ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

೧೮೭೧ರಲ್ಲಿ ಐ.ಸಿ.ಎಸ್. ಪರೀಕ್ಷೆಗೆ ಅಭ್ಯರ್ಥಿಗಳ ವಯೋಮಿತಿಯನ್ನು ೨೧ ರಿಂದ ೧೯ಕ್ಕೆ ಇಳಿಸಲಾಯಿತು. ಅವರ ಉದ್ದೇಶವು ಸ್ಪಷ್ಟ ಭಾರತೀಯರನ್ನು ಪರೀಕ್ಷೆ, ಉದ್ಯೋಗ ದಲ್ಲಿ ಕುಂಠಿತ ಅಥವಾ ಕಡಿಮೆಗೊಳಿಸುವುದಾಗಿತ್ತು. ಭಾರತೀಯರಿಗೆ ಉನ್ನತ ಹುದ್ದೆಗಳನ್ನು ಹೊಂದಲು ಅವಕಾಶ ಮತ್ತು ಆಡಳಿತವನ್ನು ಪ್ರಜೆಗಳ ಹತೋಟಿಯಲ್ಲಿರುವ ಪ್ರಜಾಪ್ರತಿನಿಧಿ ಗಳು ಚಳುವಳಿ ನಡೆಸಲು ಒಂದು ಸಂಸ್ಥೆ ಅವಶ್ಯಕವಾಗಿತ್ತು. ೧೮೮೨ರಲ್ಲಿ ಅಲೆನ್ ಆಕ್ಟೇವಿ ಯನ್ ಹ್ಯೂಂ ಎಂಬ ನಿವೃತ್ತ ಅಧಿಕಾರಿ ಕಲ್ಕತ್ತದ ವಿಶ್ವವಿದ್ಯಾಲಯದಲ್ಲಿರುವ ಪದವೀಧರ ರಿಗೆ ಒಂದು ಬಹಿರಂಗ ಪತ್ರ ಬರೆದು “ಭಾರತೀಯರ ಸಾಮಾಜಿಕ, ನೈತಿಕ ಮತ್ತು ರಾಜಕೀಯ ಪುನರುದ್ಧಾರಕ್ಕೆ ಒಂದು ಸಂಘವನ್ನು ಸ್ಥಾಪಿಸಬೇಕೆಂದು ಕರೆಯಿತ್ತರು. ಇದಕ್ಕೆ ಭಾರತೀಯರ, ಆಂಗ್ಲಾಧಿಕಾರಿಗಳ ಬೆಂಬಲವಿತ್ತು. ೧೮೮೫ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಯಿತು. ಅದೇ ವರ್ಷದಲ್ಲಿ ಮುಂಬಾಯಿಯಲ್ಲಿ ಡಬ್ಲ್ಯೂ.ಸಿ. ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ಮೊದಲ ಅಧಿವೇಶನ ನಡೆಯಿತು. ಪ್ರಾರಂಭದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆ ಇದು ತೋರಿಸಿತ್ತು. ಆನಂತರ ಆವೆಲ್ಲವೂ ತದ್ವಿರುದ್ಧವಾದವು. ವಾರ್ಷಿಕಾಧಿವೇಶನ ಗಳನ್ನು ಇಂದಿನವರೆಗೂ ನಡೆಸಿಕೊಂಡು ಬಂದಿವೆ. ಅದರಲ್ಲಿ ಒಡಕುಂಟಾಗಿ ಮಂದಗಾಮಿ, ಉಗ್ರಗಾಮಿ ಮತ್ತು ಸ್ವರಾಜ್ಯ ಪಕ್ಷ ಇತರೆ ಘಟನೆಗಳು ಸಂಭವಿಸಿದ್ದುಂಟು. ಈ ಎಲ್ಲಾ ಘಟನೆಗಳು ನೇರವಾಗಿ ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಮೇಲೆ ನೇರವಾಗಿ ಪ್ರಭಾವ ಬೀರದಿದ್ದರೂ, ಪರೋಕ್ಷವಾಗಿ ಗಾಢವಾದ ಪರಿಣಾಮ ಬೀರಿರುವುದುಂಟು. ಬರಬರುತ್ತಾ ಬ್ರಿಟಿಷರು ಸಂಶಯತ್ಮಾಕ ದೃಷ್ಟಿಯಿಂದ ವಿರೋಧಿಗಳಾದರು.

೧೮೮೫ ರಿಂದ ೧೯೪೭ರ ವರೆಗಿನ ಸ್ವಾತಂತ್ರ್ಯ ಹೋರಾಟ

೧೮೮೫ರಲ್ಲಿ ಬಳ್ಳಾರಿ ಜಿಲ್ಲೆಯಿಂದ ಅನಂತಪುರ ಪ್ರತ್ಯೇಕವಾಯಿತು. ಇಲ್ಲಿನ ಭೌಗೋಳಿಕ ರೇಖೆ ಸಂಕ್ಷಿಪ್ತಗೊಂಡಿತು. ಪ್ಲೇಗು ಮತ್ತು ಬರಗಾಲಗಳಿಂದ ಜಿಲ್ಲೆಯ ಜನತೆ ಮನೆ ಮಠ ತೊರೆದು ವಲಸೆ ಜೀವನ ಪ್ರಾರಂಭಿಸಿದರು. ಅಂದು ಬಳ್ಳಾರಿ ಜಿಲ್ಲೆಯಲ್ಲಿ ಬಹುಸಂಖ್ಯಾತ ರೆಂದರೆ ಬೇಡರು, ಕುರುಬರು, ವೀರಶೈವರು, ಬ್ರಾಹ್ಮಣರು ಮತ್ತು ವಕೀಲರುಗಳು ಮಾತ್ರ ಕಾಂಗ್ರೆಸ್‌ನಲ್ಲಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿನಿಂದಲೂ ಬ್ರಾಹ್ಮಣ ಮತ್ತು ಬ್ರಾಹ್ಮಣೇ ತರ ಪರಿಷತ್ತುಗಳಿದ್ದವು. ಬ್ರಾಹ್ಮಣರು ಒಂದು ಪತ್ರಿಕೆಯನ್ನು ಪ್ರಕಟಿಸಿದರೆ, ಬ್ರಾಹ್ಮಣೇತರ ರಾದ ವೀರಶೈವರೊಂದು ಪತ್ರಿಕೆಯನ್ನು ಹೊರಡಿಸುತ್ತಿದ್ದರು.

[1] ಹೀಗಾಗಿ ಸಾಮಾನ್ಯ ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಕಡೆಗಣಿಸಿದರು.

ಒಮ್ಮೆ ಬಳ್ಳಾರಿಯಲ್ಲಿ ಸರಸ ವಿನೋದಿನಿ ಸಭಾ ನಾಟಕ, ಸಂಗೀತದಂಥ ಕಲೆಗಳಿಗೆ ಒಂದು ಸಂಸ್ಥೆ ಕಟ್ಟಿ ಅದರ ಉದ್ಘಾಟನೆಗೆ ೧೯೦೫ರಲ್ಲಿ ಬಾಲಗಂಗಾಧರ ತಿಲಕರನ್ನು ಕರೆಸ ಲಾಯಿತು. ಬಳ್ಳಾರಿಗೆ ಬಂದು ವಾಣಿವಿಲಾಸ ನಾಟಕ ಶಾಲೆಯಲ್ಲಿ ಮಾತನಾಡುತ್ತ ತಿಲಕರು “ವಿಜಯನಗರದ ಸಾಮ್ರಾಜ್ಯ ಸ್ಥಾಪನೆಯಿಂದ ನಮಗೆ ಬಹುಲಾಭವಾಯಿತು. ಪರಕೀಯರ ದಾಳಿಯಿಂದ ರಕ್ಷಣೆ ಪಡೆಯಲು ಯೋಗ್ಯ ಸಂಘಟನೆ ಆಯಿತು. ನಾವು ಇದರಿಂದ ಪಾಠ ಕಲಿಯಬೇಕು. ಜನ ಜಾಗೃತಿಯಾಗಿ ನಮ್ಮಲ್ಲಿ ಐಕ್ಯಮತ್ಯ ಮೂಡಿದರೆ ಮಾತ್ರ ಉದ್ದೇಶ ಸಾಧನೆಯಾದೀತು” ಎಂದು ಹೇಳಿದರು.[2] ಜನತೆಗೆ ಇವರ ಮಾತಿನಿಂದ ಹೊಸಜ್ಞಾನ, ಅರಿವು, ಬಯಕೆಗಳ ಸಂಚಾರವಾಯಿತು. ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಲೆಕ್ಟರ್ ಆರ್.ಸಿ.ಸಿ. ಕಾರ್ ಸಂಬಂಧಪಟ್ಟವರನ್ನು ಕರೆಸಿ, ನಿಮ್ಮ ಸಂಘದವತಿಯಿಂದ ಪ್ರಾರಂಭೋತ್ಸ ವೆಂದು ಸಾರ್ವಜನಿಕ ಭಾಷಣ ಏಕೆ ಮಾಡಿಸಿದಿರಿ ಎಂದು ಕೇಳಿದರು. ಹೀಗೆ ಬಳ್ಳಾರಿ ಜಿಲ್ಲೆ ಯಲ್ಲಿ ನಡೆದಂತಹ ಸ್ವಾತಂತ್ರ್ಯ ಹೋರಾಟಕ್ಕೆ ಕಲೆಕ್ಟರುಗಳು ನಿಷೇಧ ಮತ್ತು ಪ್ರತಿಬಂಧಿಕಾಜ್ಞೆ ಗಳನ್ನು ಜಾರಿಗೊಳಿಸಿದ್ದು ಪ್ರಮುಖ ಸಂಗತಿ.

೧೯೦೫ರಲ್ಲಿ ಬಂಗಾಳವನ್ನು ಇಬ್ಭಾಗಿಸಿದ ನಂತರ, ಭಾರತದಲ್ಲೆಲ್ಲಾ ಸ್ವದೇಶಿ ಚಳುವಳಿ ನಡೆಯಿತು. ಆಗ ಬಳ್ಳಾರಿ ಜಿಲ್ಲೆಯ ನಾಗರೀಕರಲ್ಲಿ ಸ್ವದೇಶಾಭಿಮಾನ ವ್ಯಾಪಕವಾಗಿ ಬೆಳೆದು, ಸಣ್ಣಪುಟ್ಟ ತೊಂದರೆ, ಗಲಭೆಗಳನ್ನು ನಡೆಸಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಕಲೆಕ್ಟರ್ ಬಿ.ಸಿ. ಸ್ಮಿತ್ ಅತೀ ಜಾಗೃತನಾಗಿ ಕಾರ್ಯ ನಿರ್ವಹಿಸಿದನು. ಅಂದು ಮೊದಲನೇ ಮಹಾಯುದ್ಧ ವಿಶ್ವದಲ್ಲಿ ಪ್ರಾರಂಭವಾಗಿತ್ತು. ಇದರಲ್ಲಿ ಭಾರತೀಯ ಸೈನಿಕರನ್ನು ಕಳುಹಿಸುತ್ತಾರೆ. ಮಹಾಯುದ್ಧದಲ್ಲಿ ಸೋತಂತಹ ಕೆಲವು ರಾಷ್ಟ್ರಗಳಲ್ಲಿ ಟರ್ಕಿಯು ಒಂದು. ೧೯೧೯ ನವೆಂಬರ್ ೧೯ರಂದು ಖಿಲಾಫತ್ ಚಳುವಳಿ ಆರಂಭವಾಯಿತು. ಇದರ ಪೂರ್ಣ ನೇತೃತ್ವ ಗಾಂಧೀಜಿಯವರದಾಗಿತ್ತು. ಈ ಚಳುವಳಿಯ ಮುಖ್ಯ ಉದ್ದೇಶ ಟರ್ಕಿ ಸುಲ್ತಾನ ಸೋತಾಗ ಅವಮಾನ ತಡೆಯಲಾರದ ಮುಸ್ಲಿಂ ರಾಷ್ಟ್ರಗಳು ಮತ್ತು ಸಮುದಾಯಗಳು ಒಂದೆಡೆ ಸೇರಿದವು. ‘ಖಿಲಾಫತ್’ ಎಂಬ ಗೌರವ ಬಿರುದು, ಪದವಿಗಳು ಮಣ್ಣು ಪಾಲಾದವು. ಹಾಗಾಗಿ ಅದನ್ನು ಪ್ರತಿಭಟಿಸಿ ಹಿಂದೂ ಮುಸ್ಲಿಂ ಐಕ್ಯಸಾಧನೆಗಾಗಿ ಬಳ್ಳಾರಿಗೆ, ಮಹಮದ್ ಅಲಿ ಮತ್ತು ಶೌಕತ್ ಅಲಿಯವರು ಬಂದಿದ್ದರು. ಟೌನ್‌ಹಾಲ್‌ನಲ್ಲಿ ಭಾಷಣ ಮಾಡಿ ಚಳುವಳಿ ನಡೆಸಲು ಪ್ರೋತ್ಸಾಹ ಮಾರ್ಗದರ್ಶನ, ಉತ್ತೇಜನ ನೀಡಿದರು. ಅವರು ಹೇಳಿದ್ದು: ಮಹಾಯುದ್ಧದಲ್ಲಿ ಸೋತಂತಹ ಟರ್ಕಿಸುಲ್ತಾನನ ಅಂತಸ್ತು, ಅಧಿಕಾರ ಮೊಟಕುಗೊಳಿಸ ಲಾಗಿದೆ. ಸುಲ್ತಾನನಿಗಿದ್ದ ‘ಖಿಲಾಫತ್’ ಬಿರುದು ಕಳೆದುಕೊಂಡಿದ್ದು ಎಲ್ಲಾ ಮುಸ್ಲಿಂ ಮತಕ್ಕೆ ಅವಮಾನ ಸಂಗತಿಯೆಂದು ಚಳುವಳಿಗೆ ಕರೆಕೊಟ್ಟರು.

ಆರಂಭದಲ್ಲಿಯೇ ಅಂದರೆ, ೧೯೨೦ ಆಗಸ್ಟ್ ೧ ರಂದು ಟಿ.ಬಿ. ಕೇಶವರಾಯರು ಬಳ್ಳಾರಿಯಲ್ಲಿ ಅಸಹಕಾರ ಚಳುವಳಿ ಕುರಿತಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು. ಬಾಲ ಗಂಗಾಧರ ತಿಲಕರ ಮರಣದ ನಿಮಿತ್ತ ಅವರ ಧೈರ್ಯ, ಸ್ಥೈರ್ಯ, ದೇಶಪ್ರೇಮವನ್ನು ಅನುಕರಣೆ ಮಾಡಲು ವಿದ್ಯಾರ್ಥಿಗಳಿಗೆ ವಿನಂತಿಸಿದರು. ೧೯೨೦ರ ದಶಕವನ್ನು ಅತೀ ಜಾಗೃತಿಯ ದಶಕವೆನ್ನಬಹುದು. ಅದೇ ವರ್ಷದಲ್ಲಿ ೧೯೨೦ ನಾಗಪುರ ಕಾಂಗ್ರೆಸ್ ಸಮ್ಮೇಳನ ದಲ್ಲಿ ಕರ್ನಾಟಕ ಕಾಂಗ್ರೆಸ್ ಸಮಿತಿಯನ್ನು ಅಧಿಕೃತವಾಗಿ ಪ್ರಾರಂಭಿಸಿದರು. ಬೆಳಗಾಂನ ಗಂಗಾಧರರಾವ್ ದೇಶಪಾಂಡೆಯವರು ಅದರ ಪ್ರಥಮ ಅಧ್ಯಕ್ಷರಾಗಿದ್ದರು.

ಆಗ ಬಳ್ಳಾರಿ ವಿಭಾಗದ ಪ್ರದೇಶದ ಕಾಂಗ್ರೆಸ್ ಸಂಸ್ಥೆಯಲ್ಲಿ ಒಗ್ಗಟ್ಟಿರಲಿಲ್ಲ. ಭಾಷಾ ವಿಭಾಗಗಳಿದ್ದವು. ಬಳ್ಳಾರಿ ನಗರ ಆಗ ದ್ವಿಭಾಷಾ ಸ್ಥಳವೆಂದು ಪ್ರಸಿದ್ದಿಯಾಗಿತ್ತು. ಇಲ್ಲಿ ಆದವಾನಿ ಅಚ್ಚಗನ್ನಡದ ಪ್ರದೇಶವಾಗಿತ್ತು. ಇದು ಹೋರಾಟದ ನೇತೃತ್ವ ವಹಿಸಿದ್ದಿತು. ಬಳ್ಳಾರಿ, ಹೊಸಪೇಟೆ ತಾಲ್ಲೂಕುಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಕನ್ನಡ ಸಂಘಗಳಿದ್ದವು. ೧೯೨೧ರಲ್ಲಿ ಮಹಾತ್ಮಗಾಂಧೀಜಿ ಬಳ್ಳಾರಿಗೆ ಸಂದರ್ಶಿಸಿದರು. ಆಗ ಜನರು ಕುತೂಹಲದಿಂದ ಅವರನ್ನು ಕಾಣಲು ಮುಂದಾಗಿದ್ದರು. ಬಳ್ಳಾರಿಯ ಮುಖ್ಯ ಬೀದಿಗಳನ್ನು ಅಲಂಕೃತಗೊಳಿಸ ಲಾಯಿತು. ಗಾಂಧೀಜಿ ಬಳ್ಳಾರಿಗೆ ಬಂದಾಗ ಎರಡು ಪಂಗಡದವರು ಕನ್ನಡ ಮತ್ತು ತೆಲುಗು ಸ್ವಾಗತಿಸಲು ಮುಂದಾದದ್ದು ಸ್ವಲ್ಪ ಗೊಂದಲಕ್ಕೆ ಕಾರಣವಾಯಿತು. ಅತಿರೇಕಕ್ಕೆ ಹೋದಾಗ ಗಾಂಧೀಜಿ ಆಲೋಚಿಸಿ “ನಾನು ಈ ದಿನ ರಾತ್ರಿ ರೈಲು ಪ್ಲಾಟ್ ಫಾರಂನಲ್ಲಿಯೇ ತಂಗುತ್ತೇನೆ” ಎಂದು ತೀರ್ಮಾನಿಸಿ ಬಿಟ್ಟರು.[3] ಗಾಂಧೀಜಿ ತಾನು ಧರಿಸಿದ ಧೋತಿಯನ್ನು ಪಂಚೆ ಹಾಸಿಗೆಯಾಗಿ ಮಾಡಿಕೊಂಡು ಒಂದು ಮಗು ನಿದ್ರಿಸುವಂತೆ ರಾತ್ರಿ ನಿದ್ರಿಸಿ ಕಾಲ ಕಳೆದರು. ಆನಂತರ ಬೆಳಗಿನ ಜಾವ ಬಳ್ಳಾರಿ ಬಿಟ್ಟು ಗದಗ, ಅಲ್ಲಿಂದ ಬೊಂಬಾಯಿ ಮೂಲಕ ಪ್ರಯಾಣಿಸಿ ತಮ್ಮ ಆಶ್ರಮ ತಲುಪಿ(ಶಬರಮತಿ)ದರು. ಕೆಲವು ದಿನಗಳಾದ ಮೇಲೆ ಟೇಕೂರು ಸುಬ್ರಹ್ಮಣ್ಯ ಗಾಂಧೀಜಿಯವರನ್ನು ಆಶ್ರಮದಲ್ಲಿ ಕಂಡಾಗ ಅವರು ಕುತೂಹಲದಿಂದ ಬಳ್ಳಾರಿಯ ಭಾಷಾ ಗುಂಪುಗಳ ವಿಚಾರ ಕೇಳಿದರು.

ಅಸಹಕಾರ ಚಳುವಳಿ ಬಳ್ಳಾರಿಯಲ್ಲಿ ಪ್ರಾರಂಭವಾದುದು ಮೊದಲು ಬುದ್ದಿಜೀವಿಗಳಿಂದ. ಸಾಹಿತಿ, ಕಲಾವಿದರು, ವಕೀಲರು, ಅಧಿಕಾರಿಗಳು, ಸರ್ಕಾರಿ ನೌಕರರು, ಇತರರು, ರಾಜೀನಾಮೆ ಕೊಟ್ಟು ಬೇರೆ ಬೇರೆ ಬಗೆಯಲ್ಲಿ ಈ ಚಳುವಳಿಯಲ್ಲಿ ಭಾಗವಹಿಸುತ್ತಾರೆ. ಕಾಂಗ್ರೆಸ್‌ನಲ್ಲಿದ್ದ ಮುಖ್ಯ ನಾಯಕರು ಸಾಮಾನ್ಯವಾಗಿ ಬ್ರಾಹ್ಮಣರಾಗಿದ್ದರು. ಹಾಗಾಗಿ ಇಲ್ಲಿ ಬ್ರಾಹ್ಮಣೇತರರಿಗೆ ಪ್ರತಿಭೆ ಇದ್ದರೂ ಅವಕಾಶಗಳಿಂದ ವಂಚಿತರಾಗಬೇಕಾಯಿತೆಂಬ ಕೊರಗಿದೆ. ಕಾಂಗ್ರೆಸ್‌ನಲ್ಲಿದ್ದ ಮುಖಂಡರೆಂದರೆ, ಬೆಳಗಾವಿಯಲ್ಲಿ ಕೃಷ್ಣರಾವ್, ಕೆರೆಗುಬ್ಬಿ ನಾರಾಯಣರಾವ್, ಜೋಶಿ, ಗಂಗಾಧರರಾವ್ ದೇಶಪಾಂಡೆ, ವಿಜಾಪುರದಲ್ಲಿ ಶ್ರೀನಿವಾಸ್ ಕೌಜಲಗಿ, ಜಯರಾಮ್ ನರಗುಂದ, ಹನುಮಂತರಾವ್ ಕೌಜಲಗಿ, ಮಂಗಳೂರಿನಲ್ಲಿ ಕಾರ್ನಾಡ್ ಸದಾಶಿವರಾವ್, ಕೆ.ಆರ್. ಕಾರಂತ್ ಧಾರವಾಡ. ಹೀಗೆ ಬಳ್ಳಾರಿಯಲ್ಲಿಯೂ ಸಹ ಹೆಚ್ಚು ಬ್ರಾಹ್ಮಣರು ಮುಂದಾಳುಗಳಾಗಿದ್ದರು. ಶ್ರಮಿಕ, ಮಹಿಳೆ, ಮುಸ್ಲಿಂ, ಕೆಳವರ್ಗದವರು ಭಾಗವಹಿಸಿದ್ದ ಉದಾಹರಣೆಗಳಿದ್ದು, ಬರಹಗಾರರು ಅಧ್ಯಯನದ ಸಂದರ್ಭದಲ್ಲಿ ಅವರನ್ನು ಅಲಕ್ಷಿಸಿದ್ದಾರೆ. ಈ ಅಧ್ಯಾಯನದ ಕೊನೆಯಲ್ಲಿ ಈ ಸಂಗತಿಗಳನ್ನು ಚರ್ಚಿಸಲಾಗಿದೆ.

೧೯೩೦ ಉಪ್ಪಿನ ಸತ್ಯಾಗ್ರಹ

ಈ ಭಾಗದಲ್ಲಿ ಉಪ್ಪಿನ ಸತ್ಯಾಗ್ರಹ ಮಾಡಿರುವುದು ಕಂಡುಬಂದಿದೆ. ಇದಕ್ಕೆ ಕಾರಣ ೧೮೩೬ರಲ್ಲಿ ಬ್ರಿಟಿಷ್ ಸರ್ಕಾರ ಉಪ್ಪಿನ ಆಯೋಗವನ್ನು ನೇಮಿಸಿತ್ತು. ಇಂಗ್ಲೆಂಡಿನ ಉಪ್ಪು ಭಾರತದಲ್ಲಿ ಮಾರಾಟವಾಗಲು ಸಾಧ್ಯವಾಗಬೇಕಾದರೆ, ಭಾರತೀಯ ಉಪ್ಪಿನ ಮೇಲೆ ತೆರಿಗೆ ವಿಧಿಸುವುದರ ಮೂಲಕ ಬೆಲೆ ಹೆಚ್ಚಿಸಬೇಕು. ಭಾರತಕ್ಕೆ ಇಂಗ್ಲೆಂಡ್ ರಫ್ತು ಮಾಡುತ್ತಿದ್ದ ಸರಕುಗಳಿಗೆ ಇಲ್ಲಿ ಬೇಕಾದಷ್ಟು ಹಡಗುಗಳಿದ್ದವು. ಭಾರತದಿಂದ ಇಂಗ್ಲೆಂಡಿಗೆ ತೆಗೆದುಕೊಂಡು ಹೋಗುತ್ತಿದ್ದ ಕಚ್ಚಾಸರಕುಗಳಿಗೆ ಹಡಗುಗಳು ಕಡಿಮೆ ಇದ್ದವು. ಇನ್ನೊಂದು ಅನುಕೂಲ ವೆಂದರೆ, ಖಾಲಿ ಹಡಗುಗಳು ಇಂಗ್ಲೆಂಡಿನಿಂದ ಭಾರತಕ್ಕೆ ಬರುವುದು ಕಷ್ಟವಾಗುತ್ತಿತ್ತು. ಖಾಲಿ ಹಡಗು ಸಂಚಾರ ಪ್ರಯಾಣದಲ್ಲಿ ಕಷ್ಟವಾಗುತ್ತಿತ್ತು. ಈ ಕಾರಣದಿಂದ ಬ್ರಿಟನ್ನಿನ ಚೆಷ್ಟರ್‌ನಲ್ಲಿ ಹೇರಳವಾಗಿ ಉಪ್ಪನ್ನು ಹಡಗುಗಳಿಗೆ ತುಂಬಿ ಕಳುಹಿಸುತ್ತಿದ್ದರು.

೧೯೩೦ ಮಾರ್ಚ್ ೧೨ ರಂದು ಉಪ್ಪಿನ ಮಳಿಗೆಗಳ ಮೇಲೆ ಲೂಟಿ ಮಾಡಿ ಸಬರಮತಿ ಯಿಂದ ೨೦೦ ಮೈಲಿ ದೂರದ ದಂಡಿಯಲ್ಲಿ ಸತ್ಯಾಗ್ರಹ ನಡೆಸಿದರು. ಆಗ ಏಪ್ರಿಲ್‌ನಲ್ಲಿ ದಂಡಿಸತ್ಯಾಗ್ರಹ ನಡೆಸಿದಾಗ ಬಳ್ಳಾರಿ, ಹೊಸಪೇಟೆ, ಕೊಟ್ಟೂರುಗಳಲ್ಲಿ ಮೆರವಣಿಗೆಗಳು ಪ್ರಾರಂಭವಾದವು. ಆಗ ವದ್ದಹಟ್ಟಿ, ಕೋಳೂರಿನಲ್ಲಿ ಸಾಂಕೇತಿಕ ಉಪ್ಪಿನ  ಸತ್ಯಾಗ್ರಹ ನಡೆಸಿದರು. ಆನಂತರ ಮಧ್ಯಪಾನ ನಿಷೇಧ ಸತ್ಯಾಗ್ರಹ ಪ್ರಾರಂಭವಾಯಿತು. ೨೩.೦೨. ೧೯೨೦ರಲ್ಲಿ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಭೆ ಸ್ಥಾಪನೆಯಾದ ನಂತರ ರೂಪುರೇಷೆಗಳು ಬೇರೆಯಾದವು. ೧೬.೦೩.೧೯೩೦ರಲ್ಲಿ ಶಾಸನ ಭಂಗಸಮಿತಿ ಸ್ಥಾಪನೆಯಿಂದ ಜಿಲ್ಲೆಯಾದ್ಯಂತ ಮಧ್ಯಪಾನ ನಿಷೇಧದ ಅಂಗವಾಗಿ ಈಚಲು ಮರಗಳನ್ನು ಕಡಿಯುವ ಕಾರ್ಯನೆರವೇರಿತು. ೧೯೩೦ರಲ್ಲಿ ಬಳ್ಳಾರಿಯ ಪಟೇಲ್ ನಗರದಲ್ಲಿ ಸ್ವಯಂ ಸೇವಕರಿಗೆ, ಟಿ. ಸುಬ್ರಹ್ಮಣ್ಯಂ ಕಾರ್ಯದರ್ಶಿಗಳಾಗಿ ಅಮಲು ವಸ್ತುಗಳ ಚಲಾವಣೆಯನ್ನು ನಿಷೇಧಿಸಿದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈ ನಿಷೇಧ ಜಾರಿಯಾಯಿತು. ಬಳ್ಳಾರಿಯಲ್ಲಿ ಸತ್ಯಾಗ್ರಹ ಶಿಬಿರ ಸ್ಥಾಪನೆಯ ನಂತರ, ಜಿಲ್ಲಾ ಧುರೀಣರಿಂದ ಸುಬ್ರಹ್ಮಣ್ಯಂರನ್ನು ಹರಪನಹಳ್ಳಿಗೆ ಆಹ್ವಾನಿಸಿ, ಕಂಚಿಕೆರೆಯಲ್ಲಿ ಈಚಲ ಗಿಡಗಳನ್ನು ಕಡಿಯಲು ನಿಶ್ಚಯಿಸಲಾಯಿತು. ಆಗ ಬಳ್ಳಾರಿ, ಕೊಟ್ಟೂರು, ಹರಪನಹಳ್ಳಿಗಳಲ್ಲಿ, ಸತ್ಯಾಗ್ರಹದ ಮುಖ್ಯ ಕೇಂದ್ರ ಸ್ಥಳಗಳಾಗಿದ್ದವು.[4] ೧೯೩೦-೩೨ರಲ್ಲಿ ಮಧ್ಯಪಾನ ನಿಷೇಧ ಚಳುವಳಿಯಲ್ಲಿ “ಕರ್ನಾಟಕ ಕೇಸರಿ” ಎನ್ನುವ ವಾರಪತ್ರಿಕೆಯನ್ನು ವಿ.ಎಂ. ಗಿರಿ, ಸುಬ್ರಹ್ಮಣ್ಯಂ ಪ್ರಕಟಿಸಿದರು. ೧೯೩೦ರ ನಂತರ ಕಾಂಗ್ರೆಸ್‌ಗೆ ವೀರಶೈವರನ್ನು ಸೇರಿಸಿಕೊಂಡರು. ಅವರುಗಳೆಂದರೆ, ಗುದ್ಲೆಪ್ಪ, ಸರದಾರ, ವೀರನಗೌಡ, ತಲ್ಲೂರು, ಎಂ.ಪಿ. ಪಾಟೀಲ, ಮಹದೇವಪ್ಪ ಮೈಲಾರ ಮತ್ತು ಬಳ್ಳಾರಿ ಸಿದ್ಧಮ್ಮ. ಮದ್ಯನಿಷೇಧದ ವಿರುದ್ಧ  ಇವರು ಹೋರಾಟ ನಡೆಸಿದರು.

ಹಡಗಲಿ, ಮಾಗಳ, ಕೊಟ್ಟೂರು, ಉಜ್ಜನಿ, ತೂಲಹಳ್ಳಿಗಳಲ್ಲಿ ಭರದಿಂದ ಸತ್ಯಾಗ್ರಹ ಚಳುವಳಿ  ನಡೆಯಿತು. ಕೊಟ್ಟೂರಿನ ಸಣ್ಣರುದ್ರಪ್ಪನ ನೇತೃತ್ವದಲ್ಲಿ ನಡೆದ ಚಳುವಳಿಯಲ್ಲಿ ಒಂದೇ ದಿನ ಈಚಲು ಗಿಡ ಕಡಿದ ಆರೋಪಕ್ಕಾಗಿ ೨೫ ಜನರು ಬಂಧಿತರಾದರು.[5] ಟಿ.ಬಿ. ಕೇಶವರಾಯರು ಹರಪನಹಳ್ಳಿ ತಾಲ್ಲೂಕಿನ ಪ್ರತಿಹಳ್ಳಿಗೂ ಪ್ರಚಾರ ಮಾಡಿ ೧೯೩೦-೩೧ರ ಸಾಲಿನಲ್ಲಿ ಮದ್ಯದಂಗಡಿಗಳ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಶೇ. ೫೦ರಷ್ಟು ಹಣ ಲಭ್ಯವಾಯಿತೆಂದು ಮತ್ತು ಬಳ್ಳಾರಿಯಲ್ಲಿ ನಡೆದ ಪಿಕೆಟಿಂಗ್ ಚಳುವಳಿ ಉಗ್ರರೂಪ ಕೆರಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಹೆಂಡ, ಸರಾಯಿ, ಅಂಗಡಿಗಳಿಗೆ ಬೆಂಕಿ ಇಟ್ಟಿದ್ದಕ್ಕಾಗಿ ಹುಲಿಕೇರಿ ಬಸಪ್ಪನನ್ನು ಸೆರೆಮನೆಗೆ ಹಾಕಿದರು. ಅಲ್ಲಿ ಕಲೆಕ್ಟರನ ಆದೇಶದಂತೆ ಅಧಿಕಾರಿ ಬೂಟುಕಾಲಿನಿಂದ ಈತನ ಕಾಲನ್ನು ತುಳಿದಾಗ ಗಾಯವಾಗಿ ಕಾಲಲ್ಲಿ ರಕ್ತ ಬಂದಿತ್ತು. ಆಗ ಸೆರೆಮನೆಗೆ ಹೋಗುವುದೆಂದರೆ ಇಂಥವರಿಗೆ ಎಲ್ಲಿಲ್ಲದ ಸಂತೋಷ. ಸ್ನೇಹಿತರಿಗೆ ಔತಣಕೂಟ ಏರ್ಪಡಿಸಿ ಅನಂತರ ಸೆರೆಮನೆಗೆ ಹೋಗುತ್ತಿದ್ದರಂತೆ. ಈ ಸಂದರ್ಭದಲ್ಲಿ ಅಪರಾಧಗಳು ಸರಳವಾಗಿದ್ದವು. ಮೈಲಿಕಲ್ಲು ಹೊಡೆಯುವುದು, ರಸ್ತೆ ಮತ್ತು ಸೇತುವೆಗಳನ್ನು ಜಖಂ ಮಾಡಿದ್ದು ಬ್ರಿಟಿಷರ ವಿರುದ್ಧ ಸೇಡಿನ ಕೃತ್ಯಗಳಾಗಿದ್ದವು. ಇವು ದೇಶಪ್ರೇಮದಿಂದ ಕೂಡಿದ ಘಟನೆಗಳಾಗಿವೆ.

ಬಳ್ಳಾರಿಯಲ್ಲಿ ಸತ್ಯಾಗ್ರಹಕ್ಕೆ ಪೂರ್ವಸಿದ್ಧತೆ ನಡೆಸಿ ಮಧ್ಯಪಾನ ಅಂಗಡಿಗಳ ಬಹಿಷ್ಕಾರಕ್ಕಾಗಿ ಪಿಕೆಟಿಂಗ್ ಮಾಡಿದರು. ೧೯೩೦ ಆಗಸ್ಟ್ ೯ನೇ ದಿವಸ ವಿ.ಎಂ. ಗಿರಿ ಮತ್ತು ಸಿದ್ಧಪ್ಪ ಇವರನ್ನು ಹೆಂಡದಿಂದ ಸ್ನಾನ ಮಾಡಿಸಿದ ಘಟನೆಯನ್ನು ಸ್ಮರಿಸಬಹುದು.[6] ಇದಾದನಂತರ ಗಾಂಧೀಜಿಯ ಆದರ್ಶಗಳನ್ವಯ ಸತ್ಯಾಗ್ರಹಕ್ಕೆ ಹೊಸಚಾಲನೆ ಸಿಕ್ಕಿತು. ‘ಕುಡುಕರ ಕಾಲಿಗೆ ಬಿದ್ದು ಕುಡಿಯಬೇಡಿರಿ’ ಎಂಬ ಅಹಿಂಸಾತ್ಮಕ ಮತ್ತು ಸೂಚಿತ ಪದ್ಧತಿಯನ್ನು ಅನುಸರಿಸ ಲಾಯಿತು. ೧೯೩೨ರ ಆಂದೋಲನದಲ್ಲಿ ಆಂಗ್ಲರ ಒಡೆದು ಆಳುವ ನೀತಿಯನ್ನು ವಿರೋಧಿಸಿ, ಅನೇಕ ಹೋರಾಟಗಾರರು ಉಪವಾಸ ಸತ್ಯಾಗ್ರಹ ಮಾಡಿದರು. ಆಗ ಭಾರತದಲ್ಲಿ ವೈಸರಾಯ್ ವೆಲ್ಲಿಂಗಟನ್ ಆಗಿದ್ದನು. ಬಳ್ಳಾರಿಯ ಕಲೆಕ್ಟರ್ ಎಫ್. ಡಬ್ಲ್ಯೂ, ಸ್ಟೇವರ್ಟ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ನಾಯಿಗಳಿಗಿಂತ ಕಡಿಮೆಯಾಗಿ ದುರ್ನೀತಿ ಗಳನ್ನು ಅನುಸರಿಸಿದರು. ಆಂಗ್ಲರ ಆಡಳಿತವನ್ನು ಖಂಡಿಸಿ ಅನಧಿಕೃತ ಸಾಹಿತ್ಯ ಹಂಚಿ ಲಕ್ಷ್ಮಿದೇವಿ, ಟಿ.ಬಿ. ಜಯಲಕ್ಷ್ಮಿದೇವಿ ಬಂಧಿಸಲ್ಪಟ್ಟರು. ಜನರಿಗೆ ಶಿಸ್ತು, ಶಾಂತಿ, ಸಂಸ್ಕೃತಿ ಹೇಳುತ್ತಾ ಆಂಧ್ರ ಕರ್ನಾಟಕ ಭಾಗದ ಜನರೆಲ್ಲರೂ ಮದ್ಯವನ್ನು ವಿರೋಧಿಸಿದರು. ೧೯೩೨ರಂದು ಆಗಸ್ಟ್ ೧೯ರಂದು ೧೪೪ ಕಾಲಂ ಇದ್ದರೂ ಹೋರಾಟಗಾರರು ಗಲಾಟೆ ಮಾಡಿ, ಸರ್ಕಾರದ ಆಜ್ಞೆಗಳನ್ನು ಗಾಳಿಗೆ ತೂರಿದರು. ಅಂದು ರಾಷ್ಟ್ರಧ್ವಜವನ್ನು ಹಾರಿಸಿದಾಗ ಕಲೆಕ್ಟರ್ ಬಂಧಿಸಿದರು.

ಲಾಹೋರ್ ಮೊಕದ್ದಮೆಗೆ ಸಂಬಂಧಿಸಿದಂತೆ ಡಾ. ಗಯಾಪ್ರಸಾದ, ಶ್ರೀ ಮಹಾವೀರ ಸಿಂಹನನ್ನು ಬಳ್ಳಾರಿ ಸೆರೆಮನೆಗೆ ತಂದರು. ಅಲ್ಲಿಂದ ಬಂದ ಖೈದಿಗಳನ್ನು ಕ್ಲೋಸ್‌ಪ್ರಿಸನ್‌ಗೆ ಹಾಕುತ್ತಿದ್ದರು. ‘ಇಂಕ್ವಿಲಾಬ್ ಜಿಂದಾಬಾದ್ ಲಾಂಗ್‌ಲಿವ್ ರೆವಲ್ಯುಷನ್’ ಎಂದು ಘೋಷಣೆ ಕೂಗುತ್ತಾ, ಗಾಂಧೀಜಿಕೀ ಜೈ ಎನ್ನುತ್ತಿದ್ದರು. ೧೯.೯.೧೯೩೨ರಂದು ಸೆರೆಮನೆ ಯಲ್ಲಿ ಡೆಪ್ಯುಟಿ ಜೈಲರ್, ಗುಮಾಸ್ತರೂ, ರಿಸರ್ವ್ ಸಹಾಯದಿಂದ ಬಾಲಕರು, ವೃದ್ಧರು, ರೋಗಿಗಳು ಎಂಬ ವಿವೇಚನೆಯಿಲ್ಲದೆ ಲಾಠೀ ಪ್ರಹಾರ ಮಾಡಿದರು. ಆಗ ಶಾಸನಭಂಗ ಚಳುವಳಿ ಮಾಡಿದ್ದಕ್ಕಾಗಿ ಹೊಸಪೇಟೆಯಲ್ಲಿ ಜಯಲಕ್ಷ್ಮೀಬಾಯಿಯವರನ್ನು ಬಂಧಿಸಿದ್ದರು. ೧೯೩೩ರ ರಾಜಕೀಯ ಕಾರ್ಯಕರ್ತರ ಸಮ್ಮೇಳನ ಕೊಟ್ಟೂರಿನಲ್ಲಿ ಸಮಾವೇಶಗೊಳಿಸಿದ್ದರು.[7] ೧೯೩೪ರಲ್ಲಿ ಗಾಂಧೀಜಿ ದಾವಣಗೆರೆಯಲ್ಲಿ ಹರಿಜನ ಪ್ರವಾಸ ಕಾರ್ಯಕ್ರಮ ಮುಗಿಸಿಕೊಂಡು (ಜಿಲ್ಲೆಯ ಸಾಹುಕಾರ ಬೆಣಕಲ್ ಈಶ್ವರಪ್ಪ ಹೊಸಕಾರನ್ನು ತಂದಿದ್ದರಲ್ಲದೆ ಗಾಂಧೀಜಿಯ ಆಗಮನಕ್ಕಾಗಿ ದಾವಣಗೆರೆಗೆ ಕಳುಹಿಸಿದರು), ಅವರನ್ನು ನೀಲಗುಂದ ಮಾರ್ಗ ವಾಗಿ ಹರಪನಹಳ್ಳಿಗೆ ಕರೆತಂದರು. ಅಲ್ಲಿ ಹರಿಜನ ನಿಧಿಗೆ ಹಣ ಸಂಗ್ರಹಿಸಿ ಮುಂದುವರೆದು ಮಧ್ಯದಲ್ಲಿ ಚಿಗಟೇರಿ ಜನರು ಕರೆದಾಗ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ಗಾಂಧೀಜಿ ಹೋಗಲಿಲ್ಲ. ೧೯೩೪ರ ಮಾರ್ಚ್ ಮಧ್ಯಾಹ್ನ ೩.೩೦ರಲ್ಲಿ ಕೊಟ್ಟೂರಿನ ಚರಿತ್ರೆಯಲ್ಲಿ ಮರೆಯಲಾಗದ ದಿನ. ಗಾಂಧೀಜಿಯವರ ಸಂದರ್ಶನ ಇಲ್ಲಿನ ಸೇವಾಶ್ರಮಕ್ಕೆ ಕೋಗಳಿಯ ತೋಟದಗೌಡರು ಕೊಟ್ಟೂರಿನಲ್ಲಿದ್ದ ೮ ಎಕರೆ ತೋಟವನ್ನು ದಾನ ಮಾಡಿದನು.

ನಂತರ ಗಾಂಧೀಜಿ ಅಲ್ಲಿ ಹರಿಜನ ಎಂದರೆ ಹರಜನ. ನನಗೆ ಹರಿಜನ ಶಬ್ದ ಅಷ್ಟಾಗಿ ಸರಿಬರುವುದಿಲ್ಲ ಎಂದು ತಿಳಿಸಲಾಯಿತು. ಕೊಟ್ಟೂರಿನಲ್ಲಿ ಜಾತ್ರೆ ಮತ್ತು ತೇರು ಆಗುತ್ತಿದ್ದಾಗ ವಿಶಾಲವಾದ ಬಜಾರಿನಲ್ಲಿ ನಿಂತಿದ್ದ ಮಹಿಳೆ ಗಾಂಧೀಜಿಗೆ ತನ್ನೆರಡು ಬಂಗಾರದ ಬಳೆಗಳನ್ನು  ಹರಿಜನ ನಿಧಿಗೆ ದಾನ ಮಾಡಿದಳು. ನಂತರ ಕೂಡ್ಲಿಗಿಗೆ ಬಂದರು. ಹಿಂದೂ ಮುಸ್ಲಿಂ ಐಕ್ಯತೆಯಿಲ್ಲದ ಸ್ವರಾಜ್ಯ ಇಲ್ಲ ಎಂದು ಒಪ್ಪಿಕೊಳ್ಳುವುದಾದರೆ, ಹಿಂದೂ ಧರ್ಮಕ್ಕೆ ಖಂಡಿತ ಕಳಂಕವಾದ ಅಸ್ಪೃಶ್ಯತೆಯನ್ನು ತೊಡೆದು ಹಾಕುವವರೆಗೂ ಸ್ವರಾಜ್ಯವಿಲ್ಲ ನನ್ನ ಸಂಪೂರ್ಣ ಒಪ್ಪಿಗೆಯುಂಟು ಎಂದರು.[8] ಅಲ್ಲಿ ನಿಧಿ ಸಂಗ್ರಹಿಸಿ ಗಾಂಧೀಜಿ ಸೊಂಡೂರಿಗೆ ಪ್ರಯಾಣಿಸಿ ದರು. ಅಲ್ಲಿ ಗಾಂಧೀಜಿಗೆ ರಾಜಮರ್ಯಾದೆ, ಸನ್ಮಾನ ದೊರೆಯಿತು. ಕುಮಾರಸ್ವಾಮಿ ದೇವಾಲಯವನ್ನು ಹರಿಜನರಿಗೆ ತೆರೆಯಲಾಯಿತು. ರಾಜ ಸುತ್ತೋಲೆ ಹೊರಡಿಸಿ ಸಂಸ್ಥಾನದ ಎಲ್ಲಾ ದೇವಸ್ಥಾನಗಳಿಗೆ ಎಲ್ಲಾ ಜನರಿಗೂ ಮುಕ್ತ ಪ್ರವೇಶ ತಿಳಿಸಿದರು. ಗಾಂಧಿ ಅಸ್ಪೃಶ್ಯತಾ ನಿವಾರಣೆಯ ಕೆಲಸದಿಂದ ನನಗೆ ಸಂತೋಷ ಆಗಿದೆ. ಅಸ್ಪೃಶ್ಯತಾ ನಿವಾರಣೆ ಮಾಡದಿದ್ದರೆ ಜಗತ್ತಿನಲ್ಲಿರುವುದು ನಮಗೆ ಕಷ್ಟವಾಗುತ್ತದೆ.[9] ತರುವಾಯ ಅಲ್ಲಿಯೂ ಡಾ. ಷರಾಫ್‌ರ ಗೃಹದಲ್ಲಿ ವಿಶ್ರಾಂತಿ ಪಡೆದರು. ಸಂಸ್ಥಾನದ ಚಾರಿತ್ರಿಕ ಮಹತ್ವವನ್ನು ಅರಿತು Sandur is an Oasis in the region ಎಂದು ಹರ್ಷದಿಂದ ಕೊಂಡಾಡಿದ್ದರು. ಸ್ವಯಂ ಸೇವಕರು ಗಾಂಧಿಯನ್ನು ಬಳ್ಳಾರಿಗೆ ಕರೆತಂದು ಸುಮಾರು ೫,೩೦೦ ರೂ. ಹರಿಜನ ನಿಧಿಗೆ ಕೊಟ್ಟರು. ‘ಇಲ್ಲಿಂದ ಹೊಸಪೇಟೆ ಮೂಲಕ ಗದಗ ತಲುಪಿದರು. ಗಾಂಧೀಜಿಗೆ ಹೊಸಕಾರನ್ನು ಬಳಸಿ ಸಹಕರಿಸಿದ ಬನ್ನಿಕಲ್ ವೀರಾಪುರದ ಈಶ್ವರಪ್ಪನವರಿಗೆ ಗಾಂಧೀ ಸಹಿ ಮಾಡಿದ ಪತ್ರ ಕಳುಹಿಸಿದರು’.[10]

ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಷಟ್ ಶತಮಾನೋತ್ಸವವನ್ನು ನಡೆಸಿದರು. ಉತ್ಸವದಲ್ಲಿ, ಶಾಲಾ ತರುಣರು, ಸ್ವಯಂ ಸೇವಕರು ಪ್ರಚಾರ ಕೈಗೊಂಡರು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಚಿಂತಿಸಿ ಹಿಂದಿನ ಚಾರಿತ್ರಿಕ ಘಟನೆಗಳನ್ನು ಮೆಲುಕು ಹಾಕಿದರು. ೧೯೩೭ರಲ್ಲಿ ಬಳ್ಳಾರಿ ಜಿಲ್ಲೆ ಬಣಜಾರ ಸಭೆಯನ್ನು ಹರಪನಹಳ್ಳಿಯಲ್ಲಿ ಜರುಗಿಸಿ, ಅಧ್ಯಕ್ಷತೆ ಹೊಸಪೇಟೆ ಸಬ್ ಕಲೆಕ್ಟರ್ ಉಣಿಕಾನ್ ವಹಿಸಿದ್ದರು.

೧೯೩೭ರಲ್ಲಿ ಪ್ರಾಂತ್ಯಗಳಲ್ಲಿ ಶಾಸನಸಭೆಗೆ ಸೀತಾರಾಮರೆಡ್ಡಿಯನ್ನು ಆಯ್ಕೆ ಮಾಡಿದರು. ಆ ಸಂದರ್ಭದಲ್ಲಿ ಎಸ್. ನಿಜಲಿಂಗಪ್ಪ ಬಳ್ಳಾರಿಯಲ್ಲಿ ಆಜಾದ್ ಕ್ಲಬ್‌ನ್ನು ಉದ್ಘಾಟಿಸುತ್ತಾ ಗಾಂಧೀ ಮತ್ತು ಕಾಂಗ್ರೆಸ್‌ನ ರೂಪುರೇಷೆಗಳನ್ನು ಜನರಿಗೆ ವಿವರಿಸಿದರು. ಅನಂತರ ಕನ್ನಡ ಗೆಳೆಯರ ಗುಂಪಿನ ಬೇಡಿಕೆಗಳಲ್ಲಿ ಮುಖ್ಯವಾದದು. ೧೯೩೯ ಜುಲೈ ೧೫ ರಂದು ಸಾಂಬ ಮೂರ್ತಿ ಮೈದಾನದಲ್ಲಿ ‘ಫಾರ್ವರ್ಡ ಬ್ಲಾಕ್’ನ್ನು ರಚಿಸಲು ಸುಭಾಷ್ ಚಂದ್ರಬೋಸ್‌ರನ್ನು ಆಹ್ವಾನಿಸಿದರು ಅವರು ಬರಲಿಲ್ಲ.[11] ವೈಯಕ್ತಿಕ ಸತ್ಯಾಗ್ರಹದಲ್ಲಿ ಸಾವಿರಾರು ಜನ ಸೆರೆಮನೆ ವಾಸ (೧೯೪೦-೪೧ರಲ್ಲಿ) ಕಂಡರು. ಪ್ರಚಾರ ಕಾರ್ಯ, ಸತ್ಯಾಗ್ರಹದಲ್ಲಿ ತೊಡಗಿದ್ದ ಬಳ್ಳಾರಿಯ ವಕೀಲ ನಾಗಭೂಷಣಂ, ಆಲೂರಿನ ವೆಂಕಟೇಶರಾವ್ ಮತ್ತು ಕೊಟ್ಟೂರಿನ ದೇವೇಂದ್ರಪ್ಪನವರನ್ನು ಟೌನ್, ನ್ಯೂಸನ್ಸ ಆ್ಯಕ್ಟ್ ಪ್ರಕಾರ ಧಾರವಾಡ ಮತ್ತು ಗದಗಗಳಲ್ಲಿ ಬಂಧಿಸಿದರು.

೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿ

ಬಳ್ಳಾರಿ ಜಿಲ್ಲೆಯಲ್ಲಿ ನಡೆದಂತಹ ಸ್ವಾತಂತ್ರ್ಯ ಹೋರಾಟದ ಘಟನೆಗಳಲ್ಲಿ ಇದು ನಿರ್ಣಾಯಕವಾದುದು. ೧೯೦೫ರ ಬಂಗಾಳದ ವಿಭಜನೆ, ೧೯೦೯ ಮಾರ್ಲೆ ಮಿಂಟೋ ಸುಧಾರಣೆ, ಮೊದಲನೆ ಮಹಾಯುದ್ಧದಲ್ಲಾದ ಪರಿಣಾಮ, ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಸೈಮನ್ ಕಮೀಷನ್ ಹೀಗೆ ಸಣ್ಣಪುಟ್ಟ ಘಟನೆಗಳು ನಡೆದು ಅದರಿಂದ ಪರಿಣಾಮಗಳನ್ನು ಅರಿತು ಮುನ್ನುಗ್ಗಲು ಚೇತರಿಸಿಕೊಂಡರು. ೧೯೪೨ರ ಆಗಸ್ಟ್ ೮ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾಸಭೆಯ ತೀರ್ಮಾನದ ನಂತರ ಈ ಮಧ್ಯರಾತ್ರಿಯಿಂದಲೇ ಇಡೀ ಭಯಂಕರ ದಬ್ಬಾಳಿಕೆ ಅತ್ಯಾಚಾರಗಳು ಆರಂಭವಾದವು.[12] ಗಾಂಧೀ ಕರೆಗೆ ಓಗೊಟ್ಟು ಈ ಭಾಗದಲ್ಲಿ ಜನ ಜಾಗೃತಿಗೊಂಡರು. ಬಳ್ಳಾರಿ ಜಿಲ್ಲೆಯಲ್ಲಿ ೧೯೪೨ ಆಗಸ್ಟ್ ೩ರಂದೇ ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಂದು ಹಳ್ಳಿಗೂ ಸಂಚರಿಸಿ ಜನತೆಯಲ್ಲಿ ಜಾಗೃತಿ ತುಂಬಿ ಬ್ರಿಟಿಷರು ಭಾರತ ಬಿಟ್ಟು ತೊಲಗಲಿ ಎಂದು ಜಿಲ್ಲಾ ಜನತೆಯಲ್ಲಿ ಬೆಂಬಲ ಸೂಚಿಸಿ ಚಳುವಳಿ ನಡೆಸಲು ಸಿದ್ದರಾದರು.

ಈ ಸಂದರ್ಭದಲ್ಲಿ ಬಳ್ಳಾರಿಯ ಕಲೆಕ್ಟರ್ ಐ.ಎಂ. ಫ್ರಾಸರ್ ಇದ್ದರು. ಇವನು ಅನು ಸರಿಸಿದ ನೀತಿಗಳಿಂದ ೧೯೪೩ರಲ್ಲಿ ವರ್ಗಾಯಿಸಲಾಯಿತು. ನಿರ್ದಾಕ್ಷಿಣ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಸೆರೆಮನೆಗೆ ತಳ್ಳುತ್ತಿದ್ದನು. ಬಳ್ಳಾರಿ ಭಾಗದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದುದು ಮೊದಲು ಗ್ರಾಮಮಟ್ಟದಲ್ಲಿ, ಉಜ್ಜನಿ, ತೂಲಹಳ್ಳಿ, ಆಲೂರು, ಚಿಕ್ಕಜೋಗಿಹಳ್ಳಿ, ಕಮಲಾಪುರ ಮತ್ತು ದರೋಜಿ ಉಲ್ಲೇಖಾರ್ಹ. ಹೊಸಪೇಟೆ ಯಲ್ಲಿ ತಿರುಮಲರಾವ್, ಶಿವದೇಸಾಯಿ, ಗಣಪತಿ ಮತ್ತು ಬೆಲ್ಲದ ಚೆನ್ನಪ್ಪನವರು ಭಾಗ ವಹಿಸಿದ್ದರು. ಕೊಟ್ಟೂರಿನಲ್ಲಿ ಗುರುಲಿಂಗಪ್ಪ, ಶರಣಪ್ಪ ಮತ್ತು ನಂಜಪ್ಪ ಕ್ವಿಟ್ ಇಂಡಿಯಾ ಚಳುವಳಿ ನಡೆಸಿದ್ದರು. ನಂತರ ಹರಪನಹಳ್ಳಿಯಲ್ಲಿ ಶಿರಸಪ್ಪನವರ ಮುಖಂಡತ್ವದಲ್ಲಿ ಆರಂಭವಾಯಿತು. ಅನಂತಶಯನಗುಡಿ, ಮಾದಿಹಳ್ಳಿ, ಆದವಾನಿ, ಕಲ್ಲುದೇವನಕುಂಟಿ ಮತ್ತು ಇತರೆಡೆಗಳಲ್ಲಿ ಚಳುವಳಿ ಪ್ರಾರಂಭವಾಯಿತು. ೧೯೪೨ ಸೆಪ್ಟೆಂಬರ್ ೧೪ರಂದು ಅಲ್ಲೀಪುರ ಸೆರೆಮನೆಯಲ್ಲಿ ಲಾಠೀ ಪ್ರಹಾರವಾಯಿತು. ಅಲ್ಲಿದ್ದ ‘ಹೌ’ ಎನ್ನು ಅಧೀಕ್ಷಕ, ಸರ್ಕಾರದ ರಿಸರ್ವ ಪೋಲಿಸರೂ, ಸಿಪಾಯಿಗಳು ಸೇರಿ ಸುಮಾರು ೩೦೦ ಜನರನ್ನು ಲಾಠಿ ಗಳಿಂದ ಹೊಡೆದು ತಾವೇ ದಣಿದರು. ಅನೇಕರಿಗೆ ಗಾಯಗಳಾಗಿ, ಅಪಾಯಗಳು ಸಂಭವಿಸಿ ದ್ದವು. ಆಗ ಸೆರೆಮನೆಗೆ ಬಂದಿದ್ದ ಪ್ರಮುಖರೆಂದರೆ ರಾಜಗೋಪಾಲಾಚಾರಿ, ಕಾಮರಾಜ ನಾಯರ್, ಪೊಟ್ಟಿ ಶ್ರೀರಾಮುಲು, ಪೆರಿಯಾರ, ನೀಲಂ ಸಂಜೀವರೆಡ್ಡಿ ಮತ್ತು ಕಲ್ಲೂರು ಸುಬ್ಬರಾವ್ ಈ ರೀತಿ ೩೦೦ ಜನ ೧೮ ಬ್ಲಾಕುಗಳಲ್ಲಿದ್ದರು.[13] ಬಳ್ಳಾರಿ ಜಿಲ್ಲೆಯ ಪೂರ್ವ ಭಾಗದಲ್ಲಿನ ಗೌಡ, ಶಾನುಭೋಗ ಮತ್ತು ತಳವಾರ, ಗ್ರಾಮಾಧಿಕಾರಿಗಳು ರಾಜೀನಾಮೆ ಕೊಟ್ಟರು. ಒಟ್ಟು ೧೯೪೨ರ ಚಳುವಳಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರನ್ನು ವೆಲ್ಲೂರು, ತಂಜಾವೂರು ಜೈಲುಗಳಿಗೂ ಕಳುಹಿಸಲಾಯಿತು.

ಬಳ್ಳಾರಿ ಪಟ್ಟಣದಲ್ಲಿ ೧೯೪೨ ಆಗಸ್ಟ್ ೯ ರಂದು ‘ಮಾಡು ಇಲ್ಲವೇ ಮಡಿ’ ಠರಾವು ಗಳನ್ನು ಹೊರಡಿಸಿ, ಚಳುವಳಿಯು ಉಗ್ರರೂಪಕ್ಕೆ ತಲುಪಲು ಕಾರಣವಾಯಿತು. ಅಂದು ಅಂಚೆ, ತಂತಿಯನ್ನು ಕತ್ತರಿಸಿದರು. ರೈಲ್ವೆ ನಿಲ್ದಾಣವನ್ನು ಸುಟ್ಟು, ಖಜಾನೆ ಲೂಟಿ ಮಾಡಿ ದರು. ಈ ಕಾರಣದಿಂದ ಬ್ರಿಟಿಷ್ ಕಲೆಕ್ಟರ್ ಇಲ್ಲಿನ ಪ್ರಮುಖರನ್ನು ಸೆರೆಮನೆಗೆ ತಳ್ಳಿ ಸ್ಥಾನಪದ್ಧತೆಯಲ್ಲಿಟ್ಟನು. ಆಗ ಆಸ್ತಿಪಾಸ್ತಿಗಳು ನಾಶವಾಗಿದ್ದು ಗಮನಾರ್ಹ. ತೂಲಹಳ್ಳಿ, ಕಂಚಿಕೆರೆ, ಕುರುಗೋಡು, ಕಲ್ಲುದೇವನಕುಂಟೆ, ಮಾಗಳದಲ್ಲಿ ಗ್ರಾಮಮಟ್ಟದಲ್ಲಿ ಚಳುವಳಿ ನಡೆಯಿತು. ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಅಂಚೆಯನ್ನು ತಡೆದು ಚೀಲವನ್ನು ಸುಟ್ಟರು. ಇದೇ ರೀತಿ ಅನಂತಪುರದ ಕಾಲೇಜು ಆರ್ಸನ್ ಕೇಸು ಸಹ. ಅರಸನಾಳು ಕೊಟ್ರೇಗೌಡ, ಅಬಲೂರು ನಂಜಪ್ಪ, ಕೋ.ಚೆನ್ನಬಸಪ್ಪನವರು ಪದವಿ ವ್ಯಾಸಂಗ ಮಾಡುತ್ತಿ ದ್ದರು. ೧೯೪೨ರಲ್ಲಿ ಕಾಲೇಜಿನ ಪ್ರಯೋಗಾಲಯಕ್ಕೆ ಬೆಂಕಿ ಹಚ್ಚಿದರಲ್ಲದೆ, ವಿದ್ಯಾರ್ಥಿಗಳನ್ನು ಸಂಘಟಿಸಿ ಚಳುವಳಿ ನಡೆಸಲು ಮುಂದಾದರು. ಆದರೆ ಅವರನ್ನು ಬಿಡಲಿಲ್ಲ. ಅಲ್ಲೀಪುರ, ವೆಲ್ಲೂರು ಸೆರೆಮನೆಗಳಿಗೆ ಕಳುಹಿಸಲಾಯಿತು. ಅವರಿಗೆ ಅಂದಿನಿಂದ ‘ತ್ರಿಮಿಸ್ಕಟೀಯರ್ಸ್‌’ ಎನ್ನುತ್ತಾರೆ ಎಂದು ಅನೇಕ ಲೇಖಕರು ತಿಳಿಸಿದ್ದಾರೆ (ಕೋ. ಚೆನ್ನಬಸಪ್ಪನವರನ್ನು ಭೇಟಿ ಮಾಡಿದಾಗ ನಮ್ಮ ಕಾಲೇಜಿನಲ್ಲಿ ಯಾರೋ ಮಾಡಿರಬಹುದು, ನಾನು ಇದರಲ್ಲಿ ಭಾಗವಹಿಸಿ ರಲಿಲ್ಲ ಎನ್ನುತ್ತಾರೆ).

ಸ್ವಾತಂತ್ರ್ಯ ಹೋರಾಟದಲ್ಲಿ ಕಂಡುಕೊಂಡ ಕೆಲವು ಅಂಶಗಳೆಂದರೆ ಬಳ್ಳಾರಿ ಜಿಲ್ಲೆಯ ಸಾಮಾನ್ಯ ಜನರನ್ನು ಚಿತ್ರಿಸುವಲ್ಲಿ ಅಲಕ್ಷಿಸಲಾಗಿದೆ. ಇದು ಮೇಲ್ವರ್ಗದವರ ಹೋರಾಟ ವಾಗಿದ್ದು ಕೆಳವರ್ಗಗಳ ಕಲ್ಪನೆ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಇಮಾಂಸಾಬ್, ಅಕ್ಬರ್ ಸಾಹೇಬ್, ಹುಸೇನಪ್ಪ ಎಂಬ ಮುಸ್ಲಿಮರು ಭಾಗವಹಿಸಿದ್ದರು ಅವರನ್ನು ಕಣೆಗಣಿಸಲಾಗಿದೆ. ಈ ಹೋರಾಟದಲ್ಲಿ ಬಿ. ವೆಂಕಮ್ಮ, ಆದವಾನಿ ರಾಮಕ್ಕ, ವೀರವ್ವ, ರಾಕಟ್ಲ, ಸುಲಕ್ಷಣ ಬಾಯಿ, ಪ್ರಮೀಳಾ, ನಾಗಮ್ಮ, ಬಳ್ಳಾರಿ ಸಿದ್ಧಮ್ಮ, ಸುಂದರಮ್ಮ, ಹರಪನಹಳ್ಳಿ ಲಕ್ಷ್ಮೀ ದೇವಿ, ಬಳ್ಳಾರಿ ರುದ್ರಮ್ಮ ಮೊದಲಾದ ಮಹಿಳೆಯರು ಭಾಗವಹಿಸಿದ್ದು, ಇವರ ಪಾತ್ರ ಸ್ವಾಗತಾರ್ಹ. ಧಾರ್ಮಿಕ ನೆಲೆಗಳು ಹೋರಾಟಕ್ಕೆ ಪ್ರೇರಣೆ ನೀಡಿದ್ದು ಕಂಡುಬಂದಿದೆ. ಕೊಟ್ಟೂರು, ಉಜ್ಜಿನಿ, ಕಾನಾಮಡುಗು, ಚೆಳ್ಳಗುರ್ಕಿ, ಹಂಪಿ, ಕುರುಗೋಡು, ಸೊಂಡೂರು, ಮೈಲಾರಗಳಲ್ಲಿ ಭಜನೆ, ಕೀರ್ತನೆ, ಉತ್ಸವ, ಪ್ರಾರ್ಥನೆ ಸಮಾರಂಭಗಳು ನಡೆದವು.

ಸ್ವಾತಂತ್ರ್ಯ ಹೋರಾಟದ ಕಲ್ಪನೆ, ಪ್ರಭಾವವನ್ನು ನಾಟಕ, ಲಾವಣಿ, ಕಾದಂಬರಿಗಳಲ್ಲಿ ತಿಳಿಯಬಹುದು. ಸ್ವಾತಂತ್ರ್ಯ ಹೋರಾಟ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳು  ಸಹ ಉಲ್ಲೇಖನಾರ್ಹ. ಕವಿ, ಸಾಹಿತಿಗಳ ಪಾತ್ರ ಸ್ವಾತಂತ್ರ್ಯ ಹೋರಾಟದಲ್ಲಿ ಅಪಾರವಾದುದು. ಉದಾ. ಹೀ.ಮ. ನಾಗಯ್ಯ, ಬೀ.ಚಿ., ಜೋಳದರಾಶಿ ದೊಡ್ಡನಗೌಡರು, ಸಮೂಹ ಮಾಧ್ಯಮದಲ್ಲಿ ಸಹ ಹೋರಾಟದ ಅಲೆಯನ್ನು ಎಲ್ಲರಿಗೂ ಬಡಿದೆಬ್ಬಿಸುವಂತೆ ಪತ್ರಿಕೆ, ರೇಡಿಯೋ, ಚಲನಚಿತ್ರಗಳಲ್ಲಿ ಹೋರಾಟದ ವಿಷಯವನ್ನು ಪ್ರಸಾರ ಮಾಡುತ್ತಿದ್ದರೆಂದು ತಿಳಿಯಬಹುದು. ೧೯೩೬ರಲ್ಲಿ ಜಯ ಕರ್ನಾಟಕ ಪತ್ರಿಕೆ, ಗರ್ಜನೆ (೧೯೪೭), ರೈತರಾಜ್ಯ  (೧೯೪೦) ಮತ್ತು ಕೋ. ಚೆನ್ನಬಸಪ್ಪನವರು ೧೯೪೮ರಲ್ಲಿ ರೈತ ಪತ್ರಿಕೆ ಹೊರತಂದು ಪ್ರಸಾರ ನಡೆದಿತ್ತು.

ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಸೆರೆಮನೆವಹಿಸಿದ ಪಾತ್ರ ಸ್ಮರಣೀಯ. ಆಗ ಸಂಘ, ಸಂಸ್ಥೆಗಳು ಹೋರಾಟಕ್ಕೆ ಸ್ಪಂದಿಸಿದ್ದನ್ನು ನೋಡಬಹುದು. ಮಲ್ಲಸಜ್ಜನ ವ್ಯಾಯಾಮ ಶಾಲೆ, ಕಸ್ಮೋಪಾಲಿಟನ್ ಕ್ಲಬ್, ಥಿಯೋಸಾಫಿಕಲ್ ಸೊಸೈಟಿ, ಟೌನ್ ರೀಡಿಂಗ್ ರೂಮ್ಸ್‌ನ್ನು ಹೆಸರಿಸಬಹುದು. ಧಾರ್ಮಿಕ ಮಠಗಳು ಸಹ ಪರೋಕ್ಷವಾಗಿ ಹೋರಾಟಕ್ಕೆ ಸ್ಫೂರ್ತಿ ನೀಡಿವೆ. ಉದಾ. ಮಂತ್ರಾಲಯ, ಬಳ್ಳಾರಿ ರಾಘವೇಂದ್ರ ಸ್ವಾಮಿ ಮಠಗಳು ಉಜ್ಜನಿ ಸಿದ್ದೇಶ್ವರ ಮಠ, ಕಾನಾಮಡುಗು ಶರಣಬಸವೇಶ್ವರ ಮಠ ಮೊದಲಾದವು.

ಒಟ್ಟಾರೆ ಬಳ್ಳಾರಿ ಜಿಲ್ಲೆಯಲ್ಲಿ ಆದಂತ ಸ್ವಾತಂತ್ರ್ಯ ಹೋರಾಟ ಕಲೆಕ್ಟರುಗಳನ್ನಲ್ಲದೆ, ಸಂಪೂರ್ಣ ಬ್ರಿಟಿಷರ ಆಡಳಿತವನ್ನು ಭಾರತದಿಂದ ತೊಲಗಿಸಲು ಪ್ರಯತ್ನಿಸಲಾಯಿತು. ನಾಮನಿರ್ದೇಶನಕ್ಕೆ ಮಾತ್ರ ಕಲೆಕ್ಟರುಗಳು, ಹೋರಾಟದ ವಿವಿಧ ಮುಖಗಳನ್ನು ಅವಲೋಕಿಸಿ ದಾಗ ಇಡಿಯಾಗಿ ಭಾರತವನ್ನು ಅವಲಂಬಿಸಿತ್ತು, ಬಳ್ಳಾರಿ ಹೊರತಾಗಿರಲಿಲ್ಲ. ಈ ರೀತಿ ಸಂಘ ಸಂಸ್ಥೆ, ಹೋರಾಟಗಾರರ ಶ್ರಮದಿಂದ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಲಭಿಸಿತು. ಇದಕ್ಕೆ ಬಳ್ಳಾರಿ ಜಿಲ್ಲೆಯವರ ಪಾತ್ರ ದೇಶದಲ್ಲಿ ಅಲ್ಪವಾದರೂ ಮಹತ್ವಾಕಾಂಕ್ಷೆ ಯಿಂದ ಕೂಡಿದ್ದಿತು. ಬಳ್ಳಾರಿ ಜಿಲ್ಲೆಯ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ ಇಲ್ಲಿನ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಹೊಸ ಆಯಾಮ ಸಿಕ್ಕಿತ್ತು


[1]      ಅದೇ, ಪು. ೪.

[2]      ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ೧೯೬೪, ಪು. ೮೭೩.

[3]      ಬಳ್ಳಾರಿ ಬೆಳಗು, ೧೯೭೨, ಪು. ೭.

[4]      ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ೧೯೭೫, ಪು. ೮೭೭.

[5]      ೧೯೫೮-೧೯೪೫ ಭಾರತ ಸ್ವಾತಂತ್ರ್ಯ ಸಂಗ್ರಾಮ, ಪು. ೨೧.

[6]      ಬಳ್ಳಾರಿ ಬೆಳಗು, ೧೯೭೨, ಪು. ೬.

[7]       ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ೧೯೭೫, ಪು. ೮೭೯.

[8]       ಗಾಂಧಿ ಮತ್ತು ಕರ್ನಾಟಕ, ೧೯೬೯, ಪು. ೩೮೬.

[9]      ಅದೇ, ಪು. ೨೭೭.

[10]      ಬಳ್ಳಾರಿ ಬೆಳಗು, ೧೯೯೨, ಪು. ೮.

[11]      ಸ್ವಾತಂತ್ರ್ಯ ಯೋಧನ ಸಂವೇದನೆ, ೧೯೮೯, ಪು. ೨೫.

[12]      ಭಾರತ ಸ್ವಾತಂತ್ರ್ಯ ಸಂಗ್ರಾಮ, ೧೯೮೪, ಪು. ೨೭.

[13]     ಕನ್ನಡ ಪ್ರಭ (೧೯.೨.೧೯೯೪).