ಇನ್ನೂ ಬೆಳೆಯದಿದ್ದ ಮಲಯಾಳ ಭಾಷಾ ಸಾಹಿತ್ಯಕ್ಕಾಗಿ ಆಯುಸ್ಸನ್ನು ತೇಯ್ದ ಹಿರಿಯ ಜೀವ ವಲ್ಲತೋಳ್‌. ಭರತಖಂಡದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲಿ ಕೂಡಾ ಕೇರಳೀಯ ಸಾಹಿತ್ಯ ಮತ್ತು ಕಲೆಯ ಸೌರಭವನ್ನು ಹರಡಿದವರು ಅವರು. ಕಲೆಯ ಮೇಲೆ ಜನರಿಗಿರುವ ವಿಶ್ವಾಸ, ಪ್ರೇಮಗಳು ನಾಶವಾಗಿ ‘ಕಥಕಳಿ’ಯಂಥ ಅಮೂಲ್ಯ ಕಲೆಗಳು ನಾಮಾವಶೇಷವಾಗುತ್ತಿದ್ದ ಕಾಲದಲ್ಲಿ ತಮ್ಮ ಸ್ವಂತ ಪರಿಶ್ರಮದಿಂದ ವಲ್ಲತೋಳ್‌ಅವರು ಕಥಕಳಿಯ ಪುನರುತ್ಥಾನ ಕೈಗೊಂಡು, ಅದರ ಉನ್ನತಿಗಾಗಿ ಶ್ರಮಿಸಿ ದೇಶದಲ್ಲಿ ಮಾತ್ರವಲ್ಲ ಪರದೇಶಗಳಲ್ಲೂ ಅತ್ಯುಚ್ಚ ಸ್ಥಾನಮಾನಗಳು ಲಭಿಸುವಂತೆ ದುಡಿದರು. ದೈವಭಕ್ತಿ, ಗುರುಭಕ್ತಿ, ವಿನಯಶೀಲತೆ, ದೇಶಪ್ರೇಮಗಳ ತವರಾಗಿದ್ದ ಮಹಾಕವಿ ವಲ್ಲತೋಳ್‌ಕಥಕಳಿಯ ಪಿತಾಮಹನೆಂದರೂ ತಪ್ಪಾಗಲಾರದು.

ಬಾಲ್ಯ

ಕೇರಳದ ವೆಟ್ಟತ್ತುನಾಡಿನಲ್ಲಿರುವ ಪೊನ್ನಾನಿ ತಾಲೂಕಿನಲ್ಲಿ ೧೮೭೮ರ ಅಕ್ಟೋಬರ್ ತಿಂಗಳಿನಲ್ಲಿ ಮಹಾಕವಿಯ ಜನನವಾಯಿತು. ಅವರ ತಾಯಿ ಪಾರ್ವತಿ ಅಮ್ಮ. ಅವರು ರಾಮಾಯಣ, ಮಹಾಭಾರತ ಮೊದಲಾದ ಪುರಾಣ ಗ್ರಂಥಗಳನ್ನು ಭಕ್ತಿಯಿಂದಲೂ ಶ್ರದ್ಧೆಯಿಂದಲೂ ಪಾರಾಯಣ ಮಾಡಿದ್ದರು. ಕಲಾಪ್ರಿಯರೂ ಹಾಸ್ಯಪ್ರಿಯರೂ ದೈವವಿಶ್ವಾಸವುಳ್ಳವರೂ ಆಗಿದ್ದ ದಾಮೋದರನ್‌ ಇಳಯದ್‌ ಮಹಾಕವಿಯ ತಂದೆ. ಎಷ್ಟು ನೀರಸವಾದ ವಿಷಯದ ಬಗ್ಗೆಯೂ ಶ್ರೋತೃಗಳನ್ನು ಹಾಸ್ಯಚಟಾಕಿಗಳಿಂದ ರಸಲೀನರನ್ನಾಗಿ ಮಾಡುವ ಸಾಮರ್ಥ್ಯ ದಾಮೋದರನ್‌ ಇಳಯದರಿಗೆ ಸಿದ್ಧಿಸಿತ್ತು. ಈ ಸ್ವಭಾವ ವಿಶೇಷವನ್ನು ನಾವು ವಲ್ಲತೋಳ್‌ ಅವರಲ್ಲೂ ಕಾಣಬಹುದು. ಪಾರ್ವತಿ ಅಮ್ಮ ಹಡೆದ ಹನ್ನೊಂದು ಮಕ್ಕಳಲ್ಲಿ ಮೂವರು ಮಕ್ಕಳು ಮಾತ್ರ ಉಳಿದರು. ಅವರಲ್ಲಿ ಕಿರಿಯವರು ವಲ್ಲತೋಳ್‌. ಚಿಕ್ಕಂದಿನಲ್ಲಿ ಅವರ ಆರೋಗ್ಯವೂ ಚೆನ್ನಾಗಿರಲಿಲ್ಲ. ಕಡೆಯ ಮಗು ಆರೋಗ್ಯವಿಲ್ಲದ ಮಗು ಎಂದು ಅವರ ಮೇಲೆ ತಂದೆತಾಯಂದಿರಿಗೆ ತುಂಬಾ ಪ್ರೀತಿ.

ಎಳೆಯ ಕವಿ

ವಲ್ಲತೋಳ್‌ಬಹು ಚಿಕ್ಕ ವಯಸ್ಸಿನಲ್ಲೆ ಕಾವ್ಯ ರಚನೆಯನ್ನು ಪ್ರಾರಂಭಿಸಿದರು. ಹನ್ನೆರಡನೆಯ ವರ್ಷದಲ್ಲೇ ಸಂಸ್ಕೃತದಲ್ಲಿ ಪದ್ಯಗಳನ್ನು ಬರೆದರು. ಸಮಪ್ರಾಯದ ಮಕ್ಕಳೊಂದಿಗೆ ಆಟಪಾಠಗಳಲ್ಲಿ ಮಗ್ನರಾಗಿರಬೇಕಿದ್ದ ಕಾಲದಲ್ಲಿ ತಮ್ಮ ಅಸಾಧಾರಣ ಪ್ರತಿಭೆಯಿಂದ ಉತ್ತಮವಾದ ಶ್ಲೋಕಗಳನ್ನು ರಚಿಸತೊಡಗಿದ್ದರು. ಮನೆಯಲ್ಲಿ ಶ್ಲೋಕಗಳನ್ನು ಮತ್ತು ಕವಿತೆಗಳನ್ನು ಬರೆಯುವ ಹವ್ಯಾಸವಿದ್ದವರು ಯಾರೂ ಇರಲಿಲ್ಲ; ಆಸುಪಾಸಿನಲ್ಲೂ ಇರಲಿಲ್ಲ. ಆ ಕಾಲದಲ್ಲಿ ವೆಟ್ಟತ್ತುನಾಡಿನಲ್ಲಿ ಇಬ್ಬರು ಕವಿಗಳಾದ ವಾಸುದೇವನ್‌ ನಂಬೂದಿರಿ ಮತ್ತು ವಾಸುಇಣ್ಣಿ ಮೂಸ್ಸತ್‌ ಮಾತ್ರವೇ ಹೆಸರುಗಳಿಸಿದ್ದರು. ಅವರ ಮನೆ ಮೂರು-ನಾಲ್ಕು ಮೈಲಿ ದೂರದಲ್ಲಿತ್ತು. ವಲ್ಲತೋಳ್‌ಗೆ ಈ ಇಬ್ಬರು ಕವಿಗಳೊಂದಿಗೆ ಮಾತನಾಡುವ ಸಂದರ್ಭವಾಗಲೀ ಸೌಕರ್ಯವಾಗಲೀ ದೊರೆತಿರಲಿಲ್ಲ. ಆದುದರಿಂದ ಚಿಕ್ಕ ವಯಸ್ಸಿನಲ್ಲೆ ವಲ್ಲತೋಳ್‌ಕವನಗಳನ್ನು ಬರೆದದ್ದು ತುಂಬಾ ಆಶ್ಚರ್ಯಕರ.

ಶ್ಲೋಕಗಳನ್ನು ಬರೆದು ಪರಿಣತಿ ಗಳಿಸಿದ ಮೇಲೆ ‘ಕಿರಾತಶತಕ’ವೆಂಬ ಪುಸ್ತಕವನ್ನು ಬರೆದರು. ಆ ಕಾಲದಲ್ಲಿ ಗೋವಿಂದ ಮೆನನ್‌ಎಂಬೊಬ್ಬ ಮಹನೀಯರು ‘ಎಸ್ಟೇಟ್‌ಇನ್ಸ್ ಪೆಕ್ಟರ್’ರಾಗಿ ಅಲ್ಲಿಯೇ ಸಮೀಪದಲ್ಲಿ ವಾಸವಾಗಿದ್ದರು.

ಹುಡುಗನಿಗೆ ಕವನಗಳನ್ನು ಬರೆಯುವುದರಲ್ಲಿ ಇದ್ದ ಉತ್ಸಾಹವನ್ನು ಕಂಡು ಅವರು ತಮ್ಮ ಸ್ವಂತ ವೆಚ್ಚದಿಂದ ‘ಕಿರಾತಶತಕ’ವನ್ನು ಅಚ್ಚುಹಾಕಿಸಿ ಪ್ರಕಟಿಸಿದರು.

ಸಮ್ಮೇಳನದಲ್ಲಿ

೧೮೯೩ ರಲ್ಲಿ ‘ಭಾಷಾಪೋಷಿಣಿ’ ಎಂಬ ಸಮ್ಮೇಳನವು ಕಲ್ಲಿಕೋಟೆಯಲ್ಲಿ ಜರುಗಿತು. ಹದಿನೈದು ವರ್ಷ ವಯಸ್ಸಿನ ವಲ್ಲತೋಳ್‌ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ನಿಂತು ತಮ್ಮ ಪದ್ಯಗಳನ್ನು ಅವರು ಓದಿದುದು ಅದೇ ಮೊದಲು. ಅಂದಿನ ಕವಿತಾ ಪರೀಕ್ಷೆಯಲ್ಲಿ ಅವರಿಗೆ ಬಹುಮಾನ ಲಭಿಸಿತು, ಮಾತ್ರವಲ್ಲದೆ ಸಭೆಯಲ್ಲಿ ಹಾಡಿದ ಒಂದು ಮಂಗಳಶ್ಲೋಕದ ಮಾಧುರ್ಯಕ್ಕೆ ಸಭಿಕರೆಲ್ಲರೂ ಮಾರುಹೋದರು. ‘ಮೀನಾಕ್ಷಿ’ ಎಂಬ ಕಾದಂಬರಿಯನ್ನು ಬರೆದು ಪ್ರಸಿದ್ಧರಾದ ಚಾತು ನಾಯರ್ ಎಂಬ ಪ್ರಸಿದ್ಧ ಲೇಖಕರು ಈ ಹದಿನೈದು ವರ್ಷ ವಯಸ್ಸಿನ ಹುಡುಗನನ್ನು ಬಾಚಿ ತಬ್ಬಿ ಎತ್ತಿಕೊಂಡು ಕೊಂಡಾಡಿದರು.

ವಿದ್ಯಾಭ್ಯಾಸ

ವಲ್ಲತೋಳ್‌ ತಮ್ಮ ಐದನೇ ವಯಸ್ಸಿನಲ್ಲೇ ಓದಲೂ ಬರೆಯಲೂ ಕಲಿತರು. ಅನಂತರ ಗಣಿತ, ಜ್ಯೋತಿಷದ ಪ್ರಾಥಮಿಕ ಅಧ್ಯಯನ, ಸಂಸ್ಕೃತದ ಆದ್ಯಪಾಠವಾದ ಸಿದ್ಧರೂಪ, ಶ್ರೀರಾಮೋದಂತಂ ಮೊದಲಾದ ವಿಷಯಗಳನ್ನು ಅಭ್ಯಾಸ ಮಾಡಿದರು. ಎಂಟನೇ ವಯಸ್ಸಿನಲ್ಲಿ ಕಾವ್ಯದ ಅಧ್ಯಯನವನ್ನು ಆರಂಭಿಸಿದರು. ಅವರ ಸ್ವಂತ ಮಾವ ರಾಮುಣ್ಣಿ ಮೆನನ್‌ಎಂಬ ಮಹಾ ವಿದ್ವಾಂಸರು ಅವರಿಗೆ ಕಾವ್ಯಪಾಠಗಳನ್ನು ಕಲಿಸಿದರು. ರಾಮುಣ್ಣಿ ಮೆನನ್‌ರಿಗೆ ಜ್ಯೋತಿಷವೂ ವೈದ್ಯವೂ ತಿಳಿದಿತ್ತು. ವೈದ್ಯ ವೃತ್ತಿಯ ಒಳ್ಳೆಯ ಫಲವೂ ಪ್ರಚಾರವೂ ಇತ್ತು. ಆದರೆ ಎಡಗಾಲಿಗೆ ಶಕ್ತಿಯಿಲ್ಲದ ಕಾರಣ ವಾಹನಗಳಿಲ್ಲದೆ ಹೊರಗೆಲ್ಲೂ ಚಿಕಿತ್ಸೆಗಾಗಿ ಹೋಗುತ್ತಿರಲಿಲ್ಲ. ಸ್ನಾನ, ಜಪತಪ, ಪುರಾಣ ಪಾರಾಯಣ ಮೊದಲಾದ ನಿತ್ಯ ಕರ್ಮಗಳ ಅನಂತರ ಸಮಯವನ್ನೆಲ್ಲ ರೋಗಿಗಳ ಶುಶ್ರೂಷೆ, ಚಿಕಿತ್ಸೆಗಳಲ್ಲಿ ಅವರು ಕಳೆಯುತ್ತಿದ್ದರು.

ವಲ್ಲತೋಳ್‌ತಮ್ಮ ಹದಿನೈದನೇ ವರ್ಷದ ಹೊತ್ತಿಗೆ ಕಾವ್ಯಗಳನ್ನು ತಮ್ಮಷ್ಟಕ್ಕೇ ಓದಿ ಅರ್ಥವನ್ನು ಗ್ರಹಿಸಿಕೊಳ್ಳುವ ಒಂದು ಶಕ್ತಿಯನ್ನು ಸಂಪಾದಿಸಿಕೊಂಡರು. ಅನಂತರ ಗುರುಗಳ ಆದೇಶದ ಪ್ರಕಾರ ಮನೆಗೆ ಬರುತ್ತಿದ್ದ ವಿದ್ಯಾರ್ಥಿಗಳಿಂದ ಓದಿಸುವುದನ್ನು ಪ್ರಾರಂಭಿಸಿದರು. ‘ಅಷ್ಟಾಂಗ ಹೃದಯಂ’ ಎಂಬ ಶಾಸ್ತ್ರವನ್ನು ಗುರುಮುಖೇನ ಕಲಿತರು.

ಮನೆದೇವರಿಗೆ ಒಪ್ಪದು!

ವಲ್ಲತೋಳರಿಗೆ ಇಂಗ್ಲಿಷ್‌ವಿದ್ಯಾಭ್ಯಾಸ ದೊರೆಯಲಿಲ್ಲ. ಇದಕ್ಕೆ ಕಾರಣ ಕುತೂಹಲಕಾರಿಯಾಗಿದೆ. ಅವರ ಮನೆತನ ನೆಮ್ಮದಿಯ ಸ್ಥಿತಿಯಲ್ಲೆ ಇತ್ತು. ಹುಡುಗನಿಗೆ ಇಂಗ್ಲಿಷ್‌ವಿದ್ಯಾಭ್ಯಾಸ ಕೊಡಿಸುವುದು ಕಷ್ಟವಾಗುತ್ತಿರಲಿಲ್ಲ. ಆದರೆ ೧೮೬೫-೬೬ರಲ್ಲಿ ಈ ಮನೆತನದ ಮೂವರು ಬಾಲಕರು ಬೇರೆ ಊರಿನಲ್ಲಿ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಸಿಡುಬು ರೋಗದಿಂದ ಮೂವರೂ ಸತ್ತುಹೋದರು. ಇದರಿಂದ ವಲ್ಲತೋಳರ ಮನೆಯವರಿಗೆ ತಮ್ಮ ಮನೆದೇವರಿಗೆ ಪಾಶ್ಚಾತ್ಯ ವಿದ್ಯಾಭ್ಯಾಸ, ಇಂಗ್ಲಿಷ್‌ ಓದು ಎಂದರೆ ಆಗದು ಎಂಬ ಅಭಿಪ್ರಾಯ ಬಂದಿತು. ಇದರ ಪರಿಣಾಮವಾಗಿ ವಲ್ಲತೋಳರನ್ನು ಇಂಗ್ಲಿಷ್‌ಶಾಲೆಗೆ ಕಳಿಸಲಿಲ್ಲ.

ವಲ್ಲತೋಳರಿಗೆ ವಿದ್ಯಾಭ್ಯಾಸ ಮಾಡಿಸಿದ ಅವರ ಸೋದರಮಾವನಿಗೆ ಹುಡುಗ ಒಳ್ಳೆಯ ಆಯುರ್ವೇದ ವೈದ್ಯನಾಗಬೇಕು ಎಂದು ಆಸೆ. ವಲ್ಲತೋಳರು ಆಯುರ್ವೇದವನ್ನೂ ಕಲಿತರು. ಸ್ವಲ್ಪಕಾಲ ವೈದ್ಯರಾಗಿದ್ದರು, ಸಾಕಷ್ಟು ಯಶಸ್ಸನ್ನೂ ಗಳಿಸಿದರು. ಮದುವೆಯಾದ ಕೆಲವು ದಿನಗಳಿಗೆ ವೈದ್ಯವೃತ್ತಿಯನ್ನು ಬಿಟ್ಟು, ಸಾಹಿತ್ಯ-ಕಥಕಳಿಗಳಿಗೇ ಮುಡಿಪಾದರು.

ಕವಿವಿದ್ವಾಂಸ

ಚಿಕ್ಕ ವಯಸ್ಸಿನಲ್ಲೇ ವಲ್ಲತೋಳರು ಕವಿತಾ ರಚನೆಗೆ ಕೈಹಾಕಿದ್ದರು. ಶ್ಲೋಕಗಳನ್ನು ಬರೆದು ಅಭ್ಯಸಿಸುತ್ತಿದ್ದರು. ಮೊದಲು ಶ್ಲೋಕಗಳನ್ನು ಬರೆದದ್ದು ಸಂಸ್ಕೃತದಲ್ಲಿ. ವಿದ್ಯಾರ್ಥಿಗಳಿಗೆ ಕಲಿಸುವುದೂ ಸ್ವತಃ ಕಾವ್ಯಗಳನ್ನು ಅಭ್ಯಸಿಸುವುದೂ ನಿತ್ಯವೂ ಸಾಗುತ್ತಿದ್ದುದರಿಂದ ಸ್ವತಃ ಸಿದ್ಧವಾದ ಕವಿತಾಶಕ್ತಿ ಅವರಲ್ಲಿ ಬೆಳೆಯಿತು. ಹೀಗೆ ರೂಢಿಸಿಕೊಂಡ ಶ್ರದ್ಧೆ ಮತ್ತು ಪರಿಶ್ರಮದಿಂದಾಗಿ ಇಪ್ಪತ್ತು ವರ್ಷ ವಯಸ್ಸಿನಲ್ಲೇ ಒಬ್ಬ ಒಳ್ಳೆಯ ಕವಿಯೆಂಬ ಹೆಸರೂ ಮಲಯಾಳ ಮತ್ತು ಸಂಸ್ಕೃತಗಳಲ್ಲಿ ಕವನಗಳನ್ನು ಬರೆಯುವ ಶಕ್ತಿಯೂ ಅವರಿಗೆ ಲಭ್ಯವಾಗಿತ್ತು.

ಸಂಸ್ಕೃತದಲ್ಲಿ ಅವರು ಹಲವಾರು ಕವಿತೆಗಳನ್ನು ಬರೆದಿದ್ದರೂ ‘ಪಾರ್ವತೀ ಪಾದಾದಿ ಕೇಶಸ್ತವ’ ಎಂಬ ಕೃತಿಯೇ ಅತ್ಯುತ್ತಮವಾದುದು. ಕವಿತಾ ರಚನೆ ಮತ್ತು ಪುಸ್ತಕ ಓದುವಿಕೆ ಇವಲ್ಲದೆ ಅವರಿಗೆ ಮತ್ತಾವ ವಿಚಾರಗಳಲ್ಲೂ ಆಸಕ್ತಿಯಿರಲಿಲ್ಲ. ಗೆಳೆಯರೊಂದಿಗೆ ಬೆರೆತು ಹಾಸ್ಯ, ವಿನೋದಗಳನ್ನು ಆಡಿ ನಕ್ಕು ನಲಿಯುವ ಸ್ನೇಹಪರ ಸ್ವಭಾವ ಅವರದು.

ಏಕಶ್ರುತಧರ

ಅವರು ಓದಿ ಮುಗಿಸಿದ ಪುಸ್ತಕಗಳಿಗೆ ಲೆಕ್ಕವಿರಲಿಲ್ಲ. ಕಾವ್ಯಗಳು, ನಾಟಕಗಳು, ಪುರಾಣಗಳು – ಹೀಗೆ ಒಂದೊಂದು ವಿಧದಲ್ಲೂ ಅವರು ಅಸಂಖ್ಯ ಪುಸ್ತಕಗಳನ್ನು ಅಭ್ಯಾಸ ಮಾಡಿದ್ದರು. ಅವರು ಪುಸ್ತಕಗಳನ್ನೆಲ್ಲ ಏಕಾಗ್ರತೆಯಿಂದ ಓದಿ ಮನಸ್ಸಿನಲ್ಲಿ ದೃಢಪಡಿಕೊಳ್ಳುತ್ತಿದ್ದರು.

ಅವರ ಅಮೋಘ ಜ್ಞಾಪಕಶಕ್ತಿ ಮತ್ತು ಗ್ರಹಣಶಕ್ತಿಗಳಿಗೆ ಒಂದು ಉದಾಹರಣೆ: ಒಮ್ಮೆ ತ್ರಿಶೂರ್ ಪುರ ಸಭಾಂಗಣದಲ್ಲಿ ಕವಿತಿಲಕ ಕುಂಡೂರ್ ನಾರಾಯಣ ಮೆನನ್‌, ಒಟುವಿಲ್‌ ಕುಞ ಕೃಷ್ಣ ಮೆನನ್‌ ಇವರಂತಹ ಹಲವಾರು ಮಂದಿ ಖ್ಯಾತ ಕವಿಗಳು ಸೇರಿದ್ದರು. ಪ್ರಸಂಗವಶಾತ್‌ ವಲ್ಲತೋಳ್‌ ಅವರ ಜ್ಞಾಪಕಶಕ್ತಿ ಹಾಗೂ ಶೀಘ್ರ ಗ್ರಹಣಶಕ್ತಿಯ ಬಗ್ಗೆ ಮಾತು ಬಂತು. ಆಗ ಒಬ್ಬ ಕವಿ, “ಹಾಗಾದರೆ ನಾನೊಂದು ಶ್ಲೋಕವನ್ನು ಒಮ್ಮೆ ಮಾತ್ರ ಹೇಳುತ್ತೇನೆ ಅದನ್ನು ತಿರುಗಿ ನೀವು ಹೇಳಬೇಕು” ಎಂದು ವಲ್ಲತೋಳ್‌ ಅವರಿಗೆ ಸವಾಲು ಹಾಕಿದರು.

“ನಾನು ಯತ್ನಿಸಿ ನೋಡುತ್ತೇನೆ” ಎಂದಷ್ಟೇ ಹೇಳಿದರು ವಲ್ಲತೋಳ್‌.

ಆ ವಿದ್ವಾಂಸರು ಶ್ಲೋಕವನ್ನು ಪ್ರಾರಂಭಿಸಿದರು. ವಲ್ಲತೋಳ್‌ಬಹಳ ಶ್ರದ್ಧೆಯಿಂದ ಕಿವಿಗೊಟ್ಟು ಕೇಳಿಸಿಕೊಂಡರು. ವಿದ್ವಾಂಸರು ಶ್ಲೋಕ ಹೇಳುವುದನ್ನು ನಿಲ್ಲಿಸುತ್ತಲೇ ಅವರು ಹೇಳಿದ ಸಂಪೂರ್ಣ ಶ್ಲೋಕವನ್ನೇ ವಲ್ಲತೋಳ್‌ ತಡವರಿಸದೆ ಹೇಳಿಬಿಟ್ಟರು.

ಮತ್ತೊಬ್ಬ ಕವಿ ಇನ್ನೊಂದು ಉದ್ದವಾದ ಶ್ಲೋಕವನ್ನು ಹೇಳಿದರು. ತಕ್ಷಣವೇ ವಲ್ಲತೋಳ್‌ಅದನ್ನೂ ಹೇಳಿದರು.

ಹೀಗೆಯೇ ಏಳೆಂಟು ಬಾರಿ ನಡೆಯಿತು. ಕೊನೆಗೆ ಅಲ್ಲಿ ಸೇರಿದ ವಿದ್ವಾಂಸರೆಲ್ಲ ಕೂಡಿ ವಲ್ಲತೋಳ್‌ಅವರಿಗೆ ‘ಏಕಶ್ರುತಧರ’ (ಒಂದೇ ಸಾರಿ ಕೇಳಿಸಿಕೊಂಡು ಬಾಯಿಪಾಠ ಹೇಳುವವ) ಎಂಬ ಬಿರುದನ್ನು ನೀಡಿದರು.

ಬಾಲಕ ವಲ್ಲತೋಳ್ ತಂದೆಯೊಡನೆ ಕಥಕಳಿ ನೋಡುತ್ತಿರುವುದು

ಕಥಕಳಿಯ ನಂಟು

ಕವಿತೆಗಳನ್ನು ಬರೆಯುವ ಶಕ್ತಿ ಎಳೆಯ ಪ್ರಾಯದಲ್ಲೇ ಅವರಿಗೆ ಹೇಗೆ ಸಿದ್ಧಿಸಿತ್ತೋ ಅದೇ ರೀತಿಯಲ್ಲಿ ಚಿಕ್ಕಂದಿನಲ್ಲೇ ಕಲೆಗಳ ಬಗೆಗೆ ಅವರಲ್ಲಿ ಅಪಾರ ಕುತೂಹಲವೂ ಅಭಿರುಚಿಯೂ ಮೊಳೆತಿತ್ತು. ಎಲ್ಲಿ ಉತ್ಸವ ನಡೆಯಲಿ, ಎಲ್ಲಿ ಜಾತ್ರೆ ನಡೆಯಲಿ ಅಲ್ಲಿ ಅವರು ನೋಡಲು ಹೋಗುತ್ತಿದ್ದರು. ಕಥಕಳಿ ಎಂದರೆ ಅವರಿಗೆ ಜೀವ. ಸ್ವಲ್ಪ ದೊಡ್ಡವರಾದ ಮೇಲೆ ಹತ್ತು-ಹನ್ನೊಂದು ಮೈಲಿ ದೂರವನ್ನು ಕ್ರಮಸಿಯಾದರೂ ಅವರು ಕಥಕಳಿ ಕಾಣಲು ಹೋಗುತ್ತಿದ್ದರು. ಅವರ ತಂದೆ ಅವರನ್ನು ತಮ್ಮ ಸಂಗಡ ಕರೆದುಕೊಂಡು ಹೋಗುತ್ತಿದ್ದರು. ಕಥಕಳಿಯ ಮೇಲಿನ ಮೋಹ ಅವರಿಗೆ ತಂದೆಯಿಂದ ಬಂದ ಬಳುವಳಿ. ಕಥಕಳಿಯಲ್ಲಿ ವಿಶೇಷ ಪರಿಶ್ರಮವೂ ಜ್ಞಾನವೂ ಇದ್ದ ತಂದೆ ಅವರನ್ನು ಬಳಿಯಲ್ಲೇ ಕುಳ್ಳಿರಿಸಿಕೊಂಡು ಎಲ್ಲಾ ವಿಷಯಗಳನ್ನು ಹೇಳಿಕೊಡುತ್ತಿದ್ದರು. ಹೀಗೆ ಅವರ ಎಳೆಯ ಮನಸ್ಸಿನಲ್ಲಿ ಕಥಕಳಿಯ ಕೈಮುದ್ರೆ ಸಂಕೇತಗಳೂ ಮತ್ತಿತರ ವಿವರಗಳೂ ಅಚ್ಚೊತ್ತಿ ನಿಂತವು. ಕಲೆಯಲ್ಲಿನ ಈ ರೀತಿಯ ಜ್ಞಾನದಿಂದಾಗಿ ಅವರಿಗೆ ಅಭಿನಯ ಕಲೆಯಲ್ಲೂ ಪರಿಶ್ರಮ ಉಂಟಾಯಿತು.

೧೮೯೩ ರಲ್ಲಿ ಅವರ ತಂದೆ ತಮ್ಮ ತಾಯಿಯ ಶ್ರಾದ್ಧದ ವೇಳೆ ಏರ್ಪಡಿಸಿದ್ದ ‘ಬಾಲಧ್ರುವ ಚರಿತೆ’ ಮತ್ತು ‘ಕಂಸವಧೆ’ ನಾಟಕಗಳಲ್ಲಿ ಅವರಿಗೆ ಅಭಿನಯಿಸುವ ಅವಕಾಶ ಲಭಿಸಿತು. ೧೮೯೬ ರಲ್ಲಿ ಮಹಾಕವಿಯವರ ತಾಯಿ ಸ್ವರ್ಗಸ್ಥರಾದರು. ತಾಯಿ ವಲ್ಲತೋಳರನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದರು. ವಲ್ಲತೋಳರಿಗೂ ತಾಯಿಯಲ್ಲಿ ತುಂಬ ಪ್ರೀತಿ. ಅವರ ಸಾವು ವಲ್ಲತೋಳ್‌ಅವರಿಗೆ ತುಂಬ ವ್ಯಸನವನ್ನುಂಟುಮಾಡಿತು. ಒಂದು ವರ್ಷಕಾಲ ತುಂಬ ಕಟ್ಟುನಿಟ್ಟಾಗಿ ಬಾಳಿದರು. ಆ ಕಾಲದಲ್ಲಿ ‘ಶ್ರೀ ಮಹಾಭಾಗವತ’ವನ್ನು ಸಂಪೂರ್ಣ ಓದಿ ಮುಗಿಸಿದರು. ‘ತಪತೀ ಸಂವರಣ’ವೆಂಬ ಒಂದು ಸಂಸ್ಕೃತ ಮಹಾಕಾವ್ಯವನ್ನು ಬರೆಯಲು ಪ್ರಾರಂಭಿಸಿದ್ದೂ ಆಗಲೇ.

ಮದುವೆ

೧೯೦೧ ರಲ್ಲಿ ಅವರು ಮದುವೆಯಾದರು. ಪತ್ನಿ ಪೊನ್ನಾನಿ ತಾಲೂಕಿನ ವನ್ನೇರಿ ನಾಡಿನ ಂಟ್ಟಾರಿ ಮನೆಯಲ್ಲಿನ ಮಾಧವಿ ಅಮ್ಮ ಎಂಬುವರು. ಅವರು ಹಳ್ಳಿಯಿಂದ ಬಂದವರು. ಓದುಬರಹ ಬರುತ್ತಿರಲಿಲ್ಲ.

೧೯೦೨ ರಲ್ಲಿ ವಲ್ಲತೋಳರ ಮೊದಲನೆಯ ಮಗು ಹುಟ್ಟಿತು. ತಮ್ಮ ಹೆಂಡತಿ ಗರ್ಭಿಣಿಯಾಗಿದ್ದ ಕಾಲದಲ್ಲಿ ವಲ್ಲತೋಳ್‌ಅವರನ್ನು ಬಹು ಎಚ್ಚರಿಕೆಯಿಂದ ನೋಡಿಕೊಂಡರು. ಅನಂತರ, ಗರ್ಭಿಣಿಯರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ವಿವರಿಸಿ ‘ಗರ್ಭರಕ್ಷಣಾಕ್ರಮ’ ಎಂಬ ವೈದ್ಯಕೀಯ ಪುಸ್ತಕವನ್ನೆ ಬರೆದರು.

ಅದೇ ವರ್ಷದ ಕೊನೆಯಲ್ಲಿ ಅವರು ತಮ್ಮ ತಂದೆಯೊಂದಿಗೆ ರಾಮೇಶ್ವರಕ್ಕೆ ಹೋಗಿ ಸೇತುಸ್ನಾನ ಮಾಡಿದರು. ಶ್ರೀರಂಗಂ, ಮಧುರೈ ಮೊದಲಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದರು.

ಆ ಕಾಲದಲ್ಲಿ ಕೊಟ್ಟಾಯಂನಲ್ಲಿ ಭಾಷಾಭಿಮಾನಿಯೂ ‘ಮಲಯಾಳ ಮನೋರಮಾ’ ಪತ್ರಿಕೆಯ ಸಂಪಾದಕರೂ ಆಗಿದ್ದ ಕಂಡತ್ತಿಲ್‌ವರ್ಗೀಸ್‌ಮಾಪಿಳ್ಳೆಯವರೂ ಉಳಿದವರೂ ಸೇರಿ ‘ಭಾಷಾಪೋಷಿಣಿ’ ಎಂಬ ಕಿರು ಸಾಹಿತ್ಯ ಸಭೆಯನ್ನು ಪ್ರತಿವರ್ಷ ಏರ್ಪಡಿಸುತ್ತಿದ್ದರು. ೧೯೦೨ ರಲ್ಲಿ ಈ ಸಭೆಯು ತಲಚೇರಿ ಎಂಬಲ್ಲಿ ನಡೆಯಿತು. ವಲ್ಲತೋಳರಿಗೂ ಆಹ್ವಾನ ಬಂದಿತು. ಆ ಸಭೆಯಲ್ಲಿ ಅವರು ಮಲಯಾಳ ಭಾಷೆಯ ಸಂಬಂಧವಾಗಿ ಒಂದು ಉಪನ್ಯಾಸವನ್ನು ನೀಡಿದರು. ಅವರ ಉಪನ್ಯಾಸವನ್ನು ಕೇಳಿ ಸಭೆಯಲ್ಲಿದ್ದ ಮಹಾ ವಿದ್ವಾಂಸರೆಲ್ಲ ಸಂತೋಷಪಟ್ಟರು.

ಕಿವುಡು!

ವಲ್ಲತೋಳರಿಗೆ ೨೯-೩೦ ವರ್ಷ ವಯಸ್ಸಾಗಿದ್ದಾಗ ಅವರಿಗೆ ತುಂಬಾ ದುಃಖದಾಯಕವೂ ಕಷ್ಟದಾಯಕವೂ ಆದ ಸಂಗತಿ ನಡೆಯಿತು. ಕಿವಿಯ ತೊಂದರೆ ಪ್ರಾರಂಭವಾಗಿ ಸ್ವಲ್ಪ ಕಾಲದಲ್ಲಿಯೇ ಸಂಪೂರ್ಣವಾಗಿ ಕಿವುಡಾದರು!

ಹಳ್ಳಿಯಲ್ಲಿ ಹುಟ್ಟಿದವರು, ದೇಶದಲ್ಲೆಲ್ಲ ಜನಪ್ರಿಯವಾಗುತ್ತಿದ್ದು ಆಧುನಿಕ ಭಾರತದಲ್ಲಿ ಅತ್ಯಗತ್ತಯ ಎನ್ನಿಸುವಂತಾಗುತ್ತಿದ್ದ ಪಾಶ್ಚಾತ್ಯ ವಿದ್ಯಾಭ್ಯಾಸದ ಗಂಧವೇ ಇಲ್ಲ. ಮೂವತ್ತು ವರ್ಷ ವಯಸ್ಸಾಗುವ ಹೊತ್ತಿಗೆ ಪೂರ್ಣ ಕಿವುಡು.

ಇಷ್ಟಾದರೂ ವಲ್ಲತೋಳರು ಶ್ರೇಷ್ಠ ಕವಿ ಎನ್ನಿಸಿಕೊಂಡರು. ಕಥಕಳಿಯಂತಹ ಕಲೆಯನ್ನು ಉಳಿಸಿಕೊಟ್ಟರು. ಇಡೀ ಭಾರತದಲ್ಲಿ ಕೀರ್ತಿವಂತರಾದರು; ಹಲವು ಹೊರದೇಶಗಳಲ್ಲಿಯೂ ಖ್ಯಾತಿ ಗಳಿಸಿದರು.

ಗಾಂಧೀಜಿಯೊಡನೆ

ಅತ್ಯಂತ ವಿನಯಶೀಲರೂ ಸುಭಾಷಿಗಳೂ ಆದ ವಲ್ಲತೋಳ್‌ರವರಿಗೆ ಭಾರತದಲ್ಲಿ ಪರಿಚಯವಿಲ್ಲದ ದೊಡ್ಡ ವ್ಯಕ್ತಿಗಳೇ ಇಲ್ಲವೆನ್ನಬೇಕು. ಮಹಾತ್ಮಾ ಗಾಂಧಿ, ಜವಾಹರಲಾಲ್‌ನೆಹರೂ, ಸರ್ದಾರ್ ಪಟೇಲ್‌, ಮೌಲಾನ ಆಜಾದ್‌ಮೊದಲಾದ ರಾಷ್ಟ್ರನಾಯಕರನ್ನೂ ರವೀಂದ್ರನಾಥ ಠಾಕೂರ್ ರಂತಹ ಮಹಾಕವಿಗಳನ್ನೂ ಮದನಮೋಹನ ಮಾಳವೀಯರಂತಹ ವಿದ್ವಾಂಸರನ್ನೂ ಅವರು ಭೇಟಿಯಾಗಿದ್ದರು. ಅವರ ವಾಕ್‌ಚಾತುರ್ಯಕ್ಕೆ ಎಲ್ಲರೂ ಪ್ರಸನ್ನರಾಗುತ್ತಿದ್ದರು.

ಮಹಾತ್ಮಾ ಗಾಂಧಿಯವರನ್ನು ಮಹಾಕವಿ ಹಲವು ಬಾರಿ ಸಂದರ್ಶಿಸಿದ್ದರು. ಒಂದು ಸಲ ಗಾಂಧೀಜಿಯವರು ಚರಕದಿಂದ ನೂಲುತ್ತಿದ್ದ ಸಮಯದಲ್ಲಿ ಕವಿ ಅವರನ್ನು ಕಂಡರು.

“ಮಹಾಕವಿಗೆ ನೂಲು ತೆಗೆಯಲು ಗೊತ್ತಿದೆಯೇ?” ನಗುನಗುತ್ತ ಗಾಂಧೀಜಿ ಪ್ರಶ್ನಿಸಿದರು.

“ಇಲ್ಲ” ಎಂದರು ವಲ್ಲತೋಳರು.

“ಅದೇಕೆ ಹಾಗೆ?” ಗಾಂಧೀಜಿ ಪ್ರಶ್ನಿಸಿದರು.

ವಲ್ಲತೋಳ್‌ಹೇಳಿದರು: “ಕವಿ ಮನಸ್ಸಿನ ರಾಜ್ಯದವನು. ಅವನು ಸ್ವತಃ ಕೆಲಸ ಮಾಡಲಾರನು; ತನ್ನ ಕವಿತೆಯಿಂದ ಮಿಕ್ಕದವರಿಗೆ ಸ್ಫೂರ್ತಿ ಕೊಡುವುದೇ ಅವನು ಮಾಡುವ ಕೆಲಸ.”

“ಆಹಾ! ಎಷ್ಟೊಂದು ಸೊಗಸಾದ ಮಾತು! ಹೀಗೆಯೇ ಗುರುದೇವ ರವೀಂದ್ರರೂ ಕೂಡಾ ಹೇಳಿದ್ದಾರೆ” ಎಂದು ಮಂದಸ್ಮಿತರಾಗಿ ನಕ್ಕು ಗಾಂಧೀಜಿ ಮುಂದುವರಿಸಿದರು: “ನಿಮಗೆ ಖಾದಿಯಲ್ಲಿ ವಿಶ್ವಾಸವಿದೆಯೇ?”

ವಲ್ಲತೋಳರು, “ಖಾದಿಯಲ್ಲಿ ಮಾತ್ರವೇಕೆ? ನೀವು ಉಪದೇಶಿಸಿರುವ ಎಲ್ಲ ಆದರ್ಶಗಳಲ್ಲೂ ನನಗೆ ಆತ್ಮೀಯ ವಾದ, ಅಂತಃಕರಣಪೂರ್ವಕವಾದ ವಿಶ್ವಾಸವುಂಟು” ಎಂದು ಉತ್ತರಿಸಿದರು.

ದೇಶ ಸಂಚಾರ

ಕಿವುಡರಾಗಿದ್ದರೂ ತಮ್ಮ ಜೀವನದ ಉತ್ತರಾರ್ಧದಲ್ಲಿ ದೇಶ ಸಂಚಾರಕ್ಕೆ ಅದೊಂದು ತೊಡಕಾಗಲಿಲ್ಲ. ಭಾರತದ ಪ್ರಮುಖ ಸ್ಥಳಗಳನ್ನೆಲ್ಲ ಅವರು ಸುತ್ತಾಡಿದರು. ದಕ್ಷಿಣ ಭಾರತವೆಲ್ಲ ಅವರಿಗೆ ತಮ್ಮ ಹುಟ್ಟೂರಿನಂತೆ ಸುಪರಿಚಿತ. ಉತ್ತರ ಭಾರತದ ಪ್ರವಾಸ ಕಾಲದಲ್ಲಿ ಅವರು ಹಲವಾರು ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದರು. ಕಾಶಿಗೆ ಹೋಗಿ ಗಂಗಾಸ್ನಾನ ಮಾಡಿ ಗಯಾ ಮೊದಲಾದ ಪ್ರಮುಖ ಕ್ಷೇತ್ರಗಳನ್ನು ಸಂದರ್ಶಿಸಿದರು. ಇದೇ ರೀತಿ ಅವರು ವಿದೇಶಗಳಲ್ಲೂ ಸಂಚರಿಸಿದರು. ಮಲೇಷ್ಯಾ, ಬರ್ಮಾ, ಶ್ರೀಲಂಕಾ ಮೊದಲಾದ ರಾಜ್ಯಗಳನ್ನು ಸಂದರ್ಶಿಸಿದರಲ್ಲದೆ ೧೯೨೬ರಲ್ಲಿ ಪೋಲೆಂಡ್‌, ಇಂಗ್ಲೆಂಡ್‌, ಫ್ರಾನ್ಸ್‌, ಇಟಲಿ, ರಷ್ಯಾ ಮೊದಲಾದ ಪಾಶ್ಚಾತ್ಯ ದೇಶಗಳಿಗೆ ಭೇಟಿಕೊಟ್ಟರು.

ಈ ದೇಶ ಸಂಚಾರಕ್ಕೆಲ್ಲ ಕೇವಲ ಆತ್ಮಸಂತೋಷ ಮಾತ್ರ ಕಾರಣವಾಗಿರದೆ ಬೇರೆ ಕೆಲವು ಕಾರಣಗಳೂ ಇದ್ದವು. ೧೯೨೮ರಲ್ಲಿ ಕಲ್ಕತ್ತಾ ಕಾಂಗ್ರೆಸ್‌ಅಧಿವೇಶನಕ್ಕಾಗಿಯೇ ಅವರು ಅಲ್ಲಿಗೆ ಹೋದರು. ಆ ಯಾತ್ರೆಯಲ್ಲಿ ಕಥಕಳಿಯ ಟಿಕೆಟ್‌ಗಳನ್ನು ಮಾರುವ ಉದ್ದೇಶವನ್ನಿರಿಸಿಕೊಂಡಿದ್ದರು. ಮಲೇಷ್ಯಾ, ಬರ್ಮಾ ಪರ್ಯಟನೆಗಳಲ್ಲೂ ಕಥಕಳಿಯ ಪ್ರಚಾರವೇ ಪ್ರಮುಖ ಅಂಗವಾಯಿತು.

ವಲ್ಲತೋಳರು ಕಥಕಳಿ ನೃತ್ಯಗಾರರೊಡನೆ

ಕಾವ್ಯ ಸೃಷ್ಟಿ

ಮಹಾಕವಿಗೆ ಸಂಸ್ಕೃತ ಭಾಷೆಯಲ್ಲಿ ಅಷ್ಟೊಂದು ಪಾಂಡಿತ್ಯವಿದ್ದರೂ ಮಲಯಾಳ ಭಾಷೆಯ ಮೇಲೆ ಅವರಿಗೆ ಅಪಾರ ಅಭಿಮಾನವೂ ಮಮತೆಯೂ ಇತ್ತು. ಶ್ಲೋಕಗಳನ್ನು ನಿರ್ಮಿಸುವುದು ಅವರಿಗೆ ನೀರು ಕುಡಿದಷ್ಟು ಸುಲಭ. ನಿರಾಯಾಸವಾಗಿ ಸರಿಯಾದ, ಅರ್ಥವತ್ತಾದ, ಸುಂದರವಾದ ಶಬ್ದಗಳನ್ನು ಆರಿಸುತ್ತಿದ್ದರು ಅವರು. ಕೆಲವೊಮ್ಮೆ ಯಾವುದಾದರೂ ಮನೆಗೆ ಭೇಟಿ ಕೊಟ್ಟಾಗ ಅಲ್ಲಿ ತಾಯಿ ಮಕ್ಕಳು ಪರಸ್ಪರ ಮಾತನಾಡುವುದನ್ನು ಅವರು ಶ್ಲೋಕರೂಪದಲ್ಲಿ ಬರೆಯುವರು. ಹೆಚ್ಚೇಕೆ, ಚದುರಂಗವನ್ನಾಡುವಾಗ ತಮ್ಮೊಡನೆ ಎದುರಾಳಿ ಯಾವುದಾದರೊಂದು ಪ್ರಶ್ನೆಯನ್ನು ಹಾಕಿದರೆ ಅದಕ್ಕೂ ಶ್ಲೋಕ ರೂಪದಲ್ಲೇ ಉತ್ತರವನ್ನು ಕೊಡುವರು.

೧೯೦೪ರಲ್ಲಿ ವಲ್ಲತೋಳ್‌ಅವರು ವಾಲ್ಮೀಕಿ ರಾಮಾಯಣವನ್ನು ಸಂಸ್ಕೃತದಿಂದ ಮಲಯಾಳಕ್ಕೆ ಅನುವಾದ ಮಾಡುವ ಕಷ್ಟದ ಕೆಲಸವನ್ನು ಕೈಗೊಂಡರು.

೧೯೧೦ ರಲ್ಲಿ ಅವರು ‘ಚಿತ್ರಯೋಗ’ ಮಹಾಕಾವ್ಯವನ್ನು ಬರೆದರು. ಕಿವಿಯ ತೊಂದರೆಯಿಂದ ಈ ಮಹಾಕಾವ್ಯವನ್ನು ೧೯೧೨ ರಲ್ಲಿ ಮಾತ್ರವೇ ಪೂರ್ತಿಗೊಳಿಸಲು ಸಾಧ್ಯವಾಯಿತು. ಮಂದಾರವತಿ ಮತ್ತು ಸುದರ್ಶನ ಎನ್ನುವವರ ಪ್ರೇಮದ ಕಥೆಯನ್ನು ಇಲ್ಲಿ ಹೃದಯ ಸ್ಪರ್ಶಿಯಾಗಿ ಹೇಳಿದ್ದಾರೆ.

ಇವರಿಬ್ಬರು ಮದುವೆಯಾಗಬೇಕೆಂದು ಬಯಸಿದುದು, ಬಂದ ಅಡ್ಡಿಗಳು, ನಾಯಕ ನಾಯಕಿಯರು ಅನುಭವಿಸಿದ ಕಷ್ಟಗಳು, ಕಡೆಗೆ ಸುಖವನ್ನು ಕಂಡದ್ದು ಸುಂದರವಾಗಿ ನಿರೂಪಿತವಾಗಿವೆ.

‘ಗಣಪತಿ’, ‘ಅನಿರುದ್ಧ’, ‘ಸೀತಾ’ ಮೊದಲಾದ ದೀರ್ಘ ಕವನಗಳಲ್ಲಿ ಕಥೆಗಳನ್ನು ಹೇಳಿದ್ದಾರೆ.

ವಲ್ಲತೋಳರ ‘ಸಾಹಿತ್ಯ ಮಂಜರಿ’ಯಲ್ಲಿ ಆರಂಭ ಭಾಗದ ಒಂಬತ್ತನೇ ಖಂಡದಲ್ಲಿ ‘ಶುದ್ಧರಲ್ಲಿ ಶುದ್ಧರು’ ಎಂಬ ಕೃತಿಯ ಕಥಾವಸ್ತು ಹೀಗಿದೆ: ಒಂದು ಮನೆಗೆ ಬೆಂಕಿಹತ್ತಿ ಉರಿಯುತ್ತಿರುವಾಗ ಕೀಳು ಜಾತಿಯವರು ಎನ್ನಿಸಿಕೊಂಡವರು ಬೆಂಕಿ ನಂದಿಸಲು ಬಾವಿಯಿಂದ ನೀರು ಸೇದುವುದಕ್ಕಾಗಿ ಧಾವಿಸಿಬರುತ್ತಾರೆ. ಅಸ್ಪೃಶ್ಯತೆಯನ್ನು ಅನುಸರಿಸುವ ಗೃಹಸ್ಥನು ಬಾವಿಯನ್ನು ಕೀಳು ಜಾತಿಯವರು ಮುಟ್ಟಿ ಅಶುದ್ಧ ಗೊಳಿಸಬಾರದೆಂದು ವಿರೋಧಿಸುತ್ತಾನೆ. ಅಸ್ಪೃರ್ಶಯತೆ ಎಷ್ಟು ತಪ್ಪು ಎಂಬುದನ್ನು ಬಹು ಚೆನ್ನಾಗಿ ಹಲವು ಕಥೆಗಳಲ್ಲಿ ತೋರಿಸಿದ್ದಾರೆ.

ವಲ್ಲತೋಳರು ಪದ್ಮ ಪುರಾಣ, ಮತ್ಸ್ಯ ಪುರಾಣ ಮತ್ತು ಮಾರ್ಕಂಡೇಯ ಪುರಾಣಗಳನ್ನು ಮಲಯಾಳ ಭಾಷೆಗೆ ಅನುವಾದಿಸಿದರು. ಭಾಸ ಎಂಬುವನು ಬಹುದೊಡ್ಡ ಸಂಸ್ಕೃತ ನಾಟಕಕಾರ. ಅವನ ನಾಟಕಗಳನ್ನೂ ಅನುವಾದಿಸಿದರು. ಕಾಳಿದಾಸನ ‘ಶಾಕುಂತಳ’ ನಾಟಕವನ್ನೂ ಮಲಯಾಳ ಭಾಷೆಗೆ ಅನುವಾದಿಸಿದರು. ಎಪ್ಪತ್ತೈದು ವರ್ಷ ವಯಸ್ಸಾಗಿದ್ದಾಗ ಋಗ್ವೇದವನ್ನು ಮಲಯಾಳ ಭಾಷೆಗೆ ಅನುವಾದ ಮಾಡಲು ಪ್ರಾರಂಭಿಸಿದರು. ಅವರು ಸಾಯುವುದಕ್ಕೆ ಸ್ವಲ್ಪ ಮೊದಲು ಈ ಕಾರ್ಯವನ್ನು ಮುಗಿಸಿದರು.

ಒಂದು ಆಶ್ಚರ್ಯದ ಸಂಗತಿ-ಕಿವುಡಾಗಿದ್ದ ಈ ಕವಿ ಬರೆದ ಕಾವ್ಯ ಕಿವಿಗೆ ತುಂಬ ಇಂಪು!

ಮಕ್ಕಳ ಬಗ್ಗೆ ಅವರಿಗಿರುವ ವಾತ್ಸಲ್ಯ ಅಸಾಧಾರಣವಾಗಿತ್ತು. ಮಕ್ಕಳೆಂದರೆ ಅವರಿಗೆ ಜೀವ; ಅವರ ಸರ್ವಸ್ವವೆಂದರೂ ತಪ್ಪಾಗಲಾರದು. ಮಕ್ಕಳು ಮತ್ತು ಹೂವುಗಳು ಎಂದರೆ ಅವರಿಗೆ ಪ್ರಾಣ.

“ಹೂವೇ ನೀನು ಮಗುವೇ? ಮಗುವೇ ನೀನು ಹೂವೇ?”

“ಎರಡನ್ನೂ ಒಂದೇ ಹೆಸರಿಂದ ಕರೆಯಬಹುದಲ್ಲ!” ಎಂದಿದ್ದಾರೆ ಅವರು.

ದೇಶಪ್ರೇಮ

“ಭಾರತ ಎಂಬ ಹೆಸರನ್ನು ಕೇಳುತ್ತಲೇ ನನ್ನ ಮನಸ್ಸು ಅಭಿಮಾನದಿಂದ ಪುಳಕಿತವಾಗುತ್ತದೆ. ಈ ಪ್ರಾಚೀನ ಪುಣ್ಯಭೂಮಿಯ ಹಿರಿಮೆಯನ್ನು ಹೇಗೆ ವರ್ಣಿಸಲಿ?” ಎಂದಿದ್ದಾರೆ ವಲ್ಲತೋಳರು.

೧೯೨೧ರಲ್ಲಿ ವೈಕಂ ಎಂಬಲ್ಲಿ ಸತ್ಯಾಗ್ರಹ ಶಿಬಿರದಲ್ಲಿ ಗಾಂಧೀಜಿಯವರನ್ನು ಅವರು ಮೊತ್ತಮೊದಲಾಗಿ ಭೇಟಿಯಾದರು. ಆ ಸಂದರ್ಶನದಿಂದಾಗಿ ಮೊದಲೇ ಅವರಲ್ಲಿ ಮೊಳೆತಿದ್ದ ದೇಶಾಭಿಮಾನವು ಮತ್ತಷ್ಟು ಗಾಢವಾಗಿ ಬೆಳೆಯಿತು. ಗಾಂಧೀಜಿಯವರ ದರ್ಶನದಿಂದಾಗಿ ಮನಸ್ಸೊಳಗೇ ಅವರಲ್ಲಿ ಕ್ರಾಂತಿಯುಂಟಾಯಿತು. ಅವರು ಹಲವು ದೇಶಪ್ರೇಮಗೀತೆಗಳನ್ನು ಬರೆದರು. ಅವರ ಸ್ನೇಹಿತರು ಹಲವರು, ‘ಈ ರೀತಿಯ ಗೀತೆಗಳನ್ನು ಬರೆದರೆ ಬ್ರಿಟಿಷ್‌ಸರ್ಕಾರಕ್ಕೆ ಸಿಟ್ಟು ಬಂದೀತು, ಕವಿಗೆ ತೊಂದರೆಯಾಗಬಹುದು’ ಎಂದು ಎಚ್ಚರಿಸಿದರು. ಆದರೆ ಮಹಾಕವಿ ದೇಶಭಕ್ತಿ ಗೀತೆಗಳನ್ನು ಬರೆಯುವುದನ್ನು ನಿಲ್ಲಿಸಲಿಲ್ಲ.

ಮೇಲೆ ಮೇಲೆ ಏರಲಿ!

೧೯೩೦ ರಲ್ಲಿ ಕಲ್ಲಿಕೋಟೆಯಲ್ಲಿ ನಡೆದ ಮೊದಲನೆಯ ಸ್ವದೇಶೀ ಪ್ರದರ್ಶನದಲ್ಲಿ ಕಾಂಗ್ರೆಸಿನ ಬಾವುಟವನ್ನು ಏರಿಸಲು ಕಾರ್ಯಕರ್ತರು ಮಹಾಕವಿಯನ್ನು ಪ್ರಾರ್ಥಿಸಿದ್ದರು. ಅಂದಿನ ಬ್ರಿಟಿಷ್‌ಸರ್ಕಾರ ದೇಶೀಯ ಕಾಂಗ್ರೆಸಿನ ಯಾವುದೇ ಕಾರ್ಯಕ್ರಮವನ್ನು ಸಂಶಯ ದೃಷ್ಟಿಯಿಂದ ನೋಡುತ್ತಿತ್ತು. ನಿಶ್ಚಯವಾದ ದಿನದಂದು ಮಹಾಕವಿ ಕಲ್ಲಿಕೋಟೆಗೆ ತೆರಳಿದಾಗ ಅಲ್ಲಿ ಕೆಲವರು ಅಂದಿನ ಸರ್ಕಾರದ ಪೋಲೀಸ್‌ದೌರ್ಜನ್ಯವನ್ನು ಗಮನಿಸಿ ಮಹಾಕವಿಗೆ ‘ಸಮಾರಂಭದಿಂದ ದೂರಿವಿರಿ’ ಎಂದು ಹೇಳಿದರು. ಅದಕ್ಕವರು ಹೀಗೆಂದರು:

“ನನಗಿಲ್ಲಿ ಒಂದೇ ಒಂದು ಕಾರ್ಯಮಾತ್ರವೇ ಇರುವುದು-ಬಾವುಟವನ್ನು ಏರಿಸುವುದು. ಅದು ನಾನು ಒಪ್ಪಿಕೊಂಡ ಕಾರ್ಯವಾಗಿದೆ. ಹಾಗಿರುವಾಗ ನಮ್ಮ ಬಾವುಟವನ್ನು ಏರಿಸುವುದು ಒಂದು ಅಪಾರಾಧವಾಗಿದ್ದರೆ ಆ ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧನಾಗಿರುವೆನು.”

ಅಂದು ವಲ್ಲತೋಲ್‌ಅವರು ‘ಪೋರಾ….ಪೋರಾ’ (ಸಾಲದು…..ಸಾಲದು) ಎಂಬ ತಮ್ಮ ದೇಶಭಕ್ತಿ ಗೀತೆಯನ್ನು ಹಾಡುತ್ತಾ ಬಾವುಟವನ್ನೇರಿಸಿದರು.

‘ಸಾಲದು ಸಾಲದು….. ಇನ್ನೂ ಇನ್ನೂ …..ಮೇಲೆ ಮೇಲೆ ಏರಲಿ….

‘ಭಾರತಮಾತೆಯ ತ್ರಿವರ್ಣಪತಾಕೆ ಮೇಲೆ ಮೇಲೆ ಏರಲಿ’. ಈ ಗಾನವನ್ನು ಕೇಳುತ್ತಾ ಅಲ್ಲಿ ನೆರೆದ ಜನರು ದೇಶಭಕ್ತಿಯಿಂದ ಪುಳಕಿತರಾದರು.

ಗುರುನಾಥ

ವಲ್ಲತೋಳರು ಮಹಾತ್ಮಾ ಗಾಂಧೀಜಿಯವರ ಬಗ್ಗೆಯೂ ಹಲವಾರು ಕವನಗಳನ್ನು ಬರೆದಿದ್ದರು. ತಮ್ಮ ‘ನನ್ನ ಗುರುನಾಥ’ ಎಂಬ ಪುಸ್ತಕದಲ್ಲಿ ಗಾಂಧೀಜಿಯನ್ನು ಜಪಿಸಿದ್ದಾರೆ. ಜಗತ್ತಿನ ಹಲವಾರು ಮಹಾವ್ಯಕ್ತಿಗಳ ವಿಶಿಷ್ಟ ಗುಣಗಳು ಗಾಂಧೀಜಿಯಲ್ಲಿ ಸೇರಿವೆ ಎಂದು ಹೇಳಿ ಹೀಗೆ ಬರೆದಿದ್ದಾರೆ:‘(ಈ ಎಲ್ಲ ಗುಣಗಳನ್ನು) ಒಬ್ಬನಲ್ಲೇ ಕಾಣಬೇಕಾದರೆ ನಡೆಯಿರಿ ಬಾಂಧವರೆ, ಗುರುನಾಥನ ಸನ್ನಿಧಿಗೆ!

ಇಲ್ಲವಾದರೆ ಅವನ ಚರಿತ್ರೆಯನ್ನಾದರೂ ಓದಿರಿ!’

ಗಾಂಧೀಜಿಯವರನ್ನು ಕುರಿತಾದ ಇನ್ನೊಂದು ಕವಿತೆಯನ್ನು ಇಂಗ್ಲೀಷ್‌ಗೆ ಭಾಷಾಂತರಿಸಿ, ೧೯೨೭ ರಲ್ಲಿ ಮಹಾತ್ಮಾಜಿ ಕಲ್ಲಿಕೊಟೆಯನ್ನು ಸಂದರ್ಶಿಸಿದಾಗ ಮಹಾಕವಿ ಅದನ್ನು ಅರ್ಪಿಸಿದರು. ಆ ಪದ್ಯ ಹೀಗಿದೆ:

‘ನಿನಗೆ ಲೋಕವೇ ಸಂಸಾರ, ಈ ಗಿಡಗಳೂ
ಹುಲ್ಲುಕಡ್ಡಿಗಳೂ ಹುಳಗಳೂ ಕೂಡಿಯೇ ಕುಟುಂಬ.
ತ್ಯಾಗವೆನ್ನುವುದೇ ಲಾಭ, ಸೇವೆಯೇ ಅಭಿವೃದ್ಧಿ
ನೀನು ಲೋಕವನ್ನೇ ಹೀಗೆ ಗೆಲ್ಲುವೆ ಗುರುನಾಥ!’

ಪ್ರಕೃತಿ ಚೆಲುವಿಗೆ ಹೆಸರಾದ ತಮ್ಮ ಕೇರಳ ನಾಡಿನ ಬಗ್ಗೆಯೂ ವಲ್ಲತೋಳರು ಸುಂದರವಾದ ಕವನಗಳನ್ನು ರಚಿಸಿದ್ದಾರೆ. ಕೇರಳ ದೇವತೆಯ ಬಗ್ಗೆ ಬರೆದ ಒಂದು ಸೊಗಸಾದ ಕವನ ಹೀಗಿದೆ:

‘ಹಸಿರು ಹರಡಿರುವ ಸಹ್ಯಾದ್ರಿಪರ್ವತದ ಹಾಸಿನಲಿ ತಲೆಯಿಟ್ಟ ಉ,

ಸ್ವಚ್ಛವಾಗಿರುವ ಮರುಳು ದಿನ್ನೆಯಲಿ ಪಾದವನಿಟ್ಟು, ದೇಹವನ್ನೊಡ್ಡಿ ಮಲಗಿರುವ ನಿನ್ನ ಭುಜಬಲಕ್ಕೆ ಕಾವಲಾಗಿ

ಒಂದೆಡೆ ಕನ್ಯಾಕುಮಾರಿಯೂ ಇನ್ನೊಂದೆಡೆ ಗೋಕರ್ಣೇಶನೂ ನಿಂತಿರುವರಲ್ಲ!’

ಪ್ರಶಸ್ತಿ ಬೇಡ

೧೯೨೧ ರಲ್ಲಿ ವಲ್ಲತೋಳ್‌ಅವರಿಗೆ ಬ್ರಿಟಿಸ್‌ಸರ್ಕಾರ ಪ್ರಶಸ್ತಿ ನೀಡಲು ಯೋಚಿಸಿತು. ಪ್ರಿನ್ಸ್‌ಆಫ್‌ವೇಲ್ಸ್‌ಎಂದರೆ ಬ್ರಿಟಿಷ್‌ಚಕ್ರಾಧಿಪತ್ಯಕ್ಕೆ ಮುಂದೆ ಚಕ್ರವರ್ತಿಯಾಗುವವನು. ೧೯೨೧ ರಲ್ಲಿ ಪ್ರಿನ್ಸ್‌ಆಫ್‌ವೇಲ್ಸರು ವಲ್ಲತೋಳರಿಗೆ ಪ್ರಶಸ್ತಿ ನೀಡುವುದೆಂದು ಬ್ರಿಟಿಷ್‌ಸರ್ಕಾರ ನಿರ್ಧರಿಸಿತು. ಆದರೆ ಅದಕ್ಕೆ ಸ್ವಲ್ಪ ಮೊದಲು, ಅಮೃತಸರದ ಜಲಿಯನ್‌ವಾಲಾಬಾಗ್‌ನಲ್ಲಿ ನಿಸ್ಸಹಾಯಕ ಭಾರತೀಯರನ್ನು ಬ್ರಿಟಿಷರ ಗುಂಡುಗಳು ಬಲಿ ತೆಗೆದುಕೊಂಡಿದ್ದವು. ಇದಕ್ಕೆ ಪ್ರತಿಭಟನೆಯಾಗಿ ವಲ್ಲತೋಳರು ಪ್ರಿನ್ಸ್‌ಆಫ್‌ವೇಲ್ಸರ ಪ್ರಶಸ್ತಿಯನ್ನು ಮುಟ್ಟುವುದಿಲ್ಲ ಎಂದುಬಿಟ್ಟರು.

ನಾಡಿನ ಕೃತಜ್ಞತೆ

ಭಾರತಕ್ಕೆ ಸ್ವಾತಂತ್ಯ್ರ ಲಭಿಸಿದ ಮೇಲೆ ಮದ್ರಾಸ್‌ರಾಜ್ಯದ ಸರ್ಕಾರ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ – ಇವುಗಳಲ್ಲಿ ಒಬ್ಬೊಬ್ಬ ಮಹಾಕವಿಯನ್ನು ಪ್ರತಿವರ್ಷವೂ ‘ರಾಷ್ಟ್ರಕವಿ’ ಎಂಬ ಬಿರುದಿನಿಂದ ಸಮ್ಮಾನಿಸುವುದೆಂದು ತೀರ್ಮಾನಿಸಿತು. ಆ ಪ್ರಕಾರ ೧೯೪೮ ರ ಆಗಸ್ಟ್‌೧೪ರಂದು ಮದ್ರಾಸಿನಲ್ಲಿ ಮಹಾಕವಿ ವಲ್ಲತೋಳ್‌ಅವರನ್ನು ‘ರಾಷ್ಟ್ರಕವಿ’ ಎಂಬ ಬಿರುದಿನೊಂದಿಗೆ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗವರ್ನರ್ ಅವರಿಗೆ ಪದಕವನ್ನು ನೀಡಿದರಲ್ಲದೆ ಒಂದು ಸಾವಿರ ರೂಪಾಯಿಗಳನ್ನು ಇತ್ತು ಸಮ್ಮಾನಿಸಿದರು. ಆಮೇಲೆ ಪ್ರತಿವರ್ಷವೂ ಇದರ ಗೌರವಾರ್ಥವಾಗಿ ಅವರಿಗೆ ಒಂದು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು.

ಇದಲ್ಲದೆ ವಲ್ಲತೋಳರಿಗೆ ಹಲವು ಗೌರವಗಳು ದೊರೆತವು. ೧೯೫೦ ರಲ್ಲಿ ಅವರು ವಾರ್ಸಾ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಪೋಲೆಂಡಿಗೆ ಹೋದರು. ವಿಶ್ವಶಾಂತಿ ಮಂಡಲಿಯ ಉಪಾಧ್ಯಕ್ಷರುಗಳಲ್ಲಿ ಒಬ್ಬರಾದರು. ೧೯೫೫ ರಲ್ಲಿ ಕೇರಳ ಕಲಾಮಂದಿರ್ ಬೆಳ್ಳಿಯ ಹಬ್ಬವಾದಾಗ ಜವಾಹರಲಾಲರು ವಲ್ಲತೋಳರಿಗೆ ಒಂದು ಬಂಗಾರದ ಮಣಿಹಾರವನ್ನು ಅರ್ಪಿಸಿದರು. ೧೯೫೬ ರಲ್ಲಿ ಅವರು ಕೇರಳ ಸಾಹಿತ್ಯ ಅಕಾಡೆಮಿಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು. ಅವರು ತೀರಿಕೊಂಡ ಎಂಟು ವರ್ಷಗಳನಂತರ ‘ಸೋವಿಯತ್‌ಲ್ಯಾಂಡ್‌’ ಪತ್ರಿಕೆಯ ನೆಹರೂ ಶಾಂತಿ ಬಹುಮಾನಕ್ಕೆ ಅವರು ಆಯ್ಕೆಯಾದರು.

ಮಾನವ ಜನ್ಮ ದೊಡ್ಡದು

ವಲ್ಲತೋಳರ ದೇಶಪ್ರೇಮ ಕುರುಡು ಅಭಿಮಾನವಾಗಿರಲಿಲ್ಲ. ಅವರು ಹಿಂದಿನವರ ಜೀವನ ರೀತಿಯಲ್ಲಿ ಕಂಡ ಅಂಧವಿಶ್ವಾಸಗಳನ್ನು ಕಿತ್ತೊಗೆದು ಅವರ ಉತ್ತಮ ಗುಣಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಬಂದರು. ದೇವರಲ್ಲಿ ಅಪಾರ ಭಕ್ತಿ, ಶ್ರದ್ಧೆ, ಗುರುಭಕ್ತಿ, ದೇಶಭಕ್ತಿ ಮೊದಲಾದವು ಅವರ ಹೇಳತಕ್ಕ ಗುಣಗಳಾಗಿದ್ದವು. ದೇವರ ಮೇಲೆ, ಗುರುಜನರ ಮೇಲೆ ಭಕ್ತಿ ವಿಶ್ವಾಸಗಳಿದ್ದಂತೆಯೇ ಅವರಿಗೆ ಮಾನವ ಜನ್ಮದ ಮೇಲೆ ಕೂಡ ಪ್ರೀತಿಯಿತ್ತು, ಹೆಮ್ಮೆಯಿತ್ತು. ಅವರು ‘ಮಾನವ ಜನ್ಮ ದೊಡ್ಡದು’ ಎಂದು ಹೇಳುತ್ತಿದ್ದರು. ‘ಲೋಕವನ್ನು ಸ್ನೇಹದಿಂದ ಕಾಣಬೇಕು; ಸೇವಿಸಬೇಕು; ಪ್ರೀತಿಸಬೇಕು ಮತ್ತು ಇದರಿಂದ ಸಂತೋಷಪಡಬೇಕು’ ಇದು ಅವರ ಜೀವನ ತತ್ವ.

ಇನ್ನೊಬ್ಬರ ಅಭಿವೃದ್ಧಿಯಲ್ಲಿ ಅವರಿಗೆ ಸಂತೋಷವಿತ್ತು. ಮಿಕ್ಕವರ ಅಭಿವೃದ್ಧಿಗೆ ಬೇಕಾದ ಎಲ್ಲಾ ಸಹಾಯಗಳನ್ನೂ ಅವರು ಮಾಡುತ್ತಿದ್ದರು. ಯುವಕ ಕವಿಗಳು ಅವರ ಬಳಿ ಹೋದರೆ ಯುವಕರ ಕವನಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದರು.

ಕಥಕಳಿಗಾಗಿ

“ನಾನು ಸತ್ತ ಮೇಲೆ ಸ್ವರ್ಗಕ್ಕೆ ಹೋದೆ ಅಂತ ಇಟ್ಟುಕೊಳ್ಳಿ. ಅಲ್ಲಿ ಕಥಕಳಿ ಇರುತ್ತದೆ ಎಂದು ಹೇಗೆ ಖಂಡಿತ ಮಾಡಿಕೊಳ್ಳೋದು?”

ತಮಾಷೆಗಾಗಿ ವಲ್ಲತೋಳರು ಹೀಗೆ ಹೇಳುತ್ತಿದ್ದರು. ಆದರೆ ಈ ಹಾಸ್ಯದ ಮಾತಿನಲ್ಲಿ ಗಂಭೀರವಾದ ಒಂದು ಭಾವವೂ ಸೇರಿತ್ತು. ವಲ್ಲತೋಳರಿಗೆ ಕಥಕಳಿ ಎಂದರೆ ಪ್ರಾಣ. ಅದಿಲ್ಲದಿದ್ದರೆ ಸ್ವರ್ಗವೂ ಸಪ್ಪೆ ಎನ್ನುವಷ್ಟು ಅದರಲ್ಲಿ ಪ್ರೀತಿ.

‘ಕಥಕಳಿ’ ಎಂಬುದು ಒಂದು ನಾಟಕ ಪದ್ಧತಿ. ಈಗ ನಾವು ನೋಡುವುದು ಸುಮಾರು ೩೦೦-೪೦೦ ವರ್ಷಗಳಿಂದ ಕಥಕಳಿ ನಡೆದುಕೊಂಡು ಬಂದಿರುವ ರೀತಿಯ ಪ್ರದರ್ಶನ. ಆದರೆ ಪ್ರಾಯಶಃ ಇದಕ್ಕೆ ಒಂದೂವರೆ ಸಾವಿರ ವರ್ಷಗಳ ಚರಿತ್ರೆ ಇದೆ.

ಜವಾಹರಲಾಲ್ ಅವರು ವಲ್ಲತೋಳರಿಗೆ ಮಣಿಹಾರ ಅರ್ಪಿಸುತ್ತಿರುವುದು

ಪಾಶ್ಚಾತ್ಯ ವಿದ್ಯಾಭ್ಯಾಸ ಬೆಳೆದಂತೆ ಈ ಸೊಗಸಾದ ಕಲೆಗೆ ಪ್ರೋತ್ಸಾಹ ಕಡಿಮೆಯಾಯಿತು. ಇದನ್ನು ಅರ್ಥ ಮಾಡಿಕೊಳ್ಳಲಾರದ ಜನ ‘ಇದು ಒರಟು, ಕಲೆಯಿಲ್ಲ’ ಎನ್ನುವ ಭಾವ ತಾಳಿದರು. ಹೇಗೋ ಇದನ್ನು ಕಲಿತ ಕೆಲವರು ಇದರ ಕಲೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲಾರದೆ ಹೇಗೋ ಆಡುತ್ತಿದ್ದರು. ಇಂತಹ ಅದ್ಭುತ ಕಲಾರೂಪಕ್ಕೆ ಮತ್ತೆ ಜೀವ ಕೊಟ್ಟು ಅದನ್ನು ಉಳಿಸಿಕೊಟ್ಟವರು ವಲ್ಲತೋಳರು.

ಮಹಾಕವಿಯ ಜೀವನದಲ್ಲಿ ಮಹತ್ತರವಾದ ಒಂದು ಘಟನೆಯೆಂದರೆ ‘ಕಲಾಮಂಡಲ’ವನ್ನು ಸ್ಥಾಪಿಸಿದ್ದು. ಬಾಲ್ಯದಲ್ಲೇ ಕಥಕಳಿಯ ಬಗ್ಗೆ ಬಹಳ ಆಸಕ್ತಿಯಿದ್ದ ಮಹಾಕವಿ ತಮ್ಮ ಜೀವನದ ಉತ್ತರಾರ್ಧವನ್ನು ಕಥಕಳಿಗೆ ಬೇಕಾದ ಕಲಾಮಂಡಲದ ಸ್ಥಾಪನೆಯಲ್ಲೇ ಕಳೆದರು. ಈ ಕಲಾ ಮಂಡಲವನ್ನು ಕೊಚ್ಚಿನ್‌ನ ಚೆರುತ್ತುರುತ್ತಿ ಎಂಬಲ್ಲಿ ಸ್ಥಾಪಿಸಲಾಗಿದೆ. ೧೯೨೭ ರಲ್ಲಿ ಇದರ ಕೆಲಸ ಪ್ರಾರಂಭವಾಯಿತು.

ಕಲಾಮಂಡಲ

ವಲ್ಲತೋಳರಿಗೆ ಕಲಾಮಂಡಲ ಸ್ಥಾಪನೆಯ ಯೋಚನೆ ಹೊಳೆದದ್ದು ಹೀಗೆ:

ಒಮ್ಮೆ ಕವಿ ಕಥಕಳಿ ನೋಡಲು ಹೋಗಿದ್ದರು. ಆ ಕಥಕಳಿಯ ವೇಷಗಾರರು ತೀರಾ ಕಳಪೆ ರೀತಿಯಲ್ಲಿ ನಟಿಸಿದ್ದರು. ಇದನ್ನು ಕಂಡ ವಲ್ಲತೋಳ್‌ಅವರಿಗೆ ಬಹಳ ದುಃಖವಾಯಿತು. ‘ಇಷ್ಟೊಂದು ಉತ್ತಮವಾದ ಕಲೆ ಹೀಗೆ ಹಾಳಾಗಿ ಹೋಯಿತಲ್ಲಾ’ ಎಂದು ವಿಷಾದಗೊಂಡರು. ಆ ಕಲೆಯ ಸಂಪ್ರದಾಯವನ್ನೂ ಸೊಗಸನ್ನೂ ಉಳಿಸಿಕೊಂಡು ಬರಲು ಕಲಾಮಂಡಲವನ್ನು ಸ್ಥಾಪಿಸಲು ತೀರ್ಮಾನಿಸಿದರು.

ಕಲಾಮಂಡಲದ ಸ್ಥಾಪನೆಗೆ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ಬೇಕಾದ ಹಣವನ್ನೆಲ್ಲ ಅವರೇ ಸಂಚಾರ ಮಾಡಿ ಸಂಗ್ರಹಿಸಿದ್ದರು. ಹೆಚ್ಚಿನ ಕಡೆಗಳಲ್ಲಿ ಅವರಿಗೆ ಉತ್ತಮ ರೀತಿಯ ಧನಸಹಾಯ ಲಭಿಸಿತ್ತು. ಕೆಲವೊಮ್ಮೆ ಅವರಿಗೆ ಕಹಿ ಅನುಭವಗಳೂ ಉಂಟಾಗದೆ ಇರಲಿಲ್ಲ. ಒಮ್ಮೆ ಒಬ್ಬ ಧನಕನಲ್ಲಿ ಧನಸಹಾಯವನ್ನು ಯಾಚಿಸಿದಾಗ ಆತ ಕಟುವಾಗಿ ಹೇಳಿದ:

“ಕಥಕಳಿ ನಾಶವಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ.” ಅದಕ್ಕೆ ವಲ್ಲತೋಳ್‌ಉತ್ತರಿಸಿದರು:

“ಆದರೆ ಕೇರಳವೇ ನಾಶವಾಗಬೇಕೆಂಬ ಪ್ರಾರ್ಥನೆಯನ್ನು ದಯವಿಟ್ಟು ಮಾಡಬಾರದೆಂದು ನಾನು ಬೇಡಿಕೊಳ್ಳುತ್ತೇನೆ.”

ಉದ್ಧಟನತದಿಂದ ಮಾತನಾಡಿದ ಆ ಧನಿಕ ಈ ಮಾತಿನಿಂದ ಪೆಚ್ಚಾದ. ಕೊನೆಗೆ ಅಲ್ಪಸ್ವಲ್ಪ ಹಣವನ್ನು ತನ್ನ ಕೊಡುಗೆಯಾಗಿ ನೀಡಿದ. ಅಂತೂ ವಲ್ಲತೋಳ್‌ಬರಿಗೈಯಲ್ಲಿ ಹಿಂದಿರುಗಲಿಲ್ಲ.

ತಾವು ಉದ್ದೇಶಿಸಿದ ಕಲಾಮಂಡಲದ ಸ್ಥಾಪನೆಗಾಗಿ ಅವರು ಭರತಖಂಡವನ್ನೆಲ್ಲ ಸಂಚರಿಸಿದರು. ಮಾತ್ರವಲ್ಲ ಹೊರನಾಡುಗಲಾದ ಬರ್ಮಾ, ಶ್ರೀಲಂಕಾ, ಮಲೇಷ್ಯಾ ಮೊದಲಾದ ದೇಶಗಳನ್ನು ಅವರು ಸಂದರ್ಶಿಸಿ ಧನ ಸಂಗ್ರಹ ಮಾಡಿದರು. ೧೯೩೫ ರಲ್ಲಿ ಮೈಸೂರಿನಲ್ಲಿ ಕಥಕಳಿ ಪ್ರದರ್ಶನವನ್ನು ಕೈಗೊಂಡು ಯಶಸ್ಸಿನ ಕಾರ್ಯಕ್ರಮವನ್ನು ನೀಡಿದ್ದರು. ಮೈಸೂರಿನಿಂದ ಬೆಂಗಳೂರು, ಪೂನಾ, ಮುಂಬಯಿ, ಅಹಮದಾಬಾದ್‌, ಸೂರತ್‌, ಕಾಶಿ, ಬರೋಡಾ, ಅಲಹಾಬಾದ್‌, ಲಕ್ನೋ, ದೆಹಲಿ, ನಾಗಪುರ – ಹೀಗೆ ಹಲವಾರು ಕಡೆಗಳಲ್ಲಿ ಅವರು ತಮ್ಮ ಕಥಕಳಿಯ ಪ್ರದರ್ಶನವನ್ನು ಏರ್ಪಡಿಸಿದ್ದರು.

೧೯೩೮ ರಲ್ಲಿ ಮಹಾಕವಿ ತಮ್ಮ ಕಥಕಳಿ ನಟರೊಂದಿಗೆ ಕಲ್ಕತ್ತಾಕ್ಕೆ ಹೋದರು. ಅಲ್ಲಿ ಮಹಾಕವಿಯಾದ ರವೀಂದ್ರನಾಥ ಠಾಕೂರರ ‘ಶಾಂತಿನಿಕೇತನ’ದಲ್ಲಿ ಕಥಕಳಿಯ ಒಂದು ಪ್ರದರ್ಶನವನ್ನು ನೀಡಿದರು. ಈ ಪ್ರದರ್ಶನ ಕಂಡು ರವೀಂದ್ರರು ತುಂಬಾ ಸಂತೋಷಪಟ್ಟರು. ಆಮೇಲೆ ಕೇಳಿದರು:

“ಕಥಕಳಿಯನ್ನು ಎಲ್ಲಾ ಜನರು ಹೀಗೆಯೇ ಮೆಚ್ಚುತ್ತಾರೆಯೇ?”

ವಲ್ಲತೋಳ್‌ಉತ್ತರಿಸಿದರು: “ಹೌದು, ಯುರೋಪಿಯನರು ಇದನ್ನು ಪ್ರಶಂಸಿಸುವುದನ್ನು ಕಂಡಮೇಲೆ ಭಾರತೀಯರಿಗೂ ಒಳ್ಳೆಯ ಅಭಿಪ್ರಾಯ ಉಂಟಾಯಿತು.”

ಅದಕ್ಕೆ ಠಾಕೂರರು ನಕ್ಕು, ‘ಹೌದು ಈ ದೋಷ ನಮ್ಮಲ್ಲಿ ಅಧಿಕವಾಗಿದೆ. ನನಗೆ ನೊಬೆಲ್‌ಪುರಸ್ಕಾರ ಲಭಿಸಿದ ಮೇಲೆ ಮಾತ್ರವೇ ನಮ್ಮ ಜನರಿಗೆ ನಾನೊಬ್ಬ ಕವಿಯಾದೆ” ಎಂದರು.

ಮಹಾಕವಿ ವಲ್ಲತೋಳ್‌ಅವರ ಕೊನೆಯ ಹತ್ತು ವರ್ಷಕಾಲದ ನಿರಂತರ ಪರಿಶ್ರಮದ ಫಲವಾಗಿದೆ ನಾವಿಂದು ಚೆರುತ್ತುರುತ್ತಿಯ ನಿಸರ್ಗದ ಮಡಿಲಲ್ಲಿ ಕಾಣುತ್ತಿರುವ ಕಲಾಮಂಡಲ! ಇಂದಿಗೂ ಕಥಕಳಿ,ಲ ‘ಮೋಹಿನಿಯಾಟ್ಟಂ’ ನಂತಹ ನೃತ್ಯ ಕಲೆಗಳ ಉನ್ನತಿಗಾಗಿ ಈ ಸಂಸ್ಥೆ ನಿರಂತರ ಶ್ರಮಿಸುತ್ತಿದೆ.

ಕ್ರಮಬದ್ಧ ಜೀವನ

ಮಹಾಕವಿಯ ದೀರ್ಘಜೀವನದ ವಿಜಯದ ಒಳಗುಟ್ಟು ಕರ್ತವ್ಯಬೋಧೆಯೂ ಸಮಯನಿಷ್ಠೆಯೂ ಆಗಿದೆ. ಮಹಾಕವಿ ತಮ್ಮ ಅಂತಿಮ ಜೀವಿತ ಕಾಲವನ್ನು ಬಹಳ ನೈಪುಣ್ಯದಿಂದ ನಿಯೋಜಿಸಿಕೊಂಡಿದ್ದರು. ಬೆಳಗಿನಿಂದ ರಾತ್ರಿಯವರೆಗೆ ಯೋಜನೆಯಂತೆ ಕಾಲವನ್ನು ಕಳೆಯುತ್ತಿದ್ದರು.

೧೯೫೮ ರ ಮಾರ್ಚ್‌ಹದಿಮೂರರರಂದು ವಲ್ಲತೋಳರು ತೀರಿಕೊಂಡರು. ಆಗ ಅವರಿಗೆ ಎಂಬತ್ತನೆಯ ವರ್ಷ. ಅವರ ದೇಹದ ಅಂತ್ಯಕ್ರಿಯೆ ಕೇರಳ ಕಲಾಮಂಡಲದ ಆವರಣದಲ್ಲೆ ನಡೆಯಿತು. ಅಲ್ಲಿ ಒಂದು ಸಮಾಧಿಯನ್ನು ನಿರ್ಮಿಸಿದ್ದಾರೆ.

ಸಮರ್ಥರು

ಜೀವನದಲ್ಲಿ ಕಷ್ಟ ಕಂಡವರು ವಲ್ಲತೋಳ್‌. ನಾವು ಆಗಲೇ ಕಂಡಂತೆ ಅವರು ಹುಟ್ಟಿದುದು ಒಂದು  ಮೂಲೆಯ ಹಳ್ಳಿಯಲ್ಲಿ ಪಾಶ್ಚಾತ್ಯ ವಿದ್ಯಾಭ್ಯಾಸ ದೊರಕಲಿಲ್ಲ. ಆಯುರ್ವೇದ ವೈದ್ಯರಾಗಿ ಕೆಲವು ಕಾಲ ಕೆಲಸ ಮಾಡಿದರು. ಅದನ್ನೂ ಬಿಟ್ಟರು. ಎಟ್ಟನ್‌ತಂಪುರಾನ್‌ಎಂಬುವರು ಏರ್ಪಡಿಸುತ್ತಿದ್ದ ಕವಿಗೋಷ್ಠಿಗಳಲ್ಲಿ ಭಾಗವಹಿಸಲು ಪ್ರಯಾಣದ ಖರ್ಚಿಗಾಗಿ ಒಂದೆರಡು ರೂಪಾಯಿಗಳೂ ಇಲ್ಲದೆ ಹೋದ ದಿನಗಳುಂಟು! ಆದರೆ ಅವರ ಸಾಮರ್ಥ್ಯ ಕಡಿಮೆಯದಲ್ಲ. ವ್ಯವಹಾರದ ಜಗತ್ತಿನಲ್ಲಿ ಸಹ ಸಮರ್ಥರೇ. ‘ಕೇರಳ ಕಲ್ಪದ್ರುಮಂ’ ಎಂಬ ಮುದ್ರಣಾಲಯ ನಷ್ಟಕ್ಕೆ ಸಿಕ್ಕಿ ನರಳುತ್ತಿತ್ತು. ಅದರ ಹೊಣೆ ಯನ್ನು ಹೊತ್ತ ಕೆಲವೇ ದಿನಗಳಲ್ಲಿ ವಲ್ಲತೋಳರು ಅದನ್ನು ಲಾಭ ಗಳಿಸುವ ಸ್ಥಿತಿಗೆ ತಂದರು. ಆ ಕಾಲದಲ್ಲಿ ಅವರೇ ಕರಡು ಅಚ್ಚಿನ ಹಾಳೆಗಳನ್ನು ಓದಿ ತಿದ್ದುತ್ತಿದ್ದರು. ಕಣ್ಣಿಗೆ ಶ್ರಮವಾಗುವುದಾದರೂ ಆ ಕೆಲಸಕ್ಕೆ ಬೇರೆಯವರನ್ನು ನೇಮಿಸಲಿಲ್ಲ.

ಕರ್ತವ್ಯನಿಷ್ಠೆ

ತಮ್ಮ ಕರ್ತವ್ಯದಲ್ಲಿ ಅವರ ನಿಷ್ಠೆ ಬೆರಗುಗೊಳಿಸುವಂತಹದು. ಋಗ್ವೇದವನ್ನು ಮಲಯಾಳ ಭಾಷೆಗೆ ಅನುವಾದ ಮಾಡುವ ಕೆಲಸವನ್ನು ಅವರು ಪ್ರಾರಂಭಿಸಿದಾಗ ಅವರಿಗೆ ೭೫ ವರ್ಷ! ಅವರು ಮೊದಲು ತಮ್ಮ ಜೀವನ ಚರಿತ್ರೆಯನ್ನು ಬರೆಯಬೇಕೆಂದು ಹಲವರು ಸ್ನೇಹಿತರು ಒತ್ತಾಯ ಮಾಡಿದರು. ವಲ್ಲತೋಳರು ಕೇಳಿದರು: “ಮುಂದಿನ ಜನಾಂಗಕ್ಕೆ ವಲ್ಲತೋಳರ ಆತ್ಮಚರಿತ್ರೆಗಿಂತ ಪ್ರಾಚೀನ ಭಾರತದ ಈ ಜ್ಞಾನಕೋಶ ಮುಖ್ಯ, ಅಲ್ಲವೆ?” ಅವರು ಕಡೆಯ ದಿನಗಳಲ್ಲಿ ಕಾಯಿಲೆ ಮಲಗಿದರು. ಚಿಕಿತ್ಸೆಗಾಗಿ ಅವರನ್ನು ಆತುರದಲ್ಲಿ ಎರ್ನಾಕುಲಂಗೆ ಕರೆದೊಯ್ಯಬೇಕಾಯಿತು. ಅವರ ಋಗ್ವೇದ ಅನುವಾದದ ನಾಲ್ಕನೆಯ ಸಂಪುಟದ ಸುಮಾರು ೬೪ ಪುಟಗಳ ಕರಡು ಪ್ರತಿ ಅವರಿಗೆ ಅಚ್ಚಿನ ಮನೆಯಿಂದ ಬಂದಿತ್ತು; ಅವಷ್ಟಲನ್ನೂ ಓದಿ ತಿದ್ದಿದನಂತರವೇ ಅವರು ಎರ್ನಾಕುಲಂಗೆ ಹೊರಡಲು ಒಪ್ಪಿದುದು. ಋಗ್ವೇದದ ಅನುವಾದದ ಸಂಪುಟಗಳು ಹೊರಕ್ಕೆ ಬಂದಾಗ ಸಾಕಷ್ಟು ಪ್ರತಿಗಳ ಮಾರಾಟ ಆಗಲಿಲ್ಲ. ಇಷ್ಟು ದೊಡ್ಡ ಕೃತಿಯ ಪ್ರಕಟಣೆಗೆ ತುಂಬಾ ಹಣವನ್ನೆ ವಲ್ಲತೋಳರು ಸುರಿದಿದ್ದರು. ಎಪ್ಪತ್ತೇಳು-ಎಪ್ಪತ್ತೆಂಟು ವರ್ಷದ ವಲ್ಲತೋಳರು ಅಂಗಡಿಗಳಿಗೆ, ಮನೆಗಳಿಗೆ ತಾವೇ ಪ್ರತಿಗಳನ್ನು ಹೊತ್ತು ಮಾರಾಟಮಾಡಿದರು.

ಅವರು ದುಡಿದದ್ದೆಲ್ಲ ಮಲಯಾಳ ಭಾಷೆಗಾಗಿ; ಕೇರಳಕ್ಕಾಗಿ, ತಮಗಾಗಿ ಅಲ್ಲ. ಋಗ್ವೇದದ ಅನುವಾದ ಕೈಗೊಳ್ಳುವುದಕ್ಕಿಂತ ಎಷ್ಟೋ ವರ್ಷಗಳ ಮೊದಲು ಫ್ರೆಂಚ್‌ಕಾದಂಬರಿಕಾರ ವಿಕ್ಟರ್ ಹ್ಯೂಗೋನ ಕಾದಂಬರಿಯೊಂದನ್ನು ಅವರ ಗೆಳೆಯರಾದ ನಾರಾಯಣ ಮೆನನ್‌ ಎಂಬುವರು ಅನುವಾದ ಮಾಡಿದ್ದರು. ಅದನ್ನು ಪ್ರಕಟಿಸಿದವರು ವಲ್ಲತೋಳ್‌. ಕಾದಂಬರಿಯ ವಸ್ತು, ಭಾಷೆ. ಇವನ್ನು ಕುರಿತು ಟೀಕೆಗಳ ಸುರಿಮಳೆ ಆಯಿತು. ಎಲ್ಲವನ್ನೂ ಎದುರಿಸಿದರು ವಲ್ಲತೋಳ್‌. ಪ್ರತಿಗಳನ್ನು ಹೊತ್ತು ಅಲೆದರು. ಹತ್ತು ವರ್ಷಗಳ ಅನಂತರ ಈ ಅನುವಾದ ಬಹು ಶ್ರೇಷ್ಠ ಕೃತಿ ಎಂದು ಸಾಹಿತಿಗಳೇ ಒಪ್ಪಿದರು.

ನಾವೆಲ್ಲ ಒಂದೇ ಅಲ್ಲವೆ?

ಭಾರತ ಎಂದರೆ ಈ ಕವಿಗೆ ತುಂಬಾ ಹೆಮ್ಮೆ. ಭಾರತದ ಹೆಸರು ಕೇಳಿದರೇ ರೋಮಾಂಚನ. ಭಾರತದ ಹಿಂದಿನ ಋಷಿಗಳು, ಕವಿಗಳು, ಚಿಂತನೆ ಮಾಡಿದವರು ನಮಗೆ ಎಂತಹ ಆಸ್ತಿ ಬಿಟ್ಟುಹೋಗಿದ್ದಾರೆ ಎಂದು ಕೃತಜ್ಞತೆ. ಆದರೆ ತಮ್ಮ ಕಾಲದ ಭಾರತದಲ್ಲಿ ಜೀವನ ಪರಿಪೂರ್ಣವಾಗಿತ್ತು. ಎಲ್ಲರೂ ಸಂತೋಷವಾಗಿದ್ದರು ಎಂದೇನೂ ಅವರು ಭಾವಿಸಲಿಲ್ಲ. ಸುತ್ತ ಇದ್ದ ಬಡತನ, ಅಜ್ಞಾನ, ಅಸಮಾನತೆ ಕಂಡು ಅವರು ತುಂಬಾ ನೊಂದುಕೊಂಡರು. ಒಮ್ಮೆ ಹರಿಜನನೊಬ್ಬ ಅವರನ್ನು ‘ದೇವರು’ ಎಂದು ಮಾತನಾಡಿಸಿದ. ಒಂದು ಕವನದಲ್ಲಿ ಅವರು ಹೇಳುತ್ತಾರೆ:

‘ದೇವರು-ಹೀಗೆ ಅವನು ನನ್ನನ್ನು ಮಾತನಾಡಿಸಿದ್ದು,

ಇಲ್ಲಿ ನೋಡು,

ನಾವೆಲ್ಲ ಒಬ್ಬ ದೇವರ ಸೇವಕರು;

ಇಲ್ಲಿ ಯಾರು ಯಾರಿಗೆ ದೇವರಾಗಬಹುದು?

ನನ್ನ ಬಟ್ಟೆ ನಿನ್ನ ಬಟ್ಟೆಗಿಂತ ಸ್ವಲ್ಪ ಉತ್ತಮ ಇರಬಹುದು, ಇದನ್ನು ಯಾರಾದರೂ ಅಂಗಡಿಯಲ್ಲಿ ಕೊಳ್ಳಬಹುದು. ಆದರೆ ಮಾತೆ ನಿನಗೆ-ನನಗೆ ಕೊಟ್ಟ ಬಟ್ಟೆಗಳು ಒಂದೇ ನೂಲಿನಿಂದ ಮಾಡಿರುವುದಲ್ಲವೆ!