ಸ್ಮಾರಕಗಳೆಂದರೆ, ಜ್ಞಾಪಕಾರ್ಥವಾಗಿಟ್ಟಿರುವ, ಕಟ್ಟಿಸಿರುವ, ವಸ್ತು, ಪ್ರತಿಮೆ, ದೇವಾಲಯ, ಕಟ್ಟೆ, ಕೋಟೆ ಮುಂತಾದವುಗಳನ್ನು ಹೆಸರಿಸುತ್ತೇವೆ. ಇನ್ನು ರಕ್ಷಣೆ ಎಂದರೆ ಇಂಗ್ಲೀಷ್‌ನಲ್ಲಿ Conservation ಎನ್ನುತ್ತಾರೆ. ಹೀಗೆಂದರೆ ಕಾಪಾಡುವಿಕೆ, ಜೋಪಾನ, ಪಾಲನೆ, ರಕ್ಷಿಸುವುದೆಂದು ತಿಳಿಯಲಾಗಿದೆ. ಇನ್ನೊಂದು ರೀತಿಯಲ್ಲಿ Preservation ಎನ್ನಲು ಸುರಕ್ಷಿತ, ಸಂರಕ್ಷಣೆ ಮುಂತಾದ ಅರ್ಥಗಳು ಎದುರಾಗುತ್ತವೆ. ಸ್ಮಾರಕಗಳು ಕೀರ್ತಿಸ್ತಂಭ, ಸ್ಮಾರಕ ಚಿಹ್ನೆ ಮಿಕ್ಕ ಏನೇ ಅರ್ಥ ಒಳಗೊಂಡಿದ್ದರೂ ಅವುಗಳ ಭವ್ಯ ಮತ್ತು ಅತ್ಯದ್ಭುತವಾದ ಚರಿತ್ರೆಯನ್ನು ಹೊಂದಿರುತ್ತವೆಂಬುದು ನಿಶ್ಚಿತ. ಇಂತವುಗಳು ಭಗ್ನಗೊಂಡಾಗ ಬ್ರಿಟಿಷರು ಅವುಗಳಿಗೆ ರಕ್ಷಣಾ ಕಾರ್ಯಗಳನ್ನು ಕೈಗೊಂಡದ್ದು ಗಮನಾರ್ಹ.

ಬಳ್ಳಾರಿ ಜಿಲ್ಲೆಯ ಚರಿತ್ರೆಯಲ್ಲಿ ಎರಡು ಘಟ್ಟಗಳೆಂದರೆ ವಿಜಯನಗರ ಸಾಮ್ರಾಜ್ಯ ಮತ್ತೊಂದು ಬ್ರಿಟಿಷರ ಆಳ್ವಿಕೆ. ಇಲ್ಲಿ ಬ್ರಿಟಿಷರ ಆಳ್ವಿಕೆ ಎಂದರೆ ಕಲೆಕ್ಟರುಗಳ ಆಳ್ವಿಕೆ ಎಂದು ತಿಳಿಯಬೇಕು. ವಿಜಯನಗರ ಸಾಮ್ರಾಜ್ಯದ ಅವನತಿ ನಂತರ ವಿಜಾಪುರ ಸುಲ್ತಾನರು, ಮರಾಠರು, ಮೊಗಲರು, ಸ್ಥಳೀಯ ಪಾಳೆಯಗಾರರಲ್ಲದೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದು ಗಮನಾರ್ಹ. ೧೭೯೨ರಲ್ಲಿ ಟಿಪ್ಪು ಸೋತಾಗ ಈ ಪ್ರದೇಶದ ಅರ್ಧಭಾಗ ಮರಾಠರಿಗೆ (ಸಂಡೂರು) ಹೋಯಿತು. ೧೭೯೯ರಲ್ಲಿ ಉಳಿದ ಭಾಗ ಹೈದರಾಬಾದಿನ ನಿಜಾಮನಿಗೆ ಸೇರಿತು. ಆಗ ನಿಜಾಮನು ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿ ೧೮೦೦ರಲ್ಲಿ (ಡಿಸೆಂಬರ್) ಬಳ್ಳಾರಿ ಭಾಗವನ್ನು ದತ್ತಿ ಜಿಲ್ಲೆಯಾಗಿ ಬಿಟ್ಟುಕೊಟ್ಟನು. ಅಂದು ಮದ್ರಾಸ್ ಪ್ರೆಸಿಡೆನ್ಸಿ ಸೇರಿದ ೨೨ ಜಿಲ್ಲೆಗಳಲ್ಲಿ ಬಳ್ಳಾರಿ ನಾಲ್ಕನೆ ಯದು. ೧೮೦೦ ರಿಂದ ಕಲೆಕ್ಟರ್‌ಗಳ ಆಳ್ವಿಕೆ ಆರಂಭವಾಯಿತು. ಇವರು ಯುರೋಪಿನ ವಿವಿಧ ದೇಶಗಳಿಂದ (ಇಂಗ್ಲೆಂಡ್‌ನ ಆಧೀನದಲ್ಲಿರುವ ದೇಶಗಳು) ಬಂದವರೆಂದು, ಕಲೆ ಮತ್ತು ಸ್ಮಾರಕಗಳ ಬಗ್ಗೆ ದೀರ್ಘಾಸಕ್ತಿಯುಳ್ಳವರಾಗಿದ್ದುದು ಅವರ ರಕ್ಷಣಾಕಾರ್ಯಗಳಿಂದ ಬೆಳಕಿಗೆ ಬರುತ್ತದೆ. ೧೮೦೦ ರಿಂದ ೧೯೫೩ರವರೆಗೆ ಸುಮಾರು ೧೧೨ ಜನ ಕಲೆಕ್ಟರುಗಳು ಕೈಗೊಂಡ ಹಂಪಿ ಸ್ಮಾರಕಗಳ ರಕ್ಷಣಾ ಕಾರ್ಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಉದ್ದೇಶವಿದೆ.

ಕ್ರಿ.ಶ. ೧೮೦೮ರಲ್ಲಿ ಬ್ರಿಟಷ್ ಸರ್ಕಾರದ ಶ್ರೀಮಂತ ವ್ಯಕ್ತಿ ಮಿಂಟೊ, ಟೇಲರ್ ನೇತೃತ್ವದಲ್ಲಿ ಕಮಿಟಿ ಮಾಡಿ ದುರಸ್ತಿ ಕೆಲಸಗಳನ್ನು ಕೈಗೊಳ್ಳಲು ೧ ಲಕ್ಷ ರೂ. ಕೊಟ್ಟಿದ್ದರು. ಇವರಿಗಿಂತ ಮೊದಲು ಬ್ರಿಟಿಷ್ ಅಧಿಕಾರಿ, ಸಂಶೋಧಕರು ಇಲ್ಲಿ ಪ್ರಾಚೀನ ಸ್ಮಾರಕಗಳನ್ನು ರಕ್ಷಿಸಿದ್ದಾರೆ. ಅವರುಗಳೆಂದರೆ : Eral of Minto, Marquess of Hastings, Lord Amherst, Lord Auek land, Lord Canning  ಮತ್ತು ಇತರರು. ತುಂಬಾ ಸುಂದರವಾದ ಸ್ಮಾರಕಗಳು ಅವಸಾನಗೊಳ್ಳುವುದನ್ನು ಕಂಡು ಇವರು ರಕ್ಷಿಸಿದ್ದು ಗಮನಾರ್ಹ. ಅವರೇ ತಿಳಿಸಿರುವಂತೆ: ‘Ruins of Bijanagar in 1878 Removal of Vegetation was orderd by the Madras Government from the ruins of Bijanagara (Hampi) Madras.

ಈ ಬಗ್ಗೆ ವರದಿ ಹೀಗಿದೆ : Duke of Buckinghamat Bijanagar in 1880 : in 1880 the Duke of Bucking ham inspected the ruins at Bijanagara, Madras and ordered some preservation measures  ಎಂದು ತಿಳಿದುಬರುತ್ತದೆ. ಕ್ರಿ.ಶ. ೧೮೮೧-೮೨ರಲ್ಲಿ ‘Temples and buildings at Bijayanagar (Hampi) Madras, Bellary District 1540 A.D. There are deserted and call for considerable attention. I have inspeceted the building & C., The Governor of Madras; the right Honourable Mr. Grant Duff; is about to visit them ಎಂದು ತಿಳಿದುಬರುತ್ತದೆ.

ಹಂಪಿಯ ಸ್ಮಾರಕಗಳಿಗೆ ರಕ್ಷಣಾ ಕಾರ್ಯಗಳನ್ನು ಕೈಗೊಂಡಿದ್ದು ಮೂರು ಕಾಲಘಟ್ಟ ಗಳಲ್ಲಿ ಕಂಡುಬರುತ್ತದೆ.

೧. ವಿಜಯನಗರದ ಅರಸರು ಕೈಗೊಂಡ ರಕ್ಷಣಾ ಕಾರ್ಯಗಳು ಅಥವಾ ಜೀರ್ಣೋದ್ಧಾರ ಕಾರ್ಯಗಳು.

೨. ಸ್ಥಳೀಯ ಅರಸರು ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿ ಕೈಗೊಂಡ ರಕ್ಷಣಾ ಕಾರ್ಯಗಳು

೩. ಸ್ವಾತಂತ್ರ್ಯೋತ್ತರದಲ್ಲಿ ಭಾರತ ಹಾಗೂ ಕರ್ನಾಟಕ ಸರ್ಕಾರಗಳು ಮತ್ತು ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲೊಂದಾದ ಯುನೆಸ್ಕೊ ಇತರ ಸಂಘ ಸಂಸ್ಥೆಗಳ ನೆರವಿನಿಂದ ಕೈಗೊಂಡ ರಕ್ಷಣಾ ಕಾರ್ಯಗಳೆಂದು ವಿಂಗಡಿಸಬಹುದು.

ವಿಜಯನಗರದರಸರು ಕೈಗೊಂಡ ರಕ್ಷಣಾತ್ಮಕ ಕಾರ್ಯಚಟುವಟಿಕೆಗಳೂ ಅಪಾರ. ಅವುಗಳಲ್ಲಿ  ಪ್ರಮುಖವಾದುವೆಂದರೆ ಶ್ರೀ ಕೃಷ್ಣದೇವರಾಯನು ಬಿಷ್ಟಪ್ಪಯ್ಯನ ಗೋಪುರ ಅಥವಾ ಹಿರೇಗೋಪುರಕ್ಕೆ ಜೀರ್ಣೋದ್ಧಾರ ಕಾರ್ಯನೆರವೇರಿಸಿ ಇತರ ಕಲ್ಯಾಣ ಮಂಟಪ, ಉತ್ಸವ ಮಂಟಪಗಳನ್ನು ಕಟ್ಟಿಸಿದ್ದು ಮಹತ್ವವೆನಿಸಿದೆ. ನಗರಗಳು, ಅಣೆಕಟ್ಟುಗಳು, ಕಾಲುವೆ ಗಳು, ಕೆರೆಗಳು, ದೇವಾಲಯಗಳು ಮತ್ತು ಜನೋಪಯುಕ್ತ ಲೌಕಿಕ ಹಾಗೂ ಧಾರ್ಮಿಕ ಕಟ್ಟಡಗಳ ರಚನೆಯ ಪರಾಕಾಷ್ಠತೆ ವಿಜಯನಗರ ಸಾಮ್ರಾಜ್ಯದಲ್ಲಿ ಕಾಣಬರುತ್ತದೆ. ಈ ರೀತಿ ಕಟ್ಟಿಸಿದ ಕಟ್ಟಡಗಳು ಕೇವಲ ೩೦೦ ವರ್ಷಗಳ ಅವಧಿಯಲ್ಲಿ ವಿನಾಶಗೊಂಡಿದ್ದು ಅವುಗಳನ್ನು ಬ್ರಿಟಿಷರು ರಕ್ಷಿಸಿದ್ದು ಸ್ತುತ್ಯಾರ್ಹ.

ಬ್ರಿಟಿಷರು ಹಂಪಿಯಲ್ಲಿ ಹೊಸದಾಗಿ ಕಟ್ಟಡಗಳನ್ನು ಕಟ್ಟದಿದ್ದರೂ ದುರಸ್ತಿ ಕೆಲಸ ಮಾಡಿಸಿದ್ದು ಗಮನಾರ್ಹ. ಮದ್ರಾಸ್ ಸರ್ಕಾರ ಪುರಾತತ್ವ ಇಲಾಖೆ ಕೇಂದ್ರದ ಮೂಲಕ ರಕ್ಷಣಾ ಕಾರ್ಯಗಳನ್ನು ನೆರವೇರಿಸಿತು. ನಮ್ಮಲ್ಲಿ ನಿಜವಾಗಿ ಸ್ಮಾರಕಗಳ ಬಗ್ಗೆ ರಕ್ಷಣಾ ಮನೋಭಾವ, ಆಸಕ್ತಿ ಬೆಳೆಸಿದವರು ಬ್ರಿಟಿಷರೆಂಬುದು ಕಡುಸತ್ಯ. ಇಲ್ಲಿನ ಸ್ಮಾರಕಗಳ ವಿನಾಶಕ್ಕೆ ಕಾರಣ ಕೊಡುತ್ತಾ ಅವರು ಭೌಗೋಳಿಕ, ಭೂಗರ್ಭ ಸಮ್ಮತ (ಗಣಿ, ಮದ್ದು ಸಿಡಿತ) ವಾಸ್ತವ ಸ್ಥಿತಿ, ಧರ್ಮ, ಸಾಮಾಜಿಕ, ರಾಜಕೀಯ ಮತ್ತು ಐತಿಹಾಸಿಕವೆಂದು ಆಂಗ್ಲ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಸರ್ವೋಚ್ಛ ನ್ಯಾಯಾಲಯದ ಕೊಲ್ಕತ್ತ ನ್ಯಾಯಾಧೀಶ ಸರ್. ವಿಲಿಯಂ ಜೋನ್ಸ್ ಜನವರಿ ೧೫, ೧೭೮೪ರಂದು ರಾಯಲ್ ಏಶಿಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದರು. ಅಂದಿನಿಂದ ಪ್ರಾಚ್ಯಾವಶೇಷಗಳ ರಕ್ಷಣೆ ಬಗೆಗೆ ಆಸಕ್ತಿ ಉದಯಿಸಿತು. ೧೮೦೦ರಲ್ಲಿ ಫ್ರಾನ್ಸಿಸ್ ಬುಕಾನನ್ ಸರ್ವೇಕ್ಷಣೆ, ಕನ್ನಿಂಗ್‌ಹ್ಯಾಮ್, ರಾಬರ್ಟ್ ಬ್ರೂಸ್‌ಪುಟ್, ಜೇಮ್ಸ್ ಪ್ರಿನ್ಸಿಪ್, ಬಿ.ಎಲ್. ರೈಸ್, ಜಾನ್ ಎಫ್. ಫ್ಲೀಟರ ಶಾಸನ, ಸ್ಮಾರಕಗಳ ಸರ್ವೇಕ್ಷಣೆಯಿಂದ ಕಲೆಕ್ಟರುಗಳ ಅತ್ಯಾಸಕ್ತಿ ಈ ದಿಸೆಗೆ ತಿರುಗಿತು. ಬ್ರಿಟಿಷರ ಆಡಳಿತ ವೈಖರಿ ಬಗೆಗೆ ಏನೆಲ್ಲಾ ಟೀಕೆ ವಿಮರ್ಶೆಗಳಿದ್ದರೂ ಅವರು ವಿವಿಧ ವಲಯಗಳಲ್ಲಿ ಹೇಗೆ ಪ್ರಚಂಡವಾದ ಕಾರ್ಯ ಸಾಧನೆ ಮಾಡಿದ್ದು ಮುಖ್ಯ. ಒಟ್ಟಾರೆ ಭಗ್ನಗೊಂಡ ಸ್ಮಾರಕಗಳ ರಕ್ಷಣೆ ಎಂದು, ಯಾರಿಂದ ಜೀರ್ಣೋದ್ಧಾರವಾಯಿತೆಂದು ದೊರೆತ ಆಕರಗಳ ಮೂಲಕ ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ನಡೆಸುವಾಗ ಸ್ಮಾರಕಗಳನ್ನು ರಕ್ಷಿಸಿದ್ದು ಮದ್ರಾಸ್ ಆಧಿಪತ್ಯದಲ್ಲಿಯೇ ಹಂಪಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು. ದೇವಾಲಯ, ಕಟ್ಟಡ ಇತರ ಭಗ್ನಗೊಂಡ ಶಿಥಿಲಾವಸ್ಥೆಯಲ್ಲಿರುವ ಸ್ಮಾರಕಗಳನ್ನು ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುವುದು. ‘Bijanagar – These fine remains known as the ‘Hampi ruins’ are described in my report of 23rd June 1881’ ಮುಂದುವರೆದು ವರದಿ ಮಾಡುತ್ತಾ;

In 1878 a small sum was authorised for the removal of bunyan trees which were destroying the buildings. After inspection in 1880 the duke of buckingham called for estimate for protecting the temples, and in may 1881 a grant of Rs. 200 was made for clearing away encroaching vegetation.

The Governor of Madras, Mr. Grant Duff. Visited Hampi in July last and more comprehensive measure all how about tobe under taken to repair the various structure.

[1]

ಬಳ್ಳಾರಿ ಜಿಲ್ಲೆಯಲ್ಲಿ ಕಲೆಕ್ಟರುಗಳು ಆಳ್ವಿಕೆ ನಡೆಸದಿದ್ದರೆ ಹಂಪಿ ವಿಶ್ವವ್ಯಾಪಿ ಖ್ಯಾತಿ ಪಡೆಯುತ್ತಿರಲಿಲ್ಲವೆನ್ನಬಹುದು. ಇದಕ್ಕೆ ಅವರು ಕೈಗೊಂಡ ಕಾರ್ಯಯೋಜನೆ, ಕಳಕಳಿಯು ಕಾರಣವಾಗಿದೆ. ರಾಬರ್ಟ್‌ಸಿವೆಲ್ ೧೮೭೭ ರಿಂದ ಅಮರಾವತಿ, ವಿಜಯವಾಡ, ಜಗ್ಗಯ್ಯ ಪೇಟೆ ಮತ್ತು ಧಾರವಾಡಗಳಲ್ಲಿ ಸಂಚರಿಸಿ ಪ್ರಾಚ್ಯ ಅವಶೇಷಗಳ ಬಗೆಗೆ ಸರ್ವೇಕ್ಷಣೆ ಮಾಡಿದನು. ನಂತರ ಹಂಪಿಯ ಅವಶೇಷಗಳನ್ನು ವಿದೇಶಿಯಾತ್ರಿಕರ ವೃತ್ತಾಂತಗಳ ಸಹಾಯದಿಂದ ‘A Forgotten Empire’ ಎಂಬ ಕೃತಿ ರಚಿಸಿದನು. ಇಂದು ಲಕ್ಷಾಂತರ ವಿದೇಶಿಯರು ಹಂಪಿಗೆ ಬರಲು ಕಾರಣವಾಯಿತಲ್ಲದೆ, ಅಂದಿನಿಂದ ವಿಶ್ವಮಟ್ಟಕ್ಕೆ ಸುಲಲಿತ ವಾಗಿ ಪರಿಚಯ ಮಾಡಿಕೊಡುವುದರ ಜೊತೆಗೆ ಹಂಪಿಗೆ ಹೆಚ್ಚಿನ ಸ್ಥಾನಗಿಟ್ಟಿಸಿ ಕೊಟ್ಟನು. ಹಂಪಿಯನ್ನು ವಿದೇಶಿಯರು ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದವನು ಸಿವೆಲ್ ಎಂದರೆ ತಪ್ಪಲ್ಲ.

ಅಧ್ಯಯನದ ಅನುಕೂಲಕ್ಕಾಗಿ ಹಂಪಿಯ ಸ್ಮಾರಕಗಳನ್ನು ೩ ವಿಭಾಗಗಳಾಗಿ ವಿಂಗಡಿಸಿ ಕೊಳ್ಳಲಾಗಿದೆ.

೧. ಧಾರ್ಮಿಕ ಕಟ್ಟಡಗಳು

೨. ನಾಗರಿಕ ಕಟ್ಟಡಗಳು

೩. ಇತರೆ ಸಾಮಾನ್ಯ ಕಟ್ಟಡಗಳು

ಹಂಪಿಯ ಸ್ಮಾರಕಗಳಿಗೆ ರಕ್ಷಣಾ ಕಾರ್ಯಗಳನ್ನು ಬ್ರಿಟಿಷರು ಕೈಗೊಂಡಿರುವುದು ಹೆಚ್ಚಾಗಿ ದೇವಾಲಯಗಳಿಗೆ ಮಾತ್ರ. ಇದು ಸ್ಥಳೀಯರ ಧಾರ್ಮಿಕ ಮನೋಭಾವಗಳನ್ನು ಸಂಕೇತಿಸು ತ್ತದೆ. ಉಳಿದ ಕಟ್ಟಡಗಳಿಗೆ ದುರಸ್ತಿ ಕಾರ್ಯಮಾಡಿದರೂ ಅಲ್ಪಪ್ರಮಾಣದ್ದೆನ್ನಬಹುದು. ಇಲ್ಲಿ ಹೆಚ್ಚಾಗಿ ವಿನಾಶಗೊಂಡಿರುವವು ನಾಗರಿಕ ಕಟ್ಟಡಗಳಾದರೂ, ಹೆಚ್ಚಿನ ಆಸಕ್ತಿ ದೇವಾಲಯಗಳಿಗೆ ತೋರಿಸಿದ್ದು ವಿಶಿಷ್ಟವೆನಿಸಿದೆ.

೧. ಧಾರ್ಮಿಕ ಕಟ್ಟಡಗಳು

‘ಹಂಪಿ’ ಗ್ರಾಮ ಪರಿಸರದಲ್ಲಿ ಭಗ್ನಗೊಂಡ ಚಾರಿತ್ರಿಕ ಸ್ಮಾರಕಗಳಿಗೆ ಜೀವಂತಿಕೆ ತುಂಬಿದವರು ಬ್ರಿಟಿಷರು. ಇವುಗಳ ಪೈಕಿ ಹೆಚ್ಚಿನದು ಧಾರ್ಮಿಕ ಕಟ್ಟಡಗಳು, ದೇವಾಲಯ, ಗುಡಿ-ಗೋಪುರ, ಗೋಡೆ, ಶಿಲ್ಪ, ವೀರಗಲ್ಲು, ಮಾಸ್ತಿಕಲ್ಲು, ಸಮಾಧಿ, ಛತ್ರ, ಮಠ ಇತ್ಯಾದಿಗಳನ್ನು ಹೆಸರಿಸುತ್ತಾ, ಇವುಗಳಿಗೆ ಬ್ರಿಟಿಷರು ರಕ್ಷಣಾ ಕಾರ್ಯಗಳನ್ನು ಕೈಗೊಂಡಿದ್ದು ಗಮನಾರ್ಹ.

೧. ಪಂಪಾ ವಿರೂಪಾಕ್ಷಸ್ವಾಮಿ ದೇವಾಲಯ : ಪಂಪಾ ವಿರೂಪಾಕ್ಷ ದೇವಾಲಯವೆಂದೇ ಖ್ಯಾತಿ ಪಡೆದ ಈ ದೇವಾಲಯ ಹಂಪಿಯಲ್ಲಿದ್ದು, ಅತ್ಯಂತ ಹಳೆಯದಾದ ದೇವಾಲಯಗಳಲ್ಲಿ ಒಂದೆನಿಸಿದೆ. ಈ ದೇವಾಲಯದ ರಂಗಮಂಟಪ, ರಾಯಗೋಪುರವನ್ನು ಮೊದಲೇ ತಿಳಿಸಿ ದಂತೆ ಶ್ರೀ ಕೃಷ್ಣದೇವರಾಯ ಕಟ್ಟಿಸಿ, ಹಿರೇಗೋಪುರಕ್ಕೆ ಜೀರ್ಣೋದ್ಧಾರ ಮಾಡಿಸಿದ್ದನು. ಸರ್. ಥಾಮಸ್ ಮನ್ರೋ ತನ್ನದೇ ಅವಧಿಯಲ್ಲಿ ಈ ಭಾಗದಲ್ಲಿ ಸಂದರ್ಶಿಸಿದರೂ ಅವನ ಉದ್ದೇಶ ಆನೆಗೊಂದಿ ಮತ್ತು ಹರಪನಹಳ್ಳಿಯ ಪಾಳೆಯಗಾರರನ್ನು ಕುರಿತದ್ದಾಗಿತ್ತು.[2] ಅನಂತರದ ಬಂದ ಕಲೆಕ್ಟರುಗಳ ಗಮನ ಇತ್ತ ಸೆಳೆದುದು ಅಪೂರ್ವವೆನಿಸಿದೆ. ಇಲ್ಲಿರುವ ಗೋಪುರಗಳಿಗೆ ೧೮೩೭ರಲ್ಲಿ ಬಳ್ಳಾರಿ ಜಿಲ್ಲಾ ಕಲೆಕ್ಟರ್ ಮಿಸ್ಟರ್ ರಾಬರ್ಟಸನ್‌ನ ನೇತೃತ್ವ ದಲ್ಲಿ ರಕ್ಷಣಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದು ತಿಳಿದುಬರುತ್ತದೆ.

ಜನಪ್ರಿಯ ಅಧಿಕಾರಿಯಾದ ಎಫ್. ಡಬ್ಲ್ಯೂ. ರಾಬರ್ಟ್‌ಸನ್ ಕಾಲದಲ್ಲಿ ‘ಬಳ್ಳಾರಿ ದಂಗೆ’ ನಡೆದರೂ, ಕಾಲುವೆ, ನೀರಿನ ವ್ಯವಸ್ಥೆ, ಸ್ಮಾರಕಗಳ ರಕ್ಷಣೆಗೆ ಪ್ರೋತ್ಸಾಹ ನೀಡಿದನು. ಇವನ ಅವಧಿಯಲ್ಲಿ ಗ್ರಾಮಾಧಿಕಾರಿಗಳು ಸಂಪೂರ್ಣ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿ ರಲ್ಲದೆ, ಕೆಲವು ನಿರ್ಬಂಧಗಳನ್ನು ಸಹ ವಿಧಿಸಲಾಯಿತೆಂದು ತಿಳಿದುಬರುತ್ತದೆ. ರಾಬರ್ಟ್ ಸನ್ ಹಂಪಿ ಸ್ಮಾರಕಗಳಿಗೆ ತನ್ನ ಶಕ್ತಾನುಸಾರ ರಕ್ಷಣೆ ಕಾರ್ಯಗಳನ್ನು ಮಾಡಿಸಿದನೆಂಬುವು ದರಲ್ಲಿ ಅನುಮಾನವಿಲ್ಲ. ಇವನು ವಿರೂಪಾಕ್ಷಸ್ವಾಮಿ ದೇವಾಲಯಕ್ಕೆ ತನ್ನ ಆಸಕ್ತಿ ಮೀಸಲಾಗಿಟ್ಟಿಲ್ಲವಾದರೂ, ಇತರ ದೇವಾಲಯಗಳಿಗೆ ಮಾಡಿಸಿದ್ದನ್ನು ಗಮನಿಸಬಹುದು.[3] ಇದೇ ದೇವಾಲಯದ ಉತ್ತರ ದಿಕ್ಕಿಗಿರುವ ಕನಕಗಿರಿ ಗೋಪುರವನ್ನು ನಿರ್ಮಿಸಿದವರು ಯಾರೆಂಬುದು ತಿಳಿದಿಲ್ಲ. ಆದರೆ, ಹೈದರಾಬಾದಿನ ನಿಜಾಮ ಇದನ್ನು ಕಟ್ಟಿಸಿದನೆಂದು ಪ್ರತೀತಿ ಇದೆ. ಇದನ್ನೂ ಸಹ ರಾಬರ್ಟ್‌ಸನ್ನನು ಇಟ್ಟಿಗೆ ಮತ್ತು ಗಾರೆಯನ್ನು ಬಳಸಿ ರಕ್ಷಣೆಗೊಳಿಸಿದ್ದಲ್ಲದೆ, ಇತರ ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದು ಗಮನಾರ್ಹವಾಗಿದೆ.[4]

೧೮೫೬ರ ನಂತರ ಗೋಪುರ-ದೇವಾಲಯದಲ್ಲಿ ಕೆಲವು ವಿಗ್ರಹಗಳನ್ನು ಸ್ಥಾನ ಪಲ್ಲಟ ಗೊಳಿಸಲಾಗಿದೆ. ಇದನ್ನು ಅಲೆಗ್ಸಾಂಡರ್ ಗ್ರಿನಲಾ ಮತ್ತು ಗಾಲಿಂಗ್‌ರವರ ಪೋಟೋಗ್ರಾಫಿಯಿಂದ ತಿಳಿಯಬಹುದು. ರಾಯಗೋಪುರದ ಬಲಭಾಗದ ಮಂಟಪವನ್ನು ತೆಗೆಯದೇ ಅದಕ್ಕೆ ಹಾಗೆಯೇ ಗೋಡೆಯನ್ನು ನಿರ್ಮಿಸಲಾಗಿದೆ. ಈಗ ಗೃಹದೋಪಾದಿಯಲ್ಲಿರುವುದು ಕುತೂಹಲಕಾರಿ ಅಂಶ. ರಾಬರ್ಟ್‌ಸಿವೆಲ್‌ನ ಆಡಳಿತದಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯಗಳಿಗೆ ತನ್ನ ಪ್ರೋತ್ಸಾಹ ನೀಡಿರುವುದು ಪ್ರಶಂಸ ನೀಯ. ಇವನ ಅವಧಿಯಲ್ಲಿ ಕೈಗೊಂಡ ರಕ್ಷಣಾ ಕಾರ್ಯಗಳೆಂದರೆ, ಹಂಪಿ ವಿರೂಪಾಕ್ಷ ಸ್ವಾಮಿಯ ಬೃಹತ್ ಗೋಪುರದ ಮುಂಭಾಗ ಮತ್ತು ಪಶ್ಚಿಮ ಭಾಗ ಬಿರುಕು ಬಿಟ್ಟಿದ್ದರಿಂದ ನಾಲ್ಕು ಕಬ್ಬಿಣದ ತೊಲೆಗಳನ್ನು ಪೂರ್ವ ಮಹಾದ್ವಾರದ ಕಮಾನಿಗೆ ತೊಡಿಸಲಾಗಿದೆ. ಅದೇ ಗೋಪುರದ ಭಾರವನ್ನು ಎರಡು ಗೋಡೆಗಳಲ್ಲಿ ತೋರ್ಪಡಿಸುತ್ತದೆ. ಅದೇ ಗೋಪುರದ ಪಶ್ಚಿಮ ದ್ವಾರಕ್ಕೆ ನಾಲ್ಕು ಕಬ್ಬಿಣದ ಕಂಬಗಳನ್ನು ನಿಲ್ಲಿಸಿ, ಎರಡು ತೊಲೆಗಳನ್ನು ಅಡ್ಡಲಾಗಿ, ೨ ಬೋಧಿಗಳನ್ನು ಪೂರ್ವಪಶ್ಚಿಮವಾಗಿ ಇಡಲಾಗಿದೆ. ಇದರ ಕಾಲಮಾನ ೧೮೮೪ ರಿಂದ ೧೮೮೬ರಲ್ಲಿ ಆಗಿದೆ ಎನ್ನಬಹುದು.

ಇವುಗಳನ್ನು ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡಿರುವುದು ತಿಳಿದುಬರುತ್ತದೆ. ರಾಬರ್ಟ್ ಸಿವೆಲ್‌ನ ನಂತರ ಕಲೆಕ್ಟರನಾಗಿದ್ದ ಸಿ.ಎ. ಗಾಲ್ಟನ್ ಈ ಮೇಲಿನಂತೆ ರಕ್ಷಣೆ ವ್ಯವಸ್ಥೆಯನ್ನು ಉದಾರೀಕರಣಗೊಳಿಸಿದ್ದು, ಅವನ ಉದಾತ್ತ ಮನಸ್ಸು, ವರ್ಚಸ್ಸನ್ನು ಪ್ರತಿನಿಧಿಸುತ್ತದೆ. ಸ್ವಾತಂತ್ರ್ಯೋತ್ತರದಲ್ಲಿ ಈ ದೇವಾಲಯಕ್ಕೆ ಇನ್ನಷ್ಟು ರಕ್ಷಣಾ ಕಾರ್ಯ ಗಳನ್ನು ಕೈಗೊಳ್ಳಲಾಗಿದೆ.

೨. ವಿಠ್ಠಲ ದೇವಾಲಯ : ಬಹು ಆಕರ್ಷಣೀಯ ಶಿಲ್ಪ, ಸ್ಮಾರಕಗಳಿರುವ ದೇವಾಲಯವಿದು. ಮೂರು ಗೋಪುರಗಳಿದ್ದು, ಉತ್ಸವ ಮಂಟಪ, ಕಲ್ಯಾಣ ಮಂಟಪಗಳನ್ನು ಹೊಂದಿದ್ದು, ಮೂಲತಃ ವೈಷ್ಣವ ದೇವಾಲಯವಾಗಿದೆ. ಇದರ ಪೂರ್ವದ್ವಾರ, ದಕ್ಷಿಣ ದ್ವಾರಗಳ ಮೇಲ್ಭಾಗ ಕುಸಿದು ಬೀಳುವ ಸಂಭವವಿದ್ದರಿಂದ ಒಳಭಾಗಕ್ಕೆ ಕಬ್ಬಿಣದ ಸಲಾಕೆಗಳನ್ನು ಮತ್ತು ಕಲ್ಲಿನ ತೊಲೆಗಳನ್ನು ಗೋಡೆಗೆ ಸೇರಿಸಿದ್ದಾರೆ. ಹಂಪಿಯ ವಿಠ್ಠಲ ದೇವಾಲಯಕ್ಕೆ ಡ್ಯೂಕ್ ಆಫ್ ಬುಕಿಂಗ್ ಹ್ಯಾಂ ಭೇಟಿ ನೀಡಿ ಹೇಳುತ್ತಾನೆ. ವಿಠ್ಠಲ ಸುಂದರವಾದ ದೇವಾಲಯ (ಏಕಾಕೃತಿ ಶಿಲೆಗಳಿವೆ). ಮಧುರೆ ಅಥವಾ ವೆಲ್ಲೂರಿನ ದೇವಾಲಯಗಳಂತಿದೆ. ಈ ವಿಠ್ಠಲ ದೇವಾಲಯದ ಹಿಂಭಾಗದಲ್ಲಿ ಪ್ರತ್ಯೇಕ ಮಂಟಪಕ್ಕೆ ಒತ್ತುಗೋಡೆಯನ್ನು ಮತ್ತು ಮಂಟಪದ ಅರ್ಧಗೋಡೆ ಮಂಟಪಕ್ಕೆ ಒತ್ತುಗೋಡೆಯನ್ನು ಮತ್ತು ಮಂಟಪದ ಅರ್ಧಗೋಡೆ ಭಗ್ನಗೊಂಡಿದ್ದರಿಂದ ಪೂರ್ಣಗೊಳಿಸಲಾಗಿದೆ. ಇದು ಆರಂಭದ ಕಲೆಕ್ಟರುಗಳು ಮಾಡಿಸಿದ ಕೆಲಸವಲ್ಲ. ಇದೇ ದೇವಾಲಯದ ಪೂರ್ವ ಮಹಾದ್ವಾರಕ್ಕೆ ೧೮೫೬ರ ನಂತರ ಕಲ್ಲಿನಿಂದ ಮೂರು ಕಂಬಗಳನ್ನು ನಿರ್ಮಿಸಲಾಗಿದೆ. ಆಧಾರ ಕಂಬಗಳನ್ನು ಕಲ್ಯಾಣ ಮಂಟಪದಲ್ಲಿ ಎರಡು ದ್ವಾರಗಳಿಗೆ ಎರಡು ಕಂಬಗಳನ್ನು ನಿಲ್ಲಿಸಲಾಗಿದೆ. ಉತ್ತರಕ್ಕೆ ದೊಡ್ಡಗಾತ್ರದ ಒತ್ತುಗೋಡೆ ನಿರ್ಮಾಣ ಮಾಡಿರುವುದುಂಟು. ಇಡೀ ವಿಠ್ಠಲ ದೇವಾಲಯದಲ್ಲಿ ೧೭ಕ್ಕೂ ಹೆಚ್ಚು ಕಂಬಗಳನ್ನು ಸಹಾಯಕ್ಕೆ ನಿಲ್ಲಿಸಲಾಗಿದೆ. ಇಲ್ಲಿನ ಕಂಬಗಳಲ್ಲಿ ಶಬ್ದ ಪ್ರತಿಧ್ವನಿಸುವುದು, ಸಂಗೀತದಂತೆ ಗೋಚರಿಸುವುದನ್ನು ಅನೇಕರು ಅವುಗಳನ್ನು ಪರೀಕ್ಷಿಸುತ್ತಾರೆ.

ಹಂಪಿಯ ವಿಠ್ಠಲ ದೇವಾಲಯದ ಬಗ್ಗೆ ಡ್ಯೂಕ್ ಆಫ್ ಬ್ಯಾಕಿಂಗ್ ಹ್ಯಾಮ್ (Buke of Bucking ham) ಭೇಟಿ ನೀಡಿ ತನ್ನ ದಾಖಲೆಯಲ್ಲಿ ಈ ರೀತಿ ತಿಳಿಸುತ್ತಾನೆ : ‘Vittala Swami pagoda is self is a marvel of industry in carving and beautiful both-out line and detail, although the carving is not as a whole worked to the finished surface of the monoliths of madura or vellore. The delicacy of the colums in their several groups surpasses any work I have yet seen. It is much to be Lamented that this graceful structure has been so much injured and that so large a portion has fallen. The injuries appear to me mainly due to treasure seekers and to piligrms. The former have in many cases under mined the basements and the latter by lighting fires for cooking against the pillars have caused the granite to flake and this process has been constantly repeated until the pillars have become too trail for the support of the massive granite in posts and slabs of the roof. I think that measures should be taken to preserve these relics of a by gone age from further damage and that the collector should be authorised to employ a pensioner or other competent man at a small salary to prevent fires being lit with in this temple or any digging for treasure or stone within the precinets of the temple or the stalling of cattle in it and should take measures at the large annual gatherings to prevent injury ಎಂದು ಸರ್ಕಾರಕ್ಕೆ ವರದಿಯನ್ನು ಕಳುಹಿಸುತ್ತಾನೆ.[5]

ಕಲ್ಲಿನ ರಥ ಈ ದೇವಾಲಯದ ಆವರಣದಲ್ಲಿದ್ದು, ೧೮೫೬ರ ಮುನ್ನ ಗೋಪುರ ವನ್ನೊಂದಿತ್ತು. ಈಗ್ಗೆ ಒಂದು ಶತಮಾನದಿಂದ ಅದು ಇಲ್ಲ. ಇದರ ಬಿಡಿ ಭಾಗಗಳು ಬಿದ್ದು ನಾಶ ಹೊಂದುವ ಹಂತದಲ್ಲಿ ರಾಬರ್ಟಸಿವೆಲ್ ೧೮೯೪ರಲ್ಲಿ ಅದನ್ನು ಪಕ್ಕದಲ್ಲಿ ಇಡಿಸಿದನೆಂದು ತಿಳಿದುಬರುತ್ತದೆ. ಜೆ.ಡಿ.ಇ.ಗ್ರಿಬಲ್‌ರವರು ವಿಠ್ಠಲ ದೇವಾಲಯದ ಕಂಬ ಗಳನ್ನು, ಇತರ ಬಿಡಿಭಾಗಗಳನ್ನು ದುರಸ್ತಿಗೊಳಿಸಿದ್ದಕ್ಕೆ ಮತ್ತು ವಿನಾಶಗೊಳ್ಳಲು ಕಾರಣ ಗಳನ್ನು ಉಲ್ಲೇಖಿಸಿರುತ್ತಾರೆ.[6] ರಥದ ಪಕ್ಕದಲ್ಲಿರುವ ಮಂಟಪಕ್ಕೆ ಎರಡು ಸಹಾಯಕ ಕಂಬಗಳನ್ನು ನಿರ್ಮಿಸಲಾಗಿದೆ. ಇದರ ಪೂರ್ವಮಂಟಪದ ಕಂಬಗಳಿಗೆ ಒತ್ತು ಕಂಬದ ಗೋಡೆಯನ್ನು ಕಟ್ಟಿಸಲಾಗಿದೆ. ಮೊದಲಿಗೆ ಕಲೆಕ್ಟರುಗಳು ಪಿ.ಡಬ್ಲ್ಯೂ.ಡಿ ವತಿಯಿಂದ ಇದನ್ನು ಕಲ್ಲಿನಿಂದ ಒತ್ತು ಕಂಬಗಳನ್ನು ನಿರ್ಮಿಸಿದ್ದಾರೆ.

೩. ಪಟ್ಟಭಿರಾಮ ದೇವಾಲಯ : ಯಾವುದೇ ಒಂದು ದೇವಾಲಯ ನಿರ್ಮಿಸುವಾಗ ಅದಕ್ಕಿರುವ ಭೌಗೋಳಿಕ ವಾತಾವರಣವನ್ನು ಸೃಷ್ಟಿಸಿ, ರಸ್ತೆ, ಸಂಪರ್ಕವನ್ನು ಕಲ್ಪಿಸುತ್ತಿದ್ದರು. ಇದಕ್ಕೆ ಅತ್ಯುತ್ತಮ ಉದಾಹರಣೆ ಕಮಲಾಪುರದ ಪೂರ್ವ ದಿಕ್ಕಿಗಿರುವ ಪಟ್ಟಾಭಿರಾಮ ದೇವಾಲಯಕ್ಕೆ ಚೌಕಾಕಾರದ ಸುತ್ತುಗೋಡೆ ಮತ್ತು ಆವರಣವನ್ನು ನಿರ್ಮಿಸಲಾಗಿದೆ. ಮೂರು ಗೋಪುರಗಳಿಗೆ ರಕ್ಷಣೆ ಮಾಡಿದ್ದು, ಇದರಲ್ಲಿ ಕಲ್ಯಾಣ ಮಂಟಪದ, ಮಹಾಮಂಪಟ ಗಳಿದ್ದು ಅವುಗಳಿಗೆ ಆಗ್ನೇಯ ದಿಕ್ಕಿಗಿರುವ ಕಲ್ಯಾಣ ಮಂಟಪಕ್ಕೆ ಎರಡು ಒತ್ತುಗೋಡೆಗಳನ್ನು ನಿರ್ಮಿಸಿದ್ದಾರೆ. ಈಶಾನ್ಯ ದಿಕ್ಕಿಗಿರುವ ಬಾವಿಗೆ ಸುತ್ತಲೂ ಕಟ್ಟೆಯನ್ನು ಮೇಲ್ಭಾಗದಲ್ಲಿ ಕಟ್ಟಿಸಿ, ಗಾರೆಯನ್ನು ಮೆತ್ತಲಾಗಿದೆ. ದೇವಾಲಯದ ಪ್ರವೇಶದ್ವಾರಕ್ಕೆ ಗೋಲಾಕಾರದ ದ್ವಾರಬಾಗಿಲು ಎಂತಲೂ ಕರೆಯುತ್ತಾರೆ.

ದೇವಾಲಯದ ಪೂರ್ವದ್ವಾರ ಬಾಗಿಲಿನ ಒಳಭಾಗದಲ್ಲಿ ತೊಲೆಗಳು ಸೀಳಿದ್ದರಿಂದ ಕಟ್ಟಡದ ಒಳಭಾಗದಲ್ಲಿ ದೇವಾಲಯದ ಹಿಂಭಾಗದಲ್ಲಿ ದೊಡ್ಡಗಾತ್ರದ ಒತ್ತುಗೋಡೆಯನ್ನು ಸಹ ನಿರ್ಮಿಸಲಾಗಿದೆ. ಇದನ್ನು ಪುನಃ ೧೯೬೪-೬೫ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ದುರಸ್ತಿ ಕಾರ್ಯವನ್ನು ಕೈಗೊಂಡಿತ್ತು.

೪. ಸರಸ್ವತಿ ದೇವಾಲಯ : ಚಂದ್ರಶೇಖರ ದೇವಾಲಯದ ಉತ್ತರ ದಿಕ್ಕಿಗಿದೆ. ಬ್ರಿಟಿಷರ ಕಾಲದಲ್ಲಿ ಬಲಭಾಗದ ಗೋಡೆಯನ್ನು ಇದಕ್ಕೆ ನಿರ್ಮಿಸಿದ್ದಾರೆ. ಆಧುನಿಕ ವಿಧಾನವನ್ನನು ಸರಿಸಿ ಮೆಟ್ಟಲುಗಳನ್ನು ಮಾಡಲಾಗಿದೆ. ಇದನ್ನು ರಕ್ಷಣೆ ಮಾಡಿದ ಕಾಲಮಾನ ನಿಖರವಾಗಿ ತಿಳಿದುಬಂದಿಲ್ಲ. ಇದಲ್ಲದೆ ಪಶ್ಚಿಮ ಭಾಗದ ಗೋಡೆ ಬಿದ್ದಿದ್ದರಿಂದ ಅದನ್ನು ಪೂರ್ಣಗೊಳಿಸ ಲಾಗಿದೆ. ಇದನ್ನು ದುರಸ್ತಿ ಮಾಡಿಸಿದ ವ್ಯಕ್ತಿ, ಸಂದರ್ಭಗಳ ಮಾಹಿತಿಗಳು ಕಣ್ಮರೆಯಾಗಿದೆ.

೫. ಚಂದ್ರಶೇಖರ ದೇವಾಲಯ : ಕಮಲಾಪುರದ ಉತ್ತರ ದಿಕ್ಕಿಗಿದೆ. ಇದಕ್ಕೆ ಮೂರು ಕಡೆ ಸುತ್ತು ಗೋಡೆಗೆ ಪುನಃ ಕಟ್ಟಡ ಕಟ್ಟಿಸಿ, ನಂತರ ಭಾಗಗಳನ್ನು ಜೀರ್ಣೋದ್ಧಾರ ಮಾಡಿಸಿರು ವುದು ಗಮನಾರ್ಹ. ಕಲ್ಲು, ಇಟ್ಟಿಗೆ ಮತ್ತು ಗಾರೆ ಬಳಕೆ ಮಾಡಿರುವುದು ಔಚಿತ್ಯಪೂರ್ಣ ವಾಗಿದೆ. ಇದರ ಪಶ್ಚಿಮ ಭಾಗದಲ್ಲಿ ಪ್ರಕಾರ ಗೋಡೆ ಬಿದ್ದುದರಿಂದ ಅದಕ್ಕೆ ಪುನಃ ಕಟ್ಟಡ ವನ್ನು ಅದೇ ಜಾಗದಲ್ಲಿ ನಿರ್ಮಿಸಿದ್ದಾರೆ. ಇತ್ತೀಚೆಗೆ ಅನುಕೂಲಕ್ಕೆ ತಕ್ಕಂತೆ ಪ್ರಕಾರ ಗೋಡೆ ಯನ್ನು ಕಿರಿದಾರಿ ಮಾಡಿಕೊಂಡು, ಮಹಾದ್ವಾರದ ಬಳಕೆ ಕಡಿಮೆಯಾಗಿದೆ.

೬. ಶಿವ ದೇವಾಲಯ : ಇದು ವಿಠಲ ದೇವಾಲಯದ ಉತ್ತರಕ್ಕಿದೆ. ಭಗ್ನಗೊಂಡಿರುವ ಕಟ್ಟಡಗಳಲ್ಲಿ ಇದು ಸಹ ಸೇರಿದೆ. ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ಇದಕ್ಕೆ ಸಹಾಯಕ ಗೋಡೆಯನ್ನು ಕಟ್ಟಲಾಗಿದೆ. ದೇವಾಲಯದ ಮಂಟಪದಲ್ಲಿ ಒತ್ತು ಕಂಬಗಳನ್ನು ಸುಮಾರು ೫-೬ ಕಡೆ ನಿರ್ಮಿಸಿದ್ದಾರೆ. ೧೯೦೪ರಲ್ಲಿ ಪ್ರಾಚೀನ ಸ್ಮಾರಕಗಳ ಸಂರಕ್ಷಣ ಕಾಯ್ದೆಯ ನಂತರ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಗರ್ಭಗೃಹ ಇತರ ಮಂಟಪಗಳಿಗೆ ನಾಲ್ಕು ಗೋಡೆಗಳಿಗೆ ಒತ್ತು ಗೋಡೆಗಳನ್ನು ನಿರ್ಮಿಸಲಾಗಿದೆ.

೭. ಚಂಡಿಕೇಶ್ವರ ದೇವಾಲಯ : ಇದು ಉದ್ದಾನ ವೀರಭದ್ರಸ್ವಾಮಿ ದೇವಾಲಯದ ಉತ್ತರ ಕ್ಕಿದೆ. ಈ ದೇವಾಲಯದ ಅವಶೇಷಗಳು ಸ್ಥಳಾಂತರಗೊಂಡಿದ್ದರಿಂದ ಗರ್ಭಗೃಹದ ಬಲ ಭಾಗಕ್ಕೆ ಒತ್ತು ಗೋಡೆಯನ್ನು ಕಟ್ಟಡದ ಮೇಲ್ಭಾಗಕ್ಕೆ ಕುಂಬೆಗೆ ಕಲ್ಲಿನ ಕಿರುಗೋಡೆಯನ್ನು ನಿರ್ಮಿಸಿದ್ದು ಕಂಡುಬರುತ್ತವೆ. ಅಲ್ಲದೆ ೧೯೫೩ಕ್ಕಿಂತ ಮೊದಲು ನಿರ್ಮಾಣ ಕಾರ್ಯ ಆಗಿದೆ ಎಂದು ಹೇಳಬಹುದು.

೮. ಹಜಾರರಾಮ ದೇವಾಲಯ : ಮಹಾನವಮಿ ದಿಬ್ಬದ ವಾಯವ್ಯ ಭಾಗಕ್ಕಿದೆ. ಈ ದೇವಾಲಯದ ಪಶ್ಚಿಮಕ್ಕೆ ಗೋಳಾಕಾರದ ಕಮಾನಿನ ದ್ವಾರವಿದ್ದು (ಪಟ್ಟಣ ನಿವೇಶನದ ಆಗ್ನೇಯಕ್ಕೆ) ೧೮೫೬ರಲ್ಲಿ ವಿನಾಶದ ಹಂತದಲ್ಲಿತ್ತು. ಸುತ್ತು ಗೋಡೆಗೆ ಮತ್ತು ಅದರ ಕಮಾನು ದ್ವಾರವಿದ್ದು ಸಹಾಯಕ ಕಿರುಗೋಡೆಗಳನ್ನು ನಿರ್ಮಿಸಲಾಗಿದೆ. ಈ ಪ್ರಕಾರ ಗೋಡೆಗೆ ಒತ್ತು ಗೋಡೆಯನ್ನು ಮತ್ತು ಮೇಲ್ಛಾವಣೆ ಭಗ್ನಗೊಂಡಿದ್ದಕ್ಕೆ ಕಟ್ಟಡವನ್ನು ಪೂರ್ಣಗೊಳಿಸಲಾಗಿದೆ. ಆನೆಗಳು, ಕುದುರೆಗಳು, ಕಾಲಾಳುಗಳು, ಕುದುರೆ ಆಳುಗಳು ಇನ್ನಿತರ ಶಿಲ್ಪಗಳನ್ನು ಮಣ್ಣಿನಿಂದ ಮರೆಯಾಗಿದ್ದವನ್ನು ಆಂಗ್ಲ ಆಧಿಕಾರಿಗಳು ಮಾಡಿಸಿದ ದುರಸ್ತಿ ಕಾರ್ಯಗಳಿಂದ ಬೆಳಕಿಗೆ ಬಂದಿವೆ. ಹಜಾರರಾಮದೇವಾಲಯ ಕುರಿತು ಲಾಂಗ್ ಹರ್ಟ್ಸ ಈ ರೀತಿ ಅಭಿಪ್ರಾಯಿಸಿದ್ದಾರೆ. “ಈ ದೇವಾಲಯದ ಆವರಣದ ಗೋಡೆಯನ್ನು ಪೂರ್ಣಗೊಳಿಸಿ, ಹೊರಗೋಡೆಗೆ ಒತ್ತು ಗೋಡೆಯನ್ನು, ಮಂಟಪಕ್ಕೆ ಸಹಾಯಕ ಕಂಬಗಳನ್ನು ನಿರ್ಮಿಸಲಾಗಿದೆ. ಇದು ಲೋಕೋಪಯೋಗಿ ಇಲಾಖೆಯಿಂದ ನೆರವೇರಿತ್ತು.[7]

೯. ಪಟ್ಟಣದ ಯಲ್ಲಮ್ಮ : ಹಜಾರರಾಮ ದೇವಾಲಯದಿಂದ ಕಿರುದಾರಿ ಮೂಲಕ ಹೋದರೆ (ಪಾನ ಸುಪಾರಿ ಬಜಾರು) ಇದು ಕಾಣಬರುತ್ತದೆ. ಈ ದೇವತೆ ಹಿಂದಿನ ಕಾಲದಲ್ಲಿ ನಗರದ  ಆರಾಧ್ಯ ದೇವತೆಯಾಗಿದ್ದ ಬಗ್ಗೆ ಶಾಸನ ಉಲ್ಲೇಖವಿದೆ. ಸುಮಾರು ಏಳು ತಲೆಮಾರಿನಿಂದ ಇಂದಿನವರೆಗೆ ಕುರುಬರು ಪೂಜಾರಿಗಳಾಗಿ ಕರ್ತವ್ಯವನ್ನು ಮುಂದುವರೆಸುತ್ತಾರೆ. ಇದಕ್ಕೆ ಬ್ರಿಟಿಷರು ಯಾವ ರೀತಿಯ ರಕ್ಷಣೆಯನ್ನು ಕೊಟ್ಟರೆಂಬುದು ತಿಳಿದುಬಂದಿಲ್ಲ. ಗಾರೆ ಮತ್ತು ಇಟ್ಟಿಗೆಂದ ಮೇಲ್ಛಾವಣೆ ಗೋಡೆ, ಭಾಗವನ್ನು ಸರಿಪಡಿಸಲಾಗಿದೆ. ಇದಕ್ಕೆ ವಿದ್ಯುತ್, ದ್ವಾರಗಳಿಗೆ ಬಾಗಿಲುಗಳಿಗೆ ಆಧುನಿಕ ಉಪಕರಣಗಳನ್ನು ಇತ್ತೀಚೆಗೆ ಮಾಡಲಾಗಿದೆ. ಇದರ ಪಕ್ಕದಲ್ಲಿರುವ ಮಾಧವ ದೇವಾಲಯ ವಿನಾಶ ಹೊಂದಿದ್ದು, ಅದರ ಹತ್ತಿರ ಅಷ್ಟಕೋನಾ ಕೃತಿಯ ಕಾವಲುಗೋಪುರವಿದೆ. ಇದರ ದಕ್ಷಿಣ ಭಾಗಕ್ಕಿರುವ ಭಗ್ನಗೊಂಡ ಗೋಡೆಗೆ ಮತ್ತೊಮ್ಮೆ ಗೋಡೆಯನ್ನು ಕಟ್ಟಲಾಗಿದೆ. ಇದು ಬಹುಶಃ ಇದೇ ಶತಮಾನದ ಪೂರ್ವಾರ್ಧ ದಲ್ಲಿ ಆಗಿರಬೇಕು.[8]

೧೦. ಮಾತಂಗ ಪರ್ವತ : ಹಂಪಿ ಪರಿಸರದ ಬಹುಎತ್ತರದ ಪರ್ವತ ಇದಾಗಿದೆ. ಶಿಖರ ಭಾಗದಲ್ಲಿ ಸುಂದರ ದೇವಾಲಯವಿದೆ. ಸಹಸ್ರಾರು ಅಡಿಗಳ ಎತ್ತರಕ್ಕೆ ಹತ್ತುವುದು ವಿಶಿಷ್ಟ ಅನುಭವವೇ ಸರಿ. ಪರ್ವತಕ್ಕೆ ಹತ್ತಲು ಇರುವ ಮೆಟ್ಟಿಲುಗಳ ರಿಪೇರಿ, ಹವಾಮಾನ ದೃಷ್ಟಿ ಯಿಂದ ಮೇಲ್ಭಾಗದ ವೀರಭದ್ರ ದೇವಾಲಯಕ್ಕೆ ಸುತ್ತುಗೋಡೆಯನ್ನು ನಿರ್ಮಿಸಲಾಗಿದೆ. ಅಪಾಯವನ್ನು ತಪ್ಪಿಸುವ ಸಲುವಾಗಿ ಇಂತಹ ಸ್ತುತ್ಯಾರ್ಹ ಕೆಲಸಗಳನ್ನು ಕಲೆಕ್ಟರುಗಳು ಮಾಡಿರುವುದು ಅಭಿನಂದನಾರ್ಹ.

೨. ನಾಗರಿಕ ಕಟ್ಟಡಗಳು

೧. ಅಷ್ಟಕೋನಾಕೃತಿಯ ನೀರಿನ ತೊಟ್ಟಿ : ಕಮಲಾಪುರದಿಂದ ಹಂಪಿಗೆ ಹೋಗುವ ದಾರಿ ಯಲ್ಲಿ ಕಂಡುಬರುತ್ತದೆ. ಇದು ಅಷ್ಟಭುಜಾಕೃತಿಯ ನೀರಿನ ಚಿಲುಮೆ. ದೊಡ್ಡಗಾತ್ರದ ಮೂರು ಒತ್ತುಗೋಡೆಗಳನ್ನು ತೆರೆದ ಕಮಾನು ದ್ವಾರಗಳಿಗೆ ನಿರ್ಮಿಸಲಾಗಿದೆ. ಈ ಕಟ್ಟಡ ಶಾಶ್ವತವಾಗಿ ಈವರೆಗಿರಲು ಸುತ್ತಲೂ ಮೂರುಕಡೆ ನಿರ್ಮಿಸಿದ ಒತ್ತುಗೋಡೆಗಳೇ ಕಾರಣ ವೆನ್ನಬಹುದು. ಬ್ರಿಟಿಷ್ ಇಂಜಿನೀಯರುಗಳು, ಲೋಕೋಪಯೋಗಿ ಇಲಾಖೆ ವತಿಯಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ಇಂದು ಸ್ಮಾರಕವಾಗಿ ಇದು ತನ್ನ ದಾರುಣ ಸ್ಥಿತಿಯನ್ನು ಜನರಿಗೆ ತೋರಿಸಿಕೊಟ್ಟಿದೆ.

೨. ಮಹಾನವಮಿ ದಿಬ್ಬ : ೧೮೯೩ರಲ್ಲಿ ಬಳ್ಳಾರಿ ಜಿಲ್ಲಾ ಕಲೆಕ್ಟರ್ ರಾಬರ್ಟ ಸಿವೆಲ್ ಮಹಾನವಮಿ ದಿಬ್ಬದಲ್ಲಿ ಮಣ್ಣಿನಿಂದ ಆವೃತವಾಗಿದ್ದ ಅಥವಾ ಹೂತು ಮರೆಯಾಗಿದ್ದ ಶಿಲ್ಪವನ್ನು ಶೋಧಿಸಿ ಬೆಳಕಿಗೆ ತಂದರಲ್ಲದೆ, ರಕ್ಷಣೆಯನ್ನು ಒದಗಿಸಲಾಗಿದೆ. ಈಗ ಅದು ಮಹಾನವಮಿ ದಿಬ್ಬದ ವಾಯುವ್ಯ ಭಾಗಕ್ಕಿದೆ. ಮನಮೋಹಕವಾಗಿರುವ ಈ ಶಿಲ್ಪವನ್ನು ದಿವಂಗತ ಮಲ್ಲಿಸೇನಾ ಮಲದಾರಿ ದೇವನು ಜೈನ ಶಿಕ್ಷಕ ಕೆತ್ತಿ ಶಾಸನ ಬರೆದನೆಂದು ತಿಳಿದುಬರುತ್ತದೆ.[9]

ಮೆಡೋಸ್ ಟೇಲರ್ ಮತ್ತು ಫರ್ಗ್ಯೂಸನ್ ಹಂಪಿ ಸ್ಮಾರಕಗಳ ಬಗ್ಗೆ ಕೃತಿ ರಚಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ಯಾವ ಯಾವ ಸ್ಮಾರಕಕ್ಕೆ ರಕ್ಷಣೆ, ಅಳತೆ ಮಾಡಿಸಿದ್ದರು. ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಆಗಿದ್ದ ಮಿ. ಹಂಟ್ಲೆ ಗೊರ್ಡನ್ ಜೊತೆಗೂಡಿ ಹಂಪೆಯ ಅವಶೇಷ ಗಳನ್ನು ವೀಕ್ಷಿಸಲು ಟೇಲರ್ ತೆರಳಿದ್ದನು. ಕಟ್ಟಡಗಳ ಬಗ್ಗೆ ಅಧ್ಯಯನ ನಡೆಸಿದರು. ಗಜ ಶಾಲೆಯು ಹಿಂದೂ-ಮುಸ್ಲಿಂ ವಾಸ್ತುಶೈಲಿ ಹೊಂದಿರುವುದನ್ನು ತಿಳಿಸುತ್ತಾರೆ. ಅದೇ ಅರಮನೆ ಕಟ್ಟಡ ಗಜಶಾಲೆಗೆ ಹತ್ತಿರ ಪಶ್ಚಿಮಕ್ಕೆ ದೊಡ್ಡ ಗಾತ್ರದ ರಕ್ಷಣ ಗೋಡೆ ಆವರಣದಲ್ಲಿ ಅರಮನೆ ಇತ್ತು. ಈಗ ಉಳಿದಿರುವುದು ಅವಶೇಷಗಳಷ್ಟೆ. ಮುಸ್ಲಿಂ ಅರಸರ ಆಡಳಿತದಲ್ಲಿ ಇವು ನಾಶ ಆದವು ಎಂದು ಹಿಂದೂಗಳ ಭಾವನೆಯಲ್ಲಿದೆ. ಮುಸ್ಲಿಂರ ಕಮಾನು, ಮಸೀದಿ ಗಳಿವೆ. ಭಗ್ನಗೊಂಡಿರುವ ಅವಶೇಷಗಳೇ ಹೆಚ್ಚು. ವಿಜಯವಿಠ್ಠಲ ದೇವಾಲಯ ಸುಮಾರು. ೧೧೦ ಅಡಿಗಳ ದೊಡ್ಡ ದೇವಾಲಯ ಅರಮನೆಯ ಈಶಾನ್ಯ ದಿಕ್ಕಿಗಿದೆ. ಇದು ೮೦೦ ಅಡಿ ವಿಸ್ತಾರದ ಪ್ರಾಂಗಣದಲ್ಲಿದೆ. ೧೧೦ ಅಡಿ ಉತ್ತರ-ದಕ್ಷಿಣ ೨೦೦ ಅಡಿ ಪೂರ್ವ-ಪಶ್ಚಿಮಕ್ಕಿದೆ. ದೇವಾಲಯದ ಹೊರಗೋಡೆ ಉಬ್ಬು ಶಿಲ್ಪಗಳಲ್ಲಿ ಕುದುರೆ, ಆನೆ, ಒಂಟೆ, ಸೈನಿಕರು, ನೃತ್ಯ ಮಾಡುವ ಸ್ತ್ರೀಯರು ಇವರ ಕೆತ್ತನೆಗಳಿವೆ. ಕಣಶಿಲೆ, ಕಪ್ಪುಶಿಲೆಯಲ್ಲಿ ಕೆತ್ತಲಾಗಿದೆ. ಗೋಡೆ ಹೊರಭಾಗದಲ್ಲಿ ರಥ ಇತರ ಸೈನಿಕರ, ಅರಣ್ಯ ಕಾವಲುಗಾರರ ಚಿತ್ರಗಳಿವೆ.

ಮಹಾನವಮಿ ದಿಬ್ಬಕ್ಕೆ ಪ್ಲಾಟ್ ಫಾರಂ ಎನ್ನುತ್ತಾರೆ. ಹೊರಗಡೆ ಸುತ್ತಲೂ ಗೋಡೆಗಳಿವೆ. ಜಿಂಕೆ, ಆನೆ, ಒಂಟೆ, ಹುಲಿ ಬೇಟೆ ಚಿತ್ರಗಳನ್ನು ಸುಂದರವಾಗಿ ಕೆತ್ತಲಾಗಿದೆ. ನೃತ್ಯ ಮಾಡುವ ಬಾಲಕಿಯರಿದ್ದರು. ಅರಮನೆ ಕಟ್ಟಡದಿಂದ ದಕ್ಷಿಣಕ್ಕೆ ೬೦೦ (ಅಡಿ ಅಂಗಲು) ಅಂಗುಲ ಗಳಿವೆ. ಒಟ್ಟು ಎತ್ತರ ೩೧ ಅಡಿಗಳು. ಇದರ ಬಳಿ ಕೊಳಯಿದೆ. ಕೆಳಗಡೆಯಿಂದ ಮೇಲೆ ಹತ್ತಲು ಮೆಟ್ಟಿಲುಗಳಿವೆ. ಒಳಗಡೆಯಿಂದ ಮೇಲಕ್ಕೆ ಹತ್ತಲು ಮೆಟ್ಟಿಲು-ಒಳದಾರಿಯಿದೆ. ಇದಕ್ಕೆ ಮಹಾನವಮಿ ದಿಬ್ಬ ಅಥವಾ ದಸರಾ ದಿಬ್ಬ ಎನ್ನುತ್ತಾರೆ. ಇದರ ಆಗ್ನೇಯಕ್ಕೆ ಸು. ೧೫೦ ಅಂಗುಲ ಕೆರೆಯಿದೆ.

೩. ರಾಣಿ ಸ್ನಾನದ ಗೃಹ : ಇದು ೭೮ ಅಡಿ ೫ ಇಂಚು ಸ್ಕ್ವೆಯರ್ ಅಡಿಗಳ ಪ್ಲಾನ್. ನಡುವೆ ನೀರು ನಿಂತುಕೊಳ್ಳುವ ಭಾಗ ೫೦ ಅಡಿ ೯ ಇಂಚುಗಳಲ್ಲಿದೆ. ೬ ಅಡಿ ಆಳವಿದೆ. ಉತ್ತಮ ಕೆತ್ತನೆ ಕಂಬಗಳು, ಗಾರೆಕೆಲಸ ನಾಲ್ಕು ಕಡೆ ಸ್ನಾನ ಮಾಡಲು ಉಡುಗೆ ತೊಡುಗೆ ದೊಡ್ಡ ಕಿಟಕಿಗಳಿವೆ. ಮೂರು ತೆರೆದಿವೆ. ಕೆಲವು ಭಗ್ನಗೊಂಡಿವೆ.

೪. ಮಾಲ್ಯವಂತ ರಘುನಾಥ ದೇವಾಲಯ : ಕಮಲಾಪುರದ ಪ್ರವಾಸಿ ಮಂದಿರದಿಂದ ೧ ೧/೨ ಮೈಲು ದೂರವಿದೆ. ಮೂರು ಗೋಪುರಗಳು, ಸಣ್ಣ ಸಣ್ಣ ಬೆಟ್ಟಗಳು, ದ್ರಾವಿಡ ಶೈಲಿಯ ವಾಸ್ತು ಹೊಂದಿದೆ. ಮಂಟಪ ಇವರ ಸ್ಮಾರಕಗಳನ್ನು ಹೊಂದಿವೆ. ಇದಕ್ಕೆ ಬ್ರಿಟಿಷರು ರಕ್ಷಣೆ ಕೆಲಸ ಮಾಡಿಸಿದ್ದಾರೆ. ಯಾತ್ರಿಗಳ ಆರಾಧನಾ ಕೇಂದ್ರವಿದು. ಅನೇಕ ಶುಭ ಕಾರ್ಯ ಗಳು ಇಲ್ಲಿ ಜರುಗುತ್ತವೆ.

೫. ಅಷ್ಟಭುಜಾಕೃತಿಯ ಸ್ನಾನದ ಗೃಹ : ಇದು ಸರಸ್ವತಿ ದೇವಾಲಯದ ಹತ್ತಿರವಿದೆ. ತೆರೆದ ಮಂಟಪದ ಕಂಬಗಳಿಂದ ಸುತ್ತುವರೆದಿದ್ದು, ಸುತ್ತಲೂ ಅಲ್ಲಲ್ಲಿ ಕಂಡಿ ಕೊರೆದಿರುವ ಕಲ್ಲಿನ ಕಂಬಗಳನ್ನು ನಿಲ್ಲಿಸಲಾಗಿದೆ. ಬಹುಶಃ ಇದರ ಸುತ್ತಲೂ ದಾರ ಏರಿಸಿ ವಸ್ತ್ರಗಳಿಂದ ಅದನ್ನ ಮರೆ ಮಾಡುವುದಿರಬೇಕು. ಈ ವಿಧಾನವು ಒಳಗೆ ಸ್ನಾನ ಮಾಡುವವರು ಹೊರಗಿನ ಜನಕ್ಕೆ ಕಾಣಬಾರದೆಂದು ಇದ್ದಿರಬಹುದು.

೬. ನೀರಿನ ಬುರುಜು : ಇದು ಕೂಡ ಚಂದ್ರಶೇಖರ ದೇವಾಲಯದ ಪಕ್ಕದಲ್ಲಿದೆ. ಈಗ ಅವಶೇಷಗಳು ಮಾತ್ರ ಕಂಡುಬರುತ್ತವೆ. ಬಿರುಕು ಬಿಟ್ಟಿರುವ ಕಡೆ ಗಾರೆಯಿಂದ ನಯವಾಗಿ ಮೆತ್ತಿದ್ದಾರೆ. ಇನ್ನು ಉಳಿದ ಭಾಗ ತೆರೆದಿದ್ದು, ನಿಶ್ಚಲವಾಗಿದೆ. ಇದನ್ನು ಲೋಕೋಪಯೋಗಿ ಇಲಾಖೆ ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ಮಾಡಿಸಿರಬಹುದು.

೩. ಇತರ ಲೋಕೋಪಯೋಗಿ ರಕ್ಷಣಾ ಕಾರ್ಯಗಳು

೧. ಕಾಲುವೆಗಳ ನಿರ್ಮಾಣ : ೧೮೫೬ರಲ್ಲಿ ಕಲೆಕ್ಟರ್ ಎ. ಹ್ಯಾಥವೇ ತುಂಗಾಭದ್ರಾ ಕಾಲುವೆ ಗಳನ್ನು ದುರಸ್ತಿ ಮಾಡಿಸಿದನಲ್ಲದೆ, ಸ್ಥಾನಿಕ ಕಾರ್ಯಗಳ ಬಗೆಗೆ ಬಳ್ಳಾರಿ ಜಿಲ್ಲಾ ಡೆಪ್ಯುಟಿ ಚೀಫ್ ಇಂಜಿನೀಯರ ಪಿ.ಡಬ್ಲ್ಯೂ.ಡಿ. ವತಿಯಿಂದ ಈ ಕಾರ್ಯವನ್ನು ನೇರವೇರಿಸಿತು. ಕಮಲಾಪುರ, ಚಿತ್ತವಾಡ್ಗಿ, ಕಡ್ಡಿರಾಂಪುರ, ತಳವಾರಘಟ್ಟ, ಢಣಾಪುರ, ಬುಕ್ಕಸಾಗರ, ವೆಂಕಟಾಪುರ, ಹಂಪಿ, ರಾಮಸಾಗರ, ಕಂಪ್ಲಿ, ಸಿರುಗುಪ್ಪ ಮತ್ತು ದೇಶನೂರುಗಳಲ್ಲಿ ಈ ನದಿಯ ಕಾಲುವೆಗಳಿಗೆ ನೀರಗಂಟಿಗಳನ್ನು ನೇಮಿಸಿದ್ದು, ಆಡಳಿತದ ವರದಿಗಳಲ್ಲಿ ತಿಳಿದು ಬರುತ್ತದೆ. ಅಂದಿನಿಂದ ಸ್ವದೇಶಿಯರಲ್ಲಿ ಕೆರೆ ಕಟ್ಟೆಗಳ, ಪ್ರಾಚೀನ ಸ್ಮಾರಕಗಳ ಬಗ್ಗೆ ಆಸಕ್ತಿ ಬೆಳೆಯಿತು. ಅಂದರೆ ರಕ್ಷಣಾ ಮನೋಭಾವ ಉದಯಿಸಿತೆಂದೇ ಅರ್ಥ.

೨. ಕೋಟೆಗಳು : ಹಂಪಿಯ ಪರಿಸರದಲ್ಲಿ ಭಗ್ನಗೊಂಡ ಮತ್ತು ಶಾಶ್ವತವಾಗಿರುವ ಐದಾರು ಕೋಟೆಗಳು ಕಂಡುಬರುತ್ತವೆ. ಜಿಲ್ಲಾ ಕಲೆಕ್ಟರುಗಳು ಈ ಕಡೆ ಹೆಚ್ಚಿನ ಗಮನ ಕೊಡಲಾಗ ದಿದ್ದರೂ, ಸಾಧಾರಣವಾಗಿ ನಿರ್ಮಿಸಿದ ಕೋಟೆಗಳ ಉಲ್ಲೇಖ, ದುರಸ್ತಿ ಕಾರ್ಯಗಳನ್ನು ಕೈಗೊಂಡಿರುವುದು ಕಂಡುಬರುತ್ತದೆ. ಜನಾನ ಸುತ್ತು ಆವರಣ (ಅಂತಃಪುರ)ದ ಪಶ್ಚಿಮ ದ್ವಾರ ಮತ್ತು ಪೂರ್ವಗಳ ಮೇಲ್ಭಾಗದ ಗೋಡೆಗೆ ಕಲ್ಲಿನಿಂದ ಗೋಡೆಯನ್ನು ಪೂರ್ಣಗೊಳಿಸಿ ದ್ದಲ್ಲದೆ, ಆವರಣದ ಗೋಡೆಗೆ ನಾಲ್ಕಾರು ಹತ್ತಿರ ಒತ್ತು ಗೋಡೆಗಳನ್ನು ಕಟ್ಟಿದ್ದಾರೆ. ಇದನ್ನು ಮೊದಲು ಮಹಮದ್ದೀಯರು ಎರಡು ದ್ವಾರಗಳಿಗೆ ಕಬ್ಬಿಣದ ಸಲಾಕೆ ಮತ್ತು ಸಿಮೆಂಟ್ ಕಾಂಕ್ರೀಟ್‌ನಿಂದ ದುರಸ್ತಿಗೊಳಿಸಿದ್ದು ಸ್ವಾಗತಾರ್ಹವೆನಿಸಿದೆ. ಮೊದಲು ಕಮಾನು ದ್ವಾರವಿದ್ದು, ಈಗ ಟ್ರಾಬಿಯೆಟ್ ವಿಧಾನದಲ್ಲಿದೆ. ಇದು ೧೮೯೦ರ ದಶಕದಲ್ಲಿ ಪಿ.ಡಬ್ಲ್ಯೂ. ಡಿ. ವತಿಯಿಂದ ಮತ್ತು ಅನಂತಪುರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಿಂದ ಪುರಾತತ್ವ ಇಲಾಖೆಯವರು ರಕ್ಷಣಾ ಕಾರ್ಯಗಳನ್ನು ಕೈಗೊಂಡಿರುವುದು ಸ್ಮರಣೀಯ. ಆಂಗ್ಲ ಅಧಿಕಾರಿಗಳ ಹಾಗೂ ವಿದೇಶಿಯಾತ್ರಿಕರ ಹಿತದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಯವರು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಗೋಡೆಗಳಿಗೆ ಒತ್ತು ಗೋಡೆಗಳನ್ನು ನಿರ್ಮಿಸಿದ್ದು ಕಂಡುಬರುತ್ತದೆ.[10]

ಹಂಪಿಯ ಸ್ಮಾರಕಗಳು ವಿಜಯನಗರದ ಪೂರ್ವದಲ್ಲಿ ಕೆಲವು, ವಿಜಯನಗರ ಸಾಮ್ರಾಜ್ಯ ದಲ್ಲಿ ಹಲವು ನಿರ್ಮಾಣಗೊಂಡಿದ್ದು ನಿಶ್ಚಿತ. ವಿಜಯನಗರೋತ್ತರದಿಂದ ಸಾಕಷ್ಟು ನಿರ್ಮಾಣ ಕಾರ್ಯ ಆಗದಿದ್ದರೂ ರಿಪೇರಿ ಅಥವಾ ರಕ್ಷಣಾ ಕಾರ್ಯಗಳು ನಡೆದಿವೆ. ಇತಿಹಾಸದ ಆರಂಭದಿಂದ ಇಂದಿನವರೆಗೆ ಈ ಭಾಗದಲ್ಲಿ ಎಷ್ಟೊಂದು ಕ್ಷಾಮ, ಬರಗಾಲಗಳು ಉದ್ಭವವಾಗಿವೆಂಬುದನ್ನು ತಿಳಿಯುವುದಕ್ಕಿಂತ, ವಿಜಯನಗರೋತ್ತರದಿಂದ ಇಂದಿನವರೆಗೆ ಆದಂತ ಅತೀವೃಷ್ಟಿ ಮತ್ತು ಅನಾವೃಷ್ಟಿ ಚಿತ್ರಣ ಆಂಗ್ಲರ ಆಡಳಿತದ ವರದಿ, ಗ್ಯಾಜಟಿಯರ್ ಗಳಿಂದ ತಿಳಿದುಬರುತ್ತದೆ. ೧೮೬೬ರಲ್ಲಿ ಕ್ಷಾಮ ಬಂದಾಗ ಪರಿಹಾರ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿತ್ತು. ಆಗ ಕೋಟೆಗೋಡೆಗೆ ಕಂದಕ ಹಾಗೂ ಆಗಳನ್ನು ನಿರ್ಮಿಸುತ್ತಿದ್ದರು.[11] ಖ್ಯಾತ ಸ್ತಪತಿಗಳು ಸಹಾ ವಿದೇಶಗಳಿಂದ ಬಂದಿರುವುದು ತಿಳಿದುಬರುತ್ತದೆ. Jaoodella Ponte ಎಂಬ ವ್ಯಕ್ತಿ ಪೋರ್ಚುಗೀಸ್ ಗವರ್ನರ್‌ನಿಂದ ಆಜ್ಞೆ ಪಡೆದು ಗೋವಾದಿಂದ ವಿಜಯನಗರಕ್ಕೆ ಬಂದಿದ್ದನು. ಇಲ್ಲಿ ಕೆರೆ ಕಟ್ಟೆ ನಿರ್ಮಿಸುವಾಗ ಬ್ರಿಟಿಷರು ಕೆಲಸ ನಿರ್ವಹಿಸಿದ ಶ್ರಮಿಕನಿಗೆ ಪರಿಹಾರವನ್ನು ನೀಡುವುದರ ಮೂಲಕ ಕೂಲಿ ನೀಡುತ್ತಿದ್ದನು.

ಪ್ರವಾಸಿಗರಿಗೆ ಮತ್ತು ಕೃಷಿಕರಿಗೆ, ಇತರೆ ರೈತ ವರ್ಗದವಗೆ ಅನುಕೂಲವಾಗುವಂತೆ ನೀರಿನ ಬಾವಿಗಳನ್ನು ತೋಡಿಸಿದ್ದು, ಇರುವ ಬಾವಿಗಳನ್ನು ದುರಸ್ಥಿಗೊಳಿಸಿದ್ದುಲ್ಲದೆ, ಕೆರೆ ಗಳಲ್ಲಿ ಹೂಳೆತ್ತಲು ಪ್ರಯತ್ನಿಸಿರು. ಆ ಮೂಲಕ ಭತ್ತದ ಗದ್ದೆಗಳಿಗೆ ಮತ್ತು ತೋಟಗಳಿಗೆ ಹೊಸಪೇಟೆಯ ದಕ್ಷಿಣಕ್ಕಿರುವ ರಾಯರಕೆರೆಯಿಂದ ನೀರಿನ ಪ್ರಯೋಜನ ಪಡೆಯುವ ಸಲುವಾಗಿ ಹೂಳೆತ್ತಲು ೧೦೦೦ ಜನ ಕೆಲಸ ಮಾಡಿದರೆಂದು ತಿಳಿದುಬರುತ್ತದೆ. ಇದೇ ರೀತಿ ಇಡೀ ಜಿಲ್ಲೆಯಲ್ಲೆಲ್ಲ ಇಂಥ ಕಾರ್ಯ ಕೈಗೊಂಡರೂ ಬಳ್ಳಾರಿ ಜಿಲ್ಲೆಯಲ್ಲಿ ಮೈಲಾರ ಮತ್ತು ಹಂಪಿಗೆ ವಿಶೇಷ ಮನ್ನಣೆ (ಜಾತ್ರೆ) ಕೊಟ್ಟಿರುವುದು ಸ್ತುತ್ತ್ಯಾರ್ಹ.

ಬ್ರಿಟಿಷರು ಮಾಡಿದ ನಾಗರೀಕ ಸೇವಾ ಕಾರ್ಯಗಳೂ ಅಪಾರವುಂಟು, ಹಂಪಿಗೆ ಬರುವ ಯಾತ್ರಿಕರಿಗೆ, ಕಮಲಾಪುರದಲ್ಲಿರುವ ಶ್ರೀಕೃಷ್ಣ ದೇವಾಲಯವನ್ನು ಬಂಗಲೆಯನ್ನಾಗಿ  ಕಲೆಕ್ಟರ್ ಮಿ.ಜೆ.ಎಚ್. ಮಾಸ್ಟರ್ (೨೮.೯.೧೮೬೯ ರಿಂದ ೧೫.೭.೧೮೭೧) ನಿರ್ಮಿಸಿದ ನಲ್ಲದೆ, ಕಲೆಕ್ಟರ್‌ಗಳ ಆಗಾಗ ವಾಸಮಂದಿರವೂ ಕೂಡ ಆಗಿತ್ತು. ಇದಕ್ಕಿಂತ ಮೊದಲು ಕಲೆಕ್ಟರುಗಳು ೧೮೫೦ರಲ್ಲಿ ಛತ್ರವನ್ನು ನಿರ್ಮಾಣ ಮಾಡಿದ್ದರು.೧೧ ಹೊಸಪೇಟೆ ರಸ್ತೆ ಪಕ್ಕ ದಲ್ಲಿರುವ ದಾದಾಪೀರ್ ಛತ್ರ ಇರಬೇಕು. ಈ ಮೇಲಿನಂತೆ ತುರ್ತುಕ್ರಮ ೧೮೩೮ರಲ್ಲಿ ಹಂಪಿಯ ಸ್ಮಾರಕಗಳನ್ನು ನೋಡಲು ಬರುವ ಯಾತ್ರಿಕರಿಗಾಗಿ ಉತ್ತಮ ಮಾರ್ಗ ಕಿರುದಾರಿ ಗಳನ್ನು ಮಾಡಲಾಯಿತು.

ಇದೇ ರೀತಿ ೧೮೭೯ರಲ್ಲಿ ಹಂಪಿ ಅವಶೇಷಗಳಿರುವ ಸ್ಥಳಗಳಿಗೆ ದಾರಿಗಳನ್ನು ಮತ್ತು ರಕ್ಷಣಾ ಕೆಲಸಗಳನ್ನು ಮಾಡಿಸಿದರು. ಸರ್ಕಾರ ನೀಡಿದಷ್ಟು ಮೊತ್ತಕ್ಕೆ, ಕಾಯ್ದೆಗಳ ಪ್ರಕಾರ ರಕ್ಷಣಾತ್ಮಕ ಕಾರ್ಯಗಳನ್ನು ಕೈಗೊಂಡು ಅದರ ವರದಿಯನ್ನು ಪ್ರಕಟಿಸುತ್ತಿದ್ದರು. ಸುಮಾರು ೧೫೩ ವರ್ಷಗಳ ಕಾಲ ಕಲೆಕ್ಟರುಗಳ ಆಳ್ವಿಕೆಯಲ್ಲಿ ಗಮನಾರ್ಹವಾದ ಕಾರ್ಯಗಳು ಜರುಗಿವೆ. ೧೮೮೫ರಲ್ಲಿ ಹಂಪಿ ವಿರೂಪಾಕ್ಷಸ್ವಾಮಿ ರಥೋತ್ಸವಕ್ಕೆ ಮಾರ್ಚ್ ತಿಂಗಳಲ್ಲಿ ಸರ್ಕಾರ ಅನುಮತಿಸಿತಲ್ಲದೆ, ಎಲ್ಲಾ ವ್ಯವಸ್ಥೆಯನ್ನು ಮಾಡುವ ಭರವಸೆ ಕೊಟ್ಟಿತು. ಇದೇ ರೀತಿ ೧೮೮೫ ಫೆಬ್ರವರಿಯಲ್ಲಿ ಮೈಲಾರದ ಜಾತ್ರೆ ನಡೆಸಲು ಕಲೆಕ್ಟರುಗಳ ಅನುಮತಿಯ ಹಿಂದಿನ ವಿಚಾರವನ್ನು ನೋಡಿದರು ಅಂದಿನ ಕಠಿಣ ಆಡಳಿತ, ಶಿಸ್ತು ನಮ್ಮ ದಾಸ್ಯತನವನ್ನು ಎತ್ತಿತೋರಿಸುತ್ತದೆ. ಅವರ ಆಡಳಿತದ ಲೋಪದೋಷಗಳೇನೆ ಇರಲಿ ಹಂಪಿ ಸ್ಮಾರಕಗಳಿಗೆ ರಕ್ಷಣೆಯನ್ನು ಒದಗಿಸಿದ್ದು ಇಂದು ವಿದೇಶಿಯ, ಸ್ವದೇಶಿಯರಿಗೆ ಅಧ್ಯಯನ, ಸಂಶೋಧನೆ ವಿಕ್ಷಣೆ ಮಾಡಲು ಆಸ್ಪದವಾಯಿತು.

ಕಮಲಾಪುರದ ವಿಶ್ರಾಂತಿ ಗೃಹ : ಈ ಮೇಲೆ ತಿಳಿಸಿರುವಂತೆ ಇಂದು ಪ್ರವಾಸಿ ಮಂದಿರವಾದ ಕಟ್ಟಡ ವಿಜಯನಗರ ಕಾಲದ ಕೃಷ್ಣದೇವಾಲಯವೇ ಆಗಿದೆ. ಇದನ್ನು ಪ್ರವಾಸಿಗರಿಗಾಗಿ ಹಳೇ ದೇವಾಲಯವನ್ನು ವಿಶ್ರಾಂತಿ ಗೃಹವಾಗಿ ಬ್ರಿಟಿಷರು ಪರಿವರ್ತಿಸುತ್ತಾರೆ. ಕಮಲಾಪುರದ ಹಂಪಿ ಸರ್ಕಲ್‌ನಲ್ಲಿ ಬ್ರಿಟಿಷ್ ಅಧಿಕಾರಿಯ ಸಮಾಧಿ ಇದೆ. ಈ ವ್ಯಕ್ತಿ ತನ್ನ ಆದ್ಯತೆ ಹಂಪಿಗೆ ನೀಡಿದ್ದನೆಂದು ಊಹಿಸಲಾಗಿದೆ. ಹಂಪಿ ರುಯಿನ್ಸ್ ಗ್ರಂಥದಲ್ಲಿ ಎ.ಎಚ್. ಲಾಂಗ್ ಹರ್ಟ್ಸ್ ಈ ರೀತಿ ತಿಳಿಸಿದ್ದಾರೆ[12] : Where a deserted temple was converted in to a dwelling by Mr. J.H. Master, a former collector of the district and is now used as a Travellers Rest house and is available to the genral public ಎಂದು ಈಗಿನ ಬಂಗಲೆ ಬಗ್ಗೆ ವಿವರವಿದೆ.

ಈ ಕೆಲ ಪ್ರಮುಖ ದೇವಾಲಯ ಕಟ್ಟಡಗಳನ್ನು ಪರಿಗಣಿಸಲಾಗಿದ್ದರು. ಉಳಿದವುಗಳನ್ನು ನಿರ್ಲಕ್ಷಿಸಿಲ್ಲವಾದರೂ ಅಲ್ಲಲ್ಲಿ ಉಲ್ಲೇಖಿಸಲಾಗಿದೆ.[13] ಅನಂತಶಯನಗುಡಿ, ಮಲಪನ ಗುಡಿ, ಕಡ್ಡಿರಾಂಪುರ, ನಾಗೇನಹಳ್ಳಿ, ಮಾಲ್ಯವಂತ ರಘುನಾಥ ದೇವಾಲಯಗಳಿಗೆ ಬ್ರಿಟಿಷರು ರಕ್ಷಣಾ ಕಾರ್ಯಗಳನ್ನು ಕೈಗೊಂಡಿದ್ದರು. ಆನೆಗೊಂದಿ, ತಳವಾರಘಟ್ಟ ಹೆಬ್ಬಾಗಿಲು ಸಹ ರಕ್ಷಣಾ ಕಾರ್ಯ ಕಟ್ಟಡಗಳ ಪಟ್ಟಿಯಲ್ಲಿ ಸೇರಿವೆ.[14]

Note:


[1]       Preservation of National Monuments, 1881-82, P.p. CXXXIII.

[2]       Political Consultation 20th March 1802 to the fort St : George, Madras,- 1.

[3]       Longhurts : Hampi Ruins, 1981, Asian Educational Services, New Delhi,-102.

[4]       J.D.E. Gribble, 1981, History of Deccan, Vol-1,-103.

[5]       Preservation of National Monuments, 1881-82, P. cxxxii.

[6]       J.D.E. Gribble, History of Deccan, 1981, Vol-1, P. 72.

[7]       Longhurst : Hampi Ruins, 1981, Asian Educational Services, New Delhi, -103, & D.E. Gribble, 1981, History of Deccan, Vol-1,-77

[8]       The City of Victory Vijayanagar, -23.

[9]       Longhurst : Hampi Ruins, 1981, Asian Educational Services, New Delhi, P. 60.

[10]      Ibid,-84.

[11]      Ibid,-47.

[12]      ಹಂಪಿ ರುಯಿನ್ಸ್, ಪು. ೩.

[13]      ವಿರೂಪಾಕ್ಷಿ, ೧೯೯೫, ಬಳ್ಳಾರಿ ಜಿಲ್ಲೆಯಲ್ಲಿ ಕಲೆಕ್ಟರುಗಳ ಆಳ್ವಿಕೆ (೧೮೦೦-೧೯೪೭) : ಒಂದು ಸಮೀಕ್ಷೆ (ಎಂ.ಫಿಲ್. ಅಪ್ರಕಟಿತ ಪ್ರಬಂಧ).

[14]      ಹೆಚ್ಚಿನ ಓದಿಗೆ ನೋಡಿ : Preservation of National Monuments First report of the Curatro of Ancient Monuments in India for the year 1881-81, Simla (1882) Government of  Karnataka