ರಾಗ ಕೇದಾರಗೌಳ ಅಷ್ಟತಾಳ

ಹೇಳುಹೇಳೆಲೆ ಮುದ್ದು ರನ್ನೆ ಸನ್ಮೋಹನೆ | ಕೋಲನೆಚ್ಚನೆ ಕಾಮನೂ |
ಪಾಲಿಪೆನಂಜದಿರಿದು ಯನ್ನ ಪುಣ್ಯದ ಕಾಲ ಪೂರ್ಣಾಹುತಿಯೂ || ೧ ||

ಬಾಲೆ ಸೈರಿಸು ಕಾರ್ಯಗತಿ ಮೇಳವಿಸುವುದು | ತಾಳೊಂದು ಘಳಿಗೆ ನೀನೂ |
ನೀಲಕಂಠನು ಪ್ರಮಥರುಸಹಿತುಗ್ರ ಕರಾಳರೀವೇಳ್ಯದೊಳೂ    || ೨ ||

ಅದರಿಂದ ಪೂಜಿಸು ಪುರಮಥನನಪಾದ ಪದುಮಾಕ್ಷಿ ಬಳಿಕ ನಾವೂ |
ಮದನಂ ಕೇಳಿಯೊಳಾಡಲುದಿಸುವರಾತ್ಮಜ ರಥಿಕರು ಧರಣಿಯಲೀ      || ೩ ||

ವಾರ್ಧಿಕ ಷಟ್ಪದಿ

ಮಲ್ಲಿಕಾಸ್ಮಿತೆ ಪ್ರೀಯನಲ್ಲನಂಬಿಗಿದಪ್ಪಿ
ಲಲ್ಲೆಗೈದೊಡನೆ ಕೆಂಬಲ್ಲಿನಿಂದಧರಮಂ
ಘಲ್ಲಿಸುತ ಜೊಲ್ಲಸವಿಯುಲ್ಲಸವ ಮೆಲ್ಲನವಳಲ್ಲಿ ವಲ್ಲಿಸಿ ಮೆರೆದಳೂ ||
ನಲ್ಲೆಯಂ ಬಲ್ಮೆಯಿಂ ಸೊಲ್ಲಿಸಲ್ಕೊಪ್ಪದಿರ
ಅಲ್ಲಿಸುಮವಲ್ಲರಿಯ ಸಲ್ಲಲಿತ ಪಾಸಿನಿಂ
ದುಲ್ಲಾಸಪೇರ್ಚೆ ಶ್ರೀ ಮಲ್ಲಿಕಾರ್ಜುನ ದೇವಗೆಲ್ಲ ಸಲ್ಲಿಸಿ ನೆರೆದನೂ        || ೧ ||

ರಾಗ ಭೈರವಿ ಝಂಪೆತಾಳ

ಕಾಲುಮೊಗ ಮಜ್ಜನವ ಲೀಲೆಯಿಂದೆಸಗಿ
ಮುನಿಪಾಲ ಕುಳ್ಳಿರಲೆದ್ದು ಬಾಲೆಯಂಬರವಾ || ೧ ||

ಬಿಗಿದುಟ್ಟು ಮೌನಿಪದ ಸೊಗಸಿನಿಂ ಪಿಡಿದೆನ್ನ
ಮುಗುದ ಕೇಳ್ ಕುಸುಮಶರನೊಗೆದೆನ್ನೊಳಿಂದೂ     || ೨ ||

ಕೆಡಿಸಿದನು ಭೀಷ್ಠವನು ಮೃಡನನೀನೆ ಬೇಡಿ
ಹುಡುಗರಸುವನು ಕಾದ್ದುಕೊಡುವದೆನಲೆಂದಾ         || ೩ ||

ಯಷ್ಟುಬೇಡಲು ಸಮಯ ಕೆಟ್ಟ ಫಲ
ತಟ್ಟುವದು ಪುಟ್ಟುವರು ದುಷ್ಟರೆನೆ ಸೃಷ್ಟಿಗೊರಗಿದಳೂ  || ೪ ||

ಸುತರಿಲ್ಲದೀರ್ದೆನಾ ಸುತರೆ ಖಳರೆನಗೆಗತಿ |
ಮತಿಖೇದಕರವೆನುತ ದಿತಿಯು ಮೊರೆಯಿಡಲೂ       || ೫ ||

ಮಡದಿಬೆದರದಿರ್ನಿನ್ನ ಹುಡುಗರೊಳು ಹಿರಿಯವಗೆ
ಕಡಲಶಯನನ ಭಕ್ತ ಹುಡುಗ ಜನಿಸುವನೂ  || ೬ ||

ಅತಿ ಬಲಾನ್ವಿತನವನ ಪಿತನ ಹರಿಹತಿಸುವನು
ಧೃತಿಯೊಳೈದೆಂದು ಮುನಿಪತಿತಪದೊಳಿರ್ದಾ        || ೭ ||

ವಾರ್ಧಿಕ ಷಟ್ಪದಿ

ಮತ್ತಕಾಶಿನಿ ಮಿಂದು ಪೊಸವಸನಗಳ ನುಡುತ
ಪುತ್ರರಿಗೆ ಹರಿಯಲ್ಲದಿಲ್ಲಲೇ ಮರಣವೆನು
ತೊತ್ತಿನಿಜ ವ್ಯಸನಮಂ ಪೌತ್ರಗುಣಸುಧೆಯಿಂದ – ತೊಳೆದುಮನಕರ್ದಮವನೂ ||
ಪೊತ್ತಳ್‌ದಿತಿ ಗರ್ಭದೊಳ್ ಮೃತ್ಯುಗಳನೀರ್ವರಂ
ಪೊತ್ತಿತೀ ಜಗಸುರರು ಸುತ್ತಿ ಸುಳಿದರು ದೆಸೆಯ
ಕತ್ತಲೆಯ ಕಾಲಾಟವಾತು ಭಯ ಜೀವರಿಗೆ – ಮುತ್ತಿತಿನ್ನೇನೆಂಬೆನೂ     || ೧ ||

ಕಂದ

ವಿದುರನೆ ನಿನಗಾನುಂಪೇ –
ಳಿದ ಜಯವಿಜಯರು ಬಂದಿವಳುದರದೊಳುತಾ |
ನುದಿಸಿದರಿಂಭೀತಿಯು ಜಗ
ಕುದಿಸಿತಲಾ ಹೆರಿಗೆಯು ಸತಿಗೇಂ ಕೇವಳಮೇ         || ೧ ||

ರಾಗ ಯರಕಲ್ ಕಾಂಬೋಧಿ ಆದಿತಾಳ

ಹ್ಯಾಗೆ ತಾಳುವರೊ | ಹೆಂಗಸು ಗರ್ಭ | ಹ್ಯಾಗೆ     || ಪಲ್ಲವಿ ||

ಹ್ಯಾಗೆ ತಾಳುವರು ದರಾಗಾರದೊಳಗಿಪ್ಪಮೂಗರಂದದ
ಶಿಶುವಾಗಮವ್ಯಥೆಯಾ | ಹ್ಯಾಗೆತಾಳುವರೋ     || ಅನುಪಲ್ಲವಿ ||

ಮಲಗುವಸಮಯದಲೀ | ಭ್ರೂಣವು ಬಲು ಗಲಿಬಿಲಿಯಾಗುತಲೀ |
ವಲೆಗೆ ಕಲ್ಲಿಟ್ಟಂತೆ ನಲಿದಾಡುತಿಹುದದರೊಳವ ಬಲ್ಲೆಯ ಬಾಲೆ
ನಳಿನಗಂಧಿನಿ ಪೇಳೆ || ಹ್ಯಾಗೆ       || ೧ ||

ವಸನವಸಮದೊಳುಡೇ | ಮುಂನಂತದು | ಹಸನಾಗದೆಲೆ ಪ್ರೌಡೇ |
ಅಸನ ಹೆಚ್ಚುಂಡರೆ ವಿಷಮ ಬಾಧಕಬಹು ವ್ಯಸನಗೊಳಿಸುವದು
ಶಶುಮುಖಿಯೇನದೂ || ಹ್ಯಾಗೆ      || ೨ ||

ಕಟಿಯಲ್ಲಿ ಗುದ್ದಿದಂತೇ | ಆಗುವದಿದು ಸಟೆಯಲ್ಲ ಕೇಳೆ ಕಾಂತೇ |
ಫಟುವಾಗುತ್ತೆನ್ನ ಚಂದ್ರುಟಿಯೆ ರಕ್ಷಿಪುದೆನೆ ಘಟಕರ್ಕೂರಿಯೊಳಿಡೆ ತ್ರುಟಿಲಾರ್ಣ
ಜಲಬೀಳೇ || ಹ್ಯಾಗೆ        || ೩ ||

ಭಾಮಿನಿ ಷಟ್ಪದಿ

ತರಣಿದಿತಿ ಹರಿಭಯದಿ ಭ್ರೂಣವ
ನಿರಿಸಿ ಶತ ಸಂವತ್ಸರಾಂತ್ಯದೊ
ಳಿರುಳೆ ಯಮಳರ ಪಡದಳದ್ಭುತ ಘೋರರೂಪಿಗಳಾ ||
ಧರೆ ನಡುಗಳಂಬುಧಿಗಳುಕ್ಕಲು
ಗಿರಿಗಳೊಡೆಯೆ ರಸಾತಳದಿ ಧಿ
ಕ್ಕರಿಗಳಾಳಲು ತೂಳಲಂಧತಮಿಸ್ರ ದೆಸೆದೆಸೆಗೇ      || ೧ ||

ರಾಗ ಕೆ.ಗೌ. ಅಷ್ಟತಾಳ

ವನಿತೆ ಮಕ್ಕಳಿಗಾಗಿ ದಿನ ಹನ್ನೊಂದಾ ವೇದಸನುಮತದಿಂ ಕಾಶ್ಯಪಾ |
ಮುನಿ ಪುಣ್ಯಾಹವಗೈದು ತನುಜರಂಗವ ನೋಡಿ | ಕನಕ ಕಶ್ಯಪ ಹಿರಿಯಾ         || ೧ ||

ಕಿರಿಯವ ಹಿರಣ್ಯಾಕ್ಷರುಬಲಾನ್ವಿತರಿವರಿರಿದು ತ್ರೈಲೋಕವನೂ |
ಧೊರೆಗಳಹರು ಮೋಹದರಸಿ ಕೇಳೆಂದು ಮತ್ತಿರದೆ ಪರಸಿ ನಡೆದಾ       || ೨ ||

ಭಾಮಿನಿ ಷಟ್ಪದಿ

ಮತ್ತೆ ಕೆಲವು ದಿನಕ್ಕೆ ಬಾಲರು
ಮೃತ್ಯುರೂಪಿಗಳಾಗಿ ನಿಜಕರ
ವೆತ್ತ ದಿಗ್ ದೆಸೆ ಕಾಣದಿಹುದೀ ಭಟರ ನಡಕೆಯಲೀ ||
ಪೃಥ್ವಿ ತಗ್ಗಿತನಂತ ಭುಜಬಲ
ವ್ಯರ್ಥವಾತಮರಾದ್ರಿ ಮಂದರ
ಪೊತ್ತುದೋತನುವೆನುತಮೂಜಗಕಾತು ಕಡುಭೀತಿ    || ೧ ||

ವಾರ್ಧಿಕ ಷಟ್ಪದಿ

ನಿಲುಕೆ ಧ್ರುವ ಲೋಕವೊಂದೇ ಮೊಳಕೆ ಮಿಗಿಲಾತು
ತೊಳಪ ತಾರೆಗಳಾದವೇಕಾವಳಿಯ ಮುತ್ತು
ಗಳುಮುಭಯರುಬ್ಬಟೆಗೆ ನಡುಗೆ ಸುರಲೋಕ ಜಗದೊಡೆಯ
ರೋಡೋಡಿ ಬಂದೂ       || ೧ ||

ಸಲಿಸೆ ಸಂಧಿಯ ಮೇಲೆ ಕಪ್ಪಮಂ ಕೈಕೊಂಡು
ವಲಿದಾ ಹಿರಣ್ಯಕಶ್ಯಪ ಶ್ರೋಣಿತಾಖ್ಯಪುರ
ವಳೆಯದೊಳ್ ನೆಲೆಯಾದನವನನುಜ ಹಿರಣ್ಯಾಕ್ಷ – ಹೂಂಕರಿಸು
ತೆಂದನೊಲಿದೂ  || ೨ ||

ರಾಗ-ಸೌ. | ತಾಳ-ತ್ರಿ

ಗೆಲಿದೆ ನಿಖಿಳಾವನಿಯ ರಾಯರ ಹುಲು ನಪುಂಸಕರೇನು ಘನ
ಸುರಕುಲದ ಭುಜದಗ್ಗಳಿಕೆ ಕಾಂಬೆನು ತಳುವದಿಂದೂ  || ೧ ||

ಮಲತಡಾಬಲ ಜಲಧಿ ವಡಭಾನಳ ಪರಾಕ್ರಮನೆಂನ ಕೈಗುಣಗಳ
ನಿರೀಕ್ಷಿಸಬಹುದು ತಿಕ್ಕುವೆ ಬಲು ಭುಜರನೂ  || ೨ ||

ಉದರಲ್ಕೆ ತಾರಾವಳಿಯಂನೀ ಗದೆಯ ಘಾತಿಗೆಯಮರ ಲೋಕವ ನುದಧಿಯೊಳ
ಗದ್ದುವೆನು ತಡೆಯಲಿ ಪದುಮನಾಭಾ         || ೩ ||

ಕಂದ

ವ್ಯಾಸಾತ್ಮಜ ಕೇಳ್ ದುರ್ಧರ
ರಾಶರನೃತಹುದಂ ಕಂಡತಿ ಭೀತಿಯೊಳುಂ |
ಆಸುಮನಸ ರಾಣ್ಮಗೆ ಭಿ
ನ್ನೈಸಿದರೀಪರಿ ನಡನಡುಗುತ ವಾರ್ತೆಗಳು  || ೧ ||

ರಾಗ-ಮು. | ಏಕತಾಳ

ದಿವಿಜೇಂದ್ರ ಲಾಲಿಸೆಮ್ಮ ಮಾತಾ | ಲೋಕವಿಖ್ಯಾತ ದಿವಿಜೇಂದ್ರ     || ಪಲ್ಲವಿ ||

ದಿತಿಬಳಲುತಲೊಂದು ದಿನದೀ | ಕಾಶ್ಯಪನೊಡನೆ | ಸುತರಾ ಬೇಡಲು ನೋಡಿ ದಯದೀ |
ಸತಿಯನು ಕೂಡಿದನತಿ ಮತಿದಿತಿ ಸತಿಸುತರತಿ ಮತಿಯುತರ್ಜತೆಯೊಳ್ ಪುಟ್ಟಿದರತಿ ಹತಿಕ್ಷಿತಿ
ಸತಿಗತಿ ಮತಿಸ್ತಿತಿಯೇನತಿಯತಿ ಶಯವದಿತಿಸುತ ಬಿನ್ನಹ | ದಿವಿಜೇಂದ್ರ || ೧ ||

ಅದೊ ಹಿರಣ್ಯಾಕ್ಷ ದಾನವನೂ | ಅವರೊಳು ಕಿರಿಯ | ನದುಭುತಬಾಹುವಿಕ್ರಮನೂ |
ಸದದವ ನೀತಳ ತ್ರಿದಶಾಲಯಕಿಂದೊದಗಿ ಬರುವ ಕೈಗದೆಯಬ್ಬರದೊಳು ಯದೆಗಿದೆ
ನಡನಡುಗದೆ ಸಿಡಿಲಂದದೊಳದೊ ಬಲ್ ಘರ್ಜನೆಗಿದಿರೆ ಪರಾಕೂ | ದಿವಿಜೇಂದ್ರ  || ೨ ||

ಭಾಮಿನಿ ಷಟ್ಪದಿ

ದಿವಿಜರಾಡಿದ ನುಡಿಯ ಕೇಳುತ
ಹವಣವಿಂನೇನೆನುತ ಶಕ್ರನು
ಕವಲು ಮನದಿಂದೇರಿದನು ಮದಗಜವರೋಷದಲೀ ||
ದಿವಿಜ ಸಂತತಿ ಬೆರದು ಮಹದಾ
ರ್ಣವಕೆ ವಾರಿಧಿ ಮಲತವೋಲ್ ಖವ
ಖವಿಖಾ ಕುಲಿಶಾಯುಧವ ಝಡಿದಿಂತೆಂದನರಿ ಭಟಗೇ || ೧ ||

ರಾಗ-ಭೈರವಿ | ಅಷ್ಟತಾಳ

ಧಿರುರೇಮದಾಂಧ ಕೇಳೂ | ಶೌರ್ಯದ ಪಿತ್ಥ | ಶಿರಕಡರಿತೆ ಬಗುಳೂ |
ಸುರರನಂಜಿಸುತೆಲ್ಲಿಸರಿವೆ ಮುಂದಡಿಯಿಡಲಿರಗೊಡೆ ನಿಲ್ಲೆಂದನೂ       || ೧ ||

ಸಿಕ್ಕಿದೆಯೈಸುರಪಾ | ನಿನ್ನನು ಗೆಲ್ಲತಕ್ಕವನೈಸೇಪಾಪಾ |
ಚುಕ್ಕಿಗರೊಡಗೂಡಿ ಸೊಕ್ಕಿ ಯುದ್ಧಕೆ ಮನವಿಕ್ಕಿದೆಯಯ್ಯ ವ್ಯರ್ಥಾ        || ೨ ||

ಮರುಳು ನಿಶಾಚರನೇ | ನಿನ್ನನುಗೆಲ್ಲದಿರಲಾ ದಿವಾಚರನೇ |
ಧರೆಯರಸರನೆಲ್ಲ ಮುರಿದಹಮ್ಮಿಲಿ ಪ್ರಾಣತೊರೆಯದಿರೆನೆಘಮ್ಮನೇ      || ೩ ||

ಭುವನಕಂಪಿಸುವಂದದೀ | ರಕ್ಕಸಘೋರಾಹವವನೆಸಗೆ ಬಂಧದೀ |
ದಿವಿಜೇಂದ್ರಕಾಲ್ಗೆಟ್ಟು ವಿಹಗೇಂದ್ರಗಿದಿರೆ ಸರ್ಪವು ಹಾಯಂದೋಡಿದನೂ  || ೪ ||

ರಾಗ-ಮಾ. | ಏಕತಾಳ

ನಡದಗ್ನಿಯನೆಮನೈರುತಿ ವಾಯುವ ಮೃಡಸಖನೀಶಾನಾ |
ಪೊಡವಿಯನರಸುತ ಕಾಣದೆ ಹರಿಧ್ವನಿಗೊಡುತೆಂದನು ಕರದು  || ೧ ||

ಕೊಲ್ಲೆನುಕೊಲ್ಲೆನುಬೆದರುವಿರ‍್ಯಾತಕೆ ಪಳ್ಳುಗಳಂದದೊಳೂ |
ನಿಲ್ಲಿರಿ ಸಮ್ಮುಖದೊಳು ರಣಕೌಶಲ ಬಲ್ಲರೆ ಕಾದುವದೂ         || ೨ ||

ವೋಹೋ ಸುರಪನುಧರೆಗಗ್ಗಳ ಬಲುಬಾಹುಬಲಾಢ್ಯಗಡಾ |
ಸಾಹಸವಿನಿತೇ ಸರಿಯಲೆನ್ನೊಳಗಾಹವಕಾರಿಲ್ಲೈ       || ೩ ||

ಕಡಲಿನೊಳಾಡುವೆ ಜಲ ಕೇಳಿಯನೆಂದೊಡನುಬ್ಬುತ ಖಳನೂ |
ಸಡಗರದಿಂ ಜಗನಡುಗುವಂತೈದುತಕಡಲಿಗಿಳಿದನವನೂ       || ೪ ||

ಮೊಳಕಾಲ್ ಜಲವಿದುತಳಪಳನೆಂಬುದು ಜಲಜದಳಾಕ್ಷಿಯರೇ |
ಜಳಕಕೆ ಬನ್ನಿರಿ ಚಳಯದೊಳೆನು ತುಮ್ಮಳಿಸುತಬಲ್ ಬಲರೇ   || ೫ ||

ಭಾಮಿನಿ ಷಟ್ಪದಿ

ಇತ್ತಡಿಗೆ ಕರತಳವ ಹಾಸುತ
ತುತ್ತುಗೊಂಬನು ಜಲವನೊಂದೇ
ಸರ್ತಿಯಲಿ ಮುಗುಳುಗಿವನೀ ತೆರದಿಂದ ವಾರ್ಧಿಯಲೀ ||
ದೈತ್ಯನಿರೆ ಸುಮನಸರುಧಾರುಣಿ
ಮತ್ತಕಾಶಿನಿಸಹಿತ ಬ್ರಹ್ಮನ
ಹತ್ತಿರಕೆ ನಡೆತಂದು ಬಿನ್ನೈಸಿದರು ಮನದಳಲಾ       || ೧ ||

ರಾಗ-ಸಾ | ಅ

ಪರಿಪಾಲಿಸೆಮ್ಮ ವಿಧಾತ್ರಾ | ಪಾದಸರಸಿಜಕೆರಗಿದ ಪರಮ ಪವಿತ್ರಾ    || ಪಲ್ಲವಿ ||

ತರುಣಿಮಣಿದಿತಿಕಾಶ್ಯಪರಸುತರುರುಬಲಾಡ್ಯರುಮವರೊಳೆರಡನೆ ತರುಣ
ಹಿರಣ್ಯಾಕ್ಷನ ಪರಾಕ್ರಮ ಬೆರಗುಮಾಡಿತಲಾಜಗತ್ರಯಾ || ಪರಿಪಾಲಿ || || ಅ.ಪ ||

ಸುರರಿದೊ ಮೂಗರಾಗಿಹರೂ | ಬೇಸ-ತ್ತರು ಭಯದಿಂದಿಲಿಂದೀ ದಿಗ್ವರರೂ |
ಪರಿಭವಕ್ಕೊಳಗಾದೆ ನಾನೆಂನರಸಪಾಲಿಸು ಪಾಲಿಸೆಂದಡಿಗೆರಗಿ ಸಂಕ್ರಂದನನು
ದೂರಲು ಧರಣಿದೇವಿಯು ವರದಳಜನೊಳೂ | ಪರಿಪಾಲಿ       || ೧ ||

ಲೋಕನಾಯಕನೆ ಪರಾಕೂ | ಯನ್ನ | ವಾಕುಗಳಿದನು ನೀ ಲಾಲಿಸಬೇಕೂ |
ಭೀಕರಾಕ್ರುತಿಯಾದ ವರರತ್ನಾಕರದೊಳಡಗೀರ್ದಡೆನ್ನುವ
ನೇಕೆ ಮೇಲಕ್ಕೆಬ್ಬಿಸಿದೆ ನೀನೇಕೆ ಸೃಷ್ಟಿಯಗೈದೆ ಸ್ವಾಮಿಯೆ || ಪರಿಪಾ     || ೨ ||

ನೊಂದೆನೊಂದೆನು ನೊಂದೆನೈಯ್ಯಾ | ಯನ್ನ ತಂದೆ ತಂದೆಯತಂದೆ ನೀ ವಂದನೀಯಾ |
ಮಂದಮತಿಯಿವನಿಂ ಯಥಾ ಸ್ಥಿತಿ ಬಂದುದೈಯನಗೀ ಚರಾಚರ ವೃಂದವಿಲಯಸ್ತಾನಕಾರಣ
ವಿಂದಲಾ ಗೋವಿಂದನಂದನಾ  || ಪಾರಿಪಾಲಿ         || ೩ ||

ವಾರ್ಧಿಕ ಷಟ್ಪದಿ

ವಂದೆಸೆಯೊಳಿಂತು ವಸುಧಾನಾರಿಪುಯ್ಯಲ್ಚ
ಲೊಂದೆಸೆಯೊಳಂಗದಿಂದೊಗೆದ ಮನುಶತರೂಪೆ
ಗಂದೆಡೆಗಳಿಲ್ಲಾತು ಸುರರ ಮೊರೆಬಲಾವಾತು
ನೊಂದಜಂ ಚಿಂತೆವೆತ್ತು |

ತಂದೆಯಾಕೆನ್ನ ನಿರ್ಮಿಸಿದೈ ನಪುಂಸಕನ
ಮುಂದೇನು ಗತಿಯೆಂದು ನಿಂದು ನಿಟ್ಟುಸುರಿಟ್ಟ
ಡಂದುನಾಸಾ ವಳಯದಿಂ ದಿಳಿದಮಿಗೆಬೆಳದ
ನಂದದಿಂ ಹಂದಿಯಾದಾ  || ೧ ||

ಭಾಮಿನಿ ಷಟ್ಪದಿ

ನಳಿನಭವನಭಿವರ್ಣಿಸುತ್ತಿರೆ
ಕಳಭವೋ ಕುಲಶೈಲವೋ ಯೆನೆ
ಬೆಳೆದು ನಿಮಿಷಾರ್ಧದಲಿ ಘುಳುಘುಳಿಸುತ ರಸಾತಳಕೇ ||
ಯಿಳದನಂಬುಧಿ ಬಾಯಬಿಡೆ ಭೂ
ತಳವದುರೆ ಕಂಡಿದರನಜನುಂ
ಮ್ಮಳಿಸಿ ಹರಷೋಘ್ಘಡದಿ ಪೊಗಳಿದ ಜಯತು ಹರಿಯನುತಾ   || ೧ ||

ರಾಗ-ಸಾ | ಏಕತಾಳ

ಅಂಜದಿರಂಜದಿರವ್ವ | ಭೂಮಿದೇವಿ |
ಸ್ವಾಮಿ ಕಂಜನಾಭ ಕಾವ ನವ್ವಾ ಭೂಮಿ ದೇವೀ ||
ಸಂಜೀವನ ಕೈಯ್ಯೊಳಿರಲೂ | ಭೂಮಿದೇವೀ |
ಕೆಟ್ಟ | ನಂಜಿಗಂಜಲುಂಟೆ ತಾಯೆ | ಭೂಮಿದೇವೀ      || ೧ ||

ಶ್ವೇತವರಹನಾದಕಾಣೆ | ಭೂಮಿದೇವೀ | ರ
ಸಾತಳಕ್ಕೆ ಪೋದನಲ್ಲೆ | ಭೂಮಿದೇವೀ |
ಮಾತೆ ನಿನ್ನ ಕಾದ ಮೇಲೆ | ಭೂಮಿದೇವೀ | ಖಳನ
ಘಾತಗೈವಧೈರ್ಯಳಾಗು | ಭೂಮಿದೇವೀ    || ೨ ||

ಅಯ್ಯಯ್ಯ ನೀ ನಡುಗಬೇಡ | ದೇವಪಾಲಾ | ನಮ್ಮ
ಕೈಯಬಿಡನು ಕಾವನೈಯ್ಯ | ದೇವಪಾಲಾ ||
ಕೈಯ ಮುಗಿದು ಪುಷ್ಪಾಂಜಲಿಯ | ದೇವಪಾಲಾ | ಯಂ
ನ್ನಯ್ಯ ಜಗದಯ್ಯ ಗೀವೋ | ದೇವಪಾಲಾ    || ೩ ||

ಕಂದ

ಅನುಮಿಷರಿಂತಿರಲತ್ತಲ್
ವನಧಿಯೊಳಸುರಂ ಸಾಸಿರವತ್ಸರಮಂಕಳಿ |
ದನಿಮಿಷರಂಸದದಲ್ಲಿಯೇ
ಘನದಿಂ ವನಕ್ರೀಡೆಯೊಳಿರದುಮ್ಮಹದಿಂದಲ್ || ೧ ||

ಭಾಮಿನಿ ಷಟ್ಪದಿ

ಹೊಡೆದಡಿಬ್ಬಗಿಯಾತ್ತು ಗದೆಯಲಿ
ಕಡಲುರಸೆ ಪರಿಯಂತ ಕಂಡನು
ಕಡಲೊಡೆಯನರಮನೆಯನಲ್ಲಿ ವಿಭಾವರೀಪುರವಾ ||
ನುಡಿಸಿ ನೋಡುವೆನಿವನ ಮಲತರೆ
ಬಡಿದುಕೊಲುವೆನೆನುತ್ತ ವಾರಿಪ
ನಡಿಗೆ ಬಂದೆರಗಿದನು ಸಹಜವಿನೀತ ನಂದದಲೀ      || ೧ ||

ರಾಗ-ಸೌ | ತಾ-ತ್ರಿ

ಭಲಭಲರೆ ಬಲುಧೀರನೆಂಬುದ ತಿಳಿದು ನಾನಿಂದಿಲ್ಲಿ ಗೈದಿಹೆ
ಮುಳಿವವನೊ ಮಣಿವವನೊ ಸಮರದಿ ಗಳಹು ನೀನೂ         || ೧ ||

ರಾಜಸೂಯದ್ವರವ ಮಾಡಿದ ರಾಜನೆಂದೆಂಬುದನು ಕೇಳಿದು |
ಬೀಜ ಹೀನರ ಬಿಸುಟುಬಂದೆನು ಮಾಜದಿಂದೂ        || ೨ ||

ಹುಲುಸುರಾಧಿಪನಂತೆ ಯಡಗದೆ ತಳುವದೆನ್ನನು ಕಂಡೆಯೈ ಭುಜ
ಬಲನು ನಿರ್ಜರ ಗಣದೊಳೊಬ್ಬನೆ ಹಳೆಯಭಟನೂ    || ೩ ||

ತೇಜವುಳ್ಳನೈಸೆ ತನ್ನೊಳು ರಾಜಯುದ್ಧವ ಕೊಡಸಮರ್ಥನೆ
ರಾಜಿಯಾದಡೆ ಸರಿಯ ಭಟಿನನು ಸೋಜಗೊಳಿಸೂ   || ೪ ||

ಗುಣಯುತನು ಕುಲಕೋರ್ವ ಸಾಲದೆ ಬಿನುಗುಗಳು
ಹಲವಿದ್ದು ಫಲವೇನೆನುತ ಬೊಬ್ಬಿರಿಯಲ್ಕೆ ಕೇಳಿದು ಮಣಿಯುತೆಂದಾ     || ೫ ||

ರಾಗ ಶಂ | ತಾಳ-ತ್ರಿ

ಮಗನೆ ಲಾಲಿಸಾನೆಂಬ ಮಾತಿನ ಬಗೆಯ ನೀನೂ ಶ್ರವಣದೀ |
ಹಗರಣವು ನಿನ್ನೊಡನೆ ಯನಗತಿ ಸೊಗಸೆ ಹೇಳೂ    || ೧ ||

ಗಡ್ಡವಿದು ಬಿಳುಪಾತ್ತು ದೇಹಕೆ ಜಡ್ಡು ತನವೂ ಸೇರಿತೂ |
ದೊಡ್ಡವನೆಸೈ ಪ್ರಾಯದೊಳು ಎಲ ದಡ್ಡಿಯಿಗಾ         || ೨ ||

ವೆಂಟಿಣಿಪ ವೈರಿಗಳ ಬಹುಬಲ ತಂಟೆಯಹುದೇ ಪೂರ್ವದೀ |
ಕಂಟಕವಲಾ ಮುಪ್ಪುತನಗೆಲೆ ನಂಟಕೇಳೂ   || ೩ ||

ಜಡನೆನುತ ಜನರೆಂಬ ನಾಣ್ನುಡಿ ಜಡದೊಳೆಂಬೂದಲ್ಲಿದೂ |
ಜಡಸತಿಯರತಿ ಮುದುಕಿಯರ ನಾ ಬಿಡುವದೆಂತೂ   || ೪ ||

ರಾಗ ದೇಶಿ ಏಕತಾಳ

ವಿಕಟಾ ವಿಕ್ರಮ ದೈತ್ಯಾ ಕುಂಜರಾ | ಕೇಳು ಶುಕನ ಕೋಪಕೆ ಶಾಂತಿ ಪಂಜರಾ |
ದೇವ ಸಕಲಾಲೋಕೇತ ವಿಷ್ಣು ಶಕುತ ನಿನಗೆ ಧುರದೀ || ೧ ||

ಮಸದ ಶೂಲವ ಬಿಟ್ಟು ಬಾಳೆಯಾ | ನೀನು ಬಸಿಯಲೇತಕೆ ಕೇಳು ನಿರ್ಣಯಾ |
ರಣಘಸಣಿಯ ಬಿಡುಬಿಡಿಂನಸುರಾರಿ ಬಲ್ಲಿದಾ || ೨ ||

ಭಾಮಿನಿ ಷಟ್ಪದಿ

ಯನಲು ಹಾಯೆಂದೆನುತವರುಣನ
ಮನೆಯ ಹೊರವಂಟೈ ತರುತ ಕಂ
ಡನು ಸಮೋದಿತ ಸೂರ್ಯ ಕೋಟಿ ಪ್ರಭೆಗೆ ಮಿಗಿಲಾದಾ ||
ತನು ರುಚಿಯ ಬಿಡುಜಡೆಯ ಕೃಷ್ಣಾ
ಜಿನ ವಸನದೆಡಗೈಯ್ಯ ವೀಣೆಯ
ವಿನುತ ನಾರಾಯಣನಿನಾದದಲೆಸವ ನಾರದನಾ      || ೧ ||

ರಾಗ ನಾ ನಾ ಅಷ್ಟತಾಳ

ಕಂಡವನಂಘ್ರಿಯೊಳೆರಗಲೂ | ಮುನಿ – ಮಂಡೆಯೆತ್ತುತಲೆಂದನಾಗಲೂ |
ದಿಂಡ ನೀನೆಲ್ಲಿಗೆ ತೆರಳುವೇ | ಸುಪ್ರಚಂಡ ನಿನ್ನ್ಯಾರ ನೀನರಸುವೇ       || ೧ ||

ತಮ್ಮನೊ ಸುತನೊ ಬಾಂಧವನೋ | ನಿನ್ನ ಮೊಮ್ಮನೊ ಸಖನೊ ಸಡ್ಡಕನೋ |
ಹೆಮ್ಮೆಯಿಂದಾರ ನೀ ಹುಡುಕುವೆ | ಮನದುಮ್ಮಹ ಪರಿಯೇನು ತೊಡಕುವೇ       || ೨ ||

ಅಂಗನೆ ಬೇಕೆಂಬಪೇಕ್ಷೆಯೋ ಸಮರಾಂಗಣದೊಳು ಹೆಚ್ಚು ಬಯಕೆಯೋ |
ಹಿಂಗದೆ ಪೇಳೆನಲುಲಿಯುತ್ತಾ ವೃತ್ತಿ ಪುಂಗವನೊಡನಲಿಯುತ್ತಾ || ೩ ||

ರಾಗ ಶಂಕರಾಭರಣ, ಅಷ್ಟತಾಳ

ಲಾಲಿಸೈಯ್ಯ ಮೌನಿಕುಲ |
ಪಾಲಶ್ರೇಷ್ಠನೆನ್ನ ಮತವ ಕೀಳರಂತೆ ಕೇಳುವೆಯ ಪೇಳುವೆನೆಲ್ಲಾ |
ಲೀಲೆಯಿಂದಾನೊಂದು ದಿನದಿ |
ಮೇಲಿನಮರಾವತಿಯ ಕೇಳಿ ನೋಡಬೇಕೆಂದೆನುತ್ತಾಲಿಸುತ್ತೈದೀ || ೧ ||

ಕಂಡೆ ಸುರರೋಟವನ್ನ ಖಂಡಲನ ಯುದ್ಧದೊಳವ ಕಂಡೆನಗ್ನಿ ಗತಿಯ
ಯಮನ ದಂಡದಾಟವಾ |
ಚಂಡ ವಾಯುವೋಟವೈದ್ದು ಮಂಡೆಯವ ಕುಬೇರನೊಡನೆ ತಂಡಗೂಡಿ
ಪೋಪ ಬಗೆಯ ಕಂಡೆನೆಲ್ಲವಾ       || ೨ ||

ಕಡೆಯಲೊಬ್ಬನನ್ನು ಕಂಡ ಕಡಲ ಕೋಣೆವಾಸನನ್ನು ನಡನಡುಗುತ್ತ
ಲಿಹ ಕಡು ಮುದುಕನಾ |
ಕೊಡುಸಂಗರವ ನೆನಲಡಿಗೆರಗುತ ಪೇಳ್ದನೊಡೆಯ ನಾರಾಯಣನಲ್ಲಿ
ನಡೆ ನೀನೆಂದೆನ್ನಾ         || ೩ ||

ಯಂದ ಮಾತ ಕೇಳುತ್ತಲಾ | ಹಂದೆಯನ್ನು ಹುಡುಕುತ್ತ ಬಂದೆನವನೆಲ್ಲಿಹದು
ವಂದದಿ ಪೇಳೀ ||
ಮುಂದೆ ಪೋಪೆ ದಿತಿಸತಿಯ ಕಂದ ಹಿರಣ್ಯಾಕ್ಷಧೀರನೆಂದು
ಪೇಳ್ವರೆಲ್ಲರೆನಲಂದವಗೆಂದಾ        || ೪ ||