ವನ್ಯ ಜೀವಿಗಳ ರಕ್ಷಣೆಗೆ ಜೀವನೋತ್ಸಾಹ

ಪ್ರತಿ ವರ್ಷವೂ ಜೂನ್ ೫ರ ‘ವಿಶ್ವ ಪರಿಸರ ದಿನಾಚರಣೆ’ಯ ಸಂದರ್ಭದಲ್ಲಿ ವಿಶ್ವಸಂಸ್ಥೆ ಇಡೀ ಪ್ರಪಂಚಕ್ಕೆ ಒಂದು ಘೋಷವಾಕ್ಯವನ್ನು, ಒಂದು ವಿಶೇಷ ಒತ್ತುಗುರಿಯನ್ನು ನೀಡುತ್ತದೆ. ೨೦೧೬ರ ಪರಿಸರ ದಿನಾಚರಣೆಗಾಗಿ ವನ್ಯಜೀವ ರಕ್ಷಣೆಗೇ ಒತ್ತು ನೀಡಲಾಗಿದೆ.

ಎಲ್ಲ ದೇಶಗಳಲ್ಲೂ ವನ್ಯ ಜೀವಿಗಳನ್ನು ಕೊಂದು ಮಾರುವ ಕರಾಳ ದಂಧೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೊಡ್ಡದು, ಚಿಕ್ಕದು, ಚಂದದ್ದು, ಕುರೂಪದ್ದು, ಅಳಿವಿನಂಚಿಗೆ ಬಂದಿದ್ದು ಎಂಬ ಭೇದವೇ ಇಲ್ಲದೆ ಬಲೆಗೆ ಬಿದ್ದಿದ್ದನ್ನೆಲ್ಲ ಬಲಿ ಹಾಕುವ ತೆವಲು ಎಲ್ಲ ದೇಶಗಳಲ್ಲಿ ನಡೆಯುತ್ತಲೇ ಇದೆ. ದಂತಕ್ಕಾಗಿ ಆನೆಗಳನ್ನು, ಉಗುರು- ಚರ್ಮಕ್ಕಾಗಿ ಹುಲಿಗಳನ್ನು ಬೇಟೆಯಾಡುವವರ ಬಗ್ಗೆ ನಮ್ಮ ದೇಶದಲ್ಲಿ ಆಗಾಗ ಸುದ್ದಿಗಳು ಬರುತ್ತವೆ. ಬೇರೆ ದೇಶಗಳಲ್ಲಿ ಇನ್ನೂ ಭೀಕರ ಪರಿಸ್ಥಿತಿ ಇದೆ. ೨೦೧೧ರಲ್ಲಿ ವಿಯೆಟ್ನಾಮಿನ ಅರಣ್ಯದಂಚಿನಲ್ಲಿ ಮೇಯುತ್ತಿದ್ದ ಜಾವಾ ರೈನೊ ಎಂಬ ವಿಶಿಷ್ಟ ಘೇಂಡಾಮೃಗದ ಕೊನೆಯ ತಳಿಯನ್ನೂ ಯಾರೋ ಕೊಂದು ಅದರ ಕೊಂಬನ್ನು ಎತ್ತಿ ಸಾಗಿಸಿದರು. ಅದರ ವಂಶವೇ ಈ ಭೂಮಿಯಿಂದ ಕಣ್ಮರೆಯಾಯಿತು. ಅದೇ ವರ್ಷ ಆಫ್ರಿಕದ ಕಪ್ಪು ಘೇಂಡಾಮೃಗದ ಕೊನೆಯ ಸಂತತಿಯನ್ನೂ ಕಾಮರೂನ್ ದೇಶದಲ್ಲಿ ಬೇಟೆಗಾರರು ಹೊಡೆದು ಮುಗಿಸಿದರು.

ಆಫ್ರಿಕಾ ಖಂಡವೆಂದರೆ ಕತ್ತಲು ಖಂಡ ಎಂತಲೇ ನಾವು ಕರೆಯುತ್ತೇವೆ. ಅಲ್ಲಿನ ಗೊಂಡಾರಣ್ಯಗಳಲ್ಲಿ ನಡೆಯುವ ಕರಾಳ ಕೃತ್ಯಗಳು ಬೆಳಕಿಗೆ ಬರುವುದೇ ಕಮ್ಮಿ. ‘ಮಹಾ ವಾನರ’ ಎಂದು ಕರೆಸಿಕೊಳ್ಳುವ ಗೊರಿಲ್ಲಾ, ಚಿಂಪಾಂಜಿ, ಬೊನೊಬೊಗಳ ಮೂಲ ವಾಸಸ್ಥಾನ ಅದು. ಅಲ್ಲಿನ ಬಹಳಷ್ಟು ರಾಷ್ಟ್ರಗಳಲ್ಲಿ ದಂಗೆ, ಭಯೋತ್ಪಾತ, ಅಂತರ್ಯುದ್ಧ, ಮಿಲಿಟರಿ ಕಾರ್ಯಾಚರಣೆಗಳ ನಡುವೆ ಕಾಡಿನಲ್ಲಿ ವನ್ಯಜೀವಿಗಳು ಬದುಕುಳಿಯುವುದೇ ದುಸ್ತರವಾಗಿದೆ. ಗಾಂಬಿಯಾ, ಬುರ್ಕಿನಾ ಫಾಸೊ, ಟೊಗೊ ಮತ್ತು ಬೆನಿನ್ ದೇಶಗಳಲ್ಲಿ ಗೊರಿಲ್ಲಾಗಳ ಸಂತತಿ ಪೂರ್ತಿ ಮುಗಿದು ಹೋಗಿದೆ. ‘ಬುಶ್ ಮೀಟ್’ (ಅಂದರೆ ಕಾಡು ಮಾಂಸ) ಹೆಸರಿನಲ್ಲಿ ಪಟ್ಟಣದ ಬೀದಿ ಬದಿಗಳಲ್ಲಿ ಹಾಡುಹಗಲೇ ಗೊರಿಲ್ಲಾ ಮಾಂಸ ಮಾರಾಟವಾಗುತ್ತಿದ್ದವು. ಅವು ಮುಗಿದು ಹೋದುವೆಂದು ಅಲ್ಲಿನ ಯಾರಿಗೂ ಬೇಜಾರಿಲ್ಲವೇನೊ. ಗೊರಿಲ್ಲಾ ಬದಲಿಗೆ ಬೇರೆ ಜೀವಿಗಳ ಬೇಟೆ ನಡೆಯುತ್ತದೆ.
ಈ ಹತ್ಯಾಖೋರರಿಗೆ ಕಾಡು ಎಂದರೆ ಅಪ್ಪಟ ಕಾಡಿನ ಜೀವಿಗಳೇ ಆಗಬೇಕೆಂದಿಲ್ಲ. ತಲೆಯ ಮೇಲೆ ಟೋಪಿ ಧರಿಸಿದಂತೆ ಕಾಣುವ ‘ಹೆಲ್ಮಟೆಡ್ ಹಾರ್ನ್‌ಬಿಲ್’ ಎಂಬ ವಿಶಿಷ್ಟ ಪಕ್ಷಿ ಅಳಿವಿನಂಚಿಗೆ ಬಂದಿದೆ. ಸದಾ ಮರೆಯಲ್ಲಿದ್ದು ಪೊದೆಗಳ ಸಂದುಗಳಲ್ಲಿ ಓಡಾಡುತ್ತ ಹುತ್ತಗಳಲ್ಲಿ ಮೂಗು ತೂರಿಸಿ ಗೆದ್ದಲು, ಇರುವೆಗಳನ್ನು ಭಕ್ಷಿಸುವ ಚಿಪ್ಪುಹಂದಿ (ಪ್ಯಾಂಗೊಲಿನ್)ಗಳ ವಂಶ ಕಣ್ಮರೆಯಾಗುವ ಹಂತಕ್ಕೆ ಬಂದಿದೆ. ಸಮುದ್ರದಾಳದಲ್ಲಿ ಮೆಲ್ಲಗೆ ಈಜುತ್ತ ಸಾವಿರಾರು ಕಿಲೊಮೀಟರ್ ಸುತ್ತಾಡಿ ಕೊನೆಗೆ ತಾನು ಹುಟ್ಟಿದ ಸ್ಥಳಕ್ಕೇ ಬಂದು ಸಮುದ್ರ ತೀರದ ಮರಳಿನಲ್ಲಿ ಮೊಟ್ಟೆ ಇಡುವ ಕಡಲಾಮೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಅರಣ್ಯ ನಾಶದ ವಿಷಯಕ್ಕೆ ಬಂದಾಗ ‘ಮನುಷ್ಯನೇ ಕಾಳ್ಗಿಚ್ಚು ಆಗಿದ್ದಾನೆ’ ಎಂಬ ಮಾತನ್ನು ನಾವು ಕೇಳುತ್ತೇವೆ. ಕಾಳ್ಗಿಚ್ಚು ಹಬ್ಬಿತೆಂದರೆ ದೊಡ್ಡದು, ಚಿಕ್ಕದು, ಪ್ರಾಣಿ, ಪಕ್ಷಿ, ಸಸ್ಯ, ಶಿಲೀಂಧ್ರ ಎಂಬ ಭೇದವಿಲ್ಲದೆ ಎಲ್ಲ ಜೀವಿಗಳೂ ಭಸ್ಮವಾಗುತ್ತವೆ ತಾನೆ? ಮನುಷ್ಯ ಅದಕ್ಕಿಂತ ಭೀಕರವಾಗಿದ್ದಾನೆ. ಅವನು ಕೆರೆ, ನದಿ, ಸಮುದ್ರದಾಳಕ್ಕೂ ಹೊಕ್ಕು ಎಲ್ಲ ಬಗೆಯ ಜೀವಿಗಳಿಗೆ ಪ್ರಳಯಾಂತಕನಾಗುತ್ತಿದ್ದಾನೆ. ಕಾಳ್ಗಿಚ್ಚು ಅಲ್ಲೆಲ್ಲ ಹೋಗುವುದಿಲ್ಲವಲ್ಲ.

ಒಂದು ಅಂದಾಜಿನ ಪ್ರಕಾರ, ಕಳೆದ ನೂರು ವರ್ಷಗಳಲ್ಲಿ ಈ ಭೂಮಿಯ ಶೇಕಡಾ ೫೪ರಷ್ಟು ಜೀವಪ್ರಭೇದಗಳು ಮನುಷ್ಯನಿಂದಾಗಿ ನಿರ್ನಾಮವಾಗಿವೆ. ಭೂಮಿಯ ೪೬೦ ಕೋಟಿ ವರ್ಷಗಳ ಇತಿಹಾಸದಲ್ಲಿ ಇಷ್ಟು ಚಿಕ್ಕ ಅವಧಿಯಲ್ಲಿ ಇಂಥ ಸಾರ್ವತ್ರಿಕ ಜೀವಪ್ರಳಯ ಹಿಂದೆಂದೂ ಆಗಿರಲಿಲ್ಲ. ಇಂಥ ಕ್ಷಿಪ್ರಕ್ರಾಂತಿ ನಡೆಯಲು ಎರಡು ಮುಖ್ಯ ಕಾರಣಗಳಿವೆ. ಒಂದು, ಮನುಷ್ಯರ ಸಂಖ್ಯೆ ಈ ಒಂದು ಶತಮಾನದಲ್ಲಿ ಅಪಾರವಾಗಿ ಹೆಚ್ಚಾಗಿದೆ. ೧೨೦ ಕೋಟಿ ಇದ್ದ ಜನಸಂಖ್ಯೆ, ೩೦೦ ಕೋಟಿ, ೬೦೦ ಕೋಟಿ ದಾಟಿ ಈಗ ೭೨೦ ಕೋಟಿಗಳಷ್ಟಾಗಿದೆ. ಎಲ್ಲ ಭೂಖಂಡಗಳಲ್ಲೂ, ಪಾತಾಳದಿಂದ ಆಕಾಶದವರೆಗೂ ಅವನ ಹಾವಳಿ ಜೋರಾಗಿದೆ. ಎರಡನೆ ಕಾರಣ ಏನೆಂದರೆ, ವಿಜ್ಞಾನ- ತಂತ್ರಜ್ಞಾನದ ಅಗಾಧ ಪ್ರಗತಿಯಿಂದಾಗಿ ನಿಸರ್ಗವನ್ನು ದೋಚುವ ಅವನ ಸಾಮರ್ಥ್ಯ ಹಿಂದೆಂದಿಗಿಂತ ನೂರು ಪಟ್ಟು, ಸಾವಿರ ಪಟ್ಟು ಹೆಚ್ಚಾಗಿದೆ. ಆತ ವೇಗವಾಗಿ ಚಲಿಸುತ್ತಾನೆ, ಕತ್ತಲಲ್ಲೂ ಸುತ್ತುತ್ತಾನೆ, ಆಳಕ್ಕೂ ಮೇಲಕ್ಕೂ ಹೋಗುತ್ತಾನೆ. ದೂರದಲ್ಲಿರುವುದನ್ನೂ ಕ್ಷಣಾರ್ಧದಲ್ಲಿ ಹೊಡೆದು ಕೆಡವುತ್ತಾನೆ. ನೇರವಾಗಿ ಗುಂಡಿಟ್ಟೊ, ಡೈನಮೈಟ್ ಸಿಡಿಸಿಯೊ, ಬಲೆ ಬೀಸಿಯೊ ಕೊಲ್ಲುತ್ತಾನೆ. ಪರೋಕ್ಷವಾಗಿ ಅರಣ್ಯನಾಶ, ಗಣಿಗಾರಿಕೆ, ಕೃಷಿವಿಸ್ತರಣೆ, ಜಲಮಾಲಿನ್ಯ, ನೆಲಮಾಲಿನ್ಯದಂಥ ಕೃತ್ಯಗಳಿಂದಾಗಿ ಮುಗ್ಧ ಜೀವಿಗಳ ಮಾರಣಹೋಮಕ್ಕೆ ಕಾರಣನಾಗುತ್ತಾನೆ. ಕೆಲವಷ್ಟು ಜೀವಿಗಳನ್ನು ಗೊತ್ತಿದ್ದೂ ಇದ್ದೂ ಕೊಲ್ಲುತ್ತಾನೆ; ಇನ್ನು ಬಹಳಷ್ಟನ್ನು ಗೊತ್ತಿಲ್ಲದೇ ಕೊಲ್ಲುತ್ತಾನೆ.

ಗೊತ್ತಿಲ್ಲದವರಿಗೆ ತಿಳಿಸಿ ಹೇಳಬೇಕಾದ ಮಹತ್ವದ ಕೆಲಸವನ್ನು ನಾವೆಲ್ಲ ಕೈಗೊಳ್ಳಬೇಕೆಂದು ವಿಶ್ವಸಂಸ್ಥೆ ಈ ವರ್ಷ ನಾಗರಿಕಲೋಕಕ್ಕೆ ಕರೆ ನೀಡಿದೆ. ಘೇಂಡಾಮೃಗದ ಕೋಡುಗಳಲ್ಲಿ ಅಥವಾ ಹುಲಿಯ ಉಗುರುಗಳಲ್ಲಿ, ಅಥವಾ ಆಮೆಯ ಜನನೇಂದ್ರಿಯದಲ್ಲಿ ಅದೆಂಥದೊ ವಿಶಿಷ್ಟ ಔಷಧೀಯ ಗುಣವೊ ಅಥವಾ ಮಾಂತ್ರಿಕ ಶಕ್ತಿಯೊ ಇದೆಯೆಂಬ ತಪ್ಪುಕಲ್ಪನೆ ಅನೇಕ ಜನರಲ್ಲಿದೆ. ನಮ್ಮ ಕೂದಲಿನಲ್ಲಿ ಅಥವಾ ಉಗುರಿನಲ್ಲಿ ಇರುವ ಕೆರಟೊನಿನ್ ಎಂಬ ನಿರ್ಗುಣ ದ್ರವ್ಯವೇ ಅವುಗಳಲ್ಲೂ ಇವೆ, ವಿಶೇಷ ಏನೂ ಇಲ್ಲ ಎಂಬ ವೈಜ್ಞಾನಿಕ ತಿಳುವಳಿಕೆಯನ್ನು ಜನರಲ್ಲಿ ಬಿಂಬಿಸಬೇಕಾಗಿದೆ. ಎರಡನೆಯದಾಗಿ, ಈ ಎಲ್ಲ ಜೀವಜಂತುಗಳೂ ಬದುಕಿದ್ದರೇನೇ ನಾವೆಲ್ಲ ಬದುಕಿ ಉಳಿಯಲು ಸಾಧ್ಯ ಎಂಬುದನ್ನು ಸಾರಿ ಹೇಳಬೇಕಾಗಿದೆ. ಅದಕ್ಕಿಂತ ಮುಖ್ಯವಾಗಿ, ಆ ಎಲ್ಲ ಜೀವಿಗಳಿಗೂ ಈ ಪ್ರಪಂಚದಲ್ಲಿ ಬದುಕುವ ಹಕ್ಕು ಇದೆ, ಅವುಗಳನ್ನು ಜೀವಂತ ನೋಡುವ ಹಕ್ಕು ನಮ್ಮ ಮುಂದಿನ ಪೀಳಿಗೆಗೂ ಇದೆ -ಅದನ್ನು ನಾವು ಕಸಿದುಕೊಳ್ಳಬಾರದು ಎಂಬ ನೀತಿಪಾಠವನ್ನು ಹೇಳಬೇಕಾಗಿದೆ. ಅದಕ್ಕೇ ೨೦೧೬ನೇ ಇಸವಿಯ ‘ವಿಶ್ವ ಪರಿಸರ ದಿನ’ದ ಸಂದರ್ಭದಲ್ಲಿ ‘ವನ್ಯಜೀವಿಗಳ ರಕ್ಷಣೆಗೆ ಜೀವನೋತ್ಸಾಹ’ ಎಂಬ ಘೋಷವಾಕ್ಯವನ್ನು ನೀಡಲಾಗಿದೆ. ನೀವು ಯಾರೇ ಆಗಿರಿ, ಎಲ್ಲೇ ವಾಸಿಸುತ್ತಿರಿ ನಿಮ್ಮ ಆಸುಪಾಸಿನಲ್ಲಿ ನಡೆಯುವ ವನ್ಯಜೀವಿಗಳ ಬೇಟೆ ಮತ್ತು ಕಳ್ಳಸಾಗಣೆಯ ವಿರುದ್ಧ ಸೊಲ್ಲೆತ್ತಿ, ಶೂನ್ಯ ಸೈರಣೆ ತೋರಿಸಿ ಎಂದು ವಿಶ್ವ ಸಂಸ್ಥೆ ಕೋರಿದೆ.

ನಾವು ಸೊಲ್ಲೆತ್ತಬೇಕಾಗಿದೆ. ಬೇಟೆಗಾರರ ವಿರುದ್ಧ ಹಾಗೂ ಅವರು ಬೇಟೆಯಾಡಿ ತಂದಿದ್ದನ್ನು ಖರೀದಿ ಮಾಡುವವರ ವಿರುದ್ಧ. ಅದಕ್ಕೆಂದು ನಾವು ಅರಣ್ಯದೊಳಕ್ಕೆ ನುಗ್ಗಿ ಧೈರ್ಯ ಸಾಹಸವನ್ನು ಪ್ರದರ್ಶಿಸಬೇಕಾಗಿಲ್ಲ. ನಮ್ಮ ನಮ್ಮ ಊರುಗಳಲ್ಲೇ ಮುಗುಮ್ಮಾಗಿ, ಅಥವಾ ಅದೆಷ್ಟೊ ಬಾರಿ ನಮ್ಮ ಕಣ್ಣಿಗೆ ರಾಚುವಂತೆ ಕಳ್ಳಬೇಟೆಯ ವ್ಯವಹಾರ ನಡೆದಿರುತ್ತದೆ. ಹಕ್ಕಿಪಕ್ಷಿ, ಉಡ, ಹಾವಿನ ಚರ್ಮವನ್ನೊ ನವಿಲಿನ ಎಣ್ಣೆಯನ್ನೊ ಮಾರುವವರು; ಜೀವಂತ ಗಿಳಿಗಳನ್ನೊ, ಕಲ್ಲಾಮೆಯನ್ನೊ, ನವಿಲಿನ ಮರಿಯನ್ನೊ, ಎರಡು ತಲೆಯ ಹಾವನ್ನೊ ಖರೀದಿ ಮಾಡಿರೆಂದು ನಮ್ಮನ್ನು ಪುಸಲಾಯಿಸುವವರು ಅಥವಾ ತರಿಸಿಕೊಡಿರೆಂದು ದನಿ ತಗ್ಗಿಸಿ ಕೇಳುವವರು ಎಲ್ಲ ಊರುಗಳಲ್ಲೂ ಅಲ್ಲೊಬ್ಬ ಇಲ್ಲೊಬ್ಬ ಸಿಕ್ಕೇ ಸಿಗಬಹುದು. ಎಲ್ಲೋ ಯಾರೋ ಕಾಡೆಮ್ಮೆಯ ಅಥವಾ ಜಿಂಕೆಯ ಮಾಂಸವನ್ನು ಗುಪ್ತವಾಗಿ ಹಂಚುತ್ತಿದ್ದಾರೆ ಎಂಬ ಸುಳಿವು ಸಿಗಬಹುದು. ಅಂಥ ಮಾಹಿತಿ ಬಂದಾಗ ಯಾವ ಮುಲಾಜಿಲ್ಲದೆ (ಶೂನ್ಯ ಸೈರಣೆ) ಅರಣ್ಯ ಇಲಾಖೆಗೆ ಅಥವಾ ಪೊಲೀಸರಿಗೆ ದೂರು ಕೊಡಬಹುದು. ನಿರ್ವಂಶವಾಗಬಹುದಾದ ಒಂದು ಜೀವಪ್ರಭೇದ ನಿಮ್ಮ ಒಂದು ದೂರು, ಒಂದು ಫೋನ್ ಕರೆಯಿಂದಾಗಿ ಬದುಕುಳಿಯಬಹುದು.