ಬಳ್ಳಾರಿ ಜಿಲ್ಲೆಯಲ್ಲಿ ಏಕೀಕರಣ-ಏಕೀಕರಣಪೂರ್ವ ಮತ್ತು ಆ ನಂತರದಲ್ಲಿ ಸಂಭವಿಸಿದ ಸಮಕಾಲೀನ ಚಾರಿತ್ರಿಕ ಘಟನೆಗಳನ್ನು ಕುರಿತು ಇಲ್ಲಿ ವಿಶ್ಲೇಷಿಸಲು ಪ್ರಯತ್ನಿಸ ಲಾಗಿದೆ. ಗಡಿವಿವಾದ, ಜಲವಿವಾದ ಹಾಗೂ ಪ್ರತ್ಯೇಕ ರಾಜ್ಯದಲ್ಲಿ ಬಳ್ಳಾರಿಯನ್ನು ಸೇರ್ಪಡೆಗೊಳಿಸುವ ಕುರಿತ ಹುಟ್ಟಿಕೊಂಡ ಕೆಲವು ಗೊಂದಲಗಳನ್ನು ಇಲ್ಲಿ ವಿಶೇಷವಾಗಿ ಚರ್ಚಿಸ ಲಾಗಿದೆ. ಜೊತೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಬಹುದಿನಗಳ ಸಾಮರಸ್ಯ, ಅನ್ಯೋನ್ಯತೆಗಳನ್ನು ಗುರುತಿಸುವ ಮೂಲಕ ಇಂದಿನ ಜನರ ಗಡಿ, ಜಲ, ಪ್ರತ್ಯೇಕ ರಾಜ್ಯ ಕುರಿತ ಒಲವು ಮತ್ತು ಪ್ರಭುತ್ವದ ಒತ್ತಡಗಳನ್ನು ವಿಶ್ಲೇಷಿಸಲಾಗಿದೆ. ಅಲ್ಲದೆ, ನಾವು ಅರ್ಥೈಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಇಲ್ಲಿ ಗಮನಿಸಲಾಗಿದೆ.

ಚಾರಿತ್ರಿಕ ಹಿನ್ನೆಲೆ

ಇಂದು ಗಣಿಗಾರಿಕೆ ಮೂಲಕ ಖ್ಯಾತಿ ಪಡೆದ ಬಳ್ಳಾರಿ ಜಿಲ್ಲೆ ರಾಜ್ಯದ ಮಧ್ಯಭಾಗದ ಪೂರ್ವದಿಕ್ಕಿಗಿದೆ. ಬಳ್ಳಾರಿ ಜಿಲ್ಲೆಯ ಮೇರೆಗಳೆಂದರೆ, ಪೂರ್ವಕ್ಕೆ ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲು, ಪಶ್ಚಿಮಕ್ಕೆ ಹಾವೇರಿ ಮತ್ತು ಕೊಪ್ಪಳ, ಉತ್ತರಕ್ಕೆ ಕೊಪ್ಪಳ ಮತ್ತು ರಾಯಚೂರು, ದಕ್ಷಿಣಕ್ಕೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು. ಬಳ್ಳಾರಿ, ಹಡಗಲಿ, ಕೂಡ್ಲಿಗಿ, ಸಂಡೂರು, ಸಿರುಗುಪ್ಪ, ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿಗಳು ಈ ಜಿಲ್ಲೆಯ ತಾಲ್ಲೂಕುಗಳಾಗಿವೆ. ಹರಪನಹಳ್ಳಿ ತಾಲ್ಲೂಕು ೧೯೯೭ರಲ್ಲಿ ಬಳ್ಳಾರಿಯಿಂದ ದಾವಣಗೆರೆ ಜಿಲ್ಲೆಗೆ ಹೋಯಿತು. ಜಿಲ್ಲೆಯಲ್ಲಿ ೧೫ ಪಟ್ಟಣಗಳು, ೬೨೫ಕ್ಕೂ ಹೆಚ್ಚು ಗ್ರಾಮಗಳಿದ್ದು, ತುಂಗಭದ್ರಾ, ಚಿಕ್ಕಹಗರಿ, ಚಿನ್ನಹಗರಿ ನದಿಗಳಿವೆ. ಇದು ಸಮೃದ್ಧ ಕಾಡು, ಬೆಟ್ಟ, ಗುಡ್ಡ, ಕೆರೆ, ಕಾಲುವೆ, ಹಳ್ಳಕೊಳ್ಳಗಳಿಂದ ಕೂಡಿದ ಜಿಲ್ಲೆಯಾಗಿದೆ. ಸಂಡೂರು-ಹೊಸಪೇಟೆ ಬಳಿ ಗುಡ್ಡಗಳಿದ್ದು, ಹೆಚ್ಚಾಗಿ ಮ್ಯಾಂಗನೀಸ್ ಅದಿರು ಗಣಿಗಳಿಂದ ಕೂಡಿದೆ. ಅನೇಕ ಕೈಗಾರಿಕೆ, ಉದ್ಯಮಗಳು ಪ್ರಗತಿ ಹಂತದಲ್ಲಿವೆ. ಗುಡೇಕೋಟೆ, ಜರಿಮಲೆ, ಸಂಡೂರು, ದರೋಜಿ, ವಡ್ಡು, ಕಂಪಲಿ ಇತರ ಸ್ಥಳಗಳಲ್ಲಿ ಪಾಳೆಯಗಾರರು ನಿರ್ಮಿಸಿದ ಭವ್ಯ ಸ್ಮಾರಕಗಳಿವೆ.

ಚಾರಿತ್ರಿಕವಾಗಿ ಬಳ್ಳಾರಿ ಪ್ರದೇಶವನ್ನು ಮೌರ್ಯರು, ನಂದರು, ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ಸಿಂಧರು, ನೊಳಂಬರು, ರಾಷ್ಟ್ರಕೂಟರು, ಕುಮ್ಮಟ ದುರ್ಗದ ನಾಯಕರು, ಹೊಯ್ಸಳರು ಆಳ್ವಿಕೆ ನಡೆಸಿದ್ದಾರೆ. ಅತಿಮಹತ್ವ ಸಿಕ್ಕಿದ್ದು ವಿಜಯ ನಗರ ಸಮ್ರಾಜ್ಯದಿಂದ. ಹಂಪೆ-ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಧಿಕ ಕಾಲ (೨೨೯ ವರ್ಷ) ವಿಜಯನಗರದವರು ಆಳ್ವಿಕೆ ನಡೆಸಿದ್ದಾರೆ. ಆ ನಂತರ ಹರಪನಹಳ್ಳಿ, ಬಳ್ಳಾರಿ, ಸಂಡೂರು, ಜರಿಮಲೆ, ಗುಡೇಕೋಟೆ, ದರೋಜಿ, ವಡ್ಡು, ವೀರನದುರ್ಗ ಮೊದಲಾದ ಪಾಳೆಯಪಟ್ಟು ಮತ್ತು ಸಂಸ್ಥಾನಗಳು ತಲೆ ಎತ್ತಿದ್ದವು. ವಿಜಯನಗರ ಮತ್ತು ಆ ನಂತರದ ಕೆರೆ, ಕಾಲುವೆ, ಬಾವಿಗಳಿಂದ ಜಿಲ್ಲೆಯಲ್ಲಿ ನೀರಾವರಿಯಾಗುತ್ತಿತ್ತು. ಮರಾಠರು, ಮೊಘಲರು, ಮೈಸೂರಿನ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಆಳ್ವಿಕೆಗೂ ಬಳ್ಳಾರಿ ಪ್ರದೇಶ ಒಳಪಟ್ಟಿದ್ದಿತು. ಟಿಪ್ಪು ಈ ಜಿಲ್ಲೆಯ ಕೆಲವು ಭಾಗಗಳನ್ನು ತನ್ನ ಅಧೀನಕ್ಕೊಳಪಡಿಸಿ ಕೊಂಡಿದ್ದ. ೧೭೯೨ರಲ್ಲಿ ಒಪ್ಪಂದದಂತೆ ಟಿಪ್ಪು ಈ ಜಿಲ್ಲೆಯನ್ನು ನಿಜಾಮನಿಗೆ ಬಿಟ್ಟುಕೊಟ್ಟ. ೧೭೯೯ರಲ್ಲಿ ಟಿಪ್ಪುವಿನ ಅವನತಿಯ ನಂತರ ಹೈದರಾಬಾದ್ ನಿಜಾಮನಿಂದ ೧೮೦೦ರಲ್ಲಿ ಬ್ರಿಟಿಷರಿಗೆ ಸೇರಿ ಮದ್ರಾಸ್ ಅಧಿಪತ್ಯದ ಪ್ರದೇಶವಾಗಿ ಸೇರಿತು. ೧೮೦೦ ರಿಂದ ೧೯೫೩ರ ವರೆಗೆ ೧೧೫ ಜನ ಕಲೆಕ್ಟರುಗಳು ಬಳ್ಳಾರಿ ಜಿಲ್ಲೆಯಲ್ಲಿ ಆಡಳಿತ ನಡೆಸಿದ್ದಾರೆ. ಇಡೀ ಭಾರತವೇ ಬ್ರಿಟಿಷರ ಆಳ್ವಿಕೆಗೆ ತುತ್ತಾದಾಗ ಕರ್ನಾಟಕವು ಬೇರೆ ಬೇರೆ ಸ್ವರೂಪದಲ್ಲಿತ್ತು. ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಅಧಿಪತ್ಯ, ಮೈಸೂರು ಸಂಸ್ಥಾನ ಹೀಗೆ ಹರಿದು ಹಂಚಿಹೋಗಿತ್ತು. ೧೯೫೨ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಕಾಂಗ್ರೆಸ್ ಪಕ್ಷದ ಸಂಸದರು ಆಯ್ಕೆಯಾದರು. ಅಂದಿನಿಂದ ಬಹುಕಾಲ ಕಾಂಗ್ರೆಸ್ ಪಕ್ಷದಿಂದಲೇ ಸಂಸದರು ಆಯ್ಕೆಯಾಗಿದ್ದರು. ಕಡಪಾ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು ಆರಂಭದಲ್ಲಿ ಬಳ್ಳಾರಿ ಜಿಲ್ಲೆಯೊಂದಿಗೆ ಸೇರಿ ‘ದತ್ತಮಂಡಲ’ವಾಗಿದ್ದವು.

ಬಳ್ಳಾರಿ ಜಿಲ್ಲೆಯನ್ನು ತಮಗೆ ಇಷ್ಟ ಬಂದಂತೆ ಭೌಗೋಳಿಕ ಗಡಿ ರೂಪಿಸಿರುವುದು ಸಹಾ ಬ್ರಿಟಿಷರಿಂದಲೇ. ೧೮೦೦ ರಿಂದ ಮದ್ರಾಸ್ ಅಧಿಪತ್ಯಕ್ಕೆ ಸೇರಿದ್ದಾಗ ೧೮೧೧ರಲ್ಲಿ ಬೆಳಗಾವಿಯು ಬಳ್ಳಾರಿ ಮೂಲಕ ಮದ್ರಾಸ್ ಅಧಿಪತ್ಯಕ್ಕೆ ಸೇರಿತ್ತು. ೧೮೫೦ರ ವರೆಗಿತ್ತು. ಬಳ್ಳಾರಿ ಜಿಲ್ಲೆ ರಚನೆಗೆ ರೂಪಕೊಟ್ಟವರು ಸರ್ ಥಾಮಸ್ ಮನ್ರೊ (ಮೊದಲು ಮೇಜರ್ ಮನ್ರೋ. ನಂತರ ಈತ ಮದ್ರಾಸ್ ಗರ್ವನರ್ ಆದ) ಬಳ್ಳಾರಿ ಪ್ರಧಾನ ಜಿಲ್ಲಾಧಿಕಾರಿ (ಪ್ರಿನ್ಸಿಪಾಲ್ ಕಲೆಕ್ಟರ್) ಆಗಿದ್ದಾಗ ಅನಂತಪುರವನ್ನು ಆಡಳಿತ ಕೇಂದ್ರ ಮತ್ತು ವಾಸದ ನೆಲೆಯಾಗಿ ಮಾಡಿಕೊಂಡಿದ್ದ. ಅನಂತಪುರ, ರಾಯದುರ್ಗ ಭಾಗಗಳ ಜವಾಬ್ದಾರಿಯನ್ನು ಮನ್ರೋ ನೋಡಿಕೊಳ್ಳುತ್ತಿದ್ದ. ಆದೋನಿ ಉಪವಿಭಾಗದ ಜಿಲ್ಲಾಧಿಕಾರಿಯಾಗಿದ್ದವನು ವಿಲಿಯಂ ಥ್ಯಾಕರೆ. ಆಲೂರು ಮತ್ತು ಆದೋನಿ ತಾಲ್ಲೂಕುಗಳು ಮತ್ತು ಕರ್ನೂಲು ಜಿಲ್ಲೆಗೆ ಸೇರ್ಪಡೆಗೊಂಡ ಕೆಲವು ಭಾಗಗಳ ಉಸ್ತುವಾರಿ ಇವನ ಮೇಲಿತ್ತು. ಹರಪನಹಳ್ಳಿಯ ಉಪ ಜಿಲ್ಲಾಧಿಕಾರಿಯಾಗಿದ್ದ ಜೇಮ್ಸ್ ಕೊಕೊರೆನ್ ಬಳ್ಳಾರಿ ಮತ್ತು ಪಶ್ಚಿಮ ತಾಲ್ಲೂಕುಗಳ ಹೊಣೆ ಹೊತ್ತಿದ್ದರು. ೧೮೦೮ರಲ್ಲಿ ಕಡಪಾ ಮತ್ತು ಬಳ್ಳಾರಿ ಜಿಲ್ಲೆಗಳು ಪ್ರತ್ಯೇಕ ಜಿಲ್ಲಾಧಿಕಾರಿ ಗಳನ್ನು ಹೊಂದಿದ್ದವು : ಬಳ್ಳಾರಿಗೆ ೧೫ ತಾಲ್ಲೂಕುಗಳು ಸೇರಿದ್ದವು. ಬಳ್ಳಾರಿ, ಕೂಡ್ಲಿಗಿ, ಹರಪನಹಳ್ಳಿ, ಹೊಸಪೇಟೆ, ಹಡಗಲಿ, ರಾಯದುರ್ಗ, ಆಲೂರು, ಆದವಾನಿ, ಧರ್ಮಾವರಂ, ಪೆನುಗೊಂಡ, ಹಿಂದೂಪುರ, ಮಡಕಶಿರಾ, ಗುತ್ತಿ, ತಾಡಪತ್ರಿ ಮತ್ತು ಅನಂತಪುರ ೧೮೮೨ ರಲ್ಲಿ ಅನಂತಪುರ ಮತ್ತು ಬಳ್ಳಾರಿ ವಿಭಾಗಗಳೆಂದು ಜಿಲ್ಲಾಧಿಕಾರಿಗಳನ್ನು ಹೊಂದಿ, ಪ್ರತ್ಯೇಕ ಜಿಲ್ಲೆಗಳಾದವು. ಆಗ ಅನಂತಪುರಕ್ಕೆ ಬಳ್ಳಾರಿಯ ೭ ತಾಲ್ಲೂಕುಗಳು ಹೋದವು. ಬಳ್ಳಾರಿ ಯಲ್ಲಿ ೮ ತಾಲ್ಲೂಕುಗಳು ಉಳಿದವು. ೧೯೧೦ ಅಕ್ಟೋಬರ್ ೧ ರಂದು ಬಳ್ಳಾರಿ ತಾಲ್ಲೂಕಿನ ೪೬ ಗ್ರಾಮಗಳು, ಆದವಾನಿ ತಾಲ್ಲೂಕಿನ ೨೯ ಗ್ರಾಮಗಳು, ಆಲೂರು ತಾಲ್ಲೂಕಿನ ೪೬-ಒಟ್ಟು ೯೮ ಗ್ರಾಮಗಳನ್ನು ಸೇರಿಸಿ ಸಿರುಗುಪ್ಪವನ್ನು ತಾಲ್ಲೂಕಾಗಿ ಮಾಡಲಾಯಿತು. ಇದೇ ವರ್ಷ ರಾಯದುರ್ಗ, ಕೂಡ್ಲಿಗಿ ತಾಲ್ಲೂಕುಗಳನ್ನು ಸೇರಿಸಿ ರಾಯದುರ್ಗ ವಿಭಾಗವನ್ನು ಮಾಡಿ, ಬಳ್ಳಾರಿ ಜಿಲ್ಲೆಯನ್ನು ೪ ವಿಭಾಗಗಳಾಗಿ ಮಾಡಿದ್ದರು.

ಪರಿವರ್ತನೆ ಹಾಗೂ ಬಹುಮುಖ್ಯ ವಿಭಜನೆ ೧೯೨೩ ಏಪ್ರಿಲ್ ೧ ರಂದು ನಡೆಯಿತು. ಬಳ್ಳಾರಿ ತಾಲ್ಲೂಕಿಗೆ ೪೬, ಆದೋನಿ ತಾಲ್ಲೂಕಿಗೆ ೪೨, ಆಲೂರು ತಾಲ್ಲೂಕಿಗೆ ೬ ಗ್ರಾಮ ಗಳನ್ನು ಹಂಚಿ ಸಿರುಗುಪ್ಪವನ್ನು ನಕ್ಷೆಯಿಂದ ಹೊರಗುಳಿಸಿದರು. ಆದೋನಿಯ ೧೧ ರಂದು ಬಳ್ಳಾರಿ ತಾಲ್ಲೂಕಿನ ೧೦ ಗ್ರಾಮಗಳನ್ನು ರಾಯದುರ್ಗ ತಾಲ್ಲೂಕಿಗೆ ಸೇರಿಸಲಾಯಿತು. ಹೀಗೆ ಬಳ್ಳಾರಿಯಲ್ಲಿ ಬ್ರಿಟಿಷರ ಆಳ್ವಿಕೆ ಇರುವಾಗ ಸಂಡೂರು ಪ್ರತ್ಯೇಕ ಸಂಸ್ಥಾನವಾಗಿತ್ತು.

ಸ್ವಾತಂತ್ರ್ಯ ಹೋರಾಟ

೧೯೪೭ರಲ್ಲಿ ಭಾರತ ಸ್ವತಂತ್ರಗೊಂಡಾಗ ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರು ಸಂಸ್ಥಾನ ಸೇರ್ಪಡೆ ಆಗಲಿಲ್ಲ. ೧೫೮ ಚದರಮೈಲಿ ವಿಸ್ತೀರ್ಣ ಹೊಂದಿರುವ ಸಂಡೂರು ತಾಲ್ಲೂಕಾಗಿ ೧೯೪೯ ಏಪ್ರಿಲ್ ೧ ರಂದು ವಿಲೀನ ಒಪ್ಪಂದಕ್ಕೆ ಬದ್ಧವಾಯಿತು. ಸಂಡೂರಿಗೆ ಕೂಡ್ಲಿಗಿ ತಾಲ್ಲೂಕಿನ ಚೋರನೂರು ಮತ್ತು ಹೊಸಪೇಟೆ ತಾಲ್ಲೂಕಿನ ತೋರಣಗಲ್ಲು ಎರಡು ಹೋಬಳಿಗಳನ್ನು ಸೇರಿಸಿ ೧೯೫೦ರಲ್ಲಿ ತಾಲ್ಲೂಕು ಕೇಂದ್ರ ಮಾಡಲಾಯಿತು. ಇಲ್ಲಿನ ಪ್ರತಿಯೊಂದು ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದ ವಿವಿಧ ಘಟನೆಗಳು ಸಂಭವಿಸಿದ್ದವು.

ವಿಲೀನ

೧೯೫೩ರಲ್ಲಿ ಆಂಧ್ರ ಪ್ರತ್ಯೇಕ ರಾಜ್ಯ ರಚನೆಯಾದಾಗ ಬಳ್ಳಾರಿ ಜಿಲ್ಲೆಯ ಆಲೂರು, ಆದೋನಿ, ರಾಯದುರ್ಗ ತಾಲ್ಲೂಕುಗಳು ಆಂಧ್ರಕ್ಕೆ ಸೇರಿದವು. ಹೀಗೆ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ನಂತರ  ಬಳ್ಳಾರಿ ಜಿಲ್ಲೆ ಅಭಿವೃದ್ದಿ ಪಥದತ್ತ ದಾಪುಗಾಲು ಹಾಕುತ್ತಿರುವ ಸಂದರ್ಭ : ೨೦೦೪ರ ಏಪ್ರಿಲ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷ ಜಯಭೇರಿ ಬಾರಿಸಿತು. ಹೀಗೆ ಐವತ್ತು ವರ್ಷಗಳ ನಂತರ ಬದಲಾದ ರಾಜಕೀಯ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿರು ವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ, ಜಿಲ್ಲೆಯ ಗಡಿವಿವಾದ, ಜಲವಿವಾದ ಹಾಗೂ ಪ್ರತ್ಯೇಕ ರಾಜ್ಯಕ್ಕೆ ಬಳ್ಳಾರಿಯನ್ನು ಸೇರಿಸುವ ಕುರಿತು ಸಂಭವಿಸಿದ ಘಟನೆಗಳ ಪ್ರಮುಖ ಸಂಗತಿಗಳನ್ನು ಇಲ್ಲಿ ವಿಶ್ಲೇಷಿಸುವ ಅಗತ್ಯವಿದೆ.

ಗಡಿವಿವಾದ

ಇಂದಿನ ಬಳ್ಳಾರಿ ಗಡಿವಿವಾದ ಪ್ರಾಚೀನವಾದದ್ದು. ಇದನ್ನು ಚಾರಿತ್ರಿಕವಾಗಿ ಗುರುತಿಸಿ ಅವಲೋಕಿಸುವುದು ಅಗತ್ಯ. ಇಲ್ಲಿ ಶಾತವಾಹನರು ಆಳ್ವಿಕೆ ಮಾಡುತ್ತಿದ್ದಾಗಿನ ಆಂಧ್ರ ಕರ್ನಾಟಕ ಗಡಿಗಳ ಬಗ್ಗೆ ತಿಳಿಯಬಹುದು. ವಿಜಯನಗರದಲ್ಲಿ ಬಳ್ಳಾರಿ ಜಿಲ್ಲೆ ತೆಲುಗು ಕನ್ನಡಿಗರ ಸಾಮರಸ್ಯದಿಂದ ಇದ್ದರು. ಬಳ್ಳಾರಿ ಬಗ್ಗೆ ತೆಲುಗರಿಗೆ ಎಲ್ಲಿಲ್ಲದ ವ್ಯಾಮೋಹ ವಿತ್ತು. ಹಾಗಾಗಿ ಗಡಿವಿವಾದ ಇಂದಿಗೂ ಜೀವಂತವಾಗಿದೆ.

[1]

ಭಾರತ ಸರ್ಕಾರವು ಭಾಷಾವಾರು ಪ್ರಾಂತ್ಯಗಳನ್ನಾಗಿ ರಚನೆ ಮಾಡಿದಾಗ ಬಳ್ಳಾರಿ ಪ್ರದೇಶ ಆಂಧ್ರಕ್ಕೆ ಸೇರಬೇಕೋ ಕರ್ನಾಟಕಕ್ಕೆ ಸೇರಬೇಕೋ ಎಂಬ ವಿವಾದ ಹುಟ್ಟಿತು. ಇದನ್ನು ಪರಿಹರಿಸಲು ಎ.ಐ.ಸಿ.ಸಿ.ಯು ಎನ್.ಸಿ. ಖೇಳಕರ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿ ಆಮೂಲಾಗ್ರ ಅಧ್ಯಯನ ಮಾಡಿ ಬಳ್ಳಾರಿ ಜಿಲ್ಲೆಯು ಅಚ್ಚಕನ್ನಡ ಪ್ರದೇಶವೆಂದು ವರದಿ ನೀಡಿತು. ಈ ಕಾರಣವಾಗಿ ಬಳ್ಳಾರಿ ಜಿಲ್ಲೆಯ ಜನತೆ ಕಾಂಗ್ರೆಸ್‌ಗೆ ಋಣಿಯಾದರು. ಕಾಂಗ್ರೆಸ್ ಪಕ್ಷವು ಸಹ ಬಳ್ಳಾರಿಯನ್ನು ಪ್ರೀತಿಯಿಂದ ಕಂಡಿತು. ಬಳ್ಳಾರಿಯಲ್ಲಿ ಆಗಲೇ ತೆಲುಗು ಸಂಘಟನೆಗಳು ಪ್ರಬಲವಾಗಿ ಬೆಳೆದಿದ್ದವು. ೧೯೪೩ರಲ್ಲಿ ಬಳ್ಳಾರಿ ನಗರದಲ್ಲಿ ಆಂಧ್ರಮಹಾಸಭೆಯ ಸ್ವಾಗತ ಸಮಿತಿ ಕಾರ್ಯದರ್ಶಿ ಪಿ. ವೆಂಕಟಸುಬ್ಬರಾಯರು, ಬಳ್ಳಾರಿ ನಗರದಲ್ಲಿ ಕನ್ನಡಿಗರಿಗಿಂತ ತೆಲುಗರೇ ಹೆಚ್ಚಾಗಿದ್ದಾ ರೆಂದು, ಬಳ್ಳಾರಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಬಳ್ಳಾರಿ ನಗರ ಆಂಧ್ರಕ್ಕೆ ಸೇರ ಬೇಕೆಂದು ಪಟ್ಟು ಹಿಡಿದಿದ್ದರು.[2]

ಖೇಳಕರ್ ವರದಿಯ ನಂತರ ಮಹಾಜನ್ ವರದಿಯು ಈ ಬಗ್ಗೆ ಬೆಳಕು ಚೆಲ್ಲುತ್ತದೆ. ಮಹಾಜನ್ ವರದಿಯು ಕರ್ನಾಟಕದ ಮಟ್ಟಿಗೆ ಶಾಪವಾಗಿ ಪರಿಣಮಿಸಿದೆ. ಇದರ ಪ್ರಕಾರ ಆದೋನಿ, ಆಲೂರು, ರಾಯದುರ್ಗ, ಮಡಕಶಿರಾ, ಕಲ್ಯಾಣದುರ್ಗ, ಹಿಂದೂಪುರ ತಾಲ್ಲೂಕುಗಳಲ್ಲಿ ಹೆಚ್ಚು ಕನ್ನಡ ಮಾತನಾಡುವವರಿದ್ದಾರೆ. ಆಲೂರು, ಆದೋನಿ, ರಾಯದುರ್ಗ ತಾಲ್ಲೂಕುಗಳು ಮೊದಲಿನಿಂದಲೂ ಬಳ್ಳಾರಿ ಜಿಲ್ಲೆಯಲ್ಲಿದ್ದವು. ಇವುಗಳ ನಡುವೆ ಮೊದಲಿನಿಂದಲೂ ಭಾವನಾತ್ಮಕ ಸಂಬಂಧವಿದೆ. ಆದೋನಿ ಮತ್ತು ಆಲೂರುಗಳಲ್ಲಿ ಸುಮಾರು ೮ ಕನ್ನಡ ಸಂಘಗಳಿವೆ. ನ್ಯಾಯಮೂರ್ತಿ ವಾಂಚೂ ಸೂಚಿಸಿದಂತೆ ಆದವಾನಿ, ಆಲೂರು ತಾಲ್ಲೂಕುಗಳನ್ನು ಕರ್ನೂಲು ಜಿಲ್ಲೆಗೂ, ರಾಯದುರ್ಗ ತಾಲ್ಲೂಕನ್ನು ಅನಂತಪುರ ಜಿಲ್ಲೆಗೂ ಸೇರಿಸಲಾಯಿತು. ಇವು ಕನ್ನಡಿಗರ ಪರವಾಗಿ ಹೋರಾಡುತ್ತಿರುವ ತಾಲ್ಲೂಕು ಗಳಾಗಿವೆ. ಪ್ರತಿವರ್ಷ ನಡೆಯುವ ಗಡಿನಾಡ ಉತ್ಸವಗಳಿಂದ ಈ ಪ್ರದೇಶದಲ್ಲಿ ಹೊಸತನ ಹುಟ್ಟಿಕೊಂಡಿದೆ. ಗಡಿನಾಡಿನ ಸಮಗ್ರ ಅಭಿವೃದ್ದಿ ಬಗ್ಗೆ ಸರ್ಕಾರ ಕೆಲವು ಯೋಜನೆಗಳನ್ನು ಹಮ್ಮಿಕೊಂಡರೂ ಫಲಕಾರಿಯಾಗಿಲ್ಲ. ದಿ. ೨೮.೧೨.೧೯೯೮ರಲ್ಲಿ ಡಾ. ಚಂದ್ರಶೇಖರ ಪಾಟೀಲರು ಗಡಿಭಾಗದ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ಒಂದು ಸಮಾಲೋಚನ ಸಮಿತಿಯನ್ನು ರಚಿಸಿ ಅದಕ್ಕೆ ‘ಗಡಿ ಕನ್ನಡಿಗರ ಸಲಹಾ ಸಮಿತಿ’ ಎಂದು ಹೆಸರಿಟ್ಟರು. ಕರ್ನಾಟಕ-ಆಂಧ್ರಪ್ರದೇಶಗಳ ಗಡಿ ಅಧ್ಯಯನಕ್ಕಾಗಿ ಸಮಿತಿಯೊಂದನ್ನು ರಚಿಸಿದರು.[3]

ತುಂಗಭದ್ರಾ ಜಲವಿವಾದ

ಏಕೀಕರಣದ ಸಂದರ್ಭದಲ್ಲಿ ತುಂಗಭದ್ರಾ ನದಿ ವಿವಾದ ದೊಡ್ಡ ಸಮಸ್ಯೆಯಾಗಿತ್ತು. ಏಕೆಂದರೆ ಈ ಹಿಂದೆ ಬಳ್ಳಾರಿ ಪ್ರದೇಶ (೧೮೦೦-೧೯೫೩) ಬ್ರಿಟಿಷರ ಆಳ್ವಿಕೆಗೊಳಗಾಗಿ ಮದ್ರಾಸ್ ಅಧಿಪತ್ಯದಲ್ಲಿತ್ತು. ಈಗಿನ ಬಳ್ಳಾರಿ, ಅನಂತಪುರ, ಕರ್ನೂಲು ಮತ್ತು ಕಡಪಾ ಜಿಲ್ಲೆಗಳನ್ನು ಮದ್ರಾಸ್ ಅಧಿಪತ್ಯಕ್ಕೆ ಸೇರಿಸಿ ‘ದತ್ತಮಂಡಲ’ ಎಂದು ಕರೆಯುತ್ತಿದ್ದರು. ಬರಗಾಲ, ಕ್ಷಾಮಕ್ಕೆ ತತ್ತರಿಸಿ ಈ ಭಾಗದ ಜನತೆಗೆ ನೀರಾವರಿ ಸೌಲಭ್ಯ ಒದಗಿಸಲು ಬ್ರಿಟಿಷರು ಅಣೆಕಟ್ಟು ಕಟ್ಟಲು ಯೋಜನೆ ರೂಪಿಸಿದರು. ಕರ್ನಾಟಕದ ಕೊಪ್ಪಳ, ರಾಯ ಚೂರು, ಬಳ್ಳಾರಿ ಮತ್ತು ಆಂಧ್ರದ ಕರ್ನೂಲು, ಕಡಪಾ, ಅನಂತಪುರ ಜಿಲ್ಲೆಗಳ ಬರಗಾಲ ನಿವಾರಣೆಗೆ ಈ ಯೋಜನೆ ನಾಂದಿ ಹಾಡುವುದಾಗಿತ್ತು. ಅದಕ್ಕೆ ಮದ್ರಾಸ್ ಮತ್ತು ಹೈದರಾಬಾದ್ ನಿಜಾಮ ಸರ್ಕಾರಗಳ ಜಂಟಿ ಪ್ರಯತ್ನದಿಂದ ೧೯೪೫ರಲ್ಲಿ ತುಂಗಭದ್ರಾ ಯೋಜನೆಯನ್ನು ಆರಂಭಿಸಲಾಯಿತು. ರಾಜ್ಯಗಳ ಪುನರ್ ವಿಂಗಡಣೆಯಿಂದಾಗಿ ಆಂಧ್ರ ಪ್ರದೇಶ ಮತ್ತು ಮೈಸೂರು ರಾಜ್ಯಗಳ ನಡುವೆ ವಿವಾದ ಉಲ್ಭಣಿಸಿತು. ಈ ಜಲವಿವಾದವು ಗಡಿವಿವಾದ, ಭಾಷಾಸಮಸ್ಯೆ ಹಾಗೂ ಪ್ರತ್ಯೇಕ ರಾಜ್ಯಗಳ ಅಸ್ತಿತ್ವಕ್ಕಾಗಿ ಹೋರಾಡಲು ಆಸ್ಪದ ನೀಡಿತು.

ಆಲೂರು, ಆದೋನಿ ಮತ್ತು ರಾಯದುರ್ಗ ತಾಲ್ಲುಕುಗಳು ಏಕೀಕರಣದ ಮೊದಲು ಬಳ್ಳಾರಿ ಜಿಲ್ಲೆಯಲ್ಲಿದ್ದವು. ಆಗ ಜನಪ್ರತಿನಿಧಿಗಳು ಹೋರಾಟ ಮಾಡುವಲ್ಲಿ ನಿರತರಾದರು. ೧೯೫೨ರಲ್ಲಿ ಚುನಾವಣೆಗಳು ನಡೆದು ಬಳ್ಳಾರಿಯಲ್ಲಿ ತೆಲುಗರೆ ಜಯಗಳಿಸಿದಾಗ ಹೋರಾಟ ಇನ್ನಷ್ಟು ಉಗ್ರಸ್ವರೂಪ ಪಡೆಯಿತು. ಈ ಸಮಸ್ಯೆ ಪರಿಹರಿಸಲು ವಾಂಛೂ ಕಮಿಟಿ ರಚನೆ ಯಾಯಿತು. ವಾಂಛೂ ಅವರು ಬಳ್ಳಾರಿ ಪರಿಸ್ಥಿತಿಯನ್ನು ಸಮಗ್ರವಾಗಿ ಅರಿತು ವರದಿ ಸಿದ್ಧಪಡಿಸಿದ್ದರು. ಬಳ್ಳಾರಿಯ ಮೂರು ತಾಲ್ಲೂಕುಗಳು ಆಂಧ್ರಕ್ಕೆ ಸೇರಬೇಕೆಂದಾಗ ಕನ್ನಡಿಗರು ವಿರೋಧಿಸಿದರು. ಆ ಸಮಯಕ್ಕೆ ಹೈದರಾಬಾದ್ ಮತ್ತು ಮದ್ರಾಸ್ ಸರ್ಕಾರಗಳು ಸಂಯುಕ್ತವಾಗಿ ಕೈಗೊಂಡಿದ್ದ ತುಂಗಭದ್ರಾ ಅಣೆಕಟ್ಟಿನ ಮುಗಿಯಬೇಕಾದ ಕೆಲಸ, ಅದರ ಬಳಕೆಯ ಪಾಲು ಇತ್ಯಾದಿಗಳ ಬಗೆಗೂ ವಾಂಛೂ ಅವರು ಸ್ಪಷ್ಟವಾದ ತೀರ್ಪು ಕೊಡಲಾ ಗಲಿಲ್ಲ. ಆಗ ಕರ್ನಾಟಕ ಪ್ರಾಂತ ನಿರ್ಮಾಣವಾಗುವವರೆಗೆ ಬಳ್ಳಾರಿಯನ್ನು ಆಂಧ್ರದೊಡನೆ ಸೇರಿಸುವ ನಿರ್ಧಾರವನ್ನು ಕನ್ನಡಿಗರು ಪ್ರಬಲವಾಗಿ ವಿರೋಧಿಸಿದರು. ವಾಂಛೂ ವರದಿಯ ಪ್ರಕಾರ, ಬಳ್ಳಾರಿಯನ್ನು ಆಂಧ್ರ ಅಥವಾ ಕರ್ನಾಟಕಕ್ಕೆ ಸೇರಿಸುವಾಗ ಒಂದೇ ಘಟಕವೆಂದೂ ಹೇಳುವಂತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ತೆಲುಗರೇ ಅಧಿಕವಾಗಿದ್ದರು. ಆಲೂರು, ಆದೋನಿ ಮತ್ತು ರಾಯದುರ್ಗ ತಾಲ್ಲೂಕುಗಳು ಆಂಧ್ರಕ್ಕೆ ಸೇರಿದವು. ಹರಪನಹಳ್ಳಿ, ಹಡಗಲಿ, ಹೊಸಪೇಟೆ, ಕೂಡ್ಲಿಗಿ, ಸಂಡೂರು ಮತ್ತು ಸಿರುಗುಪ್ಪ ತಾಲ್ಲೂಕುಗಳು ಮೈಸೂರು ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿದ್ದವು.

ರಾಷ್ಟ್ರೀಯ ಪುನರ್ಘಟನಾ ವಿಧೇಯಕವು ೧೬.೩.೧೯೫೬ನೇ ದಿನ ಪ್ರಕಟವಾಯಿತು. ಈ ಮೊದಲು ಮುಂದೂಡಿದ್ದ ಬಳ್ಳಾರಿಯ ವಿಚಾರವನ್ನು ಕೇಂದ್ರ ಸರ್ಕಾರವು ಈ ವಿಧೇಯಕದ ಮೂಲಕವೇ ನಿರ್ಣಯಿಸಿ, ಆ ಭಾಗವು ಮೈಸೂರಿಗೆ ಸೇರತಕ್ಕದ್ದೆಂದು ತಿಳಿಸಿತು. ಬಳ್ಳಾರಿಯ ಬಗ್ಗೆ ವಿಧೇಯಕದ ಪ್ರಸ್ತಾವನೆಯಲ್ಲಿ ‘ತುಂಗಭದ್ರಾ ಯೋಜನೆಯ ಕಾರ್ಯವು ದಕ್ಷವಾದ ರೀತಿಯಲ್ಲಿ ಹಾಗೂ ನಿರಾತಂಕವಾಗಿ ಸಾಗುವಂತೆ ಮಾಡಲು ಬಳ್ಳಾರಿಯ ಬಗ್ಗೆ ಸ್ವೀಕರಿಸಲಾದ ಈ ಮೊದಲಿನ ನಿರ್ಣಯಗಳನ್ನು ಪುನರ್ವಿಮರ್ಶಿಸಿ, ಬಳ್ಳಾರಿ ಜಿಲ್ಲೆಯ ಕೆಲವೊಂದು ಭಾಗವನ್ನು ಆಂಧ್ರಕ್ಕೆ ವರ್ಗಾಯಿಸಬೇಕೆಂದು ರಾಜ್ಯ ಪುನರ‌್ರಚನಾ ಆಯೋಗವು ಸೂಚಿಸಿತ್ತು. ಈ ಯೋಜನೆಯಲ್ಲಿ ರಾಯಲ ಸೀಮೆಯ ಜನತೆಗೆ ಅತ್ಯಂತ ಆಸ್ಥೆ ಇದೆ ಯೆಂಬುದನ್ನು ಭಾರತ ಸರಕಾರವು ಮಾನ್ಯ ಮಾಡುತ್ತದೆ. ಆದರೆ ಈ ಧ್ಯೇಯ ಸಾಧನೆಗೆ ಆಯೋಗವು ಸೂಚಿಸಿದಂತೆ ಕೆಲವೊಂದು ಪ್ರದೇಶಗಳನ್ನು ವರ್ಗಾಯಿಸುವುದು ಅನವಶ್ಯವೆಂಬ ಅಭಿಪ್ರಾಯಕ್ಕೆ ಭಾರತ ಸರಕಾರವು ಬಂದಿದೆ. ಆಂಧ್ರ ಸರಕಾರವು ಅತ್ಯಂತ ಮಹತ್ವ ಕೊಡುತ್ತ ಲಿರುವ ತುಂಗಭದ್ರಾ ಉಚ್ಚಮಟ್ಟದ ಕಾಲುವೆ ಯೋಜನೆಯಾದರೂ ಸರಿಯಿದೆ ಎಂದು ಸರಕಾರಕ್ಕೆ ಕಂಡುಬಂದಿದೆ. ಈ ಯೋಜನೆಯು ತ್ವರಿತವಾಗಿ ಹಾಗೂ ಸಮಾಧಾನಕರವಾಗಿ ಜಾರಿಗೆ ಬರುವಂತೆ ಮಾಡಲು ಅವಶ್ಯ ಕ್ರಮಗಳನ್ನು ಕೈಗೊಳ್ಳುವುದೇ ಭಾರತ ಸರಕಾರದ ಉದ್ದೇಶವಾಗಿದೆ. ಆದ್ದರಿಂದ ಆಯೋಗವು ತನ್ನ ಸೂಚನೆಯನ್ನು ಮಾಡುವಾಗ ಯಾವ ಉದ್ದೇಶವನ್ನಿಟ್ಟುಕೊಂಡಿತ್ತೊ ಅದನ್ನು, ಪ್ರದೇಶಗಳನ್ನು ವರ್ಗಾಯಿಸದೆ, ಇಲ್ಲವೆ, ಈ ಮೊದಲು ವಿವರವಾದ ವಿಚಾರಣೆಗಳ ನಂತರ ಬಗೆಹರಿದಿರುವ ಬಳ್ಳಾರಿ ಪ್ರಶ್ನೆಯನ್ನು ಪುನಃ ಎತ್ತದೆ, ಸಾಧಿಸಲಾಗುವುದು (ಮಹದೇವ ಬಣಕಾರ, ಆಂಗ್ಲರ ಆಡಳಿತದಲ್ಲಿ ಕನ್ನಡ, ಪು-೩೪).

ಅಣೆಕಟ್ಟಿನ ವಿವಾದ ಮತ್ತು ಮಿಶ್ರ ಆಯೋಗ : ದಿನಾಂಕ ೨೧.೪.೧೯೫೩ರಂದು ರಾಷ್ಟ್ರಪತಿ ಗಳು ಹೈದರಾಬಾದಿನ ಮುಖ್ಯ ನ್ಯಾಯಾಧೀಶ ಎಲ್.ಎಸ್. ಮಿಶ್ರಾ ನೇತೃತ್ವದಲ್ಲಿ ತುಂಗ ಭದ್ರಾ ಅಣೆಕಟ್ಟಿನ ಸಮಸ್ಯೆ ಪರಿಹರಿಸಲು ಆಯೋಗ ರಚಿಸಲು ಆಜ್ಞೆಮಾಡಿದ್ದರು. ಇದರಂತೆ ೨೩.೪.೧೯೫೩ ರಿಂದ ಕೆಲಸ ಆರಂಭಿಸಿ ೧೫.೫.೧೯೫೩ರೊಳಗೆ ವರದಿ ಸಲ್ಲಿಸಲು ಸೂಚಿಸ ಲಾಯಿತು. ೧೯.೪.೧೯೫೩ರಂದು ಹುಬ್ಬಳ್ಳಿಯಲ್ಲಿ ಕೆ.ಪಿ.ಸಿ.ಸಿ. ವಿಶೇಷ ಸಭೆ ನಡೆದಾಗ ಗಂಭೀರ ಚರ್ಚೆಗಳಾದವು. ಎಸ್. ಗೋಪಾಲಗೌಡ, ಬಿ.ವಿ. ಕಕ್ಕಿಲಾಯ ಇತರರು ಅಖಂಡ ಕರ್ನಾಟಕ ಪ್ರೇರಿತ ರಚನೆಗೆ ನಾಂದಿ ಹಾಡಿದರು.

ಎಲ್.ಎಸ್. ಮಿಶ್ರಾ ಅವರು ೨೭.೪.೧೯೫೩ರಂದು ಬಳ್ಳಾರಿಯಲ್ಲಿ ಕಚೇರಿ ತೆರೆದು ವಿಚಾರಣೆ ಆರಂಭಿಸಿದರು. ಆಗ ಬಳ್ಳಾರಿ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಅನೇಕ ಮನವಿಗಳು ಬಂದವು. ಬಳ್ಳಾರಿ ಜಿಲ್ಲೆಯ ಬಗ್ಗೆ ಲಭ್ಯ ಇದ್ದ ದಾಖಲೆಗಳನ್ನು (ಹೈದರಾಬಾದ್) ಪರಿಶೀಲಿಸಿ ದರು. ಬಳ್ಳಾರಿ ತಾಲ್ಲೂಕು ಕರ್ನಾಟಕದಲ್ಲಿರಬೇಕೆಂದು ಮೇಲಿನ ಅಧ್ಯಯನಗಳಿಂದ ಮಿಶ್ರಾ ವರದಿ ಸ್ಪಷ್ಟಪಡಿಸಿತು. ೨೦.೫.೧೯೫೩ರಲ್ಲಿ ಎಲ್.ಎಸ್. ಮಿಶ್ರಾ ವರದಿಯನ್ನು ಲೋಕಸಭೆ ಸ್ವೀಕರಿಸಿದಾಗ ಬಳ್ಳಾರಿ ಜಿಲ್ಲೆಯ ಜನರು ಸಂತೋಷಗೊಂಡರು. ಆದರೆ ಆಂಧ್ರದವರು ಇದನ್ನು ಪ್ರಬಲವಾಗಿ ವಿರೋಧಿಸಿ ಚಳುವಳಿ ನಡೆಸಿದರು. ೧೯೫೩ ಆಗಸ್ಟ್ ೧೩ರಂದು ಆಂಧ್ರ ಪ್ರಾಂತ್ಯ ಮಸೂದೆ ಲೋಕಸಭೆಯಲ್ಲಿ ಪ್ರಸ್ತಾಪಿತವಾಯಿತಲ್ಲದೆ, ಬಳ್ಳಾರಿ ಗಡಿಸಮಸ್ಯೆ ಅಲ್ಪವಾಗಿ ತಿಳಿಯಾದಂತಾಯಿತು.

ಈ ಎಲ್ಲ ಬೆಳವಣಿಗೆಗಳ ನಡುವೆ ಬಳ್ಳಾರಿಯು ಮೈಸೂರು ರಾಜ್ಯಕ್ಕೆ ಸೇರಿದಾಗ ತುಂಗಭದ್ರಾ ವಿವಾದ ಜೀವಂತವಾಗಿ ಉಳಿಯಿತು. ಈ ಹಿಂದೆ ತಿಳಿಸಿರುವಂತೆ ತುಂಗಭದ್ರಾ ಯೋಜನೆ ಆಂಧ್ರರಾಜ್ಯ ರಚನೆಗೆ ಸಮಸ್ಯಾತ್ಮಕವಾಗಿದ್ದಿತು. ಈ ಯೋಜನೆಯನ್ನು ಮದ್ರಾಸ್ ಮತ್ತು ಹೈದರಾಬಾದ್ ಸರ್ಕಾರಗಳು ಜಂಟಿಯಾಗಿ ಆರಂಭಿಸಿದ್ದವು. ಆಂಧ್ರರಾಜ್ಯ ರಚನೆ ಸಂದರ್ಭದಲ್ಲಿ ಇದು ಅಪೂರ್ಣವಾಗಿತ್ತು. ತುಂಗಭದ್ರಾ ಅಣೆಕಟ್ಟು ಬಳ್ಳಾರಿ ಜಿಲ್ಲೆಯಲ್ಲಿದ್ದು ಮೈಸೂರಿಗೆ ಸೇರಿಹೋಯಿತು. ರಾಯಲಸೀಮೆಗೆ ಅನುಕೂಲವಾಗಲೆಂದು ಆರಂಭಿಸಿದ ಯೋಜನೆಯ ಉಳಿದ ಕೆಲಸವನ್ನು ಯಾವ ರಾಜ್ಯದವರು ಮುಕ್ತಾಯಗೊಳಿಸಬೇಕೆಂಬುದು ದೊಡ್ಡ ಸಮಸ್ಯೆಯಾಗಿತ್ತು. ತುಂಗಭದ್ರಾ ಅಣೆಕಟ್ಟಿನಿಂದ ಆಂಧ್ರಕ್ಕೆ ಹೆಚ್ಚಿನ ಸೌಲಭ್ಯ ಇದ್ದು, ಆಂಧ್ರ ಮೈಸೂರು ರಾಜ್ಯಗಳು ಸೌಹಾರ್ದ ಒಪ್ಪಂದಕ್ಕೆ ಬಾರದಿದ್ದರೆ, ರಾಷ್ಟ್ರಪತಿಗಳೇ ತೀರ್ಮಾನಿಸುತ್ತಾರೆಂದು ಗೃಹಮಂತ್ರಿ ಕಾಟ್ಜೂ ಹೇಳಿದ್ದರು. ತೆಲುಗರ ಪರವಾಗಿ ಡಾ. ಲಂಕಾ ಸುಂದರಂ, ರಾಘವಾಚಾರಿ, ರಾಘುರಾಮಯ್ಯನವರಿದ್ದರು. ಕನ್ನಡಿಗರ ಪರವಾಗಿ ಅಳವಂಡಿ ಶಿವಮೂರ್ತಿಸ್ವಾಮಿ ಎಸ್. ನಿಜಲಿಂಗಪ್ಪ, ಟಿ. ಸುಬ್ರಹ್ಮಣ್ಯಂ, ಸ್ವಾಮಿ ರಮಾನಂದತೀರ್ಥ, ಎಂ.ಎಸ್. ಗುರುಪಾದಸ್ವಾಮಿ ಚರ್ಚಿಸಿದ್ದರು. ೧.೧೦.೧೯೫೩ರಲ್ಲಿ ಬಳ್ಳಾರಿಯು ಮೈಸೂರಿನೊಡನೆ ವಿಲೀನವಾದಾಗ ಬಳ್ಳಾರಿ ಸುತ್ತಮುತ್ತ ಭಯಾನಕ ಗಲಭೆ ಗಳಾದವು.

ಈ ಗಲಭೆಗೆ ಕಾರಣರಾದ ಆಂಧ್ರಪರವಾದಿಗಳನ್ನು ಸ್ನೇಹ, ಸೌಹಾರ್ದದಿಂದ ಇರಲು ಸೆಪ್ಟೆಂಬರ್‌ರಂದೇ ಬಳ್ಳಾರಿ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಕೆ. ಹನುಮಂತಯ್ಯ ತಿಳಿಸಿದ್ದರು. ಇವರು ಮಿಶ್ರಾ ತೀರ್ಪು ಇತ್ಯರ್ಥವಾಗಿದೆ ಎಂದಾಗ ಇನ್ನಷ್ಟು ಗಲಭೆ ನಡೆದಿದ್ದವು. ರಾಷ್ಟ್ರೀಯ ಪುನರ್ವಿಂಗಡಣೆ ಆಯೋಗದ ಶಿಫಾರಸ್ಸುಗಳಲ್ಲಿ ಹಾಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ ತಾಲ್ಲೂಕುಗಳು ಮತ್ತು ತುಂಗಭದ್ರಾ ಅಣೆಕಟ್ಟಿರುವ ಮಲ್ಲಾಪುರ ಉಪತಾಲ್ಲೂಕಿನ ಸ್ವಲ್ಪಭಾಗಗಳನ್ನು ಬಿಟ್ಟು ಈಗ ಇರುವ ಮೈಸೂರು ರಾಜ್ಯ/ಕರ್ನಾಟಕ ರಾಜ್ಯ ರಚನೆಯಲ್ಲಿ ಸೇರಲು ೧೦.೧೦.೧೯೫೫ರಲ್ಲಿ ಫಜಲ್ ಆಲಿ ಆಯೋಗ ತೀರ್ಮಾನಿ ಸಿತು. ೧೧.೧೦.೧೯೫೫ರಿಂದಲೇ ಬಳ್ಳಾರಿಯಲ್ಲಿ ರಾಜ್ಯ ಪುನರ್ವಿಂಗಡಣ ಆಯೋಗದ ವರದಿಯ ವಿರುದ್ಧ ಚಟುವಟಿಕೆಗಳು ಚುರುಕಾಗಿ ಆರಂಭವಾದವು. ಆಯೋಗದ ತೀರ್ಮಾನ ವನ್ನು ಜಿಲ್ಲೆ ಸಂಪೂರ್ಣವಾಗಿ ವಿರೋಧಿಸಿ ತಿರಸ್ಕರಿಸಿತು. ಹಳ್ಳಿಗಾಡಿನಲ್ಲಿ ಹರತಾಳ, ಸತ್ಯಾಗ್ರಹ ಇತರ ಕಾರ್ಯಕ್ರಮಗಳು ಜರುಗಿದವು. ೧೬.೧೦.೧೯೫೫ರಂದು ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆ ನಡೆದಾಗ, ಭಾರತ ಸರ್ಕಾರವು ೧೫ರೊಳಗೆ ಮಿಶ್ರಾ ವರದಿಯನ್ನು ಅಂತಿಮವೆಂದು ಒಪ್ಪಿಕೊಳ್ಳಲು ಒತ್ತಡ ಹೇರಿತು. ಈ ಸಭೆಗೆ ೧೬೦ಕ್ಕೂ ಹೆಚ್ಚು ಪ್ರತಿನಿಧಿಗಳು ಬಂದಿದ್ದರು. ಬಳ್ಳಾರಿ ಜಿಲ್ಲಾ ಕ್ರಿಯಾ ಸಮಿತಿ ಅಧ್ಯಕ್ಷ ಜೆ. ಗಾದಿಲಿಂಗಪ್ಪ ಅವರು ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕ ದಲ್ಲಿ ಉಳಿಸಲು ಕನ್ನಡಿಗರು ಹೋರಾಡಬೇಕೆಂದು ಕರೆ ನೀಡಿದ್ದರು. ಮಿಶ್ರಾ ತೀರ್ಪನ್ನು ಒಪ್ಪಿ, ೧೬.೧೦.೧೯೫೫ರವರೆಗೆ ಗಡವು ಕೊಟ್ಟಿದ್ದ ಪರಿಷತ್ತು, ನವೆಂಬರ್ ೧೦ನೇ ತಾರೀಖು ಹಂಪೆಯಲ್ಲಿ ಸಭೆ ನಡೆಸಿ ಚಳುವಳಿಯ ರೂಪುರೇಷೆಗಳ ಬಗ್ಗೆ ಚರ್ಚಿಸಿತು. ತುಂಗಭದ್ರಾ ಬೋರ್ಡಿಗೆ ಮೊದಲೇ ಸೂಚನೆ ನೀಡಿ, ಮೈಸೂರು ರಾಜ್ಯದಲ್ಲಿ ಉಳಿಯುವ ಬಳ್ಳಾರಿ ಜಿಲ್ಲೆಯ ಜನರು ಆಜ್ಞೆಯನ್ನು ಉಲ್ಲಂಘಿಸಿ ತಮ್ಮ ಪ್ರದೇಶಕ್ಕೆ ನೀರನ್ನು ಬಳಸಿಕೊಳ್ಳಲು ಚಳುವಳಿ ಮಾಡಲು ನಿರತರಾದರು.[4]

ಈ ಎಲ್ಲ ಪ್ರಯತ್ನಗಳು ವಿಫಲವಾದಾಗ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನವರು ಶಾಂತಿ ಮತ್ತು ಅಹಿಂಸೆ ಮೂಲಕ ಸತ್ಯಾಗ್ರಹ ಆರಂಭಿಸಲು ಮುಂದಾದರು. ಸಿರುಗುಪ್ಪ ತಾಲ್ಲೂಕು ಕೊಂಚೆಗೇರಿಯಲ್ಲಿ ಏರ‌್ರಿತಾತ ನೇತೃತ್ವದ ೫೮ ಜನರ ತಂಡವು ದಿ. ೧೬.೧೧.೧೯೫೫ರ ಬೆಳಿಗ್ಗೆ ೯ ಗಂಟೆಗೆ ನೀರಿನ ಸತ್ಯಾಗ್ರಹವನ್ನು ಮಾಡಿದರು. ‘ಬ್ಯಾಂಡ್, ಕೊಂಬು, ಕಹಳೆ, ಇತರ ವಾದ್ಯಗಳೊಡನೆ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ಬಂದ ಸತ್ಯಾಗ್ರಹಿಗಳನ್ನು ದಾರಿಯುದ್ದಕ್ಕೂ ಹೆಣ್ಣುಮಕ್ಕಳು ಆರತಿಯೆತ್ತಿ ಬೀಳ್ಕೊಡುತ್ತಿದ್ದರು. ಸತ್ಯಾಗ್ರಹನಿರತ ವ್ಯಕ್ತಿಗಳು ನಿರ್ಧಾರವಾದ ಸ್ಥಳಕ್ಕೆ ಬಂದು ಹರಿಯುತ್ತಿದ್ದ ತುಂಗಭದ್ರೆಯ ನೀರನ್ನು ತಮ್ಮ ಕೊಡಗಳಲ್ಲಿ ತುಂಬಿಕೊಂಡು ಕಾನೂನನ್ನು ಉಲ್ಲಂಘಿಸಿ ಬಂಧನಕ್ಕೊಳ ಗಾದರು. ಬಂಧಿತ ಸತ್ಯಾಗ್ರಹಿಗಳನ್ನು ಕೋರ್ಟಿಗೆ ಹಾಜರುಪಡಿಸಿದರು. ೧೬.೧೧.೧೯೫೫ ರಿಂದ ೩೦.೧೧.೧೯೫೫ಕ್ಕೆ ೧೫ ತಂಡಗಳಲ್ಲಿ ೫೪೨ ಜನರು ಬಂಧಿತರಾದರು. ಇದರ ನಾಯಕತ್ವವನ್ನು ಸತ್ಯವಂತರಾಯರು ವಹಿಸಿದ್ದರು. ನೀರಿನ ಸತ್ಯಾಗ್ರಹ ನಿಲ್ಲದೆ ೮.೧೨. ೧೯೫೫ರ ವೇಳೆಗೆ ಜರುಗಿ ೧೨೦೦ ಜನ ಬಂಧಿತರಾದರು. ಇವರಲ್ಲಿ ವೃದ್ಧ ಮಹಿಳೆಯರು, ಬಡವ ಬಲ್ಲಿದರೆಲ್ಲರೂ ಇದ್ದರು.

ನೀರಿನ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ರೋಚಕ ಘಟನೆ ಸಂಭವಿಸುತ್ತದೆ. ಅನಂತಪುರ ಜಿಲ್ಲೆಯ ಗುತ್ತಿ ತಾಲ್ಲೂಕಿನ ಪಾಲ್ತೂರು ಗ್ರಾಮದ ಸತ್ಯಾಗ್ರಹಿ ದಂಡಾ ಚೆನ್ನಬಸಪ್ಪನವರು ಒಂದು ಶಿಫಾರಸ್ಸಿನ ಪ್ರತಿಭಟನಾರ್ಥವಾಗಿ ಕಾಲುವೆಯ ಮೂರು ಹಿಡಿಮಣ್ಣನ್ನು ಆ ಕಡೆ ಹಾಕಿ ಪಕ್ಕದ ಹೊಲಕ್ಕೆ ಮೂರು ಬೊಗಸೆ ನೀರು ಸುರಿದದ್ದನ್ನು ಅಪರಾಧವೆಂದು ಪರಿಗಣಿಸಿ ನಮ್ಮ ಪ್ರಭುತ್ವವು ೧೮ ದಿನ ಸೆರೆಯಲ್ಲಿಟ್ಟಿತ್ತು. ಈಗಾಗಲೇ ಲೋಕಸಭೆ ಅಂಗೀಕರಿಸಿ ರಾಷ್ಟ್ರಪತಿಗಳ ಒಪ್ಪಿಗೆಯ ಮುದ್ರೆ ಬಿದ್ದಿರುವ ಶಾಸನವನ್ನೇ ಬದಲಿಸಿದ ಆಯೋಗದ ಸದಸ್ಯರಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕೆಂದು, ಅವರನ್ನೇಕೆ ವಿಚಾರಣೆಗೆ ಗುರಿಪಡಿಸ ಬಾರದು ಎಂದು ವಾದಿಸಿದರು. ನ್ಯಾಯಾಧೀಶರು ದಂಡಾ ಚೆನ್ನಬಸಪ್ಪನವರನ್ನು ಸತ್ಯಾಗ್ರಹ ದಲ್ಲಿ ಭಾಗವಹಿಸಿದ್ದೆಕೆಂದು ಕೇಳಿದಾಗ ‘ಕರ್ನಾಟಕದ ಎಲ್ಲೆ ಬಳ್ಳಾರಿ ಜಿಲ್ಲೆಗೇ ಮುಗಿಯು ವುದಿಲ್ಲ, ನಾನು ಆಂಧ್ರದಲ್ಲಿದ್ದರೂ ಕನ್ನಡಿಗನೇ. ಕರ್ನಾಟಕದ ಹಿತರಕ್ಷಣೆ ನನ್ನ ಹೊಣೆ’ ಎನ್ನುತ್ತಾನೆ. ೧೯೫೫ರ ಸೆಪ್ಟೆಂಬರ್‌ನಲ್ಲಿ ಎಸ್. ಗೋಪಾಲಗೌಡರು ಮತ್ತು ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಕೆ. ಹನುಮಂತಯ್ಯನವರು ಒಂದಾದ ಕನ್ನಡಿಗರನ್ನು ಅಭಿನಂದಿಸಿ ದರು. ೧೯೫೬ ನವೆಂಬರ್ ೦೧ರಂದು ವಿಶಾಲ ಮೈಸೂರು ಅಸ್ತಿತ್ವಕ್ಕೆ ಬಂದಾಗ ಈ ಸಮಸ್ಯೆಗಳು ಕಡಿಮೆಯಾದವು.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪೆಯಲ್ಲಿ ೧.೧೧.೧೯೫೬ರಂದು ಮಹತ್ವದ ಕಾರ್ಯಕ್ರಮ ನಡೆಯಿತು. ಕರ್ನಾಟಕದ ಕುಲಪುರೋಹಿತರಾದ ಆಲೂರು ವೆಂಕಟರಾಯರ ನೇತೃತ್ವದ ಮೂಲಕ ಪಂಪಾ ವಿರೂಪಾಕ್ಷನ ಸನ್ನಿಧಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಇದಕ್ಕೆ ಸಹಸ್ರಾರು ಜನ ನೀರು, ಮಣ್ಣು ತಂದು ಪೂಜೆ ಸಲ್ಲಿಸಿದರು.[5]

೧೯೪೫ರಲ್ಲಿ ಮದ್ರಾಸ್ ಮತ್ತು ನಿಜಾಮ ಸರ್ಕಾರಗಳು ಜಂಟಿಯಾಗಿ ಕೈಗೊಂಡ ತುಂಗಭದ್ರಾ ಯೋಜನೆಯು ೧೯೫೩ರಲ್ಲಿ ಮುಗಿಯಿತು. ೧೯೫೬ರಲ್ಲಿ ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳ ಜಂಟಿಯೋಜನೆಯಾಯಿತು. ಅಂದು ೧೩೩ ದಶಲಕ್ಷ ಘನ ಅಡಿ ನೀರು ಸಂಗ್ರಹವಿತ್ತು. ೧೯೮೫ರಲ್ಲಿ ೧೧೫.೬೧ ಸಹಸ್ರ ದಶಲಕ್ಷ ಘನ ಅಡಿ ನೀರು ಇದ್ದು, ೫-೨೩ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವಿತ್ತು. ಆರಂಭದಲ್ಲಿ ಈ ಅಣೆಕಟ್ಟಿನಲ್ಲಿ ೧೩೩ ಟಿ.ಎಂ.ಸಿ. ನೀರುಸಂಗ್ರಹ ಸಾಮರ್ಥ್ಯ ಇತ್ತು. ೧೯೮೬ರಲ್ಲಿ ೧೧೧ ಟಿ.ಎಂ.ಸಿ., ೧೯೫೩-೮೭ಕ್ಕೆ ೩೫ ವರ್ಷಗಳಲ್ಲಿ ೨೨ ಟಿ.ಎಂ.ಸಿ. ನೀರು ಕಡಿಮೆ ಆಗಿ ಹೂಳಿ ನಿಂದ ಮುಚ್ಚಿಹೋಗಿದೆ. ಇಂದು ೧೦೮ ಟಿ.ಎಂ.ಸಿ. ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.


[1]      ಬಳ್ಳಾರಿ ಜಿಲ್ಲೆ ೧೮೦೦ ರಿಂದ ೧೯೫೩ರ ವರೆಗೆ ಮದ್ರಾಸ್ ಅಧಿಪತ್ಯದ ಒಂದು ಜಿಲ್ಲೆ ಯಾಗಿತ್ತು. ಬ್ರಿಟಿಷರ ಪ್ರಭಾವದಿಂದ ಎಲ್ಲ ಕ್ಷೇತ್ರಗಳಲ್ಲೂ ಇಲ್ಲಿ ಸಾಕಷ್ಟು ಬದಲಾವಣೆಗಳಾದವು. ೧೮೩೨ರಲ್ಲಿ ಜರ್ಮನ್ ಪಾದ್ರಿಗಳು ಮುದ್ರಣಯಂತ್ರ ಜಾರಿಗೆ ತಂದರು. ೧೮೧೨ರಲ್ಲಿ ಕನ್ನಡ ಸಮಾಚಾರ್, ೧೮೮೦ರಲ್ಲಿ ವಿದಯಧ್ವಜ, ೧೯೦೫ರಲ್ಲಿ ಸನ್ಮಾರ್ಗ, ೧೯೧೨ರಲ್ಲಿ ಬಳ್ಳಾರಿ ಭಾರತಿ ಇತರ ಪತ್ರಿಕೆಗಳು ಜಿಲ್ಲೆಯಲ್ಲಿ ಪ್ರಕಟವಾಗಿ ಜನರಲ್ಲಿ ಹೊಸ ಅರಿವು, ಜ್ಞಾನೋದಯಕ್ಕೆ ನಾಂದಿ ಹಾಡಿದವು.

[2]       ಗಡಿನಾಡ ಉತ್ಸವ ೧೦.೪.೧೯೯೯ ಬಳ್ಳಾರಿ ಹತ್ತಿರ ಡಿ. ಹಿರೇಹಾಳ್‌ನಲ್ಲಿ ನಡೆಯಿತು.

[3]       ಎನ್. ಚಿನ್ನಸ್ವಾಮಿ ಸೋಸಲೆ, ಗಡಿ ಚಳುವಳಿಗಳು, ೧೯೯೯, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೩೪.

[4]      ವಿರೂಪಾಕ್ಷಿ ಪೂಜಾರಹಳ್ಳಿ, ಜಲಸಂಬಂಧಿ ಚಳುವಳಿಗಳು, ೧೯೯೯.

[5]      ಗೋಪಾಲರಾವ್ ಎಚ್.ಎಸ್., ಕರ್ನಾಟಕ ಏಕೀಕರಣ ಇತಿಹಾಸ, ೧೯೯೨, ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪು. ೨೫.