ಅಪರಾಧ ಮತ್ತು ಕಾನೂನು (ನ್ಯಾಯಾಂಗ ವ್ಯವಸ್ಥೆ)

ಹಿಂದೆ ಸಿವಿಲ್ ವ್ಯಾಜ್ಯ ಹಾಗೂ ನ್ಯಾಯಗಳ ಬಗ್ಗೆ ಹಳೇ ಬಳ್ಳಾರಿಗೆ ಅನಂತಪುರವು ಸೇರಿತ್ತು. ಜಿಲ್ಲಾ ನ್ಯಾಯಾಧೀಶರು ಬಳ್ಳಾರಿಯಲ್ಲಿದ್ದರು. ಆದೋನಿ ತಾಲ್ಲೂಕನ್ನು ಗೂಟಿಯ ಮುನ್ಸಿಫ್ ನೋಡಿಕೊಳ್ಳುತ್ತಿದ್ದರು. ಆ ಜಿಲ್ಲೆಯ ಎಲ್ಲ ಪಿರ್ಯಾದು, ವ್ಯಾಜ್ಯಗಳನ್ನು ಕರ್ನೂಲು ಜಿಲ್ಲಾ ನ್ಯಾಯಾಲಯ ವ್ಯಾಪ್ತಿಗೆ ಬರುತ್ತಿದ್ದವು. ಬಳ್ಳಾರಿಯಲ್ಲಿ ಇಬ್ಬರು ಜಿಲ್ಲಾ ಮುನ್ಸಿಫ್‌ಗಳಿದ್ದರು. ಒಂದು ಬಳ್ಳಾರಿ ಮತ್ತೊಂದು ಹೊಸಪೇಟೆ. ಬೇರೆ ಜಿಲ್ಲೆಗಳಿಗಿಂತ  ಬಳ್ಳಾರಿ ಜಿಲ್ಲೆಯ ಗ್ರಾಮಮುನ್ಸಿಫ್ ಬ್ರಿಟಿಷ್ ಆಡಳಿತದ ನಂತರದಲ್ಲೂ ಕೇಸುಗಳನ್ನು ನಡೆಸುತ್ತಿದ್ದ. ಅನೇಕ ಭೂವ್ಯಾಜ್ಯಗಳನ್ನು ಈತ ಇತ್ಯರ್ಥಪಡಿಸುತ್ತಿದ್ದ. ಜಮೀನ್ದಾರಿಗಳು ಮತ್ತು ಕೆಲವೇ ಇನಾಂಗಳನ್ನು ಹೊಂದಿರುವವರು ಅಪರಾಧ-ಕಾನೂನು ಬಗ್ಗೆ ಬಳ್ಳಾರಿ ಸೇಷನ್ಸ್ ಕೋರ್ಟ್ ನ್ಯಾಯಾಧಿಕಾರವನ್ನು ಅನಂತಪುರಕ್ಕೆ ಸೇರಿದ ಗೂಟಿ ಮತ್ತು ತಾಡಪತ್ರಿಗಳು ಮಾತ್ರ ಬಳ್ಳಾರಿಯ ಅಧೀನಕ್ಕೆ ಬಂದವು.

ಜಿಲ್ಲಾ ಕಲೆಕ್ಟರ್ ಮತ್ತು ವಿಭಾಗೀಯ ಅಧಿಕಾರಿಗಳು ಮೊದಲ ದರ್ಜೆಯ ಮ್ಯಾಜಿಸ್ಟ್ರೆಟ್‌ರು ಉಪಯೋಗಕರವಾದ ಅಧಿಕಾರ ಹೊಂದಿದ್ದರು. ಎಲ್ಲ ತಹಶೀಲ್ದಾರರು ಮತ್ತು ಉಪತಹಶೀಲ್ದಾರರು ಸ್ಟೇಷನರಿ ಸಬ್ ಮ್ಯಾಜಿಸ್ಟ್ರೆಟ್ ಇವರು ಎರಡನೇ ದರ್ಜೆ ಅಧಿಕಾರ ಹೊಂದಿದರೂ ಇವರಂತೆ ಶಿರಸ್ತೇದಾರರು ಸಹಾ ಮೂರನೇ ದರ್ಜೆಯ ಮ್ಯಾಜಿಸ್ಟ್ರೇಟ್ ಗಳಾಗಿದ್ದರು. ಗ್ರಾಮ ಮ್ಯಾಜಿಸ್ಟ್ರೇಟ್‌ಗಳು ಸಣ್ಣ-ಪುಟ್ಟ ಅಧಿಕಾರಗಳನ್ನು ಹೊಂದಿದ್ದರು.

ಬ್ರಿಟಿಷರು ಕೆಲವು ಸಮುದಾಯಗಳನ್ನು ಅಪರಾಧ ಬುಡಕಟ್ಟುಗಳೆಂದು ಕರೆದಿದ್ದರು. ಕೊರಚರು ಸಹಾ ಇವರಲ್ಲಿ ಒಂದು. ಗಂಗಾ (ಗಂಗಮತ-ಬಾರೀಕೆರೆ-ಕಬ್ಬೇರ-ಬೆಸ್ತ) ಎಂಬುವ ವರು ಬಳ್ಳಾರಿ ಜಿಲ್ಲೆಯ ನಿಜಾಂ ಪ್ರಾಂತ್ಯಗಳಲ್ಲಿದ್ದರು. ಅವರು ಕಷ್ಟದಾಹಿಗಳು. ಇಂಥ ಕೆಲವು ಸಮುದಾಯಗಳು ಲೂಟಿ, ದರೋಡೆ ಕೋರರು, ಕೊಲೆಗಡುಕರು, ಹಸುಗಳನ್ನು ಕಳ್ಳತನ ಮಾಡುವವರು ವಿವಿಧ ಕಾಲಘಟ್ಟಗಳಲ್ಲಿ ಇಂಥ ಸಾಮಾನ್ಯ ಸಮಾಜ ವಿರೋಧಿ ಕೃತ್ಯಗಳನ್ನು ಇವರು ಮಾಡುತ್ತಿದ್ದರು. ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಬಂಡೆದ್ದ ಸಮಾಜಗಳನ್ನು ಈ ರೀತಿ ಕರೆಯಲಾಗಿದೆ. ವಾಸ್ತವವಾಗಿ ಅವರು ಸಮಾಜ ಮತ್ತು ಮುಖ್ಯ ವಾಹಿನಿಯಲ್ಲಿದ್ದರೆ ಈ ಕೃತ್ಯಗಳನ್ನೇಕೆ ಮಾಡುತ್ತಿದ್ದರೆಂದು, ಅವರನ್ನು ನಿರ್ಲಕ್ಷಿಸಿ, ವಂಚಿಸಿದ ಕಾರಣ ಪ್ರತಿಭಟಿಸಿದ್ದಕ್ಕೆ ಮೇಲಿನಂತೆ ಕರೆಯಲಾಗಿದೆ.

ಭೂಕಂದಾಯ

ವಿಜಯನಗರ ರಾಜರು ಜಾರಿಗೆ ತಂದ ಕಂದಾಯ ವ್ಯವಸ್ಥೆ ಜೀವಂತವಾಗಿತ್ತು. ಬ್ರಿಟಿಷರು ಇದನ್ನು ಅನುಸರಿಸಿದರು. ಬೆಳೆದ ಬೆಳೆಯಲ್ಲಿ ಅರ್ಧಭಾಗ ಸರ್ಕಾರಕ್ಕೆ ಸಲ್ಲುತ್ತಿತ್ತು. ಇದು ಬ್ರಿಟಿಷರ ಆಳ್ವಿಕೆಯ ಅಂತ್ಯದವರೆಗೆ ಮುಂದುವರೆಯಿತು. ಬೆಳೆಯುವ ಪೈರಿನ ಮೇಲೆ ಕಂದಾಯ ಹಾಕುತ್ತಿದ್ದರು. ಮುಸ್ಲಿಮರು ಸಹಾ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರು. ದತ್ತಮಂಡಲ ಜಿಲ್ಲೆಗಳಲ್ಲಿ ನಿಗದಿಪಡಿಸಿದ ಕನಿಷ್ಠ ಮೊತ್ತವನ್ನು ಕಂದಾಯ ರೂಪದಲ್ಲಿ ಕಟ್ಟುತ್ತಿದ್ದರು. ಇದಕ್ಕೆ ‘ಕಾಮಿಲ್’ ತೆರಿಗೆ ಎಂದು ಹೆಸರು. ಔರಂಗಜೇಬ್ ಮತ್ತು ಹೈದರಾಲಿಯ ನಂತರ ಟಿಪ್ಪುಸುಲ್ತಾನನವರೆಗೂ ಕಂದಾಯ ಹೆಚ್ಚುತ್ತಾ ಹೋಯಿತು. ದೊಡ್ಡಪ್ರಮಾಣದಲ್ಲಿ ಇನಾಂಗಳನ್ನು ಕೊಡಲಾಯಿತು. ವಿಜಯನಗರ ಸಾಮ್ರಾಜ್ಯದ ತರುವಾಯ ಈ ಪ್ರದೇಶ ದೊಡ್ಡಪ್ರಮಾಣದಲ್ಲಿ ಪಾಳೆಯಗಾರರ ಕೈಗೆ ಹೋಯಿತು. ಅವರು ತೆರಿಗೆ ವಸೂಲಿ ಮಾಡುತ್ತಿದ್ದರು. ಪಾಳೆಯಗಾರರ ವಂಶದವರ ಅಧಿಕಾರಾವಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ಸ್ವಾಭಾವಿಕವಾಗಿ ಕೃಷಿ ವರ್ಗಕ್ಕೆ ಅಭಿವೃದ್ದಿ ಮಾಡಲು ಕ್ರಮಗಳನ್ನು ಕೈಗೊಂಡಿದ್ದರು.

ಇತರ ಸಂಕೀರ್ಣ ಸಂಗತಿಗಳು

೧. ಸರ್ಕಾರದ ಆದೇಶದ ಪ್ರಕಾರ ದಿನಾಂಕ ೧೭.೦೮.೧೯೨೦ (ಜಿ.ಒ. ೧೯೮೪) ದಿ. ಶೇಷಗಿರಿರಾವ್ ಭೂದಾಖಲೆಗಳ ಇನ್ಸ್‌ಪೆಕ್ಟರ್ ಆಗಿ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿದ್ದರು. ಇವರು ಸರ್ಕಾರಿ ಕೆಲಸದಿಂದ ಅಮಾನತುಗೊಂಡಾಗ ಸರ್ಕಾರದ ಬ್ಯಾಂಕ್‌ಗೆ ಕಟ್ಟಬೇಕಾದ ಹಣವನ್ನು ಆತನಿಗೆ ಬಂದ ವೇತನದ ಹಣದಿಂದ ಕಟ್ಟಲಾಗು ತ್ತದೆ.

೨. ಸರ್ಕಾರದ ಆದೇಶ (ಜಿ.ಒ. ೨೨೨೮, ದಿನಾಂಕ ೧೦.೦೮.೧೯೨೦) ಪ್ರಕಾರ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಗ್ರಾಮ ಸೇರಿದಂತೆ ಇತರ ಗ್ರಾಮಗಳಿಗೆ ಅಭಿವೃದ್ದಿ ಕಾರ್ಯ ಗಳನ್ನು ಕೈಗೊಳ್ಳಲಾಗಿತ್ತು.

೩. ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಗ್ರಾಮಕ್ಕೆ ಪೊಲೀಸ್ ಠಾಣೆಯನ್ನು ಬಳ್ಳಾರಿ ತಾಲ್ಲೂಕು ಬೋರ್ಡಿನಿಂದ ದಿ. ೧೪.೧೨.೧೯೨೦ರಂದು ಮಂಜೂರು ಮಾಡುತ್ತಾರೆ.

೪. ಹೊಸಪೇಟೆಯಲ್ಲಿ ಪಶುವೈದ್ಯಕೀಯ ಆಸ್ಪತ್ರೆಯನ್ನು ಅಧೀಕ್ಷಕರು ಪ್ರಾರಂಭಿಸಿದ್ದು ದಿ. ೧೪.೦೧.೧೯೨೧ರಲ್ಲಿ (ಜಿ.ಒ. ೮೮) ಸರ್ಕಾರದ ವರದಿಗಳಲ್ಲಿ ಇದು ದಾಖಲಾಗಿದೆ. ೩೦.೦೩.೧೯೨೧ರಂದು ಪಶುಸಂಗೋಪನಾ ಆಸ್ಪತ್ರೆಗೆ ಕಟ್ಟಡಕ್ಕೆ ಬಾಡಿಗೆ ನೀಡಲು ಮಂಜೂರು ಮಾಡಿದರು.

೫. ಬಳ್ಳಾರಿಯ ಉಪವಿಭಾಗವಾದ ಹೊಸಪೇಟೆ ಮತ್ತು ಹಡಗಲಿ ತಾಲ್ಲೂಕುಗಳ ಏಳು ಗ್ರಾಮಗಳಿಗೆ ದಿ. ೧೫.೦೩.೧೯೨೧ರಂದು ಕಂದಾಯವನ್ನು ಸಂಗ್ರಹಿಸಲು ಮುಂದೂ ಡಲು ತಿಳಿಸಲಾಯಿತು.

೬. ೧೯೨೧ರಲ್ಲಿ ಹಡಗಲಿ, ಸಿರುಗುಪ್ಪಗಳಲ್ಲಿ ಕ್ಷಾಮ ಆವರಿಸಿತ್ತು. ಕ್ಷಾಮ ಪರಿಹಾರವಾಗಿ ಬಳ್ಳಾರಿಯಲ್ಲಿ ಕೆಲವು ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತದೆ. ಬಳ್ಳಾರಿ ಸಹಾಯಕ ಕಮಿಷನರ್ ಮತ್ತು ಇನ್ಸ್‌ಪೆಕ್ಟರ್, ಅಧಿಕಾರಿಗಳಿಗೆ ದಿ. ೧೬.೦೫. ೧೯೨೧ರಂದು ಕಟ್ಟಡಗಳನ್ನು ಮಂಜೂರು ಮಾಡುತ್ತಾರೆ. ಕಂಟೋನ್ಮೆಂಟ್ ಪ್ರದೇಶ ದಲ್ಲಿ ಕೆಲವು ಬಂಗಲೆಗಳನ್ನು ನಾಶಪಡಿಸಿ ಕ್ಷಾಮ, ಬರಗಾಲ ಪರಿಹಾರ ಕಾಮಗಾರಿಗಳನ್ನು ೧೯೨೧-೨೨ರಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಮತ್ತು ಸಂಡೂರು ತಾಲ್ಲೂಕಿನಲ್ಲಿ ಬೋರ್ಡ್‌ಗಳ ಮೂಲಕ ನಿರ್ಮಿಸಲಾಯಿತು.

೭. ಬಳ್ಳಾರಿ ಜಿಲ್ಲೆಯಲ್ಲಿ ದಿ. ೨೫.೦೮.೧೯೨೪ (ಜಿ.ಒ. ೧೩೦೯) ಅತಿವೃಷ್ಟಿ ಆದಾಗ ಪರಿಹಾರ ಆಹಾರ ರೂಪದಲ್ಲಿ ವಿತರಿಸಿದ್ದರು.

೮. ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆ ತಾಲ್ಲೂಕುಗಳಲ್ಲಿ ಭೂಮಾಪನ ಮಾಡಿ ಗಡಿಗಳನ್ನು ಗುರುತಿಸಲು ದಿ. ೩೦.೧೦.೧೯೨೪ರಲ್ಲಿ ಸರ್ಕಾರ (ಜಿ.ಒ. ೧೬೮೧) ಅನುಮತಿ ನೀಡಿತು.

ಕ್ರಿ.ಶ. ೧೮೦೦ರಲ್ಲಿ ದತ್ತಮಂಡಲ ಜಿಲ್ಲೆಗಳು ಈಸ್ಟ್ ಇಂಡಿಯಾ ಕಂಪನಿಗೆ ವರ್ಗವಾದ ಮೇಲೆ ಈ ಎಲ್ಲ ಜವಾಬ್ದಾರಿಯನ್ನು ಸರ್. ಥಾಮಸ್ ಮನ್ರೊ ವಹಿಸಿಕೊಂಡ. ಮನ್ರೊ ಅಧಿಕಾರ ವಹಿಸಿಕೊಂಡ ಮೇಲೆ ಎಂಟಕ್ಕಿಂತ ಹೆಚ್ಚು ಪಾಳೆಯಗಾರರನ್ನು ಸ್ಥಾನ ಪಲ್ಲಟ ಗೊಳಿಸಿದನು. ನೇರವಾಗಿ ನಿಶ್ಚಿತ ಕಂದಾಯವನ್ನು ವಸೂಲು ಮಾಡುವ ಪದ್ಧತಿ ಜಾರಿಗೆ ತಂದನು. ಭೂಮಿ ಆಕ್ರಮಿತಕ್ಕೆ ಸಂಬಂಧಿಸಿದಂತೆ ವಿವಿಧ ಬಗೆಯ ಮಣ್ಣಿನ ಜಮೀನುಗಳಿಗೆ ವಿವಿಧ ಬಗೆಯ ತೆರಿಗೆಯನ್ನು ಪಾವತಿಸಬೇಕಿತ್ತು.

ಈ ಭೂಕಂದಾಯ ಪದ್ಧತಿ ಸರ್ಕಾರಕ್ಕೆ, ಪ್ರಗತಿ ತರಲು ನೆರವಾಯಿತು. ಶಾಶ್ವತವಾಗಿ ಕಂದಾಯ ಪದ್ಧತಿ ಜಾರಿಗೆ ತರುವ ಪೂರ್ವದಲ್ಲಿ ಇದನ್ನು ಪ್ರಯೋಗಿಸಿದವರು ಭೂಕಂದಾಯ ಬೆಂಗಾಲ್ ಮಾದರಿಯಲ್ಲಿ ಗ್ರಾಮೀಣರು, ಗುತ್ತಿಗೆ, ಕಂತು, ಬಾಡಿಗೆ ರೂಪದಲ್ಲಿ ವರ್ಷ ಕ್ಕೊಮ್ಮೆ ನವೀಕರಿಸುತ್ತಿದ್ದರು. ಮೂರು ವರ್ಷಕ್ಕೆ ಠೇವಣಿ ರೂಪದಲ್ಲಿ ಲೀಸ್ ಮೂಲಕ ಸ್ವಂತ ಈ ಕಾರ್ಯಕ್ರಮಗಳನ್ನು ಕೃಷಿಕರು ರೂಪಿಸಿಕೊಳ್ಳುತ್ತಿದ್ದರು. ಈ ಕಾರಣದಿಂದ ಸರ್. ಥಾಮಸ್ ಮನ್ರೊ ಅಂದಿನ ಮದ್ರಾಸ್ ಗವರ್ನರ್ ಲಾರ್ಡ್ ವಿಲಿಯಂ ಬೆಂಟಿಂಕ್ ಮೂಲಕ ವಿರೋಧವಿದ್ದರೂ ೧೮೦೮ರಲ್ಲಿ ದತ್ತ ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ತರಲು ಪ್ರಯತ್ನಿಸಿದ.

ಮನ್ರೊ ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಬಿಡುವ ಮುನ್ನ ಸ್ವಲ್ಪ ವಿಶ್ರಾಂತಿ ಪಡೆದು ಇತರ ಕಲೆಕ್ಟರುಗಳಿಗೆ ವರದಿ ಮಾಡಿದ್ದ. ಮತ್ತು ಪ್ರಬಲವಾಗಿ ಕಂದಾಯ ಸೋರಿಕೆ, ಅವೈಜ್ಞಾನಿಕ ತೆರಿಗೆ ಪದ್ಧತಿಯನ್ನು ವಿರೋಧಿಸಿ ೧೮೧೨ರಲ್ಲಿ ಮದ್ರಾಸ್ ಸರ್ಕಾರದಿಂದ ಆದೇಶ ಹೊರಡಿಸಿದ. ಈ ಫಲಿತಾಂಶ ಸಂಪೂರ್ಣ ಸೋತಿತು. ಬಾಡಿಗೆದಾರರು ಸ್ಪರ್ಧೆ ಮತ್ತು ಮತ್ಸರದಿಂದ ಸರ್ಕಾರದ ವಿರುದ್ಧ ದಂಗೆ ಮಾಡಿದರು. ಈ ತರುವಾಯ ಕೋರ್ಟ್ ಆಫ್ ಡೈರೆಕ್ಟರ್ ‘ರಾಯತ್ವಾರಿ’ ಪದ್ಧತಿಯನ್ನು ಜಾರಿಗೆ ತಂದು ಹಿಂದೆ ನಡೆಯುತ್ತಿದ್ದ ತೆರಿಗೆ ಕಂದಾಯದಲ್ಲಿ ಹಣ ಸೋರಿಕೆಯನ್ನು ತಡೆಹಿಡಿಯಲಾಯಿತು. ಇದರಿಂದ ಜಿಲ್ಲೆಯ ಸಂಪತ್ತು ಹೆಚ್ಚಾಗಲು ಕಾರಣವಾಯಿತು. ೧೮೧೮ ರಿಂದ ೧೮೫೯ರವರೆಗೆ ರಾಯತ್ವಾರಿ ಸೆಟ್ಲಮೆಂಟ್ ತಂದಾಗ ಕೆಟ್ಟಕಾಲದ ಮತ್ತು ಒಳ್ಳೆಯ ಕಾಲದ ಅಧಿಕ ತೆರಿಗೆಯಿಂದ ಆಗುವ ಲಾಭ ಕುರಿತು ಮನ್ರೊನ ಈ ಹೊಸ ವಿಧಾನವು ಪರಿಣಾಮಕಾರಿಯಾಯಿತು. ಜನ ಮನ್ನಣೆ ಪಡೆಯಿತು.

ಬಳ್ಳಾರಿ ಜಿಲ್ಲೆಯ ದಕ್ಷಿಣದ ಏಳು ತಾಲ್ಲೂಕುಗಳು ೧೮೮೨ರಲ್ಲಿ ಅನಂತಪುರ ಜಿಲ್ಲೆಗೆ ಸೇರಿದ್ದವು. ಇದರಿಂದ ಉಳಿದ ಬಳ್ಳಾರಿ ಜಿಲ್ಲೆಯ ತಾಲ್ಲೂಕುಗಳನ್ನು ಸರ್ವೇ ಮತ್ತು ಸೆಟ್ಲಮೆಂಟ್ (ಅಳತೆ-ಗುರುತಿಸುವುದು) ಮಾಡುವ ಕಾರ್ಯ ೧೮೮೪ ರಿಂದ ೧೮೯೬ರವರೆಗೆ ನಡೆಯಿತು. ಶೇಕಡ ೫ರಷ್ಟು ಹೆಚ್ಚುವರಿ ಕೃಷಿ ಭೂಮಿ ಈ ಸಾಲಿನಲ್ಲಿ ಹೆಚ್ಚಾಯಿತು. ರೂ. ೮೫,೦೦೦ ಅಥವಾ ಶೇಕಡ ೭ರಷ್ಟು ಬೆಳೆ ಇಲ್ಲ.

ಬರಗಾಲದಲ್ಲಿ ಆದಾಯ ಸಾಮಾನ್ಯವಾಗಿ ಬರುತ್ತಿತ್ತು. ಆಲೂರು, ಆದೋನಿ ತಾಲ್ಲೂಕಿನ ಒಣಭೂಮಿಯಲ್ಲಿ ಸರಾಸರಿ ಹತ್ತಿ ಬೆಳೆಯಲು ಯೋಗ್ಯ ಮಣ್ಣು ಇತ್ತು. ಈಗ ರೂ. ೦-೧೫-೭ರಷ್ಟು ಎಕರೆ (ಗರಿಷ್ಟ ರೂ. ೨-೮, ಕನಿಷ್ಟ ೨ ಅಣ್ಣ ೧ ಆಣೆ) ಮತ್ತು ನೀರಾವರಿ ಭೂಮಿಗೆ ರೂ. ೬-೧೪-೧೧ (ಗರಿಷ್ಟ ರೂ. ೧೧ ಕನಿಷ್ಟ ರೂ. ೧), ಕೆಂಪು ಭೂಮಿಗೆ ಕೆಲವು ತಾಲ್ಲೂಕುಗಳಲ್ಲಿ ಒಣಭೂಮಿಯಂತೆ ರೂ. ೦-೮-೮ (ಗರಿಷ್ಟ ರೂ. ೨-೪, ಕನಿಷ್ಟ ೨ ಆಣೆ) ಮತ್ತು ಸರಾಸರಿ ನೀರಾವರಿ ಭೂಮಿಗೆ ಬೆಲೆ ರೂ. ೫-೬-೩ (ಗರಿಷ್ಟ ರೂ. ೧೧ ಕನಿಷ್ಟ ರೂ. ೧), ಸ್ವಂತಕ್ಕೆ ನೀರಾವರಿ ಹೊಂದಿ ಅಂದಾಜು ೧೫ ಎಕರೆ ಹೊಂದಿರುವವರಿಗೆ ಸಣ್ಣ ಹಿಡುವಳಿಯಾಗಿತ್ತು.

ಭೂ ಕಂದಾಯ ೧೮೦೯-೦೧ ೧೯೦೦-೦೧ ೧೯೦೩-೦೪
  ೧೮೧೮ ೧೯೬೩ ೨೦೭೯
ಒಟ್ಟು ೨೮೧೦ ೩೦೨೬ ೩೨೩೦

ಸ್ಥಳೀಯ ಬೋರ್ಡ್‌ಗಳು

ಸ್ಥಾನಿಕ ಸಂಸ್ಥೆಗಳೆಂದು ಇವುಗಳಿಗೆ ಕರೆಯಲಾಗುವುದು. ಜಿಲ್ಲೆಯಲ್ಲಿ ಏಳು ಮುನ್ಸಿ ಪಾಲಿಟಿಗಳಿದ್ದವು. ಬಳ್ಳಾರಿ ಮತ್ತು ಆದೋನಿ. ಇವೆರಡು ೧೮೬೭ರಲ್ಲಿ ಸ್ಥಾಪನೆಯಾಗಿದ್ದವು. ಜಿಲ್ಲಾ ಬೋರ್ಡ್ ಉಪವಿಭಾಗದ ವ್ಯಾಪ್ತಿಗೆ ಬರುತ್ತಿದ್ದ ಇತರ ಮೂರು ತಾಲ್ಲೂಕು ಬೋರ್ಡ್‌ಗಳಾದ ಬಳ್ಳಾರಿ, ಹೊಸಪೇಟೆ ಮತ್ತು ಆದೋನಿ ನೋಡಿಕೊಳ್ಳುತ್ತಿದ್ದವು. ಇವುಗಳ ೧೯೦೩-೦೪ರಲ್ಲಿ ಖರ್ಚು-ವೆಚ್ಚ ೨ ೧/೨ ಲಕ್ಷ ರೂ. ವೆಚ್ಚವಾಗಿತ್ತು. ಭೂಕಂದಾಯದಿಂದ ಬಂದ ಹಣವನ್ನು ಬಳಸಿದ್ದರು. ೧೯ ಪಟ್ಟಣಗಳು ಮತ್ತು ಗ್ರಾಮಗಳು ೧೮೮೪ರಲ್ಲಿ ಕೇಂದ್ರದ ಅಧಿನಿಯಮದಂತೆ (ಮದ್ರಾಸ್) ನಿರ್ಮಿಸಲಾಗಿತ್ತು. ಹೀಗೆ ಬಳ್ಳಾರಿ ಜಿಲ್ಲೆಯಲ್ಲಿ ಸ್ಥಳೀಯ ಬೋರ್ಡ್‌ಗಳ ಮೂಲಕ ರಸ್ತೆ, ಕೆರೆ, ಬಾವಿ, ಬಂಗಲೆಗಳ ನಿರ್ಮಾಣ ಕಾರ್ಯ ನಡೆಯಿತು (ಬಳ್ಳಾರಿ ಮುನ್ಸಿಪಲ್ ಕೌನ್ಸಿಲ್ ೧೧.೦೮.೧೯೨೦ರಂದು ತಾವು ಕೋರಿದ ಯೋಜನೆಗಳಿಗೆ ಸರ್ಕಾರ ಮಂಜೂರಾತಿಯನ್ನು ನೀಡಿತ್ತು).  ಸ್ಥಳೀಯ ಸಂಸ್ಥೆ ಮತ್ತು ಮುನ್ಸಿಪಾಲ್‌ಗಳ ಮದ್ರಾಸ್ ಸರ್ಕಾರದ ಹಿಂದೂ ಧರ್ಮ ದತ್ತಿ ಕಾಯ್ದೆ ಪ್ರಕಾರ ಹಂಪಿ ವಿರೂಪಾಕ್ಷ ಮಠಕ್ಕೆ ರಿಯಾಯಿತಿ ನೀಡಲು ತಿರಸ್ಕರಿಸಿದ ಸರ್ಕಾರ ಕ್ರಮವಿದೆ (ಜಿ.ಒ. ೧೬೩೩, ದಿ. ೨೭.೦೪.೧೯೩೬).

ಪೊಲೀಸ್ ಮತ್ತು ಜೈಲುಗಳು

ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಸೂಪರಿಟೆಂಡೆಂಟ್ ಮತ್ತು ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಇದ್ದು, ಇವರ ಅಧೀನದಲ್ಲಿ ಜಿಲ್ಲಾ ಪೊಲೀಸ್ ಸೈನ್ಯ ದಳ ಇತ್ತು. ೧೯೦೪ ರಲ್ಲಿ ೬೧ ಪೊಲೀಸ್ ಠಾಣೆಗಳು, ಪೊಲೀಸ್ ದಳ ಸೇರಿದಂತೆ ೧೩ ಇನ್ಸ್‌ಪೆಕ್ಟರ್‌ಗಳು ಮತ್ತು ೧೧೪೧ ಪೊಲೀಸ್ ಕಾನ್ಸ್‌ಟೇಬಲ್, ರಿಸರ್ವ್ ಪೊಲೀಸ್ ೮೯ ಜನ ಇದ್ದರು. ಇವರಲ್ಲಿ ೯೭೪ ಗ್ರಾಮೀಣ ಪೊಲೀಸರ ರೆಗ್ಯುಲರ್ ಆಗಿ (ಆಂತರಿಕ) ಕೆಲಸ ಮಾಡುತ್ತಿದ್ದರು.

ಬಳ್ಳಾರಿ ಜಿಲ್ಲಾ ಜೈಲಿನಲ್ಲಿ ೩೨೩ ಪುರುಷರು, ೨೩ ಮಹಿಳೆಯರಿಗೆ ವಸತಿ ಸೌಲಭ್ಯ ಇತ್ತು. ಒಳಗಡೆ ಸೆಲ್ಸ್ ಮತ್ತು ಆಸ್ಪತ್ರೆ ೨೭ ಮತ್ತು ೩೬ ವಸತಿ ವಿಸ್ತೀರ್ಣದಲ್ಲಿ ಕೊಠಡಿ ಗಳಿದ್ದವು. ಕೈದಿಗಳು ಹೆಚ್ಚಾದಂತೆ ೧೦೦ಕ್ಕೂ ಹೆಚ್ಚು ಸೆರೆಮನೆಯ ಸೆಲ್‌ಗಳನ್ನು ನಿರ್ಮಿಸಿ ದ್ದಾರೆ. ಜೈಲಿನಲ್ಲಿ ನೇಕಾರಿಕೆ, ವುಲ್ಲನ್ ಬೆಡ್ ಶೀಟ್‌ಗಳನ್ನು ನಿರ್ಮಿಸಿ ದೇಶಾದ್ಯಂತ ಮಾರುತ್ತಿದ್ದರು. ಜಿಲ್ಲೆಯಲ್ಲಿ ೯ ಉಪವಿಭಾಗೀಯ ಜೈಲುಗಳಿದ್ದವು. ಏಳು ತಾಲ್ಲೂಕು ಕೇಂದ್ರಗಳಿದ್ದವು. ಬಳ್ಳಾರಿ ಮಾತ್ರ ಜಿಲ್ಲಾ ಕೇಂದ್ರವಾಗಿತ್ತು. ಇಬ್ಬರು ಡೆಪ್ಯುಟಿ ತಹಶೀಲ್ದಾರರ ಕೇಂದ್ರ ಸ್ಥಾನವಾದ ಸಿರುಗುಪ್ಪ ಮತ್ತು ಎಮ್ಮಿಗನೂರಿನಲ್ಲಿದ್ದವು. ಇವುಗಳಲ್ಲಿ ೧೬೧ ಜನರ ವಾಸ್ತವ್ಯಕ್ಕೆ ಅವಕಾಶವಿತ್ತು. ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ, ಹಡಗಲಿ, ಸಿರುಗುಪ್ಪಗಳಲ್ಲಿ ಇಂದಿಗೂ ಸಬ್ ಜೈಲುಗಳನ್ನು ನೋಡಬಹುದು.

ಶಿಕ್ಷಣ

ಮದ್ರಾಸ್ ಅಧಿಪತ್ಯದಲ್ಲಿ ಬಳ್ಳಾರಿ ಜಿಲ್ಲೆ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿತ್ತು. ೧೯೦೧ರ ಜನಗಣತಿ ಪ್ರಕಾರ ಅಧಿಪತ್ಯದ ೨೨ ಜಿಲ್ಲೆಗಳಲ್ಲಿ ಶೇಕಡ ೧೭ರಷ್ಟು ಸಾಕ್ಷರತೆ ಇತ್ತು. ಇವರಲ್ಲಿ ಪುರುಷರು ಜಾಸ್ತಿ. ಮಹಿಳೆಯರು ಕಡಿಮೆ. ಇವರಲ್ಲಿ ಓದುವುದು-ಬರೆಯುವುದು ಶೇಕಡ ೪.೬ರಷ್ಟು ಇತ್ತು (೮.೬ ಪುರುಷರು ಮತ್ತು ೦.೩ ಮಹಿಳೆಯರು). ಬಳ್ಳಾರಿ ತಾಲ್ಲೂಕಿನಲ್ಲಿ ಜಾಸ್ತಿ ಇದ್ದರು. ರಾಯದುರ್ಗ ತಾಲ್ಲೂಕಿನಲ್ಲಿ ಶೇಕಡ ೩ರಷ್ಟು ಸಾಕ್ಷರತೆ ಇತ್ತು.

ಈ ಜಿಲ್ಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ವಿವರ

೧೮೮೧-೮೨ ೧೦,೩೬೮
೧೮೯೦-೯೧ ೧೮,೮೫೮
೧೯೦೦-೦೧ ೨೬,೨೮೩
೧೯೦೩-೦೪ ೧೪,೮೬೧ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದರು.

೧೯೦೪ರಲ್ಲಿ ೬೨೭ ಪಬ್ಲಿಕ್ ಸ್ಕೂಲ್, ೬೦೪ ಖಾಸಗಿ ಶಾಲೆಗಳು ಹಿಂದಿನಿಂದ ಬಂದ ೧೧ ಶಾಲೆಗಳ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ನೋಡಿಕೊಳ್ಳುತ್ತಿತ್ತು. ೩೬ ಶಾಲೆಗಳನ್ನು ಸ್ಥಳೀಯ ಬೋರ್ಡ್ ಮತ್ತು ೮ನ್ನು ಎರಡು ಮುನ್ಸಿಪಾಲಿಟಿ ನೋಡಿಕೊಳ್ಳುತ್ತಿತ್ತು. ೩೧೪ ಶಾಲೆಗಳಿಗೆ ಅರೆಸರಕಾರಿ ಸಂಸ್ಥೆ ಸೇರಿದಂತೆ ೨೩೫ ಶಾಲೆಗಳಿಗೆ ಅನುದಾನವನ್ನು (ಗ್ರಾಂಟ್) ನೀಡಿತು. ಈ ಅನುದಾನವನ್ನು ಇಲಾಖೆ ಖಾಯಂಗೊಳಿಸಲು ಯಾವುದೇ ಕಾನೂನು ರೂಪಿಸಲಿಲ್ಲ. ಈ ಎಲ್ಲ ಸಂಸ್ಥೆಗಳ ೫೯೧ ಪ್ರಾಥಮಿಕ, ೯ ಸೆಕೆಂಡರಿ, ೩ ತರಬೇತಿ ಇತರ ವಿಶೇಷ ಶಾಲೆಗಳು ಮತ್ತು ವಾಡ್ಲಾ ಕಾಲೇಜು ಸೇರಿದಂತೆ ಹಲವು ಶಾಲಾ ಕಾಲೇಜುಗಳು ಬಳ್ಳಾರಿ ಪಟ್ಟಣದಲ್ಲಿದ್ದವು. ಈ ಸಂದರ್ಭದಲ್ಲಿ ೧೫೦೪ ಜನ ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದರು. ಬಹುತೇಕ ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಗಳು ಹೆಚ್ಚಾಗಿದ್ದರು. ಬಾಲಕರು ೧೮ ಜನ ಇದ್ದರೆ, ಬಾಲಕಿಯರು ಇಬ್ಬರು ಇರುತ್ತಿದ್ದರು. ಮುಸಲ್ಮಾನರಲ್ಲಿ ೧೯ ಜನ ಬಾಲಕರಿಗೆ ಇಬ್ಬರು ಬಾಲಕಿಯರಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ೧೩ ಪಂಚಮ ಶಾಲೆಗಳಿದ್ದವು. ಅವುಗಳಳ್ಲಿ ೪೭೯ ವಿದ್ಯಾರ್ಥಿಗಳಿದ್ದರು. ೧೯೦೩-೦೪ರಲ್ಲಿ ಒಟ್ಟು ಖರ್ಚಾದ ಹಣ ರೂ. ೧.೨೨ ಲಕ್ಷಗಳು. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಫೀ. ೩೪,೦೦೦ರೂ. ಆಗಿತ್ತು. ಒಟ್ಟು ಪ್ರಾಥಮಿಕ ಶಿಕ್ಷಣ ಸ್ಥಳೀಯರಿಂದ ರೂ. ೮,೫೦೦ ದೇಣಿಗೆ ನೀಡಲಾಗಿತ್ತು. ದಿ. ೨೬.೬. ೧೯೩೫ರಲ್ಲಿ ಬಳ್ಳಾರಿ ಜಿಲ್ಲೆಯ ಶಿಕ್ಷಣ ಇಲಾಖೆಯು ಕೆ. ಜೀವನರಾವ್ ಹೆಡ್‌ಮಾಸ್ಟರ್‌ಗೆ ಬೋರ್ಡ್ ಹಿಂದು ಗರ್ಲ್ಸ್ ಸ್ಕೂಲ್ ಕಂಪ್ಲಿಗೆ ಸೇವೆಯನ್ನು ವಿಸ್ತರಿಸಿ ಸರ್ಕಾರ ಅನುಮತಿ ನೀಡುತ್ತದೆ.

ಆಸ್ಪತ್ರೆದವಾಖಾನೆ

ಬ್ರಿಟಿಷರ ಆಳ್ವಿಕೆಯನ್ನು ಕಂಡ ಬಳ್ಳಾರಿ ಜಿಲ್ಲೆಯಲ್ಲಿ ಆರಂಭದಲ್ಲಿ ಏಳು ಆಸ್ಪತ್ರೆ ಗಳಿದ್ದವು. ಏಳನ್ನು ಮುನ್ಸಿಪಾಲಿಟಿ ನೋಡಿಕೊಳ್ಳುತ್ತಿತ್ತು. ಉಳಿದ ಐದನ್ನು ಸ್ಥಳೀಯ ಬೋರ್ಡ್ ಅಲ್ಲದೆ, ನಾಲ್ಕನ್ನು ತಾಲ್ಲೂಕು ತಹಶೀಲ್ದಾರ್ ಮತ್ತು ಒಂದನ್ನು ಡೆಪ್ಯುಟಿ ತಹಶೀಲ್ದಾರರು ತಮ್ಮ ಕೇಂದ್ರ ಸ್ಥಳದಿಂದಲೇ ನೋಡಿಕೊಳ್ಳುತ್ತಿದ್ದರು. ಒಟ್ಟು ೯೫ ಬೆಡ್‌ಗಳಲ್ಲಿ ೫೭ ಪುರುಷರು ಮತ್ತು ೩೮ ಜನ ಮಹಿಳೆಯರಿದ್ದರು. ಬಳ್ಳಾರಿಯಲ್ಲಿರುವ ಆಸ್ಪತ್ರೆ ೧೮೪೨ರಲ್ಲಿ ಸ್ಥಾಪನೆಯಾಯಿತು. ಸಣ್ಣ ದೇಣಿಗೆಗಳಿಂದ ೨,೫೦೦ ರೂ. ಖರ್ಚು ಮಾಡಿ ೪೦ ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಯಿತು. ಐದು ದವಾಖಾನೆಗಳನ್ನು ಬೋರ್ಡ್ ಸ್ಥಳೀಯ ಘಟಕ ನೋಡಿಕೊಂಡರೆ, ಏಳನ್ನು ಬಳ್ಳಾರಿ ಮುನಿಸಿಪಾಲಿಟಿ ನೋಡಿಕೊಳ್ಳುತ್ತಿತ್ತು. ೧೯೦೩ರಲ್ಲಿ ೧,೨೯,೦೦೦ ಜನರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುತ್ತಾರೆ. ಅವರಲ್ಲಿ ೯೦೦ ಜನ ಒಳರೋಗಿಗಳು ಮತ್ತು ೩೦೦೦ ಶಸ್ತ್ರ ಚಿಕಿತ್ಸೆಗೊಳಗಾದವರು. ಅವರಿಗಾಗಿ ರೂ. ೩೧,೦೦೦ ಖರ್ಚಾಗಿತ್ತು. ಮಹಿಳೆಯರಿಗಾಗಿ ಆಸ್ಪತ್ರೆಯನ್ನು ವಿಕ್ಟೋರಿಯ ಮೆಮೋರಿ ಯಲ್ ಫಂಡ್ ಹಾಗೂ ಸದಸ್ಯರ ನೆರವಿನಿಂದ ನಿರ್ಮಿಸಲಾಗಿದೆ. ಆದೋನಿ ಮತ್ತು ಹೊಸಪೇಟೆಯಲ್ಲಿ ಇದರ ಆಶ್ರಯದಲ್ಲಿ ಸ್ಥಾಪಿಸಲಾಯಿತು.

ಚುಚ್ಚುಮದ್ದು

ಸಿಡುಬು ರೋಗಗಳಿಗೆ (ದೇವಿ-ಅಮ್ಮ) ಕೈಗೆ ಸೂಜಿ ಹಾಕಿಸುವುದನ್ನು ಮೊದಲು ಆರಂಭಿಸಿದವರು ಬ್ರಿಟಿಷರು. ೧೯೦೩-೦೪ರಲ್ಲಿ ಅಸಂಖ್ಯಾತ ಜನರಿಗೆ ಚುಚ್ಚುಮದ್ದು ಹಾಕಲಾಯಿತು. ೧೦೦೦ಕ್ಕೆ ೩೨ರಷ್ಟು ಜನರಿಗೆ ಇದರ ಮೂಲಕ ರೋಗಗಳಿಂದ ರಕ್ಷಿಸ ಲಾಯಿತು. ಮದ್ರಾಸ್ ಅಧಿಪತ್ಯದಲ್ಲಿ ಎಲ್ಲರಿಗೂ ಹೋಲಿಸಿದರೆ ಶೇಕಡ ೩೦ರಷ್ಟು ಗುಣಮುಖ ಇಲ್ಲಿ ಕಂಡುಬಂದಿತ್ತು. ಬಳ್ಳಾರಿ ಮತ್ತು ಆದೋನಿ ಮುನ್ಸಿಪಾಲಿಟಿಗಳು ಚುಚ್ಚುಮದ್ದನ್ನು ಕಡ್ಡಾಯಗೊಳಿಸಿದ್ದವು.*


* ಹೆಚ್ಚಿನ ವಿವರಕ್ಕೆ ನೋಡಿ : ಡಬ್ಲೂ. ಫ್ರಾನ್ಸಿಸ್, ಬಳ್ಳಾರಿ ಡಿಸ್ಟ್ರಿಕ್ಟ್ ಗೆಜಿಟಿಯರ್, ೧೯೦೨, ಪು. ೪೩೨-೩೪.

* ಕೆಲ್‌ಶಲ್, ಬಳ್ಳಾರಿ ಡಿಸ್ಟ್ರಿಕ್ಟ್ ಗೆಜೆಟಿಯರ್, ೧೮೭೮.

* ಸಿ.ಡಿ. ಮ್ಯಾಕಲಿನ್, ಮ್ಯಾನುಯಲ್ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ.

* ಶ್ರೀನಿವಾಸ ರಾಘವಯ್ಯಂಗಾರ್, ಮೆಮೊರಾಂಡಂ ಆನ್ ದಿ ಪ್ರೊಗ್ರೆಸ್ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ.