ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದಲ್ಲೂ ನಡೆದಿದ್ದು, ಅದರಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ ಪ್ರಮುಖವಾಗಿದೆ. ಇಲ್ಲಿ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ನಡೆದಂತಹ ಹೋರಾಟಗಳು ಸ್ವಹಿತಾಶಕ್ತಿ, ಸ್ವಾತಂತ್ರ್ಯದ ಮಹತ್ವ ಮತ್ತು ರಾಷ್ಟ್ರೀಯತೆಯನ್ನು ತಿಳಿಸುತ್ತವೆ. ಸ್ವಾತಂತ್ರ್ಯ ಪದದ ಅರ್ಥವನ್ನು ನೋಡಿದಾಗ, ತನ್ನಿಚ್ಚೆಯಂತೆ ಇರುವುದು, ಬಂಧನದಿಂದ ವಿಮುಕ್ತಿ ಹೊಂದುವುದು, ಬಿಡುಗಡೆ ಹೊಂದುವುದು, ವಿಶೇಷ ಹಕ್ಕನ್ನು ಪಡೆಯುವುದು ಮತ್ತು ಮನಸ್ಸಿಗೆ ತೋರಿದ್ದನ್ನು ಮಾಡುವಂತಿರುವ ಹಕ್ಕು ಅಥವಾ ಅಧಿಕಾರ ಎನ್ನಬಹುದು. ಈ ಮೇಲಿನ ಅಂಶಗಳಿಗಾಗಿ ನಿರಂತರ ಹೋರಾಡಿದ್ದು ಕಂಡುಬಂದಿದೆ. ಅವುಗಳು ಒಂದೇ ರೂಪದಲ್ಲಿ ಆಗಲಿಲ್ಲ, ದಂಗೆ, ಕಾಳಗ, ಕ್ರಾಂತಿ, ಯುದ್ಧ, ಸಂಗ್ರಾಮ, ಚಳುವಳಿ ಮತ್ತು ಹೋರಾಟಗಳನ್ನು ಅವಲೋಕಿಸಬಹುದು. ಉದಾ. ೧೭೫೭ರಲ್ಲಿ ‘ಪ್ಲಾಸಿಕದನ’ವನ್ನು ಬ್ರಿಟಿಷರಿಗೂ ಮತ್ತು  ಸಿರಾಜ್‌ವುದ್ದಾಲನಿಗೂ ನಡೆದ ಕದನವೆನ್ನುತ್ತಾರೆ. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು, ‘ಸಿಪಾಯಿ ದಂಗೆ’ ಎಂದು ಕರೆಯಲಾಗಿದೆ. ಹಾಗಾಗಿ ಇವುಗಳ ಪ್ರತ್ಯೇಕ ಚರ್ಚೆ ಆಗಬೇಕಿದೆ. ಇಲ್ಲಿ ಜನ ಸಾಮಾನ್ಯರು ಸ್ವಾತಂತ್ರ್ಯಕ್ಕಾಗಿ ಹೋರಾಡುವುದರಿಂದ ಸ್ವಾತಂತ್ರ್ಯ ಹೋರಾಟವೆಂದು ಹೆಸರಿಸು ತ್ತೇವೆ. ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ “ಕರ್ನಾಟಕದಲ್ಲಿ ಎಂದಿನಿಂದಲೂ ಸ್ವಾತಂತ್ರ್ಯದ ಆಕಾಂಕ್ಷೆಯಿತ್ತು ಮತ್ತು ಅದಕ್ಕೂ ಹೋರಾಟ ನಡೆದೇ ಇತ್ತು” ಎಂದಿದ್ದಾರೆ.

[1] ಉದಾ. ಹೈದರ್, ಟಿಪ್ಪು, ಕಿತ್ತೂರು ರಾಣಿ ಚೆನ್ನಮ್ಮ, ಹಲಗಲಿ ಬೇಡರು, ಸಂಗೊಳ್ಳಿ ರಾಯಣ್ಣ, ದೊಂಢಿಯ ವಾಘ, ಮತ್ತಿತರರು ಬ್ರಿಟಿಷರು ಆಡಳಿತ ಪ್ರಾರಂಭಿಸಿದ ಕೂಡಲೆ ಹೋರಾಟಗಳನ್ನು ಮಾಡಲಿಲ್ಲ. ಎನ್.ಪಿ. ಶಂಕರನಾರಾಯಣರಾವ್ ಅವರು “ಬ್ರಿಟಿಷರು ಭಾರತದಲ್ಲಿ ತಮ್ಮ ರಾಜ್ಯವನ್ನು ವಿಸ್ತರಿಸುತ್ತ ಹೋದ ಹಾಗೆ ಅವರ ವಿರುದ್ಧವಾದ ಹೋರಾಟ ಗಳೂ ನಡೆಯುತ್ತಾ ಹೋದವು” ಎಂದಿದ್ದಾರೆ.[2] ಈ ರೀತಿ ಅವರ ಆಡಳಿತ ವಿಸ್ತಾರವಾದಂತೆ ಹೋರಾಟಗಳು ನಡೆಯುತ್ತಾ ಬಂದದ್ದು ನಿಜ. ಬಳ್ಳಾರಿ ಜಿಲ್ಲೆಯಲ್ಲಿಯೂ ಇವುಗಳನ್ನು ಗುರುತಿಸಬಹುದಾಗಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ಇಂಗ್ಲಿಷ್ ವಿದ್ಯಾಭ್ಯಾಸ, ರಾಷ್ಟ್ರೀಯ ಮನೋಭಾವ, ಸ್ವಾತಂತ್ರ್ಯ ಪ್ರೇಮ, ರಾಷ್ಟ್ರಪ್ರೇಮ, ಸ್ವರಾಜ್ಯಾಕಾಂಕ್ಷೆ ಮತ್ತು ರಾಷ್ಟ್ರದ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ಈ ಮೇಲಿನ ಅಂಶಗಳು ಕಾರಣವಾದವು. ಜನರಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರಪ್ರೇಮವನ್ನು ಹರಡಲು ೧೮೮೫ರಲ್ಲಿ ಬಾಲಗಂಗಾಧರ ತಿಲಕರು, ಶಿವಾಜಿ ಮತ್ತು ಗಣಪತಿ ಉತ್ಸವ ಜನಪ್ರಿಯವಾಗಿ ಆಚರಿಸಿದ್ದನ್ನು ಉಲ್ಲೇಖಿಸಬಹುದು. ಇದರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಜನರು ಧುಮುಕಿದರು. ಅದು ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಯಶಸ್ವಿಯಾಯಿತೆನ್ನಬಹುದು. ಬಳ್ಳಾರಿಯಲ್ಲಿ ಅದು ೧೯೦೫ರಲ್ಲಿ ತಿಲಕರು ಭಾಷಣ ಮಾಡಿದಾಗ ಜನರಲ್ಲಿ ಐಕ್ಯತೆ, ರಾಷ್ಟ್ರಪ್ರೇಮ, ಉತ್ಸಾಹ ಬೆಳೆಯಿತು. ಇಲ್ಲಿ ನಡೆದಂತಹ ಸ್ವಾತಂತ್ರ್ಯ ಹೋರಾಟವು ಕೃತಕವಲ್ಲದ ಚರಿತ್ರೆಯಾಗಿದೆ. ಕಡ್ಡಾಯವಾಗಿ ತಾವು ಪಡೆಯ ಬೇಕಾದ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ದಿಟ. ಬಳ್ಳಾರಿ ಜಿಲ್ಲೆಯಲ್ಲಿ ವಿಭಿನ್ನ ದೃಷ್ಟಿಯಲ್ಲಿ ಪ್ರಭಾವ ಬೀರಿದೆ. ಹಾಗಾಗಿ ಸ್ವಾತಂತ್ರ್ಯ ಹೋರಾಟವನ್ನು ಜಿಲ್ಲಾ ಘಟಕ, ತಾಲ್ಲೂಕು ಮತ್ತು ಗ್ರಾಮಗಳಲ್ಲಿ ನಡೆದಿದ್ದನ್ನು ಗುರುತಿಸಲಾಗಿದೆ. ಅಧ್ಯಯನದ ಅನುಕೂಲಕ್ಕಾಗಿ ಬಳ್ಳಾರಿ ಜಿಲ್ಲೆಯಲ್ಲಿ ನಡೆದಂತಹ ಸ್ವಾತಂತ್ರ್ಯ ಹೋರಾಟವನ್ನು ಎರಡು ಭಾಗಗಳಾಗಿ ಮಾಡಿಕೊಳ್ಳಲಾಗಿದೆ.

೧೮೦೦ ರಿಂದ ೧೮೮೫ರವರೆಗೆ : ಅರಸರು, ಅಧಿಕಾರಿಗಳು ನಡೆಸಿದ ಹೋರಾಟ, ೧೮೮೫ ರಿಂದ ೧೯೪೭ರ ವರೆಗೆ ರಾಷ್ಟ್ರೀಯ ಕಲ್ಪನೆ, ಜನಸಾಮಾನ್ಯರು, ನಾಯಕರು, ಬುದ್ದಿಜೀವಿಗಳು ನಡೆಸಿದ ಹೋರಾಟ. ಕರ್ನಾಟಕದ ಚರಿತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಮುಖವಾಗಿ ೧೮೫೭ರಿಂದ ಗುರುತಿಸಲಾಗಿದೆ. ಆದರೆ ಬಳ್ಳಾರಿ ಪ್ರದೇಶದಲ್ಲಿ ೧೮೦೦ರಿಂದಲೇ ಕಿರುಹೋರಾಟಗಳು ಆಗಿರುವುದರಿಂದ ಸ್ವಾತಂತ್ರ್ಯ ಹೋರಾಟದ ಮಹತ್ವ ವನ್ನು ಅಲ್ಲಿಂದಲ್ಲೇ ಗುರುತಿಸಲು ಪ್ರಯತ್ನಿಸಲಾಗಿದೆ. ಆಂಗ್ಲರು ಬಳ್ಳಾರಿ ಜಿಲ್ಲೆಯಲ್ಲಿ ಆಡಳಿತ ನಡೆಸುತ್ತಾ, ಇತರ ಪ್ರದೇಶಗಳ ಒಂದೊಂದೇ ಭಾಗಗಳನ್ನು ವಶಪಡಿಸಿಕೊಂಡಂತೆ, ತಮಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತ ಆರಂಭಿಸಿದರು. ಉದಾ. ೧೭೯೯ರಲ್ಲಿ ದಕ್ಷಿಣ ಕನ್ನಡ, ೧೮೦೦ರಲ್ಲಿ ಬಳ್ಳಾರಿ. ನಿಜಾಮನ ಪ್ರದೇಶಗಳನ್ನು ಸಲೀಸಾಗಿ ಬ್ರಿಟಿಷರ ಆಡಳಿತಕ್ಕೆ ಸೇರಿದವು. ಆದ್ಯ ರಾಮಾಚಾರ‌್ಯರು ಅವರು ಒಂದೇ ಪ್ರಾಂತ್ಯದ ಒಂದೇ ಭಾಷೆಯ ಭಾಗಗಳನ್ನು ಇಬ್ಬಗೆಯಾಗಿ ವಿಂಗಡಿಸಿ ಒಂದನ್ನು ಮದ್ರಾಸ್ ಪ್ರಾಂತಕ್ಕೆ ಸೆರಿಸಿದರೆ, ಇನ್ನೊಂದನ್ನು ಮುಂಬಯಿ ಪ್ರಾಂತಕ್ಕೆ ಕೊಡಿಸಿದರು ಎಂಬ ಮಾತು ನಿಜವೆಂದು ತಿಳಿಯುತ್ತದೆ.[3] ಈ ರೀತಿ ಒಂದು ಭಾಷೆಯ ಜನರು ಒಂದೆಡೆ ಇದ್ದರೆ ರಾಜ್ಯಾಡಳಿತಕ್ಕೆ ಹಾನಿಯೆಂದು ಅವರು ಭಾವಿಸಿದ್ದರು. ಹೀಗೆ ಒಡೆದು ಆಳುವ ಮನೋಭಾವ ಬ್ರಿಟಿಷರಿಗೆ ಕರಗತವಾಗಿತ್ತು.

ಬ್ರಿಟಿಷರ ಪ್ರಾಬಲ್ಯ ವ್ಯಾಪಿಸಿದಂತೆ, ವಿರೋಧಿಗಳ ದಂಡು ಸಹ ಬೆಳೆಯಿತು. ಮೈಸೂರು ರಾಜ್ಯಕ್ಕೆ ಸೇರಿದ ಧೋಂಡಿಯ ವ್ಯಾಘ ೧೮೦೦ ಸೆಪ್ಟೆಂಬರ್ ೧೦ರಂದು ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಮೊದಲವೀರ. ಇದೇ ರೀತಿ ಬ್ರಿಟಿಷರ ಅನ್ಯಾಯದ ತೆರಿಗೆಗಳನ್ನು ವಿರೋಧಿಸಿ ೧೮೦೨ರಲ್ಲಿ ಬಳ್ಳಾರಿಯಲ್ಲಿ ಪಾಳೆಯಗಾರರ ದಂಗೆ ನಡೆಯಿತು. ಇಂತಹ ದಂಗೆ ಮತ್ತು ಹೋರಾಟಗಳಲ್ಲಿ ಕಲೆಕ್ಟರುಗಳು ಅನುಸರಿಸಿದ ಧೋರಣೆಗಳನ್ನು ಸ್ಥಳೀಯರು ವಿರೋಧಿಸಿದರು. ಏಕೆಂದರೆ ೧೮೦೦-೧೯೪೭ರ ವರೆಗೆ ಇಲ್ಲಿ ಕಲೆಕ್ಟರುಗಳು ಆಡಳಿತ ನಡೆಸಿರುವುದರಿಂದ, ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕುವಲ್ಲಿ ಅವರು ತೋರಿದ ಸಾಹಸ, ಅನುಸರಿಸಿದ ನೀತಿಗಳು ಕ್ರೂರವಾಗಿದ್ದು, ಅಪಾಯಕಾರಿಯಾಗಿದ್ದವು. ಇಡೀ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಹೋರಾಡಿದಾಗ ಅವರ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಕಲೆಕ್ಟರುಗಳು ಪಕ್ಷಪಾತ ಧೋರಣೆ ತಾಳಿದ್ದು ನಿಸ್ಸಂದೇಹ.

೧೮೦೦ ರಿಂದ ೧೮೮೫ರವರೆಗೆ ನಡೆದ ಸ್ವಾತಂತ್ರ್ಯ ಹೋರಾಟ

ಮದ್ರಾಸ್ ಅಧಿಪತ್ಯಕ್ಕೆ ಬಳ್ಳಾರಿ ಜಿಲ್ಲೆ ಒಳಗಾದಾಗ, ಸುಮಾರು ೧೮ ತಾಲ್ಲೂಕುಗಳನ್ನು ಹೊಂದಿತ್ತು. ಬಳ್ಳಾರಿ ಜಿಲ್ಲೆಯೊಂದಿಗೆ, ಆಂಧ್ರದ ಕೆಲವು ತಾಲ್ಲೂಕುಗಳು ಸೇರಿಕೊಂಡು ಅನಂತಪುರ ಜಿಲ್ಲೆಯೊಂದಿಗೆ ಅವು ಪ್ರತ್ಯೇಕಗೊಂಡವು. ಇಲ್ಲಿ ಯಾವುದೇ ಒಂದು ಘಟನೆ ನಡೆದರೆ ಎರಡು ಜಿಲ್ಲೆಗಳಲ್ಲಿ ಪ್ರಭಾವ ಬೀರುತ್ತಿತ್ತು. ಈ ಭಾಗದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವು ಸಹಾ ನಿರ್ಣಾಯಕವಾದದು. ಕ್ರಿ.ಶ. ೧೮೦೦ ಕ್ಕಿಂತ ಪೂರ್ವದಲ್ಲಿ ಹೈದರ್ ಟಿಪ್ಪು ಬ್ರಿಟಿಷರ ವಿರುದ್ಧ ಈ ಪ್ರದೇಶದಲ್ಲಿ ಹೋರಾಡಿದ್ದರಿಂದ, ಪರಕೀಯರ ಬಗ್ಗೆ ಆಗಲೇ ಜನರಲ್ಲಿ ವಿರೋಧಗಳು ಉದ್ಭವಗೊಂಡಿದ್ದವು. ಸ್ವಾತಂತ್ರ್ಯ ಹೋರಾಟದ ಉದ್ದೇಶ ಗಳ ಸಾಧನೆಗಾಗಿಯೇ ಹೈದರನು ತನ್ನ ಜೀವನಪರ್ಯಂತ ಬ್ರಿಟಿಷರೊಡನೆ ಹೋರಾಡಿ ಆಂಗ್ಲ ವಿರೋಧಿಗಳಲ್ಲಿ ಪ್ರಥಮನೆನಿಸಿಕೊಂಡನು.[4] ಇವನ ಮಗ ಟಿಪ್ಪು ಕೂಡ ಬ್ರಿಟಿಷರನ್ನು ಹೊರದೂಡಲು ಶ್ರಮಿಸಿದ್ದು ಸ್ಮರಣೀಯ. ಆನಂತರ ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹ ದೊರೆಯಲಿಲ್ಲ. ಕಾರಣ ಬ್ರಿಟಿಷರ ಆಧೀನದಲ್ಲಿದ್ದು, ರೆಸಿಡೆಂಟನ್‌ನ ನೇತೃತ್ವದಲ್ಲಿ ಮೈಸೂರು ಅರಸರು ಆಳ್ವಿಕೆ ನಡೆಸಿದರು. ಹಾಗಾಗಿ ಅವರಿಗೆ ಸ್ನೇಹಜೀವಿ ಗಳಾಗಿದ್ದರು.

ಬಳ್ಳಾರಿ ಜಿಲ್ಲೆಯಲ್ಲಾದ ಸ್ವಾತಂತ್ರ್ಯ ಹೋರಾಟ ಗ್ರಾಮಮಟ್ಟದಲ್ಲಿ ನಡೆದಿದ್ದು ಅವುಗಳ ಸೂಕ್ಷ್ಮ ಪರಿಚಯವನ್ನು ಮಾಡಲಾಗಿದೆ.

ಹೊಳಲು : ಪರಕೀಯ ಆಡಳಿತ ಅಂತಿಮಘಟ್ಟ ತಲುಪುವ ಮುನ್ನ, ಮೊಳಕೆಯಲ್ಲಿಯೇ ಚಿಗುಟಿ ಹಾಕಲು ಪ್ರಯತ್ನಿಸಿದವರಲ್ಲಿ ಇವರು ಮೊದಲಿಗರು. ಶಿವಮೊಗ್ಗ ಜಿಲ್ಲೆಗೊಳಪಟ್ಟ ನಗರದಲ್ಲಿ ಧೊಂಡಯ್ಯನೆಂಬುವನೊಬ್ಬ ನಿರಾಶ್ರಿತ ಸಾಮಾನ್ಯನಿಂದ ದಂಗೆ ಪ್ರಾರಂಭ ವಾಯಿತು. ಬ್ರಿಟಿಷರ ಮತ್ತು ಬ್ರಿಟಿಷರ ಪರವಾಗಿದ್ದ ಮೈಸೂರು ಸರ್ಕಾರದ ಅನ್ಯಾಯದ ತೆರಿಗೆಗಳನ್ನು ವಿರೋಧಿಸಿ, ನಗರದಲ್ಲಿ ಬಂಡಾಯ ಹೂಡಿದನು. ಅವನಲ್ಲದೆ ನೂರಾರು ಜನ ಗುಂಪಿನೊಡನೆ ತೆರಿಗೆಗಳನ್ನು ನಿರಾಕರಿಸುವುದರ ಮೂಲಕ ಹತ್ತಿರದ ಖಜಾನೆಗಳನ್ನು ಧ್ವಂಸ ಮಾಡುತ್ತ ಬ್ರಿಟಿಷರನ್ನು ವಿರೋಧಿಸಿ ಮುಂದುವರೆದರು. ಕೂಡಲೆ ಲೆಫ್ಟಿನೆಂಟ್ ಕರ್ನಲ್‌ನ ಸೈನ್ಯವು ಅವನನ್ನು ಹಿಂಬಾಲಿಸಿ ಬಳ್ಳಾರಿ ಜಿಲ್ಲೆಗೆ ಸೇರಿದ ಹೊಳಲು ಹತ್ತಿರ ದೋಂಡಿಯ ವ್ಯಾಘನನ್ನು ಸೋಲಿಸಿ ಪರಾಜಯಗೊಳಿಸಿದನು.[5] ದೋಂಢಿಯ ವ್ಯಾಘನು ರಾಯಚೂರು ಜಿಲ್ಲೆಗೆ ಸೇರಿದ ಕೊಣಗಲ್ಲಿನ ಹತ್ತಿರ ಬ್ರಿಟಿಷರನ್ನು ಎದುರಿಸಲು ಪ್ರಯತ್ನಿಸಿ ವಿಫಲವಾಗಿ ಕೊಲ್ಲಲ್ಪಟ್ಟನು ಆ ದಿನಾಂಕವನ್ನು ಸಿ.ಟಿ.ಎಂ. ಕೊಟ್ರಯ್ಯ ಅವರು ೧೦.೦೯. ೧೮೦೦ ಎಂದು ತಿಳಿಸಿದ್ದಾರೆ.[6]

ತರಣಿಕಲ್ಲು : ಆಗ ಬಳ್ಳಾರಿಗೆ ಸೇರಿದ, ಆದೋನಿ ತಾಲ್ಲೂಕಿನ ಕಿರುಗ್ರಾಮ ತರಣಿಕಲ್ಲು. ಅಲ್ಲಿ ಗ್ರಾಮದ ಪಟೇಲನನ್ನು ಆಂಗ್ಲ ಸರ್ಕಾರವು ಹಣ ಅಪಹರಿಸಿದ್ದಾನೆಂಬ ಆಪಾದನೆಯ ಮೇಲೆ ಅವನನ್ನು ವಿಚಾರಣೆಗೊಳಪಡಿಸಿತು. ಏನೂ ಅರಿಯದ ಮುಗ್ಧರನ್ನು ಈ ರೀತಿ ಮೊದಲಿನಿದಲೂ ಶಿಕ್ಷಿಸಿರುವುದು ಹೆಚ್ಚಿನ ಸಂಗತಿಗಳು ಆಗಲೇ ಜನರಿಗೆ ಗೊತ್ತಾದವು. ಈ ಅನ್ಯಾಯವನ್ನು ನೋಡಿ ಪ್ರಜೆಗಳೂ ಕರುಣೆಯಿಂದ ಪಟೇಲನನ್ನು ಹುರಿದುಂಬಿಸಿ ಬಂಡಾಯ ವೆದ್ದರು. ಆ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು, ಗುಮಾಸ್ತ ಮತ್ತು ಅನುಯಾಯಿ ಗಳನ್ನು ತಾಲ್ಲೂಕು ಕಚೇರಿಯಿಂದ ಹೊರಗೆಳೆದು ಕೊಲ್ಲಲಾಯಿತು. ತಹಶೀಲ್ದಾರ, ಇತರೆ ತಾಲ್ಲೂಕು ಅಧಿಕಾರಿಗಳನ್ನು ಸೆರೆಯಲ್ಲಿಟ್ಟರು. ಕೋಟೆಯ ಗೋಡೆ ಮತ್ತು ಬಾಗಿಲುಗಳನ್ನು ಭದ್ರಪಡಿಸಿ ಬ್ರಿಟಿಷರ ಸೈನ್ಯವನ್ನು ಎದುರಿಸಲು ಸಿದ್ಧರಾದರು. ಈ ಸಂಗತಿಯನ್ನು ತಿಳಿದೊಡನೆ ಬಳ್ಳಾರಿ ಕಲೆಕ್ಟರನಾಗಿದ್ದ ಮನ್ರೋ ಮತ್ತು ಸೈನ್ಯಾಧಿಕಾರಿ ಕ್ಯಾಂಪ್‌ಬೆಲ್‌ರ ಸಮಗ್ರ ಆಲೋಚನೆಯಾದ ಮೇಲೆ ದೊಡ್ಡ ಸೈನ್ಯವನ್ನು ಫಿರಂಗಿ, ಗುಂಡು, ಮದ್ದುಗಳ ಸಹಿತ ತರಣಿಕಲ್ಲಿನ ಮೇಲೆ ಕಳುಹಿಸಿದರು.[7]

ತರಣಿಕಲ್ಲಿನ ಪ್ರಜೆಗಳು ಸ್ವಾತಂತ್ರ್ಯೋತ್ಸಾಹ ಶೌರ್ಯಗಳ ಮುಂದೆ ಬ್ರಿಟಿಷರ ಸೇನೆಯು ಸುಮಾರು ಭಾರಿ ಸೋಲನ್ನೊಪ್ಪಿಕೊಂಡು ಬಳ್ಳಾರಿಗೆ ಓಡಿಹೋಯಿತು. ಈ ಸನ್ನಿವೇಶದಲ್ಲಿ ಬ್ರಿಟಿಷ್ ಅಧಿಕಾರಿಗಳು ಅವಮಾನಕ್ಕಿಂತ ಸ್ಥಳೀಯರನ್ನು ಹತ್ತಿಕ್ಕಲು ಶತಪ್ರಯತ್ನ ನಡೆಸಿದರು. ಗೊಂದಲವನ್ನು ಎದುರಿಸಿದ ಕ್ಯಾಂಪ್‌ಬೆಲ್ಲನ್ನು ಸ್ವತಃ ಒಂದು ದೊಡ್ಡ ಸೈನ್ಯದೊಂದಿಗೆ ತರಣಿಕಲ್ಲಿಗೆ ಸೈನ್ಯವನ್ನು ತನ್ನ ಸಹಾಯಕ್ಕೆ ಕರಸಿಕೊಂಡು ತರಣಿಕಲ್ಲಿನ ಮೇಲೆ ದಾಳಿ ಪ್ರಾರಂಭಿಸಿದನು. ಇದರಲ್ಲಿಯೂ ಕೂಡ ಕ್ಯಾಂಪ್‌ಬೆಲ್ಲನಿಗೆ ಸೋಲಾಯಿತು. ಆಗ ಅವನು ಕನಿಷ್ಟ ಮೂರುನೂರು ಯುವಕರನ್ನು ಕಳೆದುಕೊಂಡನು. ಇದರಿಂದ ನಿರಾಸೆಹೊಂದದೆ ಕ್ಯಾಂಪ್‌ಬೆಲ್ಲನು ಅತಿದೊಡ್ಡ ಮೂರು ಫಿರಂಗಿಗಳನ್ನು ತರಿಸಿ ತರಣಿಕಲ್ಲಿನ ಕೋಟೆಯ ಮೇಲೆ ದಾಳಿ ನಡೆಸಿದನು. ಕೋಟೆ ಛಿದ್ರವಾಗಿ ಬೀಳಲಾರಂಭಿಸಿತು. ಆದರೂ ಪಟೇಲನ ಸಂಗಡಿಗರು ಧೈರ್ಯದಿಂದ ಹೋರಾಡಿದರು. ಪಟೇಲನು ಇನ್ನಿತರ ಪ್ರಮುಖ ವ್ಯಕ್ತಿಗಳು ಮರಣದಂಡನೆಗೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಆಹುತಿಯಾಗಿ ಹೋದರು.

ರಾಯದುರ್ಗ : ಇಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ. ಈ ಹಿಂದೆ ಇದು ಬಳ್ಳಾರಿ ಜಿಲ್ಲೆಯ ತಾಲ್ಲೂಕಾಗಿತ್ತು. ಇಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿದ್ದು, ಐತಿಹಾಸಿಕ ಸ್ಮಾರಕಗಳಿಂದ ಮಹತ್ವ ಹೊಂದಿತ್ತು. ಸ್ಥಳೀಯ ಪಾಳೆಯಗಾರರಿಂದ ರಾಯದುರ್ಗವು ೧೭೮೭ ರಿಂದ ೧೭೯೯ರವರೆಗೆ ಟಿಪ್ಪುವಿನ ಆಳ್ವಿಕೆಗೆ ಒಳಪಟ್ಟಿತ್ತು. ಅವನ ಮರಣದ ತರುವಾಯ ಪಾಳೆಯಗಾರ ವಂಶಿತನಾದ ರಾಜಗೋಪಾಲನಾಯಕನನ್ನು ತಮ್ಮ ರಾಜನೆಂದು ಸಾರಿದರು. ೧೮೦೦ ರಲ್ಲಿ ಬಳ್ಳಾರಿ ಜಿಲ್ಲೆಯೆಲ್ಲವೂ ಬ್ರಿಟಿಷರಿಗೆ ಕೊಡಲ್ಪಟ್ಟರೂ ರಾಜಗೋಪಾಲನಾಯಕ ಸ್ವತಂತ್ರ್ಯನಾಗಿದ್ದು, ತನ್ನ ರಾಜ್ಯವನ್ನು ವಿಸ್ತರಿಸಲು ಮತ್ತು ಬ್ರಿಟಿಷರ ವಿರುದ್ಧ ದಂಗೆಯನ್ನೆಬ್ಬಿಸಲು ಸಂಚುಗಳನ್ನು ನಡೆಸುತ್ತಲೇ ಇದ್ದನು. ಇವನ ಆಲೋಚನೆಗಳು ಅದೇ ರೀತಿ ನಿರಂತರವಾಗಿರಲಿಲ್ಲ. ಬ್ರಿಟಿಷರಿಗೆ ಇದು ತಿಳಿದು ರಾಯದುರ್ಗಕ್ಕೆ ಸೈನ್ಯ ಕಳುಹಿಸಿ ವಶಪಡಿಸಿಕೊಂಡರು. ಅಲ್ಲಿದ್ದ ರಾಜಗೋಪಾಲನಾಯಕನಿಗೆ ಸರ್ಕಾರ ವರ್ಷಾಸನ ವನ್ನು ಕೊಡುತ್ತಿತ್ತಲ್ಲದೇ, ಅವನನ್ನು ಗುತ್ತಿಗೆ ಕಳುಹಿಸಿಬಿಟ್ಟಿತು.

ಆನಂತರ ಹರಪನಹಳ್ಳಿಯಲ್ಲಿ ಪಾಳೆಯಗಾರರ ವಂಶಸ್ಥರಿಗೆ ಆಂಗ್ಲರು ಕಿರುಕುಳ ಕೊಡಲಾ ರಂಭಿಸಿದರು. ಅಷ್ಟಕ್ಕೆ ಅವರ ಚಟುವಟಿಕೆಗಳು ಸ್ಥಗಿತಗೊಳ್ಳಲಿಲ್ಲ. ಸೈನ್ಯ ಕಟ್ಟಿ ಬ್ರಿಟಿಷರನ್ನು ಸೋಲಿಸಿ ಪುನಃ ರಾಜ್ಯ ಸ್ಥಾಪಿಸುವ ಕನಸುಕಂಡಿದ್ದರು. ಸರ್. ಥಾಮಸ್ ಮನ್ರೋ, ಕಾಂಪ್ಯ್ ಬೆಲ್ಲರು ಸೈನ್ಯದ ಸಹಾಯದಿಂದ ಹರಪನಹಳ್ಳಿ ಪಾಳೆಯಗಾರರ ವಂಶಸ್ಥರಿಗೆ ಪಾಠ ಕಲಿಸಿದ ರಲ್ಲದೆ, ಪಾಳೆಗಾರತ್ವವನ್ನು ತೆಗೆದು ಆ ವಂಶದವರಿಗೆ ಮಾಸಿಕ ವೇತನ ನೀಡಲಾಯಿತು. ಇದೇ ರೀತಿ ಆದೋನಿ, ಬಸಾಲತ್‌ಜಂಗ್‌ನ ಪುತ್ರನಾದ ಕುದ್ರಿತ್ ಉಲ್ಲಾಖಾನ್‌ನೊಡನೆ ಪಾಳೆಯಗಾರರು ಸಂಚುನಡೆಸಿದರು. ಕೊನೆಯಲ್ಲಿ ಪಾಳೆಯಗಾರನಿಗೆ ಮೈಸೂರಿನಲ್ಲಿ ವಾಸಿಸುವಂತೆ ಆಜ್ಞೆ ಹೊರಡಿಸಲಾಯಿತು.

೧೮೩೦ರಲ್ಲಿ ಉಚ್ಚಂಗಿದುರ್ಗದಲ್ಲಿ ದಂಗೆ ಪ್ರಾರಂಭವಾಯಿತು. ಆಗ ಇಕ್ಕೇರಿ ನಾಯಕನ ರಾಜಧಾನಿಯಾದ ಬಿದನೂರಿನಲ್ಲಿ, ಬೂದಿ ಬಸಪ್ಪ ಅವನ ಪ್ರಜೆಗಳೆಲ್ಲಾ ಸೇರಿ ಒತ್ತಾಯದ ಹಿಂಸೆಯಿಂದ ಕೂಡಿರುವ ಅಪಾರ ಅನ್ಯಾಯದ ತೆರಿಗೆಗಳನ್ನು ವಿರೋಧಿಸಿ ದಂಗೆಯೆದ್ದರು. ಆಗಿನ ಸಂದರ್ಭದಲ್ಲಿ ಉಚ್ಚಂಗಿದುರ್ಗವು ಬಿದನೂರಿನ ಫೌಜದಾರಿಯಾಗಿದ್ದ ಚಿತ್ರದುರ್ಗದ ಒಂದು ಭಾಗವಾಗಿತ್ತು.[8] ಸುಧಾರಣೆ, ವಿಸ್ತರಣೆ ಅಂಶಗಳ ಸಲುವಾಗಿ ಎದ್ದಿದ್ದ ದಂಗೆಯನ್ನು ಸುಮಾರಾಗಿ ಹತೋಟಿಗೆ ತರಲಾಯಿತು. ಹೀಗಾಗಿ ೧೨.೦೬.೧೮೩೧ರ ಸಂದರ್ಭದಲ್ಲಿ ದೌರ್ಜನ್ಯದ ವಿರುದ್ಧ ಹೂಡಿದ ಬಂಡಾಯವು ಶಾಂತವಾಯಿತು.

ಬಳ್ಳಾರಿ ಜಿಲ್ಲೆಯಲ್ಲಿ ೧೮೦೦ ರಿಂದ ೧೮೫೦ರವರೆಗೆ ಆಂಗ್ಲರ ಆಡಳಿತದಲ್ಲಿ, ಸ್ಥಳೀಯ ರಿಗೆ ಎಲ್ಲೂ ಅವಕಾಶವಿರಲಿಲ್ಲ. ಬಳ್ಳಾರಿ ಪಟ್ಟಣ ಅಂದು ಆಂಗ್ಲರ ಆಡಳಿತ ಕೇಂದ್ರವಾಗಿದ್ದ ರಿಂದ ಅಲ್ಲಿದ್ದ ನಿರಾಶೆಗೊಂಡ ಪಾಳೆಯಗಾರರು, ದೇಶೀಯ ಸೈನಿಕರು ಮತ್ತು ಗಿರಿಜನರು ೧೮೦೩ರಲ್ಲಿ ಪಾಳೆಯಗಾರರ ದಂಗೆಯಲ್ಲಿ ಪಾಲ್ಗೊಂಡು, ಬ್ರಿಟಿಷ್ ಸರ್ಕಾರವನ್ನು ಧಿಕ್ಕರಿಸಿ ದರು. ಇವರು ಬ್ರಿಟಿಷ್ ಸರ್ಕಾರಕ್ಕೆ ಪದೇ ಪದೇ ತೊಂದರೆ ಕೊಡುತ್ತಿದ್ದರಲ್ಲದೆ, ತಲೆನೋವಾ ಗಿದ್ದರು. ಅಂದು ದಂಡುಪ್ರದೇಶ ಬಳ್ಳಾರಿಯಿಂದ ಪ್ರತ್ಯೇಕವಾಗಿತ್ತು. ಅಲ್ಲಿದ್ದ ಅಲ್ಲೀಪುರ ಜೈಲಿಗೆ ಉಪಟಳ ನಡೆಸಿದವರನ್ನು ಕಳುಹಿಸುತ್ತಿದ್ದರು. ಆಗ ಈ ಹೋರಾಟವನ್ನು ಹತ್ತಿಕ್ಕಿದ ಶ್ರೇಯಸ್ಸು ಹೆಡ್ ಅಸಿಸ್ಟೆಂಟ್ ಕಲೆಕ್ಟರ್‌ನಾಗಿದ್ದ ರಾಲ್ಟಹಾರ್ಸಿಗೆ ಸಲ್ಲುತ್ತದೆ. ಅವನು ಗುಂಪುಗಳನ್ನು ಚದುರಿಸಲು ಮತ್ತು ಶಾಂತತೆಯನ್ನು ಕಾಪಾಡಲೆತ್ನಿಸಿದನು. ಆದರೆ ೦೪.೦೭.೧೮೫೬ರಲ್ಲಿ ಇವನನ್ನು ಆತನ ಬಂಗಲೆಯಲ್ಲಿಯೇ ಕೊಂದು ಹಾಕಿದರು.

ಹಡಗಲಿ ತಾಲ್ಲೂಕಿನಲ್ಲಾದ ಸ್ವಾತಂತ್ರ್ಯ ಹೋರಾಟವನ್ನು ೧೮೦೦ ರಿಂದ ಪರಿಗಣಿಸ ಲಾಗಿದೆ. ಇಲ್ಲಿ ೧೮೫೭ಕ್ಕಿಂತ ಮುಂಚೆ ಹಡಗಲಿ ಸುತ್ತಮುತ್ತ ಹಳ್ಳಿಗಳಲ್ಲಿ ಬ್ರಿಟಿಷರ ವಿರುದ್ಧ ಅತೃಪ್ತಿ, ಕಳವಳ, ಅವ್ಯವಸ್ಥೆಯಿಂದ ಜನರು ಪ್ರತಿರೋಧಿಸುತ್ತಿದ್ದರು. ಆದರೂ ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆ ಮಹಾದಾಸೆ ಕಡಿಮೆಯಾಗಲಿಲ್ಲ. ಅಲ್ಲದೆ ಅವರ ಕುಟಿಲ ತಂತ್ರಗಳು ಹೆಚ್ಚಿದವು. ಸ್ಥಳೀಯ ಪ್ರಮುಖ ನಾಯಕನಿಗೆ ನಿರ್ಬಂಧ ವಿಧಿಸುತ್ತಿದ್ದರು. ಸೈನ್ಯ, ಬಂದೂಕು, ಮತ್ತಿತರ ಆಯುಧಗಳನ್ನು ಹೊಂದಿರುವ ಸಲುವಾಗಿ ಒಂದು ದಿನ ಮೈಲಾರದ ಜಾತ್ರೆಯಲ್ಲಿ ಕಾರಣಿಕವಾಗುತ್ತದೆ. ಅದರ ಪ್ರಕಾರ “ಗೆದ್ದಲು ಹುಳುಗಳು ಎದ್ದವು” ಎಂದು ಮುಂಬರುವ ಕರಾಳ ದಿನಗಳನ್ನು ಸಂಕೇತಿಸುವುದರ ಮೂಲಕ ತಿಳಿಯ ಪಡಿಸಿತು. ಈ ಸಂದರ್ಭದಲ್ಲಿ ಮುಂಡರಗಿ ಭೀಮರಾಯ, ನರಗುಂದದ ಬಾಬ ಸಾಹೇಬ ಸ್ವಾತಂತ್ರ್ಯಕ್ಕಾಗಿ ಬಂಡಾಯ ಹೂಡಿದರು. ಇದೇ ಸನ್ನಿವೇಶದಲ್ಲಿ ಹಡಗಲಿಯ ಬೇಡರು ಸಹ ಭಾಗಿಗಳಾಗಿದ್ದರು. ಹಡಗಲಿಯ ಬೇಡರ ಮುಖಂಡನಾದ ಗದಿಗನ ಭೀಮರಾಯನ ಕಾರ್ಯದಲ್ಲಿ ಸಹಾನುಭೂತಿ ತೋರಿಸಿದನು.[9] ಇದನ್ನರಿತ ಬ್ರಿಟಿಷರು ಹಡಗಲಿಯ ಸುತ್ತಮುತ್ತಲಿನ ಬೇಡರಿಗೂ ಎಚ್ಚರಿಕೆಯನ್ನು ಕೊಟ್ಟು ಯುದ್ಧಾಸ್ತ್ರಗಳನ್ನು ಹೊಂದಿರಲು ಪರವಾನಿಗೆ ಹಿಂಪಡೆದರು. ಈ ನೀತಿಯನ್ನು ಬೇಡರು ಒಪ್ಪಲಿಲ್ಲ. ಹಾಗಾಗಿ ಹಡಗಲಿ, ಕವಲೂರು, ನವಲಿ ಮುಂತಾದ ಸ್ಥಳಗಳಲ್ಲಿ ಬೇಡರು ತಮ್ಮ ಮುಖಂಡನಾದ ಗದಿಗನೊಂದಿಗೆ ಒಗ್ಗೂಡಿ ಬ್ರಿಟಿಷರನ್ನು ಎದುರಿಸಿದರು. ಆಂಗ್ಲ ಆಧಿಕಾರಿಯನ್ನು ಬೀದಿಯ ಕಂಬಕ್ಕೆ ಕಟ್ಟಿದಾಗ ೦೨.೧೧.೧೮೫೭ರಲ್ಲಿ ಬ್ರಿಟಿಷ್ ಸೇನಾಧಿಕಾರಿ ಮುಲ್ಕೋಲಮ್ ಹಡಗಲಿಯನ್ನು ಪ್ರವೇಶಿಸಿ ಗದಿಗ ಅವನ ಅನುಯಾಯಿಗಳನ್ನು ಶರಣಾಗುವಂತೆ ಹೇಳಿದನು. ಇದನ್ನು ಯಾವೊಬ್ಬ ಬೇಡನೂ ಒಪ್ಪಲಿಲ್ಲ. ಇದನ್ನರಿತ ಬ್ರಿಟಿಷ್ ಸೇನೆ ಮರುಮಾತಿಲ್ಲದೆ ಹಡಗಲಿಗೆ ಬೆಂಕಿಯನ್ನು ಸ್ಪರ್ಶಿಸಿತು. ಈ ಬೆಂಕಿಯಿಂದ ಹಡಗಲಿಯ ಕೋಟೆ ನಾಶವಾಗಿ ಗದಿಗ ಅಲ್ಲಿಂದ ಓಡಿ ಹೋಗಲು ನಿರಾಕರಿಸಿದನಾದರೂ ಕೊನೆಗೆ ಕೊಪ್ಪಳಕ್ಕೆ ಹೋಗಿ ತಂಗಿದ್ದನು. ಬ್ರಿಟಿಷರು ಬೆನ್ನಟ್ಟಿದ್ದರಿಂದ ಬೇಡರ ಗುಂಪನ್ನು ನಾಶಪಡಿಸಲು ಪ್ರಯತ್ನಿಸಲಾಯಿತು. ಇದು ಮುಧೋಳ ತಾಲ್ಲೂಕಿನ ಹಲಗಲಿ ಬೇಡರ ಹೋರಾಟವನ್ನು ನೆನಪಿಗೆ ತರುತ್ತದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಮುಂಡರಗಿ ಭೀಮರಾಯನ ಪಾತ್ರ (೧೮೫೮)

ಮುಂಡರಗಿ ಭೀಮರಾಯ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಒಬ್ಬ ತಹಶೀಲ್ದಾರ. ಹರಪನಹಳ್ಳಿ ಮತ್ತು ಬಳ್ಳಾರಿಗಳಲ್ಲಿ ಇವನು ಕಾರ್ಯನಿರ್ವಹಿಸುತ್ತಿದ್ದಾಗ, ೧೮೫೪ರಲ್ಲಿ ರಾಜದ್ರೋಹ ಚಟುವಟಿಕೆಗಳನ್ನು ಎಸಗಿದನೆಂದು ಇಲ್ಲಸಲ್ಲದ ದೋಷಾರೋಪಗಳನ್ನು ಹೊರಿಸಿ ಆಂಗ್ಲರು ಇವನನ್ನು ಅಧಿಕಾರದಿಂದ ತೆಗೆದುಹಾಕಿದರು.[10] ಇವನಿಗೆ ತನ್ನೂರಿನಲ್ಲಿ ಜಮೀನು ಇದ್ದುದ ರಿಂದ ಕೃಷಿ ಮಾಡುತ್ತಾ ಬ್ರಿಟಿಷರ ವಿರುದ್ಧ ಹೋರಾಟವನ್ನು ಅಲ್ಲಿಂದಲೇ ಆರಂಭಿಸಿದನು. ಸ್ವತಂತ್ರ್ಯ ಮನೋಭಾವ, ಕಾರ್ಯತತ್ಪರತೆ, ಆತ್ಮಾಭಿಮಾನಗಳಿಗೆ ಹೆಸರಾದ ಭೀಮರಾಯರು ೧೮೫೭-೫೮ರ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಜನಿಸಿದ ಧಾರವಾಡ ಜಿಲ್ಲೆಗೂ ದುಡಿದಂಥ ಬಳ್ಳಾರಿ ಜಿಲ್ಲೆಗೂ ಅವರು ಕೀರ್ತಿ, ಸ್ಫೂರ್ತಿಯನ್ನು ತಂದರೆಂದು ಹೇಳಬಹುದು. ಇವರ ತಂದೆ ಮರಾಠ ಪೇಶ್ವೆಗಳ ಆಸ್ಥಾನದಲ್ಲಿ ನ್ಯಾಯಾಧೀಶರಿದ್ದುದರಿಂದ ಮಗನಿಗೆ ಇಂಗ್ಲಿಷ್ ಮತ್ತು ಮರಾಠಿ ಶಿಕ್ಷಣ ಕೊಡಿಸಬೇಕೆನ್ನುವ ಹೆಬ್ಬಯಕೆ ಸಾರ್ಥಕ ವಾಯಿತು. ಇವನನ್ನು ವಜಾ ಮಾಡಿದ ದಿನದಿಂದ ಬ್ರಿಟಿಷರ ಆಡಳಿತವನ್ನು ನಿರ್ಮೂಲನೆ ಗೊಳಿಸುವ ಉದ್ದೇಶದಿಂದ ಹಮ್ಮಿಗೆ ಕೆಂಚನಗೌಡರು, ಸೆರಟೂರು ಮತ್ತು ಗೋವಿನಕೊಪ್ಪದ ದೇಸಾಯಿಗಳು, ಡಂಬಳದ ದೇಶಮುಖರು, ನರಗುಂದದ ಬಾಬಾಸಾಹೇಬರೊಡನೆ ಸೇರಿ ೨೭.೦೫.೧೮೫೮ರಂದು ಬಂಡಾಯವೇಳುವ ಸಂಚು ನಡೆಸಿದ್ದನು. ಈ ಸಂದರ್ಭದಲ್ಲಿ ಸ್ಫೂರ್ತಿಯನ್ನು ಕೊಟ್ಟವರೆಂದರೆ ಹೊಸಪೇಟೆ, ಕಮಲಾಪುರ, ಆನೆಗೊಂದಿ ಮತ್ತು ಗಂಗಾವತಿಯ ಸರದಾರರು. ಈ ಒಳಸಂಚು ತಿಳಿದ ಬ್ರಿಟಿಷರು ಸರ್ಕಾರ ೦೧.೦೮.೧೮೫೭ರಲ್ಲಿ ಧಾರವಾಡ ಜಿಲ್ಲಾ ಕಲೆಕ್ಟರ್ ಭೀಮರಾಯನಿಗೆ ಎಚ್ಚರಿಕೆ ಕೊಟ್ಟರು. ಇನ್ನೊಂದು ಕಡೆ ಡಂಬಳದಲ್ಲಿದ್ದ ಅಧಿಕಾರಿಯೊಬ್ಬನು ಕೆಂಚನಗೌಡನ ಯುದ್ಧ ಸನ್ನದ್ದನ್ನು ಸಿದ್ಧತೆ ಪರೀಕ್ಷಿಸಲು ನಿಯೋಜಿತನಾಗಿದ್ದನು.

ಹಮ್ಮಿಗೆ ಗ್ರಾಮವು ಮದ್ದಿನ ಮನೆಯಾಗಿ ಅಲ್ಲಿ ಶಸ್ತ್ರಾಸ್ತ್ರಗಳು ಸಂಗ್ರಹಿಸಲ್ಪಟ್ಟವು. ಇದನ್ನು ವಶಪಡಿಸಿಕೊಂಡ ನಂತರ ಡಂಬಳದಲ್ಲಿದ್ದ ಅಧಿಕಾರಿಗೆ ವಿಷಯ ತಿಳಿದು ಭೀಮ ರಾಯ ಉದಾಸೀನತೆಯಲ್ಲಿ ದುರಂತವಿದೆ ಎಂದು ತಿಳಿದು, ವಿದ್ಯಾವಂತರೂ, ಶೂರರೂ, ಧೀರರೂ ಇದ್ದ ಅನುಯಾಯಿಗಳೊಂದಿಗೆ ಡಂಬಳಕ್ಕೆ ಹೋಗಿ ಅಧಿಕಾರಿಯನ್ನು ಕೊಂದು, ಮದ್ದುಗುಂಡುಗಳ ಸಂಗ್ರಹವನ್ನು ತನ್ನದಾಗಿಸಿಕೊಂಡನು. ನಂತರ ಡಂಬಳದ ಖಜಾನೆಗೆ ಮುತ್ತಿ ಸೂರೆಗೊಂಡನು. ಗದಗಿನ ಮೂಲಕ ಕ್ರಾಂತಿಕಾರರ ಸೈನ್ಯವು ಕೊಪ್ಪಳ ದುರ್ಗವನ್ನಾ ಕ್ರಮಿಸಿ ಅಜೇಯವೆನಿಸಿದ, ಕೊಪ್ಪಳದ ಕೋಟೆಯನ್ನು ವಶಪಡಿಸಿಕೊಂಡರು. ಕೊಪ್ಪಳದ ಜನರು ಕ್ರಾಂತಿಕಾರರಿಗೆ ಪ್ರೋತ್ಸಾಹ ನೀಡಿದರು.

ಕ್ರಿ.ಶ. ೧೮೫೮ ಮೇ ತಿಂಗಳ ಮೂರನೇ ವಾರದಲ್ಲಿ ಕೊಪ್ಪಳದುರ್ಗ ಕ್ರಾಂತಿಕಾರರ ವಶವಾಯಿತು. ಪುನಃ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಭೀಮರಾಯ ೧೮೫೮ ಮಾರ್ಚ್ ತಿಂಗಳ ಸುಮಾರಿಗೆ ಬಳ್ಳಾರಿ ಜಿಲ್ಲೆಯಾದ್ಯಂತ ಪ್ರಯಾಣಿಸಿ ಹೊಸಪೇಟೆ, ಕಮಲಾಪುರಗಳಿಂದ  ತನ ಸೈನ್ಯಕ್ಕೆ ಜನರನ್ನು ಸಂಘಟಿಸಿದರು. ಜಿಲ್ಲೆಯಿಂದ ಸುಮಾರು ೧೫೦ ದೇಶಭಕ್ತರು ಕ್ರಾಂತಿ ಸೈನ್ಯದಲ್ಲಿ ಸೇರ್ಪಡೆಗೊಂಡರು.

ಕ್ರಾಂತಿಕಾರಿಗಳು ಕೊಪ್ಪಳವನ್ನು ಕೈವಶಪಡಿಸಿಕೊಂಡ ವಿಷಯವನ್ನು ಬ್ರಿಟಿಷರು ತಿಳಿದು ಉದ್ರೇಕಗೊಂಡರು. ನಂತರ ಹೈದರಾಬಾದ್, ರಾಯಚೂರು, ಧಾರವಾಡ, ಬಳ್ಳಾರಿಯಿಂದ ಸೈನ್ಯಗಳು ಕೊಪ್ಪಳದತ್ತ ಹೋಗಬೇಕೆಂದು ಆದೇಶಗಳು ತಲುಪಿದವು. ಪ್ರಥಮವಾಗಿ ಬಳ್ಳಾರಿಯಿಂದ ಮೇಜರ್ ಹ್ಯೂಜನ ನಾಯಕತ್ವದಲ್ಲಿ ಅತೀ ದೊಡ್ಡ ಸೈನ್ಯವು ೨೫.೦೫. ೧೮೫೮ರ ದಿನಾಂಕ ಸೇರಿತು.[11] ಆಂಗ್ಲರ ಸೈನ್ಯ ಇಡೀ ಕೊಪ್ಪಳವನ್ನು ಆವರಿಸಿಕೊಂಡರು ಮೇಜರ್ ಹ್ಯೂಜ್‌ನಿಗೆ ಜಯಿಸಲು ಸುಲಭವಾಗಲಿಲ್ಲ. ೦೧.೦೮.೧೮೫೮ರಲ್ಲಿ ಹೈದರಾಬಾದಿ ನಿಂದ ಇನ್ನೊಂದು ಸೈನ್ಯದಳ ಬಂದಿತು. ಭೀಮರಾಯನಿಗೆ ಮೇಜರ್ ಹ್ಯೂಜನು ಪತ್ರ ಬರೆದು ಶರಣಾಗತನಾಗಲು ವಿನಂತಿಸಿಕೊಂಡನು. ಭೀಮರಾಯನು ತನ್ನ ಹಟ ಬದಲಾಯಿ ಸಲಿಲ್ಲ. ಘೋರ ಯುದ್ಧಕ್ಕೆ ಆ ದಿನವೇ ನಾಂದಿ ಹಾಡಿದರು.

ಬ್ರಿಟಿಷ್ ಸೈನ್ಯ ಅಧಿಕವಿದ್ದುದರಿಂದ ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿದ್ದರಿಂದ ಗೆಲುವಿನತ್ತ ಸಾಗಿದರು. ಕೊಪ್ಪಳವನ್ನು ಬ್ರಿಟಿಷರು ವಶಪಡಿಸಿಕೊಂಡರು. ಭೀಮರಾಯ ಅವನ ಗುಮಾಸ್ತನ ಪಿತೂರಿಯಿಂದ ರಹಸ್ಯವನ್ನರಿತ ಬ್ರಿಟಿಷರು ಪಿತೂರಿಗಳಿಂದಲೆ ನಮಗೆ ಜಯವೆಂದು ಕೂಡ ಅರಿತರು. ಈ ಹೋರಾಟದಲ್ಲಿ ರಣಹೇಡಿಗಳಾಗದೇ ಭೀಮರಾಯ ಮತ್ತು ಸಹಪಾಠಿ ಕೆಂಚನಗೌಡರು ಆಂಗ್ಲರ ವಿರುದ್ಧ ವೀರಾವೇಶದಿಂದ ಹೋರಾಡಿ ಮಡಿದರು. ಸೂತ್ರಧಾರಿಯಿಲ್ಲದ ಸೈನ್ಯ ದಿಕ್ಕುಪಾಲಾಯಿತು. ಹೋರಾಟಗಾರರಲ್ಲಿ ಚೈತನ್ಯ ಕುಗ್ಗಿತು. ಈ ಕ್ರಾಂತಿಯಲ್ಲಿ ೧೫೦ ಕ್ರಾಂತಿಕಾರರು ಸೆರೆಸಿಕ್ಕರು. ೭೫ ಕ್ರಾಂತಿಕಾರರನ್ನು ಗಲ್ಲಿಗೇರಿಸಿದರು.[12] ರಾಯಚೂರು ಜಿಲ್ಲಾಧಿಕಾರಿ ಮೆಡೋಸ್ ಟೈಲರ್‌ರವರು, ಧಾರವಾಡದ ಜಿಲ್ಲಾ ಮ್ಯಾಜಿಸ್ಟ್ರೇಟ್‌ರವರಿಗೆ ಕಾಗದ ಬರೆದು (ನಂ. ೧೮೩, ೧೮೫೮, ತಾ. ೨೭.೦೭.೧೮೫೮), ರಾಯಚೂರು ಜೈಲಿನಲ್ಲಿ ಖೈದಿಗಳಾಗಿದ್ದ ೭೭ ಕ್ರಾಂತಿಕಾರರನ್ನು ಗುಂಡಿನಿಂದ ಹೊಡೆದು ಕೊಂದು, ೬೯ ಖೈದಿಗಳಿಗೆ ಶಿಕ್ಷೆ ಕೊಟ್ಟಂತೆಯೂ ತಿಳಿಸಿದ್ದಾರೆ.[13] ಕ್ರಾಂತಿಕಾರರಲ್ಲಿ ೧೩ ಜನ ಸತ್ತವರು ಬಳ್ಳಾರಿ ಜಿಲ್ಲೆಯವರು, ಸತ್ತವರ ಸಂಖ್ಯೆ, ಊರುಗಳು ಹೆಸರುಗಳು ಈ ರೀತಿ ಇವೆ.

ಬಳ್ಳಾರಿ ಜಿಲ್ಲೆ

ವೆಂಕಟಾಪುರ
ಹೊಸಪೇಟೆ
ಕಂಪ್ಲಿ
ಕಮಲಾಪುರ
ಬಾಗೆವಾಡಿ
ಹರಪನಹಳ್ಳಿ
ಒಟ್ಟು ೧೩ ಜನ

ಭೀಮರಾಯನ ಆಸ್ತಿಯನ್ನು ಬ್ರಿಟಿಷರು ವಶಪಡಿಸಿಕೊಂಡರು. ಶಿವಮೊಗ್ಗದ ನಗರ ದಲ್ಲಿದ್ದ ಜಮೀನು ಮಾರಿ ಬಂದಂತಹ ಹಣ ರೂ. ೪,೧೦೧.೧೩ ಪೈಸೆಗಳನ್ನು ರಾಣಿ ಬಿದನೂರು ಖಜಾನೆಗೆ ಜಮಾ ಮಾಡಿದರೆಂದು ಸೂಪರಿಂಟೆಂಡೆಂಟ್ ಮೇಜರ್ ಜೆ.ಟಿ. ಪೋರ್ಟಕರ್ ಧಾರವಾಡದ ಕಲೆಕ್ಟರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಭೀಮರಾಯ ರಾಜನಲ್ಲ, ದೇಸಾಯಿ, ಅವನು ಸಿಂಹಾಸನಕ್ಕಾಗಲಿ, ಒಡೆತನಕ್ಕಾಗಲಿ ಹೊಡೆದಾಡಿದನವಲ್ಲ. ಭಾರತವು ಬ್ರಿಟಿಷರಿಂದ ಮುಕ್ತಿ ಹೊಂದುವುದು ಪರಮಗುರಿ ಯಾಗಿತ್ತು. ಸಕಲ ಸಂಪತ್ತು ಸೋರಿ ಹೋಗುವುದು ಕಂಡು ನೊಂದು ದಾಸ್ಯದಿಂದ ಭಾರತವನ್ನು ವಿಮೋಚನೆ ಮಾಡಬೇಕೆಂದು, ಹೋರಾಡಿದ ಅಗ್ರಗಣ್ಯ ಮಹಾಶೂರ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದನು. ಒಬ್ಬ ಗುಮಸ್ತೆಯ ಹೇಳಿಕೆ ಪ್ರಕಾರ ೦೪.೦೬.೧೮೫೮ ಪತ್ರದ ಕೊನೆ ಯಲ್ಲಿ ಹೊಸಪೇಟೆ, ಕಮಲಾಪುರ ಮತ್ತು ಇತರ ಗ್ರಾಮಗಳವರು ಬ್ರಿಟಿಷರ ವಿರುದ್ಧದ ಬಂಡಾಯದಲ್ಲಿ ಸೇರಬೇಕೆಂಬ ಉದ್ದೇಶದಿಂದ ಭೀಮರಾಯರು ಹೊಸಪೇಟೆಯಲ್ಲಿದ್ದ ಠಾಕೂರನಿಗೆ ಹೇಳಿ ಖರ್ಚಿಗಾಗಿ ೫೦೦ ರೂ. ಕೊಟ್ಟ ವಿಷಯ ತಿಳಿಯುತ್ತದೆ.[14]

ಭೀಮರಾಯ ಅನುಯಾಯಿ ತ್ಯಾಗಿ ಮೀರಾಕೋರ್ನಹಳ್ಳಿ ಹಡಗಲಿ ರಾಯನಗೌಡ, ಭರಮನಗೌಡರು ಹುತಾತ್ಮರ ಸಾಲಿಗೆ ಸೇರಿದ್ದಾರೆ. ಮುಂಡರಗಿ ಭೀಮರಾಯನ ಬಗ್ಗೆ ಜನಪದ ಗೀತೆಗಳು, ಲಾವಣಿಗಳು ಅವನ ಶೌರ್ಯ, ಸಾಹಸವನ್ನು ತಿಳಿಸುತ್ತವೆ. ಇವನ ನೆನಪಿಗಾಗಿ ಬಳ್ಳಾರಿ ಜಿಲ್ಲೆಯ ದಕ್ಷಿಣಕ್ಕಿರುವ ಹಳ್ಳಿಗೆ ಮುಂಡರಗಿ ಎಂದು ಹೆಸರಿಡಲಾಯಿ ತಂತೆ. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕಾಗಿದೆ. ಬಳ್ಳಾರಿ ಜಿಲ್ಲೆಯ ೧೮೫೭ ಹೋರಾಟದಲ್ಲಿ ಸ್ಥಳೀಯರು ಸೋಲಲು ಕಾರಣವೆಂದರೆ ೧೮೦೨-೦೪, ೧೮೦೫-೦೭, ೧೮೨೪, ೧೮೩೩, ೧೯೫೪, ೧೮೬೯ರಲ್ಲಿ ಆವರಿಸಿಕೊಂಡಿದ್ದ ಬರಗಾಲಗಳಿಂದ ಪರಿಸ್ಥಿತಿ ಹೀನಾಯವಾಗಿತ್ತು.


[1]       ಅವಲೋಕನ, ೧೯೮೫, ಪು. ೧೧೨.

[2]       ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ೧೯೯೧, ಪು. ೧೧೨.

[3]       ಕರ್ನಾಟಕ ಏಕೀಕರಣ – ಅವಲೋಕನ, ೧೯೮೫, ಪು. ೨೦೮.

[4]       ಬಳ್ಳಾರಿಯ ಬೆಳಗು, ೧೯೭೨, ಪು. ೧.

[5]       ಸುವರ್ಣ ಪುಷ್ಪಾಂಜಲಿ, ೧೯೭೪, ಪು. ೧೩.

[6]       ಬಳ್ಳಾರಿ ಬೆಳಗು, ೧೯೭೨, ಪು. ೧.

[7]       ಅದೇ, ಪು. ೧.

[8]       ಅದೇ, ಪು. ೨.

[9]       ಸುವರ್ಣ ಪುಷ್ಪಾಂಜಲಿ, ೧೯೭೪, ಪು. ೧೩.

[10]      ಬಳ್ಳಾರಿ ಬೆಳಗು, ೧೯೭೨, ಪು. ೩.

[11]     ೧೮೫೮-೧೯೪೫ ಸ್ವಾತಂತ್ರ್ಯ ಸಂಗ್ರಾಮ, ೧೯೮೪, ಪು. ೩.

[12]     ಅದೇ, ಪು. ೩.

[13]     ಅದೇ, ಪು. ೩.

[14]      ಅದೇ, ಪು. ೪.