೪. ಅಲ್ಲೀಪುರ ಜೈಲು : ೧೮೮೪ರ ದಶಕಕ್ಕಿಂತ ಹಿಂದೆ ಈ ಕಟ್ಟಡ ನಿರ್ಮಾಣವಾಗಿದೆ. ಸುಮಾರು ೬೦ ಎಕರೆಗಳಷ್ಟು ವಿಸ್ತೀರ್ಣದಲ್ಲಿದೆ. ಸಾಮಾನ್ಯ ಕಲ್ಲಿನಿಂದ ೨೦ ಅಡಿಗಳಿಗೂ ಎತ್ತರವಾದ ಸುತ್ತು ಗೋಡೆಯನ್ನು ನಿರ್ಮಿಸಲಾಗಿದೆ. ದಕ್ಷಿಣ ಭಾರತದಲ್ಲಿ ಏಕೈಕ ದೊಡ್ಡ ಜೈಲು ಬಳ್ಳಾರಿಯದು. ಅನಂತರ, ತಂಜಾಪೂರು, ವೆಲ್ಲೂರು ಎನ್ನಬಹುದು. ಅಪರಾಧಿಗೆ ಪ್ರತ್ಯೇಕ ಕೋಣೆ, ಸೆಲ್ ವ್ಯವಸ್ಥೆ ಇದ್ದು, ವಿಶಿಷ್ಟವಾಗಿದೆ. ಇಲ್ಲಿ ಉನ್ನತ ನಾಗರಿಕನಿಗೆ ಬೇಕಾದ ಎಲ್ಲಾ ಸೌಲಭ್ಯಗಳಿವೆ.

ಈಗ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯವಾಗಿರುವ ಈ ಕಟ್ಟಡ ಹಿಂದೆ ಅಲ್ಲೀಪುರ ಜೈಲಾಗಿತ್ತು. ದಂಡು ಪ್ರದೇಶದಲ್ಲಿರುವ ಈ ಕಟ್ಟಡ ಸೈನ್ಯದಿಂದ ತುಂಬಿದ್ದು ಸ್ಥಳೀಯ ಇತರ ದೇಶದ ಎಲ್ಲಾ ಅಪರಾಧಿಗಳನ್ನು ಇಲ್ಲಿ ಬಂಧಿಸಲಾಗುತ್ತಿತ್ತು. ಇಂದು ರಾಜ್ಯ ಸರ್ಕಾರದ ಬಾಲಮಂದಿರವಾಗಿರುವ ಜೈಲು ಬರ್ಮಾದ ತೇಗ, ಕಟ್ಟಿಗೆ ಹಂಚುಗಳನ್ನು ಉಪಯೋಗಿಸಲಾಗಿದೆ. ಸುಮಾರು ಸಾವಿರಾರು ಜನರನ್ನು ಕೂಡಿಸಲು ಯೋಗ್ಯವಾದ ಸ್ಥಳವಾಗಿದೆಯಲ್ಲದೆ, ಬ್ಯಾರಕ್‌ಗಳನ್ನು ಹೊಂದಿದ್ದು, ಹಿಂಭಾಗ, ಮುಂಭಾಗದಲ್ಲಿ ಕಿಟಕಿಗಳಿಗೆ ಕಬ್ಬಿಣದ ಸಲಾಕೆಗಳನ್ನು ಉಪಯೋಗಿಸಿದ್ದಾರೆ.

೫. ಸೆಂಟ್ರಲ್ ಜೈಲುಬಳ್ಳಾರಿ : ಇಂದು ಬಳ್ಳಾರಿಯ ಗ್ರಾಮದೇವತೆ ದುರುಗಮ್ಮ ದೇವಾಲಯದ ಮುಂದಿರುವುದೇ ಬಳ್ಳಾರಿಯ ಸೆಂಟ್ರಲ್ ಜೈಲ್. ಇಡೀ ದಕ್ಷಿಣ ಭಾರತಕ್ಕೆ ಪ್ರಸಿದ್ದಿಯಾದ ಕಾರಾಗೃಹ. ೧೮೮೪ರಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹ ನಿರ್ಮಾಣ ಕಾರ್ಯ ಆರಂಭವಾಗಿದ್ದು. ಈ ಕಾರಾಗೃಹ ಸ್ಥಾಪನೆಯಾದದ್ದು ೧೮೯೪ರಲ್ಲಿ. ದಿ. ೧.೧೦.೧೯೫೩ರಲ್ಲಿ ಮದ್ರಾಸ್ ಅಧಿಪತ್ಯದಿಂದ ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಬಂದಿತು. ಈ ಕಾರಾಗೃಹದ ಆವರಣವು ೩೯.೧೮ ಎಕರೆಗಳಷ್ಟು ವಿಸ್ತೀರ್ಣವಾಗಿದೆ. ಸು. ೧೬.೨೫ ಎಕರೆ ಪ್ರದೇಶದಲ್ಲಿ ಕಾರಾಗೃಹದ ಕಟ್ಟಡ ಕಟ್ಟಲಾಗಿದೆ. ಇದರಲ್ಲಿ ಒಂಬತ್ತು ಬ್ಲಾಕ್‌ಗಳ ೫೦೬ ಸೆಲ್ಲುಗಳಿವೆ. ೫೦ ಎ ವರ್ಗದ ಸೆಲ್ಲುಗಳಿವೆ. ಈ ಕಾರಾಗೃಹದಲ್ಲಿ ೭೧೭ ಪುರುಷರು, ೩೦ ಜನ ಮಹಿಳಾ ಖೈದಿಗಳನ್ನು ಬಂಧಿಸಲು ಸ್ಥಳಾವಕಾಶವಿದೆ. ಕೇವಲ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲದೇ ಇಡೀ ರಾಜ್ಯದ ಮೂಲೆಗಳಿಂದ ಬಂಧಿಗಳನ್ನು ಈ ಸೆರೆಮನೆಗೆ ದಾಖಲಿಸಿಕೊಳ್ಳುತ್ತಾರೆ.

ಮದ್ರಾಸ್ ಅಧಿಪತ್ಯದ ವ್ಯಾಪ್ತಿಗೆ ಬರುವ ಎಲ್ಲ ಬಗೆಯ ಖೈದಿಗಳನ್ನು ಇಲ್ಲಿ ಬಂಧಿಸಿ ಡಲಾಗುತ್ತಿತ್ತು. ೧೯೨೧ರಲ್ಲಿ ಸು. ೧,೦೦೦ಕ್ಕೂ ಹೆಚ್ಚು ದಂಗೆಕೋರರನ್ನು ಅಲ್ಲೀಪುರಂ ಜೈಲಿನಲ್ಲಿಡಲಾಗಿತ್ತು. ಇದಕ್ಕೂ ಮುನ್ನ ೧೮೮೫ರಲ್ಲಿ ಬೋಯರ್ ಯುದ್ಧದಲ್ಲಿ ಸೆರೆಯಾದ ಬಂಧಿಗಳ ಜೊತೆಗೆ ಆಂಗ್ಲೋ-ಟರ್ಕಿಷ್ ಯುದ್ಧದಲ್ಲಿ ಭಾಗಿಗಳಾಗಿದ್ದ ಟರ್ಕಿ ಖೈದಿಗಳನ್ನು ಅಲ್ಲೀಪುರಂ ಜೈಲಿನಲ್ಲಿಡಲಾಗಿತ್ತು.

ಅಲ್ಲೀಪುರದ ಜೈಲಿನ ಜೊತೆಗೆ ಸೆಂಟ್ರಲ್ ಜೈಲು, ಬೋರ್ಸ್ಟಲ್ ಎಂಬ ಮೂರು ಜೈಲುಗಳು ಬಳ್ಳಾರಿಯಲ್ಲಿದ್ದವು. ಅವುಗಳೆಂದರೆ :

ಖೈದಿಗಳ ಸಂಖ್ಯೆ
೧. ಸೆಂಟ್ರಲ್ ಜೈಲು ೧೦೭೬
೨. ಅಲ್ಲೀಪುರ ಜೈಲು ೧೫೮
೩. ಜೂನಿಯರ್ ಸರ್ಟಿಫೈಡ್ ಸ್ಕೂಲ್ ೪೪೩

ಈ ಮೂರು ಜೈಲುಗಳಲ್ಲಿ ಕೇವಲ ಬಳ್ಳಾರಿ ಜಿಲ್ಲೆಯವರೇ ಇರುತ್ತಿರಲಿಲ್ಲ. ದೇಶದ ಮೂಲೆಮೂಲೆಗಳಿಂದ ಖೈದಿಗಳನ್ನು ಇಲ್ಲಿನ ಸೆರಮನೆಗೆ ಕಳುಹಿಸುತ್ತಿದ್ದರು. ವಿಶೇಷವಾಗಿ ದಕ್ಷಿಣ ಭಾರತದ ಖೈದಿಗಳು ಇಲ್ಲಿ ಹೆಚ್ಚಾಗಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಾವಿರಾರು ಹೋರಾಟಗಾರರನ್ನು ಇಲ್ಲಿ ಬಂಧನದಲ್ಲಿಡಲಾಗಿತ್ತು. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಹಾನೀಯರು ಸಹಾ ಈ ಜೈಲಿನಲ್ಲಿ ಶಿಕ್ಷೇ ಅನುಭವಿಸಿದ್ದಾರೆ. ರಾಜಾಜಿ, ಕಾಮರಾಜ, ಅಲ್ಲೂರಿ ಸೀತರಾಮ ರಾಜು, ಟಿ.ವಿ. ಸುಬ್ಬಾರೆಡ್ಡಿ, ಜಿ. ಲಚ್ಚಣ್ಣ, ಓ.ವಿ. ಅಲಗೇಷನ್, ಬಿಜವಾಡ ಗೋಪಾಲರೆಡ್ಡಿ, ಪೊಟ್ಟಿ ಶ್ರೀರಾಮುಲು, ಕಲ್ಲೂರು ಸುಬ್ಬರಾವ್, ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಮೊದಲಾದವರು ಅಲ್ಲೀಪುರಂ ಜೈಲಿನಲ್ಲಿದ್ದರು. ೧೯೫೮ರಲ್ಲಿ ಸುಮಾರು ಅಲ್ಲೀಪುರಂ ಜೈಲನ್ನು ವೈದ್ಯಕೀಯ ಕಾಲೇಜಾಗಿ ಮಾರ್ಪಡಿಸಿ, ನೂತನ ಕಾರಾಗೃಹಕ್ಕೆ ವರ್ಗಾಯಿಸಲಾಯಿತು.

ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ ಖೈದಿಗಳು ಬಡಗಿ, ಹೊಲಿಗೆ, ನೇಯ್ಗೆ, ಫಿನಾಯಲ್, ಸಾಬೂನ್, ಕಮ್ಮಾರಿಕೆ ಮಾಡುವ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗೆ ಕೆಲಸ ಮಾಡುವ ಖೈದಿಗಳಿಗೆ ೨೧.೧೦.೧೯೯೬ರಿಂದ ಪ್ರತಿಯೊಬ್ಬನಿಗೆ ರೂ. ೬ ಕೂಲಿ ಕೊಡಲಾಗುತ್ತಿತ್ತು. ಇಲ್ಲಿ ತಯಾರಿಸುವ ಸಾಬೂನು ಮತ್ತು ಫಿನಾಯಿಲ್‌ಗಳನ್ನು ಕರ್ನಾಟಕದ ಎಲ್ಲ ಕಾರಾಗೃಹಗಳಿಗೆ ಕಳುಹಿಸುತ್ತಿದ್ದರು. ಇದರಿಂದ ಸರ್ಕಾರಕ್ಕೂ ಲಾಭವಿದೆ. ಜೈಲಿನಲ್ಲಿ ಖೈದಿಗಳು ಪರಿವರ್ತನೆಗೊಂಡು ಮುಂದಿನ ಭವಿಷ್ಯ ರೂಪಿಸಲು ಇಂಥ ಉದ್ದೇಶ ವರದಾನವೇ ಸರಿ. ಜೈಲಿನ ಖೈದಿಗಳು ಉತ್ಪಾದಿಸಿದ ವಿವರ (ಜೈಲು ಆವರಣದ ತೋಟ, ಸಂಗನಕಲ್ಲು ಗ್ರಾಮದ. ಸ.ನಂ. ೭೦ ಎಕರೆ ಮತ್ತು ೮೨ ಎಕರೆ ವಿಸ್ತೀರ್ಣ ೧೧ ಎಕರೆ ೨೦ ಗುಂಟೆ, ಪಾರ್ವತಿನಗರ, ಸ.ನಂ. ಟಿ.ಎಸ್. ೬:೧, ೧೦ ಎಕರೆ ೩೯ ಗುಂಟೆ ವಿಸ್ತೀರ್ಣ, ಜೈಲು ಆವರಣ, ಐದು ಎಕರೆ ತೋಟ).

೧೯೯೩-೯೪ ೩,೩೧,೫೮೮-೩೭ ೧,೮೬,೩೫೪-೪೫
೧೯೯೪-೯೬ ೩,೯೬,೩೬೨-೨೨ ೩,೫೩,೬೭೮-೯೦
೧೯೯೫-೯೬ ೩,೨೧,೭೯೬-೬೧ ೨,೧೬,೬೧೨-೫೫

ಈ ಮೇಲಿನಂತೆ ಕೇವಲ ಉತ್ಪಾದನೆ ಮಾಡುವುದಷ್ಟೇ ಖೈದಿಗಳ ಕೆಲಸ ಅಲ್ಲ. ಅವರ ಮನೋವಿಕಾಸ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಗ್ರಂಥಾಲಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಗ್ರಂಥಗಳಿವೆ. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳು ಇಲ್ಲಿಗೆ ಬರುತ್ತವೆ. ಸುದ್ದಿ ಮಾಧ್ಯಮ ತಿಳಿಯಲು ದೂರದರ್ಶನವನ್ನು ವ್ಯವಸ್ಥೆಗೊಳಿಸಿದ್ದರು. ಅನುಕೂಲಕ್ಕಾಗಿ ಕ್ಯಾಂಟೀನ್, ೨೪ ಹಾಸಿಗೆಗಳ ಆಸ್ಪತ್ರೆಯನ್ನು ಖೈದಿಗಳಿಗಾಗಿ ನಿರ್ಮಿಸ ಲಾಗಿದೆ (ಪತ್ರಿಕಾ ಮಾಧ್ಯಮ ವರದಿ ಆಧರಿಸಿದೆ).

ಅನಿಬೇಸೆಂಟ್, ನೆಹರು, ರಾಜಾಜಿ, ಪ್ರಕಾಶಂ ಪಂತುಲು, ಗೋಪಾಲರೆಡ್ಡಿ, ವಿ.ವಿ. ಗಿರಿ, ಸಂಜೀವ ರೆಡ್ಡಿ, ನಾಗಿರೆಡ್ಡಿ, ಪೆರಿಯಾರ್ ಮೊದಲಾದವರು ಈ ಕಟ್ಟಡಕ್ಕೆ ಭೇಟಿ ನೀಡಿ ಸೆರೆಮನೆಯಲ್ಲಿ ವಾಸಿಸಿದ್ದು ಸ್ಮರಣೀಯ. ಅಲ್ಲೀಪುರ ಉತ್ತರ ಪ್ರದೇಶದಲ್ಲಿರುವ ಮತ್ತೊಂದು ಸ್ಥಳ. ಅಲ್ಲಿಯೂ ಸಹ ಇದೇ ರೀತಿ ಸೆರೆಮನೆ ಇದೆ. ಬ್ರಿಟಷ್ (ಬಾಂಡ್) ವಿಧಾನದ ಕಟ್ಟಡದಲ್ಲಿ ಇದು ಸಹ ಒಂದು ಎನ್ನಬಹುದು. ಇದರ ಬಾಗಿಲು ಪ್ರಾಂಗಣ, ಮೇಲ್ಭಾಗದ ಕಟ್ಟಿಗೆ ಬರ್ಮಾದಿಂದ ಆಮದಾಗಿದ್ದು, ಅಲ್ಲೀಪುರ ಜೈಲಿನ ಕಟ್ಟಡದ ಹಿಂಭಾಗದಲ್ಲಿ ಕಬ್ಬಿಣದ ಸಲಾಕೆ ಬಳಸಲಾಗಿದ್ದು, ವಿಶಾಲವಾದ ಮೈದಾನವಿದೆ. ಈ ಕಟ್ಟಡದ ಐತಿಹಾಸಿಕ ಮಹತ್ವವನ್ನು ಇನ್ನೂ ವಿಸ್ತಾರವಾಗಿ ಬರೆಯಬಹುದಾಗಿದೆ.

೬. ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ : ಮದ್ರಾಸ್ ಅಧಿಪತ್ಯದಲ್ಲಿ ಬಳ್ಳಾರಿ ಜಿಲ್ಲೆ ಸುಧಾರಣೆಗೊಳ್ಳಲು ಬ್ರಿಟಿಷರು ಕಾರಣವೆಂದು ಹೇಳುವುದಾದರೆ ಸ್ಥಳೀಯರ ಬಗೆಗಿರುವ ಕಳಕಳಿ ಇಲ್ಲಿ ಮುಖಾಮುಖಿಯಾಗಿದೆ. ನಾಲ್ಕು ಕಮಾನು ದ್ವಾರಗಳನ್ನು ಹೊಂದಿರುವ ಈ ಕಟ್ಟಡ ಎರಡು ಅಂತಸ್ತಿನದ್ದಾಗಿದೆ. ಹೆಂಚು, ಕಲ್ಲು, ಗಾರೆ, ಕಟ್ಟಿಗೆ, ಬಳಸಿದುದರಿಂದ ಒಂದು ಸ್ವರೂಪ ದೊರೆತಿದೆ. ಆಗಿನ ಸಂದರ್ಭದಲ್ಲಿ ದುರಸ್ತಿ, ಕಾಮಗಾರಿ, ರಸ್ತೆ ನಿರ್ಮಾಣ ಗಳಿಗೆ ಅಭಿಯಂತರರು ಉತ್ಸಾಹಕರಾಗಿದ್ದರು. ಕಮಾನು ದ್ವಾರದಲ್ಲಿ ಕೀ ಸ್ಟೋನ್ ಬಳಸಿರು ವುದರಿಂದ ಬಿಗಿ ಭದ್ರತೆ ಕಾಪಾಡಿಕೊಂಡಿವೆ.

೭. ಸೈನಿಕರ ವಸತಿ ಗೃಹಗಳು : ಆಂಗ್ಲರ ಆಡಳಿತದಲ್ಲಿ ವಿವಾಹಿತ ಸೈನಿಕರಿಗೆ ಮಾತ್ರ ವಸತಿ ಸೌಕರ್ಯವನ್ನು ಒದಗಿಸಲಾಗುತ್ತಿತ್ತು. ಹಾಗಾಗಿ ಅವಿವಾಹಿತರು ಆಗಾಗ ವರ್ಗಾವಣೆಯಾಗು ತ್ತಿದ್ದರಿಂದ ನಿರ್ದಿಷ್ಟವಾದ ಸೌಕರ್ಯ ನಿಗದಿಯಾಗಿರಲಿಲ್ಲ. ದಂಡು ಪ್ರದೇಶದಲ್ಲಿ ಕಟ್ಟಿರುವ ಸುಮಾರು ಆರು ಸಾಲಿನ ಕಟ್ಟಡಗಳು ಇಂದು (ಕನ್ನಡಿಗೇತರರ) ಆಂಧ್ರದ ರೆಡ್ಡಿ, ಮತ್ತು ನಾಯ್ಡುಗಳ ಪಾಲಾಗಿದೆ. ಅಚ್ಚುಕಟ್ಟಾದ ಮನೆ, ಕಾಂಪೌಂಡ್, ವಿಶ್ರಾಂತಿ ಇತ್ಯಾದಿಗೆ ಕೊಠಡಿ ಗಳು ಪ್ರತ್ಯೇಕವಾಗಿದ್ದವು. ನೆರೆಯ ತೆಲುಗರ ವಲಸೆಯಿಂದ ಬಳ್ಳಾರಿಯ ಬಹು ಬೆಲೆ ಬಾಳುವ ಕಟ್ಟಡ ನಿವೇಶನಗಳನ್ನು ಅವರು ಕಬಳಿಸಿದ್ದಾರೆ. ಇದು ಸ್ಥಳೀಯರು ಅವುಗಳ ಬಗ್ಗೆ ಕಥೆಯನ್ನು ಹೇಳುತ್ತಾ ಮರುಕಪಡುತ್ತಾರೆ.

೮. ಶವಾಗಾರ : ಬ್ರಿಟಿಷರು ಸೆರೆಮನೆಗೆ ತಳ್ಳಿದ ನಂತರ ದುರ್ಮರಣಕ್ಕೀಡಾದರೆ ಭಾರತೀಯ ವ್ಯಕ್ತಿಗಳನ್ನು ಜೋಡಿಯಾಗಿ ಶವಾಗಾರದಲ್ಲಿ ಇಡುತ್ತಿದ್ದರು. ಈ ಕಟ್ಟಡಕ್ಕೆ ಸುತ್ತಲೂ ಕಿಟಕಿ ಮತ್ತು ಇನ್ನಾವುದೇ ವ್ಯವಸ್ಥೆ ಇಲ್ಲ. ಮುಂಭಾಗದಲ್ಲಿ ಅತೀ ಚಿಕ್ಕದಾಗಿದ್ದ ಕಬ್ಬಿಣದ ಸಲಾಕೆಗಳಿಂದ ಬಾಗಿಲು ನಿರ್ಮಿಸಿದ್ದಾರೆ. ಇದು ಅಲ್ಲೀಪುರ ಜೈಲಿಗೆ ಆಗ ಸಂಬಂಧಿಸಿತ್ತು. ಆದರೆ ದುರದೃಷ್ಟವಶಾತ್ ಇಂದು ಹಾಳಾಗಿ ಬೀಗ ಹಾಕಲಾಗಿದೆ.

೯. ರೈಲ್ವೆ ನಿಲ್ದಾಣ : ೧೮೮೨ರ ಸಾಲಿಗೆ ಇಲ್ಲಿ ರೈಲಿನ ಸಂಚಾರ ಪ್ರಾರಂಭವಾಯಿತು. ರೈಲ್ವೆ ನಿಲ್ದಾಣವನ್ನು ೧೯೧೮ರಲ್ಲಿ ಕಟ್ಟಿಸಲಾಗಿದೆ. ಬೃಹತ್ ಕಟ್ಟಡವಾಗಿರುವ ಇದು ಎರಡು ಅಂತಸ್ತಿನಿಂದ ಕೂಡಿದ್ದು, ಮುಂದಿನ ಎರಡು ಗೋಪುರಗಳು ಹಾಗೂ ಮೂರು ಅಂತಸ್ತು ಗಳನ್ನು ಹೊಂದಿದೆ. ಮಹಾದ್ವಾರದ ಮೂರು ದಿಕ್ಕಿನಲ್ಲಿ ಪ್ರವೇಶ ಮಾಡಬಹುದಾಗಿದೆ. ಬ್ರಿಟಿಷ್ ಪದ್ಧತಿಯ ವಾಸ್ತುಶೈಲಿಯಲ್ಲಿ ಉನ್ನತ ಗುಣಮಟ್ಟದಿಂದ ನಿರ್ಮಾಣ ಮಾಡಿದ್ದಾ ಗಿದೆ. ಇತ್ತೀಚೆಗೆ ಇದು ಪರಿಪೂರ್ಣಗೊಂಡಿದೆ. ಈ ಕಟ್ಟಡ ಎರಡು ಗೋಪುರಗಳನ್ನು ಹೊಂದಿ, ಕಮಾನಾಕಾರಕ್ಕೆ ಸ್ತಂಭಗಳು ಬಳಕೆ, ಕಲ್ಲು, ಇಟ್ಟಿಗೆ ಹೆಂಚುಗಳಿಂದ ಪೂರ್ಣ ಗೊಂಡಿದೆ.

ರೈಲ್ವೆ ಸಿಬ್ಬಂದಿ ಗೃಹಗಳು : ಇವು ಬಳ್ಳಾರಿ ನಗರದ ಮಧ್ಯಭಾಗದಲ್ಲಿವೆ. ಇದು ಸುಮಾರು ಎಕರೆ ವಿಸ್ತೀರ್ಣ ಹೊಂದಿದ್ದು, ಕೆಲವು ಕುಟುಂಬಗಳು ವಾಸಿಸುತ್ತಿವೆ. ಕಬ್ಬಿಣದ ಸಲಾಕೆಗಳಿಂದ ದ್ವಾರಗಳು ನಿರ್ಮಾಣಗೊಂಡಿವೆ. ಆಧುನಿಕ ಕಚ್ಚಾ ವಸ್ತುಗಳಿಂದ ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ.

೧೦. ನ್ಯಾಯಾಧೀಶರ ಬಂಗಲೆ : ಕಲೆಕ್ಟರುಗಳ ಸಮಾನತೆಗೆ ತಕ್ಕಂತೆ ಇವರು ಬಂಗಲೆಯನ್ನು ಹೊಂದಿದ್ದರು. ಎರಡು ಅಂತಸ್ತಿನಿಂದ ಕೂಡಿದ್ದು, ಇಟ್ಟಿಗೆ, ಕಂಬಗಳಿಂದ ನಿರ್ಮಾಣ ಗೊಂಡಿದೆ. ಬಂಗಲೆ ಸುಮಾರು ೬.೦೦ ಎಕರೆ ಜಮೀನು ವಿಸ್ತೀರ್ಣ ಹೊಂದಿದೆ. ಇದು ಊರಿನ ಉತ್ತರ ಭಾಗಕ್ಕೆ ಏಕಾಂತವಾದ ಪ್ರದೇಶದಲ್ಲಿದೆ. ೧೮೩೦ರ ದಶಕದಲ್ಲಿ ಇದನ್ನು ನಿರ್ಮಿಸಿರಬಹುದು.

೧೧. ಬಾಲಕಿಯರ ಪಾಠ ಶಾಲೆ : ಜಿಲ್ಲಾ ಖಜಾನೆಯ ಹಿಂಭಾಗದಲ್ಲಿದೆ. ೧೮೫೬ರ ದಶಕದಲ್ಲಿ ಇದು ಪ್ರಾಥಮಿಕ ಶಾಲೆಯಾಗಿತ್ತು. ಈಗ ಬಾಲಕಿಯರ ಮಾಧ್ಯಮಿಕ ಶಾಲೆಯಾಗಿದೆ. ಬ್ರಿಟಷ್ ಮಾದರಿಯ ಕಟ್ಟಡ ಒಂದೇ ಅಂತಸ್ತಿನಿಂದ ಇದ್ದು, ಅತೀ ಎತ್ತರವಾಗಿ ಕಟ್ಟಲಾಗಿದೆ. ಅಕ್ಕಪಕ್ಕ ಅಂಚೆ ಕಚೇರಿ, ರಸ್ತೆ, ಡಿ.ಸಿ. ಕಂಪೌಂಡ್‌ನ ಕಟ್ಟಡಗಳಿವೆ.

೧೨. ಕ್ರೈಸ್ತು ರಾಜರ ಕಲ್ಯಾಣ ಕೇಂದ್ರ : ತುಂಬಾ ಹಳೆಯ ಕಾಲದ ಕಟ್ಟಡವಾಗಿದೆ. ಕ್ರಿಶ್ಚಿಯನ್ನರು ಇಲ್ಲಿಗೆ ಪಾದಾರ್ಪಣೆ ಮಾಡಿದಾಗಿನಿಂದ ಸ್ಮಾರಕಗಳ ನಿರ್ಮಾಣಕಾರ್ಯ ಭರದಿಂದ ನಡೆಯಿತು. ನಾಲ್ಕು ಕಂಬಗಳಿಂದ, ಒಂದು ತೊಲೆಯಿಂದ ಈ ಮನೆ ಕಂಗೊಳಿ ಸುತ್ತಿದೆ. ಅದನ್ನು “ದಿ ಕಿಂಗ್ ಡಮ್ ಕಮ್” ಎಂದು ಕರೆದಿದ್ದಾರೆ, ಇದು ಪ್ರಾರ್ಥನೆಯ ಸ್ಥಳವಾಗಿದೆ. ಇಂದು ಸುಧಾ ಕ್ರಾಸ್‌ನಿಂದ ಓ.ಪಿ.ಡಿ. ಹೋಗುವ ದಾರಿಯಲ್ಲಿದೆ. ಈ ಕಟ್ಟಡ ಇದರ ಹತ್ತಿರ ಸೈಂಟ್ ಮೇರಿ ಆಸ್ಪತ್ರೆಯಿದೆ.

೧೩. ಕೋಟೆಯಲ್ಲಿನ ಕಟ್ಟಡಗಳು : ಡಿ.ಡಿ.ಪಿ.ಐ. ಮತ್ತು ಬಿ.ಇ.ಓ ಕಚೇರಿಗಳು : ಆಂಗ್ಲರ ಕಟ್ಟಡಗಳಿಂದು ಸಹಾಯಕ ಶಿಕ್ಷಣಾಧಿಕಾರಿಗಳ ಕಟ್ಟಡವಾಗಿದೆ. ಆರು ದ್ವಾರಗಳನ್ನು ಇದು ಹೊಂದಿದೆ, ಸರ್ವೇಸಾಮಾನ್ಯವಾಗಿ ಇನ್ನುಳಿದ ಕಟ್ಟಡಗಳಿಗೆ ಇದು ಹೊರತಾಗಿಲ್ಲ.

೧೪. ವಾರ್ಡ್ಲಾ ಪದವಿ ಪೂರ್ವ ಕಾಲೇಜು : ಬ್ರಿಟಿಷ್ ಚರಿತ್ರೆಯಲ್ಲಿ ಬಳ್ಳಾರಿಯ ಜಿಲ್ಲೆಯ ಪಾತ್ರ ಅಪಾರ. ವಾರ್ಡ್ಲಾ ಎಂಬುವನು ಕ್ರಿಶ್ಚಿಯನ್ ಅಧಿಕಾರಿ ಹಾಗೂ ಒಬ್ಬ ಸಂತ. ಹಾಗಾಗಿ ಅವನ ಹೆಸರಿನಿಂದ ಈ ಕಾಲೇಜನ್ನು ನಿರ್ಮಿಸಲಾಯಿತು. ಮೊದಲಿಗೆ ಇದು ಪ್ರೌಢಶಾಲೆಯಾಗಿತ್ತು. ೧೮೪೫ರಲ್ಲಿ ಇದರ ನಿರ್ಮಾಣ ಕಾರ್ಯ ನೆರವೇರಿತು. ಆಂಗ್ಲ ಶೈಲಿಯ ಮೂರು ಮುಖಗಳು ಕಟ್ಟಡದ ಮುಖ ದ್ವಾರಗಳಲ್ಲಿ ಕಂಡುಬರುತ್ತಿವೆ. ಹಂಚು ಗಳಿಂದ ಆವೃತಗೊಳಿಸಲಾಗಿದೆ. ಸುಂದರವಾದ ಆಂಗ್ಲ ಶೈಲಿ ಲಕ್ಷಣಗಳನ್ನು ಇದು ಪ್ರತಿಬಿಂಬಿ ಸುತ್ತಿದೆ. ಈ ಆವರಣದಲ್ಲಿ ರಸಾಯನಶಾಸ್ತ್ರ ಪ್ರಯೋಗಾಲಯ ಕಟ್ಟಡ ಆಂಗ್ಲರ ಕಾಲದಲ್ಲಿ ಮುದ್ರಣಯಂತ್ರ ಕೊಠಡಿಯಾಗಿತ್ತು. ಆ ಸಂದರ್ಭದಲ್ಲಿ ೩೨೦ ಇಂತಹ ಶಾಲೆಗಳಿದ್ದು, ೧ ರಿಂದ ೭ನೇ ತರಗತಿಯವರೆಗೆ ಓದುವ ಅವಕಾಶವಿತ್ತು. ಪ್ರಾದೇಶಿಕ ಭಾಷೆಗೆ ಮಹತ್ವ ನೀಡಬೇಕೆಂದು ಎ. ಮಿಲ್ಲರ್, ಡಿ. ಮಾಯ್ನೆ ಎಂಬ ಅಧಿಕಾಗಳು ಹೇಳಿದರಲ್ಲದೆ, ಈ ಕಟ್ಟಡವನ್ನು ನಿರ್ಮಿಸಲು ಶ್ರಮಿಸಿದರು. ಏಕ ಕಟ್ಟಡದಲ್ಲಿ ಮೂರು ವಿಭಾಗ ಕಟ್ಟಡಗಳಿದ್ದು, ಕಲ್ಲು, ಹಂಚು, ಉತ್ತಮ ಕಟ್ಟಿಗೆ ಬಳಸಲಾಗಿದೆ. ಒಳಭಾಗದಲ್ಲಿ ವಿಶ್ರಾಂತಿ ಪಡೆಯಲು ದೊಡ್ಡದಾದ ಕೊಠಡಿ, ಮರ ಗಿಡಗಳಿದ್ದು, ಮಕ್ಕಳ ಬೌದ್ದಿಕ ಪ್ರಗತಿಗೆ ಕಾರಣವಾಗಿದೆ.

೧೫. ಭೂ ದಾಖಲೆಗಳ ಕಟ್ಟಡ : ಬ್ರಿಟಿಷರ ಕಟ್ಟಡ, ಇಂದು ಟ್ರಾಫಿಕ್ ಪೊಲೀಸ್ ಸ್ಟೇಷನ್ ಆಗಿದೆ. ನಂತರ ಎರಡನೇ ಭಾಗದಲ್ಲಿ ಭೂ ದಾಖಲೆಗಳ ಕಚೇರಿ ಇದೆ. ಈ ಮಾದರಿಯ ಕಟ್ಟಡಗಳನ್ನು ೧೯೦೦ರ ದಶಕದಲ್ಲಿ ನಿರ್ಮಿಸಲಾಗಿದ್ದು, ತಾಲ್ಲೂಕು ಕಚೇರಿಯನ್ನು ಹೋಲು ತ್ತದೆ. ಅತಿ ಎತ್ತರವಾದ ಕಟ್ಟಡವನ್ನು ಹವಾಗುಣಕ್ಕೆ ತಕ್ಕಂತೆ ನಿರ್ಮಿಸಿಕೊಂಡಿದ್ದಾರೆ.

ಕಟ್ಟಡದ ಮುಂಭಾಗ ಚೌಕಾಕಾರದ ರೂಪ, ಮೇಲ್ಭಾಗ ತ್ರಿಕೋನಾ ಕೃತಿಯಲ್ಲಿ ಕಂಡುಬರುತ್ತದೆ. ಕಲೆಕ್ಟರುಗಳು ವಿವಿದುದ್ದೇಶಕ್ಕಾಗಿ ನಿರ್ಮಿಸಲ್ಪಟ್ಟ ಕಟ್ಟಡ ಇದಾಗಿದೆ.

೧೬. ಗ್ರಂಥಾಲಯ ಕಟ್ಟಡ : ಬಳ್ಳಾರಿಯ ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡಿನಿಂದ ಪೂರ್ವ ಭಾಗಕ್ಕಿದೆ (ಊರಿನ ಮಧ್ಯದಲ್ಲಿದೆ). ಬೃಹತ್ ಕಟ್ಟಡಗಳಲ್ಲಿ ಇದು ಸಹ ಒಂದು. ಈ ಕಟ್ಟಡಕ್ಕೆ ಎರಡು ಗೋಪುರಗಳಿವೆ. ಅವು ಮೂರು ಅಂತಸ್ತುಗಳನ್ನು ಹೊಂದಿವೆ. ಉಳಿದ ಭಾಗ ಎರಡು ಅಂತಸ್ತನ್ನು ಆವರಿಸಿಕೊಂಡಿದ್ದು, ವರ್ಣಮಯವಾದ ಕಿಟಕಿ, ದ್ವಾರಗಳಿಂದ ಕೂಡಿದೆ. ಕಬ್ಬಿಣದ ತೀರು, ಕಡಪ ಕಲ್ಲನ್ನು ಬಳಸಿ ಇದನ್ನು ಪೂರ್ಣಗೊಳಿಸಿದ್ದಾರೆ. ಈಗ ಕಟ್ಟಡವನ್ನು ನೆಲಸಮಗೊಳಿಸಿ, ಖಾಸಗಿಯವರು ಹೊಟೇಲ್ ಮಾಡಿದ್ದಾರೆ.

೧೭. ಲಂಡನ್ ಮಿಷನ್ ಸ್ಕೂಲ್ : ಇದು ಪ್ರೊಟೆಸ್ಟೆಂಟ್‌ರಿಂದ ಕನ್ನಡ ಕಲಿಯಲು ಆಂಗ್ಲರು ಸ್ಥಾಪಿಸಿದ ಶಾಲೆ. ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ ಪ್ರಸ್ತುತ ಸರ್ಕಾರಿ ಶಾಲೆಯಾಗಿ ಕಾರ್ಯನಿರ್ವಹಿಸುವ ಕನ್ನಡ ಲಂಡನ್ ಮಿಷನ್ ಶಾಲೆ ೧೮೪೮ರಲ್ಲಿ ಪ್ರಾರಂಭವಾಯಿತು.

೧೮. ಸೈಂಟ್ ಫಿಲೋಮಿನಾ ಸ್ಕೂಲ್ : ಎಚ್. ಸೈಂಟ ಅಬೂರ್ನ್‌ಗುಡ್‌ರಿಚ್ ಕಲೆಕ್ಟರನಾಗಿ ದ್ದಾಗ (೧೦.೧೧.೧೮೮೯) ಈ ಕಟ್ಟಡದ ನಿರ್ಮಾಣವಾಯಿತು. ೧೮೭೫ರಲ್ಲಿ ಶಾಲೆ ಆರಂಭ ವಾಯಿತು. ಕಟ್ಟಡ ಮುಂಭಾಗದಲ್ಲಿ ತಿಳಿಸಿರುವಂತೆ ೧೮೮೫ರಲ್ಲಿ ನಿರ್ಮಾಣವಾದ ಸೈಂಟ್ ಫಿಲೋಮಿನಾ ಹೈಸ್ಕೂಲ್ ಎಂದಿದೆ. ಇದು ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರವಾಗಿತ್ತು. ಎರಡು ಅಂತಸ್ತುಗಳಿಂದ ಕೂಡಿದ್ದು, ಆಂಗ್ಲ ಶೈಲಿ ಮತ್ತು ಇಂಡೋ ಇಸ್ಲಾಮಿಕ್ ವಾಸ್ತುಶೈಲಿ ಯನ್ನು ಗುರುತಿಸುತ್ತವೆ.

ರೋಮನ್ ಕ್ಯಾಥೋಲಿಕ್‌ರು ತಮ್ಮ ಧರ್ಮ ಪ್ರಸಾರವನ್ನು ಮಾಡಲು ಇಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಕಿಟಕಿಗಳು, ಕಮಾನಾಕೃತಿಕಟ್ಟಡ, ಚೌಕಕಾರವಾಗಿದೆ. ಇನ್ನೊಂದು ಕಟ್ಟಡ ದಲ್ಲಿ ಪ್ರಾರ್ಥನಾ ಮಂದಿರವನ್ನು ಕಾಣುತ್ತೇವೆ. ಇಲ್ಲಿ ಸುಮಾರು ೧೦-೧೨ ಉತ್ತಮ ಕಟ್ಟಡಗಳಿದ್ದು ಬ್ರಿಟಿಷ್ ಶೈಲಿಯನ್ನು ಕಡೆಗಣಿಸಿಲ್ಲ. ೧೧ ದ್ವಾರಗಳನ್ನು ಹೊಂದಿದ್ದು, ೧೯೦೦ರ ದಶಕದಲ್ಲಿ ಉಳಿದ ಕಟ್ಟಡಗಳನ್ನು ನಿರ್ಮಿಸಲಾಗಿದೆ.

೧೯. ಸಂತ ಜಾನ್ ಸಂಯುಕ್ತ ಪದವಿ ಪೂರ್ವ ಕಾಲೇಜ್ : ಇದು ಸಹಾ ಕ್ರಿಶ್ಚಿಯನ್ ಸಂಸ್ಥೆಯ ಶಾಲೆ. ಜುಲೈ ೨೫, ೧೯೧೩ರಲ್ಲಿ ಎರಡು ಅಂತಸ್ತುಗಳಿಂದ ನಿರ್ಮಿಸಲ್ಪಟ್ಟ ಈ ಕಟ್ಟಡ ಚರ್ಚ್‌ನಂತೆ ಅತಿ ಎತ್ತರವಾಗಿದ್ದು, ಮುಖದ್ವಾರ ಅತಿಸುಂದರವಾಗಿದೆ. ಕೋಟೆ ಯಲ್ಲಿರುವ ಈ ಕಟ್ಟಡವನ್ನು ರೆವರೆಂಡ್ ಫಾದರ್ ಕುಸ್‌ರವರಿಂದ ನಿರ್ಮಾಣಗೊಂಡಿದೆ. ಸೇಂಟ್ ಜೋಸೆಫ್ ಮಿಶನರಿ ಸೊಸೈಟಿಯಿಂದ ನಿರ್ಮಿತವಾದ ಈ ಕಟ್ಟಡದಲ್ಲಿ ಮೊದಲು ಸೇಂಟ್ ಜೋಸೆಫ್ ಶಾಲೆಯು ನಡೆಸಲ್ಪಡುತ್ತಿತ್ತು. ಬ್ರಿಟಿಷ್ ಕಟ್ಟಡಗಳಿಗೆ ಇದು ಉತ್ತಮ ಉದಾಹರಣೆಯಾಗಿದೆ. ಇಲ್ಲಿ ವಿಶೇಷವೇನೆಂದರೆ ಕಮಾನುಗಳು ಕಾಣುವುದಿಲ್ಲ. ಆಯತಾ ಕಾರದ ಕಟ್ಟಡವಾಗಿದ್ದು, ಟ್ರಾಬಿಯೆಟ್ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಅನಂತರ ಕಟ್ಟಲ್ಪಟ್ಟ ಕಟ್ಟಡಗಳಲ್ಲಿ ಸುಂದರವಾದ ಬೋಧನಾ ಕೊಠಡಿಯನ್ನು ನೋಡಬಹುದು. ಇಲ್ಲಿ ಮೂರು ಕಮಾನು ದ್ವಾರಗಳನ್ನು ಬಳಸಿದ್ದು, ಬಯಲು ಪರಿಸರದಲ್ಲಿ ಸುಂದರ ಕಟ್ಟಡವೆನಿಸಿಕೊಂಡಿವೆ.

೨೦. ರಸಾಯನಿಕ ಮದ್ದು ತಯಾರಿಸುವ ಘಟಕ : ಸುಮಾರು ೧೫ ಅಡಿ ಎತ್ತರದ ಕಟ್ಟಡ, ನೆಲದಿಂದ ಮೂರು ಅಡಿ ಆಶ್ರಯಕ್ಕೆ ಇಟ್ಟಿಗೆಗಳಿದ್ದು ಇವುಗಳನ್ನು ಸಾಲಾಗಿ ಒಟ್ಟಿಗೆ ಇಡಲಾಗಿದೆ. ಅವುಗಳ ಮೇಲೆ ಈ ಕಟ್ಟಡ ನಿರ್ಮಿಸಲಾಗಿದೆ. ಇದು ಒಂದು ರೀತಿಯ ವಿಶೇಷವಾದ ಕಟ್ಟಡ.

ಯುದ್ದೋಪಕರಣಗಳು, ಸಿಡಿಮದ್ದು, ಇತರ ಮಾರಕಾಸ್ತ್ರಗಳನ್ನು ಆಂಗ್ಲರು ಈ ಕಟ್ಟಡ ದಲ್ಲಿ ಶೇಖರಿಸುತ್ತಿದ್ದರು. ಕಂಟೋನ್ಮೆಂಟು ಮತ್ತು ಈಗಿನ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದ ಪ್ರದೇಶದಲ್ಲಿರುವ ಈ ಕಟ್ಟಡ ೧೨ ಅಡಿ ಮತ್ತು ೧೩ ಅಡಿ ವಿಸ್ತೀರ್ಣ ಹೊಂದಿದೆ.

೨೧. ತುರ್ಕಿಸ್ಥಾನದ ಯುವರಾಜನ ಸಮಾಧಿ : ಬಳ್ಳಾರಿ ಕಂಟೋನ್‌ಮೆಂಟ್‌ಪ್ರದೇಶದಲ್ಲಿದೆ. ೧೯೧೮ರಲ್ಲಿ ನಡೆದ ಪ್ರಪಂಚದ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ್ದ ತುರ್ಕಿಸ್ಥಾನದ ಅಬ್ದುಲ್ ಸಲಾ ಅಘಾಭಾಷಾ ಎಂಬಾತನ ಸಮಾಧಿಯಿದೆ. ಬ್ರಿಟಿಷರ ಸಮಾಧಿ ಸ್ಮಾರಕಗಳಂತೆ ಇದು ಒಂದಾಗಿದೆ. ಈತ ಬಳ್ಳಾರಿ ಜೈಲಿಗೆ ಸೆರೆಯಾಳಾಗಿ ಆಗಮಿಸಿದ್ದು, ನಂತರ ಮರಣ ಹೊಂದಿದ್ದನು. ಈ ಬಗ್ಗೆ ಶಾಸನ ಹಾಕಿಸಲಾಗಿದೆ. ಈ ಕುರಿತಂತೆ ಕಮಲಾಪುರದ ಭಾರತೀಯ ಸ್ಟೇಟ್ ಬ್ಯಾಂಕಿನ ಮ್ಯಾನೇಜರ್ ಶ್ರೀ ವಾಗೀಶ್ ಬಳ್ಳಾರಿ ಅವರು ಲೇಖನವನ್ನು ದಿನಪತ್ರಿಕೆ ಯಲ್ಲಿ ಪ್ರಕಟಿಸಿದ್ದಾರೆ.

೨೨. ಬಂಗಲೆ (ಅವಸಾನ ಹೊಂದಿದೆ) : ಇದು ದಂಡು ಪ್ರದೇಶದಲ್ಲಿದ್ದು ಆಂಧ್ರದ ರೆಡ್ಡಿ, ನಾಯ್ಡುಗಳ ಆಕ್ರಮಣಕ್ಕೆ ಒಳಗಾಗಿ ಮೊದಲ ಸ್ಥಿತಿಯನ್ನು ಕಳೆದುಕೊಂಡಿದೆ. ಮೊದಲು ಕಲೆಕ್ಟರನ ಅಧೀನದಲ್ಲಿ ಸೈನ್ಯದ ದಂಡಾಧಿಕಾರಿಯ ಬಂಗಲೆಗಳಾಗಿದ್ದವೆಂದು ಇದನ್ನು ಕರೆಯಲಾಗಿದೆ.

೧೯೦೭ರಲ್ಲಿ ಕೆಲವು ಕಟ್ಟಡಗಳನ್ನು ಒಪ್ಪಂದದಂತೆ ಅಧಿಕಾರಿ ವರ್ಗಕ್ಕೆ ಬಿಟ್ಟುಕೊಟ್ಟರು. ಆದರೆ ಇಂದು ಆಂಧ್ರದವರೇ ಈ ಕಟ್ಟಡಗಳಲ್ಲಿ ವಾಸಿಸುವುದು, ತೆಲುಗು ಭಾಷೆ ಪ್ರಭಾವ ವಿರುವುದು ವಿಪರ್ಯಾಸ.

೨೩. ದೇವಸ್ಥಾನ (ಅಂಚೆಕಚೇರಿಯಾದದ್ದು) : ಕೋಟೆಯೊಳಗೆ ಈ ಕಟ್ಟಡವಿದೆ. ಅಕ್ಕಪಕ್ಕದ ಕಚೇರಿಗಳ ಕಟ್ಟಡಗಳು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದೆ. ಈ ಕಟ್ಟಡವನ್ನು ನೋಡಿದಾಗ ಸಾಮಾನ್ಯ ಗೃಹದಂತೆ ಕಂಡುಬರುತ್ತದೆ. ಇದರ ನಿಜ ಸ್ವರೂಪವೆಂದರೆ ಕಟ್ಟಡದ ಪಶ್ಚಿಮ ಭಾಗಕ್ಕೆ ಈಶ್ವರ ದೇವಸ್ಥಾನವಿದೆ. ಅಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು, ಇಂದಿಗೂ ಅದಕ್ಕೆ ಅಂಟಿಕೊಂಡು ಇತರ ಕಟ್ಟಡಗಳನ್ನು ಕಟ್ಟಿಸಿ ಅಂಚೆ ಕಚೇರಿಯಾಗಿ ಮಾರ್ಪಡಿಸಿಕೊಂಡಿದ್ದರು. ಇದರ ಪಶ್ಚಿಮಕ್ಕಿರುವ ಸ್ವತಂತ್ರ ಕಟ್ಟಡ, ಮುಖ್ಯದ್ವಾರದಲ್ಲಿ ಕಮಾನು ದ್ವಾರಗಳನ್ನು ಹೊಂದಿದೆ.

ಬಳ್ಳಾರಿ ಕೋಟೆಯನ್ನು ೧೭೭೫ರಲ್ಲಿ ಹೈದರಾಲಿ ವಶಪಡಿಸಿಕೊಂಡನು. ೧೭೯೨ರವರಗೆ ಟಿಪ್ಪು ಸುಲ್ತಾನನ ಅಧೀನದಲ್ಲಿತ್ತು. ನಂತರ ಹೈದರಾಬಾದಿನ ನಿಜಾಮನಿಗೆ, ೧೮೦೦ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಸೆರಿತು. ೧೮೨೩ ರಿಂದ ೧೮೬೪ರವರಗೆ ಕರ್ನೂಲಿನ ನವಾಬ ಮುಜಾಫರ್ ಖಾನನನ್ನು ಇಲ್ಲಿ ಬಂಧನದಲ್ಲಿಟಲಾಗಿತ್ತು. ಕೆಳಕೋಟೆಯಲ್ಲಿ ಬ್ರಿಟಿಷರ ಕಾಲದ ಅನೇಕ ಕಟ್ಟಡಗಳನ್ನು ಕಟ್ಟಲಾಯಿತು (ಕರ್ನಾಟಕದ ಕೋಟೆಗಳು, ಪು. ೧೦೦).

೨೪. ಬ್ರಿಟಿಷರ ಕಾಲದ ಅಶ್ವಗೃಹ : ಆಂಗ್ಲಾಧಿಕಾರಿಗಳು (ಕಲೆಕ್ಟರ್ ಸಹ) ಕುದುರೆಗಳನ್ನು ಸಾರಿಗೆ ಸಾಧನಗಳಾಗಿ ಬಳಸುತ್ತಿದ್ದರು. ಕುದುರೆ ಲಾಯದಂತಿರುವ ಈ ಕಟ್ಟಡದಲ್ಲಿ ಅಶ್ವ ಗಳನ್ನು ಕಟ್ಟುತ್ತಿದ್ದರು. ೧೯೦೦ರ ನಂತರ ವಿವಿದುದ್ದೇಶಕ್ಕೆ ಈ ಕಟ್ಟಡವನ್ನು ಬಳಸಲಾಯಿತು. ಸ್ವಾತಂತ್ರ್ಯೋತ್ತರದಲ್ಲಿ ಮೌಲಾನ್ ಅಬ್ದುಲ್ ಕಾಲಂ ಅಜಾದ್ ಪ್ರೌಢಶಾಲೆಯಾಗಿ ಮಾಡಿ ಕೊಂಡರು. ಗಾರೆಯಿಂದ ನಿರ್ಮಿಸಲ್ಪಟ್ಟ ಕಟ್ಟಡಗಳಲ್ಲಿ ಅವರ ವಾಸ್ತುಶೈಲಿಯ ಅತ್ಯಂತ ವಿರಳವಾದ ಲಕ್ಷಣಗಳನ್ನು ಇದರಲ್ಲಿವೆ ಎಂದು ಹೇಳಬಹುದು.

೨೫. ಕಲೆಕ್ಟರ್ ಬಂಗಲೆ : ಇದು ಅನಂತಪುರ ರಸ್ತೆಯ ಪಕ್ಕಕ್ಕೆ ಅಥವಾ ಬಳ್ಳಾರಿಯ ಪೂರ್ವ ಭಾಗದಲ್ಲಿದೆ. ೧೨:೦೦ ಹೆಕ್ಟೇರ್ ಪ್ರದೇಶ ಮೊದಲಿತ್ತು. ಕಡಿಮೆಗೊಳಿಸಿ ಈಗ ೩:೦ ಎಕರೆಗಳಷ್ಟು ಇರುವ ಪ್ರದೇಶವಾಗಿದೆ. ಆಂಗ್ಲರ ಪ್ರಾರಂಭದ ಕಟ್ಟಡಗಳಲ್ಲಿ ಅಂತಸ್ತು ಮುಖ್ಯವಾಗಿದ್ದು, ಎರಡಂತಸ್ತಿನ ಕಟ್ಟಡಗಳು ನಿರ್ಮಾಣವಾಗಿವೆ. ಉದ್ಯಾನವನವಿದ್ದು, ಮಧ್ಯಭಾಗದಲ್ಲಿ ಈ ಕಟ್ಟಡ ಸುಮಾರು ೬೦ ಕೋಣೆಗಳಿಂದ ಸುತ್ತುವರೆದಿದೆ. ಭಿನ್ನವಾಗಿಲ್ಲ ದಿದ್ದರೂ ಬಹಳ ಸುಂದರವಾಗಿದೆ. ಜಿಲ್ಲಾಧಿಕಾರಿಗಳ ನಿವಾಸ ಸ್ಥಾನವಾಗಿ ಇಂದಿಗೂ ಸಹ ಮುಂದುವರೆಸಿಕೊಂಡು ಬಂದಿದೆ.

೨೬. ಕಸ್ಮೋಪಾಲಿಟನ್ ಕ್ಲಬ್ : ೧೯೦೦ರ ದಶಕದಲ್ಲಿ ಬಳ್ಳಾರಿ ಎಲ್ಲಾ ಕಡೆ ಆಂಗ್ಲರ ಶೈಲಿ ಕಟ್ಟಡಗಳು ನಿರ್ಮಾಣವಾದವು. ರಾಷ್ಟ್ರೀಯ ಐಕ್ಯತೆ, ಸೋದರತೆ, ಸಮಾನತೆಯ ಪ್ರಸಾರಕ್ಕಾಗಿ ಹುಟ್ಟಿಕೊಂಡ ಖಾಸಗಿ ಸಂಸ್ಥೆ. ಪಠ್ಯೇತರ ಚಟುವಟಿಕೆಗಳು ಹೆಚ್ಚಾಗಿ ನಡೆಸುತ್ತಿದ್ದರು. ಇದು ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಮಹಿಳೆಯರಿಗೆ ಪ್ರತ್ಯೇಕವಾಗಿ ನಿರ್ಮಿಸಿಕೊಂಡಿದ್ದಾರೆ. ಇಂಥಾ ಕ್ಲಬ್, ಕಚೇರಿಗಳು, ರಾಜ್ಯದ ಪ್ರತಿ ತಾಲ್ಲೂಕಿನಲ್ಲಿಯೂ ಕಂಡುಬರುತ್ತವೆ. ಹೊಸಪೇಟೆ, ರಾಯದುರ್ಗ (ಆಂಧ್ರ-ಅನಂತಪುರ), ಮೊಳಕಾಲ್ಮೂರು (ಚಿತ್ರದುರ್ಗ), ಕೂಡ್ಲಿಗಿ, ಹಡಗಲಿ, ಹರಪನಹಳ್ಳಿಗಳಲ್ಲಿ ಇಂಥಾ ಕಟ್ಟಡಗಳನ್ನು ನೋಡಬಹು ದಾಗಿದೆ.

೨೭. ಕೂಡ್ಲಿಗಿ ತಾಲ್ಲೂಕು ಕಚೇರಿ : ೧೯೧೦ರ ದಶಕದಲ್ಲಿ ಈ ತಾಲ್ಲೂಕು ಕಚೇರಿಯ ನಿರ್ಮಾಣವಾಯಿತು. ಇದನ್ನು ಬರ್ಮಾದ ತೇಗದ ಮರ, ಮಂಗಳೂರು ಹೆಂಚುಗಳಿಂದ ನಿರ್ಮಿಸಿ ಟ್ರಾಬಿಯೇಟ್ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಕಟ್ಟಡ ಇತರೆ ಕಟ್ಟಡ ಗಳಿಗಿಂತ ವಿಶೇಷವಾಗಿ ಕಂಡುಬರುವುದಿಲ್ಲ. ಆಗಿನ ತಹಶೀಲ್ದಾರ್ ಈ ಕಚೇರಿಯ ಅಧಿಕಾರಿ ಯಾದ್ದನು. ಈ ರೀತಿ ೮ ತಾಲ್ಲೂಕುಗಳಲ್ಲಿ ಉಳಿದ ಕಟ್ಟಡಗಳನ್ನು ಇಲ್ಲಿ ಸ್ಮರಿಸಬಹುದು. ಖಜಾನೆ, ತಾಲ್ಲೂಕು ಸಬ್‌ಜೈಲ್, ಸಬ್ ರಿಜಿಸ್ಟ್ರಾರ್ ಆಫೀಸ್, ಪೊಲೀಸ್ ಠಾಣೆ, ಅಂಚೆ ಕಚೇರಿಗಳನ್ನು ಒಂದೇ ಕಾಂಪೌಂಡ್‌ನಲ್ಲಿ ನಿರ್ಮಿಸಿರುವುದು ಪ್ರಜೆಗಳ ಅನುಕೂಲಕ್ಕೆಂಬುದು ಗಮನಾರ್ಹ. ಇಲ್ಲಿನ ಸಬ್‌ಜೈಲ್ ಸಹಾ ಬ್ರಿಟಿಷರ ಕಾಲದ ಕಟ್ಟಡವಾಗಿದೆ.

೨೮. ಮುನ್ಸಿಫ್ ನ್ಯಾಯಾಲಯ (ಕೂಡ್ಲಿಗಿ) : ೧೯೦೦-೧೯೦೨ರಲ್ಲಿ ಕಟ್ಟಡ ನಿರ್ಮಾಣ ವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ದೊಡ್ಡ ತಾಲ್ಲೂಕಾಗಿರುವ ಕೂಡ್ಲಿಗಿ ಬ್ರಿಟಿಷರಿಂದ ನಿರ್ಮಾಣ ಗೊಂಡ ಕಟ್ಟಡಗಳಿಗೆ ಇದು ಹೊರತಾಗಿಲ್ಲವೆನ್ನಬಹುದು. ಕಟ್ಟಡದ ನಿರ್ಮಾಣ ಸೂಪರಿಂಟೆಂ ಡೆಂಟ್ ಇಂಜಿನೀಯರ್ ಆರ್.ಪಿ. ರೊಸ್ಕೊಲ್ಲೇನ್, ಇ.ಎಸ್.ಕ್ಯೂ, ಮಾಜಿ ಇಂಜಿನೀಯರ್ ರಿ.ಪಿ.ಎನ್. ಲೂಕನ್, ಕಂಟ್ರಾಕ್ಟರ್ ಎಂ. ಆರ್.ಜಿ. ದೊಡ್ಡ ವೀರಪ್ಪಗಾರು ಇದನ್ನು ನಿರ್ಮಾಣ ಮಾಡಿದರು (Supers Eng. R.P. Roscoe allen Esqr, M.I.C.E. Ex, Eng R. P.N.A. Lucas ESQR Contractor M.r.Y. J. Doddavirappagaru Period, 1911-12).

೨೯. ಕೂಡ್ಲಿಗಿ ಪ್ರವಾಸಿ ಮಂದಿರ : ೧೯೧೧ರಲ್ಲಿ ಕಲೆಕ್ಟರ್ (ಯಾತ್ರಾರ್ಥಿಗಳಿಗೆ) ಕೂಡ್ಲಿಗಿ ಯಲ್ಲಿ ಪ್ರವಾಸಿ ಮಂದಿರವನ್ನು ನಿರ್ಮಿಸಿದರು. ಸಾಮಾನ್ಯ ವಾಸ್ತು ಶೈಲಿಯಲ್ಲಿ ಹೊಂದಿದ್ದು, ಆಧುನಿಕ ಕಟ್ಟಡವಾಗಿದೆ. ಈ ರೀತಿ ಪ್ರತಿ ತಾಲ್ಲೂಕಿನಲ್ಲಿ ನ್ಯಾಯಾಲಯ, ಜೈಲು, ತಾಲ್ಲೂಕು ಕಚೇರಿಗಳನ್ನು ನಿರ್ಮಿಸಿರುವುದನ್ನು ಕಾಣಬಹುದು.

೩೦. ಗಾಂಧೀಜಿ ಚಿತಾಭಸ್ಮ (ಸಮಾಧಿ) ಕೂಡ್ಲಿಗಿ : ಭಾರತದ ಹುತಾತ್ಮರ ಸ್ಮರಣಿ ೧೮೫೭-೧೯೪೭ರ ನೆನಪಿಗಾಗಿ ದಿ. ೩೦.೦೧.೧೯೪೮ರಲ್ಲಿ ಪೂಜ್ಯ ರಾಷ್ಟ್ರಪಿತನ ಪವಿತ್ರ ಚಿತಾಭಸ್ಮ ವನ್ನು ತಂದು ಕೂಡ್ಲಿಗಿಯಲ್ಲಿ ಸಮಾಧಿ ಮಾಡಲಾಯಿತು. ಬಳ್ಳಾರಿಯ ಮಲ್ಲಸಜ್ಜ ವ್ಯಾಯಾಮ ಶಾಲೆಯ ಸಂಸ್ಥಾಪಕರಾದ ಬಿಂದುಮಾಧವ ಮಾಸ್ತರ ಮೊದಲು ಕೂಡ್ಲಿಗಿಯಲ್ಲಿ ದ್ದಾಗ ಇದನ್ನು ನೆರವೇರಿಸಿದರು. ವಿಶಾಲವಾದ ಬಯಲಿನಲ್ಲಿ ರಸ್ತೆಯ ಪಕ್ಕಕ್ಕೆ ಪೂರ್ವಾಭಿ ಮುಖವಾಗಿ ಕಟ್ಟಿದ್ದಾರೆ. ಇಲ್ಲಿ ಸತ್ಯಾಗ್ರಹ, ಚಳವಳಿ, ಸಭೆ, ಸಮಾರಂಭಗಳು ಆಗಾಗ ನಡೆಯುತ್ತವೆ.

೩೧. ಜಿಲ್ಲಾ ಪಂಚಾಯತ್ ಕಟ್ಟಡ : ಇಂದು ಬಳ್ಳಾರಿಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಯಾಗಿರುವ ಕಟ್ಟಡವನ್ನು ೧೯೩೮ ಮಾರ್ಚ್ ೩೦ರಂದು ಕಲೆಕ್ಟರ್ ಈ.ಸಿ. ವುಡ್ ಮತ್ತು ಇಸ್‌ಕ್ಯೂ ಆದ ವೈ. ಮಹಾಬಲೇಶ್ವರಪ್ಪನವರಿಂದ ಸ್ಥಾಪನೆಗೊಂಡಿದೆ. ಇದರ ಕಂಟ್ರಾಕ್ಟರ್ ಪಿ. ಗುಂಡಪ್ಪ ಆಗಿದ್ದರು. ಇತ್ತೀಚಿಗೆ ಇದನ್ನು ನವೀಕರಣಗೊಳಿಸಲಾಗಿದೆ.

ಬಳ್ಳಾರಿ ಜಿಲ್ಲಾ ಕೇಂದ್ರ

ಎರಡು ಶತಮಾನಗಳಿಗೂ ಹೆಚ್ಚು ಕಾಲ ಇದು ಜಿಲ್ಲಾ ಕೇಂದ್ರವಾಗಿದ್ದು ನಿಜ. ಬೆಂಗಳೂರು, ಮುಂಬಾಯಿ, ಮದ್ರಾಸ್, ಹೈದರಾಬಾದ್ ಇತರ ಎಲ್ಲ ನಗರಗಳಿಂದಲೂ ಬಳ್ಳಾರಿಗೆ ರೈಲು-ರಸ್ತೆ  ಸಂಪರ್ಕವಿದೆ. ಇದು ಪ್ರಮುಖ ವ್ಯಾಪಾರ ಕೇಂದ್ರ. ಹಿಂದೆ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಇಂದು ಗಣಿಗಾರಿಕೆಯಿಂದ ಸಾಕಷ್ಟು ಪರಿವರ್ತನೆಯಾಗಿದೆ.

ರಾಯಲಸೀಮಾ ಪಾಲಿಟೆಕ್ನಿಕ್ : ೧೯೫೦ರ ದಶಕದಲ್ಲಿ ಈ ಶಾಲೆಯಲ್ಲಿ ೨೦೮ ವಿದ್ಯಾರ್ಥಿಗಳಿದ್ದರು. ೧೦೮ ವಿದ್ಯಾರ್ಥಿಗಳು ಬಳ್ಳಾರಿಗೆ ಸೇರಿದವರು. ಉಳಿದವರು ಆಂಧ್ರ ಪ್ರದೇಶಕ್ಕೆ ಸೇರಿದವರು. ಅದರಲ್ಲಿ ೭೨ ಜನ ವಿದ್ಯಾರ್ಥಿಗಳು ರಾಯಲಸೀಮಾ ಜಿಲ್ಲೆಗಳಿಗೆ ಸೇರಿದವರಾಗಿದ್ದರು. ಈ ಕಾಲೇಜಿನ ಕಟ್ಟಡವನ್ನು ರೂ. ೩.೬೫ ಲಕ್ಷಗಳು ಖರ್ಚು ಮಾಡಿ ನಿರ್ಮಿಸಿದ್ದಾರೆ.

ಬಳ್ಳಾರಿಯ ಸರ್ಕಾರಿ ಕ್ಷಯರೋಗ ಆರೋಗ್ಯಧಾಮ : ಇದನ್ನು ಈಗ ಟಿ.ಬಿ. ಆಸ್ಪತ್ರೆ ಎನ್ನುತ್ತಾರೆ. ಬಳ್ಳಾರಿಯ ಕೌಲ್ ಬಜಾರಿನ ಬೆಳಗಲ್ ರಸ್ತೆಯಲ್ಲಿದೆ. ೧೯೫೦ರ ದಶಕದಲ್ಲಿ ಆಸ್ಪತ್ರೆಯಲ್ಲಿ ಖೈದಿಗಳ ಸಂಖ್ಯೆ ೨೬೫. ಇವರೆಲ್ಲ ಹೊರಗಿನಿಂದ ಬಳ್ಳಾರಿಗೆ ಬಂದವ ರಾಗಿದ್ದರು.

೩೨. ಬ್ರಿಟಿಷರು ನಿರ್ಮಿಸಿದ ಪ್ರವಾಸಿ ಮಂದಿರಗಳು (೧೮೦೦೧೯೪೭)

ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ತಮಗೆ ಮತ್ತು ತಮ್ಮ ದೇಶದ ಪ್ರವಾಸಿಗರಿಗೆ ಸರ್ಕಾರಿ ಬಂಗಲೆಗಳನ್ನು ಶೀಘ್ರವಾಗಿ ನಿರ್ಮಾಣಗೊಳಿಸಿಕೊಂಡರು. ಯುರೋಪಿನ ಮಾದರಿಯನ್ನು ಅನುಸರಿಸಿ, ಸ್ಥಳೀಯ ಕಚ್ಚಾವಸ್ತುಗಳನ್ನು ಬಳಸಿ, ಆಧುನಿಕ ಶೈಲಿಗೆ ತಕ್ಕಂತೆ ಕಟ್ಟಡಗಳನ್ನು ಕಟ್ಟಿಸಿದ್ದರು. ಈ ರೀತಿ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕವಾಗಿ ನಿರ್ಮಿಸಿದ್ದು ಕಂಡುಬರುತ್ತದೆ. ಇವು ಅವರ ವೈಭವ ಮತ್ತು ದರ್ಪಿಷ್ಟತೆಗೆ ಪ್ರತೀಕವೆನ್ನ ಬಹುದು. ಈ ಗೃಹಗಳಲ್ಲಿ ಮುಖ್ಯವಾಗಿ ಬ್ರಿಟಿಷ್ ಅಧಿಕಾರಿಗಳು ನೆಲಸುತ್ತಿದ್ದರು.

ಜಿಲ್ಲೆಯಲ್ಲಿ ಪ್ರಮುಖ ತಾಲ್ಲೂಕು, ಪಟ್ಟಣ, ಹೋಬಳಿಗಳಲ್ಲಿ ನಿರ್ಮಿಸಿದ (ವಿರಾಮ) ಗೃಹಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಕುಡುತಿನಿ : ಬಳ್ಳಾರಿಯಿಂದ ೧೧:೪ (ಸು. ೧೫ ಕಿ.ಮೀ) ಮೈಲು ದೂರದಲ್ಲಿದ್ದು ಒಂದು ಚಿಕ್ಕ ಕೊಠಡಿ ಮತ್ತು ವರಾಂಡವಿತ್ತು. ಈ ಗೃಹಕ್ಕೆ ದಿನ ಬಾಡಿಗೆ ೮ ರೂ.ಗಳು ಕೊಡಬೇಕಾ ಗಿತ್ತು. ಇವು ಸರ್ಕಾರಿ ಅಧಿಕಾರಿಗಳು ಮತ್ತು ವಿಶೇಷ ಅಧಿಕಾರೇತರರಿಗೆ ಮೀಸಲಾಗಿದ್ದವು. ನಂತರ ಹಿರೇಹಾಳು ಗ್ರಾಮದಲ್ಲಿ (ಓಬಳಾಪುರದಿಂದ ೨ ಮೈಲು ದೂರ) ಏಕೈಕ ವ್ಯಕ್ತಿಗೊಂದು ಕೊಠಡಿ ನಿರ್ಮಿಸಿದ್ದು, ಸ್ಥಳೀಯ ವಾಸ್ತು ಮತ್ತು ವಿದೇಶಿ ಶೈಲಿಯನ್ನು ಪ್ರತಿಬಿಂಬಿಸುತ್ತಿದೆ.

ಪರಮದೇವನಹಳ್ಳಿ : ಹಗರಿಯಿಂದ ೧ ಮೈಲೂ ದೂರ ಇದೆ. ಸಣ್ಣದಾದ ಒಂದು ಕೊಠಡಿ ವರಾಂಡ ಇದ್ದು, ಪೀಠೋಪಕರಣಗಳು ಮತ್ತು ಕಾವಲುಗಾರನ ವ್ಯವಸ್ಥೆ ಇತ್ತು. ಒಂದು ದಿನಕ್ಕೆ ಬಾಡಿಗೆ ಎಂಟು ರೂಪಾಯಿಗಳನ್ನು ಕೊಡುತ್ತಿದ್ದರು.

ಪ್ರವಾಸಿಮಂದಿರಗಳಲ್ಲಿ ತಂಗುವ ವಿವಾಹಿತ ಮತ್ತು ಅವಿವಾಹಿತರಿಗೆ ಪ್ರತ್ಯೇಕ ಬಾಡಿಗೆ ಕೊಡಬೇಕಾದ ವ್ಯವಸ್ಥೆ ಇದ್ದದ್ದು ವಿಶೇಷ. ಓಬಳಾಪುರಂಗೆ ೮ ಮೈಲು ದೂರದ ಸಿದ್ಧಾಪುರ ದಲ್ಲಿ ಎರಡು ರೂಂಗಳನ್ನು ಕಟ್ಟಿಸಿದ್ದು ಎರಡು ಕಟ್ಟಡಗಳಿಗೆ ಅಡುಗೆಮನೆ, ತಾಮ್ರದ ಬಾಗಿಲಿದ್ದು ಬಂಗಲೆಯೋಪಾದಿಯಲ್ಲಿರುವ ಇದನ್ನು ಅರಣ್ಯ ಇಲಾಖೆಯವರು ಇದನ್ನು ನಿರ್ಮಿಸಿಕೊಂಡಿದ್ದರು. ಬಳ್ಳಾರಿ ನಗರದ ರೈಲ್ವೆ ಸ್ಟೇಷನ್ನಿನ ಹತ್ತಿರ (ಬಳ್ಳಾರಿಗೆ ಎರಡು ಫರ‌್ಲಾಂಗು ದೂರದಲ್ಲಿದೆ) ಬಂಗಲೆಯಿಂದ ಎರಡು ಕುಟುಂಬಗಳ ವಾಸಕ್ಕೆ ಇಲ್ಲಿ ವಸತಿ ಸೌಕರ್ಯವಿದ್ದು, ಎರಡು ಕುಟುಂಬಗಳು ಏಕಕಾಲದಲ್ಲಿ ವಾಸಿಸಲು ತೊಂದರೆಯಾಗು ತ್ತಿರಲಿಲ್ಲ. ಅವರು ರೂಪಾಯಿ ೧-೮-೦ ಬಾಡಿಗೆ ನೀಡಿದರೆ, ಅವಿವಾಹಿತರಿಗೆ ೧ ರೂಪಾಯಿ ಮಾತ್ರ ತೆರಬೇಕಾಗಿತ್ತು.

ಸಿರುಗುಪ್ಪ, ರಾಯದುರ್ಗ, ಕೂಡ್ಲಿಗಿಯಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದ್ದರು. ಸಿರುಗುಪ್ಪ ಆದವಾನಿಯಿಂದ ಪಶ್ಚಿಮಕ್ಕೆ ೨೫ ಮೈಲು ದೂರದಲ್ಲಿದ್ದು ಉತ್ತಮವಾದ ಎರಡು ರೂಂಗಳು, ಪೀಠೋಪಕರಣಗಳು, ಕಾವಲುಗಾರರು ಇದ್ದು, ಒಬ್ಬ ವ್ಯಕ್ತಿಗೆ ರೂ. ೮ ಬಾಡಿಗೆ ಇತ್ತು. ೧೨ ಜನವಿವಾಹಿತ ಸದಸ್ಯರಿಗೆ ವಾಸಮಾಡುವ ಅನುಕೂಲ, ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿತ್ತು. ಬಳ್ಳಾರಿ ಕಲೆಕ್ಟರ್ ರಾಯದುರ್ಗದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಒಂದು ಕಟ್ಟಡ ನಿರ್ಮಿಸಿದರು. ಬಳ್ಳಾರಿಗೆ ರಾಯದುರ್ಗ ೫೦ ಮೈಲಿ ದೂರದಲ್ಲಿದೆ. ರಾಯದುರ್ಗ, ಅನಂತಪುರ ಜಿಲ್ಲೆಯನ್ನು ಸ್ವಾತಂತ್ರ್ಯೋತ್ತರದಲ್ಲಿ ಸೇರಿದಾಗ ಆಂಧ್ರ ಪ್ರದೇಶದ ಭಾಗವಾಯಿತು. ಆಗಿನಿಂದ ಆಡಳಿತದಲ್ಲಿ, ಬದಲಾದಾಗ ಇಂಥ ಕಟ್ಟಡಗಳ ಬಗ್ಗೆ ಅವರು ನಿರ್ಲಕ್ಷ್ಯ ಭಾವನೆ ತೋರಿದರು.

ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಪಟ್ಟಣಕ್ಕೆ ೧ ಮೈಲಿ ಅಂತರದಲ್ಲಿ ಎರಡು ಕೊಠಡಿ ಗಳಿರುವ ಹಂಚಿನ ಮನೆಗಳನ್ನು ನಿರ್ಮಿಸಿದ್ದರು. ಎರಡು ಬಚ್ಚಲು ರೂಂಗಳು, ಪೀಠೋ ಪಕರಣಗಳು ಏಕೈಕ ವ್ಯಕ್ತಿಗೆ (ಅವಿವಾಹಿತನಿಗೆ) ಒಂದು ರೂಪಾಯಿ ಬಾಡಿಗೆ, ವಿವಾಹಿತರಿಗೆ ರೂ. ೧-೮-೦ ಬಾಡಿಗೆ ಇತ್ತು. ಮತ್ತೊಂದು ಭಾಗದಲ್ಲಿ ಬ್ರಿಟಿಷ್ ಸರ್ಕಾರದ ಸರ್ವೇಯರು ಗಳಿಗೆ (ಮೋಜಿಣಿದಾರರು) ಎರಡು ಕೊಠಡಿಗಳ ಪ್ರತ್ಯೇಕ ಕಟ್ಟಡಗಳಿದ್ದು, ಸುತ್ತುಗೋಡೆ ಸಹಿತ ಇತ್ತು. ಕುದುರೆ ಕಟ್ಟಲು ಸಹಾ ಅಶ್ವಶಾಲೆ ಇತ್ತು. ಅತ್ಯುತ್ತಮವಾದ ಕುಡಿಯುವ ನೀರಿನ ಬಾವಿ ತೋಡಿಸಿದ್ದರು. ಊಟದ ಮೇಜು ಸಹಾ ತೇಗದ ಮರದ ಕಟ್ಟಿಗೆಯಿಂದ ನಿರ್ಮಿಸಿದ್ದು, ನಾಲ್ಕು ವಿರಾಮ ಕುರ್ಚಿಗಳು ಬ್ರಿಟಿಷ್ ಅಧಿಕಾರಿಗಳ ಉಪಯೋಗಕ್ಕಿದ್ದವು.

ಗುಡೆಕೋಟೆ : ಕೂಡ್ಲಿಗಿಯಿಂದ ಪೂರ್ವಕ್ಕೆ ೨೮ ಕಿ.ಮೀ ದೂರದಲ್ಲಿದೆ. ಬಳ್ಳಾರಿಯ ದಕ್ಷಿಣಕ್ಕೆ  (೫೦) ಸೋಮಲಾಪುರಂನಿಂದ ೧೮ ಮೈಲಿಯಿದ್ದು ಒಂದೇ ಕೊಠಡಿ ಹೊಂದಿದೆ. ಅಡುಗೆಮನೆ, ಕುಡಿಯಲು ನೀರಿನ ಬಾವಿ, ಬಂಗಲೆ ಎದುರಿಗಿದ್ದವು. ಎರಡು ಮೇಜುಗಳು, ಎರಡು ಕುರ್ಚಿಗಳಿದ್ದು ಅಂದಿನ ಜನಸಾಮಾನ್ಯರಿಗಿವು ವಂಚಿತವಾಗಿದ್ದವು. ಸ್ಥಳೀಯರು ನಿಂತುಕೊಂಡು ವ್ಯವಹರಿಸಿದರೆ, ಬ್ರಿಟಿಷ್ ಅಧಿಕಾರಿಗಳು ಸದಾ ಆಸೀನರಾಗಿಯೇ ವ್ಯವಹರಿಸುತ್ತಿದ್ದರು. ಕುರ್ಚಿ, ಮೇಜು ಅವನಿಗೆ ಮಾತ್ರ ಸೀಮಿತ, ಒಬ್ಬ ವ್ಯಕ್ತಿಗೆ ಎಂಟು ರೂಪಾಯಿ, ವಿವಾಹಿತ ವ್ಯಕ್ತಿಗೆ ೧೨ ರೂಪಾಯಿ ಬಾಡಿಗೆ ನೀಡಬೇಕಾಗಿತ್ತು.

ಚಿತ್ತವಾಡಗಿ : ವಿಜಯನಗರದ ಅರಸ ಕೃಷ್ಣದೇವರಾಯನ ಹೆಂಡತಿ ಚಿನ್ನಾದೇವಿ ನೆನಪಿಗಾಗಿ ನಿರ್ಮಿಸಿದ ನಗರ. ಹೊಸಪೇಟೆಯಿಂದ ಪಶ್ಚಿಮಕ್ಕೆ (ವಾಯವ್ಯ) ಉತ್ತರಕ್ಕೆ ಚಿತ್ತವಾಡಿಗೆಯಲ್ಲಿ ೩ ಹಂಚಿನ ಮನೆ, ಎರಡು ಬಚ್ಚಲು ಮನೆಗಳು ಅಡಿಗೆಮನೆಗೆ ಹೊಂದಿಕೊಂಡಂತಿದ್ದವು. ಬಾಡಿಗೆ ರೂ. ೧-೮-೦ ರೀತಿಯಲ್ಲಿತ್ತು. ಹೀಗೆ ಬಳ್ಳಾರಿ ಹತ್ತಿರ ಕಪ್ಪಗಲ್‌ನಿಂದ ಎರಡು ಫರ‌್ಲಾಂಗು ಅಂತರದಲ್ಲಿ ಎರಡು ರೂಂಗಳಿದ್ದು, ನೀರಿನ ಬಾವಿ ಹೊಂದಿಕೊಂಡಂತಿದೆ. ಕಂಪ್ಲಿಯಲ್ಲಿ ಮಂಗಳೂರು ಹಂಚನ್ನು ಬಳಸಿ ಮೂರು ಕೊಠಡಿಗಳ ಜೊತೆಗೆ ಎರಡು ಬಚ್ಚಲು ರೂಂಗಳನ್ನು  ಕಟ್ಟಿದ್ದಾರೆ. ಬಾಡಿಗೆ ೮-೧೨-೦ ರೂಗಳಿಗೆ ನಿಗದಿ ಮಾಡಿದ್ದರು.

ಕಮಲಾಪುರ : ಜಗಲಿ ಮೇಲೆ ಅಟ್ಟಳಿಗೆ ಮನೆಯನ್ನು ಕಟ್ಟಲಾಗಿದೆ. ತೆರೆದ ಅಂಗಳದ ಸುತ್ತಲೂ ಮುಚ್ಚಿದ ಕಂಪೌಂಡ್ ಇದ್ದು, ಪ್ರಥಮ ವರ್ಗದ ವಿಶಾಲ ಬಂಗಲೆಯಾಗಿದೆ. ಎರಡು ರೂಂಗಳಿದ್ದು ಒಬ್ಬ ಕಾವಲುಗಾರ ಇರುತ್ತಿದ್ದನು. ಹಂಪಿ, ತಿಮ್ಮಲಾಪುರಗಳಲ್ಲಿ ಇದೇ ರೀತಿ ಕಟ್ಟಡಗಳು ಇದ್ದವೆಂದು ಮದ್ರಾಸ್ ಸರ್ಕಾರದ ದಾಖಲೆಗಳು ಪ್ರಚುರ ಪಡಿಸುತ್ತವೆ.

ಚಿಲಕನಹಟ್ಟಿಯಲ್ಲಿರುವ ಕಟ್ಟಡಕ್ಕೆ ತೇಗದಮರ, ಕಬ್ಬಿಣದ ಸರಪಳಿಗಳನ್ನು ಬಾಗಿಲಿಗೆ ಅಳವಡಿಸಿರುವುದು ಕಂಡುಬರುತ್ತದೆ. ಒಂದೇ ಕೊಠಡಿ ಬಾವಿಯನ್ನು ಹೊಂದಿಕೊಂಡಂತೆ ಮೇಜು ನಾಲ್ಕು ಕುರ್ಚಿಗಳಿಂದ ಶೋಭಿಸುತ್ತಿತ್ತು.

ಗಾದಿಗನೂರುನಲ್ಲಿ ೧ ಮೈಲಿ ಅಂತರದಲ್ಲಿತ್ತು (ಹೊಸಪೇಟೆ-ಬಳ್ಳಾರಿ ರಸ್ತೆ). ಇಬ್ಬರು ಪ್ರವಾಸಿಗರು ಏಕಕಾಲದಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗಿದ್ದು, ಬ್ರಿಟಿಷ್ ಆಡಳಿತದ ಅನುಕೂಲಕ್ಕಾಗಿ ಗ್ರಾಮಗಳಲ್ಲಿ ಇಂಥ ಕಟ್ಟಡಗಳು ನಿರ್ಮಾಣವಾಗಿವೆ.

ತೋರಣಗಲ್ಲು ಈ ಗ್ರಾಮವು ವಿಜಯನಗರೋತ್ತರ ಕಾಲದಲ್ಲಿ ಪ್ರಸಿದ್ದಿ ಪಡೆದಿದೆ. ಇಲ್ಲಿ ಚಾವಡಿ, ದೇವಸ್ಥಾನಗಳಿದ್ದು, ಆಂಗ್ಲರ ಆಡಳಿತದಲ್ಲಿ ಒಂದೇ ಕಟ್ಟಡ ಕಟ್ಟಿದ್ದು, ಊರಿಂದ ೧ ಮೈಲಿ ದೂರದಲ್ಲಿದೆ. ಸ್ಥಳೀಯ ನಿಧಿ ಇಲಾಖೆ (ಲೋಕಲ್ ಫಂಡ್) ಇದರ ಉಸ್ತುವಾರಿ ಯನ್ನು ನೋಡಿಕೊಳ್ಳುತ್ತಿತ್ತು. ಸೊಂಡೂರು, ಹೊಸಪೇಟೆ, ರಾಯದುರ್ಗಗಳಲ್ಲಿ ಇದೇ ಮಾದರಿಯ ಕಟ್ಟಡಗಳನ್ನು ೧೯೦೦ರಲ್ಲಿ ನಿರ್ಮಿಸಿದ್ದು, ಅಶ್ವಶಾಲೆ, ಗೋದಾಮು, ಅಡಿಗೆ ಮನೆ ನಿರ್ಮಿಸಲಾಗಿತ್ತು. ನಾಲ್ಕು ಕುರ್ಚಿ, ಎರಡು ಮೇಜು ಇದ್ದು ಬಾಡಿಗೆಗೆ ರೂ. ೧-೮-೦ ಕೊಡುತ್ತಿದ್ದರು.

ಬಂಗಲೆಗಳನ್ನು ಗ್ರಾಮ ಮಟ್ಟದಲ್ಲಿಯೂ ಸಹ ನಿರ್ಮಿಸಲಾಗಿದ್ದು, ತೋರಣಗಲ್ಲಿನಿಂದ ಏಳು ಮೈಲಿ ದೂರದಲ್ಲಿದ್ದು ಇಬ್ಬರು ಬ್ರಿಟಿಷ್ ಪ್ರವಾಸಿಗರಿಗೆ ಅವಕಾಶವಿತ್ತು. ಅವಿವಾಹಿತ ರಾದ ಹಿಂದೂ ಯುವಕರಿಗೆ ೬ ರೂ. ವಿವಾಹಿತರಿಗೆ ೧೨ ರೂ. ಬಾಡಿಗೆ ಇತ್ತು. ಇದೇ ಬಗೆಯ ಪ್ರವಾಸ ಮಂದಿರದ ಕಟ್ಟಡಗಳು ಹಡಗಲಿ ತಾಲ್ಲೂಕಿನ ಬೆಲ್ಲಾಹುಣಸೆ ಅದರ ಅಕ್ಕಪಕ್ಕದಲ್ಲಿ ನಿರ್ಮಾಣವಾಗಿದ್ದವು. ಎರಡು ಕೊಠಡಿಗಳಿದ್ದು, ಎರಡು ಬಚ್ಚಲು ಮನೆಗಳು ಪ್ರತ್ಯೇಕವಾಗಿದ್ದವು. ಹಗರಿಬೊಮ್ಮನಹಳ್ಳಿಯು ಮೊದಲು ಹರಪನಹಳ್ಳಿ, ಅನಂತರ ಹಡಗಲಿ ವಿಭಾಗಕ್ಕೆ ಸೇರಿತ್ತು. ಆ ಸಂದರ್ಭದಲ್ಲಿ ಹೆಂಚಿನಮನೆ, ಎರಡು ಪ್ರತ್ಯೇಕ ಬಚ್ಚಲು ಕೊಠಡಿ ಗಳಿದ್ದು ಒಂದು ಉಗ್ರಾಣ ಕೊಠಡಿ ಹೊಂದಿತ್ತು. ಇಲ್ಲಿನ ಕೊಠಡಿಯನ್ನು ಬಾಡಿಗೆ ರೂ. ೧-೮-೦ಕ್ಕೆ ಕೊಡುತ್ತಿದ್ದರು.

ಸಂಡೂರು ತಾಲ್ಲೂಕಿನ ಹೊಸಮಲೆದುರ್ಗ ಈಗ ರಾಮಗಡವಾಗಿದೆ. ಇದು ಮೊದಲು ಕಂಪಿಲರಾಯನ ರಾಜಧಾನಿಯಾಗಿತ್ತು. ಕುಮ್ಮಟದುರ್ಗ ನಂತರದ ರಾಜಧಾನಿ. ೧೫೨೮ರಲ್ಲಿ ಕುಮಾರರಾಮನ ಸ್ಮರಣಾರ್ಥ ವಿಜಯನಗರದ ಕೃಷ್ಣದೇವರಾಯ ಇಲ್ಲಿ ದೇವಾಲಯ ನಿರ್ಮಿಸಿದ್ದಾನೆ. ಬ್ರಿಟಿಷರ ಆಳ್ವಿಕೆಯಲ್ಲಿ ಇದು ಸೈನ್ಯದ ತಂಗುದಾಣವಾಗಿತ್ತು. ಈ ಉದ್ದೇಶ ಕ್ಕಾಗಿ ಕಟ್ಟಿದ ದೊಡ್ಡ ಕಟ್ಟಡಗಳು ಈಗಲೂ ಇವೆ.

೩೩. ಆಂಗ್ಲ ಅಧಿಕಾರಿಗಳು ನಿರ್ಮಿಸಿದ ಛತ್ರಗಳು

ಬಳ್ಳಾರಿ ಜಿಲ್ಲೆಯಲ್ಲಿ ಬ್ರಿಟಿಷರ ಕಾಲದ ಛತ್ರಗಳು ಗ್ರಾಮ ಮತ್ತು ತಾಲ್ಲೂಕುಗಳಲ್ಲಿ ಹೆಚ್ಚಾಗಿ ಕಂಡುಬಂದಿವೆ. ಅವುಗಳನ್ನು ಈ ಕೆಳಗಿನಂತೆ ಉಲ್ಲೇಖಿಸಬಹುದು.

ಕುಡುತಿನಿ, ಸಿರಿಗೆರೆ, ಕೊಟ್ಟೂರು, ಮಾಲ್ವಿ, ಗಜಾಪುರ, ಹೊಸಪೇಟೆ, ಕಂಪ್ಲಿ, ದರೋಜಿ, ಹಂಪಿಯ ಪಕ್ಕದಲ್ಲಿರುವ ಕಮಲಾಪುರ, ಹಡಗಲಿ ತಾಲ್ಲೂಕಿನ ಮದಲಗಟ್ಟಿ, ಕೊರ‌್ಲಹಳ್ಳಿ, ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ, ಹಂಪಾಪಟ್ಟಣ, ಇಟಗಿ, ಪಿಂಜಾರ ಹೆಗ್ಡಾಳ್, ದುಗ್ಗಾವತಿ  (ದುಗ್ಗತ್ತಿ) ಇನ್ನು ಮುಂತಾದ ಸ್ಥಳಗಳು ಈ ಜಿಲ್ಲೆಯಲ್ಲಿ ಕಂಡುಬಂದಿವೆ. ಖಾಸಗಿ ವ್ಯಕ್ತಿಗಳು ಛತ್ರಗಳನ್ನು ಅಲ್ಲಲ್ಲಿ ನಿರ್ಮಿಸಿರುತ್ತಾರೆ. ಕಮಲಾಪುರದ ದಾದಾಪೀರ್ ಛತ್ರವು ಇದಕ್ಕೆ ಒಂದು ಉದಾಹರಣೆಯಾಗಿದೆ.

ಬ್ರಿಟಿಷ್ ಕಲೆಕ್ಟರುಗಳು, ಇತರ ಅಧಿಕಾರಿಗಳು ಮರಣ ಹೊಂದಿದಾಗ ಅವರ ಸಮಾಧಿಗಳನ್ನು ಇಲ್ಲಿ ಕಟ್ಟಿಸಿದ್ದಾರೆ. ಬಳ್ಳಾರಿ ದಂಡುಪ್ರದೇಶದಲ್ಲಿ ೧೯೧೮ರ ಮೊದಲ ಮಹಾಯುದ್ಧ ದಲ್ಲಿ ಸತ್ತ ತುರ್ಕಿಸ್ಥಾನದ ಯುವರಾಜ ಅಬ್ದುಲ್ ಸಲಾಅಘಾಭಾಷಾ ಎಂಬಾತನ ಸಮಾಧಿಯಿದೆ. ಇವನು ಬಳ್ಳಾರಿ ಜೈಲಿಗೆ ಸೆರೆಯಾಳಾಗಿದ್ದನು. ಇದನ್ನು ಇತ್ತೀಚೆಗೆ ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಇಂಥಾ ಅನೇಕ ಸಮಾಧಿಗಳು ಇಲ್ಲಿ ನಿರ್ಮಾಣಗೊಂಡಿದ್ದು, ನಿಖರ ದಾಖಲೆಗಳಿಲ್ಲದೆ ಮೂಕರೋದನವನ್ನು ಅನುಭವಿಸುತ್ತಿವೆ.

* * *