ನಾವು ಬ್ಯಾಕ್ಟೀರಿಯಾಗಳ ವಿರುದ್ಧದ ಯುದ್ಧದಲ್ಲಿ ಜಯಶಾಲಿಗಳಾಗಿದ್ದೇವೆ ಎಂಬುದು ಹಿಂದಿನ ತಿಳಿವಳಿಕೆಯಾಗಿತ್ತು. ಆದರೆ ಯುದ್ಧ ಮುಂದುವರಿದಿದೆ. ನಾನು ಸೋಲಲಿಚ್ಛಸುವುದಿಲ್ಲಎಂದು ಕ್ಲೀವ್‌ಲ್ಯಾಂಡ್ ವೆಟರನ್ಸ್ ಅಫೈರ್ಸ್ ಮೆಡಿಕಲ್ ಸೆಂಟರ್‌ನ ಮುಖ್ಯಸ್ಥ ಕರ್ಟಿಸ್ ಡಾನ್‌ಸ್ಕಿ ಹೇಳುತ್ತಾರೆ: ಯುದ್ಧದಲ್ಲಿ ಗೆಲ್ಲುವುದು ಹೇಗೆ? ಆಂಟಿಬಯಾಟಿಕ್‌ಗಳನ್ನು ವಿವೇಚನೆಯಿಂದ ಉಪಯೋಗಿಸುವುದರಿಂದ ಮಾತ್ರ ಸಾಧ್ಯವಾಗುತ್ತದೆ. ಎಂಥ ವಿವೇಚನೆ? ತೀರ ಅಗತ್ಯವೆನಿಸಿದಾಗ ಮಾತ್ರ ಅಗತ್ಯವಿದ್ದಷ್ಟು ಆಂಟಿಬಯಾಟಿಕ್ ಅನ್ನು ತೆಗೆದುಕೊಳ್ಳುವುದು.

ಔಷಧಿಗಳು ವರವಿದ್ದಂತೆ. ಅವುಗಳೇ ಶಾಪವಾದರೆ ನಮ್ಮನ್ನು ರಕ್ಷಿಸುವವರಾರು? ಬೇಲಿಯೇ ಎದ್ದು ಹೊಲವನ್ನು ಮೇದರೆ ಹೊಲದ ಗತಿಯೇನು? ಈವತ್ತು ಅನೇಕಾನೇಕ ಔಷಧಿಗಳು ಮನುಷ್ಯನ ವಿವೇಚನಾರಹಿತ ಬಳಕೆಯಿಂದ ರೋಗವನ್ನು ಗುಣಪಡಿಸುವ ಬದಲು ಹೊಸ ಹೊಸ ರೋಗಗಳನ್ನು ಬಿತ್ತುವ ‘ಮದ್ದು’ಗಳಾಗಿವೆ. ವಿಶೇಷವಾಗಿ ಆಂಟಿಬಯಾಟಿಕ್‌ಗಳು.

ಒಂದು ಕಾಲದಲ್ಲಿ ಆಂಟಿಬಯಾಟಿಕ್‌ಗಳನ್ನು ಜೀವಸಂಜೀವಿನಿಗಳೆಂದು ವರ್ಣಿಸಲಾಗಿತ್ತು. ಅವು ನಿಜಕ್ಕೂ ಜೀವಸಂಜೀವಿನಿಗಳೇ. ಆದರೆ ಮನುಷ್ಯ ತನ್ನ ಅವಿವೇಕ ಮತ್ತು ದುರಾಸೆಯಿಂದ ಅವುಗಳನ್ನು ಹಾಗಿರಲು ಬಿಡುತ್ತಿಲ್ಲ ಎಂಬುದು ಈಚಿನ ಬೆಳೆವಣಿಗೆಗಳಿಂದ ನಿಚ್ಚಳವಾಗುತ್ತಿದೆ.

ತಂತ್ರಜ್ಞಾನಾಧಾರಿತ ಔಷಧಿಗಳ ಮತ್ತು ಔಷಧೋಪಚಾರದ ಈವತ್ತಿನ ಗತಿ ಏನಾಗಿದೆ ಎಂಬುದನ್ನು ಈ ವರದಿಯಿಂದ ಸ್ವಲ್ಪ ಅರ್ಥ ಮಾಡಿಕೊಳ್ಳಬಹುದು. ಈಚೆಗೆ ಇಸ್ರೇಲ್‌ನಲ್ಲಿ ವೈದ್ಯರು ಸಂಪು ಹೂಡಿದ್ದರಂತೆ. ಆ ಅವಧಿಯಲ್ಲಿ ಸಾವಿನ ಸಂಖ್ಯೆ ಮತ್ತು ರೋಗವ್ಯಾಪನೆ ಗಣನೀಯವಾಗಿ ಕಡಿಮೆಯಾಗಿತ್ತಂತೆ. ಬಹುಶಃ ಯಮಧರ್ಮನ ಸಹಚರರೂ ಆ ಹೊತ್ತಿನಲ್ಲಿ ಸಂಪು ಹೂಡಿದ್ದಿರಬೇಕು! ವೈದ್ಯರು ಮತ್ತು ಸರ್ಕಾರದ ನಡುವೆ ಮತ್ತೆ ಸಂಧಾನವೇರ್ಪಟ್ಟು ವೈದ್ಯರು ಮತ್ತೆ ಮೊದಲಿನಂತೆ ರೋಗಿಗಳ ‘ಸೇವೆ’ಯನ್ನು ಪ್ರಾರಂಭಿಸುತ್ತಿದ್ದಂತೆ ಸಾವಿನ ಸಂಖ್ಯೆ ಮತ್ತು ರೋಗವ್ಯಾಪನೆ ಕೂಡ ಮೊದಲಿನ ಮಟ್ಟವನ್ನು ಮುಟ್ಟಿತಂತೆ! ಬುದ್ಧಿವಂತರಾದರೆ ನೀವು ಇದರಿಂದ ಯಾವ ಅರ್ಥವನ್ನು ಹೊರಡಿಸುತ್ತೀರಿ? ನನಗೆ ಹೊಳೆಯುವುದು ಒಂದೇ ಅರ್ಥ: ರಾಸಾಯನಿಕ ಔಷಧಿಗಳ – ತಂತ್ರಜ್ಞಾನದ – ಅತಿ ಅವಲಂಬನೆಯಿಂದ ಅನರ್ಥ ಖಂಡಿತ.

ಬಹುಶಃ ಇಂಥ ಅನುಭವಗಳಿಂದಾಗಿಯೇ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಔಷಧ ಶಾಸ್ತ್ರ ಪ್ರಾಧ್ಯಾಪಕ ಡಾ. ಡೇಲ್ ಫ್ರೆಂಡ್ “ಕ್ಷೇಮಕರ ಔಷಧಿ ಎಂಬುದು ಯಾವುದೂ ಇಲ್ಲ” ಎಂಬ ಮಾತನ್ನು ಹೇಳಿದ್ದಾರೆ. ಡಾ.ಯೂಜಿನಿ ರಾಬಿನ್ ಅವರಂತೂ ‘ವೈದ್ಯಕೀಯ ಶುಶ್ರೂಷೆಯೇ ಆರೋಗ್ಯಕ್ಕೆ ಮಾರಕ’ ಎಂಬ ಪುಸ್ತಕವನ್ನೇ ಬರೆದಿದ್ದಾರೆ. ಅವರ ಪ್ರಕಾರ ಈಚಿನ ಚಿಕಿತ್ಸೆಗಳಿಂದಾಗಿಯೇ ಹೊಸ ಹೊಸ ಪಿಡುಗುಗಳು ಹಬ್ಬುತ್ತಿವೆ. ಹಿಂದೆ ೫೦ರ ದಶಕದಲ್ಲಿ ಬಸುರಿಯರಿಗೆ ಥಾಲಿಮೈಡ್ ಔಷಧ ಕೊಟ್ಟಿದ್ದರ ಪರಿಣಾಮವಾಗಿ ವಿಕಲಾಂಗ ಶಿಶುಗಳು ಜನಿಸತೊಡಗಿ ಇಡೀ ಅಮೆರಿಕದಲ್ಲಿ ಹಾಹಾಕಾರ ಎದ್ದಿತ್ತು. ಇಂಥ ಅನೇಕ ಉದಾಹರಣೆಗಳು ಆಧುನಿಕ ವೈದ್ಯ ವಿಜ್ಞಾನದಲ್ಲಿ ಹೇರಳವಾಗಿ ಸಿಗುತ್ತವೆ.

ಈ ಎಲ್ಲಾ ಕಾರಣಗಳಿಗಾಗಿ ಜನ ಈಚೆಗೆ ರಾಸಾಯನಿಕ ಔಷಧಿಗಳ ಬಗ್ಗೆ ಹೆದರಿಕೊಳ್ಳುವಂತಾಗಿದೆ. ಮತ್ತು ಇದೇ ಕಾರಣಕ್ಕೆ ಈಚೆಗೆ ಔಷಧ ರಹಿತ ಚಿಕಿತ್ಸಾ ವಿಧಾನಗಳಾದ ಪ್ರಕೃತಿ ಚಿಕಿತ್ಸೆ, ಆಕ್ಯೂಪ್ರಶರ್, ಆಕ್ಯೂಪಂಕ್ಚರ್, ಅಯಸ್ಕಾಂತ ಚಿಕಿತ್ಸೆ ಮುಂತಾದವುಗಳಲ್ಲಿ ಜನರ ಆಸಕ್ತಿ ಕುದುರುತ್ತಿದೆ.

ಬ್ಯಾಕ್ಟೀರಿಯಾಗಳ ಭಂಡತನ

ನಮಗೆ ಬಹಳಷ್ಟು ಕಾಯಿಲೆಗಳು ಬ್ಯಾಕ್ಟೀರಿಯಾಗಳಿಂದ ಬರುತ್ತವೆ. ಇವುಗಳ ನಾಶಕ್ಕೆ ಇರುವ ಅಂತಿಮ ಅಸ್ತ್ರಗಳು ಆಂಟಿಬಯಾಟಿಕ್‌ಗಳು. ಅಂತಿಮ ಅಸ್ತ್ರಗಳನ್ನು ಅಂತಿಮವಾಗೆ ಬಳಸಬೇಕು – ಬೇರೆಲ್ಲ ಸರಕು ನಿರರ್ಥಕವಾದಾಗ. ಯುದ್ಧದಲ್ಲಿ ಯಾರೂ ಬ್ರಹ್ಮಾಸ್ತ್ರವನ್ನು ಪ್ರಾರಂಭದಲ್ಲೆ ಪ್ರಯೋಗಿಸುವುದಿಲ್ಲ. ಚಿಕ್ಕಪುಟ್ಟ ಅಸ್ತ್ರಗಳು ಸೋತ ಮೇಲೆ ಮಾತ್ರ ಬ್ರಹ್ಮಾಸ್ತ್ರ ಹೊರಗೆ ಬರುತ್ತದೆ. ಆಂಟಿಬಯಾಟಿಕ್‌ಗಳು ಒಂದು ರೀತಿಯಲ್ಲಿ ಬ್ರಹ್ಮಾಸ್ತ್ರಗಳಿದ್ದಂತೆ. ಆಧುನಿಕ ಶಸ್ತ್ರಾಸ್ತ್ರಗಳ ಭಾಷೆಯಲ್ಲಿ ನ್ಯೂಟ್ರಾನ್ ಬಾಂಬ್ ಇದ್ದಂತೆ. ಅದು ಬ್ಯಾಕ್ಟೀರಿಯಾದ ಇಡೀ ಸೈನ್ಯಪಡೆಯನ್ನು ಸಂಪೂರ್ಣವಾಗಿ ಗುಡಿಸಿಹಾಕುತ್ತದೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಒಂದಿಷ್ಟು ಗಡಸು ಬ್ಯಾಕ್ಟೀರಿಯಾಗಳು ಆಂಟಿಬಯಾಟಿಕ್‌ಗಳಿಂದಲೂ ನಾಶವಾಗದೆ ಉಳಿದು ಬಿಡುತ್ತವೆ. ಹೀಗೆ ಉಳಿದಂತವು ಬಹು ವೇಗವಾಗಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತವೆ. ಹೀಗಾಗುವಾಗ ಅವು ತಮ್ಮ ‘ಭಂಡ’ ಜೀನುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುತ್ತವೆ. ಕಿವಿಯ ಸೋಂಕು, ಮಿದುಳ್ಪೊರೆಯುರಿತ ಮತ್ತು ನ್ಯೂಮೋನಿಯ ರೋಗಗಳನ್ನು ಉಂಟುಮಾಡುವ ಸ್ಟ್ರೆಪ್ಟೊಕಾಕಸ್ ನ್ಯೂಮೊನಿಯ ವಿಶಿಷ್ಟ ವಿಧದ ಪ್ರಭೇದಗಳು ಕೆಲವೇ ಗಂಟೆಗಳಲ್ಲಿ ಹೊಸ ಪೀಳಿಗೆಯ ಬ್ಯಾಕ್ಟೀರಿಯಾಗಳನ್ನು ಹುಟ್ಟುಹಾಕುತ್ತವೆ. ಹೀಗೆ ಹುಟ್ಟುಪಡೆದ ಭಂಡ ಬ್ಯಾಕ್ಟೀರಿಯಾಗಳು ಮುಂದೆ ಸೋಂಕುಕಾರಕ ಬ್ಯಾಕ್ಟೀರಿಯಾಗಳ ದೊಡ್ಡ ಪಡೆಯನ್ನೆ ಉತ್ಪತ್ತಿ ಮಾಡುತ್ತವೆ. ಇವು ನಮ್ಮ ಅತಿ ಬಲಶಾಲಿ ಔಷಧಿಗಳಿಗೂ ಬಗ್ಗುವುದಿಲ್ಲ.

ನಾವು ಆಂಟಿಬಯಾಟಿಕ್ಕನ್ನು ತೆಗೆದುಕೊಳ್ಳುವ ಪ್ರತಿ ಸಲವೂ ಈ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವ ಅಪಾಯವಿದೆ. ಇದರಿಂದ ಕಾಯಿಲೆಗಳನ್ನು ಗುಣಪಡಿಸುವ ಯತ್ನ ಹೆಚ್ಚು ಹೆಚ್ಚು ಕಷ್ಟಕರವಾಗುತ್ತ ನಡೆಯುತ್ತದೆ. ಅಮೆರಿಕದಲ್ಲಿ ವೈದ್ಯರುಗಳು ಪ್ರತಿ ವರ್ಷ ೧೬೦ ದಶಲಕ್ಷ ಆಂಟಿಬಯಾಟಿಕ್‌ಗಳನ್ನು ಶಿಫಾರಸು ಮಾಡುತ್ತಾರೆ. ಅವುಗಳ ಅತಿ ಬಳಕೆಯಿಂದಾಗಿ ಬ್ಯಾಕ್ಟೀರಿಯಾ ಪ್ರತಿರೋಧ ಸರ್ವೇಸಾಮಾನ್ಯವಾಗುತ್ತಿದೆ. ಅಷ್ಟೆ ಅಲ್ಲ ಹೆಚ್ಚುತ್ತಿದೆ ಕೂಡ. ‘ನಾವು ಹೆಚ್ಚು ಆಂಟಿಬಯಾಟಿಕ್‌ಗಳನ್ನು ಬಳಸಿದಂತೆಲ್ಲಾ ಭಂಡ ಬ್ಯಾಕ್ಟೀರಿಯಾಗಳ ಪ್ರತಿರೋಧ ಹೆಚ್ಚುತ್ತದೆ. ಇದು ವ್ಯಕ್ತಿಗೆ, ಆಸ್ಪತ್ರೆಗೆ, ಸಮುದಾಯಕ್ಕೂ, ಅನ್ವಯವಾಗುತ್ತದೆ’ ಎಂದು ಈ ಕ್ಷೇತ್ರದ ಪರಿಣತ ಸ್ಟುವರ್ಟ್ ಲೆವಿ ಅಭಿಪ್ರಾಯಪಡುತ್ತಾರೆ.

ಒಂದು ಅಧ್ಯಯನದ ಪ್ರಕಾರ ಕೇವಲ ಎರಡು ವರ್ಷಗಳಲ್ಲಿ ಫ್ಲೋರೋಕ್ವಿನೊಲೊನ್ ಕುಟುಂಬಕ್ಕೆ ಸೇರಿದ ಒಂದು ಆಂಟಿಬಯಾಟಿಕ್‌ಗೆ ಬ್ಯಾಕ್ಟೀರಿಯಾಗಳ ಪ್ರತಿರೋಧ ಶೇ. ೫೦ರಷ್ಟು ಹೆಚ್ಚಿದೆ. ಮೂರನೇ ಒಂದು ಭಾಗಕ್ಕೂ ಹೆಚ್ಚು ಸ್ಟ್ರೆಪ್ಟೊಕಾಕಸ್ ಪ್ರಭೇದಗಳು ಈಗ ಕನಿಷ್ಟ ಒಂದಾದರೂ ಆಂಟಿ ಬಯಾಟಿಕ್‌ಗೆ ಪ್ರತಿರೋಧ ತೋರುತ್ತಿವೆ. ಸುಮಾರು ಶೇ. ೧೪ರಷ್ಟು ಪ್ರಭೇದಗಳು ಒಂದಕ್ಕಿಂತಲೂ ಹೆಚ್ಚು ವರ್ಗದ ಔಷಧಿಗಳಿಗೆ ಜಗ್ಗದಂತಾಗಿವೆ. ಸಂಶೋಧಕರು ಈ ಬಗ್ಗೆ ಅನೇಕ ವರ್ಷಗಳಿಂದ ಎಚ್ಚರಿಸುತ್ತಲೇ ಬಂದಿದ್ದಾರೆ. ಆದರೆ ಸಾರ್ವಜನಿಕರು ಈಚೆಗಷ್ಟೆ ಇದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ.

ಹೆಚ್ಚುತ್ತಿರುವ ಅಪಾಯ     

ಕೆಲವು ಪ್ರಕರಣಗಳಲ್ಲಿ ಔಷಧಕ್ಕೆ ಪ್ರತಿರೋಧ ಬೆಳೆಸಿಕೊಂಡ ಬ್ಯಾಕ್ಟೀರಿಯಾಗಳು ಇನ್ನೂ ಔಷಧಕ್ಕೆ ಒಡ್ಡಿಕೊಳ್ಳದ ಬ್ಯಾಕ್ಟೀರಿಯಾಗಳಿಗೂ ತಮ್ಮ ಜೀನುಗಳನ್ನು ವರ್ಗಾಯಿಸಬಹುದು. ಈ ವಿಷಯದಲ್ಲಿ ಮಕ್ಕಳು ಸುಲಭ ಬಲಿಪಶುಗಳು. ಕಿವಿಸೋಂಕನ್ನು ಉಂಟುಮಾಡುವ ಸ್ಟ್ರೆಪ್ ಬ್ಯಾಕ್ಟೀರಿಯಾದ ಪೆನಿಸಿಲಿನ್ ಪ್ರತಿರೋಧಿ ಪ್ರಭೇದ ೫ ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. “ಆಂಟಿಬಯಾಟಿಕ್‌ಗಿರುವ ಪ್ರತಿರೋಧ ಹೀಗೆ ಹೆಚ್ಚುತ್ತಾ ಹೋದರೆ ಸಾಮಾನ್ಯ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಬಹಳಷ್ಟು ಸೋಂಕನ್ನು ಯಾವ ಔಷಧವೂ ಗುಣಪಡಿಸಲಾಗದಂತೆ ಆಗುತ್ತದೆ… ೫ ರಿಂದ ೧೦ ವರ್ಷಗಳಲ್ಲಿ ನಾವು ಆಂಟಿಬಯಾಟಿಕ್ ಪೂರ್ವ ದಿನಗಳಿಗೆ ಹಿಂದಿರುಗಿದಂತಾಗುತ್ತದೆ” ಎಂದು ಪೆನ್ಸಿಲ್ವೇಲಿಯ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದ ನೀಲ್ ಫಿಷ್‌ಮ್ಯಾನ್ ಹೇಳುತ್ತಾರೆ.

ತಪ್ಪು ಶಿಫಾರಸ್ಸುಗಳು

ಹಿಂದೆ ಬ್ಯಾಕ್ಟೀರಿಯಾ ಪ್ರತಿರೋಧವು ಆಂಟಿಬಯಾಟಿಕ್‌ಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದ ಆಸ್ಪತ್ರೆಗಳಂಥ ಜಾಗಗಳಿಗೆ ಸೀಮಿತವಾಗಿತ್ತು. ಆದರೆ ಈಗ ಅದು ವೈದ್ಯಕೀಯ ಕೇಂದ್ರಗಳ ಹೊರಗೆ ಕೂಡ ಗಂಭೀರ ಸಮಸ್ಯೆಯಾಗುತ್ತಿದೆ. ಏಕೆಂದರೆ ಆಂಟಿಬಯಾಟಿಕ್‌ಗಳನ್ನು ಬಹುವೇಳೆ ಅಸಮರ್ಪಕವಾಗಿ ಶಿಫಾರಸು ಮಾಡಲಾಗುತ್ತಿದೆ. ಮುಕ್ಕಾಲು ಪಾಲು ಪ್ರಾಯದವರು ಮತ್ತು ಮಕ್ಕಳು ಗಂಟಲು ನೋವಿಗೆ ಆಂಟಿಬಯಾಟಿಕ್‌ಗಳನ್ನು ಪಡೆಯುತ್ತಿದ್ದಾರೆ. ಆದರೆ ಅವರಲ್ಲಿ ಪ್ರಾಯದವರು ಶೇ.೧೭ ಮತ್ತು ಮಕ್ಕಳು ಶೇ. ೩೩ ಮಾತ್ರ ಬ್ಯಾಕ್ಟೀರಿಯಾದಿಂದ ಸೋಂಕಿತರಾಗಿರುತ್ತಾರೆ. ಬ್ಯಾಕ್ಟೀರಿಯವೇ ಪಾತಕಿಯಾಗಿದ್ದರೂ ಆಂಟಿಬಯಾಟಿಕ್ ಅನಗತ್ಯವಾಗಿರುತ್ತದೆ. ‘ದಿ ಏಜೆನ್ಸಿ ಫಾರ್ ಹೆಲ್ತ್ ಕೇರ್ ರಿಸರ್ಚ್ ಅಂಡ್ ಕ್ವಾಲಿಟಿ’ ಎಂಬ ಒಂದು ಆರೋಗ್ಯ ಸಂಸ್ಥೆ ಕಂಡುಕೊಂಡಿರುವ ಪ್ರಕಾರ ಮಕ್ಕಳಿಗೆ ತಗುಲುವ ನಡುಕಿವಿಯ ಸೋಂಕು ಶೇ. ೮೦ರಷ್ಟು ಪ್ರಕರಣಗಳಲ್ಲಿ ಒಂದುವಾರದೊಳಗೆ ತನಗೆ ತಾನೆ ನಿವಾರಣೆಯಾಗುತ್ತದೆ. ಆದರೆ ವೈದ್ಯರು ಅನೇಕ ಸಲ ಇಂಥದಕ್ಕೆಲ್ಲ ಬಹು ವ್ಯಾಪಕ ಮದ್ದುಗಳನ್ನೆ ಬರೆದುಕೊಡುತ್ತಾರೆ. ಇದರಿಂದ ರೋಗಕಾರಕ ಬ್ಯಾಕ್ಟೀರಿಯಾಗಳು ಇನ್ನು ಸುಲಭವಾಗಿ ಪ್ರತಿರೋಧ ಬೆಳೆಸಿಕೊಳ್ಳುತ್ತವೆ. ಏಕೆಂದರೆ ತಮಗೆ ಪ್ರತಿಸ್ಪರ್ಧೆ ನೀಡುವ ಬೇರಾವುದೇ ಬ್ಯಾಕ್ಟೀಯಾಗಳು ಇಲ್ಲದಿದ್ದಾಗ ಇವು ಹೆಚ್ಚು ವೇಗವಾಗಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತವೆ.

ಡಾ| ಮೆಂಡಲ್‌ಸನ್ ಹೇಳುವ ಪ್ರಕಾರ ನೂರಕ್ಕೆ ಸುಮಾರು ೯೯ ಪ್ರಕರಣಗಳಲ್ಲಿ ಆಂಟಿಬಯಾಟಿಕ್‌ಗಳ ಅಗತ್ಯವಿಲ್ಲ. ಒಬ್ಬ ವ್ಯಕ್ತಿಯ ಇಡೀ ಜೀವಮಾನದಲ್ಲಿ ಮೂರು ಅಥವಾ ಹೆಚ್ಚೆಂದರೆ ನಾಲ್ಕು ಬಾರಿ ಮಾತ್ರ. ಇದರ ಅಗತ್ಯ ಬೀಳಬಹುದು.

ಏನು ಮಾಡಬೇಕು?

ಹೆಚ್ಚ್ಚು ಹೆಚ್ಚು ಹೊಸ ಹೊಸ ಔಷಧಿಗಳನ್ನು ಅಭಿವೃದ್ಧಿಪಡಿಸುವುದು ಸಮಸ್ಯೆಗೆ ಪರಿಹಾರವಲ್ಲ. ಪರಿಣತರು ಹೇಳುವ ಪ್ರಕಾರ ಕಡಿಮೆ ಆಂಟಿಬಯಾಟಿಕ್‌ಗಳನ್ನು ಬಳಸುವುದು ಮಾತ್ರವೇ ಬ್ಯಾಕ್ಟೀರಿಯಾ ಪ್ರತಿರೋಧದ ಅಪಾಯವನ್ನು ಕಡಿತ ಮಾಡಲು ಇರುವ ಏಕೈಕ ಮಾರ್ಗ. ಇದನ್ನು ಸಾಧಿಸಲು ಸಾರ್ವಜನಿಕರಿಗೆ ಈ ಬಗ್ಗೆ ತಿಳಿವಳಿಕೆ ನೀಡಬೇಕು. ಇದು ತುಂಬಾ ಗಣನೀಯ ಬದಲಾವಣೆಯನ್ನು ತರಬಲ್ಲದು. ಕೊಲರಾಡೊ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಒಂದು ಅಧ್ಯಯನದಿಂದ ಇದು ಸ್ಪಷ್ಟವಾಗಿದೆ. ಬಹಳಷ್ಟು ಸಾರ್ವಜನಿಕರಿಗೆ ಮೂಲಭೂತ ವಿಷಯಗಳು ತಿಳಿದಿರುವುದಿಲ್ಲ. ಕೇವಲ ಶೇ.೨ರಷ್ಟು ಜನಕ್ಕೆ ಮಾತ್ರ ಆಂಟಿಬಯಾಟಿಕ್‌ಗಳು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ, ವೈರಸ್ಸುಗಳನ್ನಲ್ಲ ಎಂಬ ವಿಷಯ ತಿಳಿದಿದೆ. ಶೈಕ್ಷಣಿಕ ಮಾಹಿತಿಯನ್ನು ರೋಗಿಗಳಿಗೆ ಒದಗಿಸಿದ್ದರಿಂದ ಆಂಟಿಬಯಾಟಿಕ್‌ಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿತ್ತು.

ತಿಳಿವಳಿಕೆಯಿಲ್ಲದೆ ರೋಗಿಗಳು ಮದ್ದಿಗಾಗಿ ವೈದ್ಯರನ್ನು ಒತ್ತಾಯಿಸುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ವೈದ್ಯರು ಆ ಒತ್ತಾಯಕ್ಕೆ ಮಣಿದು ಮದ್ದು ಕೊಡುತ್ತಾರೆ. ಲೆವಿ ಅವರ ಅಭಿಪ್ರಾಯದಲ್ಲಿ ‘ಹತ್ತರಲ್ಲಿ ಎಂಟು ಮಂದಿ ವೈದ್ಯರು ತಮ್ಮ ವಿವೇಚನೆಗೆ ವಿರುದ್ಧವಾಗಿ ಆಂಟಿಬಯಾಟಿಕ್‌ಗಳನ್ನು ಶಿಫಾರಸ್ಸು ಮಾಡುತ್ತಾರೆ’. ವೈದ್ಯರು ಮತ್ತು ರೋಗಿಗಳು ಒಟ್ಟಾಗಿ ಪರಿಸ್ಥಿತಿಯನ್ನು ಬದಲಿಸಲು ಕ್ರಮ ತೆಗೆದುಕೊಳ್ಳದಿದ್ದರೆ ನಾವು ಈವರೆಗೆ ಔಷಧಿಗಳೆಂದು ಪರಿಗಣಿಸಿರುವ ರಾಸಾಯನಿಕಗಳೆಲ್ಲವೂ ನಮ್ಮನ್ನು ಸಾಮಾನ್ಯ ಕಾಯಿಲೆಗಳಿಂದ ಕೂಡ ರಕ್ಷಿಸಿದಂತಾಗುತ್ತವೆ.

‘ನಾವು ಬ್ಯಾಕ್ಟೀರಿಯಾಗಳ ವಿರುದ್ಧದ ಯುದ್ಧದಲ್ಲಿ ಜಯಶಾಲಿಗಳಾಗಿದ್ದೇವೆ ಎಂಬುದು ಹಿಂದಿನ ತಿಳಿವಳಿಕೆಯಾಗಿತ್ತು. ಆದರೆ ಯುದ್ಧ ಮುಂದುವರಿದಿದೆ. ನಾನು ಸೋಲಲಿಚ್ಛಿಸುವುದಿಲ್ಲ’ ಎಂದು ಕ್ಲೀವ್‌ಲ್ಯಾಂಡ್ ವೆಟರನ್ಸ್ ಅಫೈರ್ಸ್ ಮೆಡಿಕಲ್ ಸೆಂಟರ್‌ನ ಮುಖ್ಯಸ್ಥ ಕರ್ಟಿಸ್ ಡಾನ್‌ಸ್ಕಿ ಹೇಳುತ್ತಾರೆ. ಈ ಯುದ್ಧದಲ್ಲಿ ಗೆಲ್ಲುವುದು ಹೇಗೆ? ಆಂಟಿಬಯಾಟಿಕ್‌ಗಳನ್ನು ವಿವೇಚನೆಯಿಂದ ಉಪಯೋಗಿಸುವುದರಿಂದ ಮಾತ್ರ ಸಾಧ್ಯವಾಗುತ್ತದೆ. ಎಂಥ ವಿವೇಚನೆ? ತೀರ ಅಗತ್ಯವೆನಿಸಿದಾಗ ಮಾತ್ರ ಅಗತ್ಯವಿದ್ದಷ್ಟು ಆಂಟಿಬಯಾಟಿಕ್ಕನ್ನು ತೆಗೆದುಕೊಳ್ಳುವುದು.

ಈ ಎಲ್ಲದರಿಂದ ಒಂದು ಮಾತನ್ನು ಧಾರಾಳವಾಗಿ ಹೇಳಬಹುದು: ಆರೋಗ್ಯವಂತ ಬದುಕಿಗೆ ರಾಸಾಯನಿಕ ಔಷಧಿಗಳು ಕೊನೆಯ ಅಸ್ತ್ರಗಳಾಗಿರಲಿ; ಪ್ರಕೃತಿ ಔಷಧಿಗಳು ಸದಾ ಸಂಗಾತಿಗಳಾಗಿರಲಿ.