ಮತಾಂತರ : ಬಳ್ಳಾರಿ ಜಿಲ್ಲೆಯಲ್ಲಿ ಮತಾಂತರ ಕಾರ್ಯ ನಡೆದದ್ದು ಆಂಗ್ಲರಿಂದಲೇ ಅಲ್ಲ, ಬದಲಾಗಿ ಅವರು ಹೊರತಾಗಿಲ್ಲ. ಈ ಮೊದಲು ಆಗಮಿಸಿದ ದೆಹಲಿ ಸುಲ್ತಾನರು, ಬಿಜಾಪುರದ ಸುಲ್ತಾನರು, ಹೈದರಾಬಾದಿನ ನಿಜಾಮ, ಹೈದರ್-ಟಿಪ್ಪು ಮುಂತಾದವರು ಒತ್ತಾಯಪೂರ್ವಕವಾಗಿ ಸಾಮಾನ್ಯ ಜನರನ್ನು ನಿರ್ದಾಕ್ಷಣ್ಯವಾಗಿ ಮತಾಂತರಗೊಳಿಸಿದ್ದು ಗಮನಿಸಬೇಕಾದ ಸಂಗತಿ. ಇಲ್ಲಿ ಧರ್ಮ ಮಾನದಂಡವಾಗಿ, ಜಾತಿ ಆಧಾರವಾಗಿ ಪ್ರಾದೇಶಿಕ ಭಿನ್ನತೆಯ ಲಾಭ, ಜನರನ್ನು ಶೋಷಣೆ ಮಾಡುವುದರ ಮೂಲಕ ಬ್ರಿಟಿಷರು ಸ್ಥಳೀಯರನ್ನು ಕಣ್ಣಿದ್ದು ಕುರುಡರನ್ನಾಗಿ ಮಾಡಲಾಯಿತು. ಮತಾಂತರ ವಿದೇಶಿಯರಿಂದಲೂ ದೇಶಿಯ ರಿಂದಲೂ ಅಥವಾ ಬೇರೆ ಧರ್ಮದವರಿಂದಲೂ ನಡೆದಿದೆ ಎಂದು ಸ್ಪಷ್ಟಪಡಿಸಬಹುದು.

ನಮ್ಮ ನಮ್ಮಲ್ಲಿರುವ ಜಾತಿವ್ಯವಸ್ಥೆ (ವರ್ಣವ್ಯವಸ್ಥೆ) ಅನೈಕ್ಯತೆ, ನಂಬಿಕೆಗಳು ಇತ್ಯಾದಿ ಅಂಶಗಳಿಂದ ಸಮಾಜದಲ್ಲಿ ಹೀನಾಯವಾಗಿ ವರ್ಗಗಳನ್ನು ಸೃಷ್ಟಿಸಿಕೊಂಡಿದ್ದರೆಂದು ತಿಳಿಯ ಬೇಕು. ಆಂಗ್ಲರು ತಮ್ಮ ಧರ್ಮಕ್ಕೆ ನೇರವಾಗಿ ಮತಾಂತರಗೊಳಿಸಲಿಲ್ಲ. ಪೋರ್ಚುಗೀಸರು ಜನರನ್ನು ಕ್ರೂರವಾಗಿ ಮತಾಂತರಿಸಿದರೆ ಇವರು ಪ್ರೀತಿಯಿಂದ, ವಿನಯದಿಂದ ಮತಾಂತರಿ ಸಿದ್ದು ಕಂಡುಬರುತ್ತದೆ. ಬಳ್ಳಾರಿ ಜಿಲ್ಲೆಯ ಪೂರ್ವ ಭಾಗದಲ್ಲಿ ವ್ಯಾಪಕವಾಗಿ ಈ ಕಾರ್ಯ ಅಡೆತಡೆಯಿಲ್ಲದೆ ನಡೆಯಿತು. ೨೦ನೇ ಶತಮಾನದ ಆರಂಭದಲ್ಲಿ ಮತ್ತು ಮಧ್ಯಭಾಗದಲ್ಲಿ ಗಾಂಧೀ, ಅಂಬೇಡ್ಕರ್, ಜ್ಯೋತಿಭಾಫುಲೆ, ಪೆರಿಯಾರ್ ಈ ಮಹನೀಯರ ವಿಚಾರಗಳಿಂದ ಭಾರತದ ಜನತೆ ಅಂದು ಅಸ್ಪೃಶ್ಯತೆಯ ಸಮಸ್ಯೆಯ ಬಗೆಗೆ ಎಚ್ಚೆತ್ತುಕೊಂಡಿತು. ಪರಕೀಯರಿ ಗಿಂತ ಹೆಚ್ಚಾಗಿ ಸವರ್ಣೀಯರೇ (ಹಿಂದೂ) ಮಾಡುವ ಕುತಂತ್ರ, ಅಪಮಾನ ಅಂದು ವ್ಯಾಪಕವಾಗಿ ಹಬ್ಬಿತ್ತು. ಇದನ್ನು ಸುಧಾರಿಸಿಕೊಳ್ಳುವಲ್ಲಿ ಅವರ್ಣೀಯರನ್ನು (ತಳವರ್ಗ) ತಮಗೆ ಸಮನಾಗಿ ಭಾವಿಸದಿದ್ದ ಕಾರಣ ಅಜ್ಞಾತರಾದರಲ್ಲದೆ, ಇನ್ನಿತರ ಮತಗಳಿಗೆ ಮತಾಂತರ ಹೊಂದಿದರು. ಬ್ರಿಟಿಷರ ಆಡಳಿತದಲ್ಲಿ ನಡೆದ ಮತಾಂತರಕಾರ್ಯ ವಿವಿಧ ಸನ್ನಿವೇಶ, ಘಟನೆ, ಸಮಾಜ, ವ್ಯಕ್ತಿಯನ್ನು ಆಧರಿಸಿತ್ತು. ಡಾ. ಎಂ. ಚಿದಾನಂದಮೂರ್ತಿ ಅವರು ಮತಾಂತರವನ್ನು ತಡೆಗಟ್ಟುವ ಏಕೈಕ ಮಾರ್ಗ ಹಿಂದೂಗಳ ಹೃದಯ ಪರಿವರ್ತನೆ ಎಂದು ಅಭಿಪ್ರಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದಲ್ಲಾದ ಮತಾಂತರ ವನ್ನು ಅವಲೋಕಿಸಬೇಕಿದೆ. ಮತ್ತು ‘ಹಿಂದೂ’ ಎಂಬುದರ ಬಗ್ಗೆ ವಿಶಾಲವಾಗಿ ಅರ್ಥೈಸಿ, ಸಮಾಜಕ್ಕೆ ಅದರ ತಿರುಳನ್ನು ತಿಳಿಸಬೇಕಿದೆ. ಯಾವುದೇ ಧರ್ಮ, ಮತಗಳು ಸಮಾಜಕ್ಕೆ ಮಾರಕವಾಗಿರಬಾರದು. ಸಮಾಜ ಸುಧಾರಣೆಗೆ ಸೋಪಾನವಾಗಿರಬೇಕು.

ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಕುಟುಂಬಗಳು ಅನ್ಯಮತವನ್ನು ಸ್ವೀಕರಿಸಿದ್ದು, ಬಡತನ, ದಾರಿದ್ರ್ಯ, ಬರಗಾಲ ಇತ್ಯಾದಿಗಳಿಂದಲ್ಲ, ಇಲ್ಲಿನ ಸಮಾಜದಲ್ಲಿ ಅಸಮಾನತೆ ಇದ್ದುದರಿಂದ ಇಂದಿಗೂ ಸಹ ಮತಾಂತರ ಹೊಂದುತ್ತಿದ್ದಾರೆ. ಇಲ್ಲಿ ಹರಿಜನರ ಸ್ಥಿತಿಗತಿ ಹೇಳತೀರದು. ಹಿಂದೂಗಳಿಗೆ ಹಿಂದೂಗಳೇ ಶತೃಗಳಾದರೆ, ಇನ್ನೊಂದು ಮತಕ್ಕೆ ಹೋಗಿ ಸಮನಾಗಿ ಬಾಳದಿದ್ದರೆ ಆತ್ಮಗೌರವ ಎಂಬುದು ಇರುತ್ತದೆಯೇ? ತಮಗೆ ದೊರಕಿರುವ ಅನೇಕ ಸವಲತ್ತುಗಳನ್ನು ಹರಿಜನರಿಗೆ ಸ್ವಸಂತೋಷದಿಂದ ಬಿಟ್ಟುಕೊಟ್ಟು ಅವರ ಆರ್ಥಿಕಾಭಿವೃದ್ದಿಗೆ ನೆರವಾಗುವುದು ಒಂದು; ಅವರ ಬಗ್ಗೆ ಇರುವ ಕಳಂಕ ಭಾವನೆಯನ್ನು ಮನಸ್ಸಿನಿಂದ ಸಂಪೂರ್ಣವಾಗಿ ತೊಡೆದುಹಾಕುವುದು ಇನ್ನೊಂದು ಎಂದು ಚಿದಾನಂದಮೂರ್ತಿ ತಿಳಿಸಿದ್ದಾರೆ.

[1] ಆದರೆ ಮಾನವ ಜನಾಂಗದಲ್ಲಿ ಮೇಲುಕೀಳು ಎಂಬ ಭಾವನೆ ಇರುವವರೆಗೆ ಮತಾಂತರ ತಾಂಡವವಾಡುವುದು ನಿಜ. ಇದು ಸಮಾಜ ಪರಿವರ್ತನೆಗೆ ಕಾರಣವಲ್ಲದೆ, ಮತಾಂತರಕ್ಕೆ ತಡೆಯಾಯಿತು. ಹಿಂದೂ ಧರ್ಮದ ವರ್ಣವ್ಯವಸ್ಥೆಯಲ್ಲಿ ಪ್ರಧಾನವಾದ ಜಾತಿಗಳು, ಶೂದ್ರ ಸಮುದಾಯವನ್ನು ಕಂಡ ರೀತಿ, ಬ್ರಾಹ್ಮಣ ಗುರು ಅಸ್ಪೃಶ್ಯರ ಕೇರಿಗೆ ಹೋದರೆ, ಅವರ ಜೀವನ ಚರಿತ್ರೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾದಂತೆ, ಈ ರೀತಿ ವಿದ್ಯಾವಂತ ಕುಟುಂಬಗಳಲ್ಲಿ ಮಡಿವಂತಿಕೆ ಇದ್ದುದು ಗಮನಾರ್ಹ.

ಕರ್ನಾಟಕದಲ್ಲಿದ್ದ ಮತೀಯತೆ, ಪ್ರಾದೇಶಿಕ ಭಿನ್ನತೆ ಸ್ವಾತಂತ್ರ್ಯಪೂರ್ವದಲ್ಲಿ ಜೊಡ್ಡು ಗಟ್ಟಿತ್ತು. ೧೯೩೪ರಲ್ಲಿ ಗಾಂಧೀಜಿ ಈ ಭಾಗದಲ್ಲಿ ಅಸ್ಪೃಶ್ಯತಾ ನಿವಾರಣ ಯಾತ್ರೆ ಕೈಗೊಂಡಾಗ ಸೊಂಡೂರನ್ನು ಕೊಂಡಾಡಿದ್ದು, ಇಲ್ಲಿನ ಸ್ವಾಭಾವಿಕ ಮತ್ತು ಸಮಾಜವನ್ನು ಪ್ರತಿಬಿಂಬಿಸಿದೆ ಯೆಂದರು. ಗಾಂಧೀಜಿಯ ಭೇಟಿಯಿಂದ ಮತಾಂತರಗೊಳ್ಳುವ ವ್ಯಾಮೋಹ ದಲಿತರಲ್ಲಿ ಕಡಿಮೆಯಾಯಿತೆನ್ನಬಹುದು. ಉತ್ತರ ಕರ್ನಾಟಕದ ವೀರಶೈವರು ಇಲ್ಲಿನ ಜನರಿಗೆ ಪರಕೀಯರಿಗಿಂತ ಹೀನವಾಗಿ ಕಂಡರು. ಕೆಳವರ್ಗದವರಿಗೆ ಪರಕೀಯರಿಗಿಂತ ಹೀನವಾಗಿ ಕಂಡರು. ಇದಕ್ಕೆ ಬ್ರಾಹ್ಮಣರು ಸಹ ಹೊರತಾಗಿರಲಿಲ್ಲ. ನಿರ್ದಾಕ್ಷಿಣ್ಯವಾಗಿ ಅನ್ಯಮತವನ್ನು ಸ್ವೀಕರಿಸುವಾಗ ಚಿಂತನೆ ಮಾಡಿದ್ದು ತಮಗೆ ತಾವೇ ಎನ್ನುವುದೇ ಕೆಳವರ್ಗದವರ ಭಿನ್ನಹ ವಾಗಿತ್ತು. ಉದ್ಧಟತನ, ಬೇಜವಾಬ್ದಾರಿ, ನಿರ್ಲಕ್ಷತೆಯನ್ನು ಮೇಲ್ವರ್ಗದವರು ಮೈಗೂಡಿಸಿ ಕೊಂಡಿದ್ದರು. ಕೆಳವರ್ಗದವರು ಆಂಗ್ಲರೇ ಉತ್ತಮರೆಂದು ಅಭಿಪ್ರಾಯಕ್ಕೆ ಬಂದರು.

ಈ ಭಾಗದ ಮಠಗಳು ಕೆಳವರ್ಗದವರನ್ನು ಕೀಳಾಗಿಕಂಡದ್ದು, ಇತರರಿಗೆ ದೀಕ್ಷೆ ನೀಡಿದ್ದು, ಪರ್ಯಾಯವಾಗಿ ನಿರಂಕುಶ ವಿಚಾರಗಳ ಕಡೆ ವಾಲುವ ಸಾಧ್ಯತೆಗಳಿದ್ದವು. ಈ ಶತಮಾನದ ಆದಿಭಾಗದವರೆಗೂ ಗುರುಗಳು ಹರಿಜನರಿಗೆ ಲಿಂಗದೀಕ್ಷೆಯನ್ನು ಕೊಡುವ ಪದ್ಧತಿ ಇತ್ತು. ಆಧುನೀಕತೆ ಬೆಳೆದಂತೆ ಅದು ಮಾಯವಾಯಿತು. ಸರ್ವಸಮಾನರಾಗಿ ಬಾಳಲು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಂಬ ಅಂಶಗಳನ್ನು ಫ್ರೆಂಚ್ ಕ್ರಾಂತಿಯಿಂದ ನಾವು ಕಲಿತುಕೊಂಡೆವು.

ಆಂಗ್ಲರೇ ತಮ್ಮ (ಕ್ರೈಸ್ತ) ಧರ್ಮಕ್ಕೆ ಮತಾಂತರಿಸಿದ್ದು, ಮತಾಂತರವಾದರೂ, ಇದು ಒಂದು ರೀತಿಯ ನಿರಂತರ ಪ್ರಕ್ರಿಯೆಯಾಗಿ ಹಿಂದಿನಿಂದ ಬೆಳೆದುಬಂದಿದೆ ಎನ್ನಬಹುದು. ಜನರು ಸ್ವ-ಇಚ್ಛೆಯಿಂದ ಮತಾಂತರಗೊಂಡರೋ ಅಥವಾ ಒತ್ತಾಯವಾಗಿ ಇಂಗ್ಲೀಷರು ಮತಾಂತರಗೊಳಿಸಿದರೋ ಎಂಬುದರ ಬಗ್ಗೆ ತಿಳಿಯಬೇಕಾಗಿದೆ. ಸ್ವಜಾತೀಯ ಹೀನಾಯ ಕಲ್ಪನೆಗಳು, ದೋಷಗಳು ಏಳಿಗೆಗೆ ಧಕ್ಕೆ ತಂದವು. ಆಂಗ್ಲರ ಮತಾಂತರ ಕಾರ್ಯ ಸುಲಭವಾಗಿ ಸಾಗಲಿಲ್ಲ. ಸದ್ದುದ್ದೇಶ, ದುರುದ್ದೇಶಗಳಿಂದ ಕೂಡಿತ್ತು. ಇಂದಿಗೂ ಚರ್ಚ್‌ಗಳಲ್ಲಿ ಕೆಳ ದರ್ಜೆಯ ಅಥವಾ ಅಲಕ್ಷಿತ ವರ್ಗ, ಜಾತಿಗಳ ಜನರೇ ಹೇರಳವಾಗಿರುವುದು ಕಂಡುಬಂದಿವೆ. ಉದಾ. ಬಳ್ಳಾರಿಯ ಎರಡು ಚರ್ಚ್‌ಗಳಲ್ಲಿ ಸ್ಥಳೀಯ ಅಸ್ಪೃಶ್ಯ ಜನಾಂಗ ಕಾರ್ಯ ನಿರ್ವಹಿಸಿ, ಕ್ರೈಸ್ತ ಧರ್ಮವನ್ನು ಅವಲಂಬಿಸಿರುವುದು ದೃಢಪಟ್ಟಿದೆ. ಮುಸ್ಲಿಂ, ಕ್ರೈಸ್ತ ಮತಗಳಿಗೆ ಮಾತ್ರ ಇಲ್ಲಿ ಮತಾಂತರ ಹೊಂದಿದ್ದು ಮುಖ್ಯವಾಗಿದೆ. ಧಾರ್ಮಿಕವಾಗಿ ಈ ಭಾಗದಲ್ಲಿ ಹೆಚ್ಚಿನ ಜನರು ಹಿಂದೂಗಳು, ಅನಂತರ ಮುಸ್ಲಿಮ್, ಕ್ರೈಸ್ತ, ಜೈನ್, ಸಿಖ್ ಮತ್ತು ಪಾರ್ಸಿಗಳಿದ್ದಾರೆ. ಕ್ರೈಸ್ತರಿಗೆ ವಿಜಯನಗರ ಕಾಲದಿಂದಲೂ ಬೆಳೆದುಬಂದ ಇತಿಹಾಸವಿದೆ. ಕ್ರೈಸ್ತ ದೇವಾಲಯ ನಿರ್ಮಿಸಲು ಮತ ಪ್ರಚಾರ ಮಾಡಲು ರಾಜರಿಂದ ಅನುಮತಿ ಪಡೆದಿದ್ದರು.[2] ಹಾಗಾಗಿ ಆಧುನಿಕ ಕಾಲದಲ್ಲಿ ಮತಾಂತರವಾಗಿದ್ದು ಒಂದು ವ್ಯವಸ್ಥೆಯನ್ನು ಪರಿವರ್ತಿಸಿತೆನ್ನಬಹುದು.

ಆರ್ಥಿಕ ಕ್ಷೇತ್ರ

ಆಡಳಿತ, ಸಾಮಾಜಿಕ ಕ್ಷೇತ್ರದಲ್ಲಾದಂತೆ ಆರ್ಥಿಕ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆ ಕಂಡುಬಂದಿತು. ಒಂದು ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸಬೇಕಾದರೆ ಅಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿನಿಂದಲೂ ಕೃಷಿ ಜೀವನ ಸಾಗಿ ಬಂದಿದ್ದು, ಪಶುಪಾಲನೆ, ಬಲಿಷ್ಟವಾಗಿ ಬೆಳೆಯಿತಲ್ಲದೆ, ಆರ್ಥಿಕ ಸ್ವರೂಪವನ್ನು ಬದಲಿಸಿತು. ಇಲ್ಲಿ ಖನಿಜ ಸಂಪತ್ತು ಹೇರಳವಾಗಿದ್ದರಿಂದ ಕೈಗಾರಿಕೆಗಳು ಸ್ಥಾಪನೆಗೊಂಡು, ವಾಣಿಜ್ಯೋದ್ಯಮಿಗಳ ಸೃಷ್ಟಿಗೆ, ಖಾಸಗಿ ಕೈಗಾರಿಕೆಗಳ ಸ್ಥಾಪನೆಗೆ ಕಾರಣವಾಯಿತು. ವ್ಯಾಪಾರ ಅಭಿವೃದ್ದಿಗೊಂಡು ರಫ್ತು ಮತ್ತು ಆಮದಿನಿಂದ ವಿದೇಶಗಳೊಂದಿಗೆ ಸಾರಿಗೆ ಸಂಪರ್ಕ ಬೆಳೆಯಿತು. ಆರ್ಥಿಕ ಕ್ಷೇತ್ರದಲ್ಲಾದ ಕೆಲವು ಅಭಿವೃದ್ದಿ, ಸುಧಾರಣೆ ಮತ್ತು ಬದಲಾವಣೆ ಗಳನ್ನು ತಿಳಿಯಬಹುದಾಗಿದೆ. ಬದಲಾದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಕ್ಷೇತ್ರ ಪ್ರಮುಖ ವಾದುದು. ಆಹಾರ, ವಾಣಿಜ್ಯ ಬೆಳೆಗಳಿಗೆ ಈ ಭಾಗದಲ್ಲಿ ಅತೀ ಹೆಚ್ಚಿನ ಬೇಡಿಕೆ ಇತ್ತು. ಆಹಾರ ಧಾನ್ಯ ಬೆಳೆಯುವುದರಿಂದ, ಧಾನ್ಯ ಕೊಂಡುಕೊಳ್ಳುವುದು ಕಡಿಮೆಯಾಗಿ, ವಸ್ತು ವಿನಿಮಯ ಪದ್ಧತಿ ಹೆಚ್ಚಾಯಿತು. ಫಲವತ್ತಾದ ಭೂಮಿಗೆ ವಿವಿಧ ರೀತಿಯ ಕಂದಾಯ ನಿಗದಿಪಡಿಸಿ, ಅದನ್ನು ಕಲೆಕ್ಟರುಗಳು ಕಂತುಗಳಲ್ಲಿ ಪಡೆಯುತ್ತಿದ್ದರು. ವಾಣಿಜ್ಯ ಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಿದ್ದು ಮೊದಲೇ ವಿವರಿಸಿರುವಂತೆ ವ್ಯಾಪಾರದಿಂದ ರಫ್ತು, ಆಮದು ಹೆಚ್ಚಾಗಿ ಅಧಿಕ ಲಾಭಗಳಿಸುತ್ತಿದ್ದರು. ತರುವಾಯ ಸಾರಿಗೆ ಸಂಪರ್ಕಕ್ಕೆ ಕಲೆಕ್ಟರುಗಳು ಗಮನಕೊಟ್ಟಿ ದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಲು ಸುಲಭ ಸಾಧನವಾಗಿ ಮತ್ತು ಇಲ್ಲಿನ ಜನಸಾಮಾನ್ಯರು ಸಂಚರಿಸಲು ಸಹ ಅನುಕೂಲವಾಯಿತು. ರೈಲ್ವೆ ಸಾರಿಗೆ ಮೊದಲು ಸರಕು ಸಾಗಾಣಿಕೆಗೆ ಮೀಸಲಾಗಿದ್ದರಿಂದ ಇಲ್ಲಿನ ಸಂಪತ್ತನ್ನು ಇಂಗ್ಲಿಷರು ತಮ್ಮ ದೇಶಕ್ಕೆ ರವಾನಿಸುತ್ತಿದ್ದರೆಂದು ತಿಳಿಯಬಹುದು.

ಕ್ಷಾಮ, ಬರಗಾಲ ಬಂದಾಗ ಜನರಿಂದ ಕಾಮಗಾರಿ ಕೆಲಸಗಳನ್ನು ಮಾಡಿಸುವುದರ ಮೂಲಕ ಕೂಲಿ ರೂಪದಲ್ಲಿ ಹಣ, ಆಹಾರ ನೀಡುತ್ತಿದ್ದರು. ಇದು ವಿಶೇಷವಾದ ಯೋಜನೆ ಯಾಗಿತ್ತು. ಉದಾಹರಣೆಗೆ. ಕೆರೆಗಳ ದುರಸ್ತಿ, ಕಾಲುವೆ ಕಟ್ಟಡಗಳ ನಿರ್ಮಾಣ, ದೇವಾಲಯ ಗಳ ಪುನರುಜ್ಜೀವನ ಸರ್ಕಾರಿ ಆಡಳಿತ ಕಟ್ಟಡಗಳು, ಬಂಗಲೆ ಉದ್ಯಾನವನಗಳ ನಿರ್ಮಾಣ ಗಳಲ್ಲಿ ಬ್ರಿಟಿಷರ ತಂತ್ರಜ್ಞಾನ ನೋಡಬಹುದು.

ಬಳ್ಳಾರಿ ಪ್ರದೇಶದಲ್ಲಿ ಮಾನವನ ಆರ್ಥಿಕ ಜೀವನವನ್ನು ನೋಡುವುದಾದರೆ, ಮೊದಲಿದ್ದ ಆರ್ಥಿಕ ಚಟುವಟಿಕೆಗಳು ಬ್ರಿಟಿಷರ ಸುಧಾರಣೆಗಳಿಗೆ ಒಳಗಾಗುವುದರಿಂದ ಆಗಾಗ ತೊಂದರೆ ಗಳನ್ನು ಅನುಭವಿಸಿದ್ದು ಕಂಡುಬಂದಿದೆ.

ಕೃಷಿ : ವಸಾಹತುಶಾಹಿ ಆಳ್ವಿಕೆಯಲ್ಲಿ ಕೃಷಿಗೆ ಆದ್ಯತಾ ಸ್ಥಾನ ದೊರಕಿತ್ತು. ಆಗಿನ ಪ್ರಾಂತದ ಉತ್ಪನ್ನ ಆದಾಯದ ಮೂಲಗಳು ಕೃಷಿಯಾಗಿದ್ದುದು ಸ್ಪಷ್ಟ. ಕಲ್ಕತ್ತ, ಮುಂಬಯಿ ಮತ್ತು ಮೈಸೂರು ಪ್ರಾಂತಗಳಿಗಿಂತ ಮದ್ರಾಸ್ ಅಧಿಪತ್ಯದಲ್ಲಿ ಬ್ರಿಟಿಷರ ಆಡಳಿತ ಪ್ರಾರಂಭವಾಗಿ ನಿಂದಲೇ ಕೃಷಿಗೆ ಹೆಚ್ಚಿನ ಗಮನಕೊಟ್ಟಿದ್ದರು. ಅದಕ್ಕೆ ಬಳ್ಳಾರಿ ಜಿಲ್ಲೆ ಹೊರತಾಗಿಲ್ಲ. ಸರ್. ಥಾಮಸ್ ಮನ್ರೋ ಕೃಷಿಯಲ್ಲಿ ಮಾರ್ಪಾಟುಗಳನ್ನು ತಂದು, ರೈತವಾರಿ ಪದ್ಧತಿಯನ್ನು ಅಳವಡಿಸಿದನು. ತರುವಾಯ ಅದರ ಪರಿಣಾಮವಾಗಿ ರೈತವಾರಿ ಇನಾಂ ಭೂಮಿಗಳನ್ನು ಜನವರಿ ೧೮೮೫ರಲ್ಲಿ ಸರ್ಕಾರಕ್ಕೆ ಒಪ್ಪಿಸಲು ಕಲೆಕ್ಟರ್ ಗೂಡರಿಚ್ ಆದೇಶಿಸಿದನು.[3] ಅದೇ ವರದಿಯಲ್ಲಿ ತಿಳಿಸಿರುವಂತೆ ಕೃಷಿ ಭೂಮಿಗೆ ಕಾರ್ಯದರ್ಶಿಗಳಿಂದ ಅನುಮತಿ ದೊರೆತಾಗ ಕಲೆಕ್ಟರನು ಅದಕ್ಕೆ ಗೌರವಿಸಿ ಮದ್ರಾಸ್ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಾನೆ.

ಬ್ರಿಟಿಷರು ಆಡಳಿತ ಪ್ರದೇಶದಲ್ಲಿ ವ್ಯವಸಾಯ ಇಲಾಖೆಯನ್ನು ಸ್ಥಾಪಿಸಿ, ೧೯೦೦ರಲ್ಲಿ ಭೀಕರ ಕ್ಷಾಮ ಬಂದಾಗ ಆಂಗ್ಲರ ಮುಂಜಾಗ್ರತೆ ಕ್ರಮಗಳಿಂದ ವಿನಾಶವಾಗಲಿಲ್ಲ. ಆಗಾಗ ಬಳ್ಳಾರಿ ಜಿಲ್ಲೆಯಲ್ಲಿ ಕ್ಷಾಮ, ಬರಗಾಲಗಳು ತಲೆ ಎತ್ತಿದಾಗ ಪರಿಹಾರ ಕಾರ್ಯವನ್ನು ಕೈಗೊಳ್ಳುತ್ತಿದ್ದರು. ಕೃಷಿಕರು ಶೇ. ೮೦ರಷ್ಟು ಉತ್ಪಾದನೆಯಲ್ಲಿ ತೊಡಗಿದ್ದರು. ಬೆಳೆದಂತಹ ಬೆಳೆಗಳ ಮೇಲೆ ಕಂದಾಯ ನಿಗದಿಯಾಗುತ್ತಿತ್ತು. ಆಗಾಗ ತಲೆದೋರುತ್ತಿದ್ದ ಕ್ಷಾಮ, ಬರಗಾಲ (ಅತಿವೃಷ್ಟ, ಅನಾವೃಷ್ಟ)ಗಳಿಂದ ಕಲೆಕ್ಟರುಗಳು ಭೂಕಂದಾಯ ನಿರ್ಧರಿಸುತ್ತಿದ್ದರು. ಖುಷ್ಕಿ ಜಮೀನುಗಳ ಬೆಲೆ ಕಡಿಮೆ ಇದ್ದರೆ ಕಂದಾಯವು ಕಡಿಮೆ ಇರುತ್ತಿತ್ತು. ಅದೇ ರೀತಿ ತೆರಿಗೆ, ಬಾಗಾಯ್ತು ಜಮೀನುಗಳ ಬೆಲೆ ಹೆಚ್ಚಾದರೆ, ಕಂದಾಯ ಹೆಚ್ಚುತ್ತಿತ್ತು. ೧೯೦೨ರ ಭೂಕಂದಾಯ ಅಧಿನಿಯಮ ರೈತನ ಬಡತವನ್ನು ನಿವಾರಿಸಿ ಪರಿಹಾರೋಪಾಯಗಳನ್ನು ಮಾಡಿತ್ತು. ಆಂಗ್ಲರ ಕೃಷಿಧೋರಣೆ ಇಲ್ಲದಿರಲಿಲ್ಲ. ಆದರೂ, ಬೆಳೆಗಳ ಗುಣ, ಉತ್ಪತ್ತಿ ಪ್ರಮಾಣಗಳನ್ನು ಉತ್ತಮಪಡಿಸಲು ತಮ್ಮ ವಿಜ್ಞಾನಿಗಳಿಗೆ ಸೂಚಿಸಿದ್ದರು. ಭಾರತದಲ್ಲಿ ಆಗ ‘ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್’ ಸ್ಥಾಪಿತವಾಯಿತು. ಅದಕ್ಕೆ ಪ್ರಾಂತೀಯ ಸಂಸ್ಥಾನಗಳು ಸಹಕರಿಸುತ್ತಿದ್ದವು. ಆಗ ಗೋಧಿ, ಹತ್ತಿ, ಕಬ್ಬು, ನೆಲಗಡಲೆ ಮತ್ತು ಭತ್ತದ ಫಸಲು ಬೆಳೆದುದರಿಂದ ಮತ್ತು ಕೃಷಿಯಲ್ಲಿ ವೈಜ್ಞಾನಿಕ ಉಪಕರಣ ಬಳಕೆಯಾಗಿ ಕ್ರಾಂತಿಕಾರಕ ಬದಲಾವಣೆಗಳಾದವೆಂದು ತಿಳಿಯಬಹುದು.

ಆಗಿನ (೧೯೪೦) ಬಳ್ಳಾರಿ ಜಿಲ್ಲೆಯ ಭೂಪ್ರದೇಶದ ವಿಸ್ತೀರ್ಣ ೩೬,೭೪,೦೨೪ ಎಕರೆ ಗಳಿತ್ತು. ಇದರಲ್ಲಿ ೩,೬೪,೬೪೦ ಎಕರೆಗಳಷ್ಟು ಅರಣ್ಯ, ೩,೪೭,೪೧೧ ಎಕರೆ ಬೇಸಾಯ ಮಾಡುವ ಒಣಭೂಮಿ ಇತ್ತು. ಇದರಲ್ಲಿ ೨,೨೫,೮೭೨ ಎಕರೆಗಳಲ್ಲಿ ಬೇಸಾಯ ನಡೆಯು ತ್ತಿತ್ತು. ಉಳಿದ ೫೯,೮೧೦ ಎಕರೆಗಳಿಗೆ ನೀರಾವರಿ ಸೌಕರ್ಯವಿತ್ತು.

ಇಲ್ಲಿನ ಕೃಷಿಯಲ್ಲಿ ಪ್ರಮುಖವಾಗಿ ರಾಗಿ, ಜೋಳ, ನವಣೆ (ಕೊರ‌್ರ), ನೆಲಗಡಲೆ, ಹರಳು, ಎಳ್ಳು, ಹತ್ತಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದರು. ಕೃಷಿ ಪ್ರಧಾನ ಕುಟುಂಬಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿದ್ದುದರಿಂದ, ಕೆರೆ, ಕಾಲುವೆ ನದಿಗಳಲ್ಲದ ಕಾರಣ ಅವರ ಮಳೆಯನ್ನವಲಂಬಿಸಿ ಬೆಳೆಗಳನ್ನು ಬೆಳೆಯುತ್ತಿದ್ದರು. ರಾಗಿ ಪ್ರಮುಖ ಆಹಾರ ಬೆಳೆ ಯಾಗಿದ್ದು, ಇಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದರು. ನಂತರ ಜೋಳ ಹೆಚ್.-೧ನ್ನು ಹಿಂಗಾರು ಮಳೆಗಾಲದಲ್ಲಿ ಬಿತ್ತಲಾಗುತ್ತಿತ್ತು. ೧೯೪೨ನೇ ವರ್ಷ ಒಂದಕ್ಕೆ ೩೫,೦೦೦ ಎಕರೆಗಳಲ್ಲಿ ಜೋಳ ಬೆಳೆದಿದ್ದರು. ಇನ್ನೊಂದು ಪ್ರಮುಖ ಬೆಳೆಯಾದ ನವಣೆಯನ್ನು ಹಗುರವಾದ ನೇಗಿಲುಗಳನ್ನುಪಯೋಗಿಸಿ ಬಿತ್ತುತ್ತಿದ್ದರು. ಇದು ಮುಖ್ಯವಾಗಿ ಕೆಂಪುಮಣ್ಣಿನಲ್ಲಿ ಉತ್ಕೃಷ್ಟ ಬೆಳೆಯಾಗಿ ಬರುತ್ತಿತ್ತು. ಈ ಪ್ರದೇಶದಲ್ಲಿ ಸುಮಾರು ೧,೪೦,೦೦೦ ಎಕರೆಗಳಲ್ಲಿ ಶೇಂಗಾ ಬೆಳೆಯನ್ನು ಬೆಳೆಯುತ್ತಿದ್ದರು. ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಜೊತೆಗೆ ಹರಳು, ಎಳ್ಳು ಮತ್ತು ಹತ್ತಿಯನ್ನು ೧,೭೧,೯೦೯ ಎಕರೆಗಳಲ್ಲಿ ಬೆಳೆಯುತ್ತಿದ್ದು ತಿಳಿದುಬಂದಿದೆ. ಇಲ್ಲಿ ಹೊಗೆಸೊಪ್ಪನ್ನು ಹೇರಳವಾಗಿ ಬೆಳೆದು ಆಂಧ್ರಕ್ಕೆ ರಫ್ತು ಮಾಡುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ಕೃಷಿಗೆ ಬ್ಯಾಂಕ್‌ಗಳ ಮೂಲಕ ಸಾಲ ನೀಡಿ, ವ್ಯವಸಾಯ ಉಪಕರಣಗಳನ್ನು ಕೊಡಿಸುತ್ತಿದ್ದರು. ಪ್ರಮುಖ ಉಪಕರಣಗಳೆಂದರೆ, ನೇಗಿಲು, ಕುಂಟೆ, ಕೂರಿಗೆ, ಎತ್ತುಗಳಿಂದ ರೈತ ಬೇಸಾಯ ಮಾಡುತ್ತಿದ್ದು, ಹೆಚ್ಚಿನ ಬೆಳೆಗಳನ್ನು ಬೆಳೆಯುತ್ತಿದ್ದರಿಂದ ಧಾನ್ಯಗಳನ್ನು ಮಾರುತ್ತಿದ್ದರು. ಹಾಗಾಗಿ ಕೃಷಿ ಕ್ಷೇತ್ರದ ವಿಸ್ತರಣೆಗೆ ನಾಂದಿಯಾಯಿತು. ಅಂದು ಎತ್ತಿನಗಾಡಿ ಕೃಷಿ ಸಾರಿಗೆ ಸಂಪರ್ಕಕ್ಕೆ ಸಾಮಾನುಗಳನ್ನು ಒಂದೆಡೆಯಿಂದ, ಇನ್ನೊಂದೆಡೆಗೆ ಸಾಗಿಸಲು ಉಪಯೋಗವಾಗಿತ್ತು. ಕೃಷಿ ಮಾರುಕಟ್ಟೆಗಳು ಬೆಳೆದು ಬರಲು ಬ್ರಿಟಿಷರ ಆರ್ಥಿಕ ನೀತಿಗಳು ಕಾರಣವಾದವು. ದೇಶಿ ಮಾದರಿಯ ಕೃಷಿ ಪದ್ಧತಿ ಆಧರಿಸಿ ಬಿ್ರಟಿಷರ ಕಾಲದಲ್ಲಿ ಸಮಾನುಪಾತ ದಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದರು.

ಕೈಗಾರಿಕೆ : ಬ್ರಿಟಿಷರ ಆಳ್ವಿಕೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಾದ ಬದಲಾವಣೆಗಳಲ್ಲಿ ಕೈಗಾರಿಕಾ ಅಭಿವೃದ್ದಿಯು ಒಂದು. ಇದು ಬೆಳೆದು ಬಂದ ಇತಿಹಾಸ ತುಂಬಾ ಹಿಂದಿನದು. ೧೭ನೇ ಶತಮಾನದ ಮಧ್ಯಭಾಗದಲ್ಲಿ ಯುರೋಪ್, ಆಫ್ರಿಕಾಗಳಿಗೆ ಭಾರತದಿಂದ ಬಟ್ಟೆ ರಫ್ತಾ ಗುತ್ತಿತ್ತು. ಈ ಕೆಲಸ ಯುರೋಪಿಯನ್ನರು ಮಾಡುತ್ತಿದ್ದರು. ಹದಿನೆಂಟನೇ ಶತಮಾನದಲ್ಲಿ ಇಂಗ್ಲೀಷರು ಕೈಗಾರಿಕೆಯ ಸಂರಕ್ಷಣೆಗಾಗಿ ಭಾರತದ ಬಟ್ಟೆಗಳನ್ನು ನಿಷೇಧಿಸಿದರು. ಭಾರತ ದೇಶದಲ್ಲಿದ್ದಂತೆ ಆಂಗ್ಲರ ನೀತಿ ಔದ್ಯೋಗಿಕ ಕ್ರಾಂತಿಯ ನಂತರ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆಗಳಾದವು. ಯಂತ್ರಗಳ ಬಳಕೆ, ಉಗಿಶಕ್ತಿಯ ಉಪಯೋಗ, ಇಂಗ್ಲೆಂಡಿನ ಕೈಗಾರಿಕಾ ಅಭಿವೃದ್ದಿಯಲ್ಲಿ ಭಾರತದ ಸ್ಥಾನ ಅಲ್ಪವಾಗಿತ್ತು. ಭಾರತದಲ್ಲಿ ೧೮೩೨ರಲ್ಲಿ ಸೆಣಬು, ಹತ್ತಿ ಗಿರಣಿ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ಈ ಪ್ರದೇಶದಲ್ಲೆ ಕೈಗಾರಿಕೆ ಮತ್ತು ವ್ಯಾಪಾರವನ್ನು ಅಭಿವೃದ್ದಿಗೊಳಿಸಲು ಕಲೆಕ್ಟರುಗಳು ಯೋಜನೆ ಕೈಗೊಂಡರು. ನಂತರ ೧೮೩೫ ರಿಂದ ೧೯೨೫ರವರೆಗೆ ಮಂದಗತಿಯಲ್ಲಿ ಕೈಗಾರಿಕೆಗಳ ಬೆಳವಣಿಗೆಯಾಯಿತು. ೧೯೨೫ ರಿಂದ ೧೯೪೭ರವರೆಗೆ ಕೈಗಾರಿಕೆಗಳು ಸಮೃದ್ಧ ಮತ್ತು ಸಂಪತ್ತಿನಿಂದ ಕೂಡಿದ್ದು, ಅಷ್ಟೇ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದವು.

ಮುಂಬಯಿ ಪ್ರಾಂತ್ಯ, ಮೈಸೂರು ಸಂಸ್ಥಾನಕ್ಕೆ ಹೋಲಿಸಿಕೊಂಡರೆ ಮದ್ರಾಸ್ ಅಧಿಪತ್ಯದ ಬಳ್ಳಾರಿ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದಿತ್ತು. ಈ ಜಿಲ್ಲೆ ಎಲ್ಲಾ ವಿಧದಲ್ಲೂ ಅನುಕೂಲತೆಗಳನ್ನು ಹೊಂದಿತ್ತು. ತುಂಗಭದ್ರಾ ಅಣೆಕಟ್ಟು ಜಿಲ್ಲೆಯಲ್ಲಿದ್ದು ಜಿಲ್ಲೆಯ ಆರ್ಥಿಕ ಮಟ್ಟವೇ ಭಿನ್ನವಾಗಿತ್ತು. ಈ ಅಣೆಕಟ್ಟಿನಿಂದ ಜಿಲ್ಲೆಯ ವ್ಯವಸಾಯದ ಅಭಿವೃದ್ದಿಯು ಕೂಡ ತೀವ್ರ ಪ್ರಮಾಣದಲ್ಲಿ ಮುಂದುವರೆದಿತ್ತು. ೨೦ನೇ ಶತಮಾನದ ಆರಂಭದಲ್ಲಿ ಕೈಗಾರಿಕೆಗಳ ಪ್ರಗತಿಯನ್ನು ಗುರುತಿಸಲಾಗುತ್ತದೆ. ವಿದ್ಯುತ್ ಬಂದಾಗ, ಪ್ರಾಂತೀಯ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಿ ಕಬ್ಬಿಣ, ಉಕ್ಕು, ಮರದ ಸಾಮಾನು, ಕಾಗದ, ಸಕ್ಕರೆ, ಹತ್ತಿ, ರೇಷ್ಮೆ ಕೈಗಾರಿಕೆಗಳು ಜನ್ಮತಾಳಿದವು.

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿನ ಕಾರ್ಖಾನೆಗಳು ಸಹ ಶತಮಾನಗಳಷ್ಟು ಹಳೆಯ ದಾಗಿವೆ. ಅಲ್ಲಿ ಬಟ್ಟೆ, ಕಂಬಳಿ, ಸೋಪು, ಫಿನಾಯಿಲ್, ದುಪ್ಪಡಿ ಇತ್ಯಾದಿ ವಸ್ತುಗಳನ್ನು ಸೆರೆಮನೆಯಲ್ಲಿದ್ದ ಖೈದಿಗಳೇ ತಯಾರಿಸುತ್ತಿದ್ದರು.[4] ನಂತರ ಚಿಕ್ಕಜೋಗಿಹಳ್ಳಿಯಲ್ಲಿ ರೇಷ್ಮೆ ಕೈಗಾರಿಕಾ ಕೇಂದ್ರವಿದ್ದು, ಇತರ ಗುಡಿ ಕೈಗಾರಿಕೆಗಳು ಬೆಳೆದು ಬಂದಿದ್ದವು. ಈ ಜಿಲ್ಲೆ ೧೩೦ ಕೋಟಿ ಟನ್ ಉತ್ಕೃಷ್ಟವಾದ ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರನ್ನು ಹೇರಳವಾಗಿ ಹೊಂದಿರುತ್ತದೆ. ಸೊಂಡೂರು, ಹೊಸಪೇಟೆ, ದೋಣಿಮಲೈ, ಕುಡತಿನಿ, ಪಾಪಿನಾಯಕನಹಳ್ಳಿ, ತೋರಣಗಲ್, ವ್ಯಾಸನಕೆರೆಗಳಲ್ಲಿ ಸಣ್ಣ ಮತ್ತು ಬೃಹತ್ ಕೈಗಾರಿಕೆಗಳ ಅಭಿವೃದ್ದಿಗೆ ಅವಕಾಶವಾಗಿದೆ.

೧೯೪೫ರ ನಂತರದಲ್ಲಾದ ಕೈಗಾರಿಕಾ ಕ್ಷೇತ್ರದಲ್ಲಿ ಬಟ್ಟೆ, ಕಬ್ಬಿಣ, ಉಕ್ಕು, ಕಲ್ಲಿದ್ದಲು, ಪೆಟ್ರೋಲ್, ಚಿನ್ನ, ಮ್ಯಾಂಗನೀಸ್, ರೇಷ್ಮೆ, ಕಾಗದ, ಸೀಮೆಂಟ್ ಇತ್ಯಾದಿ ಕೈಗಾರಿಕೆಗಳು ಉಗಮಗೊಂಡವು. ಇವುಗಳಿಂದ ಭಾರತ ಪ್ರಗತಿ ಪಥದಲ್ಲಿ ಸಾಗಿದರೂ ವ್ಯಾಪಾರದ ನಿಯೋಗಗಳನ್ನು ನೇಮಿಸಲಾಯಿತು. ಬಳ್ಳಾರಿ ಜಿಲ್ಲೆಯಲ್ಲಿ ಕೆಲವು ದೊಡ್ಡ ಪ್ರಮಾಣದ ಕೈಗಾರಿಕೆಗಳಿದ್ದು, ಕೆಲವು ಸ್ಥಗಿತಗೊಂಡರೆ ಇನ್ನು ಕೆಲವು ಕಾರ್ಯೋನ್ಮುಖವಾಗಿವೆ. ಕಂಪ್ಲಿ ಸಹಕಾರ ಸಕ್ಕರೆ ಕಾರ್ಖಾನೆ, ಇಂಡಿಯಾ ಷುಗರ್ ಅಂಡ್ ರಿಫೈನರೀಸ್ ಲಿಮಿಟೆಡ್ ಹೊಸಪೇಟೆ, ಬಳ್ಳಾರಿ ಸ್ಪಿನ್ನಿಂಗ್ ಮತ್ತು ವೀವಿಂಗ್ ಮಿಲ್ಸ್ ಲಿಮಿಟೆಡ್ ಬಳ್ಳಾರಿ, ತುಂಗಭದ್ರ ಸ್ಟೀಲ್ ಪ್ರಾಡೆಕ್ಟ್ ಲಿಮಿಟೆಡ್ ಹೊಸಪೇಟೆ, ಸೊಂಡೂರು ಮ್ಯಾಂಗನೀಸ್ ಮತ್ತು ಐರನ್ ಓರ್ಸ್‌ಲಿಮಿಟೆಡ್ ವ್ಯಾಸನಕೆರೆ, ಎಂ.ಜಿ. ಆಟೋಮೊಬೈಲ್ಸ್, ಬಳ್ಳಾರಿ ಇನ್ನು ಕೆಲವು ಕೈಗಾರಿಕೆಗಳಿದ್ದುದು ಕಂಡುಬಂದಿದೆ.

ಸ್ವಾತಂತ್ರ್ಯಪೂರ್ವ ಅನಂತರದಲ್ಲಿ ಬಳ್ಳಾರಿ ಜಿಲ್ಲೆ ಕೈಗಾರಿಕೆಯಲ್ಲಿ ಪ್ರಗತಿ ಕಂಡಿತಲ್ಲದೆ, ಹೊಸ ಹೆಜ್ಜೆಯಿಡುವಂತೆ ಆಯಿತು. ಕೈಗಾರಿಕೆಗಳನ್ನು ಅದರ ಬಂಡವಾಳ ಮತ್ತು ಉತ್ಪನ್ನದ ಮೇಲೆ ೭.೫ಲಕ್ಷ ರೂ. ಬಂಡವಾಳ ಹಾಕಿದ್ದಾಗ ಅವುಗಳಿಗೆ ಸಣ್ಣ ಪ್ರಮಾಣದ ಕೈಗಾರಿಕೆ ಗಳೆಂದು ಪರಿಗಣಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಸುಮಾರು ೮೫೦ಕ್ಕೂ ಹೆಚ್ಚು ಸಣ್ಣ ಪ್ರಮಾಣದ ಕೈಗಾರಿಕೆಗಳಿವೆ. ಪ್ರಮುಖವಾದ ಸಣ್ಣ ಕೈಗಾರಿಕೆಗಳೆಂದರೆ, ಆಯಿಲ್ ಮಿಲ್ಲು, ಹತ್ತಿ ಜಿನ್ನಿಂಗ್ ವ್ಯವಸಾಯದ ಉಪಕರಣಗಳ ತಯಾರಿಕೆ, ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಗೆ ಬ್ರಿಟಿಷರಿಗಿಂತ, ದೇಶೀಯ ಸಂಘ ಸಂಸ್ಥೆಗಳೇ ಹೆಚ್ಚಾಗಿ ಹೊಂದಿದ್ದವು. ಈಗಲೂ ಸಹ ಅವು ತರಬೇತಿ ಕೇಂದ್ರಗಳಾಗಿ, ಇಲಾಖೆ ಸಂಘಗಳಾಗಿ ಉಳಿದುಕೊಂಡಿವೆ. ಕೂಡ್ಲಿಗಿ ತಾಲ್ಲೂಕಿನ ತಾಯಕನಹಳ್ಳಿಯಲ್ಲಿ ಉಣ್ಣೆನೇಯ್ಗೆ, ಕಂಬಳಿ ಮಾಡುವುದು ಚಿಕ್ಕಜೋಗಿಹಳ್ಳಿ ಎಂಬಲ್ಲಿ ಚಾಪೆ ನೇಯ್ಗೆ ಶಿಕ್ಷಣ ಕೇಂದ್ರ ಸ್ಥಾಪಿಸಿ ಆರ್ಥಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಇದೇ ಜಿಲ್ಲೆಯ ೮ ತಾಲ್ಲೂಕುಗಳಲ್ಲಿ ಸಣ್ಣ ಕೈಗಾರಿಕೆಗಳ ಪ್ರಗತಿಯ ತಕ್ಕಮಟ್ಟಿಗಿದ್ದು ಅವುಗಳನ್ನು ಇಂದಿಗೂ ನೋಡಬಹುದು.

ಇತ್ತೀಚಿನ ಅಂದರೆ ೧೯೪೭ರ ನಂತರದಲ್ಲಾದ ಕೈಗಾರಿಕೆಗಳನ್ನು ತುಲನೆ ಮಾಡಿದಾಗ ಸುಮಾರು ಹತ್ತು ಕೈಗಾರಿಕಾ ಕೇಂದ್ರಗಳು ಕಂಡುಬರುತ್ತವೆ. ಬಳ್ಳಾರಿ ಸ್ಟೀಲ್ ರೀ ರೋಲಿಂಗ್ ಮಿಲ್ಸ್, ಬಳ್ಳಾರಿ, ಕರ್ನಾಟಕ ಸ್ಟೀಲ್ ರೀ ರೋಲಿಂಗ್ ಮಿಲ್ಸ್, ಬಳ್ಳಾರಿ, ಟೈನ್‌ವಾಲ್‌ರೆಡ್ಡಿ ಆಕ್ಸೈಡ್ ಕಂಪನಿ ಬಳ್ಳಾರಿ, ರೆಡ್ ಆಕ್ಸೈಡ್, ಪಲ್ವರೈಸಿಂಗ್ ಮಿಲ್ ಪಾಪಿನಾಯಕನಹಳ್ಳಿ, ಮಲ್ಟಿಪ್ಲಾಸ್ಟ್ ಕಾರ್ಪೋರೇಷನ್ ಮಲಪನಗುಡಿ, ವೆಂಕಟೇಶ್ವರ ವರ್ಕ್‌ಶಾಪ್ ಶಿರುಗುಪ್ಪ, ವೆಂಕಟೇಶ್ವರ ಮರದ ಬೊಂಬೆಗಳು ಮತ್ತು ಆಟದ ಸಾಮಾನುಗಳು ಕೈಗಾರಿಕೆ ಶಿರುಗುಪ್ಪ, ಪ್ಲಾಸ್ಟಿಕ್ ಚೀಲ ತಯಾರಿಕೆ ಶಿರಗುಪ್ಪ, ಮೊಳೆ ಪುಡಿ ಕೈಗಾರಿಕೆ ಬಳ್ಳಾರಿ ಗೌಸಿಯಾ ಅಕ್ಕಿ ಗಿರಣಿ, ಶಿರುಗುಪ್ಪ ಮೊದಲಾದವುಗಳನ್ನು ಹೆಸರಿಸಬಹುದು.[5]

ಈ ರೀತಿಯಾಗಿ ನಾವು ಬಳ್ಳಾರಿ ಜಿಲ್ಲೆಯಲ್ಲಾದ ಕೈಗಾರಿಕಾ ಬೆಳವಣಿಗೆ ಅಭಿವೃದ್ದಿಯ ಕೆಲವು ಬದಲಾವಣೆಗಳನ್ನು ಕಾಣಬಹುದು. ಕೈಗಾರಿಕೆಗಳಿಂದ ಸ್ಥಳೀಯರಿಗೆ ಉದ್ಯೋಗ ದೊರೆತು ಗುಡಿ ಕೈಗಾರಿಕೆಗಳ ಅವನತಿಯಿಂದ ನಿರುದ್ಯೋಗ ಕಂಡುಬಂದಿತ್ತು. ನಂತರ ಕೈಗಾರಿಕೆ ಕುರಿತಂತೆ ಬೋಧಿಸಲು ಶಾಲೆಗಳಿದ್ದವು. ಅವುಗಳೆಂದರೆ, ರಾಯಲ್‌ಸೀಮಾ ಪಾಲಿಟೆಕ್ನಿಕ್, ಸೈಂಟ್ ಜೋಸೆಫ್ಸ್ ಇಂಡಸ್ಟ್ರೀಯಲ್ ಸ್ಕೂಲ್ ಮೊದಲಾದವುಗಳು. ಇದಕ್ಕೆ ಆಗಿನ ಸರ್ಕಾರ ಧನಸಹಾಯ ಕೊಡುತ್ತಿತ್ತು. ಕೈಗಾರಿಕೆಗಳು ಬ್ರಿಟಿಷರಿಗೂ ಸಹಕಾರಿಯಾಗಿ ದ್ದವು. ತಮ್ಮ ದೇಶಕ್ಕೆ ಇಲ್ಲಿನದನ್ನು ರಫ್ತು ಮಾಡುತ್ತಿದ್ದುದರಿಂದ ಬಹುಮುಖ್ಯ ಕೈಗಾರಿಕೆಗಳು ಇಂಗ್ಲೆಂಡ್‌ನಲ್ಲಿ ಸ್ಥಾಪನೆಯಾದವು. ಅನಿವಾರ್ಯವಾದ ಕೆಲವು ಮಾತ್ರ ಇಲ್ಲಿ ಸ್ಥಾಪನೆ ಗೊಂಡಿವೆ.

ವ್ಯಾಪಾರ : ಆಂಗ್ಲರ ಆಳ್ವಿಕೆ ಪ್ರಾರಂಭವಾಗುವ ಮುನ್ನ ಈ ಭಾಗದಲ್ಲಿ ವ್ಯಾಪಾರ ವಾಣಿಜ್ಯಕ್ಕೆ ಕೆಲವು ಸ್ಥಳಗಳು ಪ್ರಸಿದ್ದಿಗೊಂಡಿವೆ. ಹೀಗಾಗಿ ವ್ಯಾಪಾರವು ಅತೀ ಪುರಾತನವಾದುದೆಂದರೆ ತಪ್ಪಿಲ್ಲ. ಸ್ಥಳೀಯ ಆಳರಸರ ವ್ಯಾಪಾರಕ್ಕೂ ಮತ್ತು ಆಂಗ್ಲ ಪದ್ಧತಿಯ ವ್ಯಾಪಾರಕ್ಕೂ ವ್ಯತ್ಯಾಸವಿತ್ತು. ಸಾರಿಗೆ ಸಂಪರ್ಕ, ಗಣಿಗಾರಿಕೆ, ಕೈಗಾರಿಕೆಗಳ ಬೆಳವಣಿಗೆಯಿಂದ ವ್ಯಾಪಾರ ಅಭಿವೃದ್ದಿಗೊಂಡಿತು. ಇದನ್ನು ಬ್ರಿಟಿಷರೇ ಪ್ರಾರಂಭಿಸಿದ್ದು, ದೇಶಿಯ ಮತ್ತು ವಿದೇಶೀಯ ವ್ಯಾಪಾರ ಪ್ರಚಲಿತಕ್ಕೆ ಬಂದಿದ್ದು ಇವರ ಕಾಲದಲ್ಲಿ ಹೊಸದಲ್ಲದಿದ್ದರೂ ಅಭಿವೃದ್ದಿ ಹೊಂದಿತ್ತು.

ವ್ಯಾಪಾರವನ್ನು ಆಂಗ್ಲರು ಎರಡು ರೀತಿಗಳಲ್ಲಿ ಮಾಡುತ್ತಿದ್ದರು. ಸಮುದ್ರದ ಮೂಲಕ ವ್ಯಾಪಾರ ಮತ್ತು ಭೂಮಾರ್ಗಗಳ ಮೂಲಕ ಮಾಡುವ ವ್ಯಾಪಾರ. ಈ ಭಾಗದಲ್ಲಿ ಕ್ಷಾಮ, ಬರಗಾಲ ಬಂದಾಗ ವ್ಯಾಪಾರದ ಪ್ರಗತಿ ಕುಂಠಿತಗೊಂಡು ನಿಲ್ಲುತ್ತಿತ್ತು. ಆಗ ಅಂತದೇರ್ಶೀಯ ವ್ಯಾಪಾರದಲ್ಲಿ ಬ್ರಿಟಿಷ್ ಅಧಿಪತ್ಯಗಳು ರಫ್ತು ಮತ್ತು ಆಮದು ಮಾಡಿಕೊಳ್ಳುತ್ತಿದ್ದವು. ಈ ಭಾಗದಲ್ಲಿ ಬೆಳೆದಂತಹ ಸರಕುಗಳನ್ನು ಕೊಂಡೊಯ್ದು ಮಾರಾಟಮಾಡುತ್ತಿದ್ದರು. ಇದು ರೈಲ್ವೆ ಪದ್ಧತಿ ಬರುವವರೆಗೆ ಇತ್ತು. ಗೋದಾವರಿ, ಮಲಬಾರು, ಕಲ್ಲಿಕೋಟೆ, ತಿಣ್ಣೆ ವೆಲ್ಲೈ, ಟುಟಿಕೊರನ್ ಬಂದರುಗಳ ಸಗಟು ವ್ಯಾಪಾರದ ಮೂಲಕ ಸಾಮಾಗ್ರಿಗಳನ್ನು ವಿದೇಶಕ್ಕೆ ಕಳುಹಿಸುತ್ತಿದ್ದರು. ಜಿಲ್ಲಾ ಕಲೆಕ್ಟರನೇ ವ್ಯಾಪಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದನು.

ವ್ಯಾಪಾರ; ಗಿರಾಕಿ ಮತ್ತು ಮಾಲೀಕರ ನಡುವೆ ಸಂಪರ್ಕ ಕಲ್ಪನೆ, ಪ್ರಗತಿಗೆ ಕಾರಣ ವಾಗಿತ್ತು. ಪ್ರೆಸಿಡೆನ್ಸಿಯ ಅಧೀನದಲ್ಲಿ ಎಲ್ಲಾ ವಸ್ತುಗಳ ವ್ಯಾಪಾರ ನಡೆಯುತ್ತಿತ್ತು. ೧೮೮೨-೮೩ರಲ್ಲಿ ವ್ಯಾಪಾರದ ಪ್ರಗತಿ ಹೀಗಿದೆ. ೨೧,೨೨,೭೭,೪೩೬ ರೂಪಾಯಿಗಳು ರಫ್ತುಗಳು ಮತ್ತು ಆಮದಿನಿಂದ/ಆಮದು ೧,೨೨,೭೫,೪೯೧ ಮತ್ತು ೩೩,೧೬,೫೩೮ ಇದ್ದರೆ, ರಫ್ತು ೧,೨೦,೧೮೩ ಮತ್ತು ೨೭,೮೨,೮೩೨ ರಷ್ಟು ಇರುತ್ತದೆ. ವಿದೇಶಗಳೊಡನೆ ಸಂಬಂಧವಿದ್ದು, ಬ್ರಿಟಿಷ ಪದ್ಧತಿಗಳಿಗೆ ಅನುಗುಣವಾಗಿರಬೇಕಿತ್ತು. ಬ್ರಿಟಿಷರ ಬೇರೆ ಬೇರೆ ದೇಶಗಳೊಡನೆ ರಫ್ತು ಮತ್ತು ಆಮದನ್ನು ಮಾಡಿಕೊಳ್ಳುತ್ತಿದ್ದರು. ಇಂಗ್ಲೆಂಡ್, ಆಸ್ಟ್ರೀಯಾ, ಫ್ರಾನ್ಸ್, ಜರ್ಮನಿ, ಇಟಲಿ, ಮಾಲ್ಟಾ, ಸ್ಪೈನ್ ಇತರ ಯುರೋಪಿನ ದೇಶಗಳು ಮತ್ತು ಈಜಿಪ್ಟ್, ಮಾರಿಷಸ್‌ಗಳೊಂದಿಗೆ ಸಂಬಂಧವಿತ್ತು.

ಬ್ರಿಟಿಷರಿಗೆ ಆಮದಿಗಿಂತ ರಫ್ತುವಿನಲ್ಲಿ ಲಾಭವಿತ್ತು. ಇಲ್ಲಿ ಬೆಳೆಯುತ್ತಿದ್ದ ಧಾನ್ಯಗಳು ಭತ್ತ, ರಾಗಿ, ಜೋಳ, ತಂಬಾಕು, ಎಣ್ಣೆ ಬೀಜಗಳು, ಹತ್ತಿ, ತುಪ್ಪ, ತೆಂಗಿನಕಾಯಿ, ಸಕ್ಕರೆ, ಮರ-ಮುಟ್ಟುಗಳನ್ನು ತಮ್ಮ ದೇಶಕ್ಕೆ ಸಾಗಿಸುತ್ತಿದ್ದರು. ಬಳ್ಳಾರಿ, ಅನಂತಪುರ, ಕ್ರಿಷ್ಣ, ಕರ್ನೂಲು, ಕೊಯಮತ್ತೂರು, ಮದರಾಸು, ಕಡಪಗಳಿಂದ ೧.೫ ಮಿಲಿಯನ್ ಪ್ರದೇಶದಲ್ಲಿ ಹತ್ತಿ ಬೆಳೆದು ೧೬೫ ಲಕ್ಷಕ್ಕೆ ರಫ್ತು ಮಾಡುತ್ತಿದ್ದರು.

ಯಾವ ದೇಶಕ್ಕೆ ಸರಕನ್ನು ರಫ್ತು ಮಾಡುತ್ತಿದ್ದರೋ ಆ ದೇಶದಿಂದ ಬೇಡಿಕೆ ಸಲ್ಲಿಸಿದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ೧೮೫೫ ರಿಂದ ೧೮೭೦ರ ವರೆಗೆ ಪ್ರಗತಿ ಉತ್ತಮವಾಗಿತ್ತು. ವಿದೇಶಿ ವಸ್ತುಗಳೆಂದರೆ (ಆಮದು) ಅಫೀಮು, ಮಧ್ಯ, ಯಂತ್ರೋ ಪಕರಣ, ಕಬ್ಬಿಣ, ಚಿನ್ನ, ಸಿಮೆಂಟ್ ಇತ್ಯಾದಿ ಅವಶ್ಯಕ ವಸ್ತುಗಳನ್ನು ಆಮದು ಮಾಡಿಕೊಳ್ಳು ತ್ತಿದ್ದರು. ೧೮೮೨-೮೩ನೇ ಸಾಲಿನ ಆಮದಿನಲ್ಲಿ ಗೃಹೋಪಕರಣಗಳು, ಕಬ್ಬಿಣದ ಸಾಮಾನು ಗಳು, ಮಧ್ಯ, ಯಂತ್ರೋಪಕರಣಗಳು, ಪೇಪರ್, ಟೆಲಿಗ್ರಾಫ್ ವಸ್ತುಗಳು, ವುಲ್ಲನ್, ಸಂಬಾರ ಪದಾರ್ಥಗಳು, ಉಪ್ಪು, ಚರ್ಮ, ಕುಶಲ ವಸ್ತುಗಳು, ರೈಲ್ವೆಗೆ ಸಂಬಂಧಿಸಿದ ವಸ್ತುಗಳು, ಬೇಸಾಯಕ್ಕೆ ಉಪಕರಣಗಳು ಮತ್ತು ಟೀಯನ್ನು ತರಿಸಿಕೊಳ್ಳುತ್ತಿದ್ದರು.[6] ವಿದೇಶಿ ವ್ಯಾಪಾರದಲ್ಲಿ ಸ್ಥಳೀಯ ಬೆಲೆ, ರಫ್ತಿನ ಬೆಲೆ ಹತ್ತಿಗೆ ೬,೯೬೭,೮೦೯ ಅದರ ಬೆಲೆ ೧೫,೦೮,೩೪೩ ಇತ್ತು. ರಫ್ತು ಆಮದಿನಿಂದ ಸರ್ಕಾರಕ್ಕೆ ಅತೀ ಹೆಚ್ಚಿನ ಲಾಭ ಬರುತ್ತಿತ್ತು.

ಈಸ್ಟ್ ಇಂಡಿಯಾ ಕಂಪನಿ ವ್ಯಾಪಾರ ನೀತಿಯಲ್ಲಿ ಬದಲಾವಣೆ ತಂದಿತು. ೧೮೩೩ರಲ್ಲಿ ಕ್ರೈಸ್ತ ಧರ್ಮೀಯರು ಯಾರೇ ಆಗಲಿ ವ್ಯಾಪಾರ ಸ್ವಾತಂತ್ರ್ಯವನ್ನು ಮುರಿದು, ಭಾರತದೊಂದಿಗೆ ನೇರವಾಗಿ ವ್ಯಾಪಾರ ಮಾಡುವುದರಿಂದ ಭಾರತದ ಅಭಿವೃದ್ದಿ ಸಾಧ್ಯವೆಂದು ನಂಬಿದ್ದರು. ವ್ಯಾಪಾರ ಸ್ವಾತಂತ್ರ್ಯದ ಪ್ರತಿಪಾದಕರ ನೀತಿ-ನಿಯಮಗಳು, ವಾಣಿಜ್ಯಾಭಿವೃದ್ದಿ ಕ್ಷೇತ್ರಕ್ಕೆ ಮಾತ್ರವಲ್ಲದೆ ಇತರ ಕ್ಷೇತ್ರಗಳಿಗೆ ಅವಲಂಬಿಸಿದರೆ, ಇವರ ಒಟ್ಟು ವ್ಯಾಪಾರದ ನೀತಿ ವಿಶ್ವಕ್ಕೆ ನೀಡುವ ಲಕ್ಷಣವಾಗಿದೆ. ವ್ಯಾಪಾರ ದೇವರ ಸೇವೆಯು ಆಗಿರುತ್ತದೆಂದು ಆಂಗ್ಲರು ಪ್ರತಿಪಾದಿಸಿದ್ದರು.

೧೮ನೇ ಶತಮಾನದಲ್ಲಿ ಸ್ಟ್ರೇಟ್ ಸೆಟ್ಲಮೆಂಟ್‌ಗೆ ಸಹಿ ಹಾಕಿದಾಗ ದಕ್ಷಿಣ ಏಷಿಯಾ ರಾಷ್ಟ್ರಗಳಲ್ಲಿ ಇವರ ವ್ಯಾಪಾರ ಪ್ರಬಲವಾಯಿತು (೧೭೮೬ ಜುಲೈ ೧೭ರಂದು ‘ಸ್ಟೇಟ್ ಸೆಟ್ಲಮೆಂಟ್‌ನ ಸ್ಥಾಪನೆ). ಸ್ಟ್ರೇಟ್ ಸೆಟ್ಲಮೆಂಟ್ ಎಂದರೆ ಮಲಯ ಪರ್ಯಾಯ ದ್ವೀಪ ಸಿಂಗಾಪುರ, ಮಲಕ್ಕ ಮತ್ತು ಪೆನಾಂಗ್ ಪ್ರಾಂತಗಳು ಸೇರಿ ವ್ಯಾಪಾರ ಒಪ್ಪಂದ ಮಾಡಿ ಕೊಂಡಿದ್ದವು. ಅದಕ್ಕೆ ಸ್ಟ್ರೇಟ್ ಸೆಟ್ಲಮೆಂಟ್ ಎನ್ನುತ್ತಾರೆ. ಬ್ರಿಟಿಷರು ವ್ಯಾಪಾರಕ್ಕಾಗಿ ಸಿಂಗಾಪುರದಲ್ಲಿ ಕೇಂದ್ರವನ್ನು ಸ್ಥಾಪಿಸಿಕೊಂಡರು. ಆಗ ರಾಷ್ಟ್ರೀಯ ಹೆದ್ದಾರಿ ಮೂಲಕ ವ್ಯಾಪಾರ ಮಾಧ್ಯಮಕ್ಕೆ ಭಾರತ, ಚೀನಾ, ಬಾಟವಿಯ ಮತ್ತು ಆಸ್ಟ್ರೇಲಿಯಾ, ಮಲಕ್ಕಗಳಲ್ಲಿ ವಸಾಹತು ಸ್ಥಾಪಿಸುತ್ತಿದ್ದರು. ಅಲ್ಲಿದ್ದ ಗವರ್ನರ್ ಪ್ರದೇಶಗಳನ್ನು ಕಂಪನಿಗೆ ಸೇರಿಸಿಕೊಂಡು ವ್ಯಾಪಾರ ಅಭಿವೃದ್ದಿಗೊಳಿಸಿದನು. ವ್ಯಾಪಾರ ಮದ್ರಾಸ್ ಪ್ರಾಂತದಿಂದ ನಿಜಾಮನ ಪ್ರದೇಶ ಗಳವರೆಗೆ ನಡೆಯುತ್ತಿತ್ತು. ಭೌಗೋಳಿಕವಾಗಿ ಕರ್ನೂಲು, ಬಳ್ಳಾರಿ, ಗೋದಾವರಿ, ಕೃಷ್ಣ ಜಿಲ್ಲೆಗಳು ಪ್ರಮುಖವಾಗಿವೆ.[7]

ವ್ಯಾಪಾರದಲ್ಲಿ ಈ ಭಾಗದಿಂದ ಹತ್ತಿ, ಬೆಲ್ಲ, ಉಪ್ಪು, ತಂಬಾಕು, ಮೆಣಸಿನಕಾಯಿಯನ್ನು ರಫ್ತು ಮಾಡುತ್ತಿದ್ದರು. ಬಳ್ಳಾರಿ ಹೈದ್ರಾಬಾದ್ ಪ್ರದೇಶಗಳಿಂದ ತುಪ್ಪ, ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳು, ಸಂಬಾರ ಪದಾರ್ಥಗಳು ಮತ್ತು ಭತ್ತವನ್ನು ಇಲ್ಲಿಂದ ರಫ್ತು ಮಾಡಲಾಗುತ್ತಿತ್ತು. ೧೮೮೩-೮೪ರಲ್ಲಿ ಅಂದಾಜು ರಫ್ತಿನಿಂದ ೨,೩೫,೦೦೦ ಮತ್ತು ಆಮದಿ ನಿಂದ ೨,೫೫,೦೦೦ ಲಾಭ ಬರುತ್ತಿತ್ತು. ೮ ಪ್ರಮುಖ ವ್ಯಾಪಾರಿ ಕೇಂದ್ರಗಳಲ್ಲಿ ಬಳ್ಳಾರಿ ಜಿಲ್ಲೆ ಪ್ರಮುಖವಾದುದಾಗಿತ್ತು.

ಭೂಮಾಪನ ಪದ್ಧತಿ : ಆಂಗ್ಲರು ಮಾಡಿದ ಮೊದಲ ಶ್ರೇಷ್ಠತೆ ತರುವ ಕೆಲಸವೆಂದರೆ ಭೂಮಾಪನ ಮಾಡುವುದು. ೧೮೦೨ರಲ್ಲಿ ಸರ್. ಥಾಮಸ್ ಮನ್ರೊ ಇದನ್ನು ವ್ಯವಸ್ಥಿತವಾಗಿ ಬಳಕೆಗೆ ತಂದನು. ಕ್ರಮೇಣ ಭೂಮಾಪನ ಪದ್ಧತಿಯಿಂದ ತೆರಿಗೆ, ಕಂದಾಯ ಕೃಷಿಯಲ್ಲಿ ಚಟುವಟಿಕೆ ನಡೆಸಲು ಅನುಕೂಲವಾಯಿತು. ಡಾ. ಚಂದ್ರಶೇಖರ ಕಂಬಾರ ಅವರ ಪ್ರಕಾರ “ನಮ್ಮ ದೇಶದಲ್ಲಿ ಬ್ರಿಟಿಷರ ಕಾಲಕ್ಕೆ ಭೂಮಿಯನ್ನು ಸರ್ವೇ ಮಾಡುವ ಪದ್ಧತಿ ಬಳಕೆಗೆ ಬಂದಿತ್ತು. ನೂರಾರು ಮೋಜಣಿದಾರರು ಶಂಕು, ಸರಪಣಿ, ಗೂಟಗಳನ್ನು ತೆಗೆದುಕೊಂಡು ಬಂದು ಭೂಮಿಯನ್ನು ಅಳೆದುಕೊಟ್ಟರು.[8] ಇದರ ಪ್ರತಿಫಲ ಎಲ್ಲರಿಗೂ ಉಪಯುಕ್ತ ವಾಯಿತು. ಎಲ್ಲರಿಗೂ ಅನುಕೂಲವಾಗುವಂತೆ ಭೂಮಿಯನ್ನು ಅಳತೆ ಮಾಡಿದ್ದರಿಂದ ನಿರ್ದಿಷ್ಟವಾಗಿ ತೆರಿಗೆ ಕೊಡಲು ಅವಕಾಶವಾಯಿತು.

ಬ್ರಿಟಿಷರು ಸರ್ವೇಯ ಮೂಲಕ ಭೂಮಿಯನ್ನು, ಇತಿಹಾಸದ ಮೂಲಕ ಇಲ್ಲಿಯ ಸಂಸ್ಕೃತಿಯನ್ನು, ಇಂಗ್ಲಿಷ್ ಭಾಷೆಯ ಮೂಲಕ ಇಲ್ಲಿಯ ಸಾಹಿತ್ಯ ಮತ್ತು ಧರ್ಮಗಳನ್ನು ಅರಿತರೆಂದು ಕಂಬಾರರು ಅಭಿಪ್ರಾಯಿಸಿದ್ದಾರೆ.[9] ಇಲ್ಲಿನ ಆಂಗ್ಲ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಮುಖಾಮುಖಿಯಾದಾಗ, ಅದರ ಹಿಂದೆ ಉಂಟಾಗಿದ್ದ ವಾಸ್ತವಿಕ ಚಿತ್ರಣವನ್ನು ತೋರಿಸುತ್ತವೆ. ಭೂಮಾಪನದಿಂದ ಜನಸಾಮಾನ್ಯರಿಗೆ ಅತೀ ಹೆಚ್ಚಿನ ಉಪಯೋಗ ವಾಯಿತು. ಜಮೀನ್ದಾರಿ, ರಾಯತ್ವಾರಿ ಪದ್ಧತಿಗಳಿಂದ ಕೊನೆಗೆ ಜನರು ಹೊರಬರಲು ಅಸಾಧ್ಯವಾಯಿತು. ಹಾಗಾಗಿ ಅಳವಡಿಸಿಕೊಳ್ಳುವ ವಿಧಾನ, ಪದ್ಧತಿಗಳು ಸರ್ವಸಮಾನ ವಾಗಿದ್ದರೆ ಅವು ಸತ್ಯ ಅಥವಾ ಲೋಪದಿಂದ ಕೂಡಿರುವುದು ಸಹಜ. ಜಲಾನಯನ ಪ್ರದೇಶಗಳನ್ನು, ನದಿ ಮುಖಜ ಭೂಮಿಯನ್ನು ಉಂಬಳಿ, ಇನಾಮು ಕೊಡುವುದು ನಿಷಿದ್ಧ ವಾಗಿತ್ತು. ಗೂಟಗಳಿಂದ ಅಳತೆ ಮಾಡುತ್ತಾ, ಗುಂಟೆ, ಎಕರೆ, ಇತ್ಯಾದಿ ಹಿಸ್ಸೆಗಳಾಗಿ ಮಾಡುತ್ತಿ ದ್ದರು. ಆಂಗ್ಲರ ಮಹಾಸಾಧನೆಗಿಂತ ಚಾಣಾಕ್ಷತೆಗೆ ಅವರ ಭೂಮಾಪನ ಅಳವಡಿಕೆ ಅತ್ಯಂತ ಸಮಂಜಸವಾಗಿತ್ತು. ಅವರು ಮಾಡಿದ ಭೂಮಾಪನ(ಸರ್ವೇ)ವನ್ನೇ ಬಳಸುತ್ತಿದ್ದರು. ಸ್ಥಳೀಯ ಶ್ಯಾನುಭೋಗನ ಸಹಾಯದಿಂದ, ಕಂದಾಯದ ಇಲಾಖೆಯ ಮೋಜಣಿದಾರ ಭೂಮಿಯನ್ನು ಅಳತೆ ಮಾಡುತ್ತಿದ್ದ. ಪುನಃ ಹೊಲವನ್ನು ಅಳತೆ ಮಾಡಿಸಿದರೆ ಅದರ ವೆಚ್ಚವನ್ನು ಕೊಡಬೇಕಿತ್ತು. ಆಗ ಹಳ್ಳಿಯ ಜನರೇ ಮುಂದೆ ಬಂದು ಅಳತೆಯ ಉಪಕರಣ ಗಳನ್ನು ಬಳಸುತ್ತಿದ್ದರು. ನಗರ ಮಟ್ಟದಲ್ಲಿ ಪ್ರತ್ಯೇಕವಾಗಿ ಕೂಲಿ ಆಳುಗಳನ್ನು ನೇಮಿಸಬೇಕಾ ಗಿತ್ತು. ಒಟ್ಟಾರೆ ಬ್ರಿಟಿಷರ ಭೂಮಾಪನ ಪದ್ಧತಿ ಇಂದಿನ ಭೂವ್ಯವಸ್ಥೆಗೆ ಹೋಲಿಸಿಕೊಂಡರೆ ಪ್ರಮುಖವಾದುದು.

ಭೂಕಂದಾಯ : ಭೂಕಂದಾಯವು ಸರ್ಕಾರಕ್ಕೆ ಸಲ್ಲುವ ಹಲವು ಕಂದಾಯಗಳಲ್ಲಿ ಲಾಭಕರ ವಾದುದು. ಬ್ರಿಟಿಷರ ಆಡಳಿತದಲ್ಲಿ ಖಜಾನೆಗೆ ಭೂಕಂದಾಯದಿಂದ ಹೇರಳವಾಗಿ ಹಣ ಬರುತ್ತಿತ್ತು. ಭೂಕಂದಾಯ ಸಂಗ್ರಹಣೆಯನ್ನು ಹಳ್ಳಿಯಲ್ಲಿ ಶ್ಯಾನುಭೋಗ ಅಥವಾ ಗ್ರಾಮ ಸಹಾಯಕ, ಹೋಬಳಿಗಳಲ್ಲಿ (ಫಿರ್ಕಾ), ಜಿಲ್ಲೆದಾರ (ರೆವಿನ್ಯೂ ಇನ್ಸ್‌ಪೆಕ್ಟರ್), ತಾಲ್ಲೂಕು ಗಳಲ್ಲಿ ತಹಶೀಲ್ದಾರ, ಉಪವಿಭಾಗದಲ್ಲಿ ಸಬ್‌ಕಲೆಕ್ಟರ್, ಜಿಲ್ಲೆಯಲ್ಲಿ ಕಲೆಕ್ಟರ್ ರೆವಿನ್ಯೂ ಬೋರ್ಡಿನ ಕಾರ್ಯದರ್ಶಿ ನೋಡಿಕೊಳ್ಳುತ್ತಿದ್ದರು. ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಗಳಾದವು. ಏಕೆಂದರೆ ಕ್ಷಾಮ, ಬರಗಾಲ, ಪ್ಲೇಗು ಬಂದಾಗ (ಅತಿವೃಷ್ಟಿ, ಅನಾವೃಷ್ಟಿ) ರೈತರಿಗೆ ಕಂದಾಯದಲ್ಲಿ ಮಾಪಿ (ಮನ್ನಾ) ಮಾಡುತ್ತಿದ್ದರು. ಭೂಕಂದಾಯವನ್ನು ಗ್ರಾಮದಲ್ಲಿ ಕರಣಂ ಅಥವಾ ಶ್ಯಾನುಭೋಗ (ಕರಣಿಕ) ವ್ಯವಸ್ಥಿತವಾಗಿ ಸಂಗ್ರಹಣೆ ಮಾಡುತ್ತಿದ್ದ. ಇವನು ಭೂದಾಖಲೆಗಳ ಬಗೆಗೆ ಪರಿಣಿತಿ ಹೊಂದಿರಬೇಕಿತ್ತು. ಆಂಗ್ಲರಿಗಿಂತ ಮೊದಲು ಭೂಕಂದಾಯ ವ್ಯವಸ್ಥೆ ಅಶಿಸ್ತಿನಿಂದ ಕೂಡಿತ್ತಲ್ಲದೆ, ಜಮೀನ್ದಾರಿ ವ್ಯವಸ್ಥೆಯಿಂದ ಈ ಭಾಗದಲ್ಲಿ ಸಾಕಷ್ಟು ಹಣ ಪೋಲಾಗುತ್ತಿತ್ತು. ಅದಕ್ಕಾಗಿ ಮನ್ರೋ ರೈತವಾರಿ ಭೂಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದನು. ಒಂದು ವರ್ಷಕ್ಕೆ ಭೂಕಂದಾಯ ೨೦ ಲಕ್ಷ ಕಂಠಿರಯ ಪಗೋಡಗಳು (ಸುಮಾರು ೫೮ ಲಕ್ಷ ರೂಪಾಯಿಗಳು) ಸಂಗ್ರಹಿಸುತ್ತಿದ್ದರು.[10] ಈ ರೀತಿ ಸಂಗ್ರಹವಾಗಲು ಮನ್ರೋ ತಂದ ರೈತವಾರಿ ಪದ್ಧತಿಯಿಂದ ನೇರವಾಗಿ ಕಂದಾಯ ಸರ್ಕಾರಕ್ಕೆ ಸಲ್ಲುತ್ತಿತ್ತು. ಆಗ ಕೃಷಿ ಭೂಮಿ, ನೀರಾವರಿ ಭೂಮಿ, ಫಲವತ್ತಾದ ಮಣ್ಣಿನ ವಿವಿಧ ಬಗೆಗಳನ್ನು ಕುರಿತಂತೆ ಕಂದಾಯ ಪಡೆಯುತ್ತಿದ್ದರು.[11]

ಉದಾ :

ಪ್ರಕಾರ

ನಿರ್ದಿಷ್ಟ ಕಂದಾಯ

ಹೆಚ್ಚಿನ ಕಂದಾಯ

ಕಡಿಮೆ ಕಂದಾಯ

(ರೂ.ಗಳಲ್ಲಿ)

(ರೂ.ಗಳಲ್ಲಿ)

(ರೂ.ಗಳಲ್ಲಿ)

ಒಣಭೂಮಿ ೧೯ ೨-೧೪-೮ ೦-೨-೪
ಕೃಷಿಭೂಮಿ ೧೨ ೧೭-೮-೦ ೧-೭-೪
ನೀರಾವರಿ ಭೂಮಿ ೨೦ ೨೯-೨೮ ೧-೭-೪

ತುಂಗಭದ್ರಾ ನದಿ ಸುತ್ತಮುತ್ತ ಈ ರೀತಿ ಕಂದಾಯವನ್ನು ಹೆಚ್ಚಾಗಿ ವಿಂಗಡಿಸಿ ಸಂಗ್ರಹಿಸು ತ್ತಿದ್ದರು. ಯಾವ ವಿಧದ ಭೂಮಿಗೆ ಆಗಲಿ ಕಂದಾಯ ನಿಗದಿ ಮಾಡಿ, ಗುಂಟೆ ಎಕರೆಗಳಿಗೆ ೨, ೮, ೧ ರೂ.ನಂತೆ ಸಾಮಾನ್ಯವಾಗಿ ಕೊಡಬೇಕಿತ್ತು. ಬ್ರಿಟಿಷರ ಕಂದಾಯ ಆಡಳಿತವು ಪಾಳೆಯಗಾರರ ಏಳಿಗೆ ಸಂಕಷ್ಟ ತಂದಿತು. ವಸ್ತು ವಿನಿಮಯ ತಮ್ಮ ತಮ್ಮಲ್ಲಿದ್ದು, ಹಣದ ರೂಪದಲ್ಲಿ ಸರ್ಕಾರಕ್ಕೆ ಕಂದಾಯ ನೀಡುತ್ತಿದ್ದರು. ಭೂಕಂದಾಯದಲ್ಲಿ ಎಕರೆಗೆ ೧ ರಿಂದ ೫ ಪಗೋಡಗಳವರೆಗೆ ಕೊಡಬೇಕಿತ್ತು.[1]       ಅದೇ, ಪು. ೨೯೧.

[2]       ಅದೇ, ಪು. ೨೯೧.

[3]       ಸುವರ್ಣ ಪುಷ್ಪಾಂಜಲಿ, ೧೯೬೪, ಪು. ೨೧.

[4]       Key to the index to the proceedings of the Board Of Revenue for the years 1885, p. 17.

[5]       ಸೆರೆಮನೆ ವರದಿ, ೧೮೮೪, ಪು. ೨.

[6]       ಬಳ್ಳಾರಿ ಬೆಳಗು, ೧೯೭೨, ಪು. ೩೫೩.

[7]       ಅದೇ ಸಂಪುಟ, ಪು. ೧೪.

[8]       ನೆಲದ ಮರೆಯ ನಿದಾನ, ೧೯೯೩, ಪು. ೬.

[9]       ಅದೇ, ಪು. ೬.

[10]      ಫ್ರಾನ್ಸಿಸ್, ಬಳ್ಳಾರಿ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ೧೯೦೪, ಪು. ೧೫೩.

[11]      ಅದೇ, ಪು. ೧೫೬.