ವಲ್ಲಭ ಸ್ವಾಮಿ ಪ್ರಸಿದ್ಧ ಸರ್ವೋದಯ ಕಾರ್ಯಕರ್ತರು. ಮದುವೆಯನ್ನೇ ಮಾಡಿಕೊಳ್ಳದೆ, ತಮ್ಮದೆಂದು ಸಂಸಾರ ಕಟ್ಟಿಕೊಳ್ಳದೆ, ಬಡವರು-ಕಷ್ಟದಲ್ಲಿರುವವರೇ ತಮ್ಮ ಸಂಸಾರ ಎಂದು, ಅವರನ್ನು ನೋಡಿಕೊಂಡರು. ವಿನಯ, ನಿಸ್ವಾರ್ಥ, ಕಾರುಣ್ಯಗಳ ಸಂಗಮ ಅವರು.

ವಲ್ಲಭ ಸ್ವಾಮಿ

ಅಹಮದಾಬಾದ್ ನಗರದ ಹತ್ತಿರದಲ್ಲೇ ಹರಿ ಯುತ್ತಿರುವ ಒಂದು ನದಿ. ಅದರ ದಂಡೆಯ ಮೇಲೆ ಒಂದು ಆಶ್ರಮ.  ಅದಕ್ಕೂ ಸಾಬರಮತಿ ಆಶ್ರಮವೆಂದೆ ಹೆಸರು.

ನಮ್ಮ ಆಶ್ರಮಗಳು ಬೆಳೆದಿದ್ದು ನದೀ ತೀರಗಳಲ್ಲಿ. ಪ್ರಶಾಂತವಾಗಿ ಹರಿಯುತ್ತಿರುವ ಈ ನದಿಗಳೇ ನಮ್ಮ ಋಷಿ ಮುನಿಗಳಿಗೆ ಆಶ್ರಯ ಸ್ಥಾನ. ಅವರ ಧ್ಯಾನ ಚಿಂತನೆಗಳಿಗೆ ಸ್ಫೂರ್ತಿಯ ನೆಲೆ.

ಈ ಪರಂಪರೆಯನ್ನೇ ಗಾಂಧಿಯವರೂ ಅನುಸರಿಸಿದರು. ಅವರು ಕಟ್ಟಿದ ಸಾಬರಮತಿ ಆಶ್ರಮ ಸತ್ಯ, ಅಹಿಂಸೆಗಳ ಪ್ರಯೋಗಶಾಲೆಯಾಗಿತ್ತು. ಅನೇಕ ಮಕ್ಕಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಭಾರತ ದೇಶವನ್ನು ಸ್ವತಂತ್ರಗೊಳಿಸಬೇಕು; ಅದಕ್ಕಾಗಿ ಮಕ್ಕಳಿಗೆ ತರಬೇತಿ. ನಿರ್ಭಯದ ಶಿಕ್ಷಣಕ್ಕಾಗಿ ಪ್ರಯತ್ನ. ಉತ್ತಮ ಸಂಸ್ಕಾರಕ್ಕಾಗಿ ಸಾಹಸ. ಆರೇಳು ವರ್ಷಗಳಿಂದ ಹಿಡಿದು ಹದಿನೈದು ವರ್ಷದವರೆಗಿನ ಮಕ್ಕಳು ಅಲ್ಲಿ ಸಾಧನೆ ಮಾಡುತ್ತಿದ್ದರು.

ಪ್ರತಿಭಾವಂತ ಕಾಕಾ ಕಾಲೇಲ್ಕರ್, ಕಿಶೋರಿಲಾಲ ಮಶ್ರೂವಾಲ, ಮಹಾದೇವ ದೇಸಾಯಿ, ಮಗನಲಾಲ ಗಾಂಧಿ, ವಿನೋಬಾ ಭಾವೆ ಮುಂತಾದವರು ಆಶ್ರಮದ ಮಕ್ಕಳಿಗೆ ಶಿಕ್ಷಕರಾಗಿದ್ದರು.

ಆಶ್ರಮಕ್ಕೆ ಕಾಲಿಟ್ಟಿದ್ದು

೧೯೧೯ ರಲ್ಲಿ ಒಬ್ಬರು ವಲ್ಲಭನನ್ನು ಆಶ್ರಮಕ್ಕೆ ಕರೆದುಕೊಂಡು ಬಂದರು. ಆಗ ಆತನ ವಯಸ್ಸು ಕೇವಲ ಹನ್ನೆರಡು. ಬಡಕಲು ಶರೀರ. ಕೆದರಿದ ಕೂದಲು. ಮುಗ್ಧ ಸ್ವಭಾವ, ಆಶ್ರಮದಲ್ಲಿ ಕಾಲಿಡುತ್ತಲೇ ಮಹದೇವ ದೇಸಾಯಿ ಎದುರಾದರು.

‘ನೀವು ಯಾರು? ಯಾರನ್ನು ನೋಡ ಬೇಕಾಗಿತ್ತು?’ ಎಂದು ಕೇಳಿದರು.

‘ಈ ಬಾಲಕ ನನಗೆ ಮೊಮ್ಮಗನಾಗಬೇಕು. ಇಲ್ಲೇ ಆಶ್ರಮದಲ್ಲಿ ಬಿಟ್ಟು ಹೋಗಬೇಕೆಂದಿದ್ದೇನೆ’ ಹುಡುಗನನ್ನು ಕರೆತಂದವರು ಹೇಳಿದರು.

‘ನಿಮ್ಮ ಹೆಸರೇನು?’ ದೇಸಾಯಿ ಕೇಳಿದರು.

‘ಮಕನ್ ಭಾಯಿ.’

‘ಇಲ್ಲಿ ಮಕ್ಕಳಿಗೆ ಕೊಡುವ ಶಿಕ್ಷಣ ಹೊಸ ರೀತಿಯದು. ಸ್ವರಾಜ್ಯದ ಹೋರಾಟಕ್ಕಾಗಿ ಸೆರೆಮನೆಗೆ ಹೋಗಬೇಕು. ಲಾಠಿಯ ಹೊಡೆತ, ಗುಂಡಿನ ಹೊಡೆತ ತಿನ್ನಬೇಕು. ಗಾಂಧೀಜಿ ತೋರಿದ ಮಾರ್ಗದಲ್ಲಿ ನಡೆಯಬೇಕು. ಇಲ್ಲಿಯ ಶಿಕ್ಷಣದಿಂದ ನಿಮ್ಮ ಮನೆತನಕ್ಕೆ ಯಾವುದೇ ಉಪಯೋಗವಾಗುವುದೇ ಯೋಚಿಸಿ’ ಎಂದು ಮಹದೇವ ದೇಸಾಯಿ ಸ್ಪಷ್ಟವಾಗಿ ತಿಳಿಸಿದರು.

ಇಂತಹ ಸದವಕಾಶ ಜೀವನದಲ್ಲಿ ಮತ್ತೊಮ್ಮೆ ದೊರೆಯದು, ಮೊಮ್ಮಗನನ್ನು ಇಲ್ಲಿಯೆ ಬಿಟ್ಟು ಹೋಗುವುದು ಒಳಿತೆಂದು ನಿರ್ಧರಿಸಿ ಹನ್ನೆರಡು ವರ್ಷದ ಬಾಲಕನನ್ನು ಆಶ್ರಮದಲ್ಲಿ ಬಿಟ್ಟು ಮಕನ್ ಬಾಯಿ ಹೊರಟುಹೋದ.

ತಂದೆ ತಾಯಿ

ಗುಜರಾತ್ ರಾಜ್ಯ ಸೂರತ್ ಜಿಲ್ಲೆಮಹಾಪುರುಷ ರಿಗೆ ಜನ್ಮಕೊಟ್ಟ ಪವಿತ್ರ ಭೂಮಿ. ಹಿರಿಯ ದೇಶಸೇವಕ ದಾದಾಬಾಯಿ ನೌರೋಜಿ, ಕ್ರಾಂತಿಕವಿ ನರ್ಮದಾ ಶಂಕರ್, ಸತ್ಯಾಗ್ರಹಿ ಸೇನಾನಿಗಳೆನಿಸಿದ ಮಹದೇವ ದೇಸಾಯಿ, ಕಿಶೋರಿಲಾಲ ಮಶ್ರೂವಾಲ, ವಲ್ಲಭಭಾಯಿ ಪಟೇಲ್ ಮುಂತಾದವರಿಗೆ ಜನ್ಮ ಕೊಟ್ಟ ವೀರ ಭೂಮಿ ಈ ಸೂರತ್ ಜಿಲ್ಲೆ.

ಸೂರತ್ ನಗರಕ್ಕೆ  ಹತ್ತು ಹನ್ನೆರಡು ಮೈಲಿ ದೂರದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಸಮುದ್ರ. ಅದಕ್ಕೆ ಹತ್ತಿಕೊಂಡಿರುವ ಗ್ರಾಮ ಡುಮಸ್. ಅಲ್ಲಿಯ ಹೆಂಚಿನ ಮನೆಯೊಂದರಲ್ಲಿ ೧೯೦೬ ನೇ ಆಗಸ್ಟ್ ೧೩ ನೇ ತಾರೀಖು ವಲ್ಲಭನ ಜನನವಾಯಿತು. ತಾಯಿಯ ಹೆಸರು ಅಂಬಾಬಹೆನ್. ತಂದೆಯ ಹೆಸರು ಭಗವಾನ್ ಜೀ ಪಟೇಲ. ಇವರಿಗೆ ಹುಟ್ಟಿದ ಎರಡನೆಯ ಮಗುವೆ ಮಾಂಘೀ ಬಹೆನ್, ವಲ್ಲಭನ ಕಿರಿಯ ತಂಗಿ. ಮೊದಲ ಹೆಂಡತಿ ತೀರಿಕೊಂಡ ನಂತರ ಇವರು ಎರಡನೆಯ ಮದುವೆ ಮಾಡಿಕೊಂಡಿದ್ದರು. ರಣಛೋಡ್ ಭಾಯಿ ಮತ್ತು ರಬೀಬಹೆನ್ ಮೊದಲ ಹೆಂಡತಿಯ ಮಕ್ಕಳು.

ಇವರ ಕುಲದೇವತೆ ಉಂಝೂದೇವಿ. ದೇವಿಯ ಪೂಜೆ ಮಾಡುತ್ತಿರುವಾಗ ಮಧ್ಯದಲ್ಲಿ ಪೂಜಾರಿ ಏನಾದರೂ ಮಾತನಾಡಿದರೆ ದೇವಿಯೆ ಮಾತನಾಡುತ್ತಿ ದ್ದಾಳೆಂದು ಭಾವಿಸಲಾಗುತ್ತಿತ್ತು. ಪೂಜಾರಿಯ ನುಡಿ ದೇವಿಯ ನುಡಿಯೆಂದೆ ಪರಿಗಣಿಸಿ, ಇದೇ ಸಂದರ್ಭದಲ್ಲಿ ವಿವಾಹ ಸಂಬಂಧವನ್ನು ಕುದುರಿಸುತ್ತಿದ್ದರು. ಚಿಕ್ಕ ಪುಟ್ಟ ಮಕ್ಕಳ ವಿವಾಹವನ್ನು ನಡೆಸಿಬಿಡುತ್ತಿದ್ದರು. ಈ ದೇವಿ ಪ್ರತಿವರ್ಷ ಮಾತನಾಡುತ್ತಿರಲಿಲ್ಲ. ಹನ್ನೆರಡು ವರ್ಷಗಳಿ ಗೊಮ್ಮೆ ಈಕೆಯ ಮಾತು. ಅದೂ ಒಂದು ಬಾರಿ ಮಾತ್ರ. ವಲ್ಲಭ ಎರಡೂವರೆ ವರ್ಷದವನಿದ್ದಾಗ ಈ ದೇವಿ ಮಾತನಾಡಿದ್ದಳು. ಅದಕ್ಕಾಗಿ ವಲ್ಲಭನ ಪಾಣಿಗ್ರಹಣ ಸಂಸ್ಕಾರವೂ ನಡೆದುಹೋಗಿತ್ತು. ಈ ಸಂಸ್ಕಾರ ನಡೆದ ಮೂರು ವರ್ಷಗಳ ನಂತರ ಅವನ ತಂದೆ ಭಗವಾನ್ ಜೀ ತೀರಿಕೊಂಡರು.

ಅಜ್ಜನ ಮನೆಯಲ್ಲಿ

ವಲ್ಲಭನ ತಾಯಿ ವಿಧವೆ ಅಂಬಾ ತನ್ನ ಉಳಿದ ದಿನಗಳನ್ನು ಪೂಜೆಪಠಣಗಳಲ್ಲೆ ಕಳೆದಳು. ಆಕೆಗೆ ಓದುಬರಹ ಬರುತ್ತಿತ್ತು. ತನ್ನ ಮಧುರ ಕಂಠದಿಂದ ರಾಮಾಯಣವನ್ನು ಓದುತ್ತಿದ್ದಳು. ಆಕೆಯ ಸುತ್ತಲೂ ಅಕ್ಕಪಕ್ಕದ ಜನ ಬಂದು ಸೇರುತ್ತಿದ್ದರು. ಇಂತಹ ಸಾಧ್ವೀ ಮಣಿಯ ಆಸರೆಯೂ ವಲ್ಲಭನಿಗೆ ಹೆಚ್ಚು ಕಾಲ ದೊರೆಯಲಿಲ್ಲ. ಸ್ವಲ್ಪ ಕಾಲದಲ್ಲೇ ಆಕೆಯೂ ತೀರಿ ಕೊಂಡಳು. ಆಗ ವಲ್ಲಭನ ವಯಸ್ಸು ಕೇವಲ ಆರು ವರ್ಷ. ಹೀಗಾಗಿ ಎಳೆಯ ವಯಸ್ಸಿನಲ್ಲೇ ತಾಯಿ ತಂದೆ ಯರನ್ನು ಕಳೆದುಕೊಂಡು ತಬ್ಬಲಿಯಾದ ವಲ್ಲಭ.

ತಾಯಿ ತೀರಿಕೊಂಡಾಗ ವಲ್ಲಭ ಹಳ್ಳಿಯ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ. ಆತನ ಮನಸ್ಸು ಯಾವಾಗಲೂ ಮೈದಾನದ ಕಡೆಯೇ ಹರಿಯುತ್ತಿತ್ತು. ಹೊಲದಲ್ಲಿ ಕೆಲಸ ಮಾಡಬೇಕು, ನೇಗಿಲು ಹಿಡಿದು ಉಳಬೇಕು. ಸಮಯ ಸಿಕ್ಕರೆ ಸಾಕು, ಶಾಲೆಯಿಂದ ಹೊರಬೀಳುತ್ತಿದ್ದ. ಭೂಮಿಯ ಮೇಲೆ ಹಾಸಿರುವ ಹಸಿರನ್ನು ನೋಡಿ ಕುಣಿದಾಡುತ್ತಿದ್ದ, ಉಳುಮೆ ಮಾಡುತ್ತಿದ್ದ ಜನ, ಎತ್ತು, ಹಸು, ಹಾರುತ್ತಿರುವ ಪಕ್ಷಿ, ಇವುಗಳನ್ನೆಷ್ಟು ನೋಡಿದರೂ ಆತನಿಗೆ ತೃಪ್ತಿ ಇಲ್ಲ.

ಮುಂದಿನ ವಿದ್ಯಾಭ್ಯಾಸ ಅಜ್ಜನ ಮನೆಯಲ್ಲಿ ನಡೆಯಿತು. ಹುಟ್ಟೂರಾದ ಡುಮಸ್ ಬಿಟ್ಟು ಅಚ್ಛಾರಣ ಗ್ರಾಮಕ್ಕೆ ವಲ್ಲಭನನ್ನು ಕರೆತಂದರು. ಅಜ್ಜ ಮಕನ್ ಭಾಯಿ ದೈವಭಕ್ತನಾಗಿದ್ದುದರಿಂದ ವಲ್ಲಭನ ಪೋಷಣೆ ಉತ್ತಮ ಸಂಸ್ಕಾರದಲ್ಲೇ ಮುಂದುವರೆಯಿತು. ತನ್ನ ಮಗಳ ಏಕೈಕ ಪುತ್ರನೆಂಬ ಪ್ರೀತಿವಾತ್ಸಲ್ಯ ವಲ್ಲಭನ ರಕ್ಷೆಯಾಯಿತು. ತನ್ನ ಮೊಮ್ಮಗ ಚಾರಿತ್ರ್ಯವಂತನಾಗಬೇಕು, ಸತ್ಯವಂತನಾಗಬೇಕು ಎಂಬ ಮಹತ್ತರ ಆಶೆ ಈ ಮುದುಕನಿಗೆ. ಹೇಗಾದರೂ ಮಾಡಿ ಈತನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ನಿರ್ಧರಿಸಿದ.

ಆಗ ರಾಷ್ಟ್ರೀಯ ಜಾಗೃತಿಯ ಕಾಲ. ಗಾಂಧಿಯವರು ಹೊಸದಾಗಿ ಆಶ್ರಮ ಸ್ಥಾಪಿಸಿದ ವಿಚಾರ ಎಲ್ಲ ಕಡೆಯೂ ಹರಡಿತ್ತು. ಅಲ್ಲಿಯೇ ವಲ್ಲಭನ ಶಿಕ್ಷಣವಾಗಲೆಂದು ೧೯೧೯ ರಲ್ಲಿ ಹನ್ನೆರಡು ವರುಷದ ಎಳೆಯ ಬಾಲಕನನ್ನು ಬಿಟ್ಟು ಹೋದ ಮಕನ್ ಭಾಯಿಯೆ ವಲ್ಲಭನ ಅಜ್ಜ.

ಕಠಿಣ ಸಾಧನೆ ಪರಿಶ್ರಮ

ಆಶ್ರಮದಲ್ಲಿ ವಿದ್ಯಾರ್ಥಿಗಳು ಕಠಿಣ ನಿಯಮ ಗಳನ್ನು ಪಾಲಿಸಬೇಕಾಗುತ್ತಿತ್ತು, ಬೀಸುವುದು, ನೀರು ತುಂಬುವುದು, ಪಾತ್ರೆ ತಿಕ್ಕುವುದು, ಕಸಗುಡಿಸುವುದು, ಅಡಿಗೆ ಮಾಡುವುದು, ನೂಲುವುದು ಮುಂತಾದ ಕೆಲಸ ಕಾರ್ಯಗಳನ್ನು ತಪ್ಪದೆ ಮಾಡಬೇಕಾಗುತ್ತಿತ್ತು. ಈ ಕೆಲಸದಿಂದ ಶಿಕ್ಷಕರೂ ಹೊರತಾಗಿರಲಿಲ್ಲ.

ಮಕ್ಕಳ ಶಿಕ್ಷಣದ  ಪೂರ್ಣ ಜವಾಬ್ದಾರಿ ವಿನೋಬಾರದು. ಬೆಳಕು ಹರಿಯುವುದಕ್ಕೆ ಮೊದಲು ನಾಲ್ಕು ಗಂಟೆಯ ಮಬ್ಬುಗತ್ತಲೆಯಲ್ಲೇ ಆಶ್ರಮದ ಗಂಟೆ ಬಾರಿಸುತ್ತಿತ್ತು. ವಿನೋಬಾ ಅಷ್ಟು ಹೊತ್ತಿಗೆ ತಮ್ಮ ಉಪನಿಷತ್ ಅಧ್ಯಯನವನ್ನು ಮುಗಿಸಿ ಮಕ್ಕಳನ್ನು ಎಬ್ಬಿಸಲು ಹೋಗುತ್ತಿದ್ದರು. ಹಾಸಿಗೆಯ ಮೇಲೆ ಹಾಯಾಗಿ ಮಲಗಿದ್ದ ಒಬ್ಬೊಬ್ಬ ವಿದ್ಯಾರ್ಥಿಯನ್ನೂ ತಮ್ಮ ಮಧುರ ಧ್ವನಿಯಲ್ಲಿ ಎಬ್ಬಿಸಿ ಪ್ರಾರ್ಥನೆಗೆ ಕರೆದೊಯ್ಯುತ್ತಿದ್ದರು. ಎಳೆ ವಯಸ್ಸಿನ ವಲ್ಲಭ ನಿದ್ದೆಗಣ್ಣಿನಲ್ಲೇ ಕಣ್ಣುಜ್ಜಿಕೊಳ್ಳುತ್ತಾ ಗುರುವನ್ನು ಹಿಂಬಾಲಿಸುತ್ತಿದ್ದ. ವಯಸ್ಸಿನಲ್ಲಿ ಎಲ್ಲರಿಗಿಂತ ಚಿಕ್ಕವನು. ಜೊತೆಗೆ ದುರ್ಬಲ ಶರೀರ. ಈ ಕಾರಣದಿಂದ ವಿನೋಬಾರ ಹೃದಯವನ್ನೇ ಕಲಕಿ ತನ್ನೆಡೆಗೆ ಸೆಳೆದು ಕೊಂಡ, ಈ ಪುಟ್ಟ ಬಾಲಕ.

ಸದಾ ವಿನೋಬಾರ ಜೊತೆಗೆ

ದುರ್ಬಲ ಮಕ್ಕಳ ಮೇಲೆ ತಾಯಿಯ ಪ್ರೇಮ ಹೆಚ್ಚಲ್ಲವೇ! ತಾಯಿ ಹೃದಯದ ವಿನೋಬಾ ವಲ್ಲಭನನ್ನು ಅಕ್ಕರೆಯಿಂದ ನೋಡಿಕೊಳ್ಳತೊಡಗಿದರು. ಮೃದು ಹೃದಯದ ವಲ್ಲಭನಿಗೆ ಅವರು ಸರ್ವಸ್ವವಾಗಿದ್ದರು. ತಾಯಿ, ತಂದೆ, ಗುರು, ಸಂರಕ್ಷಕ, ಮಾರ್ಗದರ್ಶಕ ರೂಪದಲ್ಲಿ ಅವರು ವಲ್ಲಭನಿಗೆ ಕಾಣಿಸುತ್ತಿದ್ದರು. ವಿನೋಭಾ ಇದ್ದಲ್ಲಿ ವಲ್ಲಭ. ಅವರನ್ನು ಬಿಟ್ಟಿರುವುದೆಂದರೆ ವಲ್ಲಭನಿಗೆ ಆಗುತ್ತಿರಲಿಲ್ಲ.

ಒಮ್ಮೆ ಹೋಳಿ ಹಬ್ಬದ ದಿನ ಆಶ್ರಮದ ಹುಡುಗರೆಲ್ಲರೂ ಒಂದೆಡೆ ಸೇರಿದ್ದರು. ಹಬ್ಬದ ದಿನ ವಾದ್ದರಿಂದ ಎಲ್ಲರಿಗೂ ಅಮಿತಾನಂದ. ಅಂದು ಅವರೇ ರಾಜರು. ಯಾರ ಲಂಗುಲಗಾಮು ಅವರ ಮೇಲಿರಲಿಲ್ಲ. ಸಂತೋಷದಿಂದ ಕುಣಿಯುತ್ತಿದ್ದರು, ಹಾಡುತ್ತಿದ್ದರು. ಆದರೆ ವಲ್ಲಭನನೊಬ್ಬ ಮಾತ್ರ ಈ ಮೋಜಿ ನಲ್ಲಿ ಪಾಲ್ಗೊಂಡಿರಲಿಲ್ಲ. ಕಾರಣ ವಿನೋಬಾ ಬಂದಿರಲಿಲ್ಲ. ಹುಡುಗರು ಹುಡುಕಿಕೊಂಡು ಹೋಗಿ ನೋಡಿದರೆ ವಲ್ಲಭ ವಿನೋಬಾರ ಸಾನ್ನಿಧ್ಯದಲ್ಲಿ ಕುಳಿತಿದ್ದ. ಸಂಸ್ಕೃತದ ಅಧ್ಯಯನದಲ್ಲಿ ತೊಡಗಿದ್ದ. ವಲ್ಲಭನನ್ನು ಹುಡುಕುವುದು ಅತಿ ಸುಲಭ. ಎಲ್ಲೂ ಕಾಣಿಸದೆ ಹೋದರೆ ವಿನೋಬಾ ಹತ್ತಿರ ಇದ್ದೇ ಇರುತ್ತಿದ್ದ. ಪಾಠದಲ್ಲೋ, ಬರಹದಲ್ಲೋ ಮಗ್ನನಾಗಿರುತ್ತಿದ್ದ.

ಆಶ್ರಮದಲ್ಲಿ ಹೆಚ್ಚಿನ ಪರಿಶ್ರಮ ಮಾಡ ಬೇಕಾಗುತ್ತಿತ್ತು. ಕೊರೆಯುವ ಛಳಿಯಲ್ಲೂ ತಣ್ಣೀರಿನ ಸ್ನಾನ. ಪ್ರಾರ್ಥನೆಗೆ ಯಾರೂ ತಪಿಸ್ಪಿಕೊಳ್ಳುವಂತಿರಲಿಲ್ಲ. ಹೊಲದಲ್ಲಿ ಎರಡೆರಡು ಮೂರು ಮೂರು ಗಂಟೆ ಕೆಲಸ. ನೂಲು ತೆಗೆಯುವ ನಿತ್ಯ ಕರ್ಮ. ಹೀಗೆ ದಿನವಿಡೀ ಕಠಿಣ ಪರಿಶ್ರಮ. ಇದಕ್ಕೆ ವಲ್ಲಭ ಅಂಜಲಿಲ್ಲ, ಜಗ್ಗಲಿಲ್ಲ. ಗುರುವಿನ ಮಾರ್ಗದರ್ಶನದಲ್ಲಿ ಕಠಿಣವೆನಿಸಿದುದನ್ನು ಜೀರ್ಣಿಸಿ ಕೊಂಡ, ಮೈಗೂಡಿಸಿಕೊಂಡ.

ದಾಕ್ಷಿಣಾತ್ಯ ಪಂಡಿತನೇ ಇರಬೇಕು

ಜಮನಾಲಾಲ ಬಜಾಜರ ಬೇಡಿಕೆಯ ಮೇರೆಗೆ ೧೯೨೧ ರಲ್ಲಿ ವಿನೋಬಾ ಸಾಬರಮತಿ ಆಶ್ರಮದಿಂದ ವರ್ಧಾ ಆಶ್ರಮಕ್ಕೆ ಹೋದರು. ಜೊತೆಗೆ ವಲ್ಲಭನೂ ಹೋದ. ಅಲ್ಲೂ ಶಿಕ್ಷಣ ಮುಂದುವರಿಯಿತು. ದಿನದಲ್ಲಿ ಒಂದು ಗಂಟೆ ವಲ್ಲಭನಿಗಾಗಿ ವಿನೋಬಾ ತೆಗೆದಿಟ್ಟರು. ಮರಾಠಿ, ಸಂಸ್ಕೃತ ಎರಡು ಭಾಷೆಗಳಲ್ಲೂ ವಲ್ಲಭನನ್ನು ಪಂಡಿತನನ್ನಾಗಿ ಮಾಡಿದರು. ಮೊರೊಪಂತನ ಮರಾಠಿ ಕಾವ್ಯ, ತಿಲಕರ ಗೀತಾರಹಸ್ಯ, ಜ್ಞಾನೇಶ್ವರಿ, ಸಂತ ತುಕಾರಾಮರ ಅಭಂಗಗಳು, ಸಮರ್ಥರಾಮದಾಸರ ದಾಸಬೋಧೆ, ಹೀಗೆ ಅನೇಕ ಗ್ರಂಥಗಳ ಆಳವಾದ ಪರಿಚಯವಾಯಿತು ವಲ್ಲಭನಿಗೆ. ಗುಜರಾತಿ ಮಾತೃ ಭಾಷೆಯಾದರೂ ಮಹಾರಾಷ್ಟ್ರದ ಮರಾಠಿಯನ್ನು ಅಷ್ಟೇ  ಲೀಲಾಜಾಲವಾಗಿ ಮಾತನಾಡುತ್ತಿದ್ದ.

೧೯೨೯ ನಡೆದ ಒಂದು ಘಟನೆ. ಪಂಡಿತ ಮದನ ಮೋಹನ ಮಾಲವೀಯಜಿ ವರ್ಧಾದ ಸತ್ಯಾಗ್ರಹ ಆಶ್ರಮಕ್ಕೆ ಒಮ್ಮೆ ಬಂದರು. ವಿನೋಬಾ ಅಲ್ಲೇ ಇದ್ದುದರಿಂದ ವಲ್ಲಭನನ್ನು ಕರೆದುಕೊಂಡು ಮಾಲವೀಯಜಿಯ ದರ್ಶನಕ್ಕೆ ಹೋದರು. ವೇದಗಳಲ್ಲಿ ಪಾರಂಗತರಾಗಿದ್ದ ಮಾಲವೀಯಜಿಯ ಮುಂದೆ ತಮ್ಮ ಶಿಷ್ಯನಿಂದ ಋಗ್ವೇದದ ಕೆಲವು ಶ್ಲೋಕಗಳನ್ನು ಹೇಳಿಸಿದರು ವಿನೋಬಾ. ಮಾಲವೀಯಜಿ ಕೇಳಿ ಮುಗ್ಧರಾದರು. ಶುದ್ಧ ಉಚ್ಚಾರಣೆಗೆ ಅವರು ತಲೆದೂಗಿದರು.

ಆಗ ವಿನೋಬಾ, ‘ಈ ವಿದ್ಯಾರ್ಥಿಯ ಮಾತೃಭಾಷೆ ಯಾವುದೆಂದು ಹೇಳಬಲ್ಲಿರಾ?’ ಎಂದು ಮಾಲವೀಯಜಿಯನ್ನು ಕೇಳಿದರು. ಸ್ವಲ್ಪ ಹೊತ್ತು ಯೋಚಿಸಿ, ‘ಇಷ್ಟು ಶುದ್ಧ ಉಚ್ಛಾರಣೆ ಮಾಡಬೇಕಾದರೆ ಈತ ದಾಕ್ಷಿಣಾತ್ಯ ಪಂಡಿತನೆ ಇರಬೇಕು’ ಎಂದು ಉದ್ಗರಿಸಿದರು ಮಾಲವೀಯಜಿ.

‘ವಲ್ಲಭ ಗುಜರಾತಿನ ಒಬ್ಬ ರೈತನ ಮಗ. ಯಾವುದೇ ಪಂಡಿತರ ಮನೆಯಲ್ಲಿ ಈತನ ಜನ್ಮವಾಗಿಲ್ಲ. ಗುಜರಾತಿಯೆ ಈತನ ಮಾತೃಭಾಷೆ. ಅಲ್ಲಿಯ ಹಳ್ಳಿ ಯೊಂದರಲ್ಲಿ ಈತ ಬೆಳೆದ’ ಎಂದು ವಿನೋಬಾ ತಿಳಿಸಿದಾಗ ಮಾಲವೀಯಜಿಗೆ ಅತ್ಯಂತ ಆಶ್ಚರ್ಯ ವಾಯಿತು. ಅಷ್ಟೇ ಸಂತೋಷವೂ ಆಯಿತು.

ನಿಮ್ಮ ಕಿರಿಯ ತಮ್ಮನೆಂದು ತಿಳಿಯಿರಿ

ವಲ್ಲಭ ಎಲ್ಲೆ ಇರಲಿ, ಎಲ್ಲರಿಗೂ ಅಚ್ಚು ಮೆಚ್ಚಿನವನಾಗಿಬಿಡುತ್ತಿದ್ದ. ನಡೆದಂತೆ ನುಡಿ, ನುಡಿಯಂತೆ ನಡೆ, ಇದು ವಲ್ಲಭನ ಜಾಯಮಾನಕ್ಕೆ ಒಗ್ಗಿ ಹೋಗಿತ್ತು. ಕಪಟ, ವಂಚನೆ, ಮೋಸ, ಇವು ಯಾವುವೂ ಆತನ ಹತ್ತಿರ ಸುಳಿಯುತ್ತಿರಲಿಲ್ಲ. ಬೇರೆಯವರ ವೇದನೆ ತನ್ನದೆ ಎಂದು ಬಗೆಯುವ ಮಾನವೀಯ ಅನುಕಂಪ, ಎಂತಲೆ ಜನ ಆತನನ್ನು ತಮ್ಮ ಪರಿವಾರದವನೆಂದೆ ಪರಿಗಣಿಸುತ್ತಿದ್ದರು.

ಒಮ್ಮೆ ಆಶ್ರಮವಾಸಿಗಳೊಬ್ಬರು ತೀರಿಕೊಂಡ ವಿಚಾರ ಗೊತ್ತಾಯಿತು. ಪ್ರವಾಹದಲ್ಲಿ ಕೊಚ್ಚಿ ಹೋದವನ  ಹಿರಿಯಣ್ಣನೊಡನೆ ವಲ್ಲಭನೂ ಶವ ಹುಡುಕಲು ಹೋದ. ಮಧ್ಯಾಹ್ನದ ಉರಿಬಿಸಿಲು, ಬೆಂಕಿಯಂತೆ ಸುಡುತ್ತಿರುವ ಕಾದ ಮರಳಿನಲ್ಲಿ ನಡೆಯುತ್ತ ನದೀ ದಂಡೆಯತ್ತ ಧಾವಿಸಿದರು. ಸ್ವಲ್ಪ ದೂರದಲ್ಲಿ ಅವರಿಗೆ ಶವ ಕಾಣಿಸಿತು. ಹತ್ತಿರದಲ್ಲೇ ಇದ್ದ ಒಂದು ಮರದ ಕೆಳಗೆ ಇಬ್ಬರೂ ಕುಳಿತು ಕೊಂಡರು. ಉಳಿದ ಗೆಳೆಯರು ಮುಂದಿನ ಅಂತ್ಯಕ್ರಿಯೆಯ ಕಾರ‍್ಯದಲ್ಲಿ ತೊಡಗಿದರು. ತಮ್ಮನ ಅಗಲಿಕೆ ಯಿಂದಾಗಿ ಹಿರಿಯಣ್ಣನ ದುಃಖ ಉಮ್ಮಳಿಸಿತು. ಬಿಕ್ಕಿ ಬಿಕ್ಕಿ ಅಳತೊಡಗಿದ. ವಲ್ಲಭ ಆತನನ್ನು ಸಮಾಧಾನ ಪಡಿಸಲು ಹೆಗಲ ಮೇಲೆ ಕೈಯಿಟ್ಟ.

‘ನೀವಿಂದು ತಮ್ಮನನ್ನು ಕಳೆದುಕೊಂಡಿದ್ದೀರಿ. ಹಾಗೆಯೆ ಇನ್ನೊಬ್ಬ ತಮ್ಮನನ್ನು ಸಂಪಾದಿಸಿದ್ದೀರಿ. ನನ್ನನ್ನು ನಿಮ್ಮ ಕಿರಿಯ ತಮ್ಮನೆಂದೆ ಪರಿಗಣಿಸಿ’ ಎಂದ

ಈ ಮಾತು ವೇದನೆಯ ಹೃದಯಕ್ಕೆ ನಾಟಿತು. ದುಃಖಿತ ಮನಸ್ಸಿಗೆ ಸಮಾಧಾನ ತಂದಿತು. ಮುಂದೆ ಈ ಸಂಬಂಧ ಗಾಢವಾಗಿ ಬಲಿಯಿತು. ಆ ಹಿರಿಯಣ್ಣ ಬೇರೆ ಯಾರೂ ಆಗಿರದೆ ಕುಷ್ಠರೋಗಿ ಆಶ್ರಮದ ಮಹಂತ ಮನೋಹರ ದಿವಾಣ. ವರ್ಧಾದ ಹತ್ತಿರವಿರುವ  ದತ್ತಪುರಿ ಕುಷ್ಠಧಾಮದಲ್ಲಿ ದುಡಿಯುತ್ತಿರುವ ನಮ್ರ ಸೇವಕ.

ವಲ್ಲಭ ಸ್ವಾಮಿಯಾದರು

ಬಾಲಕ ವಲ್ಲಭನ ಸೇವಾಕ್ಷೇತ್ರ ಬೆಳೆಯುತ್ತಾ ಹೋಯಿತು. ಬ್ರಹ್ಮಚಾರಿಯಾಗಿದ್ದು ನಡೆಸಿದ ಅಧ್ಯಯನ ಮುಂದೆ ಲೋಕಸೇವೆಗೆ ಉಪಯೋಗವಾಯಿತು. ವಲ್ಲಭ ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಉಳಿದ.

ಆಶ್ರಮದ ನಿಯಮಗಳನ್ನು ಪಾಲಿಸುವುದರಲ್ಲಿ ವಲ್ಲಭ ಅತಿಗಟ್ಟಿಗ.

ವಿನೋಬಾ ತಮ್ಮ ಶಿಷ್ಯನನ್ನು ‘ಸುರಗಾಂವ್’ ಎಂಬ ಹಳ್ಳಿಗೆ ಕಳಿಸಿಕೊಟ್ಟರು. ಅಲ್ಲಿ ವಲ್ಲಭ  ಹನ್ನೆರಡು ವರ್ಷ ಕೆಲಸ ಮಾಡಿದ. ಸೇವೆಯ ದುಡಿತದಿಂದಾಗಿ ವಲ್ಲಭ ಅಲ್ಲಿಯ ಜನರಿಗೆ ವಲ್ಲಭ ಸ್ವಾಮಿಯಾದರು.

ಗ್ರಾಮದ ಪ್ರತಿಯೊಂದು ಕುಟುಂಬದ ಪರಿಚಯವೂ ಅವರಿಗಿತ್ತು. ದುಃಖಿತ ಪರಿವಾರದವರಿಗೆ ಮಾರ್ಗದರ್ಶನ ಮಾಡುವುದರಲ್ಲಿ ಅವರೆಂದೂ ಹಿಂದೆ ಬೀಳುತ್ತಿರಲಿಲ್ಲ. ಒಂದು ಸಲ ಗ್ರಾಮದ ಕುಟುಂಬ ಒಂದರಲ್ಲಿ ಜಗಳವಾಯಿತು. ಪಟೇಲನ ಮಗ ಮನೆ ಬಿಟ್ಟು ಹೊರಟುಹೋದ. ಈ ವಿಷಯ ವಲ್ಲಭಸ್ವಾಮಿಗೆ ಗೊತ್ತಾ ಯಿತು. ಅವರು ಹೋಗಿ ಆತನನ್ನು ಕರೆತಂದರು. ತಮ್ಮಲ್ಲೇ ಇಟ್ಟುಕೊಂಡು ನೇಯ್ಗೆ ಶಿಕ್ಷಣ ಕಲಿಸಿದರು. ಪಟೇಲನ ಮಗ ನೇಯ್ಗೆಯಿಂದ ಹಣ ಸಂಪಾದಿಸಲು ಮೊದಲಿಟ್ಟ. ಈ ವಿಷಯ ತಂದೆಗೂ ಗೊತ್ತಾಯಿತು. ನೇಯ್ದ ಬಟ್ಟೆಯನ್ನು ವಲ್ಲಭಸ್ವಾಮಿ ಪಟೇಲನ ಮನೆಗೆ ಕಳಿಸಿ ‘ನಿಮ್ಮ ಮಗನೆ ಈ ಬಟ್ಟೆ ನೆಯ್ದಿದ್ದಾನೆ. ಈಗ ಆತ ಯಾರನ್ನೂ ಅವಲಂಬಿಸಬೇಕಾಗಿಲ್ಲ. ತನ್ನ ಕಾಲ ಮೇಲೆ ತಾನು ನಿಂತುಕೊಂಡಿದ್ದಾನೆ’ ಎಂದಾಗ ಪಟೇಲನ ಕಣ್ಣಲ್ಲಿ ನೀರೂರಿತು. ಹಾಳಾಗುತ್ತಿದ್ದ ತನ್ನ ಮಗನಲ್ಲಿ ಒಳ್ಳೆಯ ಸಂಸ್ಕಾರ ತುಂಬಿದ್ದಕ್ಕಾಗಿ ವಲ್ಲಭಸ್ವಾಮಿಯನ್ನು ಬಾಯಿ ತುಂಬ ಹೊಗಳಿದ. ಮುಂದೆ ಈ ಹುಡುಗ ವಿನೋಬಾಜಿಯ ಆಶ್ರಮದಲ್ಲಿದ್ದು ಗ್ರಾಮ ನೈರ್ಮಲ್ಯದ ಕೆಲಸದಲ್ಲಿ ತೊಡಗಿದ.

ಈಶ್ವರನಲ್ಲಿ ಶ್ರದ್ಧೆ ಇಡಿ

ವಲ್ಲಭಸ್ವಾಮಿ ಸುರಂಗಾಂವ್ ಗ್ರಾಮದ ಹರಿಜನ ಕೇರಿಯ ಸಂಬಂಧವನ್ನು ಬೆಳೆಸಿದ್ದರು. ಕೆಲಸವಿಲ್ಲದೆ ಕಡು ಬಡತನದಲ್ಲಿ  ನರಳುತ್ತಿದ್ದ ಪರಿವಾರಗಳಿಗೆ ಉದ್ಯೋಗ ಒದಗಿಸಿಕೊಟ್ಟರು. ಅವರ ಜೀವನ ನಿರ್ವಹಣೆಗೆ ಆಸರೆಯಾಗಿ ನಿಂತರು. ಹೆಚ್ಚಿನ ಜನಸಂಖ್ಯೆಯಿಂದಾಗಿ ಹರಿಜನರಿಗೆ ವಸತಿ ಅನುಕೂಲ ಉಂಟಾಯಿತು. ಹೇಗಾದರೂ ಮಾಡಿ ಈ ತೊಂದರೆಯನ್ನು ತಪ್ಪಿಸ ಬೇಕೆಂದು ಹರಿಜನ ಕುಟುಂಬದ ನಿವಾಸಿಯೊಬ್ಬರು ಗ್ರಾಮ ದಲ್ಲಿದ್ದ ಸವರ್ಣೀಯರೊಬ್ಬರ ಮನೆಯನ್ನು ಖರೀದಿ ಮಾಡಿದರು. ಕೇಳಬೇಕೆ, ಅರ್ಧ ಗಂಟೆಯೊಳಗಾಗಿ ಈ ಸುದ್ದಿ ಗ್ರಾಮದಲ್ಲೆಲ್ಲಾ ಹರಡಿಹೋಯಿತು. ಮನೆ ಮನೆ ಯಲ್ಲೂ ಚರ್ಚೆ ನಡೆಯತೊಡಗಿತು. ಹೊಲಗೇರಿಯವರಿಗೆ ಇಲ್ಲಿ ಅವಕಾಶ ಕೊಡಬೇಕೆ, ಎಂದು ಸವರ್ಣೀಯರು ಕಿಡಿಕಿಡಿಯಾದರು. ಕೈ-ಕೈ ಮಿಲಾಯಿಸುವ ಪರಿಸ್ಥಿತಿ ಬಂದು ಹೋಯಿತು. ಆದರೆ ವಲ್ಲಭಸ್ವಾಮಿ ಇದೆಲ್ಲವನ್ನೂ ತುಂಬ ಜಾಣ್ಮೆಯಿಂದ ಬಿಡಿಸಿದರು. ಶಾಂತಿಯಿಂದ ತಿಳುವಳಿಕೆಯ ಮೂಲಕ ಹರಿಜನರಿಗೆ ನ್ಯಾಯದೊರಕಿಸಿಕೊಟ್ಟರು. ಸವರ್ಣೀಯರ ಕೇರಿಯಲ್ಲೇ ಹರಿಜನರು ಇರುವಂತೆ ಅವಕಾಶ ಮಾಡಿಕೊಟ್ಟರು. ಸರ್ಕಾರ, ಕಾನೂನು, ಮಾಡದ ಕೆಲಸವನ್ನು ಅವರು ಸೇವೆಯ ಮೂಲಕ ಮಾಡಿ ತೋರಿಸಿದರು.

ಈ ಘಟನೆಯಿಂದ ಹರಿಜನರ ವಿಶ್ವಾಸ ಹೆಚ್ಚಿತು. ವಲ್ಲಭಸ್ವಾಮಿಯವರು ಅವರ ಪಾಲಿಗೆ ದೇವ ಸಮಾನರಾದರು. ಆದರೆ ವ್ಯಕ್ತಿಪೂಜೆ ಅವರಿಗೆ ಹಿಡಿಸು ತ್ತಿರಲಿಲ್ಲ. ಯಾರೂ ಯಾರನ್ನೂ ಉದ್ಧಾರ ಮಾಡರು. ತನ್ನ ಉದ್ಧಾರ ತಾನೇ ಮಾಡಿಕೊಳ್ಳಬೇಕು, ಉಳಿದವರು ಸಹಾಯಕರಾಗಬಲ್ಲರು, ಮಾರ್ಗದರ್ಶಕರಾಗಬಲ್ಲರು. ಈ ವಿಚಾರದಲ್ಲಿ ಅವರಿಗೆ ನಂಬಿಕೆ ಯಿದ್ದುದರಿಂದ ಅವರು ಹರಿಜನರಿಗೆ ಹೇಳುತ್ತಿದ್ದರು. ‘ಒಬ್ಬ ವ್ಯಕ್ತಿಯ ಮೇಲೆ ನೀವು ಇಷ್ಟೊಂದು ಶ್ರದ್ಧೆಯಿಡಬೇಡಿ. ಅದನ್ನೇ ಈಶ್ವರನ ಮೇಲಿಡಿ. ಆತನ ಸ್ಮರಣೆ ಮಾಡಿ’ ಎಂದು.

ನೀವು ನಮ್ಮ ಆಶ್ರಮದಲ್ಲೇ ಇದ್ದು ಬಿಡಿ

ವಲ್ಲಭಸ್ವಾಮಿಯವರ ಸೇವಾಕಾರ್ಯದಿಂದ ಸಂತುಷ್ಟಳಾದ ಮಹಿಳೆ ಕಮಲಜಾ ಬಾಯಿ, ತನಗಾಗಿ ಇರಲು ಒಂದು ಕೋಣೆಯನ್ನು ಮಾತ್ರ ಇಟ್ಟುಕೊಂಡು ಉಳಿದ ಇಡೀ ಮನೆಯನ್ನೇ ವಲ್ಲಭಸ್ವಾಮಿಗೆ ದಾನವಾಗಿ ಧಾರೆಯೆರೆದಳು. ಸ್ವಲ್ಪ ಕಾಲವಾದ ಮೇಲೆ ಅಡುಗೆ ಮನೆಯ ಬೆಂಕಿಯಿಂದಾಗಿ ಆ ಮನೆ ಉರಿದು ಹೋಯಿತು. ಮನೆ ಒಡತಿಯಾಗಿದ್ದ ಆಕೆಗೆ ಇರಲು ಸ್ಥಳವಿಲ್ಲದಾಯಿತು. ಆಗ ವಲ್ಲಭಸ್ವಾಮಿ ಹೇಳಿದರು.

‘ಕಮಲಜಾ ಬಾಯಿ, ನೀವು ಮತ್ತೊಮ್ಮೆ ಮನೆ ಕಟ್ಟಿಸಲಾರಿರಿ, ನಮ್ಮ ಆಶ್ರಮದಲ್ಲೇ ಇದ್ದು ಬಿಡಿ,’

ಈ ಮಾತು ಕಮಲಜಾಬಾಯಿಯ ಅಂತಃಕರಣ ವನ್ನೇ ಕಲಕಿತು. ‘ಮಾನವೀಯತೆಯ ಸಾಕಾರ ಮೂರ್ತಿ ಈ ವಲ್ಲಭಸ್ವಾಮಿ’ ಎಂದು ಉದ್ಗರಿಸಿದಳು ಆ ಮಹಿಳೆ.

ಸೇವೆಗಾಗಿ ಮಿಡಿಯುತ್ತಿದ್ದ ಹೃದಯ

೧೯೪೨ರಲ್ಲಿ ಕಮಲಜಾ ಬಾಯಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಸೆರಮನೆ ಸೇರಿದಳು. ಆಗ ಅವರ ಹೆಸರಿನಲ್ಲಿ ಯಾರೊ ಒಬ್ಬರು ಸೀರೆಯನ್ನು ಕಳಿಸಿಕೊಟ್ಟರು. ಇದು ಕಮಲಜಾಬಾಯಿಗೆ ಅರ್ಥವಾಗ ಲಿಲ್ಲ. ಅವರು ಸೀರೆಯನ್ನು ಹಿಂದಿರುಗಿಸಿ ಬಿಟ್ಟರು. ಆದರೆ ಎರಡನೆಯ ಬಾರಿ ಅದೇ ಸೀರೆ ಮತ್ತೊಮ್ಮೆ ಅವರ ಹೆಸರಿನಲ್ಲಿ ಬಂತು. ಕಮಲಜಾ ಬಾಯಿ ಇವರನ್ನು ಕೇಳಿದಾಗ ಸ್ವಯಂ ವಲ್ಲಭಸ್ವಾಮಿಯವರೇ ತಮ್ಮ ಕೈಯಿಂದ ತೆಗೆದ ದಾರದಿಂದ ನೇಯ್ದ ಈ ಸೀರೆಯನ್ನು ಕಳಿಸಿಕೊಟ್ಟಿದ್ದಾರೆ ಎಂಬುದು ಗೊತ್ತಾಯಿತು. ಆಗ ಕಮಲಜಾಬಾಯಿಯ ಕಣ್ಣಲ್ಲಿ ನೀರೂರಿತು. “ಎಂತಹ ವಾತ್ಸಲ್ಯ!  ಆತ್ಮೀಯತೆ!’  ಎಂದು ನಿಟ್ಟುಸಿರುಬಿಟ್ಟರು.

ವಲ್ಲಭಸ್ವಾಮಿ ಸ್ವಾರ್ಥಕ್ಕೆ ಬಹುದೂರವಾಗಿದ್ದರು. ಅವರಿಗೆ ಸೇವೆಯೊಂದನ್ನು ಬಿಟ್ಟರೆ ಬೇರೆ ಏನೂ ಕಾಣಿಸುತ್ತಿರಲಿಲ್ಲ. ಕೀರ್ತಿ, ಅಧಿಕಾರ, ಸುಖ ಯಾವುದನ್ನೂ ಅವರು ಬಯಸಲಿಲ್ಲ. ಮಾನವ ಸೇವೆಗಾಗಿಯೇ ಈ ದೇಹ ವೆಂಬುದನ್ನು ಅವರು ತಮ್ಮ ಜೀವನದಲ್ಲಿ ಕನ್ನಡಿಯಂತೆ ತೋರಿಸಿಕೊಟ್ಟರು.

ಕಾಯಿಲೆ ಬಿದ್ದವರ ವಿಷಯದಲ್ಲಿ ಅವರೆಂದೂ ಅಸಡ್ಡೆ ತೋರಿಸುತ್ತಿರಲಿಲ್ಲ. ಅವರ ಸೇವೆಗಾಗಿ ಹಾತೊರೆಯುತ್ತಿದ್ದರು.

೧೯೩೪ ರಲ್ಲಿ ಬೆಳಗಾವಿ ಜಿಲ್ಲೆ ಹಿಂಡಲಗಿ ಜೈಲಿನಿಂದ ಬಿಡುಗಡೆಯಾಗುತ್ತಲೇ ಮಹಾದೇವಿ ತಾಯಿ (ವಿನೋಬಾಜಿಯವರ ಸೇವೆಯಲ್ಲಿ ನಿರತರಾಗಿರುವ ಕನ್ನಡತಿ) ಗಾಂಧೀಜಿಯ ಆದೇಶದಂತೆ ವರ್ಧಾದಯ ಮಹಿಳಾಶ್ರಮಕ್ಕೆ ಹೋದರು. ಆಗ ಅಲ್ಲಿಯ ಸಂಚಾಲಕರು ವಿನೋಬಾ. ಸೆರೆಮನೆಯ ಶಿಕ್ಷೆಯಿಂದ ಮಹಾದೇವಿ ತಾಯಿ ಹೊರಬರುತ್ತಲೇ ಕಾಯಿಲೆಗೀಡಾದರು. ಆಗ ವಿನೋಬಾ ಅವರ ಆರೈಕೆಗಾಗಿ ವಲ್ಲಭಸ್ವಾಮಿಯನ್ನು ನಿಯುಕ್ತಿ ಗೊಳಿಸಿ ದರು. ಆಶ್ರಮದ ಎಲ್ಲ ಕೆಲಸಕಾರ್ಯಗಳನ್ನು ಮುಗಿಸಿ ತಾಯಿಯ ಸೇವೆಗೆ ಬರುತ್ತಿದ್ದರು. ಅವರ ಬಟ್ಟೆಗಳನ್ನು ಒಗೆಯುತ್ತಿದ್ದರು. ಕಕ್ಕಸು ತೊಳೆಯುತ್ತಿದ್ದರು. ಅವರಿಗೆ ಬೇಸರವಾದಾಗ ಆಧ್ಯಾತ್ಮ ವಿಚಾರ ಹೇಳುತ್ತಿದ್ದರು.

ಒಮ್ಮೆ ಆಶ್ರಮದ ಕೌಸಲ್ಯಾ ಬಾಯಿ ಎಂಬ ಮಹಿಳೆ ಕಾಯಿಲೆ ಬಿದ್ದಳು. ಕೂಡಲೇ ವಲ್ಲಭಸ್ವಾಮಿ ಆಕೆಯ ಆರೈಕೆಯಲ್ಲಿ ತೊಡಗಿದರು. ಸೇವೆಗಾಗಿ ಇಬ್ಬರು ಮಹಿಳೆ ಯರನ್ನು ನೇಮಿಸಿದರು. ಸ್ವಾಮೀಜಿ ಪ್ರತಿನಿತ್ಯ ಬೆಳಿಗ್ಗೆ ಆಶ್ರಮದಿಂದ ಬರುವಾಗ ಒಂದೆರಡು ಟೊಮ್ಯಾಟೋ, ತರಕಾರಿಯನ್ನು ತಂದು ಅದನ್ನು ತಾವೇ ಹೆಚ್ಚಿ ಕುದಿಸಿ ಬಡಿಸುತ್ತಿದ್ದರು. ಊಟ ಮುಗಿಯುವವರೆಗೂ ಅವರ ಜೊತೆಯಲ್ಲೇ ಇದ್ದು, ಭಜನೆ – ಅಭಂಗಗಳನ್ನು ಅವರ ಬಾಯಿಂದ ನುಡಿಸುತ್ತಿದ್ದರು.

ಒಮ್ಮೆ ಸುರಗಾಂವ್ ಗ್ರಾಮದ ನದೀ ತೀರದಲ್ಲಿ ಒಂದು ಮುದಿ ಎತ್ತು ಬಿದ್ದುಕೊಂಡಿತ್ತು. ಇದನ್ನು ಸ್ವಾಮೀಜಿ ನೋಡಿದರು. ಅವರ ಹೃದಯ ಕರಗಿ ನೀರಾಯಿತು. ಕೂಡಲೇ ಸಂಬಂಧ ಪಟ್ಟವರನ್ನು ಕರೆಸಿ, ‘ನೀವೆಂಥಹ  ಕ್ರೂರ ಕೆಲಸ ಮಾಡುತ್ತೀದ್ದೀರಿ? ಹೀಗೆಯೇ ಬಿಟ್ಟರೆ ಈ ರಾತ್ರಿ ನರಿ-ನಾಯಿಗಳು ಈ ಎತ್ತನ್ನು ತಿಂದು ಬಿಡುತ್ತವೆ’ ಎಂದರು.

ಅವರು ‘ಈ ಎತ್ತಿಗೆ ಆಗಲೇ ವಯಸ್ಸಾಗಿ ಹೋಗಿದೆ. ಮನೆಗೆ ತೆಗೆದುಕೊಂಡು ಹೋಗಿ ಮಾಡುವುದಾದರೂ ಏನು?’ ಎಂದರು.

ಈ ಮಾತು ಕೇಳಿ ಸ್ವಾಮೀಜಿ ಕಿಡಿಕಿಡಿಯಾದರು.

‘ಹಾಗೆಂದು ಈ ಎತ್ತನ್ನು ಇಲ್ಲಿಯೇ ಬಿಟ್ಟು ಬಿಡುವುದೇ? ಶಕ್ತಿಯಿರುವವರೆಗೂ ನಿಮಗಾಗಿ ದುಡಿದ ಈ ಪ್ರಾಣಿಯನ್ನು ಹೀಗೆ ಕ್ರೂರವಾಗಿ ಕೊಲ್ಲುವುದೇ? ನಿಮಗೆ ಹೃದಯವಿದೆಯೇ? ಮಹಾ ಪಾಪ ಮಾಡುತ್ತೀದ್ದೀರಿ ನೀವು’ ಎಂದರು.

ಕೊನೆಗೆ ನಿಟ್ಟುಸಿರುಬಿಟ್ಟು ಸ್ವಾಮೀಜಿ ಹೇಳಿದರು: ‘ನಾನಿಂದು ರಾತ್ರಿ ಇದರ ಜೊತೆಯಲ್ಲೇ ಮಲಗುತ್ತೇನೆ ನೀವು ಬೇಕಾದರೆ ಮನೆಗೆ ಹೋಗಿ’ ಎಂದು.

‘ಇದು ಸ್ಮಶಾನ ಸ್ವಾಮೀಜಿ. ಇಲ್ಲಿ ನೀವು ಒಬ್ಬರೇ ಹೇಗೆ ಮಲಗುತ್ತೀರಿ. ನಿಮಗೆ ಭಯವಾಗುವುದಿಲ್ಲವೇ?”

‘ಸ್ಮಶಾನವೇನೂ, ಊರೇನು, ಭಗವಂತನ ಭಕ್ತನಿಗೆ ಎಲ್ಲವೂ ಒಂದೇ. ಭಯವಿರುವುದು ಭಗವಂತನ ಭಕ್ತರಲ್ಲದವರಿಗೆ’ ಎಂದರು ವಲ್ಲಭಸ್ವಾಮಿ.

ಕೂಡಲೇ ಎತ್ತಿನ ಮಾಲೀಕರಿಗೆ ತಾವು ಮಾಡುತ್ತಿರುವ ತಪ್ಪಿನ ಅರಿವಾಯಿತು. ಅವರು ಕೂಡ ಸ್ವಾಮೀಜಿಯ ಜೊತೆಯಲ್ಲಿಯೇ ಅಂದು ರಾತ್ರಿ ಅಲ್ಲಿಯೇ ಮಲಗಿದರು. ಮರುದಿನ ಮಧ್ಯಾಹ್ನದ ಹೊತ್ತಿಗೆ ಎತ್ತು ತನ್ನ ಕೊನೆಯುಸಿರೆಳೆಯಿತು.

ಪ್ರಾಣಿಗಳಲ್ಲೂ ಆತ್ಮಾನುಭೂತಿ ಮಾಡಿಕೊಳ್ಳುತ್ತಿದ್ದ ವಲ್ಲಭಸ್ವಾಮಿಯವರ ಜೀವನವೊಂದು ಜೀವಂತ ಕಲೆ.

ಹಠವಾದಿಗಳೂ ಶರಣಾಗುತ್ತಿದ್ದರು

ಗ್ರಾಮಸ್ವರಾಜ್ಯಕ್ಕಾಗಿ ಪ್ರಯತ್ನ ನಡೆಯುತ್ತಿತ್ತು. ಇಡೀ ಗ್ರಾಮವನ್ನೇ  ಖಾದಿಧಾರಿಯನ್ನಾಗಿ ಮಾಡುವ ಸಾಹಸ ವಲ್ಲಭಸ್ವಾಮಿಯವರದು. ಅದಕ್ಕಾಗಿ ಹಗಲಿರುಳು ಪ್ರಯತ್ನ, ಒಂದು ಕುಟುಂಬ ಮಾತ್ರ ಅದಕ್ಕೆ ವಿರೋಧ. ಖಾದಿ ತೊಡುವುದಿಲ್ಲವೆಂಬ ಹಠ. ಹಠ ಮಾಡಿದ ಯುವಕ ಅವಿದ್ಯಾವಂತನಲ್ಲ ಎಂ. ಕಾಂ. ಎಲ್. ಎಲ್. ಬಿ. ಓದಿದ ವಿದ್ಯಾವಂತ. ಆದರೆ ವಲ್ಲಭಸ್ವಾಮಿ ಇದರಿಂದ ನಿರಾಶರಾಗಲಿಲ್ಲ. ಅವರು ಆ ಯುವಕನೊಡನೆ ಸಂಪರ್ಕ ಬೆಳೆಸಿದರು. ಆತನಿಗಾಗಿ ತಮ್ಮ ಹೃದಯವನ್ನೇ ತೆರೆದಿಟ್ಟರು. ಮುಗುಳ್ನಗೆಯಿಂದ ಯುವಕನನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದರು. ಏನೇ ಮಾಡಿದರೂ ಯುವಕ ಜಗ್ಗಲಿಲ್ಲ. ಹಾಗೆಂದು ಅವರು ಬಿಡಲಿಲ್ಲ. ಪ್ರೀತಿವಾತ್ಸಲ್ಯಗಳಿಂದ ಮತ್ತೆ ಮತ್ತೆ ಆತನನ್ನು ಮಾತನಾಡಿಸುತ್ತಿದ್ದರು. ಖಾದಿ ಶಾಸ್ತ್ರವನ್ನು ಬಿಡಿಸಿ  ಬಿಡಿಸಿ ಹೇಳುತ್ತಿದ್ದರು. ಕೊನೆಗೂ ಯುವಕ ಮೊಂಡುತನ ಮಾಡಿ, ‘ನೀವು ನಿಮ್ಮ ಕೈಯಿಂದ ನೂತ ಒಂದು ಜೊತೆ ಪಂಚೆ ನನಗೆ ಮಾಡಿಕೊಟ್ಟರೆ ನಾನು ಖಾದಿ ಧರಿಸುತ್ತೇನೆ’ ಎಂದ.

ಯುವಕನ ಹೃದಯದೊಳಗೆ ಪ್ರವೇಶಿಸಲು ಇದೊಂದು ಸಾಧನವಾಯಿತು. ವಲ್ಲಭಸ್ವಾಮಿ ತಾವೆ ಕೈಯಾರೆ ನೂತನೂಲಿನಿಂದ ಆ ಯುವಕನಿಗೆ ಒಂದು ಜೊತೆ ಪಂಚೆ ತಯಾರಿಸಿಕೊಟ್ಟರು.

ಇದರಿಂದ ಯುವಕನಿಗೆ ನಾಚಿಕೆಯಾಯಿತು.

‘ಇನ್ನು ಮುಂದೆ ನಾನಿಂತಹ ತಪ್ಪು ಕೆಲಸ ಮಾಡಲಾರೆ. ನನ್ನನ್ನು ಕ್ಷಮಿಸಿಬಿಡಿ. ನಿಮಗೆ ತೊಂದರೆ ಕೊಟ್ಟಿದ್ದೇನೆ. ನಾನು ಜೀವಂತವಾಗಿರುವವರೆಗೂ ಖಾದಿಯ ಹೊರತು ಬೇರೆ ಬಟ್ಟೆಯನ್ನು ತೊಡುವುದಿಲ್ಲ. ಇದು ನನ್ನ ಸಂಕಲ್ಪ’ ಎಂದ.

ಹೀಗೆ ವಲ್ಲಭಸ್ವಾಮಿ ತಮ್ಮ ನಮ್ರ ಸ್ವಭಾವದಿಂದ ಎದುರಾಳಿಯ ಹೃದಯವನ್ನು ಗೆಲ್ಲುತ್ತಿದ್ದರು. ಅವರಿಗೆ ಅಹಂಕಾರವೆಂಬುದೇ ಇರಲಿಲ್ಲ.

ನಾನೇ ಬರುತ್ತೇನೆ

೧೯೫೪ರಲ್ಲಿ ಸರ್ವೋದಯ ಸಮ್ಮೇಳನ ನಡೆಯಿತು. ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ಬೋಧ ಗಯೆಯಲ್ಲಿ ಆ ಸಮ್ಮೇಳನ. ವಲ್ಲಭಸ್ವಾಮಿಯವರು ಆಗಲೆ ದೊಡ್ಡವರೆನಿಸಿದ್ದರು. ಅವರ ಪಾಂಡಿತ್ಯ, ವಿಚಾರಧಾರೆ, ವ್ಯವಹಾರಿಕತೆ ಎಲ್ಲರನ್ನು ಆಕರ್ಷಿಸಿತ್ತು. ಸರ್ವೋದಯ ಜಗತ್ತಿನಲ್ಲಿ ಅವರೊಬ್ಬ ಮೇಧಾವಿಗಳೆಂದು ಹೆಸರಾಗಿದ್ದರು. ಹೀಗಿದ್ದರೂ ಅವರು ದೊಡ್ಡಸ್ತಿಕೆಗೆ ಗಮನ ಕೊಟ್ಟವರೇ ಅಲ್ಲ. ಮಕ್ಕಳಂತೆ ಎಲ್ಲರ ಜೊತೆಗೂ ಬೆರೆಯುತ್ತಿದ್ದರು.

ಸಮ್ಮೇಳನಕ್ಕೆ ಆಗಮಿಸಿದ್ದ ಬಂಗಾಳದ ಒಬ್ಬ ಸಾಮಾನ್ಯ ಕಾರ್ಯಕರ್ತ ಯಾವುದೋ ಕಾರ್ಯನಿಮಿತ್ತ ಹೊರಗೆ ಹೋಗಬೇಕಾಗಿ ಬಂತು. ಇನ್ನೂ ಬೆಳಕು ಹರಿದಿರಲಿಲ್ಲ. ಬಸ್ ನಿಲ್ದಾಣ ಅಲ್ಲಿಂದ ಮೂರು ಫರ್ ಲಾಂಗ್ ದೂರ. ಯಾವುದೇ ವಾಹನದ ವ್ಯವಸ್ಥೆಯೂ ಇರಲಿಲ್ಲ. ನಡೆದುಕೊಂಡು ಹೋಗಬೇಕೆಂದರೆ ಹಾಸಿಗೆಯ ಗಂಟು ಮೂಟೆ ಬೇರೆ. ಏನು ಮಾಡಬೇಕೆಂಬುದೇ ಆತನಿಗೆ ಹೊಳೆಯಲಿಲ್ಲ.

ಅಷ್ಟರಲ್ಲಿ ವಲ್ಲಭಸ್ವಾಮಿ ಬಂದರು. ಬಂಗಾಳದ ಪ್ರಸಿದ್ಧ ರಚನಾತ್ಮಕ ಕಾರ್ಯಕರ್ತ ಚಾರುಚಂದ್ರ ಭಂಡಾರಿಯವರೊಡನೆ ಅವರು ಮಾತನಾಡಬೇಕಾಗಿತ್ತು.

ಚಿಂತೇಗೀಡಾಗಿದ್ದ ಕಾರ್ಯಕರ್ತನನ್ನು ನೋಡಿ ಕೇಳಿದರು, ‘ಎಲ್ಲಿಗೆ ಹೋಗಬೇಕು?’ ಎಂದು ಕಾರ್ಯಕರ್ತ ತನ್ನ ಸಂಕಟವನ್ನು ತೋಡಿಕೊಂಡ.

‘ಅದಕ್ಕೇಕೆ ಚಿಂತೆ? ಈ ಸಮಯದಲ್ಲಿ ಯಾವ ವಾಹನವೂ ದೊರೆಯದು. ನಾನೇ ಬರುತ್ತೇನೆ’ ಎಂದು ಹೇಳಿ ವಲ್ಲಭಸ್ವಾಮಿ ಕಾರ್ಯಕರ್ತನ ಹಾಸಿಗೆ ಮೂಟೆಯನ್ನು ತಲೆಯ ಮೇಲೆ ಹೊತ್ತುಕೊಂಡು ನಡೆದೇ ಬಿಟ್ಟರು.

ನಾಗರೀಕತೆಯ ಸಂಕೇತ ಮನುಷ್ಯ ಮನುಷ್ಯ ನೊಡನೆ ಬೆರೆತಾಗ, ಸಹಕಾರ ಹಸ್ತ ನೀಡಿದಾಗ, ಇನ್ನೊಬ್ಬರ ಸಂಕಟವನ್ನರಿತಾಗ, ಅಹಂಕಾರವನ್ನು ಗೆದ್ದು ಇನ್ನೊಬ್ಬರ ವೇದನೆಯನ್ನಿರಿತು ಕೊಂಡದ್ದರಿಂದಲೇ ವಲ್ಲಭಸ್ವಾಮಿ ದೊಡ್ಡವರಾದರು.

ಹೆಚ್ಚು ಹಣ ಕೇಳಿದುದಕ್ಕಾಗಿ

ಮಹಾರಾಷ್ಟ್ರದ ಮಾದಾನ್ ಎಂಬಲ್ಲಿ ಒಂದು ಶಿಬಿರ. ಈ ಶಿಬಿರಕ್ಕೆ ವಲ್ಲಭಸ್ವಾಮಿ ಹೋಗಬೇಕಾಗಿತ್ತು. ಅಮರಾವತಿಯಿಂದ ಇಪ್ಪತ್ತೇಳು ಮೈಲಿ ದೂರ ಈ ಹಳ್ಳಿ. ರೈಲು, ಬಸ್ಸು, ಎತ್ತಿನಗಾಡಿ ಉಪಯೋಗಿಸಬೇಕಾಗುತ್ತಿತ್ತು.

ವಲ್ಲಭಸ್ವಾಮಿ ಅಮರಾವತಿಯಲ್ಲಿ ಬಸ್ಸಿಗಾಗಿ ಕಾದರು. ವಿಪರೀತ ಜನ. ಕಂಡಕ್ಟರ್ ಜನರನ್ನು ಬಸ್ಸಿನೊಳಗೆ ತುರುಕುತ್ತಿದ್ದ. ಮಾದಾನ್ ಹಳ್ಳಿಗೆ ಎಪ್ಪತ್ತೈದು ಪೈಸೆ. ಕಂಡಕ್ಟರ್ ಕೇಳಿದ್ದು ಒಂದು ರೂಪಾಯಿ. ಇದು ವಲ್ಲಭಸ್ವಾಮಿಗೆ ಭ್ರಷ್ಟಾಚಾರ ವೆನಿಸಿತು. ನಿರ್ಧರಿಸಿರುವ ದರಕ್ಕಿಂತ ಇಪ್ಪತ್ತೈದು ಪೈಸೆ ಹೆಚ್ಚು. ಕೊಡುವುದು ಕಷ್ಟವಾಗಿರಲಿಲ್ಲ. ಆದರೆ ಇದು ನೀತಿಯ ಪ್ರಶ್ನೆ. ನೀತಿಯಿಂದ ಜಾರಿದರೆ ಸಮಾಜ ಕೆಟ್ಟು ಹೋಗುವುದು. ಭ್ರಷ್ಟಾಚಾರದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗುವುದು.

ಹೀಗೆ ಯೋಚಿಸಿ ಅವರು ಇಪ್ಪತ್ತೇಳು ಮೈಲಿ ನಡೆದು ಕೊಂಡೇ ಮಾದಾನ್ ಹಳ್ಳಿ ತಲುಪಿದರು. ಒಂಭತ್ತು ಗಂಟೆ ಪ್ರಯಾಣದಿಂದ ಅವರು ಬಳಲಿದ್ದರೂ ಹಸನ್ಮುಖಿಯಾಗಿದ್ದರು. ಅವರ ಚಿತ್ತದಲ್ಲಿ ಶಾಂತಿ ನೆಲೆಸಿತ್ತು. ಇದನ್ನೇ ತಪಸ್ಸು ಎನ್ನುವುದು. ನೀತಿ – ಧರ್ಮಗಳಿಗಾಗಿ ಮಾಡಿದ ಸಾಧನೆಯ, ತಪಸ್ಸು.

ಮಹಾನ್ ಸಾಧಕ

ಯಾವುದೇ ಕೆಲಸವಾಗಲಿ ಅಚ್ಚುಕಟ್ಟಾಗಿ ಮಾಡುವುದು ವಲ್ಲಭಸ್ವಾಮಿಯವರ ಸ್ವಭಾವ. ಮೇಲು ಕೀಳುಗಳಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಭಂಗಿಯ ಕೆಲಸ ಮಾಡುವಾಗಲು ಅವರು ಅಸಹ್ಯ ಪಟ್ಟುಕೊಳ್ಳಲಿಲ್ಲ. ಶುದ್ಧೀ ಕರಣ ಕಾರ‍್ಯ ಒಂದು ಪವಿತ್ರ ಕ್ರಿಯೆ ಎಂದು ಅವರು ಭಾವಿಸಿದ್ದರು. ಅದಕ್ಕಾಗಿ ಅವರು ಸದಾ ಜಾಗೃತ ರಾಗಿರುತ್ತಿದ್ದರು.

೧೯೩೮ರಲ್ಲಿ ಗ್ರಾಮಸ್ವರಾಜ್ಯದ ಕೆಲಸವನ್ನು ಸುರಗಾಂವ್ ಹಳ್ಳಿಯಲ್ಲಿ ವಲ್ಲಭಸ್ವಾಮಿ ಪ್ರಾರಂಭಿಸಿದರು. ಹೊರಗಿನಿಂದ ಈ ಕೆಲಸಕ್ಕಾಗಿ ಹತ್ತಾರು ಜನ ಕಾರ್ಯಕರ್ತರು ಆಗಮಿಸಿದ್ದರು. ಅವರಿಗಾಗಿ ಬಿದಿರಿನ ಮನೆಗಳು ತಯಾರಾದವು. ಅಡುಗೆ ಮನೆ ಎಲ್ಲರಿಗೂ ಒಂದೆ. ಒಟ್ಟಿಗೆ ಊಟ ಮಾಡುತ್ತಿದ್ದರು. ದಿನೇ ದಿನೇ ಗ್ರಾಮದ ಜನರೊಡನೆ ಇವರ ಸಂಪರ್ಕ ಬೆಳೆಯುತ್ತಾ ಹೋಯಿತು. ಗಾಣದಿಂದ ಎಣ್ಣೆ ತೆಗೆಯುವುದು, ನೂಲುವುದು ಮುಂತಾದ ಗ್ರಾಮ ಕೈಗಾರಿಕೆ ಕೆಲಸ ಆರಂಭವಾಯಿತು. ಮುಂಜಿ ಸ್ವರಾಜ್ಯ ಭಂಡಾರದ ಸ್ಥಾಪನೆಯಾಯಿತು. ಹಳ್ಳಿಯ ಮಕ್ಕಳಿಗೆ ಶಿಕ್ಷಣದ ದೃಷ್ಟಿಯಿಂದ ಪಾಠಶಾಲೆ, ಇಡೀ ಹಳ್ಳಿಗೆ ಧಾನ್ಯ ಬಟ್ಟೆ ಮುಂತಾದ ವಸ್ತುಗಳ ಪೂರೈಕೆಗಾಗಿ ಯೋಜನೆ, ಪ್ರತಿಯೊಂದು ಮೊಹಲ್ಲಾದಲ್ಲಿ ಸಾಮೂಹಿಕ ಪ್ರಾರ್ಥನೆ, ಮಹಿಳೆಯರಿಗಾಗಿ ಪ್ರತ್ಯೇಕ ಕಕ್ಕಸುಗಳನ್ನು ಕಟ್ಟಿಸುವ ನಿರ್ಧಾರ ಎಲ್ಲವೂ ವಲ್ಲಭಸ್ವಾಮಿಯವರ ಪ್ರಯತ್ನದಿಂದ ರೂಪುಗೊಂಡಿತು.

ಮಲ ಮೂತ್ರಗಳ ವ್ಯವಸ್ಥೆಗಾಗಿ ಗ್ರಾಮದ ಹೊರಗೆ ಕಕ್ಕಸುಗಳನ್ನು ಕಟ್ಟಲಾಗಿತ್ತು. ಪಕ್ಕದಲ್ಲೇ ನಾಲ್ಕು ಅಡಿ ಆಳವುಳ್ಳ ತಗ್ಗು ತೆಗೆದು ಅದರಲ್ಲಿ ಮಲ-ಮೂತ್ರಗಳನ್ನು ಹಾಕಿ ಮಣ್ಣಿನಿಂದ ಮುಚ್ಚಲಾಗುತ್ತಿತ್ತು. ಒಂದು ದಿನ ಮಳೆಯ ಕಾರಣದಿಂದ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳದ ನೀರು ಈ ತಗ್ಗಿಗೆ ನುಗ್ಗಿತು. ಇದರಿಂದ ಕ್ರಿಮಿಗಳು ಹೆಚ್ಚಿ ನೀರಿನ ಮೇಲೆ ತೇಲತೊಡಗಿದವು. ಜನರಿಗೆ ಏನುಮಾಡಬೇಕೆಂಬುದೆ ತೋಚಲಿಲ್ಲ. ಜೊತೆಗೆ ದುರ್ಗಂಧ ಬೇರೆ. ವಲ್ಲಭಸ್ವಾಮಿ ಅಸಹ್ಯಪಟ್ಟುಕೊಳ್ಳಲಿಲ್ಲ. ತಾವೆ ಸ್ವತಃ ಭಂಗಿಯಾಗಿ ನಿಂತರು. ಬಿದಿರಿನ ಗಳು ತೆಗೆದು ಕೊಂಡು ಅದರ ಒಂದು ಕೊನೆಗೆ ಬುಟ್ಟಿ ಕಟ್ಟಿದರು. ನೀರಿನ ಮೇಲೆ ತೇಲುತ್ತಿದ್ದ ಹುಳುಗಳನ್ನು ಬುಟ್ಟಿಯಲ್ಲಿ ತುಂಬಿ ಪಕ್ಕದಲ್ಲಿ ತೋಡಿದ್ದ ಆಳವಾದ ತಗ್ಗಿಗೆ ಹಾಕತೊಡಗಿದರು. ಇವರ ನೆರವಿಗೆ ಜನರೂ ನಿಂತುಕೊಂಡರು. ಈ ಕೆಲಸ ಮೂರು ನಾಲ್ಕು ದಿನ ಹಿಡಿಯಿತು.

ವಲ್ಲಭಸ್ವಾಮಿ ಗ್ರಾಮಸಫಾಯಿಯ ಕಾರ್ಯದಲ್ಲಿ ನಿಷ್ಣಾತರಾದರು. ಮುಂದೆ ತಮ್ಮ ಅನುಭವದಿಂದ ಮಲಮೂತ್ರ ಸಫಾಯಿಯ ವಿಚಾರವನ್ನು ಕುರಿತು ಒಂದು ಗ್ರಂಥವನ್ನೇ ರಚಿಸಿದರು.

ಸೆರೆಮನೆಗೆ

೧೯೪೨ರಲ್ಲಿ ಆಶ್ರಮದ ಜನರ ಮೇಲೆ ಆಗಿನ ಬ್ರಿಟಿಷ್ ಸರ್ಕಾರ ಕಣ್ಣಿಟ್ಟಿತು. ಅನೇಕ ಜನರ ಮೇಲೆ ಸುಳ್ಳು ಆಪಾದನೆ ಹೊರಿಸಿ ಕೊಲೆ ಮೊಕದ್ದಮೆ ಹೂಡಿತು. ಇದರಲ್ಲಿ ವಲ್ಲಭಸ್ವಾಮಿಯವರೂ ಸೇರಿಕೊಂಡಿದ್ದರು. ಅವರಿಗೆ ಗಲ್ಲು ಶಿಕ್ಷೆಯಾಗುತ್ತದೆಂಬ ವದಂತಿಯೂ ಹಬ್ಬಿತು. ಇದಾವುದಕ್ಕೂ ವಲ್ಲಭಸ್ವಾಮಿ ಸೊಪ್ಪು ಹಾಕಲಿಲ್ಲ. ಅವರು ನಿರ್ಭಯರಾಗಿದ್ದರು. ಸರ್ಕಾರ ಅವರಿಗೆ ಒಂದೂವರೆ ವರ್ಷದ ಸೆರೆಮನೆ ವಾಸದ ಶಿಕ್ಷೆ ವಿಧಿಸಿತು. ಕೈಗಳಿಗೆ ಬೇಡಿ ತೊಡಿಸಿ ಜೈಲಿಗೆ ಕುಳುಹಿಸಿತು. ಆಗ ವಲ್ಲಭಸ್ವಾಮಿ ನಗುನಗುತ್ತಾ, ‘ಭಾರತಮಾತೆಯ ಬೇಡಿಯನ್ನು ಮುರಿದು ಹಾಕುವ ಸಲುವಾಗಿಯೆ ಸರ್ಕಾರ ನನಗೆ ಈ ಬೇಡಿಯನ್ನು ತೊಡಿಸಿದೆ’ ಎಂದರು.

ಶಿಕ್ಷೆಯ ಅವಧಿ ಮುಗಿಸಿಕೊಂಡು ಬಂದೊ ಡನೆಯೆ ಮತ್ತೆ ಅವರು ಗ್ರಾಮಸ್ವ ರಾಜ್ಯದ ಕೆಲಸದಲ್ಲಿ ತೊಡಗಿದರು. ಅತಿಯಾದ ಪರಿಶ್ರಮದಿಂದ  ಅವರ ದೇಹ ಬಳಲಿತು. ಬಾಲ್ಯದಿಂದಲೂ ರಿಕ್ಟೆಸ್ ರೋಗಿಯಾಗಿದ್ದ ಅವರ ಎದೆಯ ಮೂಳೆಗಳು ಎದ್ದು ಕಾಣಿಸುತ್ತಿದ್ದವು. ಹಲ್ಲುಗಳು ಪೂರಾ ಕೆಟ್ಟು ಹೋದವು. ಕೊನೆಗೆ ಕ್ಷಯರೋಗ ಪೀಡಿತರಾದರು. ಆದರೂ ಅವರು ಅಂಜಲಿಲ್ಲ, ಧೃತಿಗೆಡಲಿಲ್ಲ. ಮನಸ್ಸಿನ ಸಮತೋಲನ ಕಳೆದುಕೊಳ್ಳಲಿಲ್ಲ. ಸದಾ ಪ್ರಸನ್ನಚಿತ್ತರಾಗಿದ್ದುಕೊಂಡು ಭಗವಂತನ ನಾಮ ಸ್ಮರಣೆಯಿಂದ ರೋಗ ಮುಕ್ತರಾದರು.

ಕರ್ನಾಟಕದಲ್ಲಿ

ಅಧ್ಯಯನ, ಅಭ್ಯಾಸ, ಪರಿಶ್ರಮಗಳಿಂದ ವಲ್ಲಭಸ್ವಾಮಿ ತಮ್ಮ ವ್ಯಕ್ತಿತ್ವ ಬೆಳೆಸಿಕೊಂಡರು.  ಸರ್ವ ಸೇವಾ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು. ಶಾಲಾ ಕಾಲೇಜುಗಳಲ್ಲಿ, ಓದದಿದ್ದರೂ ಅವರು ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಒಮ್ಮೆ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅವರ ಭಾಷಣದ ವ್ಯವಸ್ಥೆಯಾಗಿತ್ತು. ಭೂದಾನ ಮತ್ತು ಸರ್ವೋದಯದ ವಿಚಾರವಾಗಿ ಅವರು ಇಂಗ್ಲಿಷಿನಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ತಿಳಿಯಾದ ಭಾಷೆಯಲ್ಲಿ ಗಹನ ವಿಚಾರವನ್ನು ಚೊಕ್ಕವಾಗಿ ನಿರೂಪಿಸಿದರು. ಅಲ್ಲಿದ್ದ ಅಧ್ಯಾಪಕರಿಗೆ ಆಶ್ಚರ್ಯ ವಾಯಿತು. ಕಾಲೇಜ್ ಪ್ರವೇಶಮಾಡದ ಒಬ್ಬ ವ್ಯಕ್ತಿ ಇಷ್ಟೊಂದು ಸುಲಭವಾಗಿ ಪರಕೀಯ ಭಾಷೆ ಮಾತನಾಡುತ್ತಾನೆಂದು ಅವರು ಎಣಿಸಿರಲಿಲ್ಲ. ಇದಕ್ಕೆಲ್ಲ ಕಾರಣ ವಿನೋಬಾ. ಅವರು ಕೊಟ್ಟ ಶಿಕ್ಷಣದ ಫಲ.

ದಕ್ಷಿಣ ಭಾರತದಲ್ಲಿ ಸರ್ವೋದಯ ಕಾರ‍್ಯ ಅಷ್ಟಾಗಿ ಬೆಳೆಯಲಿಲ್ಲ. ಕಾರ‍್ಯಕರ್ತರ ಅಭಾವ, ಮಾರ್ಗದರ್ಶನದ ಕೊರತೆ ಎದ್ದು ಕಾಣಿಸುತ್ತಿತ್ತು. ಆಗ ವಿನೋಬಾ ತಮ್ಮ ಆಶ್ರಮದಿಂದ ಯಾರನ್ನಾದರೂ ಕಳಿಸಿಕೊಡಬೇಕೆಂದು ಯೋಚಿಸಿದರು. ಅವರ ಕಣ್ಣಿಗೆ ಬಿದ್ದವರು ವಲ್ಲಭಸ್ವಾಮಿ ಒಬ್ಬರೆ. ಭಾರತದ ಎಲ್ಲ ರಾಜ್ಯಗಳೊಡನೆ ಅವರ ಸಂಪರ್ಕ ವಿತ್ತು. ವಿನೋಬಾ  ಹೇಳಿದ ಕೆಲಸವನ್ನು ಅವರು ಶ್ರದ್ಧೆಯಿಂದ ಮಾಡುತ್ತಿದ್ದರು. ಈ ದೃಷ್ಟಿಯಿಂದ ತಮ್ಮ ಶಿಷ್ಯನನ್ನು ಕರ್ನಾಟಕಕ್ಕೆ ಕಳಿಸಲು ನಿರ್ಧರಿಸಿದರು.

ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಸರ್ವೋದಯ ಕೆಲಸವಾಗಬೇಕು. ಅದಕ್ಕೆ ಕರ್ನಾಟಕವನ್ನೇ ಕೇಂದ್ರವನ್ನಾಗಿ ಮಾಡುವ ಉದ್ದೇಶ ವಿನೋಬಾರದು. ಬೆಂಗಳೂರಿಗೆ ಒಂಬತ್ತು ಮೈಲು ದೂರದಲ್ಲಿ ಒಂದು ಆಶ್ರಮದ ಸ್ಥಾಪನೆಯಾಯಿತು. ಅದೇ ‘ವಿಶ್ವನೀಡಂ’ ಆಶ್ರಮ. ‘ನೀಡಂ’ ಅಂದರೆ ಗೂಡು. ‘ವಿಶ್ವನೀಡಂ’ ವಿಶ್ವದ ಗೂಡಾಗಬೇಕು. ಸರ್ವೋದಯ ವಿಚಾರದ ಪ್ರಯೋಗ ಶಾಲೆಯಾಗಬೇಕು. ಅದಕ್ಕೆ ತಕ್ಕ ವ್ಯಕ್ತಿ ವಲ್ಲಭಸ್ವಾಮಿ. ಹೀಗೆ  ಯೋಚಿಸಿ ವಿನೋಬಾ ಅವರನ್ನು ’ವಿಶ್ವನೀಡಂ’ ಆಶ್ರಮಕ್ಕೆ ಧಾರೆ ಎರೆದರು.

ಆಶ್ರಮ ಕಟ್ಟಲು ವಲ್ಲಭಸ್ವಾಮಿ ತುಂಬ ಶ್ರಮ ಪಡ ಬೇಕಾಯಿತು. ಮೊದಲಿಗೆ ಭಾಷೆಯ ತೊಂದರೆಯನ್ನವರು ಎದುರಿಸಬೇಕಾಯಿತು. ಕನ್ನಡ ಭಾಷೆ ಅವರಿಗೆ ಬರುತ್ತಿರಲಿಲ್ಲ. ಆದರೂ ಅವರ ಸರಳ ಜೀವನ, ನಮ್ರ ಸ್ವಭಾವ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಸ್ವಲ್ಪ ಕಾಲದಲ್ಲಿ ಹಲವರು ಕಾರ‍್ಯಕರ್ತರನ್ನು ಜೋಡಿಸಿಕೊಂಡರು. ಕಾಡಾಗಿದ್ದ ಭೂಮಿಯನ್ನು ಕೃಷಿಯೋಗವನ್ನಾಗಿಸಿ ಮಾಡಿದರು. ಅವರ ವಾಸಕ್ಕೆ ಯೋಗ್ಯ ಕಟ್ಟಡ ಇನ್ನೂ ಸಿದ್ಧವಾಗಿರಲಿಲ್ಲ. ತಾತ್ಕಾಲಿಕವಾಗಿ ಕಟ್ಟಿದ ಬಿದಿರು ಹುಲ್ಲಿನ ಜೋಪಡಿಯಲ್ಲಿ ಅವರ ವಾಸ.

ಮಾರ್ಗದರ್ಶಕ

ಒಂದು ದಿನ ವಲ್ಲಭಸ್ವಾಮಿ ಚಾಪೆಯ ಮೇಲೆ ಕುಳಿತು ಲೆಕ್ಕ ಪತ್ರಗಳ ಹಾಳೆಗಳನ್ನು ತಿರುವಿ ಹಾಕುತ್ತಿದ್ದರು. ಆಗ ಇಬ್ಬರು ಮಹಿಳೆಯರು ಅವರ ಎದುರಿಗೆ ಬಂದು ನಿಂತುಕೊಂಡರು.

‘ನೀವು ಯಾರು? ಆಶ್ರಮ ನೋಡಲು ಬಂದಿರಾ? ಇನ್ನೂ ಆಶ್ರಮದ ವಾತಾವರಣ ಮೂಡಿಸಲು ನನ್ನಿಂದ ಸಾಧ್ಯವಾಗಿಲ್ಲ. ನನಗೆ ನಿಷ್ಠಾವಂತ ಕಾರ‍್ಯಕರ್ತರು ಬೇಕು’ ಎಂದರು ವಲ್ಲಭಸ್ವಾಮಿ.

‘ನಾವು ವಿದ್ಯಾವಂತ ಮಹಿಳೆಯರು, ಪದವೀಧರರು. ನಮಗೆ ಆಶ್ರಮದ ವಾತಾವರಣ ಬೇಕು. ಸೇವೆ ಮಾಡಬೇಕೆಂಬ ಪ್ರಬಲ ಇಚ್ಛೆ ಇದೆ. ನಮ್ಮನ್ನು ನಿಮ್ಮ ಆಶ್ರಮಕ್ಕೆ ಸೇರಿಸಿಕೊಳ್ಳಿ’ ಎಂದರು ಬಂದಿದ್ದ ಮಹಿಳೆಯರು.

ಇವರ ಮಾತಿಗೆ ವಲ್ಲಭಸ್ವಾಮಿ ಸುಲಭವಾಗಿ ಒಪ್ಪಲಿಲ್ಲ. ಅವರ ಮನೆಯವರನ್ನು ಕಂಡು ವಿಚಾರಿಸಿದರು. ಆಶ್ರಮದ ಉದ್ದೇಶ ತಿಳಿಸಿ ಹೇಳಿದರು. ಇದನ್ನೆಲ್ಲ ಒಪ್ಪಿಕೊಂಡನಂತರವೆ, ಅವರನ್ನು ಆಶ್ರಮಕ್ಕೆ ಸೇರಿಸಿ ಕೊಂಡರು. ಕೊನೆಯಲ್ಲಿ ಇನ್ನೂ ಒಂದು ಮಾತು ಹೇಳಿದರು.

‘ಈ ಆಶ್ರಮ ನಿಮಗಾಗಿ ತೆರೆದಿದೆ. ಒಳಗೆ ಬರಲು ತೆರೆದಿರುವಂತೆಯೆ ಹೊರಗೆ ಹೋಗಲೂ ತೆರೆದಿದೆ. ಇಲ್ಲಿ ಯಾವುದೇ ರೀತಿಯ ಬಂಧನ ನಿಮಗನಿಸಬಾರದು’ ಎಂದು.

ಈ ಕೊನೆಯ ವಾಕ್ಯ ಬಂದವರ ಮೇಲೆ ತುಂಬ ಪರಿಣಾಮ ಬೀರಿತು. ಸ್ವಾತಂತ್ರ್ಯವು ಜವಾಬ್ದಾರಿ ಅರಿತು ಬದುಕಬೇಕು ಎಂಬುದರ ಸಂಕೇತ ಎಂದು ಅವರು ಅರ್ಥ ಮಾಡಿಕೊಂಡರು. ಆಶ್ರಮದ ಜೀವನಕ್ಕೆ ಅವರು ಒಗ್ಗಿ ಕೊಳ್ಳುವುದು ಆರಂಭದಲ್ಲಿ ಕಷ್ಟವೇ ಆಯಿತು. ಆದರೆ ಸ್ವಾಮೀಜಿ ಅವರನ್ನು ಹೆಜ್ಜೆ ಹೆಜ್ಜೆಗೂ ತಿದ್ದುತ್ತಿದ್ದರು. ಬೆಳಗಿನ ಉಪಹಾರಕ್ಕೆ ತಡವಾಗಿ ಬಂದರೆ, ‘ಆಶ್ರಮದಲ್ಲಿ ಸಾಮೂಹಿಕ ಜೀವನ ನಡೆಯುತ್ತದೆ. ನೀವು ತಡವಾಗಿ ಬಂದರೆ ಇತರರಿಗೆ ತೊಂದರೆಯಾಗುವುದಿಲ್ಲವೆ? ಅವರ ಸಮಯ ನಿಮ್ಮ ಅಶಿಸ್ತಿನಿಂದಾಗಿ ಹಾಳಾಗುವುದಿಲ್ಲವೆ?’ ಎಂದು ಬುದ್ಧಿವಾದ ಹೇಳುತ್ತಿದ್ದರು.

ಇನ್ನೊಮ್ಮೆ  ಈ ಮಹಿಳೆಯರು, ‘ಅಡಿಗೆ ಮನೆ ಯಲ್ಲೇ ನಮ್ಮ ಹೆಚ್ಚಿನ ವೇಳೆ ಕಳೆದು ಹೋಗುತ್ತದೆ. ಹೊರಗೆ ತೋಟದಲ್ಲಿ ಕೆಲಸ ಮಾಡಲು ಸಮಯವೆ ಸಿಗುವುದಿಲ್ಲ’ ಎಂದರು.

ಅದಕ್ಕೆ ಸ್ವಾಮೀಜಿ ‘ಬೆಳಗ್ಗೆ ನೀವು ಉಪಹಾರ ತಯಾರು ಮಾಡಿ ತೋಟದ ಕೆಲಸಕ್ಕೆ ಹೋಗಿ. ನಾನು ಒಂದು ಗಂಟೆ ಅಡುಗೆಯ ಕೆಲಸ ನೋಡಿಕೊಳ್ಳುತ್ತೇನೆ’ ಎಂದು ನಗುತ್ತಾ ತಿಳಿಸಿದರು.

ಅವರಿಗೆ ನಿರಾಶೆಯಾಗದಂತೆ ಹೆಜ್ಜೆ ಹೆಜ್ಜೆಗೂ ಅವರಲ್ಲಿ ಉತ್ಸಾಹ ತುಂಬುತ್ತಿದ್ದರು. ತಮ್ಮದೇ ಮನೆ ಎಂಬ ಭಾವನೆ ಅವರಲ್ಲಿ ಮೂಡಿಸುತ್ತಿದ್ದರು.

ತ್ಯಾಗಮಾಡಲು ಬಂದಿದ್ದೇವೆ

ಸ್ವಲ್ಪಕಾಲದ ಮೇಲೆ ಆಶ್ರಮದಲ್ಲಿ ಕೆಲವು ಹಸುಗಳನ್ನು ಸಾಕಿ ಗೋಶಾಲೆಯನ್ನು ಆರಂಭಿಸಿದರು. ಗೋಶಾಲೆಯ ಹಾಲನ್ನು ಅಕ್ಕಪಕ್ಕದ ಕುಟುಂಬಗಳಿಗೆ ವಲ್ಲಭಸ್ವಾಮಿ ಹಂಚಿಬಿಡುತ್ತಿದ್ದರು. ಇದರಿಂದ ಆಶ್ರಮ ವಾಸಿಗಳಿಗೆ ಹಾಲು ಸಾಕಾಗುತ್ತಿರಲಿಲ್ಲ. ನಗರದಿಂದ ತರಿಸಬೇಕಾಗಿತ್ತಿತ್ತು. ಅದೂ ವೇಳೆಗೆ ಸರಿಯಾಗಿ ಬರುತ್ತಿರಲಿಲ್ಲ. ಆಶ್ರಮವಾಸಿಗಳು ಬೇಸರಪಟ್ಟು ಕೊಂಡು ಹೇಳಿದರು, ‘ಗೋಶಾಲೆಯ ಹಾಲಿರುವುದು ಆಶ್ರಮವಾಸಿಗಳಿಗೆ. ಅದನ್ನು ನೀವು ಇತರ ಸಂಸಾರಗಳಿಗೆ ಏಕೆ ಹಂಚುತ್ತೀರಿ? ಅವರು ಬೇಕಾದರೆ ತಮ್ಮ ವ್ಯವಸ್ಥೆ ಮಾಡಿಕೊಳ್ಳುತ್ತಾರೆ’ ಎಂದು.

ಅದಕ್ಕೆ ವಲ್ಲಭಸ್ವಾಮಿ ಜೋರಾಗಿ ನಕ್ಕು, ‘ನಾವು ಬ್ರಹ್ಮಚಾರಿಗಳು. ತ್ಯಾಗಮಾಡಲು ಬಂದಿದ್ದೇವೆ. ತ್ಯಾಗಮಾಡುವ ಅವಕಾಶವನ್ನು ನಾವು ಎಂದೂ ಕಳೆದು ಕೊಳ್ಳಬಾರದು. ಹನುಮಂತನಂತೆ ಟೊಂಕ ಕಟ್ಟಿ ನಾವು ಜನರ ಸೇವೆಗೆ ಸದಾ ಸಿದ್ಧರಿರಬೇಕು’ ಎಂದರು.

ಆಶ್ರಮವಾಸಿಗಳ ಕೋಪ ಇಳಿದುಹೋಯಿತು. ಪರರ ಬಗ್ಗೆ ಚಿಂತಿಸುವ ಪಾಠವನ್ನು ಸ್ವಾಮೀಜಿ ತಮ್ಮ ಆಶ್ರಮವಾಸಿಗಳಿಗೆ ಕಲಿಸಿದರು.

ಅಂತಿಮಯಾತ್ರೆ

ದಣಿದ ಶರೀರ ಎಷ್ಟು ಕೆಲಸ ಮಾಡಲು ಸಾಧ್ಯ? ಅವರಲ್ಲಿ ಹೃದಯರೋಗ ಕಾಣಿಸಿಕೊಂಡಿತು. ಗೆಳೆಯರೊಬ್ಬರು ಅವರನ್ನು ಸಿಕಂದರಾಬಾದಿಗೆ ಕರೆದುಕೊಂಡು ಹೋದರು. ಅಲ್ಲಿ ಅವರಿಗೆ ನೈಸರ್ಗಿಕ ಚಿಕಿತ್ಸೆ ನೀಡಲಾಯಿತು. ಗುಣವಾಗಲಿಲ್ಲ. ಕೊನೆಗೆ ಆಸ್ಪತ್ರೆಗೆ ಸೇರಿಸಿದರು. ಶಾರೀರಿಕ ವೇದನೆಯಿಂದ ನರಳುತ್ತಿದ್ದರೂ ಅವರು ಹಸನ್ಮುಖರಾಗಿರುತ್ತಿದ್ದರು.

‘ನೋವು’-ಸಂಕಟವನ್ನನುಭವಿಸುತ್ತಿದ್ದರೂ ಅವರ ಪ್ರಸನ್ನ ಚಿತ್ತತೆ ನಮ್ಮನ್ನು ಆಶ್ಚರ್ಯಗೊಳಿಸಿದೆ” ಎನ್ನುತ್ತಿದ್ದರು ಅವರನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್.

೧೯೬೪ ರ ಡಿಸೆಂಬರ್ ೮ನೇ ತಾರೀಖು ರಾತ್ರಿ ೧೨ ಗಂಟೆಗೆ ಅವರು ಈ ಲೋಕದಿಂದ ದೂರವಾದರು. ಆಗ ಅವರ ವಯಸ್ಸು ಕೇವಲ ೫೭.

ಅವರಿಗೆ ಶರೀರದ ಮೇಲೆ ಎಂದೂ ಮೋಹವಿರಲಿಲ್ಲ.

‘ಈ ಶರೀರವನ್ನು ಪ್ರೀತಿಸುವುದು ಒಳ್ಳೆಯದಲ್ಲ. ಭಗವಂತನ ಸಾನ್ನಿಧ್ಯ ಸೇರುವ ಸಲುವಾಗಿ ಇದರ ಉಪಯೋಗ” ಎನ್ನುತ್ತಿದ್ದರು.

ಬಾಲ್ಯದಲ್ಲಿ ತಾಯಿ ತಂದೆಯನ್ನು ಕಳೆದುಕೊಂಡು ಗಾಂಧಿಯವರ ಸಾಬರಮತಿ ಆಶ್ರಮ ಸೇರಿದ ವಲ್ಲಭ. ಮುಂದೆ ಸತತ ಅಭ್ಯಾಸ ವೈರಾಗ್ಯದಿಂದ ವಲ್ಲಭಸ್ವಾಮಿ ಯಾಗಿ ವಿದ್ವಾಂಸರ ಸಾಲಿಗೆ ಏರಿದರು. ಜನತಾ ಸೇವೆಯೆ ಜನಾರ್ಧನನ ಸೇವೆ ಎಂದು ಬಗೆದು ತಮ್ಮನ್ನು ಅರ್ಪಿಸಿ ಕೊಂಡರು. ಗುಜರಾತಿನ ಒಂದು ಹಳ್ಳಿಯಲ್ಲಿ ಹುಟ್ಟಿದ ಈ ಮಹಾನ್ ಸಾಧಕ ದೇಹ ತೊರೆದದ್ದು ಆಂಧ್ರದ ಸಿಕಂದರಾಬಾದಿನಲ್ಲಿ. ಜಾತಿ, ಭಾಷೆ ಮುಂತಾದ ಯಾವುದೇ ಸಂಕುಚಿತ ಭಾವನೆಗೆ ಒಳಗಾಗದೆ ವಿಶ್ವ ಮಾನವ ದೃಷ್ಟಿಯನ್ನಿಟ್ಟುಕೊಂಡೆ ನಡೆದುಬಂದರು. ಅವರು ಎಲ್ಲರ ಅಭಿಮಾನಿಗಳಾಗಿದ್ದರು. ಎಲ್ಲರಿಗೂ ಬೇಕಾದವರಾಗಿದ್ದರು. ಅವರ ಸ್ಮೃತಿಯಲ್ಲಿ ವಲ್ಲಭ ಕುಟೀರ ವೊಂದು ಬೆಂಗಳೂರಿನಲ್ಲಿ ಎದ್ದು ನಿಂತಿದೆ. ವಲ್ಲಭಸ್ವಾಮಿ ಅಮರರಾದರು. ಅವರು ತುಳಿದ ದಾರಿ ನಮ್ಮ ಮುಂದಿದೆ. ನಮಗೆ ದಿಕ್ಸೂಚಿಯಾಗಿ ನಿಂತಿದೆ.

ಅಸತೋಮಾ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ

ಇದೇ ಆ ದಾರಿ.