ವಸಂತ ಬಂದಿದೆ ಸಖಿಯೆ,
ಹೊಸತಾಗಿದೆ ಜಗಕ್ಕೆ ಜಗವೆ
ಹೀಗೆಂದರೆ ನೀನೇತಕೆ ನಗುವೆ
ಹೊಸತೆಂಬುದು ಕೇವಲ ಭ್ರಮೆಯೆ?

ವಸಂತ ಬಂದಿದೆ ಸಖಿಯೆ,
ಹೊಸತಾವುದು ಹಳತಾವುದು ನಮಗೆ
ಹಿಂದು-ಮುಂದುಗಳು ಬಂದು ಸಂಧಿಸುವ
ಅಂತರಾಳದೊಳಗೆ?

ವಸಂತ ಬಂದಿದೆ ಸಖಿಯೆ,
ಹಳೆಯ ನೆನಪುಗಳು ಉದುರಿದಂತೆ ಕೆಳಗೆ
ಹೊಸ ಭರವಸೆಗಳ ಚಿಗುರು ಚಿಮ್ಮುತಿವೆ
ಮೈ-ಮನಗಳ ಒಳಗೆ!

ವಸಂತ ಬಂದಿಗೆ ಸಖಿಯೆ,
ಶಬ್ದಕೆ ನಿಶ್ಶಬ್ದವು ಕೂಡುವ ಘಳಿಗೆ
ಬೆರಗಾಗಿದೆ ಮನ, ಒಳಗಿನ ಸ್ವರಗಳು
ಪುಟಿದೇಳುವ ಪರಿಗೆ.

ವಸಂತ ಬಂದಿದೆ ಸಖಿಯೆ,
ಮತ್ತೆ ಮತ್ತೆ ಬರಡಾಗುವ ಬದುಕಿಗೆ
ವಸಂತಸ್ಪರ್ಶದ ಕೃಪೆಯಿರದಿದ್ದರೆ
ಚೆಲುವೆಲ್ಲಿದೆ ಜಗಕೆ?