ರಾಗ ಬಿ. ಏಕತಾಳ

ಭಲಾಭಲಾಭಲ್ ಶಭಾಸು ರಾಕ್ಷಸ ಕುಲತಿಲಕನೆನೀ ಕೇಳೆಲಾ
ಬಲಹಂಕಾರದೊಳೇತಕೆ ಕಾಡುವೆ ಸಲುವುದೆ ಗರ್ವವು ಹೇಳೆಲಾ         || ೧ ||

ಸನ್ನುತನಾದರೆ ಧರೆಯೊಳ್ ಸುಜನರ ಬನ್ನವ ಬಡಿಸುವದೇಕೆಲಾ |
ಸ್ವರ್ಣದ ಗಟ್ಟಿಯ ವನ್ಹಿಯೊಳಿಡದಿರೆ ನಾಣ್ಯಗಳಪ್ಪುದೆಯೇನೆಲಾ  || ೨ ||

ಬಿಡುಬಿಡು ನಿನ್ನಯ ಸಡಗರ ಮಾತನು ವಡೆಯನಾರಾಯಣನೆಂಬವಾ |
ಕಡುಹೀನಭಟರನು ಪೊಡೆವಗ್ಗಳನನು ತಡವೆಯ ಪೇಳುವೆ ವಾಹವ್ವಾ    || ೩ ||

ಯಿಂದಿರೆರಮಣನು ಸುಂದರರೂಪ ಗೋವಿಂದನ ನೆಲೆಯ ನಾಪೇಳುವೇ |
ಹಂದಿಯರೂಪ ರಸಾತಳದೊಳಗಿರುವಂದವ ಕಂಡಿಹೆಪೋಗುವೇ         || ೪ ||

ವಾರ್ಧಿಕ ಷಟ್ಪದಿ

ಯತಿವರನ ಬೀಳ್ಕೊಳುತ ಹರಿಯಕಾಂಬುಜ್ಜುಗದೊ
ಳತುಲ ಭುಜಬಲನಾರಸಾತಳಕೆ ದಾರಿಯಂ
ಶ್ರುತಗೊಳಿಪೆನೆಂದೆನುತ ಮೆಟ್ಟಲೀ ಧರಣಿಯಂ ಕಡಲಥೆರೆಯಂತೆ ಹೊರಳೇ ||

ಹತಹತಿಯೊಳಖಿಳಜನ ತತಿಯಳಿದುಮಳವಳಿದು
ಕ್ಷಿತಿಜಲಾರ್ಣವವಾತ್ತು ಸಚರಾಚರಂಪೊತ್ತು
ದಿತಿಜನೇನಗ್ಗಳನೊ ಕಂಪಿಸಿತಜಾಂಡವದು – ಪೃಥುವಿಸತಿ ಮೊರೆಯಿಟ್ಟಳೂ       || ೧ ||

ರಾಗ ಖಮಾಚು ಏಕತಾಳ

ಪಾಲಿಸು ಪಂಕಜದಳನಯನಾ | ನತತತಿನುತಚರಣಾ  || ಪಲ್ಲ ||
ಶೀಲಯಸ್ಥಿತಮಕರಾಲಯವರ ವನಮಾಲಯ ಪ್ರಿಯಪದ್ಮಾಲಯ ಚಿನ್ಮಯಾ |
ಪಾಲಿಸು   || ಅನು ಪಲ್ಲ ||

ಶಂಖಚಕ್ರಗದೆ ಖಡ್ಗ ಪೀತಾಂಬರಧಾರೀ | ಶೌರಿ-ಶಂಕರಪ್ರೀಯ ಮನೋಹರ ಮತ್ಸ್ಯವತಾರೀ |
ಸಂಕರುಷಣವೇಕಾಂಕಿತನಾಮ ಕಳಂಕರಹಿತ ಶ್ರೀಓಂಕಾರಪ್ರಿಯ | ಪಾಲಿಸು       || ೧ ||

ದೀನದಯಾಪರ ತತ್ವವಿನೋದ ವಿನೋದಾ | ಮೋದಾ |
ಭೂನಾರೀ ಸಿರಿವಲ್ಲಭ ಸಜ್ಜನಬೋಧಾ | ಮಾನಿನಿ ಕಳದರು
ಮಾನವಕಾದ್ದೆನೆಂ | ಬಾನುಡಿಗೊಪ್ಪಿದೆ | ದಾನವಮರ್ದನ | ಪಾಲಿಸು     || ೨ ||

ನಚ್ಚಿದನಾರಿಯ ಕೈಬಿಡಬೇಡವೊ ದೇವಾ | ದೇವಾ |
ಸಚ್ಚಿನ್ಮಯದಾಶಾರ್ಹ ಮಹಾಪ್ರಭುಕಾವಾ |
ಯಿಚ್ಚೆಯದಿರೆ ಪ್ರಿಯನಚ್ಹಿನವಳನೀಲುಚ್ಚಗೆಮಾರದೆ ನಿಚ್ಚಯ ಪೊರೆಧೊರೆ ||
ಪಾಲಿಸು ಪಂಕಜದಳ ನಯನಾ     || ೩ ||

ವಾರ್ಧಿಕ ಷಟ್ಪದಿ

ಮತಿಗೆಟ್ಟೆ ಧೃತಿಗೆಟ್ಟೆ ಪಥಗೆಟ್ಟಿನೈ ದೇವ
ಪ್ರತತಿಗತಿಮತಿಯೆ ಮದ್ವಲ್ಲಭಾಸ್ವಾಮಿಕಾ
ಮಿತಧಾತಧಾತಃ ಸ್ವಯಂಭು ಓಂ ಹರಿವಿಷ್ಣು ಕರುಣಾಬ್ಧಿಕಾವುದೆಂದೂ ||

ಕ್ಷಿತಿಮರುಗೆ ನುಡಿಕೇಳಿ ಪೃಥುವಿದಾಡೆಯೊಳಾಂತು
ಖತಿಯಿಂದ ಫಲ್ಗಡಿಯುತಿದಿರಾಗಿ ಘರ್ಜಿಸುತ
ಧೃತಿಗೆಡಿಸಿ ಖಳಪತಿಯನಬ್ಧಿಯೊಳ್ ಮೈದೋರ್ದ ಘನವರಾಹ ಸ್ವಾಮಿಯೂ       || ೧ ||

ರಾಗ ಮಾ ಏಕತಾಳ

ಯಲೆಯಲೆ ಯೇನು ವಿಚಿತ್ರವೊ ಜಲದೊಳುಮಲತಿಹುದೀ ವರಹಾ |
ಫಲವಿದುತನ್ನಯ ಪುಣ್ಯದ ಬಳಕೆ ಕಂಗಳಿಗೆ ಗೋಚರವಾದೈ    || ೧ ||

ಬಿಡಿಬಿಡಿ ನಾಗಳ ತೊಡಿತೊಡಿ ಬಲೆಗಳ ಯಿಡಿರಿಡಿರೀಟಿಯಲೀ |
ಬಿಡೆಬಿಡೆನಿದರನು ಪೋಗಲು ಮುಂದಕೆ ಹಿಡಿಹಿಡಿರೈ ಧನುವಾ   || ೨ ||

ಬಿಡುದಾಡೆಯಧರೆಗಮನವಿದೆಲ್ಲಿಗೆ ನಡೆಗೊಡಲೆಡೆಯಿಲೈ |
ವೊಡೆಯನೆ ನೀಂಫಡನುಡಿನುಡಿ ಭಳಿರೇ ಯಡಿಯಿಡಬಿಡೆನಲ್ಲ   || ೩ ||

ಭಾಮಿನಿ ಷಟ್ಪದಿ

ಲಜ್ಜೆಯಿಲ್ಲದ ಭಂಡ ಫಡಫಡ
ಹಜ್ಜೆಯಿಡದಿರು ಮುಂದೆ ಸಂದುದು
ಕಜ್ಜವಿದು ನಿನಗೆನುತ ದುರ್ಮತಿ ಮೂದಲಿಸುತಿರಲೂ ||
ಉಜ್ಜಲಿಪ  ಕೋಪಾನಲನ ಬಲು
ಕಜ್ಜಳವ ಕೆದರಿದನುವಿಲಯದ
ದೂರ್ಜಟಿಯರೂಪಾದ ಖಳಕುಲ ಕಾಲಭೈರವನೂ     || ೧ ||

ರಾಗ ಸಾರಂಗ ತಾಳ ತ್ರಿವುಡೆ

ಖೂಳಖಳ ಕೇಳೆಲವೊ ತೆಗೆತೆಗೆ ಮಾಲಿಸಿದ ಬಲೆಹಂದಿಯಹೆ
ನಾನಾಳುತನವೆನಗಿಲ್ಲ ಬಲು ಕಟ್ಟಾಳು ನೀನೂ        || ೧ ||

ರಾಗ ಮರಾಠಿ ಏಕತಾಳ

ಫಡಫಡ ವಿಕ್ರಮನಾದರೆ ಸಮರವ ಕೊಡುಕೊಡು ಸುರರಿವರಾ |
ಬಿಡುಬಿಡು ಬಿರುನುಡಿ ಪಡೆಯಂನಯದಯ ಬಿಡುವೆನು ಕೊಲೆನಿನ್ನಾ      || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಆದರೆಲೆ ರಿಪುಭಟರ ನಾನಾ | ರಾಧಿಸೆನು ಧಿಟವೆಂಬ ಮನವೆನ
ಗಾದರೆಯು ನೀಗೆವುಲುದಿದ್ದರೆ ಸಾಧಿಸುವದೂ || ೧ ||

ರಾಗ ಮರಾಠಿ ಏಕತಾಳ

ಯಾಕೆನಿ ಸಹಜವ ಬಿಟ್ಟಿದ ಧರಿಸಿದೆ ಸೂಕರ ರೂಪವನೂ |
ಸಾಕ್ ಬಿಡು ಮಲತೆರೆ ಶಾಕಿನಿ ಬಳಗಕೆ ತೋಕುವೆತನಿಗರುಳಾ || ೨ ||

ರಾ-ಸೌ | ತಾ.-ತ್ರಿ

ವೋಹೊ ನಿನ್ನೊಡ ನಿಂದು ತನಗಿನ್ನಾಹವವು ಸರಿಯಲ್ಲವೆಲ್ಲಿ
ಯು ಹೋಹ ದಾರಿಯ ಕಾಣೆ ನಾನೆಲೆ ಬಾಹುಬಲನೇ  || ೩ ||

ರಾ ಮಾ ಏಕತಾಳ

ಘೃಷ್ಟಿಯ ರೂಪದಿ ಪುಟ್ಟಿದೆ ಕರೆಕರೆ ಸೃಷ್ಟ ಮಹೇಶ್ವರರಾ |
ವಟ್ಟಲಿಕೊಡು ಧುರಬಿಟ್ಟಿಪೆನೇ ಬಡ ವಿಷ್ಣುವೆ ಭಳಿರೆಂದಾ         || ೩ ||

ಭೋಗ ಷಟ್ಪದಿ

ದಿತಿಜನೆಂದ ಮಾತಗಣಿಸ
ದತುಲಬಲ ವರಾಹ ಸ್ವಾಮಿ
ಕ್ಷಿತಿಯ ಮುನ್ನಿನಂತೆ ಯಥಾಸ್ಥಿತಿಯೊಳಿರಿಸುತಾ |
ಗತಿಸದಂತೆ ನಿಜಬಲೋಂ
ನತಿಯನೀಯಲಮರವಿತತಿ
ನುತಿಸುತಲರ ಮಳೆಯ ಸುರಿಸೆ ಖತಿಯೊಳ ಸುರತಾ || ೧ ||

ರಾಗ ಭೈರವಿ ಏಕತಾಳ

ಬೇರು ನಿಸುರರಿಗೆ ನಿನ್ನಾ | ಕೊಂದ್ಹಾರಿಸದಿರೆ ಸಂಪೂರ್ಣ |
ಬೇರನು ಕಡಿದರೆ ಮರವೂ | ಬೇರಾರಾಶ್ರೈಪುದು ದಿಟವೂ       || ೧ ||

ಹೂಂ ಕರಿಸುತ ಶ್ರೀನಾಥಾ | ಖಳನಂಕರದೆಂದನು ಮಾತಾ |
ಕಿಂಕರರಹುದೀಸುರರೂ | ನಿಶ್ಯಂಕರು ಮುನಿಪಿತೃ ಜನರೂ      || ೨ ||

ನುಡಿದೀ ನುಡಿ ಬಲುಚಂದಾ ಕ್ಷಣ ಬಿಡಿಸುವೆ ನಿನಗೀ ಬಂಧಾ |
ಅಡಗದೆ ನಿಲ್ ನಿಲ್ಲೆಂದಾ | ಮಿಗೆ ತುಡುಕಲು ಮುಂದಲೆ ಗಂದಾ || ೩ ||

ಸಿಡಿಲಂದದಿ ಭೋರ್ಗುಡಿಸೀ | ಹರಿ ನುಡಿದನು ಭಾಪುರೆ ಸಹಸೀ |
ಕೆಡಿಸಿದೆ ಜಗವುಮ್ಮಳಿಸಿ | ಫಲಕೊಡುವೆನೆನುತಲಡ್ಡೈಸೀ         || ೪ ||

ರಾಗ ಪಂ ಮ ತಾ

ಗಿರಿಗೆ ಗಿರಿಗಳಾಂತ ವೋಲ್ಸಾಗರಕೆ ಶರಥಿಯಾಂತವೋಲು ಹರಿಗೆ
ಹರಿಗಳಾಂತವೋಲು ದುರವಿರೋಧದೀ ||
ಬೆರಸಿಹ್ಯೊದರಂದು ಪ್ರಳಯ ಹರನ ತೆರದೊಳೀರ್ವರೊಂದೆ ಗರುಡಿ
ಗಾರರೆನಲು ದುರುಳ ಹರನು ಗದೆಯನೂ    || ೨ ||

ಬೀಸಲದನು ಕಂಡು ಧರೆಗೆ ಯಾಸುರಾರಿಕೆಡಹೆ ಮೇಲೆ
ವಾಸವಾದಿ ಸುರರ ಬಹಳ ತೋಷಗುಂದಿತೂ |
ಯೇಸುಭಲನೊಖಳನು ರಣದಿ ವಾಸುದೇವ ಸೋತಡೆಂಮ
ವಾಸವಾಳ್ವ ಬಾಳ್ವೆಯಿಲ್ಲೆಂದಾ ಸಮೂಹವೂ || ೨ ||

ನಡುಗಲಾನಭಾಗ್ರದಿಂದ ನುಡಿದನಜನು ದೇವ
ಕೈಯ್ಯೋಳಿಡು ಕುಠಾರವೀಗ ಮುಗಿಸು ತಡವದೇಕೆನೇ |
ಧೃಡವೆನುತ್ತಲಬ್ಜನಾಭ ಪಿಡಿದ ಖಡ್ಗದಿಂದ ತಿವಿದು ಕೆಡಹಿ
ಖಳನ ಬಲದ ತೋಳ ನುಡಿದನುಬ್ಜುತಾ      || ೩ ||

ಭಾಮಿನಿ ಷಟ್ಪದಿ

ಭಳಿರೆ ಹಿಡಿಹಿಡಿಧನುವನೇಕೀ
ಗಿಳೆಯ ನೋಡುವೆ ಕೊಳುಗುಳದ ಭಟ
ರೊಳಗೆ ಬಲ್ಲಿದನಹುದೊಹಾಯೆನಲೆತ್ತಿ ಕುಲಿಶವನೂ ||
ತಳೆದು ಘುಡುಘುಡಿಸುತ್ತ ವಕ್ಷ
ಸ್ಥಳಕೆರಗೆ ತಿರುತಿರುಗೆ ಧಿರ್ರನೆ
ಖಳನಡಗಿ ಬೀಸಿದನು ಮಾಯೆಯ ವಿದುರ ಕೇಳೆಂದಾ || ೧ ||

ರಾಗ ಭೈ | ತಾ.ತ್ರಿ

ಕಂಡುದಾಗಾ ಮಾಯದಿ ಕಂಡುದಾಗಾ || ಪಲ್ಲ

ಕಂಡುದತಿ ಸಿಡಿಲ್ ಮಿಂಚು ಗಿರಿಗಳ ತಂಡಕಲ್ಮರಶರಭ ವರ ಬೇರುಂಡ ಖಗತತಿ
ಧೂಮಕೇತುಗಳುಂಡು ಕಾರಿತು ರಕ್ತಮಳೆಯನು | ಕಂಡುದಾಗ     || ಅನುಪಲ್ಲವಿ||

ಯಲೆಲೆ ಕವಿಕವಿ ಸೀಳುಹಂದಿಯ ತಲೆಯನಿರಿತೆಗೆ ಕರುಳ
ಸಸಲಿ ಕೊಳುಗುಳದೊಳಿದರಧಟ ನಿಲಿಸುವ ಬಲುಹುಬಹಳವೆನುತ್ತ
ಭೂತಗಳುಲಿದವತಿಬೊಬ್ಬೆಯಲಿ ದಿವಿಜಾವಳಿಗಳತಿ ಕಂಗೆಡುತ
ಲೋಕಪ್ರಳಯ ವಿಂದಾತ್ತೆಂದುಸುವುದು ನಳಿನನಾಭನು ಗ್ರಹಿಸು
ತೆಂದನು | ಯೇನನೆಂಬೇ ಸಾಹಸ || ಕಂಡುದಾಗಾ    || ೧ ||

ಅಂಜದಿರಿಸುರವರರು ರಿಪುವನು | ಭಂಜಿಸುವೆನೊಂದರ್ಧ ಘಳಿಗೆಗೆ | ಕಂಜಸಖನಿರೆ
ಕಮಲವನವನು | ಮಂಜುಮುಚ್ಚುವದುಂಟೆನೀವೆಂ ನಂಜಲಿಯೊಳಿರೆ
ಭಯಗಳೇನೆನು ತಂಜದಂದದೊಳುಸುರಿಪುಗಳ ನಂಜಿಸುತ ಹೂಂಕ
ರಿಸಿ ನೋಡಿದ ರಂಜಿಸುವ ಬೆಂಗಡೆಯ ಚಕ್ರವಾ | ಯೇನನೆಂಬೇ |
ಸಾಹಸ | ಕಂಡುದಾಗಾ    || ೨ ||

ರಾಗ ಭೈರವಿ ಅಷ್ಟತಾಳ

ಹರಿಯ ಸುದರ್ಶನದೀ | ಮಾಯಗಳೆಲ್ಲ – ಹರಿದೋಡೆ ಖಳಭರದೀ |
ಹರಿವುದೆ ಭುಜಬಲ ಹರಿನಿಲ್ಲೆನುತಗದಾ ಧರಗೆರಗಲು ತಡದೂ  || ೧ ||

ಧಿರುರೇ ಮದಾಂಧಮನೇ | ಮೃಗೇಂದ್ರನ ಕುರಿಸೆಣಸಿದು ಬಾಳ್ವನೇ |
ಥರವೇನೊ ನಿನಗೆ ಯನ್ನೊಡನೆ ನೋಡೆನ್ನುತ್ತ ಹರಿಯೆಚ್ಚನಾರ್ಭಟಿಸೀ    || ೨ ||

ಬಿಟ್ಟಬಾಣವ ಕಡಿದೂ | ರೋಷದಿ ಕಿರಿಗುಟ್ಟುತೆಂದನು ಮಲದೂ |
ಘೃಷ್ಠಿರೂಪದಿ ಬಂದು ಸಿಲುಕಿದೆಯನುತ ಕೈಥಟ್ಟಿ ನುಡಿದ ಖಳನೂ        || ೩ ||

ರಾಗ ಘಂ ಅಷ್ಟತಾಳ

ಬಿಡೆಬಿಡೇ ಕೇಳ್ಕೆಳೆಲವೊ ಯಲವೊ ನಿನ್ನಾ |
ಕೆಡಹಿ ಕರುಳನೆ ಸೆಳೆದು ನುಂಗುವೆ ನಡೆನಡೆಯೊ ಹುಲುಹಂದಿಯೇ      || ೧ ||

ಯೆನೆಂದೇನೆಂದೆ ಯಲೆಯಲೆ ಕುನ್ನಿಯೇ |
ನಾನು ನಿನ್ನನು ಕೊಲ್ಲದಿರಲಿಳೆ ಮಾನಿನಿಗೆ ಪತಿಯಪ್ಪೆನೇ        || ೨  ||

ತೋರು ತೋರೆಲೊ ನಿನ್ನಯ ಭಾಷೆಯಾ |
ಹೀರಿನೆತ್ತರ ಕುಡಿಯದೀರ್ದಡೆ ಧೀರನಾ ಹಿರಣ್ಯಾಕ್ಷನೇ || ೩ ||

ನಿನ್ನ ವಿಕ್ರಮ ಕೆಲಸಕ್ಕೆ ಕಲಶವಿ |
ದೆನ್ನುತೆಡಗಾಲಿಂದ ಮೆಟ್ಟಿದ ಕೆನ್ನಿಗಾ ಖಳರಾಯನಾ   || ೪ ||

ಚಂಡಖಂಡದ ರೌದ್ರಾವತಾರನ |
ಕಂಡು ಕಣ್ಮುಚ್ಚಿದನು ದಾನವ ಪುಂಡರೀಕಜನುಬ್ಬಿದಾ  || ೫ ||

ಭಾಮಿನಿ ಷಟ್ಪದಿ

ಮೊಳಗಿದೌಸುರ ಭೇರಿ ಹೂವಿನ
ಮಳೆ ಸುರಿದು ಕೊಂಡಾಡಿ ಕಾಯ್ದ
ಇಳೆಯನೆಂದುಬ್ಬಿದರು ಹರುಷೋಗ್ಗಡನ ಘಾಡದಲೀ ||

ಬಲಜಭವ ಪುಷ್ಪಾಂಜಲಿಯಮಿಗೆ
ಸಲಿಸೆ ವೇದೋಕ್ತದಲಿ ನಗಧರ
ನಿಲಿಸಿದನು ಸುರವರರ ತತ್ತಸ್ಥಾನ ದೇಶದಲೀ          || ೧ ||

ಕಂದ

ಭೂರಮಣಿಯ ಸಂತವಿಸುತ |
ವಾರಾಹಂಮಂದಸ್ಮಿತ ಮುಖನಾಗಿರೆ ರಂಭಾ |
ನಾರಿ ಪ್ರಮುಖ ಮರಿಯರಾ |
ವಾರಿರುಹಾಕ್ಷಂಗೆತ್ತಿದರಂದಾರತಿಯಂ        || ೧ ||

ಧವಳಾರ

ಶ್ರೀ ಸರಸ್ವತಿ ಶಚಿದೇವೀ | ಭೂಸತಿ ಸಹಿತಲಿ ಠೀವೀ |
ಭಾವ ವಿಲಾಸದಿ ನಲಿನಲಿದಾಡೀ | ವಾಸುಕಿ ಶಯನನ ಬಲು ಕೊಂಡಾಡೀ |
ಮಾಸಿದ ಧರಣಿಗೆ ಭೂಷಣವಿತ್ತ ವಿಲಾಸಿ ವರಹ ಶ್ರೀ ಭೂಸುರ ಪ್ರಿಯಗೆ |
ಭಾಸುರದಾರಾತಿಯಾ | ಬೆಳಾಗೀರೇ         || ೧ ||

ತರುಣಾರ್ಕ ಕೋಟಿ ಭಾಸುರಗೇ | ನಿರತ ಸಜ್ಜನರ ಪೋಷನಿಗೇ |
ದುರುಳ ನಿಶಾಟನ ಧುರದೊಳ್ ಗೆಲಿದೂ | ಸುರರಿಗೆ ಸೌಖ್ಯೋತ್ಕರವನೆ ಬಲಿದೂ |
ಕರುಣಿಸಿ ಕಾಮಿತ ಪೊರೆದ ಸಚ್ಚಿನ್ಮಯ  | ಸ್ಥಿರಮಕರಾಲಯ ಸಿರಿವಲ್ಲಭನಿಗೆ
ಕುರುಜಿನಾರಾತಿಯಾ ಬೆಳಾಗೀರೇ  || ೨ ||

ನಾಶರಹಿತನಿಗೆ ಹಿತಗೇ | ಶೇಶಶಯನ ಧಾರ್ಮಿಕಗೇ | ಭಾಸುರಾಂಗಿಯರು ವಿಲಾಸಗಳಿಂದಾ |
ಸೇಸೆಯ ತಳಿವುತ ಬಂದು ಮುಂದುಮುಂದಾ | ತೋಷ
ಭರಿತ ಕಮಲಾಸನ ವಂದಿತ ಈಶವಿನುತ ವಿಶ್ವೇಶಗೆ ದಿವ್ಯ ಕು | ಶೇಶೆಯ ದಾರಾತಿಯಾ
ಬೆಳಾಗೀರೇ       || ೩ ||

ವಾರ್ಧಿಕ ಷಟ್ಪದಿ

ವಿದುರ ಕೇಳೈ ನಿಜಸ್ಥಿತಿಗೆ ಹರಿ ಸರಿದನೀ
ಮದ ಮುಖಾಗ್ರಜ ಸುತನ ಬಾಧಿಸಲ್ ನರಸಿಂಹ
ದದುಬುತಾಕಾರದಿಂ ಕೊಂದ ಹರಿಮರುಜನ್ಮ ದಶವದನ ಕುಂಭಕರ್ಣ ||
ಕದನಗಲಿಗಳ ರಾಮನಾಮದಿಂ ಮೂರನೆಯೊ

ಳದೊಚೈದ್ಯದಂತವಕ್ರರ ಕೃಷ್ಣ ರೂಪದಿಂ
ವಧಿಸಿ ಭೃತ್ಯರ್ಗೆ ನಿಜಪದವಿಯಂ ಕರುಣಿಸಿದನೇಂದಯಾಬ್ಧಿಯೊ ಶ್ರೀವರಾ         || ೧ ||

ಭಾಮಿನಿ ಷಟ್ಪದಿ

ಚಿತ್ತಜನ ಪಿತ ನೀ ಸುಸತ್ಕಥೆ
ಯುತರವ ವಿದುರಂಗೆಯಾ ಮುನಿ
ಮೈತ್ರೆಯನು ಪೇಳ್ದುದನು ಸಂಕ್ಷೇಪದಲಿ ಮನವಲಿದೂ ||
ಉತ್ತಮದ ಬಾಯಾರ ಗ್ರಾಮದ
ಜತ್ತಿ ಕೃಷ್ಣಯ್ಯಾಖ್ಯ ಸೂರಿವಿ
ಪ್ರೋತ್ತಮನ ಸುತನೀಶ್ವರನು ತಾ ರಚಿಸಿದೆನು ಬಿಡದೇ          || ೧ ||

ಮಂಗಲಪದ

ರಾಗ ಭೂ ಝಂಪೆತಾಳ

ಈಶಾಯತೇ ಮಂಗಲಂ | ಭಕ್ತಪರಿ | ಪೋಷಾಯತೇ ಮಂಗಲಂ  || ಪಲ್ಲವಿ ||

ಗಂಗಾಧರಾಯನತ ಸಂಗಾಯನ ವಸುಂದರಾಂಗಾಯ ವೃಷಭ ತುರಂಗಾಯತೇ |
ತುಂಗಾಯ ಜಗದಂತ ರಂಗಾಯ ದುಷ್ಟಮದ ಭಂಗಾಯ ಸ್ಫಟಿಕ ವರ್ನಂಗಾಯತೇ         || ೧ ||

ಮೋದಾಯ ಗಿರಿಜಾ ವಿನೋದಾಯ ಡಮರುಗಸುನಾದಾಯ ಮುನಿಗಣಪ ಬೋಧಾಯತೇ|
ವೇದಾಂತ ರಂಗಾಯ ಸಾಧುಜನಸಂಗ ಸಂಮೋದಾಯ ವಿಜಯನುತ ಪಾದಾಯತೇ |
ಈಶಾ   || ೨ ||

ಶ್ರೀಶ ಪ್ರಿಯಾಯ ಜಗದೀಶಾಯ ಅಂಧಕ ವಿನಾಶಾಯ ರಜತಾದ್ರಿ ವಾಸಾಯತೇ |
ಈಶಾಯ ಪನ್ನಗ ವಿಭೂಪಾಯ ಶರಣ ಜನ ಪೋಷಾಯ ಸದ್ಗುರು ವಿ | ಶ್ವೇಶಾಯತೇ ||
ಈಶಾಯತೇ ಮಂಗಲಂ   || ೩ ||