ಗಮನಾರ್ಹ ಕಾರ್ಯ ಸಾಧನೆಗಳು

•   ೧೭೯೨ರಲ್ಲಿ ಟಿಪ್ಪುಸುಲ್ತಾನನ ಶಾಂತಿ ಒಪ್ಪಂದದ ತರುವಾಯ ಅವನ ಪ್ರದೇಶವಾದ ಬಾರಾಮಹಲ್‌ನ್ನು ನಾಗರಿಕ ಆಡಳಿತಕ್ಕೆ ಕ್ಯಾಪ್ಟನ್ ರೀಡ್ ಮೂಲಕ ಪಡೆದುಕೊಂಡನು.

•   ಭೂಕಂದಾಯ, ಭೂ ಒಡೆಯರನ್ನು ಕುರಿತು ಮನ್ರೋ ವರದಿ ತಯಾರಿಸಿ, ತುಂಗಭದ್ರಾದ ದಕ್ಷಿಣ ಪ್ರದೇಶ ಸುಮಾರು ೨೭,೦೦೦ ಚದರ ಮೈಲುಗಳನ್ನು ಪಡೆದು ಈಗಿರುವ ಬಳ್ಳಾರಿ, ಕಡಪ, ಕರ್ನೂಲು ಮತ್ತು ಅನಂತಪುರ ಸೇರಿದಂತೆ ಈ ಪ್ರದೇಶದಲ್ಲಿ ಏಳು ವರ್ಷಗಳ ಕಾಲ ಮನ್ರೋ ಕಾರ್ಯನಿರ್ವಹಿಸಿದನು.

•   ಪ್ರಾದೇಶಿಕ ಭಾಷೆಗೆ ಒತ್ತು ಕೊಟ್ಟನಲ್ಲದೆ, ಕಾಯಿದೆ-ಕಾನೂನುಗಳು ಅವನ ದೃಷ್ಟಿಯಲ್ಲಿ ರಕ್ಷಣೆ, ಬೆಳವಣಿಗೆಗೆ ಅಭಿವೃದ್ದಿಪಡಿಸುವುದಾಗಿತ್ತು.

•   ಭೂಕಂದಾಯ ಮೊತ್ತವನ್ನು ಕಡಿಮೆಗೊಳಿಸಿದನು.

•   ಧನಿಕ ಶ್ರೀಮಂತರ ವಿರುದ್ಧ ಮೊದಲಿನಿಂದಲೂ ಆಂದೋಲನಗಳು ನಡೆದುಬಂದಿವೆ ಎಂಬುದನ್ನು ಗಮನಿಸಿ ಸೂಕ್ತ ಪರಿಹಾರ ಕಂಡುಹಿಡಿಯುವಲ್ಲಿ ವಿಫಲನಾದನು.

•   ಬಂಡೆತ್ತಿ ಎನ್ನುವ ಪ್ರಮುಖ ಭೂಕಂದಾಯವನ್ನು ಕೃಷಿ ಕಾರ್ಮಿಕರಿಗೆ ವಿಧಿಸಿದನು.

•   ಲಂಚ, ದುರ್ವ್ಯವಹಾರ, ಕಂದಾಯ ಸಂಗ್ರಹಣೆಯಲ್ಲಿ ಹಣ ಸೋರುವಿಕೆಯನ್ನು ತಡೆದನು.

•   ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವ ಕೊಟ್ಟಿದ್ದರಿಂದ ಪ್ರತಿಷ್ಠೆ ಹೆಚ್ಚಾಯಿತು.

ಸುಧಾರಣೆಗಳು

•   ಕೃಷಿ, ಕಂದಾಯ ಪದ್ಧತಿಗಳಲ್ಲಿ ಬದಲಾವಣೆ.

•   ರೈತವಾರಿ ಪದ್ಧತಿ ಜಾರಿ.

•   ಸ್ವ-ಭೂರಹಿತ ರೈತರಿಗೆ ಪಟ್ಟಾ ನೀಡಿಕೆ.

•   ೧೮೦೩-೧೮೦೬ರವರೆಗೆ ಪ್ರಥಮವಾಗಿ ಭೂಮಿಯನ್ನು ಸರ್ವೆ ಮಾಡಿಸಿದ್ದು.

•   ಆಡಳಿತ ಸರಳಗೊಳಿಸುವಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮಗಳಲ್ಲಿ ಅನೇಕ ಬದಲಾವಣೆ ಮತ್ತು ಆಡಳಿತದಲ್ಲಿ ಸ್ಥಳೀಯರಿಗೆ ಅವಕಾಶ.

•   ಪಾಳೆಯಗಾರರನ್ನು ಹತ್ತಿಕ್ಕಿ ಪರ್ಯಾಯ ವೃತ್ತಿಗಳಲ್ಲಿ ತೊಡಗಲು ಆದೇಶ.

ದತ್ತ ಜಿಲ್ಲೆಗಳಲ್ಲಿ ೧೮೦೫ರ ಸುಮಾರಿಗೆ ನೀಲಿ (ಇಂಡಿಗೊ) ರಫ್ತಿಗಾಗಿ ನಡೆದ ದಂಗೆಗಳನ್ನು ಬ್ರಿಟಿಷರು ಹತ್ತಿಕ್ಕಿದರು. ನೀಲಿಯಿಂದ ೪,೩೭,೫೦೦ ರೂ. ಲಾಭ ಕಂಪನಿ ಸರ್ಕಾರಕ್ಕೆ ಇತ್ತು.

ಈ ಮೇಲಿನಂತೆ ಏನೆಲ್ಲಾ ಪ್ರಗತಿ, ಸುಧಾರಣೆಗಳಾದರೂ ನ್ಯೂನತೆಗಳಿಂದ ಮನ್ರೋ ಮುಕ್ತನಾಗಲಿಲ್ಲ. ಪಾಳೆಯಗಾರರನ್ನು ಮಟ್ಟ ಹಾಕಿದ್ದರಿಂದ ಪ್ರಾದೇಶಿಕ ಅಭಿಮಾನಕ್ಕೆ ಕುಂದು ಬಂದಿತಲ್ಲದೆ, ತಮಗಾದ ಅವಮಾನ ಸಹಿಸಿಕೊಳ್ಳದೆ ೧೮೦೩ರಲ್ಲಿ ಬಳ್ಳಾರಿಯಲ್ಲಿ ಪಾಳೆಯ ಗಾರರ ದಂಗೆಯಾಯಿತು. ಭೂಮಾಪನ ಕಾರ್ಯನಡೆಸಿದ್ದರಿಂದ ಉಳ್ಳವರೇ ಬಲಿಷ್ಠರಾದರು. ಪಟ್ಟಾ ಇಲ್ಲದ ಕೃಷಿಕರು ಭೂಮಿಯನ್ನು ಪಡೆಯುವಲ್ಲಿ ವಿಫಲರಾದರು. ಏನೆಲ್ಲಾ ಸುಧಾರಣೆ ಗಳು ಜಾರಿಗೆ ತಂದರೂ ಜನಸಾಮಾನ್ಯರೊಡನೆ ಬೆರೆಯದೆ ಕಂಪನಿ ಸರ್ಕಾರದ ಆಜ್ಞಾಪರಿ ಪಾಲಕನಾಗಿ ಮುಂದುವರೆದನು. ಇವನ ರೈತವಾರಿ ವ್ಯವಸ್ಥೆಯು ಜಮೀನ್ದಾರಿ ವ್ಯವಸ್ಥೆಯನ್ನು ದಮನಗೊಳಿಸಿತಲ್ಲದೆ, ಹೊಸ ಆಂದೋಲನಗಳಿಗೆ ಅವಕಾಶ ಮಾಡಿಕೊಟ್ಟಿತು. ಕೃಷಿಯಲ್ಲಿ ಆಧುನಿಕತೆ ಬೆಳೆದು ಸರ್ಕಾರ ಮತ್ತು ರೈತರ ನಡುವೆ ಪರಸ್ಪರ ನೇರ ಸಂಪರ್ಕ ಬೆಳೆಯಿತು. ಮನ್ರೋ ನೀರಾವರಿ ಕಾರ್ಯಸಾಧ್ಯತೆಗಳ ಬಗ್ಗೆ ಹೀಗೆ ಹೇಳಿದ್ದಾನೆ: ‘ಹೊಸದಾಗಿ ಇಲ್ಲಿ ಕೆರೆ ಗಳನ್ನು ನಿರ್ಮಿಸಿ ಹೋಗುವುದು. ತುಂಬಿಹೋಗಿರುವ ಕೆರೆಗಳ ದುರಸ್ತಿ ಕಾರ್ಯ ಕೈಗೊಳ್ಳುವುದ ಕ್ಕಿಂತ ವ್ಯರ್ಥ ಪ್ರಯೋಗವಾಗುತ್ತದೆ. ಏಕೆಂದರೆ ಸ್ಥಳದ ನಿವಾಸಿಗಳು ಈ ಉದ್ದೇಶಕ್ಕಾಗಿ ಕೆರೆಯನ್ನು ಮಾಡಿಕೊಂಡಿಲ್ಲದ ಒಂದೇ ಒಂದು ಹಳ್ಳಿಯು ನಮಗೆ ಕಾಣಸಿಗುವುದಿಲ್ಲ’ ಎಂದಿದ್ದಾನೆ.

ಬ್ರಿಟಿಷರ ಆಡಳಿತಗಾರರಲ್ಲಿ ರೀಡ್, ಮನ್ರೋ, ಗ್ರಾಹಂ, ಹಾರ್ಡಿಸ್, ವಾಸ್ಲೆಸ್, ಹಡ್ಜಸನ್, ಥ್ಯಾಕರೆ ಮೊದಲಾದವರು ಬರುವಾಗ ಲಾರ್ಡ್‌ಕಾರ್ನವಾಲೀಸ್‌ನ ಆಡಳಿತ ಸುಧಾರಣೆಗಳನ್ನು ಜಾರಿಗೆ ತರಲು ಇವರು ಮುಂದಾದರು. ಬಳ್ಳಾರಿ ಬ್ರಿಟಿಷರ ಕೈವಶವಾದಾಗ ಸ್ಥಳೀಯವಾಗಿ ಪ್ರಬಲರಾಗಿದ್ದವರು ಪಾಳೆಯಗಾರರು. ಇವರು ಶಕ್ತಿಶಾಲಿಯಾಗಿದ್ದು, ಇವರ ಅನುಯಾಯಿಗಳು ಸಹಸ್ರಾರು ಜನ ಇದ್ದರು. ದತ್ತ ಜಿಲ್ಲೆಗಳಲ್ಲಿ ೧೮೦೦ರ ಸುಮಾರಿಗೆ ೮೦ ಪಾಳೆಯಗಾರರು ಅವರ ಸೈನಿಕ ಕಾಲಾಳುದಲ್ಲಿ ೩೦,೦೦೦ ಸೈನಿಕ ಕಾವಲುಗಾರರು ಇದ್ದರು. ಇವರು ಬ್ರಿಟಿಷರು ಮತ್ತು ನಿಜಾಮನ ನಿಯಂತ್ರಣದಲ್ಲಿದ್ದರು.

ಮನ್ರೋನ ವ್ಯಕ್ತಿತ್ವ

ಸರ್. ಥಾಮಸ್ ಮನ್ರೋ ೧೮೦೭ರಲ್ಲಿ ತಾಯ್ನಡಿಗೆ ಹಿಂದಿರುಗಿದಾಗ ಇಲ್ಲಿ ಅವನ ವ್ಯಕ್ತಿತ್ವವನ್ನು ಮನಗಂಡ ಅನೇಕರು ‘ಮುನ್ರಪ್ಪ’ನೆಂದು ತಮಿಳು ಜನರು ಇವನನ್ನು ‘ಮಾಂಡವ್ಯಋಷಿ’ಯೆಂದು ಕರೆದರು. ಕಲೆಕ್ಟರ್ ಮನ್ರೋ ಯಾವುದೋ ಒಂದು ನೆವ ಒಡ್ಡಿ ದತ್ತಿ ಮತ್ತು ಉಂಬಳಿಯ ಭೂಮಿಯನ್ನು ಕಂಪನಿಯ ಅಧೀನದಲ್ಲಿ ಸೇರಿಸಲು ಅನುಕೂಲವಾಗುವಂತೆ ಆಗಿನ ಸರ್ಕಾರವು “ರಿಶಪ್ಸನ್ ಆಫ್ ಎಂಡೋವ್‌ಮೆಂಟ್” ಎಂಬ ಕಾನೂನನ್ನು ಜಾರಿಗೆ ತಂದಿತು. ಹೈದರಾಬಾದಿನ ನಿಜಾಮ ಮಂಚೇಲಿಯನ್ನು (ಮಂತ್ರಾಲಯ) ರಾಘವೇಂದ್ರಸ್ವಾಮಿಗಳ ಮಹಿಮೆಯನ್ನು ಸಂಪೂರ್ಣವಾಗಿ ವಿವರಿಸಿದಾಗ ಮನ್ರೋ (ಸಾಹೇಬರಿ)ಗೆ ಪರಮಾಶ್ಚರ್ಯವಾಯಿತು. ಸಜೀವ ಸಮಾಧಿಯಾದ ಸ್ವಾಮಿಯ ವಿಷಯ ತಿಳಿದದ್ದು ಅವನ ಜೀವನದಲ್ಲಿ ಅದೇ ಮೊದಲು ಎಂದು ತಿಳಿಯಬಹುದು. ಇದಕ್ಕಿಂತ ಮೊದಲು ಇಂತಹ ಯಾವ ಮಠಕ್ಕೆ ಭೇಟಿ ನೀಡಿದ ಬಗ್ಗೆ ಆಧಾರಗಳಿಲ್ಲ. ಮರುದಿನ ಮಠಕ್ಕೆ ಹೋದಾಗ ಪಾದರಕ್ಷೆಗಳನ್ನು ಬಿಟ್ಟು ತಲೆಯ ಮೇಲಿನ ಟೋಪಿಯನ್ನು ತೆಗೆದು ಕೈಯಲ್ಲಿಟ್ಟು ಕೊಂಡು ವೃಂದಾವನ ಪ್ರವೇಶಿಸಿದನು. ಬಂದು ನಿಂತ ಸ್ವಲ್ಪ ಹೊತ್ತಿನಲ್ಲಿ ಮನ್ರೋ ಇಂಗ್ಲಿಷ್ ನಲ್ಲಿ ಸಂಭಾಷಣೆ ಮಾಡತೊಡಗಿದ್ದು. ಅಲ್ಲಿರುವ ಭಕ್ತಾದಿಗಳಿಗೆ, ಜನಸ್ತೋಮಕ್ಕೆ ಪರಮಾ ಶ್ಚರ್ಯವಾಯಿತು. ಅನಂತರ ಈ ಭೂಮಿ ಸಂಪೂರ್ಣವಾಗಿ ಮಠಕ್ಕೆ ಸಂಬಂಧಿಸಿದ್ದೆಂದು ಘೋಷಿಸಿದನು. ಈ ವಿಷಯವನ್ನು ಗವರ್ನರ್‌ಗೂ ನಾಡಿನ ಇತರೆಡೆಗಳಿಗೆಲ್ಲಾ ತಿಳಿಯ ಪಡಿಸಿದನು.

ಮಂತ್ರಾಲಯಕ್ಕೂ ಮನ್ರೊ ಸಾಹೇಬರಿಗೂ ಸಂಬಂಧವನ್ನು ಸೃಷ್ಟಿಸಿದ ಆ ಘಟನೆ ಯೊಂದನ್ನು ಹೀಗೆಯೂ ತಿಳಿಸಲಾಗಿದೆ. ಬ್ರಿಟಿಷರ ಅಧೀನದಲ್ಲಿದ್ದ ವಿವಿಧ ಸಂಘ-ಸಂಸ್ಥೆ, ಮಠ-ಮಾನ್ಯಗಳಿಗೆ ಈ ಹಿಂದೆ ನೀಡಿದ್ದ ಇನಾಂ ಭೂಮಿಯನ್ನು ಬ್ರಿಟಿಷ್ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಬ್ರಿಟಿಷ್ ಅಧಿಕಾರಿಗಳು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸೇರಿದ ಉಂಬಳಿ(ಇನಾಂ)ಭೂಮಿ ಬ್ರಿಟಿಷರಿಗೆ ಸೇರ ಬೇಕಿತ್ತು. ಮಠದ ಸಾಂಪ್ರದಾಯಿಕ ಭಕ್ತರು, ಸ್ಥಳೀಯರು ಬ್ರಿಟಿಷ್ ಸರ್ಕಾರಕ್ಕೆ ಮತ್ತು ಕಲೆಕ್ಟರ್ ಆಗಿದ್ದ ಸರ್. ಥಾಮಸ್ ಮನ್ರೋಗೆ (೧೮೦೦) ಮನವಿ ಮಾಡಿಕೊಂಡರು. ಅದರಂತೆ ಮನ್ರೋ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಚರಿತ್ರೆ, ಪವಾಡಗಳನ್ನು ಕೇಳಿ ಮನಸೋತರು. ಭಕ್ತರಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳಬಹುದೆಂಬ ನಂಬಿಕೆ ಹುಸಿಯಾಯಿತು. ಮನ್ರೋ ಮಂತ್ರಾಲಯದ ಭೂಮಿ ವಿವಾದ ಬಗೆಹರಿಸಲು ಬಂದು ದಾಖಲೆಗಳನ್ನು ನೋಡಿ, ಸ್ವಾಮಿಗಳ ದರ್ಶನ ಪಡೆದು, ಒಂದು ರಾತ್ರಿ ತಂಗಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದ್ದರು. ಕೊನೆಗೆ ಮಠದ ಆಸ್ತಿ-ಪಾಸ್ತಿಗಳನ್ನು ಮಠಕ್ಕೆ ವಹಿಸಲು ಆದೇಶಿಸಿದನು (ಮದ್ರಾಸ್ ಗೆಜೆಟಿಯರ್‌ನಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ).

೩.೨.೨. ವಿಲಿಯಂ ಚಾಪ್ಲಿನ್ (೧೩.೭.೧೮೦೯ ರಿಂದ ೧೩.೬.೧೮೧೮)

ಸರ್. ಥಾಮಸ್ ಮನ್ರೋನ ನಂತರ ಬಳ್ಳಾರಿ ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದ ಕಲೆಕ್ಟರು ಗಳಲ್ಲಿ ಇವನು ಮೂರನೇಯವನು. ವಿಲಿಯಂ ಚಾಪ್ಲಿನ್ ಕಲೆಕ್ಟರ್‌ನಾಗಿದ್ದಾಗ ಪ್ರಬಲ ಪಿಂಡಾರಿಗಳ ಗುಂಪು ದಾಂದಲೆ (೧೮೧೮) ನಡೆಸಿತು. ಜಿಲ್ಲೆಯ ಪಶ್ಚಿಮ ಭಾಗದ ಬೆಲ್ಲಹುಣಸಿ, ತುಂಗಭದ್ರಾನದಿ ದಂಡೆಯ ಹಳ್ಳಿಗಳ ಮೇಲೆ ದಾಳಿ ನಡೆಸಿದ ನಂತರ ಹರಪನಹಳ್ಳಿಯನ್ನು ತಲುಪಿತು. ಉಪಖಜಾನೆಯನ್ನು ಲೂಟಿ ಮಾಡಿ ಪೀಠೋಪಕರಣಗಳನ್ನು ನಾಶಪಡಿಸಿದ ರಲ್ಲದೆ, ಅಪಾರ ನಷ್ಟಕ್ಕೆ ಕಾರಣರಾದರು. ಮುಂದುವರೆದು ಕೊಟ್ಟೂರಿಗೆ ನಂತರ ಕೂಡ್ಲಿಗಿ ಯನ್ನು ಪ್ರವೇಶಿಸಿದರು. ಮುಂದುವರೆದು ರಾಯದುರ್ಗಕ್ಕೆ ಹೋದರು. ನಂತರ ಬಳ್ಳಾರಿಗೆ ದಾಳಿ ಮಾಡುವಲ್ಲಿ ಛಿದ್ರವಾಗಿ ಹೋದರು. ೧೮೫೭ರ ಸುಮಾರಿಗೆ ಧಾರವಾಡ, ರಾಮದುರ್ಗ ಮತ್ತು ಕೊಪ್ಪಳಗಳಲ್ಲಿ ಇವರು ದಾಳಿ ಮಾಡುತ್ತಾರೆ. ೧೮೧೮ರಲ್ಲಿ ಕಂದಾಯವನ್ನು ವಿರೋಧಿಸಿ ಜನರು ದಂಗೆ ಎದ್ದಾಗ ಅದಕ್ಕೆ ಪರಿಹಾರವಾಗಿ ಮನ್ರೋನ ರೈತವಾರಿ ಪದ್ಧತಿ ಶಾಂತಿಯನ್ನು ತಂದೊಡ್ಡಿತು.

೩.೨.೩. ಎಫ್. ಡಬ್ಲ್ಯೂ. ರಾಬರ್ಟಸನ್ (೬.೪.೧೮೨೪ ರಿಂದ ೧೬.೧೨.೧೮೩೮)

ಬಳ್ಳಾರಿ ಜಿಲ್ಲೆಯ ಜನಪ್ರಿಯ ಕಲೆಕ್ಟರ್ ಎಂಬ ಹೆಗ್ಗಳಿಕೆಗೆ ಅರ್ಹನಾದವನು ರಾಬರ್ಟ್ ಸನ್. ಸುಮಾರು ೧೪ ವರ್ಷಗಳ ಆಡಳಿತಾವಧಿಯಲ್ಲಿ ಜಿಲ್ಲೆಯ ಬಗ್ಗೆ ಕಾಳಜಿಯಿಂದ ಕಾಮಗಾರಿ, ಹೊಸ ಕಟ್ಟಡಗಳ ನಿರ್ಮಾಣ, ಸ್ಮಾರಕಗಳ ಸಂರಕ್ಷಣೆ, ಗ್ರಾಮೀಣಾಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಂಡನು. ಇವನು ಬಳ್ಳಾರಿಗೆ ಧಾವಿಸಿದಾಗ ಗ್ರಾಮಾಧಿಕಾರಿಗಳು ಸರ್ಕಾರದ ಸಂಪೂರ್ಣ ನಿಯಂತ್ರಣಕ್ಕೊಳಪಟ್ಟರು. ಸರ್. ಥಾಮಸ್ ಮನ್ರೋ ರೈತವಾರಿ ಪದ್ಧತಿ, ಭೂಮಾಪನ ಪದ್ಧತಿಗಳನ್ನು ಜಾರಿಗೆ ತಂದರೆ, ರಾಬರ್ಟ್‌ಸನ್ ಸರ್ವತೋಮುಖಾ ಭಿವೃದ್ದಿಗೆ ಶ್ರಮಿಸಿದನು. ಬಳ್ಳಾರಿ ದಂಗೆ ಇವನ ಕಾಲದಲ್ಲಿ ನಡೆಯಿತು. ದಂಗೆಯ ಉದ್ದೇಶ ಸರ್ಕಾರ ಮತ್ತು ಭೂಒಡೆಯ ದರ್ಪಿಷ್ಟ ಪ್ರಭುಗಳ ವಿರುದ್ಧವೆನ್ನುವುದು ಗಮನಾರ್ಹ.

ಸಾಧನೆಗಳು

•   ೧೮೨೬ರಲ್ಲಿ ಸೊಂಡೂರಿನ ಶಿವರಾಮ್ ಘೊರ್ಪಡೆಯವರಿಗೆ ಜಹಗೀರುದಾರರಾಗಿದ್ದು ದಕ್ಕೆ ಸನ್ನದು ನೀಡಲಾಯಿತು.

•   ೧೮೨೭ ಡಿಸೆಂಬರ್ ೨೦ ರಂದು ಸರ್ಕಾರ ತಂಬಾಕು ಸರಬರಾಜು ಏಕಸ್ವಾಮ್ಯತೆಗೆ ಗುತ್ತಿಗೆದಾರರನ್ನು ನೇಮಕ ಮಾಡುವ ಬಗ್ಗೆ ಮತ್ತು ಅದರ ದರ ನಿರ್ಧಾರವನ್ನು ಕಂದಾಯ ಬೋರ್ಡ್ ನಿರ್ಧರಿಸುವ ಬಗ್ಗೆ ತೆಗೆದುಕೊಂಡ ತೀರ್ಮಾನಗಳು ಔಚಿತ್ಯ ಪೂರ್ಣವಾಗಿದ್ದವು.

•   ೧೮೩೭ರಲ್ಲಿ ಹಂಪೆ ವಿರೂಪಾಕ್ಷ ಸ್ವಾಮಿ ದೇವಾಲಯಕ್ಕೆ ದುರಸ್ತಿ (ರಿಪೇರ) ಕೆಲಸಗಳನ್ನು ಮಾಡಿಸಲು ತೀರ್ಮಾನಿಸಿ, ಇಟ್ಟಿಗೆ, ಸಿಮೆಂಟ್ ಬಳಸಿ ಮೂರು ಗೋಪುರಗಳ ದುರಸ್ತಿ ಕಾರ್ಯ ನೆರವೇರಿಸಿದನು.

•   ರಾಬರ್ಟ್‌ಸನ್ ಇಲ್ಲಿನ ಪ್ರಾಚ್ಯವಸ್ತುಗಳ ಬಗ್ಗೆ ಕಳಕಳಿಯುಳ್ಳವನಾಗಿ, ಸ್ಮಾರಕಗಳಿಗೆ ಸಂರಕ್ಷಣಾಕಾರ್ಯ ಕೈಗೊಂಡಿದ್ದು ಸ್ತುತ್ಯಾರ್ಹ. ಇವನು ೧೮೩೮ ಏಪ್ರಿಲ್‌ನಲ್ಲಿ ತೀರಿಕೊಂಡಾಗ ಅನಂತಪುರದಲ್ಲಿ ಸಮಾಧಿ ಮಾಡಲಾಯಿತು.

೩.೨.೪. ಎ. ಮಿಲ್ಲರ್ (೨೨.೮.೧೮೪೦ ರಿಂದ ೭.೮.೧೮೪೮)

ಎ. ಮಿಲ್ಲರ್ ೧೮೪೦ ಆಗಸ್ಟ್ ೨೨ ರಂದು ಬಳ್ಳಾರಿ ಜಿಲ್ಲೆಯ ಕಲೆಕ್ಟರನಾದನು. ಆಡಳಿತವನ್ನು ತನ್ನ ಇಚ್ಛೆಯಂತೆ ಮಾಡದೆ ಜನಪರವಾಗಿ ನಡೆಸಲು ಸೆಣಸಾಡಿದನು. ಏನೇ ಮಾಡಿದರೂ ಕಂಪನಿಯ ಕಡಿವಾಣದಿಂದ ರಾಜಕೀಯ ದಿವಾಳಿಗೆ ಆಸ್ಪದವಿರಲಿಲ್ಲ. ನಗರ, ಪಟ್ಟಣ ಮತ್ತು ಗ್ರಾಮಗಳು ವಿಕಾಸಗೊಂಡಿದ್ದು ಇವನ ಅವಧಿಯಲ್ಲಿಯೆ. ಹಾಗಾಗಿ ಬಳ್ಳಾರಿಯ ಪಟ್ಟಣವನ್ನು ಕ್ರಮಬದ್ಧವಾಗಿ ನಿಯೋಜಿಸಲು ಕಾರ್ಯೋನ್ಮುಖನಾದನು. ತರುವಾಯ ಕಿರುನಗರ, ರಸ್ತೆ, ಬಡಾವಣೆಗಳಾಗಿ ವಿಂಗಡಿಸಿದ್ದರಿಂದ, ಬಳ್ಳಾರಿಯ ಒಂದು ಪ್ರತ್ಯೇಕ ಪ್ರದೇಶಕ್ಕೆ ಮಿಲ್ಲರ್‌ಪೇಟೆ ಎಂದು ಹೆಸರಿಟ್ಟರುವುದು ಇಂದಿಗೂ ಕೂಡ ಪ್ರಚಲಿತ ದಲ್ಲಿದೆ. ಲೋಕೋಪಯೋಗಿ ಕೆಲಸಗಳಿಗೆ ಅತೀ ಹೆಚ್ಚಿನ ಪ್ರೋತ್ಸಾಹ ಕೊಟ್ಟಿದ್ದನು.

•   ಈತನ ಅಧಿಕಾರಾವಧಿಯಲ್ಲಿ ೧೮೪೧ರಲ್ಲಿ ಸೊಂಡೂರಿನ ಜಹಗೀರಾಗಿದ್ದ ಶ್ರೀ ವೆಂಕಟ ರಾವ್ ಘೋರ್ಪಡೆಯವರಿಗೆ ಸನ್ನದು ನೀಡಲಾಯಿತು.

•   ೧೮೪೭ರಲ್ಲಿ ಬ್ರಿಟಿಷರ ಸ್ಮಶಾನಕ್ಕಾಗಿ ಸೊಂಡೂರಿನ ಜಾಗೀರ್‌ದಾರರೊಡನೆ (ಬ್ರಿಟಿಷರು) ಒಪ್ಪಂದ ಮಾಡಿಕೊಂಡನು.

•   ೧೮೪೭ ಫೆಬ್ರವರಿ ೧೨, ಜಿಲ್ಲೆಯ ರೈತರಿಗೆ ತನ್ನ ನೇತೃತ್ವದಲ್ಲಿಯೇ ಕೆಲವು ಬದಲಾವಣೆ ಗಳನ್ನು ಗುಂಟೂರು ಜಿಲ್ಲಾ ಕಲೆಕ್ಟರ್‌ನ ಆದೇಶದಂತೆ ಮಾಡಿ ತಪ್ಪಿತಸ್ಥ ರೈತರಿಂದ ೮ ಪೈಸೆ ವಸೂಲಿ ಮಾಡುವ ಬಗ್ಗೆ ತಿಳಿಯಪಡಿಸಿದನು.

•   ೧೮೪೮ ನವೆಂಬರ್ ೨೮ ಮಿಲ್ಲರ್‌ಗೆ ಕಡಪ ಫೌಜುದಾರ ಅದಾಲತ್ ವ್ಯವಹಾರಕ್ಕೆ ಹೊಂದಿಕೊಂಡಂತೆ ಸ್ಥಳೀಯ ಭಾಷೆಯ ಪತ್ರಗಳನ್ನು ಯುರೋಪಿನ ಅಧಿಕಾರಿಗಳಿಗೂ ಕಳುಹಿಸಲು ಆದೇಶಿಸಿದನು.

•   ೧೮೪೮ ರಸ್ತೆ ಪಕ್ಕ ಬೀದಿಯಲ್ಲಿ ತೋಪು ಮತ್ತು ಮರಗಳನ್ನು ಬೆಳೆಸಲು ಸರ್ಕಾರದಿಂದ ಅನುಮತಿ ಪಡೆದನು.

•   ೧೮೪೮ ಭಾರತಕ್ಕೆ ಯುರೋಪಿನ ಭೂಮಾರ್ಗ ಮತ್ತು ಜಲಮಾರ್ಗವಾಗಿ ರಫ್ತು ಮಾಡಿದ ವಸ್ತುಗಳಿಗೆ ನಿಗದಿತ ‘ಕರ’ದ ವಿಚಾರ ನಡೆಸಿದನು.

೩.೨.೫. ಡಿ. ಮಾಯ್ನೆ (೮.೮.೧೮೪೮೨೩.೮.೧೮೪೮)

ರಾಬರ್ಟ್‌ಸನ್ ಮತ್ತು ಮಿಲ್ಲರ್‌ಗಳ ನಂತರ ಕಲೆಕ್ಟರ್‌ನಾಗಿ ಬಂದವನು ಮಾಯ್ನೆ. ಇವನು ಅಂತಹ ಗಮನಾರ್ಹವಾದ ಕೆಲಸಗಳನ್ನು ತನ್ನ ಆಳ್ವಿಕೆಯಲ್ಲಿ ಮಾಡಲಾಗದಿದ್ದರೂ, ಪರಿಗಣಿಸಬಹುದಾದಷ್ಟು ಕಾರ್ಯ ಸಾಧನೆ ಮಾಡಿದ್ದಾನೆಂಬುದು ದಿಟ. ಮದ್ರಾಸ್ ಸರ್ಕಾರ ಆದೇಶಿಸಿದಂತೆ ಆಡಳಿತದಲ್ಲಿ ಹೊಸ ನೀತಿಗಳನ್ನು ಜಾರಿಗೆ ತರುವುದರಲ್ಲಿ ನಿಸ್ಸೀಮ ನಾಗಿದ್ದನು.

ಆಳ್ವಿಕೆಯ ಏರಿಳಿತಗಳು

•   ೧೮೫೦ರಲ್ಲಿ ಭೂಕಂದಾಯ ನಿಗದಿ ರಚಿಸಲು ಸರ್ಕಾರಕ್ಕೆ ಅನುಮತಿ ಕೇಳಿದನು.

•   ಅದೇ ವರ್ಷದಲ್ಲಿ ಭೂವ್ಯವಸಾಯ ಮತ್ತು ಭೂತೀರ್ಮಾನಗಳ ಬಗ್ಗೆ ಸ್ಥಳೀಯ ಬೋರ್ಡ್ ಅಧಿಕಾರಿಗಳಿಗೆ ರೆವಿನ್ಯೂಬೋರ್ಡ್ ಕಾರ್ಯದರ್ಶಿಯವರು ಕಳುಹಿಸಿದ ಸುತ್ತೋಲೆ ಮತ್ತು ಕಲೆಕ್ಟರುಗಳ ನಿಯಮಾವಳಿಗಳು ಚಾಲ್ತಿಗೆ ಬಂದವು.

•   ೧೮೫೦ನೇ ಸಾಲಿಗೆ ಕರಾವಳಿಯಲ್ಲಿ ಪ್ರಮುಖ ವಾಣಿಜ್ಯ, ವ್ಯಾಪಾರ ಕೇಂದ್ರಗಳಿಗೆ ಕಲೆಕ್ಟರುಗಳ ಆಜ್ಞೆಯಂತೆ ಸಮೀಕ್ಷೆ ನಡೆಸಲಾಯಿತು.

•   ೧೮೫೦ ಮಾರ್ಚ್, ಗುಂಟೂರು ಜಿಲ್ಲೆಯ ಹಳ್ಳಿಗಳು ಮತ್ತು ತಾಲ್ಲೂಕುಗಳನ್ನು ಭೂಕಂದಾಯ ಮತ್ತು ಭೂಸಾಗುವಳಿಯ ಲೆಕ್ಕಪತ್ರಗಳು ಕ್ರೂಢೀಕರಿಸಲು ಕೆನರಾ ಕಲೆಕ್ಟರ್‌ಗಳಿಂದ ಪರಸ್ಪರ ಪತ್ರ ವ್ಯವಹಾರ.

•   ೧೮೫೦ ಮಾರ್ಚ್ ೧೮, ಬಳ್ಳಾರಿ ಜಿಲ್ಲಾ ಕೋರ್ಟ್‌ನಲ್ಲಿ ನಡೆದ ನ್ಯಾಯಾಂಗ ವಿಚಾರಣಾ ಸಂದರ್ಭದಲ್ಲಿ ಸೆಶನ್ಸ್ ಮತ್ತು ಅದರ ಅಧೀನ ನ್ಯಾಯಾಧೀಶರ ಹಾಜರಾತಿ ಬಗ್ಗೆ ಕಂದಾಯ ಬೋರ್ಡ್ ಸಭೆಯಲ್ಲಿ ವಿಶೇಷ ನಡವಳಿಗಳನ್ನು ಕೈಗೊಳ್ಳಲಾಯಿತು.

•   ೧೮೫೦ ಫೆಬ್ರವರಿ ೨೮ ರಂದು ಇವನು ಸಾರ್ವಜನಿಕರ ಅವಗಾಹನೆಗೆ ಹೊರಡಿಸಿದ ಒಂದು ಆದೇಶ ಮುಖ್ಯವಾದುದು. ಸರ್ಕಾರವು ನಿಗದಿಪಡಿಸಿದ ಕಾಮಗಾರಿಗಳನ್ನು ಕೈಗೊಳ್ಳುವಾಗ ಮೂಲ ಯೋಜನೆ (ಪ್ಲಾನ್)ಯಲ್ಲಿರುವಂತೆ ಮಾಡದಿದ್ದರೆ, ಅಂತಹ ಕೆಲಸ, ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು, ಕಟ್ಟಡಗಳು ಸುಭದ್ರವಾಗಿ ಮೇಲೇಳುವುದಕ್ಕೆ ಇದರಿಂದ ಸಾಧ್ಯವಾಯಿತು.

•   ೧೮೫೦ ಮೇ ೬ ಎಂ.ಎ. ಹಾಲ್, ಸಬ್ ಕಲೆಕ್ಟರ್ ಮತ್ತು ಡಬ್ಲ್ಯೂ ರೀಡ್ ಅಧೀನ ಉಪಕಲೆಕ್ಟರ್‌ರವರಿಗೆ ಕಂದಾಯ ಬೋರ್ಡುನಿಂದ ಗುಡಾರಭತ್ಯೆ ಮಂಜೂರಾತಿ ವರದಿ ತಯಾರಿಸಿದನು.

•   ಉಪ್ಪಿನಿಂದ ನಷ್ಟವಾಗುತ್ತಿದ್ದುದನ್ನು ತಪ್ಪಿಸಲು ರೆವೆನ್ಯೂ ಬೋರ್ಡಿನವರು ಸುತ್ತೋಲೆ ಹೊರಡಿಸಿದರು. ಹೀಗೆ ಅವನ ಅವಧಿಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆದವು.

೩.೨.೬. ಎ. ಹ್ಯಾಥವೇ (೯.೧.೧೮೫೦೨೦.೪.೧೮೫೯)

ಬಳ್ಳಾರಿ ಜಿಲ್ಲೆಯ ೧೮ನೇ ಕಲೆಕ್ಟರ್‌ನಾಗಿದ್ದವನು ಎ. ಹ್ಯಾಥವೇ. ಕಾರ್ಲೆಸ್ ಪಿಲ್ಲೇ ನಂತರ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ ಹ್ಯಾಥವೇ; ಕಲೆಕ್ಟರ್‌ನಾಗಿ ಮೆಚ್ಚುವಂತೆ ಕಾರ್ಯ ನಿರ್ವಹಿಸಿದು ಶ್ಲಾಘನೀಯ. ೯.೮.೧೮೫೦ರಲ್ಲಿ ಅಧಿಕಾರ ಸ್ವೀಕರಿಸಿ, ವೈಯಕ್ತಿಕ ಬದುಕಿಗಿಂತ ಸಾರ್ವತ್ರಿಕ ಬದುಕಿಗೆ ಹೆಚ್ಚು ಸ್ಪಂದಿಸಿದನು. ಇವನ ಕಾಲದಲ್ಲಾದ ಕೆಲವು ಸಾಧನೆಗಳನ್ನು ಅವಲೋಕಿಸಬಹುದಾಗಿದೆ.

•   ಆಡಳಿತದ ಅಗತ್ಯತೆ ಸಲುವಾಗಿ ಗ್ರಾಮಗಳಿಗೆ ತಳವಾರರ ನೇಮಕ ಮತ್ತು ಸ್ಥಳಾಂತರ.

•   ಜಿಲ್ಲೆಯಲ್ಲಿ ರಕ್ಷಣೆಯಿಂದ ಶಾಂತಿಯನ್ನು ಕಾಪಾಡಬಹುದೆಂದು ಪೊಲೀಸ್ ಮತ್ತು ಸೈನ್ಯವನ್ನು ಅಭಿವೃದ್ದಿ ಪಡಿಸಿದನು.

•   ಪ್ರತಿಗ್ರಾಮಕ್ಕೊಬ್ಬ ತೆರಿಗೆ ಸಂಗ್ರಾಹಕನನ್ನು, ನ್ಯಾಯ ತೀರ್ಮಾನಿಸುವ ಸಹಾಯಕನನ್ನು ನೇಮಕ ಮಾಡಲಾಯಿತು.

•   ಆಧುನಿಕ ಸುಧಾರಣೆಗಳನ್ನು ಕೃಷಿ ಕ್ಷೇತ್ರದಲ್ಲಿ ಜಾರಿಗೆ ತಂದನು.

•   ತಹಶೀಲ್ದಾರ, ಗ್ರಾಮಾಧಿಕಾರಿ ಇತರೆ ಕೆಳವರ್ಗದ ಕೆಲಸಗಳಿಗೆ ಸ್ಥಳೀಯರನ್ನು ನೇಮಿ ಸಿದ್ದು.

•   ತಾಲೂಕು ಕೇಂದ್ರಗಳ ವಿಂಗಡಣೆ (ಕಂಪಲಿಯಿಂದ ಹೊಸಪೇಟೆಗೆ).

•   ಕೆರೆ ಕಾಲುವೆಗಳಿಗೆ ನೀರಗಂಟಿಗಳ ನೇಮಕ ಇತ್ಯಾದಿ.

ಭಾರತದಲ್ಲಿ ಬ್ರಿಟಿಷರ ವಿರುದ್ಧ ೧೮೫೭ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ (ಸಿಪಾಯಿ ದಂಗೆ) ನಡೆಯಿತಾದರೂ ಯಶಸ್ಸುಗಳಿಸಲಿಲ್ಲ. ೧೮೫೮ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯೂ ಸಹ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಈ ಸಂದರ್ಭದಲ್ಲಿ ಕಲೆಕ್ಟರ್‌ನಾಗಿದ್ದ ಎ. ಹ್ಯಾಥವೆ ಸ್ವಾತಂತ್ರ್ಯ ಹೋರಾಟಗಾರರನ್ನು ಹಿಮ್ಮೆಟ್ಟಿಸಿ ಉಳಿದವರನ್ನು ಸೆರೆಮನೆಗೆ ತಳ್ಳಿದನು. ಇವನು ತೆರಿಗೆ ಸಂಗ್ರಹಣೆಗೆ ಗಮನಹರಿಸಿದ. ನೀರಾವರಿ ಭೂಮಿ, ಒಣಭೂಮಿ ಗಳಿಂದ ಕಂದಾಯ ಸಂಗ್ರಹಿಸಲಾಗುತ್ತಿತ್ತು. ಹ್ಯಾಥವೇ ಇನಾಂ ಭೂಮಿಯಿಂದ ತೆರಿಗೆ ಪಡೆಯುತ್ತಿರಲಿಲ್ಲ. ಬೋರ್ಡ್ ಆಫ್ ರೆವಿನ್ಯೂಗೆ ಹಣವನ್ನು ಕಳುಹಿಸುತ್ತಿದ್ದರು. ಹ್ಯಾಥವೇ ಆಡಳಿತದಲ್ಲಿ ಎಷ್ಟೆಲ್ಲಾ ಸಾಧನೆ ಮಾಡಿದ್ದರೂ ಆಡಳಿತದಲ್ಲಿ ನ್ಯೂನ್ಯತೆಗಳು ಎದ್ದು ಕಾಣುತ್ತವೆ. ಅವನು ತಳವಾರರನ್ನು ನೇಮಿಸಿದ ನಂತರ ಗ್ರಾಮಕಾವಲಿಗೆ, ತೆರಿಗೆ ಸಂಗ್ರಹಿಸಲು ಇವನು ಅಯೋಗ್ಯರೆಂದು ಮತ್ತು ಪೊಲೀಸ್ ಸಹಾಯಕರಾಗಲು ಯೋಗ್ಯರೆಂದು ಪರಿಗಣಿಸಿ ದನು. ತುಂಗಭದ್ರ ಕಾಲುವೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ನೀರಗಂಟಿಗಳನ್ನು ಮದ್ರಾಸ್ ಸರ್ಕಾರದ ಆದೇಶದಂತೆ ನೇಮಿಸಿದ್ದು. ಅಂದು ನೀರಗಂಟಿಗಳಿಗೆ ಸಂಬಳದ ಜೊತೆಗೆ ಮಾನ್ಯವನ್ನು ಸಲ್ಲಿಸಬೇಕಿತ್ತು. ೧.೧೧.೧೮೫೯ರಲ್ಲಿ ಕಾಲುವೆಗಳಿಗೆ ಕೋಡಿಗೊಬ್ಬ ನೀರಗಂಟಿಯನ್ನು ನೇಮಿಸಿ ಸರ್ಕಾರಕ್ಕೆ ಪತ್ರ ಕಳುಹಿಸಿದನು. ಹ್ಯಾಥವೇಯ ಸತತ ಪ್ರಯತ್ನ ದಿಂದ ಬಳ್ಳಾರಿ ನಗರಕ್ಕೆ ಕುಡಿಯಲು ನೀರು ಬರಲು ಪ್ರಾರಂಭವಾಯಿತು.

ತನ್ನ ಆಡಳಿತಾವಧಿಯಲ್ಲಿ ಕರಕುಶಲ ಕರ್ಮಿಗಳಿಗೆ ಏಕರೂಪದ ವಾರ್ಷಿಕ ತೆರಿಗೆ ನಿಗದಿ ಮಾಡಿದ್ದನು. ತೆರಿಗೆಯ ವಿವರ ಈ ಕೆಳಗಿನಂತಿದೆ.

ಕರಕುಶಲಕರ್ಮಿಗಳು ತೆರಿಗೆ ಪ್ರಮಾಣ ರೂ.ಗಳಲ್ಲಿ

ಕ್ಷೌರಿಕರು ೧೨,೯೦೬
ಪಿಂಜಾರರು ೧,೨೬೬
ಮಧ್ಯಸಾರವನ್ನು ತಯಾರಿಸುವವರು ೨,೫೬೯
ಕಂಬಾರ ಮತ್ತು ಅಕ್ಕಸಾಲಿಗ ೪೯೪
ಉಪ್ಪು ತಯಾರಿಸುವವರಿಗೆ ೯೪೬
ಇತರರಿಗೆ ೮೦೬

ಈ ಮೇಲಿನ ತೆರಿಗೆಯನ್ನು ಕಡ್ಡಾಯವಾಗಿ ಕಟ್ಟಬೇಕಿತ್ತು. ಇಲ್ಲವಾದಲ್ಲಿ ಪ್ರತಿ ವರ್ಷಕ್ಕಿಂತ ೨ ರಷ್ಟು ಮುಂದಿನ ವರ್ಷಕ್ಕೆ ಹೆಚ್ಚಳವಾಗುತ್ತಿತ್ತಲ್ಲದೆ, ವೃದ್ದಿಯಾಗುತ್ತಿತ್ತು. ಸರ್ಕಾರದ ಖಜಾನೆಗೆ ಲಾಭ-ನಷ್ಟದ ಪ್ರಶ್ನೆಯಾಗಿತ್ತು. ವಲಸೆ ಜೀವನ ಹೆಚ್ಚಾಗಲು ಈ ಪದ್ಧತಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣವಾಯಿತು. ಅಂತಿಮವಾಗಿ ಏಳಿಗೆಗೆ ಬಂದ ನೀರಗಂಟಿಗಳ ಪ್ರದೇಶಗಳೆಂದರೆ ಬುಕ್ಕಾಪಟ್ಟಣ, ಸಿಂಗನಮಾಲಾ, ದರೋಜಿ, ಡಣಾಯಕನಕೆರೆ, ಕೊಟ್ಟೂರು ಇನ್ನು ಮುಂತಾದವುಗಳು.

೩.೨.೭. ರಾಬರ್ಟ್ ಸಿವೆಲ್ (೧೮೮೪೧೮೯೪)

ಭಾರತದಲ್ಲಿ ಆಳ್ವಿಕೆ ನಡೆಸಿದ ಆಂಗ್ಲರು ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಧ್ವಂಸ ಗೊಳಿಸಿದರೆ, ಇನ್ನು ಕೆಲವರು ಕಲಾ ಸಂಪತ್ತನ್ನು ಊರ್ಜಿತಗೊಳಿಸಿದ್ದು ಗಮನಾರ್ಹ. ಇಂತಹ ಸ್ತುತ್ಯಾರ್ಹ ಸೇವೆ ಮಾಡಿದ ಕೀರ್ತಿ ಕಲೆಕ್ಟರ್ ರಾಬರ್ಟ್ ಸಿವೆಲ್‌ನದು. ಸಾರ್ವಜನಿಕರ ಬದುಕಿಗೆ ಗಮನ ನೀಡಲಾಗಿದ್ದು, ಇವನಿಗೂ ಹಂಪೆಗೂ ಅವಿನಾಭಾವ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಹತ್ತು ವರ್ಷಗಳಲ್ಲಿ ಸುಮಾರು ನಾಲ್ಕು ಬಾರಿ ಕಲೆಕ್ಟರ್‌ನಾಗುತ್ತಾನೆ. ಇವನ ಆಳ್ವಿಕೆಯ ಆರಂಭದಲ್ಲೇ ಜಿಲ್ಲೆಯಲ್ಲಿ ಕೋಲಾಹಲವಿತ್ತು. ತದನಂತರ ವಿವಿಧ ಕಾರ್ಯಚಟುವಟಿಕೆಗಳಿಂದ ಅದು ಉಲ್ಬಣಕೊಳ್ಳಲಿಲ್ಲ. ಸಿವಿಲ್‌ನ ಆಡಳಿತವನ್ನು ಜನ ಸಾಮಾನ್ಯರು ಮೆಚ್ಚಿಕೊಳ್ಳಲು ಇವನು ಕೈಗೊಂಡ ಹಂಪೆಯ ಸ್ಮಾರಕಗಳ ರಕ್ಷಣಾ ಕಾರ್ಯ ಗಳಿಂದ ಎಂಬುದನ್ನು ಪ್ರತ್ಯೇಕವಾಗಿ ತಿಳಿಸಬೇಕಿಲ್ಲ. ಏಕೆಂದರೆ ಆಗ ಅನಂತಪುರ ಜಿಲ್ಲೆ ಪ್ರತ್ಯೇಕವಾಯಿತು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಬರಗಾಲ ಸಂಭವಿಸಿದ್ದರಿಂದ ಪರಿಸ್ಥಿತಿ ಚಿಂತಾಜನಕವಾಗಿದ್ದುದು ಮರೆಯುವಂತಿಲ್ಲ. ಇಂತಹ ಸಂದರ್ಭದಲ್ಲಿ ನ್ಯಾಯಾಧೀಶನಾಗಿ ತದನಂತರ ಕಲೆಕ್ಟರ್‌ನಾಗಿ ತೊಂದರೆಗಳನ್ನು ನಿಭಾಯಿಸಿದ್ದು ಇವನ ಹಿರಿಮೆಗೆ ಇನ್ನಷ್ಟು ಮೆರಗು ನೀಡುತ್ತದೆ.

೧೮೭೦ರಲ್ಲಿ ಅಮರಾವತಿ ಉತ್ಖನನದಲ್ಲಿ ಪಾಲ್ಗೊಂಡ ರಾಬರ್ಟ ಸಿವೆಲ್ ಪ್ರಾಕ್ತನ ಶಾಸ್ತ್ರದ ಬಗ್ಗೆ ಮೊದಲಿನಿಂದಲೂ ಆಸಕ್ತಿಯುಳ್ಳವನಾಗಿದ್ದನು. ಹಂಪೆಯನ್ನು ವಿಶ್ವಮಟ್ಟಕ್ಕೆ ಪ್ರಚಾರಗೊಳಿಸಿದ ಆಂಗ್ಲ ವ್ಯಕ್ತಿ ಸಿವೆಲ್. ಇದು ಚರಿತ್ರೆಯಲ್ಲಿ ಮರೆಯಲಾಗದ ಸನ್ನಿವೇಶದ ಘಟನೆ. ಇವನ ಆಡಳಿತದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ನ್ಯಾಯಾಂಗ ಇತರ ಕ್ಷೇತ್ರಗಳಲ್ಲಿ ಅಭಿವೃದ್ದಿ ಮತ್ತು ಬದಲಾವಣೆಗಳು ಪುನರಾವಲೋಕನೆಗೆ ಎಡೆಮಾಡಿಕೊಟ್ಟಿವೆ.

ರಾಬರ್ಟ್ ಸಿವೆಲ್ ಕೇವಲ ಆಡಳಿತಗಾರ, ನ್ಯಾಯಾಧೀಶನಾಗಿರದೆ ಇತಿಹಾಸ ಸಂಶೋಧಕ, ವಿದ್ವಾಂಸನೂ ಆಗಿದ್ದ. ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ತಿಳಿದು ಬಂದಿರುವಂತೆ ಇವನು ಒಂಬತ್ತು ಸಂಶೋಧನಾ ಲೇಖನಗಳನ್ನು, ಎರಡು ಪ್ರಮುಖ ಕೃತಿ ಗಳನ್ನು ರಚಿಸಿದ್ದಾನೆ. ಅವುಗಳೆಂದರೆ, A Forgotten Empire : Vijayanagara, ಮತ್ತೊಂದು India before the English. ಇನ್ನು ಭೂಗೋಳ, ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಕಿರುಪುಸ್ತಿಕೆಗಳನ್ನು ರಚಿಸಿದ್ದಾನೆ. ಒಟ್ಟಾರೆ, ಸಾಂಸ್ಕೃತಿಕ, ಐತಿಹಾಸಿಕತೆಗೆ ಕೊಟ್ಟ ಗಮನ ಆಡಳಿತಕ್ಕೆ ಸಿವೆಲ್ ಕೊಡದೆ ಇರಲಿಲ್ಲ.

•   ಆಡಳಿತ ಭದ್ರತೆಗಾಗಿ ಗ್ರಾಮಾಧಿಕಾರಿಗಳ ನೇಮಕ.

•   ಖಜಾನೆಗಳಲ್ಲಿ ಹಣ ಸೋರುವಿಕೆಯನ್ನು ತಡೆಯಲು ತೆರಿಗೆ ಸಂಗ್ರಹಕಾರರ, ಮೇಲ್ವಿ ಚಾರಕರ ನೇಮಕ. ಅವರಿಗೆ ಅಲ್ಲಲ್ಲಿ ಪರೀಕ್ಷೆ ಮತ್ತು ತನಿಖೆಗಳಿಗೆ ಆಸ್ಪದ ನೀಡಿದನು.

•   ಕ್ಷಾಮ, ಬರಗಾಲ ಬಂದಾಗ ಬಡರೈತರು ಚೇತರಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಅಸಮರ್ಥ ಕುಟುಂಬದವರಿಂದ ಮನೆ ತೆರಿಗೆಯನ್ನು ವಿನಾಯಿತಿ ಗೊಳಿಸಿದನು.

•   ಕಠಿಣವಾದ ತೆರಿಗೆಗಳನ್ನು ಸಡಿಲಿಸಿ, ನಿರ್ಲಕ್ಷಿತರಿಗೆ ಮಾಫಿ (ವಿನಾಯಿತಿ) ಮಾಡಿದನು.

•   ವ್ಯಕ್ತಿ ಹೊಸ ಕುಲಕ್ಕೆ ಸೇರಿಕೊಂಡಾಗ, ಜಂಗಮರು, ಪುರೋಹಿತರು ಉನ್ನತ ಸ್ಥಾನಕ್ಕೆ ಆಯ್ಕೆಯಾದಾಗ ಮತ್ತು ಪುಟ್ಟಂ, ಕಾರ್ನಿಕ ಕಛೇರಿ ಪುರೋಹಿತನಿಗೆ ಗುಗ್ಗಾಳಂ ಅಥವಾ ವಲಸೆ ಬಂದವರ ಹತ್ತಿರ ಅಗಸನಿಗೆ, ಗೇಣಿದಾರನಿಗೆ, ಮದ್ಯಪಾನೀಯ ತಯಾರಿಸುವ ವರಿಂದ ತೆರಿಗೆಗಳನ್ನು ಸಂಗ್ರಹಿಸುತ್ತಿದ್ದರು.

ಇವನ ಆಳ್ವಿಕೆಯಲ್ಲಿ ಗಮನಾರ್ಹ ಕೊಡುಗೆಯೆಂದರೆ ಹಂಪೆ ವಿರೂಪಾಕ್ಷ ಸ್ವಾಮಿಯ ದೊಡ್ಡ ಗೋಪುರದ ಜೀರ್ಣೋದ್ಧಾರ. ಈ ಗೋಪುರ ಬಿರುಕು ಬಿಟ್ಟಿದ್ದರಿಂದ ರಕ್ಷಣೆಗಾಗಿ ಅಡ್ಡಲಾಗಿ ನಾಲ್ಕು ಸ್ಥಂಭಗಳನ್ನು, ಆರು ತೊಲೆಗಳನ್ನು ಜೋಡಿಸಿದ. ಇದಲ್ಲದೆ ವಿಠಲ ದೇವಾಲಯದ ಹತ್ತಿರವಿರುವ ಕಲ್ಲಿನ ರಥದ ಮೇಲ್ಭಾಗದಲ್ಲಿದ್ದ ಗೋಪುರ ಬಿರುಕು ಬಿಟ್ಟಿದ್ದ ರಿಂದ ಪಕ್ಕಕ್ಕೆ ಅದನ್ನು ವರ್ಗಾಯಿಸಲಾಯಿತು. ಮಹಾನವಮಿ ದಿಬ್ಬದ ಹತ್ತಿರ ಪ್ರತ್ಯೇಕ ವಾಗಿದ್ದ ಶಿಲ್ಪಪಟ್ಟಿಕೆಯನ್ನು ತೆಗೆಸಿ ಕ್ರಮಬದ್ಧವಾಗಿ ಜೋಡಿಸಿದನು. ಸಿವೆಲ್‌ನ ಆಡಳಿತದಲ್ಲಿ ಜಿಲ್ಲಾ ಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಶಿಸ್ತು, ದಕ್ಷತೆ ಇತ್ತು. ಇವನು ಪರದೇಶದ ವನಾದರೂ, ಸ್ವದೇಶದವನಂತೆ ಹಂಪಿ, ಮೈಲಾರದ ಜಾತ್ರೆಗಳನ್ನು ಸ್ವತಃ ತಾನು ಹಾಜರಿದ್ದು ನೆರವೇರಿಸಿದನು. ಇವನನ್ನು ದೇಶಿ ಸಾಂಸ್ಕೃತಿಕ ರಾಯಭಾರತ್ವವನ್ನು ವಹಿಸಿದ ಪ್ರಥಮ ಕಲೆಕ್ಟರ್ ಎನ್ನಬೇಕು. ಸಿವೆಲ್‌ನ ಆಡಳಿತ ವಿಶ್ವದ ಯಾತ್ರಿಕರಿಗೆ ಅಚ್ಚರಿಯನ್ನುಂಟುಮಾಡಿದೆ. ಇವನ ಬರಹಗಳಿಂದ ಪ್ರೇರಿತವಾದ ಯಾತ್ರಿಕರು ಅಪಾರ ಸಂಖ್ಯೆಯಲ್ಲಿ ಬಂದಿದ್ದರಿಂದಲೇ ಹಂಪೆ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಿತು.

೩.೨.೮. ಎ.ಎಫ್.ಜೆ. ಮೆಕಾರ್ಡಿ (೧೯೧೩೧೯೨೧)

ಬಳ್ಳಾರಿ ಜಿಲ್ಲೆಯನ್ನಾಳಿದ ಕಲೆಕ್ಟರುಗಳಲ್ಲಿ ಮೆಕಾರ್ಡಿ ಬಹು ಜಾಣ್ಮೆಯುಳ್ಳವನಾಗಿದ್ದನು ಮತ್ತು ಇಲ್ಲಿನ ಜನರ ಪರಿಸ್ಥಿತಿಗಳಿಗೆ ಸ್ಪಂದಿಸಿದನಲ್ಲದೆ, ಪರಿಹರಿಸುವಲ್ಲಿ ಕಳಕಳಿಯುಳ್ಳವ ನಾಗಿದ್ದನು. ಇವನು ೧೯೧೩ ರಿಂದ ೧೯೨೧ರವರೆಗೆ ಸುಮಾರು ಮೂರು ಅವಧಿಗಳಲ್ಲಿ ಕಲೆಕ್ಟರ್‌ನಾಗಿದ್ದನು. ಆಂಗ್ಲ ಭಾಷೆಯ ವ್ಯಾಮೋಹದ ನೊಗವನ್ನು ತಪ್ಪಿಸಿ, ಕನ್ನಡವನ್ನು ಬಳಕೆಗೆ ತರುವ ಜಾಯಮಾನ ತೋರಿಸಿದನು. ಇವನು ಅಪ್ಪಟ ಕನ್ನಡ ಭಾಷಾಭಿಮಾನಿ. ಒಮ್ಮೆ ಕರ್ತವ್ಯಕ್ಕೆ ಚ್ಯುತಿ ಬಾರದ ಹಾಗೆ ಜಮಾಬಂದಿಗೆ ಹಳ್ಳಿಗೆ ಹೋದಾಗ ಜನರು ಕನ್ನಡ ಮಾತನಾಡಿದರೆ ಅಮಲ್ದಾರ ತೆಲುಗಿನಲ್ಲಿ ಮಾತನಾಡುವುದನ್ನು ಇವನು ಖಂಡಿಸಿದನು. ಎಲ್ಲಾ ಕಚೇರಿಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಗೆ ಆಡಳಿತ ಭಾಷೆಯ ಅಗ್ರಸ್ಥಾನ ಕಲ್ಪಿಸಲು ಶ್ರಮಿಸಿದನು. ಅಚ್ಚಕನ್ನಡ ಪ್ರದೇಶ ಬಳ್ಳಾರಿ ಆಗಿದ್ದರು ಶಿಕ್ಷಣ, ವ್ಯವಹಾರ ಇತ್ಯಾದಿ ತೆಲುಗಿನಲ್ಲಿಯೇ ನಡೆಯುತ್ತಿತ್ತು.

ಇವನ ಅವಧಿಯಲ್ಲಿ ಪ್ರಮುಖವಾಗಿ ಈ ಕೆಳಗಿನ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆದವು.

•   ಕನ್ನಡ ಮತನಾಡುವ ಭಾಗಗಳಲ್ಲಿ ಕನ್ನಡ ಭಾಷೆ ತಿಳಿದ ಅಧಿಕಾರಿಗಳನ್ನು ನೇಮಿಸಿದ.

•   ತಾಲ್ಲೂಕು ಗಡಿಗಳ ವಿಸ್ತರಣೆ.

•   ಸ್ವಾತಂತ್ರ್ಯ ಹೋರಾಟಗಾರರ ಆಸೆ-ಆಕಾಂಕ್ಷೆಗಳ ಬೀಜ ಮೊಳಕೆಯಲ್ಲಿರುವಾಗಲೇ ಚಿವುಟಿ ಹಾಕಲು ಯತ್ನಿಸಿದ.

•   ಕೂಡ್ಲಿಗಿ, ಹೊಸಪೇಟೆ, ಹಡಗಲಿ, ಸಿರುಗುಪ್ಪ ಮತ್ತು ಹರಪನಹಳ್ಳಿ ತಾಲ್ಲೂಕುಗಳನ್ನು ಅಚ್ಚಗನ್ನಡ ಪ್ರದೇಶಗಳೆಂದು ಘೋಷಿಸಿದನು. ಹಾಗೂ ಆಡಳಿತ, ಶಿಕ್ಷಣ, ನ್ಯಾಯಾ ಲಯಗಳ ವ್ಯವಹಾರ ಕನ್ನಡದಲ್ಲಿ ನಡೆಯಲು ಆದೇಶಿಸಿದ.

ಈ ಮೇಲಿನಂತೆ ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಜನ ಕಲೆಕ್ಟರುಗಳು ಆಳ್ವಿಕೆ ನಡೆಸಿದ್ದರೂ, ಪ್ರಮುಖವಾಗಿ ೮ ಜನರ ಕಿರುಚಿತ್ರವನ್ನು ಇಲ್ಲಿ ಕೊಡಲಾಗಿದೆ. ಅವರ ಆಡಳಿತದಲ್ಲಾದ ಮಹಾತಿರುವುಗಳಿಗೆ ಇಲ್ಲಿ ಮಹತ್ವ ಕಲ್ಪಿಸಿರುವುದು ಸಹಜವಾಗಿದೆ.

ಬ್ರಿಟಿಷರು ಜಾರಿಗೆ ತಂದ ಆಧುನಿಕ ಆಡಳಿತ ಪದ್ಧತಿ ಬಹುಸ್ಪಷ್ಟವಾಗಿ ಜನಸಾಮಾನ್ಯರಿಗೆ ಸ್ಪಂದಿಸಿತಾದರೂ, ಕೊನೆಗೊಮ್ಮೆ ವಿರೋಧಿಸಲು (ಸ್ವಾತಂತ್ರ್ಯ ಹೋರಾಟ) ಸಹಾಯಕ ವಾಯಿತು. ಕಲೆಕ್ಟರುಗಳ ಆಡಳಿತವು ಇಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಗಳಿಂದ ಕೂಡಿದ್ದಿತು. ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಸಫಲರಾದರೂ, ವಿಫಲತೆ ಗಳಿಂದ ಕೆಲವೊಮ್ಮೆ ಮುಕ್ತವಾಗಿರಲಿಲ್ಲ. ಮನ್ರೋನ ಭೂಮಾಪನ ಪದ್ಧತಿ ಮತ್ತು ರೈತವಾರಿ ವ್ಯವಸ್ಥೆ, ಭೂಕಂದಾಯ  ವ್ಯವಸ್ಥೆ, ಹ್ಯಾಥವೇ ಕಲೆಕ್ಟರುಗಳು ನಿರ್ಮಾಣ ಹಾಗೂ ನೀರಗಂಟಿ ಗಳ ನೇಮಕ ಇವುಗಳಲ್ಲಿ ಪ್ರಮುಖವಾದವು. ರಾಬರ್ಟ್ ಸಿವೆಲ್ ಆಡಳಿತಗಾರನಾಗಿದ್ದುದರ ಜೊತೆಗೆ ಚರಿತ್ರೆಕಾರನಾಗಿದ್ದುದು ಸೋಜಿಗವನ್ನುಂಟು ಮಾಡಿದೆ. ಕೆಲವು ಚಾರಿತ್ರಿಕ ನೆಲೆಗಳ ಬಗ್ಗೆ ಅಧ್ಯಯನ ನಡೆಸಿ ಕೃತಿಗಳನ್ನು ಹೊರತಂದಿದ್ದರಿಂದ, ಇಂದಿನ ಸಂಶೋಧಕರಿಗೆ ಪ್ರಾತಃಸ್ಮರಣೀಯರಾಗಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಆಂಗ್ಲರ ಆಡಳಿತ ಸುಗಮವಾಗಿ ನಡೆಯಿತೆಂದು ಹೇಳಲಾಗದು. ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಳಿತವನ್ನು ವಿಂಗಡಿಸಿಕೊಂಡಿದ್ದರೆ ವಿನಾ ಜನಸಾಮಾನ್ಯರ ಹಿತದೃಷ್ಟಿಯಿಂದ ಅಲ್ಲವೆಂಬುದು ನಿಖರವಾಗಿ ಹೇಳಬಹುದು. ಕಲೆಕ್ಟರ್, ಸಬ್‌ಕಲೆಕ್ಟರ್, ತಹಶೀಲ್ದಾರ್, ಜಿಲ್ಲೆದಾರ, ಗೌಡ, ಪಟೇಲ, ತಳವಾರರು ಗ್ರಾಮದಲ್ಲಿದ್ದು ಮೇಲಿನ ಆಂಗ್ಲ ಅಧಿಕಾರಿಗಳ ಸೂಚನೆಯಂತೆ ಕೆಲಸ ನಿರ್ವಹಿಸುತ್ತಿದ್ದರು. ಇವರೆಲ್ಲರಲ್ಲಿಯೂ ನವೀನ ಮಾದರಿಯ ಆಡಳಿತ ದೋಷಗಳು ಎದ್ದು ಕಾಣುತ್ತಿದ್ದವು. ಇಲ್ಲಿನ ದೇಸಿಯ ಅರಸರು ವಿದೇಶಿಯರು ಬರುವಾಗ ಅನೈಕ್ಯತೆಯಿಂದ ವರ್ತಿಸುತ್ತಿದ್ದುದು ಆಂಗ್ಲರಿಗೆ ಲಾಭದಾಯಕ ವ್ಯವಹಾರವಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಪಾಳೆಯಗಾರರನ್ನು ಮಟ್ಟಹಾಕಿ, ಅಂದು ಇದ್ದ ಪ್ರಮುಖ ಪಾಳೆಯಗಾರರಿಗೆ ಕಂದಾಯ ವಸೂಲಿ ಮಾಡುವ ಕರ್ತವ್ಯವನ್ನು ಕೆಳವರ್ಗದ ಪಾಳೆಯಗಾರ ವಂಶಸ್ಥರಿಗೆ ತಳವಾರಿಕೆ, ದನಿಕ ಪಾಳೆಯಗಾರನಿಗೆ ಪಟೇಲನ ಹುದ್ದೆಗಳನ್ನು ನೀಡಿದ್ದು ಕೂಡ ಅವರ ಆಡಳಿತದ ಒಳ ನೋಟಗಳಿಗೆ ಸ್ಪಷ್ಟನೆ ನೀಡುತ್ತದೆ.

ಆರಂಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು ೧೮ ತಾಲೂಕುಗಳಿದ್ದವು. ಅವುಗಳೆಂದರೆ ಸಿರುಗುಪ್ಪ, ಕೂಡ್ಲಿಗಿ, ಹರಪನಹಳ್ಳಿ, ಹೂವಿನ ಹಡಗಲಿ, ಕಂಪ್ಲಿ, ಆಲೂರು, ಆದೋನಿ, ಗುತ್ತಿ, ಉರವಕೊಂಡ, ಬುಕ್ಕಪಟ್ಟಣ, ಹಿಂದೂಪುರ, ಮಡಕಶಿರಾ ಮತ್ತು ಎಮ್ಮಿಗನೂರು ಸೇರಿ ಜಿಲ್ಲೆಯಾಗಿ, ಆರಂಭದಲ್ಲಿ ಆಡಳಿತ ಕೇಂದ್ರವಾಗಿ ಬಳ್ಳಾರಿಯಾಗಿತ್ತು. ಆಡಳಿತವನ್ನು ಜಿಲ್ಲಾ, ತಾಲ್ಲೂಕು ಹೋಬಳಿ ಹಾಗೂ ಗ್ರಾಮದವರೆಗೂ ವಿಭಾಗಿಸಿದ್ದರು. ಜಿಲ್ಲೆಯಲ್ಲಿ ಎರಡು ವಿಭಾಗಗಳಿದ್ದವು. ಬಳ್ಳಾರಿ ಇನ್ನೊಂದು ಹರಪನಹಳ್ಳಿ. ೧೮೫೧ರಲ್ಲಿ ಕಂಪ್ಲಿಯಲ್ಲಿದ್ದ ತಾಲ್ಲೂಕು ಕೇಂದ್ರವನ್ನು ವರ್ಗಾಯಿಸಿ ಹೊಸಪೇಟೆಯನ್ನು ತಾಲ್ಲೂಕು ಕೇಂದ್ರವಲ್ಲದೆ ಉಪ ವಿಭಾಗವಾಗಿ ಕೂಡ ಮಾಡಲಾಯಿತು. ಸೊಂಡೂರು ಬ್ರಿಟಿಷರ ಅಧೀನದಲ್ಲಿ ಪ್ರತ್ಯೇಕ ಸಂಸ್ಥಾನವಾಗಿತ್ತು. ಕಲೆಕ್ಟರನ ಕಚೇರಿಯಲ್ಲಿ ಮುನಶಿ ಎಂಬ ಆಪ್ತಕಾರ್ಯದರ್ಶಿ ಇದ್ದನು. ಮೇಲ್ವಿಚಾರಣೆ ಪತ್ರವ್ಯವಹಾರ ನೋಡಿಕೊಳ್ಳುತ್ತಿದ್ದನು. ಬ್ರಿಟಿಷರು ಮೊದಲು ಆಡಳಿತಕ್ಕೆ ಇಂಗ್ಲಿಷ್ ನಂತರ ಕನ್ನಡ, ತೆಲುಗು, ಭಾಷೆಗಳನ್ನು ಅಳವಡಿಸಿಕೊಂಡರು.

ನ್ಯಾಯಾಡಳಿತದಲ್ಲಿ ಗಮನಾರ್ಹವಾದ ಬದಲಾವಣೆಗಳಾದವು. ೧೮೧೬ರಲ್ಲಿ ನ್ಯಾಯಾಂಗ ಪ್ರತ್ಯೇಕವಾಗಿ ಅಂದಿನಿಂದ ಕಾರ್ಯನಿರ್ವಹಿಸಿತು. ಗ್ರಾಮ ಮುನ್ಸಿಫ್ ಕೋರ್ಟು, ತಾಲ್ಲೂಕು ಮುನ್ಸಿಫ್ ಕೋರ್ಟು, ಜಿಲ್ಲಾ ಕೋರ್ಟು ಸಮಾನ ನ್ಯಾಯಾಡಳಿತ ನಿರ್ವಹಿಸುತ್ತಿ ದ್ದವು. ಬಳ್ಳಾರಿ, ರಾಯದುರ್ಗ, ಆಲೂರುಗಳ ಜವಾಬ್ದಾರಿಯನ್ನು ೧ನೇ ದರ್ಜೆ ನ್ಯಾಯಾಧೀಶರು ನೋಡಿಕೊಳ್ಳುತ್ತಿದ್ದರು. ಗ್ರಾಮಮಟ್ಟದಲ್ಲಿ ಬೆಂಚ್‌ಕೋರ್ಟುಗಳು ಕೆಲವು ಸ್ಥಳದಲ್ಲಿ ಕಾರ್ಯ ನಿರತವಾಗಿದ್ದವು. ಹೊಸಪೇಟೆ, ಹಡಗಲಿ ಮತ್ತು ಕೂಡ್ಲಿಗಿಯನ್ನು ಎರಡನೇ ದರ್ಜೆಯ ನ್ಯಾಯಾಧೀಶ ನೋಡಿಕೊಳ್ಳುತ್ತಿದ್ದನು. ಕೊಟ್ಟೂರಿನಲ್ಲಿ ಮೊದಲ ಬಾರಿಗೆ ಬೆಂಚ್ ಕೋರ್ಟು ಆರಂಭವಾಯಿತು. ಗ್ರಾಮದಲ್ಲಿ ಗೌಡ ಅಥವಾ ಪಟೇಲ ನ್ಯಾಯ ತೀರ್ಮಾನಿಸುತ್ತಿದ್ದನು.

ಸಾಮಾಜಿಕ ಬದಲಾವಣೆಗಳಿಂದ ಇಂದಿಗೂ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಸಮುದಾಯ ಗಳು ಬೆಳೆಯುತ್ತಿವೆ. ಆಂಗ್ಲರ ಬರ್ಬರ ಆಡಳಿತ, ಆ ಬಗೆಗಿನ ಉಡುಗೆ-ತೊಡುಗೆಗಳ ಬಗೆಗಿನ ಆಸಕ್ತಿ ಅಭಿರುಚಿಗಳು ಬದಲಾದವು. ಮದುವೆ, ವಿಧವಾ ವಿವಾಹ, ಬಾಲ್ಯ ವಿವಾಹ, ಸತಿ ಸಹಗಮನಗಳಂತಹ ಅಮಾನುಷ ಪದ್ಧತಿಗಳು ಕ್ರಮೇಣ ರದ್ದಾದವು. ಬೇರು ಬಿಟ್ಟಿದ್ದ ಮೇಲು ಕೀಳೆಂಬ ಭಾವನೆಗಳು ಸುಧಾರಿಸುತ್ತಾ ಇಳಿಮುಖವಾದವು.

ಬ್ರಿಟಿಷರ ಆಡಳಿತ ಸ್ಥಾಪನೆಯಿಂದ ಬಳ್ಳಾರಿ ಜಿಲ್ಲೆಯ ಜನರ ಮೇಲೆ ಸಾಕಷ್ಟು, ಪ್ರಭಾವ ಬೀರಿತು. ಕೃಷಿ, ಕೈಗಾರಿಕೆ, ವ್ಯಾಪಾರಗಳಿಂದ ಜಿಲ್ಲೆ ಕೆಲವೊಮ್ಮೆ ಅಭಿವೃದ್ದಿ ಪಥದತ್ತ ಸಾಗಿತ್ತು. ಸಾರಿಗೆ ಸಂಪರ್ಕ, ಸರಕು ಸಾಗಾಣಿಕೆ, ವ್ಯಾಪಾರ ಹೆಚ್ಚಿನ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳು ಕುದುರಿದವು. ರಫ್ತು, ಆಮದುಗಳಿಂದ ಸ್ಥಳೀಯ ಬೆಳವಣಿಗೆಗೆ ಅಪಾರ ಬೇಡಿಕೆ ಬಂದಿತು. ಬ್ರಿಟಿಷರ ಪೂರ್ವದಲ್ಲಿ ಏಕರೂಪದ ಆಡಳಿತಾತ್ಮಕ ವ್ಯವಸ್ಥೆ ಇದ್ದಿಲ್ಲ. ಇವರು ಬಂದಾಗ ಏಕರೂಪದ ಆಡಳಿತ ವ್ಯವಸ್ಥೆಯಿಂದ ಭಾರತೀಯ ಭವಿಷ್ಯ ನಿರ್ಧಾರವಾಯಿತು. ಇಡಿ ದೇಶಕ್ಕೆ ಅನ್ವಯಿಸುವ ಏಕರೂಪದ ಕಾನೂನು, ಆಡಳಿತ ಪದ್ಧತಿಗಳಿದ್ದು ಭಾರತೀಯ ರಲ್ಲಿ ಏಕತೆಯ ಜೊತೆಗೆ ರಾಷ್ಟ್ರೀಯ ಭಾವನೆ ಮೂಡಿ ಬಲಸಂವರ್ಧನೆಗೆ ಕಾರಣವಾಯಿತು.

ಕೃಷಿ, ಕೈಗಾರಿಕೆ, ವ್ಯಾಪಾರ, ಭೂಮಾಪನ ಪದ್ಧತಿ, ಭೂ ಕಂದಾಯ, ಸಾರಿಗೆ, ಸಂಪರ್ಕ, ಅಂಚೆ ತಂತಿ ಮತ್ತು ಟೆಲಿಫೋನ್, ತೆರಿಗೆ ವ್ಯವಸ್ಥೆ, ಲೋಕೋಪಯೋಗಿ ಕೆಲಸಗಳಲ್ಲದೆ, ರಕ್ಷಣೆ ಸುಧಾರಣೆ ಪರಿಹಾರಕ್ಕೆ ಸಂಬಂಧಿಸಿದಂತಿವೆ. ಇವಿಷ್ಟಲ್ಲದೆ ಬ್ರಿಟಿಷರು ಇಲ್ಲಿನ ಕಚ್ಚಾವಸ್ತುಗಳನ್ನು ಕೊಂಡೊಯ್ದು ಸಿದ್ಧವಸ್ತುಗಳಾಗಿ ಮಾರ್ಪಡಿಸಿ ಅಧಿಕ ಲಾಭಗಳಿಸಿದರು. ಕಂದಾಯ ವ್ಯವಸ್ಥೆಯಲ್ಲಿ ರೈತವಾರಿ ಪದ್ಧತಿ ಅನ್ವಯ ಉತ್ಪನ್ನದಲ್ಲಿ ಶೇ. ೫೦ರಷ್ಟನ್ನು ಸರ್ಕಾರಕ್ಕೆ ಕೊಡಲು ನಿಗದಿ ಮಾಡಲಾಯಿತು.

[1]

ಮಧ್ಯಯುಗದ ಭಾರತದಲ್ಲಿ ಶಿಕ್ಷಣವನ್ನು ಗುರುಕುಲ ಮತ್ತು ಮದರಸಗಳಲ್ಲಿ ನೀಡುತ್ತಿ ದ್ದರು. ನೂತನ ಬ್ರಿಟಿಷ ಶಿಕ್ಷಣ ವ್ಯವಸ್ಥೆಯಿಂದ ಇವುಗಳು ಬುಡಮೇಲಾದ ಸಂಗತಿ ಗಮನಾರ್ಹವಾದುದೆಂಬುದು ತಿಳಿದಿದೆ. ಹಾಗಾಗಿ ೧೮೧೩ರ ಕಾಯ್ದೆ, ೧೮೫೪ ಹಾಬಟ್ ಮತ್ತು ವುಡ್ ಕಮಿಟಿಗಳು ಸ್ತ್ರೀ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಟ್ಟವು. ಅಷ್ಟೇ ಅಲ್ಲದೆ ಆಂಗ್ಲರು ಆಯಾ ಪ್ರಾದೇಶಿಕ ಭಾಷೆಗಳ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟರು. ಇದರ ಪರಿಣಾಮ ಕೆಲವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅನುಕೂಲವಾಯಿತು. ಇಂಗ್ಲೆಂಡಿನ ಅರಸೊತ್ತಿಗೆ ಅನುವಂಶೀಯವಾಗಿ ಬೆಳೆಸಿಕೊಂಡು ಬಂದಿದ್ದ ಏಕರೂಪದ ಆಡಳಿತ ವ್ಯವಸ್ಥೆಯಾಗಿದ್ದು ಭಾರತೀಯ ಆಡಳಿತ ಕ್ಷೇತ್ರಕ್ಕೆ ಮಹತ್ತರ ತಿರುವು ನೀಡಿತು.

ಆಗಿನ ಮುಂಬಯಿ ಪ್ರಾಂತ್ಯ, ಬಂಗಾಳ ಪ್ರಾಂತ್ಯ, ಮೈಸೂರು ಸಂಸ್ಥಾನಕ್ಕೆ ಮದ್ರಾಸ್ ಪ್ರೆಸಿಡೆನ್ಸಿಯನ್ನು ಹೋಲಿಸಿಕೊಂಡಾಗ ಇದು ಎಲ್ಲದರಲ್ಲಿಯೂ ವೈಶಿಷ್ಟ್ಯಪೂರ್ಣ ಹೊಂದಿತ್ತು. ದೇಸಿಯ ಅರಸರಿಂದ ಅಧಿಕಾರ ಕಸಿದುಕೊಂಡು ತಮ್ಮ ಆಳ್ವಿಕೆಗೆ, ನಂತರ ತಮ್ಮ ಅಧೀನದಲ್ಲಿ ಇರಲು ಇಚ್ಚಿಸಿದ ಸಂಸ್ಥಾನಗಳಿಗೆ ಪ್ರೋತ್ಸಾಹ ಗಮನಾರ್ಹ ಸಂಗತಿ. ಈ ರಾಜಕೀಯ ಇತರ ಎಲ್ಲಾ ಕ್ಷೇತ್ರಗಳಲ್ಲಿ ಬಳ್ಳಾರಿ ಜಿಲ್ಲೆ ಬ್ರಿಟಿಷರ ಆಳ್ವಿಕೆಯಲ್ಲಿ ಏಳು-ಬೀಳುಗಳನ್ನು ಕಂಡು ಇಂದು ಚೇತರಿಸಿಕೊಳ್ಳುವ ಹಂತ ತಲುಪಿದೆ.[2]

* * *


[1]       ನೋಡಿ : ಸಿ.ಡಿ. ಮಾಕ್‌ಲಿನ್ : ಮ್ಯಾನುಯೆಲ್ ಆಫ್ ಮದ್ರಾಸ್ ಪ್ರೆಸಿಡೆನ್ಸಿ ವಾ-I ಮತ್ತು III, ಪು. ೯೭೬-೫೮.

[2]       ನೋಡಿ : ಶ್ರೀನಿವಾಸ ರಾಘವಯ್ಯಂಗಾರ್, ೧೯೮೮ ಮೆಮೊರಾಂಡಂ ಆನ್ ದಿ ಪ್ರೊಗ್ರೆಸ್ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ, ಏ.ಎ.ಸ., ಪು. ೪+೨೪೭.