ಎಲ್ಲೋ ಯಾರೋ ಒತ್ತಿದರು ಸ್ವಿಚ್ಚು ;
ಇಲ್ಲಿ ಈ ಬೋಳು ಬಯಲಲ್ಲಿ
ಹಠಾತ್ತನೆ ಮರಮರದ ಮೈಯಲ್ಲಿ
ಹಳದಿ ಹೂವಿನ ಹುಚ್ಚು,
ಅಥವಾ ಉರಿದಂತೆ ಬಣ್ಣದ ಕಿಚ್ಚು
ಮಟಮಟ ಮಧ್ಯಾಹ್ನದಲ್ಲಿ.

ತಂಪಾಗಿ ಉರಿವ ಈ ಬೆಂಕಿಯ ಕೆಳಗೆ
ಮೈಕಾಯಿಸಿಕೊಳ್ಳುತ್ತಿದ್ದಾರೆ
ಹುಡುಗ-ಹುಡುಗಿಯರು
ಸಲ್ಲಾಪ ನಡೆಸುತ್ತ.
ಪಾಪ, ಗೊತ್ತಿಲ್ಲ ಅವರಿಗೆ, ಮೇಲಿನ ಬಣ್ಣ
ಕೆಲವು ದಿನಕ್ಕೇ ಉದುರಿ, ಮತ್ತೆ ಮರ
ಬೋಳಾಗುವುದು ; ಬೇರಿಂದ ಕೊಂಬೆಗೆ
ನೆಗೆದ ಈ ಉತ್ಸಾಹ ಕೆಲವುದಿನ ಹಾರಾಡಿ
ಕೆಳಕ್ಕೆ ಉದುರಿ, ತರಗಾಗುತ್ತ ಬಾಡುವುದು ;
ಹೀಗೆ ಬಾಡುತ್ತಾ ಬಾಡುತ್ತಾ ಕರಗಿ ಸಣ್ಣಾಗಿ
ಮಣ್ಣಾಗಿ ಬಿರುಮಳೆಗೆ ಕೊಚ್ಚಿ ಹೋಗುವುದು
ಗೊತ್ತಿಲ್ಲ ಅವರಿಗೆ.

ಗೊತ್ತಿರಲಿ ಗೊತ್ತಿಲ್ಲದಿರಲಿ, ಹೀಗೇ
ವರ್ಷಕ್ಕೊಮ್ಮೆ, ಯಾರೊ ಹಾಕಿದ ಹಾಗೆ ಸ್ವಿಚ್ಚು
ಝಗ್ಗನೆ ಹತ್ತಿ ಉರಿಯುತ್ತದೆ
ಮರಮರದ ಮೈಯಲ್ಲಿ
ಹಳದಿ ಹೂವಿನ ಹುಚ್ಚು.