ಜಗತ್ತಿನ ಇತಿಹಾಸದಲ್ಲಿ ಭಾರತಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಭಾರತದ ಇತಿಹಾಸದಲ್ಲಿ ಕರ್ನಾಟಕಕ್ಕೆ ಮಹತ್ವದ ಸ್ಥಾನವಿದೆ. ಕರ್ನಾಟಕದ ಚರಿತ್ರೆಯಲ್ಲಿ ದಕ್ಷಿಣ ಕನ್ನಡಕ್ಕೆ ಅದರದ್ದೇ ಆದ ಅನನ್ಯತೆ ಇದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅನೇಕ ಪ್ರಥಮ ಕೊಡುಗೆಗಳನ್ನು ಈ ಜಿಲ್ಲೆ ನೀಡಿದೆ. ಮೊದಲ ಸಣ್ಣಕತೆ, ಮೊದಲ ಕಾದಂಬರಿ, ಮೊದಲ ಪತ್ರಿಕೆ ಮುಂತಾದ ಕೊಡುಗೆಗಳು ಈ ಜಿಲ್ಲೆಯಿಂದಲೇ ಪ್ರಾರಂಭವಾಗಿವೆ. ಇದರ ಹೊರತಾಗಿ ಚಿತ್ರಕಲೆ, ಸಂಗೀತ, ನೃತ್ಯ, ಶಿಲ್ಪ ಮುಂತಾದ ಕಲೆಗಳಲ್ಲಿಯೂ ಈ ಜಿಲ್ಲೆಯ ಸಾಧನೆ ಗಮನಾರ್ಹವಾಗಿದೆ. ಆದರೆ ಅವುಗಳನ್ನು ಗುರುತಿಸಿ, ದಾಖಲಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ. ಯಾಕೆಂದರೆ ಹೊರಜಗತ್ತಿಗೆ ವಿಶಾಲವಾಗಿ ತೆರೆದುಕೊಂಡಂತೆಲ್ಲಾ ಒಳಜಗತ್ತು ಕತ್ತಲೆಯ ಗರ್ಭದಲ್ಲಿ ಹುದುಗಿ, ನಮ್ಮ ಮನೆಯಂಗಳದ ಅಮೂಲ್ಯ ವಸ್ತುಗಳು ಅಂಚಿಗೆ ತಳ್ಳಲ್ಪಟ್ಟು ಅದೃಶ್ಯವಾಗಿ ಬಿಡುವ ಅಪಾಯವಿದೆ. ಹಾಗಾಗದಂತೆ ತಡೆಯುವ ಒಂದು ಸಾರ್ಥಕ ಪ್ರಯತ್ನವಾಗಿ ‘ನಾಡಿಗೆ ನಮಸ್ಕಾರ’ ಎಂಬ ಮಾಲಿಕೆಯಲ್ಲಿ ನಮ್ಮ ನಾಡಿನ ಹೆಸರಾಂತ ಚಿತ್ರಕಲಾವಿದ ಮನೆತನದ ನಾಲ್ಕು ತಲೆಮಾರಿನ ಹಿರಿಮೆ ಗರಿಮೆಗಳನ್ನು ದಾಖಲಿಸುವ ಒಂದು ಸಣ್ಣ ಪ್ರಯತ್ನವಿದು.

ಕಲೆ ಮತ್ತು ಕಲಾವಿದರ ಇತಿಹಾಸಕ್ಕೆ ಅವಿನಾಭಾವ ಸಂಬಂಧವಿದೆ. ನಾಡಿನ ಸಂಸ್ಕೃತಿ, ಸಂಪ್ರದಾಯ, ಮತಧರ್ಮ, ಶ್ರೀ ಸಾಮಾನ್ಯರ ಮತ್ತು ಶ್ರೀಮಂತರ ರಸಪ್ರಜ್ಞೆ, ಅವರು ಎದುರಿಸಿದ ಕಷ್ಟನಷ್ಟ, ಸಮಸ್ಯೆಗಳೆಲ್ಲವೂ ಕಲಾವಿದರ ಜೀವನದ ಏರಿಳಿತಕ್ಕೆ ಕಾರಣಗಳಾಗುತ್ತವೆ. ಉತ್ತಮ ಸಾಹಿತ್ಯ ಕೃತಿಯಾಗಲೀ, ಶ್ರೇಷ್ಠ ಕಲಾಕೃತಿಯಾಗಲೀ ಮೂಡಿ ಬರುವುದು ಭುವನದ ಭಾಗ್ಯದಿಂದ. ಅಂತೆಯೇ ಕಲಾರಸಿಕರು ಹುಟ್ಟುವುದಕ್ಕೂ ಈ ನಾಡು ಪುಣ್ಯ ಮಾಡಿರಬೇಕು. ಈ ಸೃಷ್ಟಿ ಒಂದು ಅದ್ಭುತ ಕಲಾಸೃಷ್ಟಿ. ಹೊರಗಣ್ಣಿನಿಂದ ಅದನ್ನು ಆಸ್ವಾದಿಸುವ ಗುಣ ಎಲ್ಲರಲ್ಲೂ ಜನ್ಮಜಾತ ವಾಗಿರಬಹುದು. ಅದನ್ನು ಬೇರೆ ಬೇರೆ ಆಯಾಮಗಳಿಂದ ವೀಕ್ಷಿಸಿ ತನ್ನ ಒಳಗಣ್ಣಿನ ನೋಟವನ್ನು ನೀಡುವವನೇ ಕಲಾವಿದ. ಇಂತಹ ಕಲಾಕೃತಿಯನ್ನು ರಚಿಸಿದ ಕಲಾವಿದ ಅಮರ. ಕಲಾಕೃತಿಯೂ ಅಮರ. ಈ ಕಲಾ ಪರಂಪರೆಯನ್ನು ನಾಲ್ಕು ತಲೆಮಾರಿ ನವರೆಗೆ ಮುಂದುವರಿಸಿಕೊಂಡು ಬಂದಿರುವ ಶ್ರೇಷ್ಠ ಕಲಾವಿದರಲ್ಲಿ ಪಾವಂಜೆ ಗೋಪಾಲಕೃಷ್ಣಯ್ಯ ಮೊದಲಿಗರು.

ದಕ್ಷಿಣ ಕನ್ನಡ ಜಿಲ್ಲೆಯ ಕಡಲ ತೀರದ ಪಾವಂಜೆ ಎಂಬ ಸಣ್ಣ ಹಳ್ಳಿಯಲ್ಲಿ 1866ರಲ್ಲಿ ಹುಟ್ಟಿದ ಗೋಪಾಲಕೃಷ್ಣಯ್ಯನವರ ತಂದೆ ಶ್ರೀನಿವಾಸ ರಾವ್, ತಾಯಿ ವಾಗಮ್ಮ. ವೈದ್ಯ ವೃತ್ತಿಯಿಂದ ಸುತ್ತುಮುತ್ತಲ ಊರಿನಲ್ಲಿ ಪ್ರಸಿದ್ಧರಾದ ತಂದೆಗೆ ತನ್ನ ಏಕೈಕ ಪುತ್ರ ಗೋಪಾಲಕೃಷ್ಣ ವೈದ್ಯನಾಗಬೇಕೆಂಬ ಹಂಬಲವಿತ್ತು. ಬಾಲಕ ಗೋಪಾಲ ಕೃಷ್ಣನ ಚಿತ್ರಕಲೆಯ ಆಸಕ್ತಿಯನ್ನು ಕಂಡು ತಂದೆ ಮಗನ ಆಸೆಗೆ ತಣ್ಣೀರೆರಚಲಿಲ್ಲ. ಮಂಗಳೂರಿನ ಬಾಸೆಲ್‌ಮಿಶನ್ ಶಾಲೆಯಲ್ಲಿ ಶಿಕ್ಷಣವನ್ನು ಪೂರೈಸಿ ಗೋಪಾಲಕೃಷ್ಣಯ್ಯ ನವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿದರು. ಆ ಕಾಲದಲ್ಲಿ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಚಿತ್ರಕಲೆಯ ಅಭ್ಯಾಸಕ್ಕೆ ಆಸ್ಪದವಿರಲಿಲ್ಲ, ಪ್ರೋತ್ಸಾಹವೂ ಇರಲಿಲ್ಲ.

ಸರಕಾರಿ ಕಾಲೇಜಿನಲ್ಲಿ ಆಗ ಬ್ರಿಟಿಷ್ ಸಂಜಾತರೇ ಶಿಕ್ಷಕರ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಪ್ರೊಫೆಸರ್ ಹೆನ್ಸಮೇನ್ ಆಗ ಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಒಂದು ದಿನ ಅವರು ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಹುಡುಗ ನೊಬ್ಬ ಉಪನ್ಯಾಸಕ್ಕೆ ಗಮನ ಕೊಡದೆ ಬೇರೇನೋ ಕೆಲಸದಲ್ಲಿ ತಲ್ಲೀನನಾಗಿದ್ದುದನ್ನು ಗಮನಿಸಿದರು. ಆ ಹುಡುಗನ ಹತ್ತಿರ ಬಂದು ಅವನ ಪುಸ್ತಕ ತೆಗೆದು ನೋಡಿದರೆ ಅವರದೇ ಭಾವಚಿತ್ರವು ಅವನ ಪುಸ್ತಕದಲ್ಲಿ ನಗುತ್ತಿತ್ತು. ಅದನ್ನು ಕಂಡು ಪ್ರೊಫೆಸರ್ ಹೆನ್ಸ್‌ಮೇನ್ ಸಿಟ್ಟುಗೊಳ್ಳಲಿಲ್ಲ. ಬದಲಾಗಿ ಅವನ ಕಲಾಪ್ರತಿಭೆಯನ್ನು ಪ್ರಶಂಶಿಸಿದರು. ‘‘ಇನ್ನು ಮುಂದೆ ನೀನು ಚಿತ್ರಕಲೆ ಯನ್ನೇ ಅಭ್ಯಾಸ ಮಾಡು. ನಿನಗೆ ಉತ್ತಮ ಭವಿಷ್ಯವಿದೆ’’ ಎಂದು ಸಲಹೆ ನೀಡಿ ಹರಸಿದರು. ಶಿಷ್ಯರ ಪ್ರತಿಭೆಯನ್ನು ಗುರುತಿಸಲು ಗುರುವಿಗೂ ಯೋಗ್ಯತೆ ಇರಬೇಕಲ್ಲವೇ? ಅಂತಹ ಒಬ್ಬ ಯೋಗ್ಯ ಗುರುವಿನ ಮಾರ್ಗದರ್ಶನದಿಂದ ಮುಂಬಯಿಯ ಜೆ.ಜೆ. ಕಲಾ ಶಾಲೆಗೆ ಪ್ರವೇಶ ಪಡೆದು ಅಲ್ಲಿ ಶಿಕ್ಷಣ ಪಡೆಯುವ ಅವಕಾಶ ಗೋಪಾಲಕೃಷ್ಣಯ್ಯನವರಿಗೆ ಲಬಿಸಿತು. ಜೆ.ಜೆ. ಕಲಾ ಶಾಲೆಯಲ್ಲಿ ಪ್ರವೇಶ ಪಡೆದ ಮೊತ್ತ ಮೊದಲ ಕನ್ನಡಿಗರಾಗಿ ಗೋಪಾಲಕೃಷ್ಣಯ್ಯ ಪ್ರಸಿದ್ಧರು. ಆದರೆ ಹಳ್ಳಿಯಲ್ಲಿ ಹುಟ್ಟಿದ ಸಾಮಾನ್ಯ ವರ್ಗದ ಹುಡುಗನೊಬ್ಬ ದೂರದ ಮುಂಬಯಿಯಲ್ಲಿ ಶಿಕ್ಷಣ ಪಡೆಯುವುದು ಆ ಕಾಲದಲ್ಲಿ ಈಗಿನಷ್ಟು ಸುಲಭವಲ್ಲ. ಇವರ ಬಂಧುವಾಗಿದ್ದ ಸರ್. ಪಿ.ಆರ್. ರಾವ್ ಅವರು ಆಗ ಭಾರತ ಸರ್ಕಾರದ ಐ.ಸಿ.ಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರನ್ನು ಭೇಟಿಯಾಗಿ ತನ್ನ ಆಸಕ್ತಿಯನ್ನು ತಿಳಿಸಿದಾಗ ಅವರು ಸಂತೋಷದಿಂದ ಆರ್ಥಿಕ ಸಹಾಯ ನೀಡಿ ಶಿಕ್ಷಣ ಮುಂದುವರಿಸುವಂತೆ ಎಲ್ಲಾ ರೀತಿಯ ಬೆಂಬಲ ನೀಡಿ ಪ್ರೋತ್ಸಾಹಿಸಿದರು. ಕಲೆಯ ಮೇಲಿನ ಆಸಕ್ತಿಯುಳ್ಳ ವಿದ್ಯಾರ್ಥಿಗೆ ನೀಡುವ ಅಣುಮಾತ್ರದ ಸಹಾಯವೂ ಗುಡ್ಡದಷ್ಟು ಉಪದೇಶಕ್ಕಿಂತ ಮೇಲಲ್ಲವೇ? ಕಾಲೋಚಿತಕ್ಕೆ ಸಂದ ಈ ಸಹಾಯವನ್ನು ಗೋಪಾಲಕೃಷ್ಣಯ್ಯನವರು ತಾನು ಬದುಕಿರುವವರೆಗೂ ಮರೆಯಲಿಲ್ಲ. ಸರ್. ಪಿ.ಆರ್.ರಾವ್ ಅವರ ಮೇಲಿನ ಗೌರವದಿಂದ ರಚಿತವಾದ ಭಾವಚಿತ್ರದ ಕಲಾಕೃತಿ ಈಗಲೂ ಮಂಗಳೂರಿನ ‘ಪಾವಂಜೆ ಮನೆ’ಯಲ್ಲಿ ಸುರಕ್ಷಿತವಾಗಿದೆ.

ಜೆ.ಜೆ. ಕಲಾ ಶಾಲೆಯಲ್ಲಿ ಗೋಪಾಲಕೃಷ್ಣಯ್ಯನವರು ಪ್ರತಿಭಾವಂತ ವಿದ್ಯಾರ್ಥಿಂಯೆಂದು ಕೀರ್ತಿ ಗಳಿಸಿದರು. ಅತಿ ಹೆಚ್ಚು ಅಂಕ ಪಡೆದು ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ಕ್ರಿ.ಶ. 1886ರಲ್ಲಿ ಅದೇ ಕಲಾ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿದರು. ಆಕರ್ಷಕ ಮೈ ಬಣ್ಣವುಳ್ಳ, ಶುಭ್ರ ಬಿಳಿ ಖಾದಿ ವಸ್ತ್ರದ ಧೋತಿ, ಅಂಗಿ, ಮುಂಡಾಸನ್ನು ಕಟ್ಟಿಕೊಂಡು ಶಿಸ್ತಿನಿಂದ ತರಗತಿಗೆ ಬರುತ್ತಿದ್ದ ಇವರನ್ನು ಶಿಷ್ಯರು ‘ವೈಟ್‌ಮ್ಯಾನ್’ ಎಂದೇ ಗೌರವದಿಂದ ಕರೆಯುತ್ತಿದ್ದರಂತೆ. ಅವರ ದಿನಚರಿ, ಅಭ್ಯಾಸದ ಪುಸ್ತಕ, ಸಂಗ್ರಹಿಸಿದ ಪುಸ್ತಕಗಳು ಇವುಗಳನ್ನು ಕಂಡಾಗ ಅವರ ಉತ್ತಮ ಸಂಸ್ಕಾರ ಮತ್ತು ಪ್ರತಿಭೆ, ಜ್ಞಾನ, ಕಲಾವಂತಿಕೆಯ ಪರಿಚಯವಾಗುತ್ತದೆ.

ಕ್ರಿ.ಶ. 1901ರಲ್ಲಿ ಮುಂಬಯಿಯಲ್ಲಿ ಪ್ಲೇಗ್ ಮಹಾಮಾರಿಯು ಕಾಣಿಸಿ ಕೊಂಡಾಗ ತಂದೆ ಶ್ರೀನಿವಾಸ ರಾಯರು ಆತಂಕಗೊಂಡು ಮಗನನ್ನು ಊರಿಗೆ ಕರೆಸಿ ಕೊಂಡರು. ಜೆ.ಜೆ. ಕಲಾ ಶಾಲೆಯಲ್ಲಿ ಆರ್ಟ್ ಮಾಸ್ಟರ್ ತರಗತಿಯ ಪ್ರೊಫೆಸರ್ ಆಗಿದ್ದ ಗೋಪಾಲಕೃಷ್ಣಯ್ಯ ಮಂಗಳೂರಿಗೆ ಬಂದಾಗ ಇಲ್ಲಿ ಕಲೆಗೆ ಪ್ರೋತ್ಸಾಹದಾಯಕ ವಾದ ವಾತಾವರಣವೇ ಇರಲಿಲ್ಲ. ಸೈಂಟ್ ಆನ್ಸ್ ಕಾಲೇಜಿನಲ್ಲಿ ಅವರಿಂದಲೇ ಕಲಾಶಿಕ್ಷಣ ತರಗತಿ ಪ್ರಾರಂಭವಾಯಿತು. ಆಗ ತಿಂಗಳಿಗೆ ಮೂರು ರೂಪಾಯಿ ಸಂಬಳ. ಸ್ವಲ್ಪ ಸಮಯದ ಬಳಿಕ ಕೆನರಾ ಹೈಸ್ಕೂಲಿನಲ್ಲಿ (1902) ಕಲಾ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಪೂರ್ಣಾವದಿಯ ಈ ಶಿಕ್ಷಣ ಸೇವೆಗೆ ಸಂಬಳ ಐದು ರೂಪಾಯಿ. ಮಂಗಳೂರು ಆಗ ಮದ್ರಾಸ್ ಸರಕಾರದ ಆಡಳಿತಕ್ಕೆ ಒಳಪಟ್ಟುದರಿಂದ ಅಲ್ಲಿನ ಕಲಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆನರಾ ಶಾಲೆಯಲ್ಲಿಯೇ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಮಹಾತ್ಮಾ ಗಾಂದೀಜಿಯ ಅನುಯಾಯಿಯಾಗಿ ಖಾದಿ ಪ್ರೇಮಿಯಾಗಿದ್ದ ಗೋಪಾಲಕೃಷ್ಣಯ್ಯನವರು ಸ್ವತಃ ಚರಕದಿಂದ ನೂಲು ತೆಗೆದು ಅದೇ ನೂಲಿನಿಂದ ತಯಾರಿಸಿದ ಬಟ್ಟೆಯನ್ನು ಧರಿಸುತ್ತಿದ್ದರು. ಶಿಕ್ಷಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದಕ್ಕೆ ಅವರ ವಿರೋಧವಿತ್ತು. ಕಾರಣವೇನೆಂದರೆ ‘‘ವಿದ್ಯೆಯಿಂದ ಜೀವನದಲ್ಲಿ ಮಾರ್ಗದರ್ಶನ ಲಭಿಸದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಕೆಡುತ್ತದೆ. ಅನಕ್ಷರಸ್ಥರ ಸಂಖ್ಯೆ ಹೆಚ್ಚಾದರೆ ಮುಂದೆ ದೇಶವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶಿಕ್ಷಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಮಾಡಿದ ವಂಚನೆ ಯಾಗುತ್ತದೆ’’ ಎಂದು ಅವರ ಅಬಿಪ್ರಾಯ ವಾಗಿತ್ತು. ವಿದ್ಯಾರ್ಥಿಗಳ ಬಗ್ಗೆ ಅವರಿಗಿದ್ದ ಕಾಳಜಿ ಇದರಿಂದ ವ್ಯಕ್ತವಾಗುತ್ತದೆ. ಚಿತ್ರಕಲೆಯ ಜೊತೆಗೆ ಮಕ್ಕಳಿಗೆ ನೀತಿ ಪಾಠಗಳನ್ನು ಅವರು ಕಲಿಸುತ್ತಿದ್ದರು. ಮಕ್ಕಳಿಗೆ ಕಥೆ ಹೇಳುವುದೂ ಒಂದು ಕಲೆ. ಈ ಕಲೆ ಅವರಿಗೆ ಸಿದ್ಧಿಸಿತ್ತು. ಕಥೆ ಹೇಳುವ ಶೈಲಿ, ಅಬಿನಯ, ಹಾವಭಾವಗಳ ಮೂಲಕ ಮಕ್ಕಳ ಮುಂದೆ ಒಂದು ರಮ್ಯಾದ್ಭುತ ಲೋಕವನ್ನು ಸೃಷ್ಟಿಸಿ ಅವರಲ್ಲಿ ಭಾವ ದೀಪ್ತಿಗೊಳ್ಳುವಂತೆ ಮಾಡುತ್ತಿದ್ದರು. ನೀತಿಮಾರ್ಗದಲ್ಲಿ ಮುನ್ನಡೆಯಲು ಅವರು ತೋರುಗಂಬವಾದರು. ಅವರ ಕಥಾಲೋಕದ ರಸಯಾತ್ರೆಯಲ್ಲಿ ರೋಮಾಂಚನಗೊಂಡ ಕುಟುಂಬಿಕರು, ವಿದ್ಯಾರ್ಥಿಗಳು ಈಗಲೂ ಆ ರಸಕ್ಷಣಗಳನ್ನು ಸ್ಮರಿಸುತ್ತಾರೆ. ಚಿತ್ರಕಲೆಯನ್ನು ಯಾವ ರೀತಿ ಬೋದಿಸಬೇಕು, ಹೇಗೆ ಯಾವ ವಿಧಾನಗಳಿಂದ ಆಸಕ್ತಿ ಮೂಡುವಂತೆ ಕಲಿಸಬೇಕು. ಬಣ್ಣ, ಕುಂಚ ತಯಾರಿಸುವ ವಿಧಾನ, ತರಗತಿಯ ಬೆಳಕಿನ ವ್ಯವಸ್ಥೆ,

ಮೇಜು ಕುರ್ಚಿಗಳ ವ್ಯವಸ್ಥೆಯ ಬಗ್ಗೆ ಪ್ರತಿಯೊಂದನ್ನು ವೈಜ್ಞಾನಿಕ ರೀತಿಯಿಂದ ಟಿಪ್ಪಣಿ ಬರೆದಿದ್ದ ಪುಸ್ತಕವು ಅವರ ಕಲಾಸಕ್ತಿ ಮತ್ತು ಶಿಷ್ಯ ಪ್ರೇಮವನ್ನು ವ್ಯಕ್ತಪಡಿಸುತ್ತದೆ. ಹಸ್ತ ಪ್ರತಿಯಲ್ಲಿರುವ ಈ ಪುಸ್ತಕವು ಕಲಾ ಶಿಕ್ಷಕರಿಗೆ ಬಹಳ ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ. ಕಲೆಯ ಬಗ್ಗೆ ಆಸಕ್ತಿಯುಳ್ಳ ಎಷ್ಟೋ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಉಚಿತ ಶಿಕ್ಷಣವನ್ನು ನೀಡುತ್ತಿದ್ದರು. ಹೀಗೆ ಇವರಿಂದ ವಿದ್ಯಾದಾನ ಪಡೆದವರು, ಆರ್ಥಿಕ ಸಹಾಯ ಪಡೆದವರು ಇಂದೂ ಅವರನ್ನು ಸ್ಮರಿಸುತ್ತಾರೆ.

20ನೆಯ ಶತಮಾನದ ಆರಂಭ ಕಾಲದಲ್ಲಿ ಜೀವಿಸಿದ್ದ ಗೋಪಾಲಕೃಷ್ಣಯ್ಯ ನವರು ಸಮಾಜ ಪರಿವರ್ತನೆಯ ಹೊರಳು ದಾರಿಯಲ್ಲುಂಟಾಗುವ ಗೊಂದಲ, ಕಳವಳಗಳನ್ನು ಕಂಡವರು. ದೈವಭಕ್ತರೂ, ಕಟ್ಟಾ ಬ್ರಾಹ್ಮಣ ಸಂಪ್ರದಾಯಸ್ಥರೂ ಆಗಿದ್ದರೂ ಕೂಡಾ ಶೋಷಣೆಯ ಸ್ವರೂಪದ ಮಡಿಮೈಲಿಗೆಗಳನ್ನು ಬಹಿಷ್ಕರಿಸಿದ ಉದಾರವಾದಿಯಾಗಿದ್ದರು. ಧಾರ್ಮಿಕ ನಂಬಿಕೆಗಳನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದರೂ ಕೂಡಾ ಅವರಲ್ಲಿ ಓರ್ವ ಸಂತನ ಜೀವಪರ ದಯೆಯಿತ್ತು. ಪಾವಂಜೆ ಗೋಪಾಲಕೃಷ್ಣಯ್ಯನವರು ಭಕ್ತ ಗೋವಿಂದ ದಾಸರ ಪರಮ ಭಕ್ತರು ಮತ್ತು ಶಿಷ್ಯರಲ್ಲೊಬ್ಬರು. ಹರಿದಾಸ ಪರಂಪರೆಯಲ್ಲಿ ನಮ್ಮ ಜಿಲ್ಲೆಯ ಖ್ಯಾತ ದಾಸರಾದ ಪಾವಂಜೆ ಗುರುರಾಯರೂ ಗೋಪಾಲಕೃಷ್ಣಯ್ಯನವರ ಸಂಬಂದಿಕರು. ಪಾವಂಜೆ ಗುರುರಾಯರ ತಂದೆ ಮತ್ತು ಗೋಪಾಲಕೃಷ್ಣಯ್ಯನವರ ತಂದೆ ಅಣ್ಣ ತಮ್ಮಂದಿರು. ಆದುದರಿಂದ ಭಕ್ತಿಮಾರ್ಗದಲ್ಲಿ ಅವರ ಸಾಧನೆಗೆ ಇವರೇ ಮೂಲ ಪ್ರೇರಣೆಯಿರ ಬೇಕು.

ಗೋವಿಂದ ದಾಸರ ಮಗನಾದ ಸೀತಾರಾಮಾಚಾರ್ಯರಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸಿದವರು ಗೋಪಾಲಕೃಷ್ಣಯ್ಯನವರಂತೆ. ಹೀಗೆ ಈ ಮನೆತನ ದೊಂದಿಗೆ ಗುರು ಶಿಷ್ಯ ಪರಂಪರೆ ಮುಂದುವರಿಯುತ್ತಾ ಬಂದಿತೆಂದು ಕಾಣುತ್ತದೆ. ಗುರು ಗೋವಿಂದ ದಾಸರು ತೀರಿಕೊಂಡ ಮೇಲೆ ಒಂದು ದಿನ ರಾತ್ರಿ ಗೋಪಾಲಕೃಷ್ಣಯ್ಯನವರ ಮನೆಯ ಚಾವಡಿಯಲ್ಲಿ ಗುರುಗಳು ಪ್ರತ್ಯಕ್ಷರಾಗಿದ್ದರೆಂದು ತನ್ನ ಅನುಭವವನ್ನು ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅದು ಸ್ವಪ್ನವಪ್ಲ ನಾನು ಜಾಗರದಲ್ಲೇ ಗುರುಗಳನ್ನು ಕಂಡಿದ್ದೆನೆಂದು ತಾ. 10-2-1943ರಂದು ಸೀತಾರಾಮ ರಾಯರಿಗೆ ಬರೆದ ಪತ್ರದಲ್ಲಿ ಗೋಪಾಲಕೃಷ್ಣಯ್ಯನವರು ಹೇಳಿದ್ದಾರೆ. ಇದರಿಂದ ಈ ಗುರು ಶಿಷ್ಯ ಸಂಬಂಧ ಎಷ್ಟು ಗಾಢವಾಗಿತ್ತು ಎಂದು ತಿಳಿಯುತ್ತದೆ.

ಎಲ್ಲಾ ಮತಸ್ಥರನ್ನು, ಎಲ್ಲಾ ವರ್ಗದವರನ್ನು ಸಮಾನ ಪ್ರೀತಿಯಿಂದ ಆದರಿಸು ತ್ತಿದ್ದರು. ಮುಳುಗುತ್ತಿರುವ ಸಮಾಜವನ್ನು ಮೇಲೆತ್ತುವುದೇ ಅವರ ಪ್ರಧಾನ ಕಾಳಜಿಯಾಗಿತ್ತು. ‘‘ಈಗಿನಂಥಾ ಸುಧಾರಣೆಯ ಕಾಲದಲ್ಲಿ ಬ್ರಾಹ್ಮಣ ಯುವಕರು ಜೀವನೋಪಾಯದ ವೃತ್ತಿ ಸಂಪಾದನೆಗೋಸ್ಕರ ಇತರ ಜಾತಿ ಮತಗಳವರ ಸಂಗಡ ಸಮ ರಂಗದಲ್ಲಿ ನಿಂತುಕೊಂಡು ಹೋರಾಡಬೇಕಾಗುವ ಕಾಲದಲ್ಲಿ ಬ್ರಾಹ್ಮಣನು ಶುದ್ಧಾಚಾರಗಳನ್ನು ನಡೆಸುತ್ತಿರುವದೆಂಬುದು  ಸಾಧ್ಯವಲ್ಲ.  ಆದರೆ  ಬ್ರಾಹ್ಮಣರ ಆಚಾರಗಳೆಲ್ಲಾ ಮತ ಪಾಷಂಡಿಗಳು ತಮ್ಮ ಮೂಢಶ್ರದ್ಧೆ ಗಳಿಂದ ನಡೆಸುತ್ತಿರುವ ಚೇಷ್ಟೆಗಳೆಂಬ ಭಾವನೆಯು ಈ ಕಾಲದಲ್ಲಿ ನೆಲೆಗೊಳ್ಳುತ್ತಾ ಬರುತ್ತದೆ. ಇದರಿಂದ ಬ್ರಾಹ್ಮಣ ಯುವಕರು ತಮ್ಮ ಪೂರ್ವಜರ ಯೋಗ್ಯತೆಯನ್ನರಿಯದೆ, ತಮ್ಮ ಪೂರ್ವಕಥೆ, ವೃತ್ತಿಗಳು ಮರೆಮಾಚಿ ಹೋಗುವುದೇ ತಮಗೆ ಶ್ರೇಯಸ್ಕರವೆಂದು ತಿಳಿಯುತ್ತಾರೆ. ಮನುಷ್ಯನಿಗೆ ತನ್ನ ದೇಶ, ಕುಲ, ಸಂಬಂಧ, ಮನೆತನ ಇವುಗಳ ವಿಷಯದಲ್ಲಿ ತಕ್ಕಮಟ್ಟಿಗೆ ಗೌರವ ಬುದ್ಧಿಯು ಇಲ್ಲದಿದ್ದರೆ ಅಲ್ಪಾಶನಾಗಿ ದರಿದ್ರ ನಂತಿದ್ದಾನು. ಧರ್ಮಾಚಾರಗಳನ್ನು ನಡೆಸುತ್ತಿರುವವರನ್ನು ನೋಡಿ ಹಾಸ್ಯ ಮಾಡುತ್ತಿದ್ದಾನು’’ ಎಂದು ತನ್ನ ‘ಆಚಾರದರ್ಪಣ’ ಎಂಬ ಕೃತಿಯ ವಿಜ್ಞಾಪನೆಯಲ್ಲಿ ಹೇಳಿಕೊಂಡಿದ್ದಾರೆ. ಕವಲು ದಾರಿ ಯಲ್ಲಿ ಸಾಗುತ್ತಿರುವ ಯುವಕರಿಗೆ ದಾರಿ ತೋರಿಸಲು ಅವರು ಪ್ರಯತ್ನಿಸಿದರು. ಭಾರತೀಯ ಸಂಸ್ಕೃತಿಯ ಮಹತ್ವ, ಬ್ರಹ್ಮಚರ್ಯದ ಮಹಾತ್ಮೆ, ಗೃಹಸ್ಥಾಶ್ರಮ ಧರ್ಮದ ಅವಶ್ಯಕತೆ, ಮಾನಸಿಕ ಮತ್ತು ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವ ರೀತಿ, ತರುಣರು ಮಾಡಬೇಕಾದ ಸಂಕಲ್ಪ ಇತ್ಯಾದಿ ವಿಷಯಗಳ ಬಗ್ಗೆ ಈ ಕೃತಿಯಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಅದಲ್ಲದೆ ಈ ಕೃತಿಯ ಸನಾತನ ಧರ್ಮದ ಆಚಾರಗಳು ಆಧುನಿಕರಿಗೆ ಯಾಕೆ ಮೌಢ್ಯವಾಗಿ ಕಾಣುತ್ತವೆ ಎಂದು ವಿವರಿಸುತ್ತಾ ಅವುಗಳಲ್ಲಿ ನಮ್ಮ ಆತ್ಮೋನ್ನತಿಗೆ ಅಡ್ಡಿಯಾದ ಜೀವವಿರೋದಿ ಸಂಪ್ರದಾಯಗಳನ್ನು, ಆಚಾರಗಳನ್ನು ಕೈಬಿಡುವ ಅಗತ್ಯಗಳನ್ನು ವಿಮರ್ಶಿಸುತ್ತಾರೆ. ಭೌತಿಕ ಸುಖ ಸೌಕರ್ಯಗಳು ಮಾನವನ ಆತ್ಮೋನ್ನತಿಗೆ ಕುಂದುಂಟು ಮಾಡುತ್ತದೆ. ಲೌಕಿಕ ಜ್ಞಾನಕ್ಕೂ ವೈದಿಕ ಜ್ಞಾನಕ್ಕೂ ಇರುವ ಅಂತರಗಳನ್ನು ವಿವರಿಸಿದ್ದಾರೆ. ವೇದಗಳು ಅಪೌರುಷೇಯ ವೆಂಬುದನ್ನು ಸಮರ್ಥಿಸುತ್ತಾರೆ. ಎಲ್ಲಾ ಧಾರ್ಮಿಕ ಗ್ರಂಥಗಳೂ ಸಾರುವ ತತ್ವ ಒಂದೇ. ವಿಗ್ರಹಾರಾಧನೆಯ ತತ್ವ ಈ ಭರತಖಂಡದವರಿಗೆ ಮಾತ್ರ ತಿಳಿದಿರುತ್ತದೆ. ಈ ಆರಾಧನೆ ಯಲ್ಲಿ ಬೇರೆ ಜನಾಂಗದವರನ್ನು ಅನುಕರಿಸಿದರೆ ಅಪಕರ್ಷ ಉಂಟಾದೀತು. ತನ್ನ ಧರ್ಮದಲ್ಲೇ ಮುಕ್ತಿ ಹೊಂದುವುದು ಪುಣ್ಯಕಾರ್ಯವೆಂದು ಅವರು ಹೇಳುತ್ತಾರೆ. ಕಳೆದ ಶತಮಾನ ಗಳಲ್ಲಿ ನಡೆಯುತ್ತಿದ್ದ ಮತಾಂತರಗಳನ್ನು ಗಮನಿಸಿಯೇ ಗೋಪಾಲಕೃಷ್ಣಯ್ಯನವರು ಈ ಕೃತಿಯಲ್ಲಿ ಎಚ್ಚರಿಕೆಯ ಮಾತನ್ನಾಡಿರಬೇಕು. ತನ್ನ ಧರ್ಮದ ಶ್ರೇಷ್ಠತೆಯನ್ನು ತಿಳಿಯದೆ ಕೇವಲ ಡಾಂಬಿಕ ಭಕ್ತಿಯ ಸೋಗು ಬ್ರಾಹ್ಮಣರಿಗೆ ತರವಲ್ಲ. ಬಾಲ್ಯದಿಂದಲೇ ಉತ್ತಮ ಸಂಸ್ಕಾರಗಳಿಂದ ಹೆತ್ತವರು ಮಕ್ಕಳನ್ನು ಬೆಳೆಸಬೇಕು. ಆಚಾರಗಳಲ್ಲಿ ಶ್ರದ್ಧೆ ಹುಟ್ಟಿಸಬೇಕು. ಆಚಾರವಂತರಾಗಲು ಲಜ್ಜೆಪಡುವ ಅಗತ್ಯವಿಲ್ಲ. ಆಲಸ್ಯ ಮತ್ತು ಅನಾಚಾರದಿಂದ ವಿದ್ಯೆಯ ಮಹಾತ್ಮೆಯು ಮರೆತು ಹೋಗುವ ಸಂಭವವಿದೆ. ಆತ್ಮಜ್ಞಾನ ಹೊಂದುವ ಈಗಿನ ರೀತಿಯಿಂದ ಪ್ರಯೋಜನವಾಗದು. ಅವರು ಈ ಕೃತಿಯನ್ನು ರಚಿಸಿದ ಮುಖ್ಯ ಆಶಯವೆಂದರೆ ಬ್ರಾಹ್ಮಣ ಸಮಾಜದ ಸನಾತನ ಪರಂಪರೆಯು ಕವಲು ದಾರಿಯಲ್ಲಿ ಸಾಗುತ್ತಿರುವುದನ್ನು ತಡೆಯುವುದು. ಚಾರಿತ್ರ್ಯ ಶುದ್ಧಿ ಮತ್ತು ಆತ್ಮಶುದ್ಧಿಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಗೃಹಸ್ಥಾಶ್ರಮ ಧರ್ಮದಲ್ಲಿ ನಿಯತ್ತು, ಮಾತಾಪಿತೃ ಭಕ್ತಿ, ಬ್ರಹ್ಮ ಕರ್ಮಗಳಲ್ಲಿ ಶ್ರದ್ಧೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧನಾಗಿರಬೇಕಾದ ಅಗತ್ಯಗಳನ್ನು ಗುರುವು ಶಿಷ್ಯನಿಗೆ ಹೇಳುವಂತೆ ವಿವರಿಸಿದ್ದಾರೆ. ದೈವಿಕ ಶಕ್ತಿಗಳಲ್ಲಿ ನಂಬಿಕೆ ಇಲ್ಲದವರಿಗೆ ಈ ಆಚಾರಗಳೆಲ್ಲ ಸ್ವಾರ್ಥ ಮೂಲವಾಗಿ ಕಾಣಬಹುದು. ಆಧುನಿಕ ಕಾಲದಲ್ಲಿ ಉದರ ನಿರ್ವಾಹಕ್ಕಾಗಿ ಉದ್ಯೋಗವನ್ನು ಕೈಗೊಂಡಾಗ, ದೇಶೋದ್ಧಾರಕ್ಕಾಗಿ ಶ್ರಮಿಸುವಾಗ ಆಚಾರ ಗಳಿಗೆ ಲೋಪ ಬರುವ ಸಂಭವವಿರುವುದಾದರೂ ಧರ್ಮಾಬಿಮಾನವನ್ನು ಕಳಕೊಳ್ಳದೆ ಭಗವಂತನ ಪ್ರೀತ್ಯರ್ಥವಾಗಿ ಸಾಹಸ ಮಾಡುತ್ತಿರಬೇಕಾದುದು ಶ್ರೇಯಸ್ಕರವಾಗಿದೆ. ಗಾಂದೀಜಿಯ ನಿಷ್ಠಾವಂತ ಅನುಯಾಯಿಯಾಗಿದ್ದುಕೊಂಡೇ ಬ್ರಾಹ್ಮಣರಲ್ಲಿ ಹೆಚ್ಚುತ್ತಿರುವ ಸದಾಚಾರ ಲೋಪಗಳನ್ನು ಕಂಡು ತನ್ನದೇ ಆದ ನಿಲುವುಗಳನ್ನು ಈ ಕೃತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಬದಲಾವಣೆಗಳಿಗೆ ಆಧುನಿಕ ಸಮಾಜ ತೆರೆದುಕೊಂಡಾಗ ಹಿರಿಯ ತಲೆಮಾರಿನವರಾಗಿ ಸಂಪ್ರದಾಯನಿಷ್ಠರಾದ ಗೋಪಾಲಕೃಷ್ಣಯ್ಯನವರು ತಮ್ಮ ಮನಸ್ಸಿನ ತಲ್ಲಣಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ‘Our past and present from a religious point of view’ ಎಂಬ ಇಂಗ್ಲಿಷ್ ಕೃತಿಯನ್ನೂ ಪ್ರಕಟಿಸಿರುವ ರೆಂದು ತಿಳಿದು ಬರುತ್ತದೆ. ಪ್ರಾಮಾಣಿಕತೆ, ಸತ್ಯಸಂಧತೆ, ಶಿಸ್ತು, ಧರ್ಮಶ್ರದ್ಧೆ ಇವುಗಳಿಗೆ ತಾನು ಮಾದರಿಯಾಗಿ ಇತರರಿಗೆ ಬೋದಿಸುತ್ತಿದ್ದರು. ಒಮ್ಮೆ ಇವರ ಮೊಮ್ಮಗಳು ಕಸ್ತೂರಿಗೆ ದಾರಿಯಲ್ಲಿ ಒಂದು ನಾಣ್ಯ ಸಿಕ್ಕಿತು. ಅವಳು ಅದನ್ನು ಸಂತೋಷದಿಂದ ಮನೆಗೆ ತಂದು ತಂದೆಯಲ್ಲಿ ತೋರಿಸಿದಾಗ ಗೋಪಾಲಕೃಷ್ಣಯ್ಯನವರು ‘‘ಅದು ಎಲ್ಲಿ ಇತ್ತೋ ಅಲ್ಲೇ ಇಟ್ಟು ಬಾ. ಹಣ ಕಳೆದುಕೊಂಡವನು ಬರಬಹುದು. ಯಾರೂ ಬಾರದಿದ್ದರೆ ದೇವಸ್ಥಾನದ ಹುಂಡಿಗೆ ಹಾಕಿ ಬಾ. ಹಾಗೆ ಮಾಡದೆ ಊಟ ಹಾಕುವುದಿಲ್ಲ’’ವೆಂದು ತಾಕೀತು ಮಾಡಿದರಂತೆ. ಇಂತಹ ಚಾರಿತ್ರ ್ಯ ಶುದ್ಧಿಯನ್ನು ತನ್ನ ಮಕ್ಕಳಲ್ಲೂ, ವಿದ್ಯಾರ್ಥಿಗಳಲ್ಲೂ ಬಿತ್ತಿ ಬೆಳೆಸಿದ ಮಹಾನುಭಾವರು ಇವರು. ಕಲೆ ಮತ್ತು ಕಲಾವಿದರೊಳಗೆ ಜೀವ-ಭಾವ ಸಂಬಂಧವಿರಬೇಕೆಂದು ಆಶಿಸಿದ ಸಹೃದಯ ಸಂಪನ್ನರವರು. ಇವರಿಗೆ ಆ ಕಾಲದ ಖ್ಯಾತ ಕಲಾವಿದ ರಾಜಾ ರವಿವರ್ಮರೊಂದಿಗೆ ಆತ್ಮೀಯ ಮಿತೃತ್ವವಿತ್ತು.

ಗೋಪಾಲಕೃಷ್ಣಯ್ಯನವರು ಕುಂಚ, ಬಣ್ಣ, ರೇಖೆಗಳಿಂದ ಮಾತ್ರ ಶ್ರೇಷ್ಠ ಕಲಾವಿದ ರಾಗಿಲ್ಲ. ಅನುಪಯುಕ್ತ ವಸ್ತುಗಳಿಂದಲೂ ಕಲಾಕೃತಿಗಳನ್ನು ರಚಿಸುವ ಕಲಾವಿದರಾಗಿದ್ದರು. ಮರ, ಕಲ್ಲು, ಮಣ್ಣಿನ ಕಲಾಕೃತಿಗಳು ಮತ್ತು ಅವುಗಳ ಸಂಗ್ರಹ, ತಾಳೆ ಗರಿಗಳಿಂದ ಹೆಣೆದು ಮಾಡಿದ ಕಲಾವಸ್ತು, ನಾಣ್ಯ, ಅಂಚೆ ಚೀಟಿ, ಬೆಂಕಿಪೊಟ್ಟಣಗಳ ಸಂಗ್ರಹ, ಬುಟ್ಟಿ ಹೆಣೆಯುವ ಕೌಶಲಗಳಲ್ಲೂ ಪಳಗಿದವರು. ಇವರ ವರ್ಣಚಿತ್ರಗಳು ದೇಶ, ವಿದೇಶಗಳಲ್ಲಿ ಹರಡಿಕೊಂಡಿವೆ. ತನ್ನ ಕೃತಿಯ ಕೆಳಗೆ ರುಜು ಹಾಕದೆ ಕೊಂಡೊಯ್ಯಲ್ಪಟ್ಟವುಗಳು ಮತ್ತೆ ಯಾರ್ಯಾರದೋ ಹೆಸರಿನಲ್ಲಿ ಪ್ರಕಟವಾದದ್ದು, ತಮ್ಮ ರುಜು ಇದ್ದ ಕಲಾಕೃತಿಯೂ ಕೂಡಾ ಬೇರೊಬ್ಬನ ಹೆಸರಲ್ಲಿ ತಿದ್ದಿ ಪ್ರಸಿದ್ಧಿಯಾದದ್ದು ಮುಂತಾದ ವಂಚನೆಗೊಳಗಾದರೂ ಇಂತಹ ಕಲೆಯ ವ್ಯಬಿಚಾರದ ಬಗ್ಗೆ ರಾಯರು ಎಂದೂ ಬೇಸರಿಸಲಿಲ್ಲ, ದ್ವೇಷಿಸಲಿಲ್ಲ. ಅವರು ಹಣ, ಬಹುಮಾನ, ಕೀರ್ತಿಗಾಗಿ ಆಶಿಸಿದವರಲ್ಲ. ಎಲ್ಲದಕ್ಕೂ ಅವರದು ನಿರ್ಲಿಪ್ತ ಮನಸ್ಥಿತಿ.

ಗೋಪಾಲಕೃಷ್ಣಯ್ಯನವರ ಕಲಾಸಾಧನೆಯನ್ನು ಮೆಚ್ಚಿ ಧರ್ಮಸ್ಥಳದ ಧರ್ಮಾದಿಕಾರಿ ದಿ. ಚಂದಯ್ಯ ಹೆಗ್ಗಡೆಯವರು ಶಾಲು ಮತ್ತು ಬೆಳ್ಳಿಯ ಹಿಡಿಕೆಯಿರುವ ದಂಡವನ್ನು ನೀಡಿ ಗೌರವಿಸಿದ್ದರು. ಹುಬ್ಬಳ್ಳಿಯ ಸಿದ್ಧಾರೂಢ ಮಠದವರು ಬೆಳ್ಳಿಯ ಚಿತ್ರದ ಚೌಕಟ್ಟನ್ನು ನೀಡಿ ಸನ್ಮಾನಿಸಿದ್ದಾರೆ. ಜೆ.ಜೆ. ಕಲಾ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಕೆನರಾ ಶಾಲೆಯ ವಿದ್ಯಾರ್ಥಿಗಳು ಅವರಿಗೆ ಬಂಗಾರದ ಪದಕಗಳನ್ನು ನೀಡಿ ಸನ್ಮಾನಿಸಿದ್ದಾರೆ. ಚಿತ್ರ ಕಲಾನಿದಿ, ಚಿತ್ರ ಕಲಾಚಾರ್ಯ, ಚಿತ್ರ ಕಲಾಕೋವಿದ ಮುಂತಾದ ಬಿರುದುಗಳು ಇವರಿಗೆ ಲಬಿಸಿವೆ. ಈ ಪ್ರಪಂಚದಲ್ಲಿ ನಿರಾಶೆ ಕೆಲವರನ್ನು ಹಾಳು ಮಾಡಿದರೆ ಅತ್ಯಾಶೆ ಅನೇಕರನ್ನು ಹಾಳುಮಾಡಿದೆ ಎಂಬುದನ್ನು ಚೆನ್ನಾಗಿ ಅರಿತ ರಾಯರು ಪದ್ಮಪತ್ರದ ಮೇಲಿನ ನೀರ ಬಿಂದುವಿನಂತೆ ಯಾವುದಕ್ಕೂ ಅಂಟಿಕೊಳ್ಳದೆ ಸಮತೂಕದ ಮನಸ್ಥಿತಿಯನ್ನು ಕಾಪಾಡಿಕೊಂಡವರು. ದೊರೆತ ಪದಕಗಳು ಮಡದಿ ವೆಂಕಮ್ಮನ ಕೊರಳ ಹಾರದಲ್ಲಿ ಪೋಣಿಸಲ್ಪಟ್ಟು ಶೋಬಿಸುತ್ತಿದ್ದ ಕಾಲವು ಹೆಚ್ಚು ದೀರ್ಘವಾಗಿರಲಿಲ್ಲ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಎಲ್ಲ ಸಾಮಾನ್ಯ ಜನವರ್ಗದ ಜೀವನ ಸ್ಥಿತಿಯಲ್ಲೂ ಏರುಪೇರುಗಳಾಗಿದ್ದವು. ದೊಡ್ಡ ಅವಿಭಕ್ತ ಕುಟುಂಬವಾಗಿದ್ದ ಪಾವಂಜೆ ಮನೆತನಕ್ಕೂ ಅದರ ಬಿಸಿ ತಟ್ಟದಿರಲಿಲ್ಲ. ಆಗ ಒಂದೊಂದೇ ಬಂಗಾರದ ಪದಕಗಳು ಉರುಳಿ ಬಿದ್ದು ಕೊರಳು ಬರಿದಾದಾಗ ಪತ್ನಿ ವೆಂಕಮ್ಮನಾಗಲೀ ಪತಿ ಗೋಪಾಲಕೃಷ್ಣರಾಯ ರಾಗಲೀ ವ್ಯಥೆ ಪಡಲಿಲ್ಲ. ನಾವು ಪಡಕೊಂಡು ಬಂದದ್ದಿಷ್ಟೇ ಎಂದು ಸಾಂತ್ವನ ಹೇಳಿಕೊಂಡು ಸುಮ್ಮನಾದರೇ ವಿನಃ ಅದಕ್ಕಾಗಿ ಪರಿತಪಿಸಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಅವರ ಮನೆ ಒಂದು ಛತ್ರದಂತಿತ್ತು. ಅವರನ್ನು ಭೇಟಿಯಾಗಲು ಬರುವ ದೇಶ ವಿದೇಶದ ಕಲಾವಿದರಿಗೆ, ಪರಸ್ಥಳದಿಂದ ಬರುವ ಸ್ವಾತಂತ್ರ್ಯ ಹೋರಾಟ ಗಾರರಿಗೆ, ಯಾತ್ರಿಗಳಿಗೆ, ಶಿಕ್ಷಣಾಸಕ್ತ ವಿದ್ಯಾರ್ಥಿ ಬಂಧುಗಳಿಗೆ ಅವರ ಮನೆಯೊಂದು ಆಶ್ರಯ ತಾಣವಾಗಿತ್ತು. ಮೂರು ಗಂಡು ಎರಡು ಹೆಣ್ಣು ಮಕ್ಕಳನ್ನು ಪಡೆದ ರಾಯರ ಮನೆಯಲ್ಲಿ ನಿತ್ಯವೂ ಅನ್ನ ದಾಸೋಹ ನಡೆಯುತ್ತಿತ್ತು. ಹಾಗಾಗಿ ಕೆಲವೊಮ್ಮೆ ಕಾಲು ಚಾಪೆಯಿಂದ ಹೊರಗೆ ಇಣುಕಲೇ ಬೇಕಾಗುತ್ತಿತ್ತು. ಸಂತೋಷವೆಂಬ ದೇವಾಲಯದ ಗರ್ಭಗುಡಿಯೊಳಗೇ ಸಂಕಟವು ಪ್ರತಿಷ್ಠೆಯಾಗಿರುವುದನ್ನು ಯಾರೂ ಗಮನಿಸುವುದಿಲ್ಲ. ಗಮನಿಸಲು ಆ ದೇವಾಲಯ ಆಸ್ಪದವನ್ನೇ ಕೊಡುವುದಿಲ್ಲ. ರಾಯರ ಧಾರ್ಮಿಕ ಶ್ರದ್ಧೆಯು ಎಂತಹ ವಿಪತ್ತುಗಳನ್ನೂ ಎದುರಿಸಿ ಗೆಲ್ಲುವ ಶಕ್ತಿಯನ್ನು ಪಡೆದಿತ್ತು. ಸಂಯಮ ಕಳಕೊಳ್ಳುವುದು, ಇತರರನ್ನು ನಿಂದಿಸುವುದು, ಕೆಟ್ಟ  ಮಾತಾಡುವುದು ಇತ್ಯಾದಿಗಳು ಅವರ ಸಮೀಪದಲ್ಲೂ ಸುಳಿಯಲಾರವು. ಹಾಗಿತ್ತು ಅವರ ವ್ಯಕ್ತಿತ್ವ.

ರಾಯರು ಜಲವರ್ಣದಲ್ಲಿ ಪರಿಣತರು, ವ್ಯಕ್ತಿಗಳ ಭಾವಚಿತ್ರ ರಚನೆಯಲ್ಲೂ ಸಿದ್ಧಹಸ್ತರು. ಇವರ ಅನೇಕ ಕಲಾಕೃತಿಗಳು ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು ಬಂಟರ ವಿದ್ಯಾರ್ಥಿ ನಿಲಯದಲ್ಲಿವೆ. ನೂರು ವರ್ಷಗಳ ಹಿಂದೆ ರಚಿಸಿದ ಜಲವರ್ಣ ಚಿತ್ರಗಳು ಈಗಲೂ ಆಕರ್ಷಕವಾಗಿವೆ. ಇವರ ಬಹುಮಾನಿತ ಕೃತಿಗಳು ಮಾರಾಟವಾಗಿ ಅನೇಕ ಶ್ರೀಮಂತರ, ಕಲಾ ರಸಿಕರ ಸಂಗ್ರಹದಲ್ಲಿವೆ. ಆಗಿನ ಅನೇಕ ರಾಜ ಮಹಾರಾಜರ ಭಾವಚಿತ್ರ ಗಳನ್ನು ರಾಯರು ರಚಿಸಿದ್ದಾರೆ. ಮಧ್ಯಪ್ರದೇಶದ ಮಹಾರಾಜ ರಾಣಾ ಪನ್ನಾನ ಆಳೆತ್ತರದ ಕಲಾಕೃತಿಗೆ ಆ ಕಾಲದಲ್ಲಿ 400 ರೂಪಾಯಿ ಸಂಭಾವನೆ ಲಬಿಸಿತ್ತಂತೆ.

ಬಾಸೆಲ್ ಮಿಶನ್ನಿನವರು ಪ್ರಕಟಿಸಿದ ಪುಸ್ತಕಗಳಲ್ಲಿ, ವಿಜ್ಞಾನಕ್ಕೆ ಸಂಬಂದಿಸಿದ ಶೈಕ್ಷಣಿಕ ಪಠ್ಯ ಪುಸ್ತಕಗಳಲ್ಲಿ ರಾಯರ ಚಿತ್ರಗಳು ಬಳಕೆಯಾಗಿವೆ. ಆಗ ಮುದ್ರಣ ಗೊಂಡ ಚಾರ್ಟ್ ಗಳು ಈಗಲೂ ಮನೋಹರವಾಗಿವೆ. ರಾಷ್ಟ್ರದ ಸಾಂಸ್ಕೃತಿಕ ಬೆಳವಣಿಗೆಗೆ ಕಾವ್ಯ, ಸಂಗೀತ, ಸಾಹಿತ್ಯದಂತೆ ಚಿತ್ರಕಲೆಯೂ ಮಹತ್ವದ ಕಾಣಿಕೆಗಳನ್ನು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರಕಲೆಯ ಅಭ್ಯಾಸಕ್ಕೆ ಓ ನಾಮ ಹಾಕಿದವರು ಪಾವಂಜೆ ಗೋಪಾಲಕೃಷ್ಣಯ್ಯನವರು. ಚಿತ್ರಕಲೆಯ ಪಥದಲ್ಲಿ ಶಾಸ್ತ್ರಬದ್ಧ ರೀತಿಯಲ್ಲಿ ಹೆಜ್ಜೆ ಇಡಲು ಕಲಿಸಿದ ಇವರಿಂದಾಗಿ ನೂರಾರು ಮಂದಿ ಇಂದು ಈ ಹಾದಿಯಲ್ಲಿ ಸುಗಮವಾಗಿ ಸಾಗುತ್ತಿದ್ದಾರೆ. ಒಂದು ರಾಜಮಾರ್ಗವನ್ನೇ ಅವರು ನಿರ್ಮಿಸಿ ಕೊಟ್ಟಿದ್ದಾರೆ.

ಗೋಪಾಲಕೃಷ್ಣಯ್ಯನವರು ತಮ್ಮ ಕೊನೆಗಾಲದಲ್ಲಿ ಆಧ್ಯಾತ್ಮಿಕದತ್ತ ಹೆಚ್ಚು ಆಕರ್ಷಿತರಾದ ಕಾರಣ ಪೂಜೆ, ಜಪ, ತಪಗಳ ಕಡೆಗೆ ಗಮನ ಹೆಚ್ಚಿ ಕಲಾಕೃತಿಗಳ ರಚನೆ ಕಡಿಮೆಯಾಯಿತು. ಆದರೆ ಕಾಲಿನ ನೋವಿನಿಂದ ಹಾಸಿಗೆ ಹಿಡಿದ ಸಮಯ ದಲ್ಲಿಯೂ ಮಾರ್ಗದರ್ಶನ ಪಡೆಯಲು ಬರುತ್ತಿದ್ದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ತಮ್ಮ ಹಾಸಿಗೆಯ ಸಮೀಪದ ಗೋಡೆಯ ಮೇಲೆ ಪೆನ್ಸಿಲಿನಿಂದ ಸೂರ್ಯಾಸ್ತಮಾನದ ಚಿತ್ರವನ್ನು ಬಿಡಿಸಿದ್ದರೆಂದು ಅವರ ಶಿಷ್ಯ ದಿ| ಬಿ.ಪಿ. ಬಾಯರಿಯವರು ಸ್ಮರಿಸಿದ್ದಾರೆ. ಅವರ ಕೊನೆಯ ದಿನಗಳಲ್ಲಿ ‘ನಾನು ಕಂಡ ದೇವರು ಹೀಗಿದ್ದಾನೆ’ ಎಂದು ತುಳಸಿಕಟ್ಟೆಯ ಎದುರಿನ ಗೋಡೆಯ ಮೇಲೆ ಅಂಗಾರಕ ಕಡ್ಡಿಯ ಸಹಾಯದಿಂದ ಸೂರ್ಯ ನಾರಾಯಣನ ರೇಖಾಚಿತ್ರವನ್ನು ಬಿಡಿಸಿದ್ದರಂತೆ. ಈ ಚಿತ್ರ ರಚಿಸಿದ ಕೆಲವು ದಿನಗಳ ಬಳಿಕ ಎತ್ತರದ ಧ್ವನಿಯಲ್ಲಿ ಮಂತ್ರವನ್ನು ಜಪಿಸುತ್ತಲೇ 1945ರಲ್ಲಿ ಅವರು ನಿಧನರಾದರು. ಅವರು ಅಸಂಖ್ಯಾತ ಕಲಾಕೃತಿಗಳನ್ನು ರಚಿಸಿದರೂ ಉಳಿದಿರುವುದು ಕಡಿಮೆ. ಉಳಿದವುಗಳನ್ನು ಜೋಪಾನವಾಗಿ ಪಾವಂಜೆ ಮನೆತನದವರು ರಕ್ಷಿಸುತ್ತಾ ಬಂದಿದ್ದಾರೆ. ಈ ಕಲಾಕೃತಿಗಳು ಅವರ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.

ಎನ್.ಜಿ. ಪಾವಂಜೆ
(ನರಹರಿ ಗೋಪಾಲಕೃಷ್ಣ ಪಾವಂಜೆ)

ಪಾವಂಜೆ ಗೋಪಾಲಕೃಷ್ಣಯ್ಯನವರಿಗೆ ಮೂವರು ಗಂಡು ಮಕ್ಕಳು. ನರಹರಿ, ಮುರಹರಿ ಮತ್ತು ಭುಜಂಗ. ಇವರಲ್ಲಿ ಇಬ್ಬರು ತಂದೆಯ ಚಿತ್ರಕಲೆಯ ಗುಡಿಯಲ್ಲಿ ಕಲಾರಾಧಕರಾಗಿಯೇ ಬೆಳೆದವರು. ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ ದೇಶ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದವರು – ರಾಯರ ಹಿರಿಯ ಮಗ ನರಹರಿ ಪಾವಂಜೆಯವರು. ಇವರು ಗೋಪಾಲಕೃಷ್ಣಯ್ಯ ವೆಂಕಮ್ಮ ದಂಪತಿಗಳಿಗೆ 1892ರಲ್ಲಿ ಜನಿಸಿದರು. ‘ದೀಪವು ನಿನ್ನದೇ, ಗಾಳಿಯೂ ನಿನ್ನದೇ ಆರದಿರಲಿ ಬೆಳಕು’ ಎಂಬಂತೆ ಪರಮಶ್ರದ್ಧೆಯಿಂದ ಕಲಾ ಸರಸ್ವತಿಯ ಸೇವೆಗೈದ ಗೋಪಾಲಕೃಷ್ಣ ರಾಯರ ಕಲಾತಪಸ್ಸಿನ ಫಲವಾಗಿಯೇ ದೇವಿ ವರವನ್ನಿತ್ತಳೋ ಎಂಬಂತೆ ನರಹರಿ ಪಾವಂಜೆಯವರ ಕಲಾಶ್ರದ್ಧೆ ಎಳವೆಯಿಂದಲೇ ಚಿಗುರೊಡೆ ಯಿತು. ಕಣ್ಣು ತೆರೆದಂದಿನಿಂದಲೂ, ಅವರು ಕಂಡದ್ದು ಕಲಾಪರಿಸರವನ್ನು, ತೊದಲು ನುಡಿ ಕಲಿತಂದಿನಿಂದಲೂ ಆಡಿದ್ದು, ಕೇಳಿದ್ದು ಕಲಾವಿದರ ಮಾತುಗಳನ್ನು. ಆದುದರಿಂದ ನರಹರಿ ಪಾವಂಜೆಯವರು ಚಿತ್ರಕಲೆಯನ್ನು ತನ್ನ ಉಸಿರಾಗಿಯೇ ಸ್ವೀಕರಿಸಿದರು.

ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಉತ್ತೀರ್ಣರಾದ ಬಳಿಕ ಮದರಾಸಿನಲ್ಲಿ ಪ್ರೌಢ ಕಲಾ ಪರೀಕ್ಷೆಯನ್ನು ಪೂರೈಸುವುದು ಸುಲಭ ವಾಯಿತು. ಕಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಉಡುಪಿಯ ಕ್ರಿಶ್ಚಿಯನ್ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಕಲೆಯಲ್ಲಿ ಇನ್ನು ಹೆಚ್ಚಿನ ಪರಿಣತಿಯನ್ನು ಪಡೆಯಬೇಕೆಂಬ ಆಕಾಂಕ್ಷೆ ಹುಟ್ಟಿತು. ಮುಂಬಯಿಯ ಜೆ.ಜೆ. ಕಲಾ ಶಾಲೆಯಲ್ಲಿ ಅಭ್ಯಾಸ ಮಾಡಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮೇಲೆ ಬೆಂಗಳೂರಿನ ಬಳೇ ಪೇಟೆಯಲ್ಲಿ ಸ್ಟುಡಿಯೋ ಸ್ಥಾಪಿಸಿ ಸ್ವತಂತ್ರ  ಕಲಾವೃತ್ತಿಯಲ್ಲಿ  ನಿರತರಾದರು.  ಆದರೆ ಅದಾಗಲೇ ಕಲೆಯು ಜಾಹೀರಾತು, ಪ್ರಭಾವಗಳ ಪ್ರಪಂಚಕ್ಕೆ ಪ್ರವೇಶಿಸಿತ್ತು. ಎಲೆಮರೆಯಲ್ಲಿ ಕಲಾಶ್ರದ್ಧೆಯಿಂದ ದುಡಿಯುವವರಿಗೆ ಗೌರವಗಳಿರಲಿಲ್ಲ. ಕೆಲವು ಕಟು ಅನುಭವಗಳಿಂದ ನೊಂದು ಅವರು ಬೇರೆ ದಾರಿಯನ್ನು ಹುಡುಕ ತೊಡಗಿದರು. ಅದೇ ಸಮಯದಲ್ಲಿ ಹವ್ಯಾಸೀ ನಾಟಕರಂಗ ವೊಂದು ಪದವೀಧರರಿಂದಲೇ ಆರಂಭಗೊಂಡಿತು. ಅವರಲ್ಲಿ ಸುಪ್ತ ವಾಗಿದ್ದ ನಟನಾ ಕೌಶಲದಿಂದಾಗಿ ಹಲವು ನಾಟಕಗಳಲ್ಲಿ ಉತ್ತಮ ನಟನಾಗಿ ಮಿಂಚಿದರು. ಖ್ಯಾತ ನಟರಾದ ದಿ. ಬಳ್ಳಾರಿ ರಾಘವಾಚಾರ್ಯರ ಈ ನಾಟಕ ಸಂಸ್ಥೆಯಲ್ಲಿ ನಟನೆಯ ಜೊತೆಗೆ ರಂಗಸಜ್ಜಿಕೆಗೆ ಕಲಾತ್ಮಕ ಸ್ಪರ್ಶವನ್ನು ನೀಡಲು ಮುಂದಾದರು. ನಾಟಕದ ಪರದೆಗಳನ್ನು ರಚಿಸಿದರು. ಹೀಗೆ ನಾಟಕದ ಸೀನು, ಸೀನೆರಿಗಳು ಪ್ರೇಕ್ಷಕರ ಮನಸೆಳೆಯು ವಂತಾಯಿತು.

ಇದೇ ಸಮಯದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಡಾ. ಮೆಹದಿ ಹಸನ್‌ರವರು ಸೂಕ್ಷ್ಮಾಣುಗಳನ್ನು ಕಂಡ ಹಾಗೆಯೇ ಚಿತ್ರಿಸಬಲ್ಲ ಕಲಾವಿದರ ಹುಡುಕಾಟ ದಲ್ಲಿದ್ದರು. ನರಹರಿ ಪಾವಂಜೆಯವರನ್ನು ಈ ಕೆಲಸಕ್ಕಾಗಿ ಆಹ್ವಾನಿಸಿದರು. ನರಹರಿ ಪಾವಂಜೆಯವರು ಅವುಗಳ ನೈಜ ಚಿತ್ರವನ್ನು ತನ್ನ ಕುಂಚದಲ್ಲಿ ಪ್ರತಿಬಿಂಬಿಸಿದರು. ಈ ಚಿತ್ರಗಳು ಜರ್ಮನಿಯಲ್ಲಿ ಮುದ್ರಣಗೊಂಡು ವಿಜ್ಞಾನದ ಅನ್ವೇಷಣೆಯಲ್ಲಿ ಒಂದು ಮೈಲಿಗಲ್ಲಾಯಿತು. ಇವರ ಪ್ರತಿಭೆ ಮೈಸೂರು ಮಹಾರಾಜರಾದ ಕೃಷ್ಣರಾಜೇಂದ್ರ ಒಡೆಯರ ಗಮನಕ್ಕೂ ಬಂದು ಅವರನ್ನು ಹೆಚ್ಚಿನ ಕಲಾ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಿ ಜರ್ಮನಿಗೆ ಕಳಿಸುವಂತಾಯಿತು. ಕಲಾವ್ಯಾಸಂಗಕ್ಕಾಗಿ ಜರ್ಮನಿಗೆ ತೆರಳಿದ ಪ್ರಥಮ ಕನ್ನಡಿಗನೆಂದು ಗೌರವಿಸಿ ನರಹರಿ ಪಾವಂಜೆಯವರಿಗೆ 50 ಸವರನ್ನಿನ ಚಿನ್ನದ ನಾಣ್ಯಗಳನ್ನು ನೀಡಿದರಂತೆ. ಅಲ್ಲಿದ್ದ ಮೂರೂವರೆ ವರ್ಷದ ಅವದಿಯಲ್ಲಿ ಪಾಶ್ಚಾತ್ಯ ಚಿತ್ರಕಲೆಗಳ ಎಲ್ಲಾ ಶೈಲಿಗಳನ್ನು, ತಂತ್ರಗಳನ್ನು ಕರಗತ ಮಾಡಿಕೊಂಡರು. ಅಲ್ಲಿನ ಪ್ರಸಿದ್ಧ ಕಲಾ ಸಂಗ್ರಹಾಲಯ ಗಳಲ್ಲಿ ಅಭ್ಯಾಸ ಮಾಡಿ ಜಗತ್ ಪ್ರಸಿದ್ಧ ಕಲಾಕೃತಿಗಳ ಪ್ರತಿಕೃತಿಗಳನ್ನು ರಚಿಸಿದರು. ರೆಂಬ್ರಾಂಟ್ ಮತ್ತು ಟಿಶಿಯನ್‌ರ ಕಲೆಯ ಎರಡು ಪ್ರತಿಕೃತಿಗಳನ್ನು ರಚಿಸಿ ಮೈಸೂರು ಮಹಾರಾಜರಿಗೆ ಕಾಣಿಕೆಯಾಗಿ ನೀಡಿದರು. ಮೈಸೂರಿನ ಜನನ್ಮೋಹನ ಕಲಾಸಂಗ್ರಹಾಲಯ ದಲ್ಲಿ ಅವು ಈಗಲೂ ಇವೆ.

ಮುಂದೆ ಮೈಸೂರಿನ ಶ್ರೀ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯ ಕಲಾ ವಿಭಾಗದ ಮುಖ್ಯಾದಿಕಾರಿಯಾಗಿ ನೇಮಕಗೊಂಡರು. ಈ ಶಾಲೆಯ ಮುಖ್ಯ ನಿರ್ವಹಣಾದಿಕಾರಿ ಯಾಗಿದ್ದ ಅವದಿಯಲ್ಲಿ ಕರ್ನಾಟಕದ ಕಲೆ ಮತ್ತು ಕರಕುಶಲ ವಸ್ತುಗಳ ಉತ್ತಮ ಮಾದರಿ ಗಳನ್ನು ರಚಿಸಿ ಪ್ರದರ್ಶಿಸಿದ್ದರಿಂದ ದೇಶ ವಿದೇಶಗಳಲ್ಲಿ ಕರ್ನಾಟಕದ ಕಲೆಯ ಸಿರಿವಂತಿಕೆ ಯನ್ನು ಕಲಾರಸಿಕರು ಮೆಚ್ಚಿ ಕೊಂಡಾಡುವಂತಾಯಿತು. ಇವರ ವಿದ್ಯಾರ್ಥಿಗಳನೇಕರು ಚಿತ್ರಕಲೆಯಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿ ಕೀರ್ತಿಗಳಿಸಿದರು. ಇವರಲ್ಲಿ ಎಂ.ಟಿ.ವಿ. ಆಚಾರ್ಯ, ಬಿ.ಎಚ್. ರಾಮಚಂದ್ರ, ಎಂ.ಜೆ. ಶುದ್ಧೋದನ, ಎಸ್.ಆರ್. ಸ್ವಾಮಿ, ಎನ್. ಹನುಮಯ್ಯ, ಎನ್.ಎಸ್. ಸುಬ್ಬುಕೃಷ್ಣ, ಎಸ್.ಎಸ್. ಕುಕ್ಕೆ ಮುಂತಾದ ಅನೇಕರು ಭಾರತದ ಶ್ರೇಷ್ಠ ಕಲಾವಿದರೆಂದು ಖ್ಯಾತಿ ಗಳಿಸಿದರು. ನಮ್ಮ ಜಿಲ್ಲೆಯವರೇ ಆದ ಕೆ.ಕೆ. ಹೆಬ್ಬಾರರು ಕೆಲಕಾಲ ಇವರ ಶಿಷ್ಯರಾಗಿದ್ದರು. ಶಿಷ್ಯರ ಕಲಾಪ್ರಗತಿಗೆ ತನ್ನ ಸಂಪೂರ್ಣ ಶ್ರಮ ಮತ್ತು ಸಮಯವನ್ನು ಮೀಸಲಾಗಿಟ್ಟ ಈ ಆದರ್ಶ ಗುರು ತನ್ನ ಪ್ರತಿಭೆಯನ್ನು ಧಾರೆಯೆರೆದರು. ವೃತ್ತಿ ಶಿಕ್ಷಣ ಶಾಲೆಯ ನಿರ್ವಹಣೆಯ ಜೊತೆಗೆ ಮೈಸೂರು ದಸರಾ ವಸ್ತು ಪ್ರದರ್ಶನದ ಮುಖ್ಯ ಕಾರ್ಯದರ್ಶಿಯಾಗಿ ಕೆಲಕಾಲ ಶ್ರಮಿಸಿದರು. ಅಂದಿನ ಆ ಪ್ರದರ್ಶನದ ಕಲಾ ವಿಭಾಗದಲ್ಲಿ ಭಾರತದ ಪ್ರಮುಖ ಕಲಾವಿದರ ಚಿತ್ರಗಳು ಪ್ರದರ್ಶಿಸಲ್ಪಟ್ಟು, ಕಲಾರಸಿಕರಿಂದ ಶ್ಲಾಘಿಸಲ್ಪಟ್ಟಿತು. ಈ ಕಲಾಪ್ರದರ್ಶನವು ಕರ್ನಾಟಕದ ಕಲಾ ಸಮೃದ್ಧಿಯನ್ನು ಪರಿಚಯಿಸುವುದರ ಜೊತೆಗೆ ದೇಶದ ಇತರ ಶ್ರೇಷ್ಠ ಕಲಾವಿದರ ಪ್ರತಿಭೆಯನ್ನು ತಿಳಿಯುವಂತಾಯಿತು. ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದೇ ಕಲಾವಿದರಿಗೆ ಅಭಿಮಾನದ ವಿಷಯವಾಯಿತು. ಸರಕಾರದ ಹಿತ ಮತ್ತು ಶಿಷ್ಯರ ಹಿತಕ್ಕಾಗಿ ಶ್ರಮಿಸಿದ ನರಹರಿ ಪಾವಂಜೆಯವರಿಗೆ ಈ ಸಮಯದಲ್ಲಿ ತನ್ನ ಕಲೆಯ ಸಿದ್ಧಿಯನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗಲಿಲ್ಲ.

1946ರಲ್ಲಿ ಸರಕಾರದ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರಿನಲ್ಲಿ ಲಿಥೋ ಮುದ್ರಣ ಘಟಕವನ್ನು ಸ್ಥಾಪಿಸಿದರು. ಸ್ವಂತ ಬ್ಲಾಕ್ ತಯಾರಿಕೆಯ ಘಟಕವನ್ನು ಮೊದಲೇ ಪ್ರಾರಂಬಿಸಿದ್ದರು. ಈ ಕಾರ್ಯದಲ್ಲಿ ಸಂಪೂರ್ಣ ಮಗ್ನರಾದುದರಿಂದ ಕಲಾಕೃತಿ ರಚನೆಯ ಕೆಲಸವು ನಿಧಾನವಾಯಿತು. ಈ ಮುದ್ರಣ ಘಟಕವೂ ಕೂಡಾ ಅವರಿಗೆ ತೃಪ್ತಿಯನ್ನು ನೀಡಲಿಲ್ಲ. ಯಶಸ್ಸಿಗೆ ಕೆಲವೊಮ್ಮೆ ಅಗತ್ಯವಾಗುವ ಶಾರ್ಟ್ ಕಟ್ ದಾರಿಗಳು ಅವರಿಗೆ ತಿಳಿದಿರಲಿಲ್ಲ. ಮಾಡುವುದನ್ನೆಲ್ಲಾ ಅಚ್ಚುಕಟ್ಟಾಗಿ ಮಾಡಬೇಕೆಂಬುದೇ ಅವರ ಜೀವನದ ಮೂಲಮಂತ್ರ. ತನ್ನಲ್ಲಿರುವ ಶಕ್ತಿ, ಶ್ರಮ, ಅನುಭವ ಎಲ್ಲವನ್ನೂ ಧಾರೆಯೆರೆದು ತನ್ಮಯತೆಯಿಂದ ದುಡಿಯುವುದೊಂದೇ ಅವರಿಗೆ ಗೊತ್ತಿತ್ತು. ಅವರಲ್ಲಿ ಕಲಾವಿದನ ಅಂತಃಚಕ್ಷು ಪ್ರಕಾಶಿಸುತ್ತಿತ್ತು. ಆದರೆ ವ್ಯವಹಾರದ ದೃಷ್ಟಿ ಮಸುಕಾದುದರಿಂದಲೋ ಏನೋ ಈ ಘಟಕವು ತೃಪ್ತಿ ತರುವ ಮಟ್ಟಕ್ಕೇರಲಿಲ್ಲ. ಕಲೆಯಿಂದ ಜೀವನ ನಿರ್ವಹಣೆ ಮಾಡುವುದು ಅಂದು ಸಾಧ್ಯವಿರಲಿಲ್ಲ. ಈ ಮುದ್ರಣ ಘಟಕವೂ ನಿರೀಕ್ಷಿತ ಯಶಸ್ಸನ್ನು ಗಳಿಸಲಿಲ್ಲವಾದುದ ರಿಂದ ಅದನ್ನು ಮುಚ್ಚಿ 1951ರಲ್ಲಿ ಬೆಂಗಳೂರಿಗೆ ಬಂದರು. ಆ ಬಳಿಕ ತನ್ನ ಮನಸ್ಸಂತೋಷಕ್ಕಾಗಿ ಅನೇಕ ಕಲಾಕೃತಿಗಳನ್ನು ರಚಿಸಿದರು. ಈ ಸಮಯದಲ್ಲಿ ಅವರು ಅಂತರ್ಮುಖಿಯಾಗಿ ಏಕಾಂತವನ್ನೇ ಹೆಚ್ಚು ಆಶಿಸುತ್ತಿದ್ದರೆಂದು ತಿಳಿದುಬರುತ್ತದೆ. ಅವರ ಕಲಾಕೃತಿಗಳು ಗಣ್ಯಮಿತ್ರರ ಖಾಸಗಿ ಸಂಗ್ರಹಕ್ಕೆ ಹೋಗುತ್ತಿದ್ದವು. ಅಷ್ಟೇ ಆದರೆ ಯಾವುದೇ ಕಲಾಪ್ರದರ್ಶನಕ್ಕೆ ಅವುಗಳನ್ನು ಅವರು ಕಳಿಸುತ್ತಿರಲಿಲ್ಲ. ಆದುದರಿಂದ ನರಹರಿ ಪಾವಂಜೆ ಯವರ ಕಲಾಪ್ರತಿಭೆ ಸಾರ್ವಜನಿಕರಿಗೆ, ಹೊರಪ್ರಪಂಚಕ್ಕೆ ಪರಿಚಯವಾಗದೆ ಅವರು ಎಲೆಮರೆಯ ಹೂವಾಗಿಯೇ ಉಳಿದರು.

ನರಹರಿ ಪಾವಂಜೆಯವರ ಪುತ್ರಿ ಅನಸೂಯಾ ಪಾವಂಜೆಯವರು 1999ರಲ್ಲಿ ‘A Flower born to blush unseen’ ಎಂಬ ಕೃತಿಯನ್ನು ಪ್ರಕಟಿಸಿ ತನ್ನ ತಂದೆಯವರ ನೆನಪುಗಳನ್ನು ಚಿರಸ್ಥಾಯಿಯಾಗಿ ಮಾಡಿದ್ದಾರೆ. ಕಲೆ ಮತ್ತು ಕುಶಲ ಕೈಗಾರಿಕೆಗಳ ಮಳಿಗೆ ‘ಕಾವೇರಿ’ ಇದರ ಕರ್ನಾಟಕ ರಾಜ್ಯದ ಮುಖ್ಯ ಅದೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅನಸೂಯಾರವರು ತಮ್ಮ ತಂದೆಯ ಸಾಧನೆಗಳು, ಪಡೆದ ಸಿದ್ಧಿಗಳು, ಅವರ ವೃತ್ತಿ – ಪ್ರವೃತ್ತಿಗಳು, ಸ್ವಭಾವದ ವೈಶಿಷ್ಟ್ಯಗಳು ಇತ್ಯಾದಿಗಳನ್ನು ಬಹಳ ಆತ್ಮೀಯವಾಗಿ ನಿವೇದಿಸಿ ಕೊಂಡಿದ್ದಾರೆ. ಪಾವಂಜೆಯವರ ಮಿತ್ರರು ಮತ್ತು ಶಿಷ್ಯರು ಅವರೊಂದಿಗಿನ ಒಡನಾಟದ ರಸ ಕ್ಷಣಗಳನ್ನು ಈ ಕೃತಿಯಲ್ಲಿ ನೆನಪಿಸಿಕೊಂಡಿದ್ದಾರೆ.

ಜರ್ಮನಿಯಲ್ಲಿ ಕಲಾಶಿಕ್ಷಣವನ್ನು ಪಡೆದು ಮೈಸೂರಿಗೆ ಮರಳಿದ ಮೇಲೆ ನರಹರಿ ಪಾವಂಜೆಯವರು ಹವ್ಯಾಸಿ ನಾಟಕ ಕಲಾವಿದನಾಗಿ ಪ್ರಕಾಶಿಸಿದ್ದು ಅವರ ಜೀವನದ ಒಂದು ಕುತೂಹಲದಾಯಕ ತಿರುವು. ಆರು ಅಡಿ ಎತ್ತರದ ಸುಂದರ ಕಾಯದ ಆಕರ್ಷಕ ವ್ಯಕ್ತಿತ್ವವುಳ್ಳ ಪಾವಂಜೆಯವರು ನಾಟಕದ ತೆರೆಯ ಹಿಂದಿನ ಪರದೆಗಳ ಚಿತ್ರರಚನೆಯಲ್ಲಿ ಮಗ್ನರಾಗಿರುತ್ತಿದ್ದರು. ಆ ಸಮಯದಲ್ಲಿ ನಾಟಕ ಸಂಸ್ಥೆಯಲ್ಲಿ ಸ್ತ್ರೀ ಪಾತ್ರ ನಟನೆಯಲ್ಲಿ ಆಗ ಖ್ಯಾತರಾಗಿದ್ದ ಶ್ರೀ ವಾಸು ಎಂಬ ಮಿತ್ರರು ‘‘ನೀನು ನಾಟಕದ ವೇದಿಕೆಯ ಹಿಂದಿನ ಪರದೆ ಗಳನ್ನು ಸುಂದರವಾಗಿ ಸೃಷ್ಟಿಸಬಲ್ಲೆಯೇ ಹೊರತು ವೇದಿಕೆಯ ಮುಂದೆ ಅಬಿನಯದಲ್ಲಿ ಮಿಂಚಲಾರೆ’’ ಎಂದು ಪ್ರೀತಿಯಿಂದಲೇ ಹಾಸ್ಯ ಮಾಡಿದರು. ಆ ಮಾತನ್ನು ಸವಾಲಾಗಿ ಸ್ವೀಕರಿಸಿದ ಪಾವಂಜೆಯವರು ಕೆಲವೇ ಸಮಯದೊಳಗೆ ಹವ್ಯಾಸೀ ತಂಡದಲ್ಲಿ ಪ್ರಮುಖ ನಟನಾಗಿ ತಾಳಿಕೋಟೆ, ಪಾದುಕಾ ಪಟ್ಟಾಬಿಷೇಕ, ಪೃಥ್ವೀರಾಜ ಚೌಹಾನ್ ಮುಂತಾದ ನಾಟಕಗಳಲ್ಲಿ ಅಬಿನಯಿಸಿ ಛೇಡಿಸಿದ ಮಿತ್ರ ವಾಸುವಿನ ಗಂಡನಾಗಿಯೇ ಕಾಣಿಸಿಕೊಂಡು ನಾಟಕಾಬಿಮಾನಿಗಳ ಮನ ಗೆದ್ದರು. ಪಾವಂಜೆಯವರ ಅಂತರಂಗದ ತುಡಿತ ನಟನಾರಂಗ ವಾಗಿರಲಿಲ್ಲ. ಅವರ ಆತ್ಮಹಂಸವು ವಿಶಾಲ ಕೊಳದಲ್ಲಿ ವಿಹರಿಸಲು ಹಾತೊರೆಯುತ್ತಿತ್ತು ಎನ್ನುತ್ತಾರೆ ಅನಸೂಯಾ.

ಪಾವಂಜೆಯವರು ತಮ್ಮ ಜೀವನದುದ್ದಕ್ಕೂ ಕಠೋರ ಶಿಸ್ತು ಪಾಲಕರಾಗಿದ್ದ ರೆಂಬುದನ್ನು ಈ ಕೃತಿಯಲ್ಲಿ ಮಗಳು ಅನಸೂಯಾ ಕೆಲವು ಸ್ಮರಣೀಯ ಘಟನೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಪಾವಂಜೆಯವರಿಗೆ ಮನೆ ಮತ್ತು ಕಛೇರಿ ಎಂಬ ಭೇದವಿರಲಿಲ್ಲ. ಅಚ್ಚುಕಟ್ಟುತನ, ಒಪ್ಪ ಓರಣಗಳನ್ನು, ನಿಯಮ ಪಾಲನೆಯನ್ನು ತಾನೂ ಅನುಸರಿಸಿ ಇತರರಿಗೆ ಮಾದರಿಯಾಗಿದ್ದರು. ಬಾಲ್ಯದಲ್ಲಿ ಒಮ್ಮೆ ಅನಸೂಯಾ ಅವರ ಶಾಲೆಯಲ್ಲಿ ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗಾಗಿ ಮದರ್ ಸುಪೀರಿಯರ್ ಎಲ್ಲರಿಗೂ ‘ನಾನಿನ್ನು ಮುಂದೆ ಚೆನ್ನಾಗಿ ವರ್ತಿಸುತ್ತೇನೆ’ ಎಂದು 50 ಸಲ ಇಂಪೋಸಿಶನ್ ಬರೆಯುವ ಶಿಕ್ಷೆ ವಿದಿಸಿದರು. ಆದರೆ ಉಚ್ಚವರ್ಗದ ಸುಶಿಕ್ಷಿತ ಹೆತ್ತವರ ಮಕ್ಕಳಿಗೆ ವಿನಾಯಿತಿ ನೀಡಲಾಗಿತ್ತು. ಈ ವರ್ಗದ ಉಳಿದ ಮಕ್ಕಳಿಗೆ ಹೆತ್ತವರು ಬಾಯಿಮಾತಿನ ಎಚ್ಚರಿಕೆ ನೀಡಿ ಸುಮ್ಮನಾದರು. ಆದರೆ ಪಾವಂಜೆಯವರು ತನ್ನ ಮಗಳಿಗೆ ವಿನಾಯಿತಿ ನೀಡದೆ ಮನೆಯಲ್ಲಿ ಅದನ್ನು 50 ಸಲ ಬರೆಯಲು ಆದೇಶಿಸಿದರಂತೆ.

ಅನಸೂಯಾ ಅವರು ಕಾಲೇಜಿಗೆ ಹೋಗುತ್ತಿದ್ದಾಗಿನ ಒಂದು ಘಟನೆಯನ್ನೂ ಉಲ್ಲೇಖಿಸಿದ್ದಾರೆ. ಪದವಿ ಪರೀಕ್ಷೆಯ ಸಮಯದಲ್ಲಿ ಬೆಳಿಗ್ಗೆ ತಂದೆ ಮಕ್ಕಳೆಲ್ಲಾ ಒಟ್ಟಾಗಿ ಊಟ ಮಾಡುತ್ತಿದ್ದ ಸಮಯದಲ್ಲಿ ಅನಸೂಯಾ ಅವರಿಗೆ ಉಣ್ಣುವಾಗ ಅನ್ನದಲ್ಲಿ ಕಲ್ಲು ಸಿಕ್ಕಿತು. ‘ಏನಮ್ಮಾ, ನೀನು ಅಕ್ಕಿಯ ಕಲ್ಲು ಹೆಕ್ಕಲಿಲ್ಲವಾ?’ ಎಂದು ಅಸಹನೆಯಿಂದ ಅಮ್ಮನಲ್ಲಿ ಕೇಳಿದರು. ಅಮ್ಮ ಅದನ್ನು ಗಂಬೀರವಾಗಿ ಸ್ವೀಕರಿಸಲಿಲ್ಲ. ಆದರೆ ಅಪ್ಪ ಊಟವಾದ ಕೂಡಲೇ ಒಂದಿಷ್ಟು ಅಕ್ಕಿಯನ್ನು ತಟ್ಟೆಯಲ್ಲಿ ಹಾಕಿ ಅದರ ಕಲ್ಲು ಹೆಕ್ಕಲು ಹೇಳಿದರು. ಕಲ್ಲು ಹೆಕ್ಕಿ ಆ ದಿನದ ಪರೀಕ್ಷೆಗೆ ತಡವಾಗಿ ಹೋದದ್ದನ್ನು ಹೇಗೆ ಮರೆಯಲಾರೆನೋ ಹಾಗೆಯೇ ಪ್ರತಿ ಕೆಲಸಕ್ಕೂ ಅದರದ್ದೇ ಆದ ಘನತೆಯಿದೆ ಎಂದು ತಂದೆಯವರು ಹೇಳಿದ ಮಾತು ಜೀವನದುದ್ದಕ್ಕೂ ತನ್ನನ್ನು ರಕ್ಷಿಸಿತು ಎನ್ನುತ್ತಾರೆ ಅನಸೂಯಾ. ಮಕ್ಕಳು ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮುಂತಾದ ಕೆಲಸಗಳನ್ನು ಅವರೇ ಮಾಡಿಕೊಳ್ಳುವ ಶಿಸ್ತನ್ನು ಮತ್ತು ಸಮಯಪಾಲನೆಯನ್ನು ಅವರು ಕಲಿಸಿದ್ದರು. ಹಾಗೆಂದು ಎಂದೂ ದಂಡಿಸುವುದಾಗಲೀ ಬೈಯುವುದಾಗಲೀ ನರಹರಿ ಪಾವಂಜೆಯವರಿಗೆ ಗೊತ್ತಿರಲಿಲ್ಲ. ಮಕ್ಕಳಲ್ಲಿ ಪ್ರಕೃತಿಪ್ರೇಮ ತುಂಬಿಸುವ, ಆಕಾಶ ಕಾಯಗಳನ್ನು ಪರಿಚಯಿಸುವ, ಸಾಹಿತ್ಯ, ಚರಿತ್ರೆ, ಪುರಾಣಗಳ ಕತೆಗಳನ್ನು ಹೇಳಿ ಉತ್ತಮ ಸಂಸ್ಕೃತಿಸಂಪನ್ನರಾಗಿಸಿದಂತೆಯೇ ಜೀವದಯೆ, ಜೀವನಪ್ರೀತಿ, ಶಿಸ್ತು ಸಂಯಮಗಳನ್ನೂ ರೂಢಿಸಿಕೊಳ್ಳಲು ಪ್ರೇರೇಪಿಸಿದರು.

ಅದೇ ರೀತಿ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್‌ನಲ್ಲಿ ಕಲಾವಿಭಾಗದ ನಿರ್ದೇಶಕರಾಗಿದ್ದಾಗಲೂ ತಮ್ಮ ಕೈಕೆಳಗಿನ ಕಲಾವಿದರಲ್ಲೂ ಅದೇ ರೀತಿಯ ಶಿಸ್ತು, ನಿಯಮಗಳನ್ನು ಬಯಸುತ್ತಿದ್ದರು. ಅವರು ಬಾಯಿ ತೆರೆಯುವ ಮೊದಲೇ ಅವರ ನೋಟ, ನಿಲುವುಗಳಲ್ಲಿ ಅವರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಇಂತಹ ಒಂದು ಅಪೂರ್ವ ವ್ಯಕ್ತಿತ್ವವುಳ್ಳ ನರಹರಿ ಪಾವಂಜೆಯವರು ತನ್ನ ಶಿಷ್ಯರ ಸರ್ವಾಂಗೀಣ ಪ್ರಗತಿಗೆ ಸದಾ ಪ್ರಯತ್ನಿಸುವ ಅಂತಃಕರಣವುಳ್ಳವರಾಗಿದ್ದರು.

ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್‌ಟಿಟ್ಯೂಟ್‌ನಲ್ಲಿ ಅಧಿಕಾರಿಯಾಗಿದ್ದಾಗಿನ ಕಾಲದ ಹಲವು ಸ್ಮರಣೀಯ ಘಟನೆಗಳನ್ನು ಅವರ ಶಿಷ್ಯರು ನೆನಪಿಸಿಕೊಳ್ಳುತ್ತಾರೆ. ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಕಳವಿನ ಆರೋಪದ ಮೇಲೆ ಶಾಲೆಯಿಂದ ತೆಗೆದು ಹಾಕಲಾಯಿತು. ಆಗ ನರಹರಿ ಪಾವಂಜೆಯವರು ಮಂಗಳೂರಿಗೆ ಬಂದಿದ್ದರು. ಸುದ್ದಿ ತಿಳಿದು ಮೈಸೂರಿಗೆ ಮರಳಿದ ಕೂಡಲೇ ಆ ಹುಡುಗನನ್ನು ಮರಳಿ ಕರೆಸಿ ತಾನಿನ್ನು ಇಂತಹ ಕೆಲಸ ಮಾಡುವುದಿಲ್ಲವೆಂದು ವಚನ ಕೊಡಿಸಿದರು ಮಾತ್ರವಲ್ಲದೆ ಪೊಲೀಸರ ಮುಂದೆ ಇಲ್ಲಿ ಕಳವು ನಡೆದೇ ಇಲ್ಲವೆಂದು ಹೇಳಿಕೆ ನೀಡಿ ಒಬ್ಬ ವಿದ್ಯಾರ್ಥಿಯ ಭವಿಷ್ಯವು ಸುಂದರವಾಗು ವಂತೆ ನೇರ್ಪುಗೊಳಿಸಿದರು.

ಅದೇ ರೀತಿ ಕಲಾಶಾಲೆಯ ಶಿಕ್ಷಕರು ಮಾನಸಿಕ ಒತ್ತಡವಿಲ್ಲದೆ ವೃತ್ತಿನಿರತರಾಗಲು ಪ್ರೋತ್ಸಾಹಿಸುತ್ತಿದ್ದರು. ಶಿಕ್ಷಕರು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಂಪೂರ್ಣ ಧಾರೆಯೆರೆಯುವ ಅವಕಾಶಗಳನ್ನು ಕಲ್ಪಿಸುತ್ತಿದ್ದರು. ಅವರ ಅಧಿಕಾರದ ಅವದಿಯಲ್ಲಿ ನಡೆದ ಘಟನೆಗಳಲ್ಲಿ ಒಂದು ಹೀಗಿದೆ :

ಒಮ್ಮೆ ಚಾಮರಾಜೇಂದ್ರ ಕಲಾಶಾಲೆಯ ಮೇಲಾದಿಕಾರಿ ಗಳಿಂದ ಒಂದು ‘ಮೆಮೊ’ ಬಂತು. ‘ಕಲಾಶಾಲೆಯು ಅಗತ್ಯಕ್ಕಿಂತ ಹೆಚ್ಚು ಇಂಕ್ ಬಾಟಲ್‌ಗಳನ್ನು ಖರೀದಿಸುತ್ತಿರುವುದು ಗಮನಕ್ಕೆ ಬಂದಿದೆ. ಶಿಕ್ಷಕರು ತಮಗೆ ಬೇಕಾದ ಇಂಕ್ ಬಾಟಲ್‌ಗಳನ್ನು ತಾವೇ ಖರೀದಿಸಬೇಕು’ ಎಂದು ಅದರಲ್ಲಿ ತಿಳಿಸಲಾಗಿತ್ತು. ಕೂಡಲೇ ನರಹರಿ ಪಾವಂಜೆಯವರು ಮೇಲಾದಿಕಾರಿಗೆ ಪತ್ರ ಬರೆದರು. ‘ಇತ್ತೀಚಿನ ಸಂಶೋಧನೆ ಯಂತೆ ವಿನೆಗರ್ ಅನ್ನು ಉಪಯೋಗಿಸಿ ಮರದ ಕೃತಿಗಳಿಗೆ ಪಾಲಿಷ್ ಮಾಡಿದರೆ ಅದರ ಉತ್ಕೃಷ್ಟತೆ ಹೆಚ್ಚುತ್ತದೆ ಎಂದು ತಿಳಿದುಬಂದಿದೆ’. ಅದನ್ನು ಕೊಳ್ಳಲು ಪರವಾನಿಗೆಯನ್ನು ಕೇಳಿದೊಡನೆಯೇ ಅಧಿಕಾರಿಯಿಂದ ಬೇಡಿಕೆ ಮಂಜೂರಾಯಿತು. ವಿನೆಗರ್‌ನ ಹೆಸರಲ್ಲಿ ಇಂಕ್ ಬಾಟಲ್‌ಗಳು ಕಲಾಶಾಲೆಗೆ ಬಂದವು. ಸಮಸ್ಯೆ ಪರಿಹಾರವಾಯಿತು. ಆಜ್ಞೆ ಮಾಡುವ ಅಧಿಕಾರಶಾಹಿಗೆ ಚಿತ್ರಕಲೆಯ ಪರಿಕರ, ಪರಿಸ್ಥಿತಿಗಳ ಅರಿವಿರುವುದಿಲ್ಲ. ಆರ್ಥಿಕ ಲೆಕ್ಕಾಚಾರ ಮಾತ್ರ ಅವರಿಗೆ ಮುಖ್ಯವಾಗಿರುತ್ತದೆ. ಹಾಗಲ್ಲ ಹೀಗೆ ಎಂದು ವಿವರಿಸಿದರೆ ಒಪ್ಪುವ ಮನಸ್ಥಿತಿ ಮೇಲಧಿಕಾರಿಗಳಲ್ಲಿರುವುದಿಲ್ಲವೆಂದು ತಿಳಿದೇ ನರಹರಿ ಪಾವಂಜೆಯವರು ತನ್ನದೇ ಸ್ವಂತಿಕೆಯ ನಿರ್ಧಾರಗಳನ್ನು ಕೈಗೊಂಡು ಕಲಾಶಾಲೆಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.

ನರಹರಿ ಪಾವಂಜೆಯವರು ನಿವೃತ್ತರಾದ ಮೇಲೆ ಬೆಂಗಳೂರಿನಲ್ಲಿದ್ದರು. ಅವರ ಕೊನೆಗಾಲದ ಅವಿಸ್ಮರಣೀಯ ಘಟನೆಯನ್ನು ಮಗಳು ಅನಸೂಯಾ ಭಾವಪೂರ್ಣವಾಗಿ ಹೀಗೆ ವಿವರಿಸುತ್ತಾರೆ ‘‘ಅಂದು 1965 ಸಪ್ಟೆಂಬರ್ 2ನೇ ತಾರೀಕು. ನಾನು ಆಪೀಸಿನಿಂದ ಎಂದಿನಂತೆ 5.30ಕ್ಕೆ ಹೊರಟು ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ತಂದೆಯವರನ್ನು ಕಾಣಲು ಬಸ್ಸಿಗಾಗಿ ಸಿಟಿ ಮಾರ್ಕೆಟ್‌ನತ್ತ ಸಾಗುತ್ತಿದ್ದೆ. ಆಗ ಒಬ್ಬ ವಿದೇಶೀ ಮಹಿಳೆ ತನ್ನ ಮಕ್ಕಳಿಗಾಗಿ ಚಾಕೊಲೇಟ್‌ಗಳನ್ನು ಕೊಂಡುಕೊಳ್ಳುತ್ತಿದ್ದಳು. ಅದನ್ನು ಕಂಡು ನನ್ನ ಅಮ್ಮ ಮಾರ್ಕೆಟಿನಿಂದ ನಮಗೆ ತರುತ್ತಿದ್ದ ಚಾಕೊಲೇಟಿನ ನೆನಪಾಗಿ ಒಂದು ಚಾಕೊಲೇಟ್ ಸ್ಲಾಬನ್ನು ಕೊಂಡು ಕೊಂಡೆ. ಕಳೆದ ಮೂರು ತಿಂಗಳಿಂದ ತಂದೆ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದುದರಿಂದ ನಮ್ಮ ಕೆಲವು ಆಸೆಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿಯಿತ್ತು. ಆದರೂ ಅಂದು ಯಾಕೋ ತಿಳಿಯದು. ಚಾಕೊಲೇಟ್ ಕೊಂಡುಕೊಳ್ಳಲೇ ಬೇಕೆನಿಸಿತು. ಕೊಂಡುಕೊಂಡು ಪರ್ಸಿನಲ್ಲಿ ಹಾಕಿದೆ. ಆಸ್ಪತ್ರೆಗೆ ಹೋದಾಗ ತಂದೆಯವರನ್ನು ಕಾಣಲು ಬಂದ ಆಪ್ತಮಿತ್ರರು ವೆರಾಂಡದಲ್ಲಿ ಅಮ್ಮನಲ್ಲಿ ಮಾತಾಡುತ್ತಿದ್ದರು. ನಾನು ನೇರವಾಗಿ ತಂದೆಯ ಬಳಿಗೆ ಹೋಗಿ ತಂದೆಯ ಮಂಚದ ಬಳಿ ನಿಂತುಕೊಂಡೆ. ತಂದೆಯವರು ಮುಗುಳ್ನಗುತ್ತಾ ‘‘ಸೂಯಾ, ನೀನು ನನಗೆ ಚಾಕೊಲೇಟ್ ತಂದಿದ್ದೀಯಾ?’’ ಎಂದರು. ಅದು ನನ್ನ ಅತ್ಯಂತ ಸಂತಸದ ಕ್ಷಣ ವಾಗಿತ್ತು. ನಾನು ಕೂಡಲೇ ಹೌದು ಎನ್ನುತ್ತಾ ಪರ್ಸಿನಿಂದ ಚಾಕೊಲೇಟ್ ಸ್ಲಾ ್ಯಬನ್ನು ತೆಗೆದು ಕೊಟ್ಟೆ. ಎರಡು ಮೂರು ಚಿಕ್ಕ ತುಂಡುಗಳನ್ನು ತಿಂದು ನೀರು ಕುಡಿದರು. (ಇದು ನನ್ನ ತಂದೆಗೆ ನಾನು ಸಲ್ಲಿಸಿದ ಕೊನೆಯ ಋಣಸಂದಾಯವೆಂದು ನನಗೆ ಆಗ ತಿಳಿದಿರಲಿಲ್ಲ). ಬಳಿಕ ತಾಯಿ ಯನ್ನು ಅವರ ಕೊನೆಗಾಲದವರೆಗೆ ನೋಡಿಕೊಳ್ಳಬೇಕೆಂದು ವಿನಂತಿಸಿದರು. ನಾನು ವಚನ ಕೊಟ್ಟ ಮೇಲೆ ಅವರು ಅವರ ಚೆಕ್‌ಬುಕ್ಕನ್ನು ತರಿಸಿ ಅದರ ಒಂದು ಹಾಳೆಯಲ್ಲಿ ದಸ್ಕತ್ತು ಹಾಕಿ ಚಿಂತಾಮಣಿಯ ಬ್ಯಾಂಕಿನಲ್ಲಿದ್ದ ಹಣವನ್ನು ಉಪಯೋಗಿಸಿಕೊಳ್ಳಲು ನನಗೆ ಹೇಳಿದರು. ಆಮೇಲೆ ನನ್ನ ಕೈಗಳನ್ನು ಹಿಡಿದು ನಾಳೆ ನೀನು ಬೆಳಿಗ್ಗೆ 8.30ಕ್ಕೆ ಬಂದಾಗ ನಾನು ಇರುವುದಿಲ್ಲ. ನನ್ನನ್ನು ಕರೆದೊಯ್ಯಲು ಬರುತ್ತಾರೆ ಎಂದು ಹೇಳಿ ಮೌನವಾದರು. ಮರುದಿನ ಸೆಪ್ಟೆಂಬರ್ ಮೂರರಂದು ಬೆಳಿಗ್ಗೆ ನಾಲ್ಕು ಗಂಟೆಗೆ ನನ್ನ ನಾದಿನಿ ಮಗಳು ತೀವ್ರ ಅಸ್ವಸ್ಥಳಾಗಿದ್ದಾಳೆಂದೂ ತಾನು ಒಬ್ಬಳೇ ಇರುವುದರಿಂದ ಭಯವಾಗುತ್ತದೆಂದೂ ಫೋನ್ ಮಾಡಿದಾಗ ಕೂಡಲೇ ನಾನು ಧಾವಿಸಿ ಮಗುವನ್ನು ಡಾಕ್ಟರ ಬಳಿಗೊಯ್ದು ಏಳು ಗಂಟೆಯ ಹೊತ್ತಿಗೆ ಮನೆ ತಲುಪಿದೆ. ತಂದೆಯನ್ನು ಕಾಣಲು ವಿಕ್ಟೋರಿಯಾ ಆಸ್ಪತ್ರೆಗೆ ಹೋಗಬೇಕೆಂದು ಮನಸ್ಸು ಮಾಡಿದವಳು ಬೆಳಕು ಹರಿಯಲಿ, ಸ್ವಲ್ಪ ತಡವಾಗಿ ಹೋಗೋಣವೆಂದು ಕೆಲಸದಲ್ಲಿ ನಿರತಳಾದೆ. 8.40ಕ್ಕೆ ತಮ್ಮನ ಪೋನ್. ‘ತಂದೆ 8-30ಕ್ಕೆ ನಿಧನರಾದರು’ ಎಂದು. ತಂದೆ ತೀರಿಕೊಂಡು ಇಷ್ಟು ವರ್ಷಗಳ ಬಳಿಕವೂ ನನ್ನಲ್ಲಿ ಉತ್ತರವಿಲ್ಲದ ಈ ಪ್ರಶ್ನೆ ಪದೇ ಪದೇ ಕಾಡುತ್ತದೆ. ನಾನು ಚಾಕೊಲೇಟ್ ತಂದುದು ತಂದೆಗೆ ಹೇಗೆ ಗೊತ್ತಾಯಿತು? 8-30ರ ನಂತರ ತಾನು ಇರುವುದಿಲ್ಲವೆಂದು ಮೊದಲೇ ಹೇಗೆ ತಿಳಿದುಕೊಂಡರು? ಪ್ರಾಯಶಃ ಅಲೌಕಿಕ ಶಕ್ತಿಯ ಇರುವಿಕೆಯನ್ನು ಅರಿಯಲು ಈ ಭೌತಿಕ ಪ್ರಪಂಚದ ಮಾನವರಿಗೆ ಸಾಧ್ಯವಿಲ್ಲವೇನೋ? ನಮ್ಮ ಅರಿವಿನಾಚೆಗೂ ಇರುವ ವ್ಯಾಪಿಸಿರುವ ಆ ಶಕ್ತಿಯನ್ನು ಅರಿಯುವ ಶಕ್ತಿ ನನ್ನಳವಿಗೆ ಸಾಧ್ಯವಿಲ್ಲವೆಂದು ಮೌನವಾಗಿ ವಂದಿಸುವುದೊಂದೇ ನನಗೆ ಸಾಧ್ಯವಾಯಿತು ಎನ್ನುತ್ತಾ ಖ್ಯಾತ ವಿದ್ವಾಂಸ ರಸ್ಕಿನ್ನನ ಮಾತುಗಳನ್ನು ಉದಾಹರಿಸುತ್ತಾರೆ. Fate rules the words of wisemen which makes their word truer ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ನರಹರಿ ಪಾವಂಜೆ ಯವರು ಓರ್ವ ಕಲಾತಪಸ್ವಿ. ಇವರ ತಂದೆ ಗೋಪಾಲಕೃಷ್ಣಯ್ಯನವರೂ ತಮ್ಮ ಮರಣವನ್ನು ಮೊದಲೇ ಊಹಿಸಿದ್ದರು ಎಂದು ತಿಳಿಯುತ್ತದೆ. ಅವರು ಸಾಯುವ ಕೆಲವು ದಿನಗಳ ಮೊದಲು ತನಗೆ ಕಂಡ ಸೂರ್ಯನಾರಾಯಣನ ಚಿತ್ರವನ್ನು ಪಕ್ಕದ ಗೋಡೆಯಲ್ಲಿ ಚಿತ್ರಿಸಿದ್ದರಂತೆ. ಅದನ್ನು ಈಗಲೂ ಪ್ರತಿಕೃತಿ ಮಾಡಿ ಇವರ ಮನೆತನದವರು ಇರಿಸಿಕೊಂಡಿದ್ದಾರೆ. ನರಹರಿ ಪಾವಂಜೆಯವರು ಮಗಳಿಗೆ ದಸ್ಕತ್ತು ಹಾಕಿಕೊಟ್ಟ ಚೆಕ್ಕನ್ನು ನಿದಿಯಂತೆ ಈಗಲೂ ಅವರ ನೆನಪಿಗಾಗಿ ಇರಿಸಿಕೊಂಡಿದ್ದಾರೆ. ಅದೇ ರೀತಿ ಅವರಿಗೆ ಬಾಲ್ಯದಲ್ಲಿ ತಂದೆಯವರು ಕೊಟ್ಟ ಮೂರು ಪೈಸೆಯ ಪಾವಲಿ (ತೂತಿರುವ ನಾಣ್ಯ)ಯನ್ನು ಜೋಪಾನವಾಗಿ ಇರಿಸಿಕೊಂಡಿದ್ದಾರೆ. ನರಹರಿ ಪಾವಂಜೆಯವರು ಯಾವಾಗಲೂ ಹೇಳುತ್ತಿದ್ದ ಮಾತುಗಳನ್ನು ಉಲ್ಲೇಖಿಸುತ್ತಾರೆ ಅನಸೂಯಾ :

No life can read its destiny
No heart can read its fate
And yet the future oft may be
What we ourselves create
Let day by day see our best
And leave to the mightier hand the rest

ಈ ಮಾತುಗಳು ಅವರ ಬದುಕಿನ ಹೆಜ್ಜೆಹಾದಿಗಳೇ ಆಗಿದ್ದವು.

ಖ್ಯಾತ ಕಲಾವಿದರಾದ ಮಿಸ್ಟರ್ ವೆಬ್‌ಸ್ಟರ್ ಅವರು ಪಾವಂಜೆಯವರಿಗೆ ಬರೆದ ಪತ್ರದಲ್ಲಿ You are the first solid artist of Mysore to Europe ಎಂದು ಅಭಿಮಾನದಿಂದ ಕೊಂಡಾಡಿದ್ದಾರೆ.

ನರಹರಿ ಪಾವಂಜೆಯವರಿಗೆ ದೇಶ ವಿದೇಶಗಳ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿತ್ತು. ಮಿತೃತ್ವವಿತ್ತು. ಆದರೆ ಎಂದೂ ಕೂಡಾ ಆ ಮಿತ್ರತ್ವವನ್ನು ಬಳಸಿಕೊಂಡು ಇನ್ನಷ್ಟು ಪ್ರಸಿದ್ಧನಾಗಬೇಕೆಂಬ ಹಂಬಲವಾಗಲೀ, ಸಹಾಯ ಯಾಚಿಸುವ ಮನಸ್ಸಾಗಲೀ ಇರಲೇ ಇಲ್ಲ. ನಿವೃತ್ತನಾದ ಮೇಲೆ ಎಲೆಮರೆಯಲ್ಲಿರಲು ಬಯಸಿದರೇ ಹೊರತು ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಲಿಲ್ಲ. ಎಲ್ಲವನ್ನೂ ಬಂದಂತೆ ಸ್ವೀಕರಿಸುವ, ಸುಖ ದುಃಖಗಳಿಗೆ ಹಿಗ್ಗದ, ಕುಗ್ಗದ ಅವರ ಸ್ವಭಾವ, ಕರ್ಮ ಮಾಡುವುದಷ್ಟೇ ನನ್ನ ಕೆಲಸ. ಫಲವನ್ನು ಆಶಿಸುವುದಿಲ್ಲ ಎಂಬ ಅವರ ನಿರ್ಲಿಪ್ತ ಮನಸ್ಥಿತಿ ಅವರ ಕಲಾಪ್ರತಿಭೆಗೆ ಬೇರೆಯೇ ಒಂದು ಸಿದ್ಧಿಯನ್ನು ತಂದುಕೊಟ್ಟಿದೆ ಎಂದು ಅನಿಸುತ್ತದೆ.

ಅವರ ಶಿಷ್ಯರಾದ ಎಂ.ಟಿ.ವಿ ಆಚಾರ್ಯರು ಹೇಳುವಂತೆ ಅವರ ಕಾಲದ ಕಲಾಕ್ಷೇತ್ರದ ಸ್ಪರ್ಧಾಲೋಕದಲ್ಲಿ ಅವರ ಶಿಷ್ಯರೇ ಬಹುತೇಕ ಮಂದಿ ಇದ್ದರು. ನೆಚ್ಚಿನ ಶಿಷ್ಯರು ಕ್ರಿಯಾಶೀಲರಾಗಿದ್ದು ಅವರೊಂದಿಗೆ ಸ್ಪರ್ದಿಸುವುದು ಸಂಕೋಚದ ವಿಷಯವಾಗಿ ಅವರಿಗೆ ಅನಿಸಿರಬೇಕು. ಅವರ ಸ್ಥಾನಮಾನ ಆತ್ಮಗೌರವಗಳ ಉನ್ನತ ವ್ಯಕ್ತಿತ್ವವೂ ಸ್ಪರ್ಧಾತ್ಮಕ ಜಗತ್ತಿನಿಂದ ದೂರ ಸರಿಯುವಂತೆ ಮಾಡಿತು. ಅವರು ನಂಬಿ ಅನುಸರಿಸುತ್ತಿದ್ದ ನೈಜ ಕಲಾಕೃತಿ ಗಳಿಗಿಂತ ನವ್ಯ ಶೈಲಿಗಳಿಗೇ ಹೆಚ್ಚು ಮಾನ್ಯತೆಯು ದೊರಕಲು ಪ್ರಾರಂಭವಾದಾಗ ತಮ್ಮ ಕಲಾಕೃತಿ ರಚನೆಯ ಕೆಲಸವನ್ನೇ ಕ್ರಮೇಣ ಕಡಿಮೆ ಮಾಡುತ್ತಾ ಬಂದರು. ಅವರ ನೈಜ ಕಲಾಪ್ರತಿಭೆಯನ್ನು ಪುರಸ್ಕರಿಸಿ ಗೌರವಿಸುವವರ ಕೊರತೆಯೂ ಅವರನ್ನು ಒಂಟಿಯಾಗಿಸಿತು.

ಈಗಿನ ಚಿತ್ರಕಲಾ ಪರಿಷತ್ತು ಅವರ ಕನಸಿನ ಕೂಸು. ಅದರ ಸ್ಥಾಪನೆಯ ಮೂಲ ಕಾರಣಕರ್ತರು ಅವರೇ ಎಂಬುದು ಅನೇಕರಿಗೆ ಇಂದು ತಿಳಿದಿಲ್ಲ. ಬೆಂಗಳೂರಿನ ಫೈನ್ ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರು. ಆದರೂ ಕೂಡಾ ಅಂದಿನ ಕಲಾ ಜಗತ್ತಿನಲ್ಲಿ ತಾನೇ ಅಂಚಿಗೆ ಸರಿದರೋ ಅಥವಾ ಸರಿಸಲ್ಪಟ್ಟರೋ ಎಂಬುದು ನಮ್ಮನ್ನು ಈಗ ಕಾಡುವ ಪ್ರಶ್ನೆ. ಅವರ ಕಲಾಪ್ರತಿಭೆಯನ್ನು ಯಾರಾದರೂ ಗುರುತಿಸಬೇಕೆಂಬ ಉತ್ಸಾಹವನ್ನಾಗಲೀ, ಗುರುತಿಸದೇ ಹೋದಾಗ ಬೇಸರವಾಗಲೀ ವ್ಯಕ್ತಪಡಿಸದ ಸ್ಥಿತಪ್ರಜ್ಞ ಮನಸ್ಥಿತಿಯುಳ್ಳವರಾಗಿದ್ದ ಕಾರಣ ಹತ್ತರಲ್ಲಿ ಹನ್ನೊಂದಾಗದೆ ಏಕಾಕಿಯಾಗಿ ಉಳಿದು ಬಿಟ್ಟರು. ಆದರೆ ಜೀವನ ನಿರ್ವಹಣೆ ಸಾಗಬೇಡವೇ? ಸಾಮಾನ್ಯ ವರ್ಗದ ಕೂಡು ಕುಟುಂಬದ ಬ್ರಾಹ್ಮಣ ಮನೆತನಲ್ಲಿ ಎಲ್ಲರ ಗಳಿಕೆಯೂ ಪ್ರಧಾನವಾಗಿತ್ತು. ಕೂತುಣ್ಣುವ ಸ್ಥಿತಿಯಲ್ಲಿ ಅವರಿರಲಿಲ್ಲ. ಅಂತಹ ಶ್ರೇಷ್ಠ ಕಲಾವಿದರಾದರೂ ಕುಟುಂಬ ನಿರ್ವಹಣೆಗಾಗಿ ಕೊನೆಗಾಲದಲ್ಲಿ ಗಣೇಶ ಬೀಡಿ ಕಂಪೆನಿಯ ಏಜೆಂಟರಾಗಿ ದುಡಿಯುವಂತಹ ಪರಿಸ್ಥಿತಿ ಬಂದೊದಗಿದ್ದು ತುಂಬಾ ವಿಷಾದನೀಯ.

ಜರ್ಮನಿಯಲ್ಲಿ ಕಲಾಶಿಕ್ಷಣ ಪಡೆಯುತ್ತಿದ್ದಾಗ ದಿ| ರಾಷ್ಟ್ರಪತಿ ಝಕೀರ್ ಹುಸೇನರು ಇವರ ಜೊತೆ ಒಂದೇ ಕೋಣೆಯಲ್ಲಿ ಕೆಲ ಕಾಲ ಜೊತೆಯಾಗಿದ್ದರು. ಆ ಬಾಂಧವ್ಯವು ಅವರು ರಾಷ್ಟ್ರಪತಿಯಾದ ಮೇಲೂ ಮುಂದುವರಿದರೂ ತನ್ನ ಸ್ವಾರ್ಥಕ್ಕಾಗಿ ಆ ಗೆಳೆತನವನ್ನು ದುರುಪಯೋಗ ಪಡಿಸದ ಸ್ವಾಬಿಮಾನಿ ನರಹರಿ ಪಾವಂಜೆಯವರು. ಬೆಂಗಳೂರಿಗೆ ಬಂದಾಗಲೆಲ್ಲಾ ಝಕೀರ್ ಹುಸೇನರು ರಾಷ್ಟ್ರಪತಿಯಾದ ನಂತರವೂ ಇವರ ಮನೆಗೆ ಭೇಟಿ ನೀಡುತ್ತಿದ್ದರು. ಗೆಳೆಯನ ನೆನಪಿಗಾಗಿ ರಚಿಸಿದ ಭಾವಚಿತ್ರ ಈಗಲೂ ಮಂಗಳೂರಿನ ಪಾವಂಜೆ ಮನೆಯಲ್ಲಿ ಸ್ಮಾರಕವಾಗಿ ಉಳಿದಿದೆ. ಮಿತಭಾಷಿಯೂ, ಗಂಬೀರ ವದನವುಳ್ಳವರೂ, ಶಿಸ್ತುಬದ್ಧವಾದ ನಡೆನುಡಿಗಳುಳ್ಳವರೂ ಆದ ಇವರ ಹತ್ತಿರ ಸುಳಿಯಲು ಅಪರಿಚಿತರು ಅಂಜುತ್ತಿದ್ದರಂತೆ. ಬ್ರಿಟಿಷ್ ಅಧಿಕಾರಿಗಳಂತೆ ಮೈ ಬಣ್ಣವೂ ಇದ್ದುದರಿಂದ ಅವರನ್ನು ಬ್ರಿಟಿಷರವನೇ ಎಂದು ಮೊದಲ ನೋಟಕ್ಕೆ ಕಂಡವರು ಊಹಿಸುತ್ತಿದ್ದರಂತೆ.

ನರಹರಿ ಪಾವಂಜೆಯವರ ಕಲಾಕೃತಿಗಳಲ್ಲಿ ಬಣ್ಣಗಳು ಮಾತಾಡುತ್ತಿದ್ದಂತೆ, ರೇಖೆಗಳು ನರ್ತಿಸುತ್ತಿದ್ದಂತೆ ಕಾಣುತ್ತಿದ್ದುವು. ಕಡುಕೆಂಪು ಮತ್ತು ಕಪ್ಪು ಬಣ್ಣವನ್ನು ಅವರ ಚಿತ್ರಗಳಲ್ಲಿ ಕಾಣಲಾರೆವು. ಬಣ್ಣಗಳನ್ನು ಮಿಶ್ರ ಮಾಡಿ ಹೊಸ ಬಣ್ಣದ ಅನ್ವೇಷಣೆ ಯಲ್ಲಿರುತ್ತಿದ್ದರು. ಇವರ ಮಡದಿ ಕೃಷ್ಣವೇಣಿ ಪಾವಂಜೆಯವರು ‘‘ನೀವು ಚಿತ್ರ ಬಿಡಿಸುವುದಕ್ಕಿಂತ ಹೆಚ್ಚಾಗಿ ಬಣ್ಣ ಕಲಸುವುದರಲ್ಲೇ ಮಗ್ನರಾಗಿರುತ್ತೀರಿ’’ ಎಂದು ತಮಾಷೆ ಮಾಡುತ್ತಿದ್ದರಂತೆ. ಪ್ರಕೃತಿ ದೃಶ್ಯಗಳನ್ನು ಕೋಣೆಯೊಳಗೆ ಕೂತು ಮಾಡುವುದಕ್ಕಿಂತ ಆ ಸ್ಥಳದಲ್ಲೇ ಕೂತು ಬಿಡಿಸುವುದಕ್ಕೆ ಮಹತ್ವ ಕೊಡುತ್ತಿದ್ದರು. ತಾನೂ ಹಾಗೆ ಮಾಡಿ ವಿದ್ಯಾರ್ಥಿಗಳೂ ಅದನ್ನು ಅನುಸರಿಸುವಂತೆ ಪ್ರೇರೇಪಿಸುತ್ತಿದ್ದರು. ಅವರ ಚಿತ್ರ ರಚನೆಯ ಇನ್ನೊಂದು ವೈಶಿಷ್ಟ್ಯವೆಂದರೆ ಅವರು ಚಪ್ಪಟೆಯಾಗಿರುವ ಕುಂಚದಲ್ಲೇ ಬಣ್ಣಗಾರಿಕೆ ಮಾಡುತ್ತಿದ್ದರು. ಉರುಟಾದ ತುದಿಯುಳ್ಳ ಕುಂಚವನ್ನುಪಯೋಗಿಸುತ್ತಿರಲಿಲ್ಲ. ಎಷ್ಟು ಸೂಕ್ಷ್ಮವಾದ ಗೆರೆಗಳನ್ನು ಚಪ್ಪಟೆ ಬ್ರಶ್‌ನಿಂದಲೇ ಎಳೆಯುತ್ತಿದ್ದರು. ಬಣ್ಣಗಳ ಮೂಲಕವೇ ನೆರಳು – ಬೆಳಕನ್ನು ಬಿಂಬಿಸುವ ಅವರ ಕಲಾನೈಪುಣ್ಯ ವಿಶಿಷ್ಟವಾದುದು. ಲಾರ್ಡ್ ಇರ್ವಿನ್ನರು ಮೈಸೂರಿಗೆ ಭೇಟಿ ನೀಡಿದಾಗ ಇವರ ಎರಡು ಕಲಾಕೃತಿಗಳನ್ನು ಅವರಿಗೆ ಕೊಡುಗೆ ಯಾಗಿ ನೀಡಲಾಗಿತ್ತು. ಮೈಸೂರಿನ ಜಗನ್ಮೋಹನ ಚಿತ್ರಶಾಲೆಯಲ್ಲಿ, ಬಿಹಾರದ ಕಲಾ ಸಂಗ್ರಹಾಲಯದಲ್ಲಿ, ಆಲಿಘರ್ ವಿಶ್ವವಿದ್ಯಾಲಯದಲ್ಲಿ, ರಾಜ್ಯ ಲಲಿತ ಕಲಾ ಅಕಾಡೆಮಿಯ ಸಂಗ್ರಹದಲ್ಲಿ ಇವರ ಕಲಾಕೃತಿಗಳು ಇವೆ. ಅವರ ಪುತ್ರಿ ಬೆಂಗಳೂರಿನ ಅನಸೂಯ ಪಾವಂಜೆಯವರ ಸಂಗ್ರಹದಲ್ಲಿ ಅನೇಕ ಕೃತಿಗಳಿವೆ. ಇತರ ಹಲವು ಕೃತಿಗಳು ಶ್ರೀ ದಾಮೋದರ ಪೈ ಮುಂತಾದವರ ಖಾಸಗಿ ಸಂಗ್ರಹಗಳಲ್ಲಿವೆ ಎಂದು ತಿಳಿದು ಬರುತ್ತದೆ. ಹಲವು ಕೃತಿಗಳು ಶ್ರೀ ಎಂ.ಆರ್. ಪಾವಂಜೆಯವರ ಬಳಿ ಇವೆ.

ನರಹರಿ ಪಾವಂಜೆಯವರನ್ನು ಹತ್ತಿರದಿಂದ ಬಲ್ಲ ಖ್ಯಾತ ಕಲಾವಿದ ಶ್ರೀ ಎಂ.ಟಿ.ವಿ. ಆಚಾರ್ಯರು ‘‘ನಾವು ಉತ್ತಮ ಕಲೆಗಿಂತ ಹೆಚ್ಚಾಗಿ ಕಲಾವಿದರಿಗೆ, ಶ್ರೇಷ್ಠ ಕಾವ್ಯಕ್ಕಿಂತ ಹೆಚ್ಚಾಗಿ ಕವಿಗಳಿಗೆ ಶಾಶ್ವತ ತತ್ವಗಳಿಗಿಂತ ಹೆಚ್ಚಾಗಿ ಅವುಗಳ ಬೋಧಕರಿಗೆ ಪ್ರಾಶಸ್ತ್ಯ ನೀಡಿದರೆ ಶ್ರೇಷ್ಠತೆಯ ಸೂಕ್ತ ವಿಮರ್ಶೆಯ ದೃಷ್ಟಿಕೋನವೇ ಬದಲಾಗುವ ಅಪಾಯವಿದೆ. ನಾಡಿನ ಜನತೆಯ ಮತ್ತು ನಾಡಿನ ಕಲೆಗಳ ಹಿತದೃಷ್ಟಿಯಿಂದ ಉನ್ನತಮಟ್ಟದ ಕೃತಿಗಳು ಮುಖ್ಯವೇ ಹೊರತು ಅವುಗಳ ಕೃತಿಕಾರರಲ್ಲ. ಶ್ರೇಷ್ಠ ಕೃತಿಗಳು ಅಜರಾಮರವಾಗಿರುತ್ತವೆ. ಆದರ್ಶ ಶಿಕ್ಷಕನೂ ಕೂಡಾ ತನ್ನ ಕರ್ತವ್ಯವನ್ನು ನೆರವೇರಿಸಿ ಕಾಲದ ತೆರೆಮರೆಯಲ್ಲಿ ಅಡಗಿ ಅದೃಶ್ಯ ನಾಗುತ್ತಾನೆ. ಇದೇ ರೀತಿ ನರಹರಿ ಪಾವಂಜೆಯವರ ಜೀವನ ಕನಸಿನಂತೆ ಮರೆಯಾದರೂ ಅವರ ಕೃತಿಗಳಿಂದ, ಅವರ ಶಿಷ್ಯರ ಕಲಾ ಸಾಧನೆಯ ಕೀರ್ತಿಯಿಂದ ಕಲಾಚರಿತ್ರೆಯಲ್ಲಿ ಅಮರವಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ. ಕಲೆಯ ರೂಪ, ಶೈಲಿಗಳ ಭೇದವೆನಿಸದೆ ಆಯಾ ವಿಧಾನಗಳ ಉತ್ಕೃಷ್ಟತೆಯನ್ನು ಮಾನದಂಡವಾಗಿ ಪರಿಗಣಿಸುವುದು ವಿಮರ್ಶಕರ ವಿಶಾಲ ದೃಷ್ಟಿಯಾದಾಗ ಕಲಾಕ್ಷೇತ್ರದ ಹಿತಸಾಧನೆಯಾದೀತು’’ ಎನ್ನುತ್ತಾರೆ.

ನರಹರಿ ಪಾವಂಜೆಯವರ ಉದಾತ್ತ ಮನೋಭಾವದ ಬಗ್ಗೆ ಶ್ರೀ ಎಂ.ಟಿ.ವಿ. ಆಚಾರ್ಯರು ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ. ಜರ್ಮನಿಯಿಂದ ಹಿಂತಿರುಗಿದ ಮೇಲೆ ಮೈಸೂರು ಸರ್ಕಾರವು ಹಲವು ಪ್ರೇಕ್ಷಣೀಯ ಸ್ಥಳಗಳ ಪೋಸ್ಟರುಗಳನ್ನು ರಚಿಸಲು ಪಾವಂಜೆಯವರಿಗೆ ಆದೇಶ ನೀಡಿತು. ಅವರು ಅವುಗಳನ್ನು ರಚಿಸಿ ಕೊಟ್ಟರು. ಆದರೆ ಮುದ್ರಣ ದೋಷದಿಂದಾಗಿ ಆ ಪೋಸ್ಟರುಗಳು ಚೆನ್ನಾಗಿ ಬರಲಿಲ್ಲ. ಆಗ ಪಾವಂಜೆಯವರು ಯಾರ ಮೇಲೂ ದೋಷಾರೋಪಣೆ ಮಾಡದೆ ಆ ಪೋಸ್ಟರುಗಳನ್ನೆಲ್ಲಾ ತರಿಸಿ ತಮ್ಮ ಮನೆಯಲ್ಲಿಟ್ಟುಕೊಂಡರಂತೆ. ಯಾರದೋ ಅಜಾಗರೂಕತೆಯ ತಪ್ಪಿನ ಹೊರೆಯನ್ನು ತಾವೇ ಹೊತ್ತರು. ಪಾವಂಜೆಯವರು ವಿದೇಶದಲ್ಲಿ ಕಲಿತು ಬಂದವರೆಂಬ ಬಿಗುಮಾನವನ್ನು ಎಂದೂ ತೋರಿದವರಲ್ಲ. ಸಾಮಾನ್ಯವಾಗಿ ಕಲಾವಿದರೆಲ್ಲರಿಗೂ ಲಕ್ಷಿ ್ಮ ಒಲಿಯುವುದು ಅಷ್ಟಕ್ಕಷ್ಟೇ. ನಗರದಲ್ಲಿ ಯಾವ ಕಲಾವಿದನ ಕಲಾಪ್ರದರ್ಶನ ಏರ್ಪಟ್ಟಾಗಲೂ ಇವರು ಸಾಮಾನ್ಯನಂತೆ ಅಲ್ಲಿಗೆ ಹೋಗಿ, ವೀಕ್ಷಿಸಿ ಕಲಾವಿದನ ಕೈಗೆ ಸ್ವಲ್ಪ ಮೊತ್ತದ ಹಣ ನೀಡಿ ಹರಸಿ ಬರುತ್ತಿದ್ದುದು ರೂಡಿಯಾಗಿತ್ತು. ಆ ಕಾಲದಲ್ಲಿ ಆ ಮೊತ್ತ ಯಾವಾಗಲೂ ನೂರು ರೂಪಾಯಿಯಾಗಿರುತ್ತಿತ್ತು ಎಂದು ಅವರಿಂದ ಪುರಸ್ಕೃತರು ಮತ್ತು ಪರಿಚಿತರು ಇಂದೂ ಸ್ಮರಿಸಿಕೊಳ್ಳುತ್ತಾರೆ. ಇಲ್ಲದ ಶಕ್ತಿಯನ್ನು ಆರೋಪಿಸಿಕೊಂಡು ತಾವು ಜಗತ್ತನ್ನೇ ಕಂಡವರು, ಜಗತ್ತಿನಲ್ಲೇ ಶ್ರೇಷ್ಠರು ಎಂದು ‘ತಲೆ ಹೊರೆ’ ಹೊತ್ತು ತಿರುಗುವವರ ಮಧ್ಯೆ ನರಹರಿ ಪಾವಂಜೆಯವರು ಅನನ್ಯರಾಗಿ ನಿಲ್ಲುತ್ತಾರೆ.

ನರಹರಿ ಪಾವಂಜೆಯವರು ಜಲವರ್ಣ ಚಿತ್ರದಲ್ಲಿ ಯಶಸ್ಸು ಸಾದಿಸಿದವರು. 1919 ಮತ್ತು 1920ರಲ್ಲಿ ಅವರ ಎರಡು ಜಲವರ್ಣ ಚಿತ್ರಗಳಿಗೆ ಕಂಚಿನ ಪದಕ ಮತ್ತು ಚಿನ್ನದ ಪದಕ ಲಭಿಸಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಇವರನ್ನು 1965ರಲ್ಲಿ ಸನ್ಮಾನಿಸಿದೆ. ಆದರೆ ಆಗ ಅವರು ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದರು. ಅವರ ಮಗಳು ಅನಸೂಯಾ ಪಾವಂಜೆ ಈ ಗೌರವವನ್ನು ತಂದೆಯ ಪರವಾಗಿ ಸ್ವೀಕರಿಸಿದರು. ಅವರ ಸ್ಮರಣೆಯಲ್ಲಿ 1967ರ ಡಿಸೆಂಬರ್ 7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪಾವಂಜೆಯವರ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಅದನ್ನು ಉದ್ಘಾಟಿಸಿದವರು ಭಾರತದ ರಾಷ್ಟ್ರಪತಿ ಝಕೀರ್ ಹುಸೈನ್. ಮಿತ್ರನೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ರಾಷ್ಟ್ರಪತಿಗಳು ಅಂದು ಭಾವಪೂರ್ಣವಾಗಿ ಮಾತಾಡಿದ್ದರು.

ನರಹರಿ ಪಾವಂಜೆಯವರ ಮಗಳು ಅನಸೂಯಾ ಪಾವಂಜೆಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 10 ಲಕ್ಷದ ಒಂದು ನಿದಿಯನ್ನು ನೀಡಿ ಅಜ್ಜ ಮತ್ತು ತಂದೆಯ ಹೆಸರಿನ ಗೋಪಾಲಕೃಷ್ಣಯ್ಯ ನರಹರಿ ಎಂಬ ಒಂದು ಪೀಠವನ್ನು ಸ್ಥಾಪಿಸಿದ್ದಾರೆ. ಈ ಪೀಠದ ವತಿಯಿಂದ ಚಿತ್ರಕಲೆಯ ಬಗ್ಗೆ ವಿಚಾರಸಂಕಿರಣಗಳು ಮತ್ತು ಯುವಪೀಳಿಗೆಗೆ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಇಂತಹ ಉದಾತ್ತ ಗುಣಗಳುಳ್ಳ ಮತ್ತು ಉತ್ಕೃಷ್ಟ ಕಲಾಪ್ರತಿಭೆಯುಳ್ಳ ಪಾವಂಜೆ ಮನೆತನದ ಹೆಸರು ಈ ರೀತಿಯಲ್ಲಿ ಮುಂದಿನ ಜನಾಂಗಕ್ಕೆ ತಿಳಿಯುವಂತಾಗಿದೆ. ಜೀವಮಾನವಿಡೀ ಉತ್ತಮ ಚಿತ್ರಕಲಾವಿದರನ್ನು ಸೃಷ್ಟಿಸಿ ಪೋಷಿಸುವುದರಲ್ಲೇ ತನ್ಮಯರಾದ ಇವರ ಸೃಷ್ಟಿಕಾರ್ಯ ಕುಂಟುತ್ತಾ ಸಾಗಿದರೂ ಮಾಡಿರುವ ಕೆಲಸಗಳು ಚಿತ್ರಕಲೆಯ ಅಮೂಲ್ಯ ರತ್ನಗಳೆಂದೇ ಪರಿಗಣಿಸಲ್ಪಟ್ಟಿವೆ. ಇಂದು ನಮ್ಮ ದೇಶದಾದ್ಯಂತ ಪ್ರಕಾಶಿಸುವ ಚಿತ್ರಕಲಾ ರತ್ನಗಳು ಇವರ ಮಾರ್ಗದರ್ಶನದ ಬೆಳಕಿನಲ್ಲಿ ಮುಂದುವರಿದವುಗಳು ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಪಾವಂಜೆ ಭುಜಂಗ ರಾವ್
(1904-1985)

ಪಾವಂಜೆ ಗೋಪಾಲಕೃಷ್ಣಯ್ಯ ಮತ್ತು ವೆಂಕಮ್ಮ ದಂಪತಿಗಳ ಕಿರಿಯ ಪುತ್ರನಾಗಿ 1904ರಲ್ಲಿ ಜನಸಿದ ಭುಜಂಗ ರಾಯರು ತಂದೆ ಮತ್ತು ಅಣ್ಣ ನಡೆದ ಹಾದಿಯಲ್ಲೇ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆದವರು. ಕೆನರಾ ಹೈಸ್ಕೂಲಿನಲ್ಲಿ ಪ್ರಾಥಮಿಕ ಶಾಲಾ ವ್ಯಾಸಂಗವನ್ನು ಪೂರೈಸಿದ ಬಳಿಕ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರಿಸಿದರು. ಇಂಟರ್ ಮೀಡಿಯೇಟ್ ಪದವಿಯನ್ನು ಮಂಗಳೂರಿನ ಸರಕಾರೀ ಕಾಲೇಜಿನಲ್ಲಿ ಪಡೆದರು. ಓದಿನ ಜೊತೆಗೇ ಅವರ ಜನ್ಮಜಾತ ಕಲಾ ಹವ್ಯಾಸವೂ ವಿಕಾಸಗೊಳ್ಳುತ್ತಾ ಪ್ರಕಾಶಿಸಿತು.

1919ರಲ್ಲಿ ಎಲಿಮೆಂಟರಿ ಮಟ್ಟದ ಟೆಕ್ನಿಕಲ್ ಪರೀಕ್ಷೆ ಯನ್ನು ಯಶಸ್ವಿಯಾಗಿ ಪೂರೈಸಿದರು. ಮುಂದೆ 1923ರಲ್ಲಿ ಕೆನರಾ ಹೈಸ್ಕೂಲಿ ನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿ ನಿವೃತ್ತಿ ಯವರೆಗೂ ದುಡಿದರು. 1931ರಲ್ಲಿ ಲೊಯೆಲ್ಲಾ ಕಾಲೇಜಿನಲ್ಲಿ ಎಲ್.ಟಿ. ಪದವಿಯನ್ನು ಪಡೆದರು. ಸದಾ ಅಧ್ಯಯನಶೀಲ ಪ್ರವೃತ್ತಿಯವರಾದ ಇವರು ಸಂಸ್ಕೃತ, ಲ್ಯಾಟಿನ್, ಇಂಗ್ಲಿಷ್ ಮುಂತಾದ ಭಾಷೆಗಳಲ್ಲಿ ಪರಿಣತಿಯನ್ನು ಪಡೆದಿದ್ದರು. ಶಾಲೆ ಯಲ್ಲಿ ಚಿತ್ರಕಲೆ, ಇಂಗ್ಲಿಷ್, ಇತಿಹಾಸ, ಮೋರಲ್ ಸಾಯನ್ಸ್ ಮುಂತಾದ ವಿಷಯಗಳನ್ನು ಕಲಿಸುತ್ತಿದ್ದ ಕಾಲದಲ್ಲಿ ಆ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅವುಗಳ ಬಗ್ಗೆ ಕರಾರುವಾಕ್ಕಾದ  ಜ್ಞಾನ  ಸಂಪಾದಿಸುತ್ತಿದ್ದರು.  ಆದುದರಿಂದ ಇವರ ಪಾಠಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಕೇಳುತ್ತಿದ್ದರು. ವಿದ್ಯಾರ್ಥಿಗಳ ಜ್ಞಾನಕೋಶದ ವಿಸ್ತರಣೆಯ ಜೊತೆಗೆ ಭಾವಕೋಶ ವನ್ನು ಬೆಳೆಸುವಲ್ಲಿ ಇವರ ಶ್ರಮ ಅನುಕರಣೀಯವಾಗಿತ್ತು. ಕಲಾಸಕ್ತ ವಿದ್ಯಾರ್ಥಿಗಳಿಗೆ ಉಚಿತ ಕಲಾ ತರಗತಿಗಳನ್ನು ನೀಡಿ ಕಲಾಸಕ್ತಿಯನ್ನು ಪೋಷಿಸಿದರು. ಇವರ ಅಜ್ಜ ವೈದ್ಯ ವೃತ್ತಿಯಲ್ಲಿ ಪ್ರಸಿದ್ಧರಾಗಿದ್ದುದರಿಂದಲೋ ಏನೋ ಇವರಿಗೂ ಆಯುರ್ವೇದ ವೈದ್ಯ ವೃತ್ತಿಯಲ್ಲಿ ಸ್ವಯಂ ಪರಿಣತಿ ಇತ್ತು. ಅವರ ಬದುಕೇ ಒಂದು ಚಿತ್ರಪಟ. ಪ್ರಕೃತಿ, ಕಲೆ, ದೇಶ, ಮನುಷ್ಯ ಈ ನಾಲ್ಕು ಮಂದಿಯ ಪ್ರೀತಿಯೇ ಅದಕ್ಕೆ ಚೌಕಟ್ಟು ಸರ್ವ ಧರ್ಮ ಸಮನ್ವಯದ ಪರಿಶುದ್ಧ ಅಂತಃಕರಣವೇ ಅದಕ್ಕೆ ಕನ್ನಡಿ. ಹೀಗೆ ರೂಪುಗೊಂಡಿತ್ತು ಅವರ ಬಾಳಿನ ಚಿತ್ರಪಟ. ಎಲ್ಲರನ್ನೂ, ಎಲ್ಲವನ್ನು   ಪ್ರೀತಿಸುವ  ಕಲೆ  ಅವರಿಗೆ ಒಲಿದಿತ್ತು.

ಅಸ್ವಸ್ಥರ, ಅನಾಥರ, ದಲಿತರ ನೋವಿಗೆ ಸ್ಪಂದಿಸುವ ಹೃದಯವಂತಿಕೆ ಅವರಲ್ಲಿತ್ತು. ಅಪೂರ್ಣತೆಯಿಂದ ಪ್ರಜ್ಞಾವಂತ ಪೂರ್ಣತೆಯತ್ತ ಸಾಗುವುದೇ ಅವರ ಜೀವನದ ಧರ್ಮವಾಗಿತ್ತು. ವ್ಯತ್ತಿ ನಿಷ್ಠೆಯ ಜೊತೆಗೆ ಅವರ ಕಲಾ ಪ್ರತಿಭೆಯೂ ಅರಳುವ ಅವಕಾಶ ಲಬಿಸಿತು. ಅವರ ಸ್ಟಿಲ್ ಲೈಫ್ ಎಂಬ ಕಲಾಕೃತಿಗೆ ಪ್ರಶಸ್ತಿ ದೊರಕಿದೆ.

1923ರಲ್ಲಿ ಎಗ್ರಿಕಲ್ಚರ್ ಎಂಡ್ ಇಂಡಸ್ಟ್ರಿಯಲ್ ಎಕ್ಸಿಬಿಷನ್‌ನಲ್ಲಿ ಅವರ ಜಲವರ್ಣ ಕೃತಿಗೆ ರಜತ ಪದಕ ಲಬಿಸಿತು. ಅನೇಕ ಲೇಖಕರ ಕೃತಿಗಳಿಗೆ ಚಿತ್ರಗಳನ್ನು ಮುಖಪುಟಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಹಲವಾರು ಕೃತಿಗಳು ಖಾಸಗಿ ಸಂಗ್ರಹ ಗಳಲ್ಲಿವೆ. ಭಾವಚಿತ್ರ ರಚನೆ ಮತ್ತು ಸ್ಟಿಲ್ ಲೈಫ್ ಕೃತಿ ರಚಿಸುವುದರಲ್ಲಿ ಅವರು ವಿಶೇಷ ಪರಿಣತಿ ಪಡೆದಿದ್ದರು. ಮಕ್ಕಳಿಗೆ ಕಥೆ ಹೇಳುವುದರಲ್ಲಿ ಇವರಿಗೆ ಒಂದು ವಿಶೇಷ ಕಲಾವಂತಿಕೆ ಸಿದ್ಧಿಸಿತ್ತು. ಓರ್ವ ಆದರ್ಶ ಅಧ್ಯಾಪಕನಲ್ಲಿರಲೇಬೇಕಾದ ಎಲ್ಲಾ ಗುಣಗಳನ್ನೂ ರೂಡಿಸಿಕೊಂಡಿದ್ದ ಭುಜಂಗರಾಯರು ತಮ್ಮ ಜೀವನವನ್ನು ಚಿತ್ರಕಲೆ ಮತ್ತು ಅಧ್ಯಯನಕ್ಕಾಗಿ ಮೀಸಲಾಗಿಟ್ಟ ವರು. ನಿರಂತರ ಜ್ಞಾನದಾಹಿಯಾಗಿದ್ದುಕೊಂಡು ಹೊಸತನ್ನು ಕಲಿಯುವ ಕುತೂಹಲವನ್ನುಳಿಸಿ ಕೊಂಡಿದ್ದರು. ವೃತ್ತಿ ಮತ್ತು ಹವ್ಯಾಸಗಳನ್ನು ಸಮತೂಕದಲ್ಲಿಟ್ಟುಕೊಂಡು ಶ್ರದ್ಧೆಯಿಂದ ಜೀವನದುದ್ದಕ್ಕೂ ಪಾಲಿಸಿದ ಅವರ ದೀಮಂತಿಕೆಗೆ ತಲೆಬಾಗಲೇ ಬೇಕು.

ಎಂ.ಆರ್. ಪಾವಂಜೆ
(ಮಾಧವ ರಾವ್ ಪಾವಂಜೆ)

ಪಾವಂಜೆ ಗೋಪಾಲಕೃಷ್ಣಯ್ಯನವರ ಮೂವರು ಮಕ್ಕಳಲ್ಲಿ ಒಬ್ಬರಾದ ದಿ. ಪಾವಂಜೆ ಭುಜಂಗರಾವ್ ಅವರ ಮಗ ಮಾಧವರಾವ್ ಪಾವಂಜೆ. ತಾಯಿ ದಿ. ಭಾರತಿ ರಾವ್. ಇವರ ಮೂರು ಹೆಣ್ಣು ನಾಲ್ಕು ಗಂಡು ಮಕ್ಕಳಲ್ಲಿ ಮೂರನೆಯ ಮಗನಾಗಿ 1942ರ ಆಗಸ್ಟ್ ತಿಂಗಳ 26ರಂದು ಮಾಧವ ರಾವ್ ಪಾವಂಜೆಯವರು ಹುಟ್ಟಿದರು. ಭುಜಂಗ ರಾಯರೂ ಕಲೆಯನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡವರು. ಅಜ್ಜ, ದೊಡ್ಡಪ್ಪ ಎಲ್ಲರೂ ಕಲಾವಿದರೇ. ಹಾಗಿರುವಾಗ ಕಲಾ ಶಿಕ್ಷಣದ ಬಗ್ಗೆ ಬೇರೆ ಹೇಳಬೇಕೆ? ತೊಟ್ಟಿಲ ಕೂಸಾಗಿರು ವಾಗಿನಿಂದಲೇ ಬಣ್ಣದೊಂದಿಗೆ ನೋಟ, ಕೂಟ, ರೇಖೆಗಳೊಂದಿಗೆ ಆಟ, ಪಾಠ ಸಹಜವಾಗಿಯೇ ಪ್ರಾಪ್ತವಾಗಿತ್ತು. ಕಲಾ ಶಿಕ್ಷಣಕ್ಕಾಗಿ ಪಾವಂಜೆ ಮನೆಗೆ ಬರುವ ವಿದ್ಯಾರ್ಥಿಗಳು, ಪ್ರಸಿದ್ಧ ಕಲಾವಿದರು ಮನೆಗೆ ಭೇಟಿ ನೀಡುತ್ತಿದ್ದ ಸಂದರ್ಭಗಳು ಅವರೊಂದಿಗಿನ ಮಾತುಕತೆಗಳನ್ನು ಕೇಳುತ್ತಾ ಮಾಧವ ರಾವ್ ಬೆಳೆದವರು. ಏನೆಲ್ಲಾ ಕೊರತೆಗಳ ನಡುವೆಯೂ ಆ ಕಾಲ ರಮ್ಯ ಕಾಲವಾಗಿತ್ತು ಎನ್ನುತ್ತಾರೆ ಮಾಧವ ರಾವ್.

ಕಾರ್‌ಸ್ಟ್ರೀಟ್‌ನಲ್ಲಿರುವ ಸೆಂಟ್ರಲ್ ವಾರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮೇಲೆ ಕೆನರಾ ಹೈಸ್ಕೂಲಿನಲ್ಲಿ ಮುಂದಿನ ಶಿಕ್ಷಣ ಪಡೆದರು. ಕಲೆ ಆ ಮನೆತನಕ್ಕೆ ಸಹಜ ಪ್ರವೃತ್ತಿಯಾಗಿ ಒಲಿದು ಬಂದಿತ್ತು. ತಂದೆ ಭುಜಂಗರಾಯರೂ ಕಲಾ ಅಧ್ಯಾಪಕರಾಗಿ ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಕಲೆಯೊಂದನ್ನೇ ನೆಚ್ಚಿಕೊಂಡು ಬದುಕುವುದು ಸಾಧ್ಯ ವಿಲ್ಲದ ಕಾಲವಾಗಿತ್ತದು. ಆದುದರಿಂದ ತನ್ನ ಅಜ್ಜ ಗೋಪಾಲಕೃಷ್ಣಯ್ಯನವರ ಶಿಷ್ಯರಾದ ಎಲ್.ಕೆ. ಶೇವಗೂರರಲ್ಲಿ ಕಮರ್ಶಿಯಲ್ ಆರ್ಟ್‌ನಲ್ಲಿ ಶಿಕ್ಷಣ ಪಡೆದರು. ಜೀವನ ನಿರ್ವಹಣೆಗೆ ಆರ್ಥಿಕ ಆದಾಯವುಳ್ಳ ವೃತ್ತಿಯನ್ನು ಆಯ್ದುಕೊಳ್ಳುವುದು  ಅನಿವಾರ್ಯವಾಗಿತ್ತು. ಆದುದರಿಂದ ಹಲವು ವರ್ಷಗಳ ಕಾಲ ಹಲವಾರು ಜಾಹೀರಾತುಗಳನ್ನು ರಚಿಸಿ ಇವರು ಪ್ರಸಿದ್ಧರಾದರು. ಆಂತರ್ಯದ ಪ್ರೇರಣೆ, ಹೊರಗಿನ ಪ್ರೋತ್ಸಾಹ ಇವು ಒಂದನ್ನೊಂದು ಬೆಸೆದಾಗಲೇ ಸೃಷ್ಟಿಶೀಲ ಮನಸ್ಸು ಅರಳುತ್ತದೆ. ಅದು ಹೃದಯ, ಬುದ್ಧಿ, ಮನಸ್ಸುಗಳನ್ನು ತೊಡಗಿಸಿಕೊಂಡು ಶ್ರದ್ಧೆಯಿಂದ ಚಿತ್ರಕಲೆಯ  ಕಾಯಕವನ್ನು  ನಡೆಸುವಂತಾಯಿತು.  ಮುಂದೆ  ಬ್ರಿಟಿಷ್ ಇನ್ಸಿಟ್ಯೂಟ್ ಆಫ್ ಆರ್ಟ್ಸ್‌ನಿಂದ ಕರೆಸ್ಪೊಂಡೆಂಟ್ ಆರ್ಟ್ ಕೋರ್ಸನ್ನು ಮುಗಿಸಿ ಕಲೆಯ ಜ್ಞಾನದ ಬಗ್ಗೆ ಅರಿವನ್ನು ವಿಸ್ತರಿಸಿಕೊಂಡರು.

ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರರು ಇವರ ಅಜ್ಜ ಮತ್ತು ದೊಡ್ಡಪ್ಪನವರಿಂದ ಚಿತ್ರಕಲೆಯ ಮೂಲ ಪಾಠಗಳನ್ನು ಕಲಿತುಕೊಂಡು ಮಹಾನ್ ಕಲಾವಿದರಾಗಿ ಅರಳಿದವರು. ಕೆ.ಕೆ. ಹೆಬ್ಬಾರರು ಇವರ ಅಜ್ಜನ ಬಗ್ಗೆ ಬಿಡಿಸಿದ ರೇಖಾಚಿತ್ರ ಈಗಲೂ ಅವರ ಬಳಿ ಇದೆ. ಮುಂಬಯಿಗೆ ಹೋದಾಗಲೆಲ್ಲಾ ಕೆ.ಕೆ. ಹೆಬ್ಬಾರರಿಂದ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಪಡೆಯುತ್ತಿದ್ದರು. ಹಾಗೆಯೇ ಹೆಬ್ಬಾರರೂ ಊರಿಗೆ ಬಂದಾಗಲೆಲ್ಲಾ ಇವರನ್ನು ಭೇಟಿ ಯಾಗುತ್ತಿದ್ದರು. ಶ್ರೇಷ್ಠ ಕಲಾವಿದರೊಂದಿಗಿನ ಅವರ ಸಂಬಂಧವು ಕಲೆಯಲ್ಲಿ ಪ್ರಬುದ್ಧತೆಯನ್ನು ಪರಿಪಕ್ವತೆಯನ್ನು ಬೆಳೆಸಲು ಸಾಧ್ಯವಾಯಿತು. ಚಿತ್ರಕಲೆಯನ್ನು ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಸೃಜಿಸುವ ಶಕ್ತಿಯನ್ನು ಪಡೆದರು.

ನಮ್ಮೊಳಗಿನ ಭಾವಪೂರ್ಣ ಮನುಷ್ಯನನ್ನು ಹುಡುಕುವ ಕ್ರಿಯೆಯಲ್ಲಿ ಅವರು ತನ್ಮಯರಾದರು. ಇದರಿಂದಾಗಿ ಅವರ ಅನೇಕ ಕೃತಿಗಳು ನಿರ್ಮಾಣವಾದುವು. ಕಲೆಯ ವ್ಯಾಪಾರೀಕರಣ ಬದುಕಿಗೆ ಅನ್ನ ಕೊಡಬಹುದು. ಆದರೆ ಕಲೆಯಿಂದ ಆನಂದವನ್ನು ಭಾವ ಸಂತೃಪ್ತಿಯನ್ನೂ ಕೊಡುವುದು ಸ್ವಂತ ಕೃತಿಗಳ ರಚನೆಯಿಂದ ಎಂದು ನಂಬಿದವರು ಅವರು. ಮಾಧವ ರಾವ್ ಪಾವಂಜೆಯವರ ತೈಲವರ್ಣ, ಜಲವರ್ಣ, ಪೆನ್ಸಿಲ್ ಶೇಡಿಂಗ್‌ನಂತಹ ಕೃತಿಗಳು ಇಂತಹ ಸಂತೃಪ್ತಿಯನ್ನು ಕೊಡುವಂತಹವುಗಳು. ಅವರ ಕಲಾಕೃತಿಗಳು ಧಾರ್ಮಿಕ ಎನ್ನುವ ಗಾಢವಾದ ಶ್ರದ್ಧೆಯಿಂದ ಮೂಡಿದವುಗಳು. ಅವರ ಅಜ್ಜ ಗೋಪಾಲಕೃಷ್ಣಯ್ಯನ ಧಾರ್ಮಿಕ ಶ್ರದ್ಧೆ ಈ ಮೊಮ್ಮಗನಲ್ಲಿ ಪಾರಂಪರ್ಯವಾಗಿ ಬಂದಿದೆ. ವಾಜಿಣ್ಯೀಕರಣಗೊಂಡ ಕಲೆ ಹಳಿ ತಪ್ಪುತ್ತಿರುವ ಬಗ್ಗೆ ಅವರಿಗೆ ಖೇದವಿದೆ. ಇವರ ದೊಡ್ಡಪ್ಪನ ಕಾಲಕ್ಕಾಗಲೇ ನವ್ಯಕಲೆಯ ಶೈಲಿ ಪ್ರಾರಂಭವಾಗಿತ್ತು. ಆ ಕಲೆಯ ಹೊಸತನದ ಬಗ್ಗೆ ಗಾಢ ಚಿಂತನೆಗಳ ಬಗ್ಗೆ ಅವರಿಗೆ ಗೌರವವಿದೆ. ಆದರೆ ಅದನ್ನು ಅಳವಡಿಸಿಕೊಳ್ಳುವುದಾಗಲೀ, ಅನುಸರಿಸುವುದಾಗಲೀ ಅವರ ಸಾಂಪ್ರದಾಯಿಕ ಮನೋಭಾವಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿಭಾವಂತ ಸೃಷ್ಟಿಶೀಲ ಕಲಾವಿದ ಮನುಷ್ಯರನ್ನು ಬೆಸೆದು ಅವರ ಭಾವನೆಗಳು ಅರಳಿಸುವಂತಿರಬೇಕು ಎಂಬುದು ಅವರ ಜೀವನ ಸಿದ್ಧಾಂತ. ಅವಿವಾಹಿತರಾಗಿದ್ದುಕೊಂಡು ತನ್ನ ಇಡೀ ಬದುಕನ್ನೇ ಚಿತ್ರಕಲೆಗೆ ಅರ್ಪಿಸಿ ಕೊಂಡವರಿವರು. ಚಿತ್ರಕಲೆಯ ಜೊತೆಗೆ ಅವರು ಬೆಳೆಸಿಕೊಂಡಿರುವ ಇನ್ನಿತರ ಹವ್ಯಾಸ ಗಳಲ್ಲೂ ಅಷ್ಟೇ ಅರ್ಪಣಾಭಾವದಿಂದ ತೊಡಗಿಸಿಕೊಂಡಿದ್ದಾರೆ. ಸಂಗೀತ ಕೇಳುವುದು ಅವರಿಗೆ ಪ್ರಿಯವಾದ ಹವ್ಯಾಸ. ಇಷ್ಟವಾದ ಹಾಡುಗಳನ್ನು ಗುನು ಗುನಿಸುತ್ತಾ, ನೆಲದ ಮೇಲೆ ಕುಳಿತು ಚಿತ್ರ ರಚಿಸಲು ಕುಳಿತರೆ ಲೋಕವನ್ನೇ ಮರೆಯುತ್ತಿದ್ದರು.

ಅವರ ಇನ್ನಿತರ ಹವ್ಯಾಸಗಳ ವೈವಿಧ್ಯವೇ ಬೆರಗುಗೊಳಿಸುವಷ್ಟಿದೆ. ಪ್ರಾಚೀನ ಅಂಚೆ ಚೀಟಿಗಳು, ನಾಣ್ಯಗಳು ಇತ್ಯಾದಿಗಳ ಅಪೂರ್ವವಾದ ಸಂಗ್ರಹ ಅವರ ಬಳಿ ಇದೆ. ಭಾರತ ಸರಕಾರ ಮೊತ್ತಮೊದಲು ಹೊರಡಿಸಿದ ಕವರು, ಕಾರ್ಡ್, ಅಂಚೆ ಚೀಟಿಯಿಂದ ಪ್ರಾರಂಬಿಸಿ ದೇಶ ವಿದೇಶಗಳ ಅಂಚೆ ಚೀಟಿಗಳ ಸಂಗ್ರಹದ ಒಂದು ನಿದಿಯೇ ಅವರ ಬಳಿ ಇದೆ. ಅವುಗಳನ್ನು ಕಲಾತ್ಮಕವಾಗಿ ಜೋಡಿಸಿಟ್ಟ  ಕ್ರಮವೂ ಗಮನಾರ್ಹವಾಗಿದೆ. ಅದೇ ರೀತಿ ನಮ್ಮ ನಾಡನ್ನಾಳಿದ ರಾಜರ ನಾಣ್ಯಗಳ ಚಿನ್ನ, ಬೆಳ್ಳಿಯ ನಾಣ್ಯಗಳ ಸಂಗ್ರಹವೂ ಉಲ್ಲೇಖಾರ್ಹ ವಾಗಿದೆ. ಎಲ್ಲೂ ಕಾಣಸಿಗದ ಕೆಲವು ನಾಣ್ಯಗಳು ಉದಾಹರಣೆಗೆ ಅಳುಪರ ಕಾಲದ ನಾಣ್ಯಗಳು, ರೋಮ್ ನಾಣ್ಯಗಳು ಕೂಡಾ ಇವರ ಬಳಿ ಇದೆ. ಅವರ ಮನೆಯ ಅಟ್ಟದ ಮೇಲಿನ ಒಂದು ದೊಡ್ಡ ಕೋಣೆಯಿಡೀ ಹಳೆಯ ಕಾಲದ ವಸ್ತುಗಳಿಂದ ತುಂಬಿದೆ. ಸ್ವಾತಂತ್ರ್ಯ ಪೂರ್ವದ ಹಳೆಯ ಪತ್ರಿಕೆಗಳು, ಇಂದು ದುರ್ಲಭವಾದ ಕೆಲವು ಅಮೂಲ್ಯ ಗ್ರಂಥಗಳು, ಹಿಂದಿನ ದಿನ ಬಳಕೆಯ ಅಪೂರ್ವ ವಸ್ತುಗಳು ಜೋಪಾನವಾಗಿದ್ದು ನಮ್ಮನ್ನು ಆಕರ್ಷಿಸುತ್ತವೆ. ತುಳು ಲಿಪಿಯ ಹಳೆಯ ಕೃತಿಗಳೂ ಇವರ ಸಂಗ್ರಹದಲ್ಲಿವೆ.

ಅಂಚೆ ಚೀಟಿ ಸಂಗ್ರಹದ ಇವರ ಆಸಕ್ತಿಯಿಂದಾಗಿ ರಾಷ್ಟ್ರಮಟ್ಟದ ಖ್ಯಾತಿ ಲಭಿಸಿದೆ. ದ.ಕ. ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷರಾಗಿ ಕೆಲಸಮಾಡಿದ್ದಾರೆ. ಮಂಗಳಾ ಪೆಕ್ಸ್ 80ರ ಬೆಳ್ಳಿ ಪದಕವನ್ನು ಪಡೆದಿದ್ದಾರೆ. 84ರಲ್ಲಿ ಅತ್ಯುತ್ತಮ ಸಂಗ್ರಹಕಾರರೆಂಬ ಪ್ರಶಸ್ತಿಯೂ ಲಭಿಸಿದೆ. ಇವರ ಸಂಗ್ರಹಕ್ಕೆ 1986, 1988, 1990, 1992, 1994, 2000 ಮತ್ತು 2002ರಲ್ಲಿ ಬಹುಮಾನಗಳು ಸಂದಿವೆ. 2001ರಲ್ಲಿ ನಾಸಿಕ್‌ನಲ್ಲಿ ರಾಷ್ಟ್ರಮಟ್ಟದ ಅಂಚೆ ಚೀಟಿ ಪ್ರದರ್ಶನ ಜರಗಿದಾಗ ಇವರ ‘ಟ್ರಾವಂಕೂರ್-ಕೊಚ್ಚಿನ್’ ಸಂಗ್ರಹಕ್ಕೆ ರಜತ ಪದಕದ ಗೌರವ ಲಭಿಸಿದೆ.

ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಇಷ್ಟಪಡುವುದಾದರೆ ಪ್ರಯತ್ನವನ್ನು ಮಿತ್ರರನ್ನಾಗಿ ಮಾಡಬೇಕು ಎಂಬ ಮಾತಿದೆ. ಆತ್ಮವಿಶ್ವಾಸ, ನಿಶ್ಚಿತ ಗುರಿ ಮತ್ತು ಸಂಯಮ ಈ ಮೂರೂ ಗುಣಗಳು ಮನುಷ್ಯನಲ್ಲಿದ್ದರೆ ಅವನು ಪ್ರಯತ್ನದಿಂದ ವಿಚಲಿತನಾಗುವುದಿಲ್ಲ. ಆಗ ಯಶಸ್ಸನ್ನು ಹುಡುಕಿಕೊಂಡು ಹೋಗುವ ಪ್ರಮೇಯವೇ ಇಲ್ಲ. ಇವರ ಅಜ್ಜ, ತಂದೆ, ದೊಡ್ಡಪ್ಪಂದಿರೆಲ್ಲಾ ಪ್ರಯತ್ನಶೀಲರಾಗಿ ದುಡಿಯುವುದರಲ್ಲೇ ಸುಖ ಕಂಡವರು. ಯಶಸ್ಸು, ಪ್ರಶಸ್ತಿಗಳಿಗಾಗಿ ಹಂಬಲಿಸಿ ಕೈ ಚಾಚಿದವರಲ್ಲ. ಹೆಚ್ಚೇಕೆ ಯಶಸ್ಸು ಬಂದು ಬಾಗಿಲು ತಟ್ಟಿದರೂ ಅದನ್ನು ಸಂಭ್ರಮದಿಂದ ಸ್ವಾಗತಿಸಿ ಒಳಗೆ ಬರಮಾಡಿಕೊಳ್ಳುವ ಜಾಯಮಾನ ದವರಲ್ಲ. ಇದು ಅವರ ಹುಟ್ಟುಗುಣವೆಂದೇ ಹೇಳಬೇಕು. ಅದೇ ರೀತಿ ಮಾಧವ ರಾವ್ ಪಾವಂಜೆಯವರೂ ಕೂಡಾ ತಾನೊಬ್ಬ ಮಹಾನ್ ಕಲಾವಿದ ತನ್ನನ್ನು ಗೌರವಿಸುವವರಿಲ್ಲ ಎಂಬ ಬೇಸರ ವ್ಯಕ್ತಪಡಿಸಿದವರಲ್ಲ. ತನ್ನ ಪಾಡಿಗೆ ತಾನು ಕಲಾಕೈಂಕರ್ಯ ಮಾಡುತ್ತಾ ಕಲಾ ಸರಸ್ವತಿಯ ಆರಾಧನೆಯಲ್ಲಿ ನಿರತರಾಗಿದ್ದಾರೆ. ಬಾಲ್ಯದಲ್ಲಿ ಚಿಕ್ಕಪ್ಪನ ಮಡಿಲಲ್ಲಿ ಕುಳಿತು ಚಿತ್ರಕಲೆಯ ಮೂಲ ಪಾಠಗಳನ್ನು ಕಲಿತ ಅನು ಪಾವಂಜೆ ಆ ಕಾಲದ ತನ್ನ ಮಧುರ ಸ್ಮೃತಿಗಳ ಸುರುಳಿಯನ್ನು ಬಿಚ್ಚುತ್ತಾರೆ. ಅವರ ಚಿತ್ರ ರಚನೆಯ ಕೆಲಸ ಮುಗಿದ ಮೇಲೆ ಉಳಿದ ಬಣ್ಣಗಳನ್ನು ತಾನು ತನಗೆ ತೋಚಿದಂತೆ ಕ್ಯಾನ್ವಾಸ್‌ನ ಮೇಲೆ ಬಳಿಯುವ ಪ್ರಯತ್ನ ಮಾಡುತ್ತಿದ್ದರಂತೆ. ತನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸುವಲ್ಲಿ ಚಿಕ್ಕಪ್ಪ ಎಂ.ಆರ್. ಪಾವಂಜೆಯವರ ಪ್ರೀತಿ ಮತ್ತು ಶಿಸ್ತು ಕಾರಣವೆಂದು ಮನ ತುಂಬಿ ಹೇಳುತ್ತಾರೆ. ಶಿಷ್ಯರು ಯಾವಾಗಲೂ ಗುರುವನ್ನು ಮೀರಿಸುವ ಪ್ರಯತ್ನ ಮಾಡಿದರೇನೇ ಗುರು ನೀಡಿದ ವಿದ್ಯೆ ಸಾರ್ಥಕವೆಂದು ನಂಬಿದ ಎಂ.ಆರ್. ಪಾವಂಜೆಯವರ ಹಿರಿತನಕ್ಕೆ ಎಲ್ಲಾ ಕಲಾ ರಸಿಕರ ನಮನಗಳು ಸಲ್ಲುತ್ತವೆ.

ಅನು ಪಾವಂಜೆ

ಇದೇ ಮನೆತನದಲ್ಲಿ ವಂಶ ಪಾರಂಪರ್ಯವಾಗಿ ಹರಿದುಬಂದ ಕಲಾಪ್ರತಿಭೆ ಅನು ಪಾವಂಜೆ. ಹೀಗೆ ನಾಲ್ಕು ತಲೆಮಾರುಗಳಿಂದ ಮುಂದುವರಿಯುತ್ತಾ ಬಂದ ಕಲಾ ಮನೆತನ ವಿರಳಾತಿವಿರಳ. ಅನು ಪಾವಂಜೆ ಈಗ ಚಿತ್ರಕಲೆಯನ್ನೇ ತನ್ನ ಪ್ರಮುಖ ಹವ್ಯಾಸವಾಗಿ ರೂಡಿಸಿ ಕೊಂಡಿದ್ದಾರೆ.

ಪಾವಂಜೆ ಕೃಷ್ಣಮೂರ್ತಿ ರಾವ್ ಮತ್ತು ಶಾರದಾ ದಂಪತಿಗಳ ಮಗಳಾಗಿ 1971 ಫೆಬ್ರವರಿ 19ರಂದು ಹುಟ್ಟಿದ ಅನು ಮುತ್ತಜ್ಜ, ದೊಡ್ಡಜ್ಜ, ಅಜ್ಜ, ಚಿಕ್ಕಪ್ಪ ಮುಂತಾದವರ ಕಲಾಕೃಷಿಯನ್ನು ನೋಡುತ್ತಲೇ ಬಳೆದವರು. ಪುಟ್ಟ ಮಗುವಾಗಿರುವಾಗಲೇ ಚಿಕ್ಕಪ್ಪನ ತೊಡೆಯಲ್ಲಿ ಕೂತು ಬಣ್ಣಗಳೊಂದಿಗೆ ಚೆಲ್ಲಾಟವನ್ನು, ಗೆರೆಗಳೊಂದಿಗೆ ತುಂಟಾಟವನ್ನು ಮಾಡುತ್ತಾ ರಕ್ತಗತವಾಗಿ ಹರಿದುಬಂದ ಕಲಾ ಸಂಸ್ಕಾರವು ಪ್ರಕಾಶಿಸಲು ಸಾಧ್ಯವಾಯಿತು. ಕಲಾಪ್ರೀತಿ ಮತ್ತು ತನ್ಮಯತೆಯನ್ನು ಕಲಿಸಿದ ಗುರು ಚಿಕ್ಕಪ್ಪ ಎಂ.ಆರ್. ಪಾವಂಜೆಯವರು. ಕಲಾಸಾಧನೆಯಲ್ಲಿ ಇವತ್ತು ತನ್ನದೇ ವಿಶಿಷ್ಟ ಸ್ವಂತಿಕೆಯನ್ನು ಗಳಿಸಿದ ಅನು ಪಾವಂಜೆಯವರು ತಮ್ಮ ಸಾಂಪ್ರದಾಯಿಕ ಶಿಕ್ಷಣವನ್ನು ಕೆನರಾ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಮೇಲೆ ತಮ್ಮನ್ನು ಪೂರ್ಣ ರೂಪದಲ್ಲಿ ಚಿತ್ರಕಲೆಗೆ ಅರ್ಪಿಸಿಕೊಂಡಿದ್ದಾರೆ.

ಚಿತ್ರಕಲೆಯ ಎಲ್ಲಾ ಪ್ರಕಾರಗಳಲ್ಲಿ ಪಳಗಿದ ಅನುರವರ ಒಲವು ಈಗ ಸಾಂಪ್ರದಾಯಿಕ ಕಲೆಯ ಕಡೆಗೆ ಆಕರ್ಷಿಸಿದೆ. ಕಣ್ಸೆಳೆವ ಸುಂದರ ವರ್ಣಗಳು, ಸೂಕ್ಷ್ಮ ಚಿತ್ತಾರದ ಕೆಲಸಗಳು ಜೊತೆಗೆ ಭಾವನೆಗಳನ್ನು ಬಿಂಬಿಸುವ ನೋಟಗಳು ಅವರ ಚಿತ್ರಗಳಲ್ಲಿ ಪ್ರಧಾನವಾಗಿವೆ. ಮೈಸೂರು ಶೈಲಿಯ ಚಿನ್ನದ ರೇಖುವಿನ ಸೂಕ್ಷ್ಮ ಕೆಲಸದ ಪ್ರಯೋಗದಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಇದು ಬಹಳ ಶ್ರಮ ಮತ್ತು ತಾಳ್ಮೆಯನ್ನು ಅಪೇಕ್ಷಿಸುವ ಕೃತಿಯಾಗಿದೆ. ವಜ್ರಸರಿ, ಕಾಪರ್ ಸಲ್ಫೇಟ್, ಗೇಂಬೊಜ್ ಜೊತೆಗೆ ಸ್ವಲ್ಪ ನೀರು ಸೇರಿಸಿ ಬಿಸಿ ಮಾಡಿ ತೆಳುವಾದ ಬಟ್ಟೆಯಲ್ಲಿ ಸೋಸಿದ ಬಳಿಕ ಅದಕ್ಕೆ ವೈಟ್‌ಲೆಡ್ ಪೌಡರ್ ಸೇರಿಸಿ ಸುಮಾರು 45 ನಿಮಿಷ ಚೆನ್ನಾಗಿ ಅರೆದು, ನಯವಾದ ಪೇಸ್ಟ್ ಮಾಡಿ ಅದನ್ನು ಕಲಾಕೃತಿಯ ಎಂಬ್ರೋಸ್ ವರ್ಕ್ ಮಾಡಲು ಉಪಯೋಗಿಸುತ್ತಾರೆ. ಕುಂಚದಿಂದ ತಮ್ಮ ಕಲ್ಪನೆಯಂತೆ ಕುಸುರಿ ಕೆಲಸ ಮಾಡುತ್ತಾರೆ. ಇದು ಒಣಗಿದ ಮೇಲೆ ಅಂಟು ಬೆಲ್ಲ ಮತ್ತು ಕಾಫರ್ ಸಲ್ಫೇಟ್ ಸೇರಿಸಿ ಬಿಸಿ ಮಾಡಿ  ಅಂಟು  ತಯಾರಿಸಿ  ಚಿನ್ನದ ಹಾಳೆಗಳನ್ನು  ಬಹಳ ಸೂಕ್ಷ್ಮ ಕಲಾಪ್ರಜ್ಞೆಯಿಂದ ಅಂಟಿಸುತ್ತಾರೆ. ತಿಂಗಳುಗಳ ಕಾಲದ ಈ  ಶ್ರಮದಲ್ಲಿ ಒಂದು ಅದ್ಭುತ ಕಲಾಕೃತಿ ಮೂಡುತ್ತದೆ.

ಇವರ ಕಲಾಕೃತಿಗಳಲ್ಲಿ ಹೆಚ್ಚಾಗಿ ಪುರಾಣ ಪುರುಷರು ಮತ್ತು ಸ್ತ್ರೀಯರು ಮೈತಳೆದು ನಿಂತಿದ್ದಾರೆ. ಪೌರಾಣಿಕ ಕಥಾಪ್ರಸಂಗಗಳು, ಶಾಸ್ತ್ರಾಗಮ ಗ್ರಂಥಗಳಲ್ಲಿ ಹೇಳಿದ ವರ್ಣನೆಗನುಸಾರವಾಗಿ ರಚಿಸಲ್ಪಟ್ಟಿವೆ. ಜಲವರ್ಣ ಮತ್ತು ಚಾರ್ಕೋಲ್‌ನಿಂದ ರಚಿತವಾದ ಕೃತಿಗಳಲ್ಲಿ ಕೂಡಾ ಅವರ ಸೂಕ್ಷ್ಮ ಕುಸುರಿ ಕೆಲಸಗಳು ಆಕರ್ಷಿಸುತ್ತವೆ.

ಚಿತ್ರಕಲೆಯ ಶ್ರೀಮಂತ ಹಿನ್ನೆಲೆಯಿರುವ ಅನು ಪಾವಂಜೆಯವರಿಗೆ ಈ ಕ್ಷೇತ್ರದ ಜ್ಞಾನ ದಿಗಂತವನ್ನು ಇನ್ನಷ್ಟು ವಿಸ್ತರಿಸುವ ಅದಮ್ಯ ಬಯಕೆಯಿದೆ. ತನ್ನಳವಿಗೆ ಸಾಧ್ಯವಿರುವ ಎಲ್ಲ ಶೈಲಿಗಳನ್ನು ಮತ್ತು ತಂತ್ರಗಳನ್ನು ಕಲಿಯುವ ಕುತೂಹಲವಿದೆ, ಉತ್ಸಾಹವಿದೆ. ಆದುದರಿಂದಲೇ ಮೈಸೂರು ಶೈಲಿಯ ಚಿನ್ನದ ರೇಖುವಿನ ಕುಸುರಿ ಕಲೆಯನ್ನು ಸ್ವಂತ ಆಸಕ್ತಿ ಯಿಂದ ಮತ್ತು ಸ್ವಪ್ರಯತ್ನದಿಂದ ಕಲಿತು ಅದರಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ನಮ್ಮ ಹಳ್ಳಿಯ ಗುಡಿಕೈಗಾರಿಕೆಗಳಿಂದ ಹಿಡಿದು ಪ್ರಪಂಚದ ಶ್ರೇಷ್ಠ ಕಲಾಕೃತಿಗಳ ರಚನೆಯ ವರೆಗೆ ಸಾಗಿದ ಕಲೆಯ ಇತಿಹಾಸವನ್ನು ಕಲಾವಿದ ಮರೆಯಲು ಸಾಧ್ಯವಿಲ್ಲ. ರಂಗೋಲಿಯ ವರ್ಣರಂಜಿತ ಚಿತ್ತಾರಗಳಾಗಲೀ, ತೈಲವರ್ಣದ ಕಲಾಕೃತಿಗಳಾಗಲೀ, ಮಣ್ಣಿನಿಂದ ಮೂಡುವ ಕಲಾಕೃತಿ ಯಾಗಲೀ, ಅಮೃತಶಿಲೆ ಅಥವಾ ಕಲ್ಲುಗಳಲ್ಲಿ ಕೆತ್ತಿ ಮೂಡಿಸುವ ಕಲಾಕೃತಿ ಗಳಾಗಲೀ ಅಲ್ಲಿ ಅಬಿವ್ಯಕ್ತವಾಗುವುದು ಕಲಾವಿದನ ಕಲಾಪ್ರಜ್ಞೆ. ನಮ್ಮ ಸಂಸ್ಕೃತಿಯನ್ನು ತಿಳಿಸಿದ, ಉಳಿಸಿದ ಸಾಧನಗಳೇ ಚಿತ್ರಕಲೆ. ಭಾರತವು ಅನೇಕ ಸಂಸ್ಕೃತಿ, ಸಮುದಾಯಗಳ ಒಂದು ಹದವಾದ ಮಿಶ್ರಣದಂತಿದೆ. ಬಿನ್ನ ಸಮುದಾಯಗಳಲ್ಲಿರುವ ಪ್ರಾದೇಶಿಕ ಚಿತ್ರಕಲೆಯ ವಿಶಿಷ್ಟ ಅಂಶಗಳನ್ನು ಗಮನಿಸುತ್ತಾ ಬಂದಿರುವ ಅನು ಪಾವಂಜೆಯವರು ಕಲಾವಿದನ ಅಂತರಂಗದ ಆಧ್ಯಾತ್ಮಿಕ ತುಡಿತಗಳಿಗೆ ಈ ಕಲೆಯು ಮಾಧ್ಯಮವಾಗಿ ರೂಪುಗೊಂಡಿರುವ ಬಗೆಯನ್ನು ಅಧ್ಯಯನ ಮಾಡಿದ್ದಾರೆ. ಕಲೆಗಳನ್ನು ಸೃಷ್ಟಿಸುವ ಕೈಗಳಿಗಿಂತಲೂ, ಭಾವಪೂರ್ಣ ಹೃದಯವುಳ್ಳ ಕಣ್ಣುಗಳು ಕಾಣುವ ನೋಟ ಹಿರಿದಾಗಿದೆ. ಆ ಒಳಗಣ್ಣುಳ್ಳವನೇ ಕೃತಿಗೆ ಶಕ್ತಿಯನ್ನೂ, ಚೈತನ್ಯವನ್ನೂ, ಶೋಭೆಯನ್ನೂ ತರಬಲ್ಲ ಎಂಬುದು ಅವರ ದೃಢವಾದ ನಂಬಿಕೆ. ಎಷ್ಟೋ ವೇಳೆ ಕವಿಗೂ ಕಾಣಲಾರದ ಸತ್ಯಗಳು ಚಿತ್ರಕಲಾವಿದನ ಕೃತಿಯಲ್ಲಿ ಅಬಿವ್ಯಕ್ತವಾಗುವ ಸಾಧ್ಯತೆಯಿದೆ. ಕವಯಿತ್ರಿಯಾಗಿಯೂ ಹಲವಾರು ಕವನಗಳನ್ನು ಬರೆದಿರುವ ಅನು ಪಾವಂಜೆ ತಾನು ಕವನಗಳಲ್ಲಿ ಹೇಳಲಾಗದ ಭಾವಗಳನ್ನು ಚಿತ್ರಕೃತಿಯಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ. ಕವನಗಳಲ್ಲಿ ಭಾವಗಳು ಬಹಳ ಕಾಲದವರೆಗೆ ಕಾವುಗೊಂಡು ಕೊನೆಗೆ ಪದಗಳಲ್ಲಿ ಬಿಂದು ಬಿಂದುಗಳಾಗಿ ಪ್ರವಹಿಸುವಂತೆ, ಒಂದು ಚಿತ್ರಕೃತಿ ರಚನೆಯಾಗುವಾಗಲೂ ತಿಂಗಳುಗಳ ಕಾಲ ಭಾವನೆಗಳು ಕುದಿಗೊಂಡು ರೇಖೆ ಬಣ್ಣಗಳಾಗಿ ಕ್ಯಾನ್ವಾಸಿನಲ್ಲಿ ಪಡಿಮೂಡುತ್ತವೆ. ಈ ಪ್ರಕೃತಿಯೇ ಒಂದು ಕಲಾರಂಗ. ಎಲ್ಲಾ ಕಲೆಗಳ ಅದಿದೇವತೆ ಸರಸ್ವತಿ. ಆದುದರಿಂದ ಕಲಾಪ್ರಜ್ಞೆ ಸ್ತ್ರೀಯರಿಗೆ ಸಹಜವಾಗಿ ಇದ್ದೇ ಇದೆ. ಗಂಡಸರು ಇದರಲ್ಲಿ ಸಂಪೂರ್ಣ ತೊಡಗಿಕೊಳ್ಳುವಂತೆ ಸ್ತ್ರೀಯರಿಗೆ ತೊಡಗಿಸಿ ಕೊಳ್ಳುವುದು ಅಸಾಧ್ಯ ವೆಂಬ ಮಾತು ನಿಜವಾದರೂ ಚಿತ್ರಕಲೆಯ ಒಂದಲ್ಲ ಒಂದು ಪ್ರಕಾರಗಳಲ್ಲಿ ಸ್ತ್ರೀಯರ ಸಾಧನೆಯನ್ನು ತಳ್ಳಿ ಹಾಕುವಂತಿಲ್ಲ. ಬಿಡುವಿನ ವೇಳೆಯ ಹವ್ಯಾಸವಾಗಿ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವುದಕ್ಕೂ ಚಿತ್ರಕಲೆಯೇ ಪ್ರಧಾನ ಕಾಳಜಿ ಮತ್ತು ಉಸಿರಾಗಿಸಿಕೊಂಡು ಬಾಳುವುದಕ್ಕೂ ವ್ಯತ್ಯಾಸವಿದೆ. ಸ್ತ್ರೀಯರಿಗೆ ಇದರಲ್ಲಿ ಗಂಬೀರವಾಗಿ ತೊಡಗಿಸಿಕೊಳ್ಳಲು ಇರುವ ಅಡ್ಡಿ ಆತಂಕಗಳು ಅವರನ್ನು ಕೆಲವು ಮಿತಿಗಳೊಳಗೆ ಬಂದಿಸಿವೆ. ಆ ಮಿತಿಗಳನ್ನು ಮೀರಿ ತಮ್ಮ ಜೀವನವನ್ನೇ ಚಿತ್ರಕಲೆಗೆ ಸಮರ್ಪಿಸಿದ ಸ್ತ್ರೀಯರೂ ಅನೇಕ ಮಂದಿ ಇದ್ದಾರೆ. ಅಂತಹ ಹಲವರ ಮಾದರಿಗಳನ್ನು ಮುಂದಿಟ್ಟು ಕೊಂಡು ಅನು ಪಾವಂಜೆಯವರು ಚಿತ್ರಕಲೆಗೆ ತನ್ನನ್ನು ಸಂಪೂರ್ಣ ಅರ್ಪಿಸಿಕೊಂಡಿದ್ದಾರೆ.

ಅನು ಪಾವಂಜೆಯವರಿಗೆ ಹೊಸತನ್ನು ಸೃಷ್ಟಿಸುವ ಕಲ್ಪನಾಶಕ್ತಿ ಇರುವಂತೆಯೇ ಹಳೆಯದನ್ನು ಸೂಕ್ಷ್ಮವಾಗಿ ಗಮನಿಸುವ, ತಿಳಿಯುವ ಆಸಕ್ತಿಯೂ ಇದೆ. ಭಾರತದ ಹಿರಿಯ ಹೆಸರಾಂತ ಕಲಾವಿದರ ಪ್ರಸಿದ್ಧ ಕೃತಿಗಳನ್ನು ಅವಲೋಕಿಸಿ ಅವುಗಳ ವೈಶಿಷ್ಟ್ಯಗಳನ್ನು ಕಣ್ತುಂಬಿಕೊಂಡ ಅನೂ ಅವರಿಗೆ ವಿದೇಶೀ ಚಿತ್ರಕಲೆಯನ್ನು ನೋಡಿ ಸವಿಯುವ ಭಾಗ್ಯ ಒದಗಿ ಬಂದದ್ದು ಅವರ ಬದುಕಿನ ಅತ್ಯಂತ ಅವಿಸ್ಮರಣೀಯ ಘಟನೆ ಎನ್ನುತ್ತಾರೆ. ಅನು ಅವರು ತಮ್ಮನ ಆಮಂತ್ರಣದಿಂದ ಜರ್ಮನಿಯಲ್ಲಿದ್ದ ಸ್ಟಾಡೆಲ್ ಮ್ಯೂಸಿಯಂನಲ್ಲಿ ರೆಂಬ್ರಾಂಟ್ ರ್ಯೂಬನ್, ಗೋಯಾ, ಮಾನೆ, ರೆನ್ಯಾರ್, ವರ್ಮೀರ್ ಮುಂತಾದವರ ಕಲಾಕೃತಿಗಳನ್ನು ಕಂಡಾಗ ಕಲೆಯಲ್ಲಿ ತಾನು ಸಾಗರದ ಒಂದು ಹನಿಯೂ ಆಗುವ ಯೋಗ್ಯತೆಯವಳಲ್ಲವೆಂದು ಮನದಟ್ಟಾಯಿತು ಅನ್ನುತ್ತಾರೆ.

ಪ್ಯಾರಿಸ್‌ನ ಲೂವ್ರೆ ಮ್ಯೂಸಿಯಂನಲ್ಲಿ ಅವರು ಪೂರ್ವತಯಾರಿ ಮಾಡಿಕೊಂಡು ನೋಡಿದ್ದು ಕೇವಲ ಶಿಲ್ಪಗಳನ್ನು ಮತ್ತು ಚಿತ್ರಕಲಾ ಪ್ರದರ್ಶನ ಗಳನ್ನು. ಮೈಕೆಲ್ ಎಂಜೆಲೋ, ಲಿಯೊನಾರ್ಡೊ ವಿಂಚಿ, ರೆಂಬ್ರಾಂಟ್, ರಫಾಯಲ್, ಟಿಶಿಯನ್, ಬಾಟಿಸೆಲ್ಲಿ ಕಲಾಕೃತಿ ಗಳನ್ನು ಕಂಡಾಗ ಬದುಕಲ್ಲಿ ಏನಾದರೂ ಸಾದಿಸಬೇಕಾದರೆ ದೃಢಚಿತ್ತದಿಂದ ಅದರ ಹುಚ್ಚು ಹಿಡಿಸಿಕೊಳ್ಳ ಬೇಕು ಎಂದು ಅನೂ ಅವರು ನಿರ್ಧರಿಸಿದರಂತೆ. ಈ ಸಂಗ್ರಹಾಲಯಗಳಲ್ಲಿ  ಕಲಾಕೃತಿಗಳ ಮುಂದೆ ನಿಂತಾಗ ನನ್ನಜ್ಜ ಕೂಡಾ ಹೀಗೆ ಇಲ್ಲಿ ನಿಂತು ಈ ಕೃತಿಗಳನ್ನು ಆಸ್ವಾದಿಸಿರಬೇಕಲ್ಲಾ ಎಂಬ ಕಲ್ಪನೆಯಿಂದಲೇ ಪುಳಕಿತಳಾಗಿ ಹೃದಯ ತುಂಬಿ ಕಣ್ಣುಗಳನ್ನು ತುಳುಕುವಂತೆ ಮಾಡಿತು ಎನ್ನುತ್ತಾರೆ.

ಹಳೆಬೇರು ಹೊಸ ಚಿಗುರುಗಳಿದ್ದರೆ ಪ್ರಕೃತಿಯು ಸುಂದರವಾಗಿರು ತ್ತದೆ. ಹಳತು ಹೊಸತರ ಸಮತೂಕದಲ್ಲೇ ಕಲಾವಿದರ ಸೌಂದರ್ಯಪ್ರಜ್ಞೆ ಜಾಗೃತವಾಗುತ್ತದೆ. ಕಲೆ ಸ್ವಂತ ಖುಷಿಯಿಂದ ಆವಿರ್ಭವಿಸಿದರೂ ಅದು ಹೃದಯವಂತ ರಸಿಕರ ಮನಸ್ಸು ಸೂರೆಗೊಳ್ಳುವಂತಿರಬೇಕು. ಕಲಾಕೃತಿ ಯಲ್ಲಡಗಿದ  ಕಲಾವಿದನ  ಪ್ರತಿಭೆಯನ್ನು  ರಸಿಕರು  ಕಷ್ಟಪಟ್ಟು ಗ್ರಹಿಸು ವಂತಿದ್ದರೆ ಅದು ಎಲ್ಲರನ್ನೂ ಆಕರ್ಷಿಸಲಾರದು. ನಾನೇರುವೆತ್ತರಕೆ ನೀನೂ ಏರಬೇಕು ಎಂದು ಕಲಾರಸಿಕರಿಗೆ ಸವಾಲು ಹಾಕುವುದು ಅಷ್ಟು ಸರಿಯೆನಿಸದು ಅನ್ನುತ್ತಾರೆ ಅನು. ಪ್ರತಿಯೊಬ್ಬ ಸಹೃದಯನೂ ಕಲಾವಿದನೇ ಆಗಿರುತ್ತಾನೆ. ಉತ್ತಮ ಕಲೆಯನ್ನು ಆಸ್ವಾದಿಸುವ ರೀತಿಯನ್ನು ಪ್ರತಿಯೊಬ್ಬನೂ ಗಳಿಸಿಕೊಳ್ಳಬೇಕಾಗುತ್ತದೆ. ಪ್ರಪಂಚದ ಎಲ್ಲಾ ಕಾವ್ಯ ಪುರಾಣಗಳ ದೇವತೆ ಗಳಿಗೆ ರೂಪವನ್ನು, ಚೈತನ್ಯವನ್ನು, ಶಕ್ತಿಯನ್ನು ಕೊಟ್ಟವರು ಕಲಾವಿದರು. ಒಂದರ್ಥದಲ್ಲಿ ದೇವಾಲಯ, ಗುಡಿ, ಚರ್ಚು, ಮಸೀದಿ ಗಳನ್ನು ಭಕ್ತರ ಆವಾಸಸ್ಥಾನವನ್ನಾಗಿ ಮಾಡಿದವರು ಅವರು. ಅವುಗಳ ಹಿಂದೆ ಕಲಾವಿದನ ಕಾಣ್ಕೆ ಇದೆ. ಆಧ್ಯಾತ್ಮಿಕ ಸ್ಪರ್ಶವಿದೆ. ಅಂತರಂಗದ ಅನುಭೂತಿ ಯಿದೆ. ಆದುದರಿಂದಲೇ ಇಂದಿಗೂ ಅವು ಎಲ್ಲರಿಗೂ ಪವಿತ್ರ ಸ್ಥಾನವಾಗಿವೆ. ತನ್ನ ಹೃದಯದ ಗುಡಿಯಲ್ಲಿ ದೇವರನ್ನು ಆವಾಹಿಸಿಕೊಂಡ ಕಲಾವಿದ ಅದಕ್ಕೊಂದು ಬಾಹ್ಯರೂಪ ಕೊಡುತ್ತಾನೆ. ಇದು ಪ್ರತೀ ದೇಶದ ದೇಗುಲ ಸಂಸ್ಕೃತಿಯಲ್ಲಿ ಕಾಣಬಹುದು ಎಂದು ಅನು ಅವರ ಅಬಿಪ್ರಾಯ.

ಅನು ಪಾವಂಜೆಯವರ ಆಧ್ಯಾತ್ಮಿಕ ತುಡಿತಗಳ ಪ್ರತಿರೂಪವಾಗಿ ಬಾಲಕೃಷ್ಣ ಮತ್ತು ಬಾಲ ಗಣೇಶರ ಅನೇಕಾನೇಕ ಕೃತಿಗಳು ರೂಪುಗೊಂಡಿವೆ. ಇವುಗಳಲ್ಲಿ ಸ್ತ್ರೀ ಹೃದಯದ ತುಡಿತ ಮಿಡಿತಗಳೂ ಅತ್ಯಂತ ಕಲಾತ್ಮಕವಾಗಿ ರೂಪುಗೊಂಡಿವೆ. ಅವರ ದೇವಿ, ದೇವತೆಗಳ ಚಿತ್ರಗಳಲ್ಲೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

ಅನು ಪಾವಂಜೆಯವರು ಕಲೆ ಸಾಗಿ ಬಂದ ದಾರಿಯ ಬಗ್ಗೆ ಅದರ ವೈವಿಧ್ಯತೆ ಮತ್ತು ಪ್ರಭಾವ, ಪರಿಣಾಮಗಳ ಬಗ್ಗೆ ಅರಿವುಳ್ಳವರು. ಆಗಾಗ ಮುಂಬಯಿ, ಬೆಂಗಳೂರು ಮುಂತಾದ ದೊಡ್ಡ ನಗರಗಳಲ್ಲಿ ಸಂಚರಿಸುತ್ತಾ ಪ್ರಸಿದ್ಧ ಕಲಾವಿದರ ಚಿತ್ರ ಪ್ರದರ್ಶನಗಳನ್ನು ಕಂಡು ಆಧುನಿಕ ಕಲೆಯು ಸಾದಿಸಿದ ಎತ್ತರ ಬಿತ್ತರಗಳನ್ನು ಗ್ರಹಿಸಿದವರು. ಆದರೆ ತನ್ನ ಕಲಾಜೀವನದಲ್ಲಿ ಸ್ವಂತಿಕೆಯ ಅನ್ವೇಷಣೆಯನ್ನು ಮಾಡುತ್ತಾ ಪ್ರಯೋಗಶೀಲತೆಯನ್ನು ರೂಡಿಸಿಕೊಳ್ಳುತ್ತಾ ತನ್ನದೇ ಆದ ವಿಶಿಷ್ಟ ದಾರಿಯನ್ನು ಕಂಡುಕೊಂಡವರು.

ಸಾಹಿತ್ಯ ಮತ್ತು ಸಂಗೀತದಲ್ಲೂ ಒಲವುಳ್ಳ ಈ ಕಲಾವಿದೆಯ ಕೃತಿಗಳಲ್ಲಿ ಭಾವ ಲಯ ಮತ್ತು ನಾದ ಲಯಗಳು ಜುಗಲ್ ಬಂದಿ ನಡೆಸುವುದನ್ನು ಕಾಣಬಹುದು. ಯಾವುದೇ ಗೊಂದಲ, ಉದ್ವೇಗಗಳಿಗೆ ಆಸ್ಪದ ಕೊಡದೆ ಆಧ್ಯಾತ್ಮಕ್ಕೆ ಶರಣಾಗಿಸುವ ನಿಗೂಢ ಶಕ್ತಿಯೊಂದು ಈ ಕಲಾಕೃತಿಗಳಲ್ಲಿ ಅಬಿವ್ಯಕ್ತಗೊಂಡಿದೆ. ಹೊಸ ತಲೆಮಾರು ಹಳೆಯದಕ್ಕೆ ವಿಮುಖವಾಗಿದೆ ಎಂಬ ಆರೋಪಕ್ಕೆ ಪ್ರತ್ಯುತ್ತರವಾಗಿ ಈ ಕಲಾಕೃತಿಗಳು ಶೋಬಿಸುತ್ತವೆ.

ವರ ಕಲಾಕೃತಿಗಳು ಕರ್ನಾಟಕ ಲಲಿತಕಲಾ ಅಕಾಡೆಮಿ, ಚಿತ್ರಕಲಾ ಪರಿಷತ್ತು, ಅಖಿಲ ಭಾರತ ಚಿತ್ರಕಲಾ ಪ್ರದರ್ಶನ, ವೆಂಕಟಪ್ಪ ಆರ್ಟ್ ಗ್ಯಾಲರಿ, ಚಿತ್ರಸಂತೆ, ರಾಷ್ಟ್ರ ಮಟ್ಟದ ಜ್ಯುವೆಲ್ ಆಫ್ ಇಂಡಿಯಾ ಕಲಾಮೇಳ, ಕಮಲನಯನ್ ಬಜಾಜ್ ಆರ್ಟ್ ಗ್ಯಾಲರಿ ಮುಂಬಯಿ, ರಾಷ್ಟ್ರೀಯ ಕಲಾಮೇಳ, ಮಾನ್‌ಸೂನ್ ಮೇಳ, ಕುಡ್ಲ ಕರಾವಳಿ, ‘ಬಹುರೂಪ’ ವಿವಿಧ ಕಲಾಕೃತಿಗಳ ಪ್ರದರ್ಶನಗಳಲ್ಲಿ ಮೆಚ್ಚುಗೆಗೆ ಪಾತ್ರ ವಾಗಿವೆ. 1994 ರಲ್ಲೇ ಬೆಳಗಾಂನಲ್ಲಿ ಇವರ ಏಕವ್ಯಕ್ತಿ ಕಲಾಪ್ರದರ್ಶನ ನಡೆದಿದೆ. ಅದಲ್ಲದೆ ಮಂಗಳೂರು, ಉಡುಪಿ, ಮೈಸೂರು, ಮುಂಬಯಿಗಳಲ್ಲಿ ಇತರ ಕಲಾವಿದರ ಜೊತೆಯಲ್ಲಿ ಪ್ರದರ್ಶನ ಗೊಂಡಿದೆ. ಇವರ ಕಲಾಕೃತಿಗಳು ಭಾರತೀಯ ವಿದ್ಯಾಭವನ ಮಂಗಳೂರು, ರಾಜ ಬೀರೇಂದ್ರ – ನೇಪಾಳ, ಹಲವರ ಖಾಸಗೀ ಸಂಗ್ರಹಗಳಲ್ಲಿ ಮತ್ತು ದೇಶ ವಿದೇಶಗಳಲ್ಲಿ ಪಸರಿಸಿವೆ.

ಧಾರವಾಡ, ಮೂಡುಬಿದಿರೆ, ಮಂಗಳೂರು, ಸೋಣಂಗೇರಿ, ನಿಡ್ಲೆ, ದೇವಂದಬೆಟ್ಟ ಮುಂತಾದ ಕಡೆಗಳಲ್ಲಿ ಮತ್ತು ಮಹಿಳಾ ಕಲಾವಿದರ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 1983ರಲ್ಲಿ ಕ್ಯಾಮಲ್ ಕಲರ್ ಕಾಂಟೆಸ್ಟ್‌ನಲ್ಲಿ ವಿಶೇಷ ಪದಕ, 1994ರಲ್ಲಿ ಹುಬ್ಬಳ್ಳಿಯಲ್ಲಿ ಜಲವರ್ಣ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ, ಮಂಗಳೂರು ಜೇಸೀಸ್‌ನಿಂದ ‘ಔಟ್ ಸ್ಟ್ಯಾಡಿಂಗ್ ಯಂಗ್ ಪರ್ಸನ್’ ಅವಾರ್ಡ್, ಪಾವಂಜೆಯ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

ಸತಿಗೆ ಕಣ್ಣು, ಕಿವಿ ತೆರೆದಿಡುತ್ತಾ, ಹಳೆಯದರಲ್ಲಿದ್ದ ಒಳ್ಳೆಯ ಅಂಶಗಳನ್ನು ಹೃದಯಕ್ಕಿಳಿಸುತ್ತಾ ಅದಕ್ಕೆ ತನ್ನ ಬೆರಳ ತುದಿಯ ಕುಂಚದಿಂದ ಅನನ್ಯ ಕೃತಿಯನ್ನು ರೂಪಿಸಿದ / ರೂಪಿಸುತ್ತಿರುವ ಅನು ಪಾವಂಜೆಯವರಿಗೆ ತಾನಿನ್ನೂ ಕಲಿಯಬೇಕಾದುದು ತುಂಬಾ ಇದೆ ಎಂಬ ವಿನಯವಿದೆ; ಶ್ರದ್ಧೆಯಿದೆ. ಇವರ ಮುತ್ತಜ್ಜ ಗೋಪಾಲಕೃಷ್ಣಯ್ಯನವರ ಕಲೆಯ ಕುಸುರಿತನ ಇವರಿಗೆ ಬಳುವಳಿಯಾಗಿ ಬಂದಿದೆ ಎಂಬುದರಲ್ಲಿ ಸಂಶಯವಿಲ್ಲ.