ಕರ್ನಾಟಕದ ಮೂವತ್ತು ಜಿಲ್ಲೆಗಳಲ್ಲಿ ಬಳ್ಳಾರಿಯು ಒಂದು. ಪ್ರಾಚೀನ ಕಾಲದಿಂದ ಅರ್ವಾಚೀನ ಅವಧಿಯವರೆಗೆ ಚಾರಿತ್ರಿಕ ಮಹತ್ವದ ಸಂಗತಿಗಳಿಂದ ಕೂಡಿರುವ ಬಳ್ಳಾರಿ ಜಿಲ್ಲೆ ವಿಜಯನಗರ ಸಾಮ್ರಾಜ್ಯದ ಕೇಂದ್ರ ಬಿಂದುವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ ಮಹಾಪರಿವರ್ತನೆಯ ಕಾಲಘಟ್ಟವೆಂದರೆ – ಬ್ರಿಟಿಷರ ಆಳ್ವಿಕೆ. ಇದು ಚಾರಿತ್ರಿಕ ಸಂಕ್ರಮಣಾ ವಸ್ಥೆಯನ್ನು ಸೃಷ್ಟಿಸಿದ್ದು ಗಮನಾರ್ಹ. ಇಲ್ಲಿ ಬ್ರಿಟಿಷರ ಆಳ್ವಿಕೆಯೆಂದರೆ ಕಲೆಕ್ಟರುಗಳ ಆಳ್ವಿಕೆ ಎಂದರ್ಥ. ಅನೂಚಾನವಾಗಿ ಬಂದ ರಾಜಪ್ರಭುತ್ವ, ಆಂಗ್ಲ ಸರ್ಕಾರ ಮತ್ತು ಪ್ರಜಾ ಪ್ರಭುತ್ವಗಳ ಪ್ರಭಾವವು ಭಿನ್ನವಾದ ನೆಲೆಯಲ್ಲಿ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಕಲೆಕ್ಟರುಗಳ ಆಳ್ವಿಕೆಯಲ್ಲಿ ದರ್ಪ, ದೌರ್ಜನ್ಯಗಳನ್ನು ಲಾವಣಿ, ಜನಪದ ಗೀತೆಗಳಲ್ಲಿ ತಿಳಿಯಬಹುದಾಗಿದೆ. ಇಂಥ ದಾಸ್ಯದ ನೊಗವನ್ನು ಸ್ವಾತಂತ್ರ್ಯ ಹೋರಾಟಗಾರರು ಕಿತ್ತೆ ಸೆದದ್ದು ಅವಿಸ್ಮರಣೀಯ.

ಪ್ರಸ್ತುತ ಅಧ್ಯಯನವು ಕ್ರಿ.ಶ. ೧೮೦೦ ರಿಂದ ೧೯೪೭ರವರೆಗೆ ವಿಷಯದ ವ್ಯಾಪ್ತಿ ಹೊಂದಿದೆ. ಇದಕ್ಕೆ ಪೂರಕವಾಗಿ ೧೯೫೩ರವರೆಗೆ ನಂತರ ಏಕೀಕರಣದ ತರುವಾಯದ ಘಟನೆಗಳನ್ನು ವಿವರಿಸಲಾಗಿದೆ. ೧೯೭೮ರಲ್ಲಿ ಬ್ರಿಟಿಷರ ವಿರುದ್ಧ ಟಿಪ್ಪು ಯುದ್ಧ ಮಾಡಿದಾಗ ಬ್ರಿಟಿಷರೊಂದಿಗೆ ಒಪ್ಪಂದವಾಯಿತು. ಅದರಂತೆ ಬಳ್ಳಾರಿ ಪ್ರದೇಶವನ್ನು ನಿಜಾಮನಿಗೆ ಟಿಪ್ಪು ಬಿಟ್ಟುಕೊಟ್ಟ. ಟಿಪ್ಪು ಶ್ರೀರಂಗಪಟ್ಟಣದಲ್ಲಿ ಸತ್ತ ಮೇಲೆ ಅವನ ರಾಜ್ಯ ಛಿದ್ರ ವಾಯಿತು. ಬಳ್ಳಾರಿ ಜಿಲ್ಲೆ-ಪ್ರದೇಶ ನಿಜಾಮ ಮತ್ತು ಪೇಶ್ವೆಗಳಿಂದ ವಿಭಾಗವಾಯಿತು. ೧೮೦೦ರಲ್ಲಿ ಪೇಶ್ವೆಗಳು, ಬ್ರಿಟಿಷರು ಮತ್ತು ನಿಜಾಮ ಇದನ್ನು ಹಂಚಿಕೊಂಡರು. ನಿಜಾಮ ೧೭೯೨ ರಿಂದ ೧೭೯೯ರ ವರೆಗೆ ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಗೆ ಒಪ್ಪಿ ಸಹಿ ಮಾಡಿದ. ಕಂಪನಿ ಸರ್ಕಾರ ಪಾಳೆಯಗಾರರಿಂದ ಕಂದಾಯ ಸಂಗ್ರಹಿಸುತ್ತಿದ್ದರು, ಪಾಳೆಯಗಾರರು ಸೈನ್ಯ, ತುಕಡಿಗಳನ್ನು ಹೊಂದುವಂತಿಲ್ಲ ಎಂದು ಬ್ರಿಟಿಷರು ಹೇಳಿದ್ದರು. ಈ ಪ್ರದೇಶದ ಭಾಗವನ್ನು ೧೭೯೯ ಮೇ ೪ರಲ್ಲಿ ಟಿಪ್ಪು ಮರಣದ ನಂತರ ಬ್ರಿಟಿಷರು, ಮರಾಠರು ಮತ್ತು ನಿಜಾಮನು ಹಂಚಿಕೊಳ್ಳುತ್ತಾರೆ. ಬಳ್ಳಾರಿ ಪ್ರದೇಶವನ್ನು ಬ್ರಿಟಿಷರು ಹೈದರಾಬಾದಿನ ನಿಜಾಮನಿಗೆ ಕೊಡುತ್ತಾರೆ. ನಂತರ ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ನಿಜಾಮ ಬಳ್ಳಾರಿ, ಅನಂತಪುರ, ಕಡಪಾ ಮತ್ತು ಕರ್ನೂಲು ಪ್ರದೇಶ(Back)ಗಳನ್ನು ದತ್ತಿಮಂಡಲವಾಗಿ (Ceded District) ಬ್ರಿಟಿಷರಿಗೆ ಬಿಟ್ಟುಕೊಟ್ಟ. ಅಂದಿನಿಂದ ಬಳ್ಳಾರಿ ಪ್ರದೇಶ ಮದ್ರಾಸ್ ಅಧಿಪತ್ಯಕ್ಕೆ ಸೇರಿತ್ತು. ಜಿಲ್ಲಾ ರಚನೆಯಾಗಿ ೧೮೦೦ರಿಂದ ಕಲೆಕ್ಟರುಗಳ ಆಳ್ವಿಕೆ ಆರಂಭವಾಯಿತು. ಮೊದಲ ಕಲೆಕ್ಟರನೇ ಸರ್. ಥಾಮಸ್ ಮನ್ರೊ. ಹೀಗೆ ೧೮೦೦ರಿಂದ ೧೯೪೭ರವರೆಗೆ ೧೪೭ ವರ್ಷಗಳ ಅವಧಿಯಲ್ಲಿ ಸುಮಾರು ೧೧೨ ಜನ ಕಲೆಕ್ಟರುಗಳು ಆಳ್ವಿಕೆ ನಡೆಸಿರುವರು. ೧೯೫೩ರವರೆಗೆ ೧೧೫ ಜನ ಕಲೆಕ್ಟರು ಆಳ್ವಿಕೆ ನಡೆಸಿದ್ದು ಅಕ್ಟೋಬರ್ ೧ ರಂದು ಬಳ್ಳಾರಿ ಜಿಲ್ಲೆ ಮೈಸೂರು ರಾಜ್ಯದಲ್ಲಿ ವಿಲೀನವಾಯಿತು.

ಪ್ರಸ್ತುತ ಅಧ್ಯಯನದಲ್ಲಿ ಬಳ್ಳಾರಿ ಜಿಲ್ಲೆಯ ಚಾರಿತ್ರಿಕ ಹಿನ್ನೆಲೆ, ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರ ಅಥವಾ ಪಲ್ಲಟಗಳನ್ನು ಹಾಗೂ ಅಲಕ್ಷಿತ ಘಟನೆ-ಸಂಗತಿಗಳನ್ನು ವಿಶ್ಲೇಷಿಸುವ ಪ್ರಯತ್ನವಿದೆ. ಚರಿತ್ರೆಯ ಶಿಸ್ತಿನಿಂದ ಕಾಲ, ವಿಷಯ, ವಸ್ತು, ವ್ಯಕ್ತಿ, ಘಟನೆ ಮತ್ತು ಪ್ರಾದೇಶಿಕತೆಗೆ ಮಹತ್ವ ಕೊಟ್ಟು ಆಂಗ್ಲರ ಆಳ್ವಿಕೆಗೆ ಸ್ಥಳೀಯರ ಪ್ರತಿರೋಧವನ್ನು ಲಿಖಿತ ಹಾಗೂ ಮೌಖಿಕ ಆಕರಗಳ ಮೂಲಕ ಗಮನಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ವಿವಿಧ ಆಯಾಮಗಳ ಅವಲೋಕನವು ಇಲ್ಲಿ ಅಗತ್ಯವೆನಿಸಿದೆ.

ಬಳ್ಳಾರಿ ಜಿಲ್ಲೆಯ ರಾಜಕೀಯ ಚರಿತ್ರೆಯನ್ನು ಅವಲೋಕಿಸಿದರೆ, ವಿಜಯನಗರ ಸಾಮ್ರಾಜ್ಯದ ಅವಧಿ ಮಧ್ಯಕಾಲೀನ ಚರಿತ್ರೆಯಲ್ಲಿ ನಿರ್ಣಾಯಕ ಕಾಲಘಟ್ಟವಾಗಿದೆಯೆನ್ನು ವುದು ಸ್ಮರಣೀಯ. ಈ ಕುರಿತು ಸಂಶೋಧನೆಗಳು ತಕ್ಕಮಟ್ಟಿಗೆ ನಡೆದಿದ್ದು, ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ವಿಜಯನಗರದ ತರುವಾಯ ಈ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಹೊಸತಿರುವು ನೀಡಿದ ಇನ್ನೊಂದು ಚಾರಿತ್ರಿಕ ಸಂದರ್ಭ ಆಂಗ್ಲರ ಆಡಳಿತಾವಧಿ. ಇದನ್ನು ವಸಾಹತುಶಾಹಿ, ಬ್ರಿಟಿಷರ ಅಥವಾ ಕಲೆಕ್ಟರುಗಳ ಆಡಳಿತಾವಧಿಯೆಂದು ಕರೆಯಲಾಗುವುದು. ಬ್ರಿಟಿಷರ ಆಳ್ವಿಕೆಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು, ಈ ಹಿನ್ನೆಲೆಯಲ್ಲಿ ಇವರ ಆಡಳಿತ, ಸಮಾಜ, ಶಿಕ್ಷಣ, ನ್ಯಾಯಾಂಗ, ವಾಸ್ತುಶಿಲ್ಪ, ಸ್ವಾತಂತ್ರ್ಯ ಹೋರಾಟ ಮತ್ತು ಆಧುನಿಕ (ಏಕೀಕರಣೋತ್ತರ) ಬಳ್ಳಾರಿ ಜಿಲ್ಲೆಯ ಸಮಸ್ಯೆ -ಸವಾಲುಗಳಂತಹ ಸಂಗತಿಗಳನ್ನು ಅಧ್ಯಯನ ಮಾಡಲು ಇಲ್ಲಿ ಉದ್ದೇಶಿಸಲಾಗಿದೆ. ಆಂಗ್ಲರ ಅಧ್ಯಯನಕ್ಕೆ ಆಂಗ್ಲರ ದಾಖಲೆ ಗಳೇ ಸಾಕ್ಷಿ ಎಂಬಂತೆ ಬಳ್ಳಾರಿ ಜಿಲ್ಲೆಯ ವಸಾಹತುಕಾಲೀನ ಅಧ್ಯಯನಕ್ಕೆ ಸ್ಥಳೀಯ ಆಕರ ಗಳಿಗಿಂತ ವಿದೇಶಿಯರ ದಾಖಲೆ, ಕೃತಿಗಳೇ ಹೆಚ್ಚು ಲಭ್ಯವಿರುವುದು ವಿಶೇಷ.

ಬ್ರಿಟಿಷರು ಅಥವಾ ಆಂಗ್ಲರನ್ನು ಕುರಿತು ನಡೆದಿರುವ ಅಧ್ಯಯನಗಳು ವಿಫುಲವಾಗಿವೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಅವರ ಆಳ್ವಿಕೆ ಕುರಿತಂತೆ ಈವರೆಗೆ ಪ್ರತ್ಯೇಕ ಅಧ್ಯಯನ ನಡೆದಿಲ್ಲವೆನ್ನುವುದು ಗಮನಾರ್ಹ. ಆದ್ದರಿಂದ ಈ ವಿಷಯವನ್ನು ಇಲ್ಲಿ ಯೋಜನೆಯ ಅಧ್ಯಯನಕ್ಕಾಗಿ ಕೈಗೆತ್ತಿಕೊಳ್ಳಲಾಗಿದೆ. ಪ್ರಸ್ತುತ ಅಧ್ಯಯನವು ಪ್ರಥಮ ಪ್ರಯತ್ನವಾಗಿದೆ. ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಇದು ಹೊಸಕ್ಷೇತ್ರವನ್ನು ಪರಿಚಯಕ್ಕೆ ತರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅನೂಚಾನವಾಗಿ ಬಂದ ರಾಜಪ್ರಭುತ್ವ, ಆಂಗ್ಲ ಸರ್ಕಾರ, ಶ್ರೀಮಂತರ ಅಟ್ಟಹಾಸ ಮತ್ತು ಪ್ರಜಾಪ್ರಭುತ್ವಗಳು ಸಮಾಜದ ಮೇಲೆ ಬೀರಿದ ಪ್ರಭಾವವನ್ನು ನಿರ್ದಿಷ್ಟ ವಾಗಿ ಗುರುತಿಸಲು ಹಾಗೂ ಮರೆಯಾಗಿದ್ದ ಇಂಥಾ ಹಲವಾರು ಅಂಶಗಳ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಪರಿಸ್ಥಿತಿ ಮಾತ್ರವಲ್ಲ, ಇಡೀ ಬ್ರಿಟಿಷರಿಗೆ ಒಳಪಟ್ಟ ಎಲ್ಲ ಪ್ರದೇಶಗಳ ಸ್ಥಿತಿ ಹೀಗೆಯೇ ಇತ್ತು. ಅವುಗಳ ಬಗ್ಗೆ ತೌಲನಿಕವಾಗಿ ಚರ್ಚಿಸಲಾಗಿದೆ.

ವಸಾಹತುಶಾಹಿ ಆಳ್ವಿಕೆಯನ್ನು ಭಿನ್ನವಾದ ಚರಿತ್ರೆಯ ತಳಹದಿಯ ಮೇಲೆ ಅಧ್ಯಯನಿ ಸಲು ಪ್ರಯತ್ನಿಸಿದೆ. ಇವರ ಆಳ್ವಿಕೆಯಲ್ಲಿಯ ದರ್ಪ, ದೌರ್ಜನ್ಯಗಳು ಲಾವಣಿ, ಕೋಲುಪದ, ಜನಪದ ಗೀತೆಗಳಲ್ಲಿ ಇಂದಿಗೂ ಉಳಿದುಬಂದಿರುವುದು ಕುತೂಹಲದ ಅಂಶ. ಆದ್ದರಿಂದಲೇ ಅವರ ಪ್ರಭಾವ – ಪರಿಣಾಮಗಳನ್ನು ಸೂಕ್ಷ್ಮವಾಗಿ ಸಮೀಕ್ಷಿಸಲಾಗಿದೆ. ಅಲ್ಲದೆ, ಬ್ರಿಟಿಷರ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸುವುದರೊಡನೆ ವಿವಿಧ ಕ್ಷೇತ್ರಗಳ ಮೇಲೆ ಉಂಟಾದ ಅವರ ಪ್ರಭಾವ – ಪರಿಣಾಮಗಳನ್ನು ಇಲ್ಲಿ ತಿಳಿಯಲೆತ್ನಿಸಿದೆ. ಆಡಳಿತದೊಡನೆ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಜೀವನದ ವಿವರಗಳನ್ನು ಚಿತ್ರಿಸುವ ಬಗೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ಬ್ರಿಟಿಷರು ಜಾರಿಗೆ ತಂದ ನೂತನ ಸುಧಾರಣೆಗಳಿಗೆ ಜನರು ಯಾವ ರೀತಿ ಸ್ಪಂದಿಸಿ ದರೆನ್ನುವುದು ಮುಖ್ಯ ಅಂಶಗಳಲ್ಲೊಂದು. ಪ್ರಜೆಗಳೇ ಅಲ್ಲದೆ, ನಿರಂಕುಶ ರಾಜಪ್ರಭುತ್ವದ ಸವಿಯನ್ನು ಉಂಡಿದ್ದ ಸ್ಥಳೀಯ ಆಳ್ವಿಕೆಗಾರರೂ ಇದರಿಂದ ಹೊರತಾಗಿರಲಿಲ್ಲ. ಉದಾ ಹರಣೆಗೆ, ಬ್ರಿಟಿಷರು ಬರುವ ಮುನ್ನ ಪಾಳೆಯಗಾರರು, ಸ್ವೇಚ್ಛೆಯಿಂದಿದ್ದರು. ಅನಂತರ ತಮ್ಮನ್ನು ನಿಯಂತ್ರಣಕ್ಕೊಳಪಡಿಸಿಕೊಂಡರು ಹಾಗೂ ಪ್ರಜಾಪ್ರಭುತ್ವದಂತಹ ವಿಭಿನ್ನ ಹಾಗೂ ವಿಶಿಷ್ಟ ಆಡಳಿತ ವಿಧಾನಗಳಿಗೆ ಹೊಂದಿಕೊಂಡರು.

ಬ್ರಿಟಿಷರ ಆಳ್ವಿಕೆಯಾದರೂ ಜನಪರವಾಗಿದ್ದಿತೆಂದು ತಿಳಿದರೆ ತಪ್ಪಾಗುತ್ತದೆ. ಇದು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಯ ಮನೋಭಾವದಿಂದ ಕೂಡಿದ್ದಿತು. ಅವರು ಜನಸಾಮಾನ್ಯರೊಡನೆ ಬೆರೆತು ಪ್ರೋತ್ಸಾಹದ ನಿದರ್ಶನಗಳು ವಿರಳ. ಅವರ ಆಡಳಿತದ ಅಸಮಂಜಸ ಅಂಶಗಳಿಂದಾದ ಪರಿಣಾಮಗಳು ಹಲವಾರು. ಭೂ ಕಂದಾಯ, ತೆರಿಗೆಗಳನ್ನು ಕೊಡಲಾಗದೆ ಎಷ್ಟೋ ವಸತಿ ಪ್ರದೇಶಗಳು ನಿರ್ವಸತಿಗಳಾಗಿದ್ದುದು ಗಮನಾರ್ಹ. ಆದರೂ ಮನ್ರೋನ ರೈತವಾರಿ ವ್ಯವಸ್ಥೆ, ಹ್ಯಾಥವೇಯ ಕಾಲದಲ್ಲಿ ನೀರಗಂಟಿಗಳ ನೇಮಕ, ರಾಬರ್ಟ್ ಸಿವೆಲ್‌ನ ತೆರಿಗೆ ವ್ಯವಸ್ಥೆ, ಮೆಕಾರ್ಡಿಯ ಕನ್ನಡ ಭಾಷಾ ಪ್ರೋತ್ಸಾಹ ಸ್ಮರಣೀಯ ಸಂಗತಿಗಳಾಗಿವೆ.

ಒಟ್ಟಾರೆ ೧೪೭ ವರ್ಷಗಳ ಆಂಗ್ಲರ ಆಳ್ವಿಕೆಗೆ ಒಳಪಟ್ಟ ದತ್ತಮಂಡಲದ ಭೌಗೋಳಿಕ ಪ್ರದೇಶಗಳಲ್ಲಿ ಕೈಗೊಳ್ಳಲಾದ ಅಭಿವೃದ್ದಿ ಸುಧಾರಣೆಗಳು, ಇತ್ಯಾದಿಗಳು ಉಲ್ಲೇಖಾರ್ಹ. ಬಳ್ಳಾರಿ ಜಿಲ್ಲೆಯಲ್ಲಿ ಬ್ರಿಟಿಷರ ಆಳ್ವಿಕೆಯ ಸಾಧಕ-ಬಾಧಕಗಳೇನೇ ಇದ್ದರೂ ಆಂಗ್ಲರು ಭಾರತೀಯರ ಮೇಲೆ ಹೇರಿದ್ದ ದಾಸ್ಯದ ನೊಗವನ್ನು ಎತ್ತಿ ಹಾಕುವ ರಾಷ್ಟ್ರನಾಯಕರ ಕರೆಗೆ ಈ ಜಿಲ್ಲೆಯ ಸ್ವಾತಂತ್ರ್ಯ ಪ್ರೇಮಿಗಳು (ಹೋರಾಟಗಾರರು) ಓಗೊಟ್ಟು ಕ್ರಿಯಾಶೀಲ ರಾದುದು ಇಲ್ಲಿ ಮುಖ್ಯವಾಗುತ್ತದೆ. ನಿರಂಕುಶ ರಾಜಪ್ರಭುತ್ವದಿಂದ ಮುಕ್ತರಾಗಿ ಬ್ರಿಟಿಷರ ಹೊಸ ಆಡಳಿತ ವ್ಯವಸ್ಥೆಗೆ ಹೊಂದಿಕೊಂಡ ಜನರು ಪ್ರಜಾಪ್ರಭುತ್ವದ ಕಲ್ಪನೆಗೆ ಸ್ಪಂದಿಸಿ, ಅಂತಹ ಅರಿವನ್ನುಂಟುಮಾಡಿದ ಬ್ರಿಟಿಷರ ವಿರುದ್ಧವೇ ತಿರುಗಿ ಬಿದ್ದುದು ಗಮನಾರ್ಹ. ಇದಕ್ಕೆ ಆಂಗ್ಲ ಮಾದರಿಯ ಹಾಗೂ ಸ್ಥಳೀಯವಾಗಿ ಹೊಂದದ ಆಡಳಿತ ವ್ಯವಸ್ಥೆಯೂ ಕಾರಣವೆನ್ನಬಹುದು. ಈ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಮಹತ್ವವಿದೆಯೆಂದರೆ ತಪ್ಪಾಗಲಾರದು.

ಪ್ರಸ್ತುತ ಅಧ್ಯಯನ ವಿಷಯದ ಕಾಲಾವಧಿ ೧೮೦೦ರಿಂದ ೧೯೪೭ರವರೆಗಿದ್ದರೂ ಇದಕ್ಕೆ ಪೂರಕವಾಗಿ ೧೯೫೩ರವರೆಗೆ ಮತ್ತು ಇತ್ತೀಚಿನ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ೧೮೦೦ರ ವೇಳೆಗೆ ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ವಿಪ್ಲವ ಆರಂಭಗೊಂಡಿದ್ದಿತು. ಇದಕ್ಕೆ ಮೊದಲು ಅಂದರೆ ೧೭೯೯ರಲ್ಲಿ ಟಿಪ್ಪುವಿನ ಅವಸಾನವಾದಾಗ, ಆಕ್ರಮಣ ನೀತಿಯ ದೃಷ್ಟಿ ಬಹುದೂರದವರೆಗೆ ನೆಟ್ಟಿದ್ದಿತು. ೧೮೦೦ರಲ್ಲಿ ಬಳ್ಳಾರಿ ಪ್ರದೇಶವೂ ಬ್ರಿಟಿಷರ ವಶಕ್ಕೆ ಬರುವುದರೊಡನೆ ಇಲ್ಲಿ ಅವರ ಆಡಳಿತ ಆರಂಭಗೊಂಡಿತು. ಈ ಹಿನ್ನೆಲೆಯಲ್ಲಿ ಈ ವಿಷಯ ವ್ಯಾಪ್ತಿಯನ್ನು ೧೮೦೦ರಿಂದ ಭಾರತ ಸ್ವಾತಂತ್ರ್ಯಗೊಂಡ ಅವಧಿಯವರೆಗೆ ಅಂದರೆ ೧೯೪೭ರವರೆಗೆ ವಿಸ್ತರಿಸಲಾಗಿದೆ. ಮುಂದುವರೆದು ಆಧುನಿಕ ಕಾಲಘಟ್ಟದ ಚಾರಿತ್ರಿಕ ಸಂಗತಿಗಳನ್ನು ವಿಶ್ಲೇಷಿಸಲಾಗಿದೆ.

ಪ್ರಸ್ತುತ ಅಧ್ಯಯನದಲ್ಲಿ ಆಂಗ್ಲ ಆಡಳಿತದ ವಿವಿಧ ಮುಖಗಳನ್ನು ಆಮೂಲಾಗ್ರವಾಗಿ ಕಾಲ ಮತ್ತು ಪ್ರಾದೇಶಿಕತೆಗಳಿಗೆ ಪ್ರಾಧಾನ್ಯತೆಕೊಟ್ಟು ವಿವೇಚಿಸಲು ಪ್ರಯತ್ನಿಸಲಾಗಿದೆ. ಇಲ್ಲಿ ಪ್ರಾಕೃತಿಕ ಪರಿಸರವನ್ನು ಗಮನಿಸುವುದರೊಡನೆ ಮಾನವ ಪರಿಸರದ ನೆರವಿನಿಂದ ಹಲವಾರು ಅಂಶಗಳನ್ನು ಚರ್ಚಿಸಲಾಗಿದೆ. ಬ್ರಿಟಿಷರ ಆಳ್ವಿಕೆ ರಾಜಕೀಯ ಘಟನೆಗಳಿಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕ್ಷೇತ್ರಗಳ ಬೆಳವಣಿಗೆ ಮತ್ತು ಬದಲಾವಣೆಗಳಿಗೆ ಸಂಬಂಧಿಸಿದ್ದಿತು. ಇದನ್ನು ಸಮಗ್ರವಾಗಿ ವಿವೇಚಿಸುವ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯ ಗ್ರಾಮವಾರು ಅಧ್ಯಯನಕ್ಕೂ ಇಲ್ಲಿ ತಕ್ಕಮಟ್ಟಿಗೆ ಪ್ರಯತ್ನಿಸಿದೆ. ಅಲ್ಲದೆ, ಈ ಜಿಲ್ಲೆಯ ಜಾತಿ, ಮತ, ಧರ್ಮ, ವರ್ಗ, ವಿವಾಹ, ಕೌಟುಂಬಿಕ ಜೀವನ, ಸಾಮೂಹಿಕ ಜೀವನ, ಕೃಷಿ, ಭೂ ಹಿಡುವಳಿ, ಕೈಗಾರಿಕೆ, ವ್ಯಾಪಾರ, ಧರ್ಮ, ವಾಸ್ತುಶಿಲ್ಪಗಳ ಮೇಲೆ ಬ್ರಿಟಿಷರ ಆಡಳಿತದಿಂದ ಉಂಟಾದ ಪರಿಣಾಮಗಳು ಮತ್ತು ಜನರ ಪ್ರತಿಕ್ರಿಯೆ, ಇತ್ಯಾದಿ ಗಳನ್ನು ಇಲ್ಲಿ ಗಮನಿಸಿದೆ.

ವ್ಯಾಪಕ ಕ್ಷೇತ್ರಕಾರ್ಯ, ಸಂದರ್ಶನಗಳಿಂದಲೂ, ಆಂಗ್ಲರ ವರದಿ-ದಾಖಲೆ ಇತ್ಯಾದಿ ಗಳಿಂದಲೂ ಮಾಹಿತಿ ಸಂಗ್ರಹಿಸಿ ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ. ಬಳ್ಳಾರಿ ಜಿಲ್ಲೆಯ ಬ್ರಿಟಿಷರ ಅಥವಾ ಕಲೆಕ್ಟರುಗಳ ಆಳ್ವಿಕೆಯನ್ನು ಕುರಿತು ಕನ್ನಡದಲ್ಲಿ ಯಾವ ಪುಸ್ತಕವೂ ಹೊರಬಂದಿಲ್ಲವೆಂಬುದನ್ನು ಮೇಲೆಯೇ ವ್ಯಕ್ತಪಡಿಸಿದೆ. ಆದುದರಿಂದ ಲಭ್ಯ ವಿರುವ ಇಂಗ್ಲಿಷ್ ಆಕರಗಳನ್ನು ಮುಖ್ಯವಾಗಿ ಬಳಸಿಕೊಳ್ಳಲಾಗಿದೆ. ಮದ್ರಾಸ್ ಪ್ರೆಸಿಡೆನ್ಸಿ ಹೊರತಂದಿರುವ ‘ಮಾನ್ಯುಯೆಲ್ ಆಫ್ ಮದ್ರಾಸ್ ಪ್ರೆಸಿಡೆನ್ಸಿ’ ಎಂಬ ಮೂರು ಸಂಪುಟ ಗಳು, ಗ್ಯಾಸೆಟಿಯರ್‌ಗಳು, ಕಲೆಕ್ಟರುಗಳು ಪ್ರಕಟಿಸಿದ ವಾರ್ಷಿಕ ವರದಿಗಳು, ಸಿವೆಲ್‌ನ ‘ಎ ಫರ್ಗಾಟನ್ ಎಂಪೈರ್ : ವಿಜಯನಗರ’ ಮತ್ತು ಇಂಡಿಯಾ ಬಿಫೋರಿದಿ ಇಂಗ್ಲಿಷ್, ಕನ್ನಡದ ಈಚಿನ ಪ್ರಕಟಣೆಗಳಾದ ಹೊಸಗನ್ನಡದ ಅರುಣೋದಯ, ಕರ್ನಾಟಕದ ಇತಿಹಾಸ ದರ್ಶನ, ಆಂಗ್ಲರ ಆಡಳಿತದಲ್ಲಿ ಕನ್ನಡ, ಕರ್ನಾಟಕ ರಾಜ್ಯ ಅಭಿಲೇಖಾಲಯ, ಬಳ್ಳಾರಿ ಜಿಲ್ಲಾ ಅಭಿಲೇಖಾಲಯಗಳಲ್ಲಿನ ಮಾಸಿಕ/ವಾರ್ಷಿಕ ಆಡಳಿತ ಗ್ಯಾಜೆಟ್‌ಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಸಮಾಜ ವಿಜ್ಞಾನಶಿಸ್ತುಗಳ ಹಿನ್ನೆಲೆಯಲ್ಲಿ ಚಾರಿತ್ರಿಕ ಅಧ್ಯಯನ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಈ ಅಧ್ಯಯನದಲ್ಲಿ, ಕಾಲಮಾನ, ಘಟನೆ, ಪ್ರಗತಿ- ಹೀಗೆ ಚಾರಿತ್ರಿಕವಾಗಿ ಮಹತ್ವ ಪಡೆದು ಮರೆಯಾದ ಅಂಶಗಳ ಬಗ್ಗೆ ಹೆಚ್ಚಿನ ಒತ್ತು ನೀಡಿರುವುದು ವಿಶೇಷ.

ಅಧ್ಯಯನ ಸ್ವರೂಪಕ್ಕೆ ತಕ್ಕಂತೆ ಪ್ರಸ್ತುತ ಕೃತಿಯಲ್ಲಿ ಒಂಬತ್ತು ಅಧ್ಯಾಯ ಮತ್ತು ಏಳು ಅನುಬಂಧಗಳಿವೆ. ಅಧ್ಯಾಯ ಒಂದರಲ್ಲಿ ಪ್ರಸ್ತಾವನೆಯ ಮೂಲಕ ಅಧ್ಯಯನದ ಉದ್ದೇಶ, ವ್ಯಾಪ್ತಿ, ವಿಧಾನ, ಸ್ವರೂಪವನ್ನು ಕುರಿತು ಚರ್ಚಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಹಿಂದಿನ ಮತ್ತು ಈಗಿನ ಭೌಗೋಳಿಕ ಹಿನ್ನೆಲೆಯ ಜೊತೆಗೆ ಚಾರಿತ್ರಿಕ ಮಹತ್ವವನ್ನು ಎರಡನೇ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ. ಅಧ್ಯಾಯ ಮೂರರಲ್ಲಿ ಬ್ರಿಟಿಷರ ಆಳ್ವಿಕೆ ಎಂದರೆ ಕಲೆಕ್ಟರುಗಳ ಆಳ್ವಿಕೆಯ ವಿವಿಧ ಕಾಲಘಟ್ಟಗಳನ್ನು ಪರಿಚಯಿಸಲಾಗಿದೆ. ಅಧ್ಯಾಯ ನಾಲ್ಕು ಮತ್ತು ಐದರಲ್ಲಿ ವಸಾಹತುಶಾಹಿಯ ಆಳ್ವಿಕೆಯ ಪ್ರಭಾವ ಹೇಗಿತ್ತು, ಅದರಿಂದಾದ ಪರಿಣಾಮಗಳೇನು ಮತ್ತು ಅವರು ಕೈಗೊಂಡ ಅಭಿವೃದ್ದಿ ಕಾರ್ಯಗಳ ಸ್ವರೂಪ ಕುರಿತು ಚಿಂತಿಸಲಾಗಿದೆ. ಮುಖ್ಯವಾಗಿ ಆಡಳಿತ, ನ್ಯಾಯಾಡಳಿತ, ರಕ್ಷಣೆ, ಸಮಾಜ, ಮತಾಂತರ, ಆರ್ಥಿಕ, ಕೃಷಿ, ಕೈಗಾರಿಕೆ, ಭೂಮಾಪನ ಪದ್ಧತಿ, ಭೂಕಂದಾಯ, ಸಾರಿಗೆ-ಸಂಪರ್ಕ, ಅಂಚೆ -ತಂತಿ-ಟೆಲಿಫೋನ್, ತೆರಿಗೆ, ಲೋಕೋಪಯೋಗಿ, ರಕ್ಷಣೆ, ಸಹಕಾರ, ಸುಧಾರಣೆ, ಶೈಕ್ಷಣಿಕ ಸ್ತ್ರೀ ವಿದ್ಯಾಭ್ಯಾಸ, ಭಾರತಾಂಗ್ಲ ವಾಸ್ತುಶಿಲ್ಪ ಮೊದಲಾದ ಸಂಗತಿಗಳನ್ನು ಕುರಿತು ವಿಶ್ಲೇಷಿಸಲಾಗಿದೆ. ಹಾಗೆಯೇ ವಸಾಹತುಕಾಲೀನ ಅಭಿವೃದ್ದಿಯನ್ನು ಕುರಿತಂತೆ ಜನಸಂಖ್ಯೆ, ಕೃಷಿ, ನೀರಾವರಿ, ಪಶುಪಾಲನೆ, ಧರ್ಮ, ಅರಣ್ಯ, ಖನಿಜ ಸಂಪತ್ತು, ಕ್ಷಾಮ, ರೈಲ್ವೆ, ಜೈಲು, ಆಸ್ಪತ್ರೆ, ಸ್ಥಳೀಯ ಬೋರ್ಡುಗಳು ಮೊದಲಾದ ಸಂಗತಿಗಳ ವಿವರಗಳನ್ನು ಕೊಡಲಾಗಿದೆ. ಅಧ್ಯಾಯ ಆರರಲ್ಲಿ ಹಂಪಿಯಲ್ಲಿರುವ ಅವಸಾನಗೊಂಡ ಸ್ಮಾರಕಗಳಿಗೆ ಬ್ರಿಟಿಷರು ಕೈಗೊಂಡ ರಕ್ಷಣಾತ್ಮಕ ಕಾರ್ಯಗಳನ್ನು ತಿಳಿಸಿರುವುದು ಸಮಯೋಚಿತವಾಗಿದೆ. ಬ್ರಿಟಿಷರ ವಿರುದ್ಧ ಸ್ಥಳೀಯರ ಪ್ರತಿರೋಧವನ್ನು ಸ್ವಾತಂತ್ರ್ಯ ಹೋರಾಟದ ಹೆಸರಲ್ಲಿ ಅಧ್ಯಾಯ ಏಳರಲ್ಲಿ ತಿಳಿಸಲಾಗಿದೆ. ಅಧ್ಯಾಯ ಎಂಟರಲ್ಲಿ ಆಧುನಿಕ ಬಳ್ಳಾರಿ ಜಿಲ್ಲೆಯ ವಿವಿಧ ಆಯಾಮಗಳನ್ನು, ಸಮಸ್ಯೆ-ಸವಾಲುಗಳನ್ನು ಕುರಿತು ಸಮಗ್ರ ಮಾಹಿತಿಯನ್ನು ಸಂಕ್ಷಿಪ್ತವಾಗಿ ನಿರೂಪಿಸಲಾಗಿದೆ. ಈ ಮೇಲಿನ ಅಧ್ಯಯನಗಳಿಂದ ಕಂಡುಕೊಂಡ ಫಲಿತ ಗಳನ್ನು ಸಮಾರೋಪದಲ್ಲಿ ವಿಶ್ಲೇಷಿಸಲಾಗಿದೆ.