ಸಾರಿಗೆ ಸಂಪರ್ಕ : ಬ್ರಿಟಿಷರು ಭಾರತದಲ್ಲಿ ಸಾರಿಗೆ ಸಂಪರ್ಕಕ್ಕೆ ಒತ್ತುಕೊಟ್ಟಿದ್ದರು. ಒಂದು ದೇಶದ ಸಾರಿಗೆ ಸಂಪರ್ಕವನ್ನು ಮಾನವನ ಅಂಗ ರಚನೆಗೆ ಹೋಲಿಸಬಹುದು. ಒಂದಕ್ಕೊಂದು ಪರಸ್ಪರ ಕಲ್ಪಿಸುವಂತೆ, ಸಾರಿಗೆ ಸಂಪರ್ಕವೂ ಕೂಡ ಕಲ್ಪಿಸುತ್ತದೆ. ಬಳ್ಳಾರಿಯಲ್ಲಿದ್ದ ಸಾರಿಗೆ ಸಂಪರ್ಕವನ್ನು ಈ ರೀತಿ ವಿಂಗಡಿಸಿದೆ.

 

ಭೂಸಾರಿಗೆ

 

ರಸ್ತೆ ಸಾರಿಗೆ

 

ರೈಲ್ವೆ ಸಾರಿಗೆ

ರಸ್ತೆ ಸಾರಿಗೆಯಲ್ಲಿ ಇವರು ದಟ್ಟವಾದ ಕಾಡುಗಳನ್ನು ಕಡಿಸಿ ದಾರಿಗಳನ್ನು ಮಾಡಿದರು. ನಂತರ ಕಾಡು ರಸ್ತೆಗಳನ್ನು ನಿರ್ಮಿಸಿ ಕುದುರೆಗಳನ್ನು ಸಾರಿಗೆ ಸಾಧನವಾಗಿ ಬಳಸಿದರು. ಆನಂತರ ಉತ್ತಮ  ರಸ್ತೆಗಳ ನಿರ್ಮಾಣವಾದಾಗ ವಾಹನಗಳ ಸೌಲಭ್ಯವನ್ನು ಕಲ್ಪಿಸ ಲಾಯಿತು. ಹಗರಿ ಸೇತುವೆ ನಿರ್ಮಾಣವಾದಾಗ ಬಳ್ಳಾರಿಯಿಂದ ಪೂರ್ವಕ್ಕೆ ಅನಂತಪುರ, ಆದೋನಿ, ಆಲೂರು ಮತ್ತು ರಾಯದುರ್ಗಕ್ಕೆ ವಾಹನ ಸಂಪರ್ಕ ಬೆಳೆಯಿತು. ಪಶ್ಚಿಮಕ್ಕೆ ಹೊಸಪೇಟೆ ಮೂಲಕ ಗದಗ, ಧಾರವಾಡಕ್ಕೆ ೧೮೫೧ರಲ್ಲಿ ರಸ್ತೆ ನಿರ್ಮಿಸಲಾಯಿತು. ಉತ್ತರಕ್ಕೆ ಬೀದರ, ಗುಲ್ಬರ್ಗ, ರಾಯಚೂರುಗಳಿಗೆ, ದಕ್ಷಿಣಕ್ಕೆ ಮೊಳಕಾಲ್ಮೂರು, ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸಿದರು. ಸಣ್ಣ ಕೀಲು ಗಾಲಿಗಳುಳ್ಳ ಗಾಡಿಗಳು ಬರಲಾರಂಭಿಸಿದವು. ಅನಂತರ ಇದ್ದಿಲು ಬಸ್ಸುಗಳನ್ನು ಬಳಸಿದರು. ಪ್ರಮುಖ ವ್ಯಾಪಾರ, ವಾಣಿಜ್ಯಕ್ಕೆ ಪ್ರಾಶಸ್ತ್ಯ ಕೊಟ್ಟು ರಫ್ತು, ಆಮದನ್ನು ಹೆಚ್ಚಿಸಿದರು. ಹಾಗಾಗಿ ಹೈದರಾಬಾದ್ (ಪೂರ್ವ) ಸೊಲ್ಲಾಪುರಗಳಿಗೆ ರಸ್ತೆಗಳನ್ನು ನಿರ್ಮಿಸಿದರು. ೧೯೦೦ರಲ್ಲಿ ಕಲ್ಲಿನಿಂದ ರಸ್ತೆಗಳ ನಿರ್ಮಾಣ ಮಾಡಿದರು. ೧೯೪೫ರಿಂದ ವಿಶೇಷವಾಗಿ ವಾಹನಗಳು ಬಳಕೆಗೆ ಬಂದವು. ೧೯೪೫ರ ದಶಕದಲ್ಲಿ ಬಸ್ಸುಗಳು-೮೬, ಪಬ್ಲಿಕ್ ಕೇರಿಯರುಗಳು-೧೬, ಪ್ರೈವೇಟ್ ಕೇರಿಯರುಗಳು-೨೪ ಮತ್ತು ಟ್ಯಾಕ್ಸಿಗಳು-೬ ಜಿಲ್ಲೆಯಲ್ಲಿದ್ದವು.

ರೈಲ್ವೆ ಸಾರಿಗೆ : ಸರಕು ಸಾಗಾಣಿಕೆ, ಪ್ರಯಾಣಕ್ಕೆ ರೈಲ್ವೆ ಮಾರ್ಗವನ್ನು ಸ್ಥಾಪಿಸಿದರು. ಇಲ್ಲಿನ ರೈಲ್ವೆ ಮಾರ್ಗಕ್ಕಾಗಿ ಹಗೆಯುತ್ತಿದ್ದಾಗ, ಹೇರಳವಾಗಿ ಕಬ್ಬಿಣದ ಆದಿರು ಇತ್ಯಾದಿ ಕಚ್ಚಾವಸ್ತುಗಳು ಕಂಡುಬಂದವು. ಇದರಿಂದ ಗಣಿಗಾರಿಕೆ ಬೆಳೆಯಲು ಕಾರಣವಾಯಿತು. ರೈಲ್ವೆ ಮಾರ್ಗ ಈ ದೇಶಕ್ಕಿಂತ ಹೆಚ್ಚಾಗಿ ಇಂಗ್ಲೆಂಡಿಗೆ ಉಪಯೋಗವಾಯಿತು. ಭಾರತದಲ್ಲಿ ಸುತ್ತಲೂ (ಸಮುದ್ರ ತೀರಗಳಲ್ಲಿ) ಇಂಗ್ಲೀಷರಿದ್ದುದರಿಂದ, ರೈಲ್ವೆಯಿಂದ ಹಡಗು  ಸಾರಿಗೆಗೆ ಅನುಕೂಲವಾಯಿತು. ೧೮೮೫ ರಿಂದ ರೈಲ್ವೆ ಮಾರ್ಗ ಪ್ರಾರಂಭವಾಯಿತು. ೨೩.೩.೧೮೮೪ರಲ್ಲಿ ಬಳ್ಳಾರಿಯಿಂದ ಹೊಸಪೇಟೆ ೬೫ ಕಿ.ಮೀ. ಹೊಸಪೇಟೆಯಿಂದ ಧಾರವಾಡಕ್ಕೆ ೧.೭.೧೮೮೫ರಲ್ಲಿ ಬಳ್ಳಾರಿಯಿಂದ ಗುಂತಕಲ್‌ಗೆ ೪೮ ಕಿ.ಮೀ. ದಿನಾಂಕ ೧.೪.೧೯೦೫ ಹೊಸಪೇಟೆಯಿಂದ ಕೊಟ್ಟೂರು ಮತ್ತು ೧.೭.೧೯೦೫ರಲ್ಲಿ ಬಳ್ಳಾರಿಯಿಂದ ರಾಯದುರ್ಗಕ್ಕೆ ೫೪ ಕಿ.ಮೀ ಮಾರ್ಗ ನಿರ್ಮಿಸಲಾಯಿತು.

ಜಿಲ್ಲೆಯಲ್ಲಿ ೨೦೯ ಕಿ.ಮೀ ರೈಲ್ವೆ ಮಾರ್ಗ ೧೯೪೫ರ ಮುನ್ನ ಇತ್ತು. ಆನಂತರ ವಿಸ್ತರಣೆ ಹೊಂದಿತು. ಮೊದಲಿದ್ದ ಮಾರ್ಗವನ್ನು ಕೊಟ್ಟೂರು-ಹರಿಹರ-ಗದಗ-ಹುಬ್ಬಳ್ಳಿ ಮತ್ತು ಲೋಂಡಾವರೆಗೆ ವಿಸ್ತರಿಸಿದರು.

ಅಂಚೆ, ತಂತಿ ಮತ್ತು ಟೆಲಿಪೋನ್ : ಅಂಚೆ ಹಾಗೂ ತಂತಿ ವ್ಯವಸ್ಥೆ ಕುರಿತ ಸಂಕ್ಷಿಪ್ತ ವಿವರ ಹೀಗಿದೆ. ೧೮ನೇ ಶತಮಾನದಲ್ಲಿ ಸ್ಥಳೀಯ ಅಂಚೆ ವ್ಯವಸ್ಥೆಯನ್ನು ಮೈಸೂರು ರಾಜ್ಯದಲ್ಲಿ ಚಿಕ್ಕದೇವರಾಜ ಒಡೆಯರು ಜನಪ್ರಿಯಗೊಳಿಸಿದ್ದರು. ಅಂಚೆಯು ಹಂಸ ಎಂಬುದರ ಮೂಲರೂಪದ ಪದ. ಪುರಾಣ ಪ್ರಸಿದ್ಧ ನಳದಮಯಂತಿ ಸಂಬಂಧದಲ್ಲಿ ಹಂಸ ದೂತನ ಕಾರ್ಯ ಮಾಡುತ್ತದೆ. ಅಂಚೆ ಸೇವೆಯು ಬೇಹುಗಾರಿಕೆ ಇಲಾಖೆಯ ಒಂದು ಭಾಗವಾಗಿದ್ದು, ಅಂಚೆ ಭಕ್ಷಿಯ ಮುಖ್ಯಸ್ಥನ ಅಧೀನದಲ್ಲಿತ್ತು. ಚಕ್ರಾಧಿಪತ್ಯದ ಅಂಚೆ ಕಚೇರಿಗಳು  (ಇಂಪೀರಿ ಯಲ್ ಪೋಸ್ಟ್ ಆಫೀಸ್‌ಗಳು) ಶ್ರೀರಂಗಪಟ್ಟಣ, ಹುಣಸೂರು ಮತ್ತು ತುಮಕೂರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಬ್ರಿಟಿಷರ ಕಾಲದ ಎರಡು ಪ್ರಧಾನ ಅಂಚೆ ವ್ಯವಸ್ಥೆಗಳಿದ್ದವು. ಒಂದು, ಬೆಂಗಳೂರಿನಿಂದ ಮುಂಬಯಿ ಮಾರ್ಗದ ವ್ಯವಸ್ಥೆ, ಚಿತ್ರದುರ್ಗ ಮತ್ತು ಹರಿಹರದ ಮೂಲಕ ಇತ್ತು. ಇನ್ನೊಂದು ಬೆಂಗಳೂರಿನಿಂದ ಮೈಸೂರು ಮೂಲಕ ಮಂಗಳೂರಿಗೆ ಸಾಗುತ್ತಿತ್ತು. ಬೆಂಗಳೂರು, ಮೈಸೂರು, ಹರಿಹರ, ಪಾಂಡವಪುರಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಂಚೆ ಕಚೇರಿಗಳಿದ್ದವು. ಬ್ರಿಟಿಷರು ಬೆಂಗಳೂರಿನ ದಂಡು ಪ್ರದೇಶದಲ್ಲಿ, ಮಂಗಳೂರಿನಲ್ಲಿ ೧೯ನೇ ಶತಮಾನದಲ್ಲಿ ಅಂಚೆ ಕಚೇರಿ ತೆರೆದರು. ಮುಂಬಾಯಿ ಕರ್ನಾಟಕ ದಲ್ಲಿ ೧೯ನೇ ಶತಮಾನದಲ್ಲಿ ತೆರೆಯಲಾಯಿತು. ಕ್ರಿ.ಶ. ೧೮೨೦ರಲ್ಲಿ ಧಾರವಾಡ, ೧೮೩೩ ರಲ್ಲಿ ಹುಬ್ಬಳ್ಳಿಯಲ್ಲಿ ಅಂಚೆ ಕಚೇರಿ ಕೆಲಸ ಆರಂಭಿಸಿದವು. ೧೮೫೩ರಲ್ಲಿ ತಂತಿ ಸಂಪರ್ಕ ಆರಂಭವಾಯಿತು. ೧೮೫೬ರ ಹೊತ್ತಿಗೆ ಮೈಸೂರು ರಾಜಮನೆತನದಲ್ಲಿ ೫೩೭ ತಂತಿ ಸಂಪರ್ಕಗಳಿದ್ದವು. ೧೮೭೦-೭೧ರಲ್ಲಿ ಮೈಸೂರು -ಬೆಂಗಳೂರಿನಲ್ಲಿ ೭ ತಂತಿ ಕಚೇರಿಗಳಿದ್ದವು. ಬೆಂಗಳೂರು ದಂಡು, ಬಳ್ಳಾರಿ, ಬೆಳಗಾವಿ, ಧಾರವಾಡಗಳಲ್ಲಿ ಇದೇ ಕಾಲಕ್ಕೆ ತಂತಿ ಸಂಪರ್ಕ ಜಿಲ್ಲಾ ಕಚೇರಿಗಳಾಯಿತು. ೧೮೮೬-೮೭ರಲ್ಲಿ ರಾಜ್ಯದಲ್ಲಿ ೨೩೧ ಅಂಚೆ ಕಚೇರಿಗಳಿದ್ದವು.

ಅಂಚೆಯನ್ನು ಆರಂಭದಲ್ಲಿ ಓಲೆಕಾರರು (ರನ್ನರ್ಸ್‌) ಆಯಾ ಸ್ಥಳಗಳಿಗೆ ಮುಟ್ಟಿಸುತ್ತಿ ದ್ದರು. ಮದರಾಸಿನಿಂದ ಬೆಂಗಳೂರಿಗೆ ಅಂಚೆಗಾಡಿಯ ಸೇವಾ ಮಾರ್ಗವಿತ್ತು. ೧೮೬೪ರಲ್ಲಿ ಬೆಂಗಳೂರು-ಮದ್ರಾಸ್ ರೈಲುಮಾರ್ಗ ಆಯಿತು. ಅಂಚೆ ರೈಲುಗಳ ಮೂಲಕ ಹೋಗುತ್ತಿತ್ತು. ೨೦ನೇ ಶತಮಾನದಲ್ಲಿ ಬಸ್ಸಿನ ಮೂಲಕ ಅಂಚೆ ರವಾನೆ ಆಗುತ್ತಿತ್ತು. ಕ್ರಿ.ಶ. ೧೯೦೦ರಲ್ಲಿ ಬೆಂಗಳೂರಿನಲ್ಲಿ ಪ್ರಧಾನ ಅಂಚೆ ಕಚೇರಿ ತೆರೆಯಲಾಯಿತು. ಅನೇಕ ಉಪಅಂಚೆ ಕಚೇರಿ ಗಳನ್ನು ತೆರೆಯಲಾಯಿತು. ಬಳ್ಳಾರಿಯಂತೆ ಮಂಗಳೂರಿನಲ್ಲಿ ೧೮೬೫ರಲ್ಲಿ ತಂತಿ ಸಂಪರ್ಕ ವಾಗಿತ್ತು.

ಹೈದರಾಬಾದ್ ಕರ್ನಾಟಕದಲ್ಲಿ ಅಂಚೆ ಸೇವೆಯನ್ನು ಸವಾರರ ಅಥವಾ ಆಜ್ಞಾವಾಹಕರ ಮೂಲಕ ಬಟವಾಡೆ ಮಾಡಲಾಗುತ್ತಿತ್ತು. ೧೮೬೯ರಲ್ಲಿ ಹೈದರಾಬಾದಿನಲ್ಲಿ ಮೊಟ್ಟಮೊದಲು ಅಂಚೆ ಚೀಟಿಯನ್ನು ಹೊರತಂದರು. ೧೯೦೭ರಲ್ಲಿ ಅಂಚೆ ವಿಮಾ ಯೋಜನೆಯನ್ನು ಜಾರಿಗೆ ತಂದರು. ೧೯೪೦ರಲ್ಲಿ ವಿನಿಮಯ ಕೇಂದ್ರ ಕಾರ್ಯರಂಭ ಮಾಡಿತು. ೫೦ ದೂರವಾಣಿ ಸಂಪರ್ಕಗಳಿದ್ದವು.

ಆಂಗ್ಲರ ಆಳ್ವಿಕೆಯಲ್ಲಿ ಬಳಕೆಗೆ ಬಂದ ಆಧುನಿಕ ವ್ಯವಸ್ಥೆಯೆಂದರೆ ಅಂಚೆ ಪದ್ಧತಿ. ಈ ಹಿಂದೆ ಅರಸರ, ರಾಜರುಗಳ ಆಳ್ವಿಕೆಯಲ್ಲಿ ಪ್ರತ್ಯೇಕ ಒಲೆಕಾರನಿದ್ದನು. ಇಲ್ಲಿ ಸಾರ್ವಜನಿಕರಿ ಗಾಗಿ ಪ್ರತ್ಯೇಕ ಅಂಚೆ ವ್ಯವಸ್ಥೆಯನ್ನು ಮಾಡಲಾಯಿತು. ಹಿಂದೆ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಪತ್ರದ ವಿಲೇವಾರಿ ಕಾರ್ಯ ನಡೆಯುತ್ತಿತ್ತು. ತರುವಾಯ ೧೮೬೨ರಲ್ಲಿ ಅಂಚೆ ಕಚೇರಿಗಳು ಪ್ರಾರಂಭವಾದವು. ಈ ಮೊದಲು ಜಿಲ್ಲೆಯಲ್ಲಿ ಅಂಚೆ ಕಚೇರಿಗಳು ಬೆರಳಣಿಕೆಯಷ್ಟಿದ್ದವು. ೧೯೦೦ರ ದಶಕದಲ್ಲಿ ಹೋಬಳಿ ಮಟ್ಟದಲ್ಲಿ ಅಂಚೆ ಕಚೇರಿ ಸ್ಥಾಪಿಸಿ ಇದರ ವ್ಯಾಪ್ತಿಯನ್ನು ಹೆಚ್ಚಿಸಿದರು. ಬ್ರಿಟಿಷರ ಕಾಲದಲ್ಲಿ ಸಮರ್ಥ ಆಡಳಿತ ವ್ಯವಸ್ಥೆ, ನ್ಯೂನತೆಗಳನ್ನು ಕ್ರಮೇಣ ಸರಿಪಡಿಸಿಕೊಳ್ಳುತ್ತಾ ಬಂದರು. ಇವುಗಳ ಜೊತೆಗೆ ರನ್ನರ ನೆಟ್ ಎಂಬ ವ್ಯವಸ್ಥೆಯೂ ಇತ್ತು.

[1] ನಂತರ ಕೇವಲ ಒಬ್ಬ ಅಂಚೆ ಅಧಿಕಾರಿ, ಒಬ್ಬ ರನ್ನರ್ ಮೂಲಕ ಅಂಚೆ ಪತ್ರ ವಿಲೇವಾರಿ ಮತ್ತು ಸಾಗಾಣಿಕೆ ನಡೆಯುವುದು ಈ ಭಾಗದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ.

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಂಚೆಯ ಚೀಲಕ್ಕೆ ಗೆಜ್ಜೆಯನ್ನು ಕಟ್ಟಿಕೊಂಡು ಶಬ್ದ ಮಾಡುತ್ತಾ ಸಾಗಿಸುತ್ತಿದ್ದನು.[2] ಆಕಸ್ಮಿಕವಾಗಿ ಕಾಡಿನಲ್ಲಿ ಹೋಗುವಾಗ ಕೈಯ ಲ್ಲೊಂದು (ಬಾಕು) ಕತ್ತಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುದುರೆ ಮೇಲೆ ಹೋಗುತ್ತಿದ್ದುದು ಸ್ಮರಿಸಬಹುದು. ಒಂಟೆ ಮೇಲೆ ಸಾಗಾಣಿಕೆ ಸಾಗಿಸುತ್ತಾರೆಂದು ಲಕ್ಷ್ಮೀ ನರಸಿಂಹಯ್ಯನವರು ತಿಳಿಸಿದ್ದಾರೆ.[3] ಬಳ್ಳಾರಿ ಜಿಲ್ಲೆ ಏನೂ ಮರಳುಗಾಡಲ್ಲ. ಒಂಟೆ ಮೇಲೆ ಅಂಚೆ ಸಾಗಿಸುತ್ತಿ ದ್ದುದು ಅಸಾಧ್ಯವೆನ್ನಬಹುದು. ಕುದುರೆ, ಕತ್ತೆಗಳನ್ನು ಇಲ್ಲಿ ಬಳಸಿಕೊಂಡಿರಬೇಕು. ಅಂದು ಬಳ್ಳಾರಿ ಜಿಲ್ಲೆಯಲ್ಲಿ ಮೂರು ಅಂಚೆ ವಿಭಾಗಗಳಿದ್ದವು. ಹರಪನಹಳ್ಳಿ, ಹೊಸಪೇಟೆ ಮತ್ತು ಬಳ್ಳಾರಿ.

ತೆರಿಗೆ ವ್ಯವಸ್ಥೆ : ಆಂಗ್ಲರ ಆರ್ಥಿಕಾವಸ್ಥೆಯಲ್ಲಿ ವಿವಿಧ ಮೂಲಗಳಿಂದ ತೆರಿಗೆ ಬಂದು ಖಜಾನೆ ತುಂಬುತ್ತಿತ್ತು. ಪ್ರತಿಯೊಂದು ವಸ್ತುಗಳ ಮೇಲೆ ಕರ ವಿಧಿಸಿ ಅದರ ಮೌಲ್ಯವನ್ನು ನಿರ್ಧರಿಸುತ್ತಿದ್ದರು. ಈ ಮುಂಚೆ ಇದ್ದ ತೆರಿಗೆಗೂ ಮತ್ತು ಆಂಗ್ಲರು ತಂದಂಥ ತೆರಿಗೆಗೂ ವ್ಯತ್ಯಾಸವಿತ್ತು. ಪ್ರಮುಖವಾಗಿ ತೆರಿಗೆಯನ್ನು ವಾಣಿಜ್ಯ ವಸ್ತುಗಳಿಂದ ಪಡೆಯುತ್ತಿದ್ದರು. ತೆರಿಗೆಯಲ್ಲಿ ಕೆಲವೊಮ್ಮೆ ವಿನಾಯಿತಿಗಳನ್ನು ನೀಡಿರುವುದುಂಟು. ಕಾರಣ ಕ್ಷಾಮ, ಬರಗಾಲ ಬಂದಾಗ ಅಲ್ಪಪ್ರಮಾಣದಲ್ಲಿ ಸಂಗ್ರಹಿಸುತ್ತಿದ್ದರು, ಸಾಧ್ಯವಾಗದಿದ್ದರೆ ಸುಗ್ಗಿಯ ಸಂದರ್ಭದಲ್ಲಿ ಫಲಾನುಭವಿಗಳು ನೀಡಬೇಕಿತ್ತು. ಒಂದು ವರದಿಯನ್ನು ಆಧರಿಸಿ ಈ ರೀತಿ ಹೇಳಲಾಗಿದೆ. ಆಫೀಮು ೮೬೨೦, ಸ್ಟ್ಯಾಂಪ್ಸ್ ೧,೧೦೪,೭೨೩, ಅಬಕಾರಿ ೩,೭೮,೨೨೯, ಕಂದಾಯದ ಮೊತ್ತ ಶೇಕಡ. ೮.೪ ಕಂದಾಯದಿಂದ ೩೫,೨೭೧, ಶೇಕಡ ೦.೯ ರಷ್ಟು, ಉಪ್ಪು, ಮಣ್ಣು ಪೆಟ್ಲುಪ್ಪುನ ಕರ ವಿಧಿಸುತ್ತಿದ್ದರು.[4] ಬಳ್ಳಾರಿ ಜಿಲ್ಲೆಯಲ್ಲಿ ಮದ್ಯಕ್ಕೆ ಅತೀ ಬೇಡಿಕೆ ಇದ್ದು, ಅಧಿಕ ತೆರಿಗೆ ಕಡ್ಡಾಯವಾಗಿತ್ತು. ಎಣ್ಣೆ ಮಿಲ್ಲಿನ ತೆರಿಗೆ, ಅಕ್ಕಸಾಲಿಗ ಕರ, ಪ್ರಾಣಿಗಳ, ಉಪ್ಪಿನ ತೆರಿಗೆ, ಆನೆಗಳ ಕಟ್ಟುವ ಜಾಗಕ್ಕೆ ತೆರಿಗೆ ನೀಡಬೇಕಾಗಿತ್ತು. ಬ್ರಿಟಿಷರ ಕಾಲಕ್ಕೆ ಬಳ್ಳಾರಿ ವಿಭಾಗದಲ್ಲಿ ಆನೆಗಳು ಅತಿ ವಿರಳವಾಗಿದ್ದವು, ಕುದುರೆ ಲಾಯಗಳಿಗೆ ಸಹ ತೆರಿಗೆ ಇತ್ತು. ೧೮೦೧ರಲ್ಲಿ ಮನ್ರೋ ವಸ್ತುಗಳ ಗಾತ್ರ, ತೂಕ ನೋಡಿ ತೆರಿಗೆ ದರವನ್ನು ನಿಗದಿ ಮಾಡುತ್ತಿದ್ದನು.

ಗ್ರಾಮಾಧಿಕಾರಿಗಳು, ರೈತರ ಹತ್ತಿರ ಸಂಗ್ರಹಿಸಿದ ತೆರಿಗೆಯನ್ನು ಗ್ರಾಮ ಸೇವಕರಿಂದ ಪಡೆಯುತ್ತಿದ್ದರು. ಕೆಲವೊಮ್ಮೆ ಅಸಾಮಾರ್ಥ್ಯದಿಂದ ಕೆಲವರು ಮನೆ ತೆರಿಗೆಯನ್ನು ಕೊಡುತ್ತಿರಲಿಲ್ಲ. ಅಂಥವರೆಂದರೆ, ರೈತರಲ್ಲಿ ಬಡವರು. ಇದು ಆಂಗ್ಲರ ಆರ್ಥಿಕ ನೀತಿಯ ದರ್ಪಿಷ್ಟ ನಿಲುವುಗಳನ್ನು ತೋರಿಸುತ್ತದೆ. ಅಂದಿನ ಸಮಾಜದಲ್ಲಿ ಹದಿನಾರು ವಿಭಿನ್ನ ತೆರಿಗೆಗಳಿಂದ ಆರ್ಥಿಕಾವ್ಯವಸ್ಥೆ ಪ್ರಗತಿಯಲ್ಲಿದ್ದಿತು. ಕಮ್ಮಾರ, ಅಕ್ಕಸಾಲಿಗ, ಬಡಗಿಗೆ ಹೆಚ್ಚಿನ ತೆರಿಗೆ ಇತ್ತು. ಕೃಷಿಕರು ಭೂಕಂದಾಯ ಕೊಡುವ ಹಾಗೆ, ವೃತ್ತಿ ಸಂಘಗಳು ಇದನ್ನು ಪಾಲಿಸಬೇಕಿತ್ತು. ಹೆಣ್ಣುಮಕ್ಕಳು ದಾರಿಪಕ್ಕದಲ್ಲಿ ಎಲೆ, ಅಡಿಕೆ, ತಂಬಾಕು ಮಾರಿದರೆ ತೆರಿಗೆ ಕಡ್ಡಾಯ ವಾಗಿತ್ತು.[5] ೩, ೮, ೫ ಆಣೆಯನ್ನು ಮತ್ತು ೩, ೮, ೫ ರೂಪಾಯಿಗಳನ್ನು ತೆರಿಗೆಗೆ ಕೊಡುತ್ತಿದ್ದರು. ಸ್ಥಳೀಯ ನಿಧಿಗಳು ಆಗಾಗ ತೆರಿಗೆಗಳನ್ನು ಸಂಗ್ರಹಿಸುತ್ತಿದ್ದವು.

ಅಂದು ಉನ್ನತ ವರ್ಗದವರ ಮನೆಗಳಿಗೆ ಪ್ರತ್ಯೇಕ ತೆರಿಗೆ ವಿಧಿಸಿದ್ದರು. ೪ ಆಣೆಗಳಿಂದ ೫ ಆಣೆಗಳವರೆಗೆ ಕೊಡಬೇಕಿತ್ತು. ಒಂದು ಊರಿನಿಂದ ಮತ್ತೊಂದು ಊರಿಗೆ ಎತ್ತು, ಗಾಡಿಗಳು ದಾಟಿ ಹೋಗಬೇಕಾದರೆ ತೆರಿಗೆ ಕೊಡಬೇಕಾಗಿತ್ತು. ಔತಣಕೂಟಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸಮಾರಂಭಗಳಿಗೆ ತೆರಿಗೆ ಕೊಡಬೇಕಾಗಿತ್ತು.[6] ಸರ್. ಥಾಮಸ್ ಮನ್ರೊ ಮೊಟ್ಟಮೊದಲ ಮನೆಕಂದಾಯವನ್ನು ವಿಧಿಸಿದ್ದು ಗಮನಾರ್ಹ.

ಲೋಕೋಪಯೋಗಿ ಕೆಲಸಗಳು

ಆಂಗ್ಲರು ತಮ್ಮ ಆಳ್ವಿಕೆಯಲ್ಲಿ ರಕ್ಷಣೆ, ಸುಧಾರಣೆ, ಪರಿಹಾರ, ಬೆಳವಣಿಗೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಶ್ರಮಿಸಿದ್ದು ಕಂಡುಬರುತ್ತದೆ. ಅವುಗಳಲ್ಲಿ ಪ್ರಮುಖವಾದವನ್ನು ಇಲ್ಲಿ ಚರ್ಚಿಸಲಾಗಿದೆ.

ರಕ್ಷಣೆ : ೧೮೮೪ ಮತ್ತು ೧೮೮೫ರಲ್ಲಿ ರಾಬರ್ಟ್ ಸಿವೆಲ್, ಸಿ.ಎ. ಗಾಲ್ಟನ್ ಅವರು ಹಂಪಿಯ ವಿರೂಪಾಕ್ಷಸ್ವಾಮಿ ದೊಡ್ಡಗೋಪುರ ಬಿರುಕು ಬಿಟ್ಟಿದ್ದರಿಂದ ಲಂಡನ್ನಿನಿಂದ ಕಬ್ಬಿಣದ ಸ್ಥಂಬಗಳನ್ನು ತಂದು ಗೋಪುರದ ಭಾರವನ್ನು ತಡೆಗಟ್ಟಲು (ಪಿಲ್ಲರ್ಸ್‌), ಗೋಪುರ ಕುಸಿದು ಬೀಳದಂತೆ ರಕ್ಷಿಸಿ ಅವುಗಳನ್ನು ಇಡಲಾಯಿತು. ಈ ಸ್ತಂಭಗಳನ್ನು ಮತ್ತು ತೊಲೆಗಳನ್ನು ಇಂಗ್ಲೆಂಡಿನಿಂದ ಬಾಂಬೆ ಮೂಲಕ ತಂದು ರಕ್ಷಿಸಲಾಯಿತು. ಇದರಂತೆ ಉಳಿದ ವಿಜಯನಗರ ಕಾಲದ ಕೆಲವು ಸ್ಮಾರಕಗಳಿಗೆ ಒತ್ತು ಗೋಡೆಗಳನ್ನು ನಿರ್ಮಿಸ ಲಾಯಿತು.

ಈ ಒಂದು ಉದಾಹರಣೆಯಂತೆ ಜಿಲ್ಲೆಯಲ್ಲಿ ಸುಮಾರು ಕೆಲಸಗಳನ್ನು ಕಲೆಕ್ಟರುಗಳು ಮಾಡಿರುವುದನ್ನು ಗಮನಿಸಬಹುದು.

ಸುಧಾರಣೆ : ಈ ಭಾಗದಲ್ಲಿ ೧೭೯೨-೯೩, ೧೮೦೩, ೧೮೩೩, ೧೮೫೨-೫೫, ೧೮೭೬-೭೭ರಲ್ಲಿ ಕ್ಷಾಮ ಬಂದಾಗ, ಅಧಿಕಾರಿಗಳು ಕಾಮಗಾರಿಗಳನ್ನು ಕೈಗೊಂಡಿದ್ದರು.

ಪರಿಹಾರ : ಬಳ್ಳಾರಿ ಜಿಲ್ಲೆ ಒಣ ಪ್ರದೇಶ, ವರ್ಷದಲ್ಲಿ ಅತೀ ಬೇಸಿಗೆಯಿಂದ ಕೂಡಿದ್ದು ಮಳೆ ಅತೀ ಕಡಿಮೆ ಆಗುತ್ತಿತ್ತು. ಹಾಗಾಗಿ ನೀರಾವರಿ ಸೌಲಭ್ಯಗಳ ಕೊರತೆಯಿಂದ ಆಗಾಗ ಬರಗಾಲ, ಕ್ಷಾಮ, ರೋಗಗಳಾದ ಪ್ಲೇಗು, ಸಿಡುಬು ಅವತರಿಸುತ್ತಿದ್ದವು. ಆಗ ಜನರಿಗೆ ಲೋಕೋಪಯೋಗಿ ಕೆಲಸಗಳನ್ನು ದುರಸ್ತಿಗೊಳಿಸಿ, ಪರಿಹಾರ ನೀಡುತ್ತಿದ್ದರು.

ಬರಗಾಲವನ್ನು ಅಂಕಿ-ಅಂಶಗಳ ಮೂಲಕ ನೋಡುವುದಾದರೆ ೧೮೦೨-೦೪, ೧೮೦೫-೦೭, ೧೮೨೪, ೧೮೩೩, ೧೮೪೯, ೧೮೬೪, ೧೮೬೬, ೧೮೭೬, ೧೮೭೮, ೧೯೦೬-೦೭, ೧೯೨೧-೨೨, ೧೯೨೪-೨೭, ೧೯೩೧-೩೨, ೧೯೩೭-೩೮, ೧೯೪೧ ಮತ್ತು ೧೯೪೨ರಲ್ಲಿ ಬರಗಾಲದಿಂದ ಜಿಲ್ಲೆ ಕಂಗೆಟ್ಟಿದ್ದು ತಿಳಿಯುತ್ತದೆ. ಈ ಭೀಕರ ಬರಗಾಲದ ಜೊತೆಗೆ ೧೯೮೮, ೧೯೦೧ ಅಕ್ಟೋಬರ್ ೧೯೧೬, ೧೯೨೧, ೧೯೨೨, ೧೯೨೬ ಮತ್ತು ೧೯೪೭-೪೮ರಲ್ಲುಂಟಾದ ಪ್ಲೇಗು ಅನೇಕ ಸಾವುಗಳಿಗೆ ಕಾರಣವಾಯಿತು. ೧೯೧೪ರವರಗೆ ಸುಮಾರು ೨೪ ಸಲ ಸಿಡುಬು ರೋಗಗಳಿಂದ ತತ್ತರಿಸಿದ ಜನತೆ ಆಹಾರ, ಉಡುಗೆ, ತೊಡುಗೆಗಳಿಲ್ಲದೆ ನಿರ್ವಸತಿಗಳಾಗಿದ್ದರು. ಪ್ರವಾಹ ಸುಮಾರು ಸಾರಿ ಆಗಿದ್ದು, ಅದರಿಂದುಂಟಾದ ಹಾನಿಯನ್ನು ಸರ್ಕಾರ ಖಜಾನೆಯಿಂದ ತುಂಬಿ ಕೊಡುತ್ತಿತ್ತು.

ರಸ್ತೆ-ಕೆರೆ,  ಕಟ್ಟೆಗಳ ದುರಸ್ತಿ ನಿರ್ಮಾಣ ಇತರೆ ಲೋಕೋಪಯೋಗಿ ಕೆಲಸಗಳ ಮೂಲಕ ಜನತೆಗೆ ಪರಿಹಾರವನ್ನು ಪರೋಕ್ಷ, ಪ್ರತ್ಯಕ್ಷವಾಗಿ ನೀಡುತ್ತಿದ್ದರು. ಈ ಸಂದರ್ಭ ದಲ್ಲಿ ಕೆರೆಗಳನ್ನು ಕಟ್ಟಿಸಿ, ಕೋಡಿಗಳಿಗೆ ನೀರಗಂಟಿಗಳನ್ನು ನೇಮಿಸುತ್ತಿದ್ದರು. ಸಾರ್ವಜನಿಕ ಕಟ್ಟಡಗಳ ನಿರ್ಮಾಣ, ದೇವಾಲಯಗಳ ಜೀರ್ಣೋದ್ಧಾರ, ಸರ್ಕಾರಿ ಆಡಳಿತ ಕಟ್ಟಡಗಳ ನಿರ್ಮಾಣ, ಬಂಗಲೆಗಳು, ಉದ್ಯಾನವನಗಳು, ರಸ್ತೆ, ರೈಲ್ವೇ ಮಾರ್ಗ, ಛತ್ರಗಳನ್ನು ನಿರ್ಮಿಸು ವುದರ ಮೂಲಕ ಜನಸಾಮಾನ್ಯರಿಗೆ ಪರಿಹಾರದ ಮೂಲಕ ಅವರನ್ನು ಶೋಷಿಸುತ್ತಾರೆನ್ನ ಬಹುದು. ಆಗಿನಿಂದ ಬಳ್ಳಾರಿ ಜಿಲ್ಲೆಯಲ್ಲಿ ಅಭಾವ ಪರಿಸ್ಥಿತಿ ಸುಮಾರು ೧೨ ಬಾರಿ ಪರಿವರ್ತಿಸುತ್ತದೆ. ಆಗ ಅಧಿಕಾರಿಗಳು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡರು. ಬಳ್ಳಾರಿಗೆ ಬ್ರಿಟಿಷರ ಆಗಮನದಿಂದ ಆರ್ಥಿಕ ಕ್ಷೇತ್ರಗಳಲ್ಲಾದ ಪರಿವರ್ತನೆಗಳಂತೆ ಇತರೆ ಕ್ಷೇತ್ರಗಳಲ್ಲಿ ಯುಗ ಪರಿವರ್ತನೆ ಕೆಲಸಗಳಾದವು. ಆಂಗ್ಲರ ಆಡಳಿತದಲ್ಲಿದ್ದ ಮತ್ತು ೩೦ ವರ್ಷಗಳಿಂದ ಕೆಲಸ ನಿರ್ವಹಿಸಿದ ಪ್ರಾಮಾಣಿಕ ವ್ಯಕ್ತಿಗಳಿಗೆ ಕಲೆಕ್ಟರ್‌ಗಳು ಇನಾಮುಗಳನ್ನು ಕೊಡುತ್ತಿದ್ದರು. ಇನಾಮುಗಳನ್ನು ಬಹುಪಾಲು ಗ್ರಾಮಸಿಬ್ಬಂದಿ ಪಡೆಯುತ್ತಿದ್ದರು. ಬ್ರಿಟಿಷರು ತಮ್ಮ ಅಧೀನದ ಗ್ರಾಮಾಧಿಕಾರಿಗಳನ್ನು ಸರ್ಕಾರದ ವಿಧೇಯಕದ ಕಕ್ಷೆಯಲ್ಲಿ ಅಳವಡಿಸಿಕೊಂಡರು. ೧೮೦೪, ೧೮೧೭, ೧೮೫೧ರಲ್ಲಾದ ಮಹಾಪೂರದಿಂದ ನೊಂದವರಿಗೆ ಪರಿಹಾ ಕಾರ್ಯಗಳನ್ನು ಕೈಗೊಂಡರು. ಭೂಕಂಪನವೂ ಸಹ ಉದ್ಭವಿಸಿತು. ೧೮೪೩ ಏಪ್ರೀಲ್ ೧ ರಂದು ಮುಂಜಾನೆ ೪.೪೫ರಲ್ಲಿ ಸೊಲ್ಲಾಪುರ, ಕರ್ನೂಲು, ಹರಿಹರ ನಡುವೆ ತೀವ್ರ ಸೂಕ್ಷ್ಮವಾಗಿ ಭೂಕಂಪ ಸಂಭವಿಸಿತು (ಇದೇ ಪ್ರದೇಶದಲ್ಲಿ ೧೯೯೨ರಲ್ಲಿ ಭೂಕಂಪವಾಗಿ ಲಾಟೂರು-ಕಿಲಾರಿಗಳಲ್ಲಿ ಅಪಾರ ನಷ್ಟವಾಯಿತು).

ಸಹಕಾರ : ಕಲೆಕ್ಟರ್‌ಗಳು ಅತೀ ಬಡತನ, ಭೂ ಒಡೆಯನಿಗೆ ಸಾಲವನ್ನು ಕೊಡುತ್ತಿದ್ದರು, ಇತ್ತೀಚಿಗೆ ರಾಯಲಸೀಮಾ ಬ್ಯಾಂಕಿನಿಂದ ಸಹ ಆಂಗ್ಲರು ಕೊಡಿಸಿದ್ದು ಗಮನಾರ್ಹ. ಬೆಳವಣಿಗೆಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡರು. ಅವುಗಳೆಂದರೆ, ಆಡಳಿತ, ಕಟ್ಟಡಗಳ ನಿರ್ಮಾಣ, ಕೆರೆಗಳಿಗೆ ಕೋಡಿಗಳನ್ನು ನಿರ್ಮಿಸುವಾಗ ವಿಶೇಷವಾಗಿ ಬೆಳವಣಿಗೆಗೆ ಮಹತ್ವ ಕೊಟ್ಟರು.

ಸಣ್ಣ ನೀರಾವರಿಗೆ ಸಂಬಂಧಿಸಿದಂತೆ ಸಾಮಾನ್ಯ ಕೆಲಸಗಳನ್ನು ಕೃಷಿ, ಕಾರ್ಮಿಕರ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಕೈಗೊಂಡಿದ್ದರು. ಸಾರ್ವಜನಿಕ ಕೆಲಸಗಳನ್ನು ಅಮಿಲ್ದಾರರು ಮಾಡಿಸುತ್ತಿದ್ದರು. ಜನರು ಕೆರೆ-ಕಟ್ಟೆಗಳ ಬಗ್ಗೆ ತಿರಸ್ಕಾರ ಮಾಡಿದರು. ಅವುಗಳನ್ನು ರಿಪೇರಿ ಮಾಡಿಸಿದ್ದು ಇವರ ಸಾಧನೆಗೆ ಸಾಕ್ಷಿ. ಕೃಷಿ ಮತ್ತು ನೀರಾವರಿಗೆ ಒತ್ತುಕೊಟ್ಟಿದ್ದ ಬ್ರಿಟಿಷರು, ಯುರೋಪಿನ ಅಧಿಕಾರಿ ಎಲ್ಲಿಯೇ ವಾಸ ಮಾಡಲಿ ಆ ಪರಿಸರದಲ್ಲಿ ಹೊಸ ವಸಾಹತು ನಿರ್ಮಾಣವಾಗುತ್ತಿತ್ತು. ೧೬.೭.೧೮೦೧ರಲ್ಲಿ ಕಲೆಕ್ಟರ್ ದತ್ತಿ ಜಿಲ್ಲೆಗಳಿಗೆ ರಸ್ತೆ ಮಾಡಿಸಿ ಅದನ್ನು ವಿಸ್ತರಿಸಿದ್ದರು.

ಶೈಕ್ಷಣಿಕ ಕ್ಷೇತ್ರ

ಕಲೆಕ್ಟರುಗಳ ಆಡಳಿತದಲ್ಲಿ ಶಿಕ್ಷಣ ಬೆಳೆದು ಬಂದ ರೀತಿ, ಬದಲಾವಣೆಗಳನ್ನು ಈ ಅಧ್ಯಾಯದಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ.

ದತ್ತಮಂಡಲಕ್ಕೆ ಸೇರ್ಪಡೆಗೊಂಡಾಗ ಈ ಜಿಲ್ಲೆಯಲ್ಲಿ ಅಕ್ಷರತೆಯ ಪ್ರಮಾಣ ಬೆರಳೆಣಿಕೆ ಯಷ್ಟಿತ್ತು. ಇದಕ್ಕೆ ಮೊದಲು ಇಲ್ಲಿನ ಶೈಕ್ಷಣಿಕ ಕ್ಷೇತ್ರ ವ್ಯಾಪಕವಾಗಿ ಬೆಳೆದಿರಲಿಲ್ಲ. ಹಾಗಾಗಿ ಇಲ್ಲಿ ಸೃಷ್ಟಿಸಿಕೊಂಡಿದ್ದ ವರ್ಣವ್ಯವಸ್ಥೆಗೆ ಪುರೋಹಿತಶಾಹಿಯೇ ಕಾರಣವೆನ್ನ ಬಹುದು. ಶ್ರೀಮಂತರ ಮಕ್ಕಳೇ ಶಾಸ್ತ್ರ, ವಿದ್ಯಾಭ್ಯಾಸ (ಶ್ರೇಷ್ಠ ಜಾತಿ) ಕಲಿಯಬೇಕೆಂಬ ನಿಯಮಗಳನ್ನು ಅಳವಡಿಸಿಕೊಂಡಿದ್ದರು. ಭಾರತದಲ್ಲಿ ಬೌದ್ಧ, ಜೈನ, ಮಹಮ್ಮದೀಯರ ಶಿಕ್ಷಣ ಕ್ರಮದಂತೆ ಬಳ್ಳಾರಿ ಪ್ರದೇಶದಲ್ಲಿಯೂ ಸಹ ಆಂಗ್ಲ ಮಾದರಿ ಶಿಕ್ಷಣ ಬೆಳೆಯಿತು. ಸಾಮಾನ್ಯ ಜನರು ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೆ ಕೆಲವು ಸಂದರ್ಭದಲ್ಲಿ ಅನರ್ಹರಾಗಿ ದ್ದರು. ಅವರೆಂದರೆ ಕೆಳವರ್ಗದವರು, ತಮ್ಮ ಪರಂಪರೆಯಿಂದ ಬಂದ ವೃತ್ತಿಗಳಲ್ಲಿ ತೊಡಗಿ, ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಿದರು.

ಈ ಭಾಗದಲ್ಲಿ ಆಂಗ್ಲರು ವಿದ್ಯಾಭ್ಯಾಸ ಪದ್ಧತಿಯನ್ನು ತಮ್ಮ ದೇಶೀಯ ಮಾದರಿಯಲ್ಲಿ ಕೊಟ್ಟರು. ಆ ಸಂದರ್ಭದಲ್ಲಿ ಸ್ವತಂತ್ರ ಜೀವನ ಹಾಗೂ ನಮ್ಮ ಸಂಸ್ಕೃತಿ ಸಾಹಿತ್ಯಗಳ ಅಭಿವೃದ್ದಿಗೆ ಮತ್ತು ಸರ್ವತೋಮುಖ ಬೆಳವಣಿಗೆಗೆ ಅವಕಾಶವಾಗಲಿಲ್ಲ. “ಆಂಗ್ಲರ ಆಳ್ವಿಕೆಯಲ್ಲಿ ನಮ್ಮ ಧೈರ್ಯ, ಸಾಹಸ, ಆಲೋಚನಾ ಶಕ್ತಿ, ಅಭಿಮಾನ, ಶಿಕ್ಷಣದಲ್ಲಿ ಹೆಮ್ಮೆ ಎಲ್ಲಾವು ನಾಶವಾಗಿ ನಾವು ಕುರುಡರಾದೆವು ಎಂದು ಗುರುಮೂರ್ತಯ್ಯ ಅಭಿಪ್ರಾಯಿಸಿ ದ್ದಾರೆ.[7]

ಸರ್ಕಾರಿ ಪ್ರಾಥಮಿಕ ಶಾಲೆಗಳು ಆಂಗ್ಲರ ಆಳ್ವಿಕೆ ಮುನ್ನ ಇರಲಿಲ್ಲ. ವಿದ್ಯಾಕೇಂದ್ರ, ಓಚಯ್ಯಗಳ ಕೂಲಿ ಮಠಗಳಿದ್ದವು. ಅವರು ಬಂದಾಗ ನಾಲ್ಕಾರು ಹಳ್ಳಿಗೊಂದು ಶಾಲೆಯನ್ನು ತೆರೆದು ಬೋಧಿಸುವಂತೆ ಆಜ್ಞೆ ಹೊರಡಿಸಿದರು. ೧೯ನೇ ಶತಮಾನದ ಮಧ್ಯಭಾಗದಲ್ಲಿ ವಿಪುಲ ಪ್ರಗತಿ ಕಂಡುಬಂದಿತಲ್ಲದೆ, ಹೊಸ ಸಂಸ್ಥೆ, ಶಾಲಾ ಕಾಲೇಜುಗಳು ಜನ್ಮತಾಳಿದವು. ಅದಕ್ಕೆ ಆಂಗ್ಲ ಕಲೆಕ್ಟರ್‌ಗಳೇ ಕಾರಣ. ಈ ಹಿಂದೆ ಜಿಲ್ಲೆಯಲ್ಲಿ ಹೈದರ್-ಟಿಪ್ಪುವಿನ ಯುದ್ಧ ಸುಲಿಗೆಗಳಿಂದ ಪರಿಸ್ಥಿತಿ ಹದಗೆಟ್ಟಿತಲ್ಲದೆ ಅಂದು ಪ್ರಾದೇಶಿಕವಾಗಿ ಸಾರ್ವತ್ರಿಕ ಶಿಕ್ಷಣದ ಕೊರತೆ ಇತ್ತು. ಆಗ ಶ್ಯಾನುಭೋಗರ ಅಯ್ಯಗಳ ಮಠಗಳಿದ್ದು, ಜಮೀನ್ದಾರರ ಮಕ್ಕಳಿಗೆ ಗುಮಾಸ್ತರು ಪಾಠ ಹೇಳುತ್ತಿದ್ದ ಶಾಲೆಗಳು ಸಹ ಇದ್ದವು. ಖಾಸಗಿಯಾಗಿ ನಡೆಸುತ್ತಿದ್ದ ಶಾಲೆಗಳು ಧರ್ಮಬುದ್ದಿಯ ಪಂಡಿತರು, ಬ್ರಾಹ್ಮಣರು, ಪುರೋಹಿತ ಜಂಗಮರು, ಜೈನರು ಮಂದಿರಗಳಲ್ಲಿ, ಮುಸ್ಲಿಮರು ಮಸೀದಿ ಮತ್ತು ಮಕ್ತಾಬ್ಸ್‌ಗಳಲ್ಲಿ (ಮದರಸ) ಶಿಕ್ಷಣ ಕೊಡುತ್ತಿದ್ದರು. ಇಂತಹ ಶಾಲೆಗಳನ್ನು ‘ಪಿಯಲ್ ಶಾಲೆ’ ಎಂದು ಕರೆಯುತ್ತಿದ್ದರು.[8] ಈ ಮೇಲಿನ ವ್ಯವಸ್ಥೆ ಆಂಗ್ಲರ ಪ್ರಭಾವದಿಂದ ಅವಸಾನ ಹೊಂದಿ, ಆಧುನಿಕ ಶಿಕ್ಷಣವನ್ನು ಅವಲಂಬಿಸಿತು.

ಬ್ರಿಟಿಷರು ತಂದ ಪಠ್ಯಕ್ರಮ ಪ್ರಾರಂಭ ಹಂತದಲ್ಲಿ ಗೊಂದಲವನ್ನುಂಟುಮಾಡಿತ್ತು. ಏಕೆಂದರೆ, ಮೊದಲು ಮರಳಿನಲ್ಲಿ ಬರೆಯುವುದು, ತಾಳೆಗರಿಯ ಬಳಕೆ, ಪುರಾಣ ಕಂಠಪಾಠ ಕೂಡುವ, ಗುಣಿಸುವ ಶಿಕ್ಷಣ ನಡೆಯುತ್ತಿತ್ತು. ನಂತರ ವೇದ, ಉಪನಿಷತ್ತು, ತರ್ಕ, ತತ್ವಜ್ಞಾನ, ಜ್ಯೋತಿಷ್ಯ, ವ್ಯಾಕರಣ ಮತ್ತು ಪುರಾಣವನ್ನು ಸಂಸ್ಕೃತದಲ್ಲಿ ಬೋಧಿಸುತ್ತಿದ್ದದು ಬದಲಾಯಿತು. ಇಂಗ್ಲಿಷ್ ಮಾದರಿಯ ಪಠ್ಯಕ್ರಮ ಜಾರಿಗೆ ಬಂದಾಗ ಕ್ಯಾಥೋಲಿಕ್ ಪಾದ್ರಿಗಳು ಓದು, ಬರಹ ಕಲಿಸಲು ಶಾಲೆಗಳನ್ನು ಪ್ರಾರಂಭಿಸಿದರು.[9] ಆಗ ಅವರ ಧರ್ಮಗ್ರಂಥ ಬೈಬಲ್ ಇತ್ಯಾದಿ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡರು.

ಶೈಕ್ಷಣಿಕ ಕ್ಷೇತ್ರದಲ್ಲಾದ ಮಹತ್ತರ ಬದಲಾವಣೆಯೆಂದರೆ, ‘ವಿದ್ಯಾಭ್ಯಾಸಕ್ರಮ’ ಸ್ತ್ರೀ, ಪುರುಷರಿಗೆ ಸಮಾನ ಶಿಕ್ಷಣವಿರಲಿಲ್ಲ. ಬಾಲಕಿಯರಿಗೆ ಪ್ರತ್ಯೇಕ ಪ್ರಾಥಮಿಕ ಶಾಲೆಗಳನ್ನು ತೆರೆದು, ವಿದೇಶಿಯ ಸ್ಥಳೀಯ ಮಹಿಳೆಯರನ್ನು ಬೋಧಿಸಲು ನೇಮಿಸುತ್ತಿದ್ದರು. ಇವರು ಚರ್ಚ್ ಇಲ್ಲವೆ ಧರ್ಮ ಸಂಸ್ಥೆಯಲ್ಲಿ ವಾಸಿಸಿ, ತರಗತಿ ನಡೆಸಬೇಕಿತ್ತು. ೧೮೪೦ರ ದಶಕದಲ್ಲಿ ಭಾಷಾ ಸಮಸ್ಯೆ ಉದ್ಭವಿಸಿ, ಕನ್ನಡ ಪ್ರಾಥಮಿಕ ಶಾಲೆಗಳನ್ನು ಬಾಲಕ, ಬಾಲಕಿಯರಿಗೆ ಪ್ರಾರಂಭಿಸಿದರು. ಆಗ ವಿದೇಶಿ ಶಿಕ್ಷಕನಾದರೂ ಸಹ ಕನ್ನಡ ಭಾಷೆ, ಸಾಹಿತ್ಯ ಕಲಿತು ಅವನು ಸಹ ಬೋಧಿಸಬೇಕಾಗಿತ್ತು.

ಅಧ್ಯಯನದ ಅನುಕೂಲಕ್ಕಾಗಿ ಶೈಕ್ಷಣಿಕ ಕ್ಷೇತ್ರದಲ್ಲಾದ ಅಭಿವೃದ್ದಿ ಅಥವಾ ಸುಧಾರಣೆ, ಬದಲಾವಣೆಯನ್ನು ೩ ವಿಭಾಗಗಳಾಗಿ ಮಾಡಿಕೊಳ್ಳಬಹುದು.

೧. ೧೭೯೯ ರಿಂದ ೧೮೮೨ರ ವರೆಗೆ

೨. ೧೮೮೨ ರಿಂದ ೧೯೨೧ರ ವರೆಗೆ

೩. ೧೯೨೧ ರಿಂದ ೧೯೪೭ರ ವರೆಗೆ

ಆಯಾ ವರ್ಷಗಳಲ್ಲಾದ ಶೈಕ್ಷಣಿಕ ಪ್ರಗತಿಯನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ. ೧೭೬೮ರಲ್ಲಿ ಮಾರ್ನಿಂಗಟನ್ ಎಂಬ ಆಂಗ್ಲ ವ್ಯಕ್ತಿ ಬಂದಾಗ ಇಲ್ಲಿನ ಎಲ್ಲಾ ಕ್ಷೇತ್ರಗಳ ಅಧ್ಯಯನ ನಡೆಸಿ ಶಿಕ್ಷಣ ಕುರಿತಂತೆ ವರದಿ ತಯಾರಿಸಿದನು. ಆಗ ಇಲ್ಲಿ ಶಿಕ್ಷಣ ವ್ಯವಸ್ಥೆ ಅಲ್ಪವಾಗಿತ್ತು, ವ್ಯಾಪಕವಾಗಿ ಬೆಳೆದಿರಲಿಲ್ಲ.

೧. ೧೭೯೯ ರಿಂದ ೧೮೮೨ರ ವರೆಗಿನ ಶೈಕ್ಷಣಿಕ ಬೆಳವಣಿಗೆ ಮತ್ತು ಬದಲಾವಣೆ

ಆಂಗ್ಲರು ಪಾದಾರ್ಪಣೆ ಮಾಡುವ ಮುನ್ನ ಹಿಂದೂಗಳು ಮಠ, ಮಂದಿರಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದರು. ಮುಸ್ಲಿಮರು ಸಹಾ ಅಷ್ಟೇ. ಅವರು ಮಕ್ತಾಬ್ ಮತ್ತು ಮದರಸಗಳಲ್ಲಿ ಶಿಕ್ಷಣ ಬೋಧಿಸುತ್ತಿದ್ದರು. ನಮ್ಮ ದೇಶೀಯ ಶಿಕ್ಷಣಕ್ಕೆ ಕುಂದು ಬಂದಿದ್ದು, ಪೋರ್ಚುಗೀಸರಿಂದ. ಮತಾಂತರಗೊಳಿಸುವುದಲ್ಲದೆ, ಧರ್ಮಪ್ರಸಾರ ಕಾರ್ಯಸಾಧನೆಗಾಗಿ ಶಾಲೆ ತೆರೆದರು. ವಿದೇಶಿಯರ ಭಾಷೆಗಳನ್ನು ಕಲಿಸುತ್ತಿದ್ದರು. ಟಿಪ್ಪುವಿನಿಂದ ಕೆಲವೇ ಶಾಲೆಗಳು ಉಳಿದವು. ಸ್ಥಳೀಯರ ಶಿಕ್ಷಣಕ್ಕೆ ಅತೀ ಹೆಚ್ಚಿನ ಪ್ರೋತ್ಸಾಹ ನೀಡಿದವನೆಂದರೆ, ಸರ್. ಥಾಮಸ್ ಮನ್ರೋ. ಶಿಕ್ಷಣದ ಪ್ರಗತಿಗಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಿ ೧೮೧೨ರಲ್ಲಿ ಸಲ್ಲಿಸಿದನು. ನಂತರ ಮದ್ರಾಸ್ ಅಧಿಪತ್ಯದಲ್ಲಿ ಶಿಕ್ಷಣ ಮಂಡಳಿ ಸ್ಥಾಪಿಸಲಾಯಿತು. ೧೮೧೩ರಲ್ಲಿ ಬ್ರಿಟಿಷರು ದೇಶೀಯ ಶಿಕ್ಷಣ ಯಾವ ಸ್ವರೂಪದಲ್ಲಿ ಇರಬೇಕೆಂದು ಸಂಸತ್ತಿನಲ್ಲಿ ಶಾಸನ ಹೊರಡಿಸಿದರು. ತರುವಾಯ ೧೮೩೧-೩೮ರಲ್ಲಿ ಥಾಮಸ್ ಮೆಕಾಲೆ ಇಂಗ್ಲೀಷ್ (ಪಾಶ್ಚಾತ್ಯ) ವಿದ್ಯಾಭ್ಯಾಸಕ್ಕೆ ಹೊಸ ತಿರುವು ಕೊಟ್ಟನು. ಇದಲ್ಲದೆ ೧೮೨೩ರಲ್ಲಿ ಸಾರ್ವಜನಿಕ ಶಿಕ್ಷಣ ಸಮಿತಿ ರಚನೆಯಿಂದ ಬಳ್ಳಾರಿಯ ಇತರ ೫ ಜಿಲ್ಲೆಗಳಲ್ಲಿ ಇಂಗ್ಲಿಷ್ ಮಾದರಿಯ ಶಾಲೆಗಳನ್ನು ತೆರೆಯಲಾಯಿತು.[10]

೧೮೫೪ರ ಚಾರ್ಲ್ಸ್‌ವುಡ್‌ನ ವರದಿ ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಪ್ರಗತಿಗೆ ನಾಂದಿ ಹಾಡಿತು. ಬೋರ್ಡ್ ಆಫ್ ಕಂಟ್ರೋಲನ ಆಡಳಿತ ಮಂಡಳಿಯ ಅಧ್ಯಕ್ಷನಾಗಿದ್ದ ಚಾರ್ಲ್‌ಸ್ ವುಡ್ ಭಾರತದಲ್ಲಿ ಶಿಕ್ಷಣ ವಿಸ್ತರಣೆ ಬಗ್ಗೆ ತಾನು ತಯಾರಿಸಿದ ಪ್ರಸಿದ್ಧ ವರದಿಯನ್ನು ೧೮೫೪ರಲ್ಲಿ ಸಲ್ಲಿಸಿದನು. ನಾರ್ಮಲ್ ಸ್ಕೂಲ್ (ತರಬೇತಿ ಶಾಲೆ) ಶಿಕ್ಷಕರ ತರಬೇತಿಗಾಗಿ ಸ್ಥಾಪಿಸಿ ಅವಕಾಶ ಕಲ್ಪಿಸಿದನು. ಮೊದಲಿದ್ದ ಶಾಲೆಗಳನ್ನು ಹಾಗೆಯೇ ಮುಂದುವರೆಸಿ, ೧೮೫೫-೫೬ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಪುನಃ ಸ್ಥಾಪಿಸಲಾಯಿತು. ಮಿಷನರಿ ಸಂಸ್ಥೆಗಳು ಈ ಪ್ರದೇಶದಲ್ಲಿ ಪ್ರವೇಶ ಮಾಡಿದವು. ಈ ಮೊದಲು ಮನ್ರೋನ ಬಯಕೆಯಂತೆ ಮದ್ರಾಸ್ ಸರಕಾರ, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಿತ್ತು. ೧೮೫೫ರಲ್ಲಿ ಸಹಾಯ ಧನ ಒದಗಿಸುವುದರ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟರು. ವುಡ್ ವರದಿಯನ್ನು ಇಂಡಿಯಾದ ಇಂಗ್ಲಿಷ್ ಶಿಕ್ಷಣದ ಮ್ಯಾಗ್ನಕಾರ್ಟ ಎಂದು ಕರೆಯುವುದುಂಟು. ಇದು ಪಾಶ್ಚಾತ್ಯ ವಿಜ್ಞಾನ, ಕಲೆ, ತತ್ವಶಾಸ್ತ್ರ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ಭಾರತೀಯ ಭಾಷೆಗಳ ಅಧ್ಯಯನಕ್ಕೆ ಮಹತ್ವ ಲಂಡನ್ ಮಾದರಿಯಲ್ಲಿ ಪರೀಕ್ಷಾ ಪದ್ಧತಿ ಅಧ್ಯಾಪಕರ ತರಬೇತಿಗೆ ತರಬೇತಿ ಕಾಲೇಜುಗಳ ಸ್ಥಾಪನೆ ವಿದ್ಯಾರ್ಥಿವೇತನ, ಸ್ತ್ರೀ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಪ್ರತಿ ಪ್ರಾಂತದಲ್ಲೂ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಥಾಪನೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಧನ ಸಹಾಯ ನೀಡುತ್ತಿತ್ತು. ಇವು ‘ವುಡ್ ವರದಿ’ಯ ಪ್ರಮುಖ ಬೇಡಿಕೆಗಳಾಗಿದ್ದವು.

೧೮೫೭ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಸ್ಥಾಪನೆಯ ನಂತರ ಬಳ್ಳಾರಿಯಲ್ಲಿ ಆಗ ೫ನೆಯ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮವಿತ್ತು. ೧೮೫೫ರಲ್ಲಿ ಜಾರಿಗೆ ಬಂದು, ತಿದ್ದುಪಡಿ ಹೊಂದಿದ ‘ಸಹಾಯಕ ಅನುದಾನ ಸಂಹಿತೆ’ಯಲ್ಲಿ ವಿದ್ಯಾ ಸಂಸ್ಥೆಗಳಿಗೆ ಧನ ಸಹಾಯ ಕಲ್ಪಿಸಿ ದೇಶೀಯ ಶಾಲೆಗಳನ್ನು ಪ್ರಾಥಮಿಕ ಶಿಕ್ಷಣಕ್ಕೆ ಒಳಪಡಿಸಿ, ಧನಸಹಾಯ ನೀಡಲಾಯಿತು. ೧೮೬೩ರಲ್ಲಿ ಅಂಗೀಕರಿಸಲಾದ ಮದ್ರಾಸ್ ಪ್ರಾಥಮಿಕ ಶಿಕ್ಷಣದ ಅಧಿನಿಯಮ ಮತ್ತು ೧೮೭೧ರಲ್ಲಿ ಸ್ಥಾನಿಕ ನಿಧಿಯ ಅಧಿನಿಯಮ ಜಾರಿಗೆ ಬಂದಿತು. ಆಗ ಶಾಲೆಗಳ ಸ್ಥಾಪನೆಗೆ ಸ್ಥಳೀಯ ಸಂಸ್ಥೆಗಳಿಂದ ಧನಸಹಾಯ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಜೆ.ಸಿ. ಕ್ಲೈರ್, ಆಯಾ ಜಿಲ್ಲೆಯ ಕಲೆಕ್ಟರ್‌ಗಳು ಇದಕ್ಕೆ ಅಧ್ಯಕ್ಷರಾಗಿರುತ್ತಾರೆ. ಕಲೆಕ್ಟರು ಅಧ್ಯಕ್ಷರು, ಮೂವರು ಅಥವಾ ನಾಲ್ವರು ಸ್ಥಳೀಯ ಅಥವಾ ಇತರೆ ಖಾಸಗಿ ವ್ಯಕ್ತಿಗಳು ಅಷ್ಟೇ ಜನ ಸರ್ಕಾರಿ ಅಧಿಕಾರಿಗಳು ಸದಸ್ಯರಾಗಿರುತ್ತಿದ್ದರು.[11] ಪಟ್ಟಣಗಳಲ್ಲಿ ಪೌರಸಮಿತಿಗಳು ಪ್ರಾಥಮಿಕ ಶಿಕ್ಷಣದ ಹೊಣೆಯನ್ನು ಹೊಂದಿದ್ದವು. ೧೮೭೦-೭೧ ರಿಂದ ೧೮೮೦-೮೧ರಲ್ಲಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಪ್ರಮಾಣ ೧೩೨ ರಿಂದ ೭೨೬ಕ್ಕೆ ಏರಿತು. ಬಳ್ಳಾರಿಯಲ್ಲಿ ೨೬೭ ಪ್ರಾಥಮಿಕ ಶಾಲೆಗಳಿದ್ದು, ೪೮೦೭ ಮಕ್ಕಳು ವಿದ್ಯಾಲಾಭ ಪಡೆಯು ತ್ತಿದ್ದರು. ಇದು ಮೊದಲ ಹಂತದಲ್ಲಾದ ಬದಲಾವಣೆಯೆನ್ನಬಹುದು.

೨. ೧೮೮೨೧೯೨೧ರವರೆಗಿನ ಶೈಕ್ಷಣಿಕ ಪ್ರಗತಿ ಮತ್ತು ಬದಲಾವಣೆ

ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ, ಉಸ್ತುವಾರಿ, ಪಠ್ಯಕ್ರಮ, ಪರೀಕ್ಷಾ ವಿಧಾನ, ವಿದ್ಯಾಭ್ಯಾಸದ ಗುಣಮಟ್ಟವನ್ನು ಕಾಪಾಡಿಕೊಂಡು ಹೋಗಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಂಗ್ಲ ಮೇಲಾಧಿಕಾರಿಗಳು ಮನವಿ ಮಾಡಿಕೊಂಡರು. ಆಗ ತಾನೇ ಲಾರ್ಡ್ ಕರ್ಜನ್ (೧೯೦೨) ಒಂದು ಆಯೋಗವನ್ನು ರಚಿಸಿದನು. ಆನಂತರ ೧೯೦೪ರಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಕಾಯಿದೆ ಜಾರಿಗೆ ಬಂದು ವಿಶ್ವವಿದ್ಯಾಲಯಗಳ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಪ್ರಪಂಚದ ಮೊದಲನೇ ಮಹಾಯುದ್ಧದಿಂದ ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆಯಾಗಿದ್ದರಿಂದ, ಶೈಕ್ಷಣಿಕ ಕ್ಷೇತ್ರದಲ್ಲಿ ಇಚ್ಛೆಪಟ್ಟ ಯೋಜನೆಗಳು ನಿರ್ಜೀವಗೊಂಡಿದ್ದವು. ಬಳ್ಳಾರಿಗೆ ಆಗಮಿಸಿದ ಜರ್ಮನಿಯ ಮಿಷನರಿಗಳು ಶಿಕ್ಷಣ ಸಂಸ್ಥೆ ಗಳನ್ನು ಸ್ಥಾಪಿಸಿದರು. ಇಲ್ಲಿ ವಿಶೇಷ ಸಮಿತಿಯನ್ನು ಮತ್ತು ಅನುಮೋದಿತ ಪಾರುಪತ್ತೆಗಾರವನ್ನು ಸ್ಥಾಪಿಸಿದುದರಿಂದ ಅವು ಶಾಶ್ವತವಾಗಿ ಉಳಿದವೆನ್ನಬಹುದು. ಈ ಸಮಯದಲ್ಲಿ ಬಳ್ಳಾರಿಯಲ್ಲಿ ಯಾವ ಕಾಲೇಜು ಇರಲಿಲ್ಲ. ಕಾಲೇಜು ಶಿಕ್ಷಣಕ್ಕೆ ಅನಂತಪುರಕ್ಕೆ ಹೋಗ ಬೇಕಿತ್ತು. ಸ್ಥಳೀಯವಾಗಿ ಶಿಕ್ಷಣ ಸಂಸ್ಥೆಗಳಿಗೆ ಜೀವಂತಿಕೆ ನೀಡಿದವರು ಕ್ರೈಸ್ತರಾದ ವಿದೇಶಿ ಯರೇ ಎಂಬುದು ಸ್ಪಷ್ಟ.

ಬಳ್ಳಾರಿ ಪ್ರದೇಶದಲ್ಲಿ ಪಾಠ ಸೂಚಿಕೆ ಮತ್ತು ಪಾಠ ಪ್ರಣಾಳಿಕೆ ಪರಿಷ್ಕರಿಸಿ ೧೯೧೮ರಲ್ಲಿ ನವೀನ ಮಾದರಿಗೆ ಅಳವಡಿಸಿಕೊಂಡರು. ಈ ಸಮಯದಲ್ಲಿ ೧೯ ಪ್ರೌಢಶಾಲೆಗಳು ಮತ್ತು ಬಾಲಕಿಯರ ೬ ಪ್ರೌಢಶಾಲೆಗಳಿದ್ದವು. ಬಳ್ಳಾರಿಯಲ್ಲಿ ಬಾಲಕ ೧೧ ಪ್ರೌಢಶಾಲೆಗಳಿದ್ದವು. ಪ್ರೌಢಶಾಲೆಗಳನ್ನು ಸ್ಥಳೀಯ ಮಂಡಳಿಗಳ ಮತ್ತು ಪುರಸಭೆಗಳು ನೋಡಿಕೊಳ್ಳುತ್ತಿದ್ದವು. ೧೯೧೪-೧೮ರ ಮಹಾಯುದ್ಧದ ಪರಿಣಾಮವಾಗಿ ಶಾಲೆಗಳು ಕುಂಠಿತವಾದವಲ್ಲದೆ, ೧೯೧೮ರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಏಳನೇ ತರಗತಿ ಪರೀಕ್ಷೆ ರದ್ದಾಯಿತು.[12] ಮಹಾಯುದ್ಧ ದಿಂದ ಹಾನಿಯಾದರೂ ಕೇಂದ್ರಸರ್ಕಾರದ ವಿಶೇಷ ಧನಸಹಾಯದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಗಮನಾರ್ಹವಾದ ಅಭಿವೃದ್ದಿಯಾಯಿತು. ಬಳ್ಳಾರಿಯಲ್ಲಿ ಬಾಲಕರ ಶಾಲೆಗಳ ಸಂಖ್ಯೆ ಒಟ್ಟು ೬೧೪ ರಿಂದ ೮೫೯ಕ್ಕೆ ಹೆಚ್ಚಿ, ಬಾಲಕೀಯರ ಶಾಲೆಗಳು ಸುಮಾರು ೪೯-೮೮ಕ್ಕೆ ತಲುಪಿದವು. ೧೯೨೦-೨೧ರಲ್ಲಿ ಬಳ್ಳಾರಿ ಜಿಲ್ಲೆ ೨೯,೩೯೬ ಜನ ಹುಡುಗರನ್ನು ೩,೮೫೧ ಬಾಲಕೀಯರನ್ನು ಹೊಂದಿತು.

ಬಳ್ಳಾರಿ ಜಿಲ್ಲೆಯಲ್ಲಿ ಕೇವಲ ಒಂದೇ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡದೇ ‘ಪುರಾತನ ಶಿಕ್ಷಣ’ಕ್ಕೆ ಪ್ರೋತ್ಸಾಹ ನೀಡಲಾಯಿತು. ದೇಶೀ ಶಾಲೆಗಳಿಗೆ, ಸಂಸ್ಕೃತ ಕಲಿಯಲು ಜಿಲ್ಲೆಯಲ್ಲಿ ಉಜ್ಜಿನಿ ಮತ್ತು ಬಳ್ಳಾರಿಗಳಲ್ಲಿ ೩ ಸಂಸ್ಕೃತ ಶಾಲೆಗಳಿದ್ದವು. ಬ್ರಿಟಿಷ್ ಸರ್ಕಾರ ಮುಸ್ಲಿಂ ಶಿಕ್ಷಣಕ್ಕೆ ಮಹತ್ವ ಕೊಟ್ಟಿತು. ಪ್ರಕೃತಿ, ಭೂಗೋಳ, ಪೌರನೀತಿಯನ್ನು ಅಭ್ಯಾಸ ಮಾಡುತ್ತಿದ್ದ ಬಾಲಕೀಯರಿಗೆ, ಆದಿ ದ್ರಾವಿಡರಿಗೆ, ಮುಸ್ಲಿಂರಿಗೆ ಪ್ರತ್ಯೇಕ ಶಾಲೆಗಳನ್ನು ತೆರೆದರು. ೧೯೨೦ ರಲ್ಲಿ ಮದ್ರಾಸ್ ಎಲಿಮೆಂಟರಿ ಕಾಯಿದೆ ಬಂದಾಗಿನಿಂದ ಪ್ರಾಥಮಿಕ ಶಿಕ್ಷಣ, ಜಿಲ್ಲಾ ಬೋರ್ಡು, ತಾಲ್ಲೂಕು ಬೋರ್ಡ, ಪಂಚಾಯಿತಿ ಬೋರ್ಡುಗಳಿಗೆ ವರ್ಗಾಯಿಸಿದರು. ಮುಸ್ಲಿಂರಿಗೆ ಪ್ರತ್ಯೇಕ ಶಾಲೆಗಳಿದ್ದವು. ಬಳ್ಳಾರಿಯಲ್ಲಿ ಮುಸಲ್ಮಾನರಿಗಾಗಿ ಒಂದು ಪ್ರತ್ಯೇಕ ಪ್ರೌಢಶಾಲೆ ಇತ್ತು. ಅದು ಈಗ ‘ಮೌಲಾನಾ ಅಬೂಲ್ ಕಲಾಮ ಆಜಾದ್’ ಎಂದು ನಾಮಕರಣಗೊಂಡಿದೆ. ಕಾರ್ಮಿಕ ಸಚಿವಾಲಯ ಆದಿದ್ರಾವಿಡ ಹಾಗೂ ಹರಿಜನರಿಗಾಗಿ ಶಾಲೆಗಳನ್ನು ತೆರೆದಿತ್ತು. ಕಪ್ಪುಹಲಗೆ, ಪುಸ್ತಕವನ್ನು ಸರ್ಕಾರ ಉಚಿತವಾಗಿ ವಿತರಿಸಿತು. ಹೆಚ್ಚಾಗಿ ಕೃಷಿಜೀವನ ನಡೆಸುತ್ತಿದ್ದರಿಂದ ಅತೀ ಹೆಚ್ಚಿನ ಮಕ್ಕಳು ಅಪವ್ಯಯ ಮತ್ತು ಅನುತ್ತೀರ್ಣರಾಗುತ್ತಿದ್ದರು.

ಪುರ ಮತ್ತು ನಗರ ಮಟ್ಟದಲ್ಲಿ ಬಾಲಕೀಯರಿಗಾಗಿ ಪ್ರತ್ಯೇಕ ಶಾಲೆಗಳನ್ನು ಪ್ರಾರಂಭಿಸಿ ದರು. ಆ ಸಂದರ್ಭದಲ್ಲಿ ಶಿಕ್ಷಕಿಯರ ಅಭಾವವಿತ್ತು. ಹಾಗೆ ಮಿಷನ್ ಮತ್ತು ಕ್ಯಾಥೋಲಿಕ್ ಸಂಸ್ಥೆಗಳು ಸುಮಾರು ಶಾಲೆಗಳನ್ನು ಪ್ರಾರಂಭಿಸಿದರು. ವಿದ್ಯಾರ್ಥಿ ವೇತನ ನೀಡಿ, ಫೀಜುಗಳಲ್ಲಿ ವಿನಾಯಿತಿ ಕೊಡುತ್ತಿದ್ದರು. ವಿಶೇಷವೆಂದರೆ, ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು ೫೫ ರಾತ್ರಿ ಶಾಲೆಗಳಿದ್ದವೆಂದು ತಿಳಿದುಬಂದಿದೆ.[1]       ತರಳಬಾಳು, ೧೯೮೫, ಅಕ್ಟೋಬರ್, ಪು. ೧೪.

[2]       ದಿ. ತೋಟದ ಪಾಲಮ್ಮ, ದಿ. ತೋಟದ ಪೆದ್ದ ಓಬಯ್ಯವರು ತಿಳಿಸಿರುವುದಕ್ಕೆ ಕೃತಜ್ಞತೆಗಳು.

[3]       ತರಳಬಾಳು, ೧೯೮೫, ಸಂ. ೧೧, ಪು. ೧೪.

[4]       ಮಾನ್ಯುಯೆಲ್ ಆಫ್ ಮದ್ರಾಸ್ ಪ್ರೆಸಿಡೆನ್ಸಿ, ಸಂ.೧, ೧೯೮೭, ಪು. ೪೬೯.

[5]       ಇಂಡಿಯಾ ಬಿ ಫೋರ್ ದಿ ಇಂಗ್ಲೀಷ್, ೧೮೯೭, ಪು. ೩.

[6]       ಮಾನ್ಯುಯೆಲ್ ಆಫ್ ಮದ್ರಾಸ್ ಪ್ರೆ, ೧೯೮೭, ಪು. ೬೪೩.

[7]      ಬಳ್ಳಾರಿಯ ಬೆಳಗು, ೧೯೭೨, ಪು. ೨೦.

[8]      ಕರ್ನಾಟಕದ ಪರಂಪರೆ, ೧೯೯೨, ಪು. ೪೦೨.

[9]      ಕನ್ನಡ ವಿಷಯ ವಿಶ್ವಕೋಶ, ೧೯೭೦, ಪು. ೯೫೦.

[10]     ಎಜ್ಯುಕೇಷನ್ ಸಿಸ್ಟಮ್ ಆನ್ಯುಯಲ್ ರಿಪೋರ್ಟ್, ೧೯೨೭, ಪು. ೧೪.

[11]      ಕರ್ನಾಟಕದ ಪರಂಪರೆ, ೧೯೯೨, ಪು. ೪೦೪.

[12]     ಅದೇ, ಪು. ೪೦೫.