ವಸಾಹತುಕಾಲೀನ ಬಳ್ಳಾರಿ ಜಿಲ್ಲೆ ಎಂಬ ವಿಷಯವನ್ನು ಚರಿತ್ರೆ ವಿಭಾಗದಲ್ಲಿ ೨೦೦೨-೦೩ನೇ ಸಾಲಿನ ಸಾಂಸ್ಥಿಕ ಯೋಜನೆಯಾಗಿ ಕೈಗೊಳ್ಳಲಾಗಿತ್ತು. ವಸಾಹತುಕಾಲೀನ ಎಂಬುದನ್ನು ಸರಳವಾಗಿ ಅರ್ಥೈಸುವುದಾದರೆ, ಬ್ರಿಟಿಷರ ಆಳ್ವಿಕೆ ಅಥವಾ ಕಲೆಕ್ಟರುಗಳ ಆಡಳಿತ ಎಂದರ್ಥ. ಭಾರತಕ್ಕೆ ಯುರೋಪಿನ್ನರ ಆಗಮನವು ವ್ಯಾಪಾರಕ್ಕೆ ನಾಂದಿಯಾಗು ವುದರ ಮೂಲಕ ಇಲ್ಲಿನ ಸಂಪರ್ಕ ಬೆಳೆಯಲು ಕಾರಣವಾಯಿತು. ೧೪೯೮ ಮೇ ೧೭ರಂದು ವಾಸ್ಕೋಡಿಗಾಮ ಭಾರತದ ಗುಡ್‌ಹೋಪ್ ಭೂಶಿರಕ್ಕೆ (ಕಲ್ಲಿಕೋಟೆ) ಬಂದಾಗಲೇ ಇದನ್ನು ಯುರೋಪಿಗೆ ಪರಿಚಯಿಸಿದಂತಾಯಿತು. ಪೋರ್ಚುಗೀಸರು, ಡಚ್ಚರು, ಇಂಗ್ಲಿಷರು ಮತ್ತು ಫ್ರೆಂಚರು ಈ ನೆಲದಲ್ಲಿ ಕಾಲಿಟ್ಟಾಗಲೇ ಆಂತರಿಕ ಸಂಘರ್ಷ, ಆಳ್ವಿಕೆ, ಶೋಷಣೆ – ಹೀಗೆ ನಾನಾ ಮುಖಗಳು ಸಾರ್ವತ್ರಿಕವಾಗಿ ಅನಾವರಣಗೊಂಡವು. ಇಂಗ್ಲಿಷರು ೧೬೦೦ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದರು. ಪೋರ್ಚುಗೀಸರ ಅಲ್ಪಾನ್ಸೊ ಅಲ್ಬುಕರ್ಕ್, ಡಚ್ಚರ ಗೌರ್ನರ್ (ಡಚ್ ಈಸ್ಟ್ ಇಂಡಿಯಾ ಕಂಪನಿ ೧೬೦೨) ಡೂಪ್ಲೆ, ಫ್ರೆಂಚ್ ಮತ್ತು ಇಂಗ್ಲಿಷರು ವ್ಯಾಪಾರದ ಕೋಠಿಗಳನ್ನು ಇಲ್ಲಿ ಸ್ಥಾಪಿಸಿಕೊಂಡರು. ಸರ್. ಥಾಮಸ್ ರೋ ಎಂಬ ರಾಯಭಾರಿ ಮೊಘಲ್ ಅರಸ ಜಹಾಂಗೀರನ ಆಸ್ಥಾನಕ್ಕೆ ಬಂದು ಭಾರತದ ನೆಲದಲ್ಲಿ (ಬಾಂಬೆ, ಕಲ್ಲಿಕೋಟೆ, ಮಚಲಿಪಟ್ಟಣ ಇತರೆ) ವ್ಯಾಪಾರ ಕೋಠಿಗಳನ್ನು ಸ್ಥಾಪಿಸಲು ಅನುಮತಿ ಕೇಳಿದನು. ರಾಯಭಾರಿ ಮಾತಿಗೆ ಒಪ್ಪಿದ ಜಹಾಂಗೀರ್ ಭಾರತವು ದಾಸ್ಯದ ಕೂಪಕ್ಕೆ ಬೀಳುವಂತಾಯಿತು. ಅಂದು ವಿದೇಶಿಯರ ಆಕ್ರಮಣವನ್ನು ಮೊಘಲರು ತಡೆದಿದ್ದರೆ ಇಡೀ ಭಾರತದ ಭವಿಷ್ಯವೇ ಬದಲಾಗುತ್ತಿತ್ತು. ವ್ಯಾಪಾರ ಕೋಠಿಗಳನ್ನು ಸ್ಥಾಪಿಸುವ ಮೂಲಕ ಈ ನೆಲದಲ್ಲಿ ಪಾದಾರ್ಪಣೆ ಮಾಡಿದ ವಿದೇಶೀಯರು, ವಿದೇಶಿ ಮಾದಕ ವಸ್ತುಗಳಾದ ಅಫೀಮು, ಗಾಂಜಾ, ಹೆರಾಯಿನ್ ಜೊತೆಗೆ ಮಸಾಲೆ ಪದಾರ್ಥಗಳನ್ನು, ಪಿಂಗಾಣಿ ಸಾಮಾನು ಗಳು ಇತರೆ ಬೆಲೆ ಬಾಳುವ ವಸ್ತುಗಳನ್ನು ಇಲ್ಲಿ ಕಡಿಮೆ ದರದಲ್ಲಿ ಮಾರಾಟ ಮಾಡಿ ಸ್ಥಳೀಯ ಜನರನ್ನು ಒಲಿಸಿಕೊಂಡರು. ದಕ್ಷಿಣ ಏಷ್ಯಾದ ಎಲ್ಲಾ ರಾಷ್ಟ್ರಗಳ ಪಾಡು ಇದೇ ಆಗಿತ್ತು. ಚೀನಾದಲ್ಲಿ ಆಫೀಮು ಯುದ್ಧಗಳೇ ನಡೆದವು. ಜಪಾನ್, ಇಂಡೋನೇಷಿಯಾ, ಮಲೇಷಿಯಾ, ಬರ್ಮಾ, ಥೈಲ್ಯಾಂಡ್, ಸಿಂಗಾಪುರ, ವಿಯೆಟ್ನಾಂ ಮೊದಲಾದವು ಭಾರತದಂತೆ ವಸಾಹತು ರಾಷ್ಟ್ರಗಳಾಗಿದ್ದವು. ಇಂಗ್ಲೆಂಡ್ ವಸಾಹತುಶಾಹಿ ರಾಷ್ಟ್ರವಾಗಿತ್ತು.

ಹೀಗೆ ಭಾರತದಲ್ಲಿ ಬ್ರಿಟಿಷರು ವ್ಯಾಪಾರ ಮಾಡುವ ಮೂಲಕ ಇಲ್ಲಿನ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದ್ದು ತನ್ನ “ಈಸ್ಟ್ ಇಂಡಿಯಾ ಕಂಪನಿ” ಮೂಲಕ (೧೬೦೦). ಕ್ರಿ.ಶ. ೧೭೫೭ರ ಪ್ಲಾಸಿ ಕದನದಿಂದ ಬ್ರಿಟಿಷರ ರಾಜಕೀಯ ಏಳಿಗೆ ಶುರುವಾಯಿತು. ಇಲ್ಲಿ ಸಿರಾಜ್ ಉದ್ ದೌಲ, ಮೀರ್ ಜಾಫರ್ ಮತ್ತು ಮೀರ್ ಖಾಸಿಂರ ಪಾತ್ರಗಳನ್ನು ಅಲ್ಲಗಳೆಯುವಂತಿಲ್ಲ. ೧೭೬೪ರ ಬಕ್ಸಾರ್ ಕದನಕ್ಕೆ ಮೇಲಿನ ಕಾರಣವು ಪರಿಣಾಮ ಬೀರಿತು. ಹೀಗೆ ಭಾರತದ ಕರಾವಳಿ ಮತ್ತು ದಕ್ಷಿಣ ಭಾರತ, ಮಧ್ಯಭಾರತದ ಪ್ರದೇಶಗಳು ಬ್ರಿಟಿಷರ ಕಪಿಮುಷ್ಠಿಗೆ ಸಿಲುಕಿದವು. ಉತ್ತರದಲ್ಲಿ ಮೊಘಲರು, ಮಧ್ಯಭಾರತ ದಲ್ಲಿ ಮರಾಠರು ಆಳ್ವಿಕೆ ನಡೆಸುತ್ತಿದ್ದರು. ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಅಸ್ತಿತ್ವದಲ್ಲಿತ್ತು. ಇವರು ಯುರೋಪಿಯನ್ನರ ಆಗಮನಕ್ಕೆ ಪರವಾನಿಗೆ ನೀಡಿದ್ದು ತಪ್ಪು. ಇಲ್ಲವಾಗಿದ್ದರೆ, ಕರ್ನಾಟಕದ ಭೂಪಟವೇ ಬದಲಾಗುತ್ತಿತ್ತು. ಇದು ಅಸ್ತಂಗತವಾಗಿ ಸ್ಥಳೀಯ ಪಾಳೆಯಗಾರರು ಆಳ್ವಿಕೆ ನಡೆಸುತ್ತಿದ್ದರು. ಹೈದರ್-ಟಿಪ್ಪುಸುಲ್ತಾನರು, ಇಲ್ಲಿ ಪ್ರಮುಖವಾಗಿ ಆಳ್ವಿಕೆ ಮಾಡುತ್ತಿದ್ದುದು ಗಮನಾರ್ಹ. ಬ್ರಿಟಿಷರು, ಹೈದರಾಬಾದ್ ನಿಜಾಮ, ಮರಾಠರೊಡನೆ ಒಪ್ಪಂದ ಮಾಡಿಕೊಂಡು ಟಿಪ್ಪುಸುಲ್ತಾನನನ್ನು ಅಂತ್ಯಗೊಳಿಸಿ ಈ ಪ್ರದೇಶ ವನ್ನು ವಶಪಡಿಸಿಕೊಂಡರು. ಬ್ರಿಟಿಷರ ಕಪಿಮುಷ್ಠಿಯಲ್ಲಿ ಅಮಾಯಕ ಜನರು, ಸಂಸ್ಥಾನ, ಪಾಳೆಯಗಳು ಸೇರಿ ನಲುಗಿಹೋದವು. ಬ್ರಿಟಿಷರು ಮೈಸೂರು ಸಂಸ್ಥಾನಕ್ಕೆ ಬೆಂಬಲ ಸೂಚಿಸಿ ಆ ಅರಸರನ್ನು ಓಲೈಸಿದರು. ಹೀಗೆ ಸ್ಥಳೀಯವಾಗಿ ತಮಗೆ ಇಷ್ಟವಾಗುವ ರೀತಿಯಲ್ಲಿ ಇಲ್ಲಿನ ಪ್ರಭುತ್ವಗಳನ್ನು ನಿಸ್ತೇಜಗೊಳಿಸಿ ‘ಒಡೆದು ಆಳುವ ನೀತಿ’ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಂಡರು. ಇಂಥ ಹೋರಾಟ, ಯುದ್ಧಗಳಿಂದ ಬಳ್ಳಾರಿ ಪ್ರದೇಶ ತತ್ತರಿಸಿ ಹೋಗಿತ್ತು.

ಮದ್ರಾಸ್ ಅಧಿಪತ್ಯ, ಬಾಂಬೆ ಪ್ರಾಂತ್ಯ, ಹೈದರಾಬಾದ್-ನಿಜಾಮ ಸಂಸ್ಥಾನ, ಮೈಸೂರು ಸಂಸ್ಥಾನ, ಸೊಂಡೂರು ಸಂಸ್ಥಾನಗಳು ಅಂದು ಚಾಲ್ತಿಯಲ್ಲಿದ್ದವು. ಬಳ್ಳಾರಿ ಮದ್ರಾಸ್ ಅಧಿಪತ್ಯಕ್ಕೆ ಸೇರಿದ್ದಿತು. ಕ್ರಿ.ಶ. ೧೮೦೦ರಿಂದ ಬ್ರಿಟಿಷರು ಆಳ್ವಿಕೆಯನ್ನು ಇಲ್ಲಿ ಆರಂಭಿಸಿ ಸುಮಾರು ೧೪೭ ವರ್ಷಗಳ ಕಾಲ ಆಳ್ವಿಕೆ ನಡೆಸಿದರು.

ಬ್ರಿಟಿಷರ ಕಾಲದಲ್ಲಿ ಬಳ್ಳಾರಿ ಜಿಲ್ಲೆ ವಿವಿಧ ಭಾಷೆ, ಧರ್ಮ, ಸಂಸ್ಕೃತಿ, ಜಾತಿಗಳ ಸಂಗಮ ಪ್ರದೇಶವಾಗಿತ್ತು. ಒಂದೆಡೆ ಪ್ರಾಚೀನ ನಂಬಿಕೆ, ಸಂಪ್ರದಾಯಗಳಿಗೆ ಜೋತು ಬೀಳುವುದು, ಇನ್ನೊಂದೆಡೆ ಆಧುನಿಕತೆಗೆ ಹಾತೊರೆಯುವುದು ಇಲ್ಲಿ ಕಂಡುಬಂದ ಪ್ರಮುಖ ಅಂಶಗಳಲ್ಲೊಂದು. ಹೀಗಿದ್ದರೂ, ಬ್ರಿಟಿಷರು ತಮ್ಮ ಅವಧಿಯಲ್ಲಿ ಸ್ಥಳೀಯರನ್ನು ಸೈನಿಕ, ತಳವಾರ, ಕಾವಲುಗಾರ, ನೀರಗಂಟಿಗಳ ಹುದ್ದೆಗಳಿಗೆ ನೇಮಿಸಿದರೂ ಇವರಿಂದ ಹೊಗಳಿಸಿ ಕೊಳ್ಳಲು ವಿಫಲರಾದರು. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ತಮ್ಮ ವಸಾಹತುಶಾಹಿ ಆಡಳಿತ ಧೋರಣೆ ತಾಳಿದ ಇಂಗ್ಲಿಷರು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಹಿಡಿತ ಸಾಧಿಸಿದರು. ಕೆಲವೊಬ್ಬರು ವಸಾಹತುಧೋರಣೆ ತಾಳಿದರೂ, ಸ್ಥಳೀಯರನ್ನು ಸುಧಾರಣೆಗೊಳಿಸುವಲ್ಲಿ ಪ್ರಯತ್ನಿಸಿದರು. ಇಂಥ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯನ್ನು ಸುಮಾರು ಒಂದೂವರೆ ಶತಮಾನ ಆಳ್ವಿಕೆ ನಡೆಸಿದ್ದು ಆಶ್ಚರ್ಯಕರವಾಗಿದೆ. ಈ ಬಗ್ಗೆ ಲಿಖಿತ ದಾಖಲೆಗಳು ಮತ್ತು ಮೌಖಿಕ ವಿವರಗಳು ಬೆಳಕು ಚೆಲ್ಲುತ್ತವೆ.

ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಿಂದಿನ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆಗಿನ ಕುಲಸಚಿವರಾಗಿದ್ದ ಡಾ. ಕೆ.ವಿ. ನಾರಾಯಣ, ಅಧ್ಯಯನಾಂಗದ ನಿರ್ದೇಶಕರು, ವಿವಿಧ ವಿಭಾಗಗಳ ಸಹೋದ್ಯೋಗಿಗಳು ಉತ್ತಮ ಸಲಹೆ ನೀಡಿರುವುದನ್ನು ಇಲ್ಲಿ ಸ್ಮರಿಸಲೇಬೇಕು. ಪ್ರಸ್ತುತ ಅಧ್ಯಯನಕ್ಕೆ ಪ್ರೇರಣೆ ಸಿಕ್ಕಿದ್ದು ಎಂ.ಫಿಲ್. ಪದವಿಗೆ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದ “ಬಳ್ಳಾರಿ ಜಿಲ್ಲೆಯಲ್ಲಿ ಕಲೆಕ್ಟರುಗಳು ಆಳ್ವಿಕೆ” ಎಂಬುದು. ಅಲ್ಲಿನ ಕೊರತೆಗಳನ್ನು ಪರಿಹರಿಸಿ, ಬಹುಪಾಲು ವಿಷಯಗಳನ್ನು ಆ ಪ್ರಬಂಧದಿಂದಲೇ ಬಳಸಿಕೊಳ್ಳಲಾಗಿದೆ. ಏಕೆಂದರೆ, ಈವರೆಗೆ ಈ ಕ್ಷೇತ್ರ ಕುರಿತ ಸಂಶೋಧನೆ, ಕೃತಿಗಳು ಬಂದಿರುವುದು ತೀರಾ ವಿರಳವಾದ್ದರಿಂದ ಈ ವಿಚಾರಗಳನ್ನು ಅಮೂಲ್ಯವೆಂದು ಇಲ್ಲಿ ಪರಿಗಣಿಸಿರುವುದು ಈ ಅಧ್ಯಯನಕ್ಕೆ ಸ್ಫೂರ್ತಿ ಹಾಗೂ ಸಮಯೋಚಿತವಾಗಿದೆ.

ಪ್ರಸ್ತುತ ಯೋಜನೆಗೆ ವಿಶ್ವವಿದ್ಯಾಲಯದಿಂದಾಗಲೀ, ಇತರೆ ಸಂಸ್ಥೆಗಳಿಂದಾಗಲೀ ಧನ ಸಹಾಯವನ್ನು, ರಜೆಯನ್ನು ಪಡೆಯದೇ ಇದನ್ನು ಪೂರೈಸಲಾಗಿದೆ. ಹತ್ತು ವರ್ಷಗಳ ಹಿಂದೆ ಕಾಡಿದ ನೆನಪು, ಹಿರಿಯರ ಒತ್ತಾಸೆಯನ್ನು ಇಲ್ಲಿ ಅಧ್ಯಯನದ ಮೂಲಕ ಕಟ್ಟಿಕೊಡುವ ಪ್ರಯತ್ನವಿದೆ. ಇಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿಶ್ಲೇಷಿಸಲಾಗಿದೆ. ಕರ್ನಾಟಕದ ಖ್ಯಾತ ಚಿಂತಕರಾದ ಕೋ. ಚೆನ್ನಬಸಪ್ಪ ಅವರು ಇಲ್ಲಿ ಮಾಹಿತಿ ಕೊಟ್ಟು, ಕೆಲವು ವಿಷಯ ಗಳನ್ನು ಪರಿಷ್ಕರಿಸಿಕೊಟ್ಟಿದ್ದಾರೆ. ಹಿಂದಿನ ಜಿಲ್ಲಾಧಿಕಾರಿಗಳಾದ ಸಿ.ಎಸ್. ಕೇದಾರ್, ಗೌರಿ ಎಸ್. ತ್ರಿವೇದಿ, ವಿ. ಮಂಜುಳ, ಶಿಕ್ಷಣಾಧಿಕಾರಿ ಯು. ಬಸವರಾಜ, ರಾಜೇಂದ್ರ ಪ್ರಸಾದ್, ಹಿತೈಷಿಗಳಾದ ವೈ. ನೆಟ್ಟಕಲ್ಲಪ್ಪ, ಅಲ್ಲೀಪುರದ ಹನುಮಂತಪ್ಪ, ಶ್ರೀ ಬಿ. ಶ್ರೀರಾಮುಲು,  ಶ್ರೀ ಬಿ.ಎಚ್. ದ್ಯಾವನೂರು, ಡಾ. ಸೂರ್ಯನಾಥ ಕಾಮತ್, ಶ್ರೀ ಕೆ.ಎಲ್. ರಾಜಶೇಖರ್, ಶ್ರೀ ಎಚ್.ಎಂ. ಮರುಳಸಿದ್ಧಯ್ಯ, ಶ್ರೀಮತಿ ಎನ್.ಡಿ. ವೆಂಕಮ್ಮ, ಶ್ರೀಮತಿ ಸುಭದ್ರಮ್ಮ ಮನ್ಸೂರು, ಶ್ರೀ ದಳವಾಯಿ ಈರಣ್ಣ, ಶ್ರೀ ಎಂ.ಎಸ್. ಸೋಮಲಿಂಗಪ್ಪ, ಶ್ರೀ ಎನ್.ಟಿ. ಬೊಮ್ಮಣ್ಣ, ಶ್ರೀ ಚಳ್ಳಕೆರೆ ತಿಪ್ಪೇಸ್ವಾಮಿ, ಶ್ರೀ ಎನ್.ವೈ. ಹನುಮಂತಪ್ಪ, ಶ್ರೀ ರಾಯ ದುರ್ಗದ ಮಂಜುನಾಥ ಪ್ರಿಂಟರ್ಸ್‌, ಅನಂತಪುರದ ಶ್ರೀ ಕೆ. ಓಬಯ್ಯ, ಡಾ. ಆದಪ್ಪ, ಡಾ. ಎಸ್. ರಾಜಶೇಖರ (ನಿವೃತ್ತ ಪ್ರಾಧ್ಯಾಪಕರು), ಧಾರವಾಡ, ಪ್ರೊ. ಲಕ್ಷ್ಮಣ್ ತೆಲಗಾವಿ, ಡಾ. ಸಿ. ಮಹದೇವ, ಬಳ್ಳಾರಿಯ ದಿ. ಬಿಂದುಮಾಧವ, ಡಿ. ಚಿದಾನಂದಶಾಸ್ತ್ರಿ, ವಾಸುದೇವ ಚಾರ್ಯ ಅವರಿಗೆ ನಾನು ಋಣಿಯಾಗಿರುವೆನು. ಬಳ್ಳಾರಿ, ಬೆಂಗಳೂರು, ಕೂಡ್ಲಿಗಿ,  ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕರಾದ ಡಾ. ಉಷಾಸುರೇಶ ಅವರಿಗೆ ಕೃತಜ್ಞತೆಗಳು. ಹೊಸಪೇಟೆಯ ಅಭಿಲೇಖಾಲಯಗಳಲ್ಲಿ ಮಾಹಿತಿ ಕೊಟ್ಟ ಸರ್ವಸದಸ್ಯರಿಗೂ, ಈ ಯೋಜನೆ ಯನ್ನು ಸಿದ್ಧಪಡಿಸುವಲ್ಲಿ ನೆರವಾದ ಎಲ್ಲಾ ಬಂಧುಗಳಿಗೂ ಚಿರಋಣಿ.

ಇಂಥ ಯೋಜನೆಯನ್ನು ಪ್ರಕಟಿಸಲು ಉತ್ಸುಕತೆ ತೋರಿದ ನೆಚ್ಚಿನ ಕುಲಪತಿ ಡಾ. ಎ. ಮುರಿಗೆಪ್ಪ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ಚರಿತ್ರೆ ವಿಭಾಗದ ಸದಸ್ಯರಾದ ಪ್ರೊ. ಟಿ.ಪಿ. ವಿಜಯ್, ಪ್ರೊ. ಸಿ.ಆರ್. ಗೋವಿಂದರಾಜು, ಡಾ. ಮೋಹನ್‌ಕೃಷ್ಣ ರೈ, ಡಾ. ಚಿನ್ನಸ್ವಾಮಿ ಸೋಸಲೆ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್, ಸಹಾಯಕ ನಿರ್ದೇಶಕರಾದ ಬಿ. ಸುಜ್ಞಾನಮೂರ್ತಿ, ಎಚ್.ಬಿ. ರವೀಂದ್ರ, ಡಾ. ಮೋಹನ್, ಕೆ.ಎಲ್. ರಾಜಶೇಖರ್, ಕಲಾವಿದ ಕೆ.ಕೆ. ಮಕಾಳಿ, ಮುಖಪುಟದಲ್ಲಿರುವ ಸರ್. ಥಾಮಸ್ ಮನ್ರೊ ಚಿತ್ರಕೊಟ್ಟ ಕೊಟ್ಟೂರಿನ ಸಾಹಿತಿ ಕುಂ. ವೀರಭದ್ರಪ್ಪ ಮತ್ತು ಅಕ್ಷರ ಸಂಯೋಜನೆ ಮಾಡಿದ ಕಮಲಾಪುರದ ಎಸ್.ವಿ. ಗ್ರಾಫಿಕ್ಸ್‌ನ ಜೆ. ಶಿವಕುಮಾರ, ನನ್ನ ತಂದೆ-ತಾಯಿ, ಪತ್ನಿ ಶ್ರೀಮತಿ ಪೂರ್ಣಿಮಾ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳು.

ಡಾ. ವಿರೂಪಾಕ್ಷಿ ಪೂಜಾರಹಳ್ಳಿ