ಸಂಕ್ರಾಂತಿಯವರೆಗೂ ಕೃಷಿ ಸಂಬಂಧಿ ಕೆಲಸಕಾರ್ಯಗಳಲ್ಲಿ ಬಿಡುವಿಲ್ಲದೆ ನಿರತನಾಗಿರುವ ರೈತನಿಗೆ ಕೃಷಿಯ ಎಲ್ಲಾ ಕೆಲಸಗಳೂ ಮುಗಿದು ಆ ವರ್ಷದ ಧವಸ ಧಾನ್ಯಗಳು ಮನೆಸೇರಿದರೆ ಸಂಕ್ರಾಂತಿಯನಂತರ ಬಿಡುವು ದೊರೆಯುತ್ತದೆ. ಸಾಮಾನ್ಯವಾಗಿ ಸಂಕ್ರಾಂತಿಯ ನಂತರ ರೈತಾಪಿ ಜನಗಳಿಗೆ ಬಿಡುವಿನ ವೇಳೆ ಎಂಬ ಅಭಿಪ್ರಾಯ ಇದ್ದರೂ ರೈತರ ಮನಸ್ಸು ಹೊಲಗದ್ದೆಗಳತ್ತ ತುಡಿಯುತ್ತಲೇ ಇರುತ್ತದೆ. ಮುಂದಿನ ಹಂಗಾಮಿನ ಕೃಷಿ ಕಾರ್ಯಗಳ ಸಿದ್ಧತೆ ಆ ದಿನಗಳಲ್ಲಿ ಮುಖ್ಯವಾಗುತ್ತದೆ. ಮುಂದಿನ ವರ್ಷದ ಕೃಷಿ ಕೆಲಸಗಳಿಗೆ ಗೊಬ್ಬರಗಳ ಹೊಂಚುವಿಕೆ, ಉತ್ತಮ ಬೀಜಗಳ ಸಂಗ್ರಹ ಇವೆಲ್ಲಾ ಮುಖ್ಯವಾದ ಕೆಲಸಗಳು. ಆ ದಿನಗಳ ಮತ್ತೊಂದು ಅತೀ ಮುಖ್ಯ ಕೆಲಸವೆಂದರೆ ಬೇಸಾಯದ ಎತ್ತುಗಳ ಕೊಳ್ಳುವಿಕೆ. ಹಿಂದಿನ ವರ್ಷಗಳಲ್ಲಿ ದುಡಿದು ಸೋತಿದ್ದ ಎತ್ತುಗಳನ್ನು ಆಗಲೇ ಮಾರಿಯಾಗಿರುತ್ತದೆ. ಮುಂದಿನ ವರ್ಷಕ್ಕೆ ಒಳ್ಳೆ ಸಸದೃಢವಾದ ಎತ್ತುಗಳು ಬೇಕು. ಮನೆಗೆ ಹಾಲು ಕೊಡುವ ಹಸುಗಳ ಅಗತ್ಯವೂ ಕಾಣುತ್ತಿದೆ, ಸುತ್ತಮುತ್ತ, ಪರಿಚಯದವರ ಬಳಿ ಇರುವ ಎತ್ತು-ಹಸುಗಳು ಮನಸ್ಸಿಗೆ ಸರಿಕಾಣುತ್ತಿಲ್ಲ, ಅವರು ಹೇಳುವ ಬೆಲೆಯೂ ಹೆಚ್ಚಿರಬಹುದು. ಕಡಿಮೆ ಬೆಲೆಯಲ್ಲಿ, ಹೆಚ್ಚು ಆಯ್ಕೆಗಳಿಗೆ ಅವಕಾಶವಿದ್ದಲ್ಲಿ ಒಳ್ಳೆಯದಾಗುತ್ತಿತ್ತೆಂದು ರೈತರೆಲ್ಲ ಯೋಚಿಸತೊಡಗುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ನೆರವಿಗೆ ಬರುವುದೇ ದನಗಳ ಜಾತ್ರೆ.

ದನಗಳ ಜಾತ್ರೆಯ ನೋಟ.

ಪ್ರಾಣಿಗಳಿಗೂ ಮಾನವನಿಗೂ ಇರುವ ನಿಕಟ ಸಂಬಂಧ ಬಾಂಧವ್ಯ ತುಂಬಾ ಹಳೆಯದು. ಆತನ ಮೊದಲ ಹಂತದ ಪಶುಸಂಗೋಪನೆಯಲ್ಲಿ ದನಗಳಿಗೇ ಪ್ರಾಮುಖ್ಯ. ವ್ಯವಸಾಯದ ಕಲ್ಪನೆ ಆರಂಭವಾದ ಮೇಲೆ ಕೃಷಿಕಾರ್ಯಗಳಿಗೆ ಎತ್ತುಗಳನ್ನು ಬಳಸಿಕೊಳ್ಳಲಾರಂಭಿಸಿದ ಮೇಲೆ ಎತ್ತುಗಳಿಗೆ ದೈವಿಕ ಸ್ಥಾನವನ್ನೂ ಕೊಡಲಾಯಿತು. ಈ ಕುರುಹುಗಳು ಸಿಂಧೂ ಸಂಸ್ಕೃತಿಯ ಕಾಲದಿಂದಲೂ ಸಿಕ್ಕಿವೆ. ಅವರ ದೇವರು ‘ಪಶುಪತಿ’. ಅವರ ಮುದ್ರೆಗಳಲ್ಲಿ ‘ವೃಷಭ’ದ ಗುರುತಿರುತ್ತಿತ್ತು. ಪ್ರಾಚೀನ ಗುರುಕುಲಗಳಲ್ಲಿ ಗೋ ಸಾಕುವಿಕೆ ಕಡ್ಡಾಯವಾಗಿರುತ್ತಿತ್ತು. ಮಹಾರಾಜರ ಸಂಪತ್ತುಗಳಲ್ಲಿ ‘ಗೋ-ಸಂಪತ್ತು’ ಪ್ರಧಾನವಾಗಿರುತ್ತಿತ್ತು. ಮೈಸೂರು ಮಹಾರಾಜರಂತೂ ಕರ್ನಾಟಕದ ದೇಶೀ ತಳಿಗಳ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತವರಂತೆ ಶ್ರಮಿಸುತ್ತಿದ್ದರು. ಆಗ ಅವರು ಅಮೃತಮಹಲ್ ತಳಿಗಳ ಅಭಿವೃದ್ಧಿಗಾಗಿ ಕರ್ನಾಟಕದ ಅನೇಕ ಕಡೆ ಸಾವಿರಾರು ಎಕರೆಗಳನ್ನು ಮೀಸಲಿಟ್ಟಿದ್ದರು. ಅಮೃತಮಹಲ್ ಕಾವಲ್ ಎಂಬ ಹೆಸರಿನಲ್ಲಿ ಪಶುಸಂಗೋಪನೆಗಾಗಿ ಉಪಯೊಗವಾಗುತ್ತಿದ್ದ ಆ ಹುಲ್ಲುಗಾವಲುಗಳು ಪಳೆಯುಳಿಕೆಯ ರೂಪದಲ್ಲಿ ಇಂದೂ ಉಳಿದುಕೊಂಡಿವೆ.

ದೇಶದ ಬೆನ್ನೆಲುಬು ಎಂದು ವರ್ಣಿಸಲ್ಪಡುವ ರೈತನ ನಿಜವಾದ ಬೆನ್ನೆಲುಬೇ ದನಗಳು. ಎತ್ತು ಹಸುಗಳಿಲ್ಲದೆ ಕೃಷಿಕರ ಜೀವನವಿಲ್ಲ. ನೆಲ ಉಳಲು ಉಪಯೋಗಿಸುವ ಎತ್ತಿನಂತೆಯೇ ಹಾಲು ನೀಡುವ ಹಸುಗಳೂ ರೈತನಿಗೆ ಜೀವನಾಧಾರವಾಗಿವೆ. ಅವುಗಳು ಕೊಡುವ ಅಮೂಲ್ಯ ಸಗಣಿಯ ಗೊಬ್ಬರ ಉತ್ತಮ ಬೆಳೆ ತೆಗೆಯಲು ಆಧಾರ. ಈಗೇನೋ ಬೇಸಾಯವೆಂಬುದು ಅಧುನಿಕತೆಯ ಹೆಸರಿನಲ್ಲಿ ಯಾಂತ್ರೀಕರಣಗೊಳ್ಳುತ್ತಾ ನಡೆದಿರುವ ಕಾರಣ ನಿಧಾನಕ್ಕೆ ದನಗಳ ಸ್ಥಾನವನ್ನು ಟಿಲ್ಲರ್‌ಗಳೂ ಟ್ರಾಕ್ಟರ್‌ಗಳೂ ಆಕ್ರಮಿಸಿಕೊಳ್ಳುತ್ತಿವೆ. ಯಾಂತ್ರೀಕರಣದಿಂದ ದನಗಳ ಸಂಖ್ಯೆ ಕಡಿಮೆಯಾಗಿ ಭೂಮಿಯ ಸಾವಯವ ಸತ್ವವನ್ನು ಸ್ಥಿರೀಕರಿಸುವ ಸಗಣಿ ಗೊಬ್ಬರದ ಅಲಭ್ಯತೆಯಿಂದ ಉಂಟಾಗುತ್ತಿರುವ ಭೂಮಿಯ ಬಂಜರುತನದ ಪರಿಣಾಮವನ್ನು ನಾವೀಗಾಗಲೇ ಅನುಭವಿಸುತ್ತಿದ್ದೇವೆ. ಹಿಂದೆಲ್ಲ ಹಳ್ಳಿಗಳೆಂದರೆ ಅಲ್ಲಿ “ಗೋಚರಾವು” (ಗೋಮಾಳ) ಗಳಿರುತ್ತಿದ್ದವು.ತಮ್ಮ ಊರ ದನಗಳಿಗಾಗಿ ಖಾಲಿ ಬಿಟ್ಟ ಅಂತಹ ಗೋಚರಾವಿನಲ್ಲಿ ಬೆಳೆದ ಹುಲ್ಲನ್ನು ಮೇಯ್ದ ದನಗಳು ಪುಷ್ಟವಾಗಿರುತ್ತಿದ್ದವು. ಹಳ್ಳಿಗರಿಗೆ ಗೋ ಸಂಪತ್ತಿನ ಮೇಲೆ ಅದೆಷ್ಟು ಪ್ರೇಮವಿರುತ್ತಿತ್ತೆಂದರೆ ಸಂಜೆ ದನಗಳೆಲ್ಲ ಹಳ್ಳಿಗೆ ಹಿಂದಿರುಗುವ ಹಾದಿಯಲ್ಲಿ ಅವುಗಳು ವಿಶ್ರಮಿಸಿಕೊಳ್ಳಲು ತೋಪುಗಳನ್ನು ಬೆಳೆಸುತ್ತಿದ್ದರು. ತಮ್ಮ ಮೈಯನ್ನುಜ್ಜಿಕೊಂಡು ಕಾಡು  ಕೀಟಗಳ ಕಡಿತದ ನವೆಯನ್ನು ನಿವಾರಿಸಿಕೊಳ್ಳಲು ಅಲ್ಲೇ ಹಲವಾರು ಕಲ್ಲುಕಂಭಗಳನ್ನು ನೆಟ್ಟಿರುತ್ತಿದ್ದರು. ಇಂದು ಇದೆಲ್ಲಾ ಕನಸಿನಲ್ಲಿ ಕಂಡಂತಿದೆ!! ವಾಸ್ತವದಲ್ಲಿ ಏನೂ ಇಲ್ಲ!!. ಇಂದು ಊರೊಟ್ಟಿನ ಗೋಮಾಳ ಅಥವಾ ಗೋಚರಾವಿನ ನೆಲವೆಲ್ಲಾ ಹಳ್ಳಿಗಳ ಬಲಾಡ್ಯರ ಪಾಲಾಗಿಹೋಗಿದೆ. ಹಸಿರುಕ್ರಾಂತಿಯ ನೆವದಲ್ಲಿ ಕೃಷಿನೆಲವನ್ನು ವಿಸ್ತರಿಸುವ ಹೆಸರಲ್ಲಿ ದನಗಳು ಮೇಯುತ್ತಿದ್ದ ಖಾಲಿ ಜಾಗಗಳನ್ನೂ ನುಂಗಿಹಾಕಲಾಗಿದೆ. ಯಾಂತ್ರೀಕೃತ ಕೃಷಿಪದ್ಧತಿಯ ಕಾರಣದಿಂದಲೂ ದನಗಳ ಸಂಖ್ಯೆ ಕಡಿಮೆಯಾಗಿ  ಸಾವಯವ ಗೊಬ್ಬರದ ಕೊರತೆ ಕಾಣಿಸುತ್ತಿದೆ. ಈ ಕಾರಣಗಳಿಂದ ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳ ಮೊರೆ ಹೋಗುವುದರಿಂದ ಭೂಮಿಯ ಬಂಜರುತನ ಹೆಚ್ಚುತ್ತಿರುವುದು ಬೇರೆಯೇ ಸಮಸ್ಯೆ. .

ಇಂದು ಕೃಷಿಯಲ್ಲಿ ಎತ್ತುಗಳ ಬದಲು ಟ್ರಾಕ್ಟರ್ ಟಿಲ್ಲರ್‌ಗಳು ಬಂದಿವೆಯಾದರೂ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಿಗೆ ಅದಿನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಸುಮಾರು ಎರಡರಿಂದ ಐದೆಕೆರೆವರೆಗಿನ ಹಿಡುವಳಿ ಇರುವ ರೈತ ಟ್ರಾಕ್ಟರ್‌ನ ಕನಸನ್ನು ಕಾಣುವ ಅದೃಷ್ಟವಂತನಾಗಿರಲಾರ. ಅಕಸ್ಮಾತ್ ಅವನ್ನು ಕೊಂಡರೂ ಇಂಧನ, ರಿಪೇರಿ, ಬಿಡಿಭಾಗಗಳು ಇದೆಲ್ಲವನ್ನೂ ಲೆಕ್ಖ ಹಾಕಿದರೆ ‘ಅಜ್ಜ ನೂತದ್ದೆಲ್ಲ ಮೊಮ್ಮಗನ ಉಡಿದಾರಕ್ಕೆ’ ಎಂಬಂತಾಗುತ್ತದೆ. ಅಂತಹವರಿಗೆ ಇಂದಿಗೂ ಎತ್ತುಗಳೇ ಕೃಷಿಯ ಬೆನ್ನೆಲುಬಾಗಿವೆ. ಒಟ್ಟು ಅರ್ಥವೆಂದರೆ ಯಾಂತ್ರೀಕರಣದ ಸುಳಿಯಲ್ಲೂ ದನಗಳ ಅನಿವಾರ್ಯತೆ ಕಂಡು ಬರುತ್ತದೆ.

ರೈತರ ಖಾಯಷ್ ಹಳ್ಳಿಕಾರ್ ತಳಿಯ ಎತ್ತುಗಳು

ಹಿಂದೆಲ್ಲಾ ಹೇಗಿರುತ್ತಿತ್ತು? ಗ್ರಾಮೀಣ ಪರಿಸರದಲ್ಲಿದ್ದವರಿಗೆ ಗೊತ್ತಿರಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಉದ್ದನ್ನ ಕೊಟ್ಟಿಗೆ ಇರುತ್ತಿತ್ತು. ಅಲ್ಲೆಲ್ಲಾ ಬೇಕಾದಷ್ಟು ದನಗಳು! ಉಳ್ಳವರ ಮನೆಯಲ್ಲಿ ‘ಹಳ್ಳೀಕಾರ್’ ಅಥವಾ ‘ಅಮೃತಮಹಲ್’ ತಳಿಯ ದನಗಳಿರುತ್ತಿದ್ದರೆ ಉಳಿದವರ ಮನೆಯಲ್ಲಿ ಯಾವ ರೋಗ ಬಾಧೆಗೂ ಈಡಾಗದ ಬಲಿಷ್ಠವಾದ ‘ಮಲೆನಾಡ್ ಗಿಡ್ಡ’ ತಳಿಯ ದನಗಳಿರುತ್ತಿದ್ದವು. ಅವುಗಳ ಸಂತತಿ ಮನೆಯಲ್ಲಿ ಬೆಳೆದುಕೊಳ್ಳುತ್ತಿದ್ದುದರಿಂದ ಕೃಷಿ ಉಪಯೋಗಕ್ಕಾಗಲೀ ಹಾಲಿಗಾಗಲೀ ಗೊಬ್ಬರಕ್ಕಾಗಲೀ ಮನೆಯ ದನಗಳೇ ಸಾಕಾಗುತ್ತಿದ್ದುವು. ಜನಸಂಖ್ಯೆ ಹೆಚ್ಚಿದಂತೆ ಸಂಸಾರಗಳು ಒಡೆದು ಹೊಸ ಸಂಸಾರಗಳಾದಂತೆ ಜಮೀನು ಸಹಾ ಪಾಲಾಗುತ್ತಾ ಹಿಡುವಳಿಯ ಪ್ರಮಾಣ ಕಡಿಮೆಯಾಗಿ ಮೇವಿನ ಅಲಭ್ಯತೆಯಿಂದ ಹಳ್ಳಿಗಳಲ್ಲಿ ದನಗಳ ಪ್ರಮಾಣ ಕಡಿಮೆಯಾಯಿತು. ಈಗಂತೂ ಪ್ರತಿ ವರ್ಷಕ್ಕೆ ದನಗಳನ್ನು ತರುವುದು ಕೃಷಿ ಹಂಗಾಮಿನ ನಂತರ ಮಾರುವುದು ಮುಂದಿನ ವರ್ಷಕ್ಕೆ ಮತ್ತೆ ತರುವುದು ಇಂದಿನ ಅನಿವಾರ್ಯವಾಗಿದೆ. ಹಾಗಾಗಿ ರೈತರು ದನಗಳ ಖರೀದಿಗೆ ದನಗಳ ಜಾತ್ರೆಯನ್ನೇ ಅವಲಂಬಿಸಬೇಕು. ಪ್ರತೀ ವರ್ಷದ ರೈತರ ದನಗಳ ಅಗತ್ಯಗಳನ್ನು ಪೂರೈಸುವುದರಲ್ಲಿ ದನಗಳ ಜಾತ್ರೆಯ ಪಾಲು ಮಹತ್ವದ್ದಾಗಿದೆ.

ಜಾತ್ರೆಯ ಹಂಗಾಮು

ಬೇಸಿಗೆಯ ಕಾಲವೆಂದರೆ ಮಳೆಗಾಲಕ್ಕೆ ಮುನ್ನದ ಪೂರ್ವಭಾವಿ ಕೃಷಿಚಟುವಟಿಕೆಗಳ ಕಾಲ. ಹಾಗಾಗೇ ದನಗಳ ಜಾತ್ರೆಗಳೂ ಬೇಸಿಗೆಯಲ್ಲೇ ಸಂಪನ್ನಗೊಳ್ಳುತ್ತವೆ. ಜನವರಿ ಕಳೆದು ಮೇ ತಿಂಗಳು ಬರುವವರೆಗೂ ಅಲ್ಲಲ್ಲಿ ದನಗಳ ಜಾತ್ರೆ ನಡೆಯುತ್ತಿರುತ್ತದೆ. ಬೇಸಿಗೆ ಕಾಲದಲ್ಲಿ ಹಲವಾರು ಪ್ರಸಿದ್ಧ ದನಗಳ ಜಾತ್ರೆಗಳು ನಡೆಯುತ್ತಿರುತ್ತವಾದರೂ ಅವೆಲ್ಲವೂ ಒಂದಾದನಂತರ ಒಂದು ನಡೆಯುವಂತೆ ಒಂದು ಜಾತ್ರೆಯ ನಂತರ ಸೂಕ್ತ ದನಗಳು ಸಿಕ್ಕದಿದ್ದಲ್ಲಿ ಕೊಳ್ಳುವವರೂ ಮತ್ತು ಸೂಕ್ತ ಬೆಲೆ ದಕ್ಕದಿದ್ದಲ್ಲಿ ಮಾರಾಟಗಾರರು ಮತ್ತೊಂದು ಜಾತ್ರೆಗೆ ಸ್ಥಳಾಂತರಗೊಳ್ಳಲು ಸಮಯಾವಕಾಶವಿರುವಂತೆ ಆಯೋಜಿಸಲಾಗುತ್ತದೆ. ಹೆಚ್ಚಿನೆಲ್ಲ ದನಗಳ ಜಾತ್ರೆ ಜನವರಿಯಿಂದ ಅದರಲ್ಲೂ ಸಂಕ್ರಾಂತಿಯ ನಂತರ ಆರಂಭವಾಗುವುದಾದರೆ ದೇವರಗುಡ್ಡ ಅಥವ ಕುಲ್ಕುಂದಗಳಂತಹ ಕಡೆ ನವೆಂಬರಿನಲ್ಲೆ ಮುಕ್ತಾಯವಾಗುತ್ತದೆ.

ಎಷ್ಟೆ ಕೈಗಾರಿಕಾ ಕ್ರಾಂತಿ, ಐಟಿ, ಬಿಟಿ ಎಂದು ಹೇಳುತ್ತಾ ಬಂದರೂ ಭಾರತ ಇಂದಿಗೂ ಕೃಷಿಪ್ರಧಾನ ದೇಶ. ಅದಕ್ಕೆಂದೇ ಭಾರತದಾದ್ಯಂತ ದನಗಳ ಜಾತ್ರೆಗಳು ನಡೆಯುತ್ತಲೇ ಇರುತ್ತವೆ. ಬಿಹಾರದ ಸೋನೆಪುರಜಾತ್ರೆ, ರಾಜಾಸ್ಥಾನದ ಪುಷ್ಕರಜಾತ್ರೆ, ಆಗ್ರಾದ ಬಳಿ ನಡೆಯುವ ಬಟೇಶ್ವರ್ ಜಾತ್ರೆ, ಉತ್ತರಪ್ರದೇಶದ ಶಹಾಬಾದ್ ಜಾತ್ರೆಗಳು ಹೆಚ್ಚು ಪ್ರಸಿದ್ಧವಾದ ದನಗಳ ಜಾತ್ರೆಗಳು. ನಮ್ಮ ಕರ್ನಾಟಕದಲ್ಲಿ ಉದಾಹರಿಸುವುದಾದರೆ ಬಿಜಾಪುರ, ದೇವರಗುಡ್ಡ, ಹಾಸನ, ಬೇಲೂರು, ಔರಾದ, ದಾವಣಗೆರೆ, ಕುಲ್ಕುಂದ ಮೊದಲಾದಕಡೆ ನಡೆಯುವ ಜಾತ್ರೆಗಳು ಮುಖ್ಯವಾದವು.

ಕರ್ನಾಟಕದ ದನಗಳ ಜಾತ್ರೆಯಲ್ಲಿ ಕೃಷಿಯೋಗ್ಯ ಎತ್ತುಗಳು ಹಾಗೂ ಹಾಲುಕರೆಯುವ ಹಸುಗಳ ಮಾರಾಟ ಪ್ರಧಾನ ಚಟುವಟಿಕೆ. ಕೋಣಗಳಿಗೆ ಪ್ರಾಮುಖ್ಯ ಇರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಾತ್ರೆ ಅಲ್ಲವಾದರೂ ವಾರ್ಷಿಕವಾಗಿ ದೊಡ್ಡಪ್ರಮಾಣದಲ್ಲಿ ಕೋಣಗಳ ಸಂತೆ ನಡೆಯುತ್ತದೆ. ಅತ್ತ ರಾಜಾಸ್ಥಾನದ ಜಾತ್ರೆಗಳಲ್ಲಿ ಒಂಟೆಗಳ ಮಾರಾಟ ಪ್ರಧಾನವಾಗಿರುತ್ತದೆ. ಕಾರ್ತೀಕ ಹುಣ್ಣಿಮೆಯಂದು (ನವೆಂಬರ್ ತಿಂಗಳಿನಲ್ಲಿ) ನಡೆಯುವ ಬಟೇಶ್ವರ್ ಮತ್ತು ಸೋನೆಪುರ್‌ನ ಜಾತ್ರೆಗಳಲ್ಲಿ ದನಗಳ ಜೊತೆಗೆ ಅನೆಗಳ ವ್ಯಾಪಾರವೂ ನಡೆಯುತ್ತದಂತೆ. ಸೋನೇಪುರ್ ಜಾತ್ರೆಗೆ ಬಹಳ ಪುರಾತನವಾದ ಇತಿಹಾಸವಿದ್ದು ಚಂದ್ರಗುಪ್ತ ಮೌರ್ಯ ಸಹಾ ತನಗೆ ಬೇಕಾದ ಆನೆಗಳ ಕೊಳ್ಳುವಿಕೆಗೆ ಸ್ವತಹ ಸೋನೇಪುರದ ದನಗಳ ಜಾತ್ರೆಗೆ ಭೇಟಿ ನೀಡುತ್ತಿದ್ದನಂತೆ.

…ಅದೆಲ್ಲಾ ಹಳೆಯ ವೈಭವ, ಈಗ ಏನೇ ಆದರೂ ದನಗಳ ಜಾತ್ರೆಗೆ ಮೊದಲಿದ್ದ “ಖದರ್” ಇಲ್ಲವೇ ಇಲ್ಲ. ಅರಸೀಕೆರೆ, ಹನಿಕೆ, ಗಂಡಸಿ, ಹಾಸನ, ಹಗರಿಬೊಮ್ಮನಹಳ್ಳಿ ಇತ್ಯಾದಿ ಹಲವಾರು ಕೇಂದ್ರಗಳಲ್ಲಿ ವಾರದ ದನಗಳ ಸಂತೆ ನಡೆಯುತ್ತದೆ. ಅಲ್ಲಿಗೂ ರೈತಾಪಿ ಜನಗಳು ದನಗಳನ್ನು ಕೊಳ್ಳಲು ಬರುತ್ತಾರೆ. ಆದರೂ ಅಂತಹ ಸಾಮಾನ್ಯ ವಾರದ ಸಂತೆಗಳಿಗೂ ವಾರ್ಷಿಕವಾಗಿ ನಡೆಯುವ ದನಗಳ ಜಾತ್ರೆಗೂ ಅಜಗಜಾಂತರ ವ್ಯತ್ಯಾಸವಿದೆ.

ಮಾರಾಟದ ನಂತರ ಹೊಸ ಒಡೆಯನ ಮೊಗದಲ್ಲಿ ನಗು

ದನಗಳ ಜಾತ್ರೆ ಎಂದರೆ ಅದೊಂದು ವರ್ಣರಂಜಿತ ಉತ್ಸವವೇ ಆಗಿರುತ್ತದೆ.

ಕಲೆ, ಸಾಹಿತ್ಯ, ಮನರಂಜನೆ ಎಲ್ಲವುಗಳ ಸಂಗಮ ಅದು. ದನಗಳ ಮಾರಾಟವಷ್ಟೇ ಅಲ್ಲದೆ ಎಲ್ಲರೀತಿಯ ಕರಕುಶಲ ವಸ್ತುಗಳ, ಗ್ರಾಮೋದ್ಯೋಗದ ಉತ್ಪನ್ನಗಳ ಮಾರಾಟ ಕೇಂದ್ರ ಸಹಾ. ಹಲವಾರು ಜಾನಪದ ನೆಲೆಗಟ್ಟಿನ ಕಾರ್ಯಕ್ರಮಗಳು ನಡೆಯುವ ಸ್ಥಳ. ನಾನೇ ನೋಡಿ ಅನುಭವಿಸಿರುವಂತೆ ನನ್ನ ಹುಟ್ಟೂರಾದ ಬೇಲೂರು ಮತ್ತು ಸನಿಹದ ಹಾಸನದ ದನಗಳ ಜಾತ್ರೆ ಒಂದು ದೇವರ ಉತ್ಸವದಂತೆಯೇ ಜನಾಕರ್ಷಕವಾಗಿರುತ್ತಿತ್ತು. ಜಾತ್ರೆಗೆಂದೇ ಮೀಸಲಾಗಿರುತ್ತಿದ್ದ ವಿಶಾಲವಾದ ಬಯಲಿನಲ್ಲಿ ಕನಿಷ್ಠ  ಒಂದು ತಿಂಗಳಿನಿಂದ ಹಿಡಿದು ಎರಡು ತಿಂಗಳವರೆಗೂ ವಿಸ್ತರಿಸಿಕೊಳ್ಳುತ್ತಿದ್ದ ಆ ಜಾತ್ರೆಗಳಲ್ಲಿ ಏನಿರುತ್ತಿತ್ತು ಏನಿರುತ್ತಿರಲಿಲ್ಲ? ದನಗಳ ಮಾರಾಟದ ಜೊತೆಗೆ ದನಕಟ್ಟುವ ಹುರಿಹಗ್ಗ, ಬಲವಾದ ಮೂಗುದಾರಗಳು ಅಲ್ಲಿ ಮಾರಾಟವಾಗುತ್ತವೆ. ದನಗಳ ಗೊರಸಿಗೆ ಹಲ್ಲೆ ಹೊಡೆಯುವವರೂ ಇರುತ್ತಾರೆ, ಹಳ್ಳಿಗರಿಗೆ ಮನರಂಜನೆಗಾಗಿ ನಾಟಕಗಳು, ಗ್ರಾಮೀಣ ಯುವಕ ಯುವತಿಯರಿಗೆ ಸ್ಪರ್ಧೆಗಳು, ಮ್ಯಾಜಿಕ್ ಶೋ, ತೊಗಲು ಬೊಂಬೆಯಾಟ, ಖರ್ಜೂರ ಮತ್ತು ಹಣ್ನಿನ ಅಂಗಡಿಗಳು, ದನಗಳ ಸ್ಪರ್ಧೆ, ಉತ್ತಮ ರಾಸುಗಳಿಗೆ ಬಹುಮಾನ, ಪಶುವೈದ್ಯರೊಡನೆ ಚರ್ಚೆ, ರೈತರುಗಳ ಸ್ನೇಹ ಸಮ್ಮಿಲನ ಇವೆಲ್ಲಾ ಸೇರಿ ರೈತಾಪಿ ಜನಗಳು ಜಾತ್ರೆಯನ್ನು ತೀವ್ರ ತವಕದಿಂದ ಕಾಯುವಂತೆ ಮಾಡುತ್ತಿದ್ದವು. ಯಾವುದೇ ದನಗಳ ಜಾತ್ರೆಯಾಗಲಿ ಆ ಪ್ರದೇಶದ ಸಾಂಸ್ಕೃತಿಕ ವೈಭವವನ್ನು ಅಲ್ಲಿ ಕಾಣಬಹುದು. ಆಯಾ ಪ್ರದೇಶದ ಸಾಂಸ್ಕೃತಿಕ ಆಚರಣೆಗಳೂ ಕಾಣಬರುತ್ತವೆ. ಪ್ರಾಣಿಗಳ ಓಟದ ಸ್ಪರ್ಧೆ, ಕೋಳಿ ಆಟ, ಯುವಕಯುವತಿಯರಿಗೆ ಹಗ್ಗಜಗ್ಗಾಟದಂತಹ ಸ್ಪರ್ಧೆಗಳು ನಡೆಯುತ್ತವೆ. ಜೊತೆಗೆ ಆಯಾ ಪ್ರದೇಶದ ಮುಖ್ಯ ಬೆಳೆಯ ಮಾರಾಟವೂ ನಡೆಯುತ್ತದೆ.

ದನಗಳ ಆಯ್ಕೆಯಲ್ಲಿ ರೈತರು ಪರಂಪರಾಗತ ಮಾರ್ಗಗಳನ್ನೆ ಇನ್ನೂ ನೆಚ್ಚಿಕೊಂಡಿದ್ದಾರೆ. ಪಶುವೈದ್ಯರ ಹಂಗಿಲ್ಲದೆ ಜಾನುವಾರುಗಳ ಕಾಲಿನ ಸುಳಿ, ಭುಜದ ಸುಳಿ, ಬಾಲದ ಸುಳಿ, ಕುತ್ತಿಗೆ ಕೆಳಗಿನ ಗಂಗೆದೊಗಲು ಇವುಗಳನ್ನು ಪರಿಶೀಲಿಸಿ ದನಗಳಲ್ಲಿ ಜೋಳಿಗೆ, ಶೀಲಕಂಟಕ, ಎಡಮೋಟು ಮೊದಲಾದ ಹೀನಸುಳಿಗಳು ಇಲ್ಲ ಎಂದು ಖಚಿತಪಡಿಸಿಕೊಂಡು ಅದೃಷ್ಟ ತರುವ ನಾಗಪಾಣಿ, ರಾಶಿಸುಳಿಗಳಿರುವ ದನಗಳನ್ನು ಆಯ್ದುಕೊಳ್ಳುತ್ತಾರೆ. ದನಗಳ ಖಚಿತ ವಯಸ್ಸಿಗೆ ಹಲ್ಲು ಚಿಲಿದು ನೋಡುವ ಕ್ರಮವೆ ಇನ್ನೂ ಚಾಲ್ತಿಯಲ್ಲಿದೆ! ಅಲ್ಲಿನ ವ್ಯವಹಾರವೂ ಕುತೂಹಲಕರವಾಗಿರುತ್ತದೆ. ಬಾಯಿಮಾತಿನ ಬಹಿರಂಗ ಚರ್ಚೆಯ ಮೂಲಕ ಯಾವ ವ್ಯವಹಾರವೂ ಇಲ್ಲ. ಕೊಳ್ಳುವವ ಮಾರುವವ ಇಬ್ಬರೂ ಕೈಗಳನ್ನು ಟವೆಲ್‌ನಿಂದ ಮುಚ್ಚಿಕೊಂಡು ಬೆರಳುಗಳನ್ನು ವೈವಿಧ್ಯಮಯವಾಗಿ ಸ್ಪರ್ಶಿಸುವ ಮೂಲಕ ಬೆಲೆ ತೀರ್ಮಾನಿಸುತ್ತಾರೆ! ಅದೇನು ಸಂಖ್ಯಾಶಾಸ್ತ್ರವೋ?

ಇತ್ತೀಚೆಗೆ “ದನಗಳ ಜಾತ್ರೆ”ಯ ವರ್ಚಸ್ಸು ಕಡಿಮೆಯಾಗುತ್ತಿದೆ. ತಿಂಗಳು ಅಥವಾ ಎರಡು ತಿಂಗಳುಗಳಷ್ಟು ದೀರ್ಘವಾಗಿ ನಡೆಯುತ್ತಿದ್ದ ಜಾತ್ರೆಗಳು ಈಗಂತೂ ಹದಿನೈದು ದಿನಗಳಿಗೆ ಕುಸಿದಿದೆ. ಮೊದಲೆಲ್ಲ ಎಪ್ಪತ್ತೈದು-ಎಂಭತ್ತು ಸಾವಿರ ಜೋಡಿ ಜಾನುವಾರುಗಳು ಬರುತ್ತಿದ್ದ ಜಾತ್ರೆಗಳಲ್ಲಿ ಇಂದು ಕೆಲವೇ ಸಾವಿರ ಜಾನುವಾರುಗಳನ್ನು ಕಾಣುವುದೂ ಕಷ್ಟವಾಗಿದೆ. ಬಿಜಾಪುರದ ಸಿದ್ದೇಶ್ವರ ಜಾತ್ರೆ ಮತ್ತು ದೇವರಗುಡ್ಡದ ದೊಡ್ಡ ಜಾತ್ರೆಗಳಂತಹ ಬೆರಳೆಣಿಕೆಯ ಜಾತ್ರೆಗಳು ತಮ್ಮ ವೈಭವವನ್ನು ಅಷ್ಟಿಷ್ಟು ಉಳಿಸಿಕೊಂಡಿವೆ. ಅತ್ಯಂತ ಹೆಸರುವಾಸಿಯಾಗಿದ್ದ ಹಾಸನ ಮತ್ತು ಕುಲ್ಕುಂದದ (ಸುಬ್ರಮಣ್ಯದ) ಜಾತ್ರೆಗಳು ನಾಮ್ಕೇವಾಸ್ತೆ ಎಂಬಂತಾಗಿ ವಾರಕ್ಕೆ ಮುಕ್ತಾಯವಾಗುತ್ತಿವೆ. ಬೇಲೂರಿನಂತಹ ದೊಡ್ಡಮಟ್ಟದ ಜಾತ್ರೆ ನಿಂತೇಹೋಗಿದೆ.  ಇದಕ್ಕೆ ಜಾತ್ರೆಗಳ ಜನಪ್ರಿಯತೆ ಕುಸಿದಿದೆ ಎಂಬ ಕಾರಣ ಕೊಡಲಾಗುತ್ತದಾದರೂ ಒಳ ಕಾರಣಗಳು ಹಲವಾರಿವೆ.

ಜಾತ್ರೆಗಳಿಗೆ ಮೀಸಲಿಟ್ಟ ವಿಶಾಲ ಬಯಲುಗಳು ಕೆಲವೆಡೆ ನೆಲಗಳ್ಳರ ಪಾಲಾಗಿವೆ. ಅಲ್ಲಿ ಜಾತ್ರೆ ನಡೆಸಲು ಜಾಗವೇ ಇಲ್ಲ!! ಕರಾವಳಿಯ ಪ್ರದೇಶದಲ್ಲಿ ಸದಾ ಗಲಭೆಗೆ ಕಾರಣವಾಗುವ ಗೋವಧೆಗೆ ಕುಲ್ಕುಂದ ದನಗಳ ಜಾತ್ರೆ ಪ್ರಚೋದನೆ ನೀಡುತ್ತದೆ ಎಂದು ಕೆಲವು ಸಂಘಟನೆಗಳು ಆಪಾದಿಸುತ್ತವೆ. ಪ್ರತಿ ವರ್ಷ ಕುಲ್ಕುಂದ ಜಾತ್ರೆಯ ಸಮಯದಲ್ಲಿ ಈ ಕಾರಣಕ್ಕೆ ಗದ್ದಲಗಳಾಗುತ್ತಿರುತ್ತವೆ. ವ್ಯವಸಾಯದ ಉದ್ದೇಶಕ್ಕೆ ದನಗಳನ್ನು ಕೊಳ್ಳಲು ಬರುವವರ ಜೊತೆಗೆ ಗೋಹತ್ಯೆಗಾಗಿ ದನಗಳನ್ನು ಕೊಳ್ಳುವವರೂ ಬರುತ್ತಾರೆಂದು ಗಲಾಟೆಗಳಾಗುತ್ತಿದ್ದವು. ಅದಕ್ಕಾಗಿ ಜಮೀನಿನ ಒಡೆತನವಿರುವ ರೈತರು ಮಾತ್ರ ದನಗಳನ್ನು ಖರೀದಿಸಬೇಕೆಂದು ನಿಯಮ ಮಾಡಲಾಗಿದೆ. ಆದರೂ ರೈತರೆಂದು ತೋರಿಸಿಕೊಳ್ಳಲು ಖೋಟಾ ಪಹಣಿ ಹಿಡಿದುಕೊಂಡು ಬರುವವರಿಗೇನೂ ಕೊರತೆ ಇಲ್ಲ. ಈ ಕಾರಣದಿಂದ ಜಾತ್ರೆಯನ್ನು ಇತ್ತೀಚಿನ ವರ್ಷಗಳಲ್ಲಿ ಒಂದು ವಾರಕ್ಕೆ ಮುಗಿಸುತ್ತಿರುವುದಾಗಿ ಸುಬ್ರಮಣ್ಯದ ಜಾತ್ರೆಯ  ಪ್ರವರ್ತಕರೇ ಹೇಳಿದ್ದರು. ದನಗಳ ಸಾಗಣೆಯಲ್ಲೂ, ನಿರ್ವಹಣೆಯಲ್ಲೂ ಹಲವಾರು ನಿಯಂತ್ರಣ ನಿರ್ಬಂಧಗಳನ್ನು ಹೇರುವುದರಿಂದ ದನಗಳ ಮಾರಾಟಗಾರರು ಮತ್ತು ಆಯ್ಕೆಗೆ ಮೊದಲಿನಷ್ಟು ವ್ಯಾಪಕ ಅವಕಾಶಗಳಿಲ್ಲದೆ ಕೊಳ್ಳುವವರು  ಸಹಾ ದನಗಳ ಜಾತ್ರೆಯಲ್ಲಿ ಭಾಗವಹಿಸಲು ನಿರುತ್ಸಾಹ ತೋರುವುದರಿಂದ ಜಾತ್ರೆಗಳು ಬಣ್ಣಕಳೆದುಕೊಳ್ಳುತ್ತಾ ನಿಧಾನಕ್ಕೆ ಸೊರಗುತ್ತಿವೆ.

ಗ್ರಾಮೀಣ ಆರ್ಥಿಕ ವ್ಯವಸ್ಥೆ

ಕೃಷ್ಯುತ್ಪನ್ನಗಳ ಮಾರಾಟವನ್ನು ಹೊರತುಪಡಿಸಿದರೆ ದನಗಳ ಸಾಕುವಿಕೆಯನ್ನು ರೈತಾಪಿಜನಗಳ ಪ್ರಮುಖ ಆರ್ಥಿಕ ಚಟುವಟಿಕೆ ಎಂದೇ ಪರಿಗಣಿಸಬಹುದಾಗಿದೆ. ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು, ಬರಗಾಲ ಮತ್ತು ಮೇವಿನ ಅಲಭ್ಯತೆಯಂತಹ ಕಾರಣಗಳಿಂದ ದನಗಳ ಸಾಕುವಿಕೆ ಕಷ್ಟಕರ ಎಂಬ ಅಭಿಪ್ರಾಯವಿದ್ದರೂ ಇಂದಿಗೂ ಗ್ರಾಮೀಣವಲಯದಲ್ಲಿ ದನಗಳು ರೈತರ ಜೀವನಾಡಿಯೇ ಆಗಿವೆ. ರಾಸುಗಳ ಮಾರಾಟವಿರಲಿ, ಹೈನುಗಾರಿಕೆಯ ಉತ್ಪನ್ನ ಹಾಗೂ ಗೊಬ್ಬರದಂತಹ ಉಪ ಉತ್ಪನ್ನಗಳ ಮಾರಾಟವಾಗಿರಲಿ ಅದು ರೈತರ ಆದಾಯದ ಗಣನೀಯ ಭಾಗವೇ ಆಗಿದೆ. ಹಾಗಾಗಿ ದನಗಳ ವಹಿವಾಟು ನಿರಂತರ ಚಟುವಟಿಕೆಯಾಗಿಯೇ ಉಳಿದಿದೆ. ಜಾತ್ರೆಗಳಲ್ಲಿ ದನಗಳ ಜೊತೆಗೆ ಇತರ ವಾಣಿಜ್ಯ ವಹಿವಾಟುಗಳಿರುತ್ತವೆ, ಕೃಷಿ ಉಪಕರಣಗಳ ಮಾರಾಟವೂ ಇರುತ್ತದೆ. ಜೊತೆಗೆ ನಾಟಕ ತಂಡಗಳೂ ಕಾಣಿಸಿಕೊಳ್ಳುತ್ತವೆ, ಹೋಟೆಲುಗಳಂತೂ ಇದ್ದೆ ಇರುತ್ತವೆ. ಒಟ್ಟಾರೆ ದನಗಳ ಜಾತ್ರೆ ಹಲವಾರು ಆರ್ಥಿಕ ಚಟುವಟಿಕೆಗಳಿಂದ ಕೂಡಿ ಹಲವರ ಜೀವನೋಪಾಯಕ್ಕೆ ದಾರಿಯಾಗಿರುತ್ತದೆ.

ಹಲ್ಲಿನ ಲೆಖ್ಖ ನೋಡಿ ದನದ ಪ್ರಾಯದ ನಿರ್ಧಾರ.

ಬರಗಾಲದ ಸಮಸ್ಯೆಯಿಂದ ದನಗಳ ಬೆಲೆಯಲ್ಲಿ ಗಣನೀಯ ಕುಸಿತವಾಗಿದೆ ಎಂಬುದು ಸಾಮಾನ್ಯ ಅಭಿಪ್ರಾಯವಾದರೂ ದನಗಳ ಜಾತ್ರೆಗೆ ಹೋದರೆ ಅಲ್ಲಿ ದನಗಳು ಮಾರಾಟವಾಗುವ ಬೆಲೆ ಅಚ್ಚರಿ ಹುಟ್ಟಿಸುತ್ತದೆ. ಮಲೆನಾಡು ಗಿಡ್ಡದಂತಹ ಸ್ಥಳೀಯ ತಳಿಗಳೆ ಹತ್ತು ಸಾವಿರಕ್ಕಿಂತ ಕಡಿಮೆಗೆ ಸಿಕ್ಕುವುದಿಲ್ಲ. ಇನ್ನು “ಜಾತಿದನ”ಗಳ ಬೆಲೆಯಂತೂ ಕಲ್ಪನಾತೀತ! ಹಳ್ಳಿಕಾರ್‌ನಂತಹ ಬಲಿಷ್ಠ ತಳಿಗಳ ಬೆಲೆ ಐವತ್ತು ಸಾವಿರ ರುಪಾಯಿಗಳಿಗಿಂತ ಮೇಲೆಯೇ. ಕರ್ನಾಟಕ ಮತ್ತು ಆಂಧ್ರದ ರೈತರ ಪ್ರಮುಖ ದನಗಳ ಸಂತೆಯಾದ ಔರಾದ್ ನಲ್ಲಿ ಮಾರಾಟವಾಗುವ ಅಲ್ಲಿನ ವಿಶಿಷ್ಟ ತಳಿಯಾದ ದೇವಣಿ ಜಾತಿಯ ಎತ್ತುಗಳ ಬೆಲೆ ಒಂದೂವರೆ ಲಕ್ಷವನ್ನೂ ದಾಟುತ್ತದಂತೆ!. ಇಷ್ಟಾಗಿ ಮಾರಾಟಗಾರರೇನೂ ಅತೀ ಲಾಭ ಮಾಡಿಕೊಳ್ಳುವುದಿಲ್ಲ. ಉತ್ತಮ ತಳಿಗಳ ಮೇವು ಹಾಗೂ ಔಷಧಗಳ ಖರ್ಚೇ ಸಾಕಷ್ಟಿರುತ್ತದೆ. ಜಾತ್ರೆಯಿಂದ ಜಾತ್ರೆಗೆ ಸಾಗಣಿಕೆ ಖರ್ಚು, ಸಾಗಾಟದ ಕಾಲದಲ್ಲಿ ಅಫಘಾತಗಳಿಂದ ಸಾವು ಅಥವಾ ದೈಹಿಕ ನ್ಯೂನತೆಗಳಿಗೆ ಈಡಾಗುವುದು, ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಿಂದ ದನಗಳನ್ನು ಕಾಪಾಡಿಕೊಳ್ಳುವುದು ಇವೆಲ್ಲದರಿಂದ ದನಗಳ ಮಾರಾಟಗಾರರಿಗೂ ಅಧಿಕ ವೆಚ್ಚದ ಹೊರೆ ತಲೆಯ ಮೇಲೆ ಇರುತ್ತದೆ. ತಳಿ ಉತ್ತಮವಾದಷ್ಟೂ ನಿರ್ವಹಣೆಯ ವೆಚ್ಚ ಅಧಿಕ. ಮಾರಾಟ ತಡವಾದರೆ ಖರ್ಚು ಮತ್ತೂ ಹೆಚ್ಚು. ಅದನ್ನೆಲ್ಲಾ ಕೊಳ್ಳುವವರ ತಲೆಗೇ ವರ್ಗಾಯಿಸುವುದರಿಂದ ಜಾನುವಾರುಗಳ ಬೆಲೆ ಹೆಚ್ಚಿಸುವುದು ಅನಿವಾರ್ಯ. ದನಗಳ ಜಾತ್ರೆಯ ಸಮಯದಲ್ಲಿ ದಲ್ಲಾಲಿಗಳ ದರ್ಬಾರೂ ಜೋರಾಗಿರುತ್ತದೆ. ದನ ಮಾರುವವನಿಗೂ-ಕೊಳ್ಳುವವನಿಗೂ ಮಧ್ಯವರ್ತಿಗಳ ಅವಶ್ಯಕತೆ ಇದ್ದೆ ಇರುತ್ತದೆ. ಇಬ್ಬರ ಅನಿವಾರ್ಯತೆಯನ್ನು ದುರುಪಯೋಗಗೊಳಿಸಿಕೊಳ್ಳುವ ದಲ್ಲಾಲಿಗಳು ತಮ್ಮ ಜೇಬನ್ನು ತುಂಬಿಸಿಕೊಂಡುಬಿಡುತ್ತಾರೆ.