ಯಕ್ಷಗಾನ ಶ್ರೀಮದ್ಭಾಗವತ ತೃತೀಯ ಸ್ಕಂಧ ಪ್ರೇಕ್ತ
|| ವರಾಹ ಚರಿತ್ರಂ ||

ಶಾರ್ದೂಲವಿಕ್ರೀಡಿತ ವೃತ್ತಂ

ಶ್ರೀಮತ್ಪಂಕಜಧಾರಣಂ ತ್ರಿನಯನಂ-ಸುಜ್ಞಾನ ಕಲ್ಪದ್ರುಮಂ |
ಭೀಮಂ ಭಕ್ತಜನಾತಾಪಹರಣಂ-ಕೈಲಾಸವಾಸಂ ವಿಭುಂ ||
ಸೋಮಾದಿತ್ಯ ಸಹಸ್ರಕೋಟಿ ರುಚಿರಂ-ಸೌಭಾಗ್ಯರತ್ನಾಕರಂ |
ಕೌಮಾರೀರಮಣಂ ಹರಿಪ್ರಿಯಕರಂ-ಶ್ರೀವಿಶ್ವನಾಥಂ ಭಜೆ       || ೧ ||

೩ರಾಗ ನಾ. ತಾ. ಝಂ

ಜಯ ಜಯತು ಕರಿವದನ ಜಯ ಜಯತು ಗುಣಸದನ-
ಜಯ ಕುಜನಜನಹರಣ ಜಯ ನತಾಭರಣ | ಜಯ    || ಪಲ್ಲ ||

ಹರಿಕೋಟಿ ಸಮಭಾಸ-ಹರಿತನುಜಭಯ ನಾಶ ಹರಿಸೂನುಶರಕಾಲ
ಹರಿವಿನುತ ಶೀಲಾ || ಜಯ          || ೧ ||

ಚಂಡಿಕೋದರನುದಿತ ಚಂಡಭುಜ ಬಲಖ್ಯಾತ ಮಂಡಲಾಧಿಪ ಗಣಪ-
ದಿಂಡಪ್ರತಾಪಾ | ಜಯ    || ೨ ||

ಕರುಣಾಬ್ಧಿ ಶುಭ್ರಾಂಶು ಕರುಣಿ ವರಧೃತಪರಶು ದುರಿತಟವಿಹುತ
ವಹನ ಪರಿಪಾಲಿಸೆನ್ನಾ    || ೩ ||

ಜಯತು – ವಾರ್ಧಿಕ್ಯ

ಪದ್ಮಭವನಿಂಗೆರಗಿ ಪದ್ಮಾಕ್ಷಗಂ ಮಣಿದು
ಪದ್ಮಳಂ ಕೊಂಡಾಡಿ-ಪದ್ಮಿನಿಗೆ ವಂದಿಸುತ
ಪದ್ಮಸಖನಂ ಭಜಿಸಿ-ಪದ್ಮಧರನಂ ಪೊಗಳು ತದ್ರಿಜೆಯಬಲಗೊಂಬೆನೊ ||
ಕ್ಷುದ್ರಗಜದಾನವನ ಗುದ್ದಿ ಕೆಡಹಿದು ವೀರ
ಭದ್ರನಂ ನಿಜಜಟಾ ಪದ್ಮದಿಂ ಪಡೆದ ಮಹ
ರುದ್ರನಂ ಶುದ್ಧನಂ ಕದ್ರುಸುತ ಭೂಷನಂ ವಿಶ್ವೇಶನಂ ಭಜಿಪೆನೂ        || ೧ ||

ಭಾಮಿನಿ

ಸಿರಿಗಿರಿಜೆ ಶಾರದೆಯ ಬೊಮ್ಮನ
ಹರನ ವಿಶ್ವಂಭರನ ಸುರಪನ
ಕರುಣರಸಮಂ ಪಡೆದು ರುಷಿ ವ್ಯಾಸಾದಿಗಳಿಗೆರಗೀ ||
ವರಮಹಾ ಭಾಗವತಜನಗಳ
ಚರಣಕಾನತನಾಗುತೆಂನಯ
ಗುರುಹಿರಿಯರಡಿಗೆರಗಿ ಪೇಳುವೆನೀ ಕಥಾಮೃತವಾ   || ೧ ||

ದ್ವಿಪದಿ

ಸೂತಶುಕ ನಾರದ ವಸಿಷ್ಠ ಗೌತಮರಾ |
ಪ್ರೀತಿಯಿಂದುಪಚರಿಸಿ ಗಾರ್ಗ್ಯಗೋದ್ವಿಜರಾ  || ೧ ||

ವಲ್ಮೆಯಂ ಪಡೆದು ವಾಲ್ಮೀಕಿಭಿನಮಿಸಿ |
ನಲ್ಮೆಯಿಂದ ಪಿತೃ ಮಾತೃ ಗುರುಗಳಂ ನೆನಸಿ         || ೨ ||

ಅರಿದಂತೆ ವಿಸ್ತರಿಪೆ ಹರಿಯೊಲಿದು ಮುದದಿ |
ವರಹಾವತಾರವನು ಕೈಕೊಂಡು ಭರದೀ     || ೩ ||

ದುರುಳ ಹಿರಣಾಕ್ಷನನು ಸೀಳಿ ಸುರವರರಾ |
ಪೊರೆದಿರುವ ಕಥನವಿದನೊರೆವೆನಾ ವಿವರಾ  || ೪ ||

ತಪ್ಪು ಸಾವಿರವಿರಲು ತಿದ್ದಿ ಕೋವಿದರೂ-
ವಪ್ಪುವದು ಯನ್ನೊಡನೆ ಮಮತೆಯುಳ್ಳವರೂ         || ೫ ||

ರಾಗ ಸಾ-ತ್ರಿವುಡೆ ತಾಳ

ಪರಮಋಷಿ ಮೈತ್ರೇಯನನ ಪದ ಸರಸಿಜಕ್ಕಭಿನಮಿ | ವಿ
ದುರನು-ಹರಿಚರಿತ್ರವ ಕೇಳುತಿರೆ ಮೇಣೊರದನಂದೂ || ೧ ||

ಅರುಹಬೇಕೈ ಹರಿಯುಮತ್ತಾ ವರಹರೂಪವದೇಕೆ ಧರಿಸಿದ
ದುರುಳರುದು ಭವವೆಂತು ನೀವಾ ಪರಿಯನೆಲ್ಲಾ       || ೨ ||

ಪೇಳಬೇಕೆಂದೆನುತ ಸಂಯಮಿ ಕಾಲಿಗೆರಗಲ್ಕೆತ್ತಿತಳ್ಳಿಸಿ
ನೀಲಕಂಠನನುತಿಸಿ ನುಡಿದ ವಿಶಾಲಕಥೆಯಾ         || ೩ ||

ವಾರ್ಧಿಕ್ಯ

ಹರಶರಣಕೇಳ್ ಮುತ್ತು ವೈಡೂರ್ಯಪವಳದಿಂ |
ದೆರಕವಹಬೋದಿಗೆಯು ನೀಲವಜ್ರಸ್ಥಂಭ |
ಮರಕತಂಮಾಣಿಕ್ಯಗೋಮೇಧಿಕಂಪುಷ್ಯರಾಗದಿಂದಿಹಭವನದೀ  || ೧ ||

ಹರಿಹರಿಜಕರ್ಬುರಂ ಯಾದಸಾಂಪತಿಶ್ವಸನ
ಹರಮಿತ್ರಮೀಶಗುರುಪ್ರಮುಖರೈತರೆಕಂಡು
ಗಿರಿವೈರಿಯಾಸುಧರ್ಮೆಯೊಳೋಲಗಂಗೊಟ್ಟು-
ಹರಿಕಥೆಯನೆಂದ ಮುದದಿ         || ೧ ||

ರಾ-ಭ್ಯ | ತಾ-ಝಂಪೆ

ಕೇಳಿ ಸುರವರರೆಲ್ಲ-ಶ್ರೀಲೋಲಾಚರಿತಸುಧೆ
ಮೂಲಕಾರಣ ಶ್ರೂತಿಯೋಲಾಲಿಪುದಪೇಳ್ವೇ || ೧ ||

ಜಲಮಯದೊಳಿಳೆಯಲ್ಲ ಮುಳುಗಿರಲು ಜಲಜಾಕ್ಷ
ವಲಿದಾಲದೆಲೆಯೊಳಗೆ ಮಲಗಿರಲು ಮುದದೀ         || ೨ ||

ಕರ್ಣದಿಂ ಖಳರುದಿಸೆ ಮನ್ನಿಸಲು ಮಾಯೆಗಜ-
ಚಿನ್ಮಯನುಕಂದೆರದು ಸನ್ನದ್ಧನಾಗೀ          || ೩ ||

ಮಧುಕೈಟಭರಧುರದಿ-ವಧಿಸಿ ಬ್ರಹ್ಮಗೆ ಸೃಷ್ಟಿ
ಗೊದಗಿಸಲು ಮಾನಸದೊಳುದಿಸಿದ ಮರೀಚಿ || ೪ ||

ಮುನಿ ತನುಜಕಾಶ್ಯಪಗೆ ವನಿತೆಯರು ಹದಿಮೂರು
ಜನದೊಳದಿತಿಗೆ ನಾವು ಜನಿಸಿಸುರಪುರದಾ  || ೫ ||

ಧೊರೆತನವು ನಮಗಾತು-ಹಿರಿಯವ್ವೆದಿತಿ ಸುತರು
ದುರುಳರತಿಕಾಡಿದಡೆ ಹರಿಪೊರೆವನೆಮ್ಮಾ    || ೬ ||

ಸಾರಸಾಕ್ಷಿಗಳಿದಕೆ-ವೀರತಮನನು ಕೊಂದು
ಭೂರಿವೇದವಕಾದಮಾರಮಣನಂದೂ        || ೭ ||

ಕಂದ

ಸುರರಿಂತಿರಲತ್ತಲ್‌ವಿಧಿ
ತರಳರ್ ಸನಕಸನಂದನರ್ ಹರಿಪುರಕಂ |
ತೆರಳಿದುಕಂಡದಸಂತಸ |
ಶರಧಿಯೊಳಾಳುತ ವರ್ಣಿಸಿದರ್ ವಿಧವಿಧದಿಂ         || ೧ ||

ರಾಗ ಬೇ-ಏಕತಾಳ

ಚಿತ್ತವಿಸು ಮುನಿಪುತ್ರ ಬುಧವಿದುರಾ | ವೈಕುಂಠನಾಳುವ |
ಪತ್ತನದಸಂಪತ್ತಘನಚದುರಾ |
ಬಿತ್ತರಿಸುತಾಕಿತ್ತಡಿಗಳೊತ್ತೊತ್ತೆ ನುಡಿದರು ಯತ್ತಲೋಮಿದನಿತ್ತು
ಸಾರುವ ಮೊತ್ತ ಸಾತ್ವಿಕರುತ್ತಮರುಪುಣ್ಯಾತ್ಮರೈ ಭಲಾ         || ೧ ||

ಯೇಳುಸುತ್ತಿನ ತತ್ವನಿಕರದಲೀ |
ಕೋಟಿಗಳು ಭಕ್ತಿ ವಿಶಾಲಮಾರ್ಗಚತುಷ್ಠಯಂಗಳಲೀ |
ಮೇಲೆ ಮುಕ್ತಿದ್ವಾರ ಶೋಭೆಗಳ ಸ್ಥೂಲವಜ್ರೋಪಲಕವಾಟದ
ಕೀಲಣದ ವಿಷ್ಕಂಭ ತ್ರಿಪುಟಿಯ ಮೂಲವಿದ್ಯೆಯ ಮುಖ್ಯಮಾರ್ಗವ        || ೨ ||

ಹರಿಪದಾಶ್ರಿತ ಸಾಧುಮೂರ್ತಿಗಳಾ | ಮರದೊಮ್ಮೆ ಹರಿಪದ |
ಕರಗಿದರ ಹರಿ ಕಥೆಯ ಲೀಲೆಗಳಾ ನಿರತಕೇಳಿದ
ಪರಮಪುರುಷರ ಕರತರುವ ಥರ ಥರವಿಮಾನಗಳಿರವಕತ್ತುರಿಪರಿಮಳದ
ವಿಸ್ತರದ ಬೀದಿಗಳಿರುವದಹಹಾ      || ೩ ||

ಭಾಮಿನಿ

ಆಮಹಾವೈಕುಂಠಪುರದು | ದ್ಧಾಮ ಲಕ್ಷ್ಮಿಯನೇನಬಣ್ಣಿಪೆ-
ಸೋಮಸೂರ್ಯಕೃಶಾನುಕೋಟಿ ಪ್ರಭೆಗಳದುಭವದಾ ||
ಭೂಮಿಯಲ್ಲಾಭುವನವಂದ್ಯಮ |
ಹಾ ಮುನಿಗಳೀಕ್ಷಿಸುತಪೊಕ್ಕರು
ಮಮನೋಹರದೇವಶರಣಾಗೆನುತನಲಿ ನಲಿದೂ       || ೧ ||

ರಾಗ-ಮಾ | ತಾ-ರೂಪಕ

ಮಾರರಮಣನನು ಮನೋನುರಾಗದಿ ಭಕ್ತಿ ಸೇರಿಸಂಕೀರ್ತಿಸುತವರೂ |
ದ್ವಾರವಂದೆರಡುಮೂರಾರರ ಪರಿಯಂತ ಮೀರಿಸಾರಿದರೇಳರೆಡೆಗೇ     || ೧ ||

ಚಾರುಕೋಟೀರ ಕಂಕಣ ಮುಕ್ತಹಾರ ಕಾಹೇರಿದಕ್ಷಿಗಳು ಪೂಮಾಲೇ |
ಚಾರು ಚತುರ್ಭುಜನೀಲಾಂಗದುಭಯರು ಭಾರಿಕೈಗದೆಗಳುದ್ಧತರೂ      || ೨ ||

ನಿಂದಿರಲವರಲೆಕ್ಕಿಸದೆ ಮುಂದೊತ್ತಿದರಿಂದಿರೆಯರಸಪರಾಕೂ |
ಯಂದು ಮುಂದಿನಬಾಗಿಲಂತೆ ದಾಟುತ ಪೋಪರಂದವಕಂಡು ಹಾಸ್ಯದಲಿ        || ೩ ||

ಆಲಿಸಲೈದಾರುವರುಷದಾತ್ಮಜರಾದಿಮೂಲಕಾರಿಗಳ ಚಿನ್ಮಯರಾ |
ಲೀಲೆಯನರಿಯದೆ ಹೇಳದೈದುವರೆಂದು ಬೀಳಿಸಿದರು ಕೋಲತಡವೀ    || ೪ ||

ಆ ಮಹಾಜನರೆಲ್ಲ ನೋಡಲಚ್ಚರಿಯದೊಳೀ ಮುನಿಗಳೊಳೊಬ್ಬೊಬ್ಬರನೂ |
ಸಾಮರ್ಥ್ಯದಿಂದಲಿ ಕೈಪಿಡಿದೆತ್ತಿಮತ್ತಾ ಮೂಡರಂಗವೀಕ್ಷಿಸುತ್ತಾ || ೫ ||

ಕಿಡಿಗೆದರುತಲಾಗ ರೋಮಕೂಪಗಳುಬ್ಬಿ ನುಡಿದರು ಜಯ ವಿಜಯರಿಗೇ |
ಫಡಭಾಹಿರರು ನೀವು ನಡೆಸಿದೀಯಪರಾಧಕ್ಕೊಡನೆ ಶಿಕ್ಷಿಸದಿರಬಹುದೇ  || ೬ ||

ಯಂದುಗ್ರಮುಖರಾಗುತ್ತೆಂದರೀ ವೈಷ್ಣವ ವೃಂದ ಮಧ್ಯದೊಳು ನೀವಿಹುದೂ |
ಚಂದದಿಂ ಪಿಕವೃಂದದೆಡೆಕಡಂದುರುತೆಗಳ್ ನಿಂದಂದವಲ್ತೆಭಲ್ ಭಲರೇ || ೭ ||

ರಾಗ-ಸಾ | ತಾ-ತ್ರಿ

ಆರೆಲವೊ ಮೂಢರಿರ ನಿಮ್ಮವಿಕಾರವಿದು ತಾನೆತ್ತ ವಿಶ್ವಾ
ಧಾರಕನು ತಾನೆತ್ತ ನಿಮಗಿದು ಸೇರಿತೆಂತೊ || ೧ ||

ಅಂದು ಶತಯಾಗವನು ಮಾಡುತ್ತಿಂದ್ರಪದವಿಯನೇರಿನಹುಷನು
ಇಂದುಮುಖಿಶಚಿನೆವದಿ ಪಾವಾದಂದವ್ಯಾತೂ         || ೨ ||

ಪಡೆಯಿಸಂಕಲ್ಪೋದಯವದಿದೊ ಕೊಡುವೆ ವೈಶಾಪವಿದ
ಪಡೆಯಿರಿ ಹಿಡಿರೈಖಲಜನ್ಮನಿಮಗೀ ಯಡೆಯುಸಲ್ಲಾ   || ೩ ||

ಆರ್ಯ

ಕೇಳಿ ನುಡಿಯಕೃ-ಗೋಲರು ಕಳವಳ-ತಾಳಿದು ಕಂಪನಛಡಾಳಿಸಲೂ |
ಘೋಳಿಡುತಲಿ ಜನಜಾಲವು ಕುಂಬಿಡೆ ಕಾಲಿಗೆ ಬಿದ್ದರು ಭಯದಿಬಲೂ     || ೧ ||

ರಾಗ-ಸೀತಾ | ರೂಪಕತಾಳ

ಲಾಲಿಸಿ ಮುನಿಗಳು ಪರಮಕೃಪಾಳುಗಳೈಸಲೆ ನಮ್ಮನ-
ಪಾಲಿಪುದನುಚಿತ ಕೃತ್ಯದ ಲೀಲೆಗಳನು ಮರದೂ ||
ಬಾಲಕರೆಸಗಿದ ತಪ್ಪನು ಪಾಲಿಸದೀರ್ದಡೆ ಮಾತೆಯು
ಕೇಳುವರಾರೆನೆ ಮುನಿಕುಲ ಪಾಲರು ನುಡಿಯದಿರೇ    || ೧ ||

ಯಾತಕೆ ಬಂದರೊ ತಾಪಸ-ರೇತಕೆ ತಡದೆವೊ ದ್ವಾರದಿ
ಯಾತಕೆ ಕೆಡದರೊ ಶಾಪವನ್ಯಾತಕೆ ನೀಡಿದರೋ |
ಯಾತಕೆ ಸೇರಿತು ಹರಿಪದ ವ್ಯಾತತೆಬಂದುದು
ದುರ್ವಿಧಿ ನೀತಿಯ ತಪ್ಪಿದೆವೈ ಜಗನ್ನಾಥನೆ ರಕ್ಷಿಪುದೂ || ೨ ||

ಭಾಮಿನಿ

ಇಂತು ದುಗುಡದೊಳಿರಲಿ ಕತ್ತಲು
ಕಂತುಪಿತತಾಂ ತಿಳಿದು ಮನದಲಿ
ಬಂತು ಬಾಹಿರರಿಂದಲೆನಗಪಕೀರ್ತಿ ಮೊಳೆಯನುತಾ ||
ಸಂತಸದೊಳೆಡಬಲದೊಳಿಹ ಜನ
ತಿಂಥಿಣಿಯ ಬೀಳ್ಕೊಟ್ಟು ಮನದೊಳ
ಗಂತರವನಿರ್ನೈಸು ತಿಳಿದ ನಹೀಂದ್ರ ವಿಷ್ಮರವಾ      || ೧ ||

ರಾಗ – ಮು. ಏಕತಾಳ

ಹರಿ ಬಂದನಲ್ಲಿಗಾಕ್ಷಣಾ | ಸರಸಿಜ ನಯನಾ | ಹರಿ  || ಪಲ್ಲವಿ ||
ಧರೆಯಿಡೆ ಚಾಮೀಕರ ದುರುಪಾದುಕೆ ಸಿರಿಕರದೊಳ್ ವಿಸ್ವುರಿಸಲ್ಚಾ |
ಮರ ಸುರನದಿಕಲರ್ಶೋತ್ಕರ ಮೋರೊಂದೆಡೆ ವರಪ್ರಬಲಾದಿಗಳಿರಲೆಡ
ಬಲದಲೀ | ಹರಿಬಂದ || ಅನುಪಲ್ಲ ||

ಕೊರಳ ಮೌತ್ತಿಕ ಹಾರದಾಪೇರುರದದಿವ್ಯಾ |
ಭರಣಕೌಸ್ತುಭತೇಜದಾ | ಸಿರಿಮೊಗದಲಿ ಬಂಧುರದ
ತಿಲಕಮೊಪ್ಪಿರಲು ಚತುಷ್ಟಯ ಕರದೊಳು ಚಕ್ರಾಂಬರರುಹಗದಾ
ಕಂಬಿರದೆಸೆಯಲು ನಿಜ ಶಿರದಲಿ ಮಲ್ಲಿಗೆ ಮೆರೆಯೆವೇದೋದ್ಧರ |
ಹರಿಬಂದನಲ್ಲಿಗಾಕ್ಷಣಾ     || ೧ ||

ವಾರ್ಧಿಕ ಷಟ್ಪಧಿ

ಜಯಜಯ ರಮಾರಮಣ ಜಯ ಭಾನುಶತ ಕಿರಣ –
ಜಯ ದುಷ್ಟಕುಲ ನಾಶ ನಿಗಮ ನಿರ್ಮಲ ಘೋಷ
ಜಯಕೃಷ್ಣಗೋವಿಂದ ಪರತರಾತ್ಮಮುಕುಂದ ಜಯತು ವಿಶ್ವೇಶಮೀಶಾ ||

ಜಯತು ಹರಿಭುಜಗೇಂದ್ರಶಯನ ಸದ್ಗುಣಸಾಂದ್ರ
ಜಯತು ಮೂಜಗದೀಶ ಜಯಪಯೋದಧಿವಾಸ
ಜಯಭಕ್ತ ಸಂರಕ್ಷ ಜಯಜಯತು ಕಮಲಾಕ್ಷ ಜಯತೆಂದರಾ ಮುನಿಗಳು  || ೧ ||

ರಾಗ-ಮ. ಮಾ. | ತಾ-ತ್ರಿ

ಕಡಲಜೆಯನಪ್ಪುವ ಕರಂಗಳೊಳಡಿಗೆರಗಿದಾ ಶ್ರಿತರನೆತ್ತುತ
ತಡವಿತಳ್ಕೆವಿಸುತ್ತ ನುಡಿದನು ಮೃಡನ ಸಖನನು ನಯದೊಳೂ |
ಚಂದದಿಂದಾ     || ೧ ||

ಬಂನಿರೆಂನಾನೆಗಳು ಭಾಗ್ಯರು ಬಂನಿರೈ ಮಮದ್ವಾರ ಪಾಲರು
ಕುಂನಿಗಳು ತಡವಿದರೆ ನಿಮ್ಮುವನನ್ಯರೆಂದೇ ಬಗೆಯುತಾ |
ಲೆಂದನಾಗಾ      || ೨ ||

ಪಾರುಷದ ಜನರಲ್ಲ ದ್ರೋಹವ ಸೇರಿಸಿದೆ ನಿಮಗಾನೆಯವದಿರ
ಮೀರಿರುವ ಕರತೀರ್ಚುವೆನು ಮದವೇರಿದುದಕಿಂದೀಗಲೇ
ಯಂದ ನಾಗಾ   || ೩ ||

ಅಡದಿಹುದೇ ಲೋಕಭೃತ್ಯರು ಮಾಡಿದಪರಾಧವನು ಗುಣವನು
ಹೂಡುವುದು ಧೊರೆಗಳಿಗೆ ಭಜಕರ ನೋಡದಿಹುದೇ ನಜ್ಞತೇ |
ಯಂದ ಹರಿಯೂ || ೪ ||

ತಡೆಯದಾಯು ಶ್ರೀಗಳಿಂಗೊಡಬಡುವ ಡೌಕುವ ಕಾಲಪಾಶವ
ಕೆಡೆಯೊದೆವ ಡಾರಾಧಿಸುವದಾ ಪೊಡವಿಸುರರಾ ಸಂತತಾ ||
ಯಂದನಾಗಾ    || ೫ ||

ರಾಗ ದ್ವಿಜಾವಂತು ಝಂಪೆ ತಾಳ

ಕೇಳಿ ಮುನಿತಿಲಕರಿರಾ ಪರಿತೋಷವೆರದೂ |
ಪೇಳುವೆನು ಮನದನುವ ನಾನಿಂಮೊಳೊಲಿದೂ || ಕೇಳಿ || ಪಲ್ಲವಿ ||

ಯಾಗಾ ಸಾವಿರವೆಸಗಿ ಘ್ರತಸೂಪವಿತ್ತಡೆಯು ಯೋಗಿಗಳ ಮನ ಹರುಷವಿಲ್ಲದಿರೆ ತನಗೇ |
ಆಗದೈ ಸಲೆ ತೃಪ್ತಿ ಭಜಕರೊಳಗಿನ ಮೋಹ ಪೋಗ
ಲರಿಯದು ಕೋಟಿ ಯುಗಯುಗಾಂತರಕೂ || ಕೇಳಿ ಮುನಿ       || ೧ ||

ಅರಿಯದೇನೆಸಗಿದರು ಗ್ರಹಿಸಿದೋಪದಪರಿಯ ಶರಣರನು ಪಾಲಿ
ಪುದೆ ಧೃಡಮನದ ಬಯಕೇ | ಹರಿಯ ಮಹಿಮೆಯ ಪೂರ್ಣವರಿಯದ
ಜ್ಞಾನಿಗಳು ಹರಿಭಕತರನು ಕೆಣಕಿ ನರಕವಾಳುವರೂ | ಕೇಳಿ     || ೨ ||

ಪೊದದಡೆಂನುರಕೆ ಭೃಗು ಪದವ ಪೂಜಿಸಿ ಕೀರ್ತಿಪ್ರದವನಾಕೃಕೊಂಡೆ
ನದನರಿಯದವರೇ | ಅದರಿಂದ ಭವಭಯವ ಕೆಡೆಯೊದೆದ ಯೋಗಿ
ಗಳು ಸದಮಳರುಯನ್ನಂತೆ ಸಕಲ ಸಂನೂತರೂ || ಕೇಳಿ       || ೩ ||

ಸಿರಿ ತನಗೆ ಸರಕಲ್ಲ ಕಮಲಜನ ಹಂಗಿಲ್ಲ ಪರಶಿವನ ಭಯವಿಲ್ಲ ಸುರರೊಡನೆ
ಧಿಟಕೇ | ಬೆರಸಿಕೊಳದಿಹೆ ಮೋಹಭರಿತ ಸಚರಾಚರದಿ ಹರಿಪೂರ್ಣ
ನೆಂಬವರಿಗೆರಕವಾಗಿಹೆನೂ || ಕೇಳಿ || ೪ ||

ಹೇಮಹಾ ಮುನಿಗಳಿರ ಮರದುಮಾಡಿದ ಕೃತ್ಯಸಾಮದೊಳು ರಕ್ಷಿಪುದು ಜಯವಿಜಯರಿವರಾ
ಪ್ರೇಮದಿಂತತ್ಪಾದ ತಾಮರಸಕೊಂದಿಸುವೆ ಸ್ವಾಮಿಗಳೆ ಕ್ಷಮಿಸುವುದೆನುತ ಕೈಮುಗಿದಾ ||
ಕೇಳಿ ಮುನಿತಿಲಕರಿರ ಪರಿಶೋಷ   || ೫ ||

ಭಾಮಿನಿ

ಯೋಗಮಾಯಾದೀಶ್ವರನುವರ
ಯೋಗಿಗಳಿಗಭಿನಮಿಸಲಮರರು
ತೂಗೆ ನಿಜಮಸ್ತಕವ ಮುನಿಗಳು ನಿಂದು ಬೆರಗಾಗೀ ||
ಈ ಗಲಿದು ತಾರ್ಲೊಕ ಸಂಗ್ರಹ
ಕಾಗಿ ನಟಿಸುವನಲ್ಲದಿರಲೀ
ಯೋಗಮೂರುತಿಗೇಕೆನಯವಿನಿತೆಂದರವರಂದೂ     || ೧ ||

ರಾ-ಮ | ಮಾ-ಏಕತಾಳ

ಯೇನಿದು ಮಹಿಮಯೇನೆಲೆ ಪೀತಾಂಬರನೇ |
ಮಾನವರಂದ ದೊಳೆರಗುವೆವರನೇ |
ದಾನಾವಾಂತಕ ಸತ್ವಗುಣನಿಧಿದಿಟವೂ |
ಈನೋಳ್ಪ ಜಗದ್ವ್ರತ್ತಿ ನಿನ್ನ ನಾಟಕವೂ       || ೧ ||

ಇಂದಿರೆ ರಮಣಗೋವಿಂದ ಚಿನ್ಮಯನೇ |
ತಂದೆ ಕೊಂಡಾಡಲು ಕಂದ ಹಿರಿದಹನೇ |
ಹೊಂದೀರ್ಪ ಶರಣರಿಗುಚಿತವಾದುದನೂ |
ನಿಂದು ನಿರೂಪಿಸಲಲ್ಲೆಂಬುದೇನೂ  || ೨ ||

ಹಾಗಾದರಾಗಲಿ ಮೂರೇ ಜಲ್ಮದಲೀ |
ಲೋಗರೆಂದೆನಿಸಿ ಭೀಕರ ಕೃತ್ಯಗಳಲೀ |
ಸಾಗಲೆನ್ನಲಿವೈರವಿಡಿದು ನಾಶನವಾ |
ನೀಗರ್ವರೆನಲೊಪ್ಪಲಾದುದು ವಿಭವಾ        || ೩ ||

ವಾರ್ಧಿಕ ಷಟ್ಪದಿ

ಮನ್ನಿಸಿದು ಮುನಿಗಳಂ ಕಳುಪಿಹರಿನಸುನಗುತ
ತನ್ನವರಿಗೆಂದ ನೀವಂದೊಡತಿಯಂ ತಡೆದ
ಘನ್ನಾಂಟಿ ತೈಸೆಸಜ್ಜನರಕೋಪಂತಾಪಮಂ ಮಾಡದೇನಿರ್ಕುಮೇ ||
ಯನ್ನಲಡಿಗೆರಗಿ ಚಿನ್ಮಯನೆ ಜನ್ಮತ್ರಯಗ
ಳನ್ನೀಗಲೆಂತನಲ್ ಧರಣಿ ಧರಣೀಧರರು
ಚನ್ನೆಸಿರಿ ಚಕ್ರರಾಜರು ಹೊಣೆಗೆನಿಲೆಚಕ್ರಿ ಪಾರ್ಶ್ವದ್ವರಿಂಗೆಂದನೂ         || ೧ ||

ರಾಗ-ಕೆ | ಝಂಪೆ-ತಾಳ

ಕೇಳಿರೈ ಜಯವಿಜಯರೂ ಯತಿಗಳಿಗೆ ಕೋಲನಡ್ಡೈಸಿ ಭೀರೂ ||
ಕೀಲಿಸಿದಿರೈ ಭುವನಕೇ ದುಃಖಿಸದಿರೇಳಿ ಮೂರೇ ಜನ್ಮಕೇ       || ೧ ||

ಸೇರಿಸುವೆ ನಿಜಪದವನೂ | ಧೃಡವಿದಕೆ ಬೇರೆ ಯೋಚಿಸದಿರಂನೂ |
ಮೀರಲರಿದುಕರ್ಮವೂ | ಶ್ರುತಿಸಿದ್ಧ ಧಾರುಣಿಯೊಳುದಿಸಿ ನೀವೂ         || ೨ ||

ಚಿರಕಾಲವಿರೆತರಿವೆನೂ | ಪಾಪಯುತವರಜಲ್ಮವದರನಿಂನೂ |
ತೆರಳಿರೆನುತುಳಿದವರಿಗೇ ನೀತಿಗಳ ಧರಧರದೊಳೆಂದಕಡೆಗೇ  || ೩ ||

ವಾರ್ಧಿಕ ಷಟ್ಪದಿ

ಅಂಗಜನಪಿತನತ್ತಲೈದೆಸಿರಿತಂದೆತ್ತೆ
ಮಂಗಳಾರತಿಗಳು ಸುರರು ಪೂಮಳೆ ಸುರಿಸೆ
ಶೃಂಗರದಿ ಸತಿಸಹಿತಲಹಿ ರಾಜಶಯ್ಯೆಯೊಳ್ ಹರಿಮೆರದನಾ ನಂದದೀ ||

ತುಂಗಬಲವಿದುರಕೇಳ್ ಮುಂದಣಾಗಮವವಿಧಿ
ಯಂಗದಿಂ ನವಪ್ರಜೇಶ್ವರರಾಗೆ ಮಾನಸದಿ
ಕಂಗೊಳಿಪ ಮುನಿಮರೀಚಿಯೊಳಾದ ಕಾಶ್ಯಪಂ | ವರತಪೋಧನ ವಾರ್ಯನೂ    || ೧ ||

ಭಾಮಿನಿ ಷಟ್ಪದಿ

ವಿತತಮತಿ ಕಾಶ್ಯಪಗೆ ದಕ್ಷನ
ಸುತೆಯರಾಹದಿ ಮೂರಲಗ್ನವ
ನತಿಶಯದಿ ಮಾಡಿದೊಡೆಯವರೊಳು ಪಿರಿಯಳಾದಿತಿಯೂ ||
ಮತಿಯುತೆಯು ಸೋದರಿಯರೆಲ್ಲರು
ಸುತನುತಾನಂದದೊಳಗಾಳ್ವರು
ಸತತಬಾಹಿರಳಾದೆನೆಂದಳು ಸುತರಕಾಂಕ್ಷೆಯಲೀ     || ೧ ||

ರಾಗ-ಸಾಂಗತ್ಯ

ಕಂಣಿಲ್ದ ಮೊಗಚಲ್ವ ಹೆಂಣಿಲ್ದ ಸಂಸಾರ ಬಂಣಿಲ್ದ ಸ್ವರ್ನಮಾಲಿಕೆಯೂ |
ಮಂಣಿಲ್ದ ವೈಭೋಗ ಸುಂಣಿಲ್ದವೀಳಯವೆಂಣಿಸಲಿದು ವ್ಯರ್ಥವಲ್ಲೈ        || ೧ ||

ವಕ್ಕಲಿಲ್ಲದ ಗ್ರಾಮರೊಕ್ಕವಿಲ್ಲದ ಬಾಳು ಮಕ್ಕಳಿಲ್ಲದ ಭಾಗ್ಯವೇಕೇ |
ಅಕ್ಕಟೆನುತ ಸಂಧ್ಯಾವಂದನೆ ಸಮಯದಿ ಹೊಕ್ಕಳು ಪತಿಯ ಸಂನಿಧಿಗೇ || ೨ ||

ರಾಗ ನಾ ಏಕತಾಳ

ಪ್ರಾಣಾದೊಲ್ಲಭಕೇಳೂ | ಬಲ್ | ಜಾಣಕಾರುಣ್ಯದೊಳೂ |   || ಪಲ್ಲವಿ ||
ಯೇಣಾಂಕನುಸುಮಬಾಣ ಸಮೀರೆಣರೇನು ಬಲರೊ ಹಾಜಾಣ ನಿಕಾಯದಿ  || ಅನುಪಲ್ಲವಿ ||
ಸುಟ್ಟರು ಬಾಳುವನೋರ್ವಾ | ಉರಿಮುಟ್ಟಿದು ಬಾಳುವನೋರ್ವಾ |
ದುಷ್ಟಾಹಿಯು ಮುಟ್ಟಿ | ಬಿಟ್ಟಿರು ಬದುಕುವ ರಟ್ಟುಳಿಗೊಳುವರೆ ಬಟ್ಟಸ್ತನೆಯರ | ಪ್ರಾಣಾ      || ೧ ||
ಪೂಗೋಲಾನಿನಿಬರೊಳು | ಶರತಾಗಿಸಲೆನ್ನಂಗದೊಳೂ |
ಬಾಗಿದೆ ಮೂರ್ಖನ ನೀಗೆಲತಕ್ಕವನಾಗಿರೆ ಭಯವೆನಗೇಗುವದೈ ಪ್ರಿಯಾ | ಪ್ರಾಣ || ೨ ||
ಅನುಜಾತೆಯರ ಸುತರಾ | ಕಂಡು ಮನಕಪ್ಪುದತಿ ಕ್ರೂರಾ |
ಯನಗೆ ಕುಮಾರರನನುಗೊಳಿಸೈ ಗುಣವನಧಿಶಭಾಸೆಂನಿನೆಯ ಪರಾಕೂ |
ಪ್ರಾಣದೊಲ್ಲಭ ಕೇಳೂ     || ೩ ||