ಜನನ : ೧೯೩೮ರಲ್ಲಿ ಮೈಸೂರಿನಲ್ಲಿ

ಮನೆತನ : ಗಮಕ -ಸಂಗೀತ ಹಾಗೂ ವೈದಿಕ ಸಂಪ್ರದಾಯದ ಮನೆತನ. ತಂದೆ – ಹೆಸರಾಂತ ಗಮಕಿ ಕನಕ ಪುರಂದರ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ಎಸ್. ಕೌಶಿಕ್‌ರವರು. ತಾಯಿ ಜಯಲಕ್ಷ್ಮಿ. ಪತಿ ರುದ್ರಪಟ್ಟಣ ಸೀತಾರಾಮಯ್ಯ ಗಮಕ ಸಾಹಿತ್ಯಾಸಕ್ತರು. ಸಹೋದರಿಯರಾದ ಸತ್ಯವತಿ, ಪದ್ಮಿನಿ, ರುಕ್ಮಿಣಿ ಗಮಕಿಗಳು. ತಮ್ಮ ಎಂ. ಡಿ. ಕೌಶಿಕ್ ಚಲನ ಚಿತ್ರರಂಗದ ಉತ್ತಮ ನಿರ್ದೇಶಕ ನಟ.

ಗುರುಪರಂಪರೆ : ತಂದೆ ಕೌಶಿಕ್‌ರವರೇ ಇವರ ಗಮಕದ ಗುರುಗಳು.

ಕ್ಷೇತ್ರ ಸಾಧನೆ : ಆರಂಭದಿಂದಲೂ ತಂದೆಯವರ ಪ್ರೋತ್ಸಾಹ, ಉತ್ತೇಜನ. ತಂದೆಯ ಜೊತೆ ಜೊತೆಯಲ್ಲೇ ಕಾರ್ಯಕ್ರಮಗಳನ್ನು ನೀಡಿ ಮದುವೆಯಾದ ಮೇಲೆ ಹಾಸನ ಜಿಲ್ಲೆಯ ರುದ್ರಪಟ್ನ ಸೇರಿದ ಮೇಲೆ ಅಲ್ಲಿಯ ಕಲಾ ವೇದಿಕೆ ಇವರನ್ನು ಕೈ ಬೀಸಿ ಕರೆಯಿತು. ಪತಿ ಸೀತಾರಾಮಯ್ಯನವರು ಪತ್ನಿಯ ಕಲಾಕೌಶಲತೆಗೆ ಪ್ರೋತ್ಸಾಹ ನೀಡಿದರು. ಹಾಗಾಗಿ ಇವರ ಕಲಾ ಪೋಷಣೆಗೆ ಎಲ್ಲೂ ತೊಡಕಾಗಲೇ ಇಲ್ಲ. ಗಮಕ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿ ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ನೀಡುವಂತಾದಾಗ ಮನೆಯ ಸಂಪ್ರದಾಯಗಳು ಇವರಿಗೆ ಅಡ್ಡ ಬರಲಿಲ್ಲ. ಬದಲಾಗಿ ಉತ್ತೇಜನ ನೀಡಿತು. ಹೆಚ್ಚಿನಂಶ ಷಟ್ಪದಿ ಕಾವ್ಯಗಳಿಗೇ ಅಂಟಿಕೊಂಡ ವಸಂತಲಕ್ಷ್ಮಿ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ತೊರವಿ ರಾಮಾಯಣ, ಹರಿಶ್ಚಂದ್ರ ಕಾವ್ಯ, ತಿಮ್ಮಣ್ಣ ಕವಿಯ ಕೃಷ್ಣ ಭಾರತ ಮೊದಲಾದ ಕಾವ್ಯಗಳನ್ನು ನಿರರ್ಗಳವಾಗಿ ವಾಚನ – ವ್ಯಾಖ್ಯಾನ ಮಾಡುವ ಸಾಮರ್ಥ್ಯ ಹೊಂದಿದ್ದು ಮಹಾಭಾರತದ ಸಮಗ್ರ ೧೮ ವರ್ಷಗಳನ್ನು ಹಲವಾರು ಬಾರಿ ವಾಚನ ಮಾಡಿ ಸಾಧನೆಯ ದಾಖಲೆಯನ್ನು ಸೃಷ್ಟಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಮಂಗಳೂರು, ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಮೈಸೂರಿನ ಅನೇಕ ’ಧಾರ್ಮಿಕ ಕ್ಷೇತ್ರಗಳಲ್ಲಿ ದೇವಾಲಯ, ಮಠಗಳಲ್ಲಿ ಪ್ರಮುಖವಾಗಿ ಗಣಪತಿ ಸಚ್ಚಿದಾನಂದಾಶ್ರ’ದಲ್ಲಿ ಇವರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ತಂದೆಯವರ ಹಾದಿಯಲ್ಲೇ ಹೆಜ್ಜೆಯಿಟ್ಟು ಗಮಕ ದೃಶ್ಯ ರೂಪಕಗಳನ್ನೂ ರಚಿಸಿ ಕುಂತೀ ಕರ್ಣ, ವಿಶ್ವೇಶ್ವರ ಸಾಕ್ಷಾತ್ಕಾರ, ಸೀತಾ ಕಲ್ಯಾಣ ಮುಂತಾದ ಪ್ರಸಂಗಗಳನ್ನೇ ನಿರ್ದೇಶಿಸಿ ಪ್ರಸ್ತುತ ಪಡಿಸಿದ್ದಾರೆ. ಪರಿಷತ್ತಿನ ಆಶ್ರಯದಲ್ಲಿ ಗಮಕ ತರಗತಿಗಳನ್ನೂ ನಡೆಸುತ್ತಿದ್ದಾರೆ. ಸಾಹಿತಿಯಾಗಿ ಶ್ರೀ ಗಣೇಶ ಅವತಾರ ಲೀಲಾ ಚಂದ್ರಿಕೆ ’ಪಂಚ ವ್ರತ ರತ್ನ ಪದ್ಯ ಕಾವ್ಯ’ ಮುಂತಾಗಿ ಕಾವ್ಯ ರಚನೆಗಳನ್ನೂ ಮಾಡಿರುತ್ತಾರೆ.

ಪ್ರಶಸ್ತಿ – ಪುರಸ್ಕಾರಗಳು : ಅನೇಕ ಮಠ=ಮಂದಿರಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ಗಮಕ ಕಲಾ ಚತುರೆ, ಗಮಕ ಕಲಾ ಪ್ರವೀಣೆ, ಗಮಕ ಕಲಾ ಕುಸುಮ, ಗಮಕ ವಾಸಂತಿ ಮುಂತಾದ ಬಿರುದುಗಳಿಗೆ ಪಾತ್ರರಾಗಿರುವ ವಸಂತಲಕ್ಷ್ಮಿಯವರನ್ನು ಗಮಕ ಕಲಾ ಪರಿಷತ್ತಿನ ಆರನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ. ಹಿರಿಯ ಗಮಕ ಭೀಷ್ಮರೆನಿಸಿದ್ದ ಮೈ. ಶೇ. ಅನಂತಪದ್ಮನಾಭರಾವ್ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಇವರು ಗೌರವಿಸಲ್ಪಟ್ಟಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೪-೦೫ರ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.