ಮುನ್ನುಡಿ

ಆತ್ಮೀಯ ಬಂಧುಗಳೇ,

ಮೊದಲ ಮಾತು ಅನ್ಯರಿಂದ ಬರೆಸಬೇಕೆಂದಿದ್ದೆ. ಆದರೆ ಹೀಗೆ ತೋರಿತು ಕಾವ್ಯಕುರ್ತವೇ ಬರಿಯವದೊಳ್ಳಿತೆಂದು ನಾನೇ ಆ ಕಾರ್ಯಕ್ಕೆ ಕೈನೀಡಿದೆನು. ಕವಿಯ ಪರಿಚಯವು ಸೇಕಡಾ ತೊಂಭತ್ತು ಜನರ ಮಟ್ಟಿಗೂ ಗೊತ್ತೇ ಇದೆ. ಆದರೆ ಸಮಾಜದೊಳಗೆ ಅಪರಿಚಿತರ ಪರಿಚಯಕ್ಕಾಗಿ ಬಾಯಾರ ಜತ್ತಿ ಆಶುಕವಿ ಈಶ್ವರ ಭಾಗವತರು ಸಂಪೂರ್ಣ ರಾಮಾಯಣ ಮೊದಲಾದ ಏಳು ಪ್ರಸಂಗಗಳನ್ನೂ, ಹರಿಕಥೆಗೊಪ್ಪಿದ ಚಿಕ್ಕ ಕಥೆಗಳನ್ನೂ ಇವರೇ ರಚಿಸಿದವರೆಂದು ಗೊತ್ತುಗೊಳಿಸುವೆನು. ಈ (ವರಾಹ ಚರಿತ್ರಂ) ಚಿಕ್ಕ ಪ್ರಸಂಗವನ್ನು ಹಳ್ಳಿ ಶಾಲೆಯಲ್ಲಿ ವಿದ್ಯಾವ್ಯಾಸಂಗ ಮಾಡುತ್ತಿರುವಾಗ ಲೋಕವ್ಯವಹಾರ ಏನೂ ಅರಿಯದ ೧೨ನೇ ವಯಸ್ಸಿನವನಾದ ನನ್ನ ಬುದ್ಧಿಯಿಂದ ಶ್ರೀದೇವರೇ ಹೊರಗೆಡವಿದನು. ಆ ಕವಿತೆಯಲ್ಲಿ ಈಶ್ವರನೆಂಬ ನಾನು ವಿಶ್ವವೆಂಬ ಪದ ಮುಂದಿಟ್ಟು (ವಿಶ್ವ+ಈಶ್ವರ) ವಿಶ್ವೇಶ್ವರ ಅಂಕಿತವಿಟ್ಟದ್ದಲ್ಲದೆ ಮುಂದಿನ ಪ್ರತಿಕೃತಿಗಳಲ್ಲಿ ವಿಶ್ವೇಶ್ವರ, ವಿಶ್ವನಾಥ ಎಂತಲೇ ಪದಾಂತ್ಯ ಬರೆಯುತ್ತಿದ್ದೇನೆ ಪರಂತು ಈ ಪ್ರಸಂಗವು ಅಂದೇ ನನ್ನ ಕಣ್ಮರೆಯಾಗಿತ್ತು. ಪ್ರಕೃತ ಎಲ್ಲಾ ನನ್ನ ಬಾಬ್ತು ಲಿಪಾಪೆಗಳುಳ್ಳ ಪೆಟ್ಟಿಗೆ ಶೋಧಿಸುವಲ್ಲಿ ದೈವವಶಾತ್ ಇದು ದೊರೆಯಿತು. ನೋಡಿದರೆ ಪದಗಳು ಸರಳವಾದ ಆಡುನುಡಿಗಳಿಂದ ಕಟ್ಟಲ್ಪಟ್ಟಿದೆ. ಕಥಾಸರಣಿ ಭಾಗವತವನ್ನು ಏನೂ ಬಿಟ್ಟಿಲ್ಲ. ಪ್ರಿಯ ವಾಚಕರೇ ಷಡಕ್ಷರಿಯ ಶಬರಶಂಕರವಿಲಾಶ ||ಕಂದ|| ತೆಗಳಿಲ್ ಬಲ್ಲಂಖಿಲಂ ತಾಂ | ನೆಗಳಲ್ ಬಲ್ಲನೆನವೀನ ಕೃತಿಯಂಶಾಖಾ || ಮೃಗಮಲಂ ಮಾಲೆಗೀಳಲ್ | ಮಿಗೆಬಲ್ಲುದಲ್ಲಿದಂತಿರೆಯೇಂ ರಚಿಯಿಕುಮೇ || ಈ ಭಾವಕರು ಈರ್ಷೆಯಿಂದ ಹಳಿದರೂ ಹಳಿವಲ್ಲವೆಂದೇ ಭಾವ, ಕವಿಯ ಕುಂದುಕಗಳನ್ನು ಗಮನಿಸದೇ ರಚಿಸಿದ ಕಾಲವನ್ನು ನೋಡಿ (ಇದಮಮೃತ ಬಾಲಭಾಷಿತಂ) ಇದಂ ಭಾವಿಸಿ ಕವಿಗೆ ಆಶಿಸುವಿರಾಗಿ ನಂಬುತ್ತೇನೆ. ಈ ಹಣದ ಅಡ್ಚಣೆ ಕಾಲದಲ್ಲಿ ಯೇನೇನೋ ಪ್ರಯತ್ನಪೂರ್ವಕ ಮುದ್ರಿಸಿ ನಿಮ್ಮ ಮುಂದಿಟ್ಟಿರುತ್ತೇನೆ. ಈ ಕಾಲವೆಂದರೆ ಕನ್ನಡ ಸಾಹಿತ್ಯದಲ್ಲಿ ಹೊಸ ಹುರುಪೆದ್ದ ಕಾಲ. ಈ ಸುಸಂಧಿಯಲ್ಲಿ ಸಾಧ್ಯವಾದಷ್ಟು ದೇಶಸೇವೆ ಮಾಡಲಿಚ್ಛಿಸುವ ಕವಿಯ ಭಾಗಕ್ಕೆ ಸಂತುಷ್ಟರಾಗಿ ಪೂರ್ಣ ಪ್ರೇಮಭಾಗಿಗಳಾಗಬೇಕಾಗಿ ಪ್ರಾರ್ಥಿಸುತ್ತೇನೆ – ಇದರ ಮುದ್ರಣಕ್ಕಾಗಿ ತುಂಬ ಖರ್ಚು ಮತ್ತು ಶ್ರಮ ತಕ್ಕೊಂಡು ನಮ್ಮೊಳಗಿನ ಮೈತ್ರತೆಯನ್ನು ಮತ್ತಷ್ಟು ವೃದ್ಧಿಗೊಳಿಸಲಿರುವ ತಮ್ಮ ಉದಾರತೆಯನ್ನು ವ್ಯಕ್ತಗೊಳಿಸಿದ ಮಂಗಳೂರು ಪ್ರೆಸ್ಸಿನ ಶ್ರೀ ಯಂ. ನಾರಾಯಣ ಪ್ರಭುಗಳವರಿಗೆ ಕೃತಜ್ಞತೆಯಿಂದ ನನ್ನ ಹೃತ್ಪೂರ್ವಕ ವಂದನೆಗಳನ್ನು ಸಮರ್ಪಿಸುತ್ತೇನೆ.

ಇತಿ ಸಜ್ಜನ ವಿಧೇಯ,
ಬಾಯಾರ ಜತ್ತಿ ಈಶ್ವರ ಭಾಗವತ
ಮೊ.ಚಿ.
ತಾ . ೯-೪-೪೧