೨-೨-೧೯೪೯ ರಂದು ಮೈಸೂರಿನಲ್ಲಿ ಜನಿಸಿದ ವಸಂತ ಅವರ ಚಿಕ್ಕಪ್ಪಂದಿರಾದ ಕೆ. ಶೆಲ್ಲಪ್ಪನ್‌ ಮತ್ತು ಕೆ. ರಾಮಸ್ವಾಮಿ ಇವರುಗಳು ಗಾಯಕರಾಗಿದ್ದರು. ವಾಗ್ಗೇಯಕಾರ್ತಿ ಕೆ. ತಂಗಮಣಿ ಇವರ ಸೋದರತ್ತೆ. ಇಂತಹ ಸುಸಂಸ್ಕೃತ ಪರಿಸರದಲ್ಲಿ ಹುಟ್ಟಿ ಬೆಳೆದ ವಸಂತ ಬಿ.ಕೆ. ಪದ್ಮನಾಭರಾವ್‌, ಆರ್.ಕೆ. ಶ್ರೀಕಂಠನ್‌, ಎಸ್‌ಮಹದೇವಪ್ಪ ಆನೂರು ಎಸ್‌. ರಾಮಕೃಷ್ಣ ಮುಂತಾದವರಿಂದ ಸಂಗೀತ ಶಿಕ್ಷಣ ಪಡೆದು ಉತ್ತಮ ಗಾಯಕಿಯಾದರು.

ಆಕಾಶವಾಣಿಯಿಂದಲೂ- ದೂರದರ್ಶನದಿಂದಲೂ ಇವರ ಗಾಯನ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಮಧ್ಯ ಪ್ರದೇಶದ ಕುಮಾರ ಗಂಧರ್ವ ಸಮಾರೋಹ, ಅಂಡಮಾನ್‌-ನಿಕೋಬಾರ್ ಸಾಂಸ್ಕೃತಿಕ ಉತ್ಸವ, ತಿರುವಯ್ಯಾರಿನ ವಿಶ್ವಸಂಗೀತ ದಿನಾಚರಣೆ, ದಕ್ಷಿಣ ವಲಯ ಸಾಂಸ್ಕೃತಿಕ ಉತ್ಸವ ಹಾಗೂ ಅನೇಕ ಸಭೆ-ಸಂಸ್ಥೆಗಳಲ್ಲಿ ಇವರ ಗಾಯನವು ನಡೆದಿದೆ. ಕೆಲವು ಧ್ವನಿಸುರುಳಿಗಳಿಗಾಗಿಯೂ ವಸಂತ ಹಾಡಿದ್ದಾರೆ.

ಪತಿ ಶ್ರೀ ರಾಮಾನುಜಂ, ಐ.ಪಿ.ಎಸ್‌. ಅವರ ಪ್ರೋತ್ಸಾಹ ಸಹಕಾರಗಳಿಂದ ಶ್ರೀಮತಿಯವರ ಮಧುರ ಭಾವಪೂರ್ಣ ಸಂಗೀತ ಶಾಸ್ತ್ರೀಯ ಚೌಕಟ್ಟಿನಲ್ಲಿ ಸುಂದರವಾಗಿ ವಿಕಾಸಗೊಂಡಿದೆ. ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಇವರಿಗೆ ದೊರಕಿದೆ.