ರಾಷ್ಟ್ರಪತಿಯಾಗಿ ಸೇವೆಯ ಅವಧಿ; ೨೪.೦೮.೧೯೬೯ ರಿಂದ ೨೩.೦೮.೧೯೭೪

ಒರಿಸ್ಸಾ ರಾಜ್ಯದ ಬರ್ಹಾಮ್‌ಪುರ, ಗಿರಿಯವರ ಜನ್ಮಸ್ಥಳ, ೧೮೯೪ರ ಆಗಸ್ಟ್ ೧೦ ರಂದು ಆಂಧ್ರಬ್ರಾಹ್ಮಣ ಕುಟುಂಬದಲ್ಲಿ ಅವರ ಜನನ.ತಂದೆ ವಿ.ವಿ.ಜೋಗಯ್ಯ ಪಂತುಲು. ತಾಯಿ ಸುಭದ್ರಮ್ಮ. ಪಂತುಲು-ಪ್ರಸಿದ್ಧ ನ್ಯಾಯವಾದಿ. ಕಾಂಗ್ರೆಸ್ ಸದಸ್ಯರು, ಕೇಂದ್ರ ವಿಧಾನ ಮಂಡಲದ (Central Legistlative Assembly), ಸದಸ್ಯರು. ಮದ್ರಾಸ್ ಪ್ರಾಂತ್ಯ ವಿಧಾನ ಪರಿಷತ್ ಸದಸ್ಯರು ಆಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ಬಂಗಾಳ-ನಾಗಪುರ ರೈಲ್ವೆ ಕಾರ್ಮಿಕ ಸಂಘದ ಚಟುವಟಿಕೆಗಳಲ್ಲಿ ಅವರಿಗೆ ತೀರ ಆಸಕ್ತಿ. ಈ ಆಸಕ್ತಿ ಮಗನ ಮೇಲೂ ಪರಿಣಾಮ ಬೀರಿತು. ಗಿರಿಯವರು ತಮ್ಮ ೧೨ನೇ ವಯಸ್ಸಿನಿಂದಲೇ ಸಾರ್ವಜನಿಕ ಜೀವನದಲ್ಲಿ ಆಸಕ್ತಿ ವಹಿಸುತ್ತಿದ್ದರು.
ಹುಟ್ಟೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದ ಗಿರಿಯವರು, ಸೀನಿಯರ್ ಕೇಂಬ್ರಿಜ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ೧೯೧೩ರಲ್ಲಿ ಐರ‍್ಲೆಂಡ್ ದೇಶದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಉಚ್ಚ ಶಿಕ್ಷಣ ಹಾಗೂ ಕಾನೂನು ಶಿಕ್ಷಣ ಪಡೆದು ನ್ಯಾಯವಾದಿಯಾಗಲು ಆರ್ಹತೆ ಗಳಿಸಿಕೊಂಡರು. ಐರ‍್ಲೆಂಡಿನ ವಾಸ್ತವ್ಯ ಗಿರಿಯವರ ಬದುಕಿನ ಗುರಿಯನ್ನು ನಿಖರವಾಗಿ ನಿರ್ದೇಶಿಸಿತು ಎನ್ನಬಹುದು. ಏಕೆಂದರೆ, ಆಗ ಅಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಚಳವಳಿಗಳಿಂದ ಅವರು ಬಹುಮಟ್ಟಿಗೆ ಪ್ರಭಾವಿತರಾದರು. ಕ್ರಾಂತಿಕಾರಿ ಮನೋಭಾವವನ್ನೂ ಬೆಳೆಸಿಕೊಂಡರು. ಅಲ್ಲಿ ತಾವು ಪಡೆದ ಅನುಭವ ಭಾರತದಲ್ಲಿ ಬ್ರಿಟಿಷರ ವಿರುದ್ಧ ಚಳವಳಿ ನಡೆಸಲು ಮುಂದೆ ಪ್ರಯೋಜನಕ್ಕೆ ಬರಬಹುದು ಎಂಬ ಉದ್ದೇಶದಿಂದ, ಕ್ರಾಂತಿಕಾರಿ ಭಾರತೀಯ ವಿದ್ಯಾರ್ಥಿ ಸಂಘಕ್ಕೆ ಸೇರಿದರು. ಅನಂತರ ತಾವೇ ಭಾರತೀಯ ವಿದ್ಯಾರ್ಥಿಗಳ ಸಂಘವನ್ನೂ ಹುಟ್ಟುಹಾಕಿ ಅದರ ಕಾರ್ಯದರ್ಶಿಯಾಗಿ ಕೆಲಸಮಾಡಿದರು.
೧೯೧೬ರಲ್ಲಿ Bar-at-Law ಪದವಿಯೊಂದಿಗೆ ಸ್ವದೇಶಕ್ಕೆ ಹಿಂತಿರುಗಿದ ಗಿರಿಯವರು ಹುಟ್ಟೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದರು. ೧೯೧೭ರಲ್ಲಿ ಸರಸ್ವತೀ ಬಾಯಿಯವರೊಂದಿಗೆ ವಿವಾಹವಾಯಿತು. ಆ ಸಮಯದಲ್ಲಿ ಸ್ವಾತಂತ್ರ್ಯ ಚಳವಳಿಯ ಕಾವು ಏರಿತ್ತು. ಗಿರಿಯವರು ಕಾಂಗ್ರೆಸ್ ಸದಸ್ಯರಾದರು. ಅನಿಬೆಸೆಂಟರ ಹೋಂ ರೂಲ್ ಆಂದೋಳನಕ್ಕೆ ಸೇರಿದರು. ೧೯೨೧ರಲ್ಲಿ ಗಾಂಧೀಜಿಯವರ ಕರೆಗೆ ಓಗೊಟ್ಟು, ಕೈ ತುಂಬ ವರಮಾನ ತರುತ್ತಿದ್ದ ವಕೀಲ ವೃತ್ತಿಯನ್ನು ಬಿಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಐರ‍್ಲೆಂಡ್‌ನಲ್ಲಿದ್ದಾಗ ಅವರ ಮೇಲೆ ಗಾಢ ಪರಿಣಾಮ ಬೀರಿದ್ದ ಕಾರ್ಮಿಕ ಸಂಘಟನೆಯ ತತ್ವಗಳು, ಭಾರತದಲ್ಲಿಯೂ ಅಂತಹ ಸಂಘಟನೆಗಳನ್ನು ಬೆಳೆಸಲು ಅವರಿಗೆ ಸ್ಫೂರ್ತಿ ನೀಡಿದವು. Trade Union Movement ಜನಕನೆಂದೇ ಪ್ರಸಿದ್ಧರಾದ N.M. ಜೋಷಿಯವರೊಂದಿಗೆ ಕೈಜೋಡಿಸಿದರು. ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡಲು ತಮ್ಮನ್ನು ಅರ್ಪಿಸಿಕೊಂಡರು. ೧೯೨೩ರಲ್ಲಿ ಅಖಿಲಭಾರತ ರೈಲ್ಷೇ ಕೆಲಸಗಾರರ ಸಂಘದ ಸ್ಥಾಪನೆಗೆ ಶ್ರಮಿಸಿ, ಅದರ ಮುಂದಾಳತ್ವ ವಹಿಸಿ, ಅದನ್ನು ಮುನ್ನಡೆಸಿದರು. ೧೯೨೬ ಮತ್ತು ೧೯೪೨ರಲ್ಲಿ ಅಖಿಲಭಾರತ Trade Union Congress(AITUC) ನ ಅಧ್ಯಕ್ಷರಾಗಿದ್ದರು.೧೯೨೭ರಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ AITUC ಯನ್ನು ಗಿರಿಯವರೇ ಪ್ರತಿನಿಧಿಸಿದ್ದರು.ಸುಮಾರು ೪೦ ವರ್ಷಗಳ ಕಾಲ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಯ ಜೊತೆ ಸಂಪರ್ಕ ಇರಿಸಿಕೊಂಡಿದ್ದರು.
ಗಿರಿಯವರು ಸಕ್ರಿಯ ರಾಜಕಾರಣಿಯಾಗಿ, ಸಾರ್ವಜನಿಕ ಸೇವಾರಂಗದಲ್ಲಿ ವಿವಿಧ ರೀತಿಯ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೇಂದ್ರ ಸಂಸತ್ತಿನ ಸದಸ್ಯತ್ವ, ಮದರಾಸ್ ಪ್ರಾಂತ್ಯದ ವಿಧಾನ ಪರಿಷತ್ತಿನ ಸದಸ್ಯತ್ವ ಹಾಗೂ ಅಲ್ಲಿನ ಮಂತ್ರಿ ಪದವಿ, ಅಖಿಲ ಭಾರತ ಕಾಂಗ್ರೆಸ್‌ನ ಅಂಗ ಸಂಸ್ಥೆಯಾಗಿದ್ದ ರಾಷ್ಟ್ರೀಯ ಯೋಜನಾ ಸಮಿತಿ ಸಂಚಾಲಕತ್ವ-ಇವು ಅವರು ನಿರ್ವಹಿಸಿದ ಕೆಲವು ಪ್ರಮುಖ ಹುದ್ದೆಗಳು. ಭಾರತ ಸ್ವತಂತ್ರವಾದ ಮೇಲೆ ಸಿಲೋನಿನಲ್ಲಿ(ಈಗಿನ ಶ್ರೀಲಂಕಾ)ಭಾರತದ ಪ್ರಪ್ರಥಮ ರಾಯಭಾರಿಯಾದರು. ಲೋಕಸಭೆಗೆ ಆಯ್ಕೆಯಾದ ಮೇಲೆ, ಕೇಂದ್ರ ಕಾರ್ಮಿಕ ಮಂತ್ರಿಯಾದರು. ೧೯೫೭ರಿಂದ ೧೯೬೭ರ ಅವಧಿಯಲ್ಲಿ ಅವರು ಉತ್ತರಪ್ರದೇಶ, ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ವಿಶಿಷ್ಟ ಸೇವೆ ಸಲ್ಲಿಸಿದರು.
೧೯೬೭ರಲ್ಲಿ ಡಾ|| ಜಾಕೀರ್ ಹುಸೇನ್ ರಾಷ್ಟ್ರಪತಿಯಾಗಿ ಆಯ್ಕೆಯಾದ್ದರಿಂದ ತೆರವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಗಿರಿಯವರು ಆಯ್ಕೆಯಾದರು.೧೯೬೯ರಲ್ಲಿ ಡಾ|| ಜಾಕೀರ್ ಹುಸೇನ್ ಅವರ ಅಕಾಲಿಕ ನಿಧನದಿಂದಾಗಿ ರಾಷ್ಟ್ರಪತಿ ಸ್ಥಾನ ತೆರವಾಯಿತು. ಗಿರಿಯವರು ಕಾರ್ಯವಾಹಕ ರಾಷ್ಟ್ರಪತಿಯಾಗಿ ೧೯೬೯ರ ಮೇ ೩ನೇ ತಾರೀಖಿನಿಂದ ಜುಲೈ ೧೯ನೇ ತಾರೀಖಿನವರೆಗೆ ಕಾರ್ಯ ನಿರ್ವಹಿಸಿದರು. ಅದುವರೆಗೆ ಉಪರಾಷ್ಟ್ರಪತಿಗೆ ರಾಷ್ಟ್ರಪತಿಯಾಗಿ ಬಡತಿ ನೀಡುವ ಅಲಿಖಿತ ಪದ್ಧತಿ ನಡೆದು ಬಂದಿತ್ತು.ಆದರ ಗಿರಿಯವರಿಗೆ ಹಾಗೆ ಬಡತಿ ನೀಡಲಿಲ್ಲ. ಚುನಾವಣೆ ನಡೆಸಲು ನಿರ್ಧರಿಸಲಾಯಿತು. ತಕ್ಷಣ,ಗಿರಿಯವರು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯಲ್ಲಿ ಸ್ಪರ್ಧಿಸಿದರು ಹಾಗೂ ಗೆದ್ದು ಬಂದರು. ೧೯೬೯ ರ ಆಗಸ್ಟ್ ೨೪ರಂದು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಐತಿಹಾಸಿಕವಾದ ಈ ಪ್ರಕರಣದಿಂದಾಗಿ ಗಿರಿಯವರು ಮತ್ತು ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಮಧ್ಯೆ ವಿಶಿಷ್ಟವಾದ ರಾಜಕೀಯ ಸಂಬಂಧ ಬೆಳೆಯಿತು. ಗಿರಿಯವರು ಎಂದಿನಂತೆ ಇಂದಿರಾಗಾಂಧಿಯವರನ್ನು “ನನ್ನ ಮಗಳು” ಎಂದೇ ಕರೆಯುತ್ತಿದರು. ಸಂವಿಧಾನದ ಪ್ರಕಾರ, ರಾಷ್ಟ್ರಪತಿಯವರ ಅಧಿಕಾರದ ಅಧಿಕಾರದ ವ್ಯಾಪ್ತಿ ಏನು? ಅದರ ಪರಿಮಿತಿಗಳೇನು? ರಾಷ್ಟ್ರಪತಿ, ಪ್ರಧಾನಿಯವರ ಸಂಬಂಧ ಹೇಗಿರಬೇಕು? ಎಂಬ ಬಗ್ಗೆ ನಿಚ್ಚಳವಾದ ಅರಿವಿದ್ದ ಗಿರಿಯವರು ಅದಕ್ಕೆ ತಕ್ಕಂತೆ ನಡೆದುಕೊಂಡರು.
ಗಿರಿಯವರು ಆತ್ಮಕಥೆಯ ಜೊತೆಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ವಿಚಾರ ಪೂರ್ಣ, ಗ್ರಂಥಗಳನ್ನೂ ಬರೆದಿದ್ದಾರೆ. ಭಾರತದ ಹಾಗೂ ಇತರ ಕೆಲವು ದೇಶಗಳ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ. ೧೯೭೫ರಲ್ಲಿ “ಭಾರತರತ್ನ” ಪ್ರಶಸ್ತಿಯನ್ನೂ ಅವರಿಗೆ ನೀಡಿ ಗೌರವಿಸಲಾಯಿತು.
೧೯೭೪ರ ಆಗಸ್ಟ್ ೨೩ರಂದು ರಾಷ್ಟ್ರಪತಿಯಾಗಿ ನಿವೃತ್ತರಾದ ಮೇಲೆ ಮದ್ರಾಸಿನಲ್ಲಿ (ಚೆನ್ನೈ)ನೆಲೆಸಿದ್ದ ಗಿರಿಯವರು ೧೯೮೦ರ ಜೂನ್ ೨೪ರಂದು ನಿಧನರಾದರು.
ವರಾಹಗಿರಿ ವೆಂಕಟಗಿರಿಯವರು ವಿ.ವಿ.ಗಿರಿ ಎಂತಲೇ ಪ್ರಖ್ಯಾತರು. ಇವರದು ಬಹುಮುಖ ವ್ಯಕ್ತಿತ್ವ. ಸ್ವಾತಂತ್ರ್ಯ ಯೋಧ, ನ್ಯಾಯವಾದಿ, ಕಾರ್ಮಿಕರ ಮುಂದಾಳು, ಮಂತ್ರಿ, ರಾಯಭಾರಿ, ರಾಜ್ಯಪಾಲ, ಉಪರಾಷ್ಟ್ರಪತಿ, ರಾಷ್ಟ್ರಪತಿ-ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದವರು ಇವರು.ಕಾರ್ಮಿಕರ ಹಿತಾಸಕ್ತಿ ಇವರ ಹೃದಯಕ್ಕೆ ತೀರ ಹತ್ತಿರವಾಗಿದ್ದ ಕಾಳಜಿ. ಒಂದು ದೃಷ್ಟಿಯಿಂದ ನೋಡಿದರೆ, ಇವರ ಎಲ್ಲ ಸಾಧನೆಗಳಿಗೂ ಭದ್ರ ಬುನಾದಿ ಒದಗಿಸಿದ್ದು, ಕಾರ್ಮಿಕರ ಸಂಘಟನೆ ಮತ್ತು ಅವರ ಹಿತರಕ್ಷಣೆಗಾಗಿ ಇವರು ಕೈಗೊಂಡ ಕಾರ್ಯಗಳೇ ಎಂದು ಹೇಳಬಹುದು.