ವಸಂತ ಮೂಡುವುದೆಂದಿಗೆ?
ಈ ಜನಕೋಟಿಯ ಬೋಳು ಬಾಳಿಗೆ
ವಸಂತ ಮೂಡುವುದೆಂದಿಗೆ?

ಶತಶತಮಾನದ ಮಾಘಮೌನದಲಿ
ನೂರು ಗಾಳಿಗಳ ಸುಲಿಗೆಯ ದಾಳಿಗೆ
ಎದೆಯನೊಡ್ಡಿ ಎಲೆಯುದುರಿದ ಬಾಳಿಗೆ
ವಸಂತ ಮೂಡುವುದೆಂದಿಗೆ?

ಬತ್ತಿದೆದೆಗೆ ಹೊಸ ಆಸೆಯ ಹೊತ್ತಿಸಿ
ಕೊಂಬೆ ಕೊಂಬೆಯಲಿ ನಂಬಿಕೆಯುಕ್ಕಿಸಿ
ಜಡತನದಲಿ ಚೈತನ್ಯವ ಚಿಗುರಿಸಿ
ವಸಂತ ಮೂಡುವುದೆಂದಿಗೆ?

ದಿಕ್ಕು ತಪ್ಪಿಸುವ ಕತ್ತಲೆಗಳಲಿ
ನಂದಿದಾಸೆಗಳ ಕೋಟಿ ಕಣ್ಗಳಲಿ,
ಬೆಳಕಿನ, ನಲವಿನ, ಗೆಲುವಿನ ಭಾವದ
ವಸಂತ ಮೂಡುವುದೆಂದಿಗೆ?