ಇಪ್ಪತ್ತನೆಯ ಶತಮಾನದಲ್ಲಿ ವಿಜ್ಞಾನ ಅದ್ಭುತವಾಗಿ ಮುಂದುವರೆದಿದೆ. ಹಿಂದೆ ಮನುಷ್ಯ ಎಂದೂ ಮಾಡಲು ಸಾಧ್ಯವಾಗದ್ದನ್ನು ಈ ಶತಮಾನದಲ್ಲಿ ಮಾಡಿದ್ದಾನೆ. ಚಂದ್ರನನ್ನು ತಲುಪಿದ್ದು ಒಂದು. ಹಾಗೆಯೇ ಉಪಗ್ರಹಗಳನ್ನು ಭೂಮಿಯ ಸುತ್ತ ಸುತ್ತಲು ಆಕಾಶದಲ್ಲಿ ಬಿಡುವುದು. ಚಂದ್ರ ಭೂಮಿಗೆ ಉಪಗ್ರಹ; ಭೂಮಿಯ ಸುತ್ತ ಕೋಟ್ಯಂತರ ವರ್ಷಗಳಿಂದ ಸುತ್ತುತ್ತಿದೆ. ಇದು ನಿಸರ್ಗವೇ ಸೃಷ್ಟಿಸಿದೆ ಉಪಗ್ರಹ. ಈ ಶತಮಾನದಲ್ಲಿ ಮನುಷ್ಯ ಕೃತಕ ಉಪಗ್ರಹಗಳನ್ನು ಹಾರಿಸಿದ್ದಾನೆ. ರಷ್ಯನ್‌ರು ೧೯೫೭ರ ಅಕ್ಟೋಬರ್ ೪ರಂದು ಭೂಮಿಯ ಸುತ್ತ, ತಾನೇ ಸುತ್ತುವ ‘ಸ್ಟುಟ್ನಿಕ್’ (ಎಂದರೆ ಸಹಪ್ರವಾಸಿ) ಉಪಗ್ರಹವನ್ನು ಹಾರಿಸಿದ್ದು ಈ ಪ್ರಯತ್ನದಲ್ಲಿ ಮೊದಲ ಜಯ. ಇಂತಹ ಉಪಗ್ರಹಗಳಿಂದ ನಮ್ಮಸುತ್ತಲಿನ ಜಗತ್ತನ್ನು ಕುರಿತು ಎಷ್ಟೋ ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು. ಇವು ಭೂಮಿಯ ಸುತ್ತ ಇರುವ ಮೇಘರಾಶಿಗಳ ಮತ್ತಿತರ ಚಿತ್ರಗಳನ್ನು ತೆಗೆದುಕೊಳ್ಳಬಲ್ಲವು. ಟೆಲಿಫೋನ್, ಟೆಲಿವಿಷನ್ ಇಂತಹ ಸಂಪರ್ಕ ವ್ಯವಸ್ಥೆಗಳಿಗೆ ಇವು ನೆರವಾಗುತ್ತವೆ. ಉಪಗ್ರಹಗಳು ಅಮೂಲ್ಯವಾದವು.

ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಮಾಡಿ ಹಾರಿಸಿದ ಎರಡನೇ ಉಪಗ್ರಹದ ಹೆಸರು ನಿಮಗೆ ಜ್ಞಾಪಕ ಇರಬೇಕಲ್ಲವೆ? ಈ ಉಪಗ್ರಹಕ್ಕೆ ‘ಭಾಸ್ಕರ’ ಎಂದು ಹೆಸರು. ಇದಕ್ಕೂ ಮುಂಚೆ ಮತ್ತೊಂದು ಉಪಗ್ರಹವನ್ನು ಮಾಡಿ ಹಾರಿಸಿದ್ದರು. ಅದರ ಹೆಸರು ‘ಆರ‍್ಯಭಟ’ ಎಂದು. ಈ ಉಪಗ್ರಹಗಳಿಗೆ ಈ ವಿಧವಾದ ಹೆಸರುಗಳನ್ನೇಕೆ ಇಟ್ಟಿದ್ದಾರೆ? ಆಧುನಿಕವಾದ ಗೋಪಾಲ, ಆನಂದ, ಮೋಹನ ಮುಂತಾದ ಹೆಸರುಗಳನ್ನು ಬಿಟ್ಟು ಈ ಪುರಾತನವಾಗಿ ಕಾಣುವ ಹೆಸರುಗಳನ್ನು ಏಕೆ ಇಟ್ಟಿದ್ದಾರೆ? ಈ ಹೆಸರುಗಳನ್ನು ಆರಿಸಲು ಒಳ್ಳೆಯ ಕಾರಣವಿದೆ. ಈ ಉಪಗ್ರಹಗಳ ಹೆಸರಿನ ಮನುಷ್ಯರು ಸಾಮಾನ್ಯರಲ್ಲ. ಆಧುನಿಕ ಗಣಿತಶಾಸ್ತ್ರವನ್ನು ಅಭ್ಯಾಸಮಾಡಿ ಹಾಗೂ ಭಾರತೀಯ ಪುರಾತನ ಗಣಿತ ಶಾಸ್ತ್ರಾಧ್ಯಯನ ಮಾಡಲು ಸಂಸ್ಕೃತ ಭಾಷೆಯನ್ನು ಕಲಿತು ಆ ಭಾಷೆಯಲ್ಲಿರತಕ್ಕ ಗಣಿತಶಾಸ್ತ್ರ ಗ್ರಂಥಗಳನ್ನು ಅಭ್ಯಾಸ ಮಾಡಿರುವವರಿಗೆ ಈ ಮೇಲ್ಕಂಡ ಹೆಸರುಗಳು ಅತಿ ಗೌರವಾನ್ವಿತವಾದವು. ಆರ‍್ಯಭಟ, ಭಾಸ್ಕರ, ಬ್ರಹ್ಮಗುಪ್ತ, ಸವಾಯ್ ಜಯಸಿಂಹ ಮುಂತಾದ ಭಾರತೀಯರು ಪ್ರಪಂಚದಲ್ಲೇ ಪ್ರಖ್ಯಾತರಾದ ಗಣಿತ ಶಾಸ್ತ್ರಜ್ಞರು. ಆಧುನಿಕ ಗಣಿತ ಶಾಸ್ತ್ರದಲ್ಲೂ ಕ್ಲಿಷ್ಟವಾದ ಅನೇಕ ಸಮಸ್ಯೆಗಳನ್ನು ಅವರು ಬಹು ಸುಲಭವಾದ ಮಾರ್ಗಗಳಲ್ಲಿ ಬಿಡಿಸಿ ಅವುಗಳನ್ನು ಪ್ರಚಾರಕ್ಕೆ ತಂದಿದ್ದವರು, ಅದರಲ್ಲೂ ಖಗೋಳ ಶಾಸ್ತ್ರಾಧ್ಯಯನಕ್ಕೆ ಅತ್ಯಂತ ಪ್ರಾಶಸ್ತ್ಯವನ್ನು ಕೊಟ್ಟು, ಗಣಿತ ನಿಯಮಗಳನ್ನು ಅದಕ್ಕೆ ಅಳವಡಿಸಿಕೊಂಡು, ಕಾಲಗಣನೆಯನ್ನು ಮಾಡಿ, ಆಧುನಿಕ ಜ್ಯೋತಿರ್ವಿಜ್ಞಾನಕ್ಕೆ ತಳಹದಿಯನ್ನು ಹಾಕಿದವರು. ಈ ಹಿರಿಯರು ಯೂರೋಪಿನಲ್ಲಿ ಖಗೋಳ ವಿಜ್ಞಾನದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದ ಕೊಪರ್ನಿಕಸ್ (೧೪೭೩-೧೫೪೩) ಸೂರ‍್ಯನೇ ಸೌರವ್ಯೂಹದ (ಸೂರ್ಯನು ಮುಖ್ಯವಾಗಿರುವ ಗ್ರಹಗಳ ವ್ಯವಸ್ಥೆಯ) ಕೇಂದ್ರ ಎಂದು ಪ್ರತಿಪಾದಿಸಿದನೆಂದು ಪ್ರಸಿದ್ಧಿ. ಆರ‍್ಯಭಟ ಅವನಿಗಿಂತ ಒಂದು ಸಾವಿರ ವರ್ಷಗಳ ಹಿಂದೆಯೇ ಈ ವಾದವನ್ನು ಪ್ರತಿಪಾದಿಸಿದ ಗಣಿತಾಚಾರ್ಯರು. ಹಾಗೆಯೇ ಭಾಸ್ಕರಾಚಾರ್ಯರು ಹನ್ನೊಂದನೆಯ ಶತಮಾನದಲ್ಲಿದ್ದರು. ಭಾರತೀಯ ಗಣಿತಶಾಸ್ತ್ರಕ್ಕೆ ಸ್ವರ್ಣಕಲಶದಂತಹ ಗಣಿತ ಗ್ರಂಥಗಳನ್ನು ರಚಿಸಿದರು. ಕ್ಲಿಷ್ಟವಾದ ಗಣಿತದ ಸಮಸ್ಯೆಗಳನ್ನು ಬಿಡಿಸಿದರು. ಸುಲಲಿತವಾದ ಶೈಲಿಯಲ್ಲಿ ಸರ್ವರಿಗೂ ಅರ್ಥವಾಗುವಂತೆ ಸಂಸ್ಕೃತ ಪದ್ಯರೂಪದ್ಲಲಿ “ಲೀಲಾವತಿ” “ಸಿದ್ಧಾಂತ ಶಿರೋಮಣಿ” ಮುಂತಾದ ಗ್ರಂಥವನ್ನು ೩೬ನೆಯ ವಯಸ್ಸಿನಲ್ಲಿ ಬರೆದರು. ಅವರು ಕರ್ನಾಟಕದವರು.

ವರಾಹ ಮಿಹಿರಾಚಾರ್ಯರು ಆರ‍್ಯಭಟ, ಭಾಸ್ಕರ ಮುಂತಾದವರ ಪಂಕ್ತಿಗೆ ಸೇರತಕ್ಕ ಮೇಧಾವಿಗಳಲ್ಲಿ ಒಬ್ಬರು.

ತಿಳಿದಿರುವ ವಿಷಯ ಕಡಿಮೆ

ಭಾರತದಲ್ಲಿ ಎಷ್ಟೋ ಮಂದಿ ಪ್ರತಿಭಾವಂತರು ಅದ್ಭುತವಾದ ಕೆಲಸಗಳನ್ನು ಮಾಡಿ ಹೆಸರೂ ಕೂಡ ಇಲ್ಲದಂತೆ ಆಗಿಹೋಗಿದ್ದಾರೆ. ಕೆಲವು ಪ್ರತಿಭಾವಂತರ ಹೆಸರುಗಳು ಉಳಿದಿರುವುದು ಅವರು ಬರೆದ ಪುಸ್ತಕಗಳಿಂದ. ವರಾಹ ಮಿಹಿರಾಚಾರ್ಯರ ವಿಚಾರವೂಹೀಗೆಯೇ. ಅವರು ರಚಿಸಲ್ಪಟ್ಟವೆಂದು ಹೇಳಲಾಗುತ್ತಿರುವ ಗ್ರಂಥಗಳು ದೊರೆತಿವೆ; ಅವರ ಬಗ್ಗೆ ಮತ್ತಾವ ವಿಷಯವೂ ಖಚಿತವಾಗಿ ತಿಳಿದುಬರುವುದಿಲ್ಲ. ಇದೇ ಕಾರಣದಿಂದಾಗಿ, ಅವರಿದ್ದ ಕಾಲ ವಿವಾದಾಸ್ಪತವದವಾಗಿದೆ. ವಿದ್ವಾಂಸರು ಆಚಾರ್ಯರ ಕಾಲವನ್ನು ಅನೇಕ ವಿಧವಾಗಿ ನಿರ್ಧರಿಸಿದ್ದಾರೆ. ವರಾಹ ಮಿಹಿರಾಚಾರ್ಯರು ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ನವಮಣಿಗಳಲ್ಲೊಬ್ಬರಾಗಿದ್ದರೆಂದು ಈ ಕೆಳಗಿನ ಶ್ಲೋಕದಿಂದ ತಿಳಿದು ಬರುತ್ತದೆ.

ಧ್ವನಂತರಿ ಕ್ಷಪಣಕಾಮರಸಿಂಹ
ಭೇತಾಳ ಶಂಖ ಘಟಕರ್ಪರ ಕಾಳಿದಾಸಾ:|
ಖ್ಯಾತೋವರಾಹಮಿಹಿರೋನೃಪತೇಸ್ಸಭಾಯಾಮ್
ರತ್ನಾನಿ ವೈ ವರರುಚಿರ್ನವ ವಿಕ್ರಮಸ್ಯ||

ಆದರೆ ವಿಮರ್ಶಕರು,ಧನ್ವಂತರಿ, ಕ್ಷಪಣಕ, ಅಮರಸಿಂಹ, ಘಟಕರ್ಪರ, ಕಾಳಿದಾಸ, ವರರುಚಿ, ಭೇತಾಳಭಟ್ಟ, ಶಂಖಭಟ್ಟ ಇವರೆಲ್ಲರೂ ವರಹಾಮಿಹಿರರ ಸಮಕಾಲೀನರಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಕೆಲವು ವಿದ್ವಾಂಸರು ವರಾಹ ಮಿಹಿರಾಚಾರ್ಯರ ಗಣಿತ ಕೃತಿಗಳ ಆಧಾರದ ಮೇಲೆ ಅವರು ಕ್ರಿಸ್ತಶಕ ಆರನೆಯ ಶತಮಾನದಲ್ಲಿದ್ದವರೆಂದು ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಆಚಾರ್ಯರ ಕಾಲ ಖಚಿತವಾಗಿ ಇನ್ನೂ ನಿರ್ಧಾರವಾಗಿಲ್ಲ.

ಅವರ ಜನ್ಮಸ್ಥಳದ ವಿಚಾರವಾಗಿ ಆಚಾರ್ಯರೇ ತಮ್ಮಗ್ರಂಥಗಳಲ್ಲಿ ತಿಳಿಸಿರುವಂತೆ, ಅವರು ಅವಂತಿ (ಈಗಿನ ಉಜ್ಜಯನಿ) ನಗರದವರು. ಆಚಾರ್ಯರು ಆದಿತ್ಯದಾಸ ಎಂಬವರ ಮಕ್ಕಳೆಂದೂ, ಅವರ ತಂದೆಯವರಿಂದ ಜ್ಯೋತಿಶಾಸ್ತ್ರವನ್ನು ಕಲಿತರೆಂದೂ ತಿಳಿಸಿರುತ್ತಾರೆ. ಅವರು ಕಾಪಿತ್ಥಕ ಎಂಬ ಸ್ಥಳದಲ್ಲಿ ಸೂರ‍್ಯನಿಂದ ವರಪಡೆದವರಾಗಿ, ನವಗ್ರಹಗಳ ಸಂಬಂಧವಾದ ಜ್ಯೋತಿಶ್ಯಾಸ್ತ್ರವನ್ನು ಕಲಿತರರೆಂದು ತಿಳಿಸಿರುತ್ತಾರೆ.

ವರಾಹಮಿಹಿರರ ಹೆಸರು

‘ವರಹಾ ಮಿಹಿರ’ ಎಂಬ ಹೆಸರು ಅಪರೂಪವಲ್ಲವೆ? ಇಂತಹ ಹೆಸರುಗಳನ್ನು ಆಧುನಿಕರು ಇಟ್ಟುಕೊಳ್ಳಲು ಒಪ್ಪುವುದು ವಿರಳ. ಆದರೆ ಈ ಹೆಸರು ಇತಿಹಾಸದಲ್ಲಿ ಅಷ್ಟು ವಿರಳವಲ್ಲವೆಂದು ತಿಳಿದುಬರುತ್ತದೆ. ಶಿಲಾಶಾಸನಗಳಿಂದ ವರಹಾ, ವರಾಹ ದಾಸ, ವರಾಹ ದೇವ, ವರಾಹ ದತ್ತ, ವರಾಹ ಸಿಂಹ ಎಂಬ ಹೆಸರುಗಳು ಸಾಮಾನ್ಯವಾಗಿ ಬಳಕೆಯಲ್ಲಿದ್ದುವೆಂದು ಕಾಣಬರುತ್ತದೆ. ಈ ಹೆಸರು ಆಚಾರ್ಯರಿಗೆ ಬರಲು ಕಾರಣವನ್ನು ಕುರಿತು ಅನೇಕ ದಂತಕಥೆಗಳು ಪ್ರಚಲಿತವಾಗಿವೆ. ಒಂದು ಕಥೆಯ ಪ್ರಕಾರ ಆದಿತ್ಯದಾಸ ಮತ್ತು ಸತ್ಯವತಿ ಎಂಬುವರು ಕಪಿತ್ಥ ಎಂಬ ಅಗ್ರಹಾರದ ದಂಪತಿಗಳು. ಅವರಿಗೆ ಐವತ್ತು ವರ್ಷಗಳ ವೇಳೆಗೆ ಸೂರ‍್ಯದೇವನ ಅನುಗ್ರಹದಿಂದ ಮಗನು ಹುಟ್ಟಿದ. ಸೂರ‍್ಯನಿಗೆ ಸಂತೋಷವಾಗುವಂತೆ ಮಗನಿಗೆ “ಮಿಹಿರ” (ಸೂರ್ಯ) ಎಂದು ನಾಮಕರಣ ಮಾಡಿದರು. ಮಿಹಿರನ ಜ್ಯೋತಿಶ್ಯಾಸ್ತ್ರ ಪಾಂಡಿತ್ಯವನ್ನು ಮೆಚ್ಚಿದೊರೆಯಾದ ವಿಕ್ರಮಾದಿತ್ಯನು ಅವನನ್ನು ತನ್ನ ಆಸ್ಥಾನ ವಿದ್ವಾಂಸನನ್ನಾಗಿ ಮಾಡಿಕೊಂಡ. ದೊರೆ ವಿಕ್ರಮಾದಿತ್ಯನ ಮಗನಿಗೆ ಹದಿನೆಂಟು ವರ್ಷವಾದಾಗ ಹುಡುಗನನ್ನು ಒಂದು ಕಾಡುಹಂದಿ (ವರಾಹ) ಕೊಲ್ಲುವುದು ಎಂದು ಮಿಹಿರ ಭವಿಷ್ಯ ಹೇಳಿದ. ರಾಜನಿಗೆ ತುಂಬ ಚಿಂತೆ  ಆಯಿತು. ಹುಡುಗನನ್ನು ಉಳಿಸಲು ಸಾಧ್ಯವಾದ ಎಲ್ಲ ಎಚ್ಚರಿಕೆಯನ್ನು ರಾಜ ವಹಿಸಿದ. ಆದರೂ ಮಿಹಿರಾಚಾರ್ಯನ ಭವಿಷ್ಯವಾಣಿಯಂತೆ, ಹುಡುಗನನ್ನು ಒಂದು ಕಾಡುಹಂದಿ ಕೊಂದುಹಾಕಿತು. ಆ ಕಾರಣದಿಂದ ಮಿಹಿರಾಚಾರ್ಯರಿಗೆ ಅಂದಿನಿಂದ “ವರಾಹ ಮಿಹಿರಾಚಾರ್ಯ” ಎಂದು ಹೆಸರಾಯಿತು. ಈ ಕಥೆ ಸತ್ಯವೋ, ಅಲ್ಲವೋ ನಿರ್ಧರಿಸಲು ಸಾಧ್ಯವಾಗಿಲ್ಲ.

ತಂದೆಯಿಂದ ಜ್ಯೋತಿಶ್ಯಾಸ ಕಲಿತರು

ವರಹಾಮಿಹಿರಾಚಾರ್ಯರ ಪುಸ್ತಕಗಳು

 

ವರಾಹ ಮಿಹಿರಾಚಾರ್ಯರು ಅನೇಕ ಪುಸ್ತಕಗಳನ್ನು ಬರೆದಿರುವುದಾಗಿ ತಿಳಿದುಬಂದಿದೆ. ಅವೆಲ್ಲವೂ ಸಂಸ್ಕೃತ ಭಾಷೆಯಲ್ಲಿವೆ. ಅವರು ಬರೆದಿರುವ ಪುಸ್ತಕಗಳಲ್ಲಿ ಮೂರು ಪುಸ್ತಕಗಳು ಮಾತ್ರ ಬಹಳ ಬಳಕೆಯಲ್ಲಿವೆ. ಅವು ‘ಪಂಚಸಿದ್ದಾಂತಿಕ’ ‘ಬೃಹಜ್ಜಾತಕ’ ಮತ್ತು ‘ಬೃಹತ್ ಸಂಹಿತ

ಜ್ಯೋತಿಶಾಸ್ತ್ರವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಮೊದಲು ಸಂಬಂಧಪಟ್ಟ ಗಣಿತಭಾಗ, ಖಗೋಳ ವಿಜ್ಞಾನ ಮುಂತಾದುವನ್ನು ಅಭ್ಯಾಸ ಮಾಡಬೇಕು. ಅನಂತರ ಜಾತಕ ಭಾಗವನ್ನು ಕಲಿಯುತ್ತಾರೆ. ಈ ಎರಡು ಭಾಗಗಳನ್ನು ಅಭ್ಯಾಸ ಮಡಿದನಂತರ ತಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಫಲಭಾಗವನ್ನು ಕಲಿತು ಅಭ್ಯಾಸ ಮಾಡುತ್ತಾರೆ.

ವರಾಹ ಮಿಹಿರಾಚಾರ್ಯರು ಬರೆದಿರುವ ಮೇಲೆ ತಿಳಿಸಿದ ಮೂರು ಪುಸ್ತಕಗಳೂ ಈ ಜ್ಯೋತಿಶಾಸ್ತ್ರದ ಎರಡು ಭಾಗಗಳಿಗೂ ಬಹಳ ಉಪಯುಕ್ತವಾದ ಗ್ರಂಥಗಳಾಗಿವೆ. ಜ್ಯೋತಿಷ್ಯಕ್ಕೆ ಬೇಕಾದ ಗಣಿತ, ಖಗೋಳಶಾಸ್ತ್ರ ಇವುಗಳನ್ನು ಕಲಿಯಲು ಅವರ ಪಂಚಸಿದ್ದಾಂತ ಗ್ರಂಥವು ಬಹಳ ಉಪಯೋಗವಾಗುವುದು. ಜಾತಕ ಭಾಗವನ್ನು ಅಭ್ಯಾಸ ಮಾಡಲು ಅವರು ಬೃಹಜ್ಜಾತಕ ಎಂಬ ಪುಸ್ತಕವು ಬಹು ಪ್ರಯೋಜನವಾಗುವುದು. ಫಲಭಾಗವನ್ನು ಕಲಿತು ಪ್ರಯೋಗಕ್ಕೆ ತರಲು ಅವರ ಬೃಹತ್ ಸಂಹಿತ ಪುಸ್ತಕವು ಅತ್ಯುಪಯುಕ್ತವಾದ ಪುಸ್ತಕವಾಗಿದೆ.

ಅಷ್ಟೊಂದು ಉಪಯೋಗವಾಗಲು ಈ ಪುಸ್ತಕಗಳಲ್ಲಿ ಅಡಗಿರುವ ವಿಷಯಗಳಾದರೂ ಏನು? ಅವನ್ನು ತಿಳಿಯುವುದರಿಂದ ನಮಗೇನು ಉಪಯೋಗ?

ಸಿದ್ಧಾಂತಗಳು

ಸಿದ್ದಾಂತ ಎಂದರೆ ಅನೇಕ ಬಾರಿ ಪರೀಕ್ಷೆ ಮಾಡಿ ದೊರೆತ ತಿಳಿವಳಿಕೆ. ಉದಾಹರಣೆಗೆ-ಭೂಮಿ ಮತ್ತು ಇತರ ಗ್ರಹಗಳ ಚಲನೆಯನ್ನು ಪರಿಶೀಲಿಸೋಣ. ನಿತ್ಯವೂ ಬೆಳಿಗ್ಗೆ ಎದ್ದು ನಾವು ಅಂದಿನ ದಿನವನ್ನು ತಿಳಿಯುತ್ತೇವೆ- ಇಂದು ಸೋಮವಾರ, ಇಂದು ಮಂಗಳವಾರ ಹೀಗೆ. ಇವುಗಳ ಚಲಾವಣೆ ಹೇಗೆ ಬಂತು? ನಾವು ಮಾಡಬೇಕಾದ ಕೆಲಸಕಾರ್ಯಗಳನ್ನು ಖಚಿತವಾಗಿ ನಿರ್ಧರಿಸಲು ಕ್ಯಾಲೆಂಡರ್‌ನ ಉಪಯೋಗ ಪಡೆಯಬೇಕಾಗುತ್ತದೆ. ಆ ಕ್ಯಾಲೆಂಡರನ್ನು ಹೇಗೆ ಮಾಡುತ್ತಾರೆ? ಅದಕ್ಕೆ ಜ್ಯೋತಿಶಾಸ್ತ್ರದ ಜ್ಞಾನವಿರಬೇಕು.

ಭೂಮಿ ತನ್ನ ಅಕ್ಷದ ಮೇಲೆ ಒಂದು ಸುತ್ತು ಪೂರ್ಣವಾಗಿ ಸುತ್ತುವುದರಿಂದ ಭೂಮಿಯ ಮೇಲೆ ಇರುವ ಜನರಿಗೆ ಒಂದು ದಿನ ಆಗುತ್ತದೆ. ಭೂಮಿ ತನ್ನ ಅಕ್ಷದ ಮೇಲೆ ಮಾತ್ರವಲ್ಲ, ಹಾಗೆಯೇ ಸೂರ‍್ಯನ ಸುತ್ತಲೂ ಪ್ರದಕ್ಷಿಣೆ ಮಾಡುತ್ತದೆ. ಹೀಗೆ ಒಂದು ಪ್ರದಕ್ಷಿಣೆಯನ್ನು ಮುಗಿಸಿದಾಗ ಒಂದು ವರ್ಷ. ಈ ಬಗೆಯ ಕಾಲಗಣನೆಯನ್ನು ನಮ್ಮ ಹಿರಿಯರು ಬಹಳ ಇಂದಿನಿಂದ ಕಂಡುಕೊಂಡು ಕಾಲಕಾಲಕ್ಕೆ ತಕ್ಕಂತೆ ಹಬ್ಬ ಹರಿದಿನಗಳನ್ನೂ, ನಿತ್ಯಕಾರ್ಯಗಳನ್ನೂ ಆಚರಿಸುತ್ತಾ ಬಂದಿದ್ದಾರೆ. ಈ ಪ್ರಕಾರದ ಕಾಲಗಣನೆ ತಿಳಿಯದೆಹೋದರೆ ಕಾಲಕ್ಕೆ ತಕ್ಕಂತೆ ಕೆಲಸಕಾರ್ಯಗಳನ್ನೂ, ಹಬ್ಬಗಳನ್ಣು ಆಚರಿಸಲಾಗುವುದಿಲ್ಲ. ಭಾದ್ರಪದ ಶುಕ್ಲ ಚೌತಿ ಗಣಪತಿ ಹಬ್ಬ; ಅಶ್ವಯುಜ ಶುಕ್ಲ ಸಪ್ತಮಿ ಸರಸ್ವತೀ ಪೂಜೆ; ಆಶ್ವಯುಜ ಶುಕ್ಲ ಅಷ್ಟಮಿ ದುರ್ಗಾಪೂಜೆ ಇತ್ಯಾದಿ ಇತ್ಯಾದಿ. ಮುಂದಿನ ತಿಂಗಳು ಇಂತಹ ದಿನ ಇಂತಹ ವಾರ ಊರಿಗೆ ಹೋಗುತ್ತೇನೆ, ಇಂತಹ ದಿನ ಸಾಮಾನು ಸರಬರಾಜು ಮಾಡುತ್ತೇನೆ, ಇಷ್ಟು ವರ್ಷ ಇಲ್ಲಿ ಕೆಲಸ-ಪ್ರತಿ ತಿಂಗಳ ಮೊದಲನೆ ದಿನ ಸಂಬಳ, ಇಂತಹ ಕಾಲದಲ್ಲಿ ಮಳೆ ಬರುತ್ತದೆ ಇವೆಲ್ಲ ನಮ್ಮ ಜೀವನದಲ್ಲಿ ಅಗತ್ಯವಾದ ಲೆಖ್ಕಾಚಾರಗಳಲ್ಲವೆ? ಇವೆಲ್ಲ ಲೆಖ್ಕಾಚಾರಗಳಿಗೆ ಜ್ಯೋತಿಶಾಸ್ತ್ರ ಅಗತ್ಯ. ವರ್ಷದ ಭಾಗಗಳನ್ನು ತಿಳಿಯಲು ಮತ್ತು ಕಾಲವನ್ನು ಸರಿಯಾಗಿ ಅಳೆಯಲು ಗಣಿತ ಮತ್ತು ಖಗೋಳ ಶಾಸ್ತ್ರಜ್ಞಾನ ಅತ್ಯವಶ್ಯಕ.

ಪಂಚಸಿದ್ದಾಂತಿಕ

ಈ ಕಾಲಗಣನಾ ವಿಚಾರವನ್ನು ತಿಳಿಸುವ ಮತ್ತು ಗಣನೆಯನ್ನು ಹೇಗೆ ಮಾಡಬೇಕೆಂದು ಹೇಳುವ ಶಾಸ್ತ್ರಪರಂಪರೆಗೆ ಸಿದ್ದಾಂತಗಳು ಮುಖ್ಯವಾದ ಗ್ರಂಥಗಳು. ಸಿದ್ದಾಂತ ಪುಸ್ತಕಗಳು ಹಲವಿವೆ. ಉತ್ತಮವಾದ ಐದು ಸಿದ್ದಾಂತ ಪುಸ್ತಕಗಳನ್ನು ಕಲೆಹಾಕಿ ಸುಲಭ ರೀತಿಯಲ್ಲಿ ಅರ್ಥವಾಗುವಂತೆ ವರಹಾ ಮಿಹಿರಾಚಾರ್ಯರು ತಮ್ಮ ‘ಪಂಚಸಿದ್ದಾಂತಿಕ’ ಪುಸ್ತಕವನ್ನು ಬರೆದಿರುತ್ತಾರೆ.

ಆ ಐದು ಸಿದ್ದಾಂತಗಳಲ್ಲೂ ಅತ್ಯಮೂಲ್ಯವಾದುದು “ಸೂರ್ಯ ಸಿದ್ದಾಂತ” ಎಂಬುದು. ಇದು ಹಿಂದೂ ಖಗೋಳ ಶಾಸ್ತ್ರಕ್ಕೆ ರತ್ನಪ್ರಾಐವಾಗಿದೆ. ಇಂದಿಗೂ ನಮ್ಮಲ್ಲಿ ನಿತ್ಯ ಬಳಕೆಯಲ್ಲಿರತಕ್ಕ ಪಂಚಾಂಗಗಳನ್ನು ಬರೆಯಬೇಕಾದರೆ ಈ ಸೂರ್ಯ ಸಿದ್ದಾಂತವೇ ಆಧಾರ. ನೀವು ಪಂಚಾಗದ ಮೇಲೆ “ಸೂರ್ಯ ಸಿದ್ಧಾಂತ ರೀತ್ಯಾ” ಎಂದು ಬರೆದಿರುವುದನ್ನು ನೋಡಿರಬಹುದು. ಹಾಗೂ ಕೆಲವು ಪಂಚಾಂಗಗಳ ಮೇಲೆ “ಸೂರ್ಯ ಸಿದ್ದಾಂತ, ಆರ‍್ಯಭಟ, ವಾಕ್ಯ, ದೃಗ್ಗಣಿತ ಇವು ನಾಲ್ಕು ಅಡಕವಾಗಿವೆ” ಎಂದೂ ಕಾಣಬಹುದು. ಹೀಗೆ ಪಂಚಾಂಗಗಳನ್ನು ಸಿದ್ದಗೊಳಿಸಲು ಈ ಸಿದ್ದಾಂತದ ವಿಚಾರಗಳು ಉಪಯುಕ್ತವಾಗಿವೆ. ಈ ಗ್ರಂಥಗಳಿಂದ ಪಂಚಾಗಗಳನ್ನು ಸಿದ್ದಗೊಳಿಸುವುದಕ್ಕೆ ಮಾತ್ರ ಪ್ರಯೋಜನ ಎಂದು ತಿಳಿಯಬಾರದು. ವೀಕ್ಷಣಾಲಯಗಳಿಂದ ಪ್ರಕಾಶಪಡಿಸುವ ಆಧುನಿಕವಾದ ಪಂಚಾಗ (ಆಲ್ಮನಕ್) ಗಳ ಕಲ್ಪನೆಗೂ ಈ ಸಿದ್ದಾಂತದಲ್ಲಿ ಅಡಗಿರುವ ಅನೇಕ ವಿಚಾರಗಳು ಉಪಯೋಗಕ್ಕೆ ಬರುತ್ತವೆ. ಈ ಆಲ್ಮನಕ್‌ಗಳು ಹಡಗುಗಳ ಪ್ರಯಾಣಕ್ಕೆ ಮತ್ತು ವಿಮಾನಗಳ ಸಂಚಾರ ನಿರ್ಧಾರಕ್ಕೆ ಹಾಗೂ ಹವಾಮಾನವನ್ನು ತಿಳಿಯುವುದಕ್ಕೆ ಅತ್ಯುಪಯುಕ್ತವಾಗಿವೆ. “ಆಲ್ಮನಕ್” ಕೇವಲ ಪಾಶ್ಚಿಮಾತ್ಯ ರೀತಿಯಲ್ಲಿ ಬರೆಯಲ್ಪಡುವ ನಮ್ಮ ಹಿಂದೂಗಳ ಪಂಚಾಗದಂತಹ ಪಂಚಾಂಗ ಎಂದು ಸ್ಥೂಲವಾಗಿ ತಿಳಿಯಬಹುದು.

ಪಂಚಾಂಗ ಎಂದರೇನು? ಕಾಲವಿಭಜನೆಗೆ ಉಪಯೋಗವಾಗುವ ಐದು ವಿಧವಾದ ಕಲನ ಸಾಮಗ್ರಿ (ಪಂಚ ಅಂಗಗಳಿಂದ ಕೂಡಿದ್ದು) ಎಂದು ತಿಳಿಯಬಹುದು. ಅವಾವುವೆಂದರೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ. ಚಂದ್ರನು ಯಾವ ನಕ್ಷತ್ರದಲ್ಲಿದ್ದಾಗ ಪೌರ್ಣಿಮೆ (ಹುಣ್ಣಿಮೆ) ಯಾಗುವುದೋ, ಆ ತಿಂಗಳನ್ನು ಆ ನಕ್ಷತ್ರದ ಹೆಸರಿನಿಂದ ಕರೆಯಲಾಗಿದೆ. ಉದಾಹರಣೆಗೆ ಚಿತ್ತಾನಕ್ಷತ್ರದಲ್ಲಿ ಹುಣ್ಣಿಮೆಯಾಗುವುದರಿಂದ ಈ ಮಾಸಕ್ಕೆ ಚೈತ್ರಮಾಸ ಎಂದು ಹೆಸರು ಹಾಗೆಯೇ ವೈಶಾಖ, ಜ್ಯೇಷ್ಠ ಇತ್ಯಾದಿ. ಎರಡೆರಡು ಮಾಸಗಳನ್ನು ಕಲೆಹಾಕಿ ಋತುಗಳನ್ನಾಗಿ ವಿಂಗಡಿಸಿದ್ದಾರೆ. ಉದಾಹರಣೆಗೆ, ಚೈತ್ರ, ವೈಶಾಖ ವಸಂತ ಋತು. ಮೂರು ಋತುಗಳಿಗೆ ಒಂದು ಆಯನ, ದಕ್ಷಿಣ ಮತ್ತು ಉತ್ತರ ಆಯನಗಳು ಸೂರ್ಯನ ಸಂಚಾರವನ್ನವಲಂಬಿಸಿವೆ. ಎರಡು ಆಯನಗಳಿಗೆ ಒಂದು ವರ್ಷ. ಅರವತ್ತು ವರ್ಷಗಳ ಒಂದು ಅವಧಿಯನ್ನು ಚಕ್ರಾಕಾರವಾಗಿ ಮತ್ತೆ ಮತ್ತೆ ಎಣಿಸಲಾಗುವುದು. ಹೀಗೆ ಚಂದ್ರಸೂರ‍್ಯಾದಿಗಳ ಚಲನೆಯನ್ನವಲಂಬಿಸಿ ಕಾಲವನ್ನು ಅಳೆಯಲಾಗಿದೆ. ಕೇವಲ ಚಂದ್ರನ ಚಲನೆಯನ್ನು ಅವಲಂಬಿಸಿ ಅಳೆಯುವ ಕಾಲ ವಿಶೇಷವನ್ನು ಚಾಂದ್ರಮಾನ ಎಂದೂ ಸೂರ್ಯನ ಚಲನೆಯನ್ನವಲಂಬಿಸಿ ಅಳೆಯುವ ವಿಧಾನವನ್ನು ಸೌರಮಾನವೆಂದೂ, ಚಂದ್ರಸೂರ‍್ಯರಿಬಬ್ಬರ ಚಲನೆಯನ್ನು ಅವಲಂಬಿಸಿ ಅಳೆಯುವ ವಿಧಾನಕ್ಕೆ ಚಾಂದ್ರ-ಸೌರಮಾನವೆಂದೂ, ಗುರುವಿನ ಸಂಚಾರವನ್ನು ಅವಲಂಬಿಸಿದ ಕಾಲಗಣನೆಯ ವಿಧಾನಕ್ಕೆ ಬಾರ್ಹಸ್ಪತ್ಯಮಾನವೆಂದೂ ಮತ್ತು ಕೇವಲ ೩೬೦ ದಿವಸಗಳ ಗಣನೆಯನ್ನು “ಸೌರಮಾನ (೩೬೫ ದಿವಸಗಳ ವರ್ಷವನ್ನು ೩೬೦ ದಿವಸಗಳ ವರ್ಷವೆಂದು ಪರಿಗಣನೆ) ವೆಂದೂ ಕರೆಯುವರು.

ಈ ವಿಧವಾದ ಕಾಲ ಗಣನಾಕ್ರಮಗಳನ್ನು ಚೆನ್ನಾಗಿ ಪರಿಶೀಲಿಸಿ, ಪಂಚಾಗಗಳನ್ನು ತಯಾರಿಸಿ ನಮ್ಮ ನಿತ್ಯದ ಕಾರ‍್ಯಕ್ರಮಗಳಿಗೂ, ಹಬ್ಬಹರಿದಿನಗಳ ಮುನ್ಸೂಚನೆಗೂ ಉಪಯುಕ್ತವಾಗುವಂತೆ ಪುಸ್ತಕಗಳನ್ನು ಬರೆಯಲು ಸಿದ್ದಾಂತಗಳು ಬಹಳ ಅವಶ್ಯಕ. ಸೂರ್ಯ ಚಂದ್ರಾದಿ ಗ್ರಹಗಳ ಚಲನೆ, ನಕ್ಷತ್ರ ಮಂಡಲದ ವಿವರಗಳು, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳ ಆಗುವಿಕೆ ಮತ್ತು ಅವುಗಳ ಕಾಲ ನಿಯಮಗಳು ಇತ್ಯಾದಿ ವಿಷಯಗಳು ಸಿದ್ದಾಂತ ಪುಸ್ತಕಗಳಲ್ಲಿ ತಿಳಿಸಲ್ಪಟ್ಟಿವೆ.

‘ಸೂರ್ಯ ಸಿದ್ದಾಂತ’ದಲ್ಲಿ ಇರುವ ಮತ್ತೊಂದು ಅತ್ಯಮೂಲ್ಯವಾದ ವಿಚಾರವೆಂದರೆ “ವೀಕ್ಷಣಾಲಯ” ಅಥವಾ “ವೇದಶಾಲೆ” ಗಳ ನಿರ‍್ಮಾಣ ವಿಧಾನ. ಪ್ರತಿಫಲನ ದೂರದರ್ಶಕಗಳನ್ನೊಳಗೊಂಡ (ರಿಫ್‌ಲೆಕ್‌ಟಿಂಗ್ ಟೆಲಿಸ್ಕೋಪ್) ವೀಕ್ಷಣಾಲಯಗಳ ನಿರ್ಮಾಣ ಈ ಗ್ರಂಥಗಳಲ್ಲಿ ತಿಳಿಸಲಾಗಿದೆ. ಪ್ರತಿಫಲಿಸುವ ಸಮತಲಗಳನ್ನು ನಿರ್ಮಿಸಿ ಆಕಾಶಮಂಡಲದಲ್ಲಿ ಗ್ರಹಗಳ ಮತ್ತು ನಕ್ಷತ್ರಗಳ ಚಲನೆಯನ್ನು ಅಭ್ಯಾಸ ಮಾಡುತ್ತಿದ್ದರು. ಹಾಗೂ ರಾಜ ಸವಾಯ್ ಜಯಸಿಂಹರು (೧೬೮೬-೧೭೪೩) ನಿರ್ಮಿಸಿದ ಜಂತರ್-ಮಂತರ್ ತರಹೆಯ ವೇದಶಾಲೆಗಳ ನಿರ್ಮಾಣಕ್ಕೆ ಬೇಕಾದ ತಜ್ಞತೆ ಈ ಗ್ರಂಥಗಳಲ್ಲಿ ದೊರೆಯುತ್ತದೆ.

ಹೀಗೆ ವರಾಹ ಮಿಹಿರಾಚಾರ್ಯರ ಪಂಚಸಿದ್ದಾಂತಿಕ ಪುಸ್ತಕವು ಗಣಿತಶಾಸ್ತ್ರ ಮತ್ತು ಖಗೋಳ ಶಾಸ್ತ್ರಗಳನ್ನು ಅಭ್ಯಾಸ ಮಾಡಲು ಅತ್ಯುಪಯುಕ್ತವಾಗಿದೆ. ಹಾಗೆಂದೇ ಈ ಗ್ರಂಥ ಬಹಳ ಪ್ರಸಿದ್ಧಿಯಾಗಿದೆ.

ಬೃಹಜ್ಜಾತಕ

ಆಚಾರ‍್ಯರ ‘ಬೃಹಜ್ಜಾತಕ’ ಗ್ರಂಥವು ಜಾತಕವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬಹು ಪ್ರಯೋಜನಕಾರಿ ಯಾದುದು. ಜಾತಕ ಎಂದರೇನು? ಜಾತಕವನ್ನು ಏಕೆ ಅಭ್ಯಾಸ ಮಾಡಬೇಕು? ಪ್ರಪಂಚದಲ್ಲಾಗತಕ್ಕ ಪ್ರತಿಯೊಂದು ಕೆಲಸವೂ ಕಾಲಾಂತರ್ಗತ ಎಂದರೆ ಕಾಲವನ್ನು ಅವಲಂಬಿಸಿದೆ. ಆದುದರಿಂದ ಕಾಲಶಾಸ್ತ್ರವನ್ನು ಅಭ್ಯಾಸ ಮಾಡಬೇಕು. ಯಾವ ಒಂದು ಕೆಲಸವನ್ನೂ ಕೂಲಂಕುಷವಾಗಿ, ಸಾಂಗವಾಗಿ ತಿಳಿಯಬೇಕಾದರೆ ಒಬ್ಬ ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಆತನು ಅನುಭವಿಸಬಹುದಾದ ಅನೇಕ ಮುಖ್ಯ ವಿಚಾರಗಳ ವಿವರಗಳು ಆತನ ಜನ್ಮಸಿದ್ಧವಾಗಿ ಅವನ ಹುಟ್ಟಿನಿಂದ ಅಳೆಯಬಹುದಾಗಿರುತ್ತದೆ ಎಂದು ಅನೇಕರ ನಂಬಿಕೆ. (ಒಬ್ಬ ಮನುಷ್ಯನ ಜಾತಕವನ್ನು ಪರಿಶೀಲಿಸಿ  ಅವನ ಬಾಳು ಹೇಗೆ ಸಾಗುತ್ತದೆ ಎಂಬುದನ್ನು ತಿಳಿಯಬಹುದು ಎಂಬ ನಂಬಿಕೆ ಪಶ್ಚಿಮ ದೇಶಗಳಲ್ಲೂ ಲಕ್ಷಾಂತರ ಮಂದಿಗೆ ಉಂಟು) ಇದನ್ನು ನಂಬುವವರ ಪ್ರಕಾರ ಆತನು ಹುಟ್ಟಿದ ವೇಳೆಯ ಮೇರೆಗೆ ಚಂದ್ರ ಸೂರ‍್ಯಾದಿ ಗ್ರಹಗಳು ಇರತಕ್ಕ ಸ್ಥಾನವನ್ನು ನಿರ್ಧರಿಸುವುದು. ಅವನ್ನು ತಿಳಿಯಲು ಜಾತಕ ವಿಭಾಗದ ಅಭ್ಯಾಸದ ಅವಶ್ಯಕತೆ ಇದೆ. ಹಾಗೂ ಹಿಂದೂ ಸಂಸ್ಕಾರಗಳಾದ ಜಾತಕರ‍್ಮ, ನಾಮಕರಣ, ಉಪನಯನ, ಮದುವೆ ಮುಂತಾದ ಕೆಲಸಗಳಿಗೆ ಸರಿಯಾದ ವೇಳೆಗಳನ್ನು ನಿರ್ಧರಿಸುವುದು, ಯಜ್ಞಯಾಗಗಳ ವೇಳಾಪಟ್ಟಿಗಳನ್ನು ಸ್ಥಿರಪಡಿಸುವುದು ಇವೇ ಮುಂತಾದ ಕಾರ‍್ಯಗಳಿಗೆ ಜಾತಕದ ಅವಶ್ಯಕತೆ ಇದೆ. ಮನುಷ್ಯನ ಜನನಕಾಲದಲ್ಲಿರತಕ್ಕ ಸೂರ್ಯ ಚಂದ್ರಾದಿ ಗ್ರಹಸ್ಥಿತಿಯ ಮೇರೆಗೆ ಆ ವ್ಯಕ್ತಿಯ ಆಗುಹೋಗುಗಳನ್ನು ತಿಳೀಯಬಹುದು ಎಂದು ಅನೇಕರ ನಂಬಿಕೆ. ಆ ಮನುಷ್ಯನ ನಡವಳಿಕೆ, ಅಭಿಪ್ರಾಯಗಳು, ಸಾಧನೆಗಳು, ಗುಣಗಳು ಮತ್ತು ಅವಗುಣಗಳು, ರೋಗರುಜಿನಗಳು,ಸಾಂಸಾರಿಕ ವಿಷಯಗಳು ಇತ್ಯಾದಿ ವಿಚಾರಗಳು ಅವನ ಜನ್ಮಕಾಲದಲ್ಲಿದ್ದ ಗ್ರಹಗತಿಗಳಿಂದ ತಿಳಿಯ   ಬಹುದು. ಈ ತಿಳಿವಳಿಕೆಗೆ ಬೇಕಾಗುವ ಜನ್ಮಕಾಲದ ಕುಂಡಲಿಗಳ ತಯಾರಿಕೆ, ಗ್ರಹಗಳ ಬಲಗಳ ನಿರ್ಧಾರ, ಯಾವ ಯಾವ ವಯಸ್ಸಿನಲ್ಲಿ ಆ ಮನುಷ್ಯನಿಗೆ ಯಾವ ಯಾವ ಸುಖ, ಕಷ್ಟ, ರೋಗ, ಆದಾಯ ಮುಂತಾದುವು ಉಂಟಾಗುವುವು ಎಂಬೀ ವಿಚಾರಗಳ ವಿವರಣೆ ಮುಂತಾದವು ಬೃಹಜ್ಜಾತಕ ಪುಸ್ತಕದಲ್ಲಿ ತಿಳಿಸಲ್ಪಟ್ಟಿವೆ. ವರಾಹ ಮಿಹಿರಾಚಾರ್ಯರಿಗಿಂತಲೂ ಮುಂಚೆ ಈ ವಿಷಯಗಳ ಬಗೆಗೆ ಬಹಳವಾಗಿ ಪುಸ್ತಕಗಳಿದ್ದುವು. ಆಚಾರ‍್ಯರ ‘ಬೃಹಜ್ಜಾತಕ’ ಆ ಎಲ್ಲಾ ಪುಸ್ತಕಗಳ ಸಾರವನ್ನು ಒಳಗೊಂಡು, ಈಗಲೂ ಈ ಶಾಸ್ತ್ರವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಏಕೈಕ ಸರ್ವೋತ್ತಮವಾದ ಗ್ರಂಥರಾಜ ಎನ್ನಿಸಿಕೊಂಡಿದೆ.

ಮೇರೆಯರಿಯದ ಕುತೂಹಲ, ಜ್ಞಾನದ ಹಸಿವು

ಬೃಹತ್ ಸಂಹಿತ ಗ್ರಂಥದಲ್ಲಿರತಕ್ಕ ಹಲವು ವಿಷಯಗಳು ಮಾನವಕುಲಕ್ಕೆ ಕಲ್ಯಾಣವನ್ನು ಉಂಟುಮಾಡತಕ್ಕವುಗಳಾಗಿವೆ.

ಬೃಹತ್ ಸಂಹಿತ

‘ಬೃಹತ್ ಸಂಹಿತ’ ಒಂದು ಮಹಾನ್ ಗ್ರಂಥ. ವರಾಹ ಮಿಹಿರಾಚಾರ್ಯರ ಉದ್ದಾಮ ಪಾಂಡಿತ್ಯಕ್ಕೆ ಮತ್ತು ಗ್ರಂಥ ರಚನಾ-ಸಂಗ್ರಹ ಚಾತುರ್ಯಕ್ಕೆ ಈ ಪುಸ್ತಕ ನಿದರ್ಶನವಾಗಿದೆ. ಅನೇಕಾನೇಕ ಗ್ರಂಥಗಳನ್ನು ಅಭ್ಯಾಸ ಮಾಡಿ ರಚಿಸಿದ ಗ್ರಂಥ ಇದು. ತಾವು ಅಧ್ಯಯನ ಮಾಡಿದ ಗ್ರಂಥಗಳಲ್ಲಿ ಸಾಧುವಾದ ವಿಚಾರಗಳನ್ನು ಅಸಾಧುವಾದುವುಗಳಿಂದ ಬೇರ್ಪಡಿಸಿದರು. ಅಸಾಧುವಾದ ವಿಚಾರಗಳನ್ನು ನಿರ್ಧಾಕ್ಷಿಣ್ಯವಾಗಿ ಖಂಡಿಸಿದರು. ಬಹು ಉಪಯುಕ್ತವಾದ ವಿಚಾರಗಳನ್ನು ಮಾತ್ರ ಸಂಗ್ರಹಿಸಿ ಈ ಗ್ರಂಥವನ್ನು ಬರೆದರು.

ಆಚಾರ್ಯರ ಈ ಗ್ರಂಥವನ್ನು ಸಂಕ್ಷೇಪವಾಗಿಯೂ ವಿವರಿಸುವುದು ಕಷ್ಟ. ಈ ಗ್ರಂಥ ಕೇವಲ ನಾಲ್ಕು ಸಾವಿರ ಸಂಸ್ಕೃತ ಶ್ಲೋಕಗಳಿಂದಾಗಿದೆ. ಮುಂಚೆಯೇ ತಿಳಿಸಿರುವಂತೆ ಈ ಗ್ರಂಥದಲ್ಲಿ ಆಚಾರ‍್ಯರು ಎಲ್ಲ ಜನರಿಗೂ ಉಪಯುಕ್ತವಾದ ವಿಚಾರಗಳನ್ನು ತುಂಬಿದ್ದಾರೆ. ಇದು ಫಲಭಾಗ ಗ್ರಂಥಗಳಲ್ಲಿ ಉತ್ತಮವಾದ ಒಂದು ಪುಸ್ತಕ. ಇದರಲ್ಲಡಗಿರುವ ವಿಚಾರಗಳ ಸಹಾಯದಿಂದಲೇ ಪಂಚಾಗವನ್ನು ಬರೆಯುವ ಜ್ಯೋತಿಷಿಗಳು ದೇಶದ ಆಗುಹೋಗುಗಳ ಬಗ್ಗೆ ಮಾಹಿತಿಯೊಡನೆ ಮುನ್ಸೂಚನೆಯನ್ನು ಕೊಡುತ್ತಾರೆ.

ಬೃಹತ್‌ಸಂಹಿತ ಗ್ರಂಥದ ಸುಮಾರು ಒಂದು ನೂರು ಅಧ್ಯಾಯಗಳಲ್ಲಿ ಕೆಲವು ಅಧ್ಯಾಯಗಳು ಗ್ರಹಗಳು ಯಾವ ಯಾವ ನಕ್ಷತ್ರದಲ್ಲಿ ಸಂಚಾರ ಮಾಡುವಾಗ ಯಾವ ಯಾವ ಫಲಗಳು ರಾಷ್ಟ್ರಕ್ಕೆ ಉಂಟಾಗುವುವೆಂದು ತಿಳಿಸುತ್ತವೆ. ಉದಾಹರಣೆಗೆ ಬೃಹಸ್ಪತಿಯು ಮುಖ ಮತ್ತು ಪುಬ್ಬ ನಕ್ಷತ್ರಗಳಲ್ಲಿ ಸಂಚಾರ ಮಾಡುವ ಕಾಲವನ್ನು ಮಾಘವರ್ಷವೆಂದು ಕರೆಯುತ್ತೇವೆ. ಆಗ ಜನಗಳು ಪಿತೃ ಪೂಜಾದಿಗಳಲ್ಲಿ ಉತ್ಕರ್ಷಹೊಂದುವರೆಂದು ತಿಳಿಸುತ್ತದೆ. ಸಮಸ್ತ ಪ್ರಾಣಿಕೋಟಿಗಳಲ್ಲಿ ಶಾಂತಿಯೂ ಮತ್ತು ಆರೋಗ್ಯವೂ ಉಂಟಾಗುವುದೆಂದೂ, ಸುವೃಷ್ಟಿಯಿಂದ ಭೂಮಿಯು ಸಮೃದ್ಧವಾಗುವುದೆಂದೂ, ಆಹಾರ ಧಾನ್ಯಾದಿಗಳ ಬೆಲೆಗಳು ಸಮವಾಗಿರುವುದೆಂದೂ, ಹಾಗೂ ಸರ್ವರಲ್ಲೂ ಮಿತ್ರತ್ವವೇರ್ಪಡುವವೆಂದೂ ಬರೆದಿದ್ದಾರೆ. ಮತ್ತೊಂದು ಉದಾಹರಣೆ, ಶನಿಗ್ರಹವು ಮಬಾ ನಕ್ಷತ್ರದಲ್ಲಿ  ಸಂಚಾರ ಮಾಡುವ ಕಾಲದಲ್ಲಿ ಬಾಹ್ಲೀಕ, ಚೀನ, ಗಾಂಧಾರ, ಶೂಲಿಕ ಮೊದಲಾದ ದೇಶಗಳಲ್ಲಿ ವಾಸಿಸುವ ಮನುಷ್ಯರಿಗೂ, ವೈಶ್ಯರಿಗೂ, ಕಿರತಾರಿಗೂ ಪೀಡೆ ಒದಗುವುದಾಗಿ ತಿಳಿಸಿರುತ್ತಾರೆ. ಈ ಪ್ರಕಾರವಾದ ಫಲಭಾಗವು ಆಯಾಯ ಗ್ರಂಥಕಾರರ ಅನುಭವಗಳನ್ನೂ ಒಳಗೊಂಡಿರುತ್ತದೆ. ಇದೇ ಬಗೆಯಾಗಿ ಪ್ರತಿಯೊಂದು ಗ್ರಹವೂ ಪ್ರತಿ ನಕ್ಷತ್ರದಲ್ಲಿ ಸಂಚಾರ ಮಾಡುವಾಗ ಉಂಟಾಗತಕ್ಕ ಫಲಾಫಲಗಳ ಸಂಗ್ರಹಣೆ ಕೊಡಲ್ಪಟ್ಟಿದೆ.

ಹಲವು ಅಧ್ಯಾಯಗಳು ಮಲೆಯನ್ನು ಕುರಿತ ವಿಚಾರಗಳಿಂದ ಭರಿತವಾಗಿವೆ. ಆಚಾರ‍್ಯರು ‘ಗರ್ಭಲಕ್ಷಣ’ ಎಂಬ ಅಧ್ಯಾಯವನ್ನು ಪ್ರಾರಂಭಿಸುತ್ತ ‘ಪ್ರಪಂಚದ ಎಲ್ಲಾ ಪ್ರಾಣಿ ವಿಶೇಷಗಳಿಗೂ ಅನ್ನ ಮುಖ್ಯ. ಆ ಅನ್ನ ವರ್ಷ ಋತುವಿನ ಅಧೀನ. ಆದುದರಿಂದ ಪ್ರಯತ್ನಪೂರ್ವಕವಾಗಿ ವರ್ಷಋತುವನ್ನು ಪರೀಕ್ಷೆ ಮಾಡಬೇಕು” ಎನ್ನುತ್ತಾರೆ ಈಗಲೂ ಕೂಡಾ ರಷ್ಯ ಮತ್ತು ಭಾರತ ರಾಷ್ಟ್ರಗಳ ಏಕಪ್ರಯತ್ನದಿಂದ ಮನಸೂನ್ ಮಾರುತಗಳ ಅಧ್ಯಯನ ಸಾಗಿದೆ. ಕಾರಣ ಭಾರತಕ್ಕೆ ಮಾನ್‌ಸೂನ್ ಮಾರುತಗಳು ಬಹಳ ಅವಶ್ಯಕ ಮತ್ತು ದೇಶದಲ್ಲಿ ಆಗುವ ಮಳೆ ಈ ಮಾರುತಗಳನ್ನವಲಂಬಿಸಿದೆ. ಮಾನ್‌ಸೂನ್ ವಿಫಲವಾದಲ್ಲಿ ಭಾರತದಲ್ಲಿ ಸಾಕಷ್ಟು ಮಳೆಬೀಳದೆ ಧಾನ್ಯದ ಬೆಳೆಗೆ ಧಕ್ಕೆ ಉಂಟಾಗಿ ಕ್ಷಾಮ ಉಂಟಾಗುವ ಪರಿಸ್ಥಿತಿ ಒದಗುತ್ತದೆ. ಹಾಗೂ ಸಾಂಕ್ರಾಮಿಕ ರೋಗಗಳು ಪ್ರಾಣಿನಾಶ ಮಾಡುವವು.

ವೃಷ್ಟಿ ವಿಚಾರವಾಗಿ ಆಚಾರ‍್ಯರು, ಗರ್ಗ ಋಷಿ ಮುಂತಾದವರು ಕಾರ್ತೀಕ ಶುಕ್ಲದಲ್ಲಿ ಹುಣ್ಣಿಮೆಯ ನಂತರ ಅಂತರಿಕ್ಷದಲ್ಲಿ ವೃಷ್ಟಿಗರ್ಭವೇರ್ಪಡುವುದೆಂದೂ ಆದರೆ, ಮಾರ್ಗಶಿರ್ಷ ಶುಕ್ಲ ಪ್ರತಿಪತ್ತಿನಿಂದ ಚಂದ್ರನು ಪೂರ‍್ವಾಷಾಢ ನಕ್ಷತ್ರದಲ್ಲಿ ಸಂಚರಿಸುವಾಗ ಉಂಟಾಗುವ ವೃಷ್ಟಿಗರ್ಭದ (ಮೋಡಗಳ ಉತ್ಪತ್ತಿ) ಲಕ್ಷಣಗಳನ್ನು ತಿಳಯಬೇಕೆಂದೂ ಬರೆದಿರುತ್ತಾರೆ. ಚಂದ್ರನು ಯಾವ ನಕ್ಷತ್ರದಲ್ಲಿದ್ದಾಗ ಮೇಘಗರ್ಭ ಉಂಟಾಗುವುದೋ ಅಂದಿನಿಂದ ಸರಿಯಾಗಿ ೧೯೫ನೇ ದಿವಸ ಮಳೆಯಾಗುವುದು ಎಂದು ತಿಳಿಸಿರುತ್ತಾರೆ. ಗರ್ಭಕಾಲದ ಮೇಘಗಳು, ನೀಲಕಮಲ, ಬಿಳಿ ಅಥವಾ ಅತಿ ಕಪ್ಪು ಬಣ್ಣದಿಂದ ಕೂಡಿದ್ದರೆ, ಸುವೃಷ್ಟಿಯುನ್ನುಂಟುಮಾಡುವವೆಂದೂ, ಆ  ಕಾಲದಲ್ಲಿ, ಉಲ್ಕಾಪಾತ, ಮಿಂಚು, ಗುಡುಗು, ಧೂಳಿನ ಮಳೆ, ಅಗ್ನಿಜ್ವಾಲೆ ಅಥವಾ ಭೂಕಂಪ ಮುಂತಾದವು ಆದಲ್ಲಿ ಮೇಘಗಳು ಮಳೆಗರೆಯಲಶಕ್ಯವಾಗುವುವೆಂದೂ ತಿಳಿಸಿರುತ್ತಾರೆ.

ಆಚಾರ‍್ಯರು ವೃಷ್ಟಿ ವಿಚಾರವನ್ನು ಸಾಂಗವಾಗಿ ತಿಳಿಸಿರುತ್ತಾರೆ. ಮುಂದಾಗುವ ಮಳೆ ಎಂದು ಬರುವುದು ಎಂಬುದನ್ನು ಹೇಗೆ ತಿಳಿಯಬಹುದು ಎಂಬುದನ್ನು ಆಚಾರ‍್ಯರು “ರೋಹಿಣಿಯೋಗ” ಎಂಬ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಆಷಾಢಮಾಸದ ಕೃಷ್ಣಪಕ್ಷದಲ್ಲಿ ಚಂದ್ರನು ರೋಹಿಣಿ ನಕ್ಷತ್ರ ಸಂಚಾರ ಮಾಡುವ ದಿವಸ ನಗರದ ಉತ್ತರದಲ್ಲಿ ಅಥವಾ ಪೂರ್ವದಲ್ಲಿ ಹನ್ನೆರಡು ಕೈಮೊಳ ಉದ್ದವಿರುವ ಬಿದಿರಿನ ಕೊನೆಗೆ ನಾಲ್ಕು ಕೈಮೊಳವಿರುವ ಬಾವುಟವನ್ನು ಕಟ್ಟಿ, ಇದಕ್ಕೆ ಮುನ್ನ ದಿಕ್ಕುಗಳನ್ನು ಖಚಿತಮಾಡಿಕೊಂಡು ನಂತರದಲ್ಲಿ ಯಾವ ಪ್ರಹರದಲ್ಲಿ ಬಾವುಟದ ಹಾರಾಡುವಿಕೆಯಿಂದ ಯಾವ ದಿಕ್ಕಿನ ಗಾಳಿಬೀಸುವುದೆಂದು ತಿಳಿಯಬೇಕು. ಆ ಪ್ರಹರದಿಂದ ಮುಂದೆ ಬರುವ ಮಳೆಯು ಯಾವ ಮಾಸದ ಪಕ್ಷದಲ್ಲಿ ಬೀಳುವುದೆಂದೂ, ಪ್ರಹರಾಂಶದಿಂದ ಮಳೆ ಬೀಳುವ ದಿವಸವನ್ನೂ ತಿಳಿಯಬಹುದೆಂದು ಬರೆದಿರುತ್ತಾರೆ. ಉದಾಹರಣೆಗೆ ದಿನದ ಪ್ರಥಮ ಪ್ರಹರದಲ್ಲಿ ಸುಂದರವಾದ ಅಥವಾ ಪ್ರಸನ್ನವಾದ ವಾಯುವು ಬೀಸಿದರೆ ಮುಂಬರುವ ಶ್ರಾವಣಮಾಸದ ಕೃಷ್ಣಪಕ್ಷದಲ್ಲಿ ಮಳೆಯಾಗುತ್ತದೆ; ಎರಡನೆ ಪ್ರಹರದಲ್ಲಿ ವಾಯುವು ಬೀಸಿದರೆ ಮುಂಬರುವ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಮಳೆಯಾಗುತ್ತದೆ. ಈ ಪ್ರಕಾರದ ವಿಚಾರಗಳು ಈಗಲೂ ಪರೀಕ್ಷೆಗೆ ಸಾಧ್ಯ. ಈ ಬಗೆಯ ಲಘು ಪ್ರಯತ್ನಗಳಿಂದ ಬಹು ಉಪಯುಕ್ತವಾದ ವೃಷ್ಟಿ ವಿಚಾರಗಳನ್ನು ತಿಳಿಯಲು ಆಚಾರ‍್ಯರ ಗ್ರಂಥ ಅಮೂಲ್ಯವಾಗಿದೆ.ಇದೇ ತತ್ವಗಳನ್ನೊಳಗೊಂಡ ಆಧುನಿಕ ಪ್ರಯೋಗಗಳು ನಮಗೆ ಇನ್ನೂ ಖಚಿತವಾದ ವಿಚಾರಗಳನ್ನು ತಿಳಿಸಬಹುದು.

“ಆದಿತ್ಯಾಚಾರ” ಎಂಬ ಅಧ್ಯಾಯದಲ್ಲಿ ಆಚಾರ‍್ಯರು ಒಂದು ಗಹನವಾದ ವಿಷಯವನ್ನು ವಿವರಿಸುತ್ತಾರೆ. ಅದೇನೆಂದರೆ, ಸೂರ್ಯನು ದಕ್ಷಿಣಾಯನದ ಕೊನೆಯಲ್ಲಿ ಮಕರರಾಶಿಯನ್ನು ಬಿಟ್ಟು ಕುಂಭರಾಶಿಗೆ ತೆರಳದೆ, ಮಕರರಾಶಿಯನ್ನೇ ಪುನಃ ಪ್ರವೇಶ ಮಾಡಿದರೆ ಮತ್ತು ಉತ್ತರಾಯಣದ ಕೊನೆಯಲ್ಲಿ ಕರ್ಕಾಟಕ ರಾಶಿಯಿಂದ ಸಿಂಹರಾಶಿಗೆ ತೆರಳದೆ, ಕರ್ಕಾಟಕ ರಾಶಿಗೆ ಹಿಂತಿರುಗಿದರೆ ಪ್ರಜಾಕೋಟಿ ನಾಶಹೊಂದುವುದು ಎಂದು. ಇದು ಸಾಧ್ಯವೇ ಇಲ್ಲ ಎಂದು ತೋರಬಹುದು. ಆದರೆ ವಿಜ್ಞಾನದ ಪ್ರಗತಿಯಲ್ಲಿ ಭೂತತ್ವಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಇದಕ್ಕೆ ಸಮಾಧಾನ ದೊರೆಯುತ್ತದೆ. ಆಧುನಿಕ ಭೂತತ್ವ ವಿಜ್ಞಾನ, ಭೂಮಿಯ ಖಂಡಗಳು ಚಲಿಸುತ್ತಿವೆ ಎಂದು ಹೇಳುತ್ತದೆ. ಅವುಗಳ ಚಲನೆಯಿಂದಲೇ ಹಿಮಾಲಯದಂತಹ ಪರ್ವತಗಳಾಗುವುದು. ಹಾಗೂ ಭೂಮಿಯು ತನ್ನ ಇತಿಹಾಸದಲ್ಲಿ ಅನೇಕಬಾರಿ ಧ್ರುವಾಂತರವನ್ನು (ಎಂದರೆ ಉತ್ತರ ಧ್ರುವ ದಕ್ಷಿಣ ಧ್ರುವಗಳು ಭಾಗವಾಗುವಿಕೆ, ಹಾಗೂ ದಕ್ಷಿಣ ಧ್ರುವಸ್ಥಲ ಉತ್ತರ ಧ್ರುವಭಾಗವಾಗುವಿಕೆ) ಹೊಂದಿರುವುದಾಗಿಯೂ ವಿಜ್ಞಾನ ಹೇಳುತ್ತದೆ. ಈ ಧ್ರುವಾಂತರಗಳಾಗುವ ಸಮಯದಲ್ಲಿ ಸೂರ‍್ಯಪಥವು ವ್ಯತ್ಯಾಸವಾಗದೇ ಭೂಮಿಯ ಮೇಲ್ಮೈತಿರಗುಬಹುದು. ಅಂತಹ ಖಂಡಾಂತರ ಅಥವಾ ಅಕ್ಷಾಂತರದಿಂದ ಜೀವಕೋಟಿಗೆ ನಾಶವುಂಟಾಗಬಹುದು. ಇದು ಭೂವೈಜ್ಞಾನಿಕ ದೃಷ್ಟಿಯಿಂದ ಸತ್ಯವಾದ ವಿಚಾರ.

ಬೃಹತ್ ಸಂಹಿತ ಗ್ರಂಥದ ಮತ್ತೊಂದು ವಿಚಾರ ಎಂದರೆ ವಾಸ್ತುವಿದ್ಯೆ. ಮನೆ, ದೇವಾಲಯ, ರಾಜಗೃಹ ಮುಂತಾದವುಗಳನ್ನು ಕಟ್ಟಲು ಸ್ಥಳ ಪರೀಕ್ಷೆ, ಅಳತೆಗಳು, ಕಟ್ಟಲು ಉಪಯುಕ್ತವಾದ ಸಾಮಗ್ರಿಗಳ ವಿಚಾರ ಮುಂತಾದವುಗಳನ್ನು ತಿಳಿಸಿರುತ್ತಾರೆ.

ಶಕುನ ವಿಚಾರ, ಸ್ತ್ರೀ ಮತ್ತು ಪುರುಷ ಲಕ್ಷಣಗಳ ವಿಚಾರ, ಪ್ರಾಣಿವರ್ಗದಲ್ಲಿ ಗಜಲಕ್ಷಣ, ಅಶ್ವಲಕ್ಷಣಾದಿ ವಿಚಾರ ಮುಂತಾಗಿ ಅನೇಕ ವಿಧವಾದ ಮತ್ತು ಉಪಯುಕ್ತವಾದ ವಿವರಗಳನ್ನು ಈ ಪುಸ್ತಕದಲ್ಲಿ ಆಚಾರ‍್ಯರು ಕೊಟ್ಟಿರುತ್ತಾರೆ.

ಹೀಗೆ ಬೃಹತ್‌ಸಂಹಿತ ಪುಸ್ತಕವು ಅನೇಕಾನೇಕ ವಿಚಾರಗರ್ಭಿತವಾಗಿದೆ. ಮುಂಚೆಯೇ ತಿಳಿಸುರವಂತೆ ಈ ಗ್ರಂಥದಲ್ಲಿ ಇಂದಿಗೂ ಉಪಯುಕ್ತವಾದ ವಿಚಾರಗಳು ಅಡಕವಾಗಿವೆ. ಉದಾಹರಣೆಗೆ ಪ್ರತಿಮಾ ಲಕ್ಷಣಾಧ್ಯಾಯದಲ್ಲಿ ಆಚಾರ‍್ಯರು ಯಾವ ಯಾವ ಕಲ್ಲುಗಳು ಯಾವ ಯಾವ ಪ್ರತಿಮೆಗಳನ್ನು ಮಾಡಲು ಅರ್ಹವಾಗಿವೆ ಎಂದು ತಿಳಿಸಿರುತ್ತಾರೆ. ಪುಂಶಿಲೆಗಳಿಂದ ಗಂಡು ದೇವತಾ ವಿಗ್ರಹಗಳನ್ನೂ, ಸ್ತ್ರೀ ಶಿಲೆಗಳಿಂದ ವಿಗ್ರಹಗಳ ಪಾದಗಳನ್ನು ಮಾಡುವ ವಿಚಾರ ಈ ಗ್ರಂಥದಲ್ಲಿದೆ. ಶಿಲೆಗಳನ್ನು ಈ ಬಗೆಯ ವಿಂಗಡಣೆ ಮಾಡಿರುವುದಕ್ಕೆ ಅವುಗಳಿಂದ ಉತ್ಪತ್ತಿಯಾಗುವ ಶಬ್ದವೇ ಆಧಾರ. ಆಧುನಿಕ ವಿಜ್ಞಾನದಲ್ಲಿಯೂ ಶಬ್ದಧ ಆಧಾರದ ಮೇಲೆ ಶಿಲಾ ವಿಂಗಡಣೆ ಮಾಡುವುದು ಭೂಭೌತ ವಿಜ್ಞಾಣದ ಪ್ರಯೋಗಗಳಲ್ಲಿದೆ. ಈ ವಿಧವಾದ ಶಾಸ್ತ್ರಾಧ್ಯಯನ ಮತ್ತಾವ ನಾಗರಿಕತೆಯಲ್ಲೂ ಕಾಣಬರುವುದಿಲ್ಲ. ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಇಷ್ಟು ವಿಚಾರಯುತವಾದ ಗ್ರಂಥ ಪ್ರಕಾಶಿತವಾಗಬಹುದಾಗಿದ್ದರೆ, ಈ ಗ್ರಂಥದ ಆಧಾರ ಗ್ರಂಥಗಳ ಗುಣಮಟ್ಟ ಮತ್ತು ಆಗಿನ ಕಾಲದಲ್ಲಿದ್ದ ವೈಜ್ಞಾನಿಕ ಮನೋಭಾವ ವ್ಯಕ್ತಪಡುತ್ತವೆ.

ಇಂದಿಗೂ ಉಪಯುಕ್ತ

ವರಾಹ ಮಿಹಿರರಂತಹ ಶ್ರೇಷ್ಠ ವಿಜ್ಞಾನಿಗಳು ಅವರ ಕಾಲದಲ್ಲಿದ್ದಷ್ಟು ಅನುಕೂಲಗಳನ್ನೇ ಬಳಸಿಕೊಂಡು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ ಅದರ ಫಲಾಫಲಗಳನ್ನು ತಿಳಿಸಿರುತ್ತಾರೆ. ಅದೇ ಧಾಟಿಯಲ್ಲಿ ಆಧುನಿಕ ಭಾರತೀಯರು ವೈಜ್ಞಾನಿಕ ಮನೋಭಾವವನ್ನು ತಳೆದು ಪ್ರಯೋಗಗಳನ್ನು ನಡೆಸಿದಲ್ಲಿ ಮತ್ತೂ ಉಪಯುಕ್ತವಾದ ಮತ್ತು ನಮ್ಮ ದೇಶದ ಆರ್ಥಿಕ ಪರಿಸ್ಥಿತಿಗೆ ಸರಿದೂಗುವ ವಿಚಾರಗಳನ್ನು ಹೊರ ತೆಗೆಯಬಹುದು. ಆಧುನಿಕ ಕಾಲದಲ್ಲಿ ಒಂದು ವೇಧಶಾಲೆಯ ನಿರ್ಮಾಣ ಎಂದರೆ ಕೋಟ್ಯಂತರ ರೂಪಾಯಿಗಳ ವೆಚ್ಚವಾಗುತ್ತದೆ. ಇಷ್ಟು ವೆಚ್ಚದ ವೇಧಶಾಲೆಗಳು ಎಲ್ಲೆಡೆಯೂ ಬೇಕಾಗಿಲ್ಲ. ಚಿಕ್ಕಚಿಕ್ಕ ವೇಧಶಾಲೆಗಳು ಪ್ರತಿಯೊಂದು ಪಟ್ಟಣದಲ್ಲಿಯೂ ಇರಬೇಕು. ಅಂತಹ ವೇಧಶಾಲೆಗಳು ಸೂರ್ಯಸಿದ್ಧಾಂತದಲ್ಲಿ ತಿಳಿಸರುವಂತಹುಗಳಾದರೆ, ಹೆಚ್ಚು ವೆಚ್ಚವಿಲ್ಲದೆ ಕಟ್ಟಬಹುದು. ಸ್ವದೇಶಿಯ ಪ್ರಯೋಗ ಮತ್ತು ವೀಕ್ಷಣಾಲಯಗಳಿಗೆ ಅನುಕೂಲ. ಹಾಗೆ ಪ್ರತಿಯೊಂದು ಜನಪದದಲ್ಲಿಯೂ ಚಿಕ್ಕ ಚಿಕ್ಕ ವೇಧಶಾಲೆಗಳು ನರ್ಮಿಸಲ್ಪಟ್ಟು, ವರಾಹ ಮಿಹಿರರು ಉಲ್ಲೇಖಿಸಿರುವ ಪ್ರಯೋಗಗಳನ್ನು ಮಾಡುವುದರಿಂದ, ಪ್ರತಿಯೊಂದು ಸ್ಥಳದಲ್ಲೂ ಅಲ್ಲಲ್ಲಿನ ವಾತಾವರಣದ ವಿಷಯವಾಗಿ ಮಾಹಿತಿಯನ್ನು ಪಡೆಯಲು ಸುಲಭಸಾಧ್ಯ. ಅಲ್ಲದೆ ವಿಜ್ಞಾನದ ಅಧ್ಯಯನವನ್ನೂ ಪ್ರಯೋಜನವನ್ನೂ ದೇಶದ ಸಣ್ಣ ಊರುಗಳಿಗೂ ಕೊಂಡೊಯ್ದಂತೆ ಆಗುತ್ತದೆ.

ಆಧುನಿಕ ಯುಗದಲ್ಲಿ ಭೂಮಿಯಾಚೆಗಿನ ವಿಶ್ವದ ಅಧ್ಯಯನ ವೇಗವಾಗಿ ಬೆಳೆಯುತ್ತದೆ. ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಾಯಿತು. ಚಂದ್ರ ಉಪಗ್ರಹದಿಂದ ತಂದ ಕಲ್ಲು ಇತ್ಯಾದಿಗಳನ್ನು ಪರೀಕ್ಷೆ ಮಾಡಿದ್ದಾಯಿತು. ಮನುಷ್ಯ ಕಳುಹಿಸಿದ ‘ವೈಕಿಂಗ್’ ಮಂಗಳ ಗ್ರಹವನ್ನು ಮುಟ್ಟಿತು. ಭೂಮಿಯಾಚೆಗಿರುವ ವಿಶ್ವವನ್ನು ಕುರಿತು ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಭೂಮಿಗೂ ವಿಶ್ವದ ಇತರ ಭಾಗಗಳಿಗೂ ಇರುವ ಸಂಬಂಧ, ಆ ಭಾಗಗಳ ಪ್ರಭಾವದಿಂದ ಭೂಮಿಯ ಮೇಲೆ ಹೇಗೆ ಬದಲಾವಣೆಗಳಾಗಬಹುದು- ಇದನ್ನು ಇನ್ನೂ ಆಳವಾಗಿ ಅಭ್ಯಾಸ ಮಾಡಬೇಕಾಗಿದೆ. ಈ ವಿಚಾರದ ಬಗ್ಗೆ ವರಾಹ ಮಿಹಿರರ ಕಾಲದ ಭೂವೈಜ್ಞಾನಿಕ ಭಾವನೆಗಳು ಆಧುನಿಕವೆಂದು ಹೇಳಬಹುದು. ವರಾಹಮಿಹಿರರ ಕಾಲಕ್ಕೆ ಭಾರತದಲ್ಲಿ, ಭೂಮಿಗೂ ಮತ್ತು ಗ್ರಹನಕ್ಷತ್ರಮಂಡಲಗಳಿಗೂ ಇರತಕ್ಕ ಸೂಕ್ಷ್ಮವಾದ ಸಂಬಂಧ ದೃಢೀಕರಿಸಲ್ಪಟ್ಟು, ಅದರಿಂದ ಭೂಮಿಯ ಮೇಲೆ ಆಗಬಹುದಾದ ಬದಲಾವಣೆಗಳನ್ನು ಮುಂಚಿತವಾಗಿಯೇ ತಿಳಿಯಲು ಪ್ರಯತ್ನ ಸಾಗಿತು. ಈ ದೃಷ್ಟಿಯಲ್ಲಿ ಆಧುನಿಕ ವಿಜ್ಞಾನಕ್ಕು ದಾರಿತೋರಿಸುವಷ್ಟು ಮುಂದುವರಿಯಲಾಗಿತ್ತು.

ಇಂತಹ ದೃಷ್ಟಿಕೋನದಿಂದ ಮತ್ತು ವಾತಾವರಣ ಶಾಸ್ತ್ರಕ್ಕೆ ಸಂಬಂಧಪಟ್ಟ ಅನೇಕ ವಿಚಾರಗಳಿಂದ ಈ ಗ್ರಂಥವು ಬಹಳ ಉಪಯುಕ್ತವಾಗಿದೆ. ಅಂತರ್ಜಲ ಪರೀಕ್ಷಾ (ಭೂಮಿಯೊಳಗಿರುವ ನೀರಿನ ವಿಷಯ ತಿಳಿದುಕೊಳ್ಳುವುದು), ಭೂಕಂಪ ಮುಂತಾದ ವಿಚಾರಗಳನ್ನು ಈ ಪುಸ್ತಕದಲ್ಲಿ ವಿಮರ್ಶೆ ಮಾಡಿದೆ. ಮುಖ್ಯವಾಗಿ ಈ ಗ್ರಂಥದಲ್ಲಿ ತಿಳಿಸಿರುವ ಭೂಮಿಯ ವಿಚಾರಗಳು ಆಧುನಿಕ ವಿಜ್ಞಾನವನ್ನು ಸರಿಗಟ್ಟುತ್ತವೆ. ಅಂದರೆ ಯಾವ ಯಾವ ಕಾರಣಗಳಿಂದ ಭೂಮಿಯ ಮೇಲಿನ ವಿಚಿತ್ರಗಳು ಉಂಟಾಗುವುವು ಎಂಬೀ ವಿಚಾರಗಳು “ಭೂವಾದ” ಎಂದು ತಿಳಿಸಬಹುದು. ಉದಾಹರಣೆಗೆ ಭೂಕಂಪಗಳು, ಲೋಹಗಳು ಉತ್ಪತ್ತಿ ಮುಂತಾದ ವಿಷಯಗಳು. ಈ ವಿಚಾರಗಳಿಂದಾಗಿ ‘ಬೃಹತ್‌ಸಂಹಿತ’ ಅತ್ಯಮೂಲ್ಯವಾದುದೂ ಮತ್ತು ಅಸಾಮಾನ್ಯವಾದುದೂ ಆದ ಗ್ರಂಥವೆಂದು ಪರಿಗಣಿಸಬಹುದು. ಆಚಾರ್ಯರ ಈ ಗ್ರಂಥದ ಪರಿಚಯ ಸುಲಭಸಾಧ್ಯವಲ್ಲ ಎಂದು ಮತ್ತೆ ಹೇಳಬೇಕಾಗಿಲ್ಲ. ಕಾರಣ, ಒಂದೊಂದು ವಿಚಾರವೂ ಕೂಡ ಚೆನ್ನಾಗಿ ವಿಶ್ಲೇಷಿಸಲ್ಪಟ್ಟು ಸಮಗ್ರವಾಗಿ, ಅತ್ಯಾಧುನಿಕ ವಿಜ್ಞಾನಿಗಳಿಗೂ ಕೆಲವು ಹೊಸ ಅಂಶಗಳು ಸಿಕ್ಕುವಷ್ಟು ಅರ್ಥವತ್ತಾಗಿ ನಿರೂಪಿಸಲ್ಪಟ್ಟಿವೆ. ಉದಾಹರಣೆಗೆ ಭೂಕಂಪ ಲಕ್ಷಣ, ಉದಕಾರ್ಗಲ, ರತ್ನ ಪರೀಕ್ಷಾ ಅಧ್ಯಾಯಗಳನ್ನು ಪರಿಶೀಲಿಸಬಹುದು.

ಭೂಕಂಪಲಕ್ಷಣ ವಿಚಾರ

ಭೂಕಂಪಲಕ್ಷಣಗಳ ಅಧ್ಯಯನವಾದರೊ, ಆಧುನಿಕ ಭೂ ವಿಜ್ಞಾನಶಾಸ್ತ್ರದ ಒಂದು ಅತಿಮುಖ್ಯ ಭಾಗವೆಂದು ಪರಿಗಣಿಸಲ್ಪಟ್ಟಿದೆ. ಆಧುನಿಕ ಭೂವಿಜ್ಞಾನಶಾಸ್ತ್ರ ಕೇವಲ ಎರಡು ಶತಮಾನಗಳಿಂದ ಬೆಳೆದು ಬಂದಿದೆ. ಭೂಕಂಪಗಳು ಹೇಗೆ ಆಗುತ್ತವೆ, ಜಗತ್ತಿನ ಕೆಲವು ಭಾಗಗಳಲ್ಲಿ ಇತರ ಭಾಗಗಳಿಗಿಂತ ಹೆಚ್ಚಾಗಿ ಭೂಕಂಪಗಳು ಆಗುತ್ತವೆಯೆ, ಭೂಕಂಪದ ಶಕ್ತಿಯನ್ನು ಅಳೆಯುವುದು ಹೇಗೆ, ಭೂಕಂಪವಾಗುವುದನ್ನು ಮೊದಲೆ ತಿಳಿಯಲು ಸಾಧ್ಯವೆ- ಇವೆಲ್ಲವನ್ನು ಅಭ್ಯಾಸ ಮಾಡುತ್ತಿದ್ದಾರೆ. ಭೂಕಂಪ ವೈಜ್ಞಾನಿಕವಾಗಿ ಪರಿಶೀಲನೆಗೆ ಬಂದಿದ್ದು ಕಳೆದ ಶತಮಾನದ ಅಂತ್ಯ ಭಾಗದಲ್ಲಿ – ಭಾರತದಲ್ಲಿ ಅಸ್ಸಾಂ ಪ್ರಾಂತದಲ್ಲಿ ೧೮೯೭ರ ಭೂಕಂಪವಾದಾಗ. ಅಲ್ಲಿಂದೀಚೆಗೆ ಭೂಕಂಪನದ ಬಗ್ಗೆ ಬಹಳ ವಿಚಾರಗಳು ಬೆಳಕಿಗೆ ಬಂದಿವೆ. ಆದರೂ ಮುಂಬರುವ ಭೂಕಂಪಗಳ ವಿಚಾರ ಸಮಸ್ಯೆಯಾಗಿಯೇ ಉಳಿದಿದೆ. ಭೂಕಂಪವಾದರೆ ಒಮ್ಮೊಮ್ಮೆ ನೂರಾರು ಮಂದಿ ಸಾಯುತ್ತಾರೆ, ಸಾವಿರಾರು ಜನಕ್ಕೆ ಗಾಯವಾಗುತ್ತದೆ, ಮನೆಗಳು ಉರುಳುತ್ತವೆ, ನದಿಯ ದಿಕ್ಕು ಬದಲಾಗುತ್ತದೆ. ಭೂಕಂಪ ಇಂತಹ ಸ್ಥಳದಲ್ಲಿ ಸುಮಾರು ಇಂತಹ ಕಾಲದಲ್ಲಿ ಆಗುತ್ತದೆ ಎಂದು ತಿಳಿದರೆ ಎಷ್ಟೋ ಅನುಕೂಲ ಅಲ್ಲವೆ?

೧೮೯೭ ರಲ್ಲಾದ ಅಸ್ಸಾಂನ ಭೂಕಂಪವನ್ನು, ಭಾರತೀಯ ಭೂತತ್ವ ಸರ‍್ವೇಕ್ಷಣ ವಿಭಾಗಕ್ಕೆ ಸೇರಿದ್ದ ಆರ್.ಡಿ. ಓಲ್ಡ್‌ಹ್ಯಾಂ ಎಂಬಾತನು ದೀರ್ಘವಾಗಿ ಪರಿಶೀಲಿಸಿದ. ಭೂಕಂಪದ ಉಗಮ, ಭೂಕಂಪೀಯ ತರಂಗಗಳ ವ್ಯಾಪ್ತಿ, ಅವುಗಳಿಂದುಂಟಾದ ಭೂಮಿಯ ಮೇಲ್ಮೈನ ವ್ಯತ್ಯಾಸಗಳು (ಬೆಟ್ಟಗಳ ಕುಸಿಯುವಿಕೆ, ಎತ್ತರ ತಗ್ಗುಗಳಾಗುವುದು, ನದೀಪಾತ್ರಗಳ ವ್ಯತ್ಯಾಸ, ಪಾಕೃತಿಕ ಅಣೆಕಟ್ಟುಗಳಾಗುವುದು, ಅಣೆಕಟ್ಟು ಒಡೆದು ಪ್ರವಾಹ) ಎಲ್ಲವನ್ನೂ ಕೂಲಂಕುಷವಾಗಿ ಅಭ್ಯಾಸಮಾಡಿದ. ಇದರಿಂದ ಮುಂದಿನ ಭೂಕಂಪಗಳನ್ನು ಸರಿಯಾಗಿ ವಿಶ್ಲೇಷಿಸಿ ತಿಳಿಯಲು ಅನುಕೂಲವಾಯಿತು. ಅದಾಗಿ ಮುಕ್ಕಾಲು ಶತಮಾನವೇ ಕಳೆದಿದೆ. ಆದರೂ ಭೂಕಂಪದ ನಿಜವಾದ ಕಾರಣವನ್ನು ತಿಳಿಯುವುದು ಮತ್ತು ಮುಂದೆ ಭೂಕಂಪ ಆಗಬಹುದಾದ ಕಾಲ ಮತ್ತು ಸ್ಥಳಗಳನ್ನು ತಿಳಿಯುವುದು ಇಂದಿಗೂ ಸಾಧ್ಯವಾಗಿಲ್ಲ. ಅತ್ಯಾಧುನಿಕ ಎನಿಸಿರುವ ಈ ವಿಜ್ಞಾನಯುಗದಲ್ಲೇ ಪರಿಸ್ಥಿತಿ ಹೀಗಿರುವಾಗ, ವರಾಹ ಮಿಹಿರಾಚಾರ್ಯರು ಭೂಕಂಪದ ಬಗೆಗೆ ಬರೆದಿರತಕ್ಕ ವಿಚಾರಗಳು ಅಸಾಮಾನ್ಯವೇ ಸರಿ. ಹಾಗೂ ಆಚಾರ್ಯರು ಅವರಿಗಿಂತ ಮುಂಚಿನವರ ಅಭಿಪ್ರಾಯಗಳನ್ನು ಪರಿಶೀಲಿಸಿ, ಅವುಗಳ ಸಾಧುತ್ವವನ್ನು ನಿರ್ಧರಿಸಿ, ತಮಗೆ ಅಸಾಧುವೆಂದು ಕಂಡಬಂದ ಅಭಿಪ್ರಾಯಗಳನ್ನು ನಿರ್ಧಾಕ್ಷಿಣ್ಯವಾಗಿ ಖಂಡಿಸಿರುತ್ತಾರೆ. ಇಂತಹ ವೈಜ್ಞಾನಿಕ ಮನೋಭಾವ ಈಗಲೂ ವಿರಳ. ಒಂದು ವಾರ ಮುಂಚಿತವಾಗಿಯೇ ಮುಂದೆ ಆಗಬಹುದಾದ ಭೂಕಂಪಗಳ ಸೂಚನೆಗಳನ್ನು ಪಟ್ಟಿಮಾಡಿ ನಿರೂಪಿಸಿರುತ್ತಾರೆ. ವರಾಹಮಿಹಿರರು ಬರೆದಿರುವ ಸಂಗತಿಗಳು ಇಂದಿನ ವಿಜ್ಞಾನಿಗಳು ಆಶ್ಚರ್ಯಪಡುವಂತಹವು. ದಿವಸದ ಪೂರ‍್ವದಲ್ಲಾಗತಕ್ಕ ಭೂಕಂಪಗಳನ್ನು “ವಾಯುವ್ಯ” ಮಂಡಲದವೆಂದೂ, ದಿವಸದ ಉತ್ತರಾರ್ಧದಲ್ಲಾಗತಕ್ಕ ಭೂಕಂಪಗಳನ್ನು “ಆಗ್ನೇಯ” ಮಂಡಲದವೆಂದೂ, ರಾತ್ರಿ ಪೂರ್ವಾರ್ಧದಲ್ಲಾಗತಕ್ಕ ಭೂಕಂಪಗಳನ್ನು “ಐಂದ್ರ” ಮಂಡಲವೆಂದೂ ಮತ್ತು ರಾತ್ರಿ ಉತ್ತರಾರ್ಧದಲ್ಲಾಗತಕ್ಕ ಭೂಕಂಪನಗಳನ್ನು “ವರುಣ” ಮಂಡಲದವೆಂದೂ ಭಾಗಮಾಡಿದ್ದಾರೆ. ಆಯಾ ಮಂಡಲಕ್ಕೆ ಸಂಬಂಧಿಸಿದ ನಕ್ಷತ್ರಗಳನ್ನು ಉದಾಹರಿಸಿರುತ್ತಾರೆ. ಒಂದು ಮಂಡಲದಲ್ಲಿ ಶಮನವಾಗುವುದೆಂದೂ ತಿಳಿಸಿದ್ದಾರೆ. ಗ್ರಹತಾರಾಗತಿಯಿಂದಲೂ, ಗ್ರಹಣ ಸಂಬಂಧವಾದ ವಿಚಾರಗಳಿಂದಲೂ, ಭವಿಷ್ಯತ್ತಿನಲ್ಲಾಗುವ ಭೂಕಂಪಗಳ ಸ್ಥೂಲ ಕಾಲ ಮತ್ತು ಸ್ಥಳ ನಿರ್ದೇಶನ ಮಾಡಲು ಸಾಧ್ಯವಾಗುವುದೆಂದೂ ಹೇಳುತ್ತಾರೆ. ಹಾಗೂ ಭೂಕಂಪಗಳನ್ನು ಮುನ್ಸೂಚಿಸುವ ಪ್ರಾಕೃತಿಕ ಉದ್ರೇಕಗಳಿಂದ ಅತಿವೃಷ್ಟಿ, ಉಲ್ಕಾಪಾತ, ಪ್ರಚಂಡವಾಗಿ ಬೀಸುವ ಮಾರುತಗಳು, ಸಮುದ್ರವು ಭೂಮಿಯನ್ನಾಕ್ರಮಣ ಮಾಡುವುದು ಮುಂತಾದ ಭೂಕಂಪ ಸೂಚಿಗಳಿಂದ ಆಧಾರಗಳನ್ನು ಆಚಾರ‍್ಯರು ಸಂಗ್ರಹಿಸಿ ನಿರೂಪಿಸಿದ್ದಾರೆ. ಈ ಸಂಗ್ರಹ ಅತ್ಯಮೂಲ್ಯವಾದುದು ಮತ್ತು ಆಧುನಿಕ ವಿಜ್ಞಾನಿಗಳೂ ಕೂಡ ಈ ಮಾರ್ಗದಲ್ಲಿ ಅಭ್ಯಾಸಮಾಡಲು ಯುಕ್ತವಾದವುಗಳು. ಆಚಾರ್ಯರಿಂದ ನಿರ್ದೇಶಿಸಲ್ಪಟ್ಟ ಈ ಮಾರ್ಗದಲ್ಲಿ ವೈಜ್ಞಾನಿಕ ಸಂಶೋಧನೆಗಳು ಮುಂದುವರಿದ ಪಕ್ಷದಲ್ಲಿ, ಮುಂಬರುವ ಭೂಕಂಪಗಳ ಸೂಕ್ಷ್ಮಕಾಲ ಮತ್ತು ಸ್ಥಳ ನಿರ್ದೇಶನ ಸಾಧ್ಯವಾಗಬಹುದು. ಇಂತಹ ಅಮೂಲ್ಯವಾದ ವಿಷಯಗಳನ್ನು ಸುಮಾರು ಒಂದು ಸಾವಿರದ ಮುನ್ನೂರು ವರ್ಷಗಳ ಹಿಂದೆ ಸಂಗ್ರಹಿಸಿದ ವರಾಹ ಮಿಹಿರರು ಪ್ರಪಂಚದ ಭೂವಿಜ್ಞಾನಿಗಳ ಸಮೂಹದಲ್ಲಿ ಮೊದಲ ಪಂಕ್ತಿಗೆ ಸೇರುವವರು.

ಉದಕಾರ್ಗಲ ವಿಚಾರ

ಒಮ್ಮೊಮ್ಮೆ ಮಳೆಯೇ ಬಾರದೆ ನದಿ ಹೊಳೆ ಕೆರೆಗಳಲ್ಲೆಲ್ಲ ನೀರು ಬತ್ತಿ ಹೋಗುತ್ತದೆ. ಇದು ಮನುಷ್ಯರಿಗೆ ಪ್ರಾಣಿಪಕ್ಷಿಗಳಿಗೆ ತುಂಬ ಸಂಕಟದ ಕಾಲ. ಇಂತಹ ಕಾಲದಲ್ಲಿ ಮನುಷ್ಯ ನೆಲದೊಳಗಿರುವ ನೀರನ್ನೆ ಹುಡುಕಿ ತಂದುಕೊಂಡು ಉಪಯೋಗಿಸಬೇಕು. ಎಲ್ಲಿ ಬಾವಿ ತೋಡಬೇಕು ಎಂದು ತೀರ್ಮಾನಿಸಬೇಕಾದರೆ ಭೂಮಿಯಲ್ಲಿ ಎಲ್ಲಿ ನೀರಿದೆ ಎಂದು ತಿಳಿಯಬೇಕಲ್ಲ? ಆಧುನಿಕ ಭೂ ವಿಜ್ಞಾನದಲ್ಲಿ ಇದನ್ನು ತಿಳಿಯಲು ಹಲವು ವಿಧಾನಗಳನ್ನು ಹೇಳಿದೆ. ಇವುಗಳಲ್ಲಿ, ಕೆಲವು ಸಸ್ಯದ ಆಧಾರಗಳ ಮೇಲೆ ಜಲ ಸನ್ನಿವೇಶಗಳ ನಿರ್ಧಾರ ಮಾಡುವುದು ಬಹಳ ಪ್ರಾಶಸ್ತ್ಯವನ್ನುಹೊಂದಿದೆ. ಈ ವಿಭಾಗದಲ್ಲಿ ವರಾಹ ಮಿಹಿರಾಚಾರ್ಯರು ಸಂಗ್ರಹಿಸಿರುವ ಮಾಹಿತಿ ಆಧುನಿಕ ಜಲಶಿಲ್ಪಿಗಳಿಗೂ ಆಶ್ಚರ್ಯವನ್ನುಂಟುಮಾಡುವಂತಿದೆ. ಭೂಮಿಯ ಮೇಲೆ ಅಂತರ್ಜಲದ ಕುರುಹುಗಳಾಗಿ ನೇರಳೆ, ಸಿಂಧುವಾದ, ಅರ್ಜುನ, ಯಗಚಿ, ಮುತ್ತುಗ ಮುಂತಾದ ವೃಕ್ಷಗಳೂ ಹಾಗೂ ಹುತ್ತಗಳೂ ಇರುತ್ತವೆ. ಇವು ಕಂಡಕಡೆ ಸಮೀಪದಲ್ಲಿ ಕೆಲವೇ ಕೈಮಾರುಗಳ ಆಳದಲ್ಲಿ ಜಲಮಾರ್ಗಗಳಿರುತ್ತವೆ ಎಂದು ತಿಳಿಸಿರುತ್ತಾರೆ. ನೀರಿನ ರುಚಿ ಭೂಮಿಯಲ್ಲಿ ಹುದುಗಿದ ಮಳೆಯ ನೀರು ಆ ಭೂಮಿಯ ಸತ್ಯವನ್ನಲಂಬಲಿಸಿರುವುದು ಎಂದು ಆಚಾರ‍್ಯರು ಸರ್ವರ ಗಮನವನ್ನೂ ಸೆಳೆಯುತ್ತಾರೆ. ಇದು ಅವರ ವೈಜ್ಞಾನಿಕ ದೃಷ್ಟಿಗೆ ಸಾಕ್ಷಿ.

ರತ್ನ ಪರೀಕ್ಷೆ

ವಜ್ರ, ಮತ್ತು, ಹವಳ ಮುಂತಾದ ನವರತ್ನಗಳ ವಿಷಯವಾಗಿಯೂ ಆಚಾರ‍್ಯರ ವಿಷಯ ಸಂಗ್ರಹ ಅದ್ವಿತೀಯವಾಗಿದೆ. ‘ಅರ್ಥಶಾಸ್ತ್ರ’ವನ್ನು ಬರೆದ ಕೌಟಿಲ್ಯನೂ (ಕ್ರಿ.ಪೂ. ನಾಲ್ಕನೆಯ ಶತಮಾನ) ಕೂಡ ರಾಜಸಂಬಂಧವಾದ ರತ್ನಗಳನ್ನು ಕುರಿತು ಕೆಲವು ಅಧ್ಯಾಯಗಳಲ್ಲಿ ಆಗಿನ ಕಾಲದಲ್ಲಿದ್ದ ತಿಳಿವಳಿಕೆಯನ್ನು ಬರೆದಿರುತ್ತಾನೆ. ಆದರೂ, ವರಾಹ ಮಿಹಿರಾಚಾರ್ಯರ ರತ್ನಮಣಿಗಳ ಬಗೆಗಿನ ಸಂಗ್ರಹ ಅಸಾಧಾರಣವಾದುದು. ವಜ್ರದ ಉಗಮಸ್ಥಾನಗಳು, ಭೇದಗಳು, ಸ್ವಚ್ಛ ಮತ್ತು ಕಲಂಕಿತ ವಜ್ರಮಣಿಗಳು, ವಜ್ರದ ಮೌಲ್ಯ ಮುಂತಾದ ವಿಷಯಗಳನ್ನು ಸಂಗ್ರಹಿಸಿ ಬರೆದಿದ್ದಾರೆ.

ತನಗೆ ಒಂದು ವಿಷಯ ಚೆನ್ನಾಗಿ ಗೊತ್ತಿಲ್ಲದಿದ್ದರೆ ಹಾಗೆಂದು ನಿಸ್ಸಂಕೋಚವಾಗಿ ಒಪ್ಪಿಕೊಳ್ಳುವುದು ನಿಜವಾದ ವಿದ್ವಾಂಸನ ಲಕ್ಷಣ. ಟೊಳ್ಳು ವಿದ್ವಾಂಸನೇ ತನಗೆ ತಿಳಿಯದ ಸಂಗತಿಯೇ ಇಲ್ಲ ಎಂಬಂತೆ ನಡೆದುಕೊಳ್ಳುವವನು. ಈ ರೀತಿಯಲ್ಲಿ ವರಾಹ ಮಿಹಿರರ ಪ್ರಾಮಾಣಿಕತೆ ಮೆಚ್ಚುವಂತಹದು. ಕೆಲವು ವಿಷಯಗಳಲ್ಲಿ ತಮಗೆ ತಿಳಿದಷ್ಟು ಹೇಳಿ, ತಮಗೆ ಅದರಲ್ಲಿ ಸಾಕಷ್ಟು ಪರಿಶ್ರಮವಿಲ್ಲ ಎಂದು ಹೇಳಿಬಿಡುತ್ತಾರೆ. ಉದಾಹರಣೆಗೆ “ಗಂಧಯುಕ್ತಿ” (ಸುಗಂಧದ್ರವ್ಯಗಳ ತಯಾರಿಕೆ) ಯ ವಿಚಾರದಲ್ಲಿ ತಮಗೆ ಸಾಕಷ್ಟು ತಿಳಿಯದು ಎಂದು ಹೇಳಿದ್ದಾರೆ.

ಹೀಗೆ ವರಾಹ ಮಿಹಿರಾಚಾರ್ಯರು ಜ್ಯೋತಿರ್ವಿಜ್ಞಾನದ ಭಾಗಗಳಾದ ಸಿದ್ದಾಂತ,ಜಾತಕ ಮತ್ತು ಸಂಹಿತಾ ಪಾರಂಗತವಾಗಿ, ಮಹದುಪಯುಕ್ತವಾದ ಅನೇಕ ಗ್ರಂಥಗಳನ್ನು ರಚಿಸಿ ನಮಗೆ ಉಪಕಾರ ಮಾಡಿದ್ದಾರೆ. ಆಚಾರ್ಯರಿಗಿಂತಲೂ ಪೂರ್ವದಲ್ಲಿದ್ದ ಅನೇಕ ಗ್ರಂಥಗಳ ವಿಚಾರವನ್ನು ಆಚಾರ‍್ಯರಲ್ಲದೆ ಮತ್ತಾರೂ ಅಷ್ಟು ದೀರ್ಘವಾಗಿಯೂ, ಸುಲಲಿತವಾಗಿಯೂ, ಸಂಗ್ರಹಣೆ ಮಾಡಿ ಬರೆದಿಲ್ಲ. ವೈಜ್ಞಾನಿಕ ವಿಚಾರಗಳನ್ನು ಕೂಡಾ ಆಚಾರ‍್ಯರು ಸಂಗ್ರಹಿಸಿ ಬರೆದಿದ್ದಾರೆ.

ಅಸಾಧಾರಣ ಬೌದ್ಧಿಕ ಕುತೂಹಲ

ವರಾಹ ಮಿಹಿರರಲ್ಲಿ ನಮಗೆ ತುಂಬಾ ಗೌರವನ್ನು ಉಂಟುಮಾಡುವ ಗುಣ ಅವರ ಬೌದ್ಧಿಕ ಕುತೂಹಲ.ಸುಮಾರು ಒಂದು ಸಾವಿರದ ಮುನ್ನೂರು ವರ್ಷಗಳ ಹಿಂದೆ, ಇನ್ನೂ ಮುದ್ರಣದ ಕನಸೇ ಇಲ್ಲದೆ ಪುಸ್ತಕಗಳು ದೊರೆಯುವುದೇ ಕಷ್ಟವಾಗಿದ್ದ ಕಾಲದಲ್ಲಿ, ಎಷ್ಟು ವಿಷಯಗಳಲ್ಲಿ ಎಷ್ಟೊಂದು ಆಸಕ್ತಿ ಅವರಿಗೆ! ಮುತ್ತು ರತ್ನಗಳು, ವಿಗ್ರಹಗಳಿಗೆ ಕಲ್ಲುಗಳು, ವೇದಶಾಲೆಗಳ ನಿರ್ಮಾಣ, ಬೀಸುವ ಗಾಳಿ, ಭೂಮಿ, ಭೂಕಂಪ, ಭೂಮಿಯೊಳಗಿನ ನೀರು, ಸುತ್ತಲಿನ ಗ್ರಹಗಳು, ಸುತ್ತಲಿನ ವಿಶ್ವಕ್ಕೂ ಭೂಮಿಗೂ ಸಂಬಂಧ, ಗ್ರಹಗಳಿಗೂ ಮನುಷ್ಯನ ಜೀವನ ರೀತಿಗೂ ಸಂಬಂಧ, ಸೂರ್ಯನ ಪಥ ಒಂದೇ, ಎರಡೇ, ಹತ್ತೇ ಅವರ ಆಸಕ್ತಿಯನ್ನು ಸೆಳೆದ ವಿಷಯಗಳು? ಅವರೆಗೆ ರಚಿತವಾಗಿದ್ದ ಪುಸ್ತಕಗಳನ್ನೆಲ್ಲ ಆಳವಾಗಿ ಅಭ್ಯಾಸಮಾಡಿದರು. ಅವುಗಳಲ್ಲಿ ಸರಿಯಾದದ್ದು ನಾಲ್ಕು ಕಾಲ ನಿಲ್ಲಬೇಕಾದದ್ದು ಎಂದು ಕಂಡದ್ದನ್ನು ಸಂಗ್ರಹಿಸಿ ಹೇಳಿ ಮುಂದಿನ ಪೀಳಿಗೆಯವರಿಗೆ ಉಳಿಸಿಕೊಟ್ಟರು, ತಾವು ಯೋಚನೆ ಮಾಡಿದರು. ಪ್ರಯೋಗ ಮಾಡಿದರು, ತಮಗೆ ತಿಳಿದುದನ್ನು ಬರೆದಿಟ್ಟರು. ಅವರು ಹೇಳಿದುದೆಲ್ಲ ನಮಗೆ ಒಪ್ಪಿಗೆಯಾಗದಿರಬಹುದು. ಅವರು ತಿಳಿಸಿದ ಸಂಗತಿಗಳಲ್ಲಿ ಕೆಲವು ಇಂದು ಸರಿಯಾಗಿ ಕಾಣದಿರಬಹುದು. ವಿಜ್ಞಾನ ಮುಂದುವರಿಯುವುದೇ ಹೀಗೆ- ಯಾವ ವಿಜ್ಞಾನಿಯ ಅಭಿಪ್ರಾಯಗಳೂ ಎಲ್ಲ ಕಾಲಕ್ಕೂ ಉಳಿಯಲಾರವು. ಆದರೆ ವರಾಹ ಮಿಹಿರರ ಬೌದ್ಧಿಕ ಕುತೂಹಲ-ಭೂಮಿಯ ಒಳಗಿನ, ಭೂಮಿಯ, ಭೂಮಿಯಾಚೆಯ ಜಗತ್ತಿನ, ದೂರದ ಸೂರ್ಯ ಮತ್ತು ಗ್ರಹಗಳ ವಿಷಯಗಳಲ್ಲಿ ಆಸಕ್ತಿ-ಮತ್ತು ಅವರ ಪ್ರತಿಭೆ ನಾವು ಮೆಚ್ಚಬೇಕಾದಂತಹವು. ಅಂತಹ ಮಹನೀಯರ ಸಾಂಗವಾದ ಅಧ್ಯಯನ, ಸರಳತೆ, ವಿಚಾರ ವಿಶ್ಲೇಷಣ ಪ್ರಜ್ಞೆ, ನಿರ್ಬಂಧವಿಲ್ಲದ ವೈಜ್ಞಾನಿಕ ಚಿಂತನೆ, ವಿಚಾರ ಸರಣಿ, ಜ್ಞಾನ ಧೋರಣೆ ನಮಗೆ ಮೇಲ್ಪಂಕ್ತಿಯಾಗಬಾರದೆ?