(ಕ್ರಿ.ಶ. ೧೯೦೪-೧೯೭೯)
(ಅಪಾಯರಹಿತ ಹೃದಯ ಚಿಕಿತ್ಸಾ ವಿಧಾನ)

ಹೃದಯ ಕಮಲದ ಹೂವಿನಂತೆ ಸೂಕ್ಷ್ಮವಾದ, ಆದರೆ ಜೀವಕ್ಕೆ ಜೀವವೇ ಆಗಿರುವ ಅತ್ಯಮೂಲ್ಯವಾದ ಒಳ ಅಂಗ. ಅದರ ಕಾರ್ಯ ಮತ್ತು ದೋಷಗಳನ್ನು ಗುರುತಿಸುವುದು ಎಷ್ಟು ಕಷ್ಟವಾಗಿತ್ತೋ ಅಷ್ಟೇ ಕಠಿಣವಾಗಿತ್ತು ಅದರ ಚಿಕಿತ್ಸಾ ವಿಧಾನ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಜೀವಕ್ಕೆ ಅಪಾಯ. ಅದಕ್ಕೆ ಅಪಾಯರಹಿತವಾದ ಚಿಕಿತ್ಸಾ ವಿಧಾನವನ್ನು ಕಂಡುಹಿಡಿದ ವೈದ್ಯವಿಜ್ಞಾನಿ, ವರ್ನರ್ ಫಾರ್ಸ್‌ಮನ್.
ವರ್ನರ್ ಫಾರ್ಸ್‌ಮನ್ ೧೯೦೪ರಲ್ಲಿ ಜನಿಸಿದರು. ಬರ್ಲಿನ್ನಿನ ಫ್ರೆಡರಿಕ್ ವಿಲ್‌ಹೆಲ್ಮ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಪದವೀಧರರಾದರು. ೨೫ನೆಯ ವಯಸ್ಸಿನಲ್ಲಿ ವೈದ್ಯ ವೃತ್ತಿಯನ್ನು ಕೈಗೊಂಡರು. ಆತ ಪ್ರಯೋಗಶೀಲ ವ್ಯಕ್ತಿ. ತನಗೆ ಸರಿಯೆಂದು ಖಚಿತವಾಗಿ ತೋಚಿದಂಥ ಪ್ರಯೋಗವನ್ನು ಯಾವ ಬೆಲೆ ತೆತ್ತಾದರೂ ಮಾಡಿಯೇ ತೀರಬೇಕೆಂಬ ಛಲಗಾರ. ಮೂತ್ರನಾಳದಲ್ಲಿ ತೂರಿಸುವ ಸೂಕ್ಷ್ಮ ನಳಿಗೆಯನ್ನು ಕಂಡಾಗ ಅವರು ಲಕ್ಷ್ಯ ಹೃದಯ ಚಿಕಿತ್ಸೆಯ ಕಡೆಗೆ ಹೊರಳಿತು. ಮೊಳಕೈಯ ಮುಂಭಾಗದಲ್ಲಿರುವ ರಕ್ತನಾಳದ (ವೇಯ್ನ) ಮೂಲಕ ತೂರಿಸಿದರೆ ಅದು ಖಂಡಿತ ಹೃದಯವನ್ನು ತಲುಪಲೇಬೇಕಲ್ಲ ಎಂದು ಊಹಿಸಿದರು. ಇದು ಸಾಧ್ಯವಾದರೆ ಹೃದಯ ಚಿಕಿತ್ಸಾ ಕಾರ್ಯವೂ ಸುಲಭವಾಗುವುದೆಂಬ ದೃಢವಾದ ನಂಬಿಕೆ. ಅಂಥ ಚಿಕಿತ್ಸೆ ಮಾಡಲು ಅವಕಾಶ ನೀಡಬೇಕೆಂದು ತಾನು ಕಾರ್ಯ ಮಾಡುತ್ತಿದ್ದ ಶಸ್ತ್ರಕ್ರಿಯಾ ವಿಭಾಗದ ಮುಖ್ಯಸ್ಥ ರಿಚರ್ಡ್ ಶಿಡರ್ಗೆ ಆತ ಕೇಳಿದಾಗ ಆ ಅದಿಕಾರಿಗೆ ಅದು ತಮಾಷೆಯಾಗಿ ಕಂಡಿತು. ಅಂತಹ ಕಾರ್ಯ ಬೇಡವೆಂದು ಕಟ್ಟಪ್ಪಣೆ ಮಾಡಿದ. ಆದರೆ ಫಾರ್ಸ್‌ಮನ್ ಛಲಗಾರ. ಶವದ ಮೊಳಕೈ ಮುಂಭಾಗದ ರಕ್ತನಾಳದ ಮೂಲಕ ಅಂತಹ ನಳಿಗೆಯನ್ನು ಹೃದಯಕ್ಕೆ ಸೇರಿಸುವಲ್ಲಿ ಸಫಲರಾದರು. ತರುವಾಯ ಆತ ಸ್ವತಃ ತಮ್ಮ ಮುಂಗೈಯ ಮುಂಭಾಗದ ರಕ್ತನಾಳದಲೆ ಅದನ್ನು ತೂರಿಸಕೊಂಡು ತಾವೇ ಪ್ರಯೋಗಪಶುವಾದರು. ಪರಿಣಾಮ ನಿರೀಕ್ಷಿಸಿದೆ ಆಗಿತ್ತು. ಆದರೆ ಆಗ ಯಾವ ವಿಜ್ಞಾನಿಗಳೂ ಅವರ ಪ್ರಯೋಗವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸುಮಾರು ೨೭ ವರ್ಷಗಳು ಕಳೆದವು. ಫಾರ್ಸ್‌ಮನ್ ಅದನ್ನು ಬಹುತೇಕ ಮರೆತೇ ಬಿಟ್ಟಿದ್ದರು. ೧೯೫೬ರಲ್ಲಿ ಕೊರ್ನಾಂಡ್ ಮತ್ತು ರಿಚರ್ಡ್‌ಎಂಬವರ ಜತೆ ಅವರಿಗೆ ನೊಬೆಲ್ ಪಾರಿತೋಷಕ ಬಂದಾಗ ಅವರಿಗೇ ಆಶ್ಚರ್ಯ! ಅವರು ಕೈಬಿಟ್ಟಿದ್ದ ಪ್ರಯೋಗವನ್ನು ಬೇರೆ ವಿಜ್ಞಾನಿಗಳು ಮುಂದುವರಿಸಿ ಅದರ ಮಹತ್ವವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು.
ನಳಿಗೆ ಹೃದಯ ರೋಗನಿದಾನದಲ್ಲಿ ಫಾರ್ಸ್‌ಮನ್‌ರ ಅವಿಷ್ಕಾರ ಅತ್ಯಂತ ಉಪಯುಕ್ತವಾದ, ಅಪಾಯರಹಿತವಾದ ಸಾಧನೆವೆಂದು ಮಾನ್ಯ ಮಾಡಲ್ಪಟ್ಟಿದೆ.
ಜಗತ್ತನ್ನು ವಿಸ್ಮಯಗೊಳಿಸುವಂಥ ಪ್ರಯೋಗ ಮಾಡಿದ ವರ್ನರ್ ಫಾರ್ಸ್‌ಮನ್ ೧೯೭೯ರಲ್ಲಿ ನಿಧನಹೊಂದಿದರು.