ಶ್ರೀಮತಿ ವಸಂತ ವೇದಂ ಮೂಲತಃ ತಮಿಳು ನಾಡಿನವರಾದರೂ ಕಳೆದ ಎರಡು ದಶಕಗಳಿಂದ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲೇ ನೆಲೆಸಿದ್ದಾರ.

ಚೆನ್ನೈನ ಕಲಾ ಕ್ಷೇತ್ರದಲ್ಲಿ ನೃತ್ಯಾಭ್ಯಾಸಿಯಾಗಿ ಅದರ ಸ್ಥಾಪಿಕಿ ರುಕ್ಮಿಣಿದೇವಿ ಅರುಂಡೆಲ್ ಅವರ ಬಳಿ ಶಿಕ್ಷಣ ಪಡೆದಿದ್ದಾರೆ. ತಮ್ಮ ಆರಂಭಿಕ ಶಿಕ್ಷಣವನ್ನು ಪಂದನಲ್ಲೂರು ಚೊಕ್ಕಲಿಂಗಮ್ ಪಿಳ್ಳೈ ಹಾಗೂ ಶಾರದಾಂಬ ಅಮ್ಮ ಅವರಲ್ಲಿ ಪಡೆದು ಮುಂದೆ ಉನ್ನತ ಶಿಕ್ಷಣವನ್ನು ಕಲಾಕ್ಷೇತ್ರದಲ್ಲಿ ಪಡೆದು ೧೯೪೮ರಲ್ಲೇ ಅರಂಗೇಟ್ರಮ್ ಮಾಡಿದ್ದಲ್ಲದೆ ರುಕ್ಮಿಣಿದೇವಿ ಮೊದ ಮೊದಲಿಗೆ ಸಂಯೋಜಿಸಿದ ಮಾರ್ಗಮ್ ರೂಪಮುಚೂಚಿ ವರ್ಣವನ್ನು ಕಾಲಪ್ರಮಾಣಕ್ಕೆ ತಕ್ಕಂತೆ ಕಲಿತು ಪ್ರದರ್ಶಿಸಿದ್ದಾರೆ.

ಕಲಾಕ್ಷೇತ್ರದಿಂದ ನೃತ್ಯಕಲೆಯಲ್ಲಿ ಅದರಲ್ಲೂ ಭರತನಾಟ್ಯ ಶಾಸ್ತ್ರ ಕಲೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿರುವುದಲ್ಲದೆ, ರಸಾಯನ ಶಾಸ್ತ್ರದಲ್ಲೂ ಪದವಿ ಗಳಿಸಿ ಕಲಾ ಕ್ಷೇತ್ರದಲ್ಲಿ ಅವರು ಗಳಿಸಿದ ಅಪಾರ ಅನುಭವ, ಸಾಧನೆಗಳಿಂದ ತಾವೂ ಒಬ್ಬ ಸಮರ್ಥ ನೃತ್ಯ ಶಿಕ್ಷಕಿಯಾಗಿ ರೂಪುಗೊಂಡಿದ್ದೇ ಅಲ್ಲದೆ ಸ್ವತಃ ರುಕ್ಮಿಣಿದೇವಿಯವರದ್ದೇ ಸಂಯೋಜಿಸಿದ ನೃತ್ಯ ರೂಪಕಗಳಾದ ’ಕುಟ್ರಾಲ ಕುರವಂಜಿ’, ’ಕುಮಾರ ಸಂಭವ’ ನೃತ್ಯ ನಾಟಕಗಳಲ್ಲಿ ನಾಯಕಿ ಪಾತ್ರ ವಹಿಸಿದ ಹಿರಿಮೆ ಇವರದು. ತಮ್ಮ ನೃತ್ಯ ತಂಡದೊಂದಿಗೆ  ಭಾರತದಾದ್ಯಂತ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ ಅಮೆರಿಕ ಮುಂತಾದ ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಾಗೂ ಅಲ್ಲಿಯೂ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಸಂತಾ ವೇದಂರವರು ಇಲ್ಲಿ ತಮ್ಮದೇ ಆದ ನೃತ್ಯ ತರಗತಿಗಳನ್ನು ನಡೆಸುತ್ತಾ ಅಪ್ಪಟ ಕಲಾಕ್ಷೇತ್ರ ಸಂಪ್ರದಾಯದಲ್ಲೆ ಶಿಕ್ಷಣ ನೀಡುತ್ತಿದ್ದಾರೆ. ಸದ್ಯ ಅವರು ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ, ನಾಟಕ ವಿಭಾಗದಲ್ಲಿ ಸಂದರ್ಶಕ ಭೋದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “Handbook of Natyashastr” ಎಂಬ ಶಾಸ್ತ್ರೀಯ ಗ್ರಂಥ ರಚಿಸಿದ್ದಾರೆ.

ಕರ್ನಾಟಕ ದಲ್ಲಿ ಬಂದು ನೆಲಸಿ ಕಳೆದ ಎರಡು ದಶಕಗಳಿಂದ ರಾಜಧಾನಿಯಲ್ಲಿ ನೃತ್ಯಸೇವೆ ಸಲ್ಲಿಸುತ್ತಿರುವ ವಸಂತ ವೇದಂ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩-೦೪ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.