೩. ಕ್ರಿ.ಶ. ೧೯೨೧ ರಿಂದ ೧೯೪೭ರ ವರೆಗಿನ ಶೈಕ್ಷಣಿಕ ಬೆಳವಣಿಗೆ

ಭಾರತ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ನೋಡಿಕೊಳ್ಳಲು ಶಿಕ್ಷಣ ಮಂತ್ರಿಯನ್ನು ೧೯೪೦ರಲ್ಲಿ ನೇಮಿಸಿತು. ಮದ್ರಾಸ್ ಸರ್ಕಾರದ ಕಾಯ್ದೆ ಕಾನೂನುಗಳನ್ನು ಅಳವಡಿಸಿ ಕೊಂಡಿದ್ದ ಬಳ್ಳಾರಿ ಜಿಲ್ಲೆ, ಪ್ರಾಥಮಿಕ ಶಿಕ್ಷಣಕ್ಕೆ ಮಾನ್ಯತೆ ನೀಡಿ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತರುವ ಅಧಿಕಾರ ಆಯಾ ಜಿಲ್ಲಾ ಶಿಕ್ಷಣ ಪರಿಷತ್ತುಗಳಿಗೆ ವಹಿಸಲಾಯಿತು.

‘ಮದ್ರಾಸ್ ಜಿಲ್ಲಾ ಪೌರ ಸಮಿತಿಗಳ ಅಧಿನಿಯಮ’ ಅಂಗೀಕೃತವಾದ ಮೇಲೆ ಪ್ರಾಥಮಿಕ ಶಿಕ್ಷಣವನ್ನು ಜಿಲ್ಲಾ ಮಂಡಳಿಗಳ ವ್ಯಾಪ್ತಿಯಿಂದ ತೆಗೆದು ‘ತಾಲ್ಲೂಕು ಮಂಡಳಿ’ ಮತ್ತು ‘ಪಂಚಾಯಿತ್ ಮಂಡಳಿ’ಗಳಿಗೆ ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶಾಲೆಗಳಲ್ಲಿ ಹೆಚ್ಚಾಗಿ ಬೆಳೆಯಿತು. ೧೯೨೭-೨೮ರಲ್ಲಿ ಮದ್ರಾಸ್ ಆಡಳಿತ ವರದಿಯ ಪ್ರಕಾರ ಯುರೋಪಿನ ಮಾದರಿಯ ಪ್ರಾಥಮಿಕ ಶಿಕ್ಷಣ ಶಾಲೆಗಳಂತೆ ೫೦೦ ಜನಸಂಖ್ಯೆ ಗೊಂದು ಶಾಲೆಯನ್ನು ಪ್ರಾರಂಭಿಸಲು ಯೋಜಿಸಿತ್ತು. ಆದರೆ, ಅದು ಯಶಸ್ವಿಯಾಗಲಿಲ್ಲ.

[1]

ಬಳ್ಳಾರಿಯಲ್ಲಿ ೧೯೧೭ರಲ್ಲಿ ಸಾಲಿನಲ್ಲಿ ೫೭೯ರಷ್ಟು ಬಾಲಕಿಯರ ಸಂಖ್ಯೆ ೪೧,೧೭೪ ಬಾಲಕರ ಸಂಖ್ಯೆ ಇತ್ತು. ಕ್ರಮವಾಗಿ ೧೯೧೭-೧೯೨೮ರವರೆಗೆ ಮತ್ತು ೭೫,೨೭೮ಕ್ಕೂ ೮೪೮ ಮತ್ತು ೨೯,೬೮೭ ರಿಂದ ೧೩೨೧ ಮತ್ತು ೪೩,೨೩೦ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಏರಿತು. ಬಳ್ಳಾರಿ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಹೊಸಪೇಟೆಯ ಪೌರ ಸಮಿತಿಯ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಿತು. ಇದರಿಂದ ಬಳ್ಳಾರಿ ಉಪವಿಭಾಗವಾಗಿದ್ದ ಹೊಸಪೇಟೆ ಶಿಕ್ಷಣದಲ್ಲಿ ಸಾಧನೆ ತೋರುತ್ತ ಬಂದಿತು. ೧೯೨೬ ಏಪ್ರಿಲ್ ೧ ರಂದು ಹೊಸಪೇಟೆಯಲ್ಲಿ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ಜಾರಿಗೆ ತರಲಾಗಿ, ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಖಾನ್ ಬಹದ್ದೂರ್ ಮೊಹಿದಿ ಬಜಲುಲ್ಲಾ ಸಾಹಿಬ್‌ನು ಸಹ ಪ್ರೋತ್ಸಾಹ ಆದರೆ, ಈ ಪದ್ಧತಿ ಶಾಶ್ವತವಾಗಿರಲಿಲ್ಲ.

ಮದ್ರಾಸ್ ಅಧಿಪತ್ಯದ ರಾಜ್ಯಪಾಲನಾದ ಲಾರ್ಡ್ ಸ್ಟ್ಯಾನ್ಲಿಯವರು ಹೊಸಪೇಟೆಗೆ ಭೇಟಿ ಕೊಟ್ಟು ೧೯೩೧ನೇ ಜುಲೈ ೧೭ರಂದು ಮುನಿಸಿಪಲ್ ಹೈಸ್ಕೂಲಿನ ಕಟ್ಟಡಗಳ ಶಂಕು ಸ್ಥಾಪನೆ ಮಾಡಿದರು. ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಸರ್ಕಾರ  ಧನಸಹಾಯ ನೀಡಿತು. ಆಂಗ್ಲ ವಾಸ್ತು ಶೈಲಿಯನ್ನು ಹೊಂದಿದ ಈ ಕಟ್ಟಡವನ್ನು ೧೯೩೫ನೇ ನವೆಂಬರ್ ೯ರಂದು ಆಗ ಜಿಲ್ಲಾ ಕಲೆಕ್ಟರ್‌ರಾದ ಶ್ರೀ ಟಿ. ಭಾಸ್ಕರರಾವ್‌ನಾಯ್ಡು ಉದ್ಘಾಟಿಸಿದರು. ಈ ಶಾಲೆ ಮೊದಲು ಲೋಯರ್ ಸೆಕೆಂಡರಿ ಶಾಲೆಯಾಗಿದ್ದು, ೧೮೬೫ರಲ್ಲಿ ಪ್ರಾರಂಭವಾಯಿತೆಂದು ಹೇಳಬಹುದು. ೧೯೧೩ರಲ್ಲಿ ಪುರಸಭೆಯ ಹತೋಟಿಗೆ ವರ್ಗಾಯಿಸಲ್ಪಟ್ಟಿತು. ಹೊಸಪೇಟೆ ಯಲ್ಲಿ ೧೯೨೦-೨೧ರಲ್ಲಿ ಪ್ರೌಢಶಾಲೆಯ ತರಗತಿಯನ್ನು ಪ್ರಾರಂಭಿಸಲಾಯಿತು. ೧೯೪೭ನೇ ಇಸವಿ ಫೆಬ್ರವರಿ ೨೭ರಂದು ಈ ಶಾಲೆಯಲ್ಲಿ ಬೆಳ್ಳಿಹಬ್ಬವನ್ನು ಖ್ಯಾತ ಮೇಧಾವಿ ಡಾ. ಶಿವರಾಮ ಕಾರಂತ ಆತಿಥ್ಯದಲ್ಲಿ ನೆರವೇರಿಸಲಾಯಿತು.

೧೯೩೪ರಲ್ಲಿ ತಾಲ್ಲೂಕು ಮಂಡಳಿಗಳು ರದ್ದಾಗಿ, ಪ್ರಾಥಮಿಕ ಶಿಕ್ಷಣ ಜಿಲ್ಲಾ ಮಂಡಳಿಗೆ ವರ್ಗಾಯಿಸಿತು. ಮದ್ರಾಸ್ ಪ್ರಾಥಮಿಕ ಶಿಕ್ಷಣ ಅಧಿನಿಯಮದಲ್ಲಿ ತಿದ್ದುಪಡಿ ಮಾಡ ಲಾಯಿತು. ೧೯೩೭ರಲ್ಲಿ ಭಾರತ ಸರ್ಕಾರದ ಅಧಿನಿಯಮದ ಪ್ರಕಾರ ಶೈಕ್ಷಣಿಕ ಸೌಲಭ್ಯಗಳು ಮತ್ತು ನಿಯಂತ್ರಣದ ಪೂರ್ವ ಅಧಿಕಾರ ಸಿಕ್ಕಿತು. ಜಿಲ್ಲಾ ಶಿಕ್ಷಣ ಮಂಡಳಿಗಳು, ಪ್ರೌಢಶಾಲೆಯು ನೀಡುವ ವೃತ್ತಿತರಬೇತಿ, ವೈದ್ಯಕೀಯ ಶಿಕ್ಷಣ, ನೀತಿ ಶಿಕ್ಷಣವನ್ನು ಸ್ಥಾಪಿಸಲು ಶಿಕ್ಷಣ ಇಲಾಖೆಗೆ ತಿಳಿಸಿತು. ಆಗ ೧೪೮ ರಾತ್ರಿ ಶಾಲೆಗಳನ್ನು ಪ್ರಾಥಮಿಕ ಶಿಕ್ಷಣದ ಪ್ರಸರಣ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು. ೧೯೩೮ರಲ್ಲಿ ತಾಲ್ಲೂಕು ಮಂಡಳಿಗಳು ರದ್ದುಗೊಂಡು ಶಿಕ್ಷಣದ ವ್ಯವಸ್ಥೆಯಾಗಿ ಮತ್ತೊಂದಕ್ಕೆ ವರ್ಗಾಯಿಸಲಾಯಿತು. ೧೯೩೭ರ ಸಂದರ್ಭದಲ್ಲಿ ೧೩೪೧ ಶಾಲೆಗಳು ಬಳ್ಳಾರಿ ಜಿಲ್ಲೆಯಲ್ಲಿದ್ದವು. ೧೯೩೮ರಲ್ಲಿ ಜಿಲ್ಲಾ ವಿದ್ಯಾಭ್ಯಾಸ ಸಮಿತಿಗಳನ್ನು ವಜಾ ಮಾಡಲಾಯಿತು. ಅದೇ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಪಿಳ್ಳೆ ಮಕ್ಕಳಿಗೆ, ಬಳ್ಳಾರಿಯಲ್ಲಿ ಲಂಬಾಣಿಗರ ಮಕ್ಕಳಿಗೆ ಪ್ರತ್ಯೇಕ ೧೧ ಶಾಲೆಗಳು ಸ್ಥಾಪನೆಯಾಗಿದ್ದವು. ೧೯೨೫ರಲ್ಲಿ ಪ್ರೌಢಶಾಲೆಗಳ ಪಠ್ಯವಸ್ತುವಿನ ಪುನರ್ವವಸ್ಥೆ ಯನ್ನು ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಡಗಿ, ಪುಸ್ತಕ, ರಟ್ಟು ಹಾಕುವುದು, ನೇಯ್ಗೆ, ಮುದ್ರಣ ಭೌತಿಕ ಶಿಕ್ಷಣ ಕಸುಬುಗಳನ್ನು ಕಲಿಸಲು ಸರ್ಕಾರ ಮುಂದೆ ಬಂದಿತು.

ಜಿಲ್ಲೆಯಲ್ಲಿ ೧೯೨೯ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಜಾರಿಗೆ ತಂದರು. ೧೯೩೯ರಲ್ಲಿ ಸುಧಾರಣೆ ತರುವ ತನಕ ಅದೇ ಪದ್ಧತಿ ಮುಂದುವರೆಯಿತು. ಶಾರೀರಿಕ ಶಿಕ್ಷಣದ ಪಠ್ಯ ವಿಷಯಗಳು ಪರೀಕ್ಷೆಗೆ ಇರಲಿಲ್ಲ. ಆದರೆ ಇತಿಹಾಸ, ಬೀಜಗಣಿತ, ರೇಖಾಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೊತೆಗೆ ಕನ್ನಡ, ಇಂಗ್ಲಿಷ್, ಭಾಷೆಯನ್ನು ಕಲಿಯಬೇಕಿತ್ತು. ೧೯೩೮ರಲ್ಲಿ ಹಿಂದಿಯನ್ನು ಅಧಿಕೃತವಾಗಿ ಒಂದು ವಿಷಯವೆಂದು ಸೇರಿಸಲಾ ಯಿತು. ಎರಡನೇ ಮಹಾಯುದ್ಧದ (೧೯೩೯) ಪರಿಣಾಮವಾಗಿ ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡವೆನ್ನಬಹುದು. ಇದಾದನಂತರ ೧೯೪೫-೪೬ರಲ್ಲಿ ದಕ್ಷಿಣ ಕನ್ನಡ ಮತ್ತು ಬಳ್ಳಾರಿಗಳಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ತರಲಾಯಿತು. ಪ್ರಾಥಮಿಕ ಶಿಕ್ಷಣವನ್ನು ವರ್ಗಗಳಿಂದ ನಿರ್ಧರಿಸಲ್ಪಡುತ್ತಿತ್ತು. ಹೇಗೆಂದರೆ, ೧ ರಿಂದ ೫ ವರ್ಗಗಳಿದ್ದವು. ನಂತರ ೮ ವರ್ಷದವರೆಗಿನ ಪ್ರಾಥಮಿಕ ಶಾಲೆಗಳಿದ್ದವು. ಮೊದಲು ಪ್ರಾಥಮಿಕ ಶಾಲೆಗಳಲ್ಲಿ (೭ನೇ ತರಗತಿ) ಸಾರ್ವಜನಿಕ ಪರೀಕ್ಷೆಗಳಿರಲಿಲ್ಲ. ೫ನೇ ಮತ್ತು ೮ನೇ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಬಾಲ ಬಾಲಕೀಯರಿಗೆ ಪ್ರಶಸ್ತಿ ಪತ್ರಗಳನ್ನು ಅಧಿಕಾರಿಗಳು ಕೊಡುತ್ತಿದ್ದರು. ೧೯೪೩ರಲ್ಲಿ ೮ನೇ ತರಗತಿಗೆ ಸಾರ್ವಜನಿಕ ಪರೀಕ್ಷೆ ಪ್ರಾರಂಭ ವಾಯಿತು.[2]

ಉನ್ನತ ಶಿಕ್ಷಣದ ಕೊರೆತೆ ನೀಗಿಸಲು ಬಳ್ಳಾರಿಯಲ್ಲಿ ಯಾವ ಶಾಲೆಗಳಿರಲಿಲ್ಲ. ಪದವೀಧರರಿಗೆ ತರಬೇತಿ ನೀಡಲು ತರಬೇತಿ ಶಾಲೆಗಳಿದ್ದವು. ಮುಸಲ್ಮಾನರಿಗಾಗಿ ಪ್ರತ್ಯೇಕ ಪ್ರಾಥಮಿಕ, ಪ್ರೌಢಶಾಲೆಗಳನ್ನು ಪ್ರಾರಂಭಿಸಲಾಯಿತು. ಇದಕ್ಕಾಗಿ ಸಮಿತಿ ರಚಿಸಿ ಕುರಾನ್ ಕಲಿತ ಶಿಕ್ಷಕರನ್ನು ನೇಮಿಸಿ, ಮುಸ್ಲಿಂ ವಿದ್ಯಾರ್ಥಿಗಳಿಗೆ ಧರ್ಮಬೋಧನೆಯ ಅವಕಾಶವನ್ನು ಕಲ್ಪಿಸಿಕೊಟ್ಟರು. ಶಿಕ್ಷಕರ ವೇತನ ಇತ್ಯಾದಿ ಖರ್ಚುಗಳಿಗೆ ಸಾರ್ವಜನಿಕ ನಿಧಿಯಿಂದ ಕೊಡಲಾಗುತ್ತಿತ್ತು. ದಲಿತ ಮಕ್ಕಳಿಗಾಗಿ ಪ್ರತ್ಯೇಕ ಶಾಲೆಗಳನ್ನು ಸ್ಥಳೀಯ ನಿಧಿಯ ವತಿಯಿಂದ ತೆರೆದು, ಈ ಸಂಘ ಜವಾಬ್ದಾರಿ ನೋಡಿಕೊಳ್ಳುತ್ತಿತ್ತು. ಅಸ್ಪೃಶ್ಯತೆ ನಿವಾರಣೆಯಾಗದೇ ಶಿಕ್ಷಣದಿಂದ ಅವರ ಏಳಿಗೆ ಆಗುವುದಿಲ್ಲವೆಂದು ಅಂದಿನ ಚಿಂತಕರು ಅರತಿದ್ದರು. ಮದ್ರಾಸ್ ಅಧಿಪತ್ಯದ ಸರ್ಕಾರದಲ್ಲಿ ಹರಿಜನ ಕಲ್ಯಾಣ ಇಲಾಖೆಯು ಸಹಾ ಪ.ಜಾತಿ/ಪ.ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ‘ಕಲ್ಯಾಣ ಮಂಡಳಿ ಶಾಲೆಗಳು’ ಎಂಬ ವಿಶಿಷ್ಟ ಮಾದರಿ ಶಾಲೆಗಳನ್ನು ತೆರೆಯಲಾಯಿತು.

ಬಳ್ಳಾರಿ ಜಿಲ್ಲೆಯಲ್ಲಿ ಅಸ್ಪೃಶ್ಯರಿಗಾಗಿ ಸ್ಥಾಪಿಸಲ್ಪಟ್ಟ ಶಾಲೆಗಳು ೪೭ ಇದ್ದವೆಂದು ತಿಳಿಯುತ್ತದೆ. ಹರಿಜನ ಮಕ್ಕಳನ್ನು ಶಾಲೆಗೆ ಸೇರಿಸದಿರುವ ಸಂಸ್ಥೆ, ಇವರು ಖಾಸಗಿ ಶಾಲೆಯನ್ನು ಸರ್ಕಾರಿ ಶಾಲೆಗಳು ಅನುದಾನ, ಸಹಾಯವನ್ನು ರಿಜಿಸ್ಟ್ರಾರ್ ಜನರಲ್ ಆಫ್ ಪಂಚಾಯತ್ ಇವರು ರದ್ದುಗೊಳಿಸುತ್ತಿದ್ದರು. ಸರ್ಕಾರ ಅಂತಹ ಶಾಲೆಗಳಿಗೆ ಸೌಲಭ್ಯ ಮಾನ್ಯತೆ ನೀಡುತ್ತಿರಲಿಲ್ಲ. ಪಠ್ಯಪುಸ್ತಕಗಳು, ಇತರ ಸಾಮಾಗ್ರಿಗಳನ್ನು ಸರ್ಕಾರ ಕೊಡುತ್ತಿ ರಲಿಲ್ಲ. ಶಿಕ್ಷಣದ ವ್ಯವಸ್ಥೆ ‘ಸ್ಥಾಯಿ ಸಮಿತಿ’ಗಳನ್ನು ನೇಮಿಸಿಕೊಳ್ಳಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ೧೮೫೪ರಲ್ಲಿ ಆರಂಭವಾದ ಪೌರಾತ್ಯ ಶಿಕ್ಷಣ ಶಾಲೆಗಳು, ೧೮೬೯ರಲ್ಲಿ ವಿದ್ಯಾಭ್ಯಾಸ ಇಲಾಖೆ ಸ್ಥಾಪನೆ ನಂತರ ಡೈರೆಕ್ಟರ್ ಆಫ್ ಪಬ್ಲಿಕ್ ಇನ್ಸ್ಟ್ರಕ್ಷನ್ ಹುದ್ದೆ ಸೃಷ್ಟಿಯಾಯಿತು. ೧೮೭೪ರ ಡೆಪ್ಯುಟಿ ಇನ್ಸ್‌ಪೆಕ್ಟರ್‌ಗಳನ್ನು ಪ್ರತಿ ಜಿಲ್ಲೆಗಳಲ್ಲಿ ನೇಮಿಸಲಾಯಿತು. ೧೮೮೭ರಲ್ಲಿ ಕಾನ್ವೆಂಟ್‌ಗಳು ಪ್ರಾರಂಭವಾದವು. ೧೮೯೦ ರಲ್ಲಿ ಪ್ರಾಥಮಿಕ ಶಾಲೆಗಳ ಆರಂಭ, ಈ ರೀತಿಯಾಗಿ ೧೯೪೭ರವರೆಗೆ ವಿವಿಧ ಹಂತಗಳಲ್ಲಿ ಶಿಕ್ಷಣಮಟ್ಟ ಸುಧಾರಿಸಿಕೊಂಡು ಬಂದಿತೆನ್ನಬಹುದು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಜಿಲ್ಲಾ ಬೋರ್ಡಿನ ಕೆಳೆಗೆ ನಡೆಯುತ್ತಿದ್ದವು. ೧೯೪೫-೪೬ರಲ್ಲಿ ೪೩೩ ಪ್ರಾಥಮಿಕ ಶಾಲೆಗಳಿ ದ್ದವು. ಮಾಧ್ಯಮಿಕ ಶಿಕ್ಷಣವನ್ನು ಹರಪನಹಳ್ಳಿ, ರಾಯದುರ್ಗ, ಎಮ್ಮಿಗನೂರು, ಕೊಟ್ಟೂರು, ಕಂಪ್ಲಿ, ಹಡಗಲಿ, ಕೂಡ್ಲಿಗಿ, ಆಲೂರು, ಕೋಸಗಿ, ಸಿರುಗುಪ್ಪ, ಸೊಂಡೂರುಗಳಲ್ಲಿ ಕೊಡುತ್ತಿದ್ದರು. ಸ್ವಾತಂತ್ರ್ಯದ ಸಂದರ್ಭದಲ್ಲಿ ಸುಮಾರು ೧೧ ಪ್ರೌಢಶಾಲೆಗಳು ಈ ಭಾಗದಲ್ಲಿ ಸ್ಥಾಪನೆಯಾದವು.

ಹರಿಜನರಿಗೆ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸಿ ಶಿಕ್ಷಣಕ್ಕೆ ಸರ್ಕಾರ ಪ್ರೋತ್ಸಾಹಿಸಿತು.

ಸ್ತ್ರೀ ವಿದ್ಯಾಭ್ಯಾಸ

ವಿಜಯನಗರೋತ್ತರದಲ್ಲಿ ಉನ್ನತ ವರ್ಗದ ಕೆಲವೇ ಕೆಲವು ಸ್ತ್ರೀಯರು ವಿದ್ಯಾಭ್ಯಾಸ ಮಾಡುತ್ತಿದ್ದರು. ವಿಜಯನಗರದ ಉತ್ಕೃಷ್ಟ ಕಾಲದಲ್ಲಿ ಸಹಾ ಮಹಿಳೆಯರು ಲೆಕ್ಕ ಬರೆಯಲು, ಪರಿಶೋಧಿಸಲು ನೇಮಕಗೊಳ್ಳುತ್ತಿದ್ದರು. ಸಂಪ್ರದಾಯಸ್ಥ ಕುಟುಂಬಗಳಲ್ಲಿ ಮಹಿಳೆಗೆ ಪ್ರಧಾನ ಸ್ಥಾನ ಕೊಟ್ಟಿದ್ದರು. ಕೆಲವು ಹಕ್ಕುಗಳಿಂದ ಹತ್ತೊಂಬತ್ತನೇ ಶತಮಾನದಲ್ಲಿ ಸ್ತ್ರೀ ವಂಚಿತಳಾಗಿದ್ದಳು.

ಆಂಗ್ಲರು ಆಗಮಿಸಿದಾಗ ಬಾಲಕೀಯರಿಗೆ ಪ್ರತ್ಯೇಕ ಶಾಲೆಗಳನ್ನು ಪ್ರಾರಂಭಿಸಿದರು. ಅವು ಧರ್ಮವನ್ನು ಪ್ರತಿನಿಧಿಸುತ್ತಿದ್ದವು. ಹಾಗಾಗಿ ನಿರ್ಮಲ ಶಿಕ್ಷಣ ಸ್ವಾತಂತ್ರೋತ್ತರದಲ್ಲಿ ಕಡಿಮೆಯೇ ಎನ್ನಬಹುದು. ಬ್ರಿಟಿಷರ ಕಾಲದಲ್ಲಿ ಸ್ತ್ರೀ ಶಿಕ್ಷಣಕ್ಕೆ ಮಹತ್ವ ಇರಲಿಲ್ಲ. ವ್ಯಾಪಾರಿ ಮನೋಭಾವದಿಂದ ಪದವಿಗಳನ್ನು ಗೌರವಿಸುತ್ತಿದ್ದರು. ಆದರೆ ನಿಜವಾದ ಮೌಲ್ಯದಿಂದಲ್ಲ ಎಂದು ಹೇಳಲಾಗುತ್ತದೆ.

೧೮೫೦ರ ದಶಕದಲ್ಲಿ ಪ್ರತ್ಯೇಕವಾಗಿ ಸ್ತ್ರೀ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡಲು ಶೈಕ್ಷಣಿಕ ಸಮಿತಿಯನ್ನು ನೇಮಿಸಿದರು. ೧೮೫೭ರ ರಾಜಕೀಯ ವಿಪ್ಲವದಿಂದ ಅವರ ಸಾರ್ವಭೌಮತ್ವಕ್ಕೆ ಅಡ್ಡಿಯಾಯಿತು. ೧೮೮೨ರಲ್ಲಿ ಸ್ತ್ರೀ ವಿದ್ಯಾಭ್ಯಾಸಕ್ಕೆ (ಸಂಪ್ರದಾಯಕ್ಕೆ) ಹಂಟರ್ ಆಯೋಗ ದಿಂದ ಲಾಭವಾಯಿತು. ೧೮೬೯-೧೮೮೨ರಲ್ಲಿ ಲಹೋರ್ (ಪಂಜಾಬ್)ಗಳ ವಿಶ್ವವಿದ್ಯಾಲಯ ಗಳ ಸ್ಥಾಪನೆಯಾದಾಗ ಇಲ್ಲಿ ಬೇಡಿಕೆ ಜಾಸ್ತಿಯಾಯಿತು. ೧೯೦೧ರ ಜನಗಣತಿ ಪ್ರಕಾರ ೧೦೦೦ ಪುರುಷರಲ್ಲಿ ೯೮ ಜನರಿಗೆ ಓದು, ಬರಹ ಬರುತ್ತಿತ್ತು. ೧೦೦೦ ಸ್ತ್ರೀಯರಲ್ಲಿ ಓದು, ಬರಹ ಕಲಿತ ೭ ಜನರಿದ್ದರು. ಉತ್ತರ ಕರ್ನಾಟಕ ವೀರಶೈವ ಮತ್ತು ಬ್ರಾಹ್ಮಣರು ಕಟ್ಟಾ ಸಂಪ್ರದಾಯದಿಂದ ಸ್ತ್ರೀ ಶಿಕ್ಷಣಕ್ಕೆ ಆದ್ಯತೆ ದೊರೆಯಲಿಲ್ಲ.  ಈ ಸಮುದಾಯದ ಕೆಲವು ಶ್ರೀಮಂತರು ಮತ್ತು ಸುಶಿಕ್ಷಿತರು ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹ ಈ ಭಾಗದಲ್ಲಿದ್ದ ಜನತೆಯಲ್ಲಿನ ನಂಬಿಕೆಗಳಿಂದ ಸಮಾಜ ಅವ್ಯವಸ್ಥೆ ಇದ್ದಲ್ಲಿ ಸ್ತ್ರೀಯರಿಗೆ ವಿದ್ಯೆ ಲಭ್ಯವಿರಲಿಲ್ಲ. ಆಂಧ್ರದಿಂದ ವಲಸೆ ಬಂದ ಕೆಲವು ರೆಡ್ಡಿಗಳು, ನಾಯ್ಡುಗಳು ಶ್ರಮ ಪಡದೇ ಬೌದ್ದಿಕತೆಯಿಂದ ಇಲ್ಲಿನ ಲಾಭ ಪಡೆದರು. ಇವರಿಂದ ಇಲ್ಲಿನ ಸಾಮಾಜಿಕ ಪರಿಸರ ಹದಗೆಟ್ಟಿತು. ಆಂಧ್ರದಿಂದ ವಲಸೆ ಬಂದ ರೆಡ್ಡಿ ಸ್ತ್ರೀಯರು ಅವಿದ್ಯಾವಂತರಾಗಿದ್ದು ಇತರ ಸಮಾಜದ ಸ್ತ್ರೀಯರನ್ನು ಪರಿವರ್ತನೆಗೊಳಿಸಿ ಕೆಟ್ಟ ಸಂಪ್ರದಾಯಕ್ಕೆ ಒತ್ತಾಯಿಸಿದರು.  ಈಸ್ಟ್ ಗೋದಾವರಿ, ಕಡಪಾ, ರಾಜಮಂಡ್ರಿ ಮೊದಲಾದ ಭಾಗಗಳಿಂದ ಬಂದ ಸುಂದರ, ನೀಳವಾದ ಮೈಕಟ್ಟಿನ ಸ್ತ್ರೀಯರು ವಿಜಯನಗರ ಮತ್ತು ಅನಂತರ ಕಾಲದಲ್ಲಿ ನೃತ್ಯ, ನಾಟಕ, ದೇವದಾಸಿ ಹಾಗೂ ವೇಶ್ಯಾವಾಟಿಕೆ ನಡೆಸಲು ಹಿಂಜರಿಯುತ್ತಿರಲಿಲ್ಲ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಾರೆ. ಹಾಗೂ ಸ್ಥಳೀಯ ಮಹಿಳೆಯರು ಕೂಲಿ, ಕರಕುಶಲ ಕಸುಬುಗಳಿಗೆ ತೊಡಗಿದರು.

ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಶೈಕ್ಷಣಿಕ ಪ್ರಗತಿ ನೋಡುವುದಾದರೆ, ಬಳ್ಳಾರಿ ಭಾಗ, ಪಶ್ಚಿಮ, ದಕ್ಷಿಣ ಭಾಗದಲ್ಲಿ ಸುಧಾರಿಸಿತ್ತು. ೧೯೪೭ರವರೆಗೆ ಈ ಭಾಗದಲ್ಲಿ ಮಹಿಳೆಯರು ಕೇವಲ ಆರು ಜನ ವಿದ್ಯಾವಂತರಾಗಿದ್ದರು. ಅವರ ಹೆಸರುಗಳು ಸ್ವಾತಂತ್ರ್ಯ ಹೋರಾಟ ಮತ್ತು ಕಲೆಕ್ಟರುಗಳು ಎಂಬ ಅಧ್ಯಾಯದಲ್ಲಿವೆ. ಸ್ತ್ರೀ ವಿದ್ಯಾಭ್ಯಾಸಕ್ಕೆ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ಸ್ವಾತಂತ್ರ್ಯದ ನಂತರವೆನ್ನಬಹುದು.

ಭಾರತಾಂಗ್ಲ ವಾಸ್ತುಶಿಲ್ಪ

ಭಾರತದ ಸಂಸ್ಕೃತಿ, ವಿದೇಶಗಳ ಮೇಲೆ ಪ್ರಭಾವ ಬೀರಿರುವಂತೆ, ವಿದೇಶಿಯರ ಕಲೆ ಮತ್ತು ವಾಸ್ತುಶಿಲ್ಪ, ಸಂಸ್ಕೃತಿ, ಪ್ರತ್ಯೇಕ ಮತ್ತು ಪರೋಕ್ಷವಾಗಿ ಭಾರತದ ಮೇಲೆ ಪ್ರಭಾವ ಬೀರಿದೆ. ಮೊದಲಿನಿಂದಲೂ ಭಾರತದಲ್ಲಿ ಪ್ರಮುಖವಾಗಿ ಮೂರು ವಾಸ್ತುಶಿಲ್ಪ ಶೈಲಿಗಳಿದ್ದವು. ನಾಗರ, ದ್ರಾವಿಡ ಮತ್ತು ವೇಸರ ಎಂದು. ಇವುಗಳು ಹಿಂದೂ ವಾಸ್ತುಶಿಲ್ಪ ಶೈಲಿಯ ಮಾದರಿಗಳೆನ್ನಬಹುದು. ಅನಂತರ ಬಂದಂತ ಮುಸ್ಲಿಮರು ತಮ್ಮದೇ ಆದ ವಾಸ್ತುಶಿಲ್ಪ ಶೈಲಿಯನ್ನು ಭಾರತದೆಲ್ಲೆಡೆ ಹರಡಿದರು. ಮುಖ್ಯವಾಗಿ ಟ್ರಾಬಿಯೆಟ್, ಆರ್ಕುಯೆಟ್ ಮತ್ತು ಕಾರ್ಬಲ್ಡ್ ವಿಧಾನವನ್ನು ಅನುಸರಿಸಿ ಮಸೀದಿ, ಗೋರಿ, ಮಿನಾರ್‌ಗಳನ್ನು ಕಟ್ಟಿಸಿದರು. ಕೊನೆಯಲ್ಲಿ ಬಂದ ಆಂಗ್ಲರು ತಮ್ಮ ವಾಸದ ಗೃಹಗಳನ್ನು ಕಚೇರಿಗಳನ್ನು, ಸಾರ್ವಜನಿಕ ಗೃಹಗಳು ಪ್ರವಾಸಿಮಂದಿರ, ಧರ್ಮಛತ್ರ, ಆಡಳಿತ ಕಟ್ಟಡಗಳನ್ನು ಭಾರತಾಂಗ್ಲ ಶೈಲಿಯಿಂದ ನಿರ್ಮಿಸಿದರು. ನಂತರ ರಕ್ಷಣೆ, ನಿರ್ಮಾಣ, ಪರಿಹಾರ ಕಾಮಗಾರಿ ಯೋಜನೆಗಳನ್ನು ಕೈಗೊಂಡರು. ರಕ್ಷಣೆಯಲ್ಲಿ ದೇವಾಲಯಗಳು ಮತ್ತು ಗೋಪುರಗಳು, ಕೆರೆ, ಕಾಲುವೆಗಳು, ಸೆರೆಮನೆ, ಬಂದಿಖಾನೆಗಳನ್ನು ನಿರ್ಮಿಸಿದರು. ಕ್ಷಾಮ, ಬರಗಾಲ ಬಂದಾಗ ಕೆರೆಯಲ್ಲಿ ಹೂಳೆತ್ತುವುದು, ರಸ್ತೆಗಳ ಕಾಮಗಾರಿಗಳಿಗೆ ಹಣ ವಿನಿಯೋಗಿಸುತ್ತಿದ್ದರು.

ಭಾರತದಲ್ಲಿ ಆಡಳಿತ ಕೇಂದ್ರಗಳನ್ನು ಸ್ಥಾಪಿಸಿಕೊಂಡ ಆಂಗ್ಲರು ರಾಜಧಾನಿ ಮತ್ತು ಪಟ್ಟಣದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ಮಾರಕಗಳನ್ನು ನಿರ್ಮಿಸುತ್ತಿದ್ದರು. ಉದಾ. ರೋಮನ್ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಚರ್ಚ್‌ಗಳು, ಶಾಲೆ ಕಟ್ಟಡಗಳು ಇತ್ಯಾದಿ. ಬಳ್ಳಾರಿಯ ದಂಡುಪ್ರದೇಶ ಆಡಳಿತ ಕಟ್ಟಡಗಳು, ಧಾರ್ಮಿಕ ಮಂದಿರ, ಇತರ ಸ್ಮಾರಕಗಳನ್ನು ನೋಡಬಹುದು. ಇವು ಲಂಡನ್ನಿನ ಡಿಕನ್‌ಸನ್ ಮಹಾದ್ವಾರ, ಮನೆ, ವಸ್ತುಸಂಗ್ರಹಾಲಯ ದಂತಿವೆ. ಯುರೋಪಿನ ಪುರಾತನ ಶೈಲಿ ಮತ್ತು ದೇಸಿಯ ಶೈಲಿಯನ್ನು ಮಿಶ್ರ ಮಾಡಿದ ವಾಸ್ತುಶೈಲಿಯು ಪ್ರಚಲಿತಕ್ಕೆ ಬರಲು ಆಂಗ್ಲರು ಕಾರಣರು. ಗ್ರೀಕ್ ಮತ್ತು ರೋಮಿನ ಪುರಾತನ ಕಟ್ಟಡಗಳನ್ನು ಇವು ಹೋಲುವಂತವುಗಳಾಗಿವೆ. ಭಾರತದಡೆಯಲ್ಲಿ ಪಾಶ್ಚಾತ್ಯರು ತಂದ ಶೈಲಿಯನ್ನು ‘ಗಾಥಿಕ್’ ಎಂದು ಕರೆದರು. ರೋಮನ್ನರ ಅನುಕರಣ ರೂಪವಾದ ಪುನರುಜ್ಜೀವನ ಶೈಲಿಯಲ್ಲಿ ಕಟ್ಟಡಗಳು ನಿರ್ಮಾಣಗೊಂಡವು. ಇವರು ಬಳಸಿದ ‘ಪೂರ್ಣ ದೇಸಿಯ ಶೈಲಿ ಅಲ್ಲದೆ, ಸಂಪೂರ್ಣ ಮಹಮ್ಮದೀಯ ಶೈಲಿಯಲ್ಲಾಗಲೀ ಕಟ್ಟಡಗಳನ್ನು ಕಟ್ಟುವುದು ಧರ್ಮಬಾಹಿರವೆಂದು ನಂಬಿಕೊಂಡು, ಇವೆಲ್ಲವನ್ನು ಒಳಗೊಂಡ ಮಿಶ್ರಶೈಲಿ ಬಳಕೆಗೆ ತಂದರು. ಅದನ್ನು ‘ಆಧುನಿಕ ಶೈಲಿ’ ಎಂದು ಕರೆದರು.[3] ಇವರು ಆಳ್ವಿಕೆ ನಡೆಸಿದ ದೇಸಿಯ ಸಂಸ್ಥಾನಗಳಲ್ಲಿ ಈ ವಾಸ್ತುಶಿಲ್ಪ ಪ್ರಾರಂಭವಾಯಿತು. ಉದಾ. ಬೆಂಗಳೂರಿನ ನ್ಯಾಷನಲ್ ಕಾಲೇಜು, ಅಠಾರಾ ಕಚೇರಿ, ಬಳ್ಳಾರಿಯಲ್ಲಿರುವ ಆಡಳಿತ ಕಟ್ಟಡಗಳು ಉತ್ತಮ ಉದಾಹರಣೆಗಳಾಗಿವೆ. ಅವರು ಕಟ್ಟಿಸಿದ ಕಟ್ಟಡಗಳಲ್ಲಿ ಇಂದು ಜಿಲ್ಲಾಧಿಕಾರಿ, ಖಜಾನೆ, ಪೊಲೀಸ್ ಠಾಣೆ, ಅಂಚೆ, ತಾಲ್ಲೂಕು ಕಚೇರಿಗಳಿದ್ದು, ಬಳ್ಳಾರಿಯಲ್ಲಿರುವ ಸುಮಾರು ಕಟ್ಟಡಗಳನ್ನು ಆಂಗ್ಲರು ನಿರ್ಮಾಣ ಮಾಡಿದ್ದರು.

ಎಂ.ವಿ. ಕೃಷ್ಣರಾವ್ ಮತ್ತು ಕೇಶವಭಟ್ಟರು, ಡಾ. ರಂಗಾಚಾರ್ಯರು ಬ್ರಿಟಿಷರ ಕಟ್ಟಡಗಳ ಬಗೆಗೆ ಹೇಳಿರುವ ಮಾತನ್ನು ಪುನಃ ಇಲ್ಲಿ ಉಲ್ಲೇಖಿಸಬಹುದು. “ಬ್ರಿಟೀಷರ ಕಾಲದ ಕಟ್ಟಡಗಳೂ ಮೂಕ ಜಡವಸ್ತುಗಳು, ಅವು ಧ್ವನಿಪೂರ್ಣವಾಗಿಲ್ಲ. ರೋಮಾಂಚನ ಕಾರಿ ಘಟನೆಯ, ಸ್ಮಾರಕಗಳಂತೆ, ನಮ್ಮ ಜನಮನದ ಹೃದಯವನ್ನು ಅವು ಮೂದಲಿಸು ವುದಿಲ್ಲ”.[4] ಇಂದಿಗೂ ನಮ್ಮ ಜನಪದರು ಕಟ್ಟಡಗಳನ್ನು ಕುರಿತಂತೆ ಲಾವಣಿ, ಜನಪದ ಗೀತೆ, ಕಟ್ಟಿಹಾಡಿರುವುದುಂಟು. ಆಂಗ್ಲರು ವಾಸ್ತುಶಿಲ್ಪಕ್ಕೆ ಸ್ಥಳೀಯವಾದ ಕಲ್ಲನ್ನು ಉಪಯೋಗಿಸಿ ಅತ್ಯಂತ ಸರಳ, ಸುಂದರತೆಯಿಂದ ನಿರ್ಮಿಸಿದರು. ಮಹತ್ತರ ಸ್ವರೂಪಕ್ಕೆ ಹೊರತಾಗಿದ್ದರೂ ಸಂಕೀರ್ಣತೆಗೆ ಧಕ್ಕೆ ಬಂದಿಲ್ಲವೆನ್ನುವುದು ದಿಟ. ಅವರ ವಾಸ್ತುಶಿಲ್ಪದ ಪರಂಪರೆಯಲ್ಲಿ ಮಹಾಸಾಧನೆಗೆ ಮರುಪ್ರಶ್ನೆಯೇ ಇಲ್ಲವೆಂದೇ ಹೇಳಬಹುದು. ಬ್ರಿಟಿಷ್ ಪರಂಪರೆಯಲ್ಲಿ ನಿರ್ಮಿತವಾದ ಕಟ್ಟಡಗಳ ವಿನ್ಯಾಸಗಳು ನಿರ್ಮಾಪಕನ ಹುಚ್ಚು ಮನಸ್ಸಿನ ಹತ್ತು ಮುಖಗಳೇ ಹೊರತು ಯಾವ ನಿರ್ದಿಷ್ಟ ಶಾಸ್ತ್ರ ನಿಯಮಕ್ಕೆ ಅವು ಹೊಂದಿಕೆಯಾಗು ವುದಿಲ್ಲ.[5] ಹಾಗಾಗಿ ಆಂಗ್ಲರ ಸಂಸ್ಕೃತಿಗೆ, ಅವರ ಭಾವನೆಗೆ ಹಗುರವಾಗಿದ್ದರೂ, ಭಾರತೀ ಯರಿಗೆ ವಿಶಿಷ್ಟವಾಗಿ, ಮತ್ತೊಂದು ಸಂಸ್ಕೃತಿಯ ಒತ್ತಡದ ಪ್ರತೀಕವಾಗಿ ಒತ್ತು ನೀಡುತ್ತವೆನ್ನ ಬಹುದು. ಆಂಗ್ಲರ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟ ಕಟ್ಟಡಗಳು ಅವರ ಇಡೀ ನಾಗರೀಕತೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ಸಫಲತೆ ಕಾಣುತ್ತದೆ. ಭಾರತದ ಕಚ್ಚಾ ವಸ್ತು ಆಂಗ್ಲರ ತಾಂತ್ರಿಕ ಜ್ಞಾನದ ಮೂಲಕ “ಕಲಾ ಸೌಧವೇ” ನಿರ್ಮಿಸಿದಂತಾಯಿತು. ಈ ರೀತಿ ವಾಸ್ತು ಬ್ರಿಟಿಷರ ಆಳ್ವಿಕೆಗೊಳಪಟ್ಟು ಇತರ ಪ್ರದೇಶಗಳಲ್ಲಿದೆ. ಭವ್ಯಸೌಧಗಳು, ಶಾಲೆ, ಲೌಕಿಕ ಜೀವನ ಪರಿಚಯಿಸಿದ ಸಾಧಾರಣ ಶೈಲಿ ಅಳವಡಿಸಲಾಗಿದೆ. ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅವರ ಎಲ್ಲಾ ಕಟ್ಟಡಗಳು ಅಂದಿನ ಚರಿತ್ರೆ ತಿಳಿಸುವುದರ ಜೊತೆಗೆ ಪ್ರೇರಣೆ ಸಂಕೇತಗಳಾಗಿ ಚಿರಸ್ಮರಣೀಯವಾಗಿವೆ. ೧೯೫೦ರ ದಶಕಕ್ಕೆ ೨೦ ಲಕ್ಷ ರೂ. ಬೆಲೆ ಬಾಳುವ ಕಟ್ಟಡಗಳು ಬಳ್ಳಾರಿಯಲ್ಲಿದ್ದವು. ಜಿಲ್ಲಾ ಜೈಲು, ಸೆಂಟ್ರಲ್ ಜೈಲು, ಬೋಸ್ಟನ್ ಜೈಲುಗಳನ್ನೊಳಗೊಂಡು ನಾಲ್ಕು ಜೈಲುಗಳೂ, ೩೦೦ ಹಾಸಿಗೆಗಳುಳ್ಳ ಕ್ಷಯರೋಗಿಗಳ ಆರೋಗ್ಯಧಾಮ, ರಾಯಲಸೀಮಾ ಪಾಲಿಟೆಕ್ನಿಕ್ ಮತ್ತು ಪ್ರಾದೇಶಿಕ ಕಚೇರಿ ಕಟ್ಟಡಗಳು ಇಲ್ಲಿದ್ದವು.

ಈ ಭಾಗದಲ್ಲಿ ಬೆಳೆದುಬಂದ ವಾಸ್ತುಶಿಲ್ಪ ಅವರ ಧರ್ಮ, ಸಂಸ್ಕೃತಿ, ಕಲಾಭಿರುಚಿ ಮತ್ತು ಸಂಪ್ರದಾಯವನ್ನು ಅವಲಂಬಿಸಿದೆ. ಅವರು ವಾಸ್ತುಕಲೆಯನ್ನು ಧರ್ಮ ಪ್ರಸಾರಕ್ಕಾಗಿ ಧಾರ್ಮಿಕ ಕಟ್ಟಡಗಳನ್ನು ಕಟ್ಟಲಾರಂಭಿಸಿದರು. ಇವುಗಳನ್ನು ಗಾಥಿಕ್ ಶೈಲಿಯ ಕಟ್ಟಡಗಳಂತೆ ಕಟ್ಟಿದ್ದಾರೆ. ಚರ್ಚ್‌ಗಳು ಮುಖ್ಯವಾಗಿ ಧಾರ್ಮಿಕ ಕಟ್ಟಡಗಳಾಗಿದ್ದು, ಗ್ರೀಕ್-ರೋಮನ್, ಬೆಸಲಿಕನ್ ಶೈಲಿಯ ಚರ್ಚ್‌ಗಳು ಸ್ಥಾಪನೆಗೊಂಡವು. ಈ ಮೇಲಿನ ಶೈಲಿಯ ತದ್ರೂಪವೇ ರೆನೆಸಾನ್ಸ್ ಶೈಲಿ, ಅನಂತರ ನವ್ಯಶೈಲಿಯ ಬೆಳವಣಿಗೆಗೆ ಕಾರಣವಾಯಿತು.

ಕಲೆಕ್ಟರುಗಳು ನಿರ್ಮಿಸಿದ ಚರ್ಚ್ ವಾಸ್ತುಶಿಲ್ಪದಲ್ಲಿ ವಿಶಾಲವಾದ ಒಳಸಭಾಂಗಣ, ಮಧ್ಯಾಂಗಣ ಹಾಗೂ ಇಕ್ಕೆಲದ ಹಜಾರಗಳನ್ನು ಹೊಂದಿ ಮಧ್ಯಭಾಗದಲ್ಲಿ ಗೋಳ ವಿಸ್ತಾರವಾಗಿರುತ್ತದೆ. ಚರ್ಚ್‌ನ ಹಿಂಬದಿಗೆ ‘ಜಾನ್ಸಲ್’ ಭಾಗವು ಪೂರ್ವಕ್ಕಿದ್ದು, ಹಿಂಬದಿಗೆ ‘ಆ್ಯಪ್ಸ್’ ಗಜಪೃಷ್ಠಾಕಾರವಾಗಿರುತ್ತದೆ. ಚರ್ಚಿನ ತಲವಿನ್ಯಾಸದ ಕ್ರೈಸ್ತ ಶಿಲುಬೆಯಾಕಾರ ದಲ್ಲಿರುತ್ತದೆ. ಚರ್ಚಿನಲ್ಲಿ ವೇದಿಗೆ ಇದ್ದು, ದೇವಕೋಷ್ಠಗಳಲ್ಲಿರುವ ಕ್ರೈಸ್ತ ಪ್ರತಿಮೆಗಳು ಸುತ್ತಲೂ ಗೋಚರಿಸುತ್ತವೆ. ಐರೋಪ್ಯ ಶೈಲಿಯ ಚರ್ಚು ಮೇಲ್ನೋಟಕ್ಕೆ ಎತ್ತರವಾಗಿದ್ದು, ನಿಲುವಿನ ಸುಂದರ ಕಟ್ಟಡವಾಗಿ ಗಾಥಿಕ್ ಶೈಲಿಯ ಮೊನಚು ಶಿಖರಗಳಿರುತ್ತವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬಳ್ಳಾರಿಗಳಲ್ಲಿ ೨೭ ಕ್ರೈಸ್ತ ದೇವಾಲಯಗಳಿದ್ದು, ಬಳ್ಳಾರಿಯ ಕೆಳಕೋಟೆ ಪ್ರದೇಶದಲ್ಲಿ ೧೮೧೧ರಲ್ಲಿ ಟ್ರಿನಟಿ ನಿರ್ಮಾಣವಾಯಿತು. ಕರ್ನಾಟಕದ ಗ್ರಾಮಾಂತರ ರೂಪವಾಗಲಿ, ವೈಭವವಾಗಲಿ ಇಲ್ಲಿ ಕಂಡುಬರುವುದಿಲ್ಲ.[6] ಹಾಗಾಗಿ ಇವು ಸರಳ, ಸುಂದರವಾಗಿದ್ದು, ಪ್ರಾದೇಶಿಕ ಕಚ್ಚಾವಸ್ತುಗಳಿಂದ ಅಲಂಕೃತಗೊಂಡಿವೆ.

ಆಂಗ್ಲರು ಬಳಕೆಗೆ ತಂದ ವಾಸ್ತುಶೈಲಿಯ ಕಟ್ಟಡಗಳನ್ನು ಮೂರು ಭಾಗಗಳಾಗಿ ವಿಂಗಡಿಸ ಬಹುದು. ಸೈನಿಕರ ಕಟ್ಟಡಗಳು, ಆಡಳಿತ ಕಟ್ಟಡಗಳು ಮತ್ತು ಛತ್ರಗಳು ಹಾಗೂ ಪ್ರವಾಸಿ ಬಂಗಲೆಗಳು.

ಸೈನಿಕ ಕಟ್ಟಡಗಳು

ಬಳ್ಳಾರಿಯ ದಂಡುಪ್ರದೇಶದಲ್ಲಿ ಕಲೆಕ್ಟರುಗಳ ಕಾಲದಲ್ಲಿ ನಿರ್ಮಿಸಿದ ಸೈನಿಕ ಗೃಹಗಳು, ಅಪಾರ ಮೆಚ್ಚುಗೆ ಪಡೆದಿವೆ. ಇವರು ಅರಮನೆಗಳನ್ನು ಕಟ್ಟಿಸದಿದ್ದರೂ ಅದಕ್ಕೆ ಸಮನಾದ ತಮ್ಮ ಶೈಲಿಯ ಕಟ್ಟಡಗಳನ್ನು ನಿರ್ಮಿಸಿರುವುದುಂಟು. ಇವು ಇಂದು ಸುಸ್ಥಿತಿಯಲ್ಲಿದ್ದು, ಆಡಳಿತ, ಶಿಕ್ಷಣ ಇತರ ಸಾರ್ವಜನಿಕ ಕೆಲಸಗಳಿಗೆ ಬಳಕೆಯಾಗಿವೆ.

ಈ ಕಟ್ಟಡಗಳಿಗೆ ಉತ್ತಮ ಉದಾಹರಣೆ ಬೆಂಗಳೂರು ರೈಲ್ವೆ ನಿಲ್ದಾಣ ಬಳಿಯಿರುವ ಐರೋಪ್ಯ ಶೈಲಿಯ ಅರಮನೆ, ಬಳ್ಳಾರಿಯಲ್ಲಿ ಸೈನಿಕ ನೆಲೆಬೀಡುವಲ್ಲಿ ಐರೋಪ್ಯ ಶೈಲಿಯ ವಾಸ್ತು,  ಶಿಲ್ಪಕಲೆ, ಸೈನಿಕರ ಬ್ಯಾರಕ್ಸ್, ಕ್ಲಬ್ಬು, ಪೆವಿಲಿಯನ್ಸ, ಸೈನಿಕರ ವಸತಿ ಗೃಹಗಳಲ್ಲಿ ಕಂಡುಬಂದಿವೆ. ಇಲ್ಲಿರುವ ದಂಡುಪ್ರದೇಶ ವಿಶಾಲವಾಗಿದ್ದು, ಅದರಲ್ಲಿ ಅಲ್ಲೀಪುರ ಜೈಲು (ಈಗಿನ ವೈದ್ಯಕೀಯ ಕಾಲೇಜು) ಸೈನಿಕರ ವಸತಿ ಗೃಹಗಳು, ಎಲ್ಲಾ ಸೌಕರ್ಯಗಳನ್ನು ಪಡೆದುಕೊಂಡಿದ್ದವು. ಅಲ್ಲಿ ಫಿರಂಗಿಗಳು, ಬಂದೂಕು, ಶಿರಸ್ತ್ರಾಣಗಳು ಕ್ಷಾತ್ರ ವಾಸ್ತು ಶೈಲಿಯ ವಿಶಿಷ್ಟತೆ ಕಾಣುತ್ತವೆ.

ಆಡಳಿತ ಕಟ್ಟಡಗಳು

ಹತ್ತೊಂಬತ್ತನೆಯ ಶತಮಾನದಲ್ಲಿ ಬೆಳೆದು ಬಂದ ಆಂಗ್ಲ ಶೈಲಿಯ ಕಟ್ಟಡಗಳು ಬಳ್ಳಾರಿಯಲ್ಲಿ ಸಾಕಷ್ಟಿವೆ. ಆಂಗ್ಲ ಇಂಜಿನೀಯರುಗಳು ತಮಗಿಷ್ಟವಾದ ಗಾಥಿಕ್, ರೆನೆಸಾನ್ಸ್, ಅಯೋನಿಕ ಶೈಲಿಗಳನ್ನು ಈ ನಾಡಿನಲ್ಲಿ ಪರಿಚಯಿಸಿದರು. ಐರೋಪ್ಯ ವಾಸ್ತುಶಿಲ್ಪ ವಾಸ್ತವ ವಾಗಿ ಅಲಂಕರಣ ಪ್ರಮಾಣ ಕಡಿಮೆಯಾದರೂ ನೋಡುವ ನೋಟಕ್ಕೆ ಸೊಗಸಾಗಿದೆ. ಇವು ಒಂದೇ ಕಲ್ಲಿನಲ್ಲಿ ಕೆತ್ತಿದಂತೆ ಕಾಣುವ, ಇಟ್ಟಿಗೆ, ಗಾರೆ ಬಳಸಿದ ಕಂಬಗಳು. ಬುಡದಲ್ಲಿ ದಪ್ಪಗಿದ್ದು ಮೇಲೆ ಹೋದಂತೆ ತೆಳುವಾಗಿರುತ್ತವೆ. ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯು ಮೂರು ಕಟ್ಟಡಗಳನ್ನು ಹೊಂದಿದೆ. ಈ ಕಟ್ಟಡಗಳ ನಿರ್ಮಾಣದಲ್ಲಿ ಇಲ್ಲಿನ ಸ್ಥಪತಿಗಳ ಸಾಹಸ, ನಿರ್ಮಾಣದ ಪಾತ್ರಗಳನ್ನು ಮರೆಯುವಂತಿಲ್ಲ.

ಕಟ್ಟಡಗಳಲ್ಲಿ ಕಂಡುಬರುವ ಆಂಗ್ಲ ಮಾದರಿ ಶೈಲಿ ರೋಮನ್ ಕಮಾನುಗಳು, ಕಮಾನು ಸರಣಿಗಳು ಗುಮ್ಮಟ ಮಾದರಿಗೂ ಅಲ್ಲಲ್ಲಿ ಕಂಡುಬರುತ್ತವೆ. ಇವುಗಳಿಗೆ ಇಟ್ಟಿಗೆ, ಜಲ್ಲಿ ಕಲ್ಲಿನ ಗಾರೆ ಇವುಗಳ ಬಳಕೆ ಬಹಳಷ್ಟು ಕಂಡುಬಂದಿವೆ. ೧೯೦೦ರ ನಂತರ ಹೇರಳವಾಗಿ ಸಿಮೆಂಟ್ ಕಾಂಕ್ರಿಟು, ಕಬ್ಬಿಣ ಸರಳುಗಳನ್ನು ಇವುಗಳಿಗೆ ಬಳಸಿದ್ದಾರೆ. ಕಟ್ಟಡಗಳ ಹೊರಮೈ ನಾಜುಕಾಗತೊಡಗಿದೆ. ಕಟ್ಟಡದ ಮುಂಭಾಗಗಳಲ್ಲಿ ಎಲೆ ಮೊನಚಿನಾಕಾರದ, ಮತ್ತು ದುಂಡನೆಯ ಕಮಾನುಗಳನ್ನು ಧಾರಾಳವಾಗಿ ಬಳಸಿದ್ದಾರೆ.[7] ಈ ಶಿಲ್ಪ ರೀತಿಯ ಕಟ್ಟಡಗಳು ಮೈಸೂರು, ಬೆಂಗಳೂರು, ಧಾರವಾಡ ಇತರ ನಗರಗಳಲ್ಲಿ ಕಂಡುಬಂದಿವೆ. ಸಾರ್ವಜನಿಕ ಕಟ್ಟಡಗಳಲ್ಲಿ ಕಂಬಗಳ ಮೇಲೆ ಕಿಟಕಿ, ಬಾಗಿಲು ಮಾವಾಗಳ ಮೇಲೆ ದಾರಾ ದುಂಡು, ಕಮಾನುಗಳಿಂದ ಕೂಡಿದ ರೋಮನಸ್ಕಶೈಲಿ, ಸಾಮಾನ್ಯವಾಗಿ ತಿಳಿದುಬಂದಿವೆ. ಆಂಗ್ಲ ಶೈಲಿಯಲ್ಲೇ ಪ್ರಮುಖವಾದ ಗಾಥಿಕ್ ಶೈಲಿಯ ಅನುಕರಣೆ ಈ ಜಿಲ್ಲೆಯ ಕೋರ್ಟು ಕಚೇರಿಗಳಂಥ ಸಾರ್ವಜನಿಕ ಕಟ್ಟಡಗಳಲ್ಲಿ ಕಾಣಬಹುದು. ಇದೇ ಶೈಲಿಯಲ್ಲಿ ಎತ್ತರವಾಗಿ ಬೆಳೆದು ನಿಂತ ಉಪ್ಪರಿಗೆ ಕಟ್ಟಡಗಳನ್ನು ದೊಡ್ಡ ದೊಡ್ಡ ಮಹಲುಗಳನ್ನು ಈಗಿನ ಸರ್ಕಾರಿ ಕಚೇರಿಗಳು, ಗ್ರಂಥಾಲಯ, ಬೆಂಗಳೂರಿನ ಹಳೇ ಸೆಂಟ್ರಲ್ ಕಾಲೇಜುಗಳನ್ನು ಉದಾಹರಿಸ ಬಹುದು.

ಪುನರುಜ್ಜೀವನ ಶೈಲಿ ಕಟ್ಟಡಗಳ ಮುಖಭಾಗ, ಒಳಾಂಗಣದಲ್ಲಿ ಹೆಚ್ಚಿನ ಪ್ರಭಾವವಿದ್ದು, ಕುಸುರಿ ಕೆಲಸವಿರುತ್ತದೆ. ಅತೀ ಅಲಂಕಾರ ಬಾರೋಕ್ ಹಾಗೂ ನವಿರು ಶೈಲಿಯ ‘ರೊಕೊಕೊ’ ಪ್ರಧಾನ ಪಾತ್ರವಹಿಸಿದೆ. ಇಲ್ಲಿ ಕಟ್ಟಡಗಳ ಹೊರಗಿನ ಅಲಂಕಾರ ಕಿಟಕಿ ಬಾಗಿಲುಗಳು ಗ್ರೀಕೊ ರೋಮನ್ ಶೈಲಿಯಲ್ಲುಂಟು. ಈ ಕಟ್ಟಡಗಳು ಕಲೆಕ್ಟರ್ ಬಂಗಲೆ, ನ್ಯಾಯಾಧೀಶರ ಬಂಗಲೆಗಳಲ್ಲಿ ಹೆಚ್ಚಾಗಿದ್ದು ಬಹುಮಹಡಿ ಕಟ್ಟಡಗಳನ್ನು, ಉದ್ಯಾನವನ, ಮೈದಾನ, ಹೊಂದಿದೆ. ಸಮತಳ, ಲಂಬ, ವಕ್ರ ರೇಖೆಗಳ ಬಗೆಗಿನ ಲಯ, ರೇಖಾ ಲಾಲಿತ್ಯ, ಸ್ಥಂಭ, ಭಿತ್ತಿಗಳ ಅಲಂಕರಣೆ ಕಿಟಕಿ, ಬಾಗಿಲು, ಸ್ತಂಭಗಳ ನಡುವಿನ ಹಿತಮಿತವಾದ ಕೌಶಲ್ಯ ಕಂಡುಬಂದಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಕಂಡುಬಂದಿರುವ ಆಂಗ್ಲ ಕಟ್ಟಡಗಳು ಆಡಳಿತ ಕಟ್ಟಡಗಳು ನ್ಯಾಯಾಲಯ, ವಾಚನಾಲಯ, ಶಾಲಾ ಕಾಲೇಜು ಕಟ್ಟಡಗಳು, ಪ್ರವಾಸಿ ಮಂದಿರಗಳು, ಹೆದ್ದಾರಿಯ ಬಂಗಲೆಗಳು ಆಂಗ್ಲ ಶೈಲಿಯನ್ನು ಅನುಸರಿಸಿವೆ. ಸರ್. ರಿಚಾರ್ಡ್ ಕರ್ನಲ್, ಸಾಂಕಿಯಷ, ಐರೋಪ್ಯ ಇಂಜಿನೀಯರುಗಳು ತಮ್ಮ ಕಚೇರಿಯಲ್ಲಿ ಕುಳಿತು ಆಂಗ್ಲ ಶೈಲಿಯ ವಿನ್ಯಾಸಗಳನ್ನು ಸ್ಥಪತಿಗಳಿಗೆ (ಸ್ಥಳೀಯ) ತೋರಿಸಿಕೊಟ್ಟರು. ಈ ಶೈಲಿ ಈ ಭಾಗದ ನೆಲಗುಣ, ಹವಾಗುಣ, ಪರಿಸರಕ್ಕೆ ಸರಿಯಾಗಿ ಹೊಂದಿಕೊಂಡಿತ್ತು. ಆಂಗ್ಲ ವಾಸ್ತುಕಲೆಯಲ್ಲಿ ಶಿಲ್ಪಕಲೆ ಅಷ್ಟೊಂದು ಕಂಡುಬಂದಿಲ್ಲ. ಅಲ್ಪವಾಗಿ ಕ್ರೈಸ್ತಚರ್ಚು, ಪಾದ್ರಿ, ವಸತಿ ಗೃಹ, ಪ್ರತಿಷ್ಠಿತರ ಮನೆಗಳಲ್ಲಿ ಶಿಲ್ಪಕಲೆ ಬಳಕೆಯಾಗಿದೆ. ಆಂಗ್ಲರ ಎಲ್ಲಾ ಕಲಾ ಸೌಂದರ್ಯವನ್ನು ವೀಕ್ಷಿಸಿದಾಗ ಅವರ ಬೌದ್ದಿಕತೆಗೆ ಪ್ರತಿರೂಪವಾಗಿ (ಸ್ಮಾರಕಗಳು) ಕಟ್ಟಡಗಳು ಕಂಡುಬಂದಿವೆ.

ಭಾರತಾಂಗ್ಲ ವಾಸ್ತುಶಿಲ್ಪ ಕಟ್ಟಡಗಳು

೧. ಕಲೆಕ್ಟರ್‌ರವರ ಕಚೇರಿ (ಜಿಲ್ಲಾ ಖಜಾನೆ ಕಚೆೇರಿ)

೨. ಜಿಲ್ಲಾ ನ್ಯಾಯಾಲಯ

೩. ಮುನ್ಸಿಫ್ ಕೋರ್ಟು

೪. ಅಲ್ಲೀಪುರ ಜೈಲ್ಲು

೫. ಕೇಂದ್ರ ಕಾರಾಗೃಹ

೬. ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ

೭. ಸೈನಿಕರ ವಾಸ ಗೃಹಗಳು

೮. ಶವಾಗಾರ

೯. ರೈಲ್ವೆ ನಿಲ್ದಾಣದ ಕಟ್ಟಡಗಳು

೧೦. ನ್ಯಾಯಾಧೀಶರ ಬಂಗಲೆ

೧೧. ಬಾಲಕೀಯರ ಪಾಠಶಾಲೆ

೧೨. ಕ್ರೈಸ್ತುರಾಜರ ಕಲ್ಯಾಣ ಕೇಂದ್ರ

೧೩. ಕೋಟೆಯಲ್ಲಿನ ಕಟ್ಟಡಗಳು ಎ.ಇ.ಓ. ಕಚೇರಿ

೧೪. ವಾರ್ಡ್ಲಾ ಕಾಲೇಜು

೧೫. ಭೂ ದಾಖಲೆಗಳ ಕಟ್ಟಡ

೧೬. ಗ್ರಂಥಾಲಯ ಕಟ್ಟಡ

೧೭. ಲಂಡನ್ ಮಿಷನ್ ಸ್ಕೂಲ್

೧೮. ಸೈಂಟ್ ಫಿಲೋಮಿನಾ ಸ್ಕೂಲ್

೧೯. ಸಂತ ಜಾನ್ ಸಂಯುಕ್ತ ಪದವಿ ಪೂರ್ವ ಕಾಲೇಜು

೨೦. ಮದ್ದು ತಯಾರಿಸುವ ಘಟಕ

೨೧. ತುರ್ಕಿಸ್ಥಾನದ ಯುವರಾಜನ ಸಮಾಧಿ

೨೨. ಬಂಗಲೆ ನಿವೇಶನ (ಹಾಳು ಬಿದ್ದಿದೆ)

೨೩. ದೇವಸ್ಥಾನ ಆಂಗ್ಲರ ಕಚೇರಿ (ಕೋಟೆ ಒಳಗೆ/ಅಂಚೆ ಕಚೇರಿ)

೨೪. ಬ್ರಿಟಿಷ ಕಾಲದ ಅಶ್ವಗೃಹ

೨೫. ಕಲೆಕ್ಟರ್ ಬಂಗಲೆ

೨೬. ಕಸ್ಮೋಪಾಲಿಟನ್ ಕ್ಲಬ್

೨೭. ಕೂಡ್ಲಿಗಿ  ತಾಲ್ಲೂಕು ಕಚೇರಿ

೨೮. ಮುನ್ಸಿಫ್ ನ್ಯಾಯಾಲಯ

೨೯. ಕೂಡ್ಲಿಗಿ ಪ್ರವಾಸಿ ಮಂದಿರ

೩೦. ಗಾಂಧಿ ಚಿತಾಭಸ್ಮ

೩೧. ಜಿಲ್ಲಾಪಂಚಾಯತ್ ಕಟ್ಟಡ

(ಎಂಟು ತಾಲ್ಲೂಕುಗಳಲ್ಲಿರುವ ತಹಶೀಲ್ದಾರರುಗಳ (ಹಳೇಕಟ್ಟಡ) ಕಚೇರಿಗಳು ಕೋರ್ಟು ಮತ್ತು ಅವರ ವಾಸಗೃಹಗಳು)

೩೨. ೩೫ ಪ್ರವಾಸಿ ಮಂದಿರಗಳು

೩೩. ೬೫ಕ್ಕೂ ಹೆಚ್ಚು ಛತ್ರಗಳು

೧. ಕಲೆಕ್ಟರ್‌ರವರ ಕಚೇರಿ (ಡಿಸಿ) : ಲಂಡನ್‌ನಲ್ಲಿರುವ ಶೈಲಿ ಕಟ್ಟಡಗಳನ್ನು ಹೋಲುವಂತೆ ಈ ಕಟ್ಟಡವಿದೆ. ಕಲ್ಲಿನಿಂದ ಗೋಡೆ ಹಾಗೂ ಮೇಲ್ಛಾವಣಿಗಳು ಪೂರ್ಣಗೊಂಡಿವೆ. ಮಧ್ಯಭಾಗದ ೧ನೇ ಹಂತದಲ್ಲಿ ಕಬ್ಬಿಣ ಸ್ಥಂಬಗಳನ್ನು ನಿಲ್ಲಿಸಲಾಗಿದ್ದು ಅವುಗಳನ್ನು ವಿದೇಶದಿಂದ ರವಾನಿಸಿಕೊಂಡು ಬಳಸಿದ್ದಾರೆ. ಅವುಗಳ ಮೇಲೆ ಬೊಂಬಾಯಿ, ಕಲ್ಕತ್ತ ಮತ್ತು ಮದ್ರಾಸ್‌ನ ಕೆಲವು ಕಂಪನಿಗಳ ಹೆಸರುಗಳು ಸಹಾ ಇವೆ.

ಡಿ.ಸಿ. ಕಚೇರಿ ಮೂರು ಅಂತಸ್ತಿನ ಕಟ್ಟಡವಾದರೂ ಎರಡು ಅಂತಸ್ತುಗಳು ಮಾತ್ರ ಬಳಕೆಯಾಗುತ್ತವೆ. ಮುಖದ್ವಾರಗಳು ಕಮಾನಿನಾಕಾರವಾಗಿವೆ. ಮಧ್ಯಭಾಗದಲ್ಲೇ ಕೀ ಸ್ಟೋನ್ ಬಳಸಿರುವುದರಿಂದ ಕಟ್ಟಡ ಬಿಗಿ, ಭದ್ರತೆಯಿಂದ ಇದೆ. ಇದು ಮುಸ್ಲಿಂ ವಾಸ್ತುಶಿಲ್ಪ ಶೈಲಿಯನ್ನು ಹೋಲುತ್ತದೆ. ಮೇಲಿನ ಕೊನೆ ಹಂತದಲ್ಲಿ ಕೆಂಪು ಕಲ್ಲು ಮತ್ತು ಮಂಗಳೂರಿನ ಹಂಚನ್ನು ಬಳಸಲಾಗಿದೆ. ಸುಂದರವಾಗಿ ನಿರ್ಮಿಸಿದ ಈ ಕಟ್ಟಡದ ನಿರ್ದಿಷ್ಟಕಾಲ, ಕಾರಣ ಕರ್ತೃ ತಿಳಿದುಬಂದಿಲ್ಲ. ಕೆಲವರು ೧೮೫೦ ದಶಕಕ್ಕೂ ಹಿಂದೆ ನಿರ್ಮಿಸಲಾಗಿದ್ದು ಎಂದು ಅಭಿಪ್ರಾಯಿಸಲಾಗಿದೆ. ಕಮಾನಾಕಾರದ ಕಿಟಕಿಗಳಿದ್ದು ಮೇಲ್ಚಾವಣಿಗಳಲ್ಲಿ ಸಣ್ಣ ಗ್ಲಾಸಿನ ಕಿಟಕಿಗಳಿರುವ ಚೌಕಾಕಾರದ ಗೋಪುರದ ರೀತಿಯಲ್ಲಿರುತ್ತವೆ. ಒಟ್ಟು ಮೂರು ಕಟ್ಟಗಳನ್ನೊಳ ಗೊಂಡಿದ್ದು, ಸುಂದರವಾಗಿದೆ.

ವಿಶೇಷವಾಗಿ ಕಲೆಕ್ಟರ್ (ಡಿ.ಸಿ.) ಇತರ ಎಲ್ಲ ಅಧಿಕಾರಿಗಳಿಗಿಂತಲೂ ಉನ್ನತ ಕಟ್ಟಡದ ಮೇಲ್ಭಾಗದಲ್ಲಿರುತ್ತಿದ್ದರು. ತುಂಬಾ ವಿಶಿಷ್ಟವಾಗಿ ನಿರ್ಮಾಣಗೊಂಡಿರುವ ಈ ಕಟ್ಟಡಗಳು ಇತರ ಕಟ್ಟಡಗಳಿಗೆ ಹೋಲಿಸಿದರೆ ವಿಶಿಷ್ಟ ಶೈಲಿ ಹೊಂದಿದೆ. ಈ ಕಟ್ಟಡವನ್ನು ಜಿಲ್ಲಾಧಿಕಾರಿ ಗಳ ಕಚೇರಿ ಮಾಡಿಕೊಂಡು ಎರಡು ನೂರಕ್ಕೂ ಹೆಚ್ಚು ವರ್ಷಗಳ ಕಾಲ ಇಲ್ಲಿ ಆಡಳಿತ ನಡೆಸಿರುವ ಸಾಧ್ಯತೆ ಇದೆ.

೨. ಜಿಲ್ಲಾ ನ್ಯಾಯಾಲಯ : ಎರಡು ಅಂತಸ್ತುಗಳುಳ್ಳ ಬೃಹತ್ ಕಟ್ಟಡ ೧೮೧೬ರ ನಂತರ ನಿರ್ಮಾಣಗೊಂಡಿದೆ ಎಂದು ತಿಳಿದಿದೆ. ಕಟ್ಟಡ ಚೌಕಾಕಾರದಲ್ಲಿದ್ದು, ಮಹಾದ್ವಾರಗಳು ಮೂರು ಇದ್ದು ಕಮಾನಾ ಕೃತಿಯಲ್ಲಿವೆ. ಮೇಲ್ಭಾಗದಲ್ಲಿ ಟ್ರಾಬಿಯೆಟ್ ವಿಧಾನ, ಅಲ್ಲಲ್ಲಿ ಇಸ್ಲಾಂ ವಾಸ್ತುಶಿಲ್ಪ ಶೈಲಿ, ಆಂಗ್ಲ ವಿಧಾನ ಹೇರಳವಾಗಿರುವುದು ಕಂಡುಬಂದಿದೆ.

ಕಬ್ಬಿಣ, ಮಂಗಳೂರಿನ ಹಂಚು, ಕಚ್ಚಾವಸ್ತುಗಳಾದ ಕಲ್ಲು, ಗಾರೆಗಳಿಂದ ನಿರ್ಮಾಣ ಗೊಂಡಿದೆ. ವಾಯುಗುಣಕ್ಕೆ ತಕ್ಕಂತೆ ಕಟ್ಟಡದ ನಿರ್ಮಾಣವಾಗಿದೆ. ಕಲೆಕ್ಟರ್‌ನಿಗೆ ಸಮವಾಗಿ ಇಲ್ಲಿ ನ್ಯಾಯಾಧೀಶ ಆಡಳಿತ ನಡೆಸುತ್ತಿದ್ದನು. ಮೇಲ್ಭಾಗದಲ್ಲಿ ವಿಶಾಲವಾದ ಸಭಾಂಗಣ ವಿದ್ದು, ನ್ಯಾಯ ತೀರ್ಪು ನೀಡುವ ಕಟ್ಟೆ ವಿಶಿಷ್ಟವಾಗಿದ್ದು ಅಂದಿನ ಮದ್ರಾಸ್ ಅಧಿಪತ್ಯದ ಕೊಡುಗೆ ಇದು ಎನ್ನಬಹುದು.

೩. ಮುನ್ಸಿಫ್ ಕೋರ್ಟು : ಇದು ಗುಂತಕಲ್-ಬಳ್ಳಾರಿ ರೈಲ್ವೆ ಮಾರ್ಗದ ದಕ್ಷಿಣ ದಿಕ್ಕಿ ಗಿದೆ. ಬರ್ಮಾದ ತೇಗದ ಮರವನ್ನು ಬಳಸಿ ಮುಂಭಾಗ ತ್ರಿಕೋನಾಕೃತಿಯನ್ನು  ರಚಿಸಲಾಗಿದೆ. ಒಂದೇ ಕಟ್ಟಡವಿದ್ದು, ವಿಶಾಲವಾದ ಸಭಾಂಗಣ, ಹೊರಮಂಟಪಗಳನ್ನು ಹೊಂದಿದೆ. ಕಟ್ಟಿಗೆ ಮತ್ತು ಹೆಂಚುಗಳ ಬಳಕೆ ಹೇರಳವಾಗಿದ್ದು ಸಾಮಾನ್ಯ ಕಲ್ಲನ್ನು ಕಟ್ಟಡಕ್ಕೆ ಉಪಯೋಗಿಸಲಾಗಿದೆ. ಮುಂದಿನ ಭಾಗ ಸಿಂಹದ ಮುಖದಂತೆ ಸಾಂಕೇತಿಕ ಪರಿಣಾಮ ಬೀರಿದೆ. ಬ್ರಿಟಿಷರು ಸ್ಥಳೀಯರ ಅನುಕೂಲಕ್ಕೆ ಮತ್ತು ನ್ಯಾಯ ಒದಗಿಸಲು ಇಂಥ ಕಟ್ಟಡ ಗಳನ್ನು ನಿರ್ಮಿಸಿದ್ದು ಗಮನಾರ್ಹ.[1]      ಮದ್ರಾಸ್ ಆಡ್ಮಿನಿಸ್ಟ್ರೇಷನ್ ರಿಪೋರ್ಟ್, ೧೯೨೭-೨೮, ಪು. ೧೭೮.

[2]       ಅದೆ, ಪು. ೪೦೮.

[3]      ಎಂ.ವಿ. ಕೃಷ್ಣರಾವ್, ಕೇಶವಭಟ್ಟ, ಕರ್ನಾಟಕ ಇತಿಹಾಸ ದರ್ಶನ, ಪು. ೧೦೫೩.

[4]      ಅದೇ, ಪು. ೧೦೫೪.

[5]      ಅದೇ, ಪು. ೧೦೫೪.

[6]       ಅವಲೋಕನ, ೧೯೮೫, ಪು. ೧೨೫.

[7]       ಅದೇ, ಪು. ೧೨೫.