ಥಿತಿ ನನಗಂತೂ ಕಂಡುಬರುತ್ತಾ ಇಲ್ಲ!”

ಕೇವಲ ವಿಜ್ಞಾನಿಯಾಗಿ ತೃಪ್ತಿಯಾಗದ ಕಾರಂತರು ಸಂರಕ್ಷಣಾ ಕೆಲಸಕ್ಕೆ ಕೈ ಹಾಕಿ ಸಾಕಷ್ಟು ನಿಂದನೆಗೂ ಒಳಗಾದವರು. ಅನೇಕ ಲಾಬಿ, ಒಳಸುಳಿಗಳಿರುವ ರಾಜಕೀಯ ಹಾಗೂ ಮಾಹಿತಿಯಿಲ್ಲದ ಜನಗಳ ನಡುವೆ ಸಿಲುಕಿ ತೊಂದರೆ ಅನುಭವಿಸಿದರು. ಹುಲಿಗಳಿಗೆ ರೇಡಿಯೋ ಕಾಲರ್ ತೊಡಿಸಿ ಅಧ್ಯಯನ ನಡೆಸುತ್ತಿದ್ದಾಗ ಕಾಲರ್ ತೊಟ್ಟುಕೊಂಡ ಹುಲಿಗಳ ಸಾವು, ಕಾಲರಿನಿಂದಲೇ ಆದ ಸಾವು ಎಂಬ ಅಪಪ್ರಚಾರ ತೊಡಗಿತು. ಈ ಕುರಿತ ರಾಜಕಾರಣಿಗಳ ಹೇಳಿಕೆ ವಿಜ್ಞಾನಿಗಳ ಮುಸಿನಗೆಗೆ ಕಾರಣವಾಯಿತು. ಪರಿಸ್ಥಿತಿಯ ದುರ್ಲಾಭ ಪಡೆದ ಪಟ್ಟಭದ್ರ ಹಿತಾಸಕ್ತಿಗಳು ನಾನಾ ಬಗೆಯ ತೊಂದರೆಗಳನ್ನು ನೀಡಿದರು. ತಜ್ಞರ ಸಮಿತಿ ಕಾರಂತರ ಸಂಶೋಧನೆಗೂ ಹುಲಿ, ಚಿರತೆಗಳ ಸಾವಿಗೂ ಯಾವ ಸಂಬಂಧವೂ ಇಲ್ಲ, ಸಂಶೋಧನೆಗೆ ತೊಂದರೆ ಕೊಡಬಾರದು ಎಂದು ವರದಿ ನೀಡಿತು. ಅದಾಗ್ಯೂ, ಎಷ್ಟೋಬಾರಿ ಕಾರಂತರು ನ್ಯಾಯಾಲಯದ ಮೊರೆಹೊಕ್ಕು ತಮ್ಮ ಸಂಶೋಧನಾ ಹಕ್ಕನ್ನು ಉಳಿಸಿಕೊಳ್ಳಬೇಕಾಯಿತು. ತಮ್ಮ ಸಂರಕ್ಷಣಾ ಪರ್ವದ ಬಗ್ಗೆ ಅವರು ಹೀಗೆ ಹೇಳುತ್ತಾರೆ: “ಇದರ ಫಲವಾಗಿ ನನ್ನ ಸಂಶೋಧನೆಯ ಕೆಲಸಕ್ಕೆ ಸಾಕಷ್ಟು ಅಡಚಣೆಗಳು ಬಂದಿವೆ. ಆದರೆ, ಇದಕ್ಕೂ ಹತ್ತು ಪಾಲು ಸಂತಸ, ತೃಪ್ತಿಗಳೂ ನನ್ನ ಪಾಲಿಗೆ ಬಂದಿವೆ!”

ಡಾ|| ಕಾರಂತರ ಕುಟುಂಬದ ಬಗ್ಗೆ ಹೇಳುವುದು ಎಂದರೆ, ಹೆಂಡತಿ ಡಾ|| ಪ್ರತಿಭಾ ಕಾರಂತ, ಮಗಳು ವನ್ಯಜೀವಿ ವಿಜ್ಞಾನಿ ಡಾ|| ಕೃತಿ ಕಾರಂತ.

ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರನ್ನರಸಿ ಬಂದಿವೆ. ಅವುಗಳಲ್ಲಿ ಮುಖ್ಯವಾದವು ೨೦೦೬ರಲ್ಲಿ ಸಂದ ಸಿಯೆರಾ ಕ್ಲಬ್‌ನ ಅರ‍್ಥ್‌ಕೇರ್ ಪ್ರಶಸ್ತಿ, ೨೦೦೭ರಲ್ಲಿ ಸಂದ ವರ‍್ಡ್ ವೈಲ್ಡ್‌ಲೈಫ್ ಫಂಡ್‌ನ ಜೆ. ಪಾಲ್‌ಗೆಟ್ಟಿ ಪ್ರಶಸ್ತಿ, ೨೦೦೮ರಲ್ಲಿ ಬಿಎನ್‌ಎಚ್‌ನ ಸಲೀಂ ಅಲಿ ಪುರಸ್ಕಾರಗಳು. ಶ್ರೀಯುತರಿಗೆ ೨೦೦೮ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‌ನ ಸದಸ್ಯತ್ವವನ್ನು ನೀಡಿ ಗೌರವಿಸಲಾಯಿತು. ಕರ್ನಾಟಕ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ (೨೦೧೧) ನೀಡಿ ಗೌರವಿಸಿದರೆ, ಭಾರತ ಸರ್ಕಾರ ಇವರಿಗೆ ೨೦೧೨ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸದ್ಯ ಕಾರಂತರು ವೈಲ್ಡ್‌ಲೈಫ್ ಕನ್ಸರ್ವೇಷನ್ ಸೊಸೈಟಿಯ ಹಿರಿಯ ವಿಜ್ಞಾನಿಗಳೂ, ವೈಲ್ಡ್‌ಲೈಫ್ ಕನ್ಸರ‍್ವೇಷನ್ ಸೊಸೈಟಿಯ ಭಾರತೀಯ ಕಾರ್ಯಕ್ರಮಗಳ ನಿರ್ದೇಶಕರೂ, ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್‌ನ ನಿರ್ದೇಶಕರೂ ಆಗಿ ಕಾರ್ಯ ನಿರ್ವಹಿತ್ತಾ ವನ್ಯಜೀವಿ ಸಂರಕ್ಷಕರಿಗೆ ಸ್ಫೂರ್ತಿಯಾಗಿದ್ದಾರೆ.

(ಚಿತ್ರಗಳು: ಶೇಖರ ದತ್ತಾತ್ರಿ)