ಉತ್ತರ ಕನ್ನಡದ ಜೊಯಿಡಾದ ಶಿವಪುರವೆಂಬ ಕಾಡು ಹಳ್ಳಿಯಲ್ಲಿ ಚಾರಣ ಮಾಡುವಾಗ  ಮುಳ್ಳಂದಿ ಗುಹೆಗೆ ಹೋಗೋಣವೆಂದು ಊರ ಗೆಳೆಯರು  ಒತ್ತಾಯಿಸಿದರು. ಅಲ್ಲಿನ ಕತ್ತಲೆಯ ಕಲ್ಲುಗುಹೆ ಮುಳ್ಳು ಹಂದಿಗಳ ವಾಸದ ನೆಲೆ. ಅಷ್ಟಕ್ಕೂ ಮುಳ್ಳು ಹಂದಿ ನೋಡಲು ಹೋಗಿ ಮೈಗೆ ಮುಳ್ಳು ಚುಚ್ಚಿಸಿಕೊಳ್ಳುವ ಅಪಾಯಕಾರಿ ಹುಚ್ಚು ಸಾಹಸ ನಮ್ಮದಲ್ಲ.  ಈ ವನ್ಯಜೀವಿ ಹಳ್ಳಿಯ ತೋಟದಿಂದ ತೆಂಗಿನ ಕಾಯಿಗಳನ್ನು  ಒಯ್ಯುತ್ತದೆಂಬ ಸಂಗತಿ ಕುತೂಹಲದ ಮೂಲ. ರಾತ್ರಿ ತೆಂಗಿನ ತೋಟಕ್ಕೆ ಬರುವ ಮುಳ್ಳುಹಂದಿಗಳು  ತೋಟದಲ್ಲಿ ಬಿದ್ದ  ತೆಂಗಿನಕಾಯಿ ಹೆಕ್ಕಿ ಸಿಪ್ಪೆಸುಲಿದು ತಿನ್ನುವದನ್ನು ಹಳ್ಳಿಗರು ಗಮನಿಸಿದ್ದರು. ಮಳೆಗಾಲದ ದಿನಗಳಲ್ಲಿ ತೆಂಗಿನಕಾಯಿಗಳನ್ನು ೫೦೦-೬೦೦ ಮೀಟರ್ ದೂರದ ಗುಹೆಗೆ ಒಯ್ದು ಸಿಪ್ಪೆಸುಲಿದು ತಿನ್ನುತ್ತಿದ್ದವು. ಟಾರ್ಚ್ ಬೆಳಕಲ್ಲಿ ಗುಹೆ ನೋಡಿದರೆ ಮುಳ್ಳು ಹಂದಿ ತೆಂಗಿನಕಾಯಿ ಅಂಗಡಿ ತೆರೆದಂತೆ ಕಾಣುತ್ತಿತ್ತು! ಕಾಯಿಯ ಕಣ್ಣಿನ ಭಾಗಕ್ಕೆ ರಂದ್ರಮಾಡಿ ತೆಂಗು ತಿನ್ನುವ ಇದು  ಗುಹೆಯಲ್ಲಿ ೩೫-೪೦ ಕಾಯಿ ದಾಸ್ತಾನು ಇಟ್ಟಿತ್ತು. ಕರಾವಳಿಯ ಕುಮಟಾ ಬರಗದ್ದೆಯ ತೋಟಕ್ಕೆ ಹೋದರೆ ಇಂತಹುದೇ ಇನ್ನೊಂದು ಕತೆ. ರಾತ್ರಿ ಮರದಿಂದ ಬಿದ್ದ ತೆಂಗಿನಕಾಯಿಗಳನ್ನು ಅಕ್ಕಪಕ್ಕದ ತೋಟದವರು ಹೆಕ್ಕಿ ಒಯ್ಯಬಹುದೆಂದು ಒಂದು ಕಾಲದಲ್ಲಿ  ರೈತರು ಮಾತಾಡುತ್ತಿದ್ದರು. ಈಗ ರಾತ್ರಿ ನೆಲಕ್ಕೆ ಬಿದ್ದ ಕಾಯಿ ಮುಳ್ಳು ಹಂದಿಯಿಂದ ಬಚಾವು ಮಾಡುವದು  ಹೇಗೆಂಬ ಚಿಂತೆ  ಇಲ್ಲಿನದು. ಅವು ಮನುಷ್ಯರಷ್ಟೇ ಶಿಸ್ತಾಗಿ ಸುಲಿದು ತೆಂಗು ಸೇವನೆ ತಂತ್ರ ಕಲಿತಿವೆ. ತೆಂಗು ಸುಲಿದು ತಿನ್ನುವ  ಯಂತ್ರದಂತೆ ಕೆಲಸ ನಿರ್ವಹಿಸುತ್ತಿವೆ !

ಕುಮಟಾ-ಯಾಣದ ರಸ್ತೆಯಲ್ಲಿ ಮಾಸ್ತಿಬೇಣವೆಂಬ ಜಾಗವಿದೆ. ಇಲ್ಲಿನ ತೋಟದಲ್ಲಿ  ತೆಂಗಿನಕಾಯಿ ಕೊಯ್ದವರು ರಾತ್ರಿ ಕಾಯಿಗಳನ್ನು ಈಗ ತೋಟದಲ್ಲಿ ದಾಸ್ತಾನು ಇಡುವದಿಲ್ಲ. ಹಾಗಂತ ಕಳ್ಳರ ಭಯವಲ್ಲ. ಅಲ್ಲಿನ ತೆಂಗಿನತೋಟಕ್ಕೆ ರಾತ್ರಿ ನುಗ್ಗುವ ಕಾಡುಹಂದಿಗಳು ಕಾಯಿಸಿಪ್ಪೆ ಸುಲಿದು ತೆಂಗುತಿನ್ನುತ್ತವೆ. ಒಂದೇ ತೋಟದಲ್ಲಿ ಒಂದು ರಾತ್ರಿಯಲ್ಲಿ ೬೦ಕ್ಕೂ ಹೆಚ್ಚು ಕಾಯಿ ತಿಂದ ದಾಖಲೆ ಇಲ್ಲಿನ ವರಾಹ ತಂಡದ್ದು! ಈಗೀಗ ಮನೆಯ ಅಂಗಳದಲ್ಲಿ ಕಾಯಿ ರಾಶಿಹಾಕುವದು ಕಷ್ಟ. ಇತ್ತೀಚೆಗೆ ತೆಂಗಿನ ಮರವೇರಲು ಇಲ್ಲಿ ಇಲಿಗಳು ಪಳಗಿವೆ. ೬೦-೭೦ ಅಡಿ ಮರವೇರುವ ಅವು ನೀರು ತುಂಬುವ ಹಂತದ ಎಳೆಗಾಯಿಗಳನ್ನು ಕೊರೆದು ತಿನ್ನುತ್ತವೆ. ಪ್ರತಿ ಮರಗಳ ಬುಡದಲ್ಲಿ ಹತ್ತಾರು ಎಳೆಗಾಯಿಗಳು ಬಿದ್ದಿರುತ್ತವೆ! ಈಗ ಕೋತಿಗಳೂ ಇದೇ ತೆಂಗು ತಿನ್ನುವ ಹವ್ಯಾಸ ರೂಡಿಯಾಗಿದೆ.

ಹಿಂದೂಮಹಾಸಾಗರ ಹಾಗೂ ಪೆಸಿಫಿಕ್ ಸಾಗರ ತೀರದ ಕೆಲವು ಪ್ರದೇಶಗಳಲ್ಲಿ ಏಡಿಯೊಂದು ಕಾಯಿ ಕದಿಯುವ ಕೆಲಸ ಮಾಡುತ್ತಿದೆ. ಬಿರ್ಗಸ್ ಲಾಟ್ರೊ ಎಂಬ ಈ ಏಡಿಯನ್ನು ಸ್ಥಳೀಯರು ‘ಕೊಕೊನಟ್ ರಾಬರ್ಸ್ ಕ್ರ್ಯಾಬ್’ ಎಂದೇ ಗುರುತಿಸುತ್ತಾರೆ. ಅಂಡಮಾನ್ ದ್ವೀಪಗಳಲ್ಲಿ ನೋಡಬಹುದಾದ ಈ ಜೀವಿ ೪-೮ಕಿಲೋ ತೂಕವಿದೆಯಂತೆ! ತೆಂಗಿನ ಮರ ಏರಿ ತನ್ನ ಕೊಂಬು, ಚಿಮ್ಮಟಗಳ ಸಹಾಯದಿಂದ ಸಿಪ್ಪೆಸುಲಿದು ಎಳ ನೀರು ಕುಡಿದು, ತೆಂಗು ತಿನ್ನುತ್ತವೆ.  ಕೃಷಿಕರಿಗೆ ಗಂಭೀರ ಸಮಸ್ಯೆ  ತಂದಿಟ್ಟಿದೆ. ಸಮುದ್ರದಲ್ಲಿರುವ ಜೀವಿ ರಾತ್ರಿ ನಿಧಾನಕ್ಕೆ ಮರವೇರಿ ಕಾಯಿ ಕದಿಯುತ್ತಿವೆ.

ವನ್ಯಜೀವಿಗಳ ಕಾಡು ಜೀವನ ಈಗೀಗ ಕೃಷಿ ಅವಲಂಬಿತವಾಗುತ್ತಿದೆ. ಕಾಡು ಹುಲಿಗೆ ನಾಡ ಹಸುವಿನ ಮಾಂಸ ಅನಿವಾರ್ಯವಾಗುತ್ತಿದೆ! ಕೋತಿ, ಹಂದಿ, ಅಳಿಲು, ಜಿಂಕೆಯಂತಹ ಜೀವಿಗಳಿಗೆ ಕೃಷಿ ಬೆಳೆಯ ಗೆಳೆತನ ಕಾಣುತ್ತಿದೆ. ನೈಸರ್ಗಿಕ ಕಾಡು ಕ್ಷೀಣಿಸಿರುವದು, ನೆಡುತೋಪು ವಿಸ್ತರಣೆ ಹೆಚ್ಚಿರುವದು, ಅರಣ್ಯ ಅತಿಕ್ರಮಣ, ಅರಣ್ಯದಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಿರುವದು ಈ ಬೆಳವಣಿಗೆಗೆ ಮೂಲಕಾರಣವಾಗಿದೆ. ವನ್ಯಜೀವಿ ನಿಯಂತ್ರಣಕ್ಕೆ ಮಾನವ ಒಂದು ಉಪಾಯ ಹುಡುಕಿದಂತೆ ಅತ್ತ ಪ್ರಾಣಿಗಳೂ ತಮ್ಮ ಚಾಣಾಕ್ಷತೆ ಬಳಸಿ ಪ್ರತಿತಂತ್ರ ಹೂಡುತ್ತಿವೆ. ಕಬ್ಬಿನ ಬೆಳೆಯನ್ನು ಕೋತಿದಾಳಿಯಿಂದ ನಿಯಂತ್ರಿಸಲು ಕೃಷಿಕರೊಬ್ಬರು ವಿದ್ಯುತ್ ಬೇಲಿ ನಿರ್ಮಿಸಿದ್ದರು. ವಿದ್ಯುತ್ ಶಾಕ್ ಅನುಭವದ ಬಳಿಕ ಕೆಲವು ದಿನ ಬೆಳೆಯತ್ತ ಮುಖಹಾಕದ ಕೋತಿಗಳ ತಂಡ ಮತ್ತೆ ಹಾಜರಾಯಿತು. ತಂತಿಗೆ ಮೈತಾಗಿಸದಂತೆ ಎಚ್ಚರದಲ್ಲಿ ಕಬ್ಬಿನ ಗದ್ದೆಗೆ ನುಸುಳಿದ ಅವು ನಿಧಾನಕ್ಕೆ ಎರಡು ತಂತಿಗಳ ನಡುವೆ ಕಬ್ಬು ಮುರಿದು  ಹೊರಕ್ಕೆ ಸಾಗಿಸಿದವು! ವಿದ್ಯುತ್ ತಂತಿಗೆ  ಕಬ್ಬು ತಾಗದಂತೆ  ಚಾಣಾಕ್ಷತೆಯಲ್ಲಿ  ಕಬ್ಬು ಮುರಿದು ಹೊರ ಸಾಗಿಸುವ ಕಾಯಕವನ್ನು ಇಡೀ ಕೋತಿ ತಂಡ ಪರಸ್ಪರ ಸಹಕಾರದಿಂದ ನಿಭಾಯಿಸುವದು ಕಲಿತವು.

ಚಿಕ್ಕಮಂಗಳೂರಿನ ಕಾಫಿ, ಅಡಿಕೆ ತೋಟಕ್ಕೆ ಆನೆ ನುಗ್ಗುವದನ್ನು ನಿಯಂತ್ರಿಸಲು “ದ್ಯುತ್ ಬೇಲಿ ನಿರ್ಮಿಸಿದ್ದರು, ಆಗ ಆನೆಗಳು ಮರಗಳನ್ನು ಮುರಿದು ವಿದ್ಯುತ್ ಬೇಲಿಯ ಮೇಲೆ ಹಾಕಿ  ದಾಟುವ ತಂತ್ರ ಹುಡುಕಿದವು. ಆನೆ ದಾಟುವ ದಾರಿಯಲ್ಲಿ  ಕಲ್ಲು ಇಟ್ಟು ಅದು ಆನೆ ಕಾಲಿಗೆ ತಗಲಿ ಬಿದ್ದಾಗ ತಟ್ಟನೆ ಪಟಾಕಿ ಸಿಡಿಯುವಂತೆ ಹೊಸ ತಂತ್ರ ರೂಪಿಸಿದರು. ಆನೆ ದಾಟುವಾಗ ಕಲ್ಲು ಜಾರಿ ಪಟಾಕಿ ಸಿಡಿಯುತ್ತಿತ್ತು, ಆನೆಗಳು ಓಡುತ್ತಿದ್ದವು. ಈಗ ಎಚ್ಚರಗೊಂಡ ಆನೆಗಳು ದಾರಿಯ ಕಲ್ಲುಗಳನ್ನು ತಾವೇ ನಿಧಾನಕ್ಕೆ ಸೊಂಡಿಲಿಂದ ನೂಕಿ ಪಟಾಕಿ ಸಿಡಿಯದಂತೆ ನಾಜೂಕಾಗಿ ಕೆಲಸ ನಿರ್ವಹಿಸಿ ತೋಟಕ್ಕೆ ನುಗ್ಗುವದನ್ನು ಕಲಿತಿವೆಯಂತೆ! ಮಾನವನ ಮೆದುಳು ವಿಕಾಸಗೊಂಡಂತೆ  ಅತ್ತ ವನ್ಯಜೀವಿಗಳ ಜ್ಞಾನವೂ ಬೆಳೆಯುತ್ತಿರುವಂತೆ ಕಾಣುತ್ತಿದೆ!