ಬಾನಂಗಳದಿಂದ ಮಳೆಮುತ್ತು ಉದುರತೊಡಗಿದಂತೆ ಮರುಹುಟ್ಟು ಪಡೆಯುವ ಹಲವಾರು ಸಸ್ಯಗಳು ಮಳೆಗಾಲದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತವೆ. ಧೋ ಎಂದು ಮಳೆ ಸುರಿಯತೊಡಗಿದಂತೆ ಹಸಿರೊಳಗಡಗಿದ್ದ ಮೊಗ್ಗುಗಳು ಅರಳಿ ಹೂಗಳಾಗುತ್ತವೆ.ಅಂಗಳದ ಮೂಲೆ,ಹೂದೋಟ,ಕಾಡುಗಳಲ್ಲಿ ಅರಳುವ ವೈವಿಧ್ಯಮಯ ಬಣ್ಣ, ಆಕಾರಗಳ ಹೂಗಳ ಸೌಂದರ್ಯ ಕಣ್ಮನ ಸೆಳೆದು ತಣಿಸುತ್ತವೆ. ಎಷ್ಟೋ ಹೂವಿನ ಗಿಡಗಳಿಗೆ ಮಳೆ ಬಂದರೆ ಮಾತ್ರ ಪುನರ್ಜನ್ಮ. ಮಣ್ಣಿನಲ್ಲಿ ಅಡಗಿರುವ ಗೆಡ್ಡೆಗಳು ಮೊಳಕೆಯೊಡೆದು ಮೂಡುವುದು ಕಾದನೆಲ ತಂಪಾದಾಗಲೇ. ಮತ್ತೆ ಕೆಲವು ಮಳೆಗಾಲದಲ್ಲಷ್ಟೇ ಅರಳಿ ಘಮ ಘಮಿಸುವ ಪುಷ್ಪಗಳು.

ಹಾಗೆ ನೋಡಿದರೆ ಸಸ್ಯ ಜೀವನ ವಿಧಾನದಲ್ಲಿ ಹೂಬಿಡುವುದು ಒಂದು ಸಾಮಾನ್ಯವಾದ ಪ್ರಕ್ರಿಯೆ. ಹಾಗೆಂದು ವರ್ಷದ ಎಲ್ಲಾ ಅವಧಿಗಳಲ್ಲಿ ಹೂವರಳಿ ಕಂಗೊಳಿಸುವ ಸಸ್ಯಗಳು ಅಪರೂಪ.ವಿವಿಧ ಋತುಮಾನಗಳಿಗನುಗುಣವಾಗಿ ಅರಳುವ ಪುಷ್ಪ ಸಂಕುಲಗಳಿವೆ. ಚಳಿಗಾಲದಲ್ಲಿ ಕೆಲವು ಹೂಗಳು ಅರಳಿದರೆ ಹಲವು ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತವೆ.ಅಂತೆಯೇ ಮಳೆಗಾಲದಲ್ಲಿ ಅರಳಿ ಕಂಗೊಳಿಸುವ ಪುಷ್ಪಗಳೂ ಸಾಕಷ್ಟಿವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಕೆಲವು ವೈವಿದ್ಯಮಯ ಹೂಗಳು ಕಾಣಿಸಿಕೊಂಡರೆ ಮತ್ತೆ ಹಲವು ನಡುಮಳೆಗಾಲದಲ್ಲಿ ಅರಳಿ ತಮ್ಮ ಬೆಡಗನ್ನು ಪ್ರದರ್ಶಿಸುತ್ತವೆ. ನಡುಮಳೆಗಾಲದಲ್ಲಿ ಅರಳುವಹೂಗಳು ಕೇವಲ ಮನೆಯ ಹೂದೋಟಕಷ್ಟೇಸೀಮಿತವಲ್ಲ. ಬಹಳಷ್ಟು ಹೂಗಳು ಕಾಡು,ಬೆಟ್ಟ,ತೋಟ,ಗದ್ದೆ,ಬೇಲಿಗಳಲ್ಲಿ ಅರಳಿ ಸೌಂದರ್ಯಾಸಕ್ತರನ್ನು ಆಕರ್ಷಿಸುತ್ತವೆ.

ವರ್ಷಾಕಾಲದ ಆರಂಭದ ಮುನ್ಸೂಚನೆ ನೀಡುವ ಹೂಗಳಲ್ಲಿ ಸುವರ್ಣಿನಿ ಪುಷ್ಪ ಪ್ರಮುಖವಾದುದು. ವರ್ಷದ ಎಲ್ಲಾ ಅವಧಿಯಲ್ಲೂ ಅಜ್ಞಾತವಾಸ ಅನುಭವಿಸುವ ಈ ಸಸ್ಯ ಮೇ ತಿಂಗಳಾಂತ್ಯದಲ್ಲಿ ನೆಲದೊಳಗಿನಿಂದ ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಅದರ ತುದಿಯಲ್ಲಿ ಗೋಲಾಕಾರದ ಕೆಂಪು ಹೂ ಮೂಡುತ್ತದೆ. ಇದು ವೀಕ್ಷಣೆಗೆ ಬಲು ಸೊಗಸು. ನೆಲದೊಳಗೆ ಗೆಡ್ಡೆಗಳ ಸಮೂಹವಿದ್ದರಂತೂ ಬೆರಳೆಣಿಕೆಯ ಎಲೆಗಳನ್ನು ಬದಿಗೊತ್ತಿ ಒತ್ತೊತ್ತಾಗಿ ಸೊಬಗಿನಹೂಗಳು ಕಾಣಿಸಿಕೊಳುತ್ತವೆ.ಮಳೆಗಾಲದ ಮುನ್ಸೂಚನೆ ನೀಡುವ ಸುವರ್ಣಿನಿ ಅಲ್ಪಾಯುಷಿ. ಲಿಲ್ಲಿ ಜಾತಿಗೆ ಸೇರಿದ ಬಹುತೇಕ ಪುಷ್ಪಗಳು ಮಳೆಗಾಲ ಅರಂಭವಾಗುತ್ತದ್ದಂತೆ  ಕಾಣಿಸಿಕೊಳ್ಳುತ್ತವೆ. ಒತ್ತೊತ್ತಾದ ಗಿಡಸಮೂಹದಲ್ಲಿ  ನೆಲದಿಂದ ಒಂದಡಿಯೆತ್ತರದಲ್ಲಿ ಅರಳುವ ಲಿಲ್ಲಿ ವೈವಿದ್ಯಮಯ ವರ್ಣಗಳಲ್ಲಿ ಕಂಗೊಳಿಸುತ್ತದೆ.

ಸಾಮಾನ್ಯವಾಗಿ ನೆಲತಾವರೆ ಎಂದು ಕರೆಯುಲ್ಪಡುವ ಮೈಕ್ ಹೂ ಮನೆಯಂಗಳದ ಬೆಡಗಿನ ತುತ್ತೂರಿ. ತುತ್ತೂರಿಯಂತೆ ಕಾಣುವ ಈ ಆಕರ್ಷಕ ಹೂಗಳ ಆಯಸ್ಸು  ಕೆಲವೇ ದಿನಗಳು.ಮಳೆಗಾಲದ ಆರಂಭಿಕ ದಿನಗಳಲ್ಲಿ ಕಾಣಿಸಿಕಂಡ ಬಳಿಕ ಇದು ಗಿಡಸಹಿತ ಕಣ್ಮರೆಯಾಗುತ್ತದೆ. ಇದರ ಗೆಡ್ಡೆಗಳಿಗೆ ಸ್ವಲ್ಪ ಗೊಬ್ಬರದ ಅಂಶ ದೊರಕಿದರಂತೂ ಬೆಡಗಿನ ಆಕರ್ಷಕ ಹೂಗಳು ಚಾಚಿಕೊಂಡಿರುವುದನ್ನು ನೋಡುವುದೇ  ಒಂದು ಸೊಗಸು.

ಮಳೆಗಾಲ ಅರಂಭವಾದಾಗ ಜೂನ್-ಜುಲೈ  ತಿಂಗಳಲ್ಲಿ ಕಾಡಿನಲ್ಲಿ ಮರಗಳಲ್ಲಿ ಅರಳಿ ಕಂಗೊಳಿಸುವ ಸೀತೆಹೂ ಬಲು ಆಕರ್ಷಣೀಯ.  ಮಳೆ ಹೆಚ್ಚು ಬೀಳವಲ್ಲಿ ಮರಗಳ ಕೊಂಬೆ ರೆಂಬೆಗಳಲ್ಲಿ ತೂಗು ಬೀಳುವುದು ಇದರ ವೈಶಿಷ್ಟ್ಯ ಕನ್ನಡದಲ್ಲಿ ಸೀತಾಳಿ ಎಂಬ ಹೆಸರಿದೆ. ಸಿತ ಎಂದರೆ ಬಿಳಿ. ಅಳಿ ಎಂದರೆ ದುಂಬಿ. ದುಂಬಿಗಳ ಸಾಲು ಜೊಡಿಸಿಟ್ಟಂತೆ ಕಾಣುವ ಈ ಚಿತ್ತಾಕರ್ಷಕ ಹೂಗೊಂಚಲು ಬಹಳಷ್ಟು ಉದ್ದವಿದ್ದು ಪರಿಮಳ ಭರಿತವಾಗಿದೆ. ಬಿಳಿಯ ದಳಗಳಿಂದ ಕೂಡಿದ ಹೂಗಳು ಮನಸೆಳೆದರೆ ಮೇಲೆ ಕೆನ್ನೀಲಿ ಚುಕ್ಕಿ ದೃಷ್ಟಿಯಾಗದಂತೆ ಇರಿಸಿದ ಬೊಟ್ಟಿನಂತೆ ಆಕರ್ಷಕವಾಗಿದೆ. ಒಮ್ಮೆನೋಡಿದರೆ  ಮತೆ ಮತ್ತೆ ನೋಡಬೇಕೆನಿಸುವ ಸೀತೆಹೂ ಮಳೆಗಾಲ ಆರಂಭದಿಂದ ಕೊನೆಯತನಕವೂ ನೋಡಲು ಸಿಗುತ್ತದೆ.

ಮಳೆಗಾಲದ ಮೋಹಕಪುಷ್ಪವೆಂದೇ ಜನಪ್ರಿಯವಾಗಿರುವ ಡೇಲಿಯ ಮಳೆಗಾಲದುದ್ದಕ್ಕೂ ವೈವಿಧ್ಯಮಯ ಬಣ್ಣ.ಆಕಾರಗಳಿಂದ ಅರಳಿಕಂಗೊಳಿಸಿ ಸೌಂದರ್ಯಾಸಕ್ತರ ಮನ ಸೆಳೆಯುತ್ತದೆ. ಹಸಿರು ಗಿಡಗಳಲ್ಲಿ ಬಿಳಿ, ಗುಲಾಬಿ, ಕೆಂಪು ಹೀಗೆ ವರ್ಣಮಯ ಹೂಗಳನ್ನು ಬಿಟ್ಟು ಯಾರನ್ನಾದರೂ ತನ್ನತ್ತ ಬರಿಸಿಕೊಳ್ಳುವ ರಸಿಕತೆ ಈ ಹೂವಿನದು. ಎಲ್ಲಿ ನೆಟ್ಟರೂ ಸುಲಭವಾಗಿ  ಬೆಳೆಯುವ ಡೇಲಿಯ ಹೆಚ್ಚಿನ  ಆರೈಕೆ ಬಯಸದು. ಮಲೆನಾಡಿಗೆ ಸುಲಭವಾಗಿ ಒಗ್ಗಿಕೊಳ್ಳುವ ಡೇಲಿಯ  ಮಳೆಗಾಲದುದ್ದಕ್ಕೂ ಅನುಪಮ ಬೆಡಗಿನಿಂದ ಕಂಗೊಳಿಸುತ್ತದೆ.

ರಥಪುಷ್ಪ ಕರಾವಳಿಯಲ್ಲಿ ಮಳೆಗಾಲದ ಆರಂಭಕ್ಕೆ ಕಾಣಲು ಸಿಕ್ಕಿದರೆ ಮಲೆನಾಡಿನಲ್ಲಿ ಸಾಮಾನ್ಯವಾಗಿ ಶ್ರಾವಣಮಾಸದಲ್ಲಿ ಅರಳುತ್ತದೆ.ರಥದ ಮಾದರಿಯಿರುವ ಇದು ನಕ್ಷತ್ರಾಕಾರದ ಕೆಂಪು ಪುಟ್ಟ ಹೂಗಳ ಗೊಂಚಲಾಗಿರುತ್ತದೆ. ಮೊದಲ ಮಳೆ ಬಿದ್ದ ಕೂಡಲೇಮೊಗ್ಗು ಕಾಣಿಸಿಕೊಂಡು ಬಳಿಕ ನಿಧಾನವಾಗಿ ಅರಳುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಮನೆಯಂಗಳದಲ್ಲಿ ಬೆಳೆಯುವ ಸುವಸನಾಭರಿತ ಹೂ ಸುಗಂಧಿ.ಇದಕ್ಕೆ ಅಪಾರ ಬೇಡಿಕೆಯೂ ಇದೆ.ಶ್ವೇತವರ್ಣದ ಸುರುಳಿಹೂ ಗಿಡವೂ ತೆರನಾದದ್ದು. ಬರೀ ಆಕರ್ಷಣೀಯ ಮಾತ್ರವಲ್ಲ  ಸುವಾಸನಾಭರಿತ ಹೌದು.

ಮಳೆಗಾಲದಲ್ಲಿ ಅರಳಿ ಕಣ್ಮನ ಸೆಳೆಯುವ ಹಲವು ಹೂಗಳಿಗೆ ಹೆಂಗಳೆಯರ ಮುಡಿಯೇರುವ ಭಾsಗ್ಯವಿಲ್ಲ. ಗೌರಿಗಣೇಶ ಹಬ್ಬದ ಅವಧಿಗೆ ಕಾಣಿಸಿಕೊಳ್ಳುವ ಗೌರಿ ಹೂ ಅಂತಹ ಹೂಗಳಲ್ಲೊಂದು. ಬಲು ಆಕರ್ಷಣೀಯವಾದ ಈ ಹೂವು ಮೊಗ್ಗಿನಿಂದ ಹೂವಾಗಿ ಅರಳುವ ತನಕ ಹಸಿರು,ಹಳದಿ ಹಾಗೂ ಕೆಂಪುಬಣ್ಣಗಳಿಂದ ಗಮನ ಸೆಳೆಯುತ್ತವೆ. ಮಳೆಗಾಲದಲ್ಲಿ ಮೋಹಕತೆ ತೋರುವ ಇದು ವನಸುಮ. ಕಾಡಿನಲ್ಲಿ ಕಾಣಸಿಗುವ ಇನ್ನೊಂದು ಮೋಹಕ ಪುಷ್ಪ ಕೇಪಳ. ಇದು ಸಾಮಾನ್ಯವಾಗಿ ಕೆಂಪುಬಣ್ಣದ್ದಾಗಿರುತ್ತದೆ. ಪೂಜೆಗೆ ವಿಶೇಷವಾಗಿ ಬಳಸಲ್ಪಡುವ ಕೇಪಳದ ಹೈಬ್ರೀಡ್ ತಳಿಗಳು ಈಗ ಮನೆಯ ಹೂದೋಟಗಳಲ್ಲಿ ಅರಳಿ ಕಂಗೊಳಿಸುತ್ತವೆ. ಮಳೆಗಾಲದ ಪ್ರಮುಖ ಸಾಕು ಪುಷ್ಪವೆನಿಸಿರುವ ಕ್ಯಾನ (ಕಾಬಾಳೆ) ಕೂಡ ವರ್ಣರಂಜಿತ ಪುಷ್ಪ. ಹೂದೋಟಗಳಲ್ಲಿ ಕ್ಯಾನದ ಗೆಡ್ಡೆಗಳನ್ನು ಸಾಲಾಗಿ ನೆಟ್ಟರೆ ಮಳೆಗಾಲದಲ್ಲಿ ಅವು ಅರಳುವ ಪರಿ ಅವರ್ಣನೀಯ. ಸುವಾಸನಾಭರಿತ ಬ್ರಹ್ಮಕಮಲ, ನಾಗಸಂಪಿಗೆಗಳು ಮಳೆಗಾಲದಲ್ಲಿ ತಮ್ಮ ಅಸ್ತಿತ್ವ ಸಾರುತ್ತವೆ. ಆರ್ಕಿಡ್ ಜಾತಿಯ ಹಲವು ಹೂಗಳು ಕಾಡಿನಲ್ಲರಳುತ್ತವೆ. ಸುರಿಯುವ ಮಳೆಗೆ ಕಾಡಿನಲ್ಲಿ ಅಡ್ಡಾಡುವ ಮನಸ್ಸು ನಿಮ್ಮಲ್ಲಿದ್ದರೆ ಅಪರೂಪದ ವನಸುಮಗಳ ಸೌಂದರ್ಯ ಆಸ್ವಾದಿಸಬಹುದು. ಮಳೆಗಾಲದಲ್ಲಿ ಕಾಣಸಿಗುವಷ್ಟು ವೈವಿಧ್ಯಮಯ ಪುಷ್ಪಗಳು ಬೇರೆ ಕಾಲದಲ್ಲಿ ಸಿಗುವುದು ಅಸಾಧ್ಯ.ಅಂತಹ ಪುಷ್ಪಗಳ ಸೌಂದರ್ಯವನ್ನು ಕಣ್ಣಾರೆ ಕಾಣಬೇಕಿದ್ದರೆ ಮಳೆಗಾಲದಲ್ಲಿ ಕರಾವಳಿ, ಮಲೆನಾಡು ಪ್ರದೇಶಗಳಿಗೊಮ್ಮೆ ಭೇಟಿ ನೀಡಬೇಕು. ಆಗ ಹೂಗಳ ವರ್ಣಿಸದಳದ ಸೌಂದರ್ಯ ಕಣ್ಮನ ಸೆಳೆದು ತಣಿಸುತ್ತದೆ.