ರಾಷ್ಟ್ರದ ಹೆಸರಾಂತ ಹಾರ್ಮೋನಿಯಂ ವಾದಕರೆನಿಸಿರುವ ಪಂ. ವಸಂತ ಕನಕಾಪೂರ ಅವರು ಕನ್ನಡ ನಾಡು ಕಂಡ ಅಪರೂಪದ ಕಲಾವಿದರು. ಅವರು ಜನಿಸಿದ್ದು ಹುಬ್ಬಳ್ಳಿಯಲ್ಲಿ ೧೯೩೭ರಲ್ಲಿ. ಅವರದು ಸಿತಾರ ಹಾಗೂ ವೀಣಾ ಪರಂಪರೆಯ ಮನೆತನ. ಹಾಗಾಗಿ ೫ ವರ್ಷದ ಬಾಲಕರಾಗಿದ್ದಾಗಲೇ ಹಾರ್ಮೋನಿಯಂ ಕಲಿಕೆ ಆರಂಭ. ೧೧ನೇ ವರ್ಷಕ್ಕೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಸೂರಶ್ರೀ ಕೇಸರಿಬಾಯಿ ಕೇಳಕರ ಅವರಿಗೆ ಹಾರ್ಮೋನಿಯಂ ಸಾಥ ನೀಡಿದ ದಿಗ್ಗಜ.

ಅವರಿಗೆ ಹಾರ್ಮೋನಿಯಂದಲ್ಲಿ ಪ್ರಾರಂಭಿಕ ಶಿಕ್ಷಣ ನೀಡಿದವರು ಹೆಸರಾಂತ ಹಾರ್ಮೋನಿಯಂ ವಾದಕ ಹುಬ್ಬಳ್ಳಿಯ ಶ್ರೀ ಆರ್.ಜಿ. ದೇಸಾಯಿ ಮತ್ತು ಶ್ರೀ ಗೋಪಾಲರಾವ ದೇಸಾಯಿ. ನಂತರ ಶ್ರೇಷ್ಠ ಹಾರ್ಮೋನಿಯಂ ವಾದಕ ಧಾರವಾಡದ ಶ್ರೀ ಹನುಮಂತರಾವ ವಾಳ್ವೇಕರ ಅವರಲ್ಲಿ ಉನ್ನತ ಶಿಕ್ಷಣ ಪಡೆದರು. ತಾಯಿಯ ಪ್ರೇರಣೆ, ಗುರುಗಳ ಆಶೀರ್ವಾದದಿಂದ ವಸಂತ ಕನಕಾಪೂರ ಅವರು ಸಂಗೀತದಲ್ಲಿ ಕಠಿಣತಮ ಸಾಧನೆ ಮಾಡಿ ದೇಶದ ತುಂಬ ಹೆಸರು ಗಳಿಸಿ ಶ್ರೇಷ್ಠ ಹಾರ್ಮೋನಿಯಂ ವಾದ ರೆನಿಸಿದರು.

ಅವರು ಕೆಲಕಾಲ ಮುಂಬೈಯ ಚಲನಚಿತ್ರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ದಾಂಡೇಲಿಯ ಕಾಗದ ಕಾರ್ಖಾನೆಯಲ್ಲಿ ಕೆಲವು ವರ್ಷ ಕೆಲಸ ಮಾಡಿ ಧಾರವಾಡಕ್ಕೆ ಬಂದು ಧಾರವಾಡ ಆಕಾಶವಾಣಿಯಲ್ಲಿ ೧೯೭೫ ರಿಂದ ಸಂಗೀತ ಸಂಯೋಜಕರಾಗಿ ೧೯ ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಧಾರವಾಡದಲ್ಲಿ ನೆಲೆಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಕಾಶವಾಣಿಯ ‘ಎ’ ಶ್ರೇಣಿಯ ಸಂಗೀತ ಸಂಯೋಜಕರಾಗಿರುವ ವಸಂತ ಕನಕಾಪೂರ ಅವರು ಹಿಂದೂಸ್ಥಾನಿ ಸಂಗೀತದ ರಾಷ್ಟ್ರ ಖ್ಯಾತಿಯ ಸಂಗೀತಗಾರರಾದ ಸೂರಶ್ರೀ ಕೇಸರಿಬಾಯಿ ಕೇಳಕರ, ಉಸ್ತಾದ್‌ ಅಮೀರ್ ಖಾನ್‌, ಉಸ್ತದ್‌ ಅಜಮತ್‌ ಹುಸೇನಖಾನ್‌, ಪಂ. ಮಲ್ಲಿಕಾರ್ಜುನ ಮನಸೂರ, ಡಾ. ಗಂಗೂಬಾಯಿ ಹಾನಗಲ್ಲ, ಪಂ. ಬಸವರಾಜ ರಾಜಗುರು,ಲ ಪಂ. ಭೀಮಸೇನ ಜೋಶಿ, ಎ. ಕಾನನ್, ಪರ್ವೀನ್‌ ಸುಲ್ತಾನಾ. ಡಾ. ಪ್ರಭಾ ಅತ್ರೆ, ರೀಟಾ ಗಂಗೂಲಿ, ಉಸ್ತಾದ್‌ ಹಫೀಜ್‌ ಅಹಮದ್‌ ಖಾನ್‌, ರಾಜನ್‌-ಸಾಸನ್‌ ಮಿಶ್ರಾ, ಸಿಂಗ ಬಂಧು, ರಸಿಕಲಾಲ ಅಂಧಾರಿಯಾ – ಹೀಗೆ ಸಂಗೀತ ದಿಗ್ಗಜರಿಗೆ ಸಮರ್ಥವಾಗಿ ಅವರವರ ಗಾಯ್ಕಿ, ಘರಾಣಾ ತಕ್ಕಂತೆ ಸಾಥ್ ನೀಡಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಕನ್ನಡ ಕವನ, ಗಜಲ್‌, ವಚನ, ದಾಸರ ಪದಗಳಿಗೆ ಸ್ವರ ಸಂಯೋಜಿಸಿದ್ದಾರೆ. ಹಾರ್ಮೋನಿಯಂ ಸಾಥ್ ಹಾಗೂ ಸೋಲೋದಲ್ಲೂ ಸಮಾನ ಪಾಂಡಿತ್ಯ ಪಡೆದಿದ್ದಾರೆ. ಐ.ಡಿ.ಆರ್.ಎಫ್‌. ಅಮೇರಿಕಾ ಸಂಸ್ಥೆಯವರ ಆಹ್ವಾನದ ಮೇರೆಗೆ ಅಮೇರಿಕಾದಲ್ಲಿ ಸಂಗೀತ ಕಛೇರಿ ನೀಡಿದ್ದಾರೆ.

ಮಹಾನ್‌ ಹಾರ್ಮೋನಿಯಂ ವಾದಕ ಪಂ. ವಸಂತ ಕನಕಾಪೂರ ಅವರಿಗೆ ಅನೇಕ ಪ್ರಶಸ್ತಿ ಬಂದಿವೆ. ಅಂಥವುಗಳಲ್ಲಿ ಮಂಜೂಶಾರತ್ನ, ವಾದನ ಗಂಧರ್ವ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ (೧೯೮೯-೯೦), ನಾದಶ್ರೀ, ಪಂಡಿತ ವಿಠಲರಾವ ಕೋರೆ ಗಾಂವಕರ ಪುರಸ್ಕಾರ, ಕರ್ನಾಟಕ ಸರ್ಕಾರದ ಕನಕ ಪುರಂದರ (೨೦೦೪-೨೦೦೫) ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ (೧೯೯೧) ಪ್ರಶಸ್ತಿ ವಾದ್ಯ ವಾದನ ನಿಪುಣ ವಾಸುದೇವ, ‘ಸುಗಮ ಸಂಗೀತ ಕಲಾನಿಧಿ’ ಮುಂತಾದವುಗಳು ಉಲ್ಲೇಖನೀಯವಾಗಿವೆ.