ಕ್ರಿ.ಶ. ೧೮೦೦ರಲ್ಲಿ ಬಳ್ಳಾರಿ ಪ್ರದೇಶ ದತ್ತಿಮಂಡಲಕ್ಕೆ ಸೇರಿ, ಒಂದು ರೆವಿನ್ಯೂ ಜಿಲ್ಲೆಯಾದಾಗ, ಕಲೆಕ್ಟರುಗಳ ಆಳ್ವಿಕೆ ಪ್ರಾರಂಭವಾಯಿತು. ಇವರ ಆಡಳಿತ ಪ್ರಾರಂಭವಾದಾಗ ಈ ಜಿಲ್ಲೆಯ ಜನತೆಯ ಮೇಲೆ ಮಹತ್ತರ ಪ್ರಭಾವ ಬೀರಿದೆಯಲ್ಲದೆ, ಅವರ ಆಡಳಿತದ ವಿಧಾನಗಳು ಇಲ್ಲಿನ ಎಲ್ಲ ಕ್ಷೇತ್ರಗಳ ಪರಿಸ್ಥಿತಿಯನ್ನು ಬದಲಿಸಿದ್ದು, ಸಹಜವಾಗಿದೆ. ಅವುಗಳಲ್ಲಿ ಆಡಳಿತ, ನ್ಯಾಯಾಂಗ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಭಾರತಾಂಗ್ಲ ವಾಸ್ತುಶಿಲ್ಪ, ಲೋಕೋಪಯೋಗಿ ಕೆಲಸಗಳು, ಸ್ವಾತಂತ್ರ್ಯ ಹೋರಾಟ ಮೊದಲಾದ ಸಂಗತಿಗಳನ್ನು ಹೆಸರಿಸಬಹುದು.

ಆಂಗ್ಲರು ಅನುಸರಿಸಿದ ಏಕರೂಪದ ಆಡಳಿತ ವ್ಯವಸ್ಥೆಗೆ ಈ ಜಿಲ್ಲೆ ಒಳಗಾಗಿದ್ದು ಆಡಳಿತದಲ್ಲಾದ ಬದಲಾವಣೆಗಳು ಇಲ್ಲಿ ಕಂಡುಬರುತ್ತವೆ. ಆಂಗ್ಲರ ಪೂರ್ವದಲ್ಲಿ ಏಕರೂಪದ, ಬಲಿಷ್ಟವಾದ ಆಡಳಿತಾತ್ಮಕ ವ್ಯವಸ್ಥೆ ಇರಲಿಲ್ಲ. ಶತಮಾನಗಳಷ್ಟು ರಾಜಕೀಯ ಸಂಘರ್ಷದ ನಂತರ ಇವರ ಆಡಳಿತ ಕ್ಷೇತ್ರದಲ್ಲಿ ಶಾಂತಿ ಪರಿಸ್ಥಿತಿ ಕಂಡುಬಂದಿತ್ತಲ್ಲದೆ, ಇಡೀ ದೇಶಕ್ಕೆ ಅನ್ವಯಿಸುವ ಏಕರೂಪದ ಕಾನೂನು, ಆಡಳಿತ ಮತ್ತು ಅಧಿಕಾರಶಾಹಿ ಪದ್ಧತಿಗಳಿಂದ ನಮ್ಮಲ್ಲಿ ಏಕತೆ ಅರಿವಿನ ಅಂಶ ತಡವಾಗಿಯಾದರೂ ಉದಯಿಸಿತು. ಇದು ನಮ್ಮ ರಾಷ್ಟ್ರೀಯ ಭಾವನೆ ಮತ್ತು ಬಲಸಂವರ್ಧನೆಗೆ ಕಾರಣವಾಯಿತೆನ್ನಬಹುದು. ಆಗಿನ ಮುಂಬಾಯಿ ಪ್ರಾಂತ, ಬಂಗಾಳ ಪ್ರಾಂತ, ಮೈಸೂರು ಸಂಸ್ಥಾನಕ್ಕೆ ಮದ್ರಾಸ್ ಅಧಿಪತ್ಯವನ್ನು ಹೋಲಿಸಿಕೊಂಡಾಗ ವಿಶಿಷ್ಟತೆ ಕಂಡುಬರುತ್ತದೆ. ಇಲ್ಲಿನ ಆಡಳಿತ ಇತರ ಕ್ಷೇತ್ರಗಳ ಬದಲಾವಣೆಗಳಿಗೆ ಕಾರಣವಾಗಿ, ವೈಸರಾಯ್, ಗವರ್ನರ್ ಮತ್ತು ಕಲೆಕ್ಟರ್‌ಗಳೇ ಕಾರಣವೆಂಬುದನ್ನು ಮರೆಯುವಂತಿಲ್ಲ.

ಸಾಮಾಜಿಕ ಕ್ಷೇತ್ರದಲ್ಲಿ ಅವರ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನುಕರಿಸಲಾಗಿ, ಇವರ ಅವಧಿಯಲ್ಲಿ ಪ್ರಮುಖ ನವಸಮಾಜದ ಸೃಷ್ಟಿಗೆ ಮತ್ತು ಬದಲಾವಣೆಗೆ ಕಾರಣವಾದ ಸನ್ನಿವೇಶವನ್ನು ನೋಡಬಹುದು. ಅವರು ಈ ಜಿಲ್ಲೆಯ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ಸರಿಪಡಿಸಿದವರಲ್ಲದೇ, ಬಾಲ್ಯವಿವಾಹ, ಸಹಗಮನಗಳಂತಹ ಪದ್ಧತಿಗಳನ್ನು ವಿರೋಧಿಸಿದರು ಹಾಗೂ ವಿಧವಾ ವಿವಾಹಕ್ಕೆ ಪ್ರೋತ್ಸಾಹ ಕೊಡುವುದರ ವೂಲಕ ತೆರಿಗೆ ಸಂಗ್ರಹಿಸುತ್ತಿದ್ದರು.

ಆಡಳಿತದಲ್ಲಾದಂತೆ ಆರ್ಥಿಕ ಕ್ಷೇತ್ರದಲ್ಲಿಯೂ ಬದಲಾವಣೆಗಳು ಕಂಡುಬಂದಿದ್ದು, ಇದರಲ್ಲಿ ಮುಖ್ಯವಾಗಿ ಕೃಷಿ, ಕೈಗಾರಿಕೆ, ವ್ಯಾಪಾರದಲ್ಲಿ ಬಹುಪಾಲು ಬದಲಾಯಿತೆನ್ನ ಬಹುದು. ಸಾರಿಗೆ ಸಂಪರ್ಕ, ಭೂಕಂದಾಯ ಹಾಗೂ ಜನರ ಆರ್ಥಿಕ ಜೀವನದಲ್ಲಿ ಹೆಚ್ಚಾಗಿ ಪರಿಣಾಮ ಬೀರಿತು. ಬ್ರಿಟಿಷ್ ವರ್ತಕರು ಇಲ್ಲಿ ಉತ್ಪಾದಿಸಲ್ಪಟ್ಟ ಉತ್ಪನ್ನಗಳನ್ನು ಯುರೋಪಿಗೆ ಕೊಂಡೊಯ್ಯುತ್ತಿದ್ದರು. ಅಲ್ಲಿನ ಕೈಗಾರಿಕಾ ಕ್ರಾಂತಿ ಈ ನೀತಿಯನ್ನು ಬುಡಮೇಲಾಗಿ ಮಾಡಿತು. ಆಗಿನಿಂದ ಇಲ್ಲಿನ ಕಚ್ಚಾವಸ್ತುಗಳನ್ನು ಇಂಗ್ಲೆಂಡಿಗೆ ಕಳುಹಿಸಲು ಸನ್ನದ್ಧರಾದರು. ಇಂಗ್ಲೆಂಡಿನ ಕಾರ್ಖಾನೆಗಳಲ್ಲಿ ತಯಾರಾದ ಅಗ್ಗದ ವಸ್ತುಗಳು ಇಲ್ಲಿ ಹೇರಳವಾಗಿ ಮಾರಾಟ ಮಾಡಲಾರಂಭಿಸಿದರು. ಇದು ವಸಾಹತುಶಾಹಿಯ ನೀತಿಯೂ ಕೂಡ. ಬ್ರಿಟಿಷರ ಕೈಗಾರಿಕೆ ಬೆಳವಣಿಗೆಯಿಂದ ಭಾರತದಲ್ಲಿ ಗೃಹಕೈಗಾರಿಕೆ ವಿನಾಶದ ಮಟ್ಟ ವನ್ನು ತಲುಪಿತು. ಅದರಲ್ಲಿ ಕುಶಲ ಕೆಲಸಗಾರರನ್ನು ಬಡತನಕ್ಕೆ ತಳ್ಳಿದ್ದು, ಅವರು ನಗರ ಗಳನ್ನು ತೊರೆದು ಪುನಃ ಹಳ್ಳಿಗೆ ಹಿಂದಿರುಗಿದರು.

ಆರ್ಥಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಪ್ರಥಮವಾಗಿ ಭೂಕಂದಾಯ ವ್ಯವಸ್ಥೆಯಿಂದ. ಮಧ್ಯಯುಗದ ಹಿಂದಿನಿಂದಲೂ ಸಹಾ ಭೂಮಿಯು ರೈತನಿಗೆ ಸೇರಿತ್ತು. ರಾಜ ಭೂಕಂದಾಯ ವಸೂಲಿ ಮಾಡುವ ಹಕ್ಕನ್ನು ಮಾತ್ರ ಹೊಂದಿದ್ದನು. ಕ್ರಮೇಣ ಇದು ಕುಸಿಯಲಾಗಿ, ಇದರಲ್ಲಿ ಹರಾಜು ಪ್ರಚಲಿತಕ್ಕೆ ಬಂದು ಕೆಲ ಕಾಲದಲ್ಲಿಯೇ ಅದು ಕಣ್ಮರೆ ಯಾಯಿತು. ಭೂಕಂದಾಯವನ್ನು ವಸೂಲಿ ಮಾಡುವ ಹೊಸಮಾದರಿಯನ್ನು ಕಲೆಕ್ಟರ್‌ಗಳು ಅನುಸರಿಸಿದರು.

ಈ ಪ್ರದೇಶದಲ್ಲಿ ಮೊದಲು ಜಮೀನ್ದಾರಿ ಪದ್ಧತಿ ಇದ್ದು ಮಾರುವ, ಕೊಳ್ಳುವ, ಪರಭಾರೆ ಮಾಡುವ ಮತ್ತು ಮಾಲಿಕತ್ವದ ಹಕ್ಕನ್ನು ತಮ್ಮ ಮಕ್ಕಳಿಗೆ ಕೊಡುವ ಅಧಿಕಾರವನ್ನು ಜಮೀನ್ದಾರರು ಹೊಂದಿದ್ದರು. ಈ ವ್ಯವಸ್ಥೆ ಭೂಮಿಯ ಒಡೆತನವನ್ನು ರೈತರಿಂದ ಕಿತ್ತು ಕೊಂಡು ಕಂದಾಯ ವಸೂಲಿ ಮಾಡುವ ಅಧಿಕಾರ ಕಲೆಕ್ಟರುಗಳಿಗೆ ಕೊಡಲಾಯಿತು. ಇದರಿಂದ ರೈತರನ್ನು ದಾರಿದ್ರಕ್ಕೆ ತಳ್ಳಿತಲ್ಲದೆ ಅವರು ಗುಲಾಮರ ಮಟ್ಟಕ್ಕೆ ಇಳಿಯುವಂತಾಗಿತ್ತು. ಜಮೀನುಗಳ ಬೆಲೆ ಕಂದಾಯ ವಿಪರೀತ ಏರಿದ್ದು, ಉತ್ಪನ್ನದ ಶೇ. ೩ರಷ್ಟು ಕಂದಾಯ ಕೊಡಲಾಗಲಿಲ್ಲ. ಇವರು ‘ರೈತವಾರಿ’ ಎಂಬ ಮತ್ತೊಂದು ಭೂಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದರು. ಇದರಿಂದ ಸರ್ಕಾರ ಮತ್ತು ಪ್ರತಿ ರೈತನ ನಡುವೆ ನೇರ ಸಂಪರ್ಕ ಬೆಳೆಯಿತು.

ರೈತ ಕಂದಾಯ ಕೊಡದಿದ್ದರೆ ಸರ್ಕಾರವೇ ಅವನ ಜಮೀನನ್ನು ಮಾರಾಟ ಮಾಡುತ್ತಿತ್ತು. ೩೦ ವರ್ಷಗಳಿಗೊಮ್ಮೆ ಭೂಮಿಯನ್ನು ಮೋಜಣಿ ಮಾಡಿ ಕಂದಾಯ ನಿಗದಿ ಮಾಡುತ್ತಿದ್ದರು (ಜಮಾಬಂದಿ). ಈ ವ್ಯವಸ್ಥೆಯಿಂದಾದ ಪರಿಣಾಮಗಳೆಂದರೆ, ಭಾರತೀಯ ರೈತರನ್ನು ಬಡವರನ್ನಾಗಿಸಿತೆಂಬ ಅಪವಾದವಿದೆ.

ಮಧ್ಯಯುಗದ ಪೂರ್ವದಲ್ಲಿ ಶಿಕ್ಷಣವು ಗುರುಕುಲ ಮತ್ತು ಮದರಾಸಗಳಲ್ಲಿ ನಡೆಯು ತ್ತಿತ್ತು. ಆರಂಭದಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯು ಶಿಕ್ಷಣ ಸಂಸ್ಥೆಗಳ ಬೆಳವಣಿಗೆ ಯಲ್ಲಿ ಆದ್ಯತೆ ಅಥವಾ ಆಸಕ್ತಿವಹಿಸಲಿಲ್ಲ. ೧೮೧೩ರ ಆ್ಯಕ್ಟ್ ಪ್ರಕಾರ ದೇಶಿಯರಿಗೆ ಶಿಕ್ಷಣ ಕೊಡಲು ಆದ್ಯತೆ ನೀಡಿದರು. ೧೮೫೪ರಲ್ಲಿ ಹಾರ್ಬರ್ಟ್ ಮತ್ತು ವುಡ್ ಕಮಿಟಿಯ ವಿದ್ಯಾಭ್ಯಾಸ ಕ್ರಮವನ್ನು ಈ ದೇಶದ ಶಿಕ್ಷಣ ಕ್ಷೇತ್ರಕ್ಕೆ ಅಳವಡಿಸಿದರು. ೧೮೮೨ರಲ್ಲಿ ಹಂಟರ್ ಕಮಿಷನ್ ತರುವಾಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಕ್ಕೆ ಗಮನ ಕೊಡಲಾಯಿತು. ಮೊದಲಿಗೆ ಆಂಗ್ಲರು ಜಾರಿಗೆ ತಂದಂಥ ಶಿಕ್ಷಣ ಕ್ರಮ ಅತೃಪ್ತಿಕರ ವಾಗಿದ್ದರೂ ಇಲ್ಲಿನ ನಾಗರಿಕರನ್ನು ಬ್ರಿಟಿಷ್ ಪ್ರಜೆಗಳಂತೆ ರೂಪಿಸಬಯಸುವ ಉದ್ದೇಶ ವನ್ನೊಂದಿತ್ತು.

ಬ್ರಿಟಿಷರು ಭಾಷೆಯ ಬೆಳವಣಿಗೆಯನ್ನು ಭಾರತದಾದ್ಯಂತ ಶಿಕ್ಷಣ ಕ್ರಮದಲ್ಲಿ ಜಾರಿಗೆ ತಂದರು. ಇಂಗ್ಲಿಷ್ ಜನಸಂಪರ್ಕ ಭಾಷೆಯಾಗಿ ದೇಶದ ಜನರನ್ನು ಒಗ್ಗೂಡಿಸಲು ಸಹಾಯವಾಯಿತಾದರೂ ಬ್ರಿಟಿಷರ ಆಳ್ವಿಕೆಗೆ ಹೆಚ್ಚಿನ ಅನುಕೂಲವಾಯಿತು. ಆಧುನಿಕ ಇಂಗ್ಲಿಷ್ ಶಿಕ್ಷಣ ಭಾರತೀಯರಲ್ಲಿ ಇವರ ಪರಂಪರೆ ಹಾಗೂ ಇತಿಹಾಸವನ್ನು ಅರಿಯಲು ಆಸಕ್ತಿ ಬೆಳೆಯಿತು. ಅಸಂಖ್ಯಾತ ಭಾರತೀಯ ವಿದ್ವಾಂಸರುಗಳಿಗೆ, ಇಲ್ಲಿನ ಗತವೈಭವವನ್ನು ಅಧ್ಯಯನ ಮಾಡಲು ಇಂಗ್ಲಿಷ್ ಭಾಷೆ ಅನುಕೂಲವಾಯಿತು. ಹಾಗೂ  ಭಾರತದ ಇತಿಹಾಸ ವಸ್ತುನಿಷ್ಠವಾಗಿ ರೂಪುಗೊಳ್ಳಲು ಆರಂಭವಾಯಿತು. ಆ ಮೂಲಕ ಭಾರತದ ಪ್ರಾಚೀನ ಇತಿಹಾಸವನ್ನು ಪುನಃ ರಚಿಸುವ (ರೂಪಿಸುವ) ಅವಕಾಶ ಭಾರತೀಯರಿಗೆ ಒದಗಿತು.

ಇವರು ಆಯಾ ಪ್ರಾದೇಶಿಕ ಭಾಷೆಗಳ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟರಲ್ಲದೆ, ಆ ಭಾಷೆಗಳಿಗೆ ಅನುವಾದಗೊಳಿಸಿದ್ದರಿಂದ ಪರಿಣಾಮ ಬೀರಿತು. ಇತರ ಕ್ಷೇತ್ರಗಳಲ್ಲಿಯೂ ಸಹ ಬದಲಾವಣೆ ಕಂಡುಬಂದಿತು. ಅವುಗಳೆಂದರೆ, ಪತ್ರಿಕೆಗಳು ಇತರ ಸಮೂಹ ಮಾಧ್ಯಮ ಗಳು. ಭಾರತದಲ್ಲಿ ಇಂಗ್ಲಿಷ್ ಹಾಗೂ ದೇಶ ಭಾಷೆಗಳ ಪಾತ್ರ ಮತ್ತಷ್ಟು ಬೆಳವಣಿಗೆ ಕಂಡುಬಂದಿದ್ದು ಪತ್ರಿಕೆಗಳಿಂದ. ಸುಶಿಕ್ಷಿತ ಭಾರತೀಯರು ಸಮಾಜದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಲು ಪತ್ರಿಕೆಗಳು ಮಹತ್ವದ ಪಾತ್ರವಹಿದ್ದು, ‘ಸ್ವಾತಂತ್ರ್ಯ ಹೋರಾಟ’ದಂತಹ ಮಹಾಘಟನೆಯಲ್ಲಿ ನೆರವಾಗಿರುವುದನ್ನು ಇಲ್ಲಿ ತಿಳಿಯಬಹುದು. ಈ ಎಲ್ಲಾ ಸಂಗತಿಗಳಿಂದ ನಾವು ನಿರ್ಣಯಿಸುವುದಾದರೆ, ಸರ್ವತೋಮುಖ ಅಭಿವೃದ್ದಿ ಹೊಂದಲು ತೀವ್ರ ಸೆಣಸಾಟ, ಪೈಪೋಟಿ ನಡೆದರೂ ವಿಫಲವಾದದ್ದು ಸ್ಪಷ್ಟ.

ಆಡಳಿತ ಕ್ಷೇತ್ರ

ದತ್ತಿಮಂಡಲ ಜಿಲ್ಲೆಗಳಲ್ಲಿ ಕಲೆಕ್ಟರ್‌ಗಳ ಆಡಳಿತ ಪ್ರಾರಂಭವಾದಾಗ ಇಲ್ಲಿನ ರಾಜಕೀಯ ಪರಿಸ್ಥಿತಿ ಅನೈಕ್ಯತೆಯಿಂದ ಕೂಡಿತ್ತು. ಕಾರಣ ಈ ಮೊದಲು ಇಲ್ಲಿ ಅರಸು, ಪಾಳೆಯಗಾರರು ಆಳ್ವಿಕೆ ನಡೆಸಿ ಈ ಪ್ರದೇಶದಲ್ಲಿ ಅಶಾಂತಿಯನ್ನು ಹುಟ್ಟುಹಾಕಿದ್ದರು. ನಂತರ ಬ್ರಿಟಿಷರು ಇದನ್ನು ಹೋಗಲಾಡಿಸಿದರಲ್ಲದೆ, ಇವರ ಆಡಳಿತಕ್ಕೆ ‘ಏಕರೂಪತೆ ದೊರೆಯಿತು’. ಆಗ ಜನರ ಒಲವು ಆಂಗ್ಲರ ಮೇಲಿದ್ದರಿಂದ, ಕ್ರಮೇಣ ಬುಡಮೇಲಾಗಿದ್ದು ತಿಳಿದುಬರುತ್ತದೆ.

ಬಳ್ಳಾರಿ ಜಿಲ್ಲೆ, ಮದ್ರಾಸ್ ಅಧಿಪತ್ಯದ ೨೪ ಜಿಲ್ಲೆಗಳಲ್ಲಿ ೪ನೆಯದು. ಅಂದು ಕರ್ನೂಲು, ಕಡಪ, ಅನಂತಪುರಗಳನ್ನೊಳಗೊಂಡಿದ್ದು, ಮುಂದೆ ಇವು ಪ್ರತ್ಯೇಕವಾಗುತ್ತವೆ. ಇದರ ಆಡಳಿತದಲ್ಲಿದ್ದ ತಾಲ್ಲೂಕುಗಳೆಂದರೆ, ಸಿರುಗುಪ್ಪ, ಕೂಡ್ಲಿಗಿ, ಹರಪನಹಳ್ಳಿ, ಹೂವಿನ ಹಡಗಲಿ, ಕಂಪ್ಲಿ, ಆಲೂರು, ಆದೋನಿ, ಗುತ್ತಿ, ಉರವಕೊಂಡ, ತಾಡಪತ್ರಿ, ರಾಯದುರ್ಗ, ಅನಂತಪುರ, ಧರ್ಮವರಂ, ಕಲ್ಯಾಣದುರ್ಗ, ಪೆನುಕೊಂಡ, ಬುಕ್ಕಪಟ್ಟಣ, ಹಿಂದೂಪುರ, ಮಡಕಶಿರಾ ಹಾಗೂ ಎಮ್ಮಿಗನೂರು ಸೇರಿ ಜಿಲ್ಲೆಯಾಗಿತ್ತು. ಹಾಗಾಗಿ ಆಡಳಿತ ಜಿಲ್ಲಾ, ತಾಲ್ಲೂಕು, ಹೋಬಳಿ ಮತ್ತು ಗ್ರಾಮವೆಂದು ವಿಭಾಗಿಸಲಾಯಿತು. ಈ ರೀತಿ ಮಾಡಿದ್ದು ಮೊದಲ ಬಾರಿ ಆಂಗ್ಲರೇ, ಆದುದರಿಂದ ವ್ಯಾಪಕ ಬದಲಾವಣೆ ಕಂಡುಬಂದಿದ್ದು, ಆ ಕಾರಣದಿಂದಲೇ.

ಜಿಲ್ಲಾಡಳಿತ : ಬಳ್ಳಾರಿ ಜಿಲ್ಲೆಯಲ್ಲಿ ೨ ವಿಭಾಗಗಳಿದ್ದವು. ಒಂದು ಬಳ್ಳಾರಿ ಮತ್ತೊಂದು ಹರಪನಹಳ್ಳಿ. ಬಳ್ಳಾರಿಯಲ್ಲಿ ಕಲೆಕ್ಟರ್ ಇದ್ದರೆ, ಇವನ ಅಧೀನದಲ್ಲಿ ಸಹಾಯಕ ಕಲೆಕ್ಟರ್ ಹರಪನಹಳ್ಳಿಯಲ್ಲಿರುತ್ತಿದ್ದನು. ಅಂದು ಸೊಂಡೂರು ಬ್ರಿಟಿಷರ ಅಧೀನದಲ್ಲಿ ಪ್ರತ್ಯೇಕ ಸಂಸ್ಥಾನವಾಗಿತ್ತು. ಅಲ್ಲಿ ಕಲೆಕ್ಟರ್‌ನಿಂದ ಅನುಮೋದಿತ ‘ಏಜೆಂಟ್’ ಇದ್ದು ಸಂಸ್ಥಾನದ ಆಡಳಿತವನ್ನು ಪ್ರತಿನಿಧಿಸುತ್ತಿದ್ದ. ಕಲೆಕ್ಟರನ ಕಚೇರಿಯಲ್ಲಿ ಅವನಿಗೆ ಮೂನಶಿ ಆಪ್ತಕಾರ್ಯ ದರ್ಶಿಯಾಗಿದ್ದು, ಮೇಲ್ವಿಚಾರಣೆ, ಪತ್ರವ್ಯವಹಾರ ನೋಡಿಕೊಳುತ್ತಿದ್ದನು. ಇಂಗ್ಲಿಷ್ ಭಾಷೆಗೊಬ್ಬ ಲಿಪಿಕಾರನಿದ್ದು, ಅವನು ಎಲ್ಲಾ ಇಂಗ್ಲಿಷ್ ದಸ್ತಾವೇಜು ಮತ್ತು ಸರ್ಕಾರಿ ಪತ್ರಗಳನ್ನು ನಿರ್ವಹಿಸುತ್ತಿದ್ದನು. ಕಲೆಕ್ಟರುಗಳು ಆಡಳಿತ ಭಾಷೆಯಾಗಿ ಮೊದಲು ಇಂಗ್ಲಿಷ್ ಆನಂತರ ಕನ್ನಡ ಮತ್ತು ತೆಲುಗು ಅಳವಡಿಸಿಕೊಂಡರು. ಜಿಲ್ಲೆಗೆ ಪ್ರಧಾನ ಕಲೆಕ್ಟರ್ ಇದ್ದು, ಇವನ ಅಧೀನದಲ್ಲಿ ಆಡಳಿತವನ್ನು ಸಹಾಯಕ ಕಲೆಕ್ಟರ್, ಡೆಪ್ಯೂಟಿ ಕಲೆಕ್ಟರ್, ಟ್ರೆಸರಿ ಕಲೆಕ್ಟರ್‌ಗಳು ನೋಡಿಕೊಳ್ಳುತ್ತಿದ್ದರು.

ಬ್ರಿಟಿಷ್ ಅಧಿಕಾರಿಗಳು ಇಡೀ ಜಿಲ್ಲೆಯೊಂದನ್ನು ಸಮರ್ಥಯುತವಾಗಿ ನಿಯಂತ್ರಿಸುತ್ತಿ ದ್ದಾಗ, ಅದರ ಆಡಳಿತ ಹಿಡಿತವು ಇತರ ವಿಭಾಗ, ತಾಲ್ಲೂಕು, ಗ್ರಾಮಗಳಿಗೆ ವಿಸ್ತರಿಸಿತು. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರನೇ ಪ್ರಮುಖನು. ಇವನ ಅಧೀನದಲ್ಲಿ ಶಿರಸ್ತೇದಾರ, ನಗದು ಗುಮಾಸ್ತ ಮತ್ತು ಶರಾಫರು ಇರುತ್ತಿದ್ದರು. ಶಿರಸ್ತೇದಾರನೇ ಕಲೆಕ್ಟರ್ ಕಚೇರಿಗೆ ಲೆಕ್ಕಪತ್ರಗಳನ್ನು ಕಳುಹಿಸಿಕೊಡುತ್ತಿದ್ದು, ದರಖಾಸ್ತುಗಳನ್ನು ನಿರ್ವಹಿಸುತ್ತಿದ್ದನು. ನಗದು ಗುಮಾಸ್ತರು ಉಪಖಜಾನೆಯ ಹತೋಟಿ ಹೊಂದಿದ್ದು ಎಲ್ಲಾ ದಾಖಲೆ ಮತ್ತು ಲೆಕ್ಕಪತ್ರ ಗಳನ್ನು ಬರೆದಿಡುತ್ತಿದ್ದರು. ಇವರುಗಳು ತಾಲ್ಲೂಕು ಅತೀ ದೊಡ್ಡದಾಗಿದ್ದರೆ ಅದನ್ನು ವಿಭಾಗ ಮಾಡಿ ೩-೪ ತಾಲ್ಲೂಕುಗಳನ್ನು ಸೇರಿಸುತ್ತಿದ್ದರು. ಉದಾಹರಣೆಗೆ. ೧೮೫೧ರಲ್ಲಿ ಹೊಸಪೇಟೆಯನ್ನು ತಾಲ್ಲೂಕಾಗಿ ಮತ್ತು ಉಪವಿಭಾಗವಾಗಿ ಮಾಡಲಾಯಿತು. ತರುವಾಯ ಸಬ್‌ಕಲೆಕ್ಟರ್ ಕಾರ್ಯನಿರ್ವಹಿಸುತ್ತಿದ್ದನು. ತಾಲ್ಲೂಕುಗಳಲ್ಲಿ ಕೋರ್ಟುಗಳು ಬರುವ ಮುನ್ನ ನ್ಯಾಯಾಂಗವನ್ನು ತಹಶೀಲ್ದಾರರು ನಿರ್ವಹಿಸುತ್ತಿದ್ದರು. ದೊಡ್ಡ ಪಟ್ಟಣಗಳಲ್ಲಿ ಉಪತಹಶೀಲ್ದಾರನನ್ನು ನೇಮಿಸುತ್ತಿದ್ದರು. ಉದಾಹರಣೆಗೆ. ಕೊಟ್ಟೂರು.

ಹೋಬಳಿ ಮಟ್ಟದಲ್ಲಿ ಆಡಳಿತ ಮತ್ತು ಕಂದಾಯ ವ್ಯವಸ್ಥೆಗೆ ಪರಿವೀಕ್ಷಕರನ್ನು (ಜಿಲ್ಲೆದಾರ) ನೇಮಿಸಿದ್ದರು. ಇವನು ಹೋಬಳಿ ಅಥವಾ ಫಿರ್ಕಾದಲ್ಲಿ ಸರ್ಕಾರಕ್ಕೆ ಸೇರಿದ ಭೂದಾಖಲೆಗಳನ್ನು ನೋಡಿಕೊಂಡು, ಹಣ ಸಂಗ್ರಹಿಸಿ, ತಹಶೀಲ್ದಾರನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದನು.

ಗ್ರಾಮಮಟ್ಟದಲ್ಲಿ ಸಹಾ ಆಡಳಿತ ಬದಲಾವಣೆಯಾಯಿತು. ಪಟೇಲ, ಗೌಡ, ಶ್ಯಾನ ಭೋಗರನ್ನು ಸರ್ಕಾರ ನೇಮಿಸಿದಾಗ ಇವರು ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದರು. ಇಲ್ಲಿ ಕಂಡುಬರುವ ಪ್ರಮುಖ ಮತ್ತು ಉನ್ನತ ವರ್ಗದವರೇ ಪಟೇಲರಾಗಿರಲಿಲ್ಲ. ಅಲ್ಲದೆ, ವೀರಶೈವ, ಬೇಡ, ಕುರುಬ, ಇತರ ಎಲ್ಲಾ ವರ್ಗಕ್ಕೆ ಸೇರಿದ ಗ್ರಾಮದ ಪ್ರಮುಖರಿಗೆ ಪದವಿಗಳು ಲಭಿಸಿದವು. ಅದರೂ, ಉನ್ನತ ವರ್ಗದವರು, ವಿದ್ಯಾವಂತರು ಇಂಥ ಪ್ರಯೋಜನ ಪಡೆದಿದ್ದು ಹೆಚ್ಚು. ಶ್ಯಾನಭೋಗರಾಗಿದ್ದು ಹೆಚ್ಚಿನವರು ಬ್ರಾಹ್ಮಣರಾದರೆ, ಮುಕ್ಕಾಲು ಭಾಗ ವೀರಶೈವರೇ ಪಟೇಲ ಅಥವಾ ಗೌಡನ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಗೌಡ ಮತ್ತು ಪಟೇಲರನ್ನು ಒಂದೇ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ಇಲ್ಲಿ ಮಾದಿಗ, ಹೊಲೆಯ, ಬೋವಿ ಹೀಗೆ ದಲಿತರನ್ನು ಇಂಥಾ ಹುದ್ದೆಗಳಿಂದ ದೂರವಿಟ್ಟಿದ್ದು ಬ್ರಿಟಿಷ್ ಸರ್ಕಾರದೊಂದಿಗೆ ಸ್ಥಳೀಯ ಸವರ್ಣಿಯರ ಕೈವಾಡವನ್ನು ತಳ್ಳಿ ಹಾಕುವಂತಿಲ್ಲ. ಬೇರೆ ವಿಭಾಗಗಳಲ್ಲಿ ಆ ರೀತಿ ಕರೆದುಕೊಂಡಿರುವುದುಂಟು. ಇವರಿಗೆ ತಿಂಗಳಿಗೆ ೧೩ ರಿಂದ ೫೦ ರೂಪಾಯಿ ಸಂಬಳವನ್ನು ಸರ್ಕಾರ ಕೊಡುತ್ತಿತ್ತು. ಕರಣಂ ಅಥವಾ ಶ್ಯಾನಭೋಗನ ಕೆಲಸವು ಗ್ರಾಮದ ಕಂದಾಯವನ್ನು ಸಂಗ್ರಹಿಸುವುದಾಗಿತ್ತು.

ಗ್ರಾಮದಲ್ಲಿ ನೀರಗಂಟಿಯು ಕಂಡುಬರುತ್ತಾನೆ. ಕೆರೆ ಕೋಡಿಯಿಂದ ಅಥವಾ ಕಾಲುವೆಗಳ ಮೂಲಕ ಇವನು ಜಮೀನುಗಳಿಗೆ ನೀರು ಹಾಯಿಸುವ ಜವಾಬ್ದಾರಿಯನ್ನು ಹೊಂದಿದ್ದನು. ವೆಟ್ಟಿ ಅಥವಾ ತೋಟಿಯು ಗ್ರಾಮ ಸೇವಕನಾಗಿದ್ದು, ತಳವಾರನು ಗ್ರಾಮದ ಸುದ್ದಿ ಸಮಾಚಾರ ತಿಳಿಸುವವನಾಗಿದ್ದನು. ವಿವಿಧ ಕಡೆ ಇವರ ವೃತ್ತಿಗಳು ಬದಲಾಗುತ್ತವೆ. ಗ್ರಾಮದ ರಕ್ಷಣೆಗೆ ತಳವಾರನನ್ನಾಗಿ ಹೆಚ್ಚಾಗಿ ಬೇಡರನ್ನೇ ನೇಮಿಸುತ್ತಿದ್ದುದು ಕಂಡುಬರುವ ಸಂಗತಿ. ಗ್ರಾಮದ ಓಲೆಗಾರನಿಗೆ ಉಗ್ರಾಣಿಯೆಂದು ಕರೆಯುತ್ತಿದ್ದರು.

[1] ನಂತರ ಗ್ರಾಮದಲ್ಲಿ ಶಾಂತಿ ಕಾಪಾಡಲು ‘ದಳಪತಿ’ ಎನ್ನುವ ಅಧಿಕಾರಿಯನ್ನು ನೇಮಿಸುತ್ತಿದ್ದರು. ಮುಖ್ಯವಾಗಿ ‘ಅಪರಾಧಿ ಬುಡಕಟ್ಟು’ ಗಳು ವಾಸಿಸುವ ಸ್ಥಳಗಳಲ್ಲಿ ಇವರು ಕಂಡುಬರುತ್ತಾರೆ. ಕೂಡ್ಲಿಗಿ, ಹರಪನಹಳ್ಳಿ ತಾಲ್ಲೂಕು ಗಳಲ್ಲಿರುವ ಲಂಬಾಣಿ ತಾಂಡಗಳು ಕೊರಚರ ಹಟ್ಟಿಗಳು ಮತ್ತು ಬೇಡರ ಹಟ್ಟಿಗಳನ್ನು ಉದಾಹರಿಸಬಹುದಾಗಿದೆ.

ನ್ಯಾಯಾಡಳಿತ

ಆಂಗ್ಲರ ಆಳ್ವಿಕೆಯಲ್ಲಾದ ಬದಲಾವಣೆಗಳಲ್ಲಿ ನ್ಯಾಯಾಂಗವು ಒಂದು. ಬಳ್ಳಾರಿ ಜಿಲ್ಲೆ ಯಲ್ಲಿ ಕಲೆಕ್ಟರ್ ಆಡಳಿತಾಧಿಕಾರಿಯಾಗಿದ್ದಾಗ ನ್ಯಾಯಾಡಳಿತವನ್ನು ಅವನೇ ನಿರ್ವಹಿಸುತ್ತಿ ದ್ದನು. ೧೮೧೬ರಲ್ಲಿ ನ್ಯಾಯಾಂಗ ಪ್ರತ್ಯೇಕವಾದಾಗ ಅಂದಿನಿಂದ ನ್ಯಾಯಾಧೀಶರನ್ನು ಸರ್ಕಾರ ನೇಮಿಸಿತು. ಈ ಸಂದರ್ಭದಲ್ಲಿ ಮದ್ರಾಸ್ ಅಧಿಪತ್ಯಕ್ಕೆ ಸೇರಿದ ೧೦೬ ಸಾಮಾನ್ಯ ಕೋರ್ಟುಗಳು, ೨೫ ಜಿಲ್ಲಾ ಕೋರ್ಟುಗಳಿದ್ದವು.[2] ಅದರಲ್ಲಿ ಬಳ್ಳಾರಿಯ ಜಿಲ್ಲಾ ಕೋರ್ಟು ಸಹಾ ಸೇರಿದೆ. ಇಲ್ಲಿ ಮೂರು ದರ್ಜೆಗಳ ನಾಗರಿಕ ನ್ಯಾಯಾಲಯಗಳಿದ್ದವು. ಗ್ರಾಮ ಮುನ್ಸಿಫ್ ಕೋರ್ಟು, ಜಿಲ್ಲಾ ಮುನ್ಸಿಫ್ ಮತ್ತು ಜಿಲ್ಲಾ ಕೋರ್ಟು ಇವೆಲ್ಲವು ಸಮಾನ ಆಡಳಿತವನ್ನು ಹೊಂದಿದ್ದವು.[3] ೧೮೧೬-೧೭ರಲ್ಲಿ ಗ್ರಾಮಮಟ್ಟದಲ್ಲಿ ಮುನ್ಸಿಫ್ ಕೋರ್ಟು ಮತ್ತು ಪಂಚಾಯಿತಿಗಳ ನಿಯಮ ೪ ಜಾರಿಗೆ ತರಲಾಯಿತು. ಆಗಿನಿಂದ ಗ್ರಾಮದ ಮುಖಂಡ ನಿಗೆ ನ್ಯಾಯಾ ತೀರ್ಮಾನಿಸುವ ಅಧಿಕಾರವನ್ನು ಕೊಟ್ಟರು.

ಯುರೋಪಿನ ನ್ಯಾಯಶಾಸ್ತ್ರಜ್ಞ ಥಾಮಸ್ ಮೆಕಾಲೆ ೧೮೪೭ರಲ್ಲಿ ಇಂಡಿಯನ್ ಪಿನಲ್ ಕೋಡ್ ರಚಿಸಿದ. ಅವನ ಶ್ರಮಕ್ಕೆ ೧೮೬೦ರಲ್ಲಿ ಒಪ್ಪಿಗೆ ದೊರೆಯಿತು. ಈ ಮೊದಲು ಹಿಂದೂಗಳು ಮತ್ತು ಮುಸ್ಲಿಂಮರು ತಮ್ಮ ತಮ್ಮ ಧರ್ಮಶಾಸ್ತ್ರಗಳನ್ನು ಅನುಸರಿಸಿ ನ್ಯಾಯ ತೀರ್ಮಾನಿಸುವ ಪದ್ಧತಿ ಇತ್ತು. ಕಂಪನಿ ಸರ್ಕಾರ ಈ ಕಾನೂನು ದಂಡಸಂಹಿತೆಗಳನ್ನು ಅನುಸರಿಸಿತು. ೧೮೬೧ರಲ್ಲಿ ಭಾರತದ ಹೈಕೋರ್ಟುಗಳ ಶಾಸನ ಜಾರಿಗೆ ಬಂದು, ಮದ್ರಾಸ್ ನಲ್ಲಿ ಅದನ್ನು ಸ್ಥಾಪಿಸಲಾಯಿತು. ಪ್ರಾಂತ್ಯದಲ್ಲಿ ಅನುಮಾನದ ಕಾನೂನುಗಳನ್ನು ತೊರೆದು, ೧೮೭೪ರ ೪ನೇ ವಿಧಿಗೆ ಸಂಬಂಧಿಸಿದಂತೆ ಸ್ಥಳೀಯ ಪ್ರದೇಶಗಳಿಗೆ ಕ್ರಿಯಾತ್ಮಕ ರಕ್ಷಣೆ ಒದಗಿಸಲಾಯಿತು.

೧೮೮೯ರಲ್ಲಿ ಗ್ರಾಮ ಮುನ್ಸಿಫ್ ನ್ಯಾಯಾಲಯಗಳ ಕಾಯ್ದೆಗಳನ್ನು ತಿದ್ದುಪಡಿ ಮಾಡಿದರು. ಅಂದಿನಿಂದ ಜಿಲ್ಲಾ ಮುನ್ಸಿಫ್ ನ್ಯಾಯಾಲಯವು ಇಬ್ಬರು ಮುಖ್ಯ ಅಧಿಕಾರಿ ಗಳನ್ನು ಹೊಂದಿತ್ತು. ಬಳ್ಳಾರಿ, ಆಲೂರು ಮತ್ತು ರಾಯದುರ್ಗಗಳನ್ನು ನಿರ್ವಹಿಸುತ್ತಿದ್ದವನು ಒಂದನೇ ದರ್ಜೆಯ ನ್ಯಾಯಾಧೀಶ. ಹೊಸಪೇಟೆ, ಹರಪನಹಳ್ಳಿ, ಹಡಗಲಿ ಮತ್ತು ಕೂಡ್ಲಿಗಿ ಯನ್ನು ಎರಡನೇ ದರ್ಜೆಯ ನ್ಯಾಯಾಧೀಶ ನೋಡಿಕೊಳ್ಳುತ್ತಿದ್ದನು. ಗ್ರಾಮಾಂತರ ಕೋರ್ಟುಗಳ ವಿಧೇಯಕದನ್ವಯ ಬೆಂಚ್‌ಕೋರ್ಟುಗಳು ಕೆಲವು ಸ್ಥಳಗಳಲ್ಲಿ ಕಾರ್ಯನಿರತವಾಗಿದ್ದವು. ಆಗ ಮನ್ಸೀಫ್‌ರ ಆಡಳಿತದ ಸ್ವರೂಪ, ಕ್ಷೇತ್ರ ತಾಲ್ಲೂಕುಗಳಿಗೆ ವ್ಯಾಪಿಸಿತು. ಮ್ಯಾಜಿ ಸ್ಟ್ರೇಟ್‌ರ ಅಧಿಕಾರವನ್ನು ಒಬ್ಬ ಮುನ್ಸಿಫ್‌ನಿಗೆ ವಹಿಸಲಾಯಿತು. ಬಳ್ಳಾರಿ ಜಿಲ್ಲೆಯ ದಕ್ಷಿಣ ತುದಿಯಲ್ಲಿರುವ ಕೊಟ್ಟೂರಿನಲ್ಲಿ ಮುನ್ಸಿಫ್ ಕೋರ್ಟು ಮೊಟ್ಟಮೊದಲ ಬಾರಿಗೆ ವಿಭಾಗ ಮಟ್ಟದಲ್ಲಿ ಪ್ರಾರಂಭವಾಯಿತು. ೧೮೭೧ರಲ್ಲಿ ಅದನ್ನು ನಾರಾಯಣದೇವನಕೆರೆಗೆ ವರ್ಗಾಯಿಸಿದರು. ನಂತರ ೧೯೦೦ರಲ್ಲಿ ಹೋಸಪೇಟೆಯ ಮುನ್ಸಿಫ್ ಕೋರ್ಟುಗೆ ವರ್ಗಾಯಿಸಿದರು. ಹೊಸಪೇಟೆಯಲ್ಲಿ ೧೯೨೧ ರಿಂದ ಸರ್ಕಾರಿ ಕಟ್ಟಡ ಹೊಂದಿ ಕಾರ್ಯ ಮುಂದು ವರೆಯಿತು.

ಜಿಲ್ಲಾ ನ್ಯಾಯಾಡಳಿತದಲ್ಲಿ ಬಳ್ಳಾರಿ ೮ ತಾಲ್ಲೂಕುಗಳನ್ನು ಹೊಂದಿತ್ತು. ಆಗ ರಿಜಿಸ್ಟ್ರಾರ್ ಬಳ್ಳಾರಿಯಲ್ಲಿದ್ದು, ಸಬ್‌ರಿಜಿಸ್ಟ್ರಾರ್ ಕಂಪ್ಲಿಯಲ್ಲಿರುತ್ತಿದ್ದರು. ಅವರು ಸಿರುಗುಪ್ಪ, ಎಮ್ಮಿಗನೂರು ನೋಡಿಕೊಳ್ಳುತ್ತಿದ್ದರು.[4] ಗ್ರಾಮಮಟ್ಟದಲ್ಲಾದ ಸಣ್ಣ ಅಪರಾಧಕ್ಕೂ ಸಹ ನ್ಯಾಯಾಲಯಕ್ಕೆ ಹೋಗಬೇಕಿತ್ತು. ಅದನ್ನು ತಪ್ಪಿಸಲು ಗ್ರಾಮ ಮುನ್ಸಿಫರನ್ನು ನೇಮಿಸಿದರು. ಕಂಪ್ಲಿಯನ್ನು ವಿಶೇಷ ಮ್ಯಾಜಿಸ್ಟ್ರೇಟ್ ಆಗಿ ಬಳ್ಳಾರಿ, ಹೊಸಪೇಟೆ ಮತ್ತು ನಾರಾಯಣ ದೇವನಕೆರೆ, ಆದೋನಿಯಲ್ಲಿ ಬೆಂಚ್‌ಮ್ಯಾಜಿಸ್ಟ್ರೇಟ್ ದರ್ಜೆ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಯಿತು. ಬಳ್ಳಾರಿಯಲ್ಲಿ ಕಂಟೋನ್ಮೆಂಟ್ ಮ್ಯಾಜಿಸ್ಟ್ರೇಟ್ ಮತ್ತು ಪಟ್ಟಣ ಸಬ್ ಮ್ಯಾಜಿಸ್ಟ್ರೇಟ್ ಇದ್ದು, ತಹಶೀಲ್ದಾರನಿಗೆ ಎರಡನೆದರ್ಜೆ ಅಧಿಕಾರ ನೀಡಿದ್ದರು. ಅವನಂತೆ ಆಲೂರು, ಹಡಗಲಿ, ಹರಪನಹಳ್ಳಿ, ರಾಯದುರ್ಗಗಳಿಗೆ ಕಡ್ಡಾಯವಾಗಿ ಮ್ಯಾಜಿಸ್ಟ್ರೇಟ್ ಕೆಲಸವನ್ನು ಶಿರಸ್ತೇದಾರನಿಗೆ ವಹಿಸಿಕೊಟ್ಟರು. ನಂತರ ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಆದೋನಿಯಲ್ಲಿ ಮಹಾ ಅಪರಾಧಗಳಾದರೆ ಅಂತಹ ಕೇಸುಗಳನ್ನು ಸಬ್‌ಮ್ಯಾಜಿಸ್ಟ್ರೇಟ್ ಜೊತೆಗೆ ಮತ್ತು ತಹಶೀಲ್ದಾರ್ ನಿಭಾಯಿಸುತ್ತಿದ್ದರು. ಇವರು ಅಧಿಕಾರ ಚಲಾಯಿಸುವುದರ ಕ್ರೂರ ಘಟನೆಗಳು ನಡೆಯದಂತೆ ಶ್ರಮಿಸುತ್ತಿದ್ದರು. ಡೆಪ್ಯುಟಿ ತಹಶೀಲ್ದಾರನಿಗೆ ಸಿರುಗುಪ್ಪ, ಬಳ್ಳಾರಿ, ಎಮ್ಮಿಗನೂರು, ಆದೋನಿಯನ್ನು ನೋಡಿಕೊಳ್ಳಲು ಎರಡನೇ (ಪ್ರಭಾರ) ದರ್ಜೆಯ ಅಧಿಕಾರ ಕೊಟ್ಟಿದ್ದರು. ಈ ಮೇಲಿನ ಮೂರು ವಿಭಾಗೀಯ ಮ್ಯಾಜಿಸ್ಟ್ರೇಟ್‌ರಿಗೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ರಿಗೆ ಪ್ರಥಮ ದರ್ಜೆಯ ನ್ಯಾಯ ತೀರ್ಮಾನಿಸುವ ಅಧಿಕಾರವಿತ್ತು.[5]

ಬ್ರಿಟಿಷರ ಆಳ್ವಿಕೆಯಲ್ಲಿ ನ್ಯಾಯಾಧೀಶನಿಗೆ ಮಾಸಿಕ ವೇತನ ರೂ. ೪೦೦.೦೦ಗಳು. ಗ್ರಾಮ ಮುನ್ಸಿಫನಿಗೆ ಹೆಚ್ಚಿನ ಅಧಿಕಾರ (೧೮೮೩) ಜೊತೆಗೆ ೨೦ ರಿಂದ ೧೦೦ ರೂ. ವೇತನ ಕೊಡುತ್ತಿದ್ದರು. ಕಲೆಕ್ಟರ್‌ನನ್ನು ನ್ಯಾಯಾಧೀಶನಾಗಿ, ನ್ಯಾಯಾಧೀಶನನ್ನು ಕಲೆಕ್ಟರ್ ನನ್ನಾಗಿ ನೇಮಕ ಮಾಡಲಾಗುತ್ತಿತ್ತು. ೧೯೩೫ರಲ್ಲಿ ಭಾರತ ಸರ್ಕಾರ ಕಾಯ್ದೆ ಬಂದಾಗ ನ್ಯಾಯಾಡಳಿತದಲ್ಲಿ ತೀವ್ರ ಬದಲಾವಣೆಯಾಯಿತು. ನಾಗರಿಕ ನ್ಯಾಯ, ಗ್ರಾಮ ಮುನ್ಸಿಫ್ ಕೋರ್ಟುಗಳು, ಅಪರಾಧಿ ಜನಾಂಗಗಳು, ಪೋಲೀಸ್ ಮತ್ತು ಜೈಲು ಇವು ಬ್ರಿಟಿಷರ ಆಡಳಿತದಲ್ಲಿ ಬಹುಮುಖ್ಯ ಪಾತ್ರವಹಿಸಿದವು. ಕೆಲವು ಬುಡಕಟ್ಟುಗಳಲ್ಲಿ ಕಟ್ಟೆಮನೆ ನ್ಯಾಯಾಲಯವು ಆಯಾ ಪ್ರಾದೇಶಿಕ ಜನತೆಯ (ಟ್ರಿಬುನಲ್ ಕೋರ್ಟು) ಕುಂದುಕೊರತೆ ಗಳನ್ನು ನ್ಯಾಯತೀರ್ಮಾನಗಳನ್ನು ನಿಭಾಯಿಸುತ್ತಿತ್ತು.

ಗ್ರಾಮಮಟ್ಟದಲ್ಲಿ ಪಟೇಲ್(ಗೌಡ, ಶ್ಯಾನಭೋಗ)ರನ್ನು ನ್ಯಾಯ ತೀರ್ಮಾನಕ್ಕೆ ನೇಮಿಸಿ ದ್ದರು. ಕೆಲವು ಭಾಗಗಳಲ್ಲಿ ಗೌಡ, ಶ್ಯಾನಭೋಗ ನಡೆಸುತ್ತಿದ್ದರು. ಬಳ್ಳಾರಿಯಲ್ಲಿ ಇಂದಿಗೂ ಸಹ ಪಟೇಲ, ಶ್ಯಾನಭೋಗರು ಅದೇ ಪದ್ಧತಿಯನ್ನು ಅನುಸರಿಸುತ್ತಾ ಬಂದಿದ್ದರು. ಹೆಚ್ಚಿನ ದಾಗಿ ವೀರಶೈವರು, ಬ್ರಾಹ್ಮಣರು ಈ ಹುದ್ದೆಗಳಲ್ಲಿದ್ದರು. ಆಂಗ್ಲರ ಆಡಳಿತದಲ್ಲಿ ಯಾವ ಕಾನೂನಿಗೂ ಕೊರತೆ ಇರಲಿಲ್ಲ. ಗ್ರಾಮ ಮುನ್ಸಿಫ್, ವಿಭಾಗೀಯ ಮುನ್ಸಿಫ್ ಮತ್ತು ಜಿಲ್ಲಾ ನ್ಯಾಯಾಧೀಶರೆಂದು ಮೂರು ದರ್ಜೆಗಳಿದ್ದು, ನ್ಯಾಯಾಂಗ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಒಟ್ಟಾರೆ ಕಲೆಕ್ಟರ್‌ಗಳ ನ್ಯಾಯಾಡಳಿತದಲ್ಲಿ ಅವರಿಗೆ ತಾರತಮ್ಯತೆ ಕಂಡು ಬರಲಿಲ್ಲವಾದರೂ ಸ್ಥಳೀಯರಿಗೆ ಗಗನ ಕುಸುಮವಾಯಿತು. ಹಣ, ಶಿಕ್ಷಣ ಇದ್ದಂಥ ಶ್ರೀಮಂತರಿಗೆ ನ್ಯಾಯಾಲಯದ ಮೆಟ್ಟಿಲು ಹತ್ತಲು ಸಾಧ್ಯ ಅಂದು ಬಡತನ, ಸುಶಿಕ್ಷಿತರೇ ಹೆಚ್ಚಾಗಿದ್ದರಿಂದ ಈ ಲಾಭದಿಂದ ಅವರು ವಂಚಿತರಾಗಿದ್ದರು.

ರಕ್ಷಣೆ

ಆಂಗ್ಲ ಕಲೆಕ್ಟರ್ ಮನ್ರೋ ಈ ಭಾಗದಲ್ಲಿ ಅಶಾಂತಿಯನ್ನು ಹೋಗಲಾಡಿಸಲು ರಕ್ಷಣೆಗೆ ಅಧಿಕಾರಿಗಳನ್ನು ನೇಮಿಸಿದನು. ಆಗ ಕೊರಚರು, ಲಂಬಾಣಿಗಳು, ಬ್ರಿಟಿಷರ ಆಡಳಿತದಲ್ಲಿ ಹೆಚ್ಚಿನ ಅಪರಾಧಗಳನ್ನು ಮಾಡುತ್ತಿದ್ದರು. ಹೈದರಾಲಿಯ ನಂತರ ಆಂಗ್ಲರು ಪಾಳೆಯಗಾರರನ್ನು, ತಳವಾರಿಕೆ ಮತ್ತು ರಕ್ಷಕರಾಗಿ ನೇಮಿಸಿದಾಗ ಹಳೆಪದ್ಧತಿಗಳನ್ನು ಕೈಬಿಟ್ಟು ಮನ್ರೋ ರಕ್ಷಕರನ್ನು ನೇಮಿಸುವಲ್ಲಿ ಹೊಸಪದ್ಧತಿಯನ್ನು ಅನುಸರಿಸಿದನು. ತಹಶೀಲ್ದಾರ ಕಚೇರಿಗೆ ಜವಾನರನ್ನು, ಜಿಲ್ಲಾ ಮ್ಯಾಜಿಸ್ಟ್ರೇಟ್‌ರ ಆಜ್ಞೆಯ ಮೇರೆಗೆ ನೇಮಿಸಿದನು. ಆಗ ಪ್ರತಿ ತಾಲ್ಲೂಕುಗಳಲ್ಲಿ ಮತ್ತು ಬಳ್ಳಾರಿಯಲ್ಲಿ ಕೊತ್ವಾಲರನ್ನು ನೇಮಿಸಿ ರಕ್ಷಣೆ, ನ್ಯಾಯ ಒದಗಿಸಿದನು. ಕ್ರಿ.ಶ. ೧೮೧೬ರಲ್ಲಿ ತಳವಾರರನ್ನು ಗ್ರಾಮಾಧಿಕಾರಿಗಳ ಅಧಿಕಾರದಲ್ಲಿಡಲಾಯಿತು. ೧೮೫೯ರಲ್ಲಿ ಪೊಲೀಸ್ ಕಾನೂನುಗಳು ಜಾರಿಗೆ ಬಂದವು. ಈ ಸಂದರ್ಭದಲ್ಲಿ ತಳವಾರರು ಗ್ರಾಮಾಧಿಕಾರಿಗಳ ಕೆಳಗೆ ಭೂಕಂದಾಯ ಕ್ಷೇತ್ರದಲ್ಲಿ ಮುಂದುವರೆದರು. ೧೮೯೮ರಲ್ಲಿ ಅವರಿಗೆ ಹಿತ್ತಾಳೆ ಪಟ್ಟಿ, ಲಾಠಿಗಳನ್ನು ಕೊಡಲಾಯಿತು.

ಈಗಲೂ ಸಹಾ ಈ ಭಾಗದಲ್ಲಿ ಕೆಲವರಿಗೆ ಬ್ರಿಟಿಷರು ಕೊಟ್ಟ ಬಹುಮಾನ, ಪ್ರಶಸ್ತಿ ಪತ್ರಗಳು ಕಂಡುಬರುತ್ತವೆ. ರಕ್ಷಣೆಯನ್ನು ಕಾಪಾಡಲು ವ್ಯವಸ್ಥಿತ ಅಧಿಕಾರಿಗಳ ಕೊರತೆಯಿರುವಾಗ, ಸ್ಥಳೀಯ ನಾಗರಿಕರು, ಧೈರ್ಯಶಾಲಿಗಳು ಮುಂದೆಬಂದರು, ರಕ್ಷಣೆ ವ್ಯವಸ್ಥೆಯನ್ನು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಮಟ್ಟದಲ್ಲಿ ತಿಳಿಯಲು ಸಾಧ್ಯ. ಕಲೆಕ್ಟರ್ ಕಚೇರಿಗೆ ಭಾರತೀಯರನ್ನು ರಕ್ಷಣೆಗಾಗಿ ಧೈರ್ಯ, ಸಾಹಸಿ ಯುವಕರನ್ನು ನೇಮಿಸುತ್ತಿದ್ದರು. ನೇಮಿಸುವಾಗ ಅವನ ಭೌತಿಕ ಆರೋಗ್ಯಕ್ಕೆ ಪ್ರಾಶಸ್ತ್ಯವಿತ್ತು. ಪೊಲೀಸ್ ಹುದ್ದೆಗಳಂತೆ, ರಾತ್ರಿವೇಳೆ ನಗರ, ಕಚೇರಿಗಳನ್ನು ನೋಡಿಕೊಳ್ಳಲು ಮತ್ತು ಗಸ್ತಿ ತಿರುಗಲು ವಿಶೇಷವಾಗಿ ಪರಿಣಿತರನ್ನು ನೇಮಿಸುತ್ತಿದ್ದರು. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರನಿಗೆ, ನ್ಯಾಯಾಧೀಶನಿಗೆ ಇಬ್ಬರು ರಕ್ಷಕರನ್ನು ನೇಮಿಸುತ್ತಿದ್ದರು. ಅವರು ಕಚೇರಿ ಮತ್ತು ಅಧಿಕಾರಿಗಳ ವ್ಯವಸ್ಥೆಗನುಗುಣವಾಗಿ ಕೆಲಸ ನಿರ್ವಹಿಸುತ್ತಿದ್ದರು. ಗ್ರಾಮದಲ್ಲಿ ತಳವಾರ, ದಳಪತಿಗಳು ರಕ್ಷಣೆ ಕಾರ್ಯವನ್ನು ನೋಡಿಕೊಳ್ಳುತ್ತಿದ್ದರು. ಹೀಗೆ ಬ್ರಿಟಿಷರ ಅವಧಿಯಲ್ಲಿ ಸ್ಥಳೀಯರನ್ನು ಕೆಲವು ಹುದ್ದೆಗಳಿಗೆ ನೇಮಿಸಿಕೊಂಡು ವೇತನ ಕೊಟ್ಟರು. ತಮ್ಮ ಆಡಳಿತದ ಅನುಕೂಲಕ್ಕೆ ತಕ್ಕಂತೆ ಅವರನ್ನು ಶೋಷಿಸಿದ್ದು ವಿಷಾದನೀಯ.

ಸಾಮಾಜಿಕ ಕ್ಷೇತ್ರ

ಬ್ರಿಟಿಷರ ಆಳ್ವಿಕೆಯಲ್ಲಾದ ಇತರ ಬದಲಾವಣೆಗಳಂತೆ ಸಾಮಾಜಿಕ ಕ್ಷೇತ್ರದಲ್ಲಿಯೂ ಕಂಡುಬಂದವು. ಬಳ್ಳಾರಿ ಜಿಲ್ಲೆಯಲ್ಲಿ ಆಂಗ್ಲರು ಪಾದಾರ್ಪಣೆ ಮಾಡಿದ ನಂತರ ಇಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಿದರು. ಇವರು ಇಲ್ಲಿನ ನಿವಾಸಿಗಳನ್ನು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಜನಾಂಗೀಯ ಮತ್ತಿತರ ಕಾರಣಗಳಿಂದ ಶೋಷಿಸಿ ಉನ್ನತಾಧಿಕಾರದಿಂದ ವಂಚಿತರನ್ನಾಗಿ ಮಾಡಿದರು. ಸರ್. ಥಾಮಸ್ ಮನ್ರೋ ಕಲೆಕ್ಟರ್‌ನಾಗಿ ಜಿಲ್ಲೆಗೆ ಬಂದಾಗ, ಇಲ್ಲಿನ ಜನಾಂಗಗಳನ್ನು ಅಸಂಘಟಿತ ಅಸಂಪ್ರದಾಯಕರೆಂದು ಮತ್ತು ಸದಾ ಕೃಷಿಯಲ್ಲಿ ನಿರತರಾದ ದಯಾಳು ಮತ್ತು ಕಷ್ಟಪಟ್ಟು ದುಡಿಮೆ ಮಾಡುತ್ತಿದ್ದಾರೆಂದು ತನ್ನ ವರದಿಯಲ್ಲಿ ತಿಳಿಸಿರುವುದನ್ನು ಫ್ರಾನ್ಸಿಸ್ ಹೇಳಿದ್ದಾನೆ.[6] ಈ ರೀತಿ ಇರಲು ಅವರ ಹಿಂದಿನ ನಿರಂಕುಶಪ್ರಭುತ್ವ ಇದಕ್ಕೆ ಕಾರಣವೆನ್ನಬಹುದು. ಸ್ಥಳೀಯವಾಗಿ ವಿಜಯನಗರದಂಥ ಸಾಮ್ರಾಜ್ಯ ಅವನತಿಯಾದಾಗ ಜನರು ಚೆಲ್ಲಾಪಿಲ್ಲಿಯಾದರು. ಉದ್ಯೋಗ ಸ್ಥಾನಗಳು ಕೈತಪ್ಪಿದವು. ಹಾಗಾಗಿ ಇರುವ ಪರಿಸ್ಥಿತಿಗೆ ಹೊಂದಿಕೊಂಡು ಕೃಷಿ ಮಾಡುತ್ತಿದ್ದಿರಬೇಕು. ನಂತರ ಕಷ್ಟಪಟ್ಟು ದುಡಿಮೆ ಜೀವನ ಮಾಡುವ ಜನರು ಇಲ್ಲಿನವ ರೆಂಬುದು ಸುಳ್ಳಲ್ಲ.

ಬಳ್ಳಾರಿ ಜಿಲ್ಲೆಯಲ್ಲಿ ಆಂಗ್ಲರ ಮತ್ತು ಸ್ಥಳೀಯ ಜನರ ಸಾಮಾಜಿಕ ಸಂಬಂಧಗಳು ಕಠಿಣವಾಗಿದ್ದವು. ಕಲೆಕ್ಟರ್ ಇಲ್ಲಿಗೆ ಬಂದಾಗ ಆರಂಭದಲ್ಲಿ ಸ್ಥಳೀಯರು ತಲೆಬಾಗಿ ನಮಸ್ಕರಿ ಸುವುದು ಕಡ್ಡಾಯವಾಗಿತ್ತು. ಅವರ ಹಾಗೆ ಕುದುರೆ ಸವಾರಿ, ಇಲ್ಲಿನ ಜನತೆಗೆ ಮೊದಲು ನಿಷೇಧವಾಗಿತ್ತು. ಹಾಗಾಗಿ ಅವರ ಸ್ಥಾನಮಾನಕ್ಕೆ ಸಮನಾದ ಸ್ಥಾನಮಾನವನ್ನು ಭಾರತೀಯರು ಹೊಂದುವಂತಿರಲಿಲ್ಲ. ಸ್ಥಳೀಯ ಜನರನ್ನು ರಾಜಕೀಯವಾಗಿ ಸಂಶಯದಿಂದ ನೋಡುತ್ತಾ, ದುರದೃಷ್ಟವಶಾತ್ ಕಡೆಗಣಿಸಿದ್ದರು. ಬ್ರಿಟಿಷ್ ಕಲೆಕ್ಟರ್‌ಗಳಿಗೆ ಮತ್ತು ಕೆಲವು ಅಧಿಕಾರಿಗಳಿಗೆ ಎಲ್ಲಾ ವರ್ಗ, ಸಮುದಾಯಗಳ ಬಗೆಗೆ ಗೌರವವಿರಲಿಲ್ಲ. ಅವರು ಕೇವಲ ವಿದ್ಯಾವಂತರು ಮತ್ತು ಸುಸಂಸ್ಕೃತ ಪ್ರತಿಷ್ಠಿತರನ್ನು ಮಾತ್ರ ಅಭಿಮಾನ, ಗೌರವದಿಂದ ಕಾಣುತ್ತಿದ್ದರು. ಇಲ್ಲಿನ ಸಮಾಜದಲ್ಲಿ ಬ್ರಿಟಿಷರು ಭಾರತೀಯ ವಿದ್ಯಾವಂತರಿಗೆ ಗುಮಾಸ್ತ, ಸಹಾಯಕ, ಸೇವಕ, ಕೂಲಿಗಳಿಗಾಗಿ ನೇಮಿಸುತ್ತಿದ್ದರು. ಸಾಮಾನ್ಯ ಜನರಿಗೆ ಇವರ ಆಡಳಿತ, ಸುಧಾರಣೆ ಗಳೂ ಸ್ವಲ್ಪವು ತಿಳಿಯುತ್ತಿರಲಿಲ್ಲ. ಭಾರತೀಯ ವ್ಯಕ್ತಿಗೂ ಮತ್ತು ಆಂಗ್ಲ ವ್ಯಕ್ತಿಗಳಿಗೂ ಸ್ಥಾನಮಾನದಲ್ಲಿ ವ್ಯತ್ಯಾಸವಿತ್ತು. ಬ್ರಿಟಿಷರು ಭಾರತದಲ್ಲಿ ಆಡಳಿತ ನಡೆಸುತ್ತಿದ್ದಾಗ, ಈ ಜಿಲ್ಲೆಯಲ್ಲಿ ಶೇ. ೧೦ರಷ್ಟು ಜನರು ಉತ್ತಮ ಜೀವನ ನಡೆಸಿದರೆ, ಉಳಿದ ಶೇ. ೯೦ರಷ್ಟು ಜನರು ಬಡತನ, ದಾರಿದ್ರ್ಯ ಮತ್ತು ಆಹಾರವಿಲ್ಲದೆ ಜೀವಿಸುತ್ತಿದ್ದುದನ್ನು (ಅಂಕಿ ಅಂಶಗಳು ಮೂಲಕ ಆಯಾ ವಾರ್ಷಿಕ ವರದಿಗಳಲ್ಲಿ) ತಿಳಿಯಬಹುದು. ಸದಾ ಜನರು ಕೂಲಿ, ಶ್ರಮದಿಂದ ಜೀವಿಸುತ್ತಿದ್ದರು. ಸರ್. ಥಾಮಸ್ ಮನ್ರೋ ಕೂಡ ಇಲ್ಲಿಗೆ ಬಂದಾಗ ಈ ಸಮಾಜವನ್ನು ಕಂಡು ಬರಿಗಾಲಿನಲ್ಲಿ ನಡೆಯುವ ಮನುಷ್ಯರೇ ಹೆಚ್ಚಾಗಿದ್ದರೆಂದು ಅಪಹಾಸ್ಯ ಮಾಡಿದನಲ್ಲದೆ, ಇಲ್ಲಿನ ಜನರು ಅತೀ ಹಿಂದುಳಿದವರು, ಶೈಕ್ಷಣಿಕ, ಸಾಮಾಜಿಕ ಪ್ರಜ್ಞೆ ಇರಲಿಲ್ಲವೆಂದು ಇವರಿಗಾಗಿ ನಾನು ಅವಿರತ ಶ್ರಮಿಸಿದ್ದೇನೆಂದು ತನ್ನ ವರದಿಗಳಲ್ಲಿ ತಿಳಿಯ ಪಡಿಸುತ್ತಾನೆ.[7] ಇಲ್ಲಿನ ವರ್ಣಾಶ್ರಮ ವ್ಯವಸ್ಥೆ, ಸಂಸ್ಕೃತಿ ಮಡಗು ಗಟ್ಟಿದಾಗ ಆಲಕ್ಷಣ ಗಳಿದ್ದವು. ಬದಲಾದ ಕಾಲಕ್ಕೆ ಮನ್ರೋ ಶ್ರಮಿಸಿರಬೇಕೆಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿರುವ ಮಾಸ್ತಿ, ವೀರಗಲ್ಲುಗಳನ್ನು ನೋಡಿ ಅವುಗಳ ಪಾಠ ಕೇಳಿ ಮನ್ರೋ ತಿಳಿದನು. ಮನ್ರೋ ಈ ಸಮಾಜವನ್ನು ಅತೀ ಎಚ್ಚರಿಕೆಯಿಂದ ಸುಧಾರಣೆಗೆ ತಂದನು. ವಿಧವಾ ವಿವಾಹವನ್ನು ಕಲೆಕ್ಟರುಗಳು ಪ್ರೋತ್ಸಾಹ ಆದರೆ, ಬಾಲ್ಯವಿವಾಹ ನಿಷೇಧವಿದ್ದರೂ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಕಡೆ ರೂಢಿಯಲ್ಲಿದ್ದಿತು. ಆಂಗ್ಲರ ಸಂಪರ್ಕದಿಂದ ಜನ್ಮತಾಳಿದ ಹೊಸಭಾವನೆಗಳು, ವಿಧಾನಗಳು, ಭಾರತೀಯರ ಮನಸ್ಸನ್ನು ಪರಿವರ್ತಿಸಿದವು. ಹಾಗಾಗಿ ವ್ಯಾಪಾರ, ಉದ್ಯೋಗ, ವ್ಯವಸಾಯದ ಅಭಿವೃದ್ದಿಗಳಿಂದ ಸಾಮಾಜಿಕ ಪದ್ಧತಿ ಸಂಪ್ರದಾಯ ಮತ್ತು ರೂಢಿಗಳನ್ನು ಬದಲಾಯಿಸಲು ಪ್ರಯತ್ನಿಸಿದರು. ಅಂದಿನ ಸಮಾಜವನ್ನು ವೈದ್ಯಕೀಯ ಸಹಾಯ, ಆರೋಗ್ಯ ಅಭಿವೃದ್ದಿಯ ಕಾರ್ಯಕ್ರಮ ಗಳಿಂದ, ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲಾಯಿತು. ದೇಶಿಯ ವೈದ್ಯ ಪದ್ಧತಿಯೂ ಕೂಡ ಅಂದು ಪ್ರಚಲಿತದಲ್ಲಿತ್ತು.

ಸಮಾನತೆಯನ್ನು ಗುರಿತಿಸುವಾಗ ಅವರು ಈ ಸಮಾಜವನ್ನು ಕಂಡು ಅಲಕ್ಷಿಸಿದ ಸನ್ನಿವೇಶಗಳುಂಟು. ಆಂಗ್ಲ ಪ್ರತಿಷ್ಠಿತ ವ್ಯಕ್ತಿಯ ಸ್ಥಾನಮಾನ ಹೇಗಿತ್ತೆಂದರೆ, ದಾರಿಯಲ್ಲಿ ಕುದುರೆ ಮೇಲೆ ಅಥವಾ ನಡೆದು ಬಂದರೆ ಸ್ಥಳೀಯ ವ್ಯಕ್ತಿಗಳು ಸ್ವತಂತ್ರವಾಗಿ ಸುಳಿದಾಡು ವಂತಿರಲಿಲ್ಲ. ಮತ್ತು ರೈಲ್ವೆ ಪ್ರಯಾಣ ಮಾಡುವಾಗ ಅವರಿಗೆ ಸಮಾನ ಸ್ಥಾನದಲ್ಲಿ ಭಾರತೀಯರಿಗೆ ಪ್ರವೇಶವಿರಲಿಲ್ಲ. ಭಾರತೀಯರೇ ಒಂದು ಜನಾಂಗವನ್ನು ಕೀಳೆಂದು ಪರಿಗಣಿಸಿದರೆ, ಬ್ರಿಟಿಷರ ದೃಷ್ಟಿಯಲ್ಲಿ ಇಡೀ ಭಾರತೀಯರನ್ನು ಕೆಳವರ್ಗದವರೆಂದು ಪರಿಗಣಿಸಿದ್ದರು. ಕಲೆಕ್ಟರ್‌ಗಳು ಅಸ್ಪೃಶ್ಯರನ್ನು ಗೋಮಾಂಸ ತಿನ್ನುವವರು, ಸಮಾಜದಲ್ಲಿ ಕೆಳಸ್ಥಾನದಲ್ಲಿ ಹೊಂದಿ ಅಳತೆ ಮಾಡಿಕೊಟ್ಟ ಊರಿನ ಒಂದು ಭಾಗದಲ್ಲಿ ವಾಸಿಸುತ್ತಿದ್ದರೆಂದು ತಿಳಿಸಲಾಗಿದೆ.[8] ಅವರನ್ನು ಯಾವ ದೇವಾಲಯಗಳಿಗೆ ಹೋಗುವಂತೆ ಬಿಡುತ್ತಿರಲಿಲ್ಲ. ಹರಿಜನರಿಗೆ ಸರ್ಕಾರದಿಂದ ಯಾವ ಕೆಲಸವೂ ಆಗುತ್ತಿರಲಿಲ್ಲ. ಪ್ರತಿಷ್ಠಿತರಿಗೆ ಮಾತ್ರ ಮೀಸಲಾಗಿದ್ದವು. ಅಗಸ, ಕ್ಷೌರಿಕನ ಕೆಲಸ ತಾವೇ ಮಾಡಿಕೊಳ್ಳುತ್ತಿದ್ದರು.[9] ದಲಿತರು ಈ ನೋವನ್ನು ಆರಂಭದಿಂದಲೂ ನುಂಗಿಕೊಂಡು, ಸಹಿಸಿಕೊಂಡು ಬಂದವರಾಗಿದ್ದಾರೆ. ಬ್ರಿಟಿಷರು ಇದನ್ನು ಸ್ಫೋಟಗೊಳಿಸಿದಾಗಲಾದರೂ ಸಮಾಜ ಪರಿವರ್ತನೆ ಆಗಲಿಲ್ಲ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಚರ್ಚ್‌ಗಳ ಬೆಳವಣಿಗೆಗೆ ಅಸ್ಪೃಶ್ಯರನ್ನು ಸೇರಿಸಿ ಕೊಂಡು, ಕ್ರಮೇಣ ಅನ್ಯರನ್ನು ಮತಾಂತರಿಸಿದ್ದು, ಕಂಡುಬರುತ್ತದೆ. ಆದರೆ, ಧೈರ್ಯ ಪರಾಕ್ರಮಿಗಳಾದ ಬೇಡರನ್ನು ಪೊಲೀಸ್, ಅರಣ್ಯ ರಕ್ಷಕರಾಗಿ ನೇಮಿಸಿ, ಇಂತಿಷ್ಟು ಸಂಬಳ ಕೊಡುತ್ತಿದ್ದರು.[10] ನಂತರ ಬ್ರಾಹ್ಮಣ ವರ್ಗಕ್ಕೆ (ಉನ್ನತ ಸ್ಥಾನಮಾನ) ಗುಮಾಸ್ತ ಹುದ್ದೆ ಯನ್ನು ನೀಡಿದ್ದು ಸಮಾಜ ಏರುಪೇರಾಗಲು ಕಾರಣವಾಯಿತು.

ಸಾಮಾಜಿಕವಾಗಿ ನ್ಯಾಯ ತೀರ್ಮಾನ, ವರ್ತನೆ ಮತ್ತು ಜನಜೀವನದ ಕೆಲವು ಲಕ್ಷಣ ಗಳಲ್ಲಿ ಬ್ರಿಟಿಷರ ದಟ್ಟ ಪ್ರಭಾವವಿತ್ತು. ಕೊಡಗಿನಲ್ಲಿ ಬ್ರಿಟಿಷ್ ಸಂಸ್ಕೃತಿಯ ಲಕ್ಷಣಗಳನ್ನು ಇಂದಿಗೂ ಗುರುತಿಸಬಹುದು. ಆಗ ಭಾರತೀಯನು ಮಾಡಿದ ಅಪರಾಧಕ್ಕೆ  ಕಠಿಣ ಶಿಕ್ಷೆ ವಿಧಿಸಿದರೆ, ವಿದೇಶಿಯರ ಅಪರಾಧಕ್ಕೆ ಸಾಧಾರಣ ಶಿಕ್ಷೆ ಇತ್ತು. ಬ್ರಿಟಿಷರು ಈ ಪ್ರದೇಶದಲ್ಲಿ ಸಾಮಾಜಿಕವಾಗಿ ಒಂದೇ ಕೋಮಿನ ಜನರನ್ನು ಶಾಂತವಾಗಿರಿಸಲಿಲ್ಲ. ಒಡೆದು ಆಳುವ ನೀತಿಯಿಂದ ತಮ್ಮ ರಾಜಕೀಯ ಲಾಭವನ್ನು ಗಟ್ಟಿಗೊಳಿಸಿಕೊಂಡರು.

ಪ್ರಾದೇಶಿಕ ವಿಂಗಡಣೆ, ಆಡಳಿತದಿಂದ ಅವರಲ್ಲಿ ಅನೈಕ್ಯತೆ ಬೀಜ ಬಿತ್ತುತ್ತಿದ್ದರು. ಹಾಗಾಗಿ ಅವರ ಒಡೆದು ಆಳುವ ನೀತಿಗೆ ಇದು ಹೊಸ ತಿರುವು ನೀಡಿತು. ಆಗಿನಿಂದ ಈ ಜನರನ್ನು ನಿಕೃಷ್ಟವಾಗಿ ಕಾಣುತ್ತಿದ್ದರು. ಕಲೆಕ್ಟರ್, ಸೈನ್ಯಾಧಿಕಾರಿ ಇತರ ಎಲ್ಲಾ ಆಂಗ್ಲಾಧಿಕಾರಿಗಳು ಶ್ರೀಸಾಮಾನ್ಯನೊಡನೆ ಬೆರೆತುದಕ್ಕೆ ನಿದರ್ಶನಗಳಿರುವುದು ವಿರಳ. ಆಂಗ್ಲರು ಆಜ್ಞಾವರ್ತಿಗಳಾದರೆ, ಇವರು ಪರಿಪಾಲಕರಾಗಿದ್ದರು. ಯಾವುದೇ ರಾಜವಂಶಿಗನಾದರೂ ಕಲೆಕ್ಟರ್‌ನನ್ನು ಸಂದರ್ಶಿಸಬೇಕಾದರೆ, ಸ್ಥಳೀಯ ಗಣ್ಯವ್ಯಕ್ತಿಯಿಂದ ಪಡೆದ ಅಪ್ಪಣೆ ಚೀಟಿ ಕೊಟ್ಟು ಸಂದರ್ಶಿಸಬೇಕಿತ್ತು. ಕಲೆಕ್ಟರ್ ಅವರ ಪರಿವಾರ, ಸಮುದಾಯವು ಮನರಂಜನೆ ಸ್ಥಳ, ಕ್ಲಬ್ಬುಗಳಲ್ಲಿದ್ದಾಗ ಭಾರತೀಯರಿಗೆ ಪ್ರವೇಶವಿರಲಿಲ್ಲ. ಇಲ್ಲಿನ ಜನರು ಸ್ಥಳೀಯರು ಏರ್ಪಡಿಸಿದ ಸಭೆ ಸಮಾರಂಭ, ಮನರಂಜನೆ ಸ್ಥಳಗಳಿಗೆ ಶಿಸ್ತು, ಕಟ್ಟುನಿಟ್ಟಿನ ವ್ಯವಸ್ಥೆ(ರಕ್ಷಣೆ ವ್ಯವಸ್ಥೆ)ಯನ್ನು ಕಾಪಾಡಬೇಕಿತ್ತು. ಹಾಗಾಗಿ ನಿರಾಧಾರವಾಗಿ ಅಧಿಕ ಸಂಖ್ಯೆಯಲ್ಲಿ ಆಂಗ್ಲ ಅಧಿಕಾರಿಗಳ ಪತ್ನಿಯರು ಇಲ್ಲಿಗೆ ಬರಲಾರಂಭಿಸಿದರು. ಈ ಮೇಲಿನ ಎಲ್ಲಾ ವ್ಯವಸ್ಥೆಗೆ ಬ್ರಿಟಿಷರೇ ಕಾರಣವೆನ್ನಬಹುದು. ಇಲ್ಲಿನ ಜನರಲ್ಲಿ ವಿದ್ಯಾಭ್ಯಾಸ ಮತ್ತು ನಾಗರಿಕತೆ ಮಟ್ಟ ಹೆಚ್ಚಿದಂತೆ, ಬ್ರಿಟಿಷರ ಜೀವನ ಕ್ರಮ, ಆಹಾರ, ವೇಷಭೂಷಣಗಳ ಪ್ರಭಾವವಾಗಿ ನಮ್ಮಲ್ಲಿ ಅವರ ಬಗ್ಗೆ ಅನುಕರಣೆ ಹುಟ್ಟಿಕೊಂಡಿತು. ಇದು ಅಪಾಯವೆಂದು ತಿಳಿದು ಸಹಾ ಬ್ರಿಟಿಷರ ದಾಸ್ಯಕ್ಕೊಳಗಾಗಿದ್ದು ಕ್ಷಣಿಕ ಸುಖಕ್ಕೆ ಸಾಗರದಷ್ಟು ಕಷ್ಟಪಟ್ಟಂತಾಗಿದೆ.

ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಗ್ರಾಮ ಸಮುದಾಯಗಳ ಜನಜೀವನದಲ್ಲಿ ಅನೇಕ ಬದಲಾವಣೆಗಳಾದವು. ಇಲ್ಲಿನ ಹಳ್ಳಿಗಳ ವಿಶಿಷ್ಟ ಗುಣಗಳಾದ ಸ್ಥಿತಿ ಸ್ಥಾಪಕತ್ವ ಮತ್ತು ಅವುಗಳಿಂದ ಮುಂದುವರೆದುಕೊಂಡು ಸಾಗುವ ಅಚಲ ನಿರ್ಧಾರಗಳ ಫಲ ಪ್ರಶಂಸನೀಯ ವಾದುದು. ಜೋಗನ್ ಶಂಕರ್‌ರವರ ಪ್ರಕಾರ “ಬ್ರಿಟಿಷರ ಗ್ರಾಮ ಜೀವನ ಅಧ್ಯಯನದ ಮುಖ್ಯ ಉದ್ದೇಶವು ತಮ್ಮ ಆಡಳಿತವನ್ನು ಬಿಗಿಗೊಳಿಸಲು ಬೇಕಾದ ಮಾಹಿತಿ ಸಂಗ್ರಹಣೆ ಮಾಡುವುದಷ್ಟೇ ಆಗಿತ್ತು” ಎಂದಿದ್ದಾರೆ.[11] ಇವರ ಕಾಲದಲ್ಲುಂಟಾದ ಕ್ಷಾಮ, ಬರಗಾಲಗಳ ಪರಿಹಾರಕ್ಕಾಗಿ ಆಯೋಗಗಳನ್ನು ನೇಮಿಸಲಾಯಿತು. ಅವು ಸರ್ಕಾರಕ್ಕೆ ಗ್ರಾಮಗಳ ವೈಜ್ಞಾನಿಕ ಅಧ್ಯಯನ ಕೈಗೊಳ್ಳಲು ಸೂಚಿಸಿದರೂ ಕೂಡ ಕಾರ್ಯಗತವಾಗಲಿಲ್ಲ. ಪ್ರಥಮವಾಗಿ ನಮ್ಮ ಗ್ರಾಮ ಸಮಾಜದಲ್ಲಾದ ಬದಲಾವಣೆಗಳನ್ನು ಅಧ್ಯಯನ ಮಾಡಿದವರಲ್ಲಿ ಆಂಗ್ಲರೇ ಮೊದಲಿಗರು. ಇವರ ಕಾಲದಲ್ಲಿ ಪಂಚಾಯಿತಿಗಳು ಸಂಪೂರ್ಣ ಅವನತಿಗಳುಂಟಾದವು. ಆದರೆ ನ್ಯಾಯಾಲಯಗಳ ಸ್ಥಾಪನೆಯಿಂದ ವ್ಯವಸ್ಥಿತವಾದ ಆಡಳಿತಕ್ರಮ ಜಾರಿಗೆಬಂದಿತು. ಅಂದಿನಿಂದ ಅಧಿಕಾರವನ್ನು ಪಂಚಾಯಿತಿಗಳಿಗೆ ವಿಸ್ತರಿಸಿದರು. ಈ ಸಮಾಜ ಒಂದು ಘಟನೆಯಿಂದ, ಸಮಾಜದಿಂದ, ವ್ಯಕ್ತಿಯಿಂದ ಬದಲಾಗಲಿಲ್ಲ. ಸುಮಾರು ೧೪೭ ವರ್ಷಗಳ ಚರಿತ್ರೆಯಲ್ಲಿ ಬ್ರಿಟಿಷರ ಅವಿರತ ಪರಿಶ್ರಮದಿಂದ ತಕ್ಕಮಟ್ಟದ ಬದಲಾವಣೆ ಆಗಿದ್ದು ಗಮನಾರ್ಹ. ಅದನ್ನು ಎರಡು ಬಗೆಯಲ್ಲಾದ ಲಾಭ ನಷ್ಟಗಳೆಂದು ಏಣಿಸಿದರೂ ತಪ್ಪಾಗ ಲಿಕ್ಕಿಲ್ಲ. ಬ್ರಿಟಿಷರಲ್ಲಾದ ಸಾಮಾಜಿಕ ಸುಧಾರಣೆ, ಭಾರತೀಯರಲ್ಲಾದ ಸುಧಾರಣೆಗಳನ್ನು ಪಟ್ಟಿ ಮಾಡುವುದು ಕಷ್ಟವೇ ಸರಿ. ತುಳಿತಕ್ಕೊಳಗಾದಾಗ ಶೋಷಣೆಗಳಿಂದ ಭಾರತದಲ್ಲಿ ಸುಧಾರಣೆ ಎಂಬುದು ಹುಸಿನಂಬಿಕೆಯಷ್ಟೇ. ಅದರ ಎಲ್ಲಾ ಪ್ರತಿಫಲ ಬ್ರಿಟಿಷರಿಗೆ ಲಭಿಸುವು ದಾಗಿತ್ತು.

ಸಾಮಾಜಿಕವಾಗಿ ಸ್ತ್ರೀಯರು-ಪುರುಷರು ಸಮಾಜದ ಬದಲಾವಣೆಯಲ್ಲಿ ಪ್ರಥಮ ಸ್ಥಾನವಹಿಸುತ್ತಾರೆ. ಹಿಂದೂ ವಿಧವಾ ವಿವಾಹ, ಅಂತರ್ಜಾತೀಯ ವಿವಾಹ, ಸಹ ಭೋಜನಗಳು ಬೆಳೆದು ಬರಲು ಇವರು ಅನುವು ಮಾಡಿಕೊಟ್ಟರು. ವೇಷಭೂಷಣಗಳು ಸಮಾಜವನ್ನು ಪರಿವರ್ತಿಸುವಲ್ಲಿ, ಇಂಗ್ಲಿಷ್ ವಿದ್ಯಾಭ್ಯಾಸವು ಬಹುತೀರ್ವವಾದ ಬದಲಾವಣೆಗೆ ಕಾರಣ ವಾಯಿತು. ಇದಲ್ಲದೆ, ಸುಧಾರಣಾ ಚಳುವಳಿಗಳು ಕಾರಣವಾಗಿವೆ. ರಾಜಾರಾಮ್ ಮೋಹನ್ ರಾಯ್‌ರ ಬ್ರಹ್ಮಸಮಾಜ, ಕೇಶವಚಂದ್ರಸೇನರ ಪ್ರಾರ್ಥನಾ ಸಮಾಜ, ಸ್ವಾಮೀದಯಾನಂದ ಸರಸ್ವತಿಯವರ ಆರ್ಯಸಮಾಜ, ವಿವೇಕಾನಂದರ ರಾಮಕೃಷ್ಣ ಮಿಷನ್ ಮತ್ತು ಶ್ರೀಮತಿ ಅನಿಬೆಸಂಟ್‌ರ ಥಿಯಾಸೋಫಿಕಲ್ ಸೊಸೈಟಿ ಸಮಾಜದ ಪುನಶ್ಚೇತನಕ್ಕೆ ಕಾರಣವಾಯಿತು. ಇವುಗಳ ಪ್ರಮುಖ ಉದ್ದೇಶ, ಶಿಶುಹತ್ಯೆಯ ರದ್ದು, ವಿಧವಾ ವಿವಾಹ ಆಚರಣೆ, ದಾಸ್ಯ ವಿಮೋಚನೆ ಮತ್ತು ಸ್ತ್ರೀ ವಿದ್ಯಾಭ್ಯಾಸದ ಬೆಳವಣಿಗೆ, ಈ ಸಾಮಾಜಿಕ ಸುಧಾರಣೆಗಳು ಹುಟ್ಟಿಕೊಂಡವು.

ಆಂಗ್ಲ ಕಲೆಕ್ಟರುಗಳು ಈ ಜಿಲ್ಲೆಯಲ್ಲಿ ಸತಿಪದ್ಧತಿಯನ್ನು ರದ್ದುಗೊಳಿಸಿದ ವಿದೇಶಿ ಯರಲ್ಲಿ ಮೊದಲಿಗರಾಗಿದ್ದಾರೆ. ೧೯೨೯ರಲ್ಲಿ ಸತಿ ಪದ್ಧತಿ ನಿಷೇಧಕಾಯ್ದೆ ಜಾರಿಗೆ ಬಂದಾಗ, ವಿಧವಾ ವಿವಾಹಕ್ಕೆ ಮಹತ್ವ ದೊರೆಯಿತು. ೧೮೫೬ರಲ್ಲಿ ಹಿಂದೂ ವಿವಾಹವನ್ನು ನ್ಯಾಯಬದ್ಧ ವಾಗಿ ಮಾಡಲು ಹಿಂದೂ ವಿವಾಹ ಕಾನೂನು ಜಾರಿಗೆ ಬಂದಿತು. ಭಾರತದಲ್ಲಿ ದಾಸ್ಯಪದ್ಧತಿ ಯನ್ನು ರದ್ದು(೧೮೧೧)ಗೊಳಿಸಿ, ಗುಲಾಮರ ಆಮದನ್ನು ಭಾರತದಲ್ಲಿ ನಿಷೇಧಿಸಲಾಯಿತು. ೧೮೬೦ರ ಇಂಡಿಯನ್ ಪೆನಲ್ ಕೋಡ್ ಪ್ರಕಾರ ಗುಲಾಮಗಿರಿ ನ್ಯಾಯಬಾಹೀರವೆಂದು ಸಾಬೀತಾಯಿತು. ೧೮೫೪ರಲ್ಲಿ ಚಾರ್ಲ್ಸ್‌ವುಡ್‌ನನ್ನು ಮಕ್ಕಳ ಅಪವ್ಯಯ, ಅನುತ್ತೀರ್ಣತೆಗೆ (ವೇಸ್ಟೆಜ್ ಮತ್ತು ಸ್ಟಾಗ್‌ನೇಷನ್) ಪರಿಹಾರ ಕಂಡುಹಿಡಿಯಲು ಶಿಕ್ಷಣ ಸಮಿತಿಗೆ ನೇಮಿಸಲಾಯಿತು. ಈ ಸಮಿತಿ ಶಿಫಾರಸ್ಸಿನಂತೆ ಸ್ತ್ರೀ ವಿದ್ಯಾಭ್ಯಾಸದ ಬೆಳವಣಿಗೆಗೆ ಹೆಚ್ಚಾಗಿ ಪ್ರೋತ್ಸಾಹಿಸಿತು.

ಈ ಭಾಗದ ಸಮಾಜದಲ್ಲಿ ಸಮಾನತೆ ಇರಲಿಲ್ಲ. ನೂರಾರು ವರ್ಷಗಳಿಂದ ಕಂದರವೇ ರ್ಪಟ್ಟಿದ್ದಿತು. ಗಾಂಧೀಜಿಯವರ ಪ್ರಭಾವದಿಂದ ೧೯೩೨ರಲ್ಲಿ ಸೊಂಡೂರಿನ ರಾಜ ಸುತ್ತೋಲೆಯನ್ನು ಹೊರಡಿಸಿ ನನ್ನ ರಾಜ್ಯದಲ್ಲಿ ಅಸ್ಪೃಶ್ಯರು ಯಾವುದೇ ದೇವಾಲಯಗಳಿಗೂ ಮುಕ್ತವಾಗಿ ಪ್ರವೇಶಿಸಬಹುದೆಂದು ತಿಳಿಸಿದನು. ಆಂಗ್ಲರು ಆಳ್ವಿಕೆ ನಡೆಸುವ ಸಮಯಕ್ಕಿದ್ದ ವರ್ಗವ್ಯವಸ್ಥೆ, ಅನಂತರ ಬದಲಾಯಿತು. ಸಮಾಜದಲ್ಲಿ ಮೂರು ವರ್ಗಗಳಿದ್ದು ಉನ್ನತ, ಮಧ್ಯಮ ಮತ್ತು ಸಾಮಾನ್ಯಗಳೆಂದು ವಿಭಾಗಿಸಿದ್ದರು. ಬ್ರಾಹ್ಮಣರು, ಶ್ರೀಮಂತರು ಮತ್ತು ವಕೀಲರು, ಶಿಕ್ಷಕರು, ಜಮೀನುದಾರರು ಹಾಗು ರೈತರು ಇತರ ಕೆಳವರ್ಗದವರನ್ನು ಸಾಮಾನ್ಯ ವಾಗಿ ಇಲ್ಲಿ ಹೆಸರಿಸಬಹುದು. ಸಾಮಾಜಿಕವಾಗಿ ಜನರನ್ನು ವಿಂಗಡಿಸುವಾಗ ದೇಶೀಯ, ವಿದೇಶೀಯರೆಂದು ಕರೆದುಕೊಂಡರು. ವಿದೇಶಿಯರಲ್ಲಿಯೂ ವರ್ಗವ್ಯವಸ್ಥೆ ಮೊದಲಿ ನಿಂದಿತ್ತು. ರೋಮನ್ ಕೆಥೋಲಿಕ್, ಪ್ರೊಟೆಸ್ಟೆಂಟ್ ಪಂಥಗಳಲ್ಲದೆ, ಲಾರ್ಡ್, ಸರ್, ಸೈಂಟ್ ಎಂಬ ಪದವಿ ಮತ್ತು ಗೌರವಾನ್ವಿತ ಹೆಸರುಗಳಿಂದ ಬಂದವರಾಗಿದ್ದರು.

ಬ್ರಿಟಿಷರ ಕಾಲದಲ್ಲಿ ದತ್ತ ಜಿಲ್ಲೆಗಳ ಸ್ತ್ರೀ-ಪುರುಷರು ಮದುವೆ ಆಗುವ ವಯಸ್ಸನ್ನು ಇಂತಿಷ್ಟು ಎಂದು ನಿಗದಿಪಡಿಸಿದ್ದರು. ಇದಕ್ಕೆ ಮೊದಲು ಬಾಲ್ಯವಿವಾಹ ಚಾಲ್ತಿಯಲ್ಲಿತ್ತು. ಶೇಕಡವಾರು ಇಂತಿದೆ.

 

ಪುರುಷ

ಮಹಿಳೆ

೧೮೫೦-೫೨ ೭.೬ ೨೪.೩
೧೮೬೦-೬೨ ೯.೫ ೨೯.೬
೧೮೭೦-೭೨ ೧೧.೮ ೩೪.೧

ಪುರುಷರಲ್ಲಿ ೧೦ಕ್ಕೆ ಒಬ್ಬರಂತೆ ಮಹಿಳೆಯರು ದತ್ತ ಜಿಲ್ಲೆಗಳಲ್ಲಿ ಬುದ್ದಿವಂತರಾಗಿದ್ದರು. ಮುಂದುವರಿದ ವರ್ಗಗಳಲ್ಲಿ ಮಹಿಳೆಯರು ಶಿಕ್ಷಣ ಪಡೆದರೆ, ಹರಿಜನ, ಗಿರಿಜನರಲ್ಲಿ ಈ ಬಗ್ಗೆ ತುಂಬಾ ನಿರ್ಬಂಧಗಳಿದ್ದವು.

ಇಲ್ಲಿ ಕಂಡುಬರುವ ಎಲ್ಲಾ ವರ್ಗಗಳಿಗಿಂತ ಲಂಬಾಣಿಗರ ಸ್ಥಿತಿಗತಿಯನ್ನು ಪಿ.ಕೆ. ಖಂಡೋಬ ಅವರು ಈ ರೀತಿ ಅಭಿಪ್ರಾಯಿಸಿದ್ದಾರೆ. ದುರ್ದೈವವಶಾತ್ ಬ್ರಿಟಿಷ್ ಸರ್ಕಾರ ಇಂಥ ದೇಶಭಕ್ತ ಸಮಾಜಕ್ಕೆ ಕಳಂಕ ಹೆಚ್ಚುವುದಕ್ಕಾಗಿ ಅವರನ್ನು ಅಪರಾಧಿ ಬುಡಕಟ್ಟಿನವರು ಎಂದು ಪರಿಗಣಿಸಿ ಅಲಕ್ಷಿಸಿತು. ಈ ಕಾರಣಕ್ಕಾಗಿಯೇ ಬಳ್ಳಾರಿ ಜಿಲ್ಲೆಯಲ್ಲಿ ಲಂಬಾಣಿಗರ ಹೋರಾಟಗಳು ನಡೆದದ್ದು ಕಂಡುಬಂದಿವೆ. ೧೯೨೬ ಮತ್ತು ೧೯೩೭ರಲ್ಲಿ ಹರಪನಹಳ್ಳಿ ಮತ್ತಿತರ ಭಾಗಗಳಲ್ಲಿ ಎಂ.ಎಲ್. ನಾಯ್ಕರ ನೇತೃತ್ವದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳಿಗಾಗಿ ವಿದ್ಯಾರ್ಥಿಗಳು ಹೋರಾಟಕ್ಕಿಳಿದರು.[12] ಈ ರೀತಿ ಪ್ರಾದೇಶಿಕವಾಗಿ ಕೆಲವು ಜನಾಂಗೀಯ ಹೋರಾಟಗಳು ನಡೆದಿದ್ದು ಕಂಡುಬರುತ್ತವೆ. ೧೯೪೯ರಲ್ಲಿ ಅಲ್ಲೀಪುರದ ಜಿ. ಹನುಮಂತಪ್ಪ ಬಳ್ಳಾರಿ ಜಿಲ್ಲಾ ವಾಲ್ಮೀಕಿ ವಿದ್ಯಾಭಿವೃದ್ದಿ ಸಂಘ ಸ್ಥಾಪಿಸಿ, ಹೋರಾಟದ ಮೂಲಕ ಮುಂದೆ ಬಂದರು. ತರುವಾಯ ಕೆಲವು ಹೋರಾಟಗಾರರು ಸಮಾಜದಲ್ಲಿದ್ದ ಸ್ವಾತಂತ್ರ್ಯ, ಸಮಾನತೆ ಹಾಗು ಭ್ರಾತೃತ್ವಕ್ಕಾಗಿ ಬ್ರಿಟಿಷರನ್ನು ಹೊರದೂಡುವುದೊಂದೇ ಮಾರ್ಗವೆಂದು ನಂಬಿದ್ದರು.[1]      ಮೈಸೂರು ಸ್ಟೇಟ್ ಗ್ಯಾಸೆಟಿಯರ್, ೧೯೭೬, ಪು. ೩೯೪.

[2]       ಮದ್ರಾಸ್ ಪ್ರೆಸಿಡೆನ್ಸಿ, ೧೯೮೭, ಪು. ೨೧೦.

[3]       ಬಳ್ಳಾರಿ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ೧೯೦೪, ಪು. ೧೮೪.

[4]       ಬಳ್ಳಾರಿ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ೧೯೦೪, ಪು. ೧೮೪.

[5]       ಅದೇ, ಪು. ೧೮೫.

[6]       ಅದೇ, ಪು. ೭೦.

[7]       ಮದ್ರಾಸ್ ಅಧಿಪತ್ಯದ ಆಡಳಿತ ವರದಿ, ೧೮೦೨, ಪು. ೭೨.

[8]       ಬಳ್ಳಾರಿ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ೧೯೦೪, ಪು. ೭೨.

[9]       ಅದೇ, ಪು. ೭೨.

[10]     ಅದೇ, ಪು. ೭೦.

[11]      ಗ್ರಾಮ ಸಮಾಜ, ೧೯೯೫, ಪು. ೫.

[12]      ನೋಡಿ. ಬಂಜಾರ ಕೇಸರಿ, ೧೮.೧೧.೧೯೯೪, ಬೆಂಗಳೂರು.