ವಿಶ್ವ ಇತಿಹಾಸದಲ್ಲಿ ಹಂಪೆಯ ಮೂಲಕ ಬಳ್ಳಾರಿ ಜಿಲ್ಲೆಯ ಹೆಸರು ಖ್ಯಾತಿ ಪಡೆದು ಕೊಂಡಿದೆ. ಅದೇ ರೀತಿ ರಾಷ್ಟ್ರೀಯವಾಗಿ, ಪ್ರಾದೇಶಿಕವಾಗಿ ವಿವಿಧ ರೀತಿಯ ಐತಿಹಾಸಿಕ ಮಜಲುಗಳನ್ನು ತುಂಬಿಕೊಂಡಿದೆ. ಮೌರ್ಯ ಸಾಮ್ರಾಜ್ಯದ ಆಳ್ವಿಕೆಯಿಂದ ಬ್ರಿಟಿಷರ ಆಳ್ವಿಕೆಯವರೆಗೆ ಐತಿಹಾಸಿಕ ವಲಯದಲ್ಲಿನ ಏರಿಳಿತಗಳನ್ನು ರಾಜಕೀಯ ಸಂಗತಿ ಗಳನ್ನು ಜನಸಾಮಾನ್ಯರ ಬವಣೆಯನ್ನು ದಾಖಲಿಸಲು ಈಗಾಗಲೇ ನಮ್ಮ ವಿದ್ವಾಂಸರು ಅಲ್ಪವಾಗಿ ಕೃಷಿ ಮಾಡಿದ್ದಾರೆ. ಆದರೂ ಮರೆಯಾಗಿರುವ ಸಂಗತಿಗಳು ಸುಪ್ತವಾಗಿವೆ. ಆ ಮೂಲಕ ರಾಜಕೀಯ ಚರಿತ್ರೆಯನ್ನು ಪುನರ್‌ರಚನೆ ಮಾಡುವುದು ಮುಖ್ಯವಾಗಿದೆ. ಇಂದು ಆಂಗ್ಲರ ಇತಿಹಾಸವನ್ನು ಕುರಿತು ಚಿಂತನೆ, ಚರ್ಚೆ, ವಿಶ್ಲೇಷಣೆ ಮಾಡುವುದು ಅತ್ಯಗತ್ಯ ಹಾಗೂ ಅನಿವಾರ್ಯ ಎನಿಸಿದೆ.

ಬಳ್ಳಾರಿ ಜಿಲ್ಲೆಯ ಇತಿಹಾಸವನ್ನು ಅಧ್ಯಯನ ಮಾಡುವಾಗ ನಮ್ಮನ್ನು ಪರಿತಪಿಸುವ, ಮನಸೋಲುವಂತೆ ಮಾಡುವ ಕಾಲಘಟ್ಟವೊಂದಿದೆ. ಅದೇ ವಿಜಯನಗರ ಸಾಮ್ರಾಜ್ಯ ಕಾಲ. ಮಧ್ಯಕಾಲೀನ ಚರಿತ್ರೆಯಲ್ಲಿ ಇದನ್ನು ನಿರ್ಣಾಯಕ ಘಟ್ಟವೆಂತಲೂ ಕೂಡ ಕಡೆಗಣಿಸಿಲ್ಲ ದಿರುವುದು ಗಮನಾರ್ಹ ಸಂಗತಿ. ಈ ವಿಷಯ ಕುರಿತು ವಿಪುಲವಾದ ಸಂಶೋಧನೆಗಳು ನಡೆದಿವೆ ಎಂದು ಗಟ್ಟಿಧ್ವನಿಯಲ್ಲಿ ಹೇಳುವಂತಿಲ್ಲ. ವಿಜಯನಗರೋತ್ತರ ಬಳ್ಳಾರಿ ಬಗ್ಗೆ ಅಲ್ಪಪ್ರಮಾಣದಲ್ಲಿ ಸಂಶೋಧನೆ ನಡೆದಿದೆ. ಈ ಕೊರತೆಯನ್ನು ಅಲ್ಪವಾಗಿ ನೀಗಿಸುವುದು ಉದ್ದೇಶವಾದರೂ, ಪರಿಚಯಾತ್ಮಕವಾಗಿ ಪರಿಣಾಮಗಳನ್ನು ಗಮನಿಸುವುದು ಸ್ಪಷ್ಟ. ವಿಜಯ ನಗರದ ತರುವಾಯ ನವೀನವಾದ ಮಹಾತಿರುವೊಂದನ್ನು ನೀಡಿದ್ದು, ಬ್ರಿಟಿಷರ ಆಳ್ವಿಕೆ ಎಂಬುದು ಮರೆಮಾಚಲಾಗದ ಸಂಗತಿ. ಇಲ್ಲಿ ವಸಾಹತುಕಾಲೀನ ಅಥವಾ ಬ್ರಿಟಿಷರ ಆಳ್ವಿಕೆ ಯೆಂದರೆ ಕಲೆಕ್ಟರುಗಳ ಆಡಳಿತವೆಂದರ್ಥ.

ಬ್ರಿಟಿಷರ ಆಳ್ವಿಕೆ ಅಥವಾ ಕಲೆಕ್ಟರುಗಳ ಆಳ್ವಿಕೆಯಲ್ಲಿ ಬಳ್ಳಾರಿ ಜಿಲ್ಲೆ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದರೂ, ಅಲ್ಪವಾಗಿಯಾದರೂ ಪ್ರಗತಿಯತ್ತ ಸಾಗಿತ್ತೆಂದು ಹೇಳುವು ದುಂಟು. ಏಕೆಂದರೆ ಇಡೀ ದೇಶವೇ ಬರಗಾಲ, ಕ್ಷಾಮ ಡಾಮರಗಳಿಂದ ತತ್ತರಿಸುತ್ತಿರುವಾಗ ಬಳ್ಳಾರಿ ಜಿಲ್ಲೆ ಸಮೃದ್ಧವಾಗಿತ್ತೆಂದು ಅವರ ಆಡಳಿತ ವರದಿಗಳಿಂದ ಪ್ರೇರಿತರಾಗಿ ಹೇಳಿದರೆ, ಚಾರಿತ್ರಿಕವಾದ ಉಪಮೆಗಳಾಗುತ್ತವೆಯೇ ಹೊರತು ವಾಸ್ತವದ ನಿದರ್ಶನಗಳಾಗುವುದಿಲ್ಲ. ಇಲ್ಲಿ ಅವರ ಅವಜ್ಞೆಗಳೇನೇ ಇದ್ದರೂ ಆಡಳಿತ, ಸಮಾಜ, ಶಿಕ್ಷಣ, ನ್ಯಾಯಾಂಗ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಸಮಂಜಸವಾದ ನಿಲುವುಗಳನ್ನು ಪತ್ತೆ ಹಚ್ಚಬೇಕಾದ ಅಗತ್ಯವಿದೆ.

ಹಿನ್ನೆಲೆ

ವಿಜಯನಗರ ಸಾಮ್ರಾಜ್ಯದ ಪತನದ ತರುವಾಯ ಬಿಜಾಪುರದ ಸುಲ್ತಾನರು, ಮರಾಠರು, ಮೊಘಲರು, ಸ್ಥಳೀಯ ಪಾಳೆಯಗಾರರಲ್ಲದೆ (ಹರಪನಹಳ್ಳಿ. ಜರಿಮಲೆ, ಗುಡೇಕೋಟೆ, ಬಳ್ಳಾರಿ ಮತ್ತು ರಾಯದುರ್ಗ), ಹೈದರ್‌ಅಲಿ ಮತ್ತು ಟಿಪ್ಪುಸುಲ್ತಾನರು ಕೂಡ ಈ ಪ್ರದೇಶ ದಲ್ಲಿ ಆಳ್ವಿಕೆ ನಡೆಸಿದ್ದಲ್ಲದೆ, ವಶಪಡಿಸಿಕೊಂಡಿದ್ದುಂಟು. ೧೭೯೨ರಲ್ಲಿ ಟಿಪ್ಪು ಸೋತಾಗ ಬಳ್ಳಾರಿ ಪ್ರದೇಶದ ಅಲ್ಪಭಾಗ (ಸೊಂಡೂರು) ಮರಾಠರಿಗೆ ದೊರಕಿತು. ೧೭೯೯ರಲ್ಲಿ ಟಿಪ್ಪು ಹತನಾದ ನಂತರ ಉಳಿದ ಭೂಪ್ರದೇಶವನ್ನು ಹೈದರಾಬಾದಿನ ನಿಜಾಮನಿಗೆ ಕೊಡಲಾಯಿತು. ಆಗ ಬ್ರಿಟಿಷರ ಕೆಲವು ಪದ್ಧತಿಗಳಾದ ಸಹಾಯಕ ಸೈನ್ಯ ಪದ್ಧತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ, ಕುತಂತ್ರದ ರಾಜಕೀಯ ಸೋಗು, ರಾಷ್ಟ್ರ ವಿಭಜನೆ, ತ್ಯಾಗ, ಬಲಿದಾನ, ಹೋರಾಟ, ನಿರಾಶ್ರಿತರ ಬವಣೆ, ಬಡತನ, ಆರ್ಥಿಕ ದುರ್ಬಲತೆ, ಅನಕ್ಷರತೆ, ನಿರುದ್ಯೋಗ, ಸೋಮಾರಿತನ, ವಸತಿ ಸೌಲಭ್ಯ, ಜನಸಂಖ್ಯಾ ಸ್ಫೋಟ ಇನ್ನು ಮುಂತಾದ ಬ್ರಿಟಿಷರ ಆಡಳಿತದ ನ್ಯೂನ್ಯತೆಗಳು ಮತ್ತು ಇಂತಹ ಕೆಲವು ಜೀವನಾವಶ್ಯಕ ಸಮಸ್ಯೆಗಳನ್ನು ಮನಗಂಡ ಹೈದರಾಬಾದಿನ ನಿಜಾಮ ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿ ೧೮೦೦ರಲ್ಲಿ ಈ ಭಾಗವನ್ನು ದತ್ತಿ ಜಿಲ್ಲೆಯಾಗಿ ಬಿಟ್ಟುಕೊಟ್ಟನು. ಕರ್ನೂಲು, ಕಡಪ, ಅನಂತಪುರ ಜಿಲ್ಲೆಗಳ ಜತೆ ಬಳ್ಳಾರಿ ಸೇರುವುದರೊಡನೆ ದತ್ತಿಮಂಡಲ ದೊಡ್ಡದಾಯಿತು. ಮದ್ರಾಸ್ ಪ್ರಾಂತ್ಯದ ೨೨ ಜಿಲ್ಲೆಗಳಲ್ಲಿ ಬಳ್ಳಾರಿ ೪ನೇಯದು. ಅಂದಿನಿಂದ ಈ ಭಾಗವನ್ನು ಜಿಲ್ಲೆ ಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದರು. ೧೮೦೦ ರಿಂದ ೧೯೪೭ರ ವರೆಗೆ ಸುಮಾರು ೧೧೨ ಜನ ಕಲೆಕ್ಟರುಗಳು ಆಳ್ವಿಕೆ ನಡೆಸಿದ್ದಾರೆ.

ಭೌಗೋಳಿಕ ವಿವರ

ಬಳ್ಳಾರಿ ಜಿಲ್ಲೆಯಲ್ಲಿ ಬ್ರಿಟಿಷರ ಆಳ್ವಿಕೆ ೧೮೦೦ ಡಿಸೆಂಬರ್‌ನಲ್ಲಿ ವಿದ್ಯುಕ್ತವಾಗಿ ಆರಂಭ ವಾಯಿತು. ಪ್ರಥಮ ಹಾಗೂ ಪ್ರಧಾನ ಕಲೆಕ್ಟರನೇ ಸರ್. ಥಾಮಸ್ ಮನ್ರೋ.* ಅಂದು ಇದ್ದಂತಹ ಬಳ್ಳಾರಿ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣದ, ಹಿನ್ನೋಟ ಪ್ರಸ್ತುತ ಅಗತ್ಯವೆನಿಸಿದೆ. ಪೂರ್ವದಲ್ಲಿ ಆಂಧ್ರಪ್ರದೇಶದ ಅನಂತಪುರ, ಕರ್ನೂಲು, ಮತ್ತು ಕಡಪ ಜಿಲ್ಲೆಗಳು ಸೇರಿದ್ದು ಅವುಗಳ ಗಡಿಭಾಗಗಳು ಕೂಡ ಸೇರಿದ್ದವು. ಪಶ್ಚಿಮಕ್ಕೆ ಧಾರವಾಡ ಜಿಲ್ಲೆ (ಮುಂಬಾಯಿ ಪ್ರಾಂತ) ದಕ್ಷಿಣಕ್ಕೆ ಮೈಸೂರು ರಾಜ್ಯಕ್ಕೆ ಸೇರಿದ ಚಿತ್ರದುರ್ಗ ಜಿಲ್ಲೆ ಗಡಿ ಪ್ರದೇಶವಾಗಿತ್ತು. ಉತ್ತರದಲ್ಲಿ ತುಂಗಭದ್ರಾ ನದಿ ಗಡಿಯಾದಂತೆ ರಾಯಚೂರು ಜಿಲ್ಲೆ ಮೇರೆಯಾಗಿತ್ತು. ಕ್ರಿ.ಶ. ೧೮೦೦ರಲ್ಲಿ ಬಳ್ಳಾರಿ ಜಿಲ್ಲೆ ೧೪0-೩೦0 ಮತ್ತು ೧೫0- ೫೮0 ಉತ್ತರ ೭೫0-೪೩0 ಮತ್ತು ೭೭0-೪೫0 ಪೂರ್ವ-ಅಕ್ಷಾಂಶ-ರೇಖಾಂಶದಲ್ಲಿತ್ತು. ಅಂದು ೫,೯೦೪ ಚದರ ಮೈಲಿ ವಿಸ್ತೀರ್ಣ ಹೊಂದಿತ್ತು. ೧೮೮೧ಕ್ಕೆ ಇಲ್ಲಿನ ಜನಸಂಖ್ಯೆ ೭,೩೬,೮೦೭ ಇತ್ತು. ಬಳ್ಳಾರಿ ಜಿಲ್ಲೆ ದಖನ್ ಪ್ರಸ್ಥಭೂಮಿಯ ಉತ್ತರಕ್ಕೆ ಇಳಿದಾದ ಪ್ರದೇಶವಿದ್ದು ಈಶಾನ್ಯ ಭಾಗಕ್ಕೆ ಹೆಚ್ಚಾಗಿ ವ್ಯಾಪಿಸಿದೆ. ಸಮುದ್ರಮಟ್ಟದಿಂದ ೨೦೦೦ ಅಡಿ ಎತ್ತರವಾಗಿದ್ದು (ದಕ್ಷಿಣ ಭಾಗದಲ್ಲಿ), ೧೦೦೦ ಅಡಿ ಎತ್ತರ ಈಶಾನ್ಯ ಭಾಗಕ್ಕಿತ್ತು. ಜಿಲ್ಲೆಯನ್ನು ಪೂರ್ವ ಮತ್ತು ಪಶ್ಚಿಮಕ್ಕೆ ಎರಡು ಪರ್ವತ ಶ್ರೇಣಿಗಳು ವಿಂಗಡಿಸಿದ್ದು, ಮಧ್ಯದಲ್ಲಿ ಸಂಡೂರು ಸಂಸ್ಥಾನವಿತ್ತು. ಕೂಡ್ಲಿಗಿ, ಹರಪನಹಳ್ಳಿ ತಾಲೂಕುಗಳು ಮೈಸೂರು ರಾಜ್ಯದ ಗಡಿಗೆ ಅಂಟಿ ಕೊಂಡಿದ್ದವು. ಮರಗಳಿಲ್ಲದೆ ಕೆಂಪುನೆಲ, ಎರೆನೆಲ, ಗ್ರಾನೈಟ್ ಪರ್ವತಗಳಿಂದ ಆವೃತ ಗೊಂಡು, ಸೊಂಡೂರು, ಕಂಪ್ಲಿ, ಆದೋನಿ ಮತ್ತು ರಾಯದುರ್ಗಗಳು ಪ್ರಮುಖ ಪರ್ವತ ಶ್ರೇಣಿಗಳು ಹೊಂದಿದ್ದವು. ಈ ಭಾಗದಲ್ಲಿ ಕಬ್ಬಿಣ (ಅದಿರು) ಅಂಶ ಮಿಶ್ರಿತ ಪರ್ವತಗಳೇ ಹೇರಳವಾಗಿದ್ದವು. ಅಂದು ಸೊಂಡೂರು ಸಂಸ್ಥಾನದಲ್ಲಿ ಅತೀ ದೊಡ್ಡ ಅರಣ್ಯವಿತ್ತು. ಜಿಲ್ಲೆ ಯಲ್ಲಿ ಅತಿ ಮುಖ್ಯ ನದಿ ತುಂಗಭದ್ರ. ಚಿತ್ರದುರ್ಗ ಜಿಲ್ಲೆಗೆ (ಈಗಿನ ದಾವಣಗೆರೆ ಜಿಲ್ಲೆ) ಶಿವಮೊಗ್ಗದಿಂದ ಹರಿದು ಬಂದು ಹರಿಹರದಿಂದ ಉತ್ತರಕ್ಕೆ ಈ ನದಿ ಹರಿದು ಬಳ್ಳಾರಿ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಹರಿಯುವಾಗ ಧಾರ್ಮಿಕ, ಐತಿಹಾಸಿಕ, ಕೇಂದ್ರಗಳಿಗೆ ಜನ್ಮಕೊಟ್ಟಿದೆ. ಕುರುವತ್ತಿ, ಮೈಲಾರ, ಮಾಗಳ, ಹುಲಿಗಿ, ವಿಜಯನಗರ (ಹಂಪಿ), ಕಂಪ್ಲಿ ಮತ್ತು ಮಂತ್ರಾಲಯ (ಆಂಧ್ರ ಪ್ರದೇಶ) ಮುಂತಾದ ಸ್ಥಳಗಳ ಮೂಲಕ ಹರಿದು ಮುಂದೆ ಕೃಷ್ಣ ನದಿಯನ್ನು ಸೇರುತ್ತದೆ. ಇದಕ್ಕೆ ಚಿಕ್ಕಹಗರಿ (ಹಗರಿಬೊಮ್ಮನಹಳ್ಳಿ) ಅಥವಾ ವೇದಾವತಿ, ಚಿನ್ನಹಗರಿ (ಜನಿಗೆಹಳ್ಳ) ಉಪನದಿಗಳಾಗಿವೆ. ಚಿನ್ನಹಗರಿ ಚಿತ್ರದುರ್ಗ ದಲ್ಲಿ ಹುಟ್ಟಿ ಬಳ್ಳಾರಿ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹರಿದು ಮುಂದೆ ರಾಯದುರ್ಗ (ಆಂಧ್ರ) ತಾಲೂಕಿನಲ್ಲಿ ಹರಿದು ಬಳ್ಳಾರಿ ತಾಲೂಕನ್ನು ಸಮೀಪಿಸಿ ಹಳೇಕೋಟಾದ ಹತ್ತಿರ ತುಂಗಭದ್ರಾ ನದಿಗೆ ಸೇರುತ್ತದೆ. ಅಂದು ಹತ್ತು ಪಟ್ಟಣಗಳು ಪ್ರಮುಖವಾಗಿದ್ದವು ಮತ್ತು ಹದಿನೆಂಟು ತಾಲೂಕುಗಳಿದ್ದವು. ೧೯೦೮ಕ್ಕೆ ೧೮ ತಾಲೂಕುಗಳಾದವು. ಪಟ್ಟಣಗಳೆಂದರೆ ಆದೋನಿ, ಆಲೂರು, ಬಳ್ಳಾರಿ, ರಾಯದುರ್ಗ, ಹೊಸಪೇಟೆ, ಹಡಗಲಿ, ಕೂಡ್ಲಿಗಿ, ಹರಪನಹಳ್ಳಿಗಳಾ ಗಿದ್ದು, ಆದೋನಿ ಮತ್ತು ಬಳ್ಳಾರಿ ಎರಡು ಪುರಸಭೆಗಳಾಗಿದ್ದವು.

ಕಲೆಕ್ಟರ್‌ಗಳ ಆಡಳಿತ ೧೮೦೦ರಿಂದ ಈ ಪ್ರದೇಶದಲ್ಲಿ ಆರಂಭವಾಗುತ್ತದೆ. ಇದನ್ನು ರೆವಿನ್ಯೂ ಜಿಲ್ಲೆಯಾಗಿ ಪ್ರಮುಖ ಹದಿನೆಂಟು ತಾಲೂಕುಗಳನ್ನಾಗಿ ಮಾಡಿಕೊಂಡರು. ಈ ಜಿಲ್ಲೆಯ ಸಾರ್ವಭೌಮತ್ವವನ್ನು ನೋಡಿಕೊಳ್ಳಲು ಕಾರ್ಯಕಾರಿ ಕಲೆಕ್ಟರ್ ಸರ್. ಥಾಮಸ್ ಮನ್ರೋನನ್ನು ಸರ್ಕಾರ ನೇಮಿಸಿತು. ಜನರಲ್ ಡುಗಾಲ್ಸ್ ಕಾಂಪ್‌ಬೆಲ್ ಸೈನ್ಯದ ಮುಖ್ಯಸ್ಥ ನಾಗಿ ಬಳ್ಳಾರಿ ಜಿಲ್ಲೆಯಲ್ಲಿ ಆಯ್ಕೆಯಾಗುತ್ತಾನೆ. ಮನ್ರೋನ ಅಧೀನದಲ್ಲಿ ನಾಲ್ಕು ಜನ ವಿಭಾಗೀಯ ಕಲೆಕ್ಟರರು ಅದೇ ಸಂದರ್ಭದಲ್ಲಿ ನೇಮಕಗೊಳ್ಳುತ್ತಾರೆ. ಅವರಲ್ಲಿ ಪ್ರಮುಖ ರೆಂದರೆ ಜೇಮ್ಸ್ ಕ್ರೋಚೆನ್; ಇವನು ಕಂಪ್ಲಿ, ಹಡಗಲಿ, ಹರಪನಹಳ್ಳಿ ಮತ್ತು ಕೂಡ್ಲಿಗಿ ತಾಲೂಕುಗಳನ್ನು ನೋಡಿಕೊಳ್ಳುತ್ತಿದ್ದನು.

ಬ್ರಿಟಿಷ್ ಕಲೆಕ್ಟರುಗಳ ಆಳ್ವಿಕೆಯಲ್ಲಿದ್ದ ದರ್ಪ, ದೌರ್ಜನ್ಯಗಳು ಲಾವಣಿ ಹಾಗೂ ಜನಪದ ಗೀತೆಗಳಲ್ಲಿ ವ್ಯಕ್ತಪಟ್ಟಿವೆಯಲ್ಲದೆ, ಅವು ಇಂದಿಗೂ ಪುನರಾವರ್ತನೆಗೊಳ್ಳುತ್ತಿರುವುದು ಸ್ಮರಣೀಯ. ಈ ನಿಟ್ಟಿನಲ್ಲಿ ಅವರ ಆಡಳಿತ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲದೆ, ಅಂದಿನ ಜನಜೀವನವನ್ನು ಚಿತ್ರಿಸುವುದು ಅಗತ್ಯ. ಹಾಗಾಗಿ ಪ್ರಮುಖ ಕಲೆಕ್ಟರುಗಳ ಆಡಳಿತ ವೈಖರಿಯನ್ನು ಈ ಕೆಳಗಿನಂತೆ ಅವಲೋಕಿಸಬಹುದಾಗಿದೆ.

ಕಲೆಕ್ಟರುಗಳ ನೇಮಕ ಮತ್ತು ಅವರ ಆಡಳಿತ

‘ಕಲೆಕ್ಟರ್’ ಎಂದರೆ ಕಂದಾಯ ಸಂಗ್ರಹಿಸುವ, ಕೂಡಿಸುವವ ಮತ್ತು ತೀರ್ವೆ ವಸೂಲಿ ಮಾಡುವವ (ಆಡಳಿತಗಾರ) ಎಂಬಿತ್ಯಾದಿ ಅರ್ಥಗಳುಂಟು. ಬ್ರಿಟಿಷರ ಕಲೆಕ್ಟರ್ ಹುದ್ದೆ ಇಂದಿನ ಜಿಲ್ಲಾಧಿಕಾರಿ ಹುದ್ದೆಗೆ ಸಮವೆಂದು ಸಾಮಾನ್ಯವಾಗಿ ತಿಳಿಯಬಹುದು. ಈಗಲೂ ಕೆಲವು ರಾಜ್ಯಗಳಲ್ಲಿ ಜಿಲ್ಲಾಧಿಕಾರಿಯನ್ನು ‘ಕಲೆಕ್ಟರ್’ ಎಂದು ಕರೆಯುತ್ತಾರೆ. ಉದಾಹರಣೆಗೆ: ಆಂಧ್ರಪ್ರದೇಶ. ಕಲೆಕ್ಟರುಗಳ ಆಡಳಿತ ಪ್ರಾರಂಭವಾದಾಗ ಅವರ ಅರ್ಹತೆ, ನೇಮಕ ನೋಡು ವುದು ಅಗತ್ಯ. ಇವರು ನೇರವಾಗಿ ಕಲೆಕ್ಟರ್ ಹುದ್ದೆಗೆ ನೇಮಕಗೊಳ್ಳುತ್ತಿರಲಿಲ್ಲ. ಬದಲಾಗಿ ಈಸ್ಟ್ ಇಂಡಿಯಾ ಕಂಪನಿಯ ಸಾಮಾನ್ಯ ಆಡಳಿತಗಾರರನ್ನು ಮತ್ತು ಬ್ರಿಟಿಷ್ ಸೇನಾಪಡೆಯಲ್ಲಿ ಪ್ರಾಮಾಣಿಕ, ದಕ್ಷ ಸೇವೆ ಸಲ್ಲಿಸಿದವರನ್ನು ಸರ್ಕಾರ ನೇಮಿಸುತ್ತಿತ್ತು. ಜಿಲ್ಲಾ ನ್ಯಾಯಾಧೀಶರು ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಒಮ್ಮೊಮ್ಮೆ ಕಲೆಕ್ಟರ್ ಆಗಿ ಆಡಳಿತ ನಡೆಸಿದ್ದಾರೆ. ಕಲೆಕ್ಟರ್ ಮೂಲತಃವಾಗಿ ಯುರೋಪಿಯನ್ (ಆಂಗ್ಲ) ನಿವಾಸಿಯಾಗಬೇಕಿತ್ತು. ಈ ವ್ಯವಸ್ಥೆ ೧೯೨೧ರವರೆಗಿದ್ದು, ಆಂಗ್ಲರೇ ಕಲೆಕ್ಟರುಗಳಾಗುತ್ತಿದ್ದರು.  ಕೆಲವು ಆಂಗ್ಲ ಅಧಿಕಾರಿಗಳು ಐ.ಸಿ.ಎಸ್. ಪರೀಕ್ಷೆಯನ್ನು ಭಾರತದಲ್ಲಿ ಬರೆದು ತೇರ್ಗಡೆ ಹೊಂದಿ ಕಲೆಕ್ಟರ್ ಆಗಿರುವ ಉದಾಹರಣೆಗಳಿವೆ. ಐ.ಸಿ.ಎಸ್., ಐ.ಪಿ.ಎಸ್. ಪರೀಕ್ಷೆಗಳು ಈ ಸಾಲಿನಲ್ಲಿ ಜಾರಿಗೆ ಬಂದಾಗ ಭಾರತೀಯರು ಸ್ಪರ್ಧಿಸಲು ಆಸ್ಪದವಾಯಿತು. ಆ ನಂತರ ಭಾರತೀಯರಿಗೆ ಆದ್ಯತೆ ದೊರೆಯಿತು. ಆಗಿನಿಂದ ಮದ್ರಾಸ್ ಅಧಿಪತ್ಯದಲ್ಲಿ ಈ ಹುದ್ದೆಗೆ ಕಲೆಕ್ಟರ್‌ನನ್ನು ನೇಮಿಸುತ್ತಿದ್ದರು. ಇವರಿಗೆ ಈಸ್ಟ್ ಇಂಡಿಯ ಕಂಪನಿಯ ಸದಸ್ಯ ಅಥವಾ ನೌಕರನಾಗಿರಬೇಕೆ ನ್ನುವ ನಿಯಮ ೧೮೫೮ರವೆಗಿತ್ತು. ಆ ನಂತರ ಆ ನಿಯಮ ಬದಲಾಗಿ, ಸಾಮಾನ್ಯವಾಗಿ ಖಾಸಗಿ ಸಂಸ್ಥೆಗಳ ಹತೋಟಿ ಕಡಿಮೆಯಾಯಿತಲ್ಲದೆ, ಸರ್ಕಾರವೇ ನೇರವಾಗಿ ನೇಮಿಸುತ್ತಿತ್ತು.

ಕಲೆಕ್ಟರ್ ಹುದ್ದೆ ಪಡೆಯಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣನಾಗ ಬೇಕಿತ್ತು. ಈ ವಿಧಾನ ೧೮೬೧ರಲ್ಲಿ ಜಾರಿಗೆ ಬಂದಿತು. ಆಗ ಇಂಡಿಯನ್ ಸಿವಿಲ್ ಸೇವಾ ಪರೀಕ್ಷೆಯಲ್ಲಿ ಭಾರತೀಯರಿಗೆ ಅವಕಾಶ ದೊರೆಯಬೇಕೆಂದು ಹೋರಾಡಿದರೂ ಸಫಲತೆ ಕಾಣಿಸಲಿಲ್ಲ. ಲಂಡನ್ನಿನ ಸಿವಿಲ್ ಸೇವಾ ಕಮೀಷನ್ ಇಲಾಖೆಯಿಂದ ಪರೀಕ್ಷೆಯನ್ನು ನಡೆಸ ಲಾಗುತ್ತಿತ್ತು. ಈ ಮೊದಲು ಇಂತಹ ಪರೀಕ್ಷೆಗಳಿರಲಿಲ್ಲ. ೧೮೬೦ರಲ್ಲಿ ಅವರ ವಯೋಮಿತಿ ಯನ್ನು ೨೨ ವರ್ಷಕ್ಕೆ, ೧೮೬೬ರಲ್ಲಿ ೨೧ ವರ್ಷಕ್ಕೆ ೧೮೭೮ರಲ್ಲಿ ೧೯ ವರ್ಷಕ್ಕೆ ಇಳಿಸ ಲಾಯಿತು. ಇದರಿಂದ ಭಾರತೀಯನಿಗೆ ಪರೀಕ್ಷೆಗಳಲ್ಲಿ ಭಾಗವಹಿಸಲಾಗಲಿಲ್ಲ. ಭಾರತೀ ಯರಿಗೆ ಐ.ಸಿ.ಎಸ್. ಪರೀಕ್ಷೆ ನಿಗದಿಪಡಿಸಿದರೆ, ಆಂಗ್ಲ ಕಲೆಕ್ಟರ್ ತನ್ನ ದೇಶದಲ್ಲಿ ನಡೆಸು ತ್ತಿದ್ದ ಪರೀಕ್ಷೆಯನ್ನು ಪಾಸು ಮಾಡಬೇಕಿತ್ತು. ಕಲೆಕ್ಟರುಗಳಿಗೆ ಕನ್ನಡ ಮತ್ತು ತೆಲುಗು ಭಾಷೆಗಳ ಕಲಿಕೆ ಕಡ್ಡಾಯವಾಗಿತ್ತು. ಈ ವ್ಯವಸ್ಥೆ ಮೊದಲು ಇರಲಿಲ್ಲ. ಆ ನಂತರ ಆಡಳಿತ ದಲ್ಲಿ ತೊಂದರೆಯಾದಾಗ ಪ್ರಾದೇಶಿಕ ಭಾಷೆಗೆ ಮಹತ್ವ ಕೊಟ್ಟರು. ೧೮೬೧ರ ಪೂರ್ವದಲ್ಲಿ ಕಂಪನಿಯ ನೌಕರಿ ಅಥವಾ ಸೈನಿಕನಾಗಿದ್ದು ಬಡ್ತಿ ಹೊಂದಿ ಈ ಸ್ಥಾನಕ್ಕೆ ಬರುತ್ತಿದ್ದರಲ್ಲದೆ, ಪ್ರಪಂಚದ ಮಹಾಘಟನೆಗಳಲ್ಲಿ (ಯುದ್ಧ, ಕದನ, ದಂಗೆ) ಭಾಗಿಯಾಗಿ ಶ್ರಮಿಸಿ, ಯಶಸ್ಸು ತಂದವರಿಗೆ ಆದ್ಯತೆ ಇತ್ತು. ಇಲ್ಲಿ ವೈದ್ಯರು, ಇಂಜಿನಿಯರು, ಸರ್ವೇಧಿಕಾರಿ, ಧರ್ಮ ಪ್ರಚಾರಕ, ವಿಭಾಗಾಧಿಕಾರಿ, ತಹಶೀಲ್ದಾರ್ ಇತರರು ಮುಂಬಡ್ತಿ ಪಡೆದು ಆಗಾಗ ಉನ್ನತ ಹುದ್ದೆಗಳನ್ನು ಪಡೆದಿದ್ದರು.

ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಪರಿಗಣಿಸಿ, ಕಲೆಕ್ಟರ್‌ನ ನೇಮಕವನ್ನು ಇಂಗ್ಲೆಂಡಿ ನಲ್ಲಿ ರಾಣಿ ಮಾಡುತ್ತಿದ್ದಳು. ಒಮ್ಮೆ ರಾಣಿಯ ಸ್ಥಾನದಲ್ಲಿ ರಾಜ ಮತ್ತು ವೈಸರಾಯ್ ಕಲೆಕ್ಟರ್‌ನನ್ನು ನೇಮಿಸುತ್ತಿದ್ದರು. ಜೊತೆಗೆ ಬೋರ್ಡ್ ಆಫ್ ಡೈರೆಕ್ಟರ್ಸ್‌ಮತ್ತು ಕಂಟ್ರೋಲರ್ಸ್ ಹಾಗೂ (ಈಸ್ಟ್ ಇಂಡಿಯಾ ಕಂಪನಿ) ಗವರ್ನರ್ ಜನರಲ್ ನೇಮಿಸುತ್ತಿ ದ್ದರು. ೧೮೫೮ರ ನಂತರ ನೇಮಕವಾಗಿ ಅವನು ಇಲ್ಲಿಗೆ ಬಂದಾಗ, ಮೊದಲು ಮದ್ರಾಸ್ ಪ್ರಾಂತದ ಗವರ್ನರ್‌ನನ್ನು ಭೇಟಿ ಮಾಡಬೇಕಿತ್ತು. ಕಾರಣ ಜಿಲ್ಲೆಯ ಆಡಳಿತ, ಭಾಷೆ, ಪರಿಸ್ಥಿತಿಗಳು ಕುರಿತಂತೆ ಗವರ್ನರ್‌ನಿಂದ ಪೂರ್ವಸಿದ್ಧತೆ ತರಬೇತಿ ಕೊಡಲಾಗುತ್ತಿತ್ತು. ಕಲೆಕ್ಟರ್‌ನ ಆಡಳಿತ ವೈಖರಿ ಅಂದು ಗವರ್ನರ್ ನಿಯಂತ್ರಣದಲ್ಲಿತ್ತು. ಹಾಗಾಗಿ, ವಿದೇಶಕ್ಕೆ ಹೋಗುವಾಗ ರಜೆ ಪಡೆಯಲು ಗವರ್ನರನ ಅಪ್ಪಣೆ, ಅನುಮತಿ ಪಡೆಯಬೇಕಿತ್ತು.

೧೮೭೦ರಲ್ಲಿ ಐ.ಸಿ.ಎಸ್. ಪರೀಕ್ಷೆಗಳ ಬದಲಾಗಿ ಗೌರವಸ್ಥ ಮನೆತನದ ತರುಣರನ್ನು ನಿಯಮಿತ ಸಂಖ್ಯೆಯಲ್ಲಿ ಕಲೆಕ್ಟರ್ ಹುದ್ದೆಗೆ ನೇಮಿಸುತ್ತಿದ್ದರು. ಉದಾ: ಲಾರ್ಡ್, ಸರ್, ಸೈಂಟ್ ಇತರ ಗೌರವಾನ್ವಿತ ಪದವಿಗಳಿಂದ ನಿರ್ಧರಿಸಬಹುದು. ಆದರೆ ಇವರ ಆಡಳಿತ ಯಶಸ್ವಿಯಾಗಲಿಲ್ಲ. ೧೮೮೫ರಲ್ಲಿ ಇಂಗ್ಲೆಂಡ್ ಮತ್ತು ಭಾರತದಲ್ಲಿ ಪರೀಕ್ಷೆಗಳನ್ನು ನಡೆಸಲು ಬೇಡಿಕೆ ಸಲ್ಲಿಸಿದರು. ಆದರೆ ಅದಕ್ಕೆ ೧೮೯೩ರಲ್ಲಿ ಅನುಮತಿ ಸಿಕ್ಕಿತು. ಆಗ ಇಂಗ್ಲೆಂಡ್ ಮತ್ತು ಭಾರತದಲ್ಲಿ ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ೧೯೧೮ರ ಮದ್ರಾಸ್ ಆಡಳಿತ ವರದಿ ಪ್ರಕಾರ “ಭಾರತದ ಸಿವಿಲ್ ಸರ್ವೀಸ್‌ಗಳಲ್ಲಿ ಶೇ. ೩೩ರಷ್ಟು ಉತ್ತಮ ಹುದ್ದೆಗಳಿಗೆ ಭಾರತೀಯರನ್ನು ಆಯ್ಕೆ ಮಾಡಬೇಕಾಗಿತ್ತೆಂದು ತಿಳಿಸುತ್ತದೆ. ಕಲೆಕ್ಟರನನ್ನು ನೇಮಿಸುವಾಗ ೧೮೦೦ರಿಂದ ೧೯೧೩ರವರೆಗೆ ಸಾಕಷ್ಟು ತಿದ್ದುಪಡಿ ಮಾಡಲಾಗಿದೆ. ೧೮೫೮, ೧೮೮೫ ಮತ್ತು ೧೯೧೩ರಲ್ಲಿ ತಂದಂತಹ ವಿಧಿಗಳನ್ನು ಅವಲೋಕಿಸಿ ದರೆ, ಕಲೆಕ್ಟರ್‌ನ ಮೊದಲ ನೇಮಕದ ಅರ್ಹತೆಗೆ, ನಂತರದಲ್ಲಾದ ನೇಮಕಗಳಿಗೂ ಸಾಕಷ್ಟು ವ್ಯತ್ಯಾಸಗಳಿರುವುದು ತಿಳಿಯುತ್ತದೆ.

ಕಲೆಕ್ಟರುಗಳ ಆಡಳಿತದ ಆರಂಭದಲ್ಲಿ ಇದನ್ನು ರೆವಿನ್ಯೂ ಜಿಲ್ಲೆಯಾಗಿ, ಪ್ರಮುಖವಾಗಿ ೧೮ ತಾಲ್ಲೂಕುಗಳನ್ನಾಗಿ ವಿಂಗಡಣೆ ಮಾಡಿದರು. ಬ್ರಿಟಿಷ್ ಸರ್ಕಾರ ಬಳ್ಳಾರಿ ಜಿಲ್ಲೆಯ ಆಡಳಿತವನ್ನು ನೋಡಿಕೊಳ್ಳಲು, ಪ್ರಧಾನ ಕಲೆಕ್ಟರನಾಗಿ ಸರ್. ಥಾಮಸ್ ಮನ್ರೋನನ್ನು ೧೮೦೦ರಲ್ಲಿ ನೇಮಿಸಲಾಯಿತು. ಅನಂತರ ಜನರಲ್ (ಎ.ಐ) ಡುರಾಲ್ಡ್ ಕಾಂಪ್‌ಬೆಲ್ ಸೈನ್ಯದ ಮುಖ್ಯಸ್ಥನಾಗಿ ಬಳ್ಳಾರಿ ಪ್ರದೇಶಕ್ಕೆ ಬರುತ್ತಾನೆ. ಮನ್ರೋನ ಅಧೀನದಲ್ಲಿ ನಾಲ್ಕು ಜನ ವಿಭಾಗೀಯ ಕಲೆಕ್ಟರರು ಆಗ ನೇಮಕಗೊಳ್ಳುತ್ತಾರೆ. ಅವರಲ್ಲಿ ಜೇಮ್ಸ್‌ಕ್ರೋಚೆನ್ ಬಳ್ಳಾರಿ, ಕಂಪ್ಲಿ, ಹಡಗಲಿ, ಹರಪನಹಳ್ಳಿ ಮತ್ತು ಕೂಡ್ಲಿಗಿ ತಾಲ್ಲೂಕುಗಳನ್ನು ನೋಡಿಕೊಳ್ಳು ತ್ತಿದ್ದನು. ಕ್ರಿ.ಶ. ೧೮೦೮ರಲ್ಲಿ ದತ್ತಿಮಂಡಲದ ಜಿಲ್ಲೆಗಳಾದ ಕರ್ನೂಲು, ಕಡಪ, ಅನಂತಪುರ ಗಳಲ್ಲಿ, ಬಳ್ಳಾರಿ ಮತ್ತು ಕಡಪ ಎಂದು ೨ ವಿಭಾಗಗಳಾಗಿ ಮಾಡಲಾಯಿತು. ಆಗ ಬಳ್ಳಾರಿ ವಿಭಾಗ ೧೫ ತಾಲ್ಲೂಕುಗಳನ್ನು ಹೊಂದಿದ್ದು, ೧೮೮೨ರಲ್ಲಿ ಪುನಃ ಈ ಜಿಲ್ಲೆಯನ್ನು ಅನಂತಪುರ ಮತ್ತು ಬಳ್ಳಾರಿ ಜಿಲ್ಲೆಗಳೆಂದು ಪ್ರತ್ಯೇಕಿಸಲಾಯಿತು.

ಸರ್. ಥಾಮಸ್ ಮನ್ರೋ ಕಲೆಕ್ಟರ್‌ನಾಗಿ ಪ್ರಮುಖ (ಕಾರ್ಯಕ್ರಮಗಳನ್ನು) ಖಾತೆಗಳನ್ನು ವಹಿಸಿಕೊಂಡಿದ್ದನು. ಕಂದಾಯ, ಶಾಂತಿ ಮತ್ತು ಸುವ್ಯವಸ್ಥೆ, ಶಾಂತಿಪಾಲನೆ, ಅಭಿವೃದ್ದಿ ಚಟುವಟಿಕೆ, ಆಡಳಿತ ಸಮನ್ವಯ ಮತ್ತು ಸಾರ್ವಜನಿಕ ಕಲ್ಯಾಣವಲ್ಲದೆ ಈ ಜಿಲ್ಲೆಯ ಸಮಗ್ರ ಅಭಿವೃದ್ದಿಯ ಜವಾಬ್ದಾರಿ ಹೊಂದಿದ್ದನು. ಆಗ ಈ ಭಾಗದಲ್ಲಿ ಪಾಳೆಯಗಾರರ ವಿರುದ್ಧ ಮನ್ರೋ ಶಿಸ್ತಿನ ಕ್ರಮಗಳನ್ನು ಜರುಗಿಸಿದನು. ಕೂಡಲೇ ಇಂಗ್ಲೆಂಡ್‌ನಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರ ಟೀಕೆಗೆ ಗುರಿಯಾಗಿ ಅವರು ವಿವರಣೆ ಕೇಳಿದರು. ಆಗ ಮನ್ರೋ ತನ್ನ ಜವಾಬನ್ನು ೧೮೦೫ ಫೆಬ್ರವರಿ ೨೨ ರಂದು ಪಾಳೆಯಗಾರರಿಗೆ ಸಂಬಂಧಿಸಿದಂತೆ ಕೊಡುತ್ತಾನೆ.

[1] ೧೮೦೫ರಲ್ಲಿ ಅವನು ಬರೆದ ವಿವರಣಾ ಪತ್ರವೇನೆಂದರೆ : ಪಾಳೆಯಗಾರರ ಪ್ರಾಚೀನ ಹಕ್ಕುಗಳಾಗಲಿ ಅಥವಾ ಅವರು ತೋರಿದ ನಡತೆಯಾಗಲಿ, ಮೃದುಕ್ರಮ ಕೈಗೊಳ್ಳಲು ಅರ್ಹತೆ ತೋರಿಸಿರಲಿಲ್ಲವೆಂದು, ಅವರ ಚರಿತ್ರೆ ಮತ್ತು ನಡತೆಗಳು ಹಿಂಸೆ, ಅಪರಾಧ; ದಬ್ಬಾಳಿಕೆಗಳಿಂದ ಕೂಡಿದ್ದು, ಶಿಕ್ಷೆ ರಹಿತವಾದಾಗ ನ್ಯಾಯವಾದ ಸರ್ಕಾರವನ್ನು ಧಿಕ್ಕರಿಸುವಂತೆ ಇದ್ದವೆಂದು ಮನ್ರೋನ ಸಾರಾಂಶ.[2] ಮನ್ರೋನ ನೀತಿಗಳು ಜಿಲ್ಲೆಯಲ್ಲಿ ಪ್ರಥಮವಾಗಿ ಜಾರಿಗೆ ಬಂದಾಗ ಆಡಳಿತದಲ್ಲಿ ಹೊಸ ಮಾರ್ಪಾಡು ಆಯಿತು. ಅಪರಾಧದಿಂದ ವಿಮೋಚನೆ ಪಡೆದ ಸರ್ಕಾರದ ಮುಖಂಡರುಗಳಿಗೆ ವೇತನವನ್ನು ದಯಪಾಲಿಸಲಾಯಿತು. ಆಗ ಕೆಲವು ಕುಟುಂಬಗಳು ಮಾತ್ರ ಇದ್ದು, ಅವುಗಳಲ್ಲಿ ಪಾಳೆಯಗಾರರ ಕುಟುಂಬಗಳು ಪ್ರಮುಖವಾಗಿದ್ದವು. ಅವುಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ೨೩ ಪಾಳೆಯಗಾರರ ಮನೆತನಗಳಿ ದ್ದವು.[3] ಮನ್ರೋ ಈ ಮನೆತನಗಳಿಗೆ ಸೇರಿದ ನಾಯಕ ಜನಾಂಗದ ಯುವಕರನ್ನು ಮಿಲಿಟರಿ ಸಹಾಯಕರಾಗಿ ನೇಮಿಸಿಕೊಂಡನು. ಆಗ ಈ ಭಾಗದ ಯುವ ಸೈನಿಕರನ್ನು ಕೇವಲ ೧೦೦ಕ್ಕೆ ಸೀಮಿತಗೊಳಿಸಿದನು. ಪಾಳೆಯಗಾರರು ಒಂದು ಕಾಲಕ್ಕೆ ಮನ ಬಂದಂತೆ ವೈಭವಯುತವಾಗಿ ಆಡಳಿತ ನಡೆಸಿ, ನಿರಂತರ ಬವಣೆ-ಆಕ್ರಮಣಕ್ಕೆ (ಹೈದರ್-ಟಿಪು್ಪ) ಗುರಿಯಾಗಿದ್ದರಿಂದ ಮನ್ರೋನ ನೀತಿಗಳು ಗಾಯದ ಮೇಲೆ ಬರೆ ಎಳೆದಂತಾಯಿತು.

ಬಳ್ಳಾರಿ ಜಿಲ್ಲೆಗೆ ಬ್ರಿಟಿಷರು ಬಂದಾಗ ಆದ ಬದಲಾವಣೆಗಳು ಪಾಳೆಯಗಾರರು-ಜವಾನರು, ಇನಾಂಭೂಮಿ (ಸೇವೆ), ಧಾರ್ಮಿಕ ದತ್ತಿ ಜಹಗೀರು, ವಲಸೆ, ಕೈಗಾರಿಕಾ ಮತ್ತು ವಾಣಿಜ್ಯ, ಹಣಕಾಸು, ಪ್ರವಾಸಿಗರು, ಮಿಲಿಟರಿ, ಭೂಸರ್ವೇ, ರಾಯತ್ವಾರಿ, ತಳವಾರಿಕೆ, ಹೊಸಕಂದಾಯ, ಕೆರೆ-ಬಾವಿಗಳ ದುರಸ್ಥಿ, ಕ್ಷಾಮ-ಬರಗಾಲ ಪರಿಹಾರಗಳು, ಸಂಗ್ರಹ ಪಂಚಾಯತಿ, ಸೈನ್ಯ, ಪೊಲೀಸ್, ಮಿಲಿಟರಿ ಪಿವನ್ಸ್ ಮೊದಲಾದ ಹಲವಾರು ವಿಷಯಗಳು ಆಡಳಿತದಲ್ಲಿ ಹೊಸಬದಲಾವಣೆಗೊಳಪಟ್ಟವು. ಗವರ್ನರ್ ಜನರಲ್, ಕಲೆಕ್ಟರ್, ಸಬ್ ಕಲೆಕ್ಟರ್, ಡೆಪ್ಯುಟಿ ಕಲೆಕ್ಟರ್, ತಹಶೀಲ್ದಾರ್, ಪಟೇಲ, ಕರಣಂ, ರೆವಿನ್ಯೂ ಪಿವನ್ಸ್ ಮೊದಲಾದವರು ಆಡಳಿತ ಯಂತ್ರದ ಪ್ರಮುಖ ರೂವಾರಿಗಳಾಗಿದ್ದರು.

ನಂತರ ಈ ಜಿಲ್ಲೆಯಲ್ಲಿ ೧೮೧೭ ಮತ್ತು ೧೮೧೮ರಲ್ಲಿ ಸುಮಾರು ೫೦೦ ಪ್ರಬಲ ಪಿಂಡಾರಿಗಳ ಗುಂಪು ದಾಂಧಲೆ ನಡೆಸುತ್ತದೆ. ಜಿಲ್ಲೆಯ ಪಶ್ಚಿಮ ಭಾಗದ ಬೆಲ್ಲಹುಣಸಿ, ತುಂಗಾಭದ್ರ ನದಿ ದಂಡೆಯ ಹಳ್ಳಿಗಳ ಮೇಲೆ ದಾಳಿ ನಡಿಸಿ ಹರಪನಹಳ್ಳಿಯನ್ನು ತಲುಪಿತು. ಅಲ್ಲಿ ಉಪ-ಖಜಾನೆಯನ್ನು ಲೂಟಿ ಮಾಡಿ ೨೪,೦೦೦.೦೦ ರೂ.ಗಳನ್ನು ತೆಗೆದುಕೊಂಡು ಅಲ್ಲಿದ್ದ ದಾಖಲೆ, ಪೀಠೋಪಕರಣಗಳನ್ನು ನಾಶಪಡಿಸಲಾಯಿತು. ಅನಂತರ ಕೊಟ್ಟೂರಿಗೆ ನುಗ್ಗಿದರು, ಅಲ್ಲೇನು ಸಿಗದುದರಿಂದ ಮುಂದುವರೆದು ಕೂಡ್ಲಿಗಿಯನ್ನು ಪ್ರವೇಶಿಸಿದರು. ಅಲ್ಲಿ ಲೂಟಿ ಮಾಡಲು ಅತೀ ಭದ್ರತೆಯಿಂದ ಸಾಧ್ಯವಾಗಿರಲಿಲ್ಲ ಅಥವಾ ಅಂತಹ ಸಂಪತ್ತು ಅಲ್ಲಿರಲಿಲ್ಲವೆನ್ನಬಹುದು.

ಕ್ರಿ.ಶ. ೧೮೧೮ರಲ್ಲಿ ವಿಲಿಯಂ ಚಾಪ್ಲಿನ್ ಕಲೆಕ್ಟರ್‌ನಾಗಿದ್ದಾಗ ಮನ್ರೋನ ರೈತವಾರಿ ಪದ್ಧತಿಯನ್ನು ಇಲ್ಲಿ ಅಳವಡಿಸಿದನು. ಆಗ ಇದ್ದ ಕಂದಾಯವನ್ನು ವಿರೋಧಿಸಿ ಜನರು ದಂಗೆ ಮಾಡುತ್ತಿದ್ದರು. ಆ ರೀತಿ ಮಾಡಿದರೆ ಕಂದಾಯ ಮನ್ನಾ ಮಾಡುತ್ತಾರೆಂದು ಸಹ ಅವರು ತಿಳಿದಿದ್ದರು. ಭೂ ಪಟ್ಟಾ ಪಡೆಯಲು ಅನ್ಯಮಾರ್ಗವನ್ನು ರೈತರು ಬಳಸುತ್ತಿದ್ದರೆನ್ನು ವುದು ಸ್ಪಷ್ಟ. ಆದರೆ, ಇದನ್ನು ಆಗಿನ ಕಲೆಕ್ಟರ್ ಎ.ಐ. ಕಾಂಪೆಬೆಲ್ ನ್ಯಾಯಾಧೀಶನಂತೆ ಪರಿಶೋಧಿಸುತ್ತಿದ್ದನು. ಈ ರೀತಿ ಅಲ್ಲಲ್ಲಿ ತೆರಿಗೆ, ಕಂದಾಯಕ್ಕಾಗಿ ಸಣ್ಣಪುಟ್ಟ ದಂಗೆಗಳನ್ನು ಬಿಟ್ಟರೆ ಗಮನಾರ್ಹವಾದ ಘಟನೆಗಳು ನಡೆದಿಲ್ಲ. ಅದೇ ದಶಕದಲ್ಲಿ ತಾಲೂಕಿನ ಮುಖ್ಯ ಕೇಂದ್ರವಾಗಿದ್ದ ಕಂಪ್ಲಿಯಲ್ಲಿ ಸಬ್‌ಕಲೆಕ್ಟರ್‌ನು ಆಡಳಿತ ನಡೆಸುತ್ತಿದ್ದನು.

ಆ ನಂತರ ೧೮೨೪ರಿಂದ ೧೮೩೮ರವರೆಗೆ ಜನಪ್ರಿಯ ಅಧಿಕಾರಿ ಎಫ್. ಡಬ್ಲ್ಯೂ. ರಾಬರ್ಟ್‌ಸನ್ ಕಲೆಕ್ಟರ್ ಆಗಿ ಬಂದಾಗ, ಅವನ ಆಡಳಿತದಲ್ಲಿ ಗ್ರಾಮಾಧಿಕಾರಿಗಳು ಸರ್ಕಾರದ ಸಂಪೂರ್ಣ ನಿಯಂತ್ರಣಕ್ಕೊಳಪಟ್ಟರು. ಇವನು ಮನ್ರೋನ ಸುಧಾರಣೆಗಳಿಗೆ ಪುನಶ್ಚೇತನ ಕೊಟ್ಟನು. ಮನ್ರೋ ರೈತವಾರಿ, ಭೂ-ಮಾಪನ ಕೆಲಸ ಜಾರಿಗೆ ತಂದರೆ, ಇವನು ಸರ್ವಾಭಿವೃದ್ದಿಗೆ ಶ್ರಮಿಸಿದನು. ಇವರ ಕಾಲದಲ್ಲಿ ‘ಬಳ್ಳಾರಿ ದಂಗೆ’ ನಡೆಯಿತು. ಅವರ ಉದ್ದೇಶ ಭೂ-ಒಡೆಯ, ದರ್ಪಿಷ್ಟ ಪ್ರಭು ಮತ್ತು ಸರ್ಕಾರದ ವಿರುದ್ಧವಾಗಿತ್ತು. ಕಾಲುವೆ, ನೀರಿನ ವ್ಯವಸ್ಥೆ, ಕಂದಾಯದಲ್ಲಿ ಕಡಿತಗೊಳಿಸಲು ದಂಗೆಯ ಮುಖಂಡರು ಒತ್ತಾಯಿಸಿದರು.[4] ಇವನು ಹದಿನೈದು ವರ್ಷಗಳವರೆಗೆ ಆಡಳಿತ ನಡೆಸಿ ೧೮೩೮ರ ಏಪ್ರಿಲ್‌ನಲ್ಲಿ ಅನಂತಪುರ ದಲ್ಲಿ ಮರಣ ಹೊಂದಿದನು. ಆಗ ಅವನ ಶವವನ್ನು ಗುತ್ತಿ ಹತ್ತಿರ ಸಮಾಧಿ ಮಾಡಲಾಯಿತು. ಇಂದಿಗೂ ಆ ಸಮಾಧಿ ಶಾಶ್ವತವಾಗಿದೆ. ಅನಂತರ ಬಂದ ಮಿಲ್ಲರ್ (೧೮೪೦-೧೮೪೮) ಬಳ್ಳಾರಿಯ ಪಟ್ಟಣವನ್ನು ವಿಸ್ತರಿಸಿದನು. ಲೋಕೋಪಯೋಗಿ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಬಡಾವಣೆಗಳನ್ನು ಪ್ರತ್ಯೇಕಿಸಿದನು. ಇವನು ನಗರ ಬೆಳವಣಿಗೆಗೆ ಕಾರಣವಾಗಿ, ಪ್ರಗತಿ ಮತ್ತು ಸಾಧನೆ ಮಾಡಿದ್ದಕ್ಕೆ ಬಳ್ಳಾರಿಯ ಒಂದು ಪ್ರದೇಶಕ್ಕೆ (ಬಡಾವಣೆಗೆ) ‘ಮಿಲ್ಲರ್ ಪೇಟೆ’ ಎಂದು ಹೆಸರಿಸಲಾಯಿತು.

ಈ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟ ಮಾರ್ಚ್ ೧೮೫೮ರಲ್ಲಿ ಪ್ರಾರಂಭವಾಗುತ್ತದೆ. ದೇಶದಲ್ಲಿ ೧೮೫೭ರಲ್ಲಿ ಪ್ರಾರಂಭವಾದರೆ, ಮುಂಡರಗಿ ಭೀಮರಾಯ ಬ್ರಿಟಿಷರ ವಿರುದ್ಧ ಹೋರಾಡಲು ಸಿದ್ಧನಾದುದು ೧೮೫೮ರಲ್ಲಿ. ಆಗ ಇವನು ಈ ಪ್ರದೇಶದಲ್ಲಿ ಜನರನ್ನು ಸಂಘಟಿಸಿದಾಗ ಹೊಸಪೇಟೆ, ಕಮಲಾಪುರದ ಜನರು ಭಾಗವಹಿಸಿದ್ದರು. ಹೊಸಪೇಟೆಯ ಉದಾರಿ ಠಾಕೂರ್ ಸೈನ್ಯ ಭರ್ತಿಗಾಗಿ ಧನ ಸಹಾಯ ಮಾಡಿದನು. ಸುಮಾರು ೧೫೦ ಜನರಿದ್ದು, ಭೀಮರಾವ್ ಮತ್ತು ಕೆಂಚನಗೌಡ, ಹಮ್ಮಿಗಿಯ ದೇಸಾಯಿಯವರು, ಕೊಪ್ಪಳ ದಲ್ಲಿ ಶಸ್ತ್ರ ಹಿಡಿದು ಕೋಟೆಯನ್ನು ವಶಪಡಿಸಿಕೊಂಡರು. ಈ ಮೂವರನ್ನು ಬಳ್ಳಾರಿಯಿಂದ ಬಂದ ಸೈನ್ಯ ಹತರಾಗುವಂತೆ ಮಾಡಿತು. ಆಗ ಸುಮಾರು ೧೫೦ ಮಂದಿಯನ್ನು ಪರಾಜಯ ಗೊಳಿಸಿದಾಗ ಬಳ್ಳಾರಿಯವರು ೧೩ ಜನ ಇದ್ದರು.

ಈ ಸಂದರ್ಭದಲ್ಲಿ ಜಿಲ್ಲೆಯ ಭೂಪ್ರದೇಶಕ್ಕೆ ಕಂದಾಯ ನಿಗದಿ ಮಾಡಿದ್ದು ಒಣಭೂಮಿ ರೂ : ಶೇ. ೩, ನೀರಾವರಿ ಭೂಮಿಗೆ ರೂ : ಶೇ. ೨೪ ವಿಧಿಸುತ್ತಿದ್ದರು. ಹಾಗೆಯೇ ಕೆರೆ, ಕಾಲುವೆಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದನು. ವಿಶೇಷವಾಗಿ ತುಂಗಭದ್ರಾ ನದಿ ಇಕ್ಕೆಲ ಗಳಲ್ಲಿ ಕಾಲುವೆಗಳನ್ನು ತೋಡಿಸಿದನು. ಈ ಹೊತ್ತಿಗೆ (೧೮೫೧ರಲ್ಲಿ) ಕಂಪ್ಲಿಯಿಂದ ಹೊಸಪೇಟೆಗೆ ತಾಲ್ಲೂಕು ವರ್ಗಾಯಿಸಲ್ಪಟ್ಟಿತು. ಹಾಗಾಗಿ ತಾಲ್ಲೂಕು ಕೇಂದ್ರದಿಂದಲೇ ಆಡಳಿತ ನಡೆಯುತ್ತಿದ್ದು, ಜಿಲ್ಲೆಯಲ್ಲಿ ೩ ವಿಭಾಗಗಳಿದ್ದವು. ಹೊಸಪೇಟೆ, ಬಳ್ಳಾರಿ ಮತ್ತು ಸಿರುಗುಪ್ಪ (ಸೊಂಡೂರು ಪ್ರತ್ಯೇಕ ಸಂಸ್ಥಾನವಾಗಿ ಬ್ರಿಟಿಷರ ಅಧೀನದಲ್ಲಿತ್ತು). ಹೊಸಪೇಟೆ ಉಪ-ವಿಭಾಗದಲ್ಲಿ ಸಬ್‌ಕಲೆಕ್ಟರ್ ಇದ್ದು, ಅವನನ್ನು ಭಾರತೀಯ ನಾಗರಿಕ ಸೇವಾ ಅಧಿಕಾರಿಯಾಗಿ ನಿಯೋಜಿಸಲ್ಪಡುತ್ತಿದ್ದರು. ಸರ್ಕಾರಿ ನ್ಯಾಯಾಲಯ ಇಲ್ಲಿರಲಿಲ್ಲ. ಈ ಪೀಠ ಮೊದಲು ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನಲ್ಲಿತ್ತು. ೧೮೭೧ರಲ್ಲಿ ನಾರಾಯಣದೇವರ ಕೆರೆಗೆ ವರ್ಗಾಯಿಸಲಾಗಿ, ಅಲ್ಲಿ ಪಾಳೆಯಗಾರ ಸೋಮಶೇಖರ ನಾಯಕನು ನಿರ್ಮಿಸಿದ ದರ್ಬಾರು ಭವನದಲ್ಲಿ ಕೋರ್ಟು ಕಾರ್ಯಾರಂಭ ಮಾಡಿತು (ಈಗ ಈ ಗ್ರಾಮ ತುಂಗಭದ್ರಾ ಆಣೆಕಟ್ಟಿನಲ್ಲಿ ಮುಳುಗಿಹೋಗಿದೆ). ೧೯೦೦ರಲ್ಲಿ ಕೋರ್ಟನ್ನು ಹೊಸಪೇಟೆಗೆ ವರ್ಗಾಯಿಸಿ ದರು. ಅಂದಿನಿಂದ ಹೊಸಪೇಟೆಯಲ್ಲಿ ಕಾರ್ಯಾರಂಭ ಮಾಡಿತು. ೧೯೪೭ರಲ್ಲಿ ಮದ್ರಾಸ್ ಅಧಿಪತ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ರಾಜಗೋಪಾಲಚಾರಿ ಮುಖ್ಯಮಂತ್ರಿ ಯಾದರು. ಈ ಸಂದರ್ಭದಲ್ಲಿ ಕಲೆಕ್ಟರುಗಳ ಆಡಳಿತವನ್ನು ಸರಳಗೊಳಿಸಿದರು. ೧೯೪೭ರಲ್ಲಿ ಸ್ವಾತಂತ್ರ್ಯ ಬಂದರೂ ಬಳ್ಳಾರಿ ಮದ್ರಾಸ್ ಅಧಿಪತ್ಯದಲ್ಲಿ ಮುಂದುವರೆಯಿತು. ೧೯೫೦ ಸೊಂಡೂರು, ಹಳೇಮೈಸೂರು (ಸಂಸ್ಥಾನ) ಸೇರ್ಪಡೆಯಾಗಿ ತಾಲ್ಲೂಕಾಯಿತು. ೧೯೫೦ ಜನವರಿ ೨೬ ರಂದು ಸಂವಿಧಾನ ಜಾರಿಗೆ ಬಂದಾಗ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿದರು. ೧೯೫೨ರ ಡಿಸೆಂಬರ್‌ನಲ್ಲಿ ಕೆ.ಎಸ್. ವಾಂಚೂ ಕಮಿಟಿ ನೇಮಕಗೊಂಡಿತಲ್ಲದೆ, ೧೯೫೩ರ ಅಕ್ಟೋಬರ್ ೧ರಲ್ಲಿ ಕಮಿಟಿ ತೀರ್ಮಾನದ ಪ್ರಕಾರ ಬಳ್ಳಾರಿ ಜಿಲ್ಲೆ ಮದ್ರಾಸ್ ಬಿಟ್ಟು ಮೈಸೂರು ರಾಜ್ಯವನ್ನು ಸೇರಿತು. ಅಂದಿನಿಂದ ಬಳ್ಳಾರಿ ಜಿಲ್ಲಾ ಕೇಂದ್ರವಾಗಿ ರಚನೆಯಾಯಿತು. ಕಲೆಕ್ಟರುಗಳ ಆಡಳಿತದಲ್ಲಾದ ಮಹತ್ವ ಅಂಶಗಳನ್ನು ಚರ್ಚಿಸಿದ ನಂತರ ಅವರ ಸಂಪೂರ್ಣ ಆಳ್ವಿಕೆಯನ್ನು ತಿಳಿಯಬೇಕಾಗಿದೆ. ಇಲ್ಲಿ ಸು. ೧೧೨ ಜನ ಕಲೆಕ್ಟರುಗಳಿರುವುದರಿಂದ ಪ್ರಮುಖ (ಕೆಲವರನ್ನು ಮಾತ್ರ) ವ್ಯಕ್ತಿ ಮತ್ತು ಕಾಲಮಾನವನ್ನು ವಿಂಗಡಿಸಿಕೊಂಡು ಅಧ್ಯಯನ ಮಾಡಲಾಗಿದೆ.

೩.೨. ಪ್ರಮುಖ ಕಲೆಕ್ಟರುಗಳ ಆಡಳಿತ : ಸಮೀಕ್ಷೆ

ಅಧ್ಯಯನ ಅನುಕೂಲಕ್ಕಾಗಿ ಕಲೆಕ್ಟರುಗಳ ಆಡಳಿತವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಕೊಳ್ಳಲಾಗಿದೆ. ಒಂದು ರೀತಿಯಲ್ಲಿ ಉದಯ, ಬೆಳವಣಿಗೆ, ವಿಕಸನ ಅಥವಾ ಅಂತ್ಯವಾಗಿ ಇಲ್ಲಿ ಮುಖ್ಯವಾಗಿ ವಿವಿಧ ನಾಲ್ಕು ಕಾಲಘಟ್ಟಗಳನ್ನು ಮಾಡಿಕೊಂಡು ಪರಿಗಣಿಸಲಾಗಿದೆ. ಆಯಾ ಕಾಲಘಟ್ಟದ ಪ್ರಮುಖ ಕಲೆಕ್ಟರನ ಜೀವನ, ಸಾಧನೆ, ಆಡಳಿತ ಇತರೆ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಯನ್ನು ವಿವರಿಸಲಾಗುತ್ತದೆ. ಈ ಮೊದಲೇ ತಿಳಿಸಿದಂತೆ ೧೮೦೦ ರಿಂದ ೧೯೪೭ರವರೆಗೆ ೧೧೨ ಜನ ಕಲೆಕ್ಟರುಗಳು ಆಳ್ವಿಕೆ ನಡೆಸಿರುತ್ತಾರೆ. ಒಬ್ಬ ಕಲೆಕ್ಟರ್ ಎಷ್ಟು ವರ್ಷ ಬೇಕಾದರೂ ಆಡಳಿತ ನಡೆಸಬಹುದಿತ್ತು ಎಂಬುದಕ್ಕೆ ಯಾವುದೇ ನಿರ್ಬಂಧವಿದ್ದಂ ತಿಲ್ಲ. ಆದರೆ, ಅವನ ಆಡಳಿತ, ನೀತಿ, ರಾಜಕೀಯ ಪರಿಸ್ಥಿತಿ, ಜನಜೀವನ ಸ್ಥಿತಿಗತಿಗಳನ್ನು ಅವಲಂಬಿಸಿತ್ತು. ಹಾಗಾಗಿ ಕೆಲವೊಬ್ಬ ಕಲೆಕ್ಟರ್ ೯-೧೦ ವರ್ಷಗಳವರೆಗೆ ಆಡಳಿತ ನಡೆಸಿದರೆ, ಇನ್ನೊಬ್ಬ ಕೇವಲ ೧೪ ದಿನ ಆಡಳಿತ (ಮ್ಯಾಥ್ಯೂಲಿವಿನ್, ೧೭.೧೨.೧೮೩೮ ರಿಂದ ೩೧.೧೨. ೧೮೩೮) ನಡೆಸಿರುವುದನ್ನು ತಿಳಿಯಬಹುದು. ಇದರಿಂದ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಶಾಶ್ವತ ಸ್ಥಾನವಿದ್ದಿತ್ತೆಂದು ತಿಳಿಯಬಹುದು.

ಈ ಮುಂದೆ ವಿವರಿಸುವ ಕಲೆಕ್ಟರುಗಳನ್ನು ಸಾಮಾನ್ಯವಾಗಿ ಆಡಳಿತಕ್ಕೆ ಮಹತ್ವ ಕೊಟ್ಟು ಇತರ ಕ್ಷೇತ್ರಗಳಲ್ಲಿ ಮಾಡಿದ ಸುಧಾರಣೆ, ಜಾರಿಗೆ ತಂದ ಹೊಸ ನೀತಿಗಳು, ಮತ್ತಿತರ ಮಹತ್ವದ ಅಂಶಗಳನ್ನು ಕುರಿತು ವಿವರಿಸಲಾಗಿದೆ. ಉಳಿದ ಕಲೆಕ್ಟರುಗಳನ್ನು ಅವರ ಆಳ್ವಿಕೆ ಯಲ್ಲಾದ ಬದಲಾವಣೆಗಳಲ್ಲಿ ಪ್ರಸ್ತಾಪಿಸಲಾಗಿದ್ದು, ಒಟ್ಟು ಎಲ್ಲಾ ಕಲೆಕ್ಟರುಗಳ ಪಟ್ಟಿಯನ್ನು ಅನುಬಂಧದಲ್ಲಿ ಕೊಡಲಾಗಿದೆ.

೧. ಸರ್. ಥಾಮಸ್ ಮನ್ರೋ ಡಿಸೆಂಬರ್ ೧೮೦೦ ರಿಂದ ೧೪.೧೦.೧೮೦೭
೨. ವಿಲಿಯಂ ಚಾಪ್ಲಿನ್ ೧೩.೦೭.೧೮೦೯ ರಿಂದ ೧೩.೦೬.೧೮೧೮
೩. ಎಫ್.ಡಬ್ಲ್ಯೂ. ರಾಬರ್ಟ್‌ಸನ್ ೬.೦೪.೧೮೨೮ ರಿಂದ ೧೬.೧೨.೧೮೩೮
೪. ಎ. ಮಿಲ್ಲರ್. ೨೨.೦೮.೧೮೪೦ ರಿಂದ ೦೭.೦೮.೧೮೪೮
೫. ಡಿ.ಮಾಯ್ನೆ ೦೮.೦೮.೧೮೪೮ ರಿಂದ ೨೩.೦೮.೧೮೪೮
೬. ಎ. ಹ್ಯಾಥವೇ ೦೯.೦೮.೧೮೫೦ ರಿಂದ ೨೦.೦೪.೧೮೫೯
೨೩.೦೮.೧೮೮೪ ರಿಂದ ೨೯.೧೧.೧೮೮೪
೭. ರಾಬರ್ಟ್ ಸಿವೆಲ್ ೨೮.೦೨.೧೮೯೦ ರಿಂದ ೦೯.೦೩.೧೮೯೦
ರಾಬರ್ಟ್ ಸಿವೆಲ್ ೧೨.೦೬.೧೮೯೩ ರಿಂದ ೦೭.೦೧.೧೮೯೪
ರಾಬರ್ಟ್‌ಸಿವೆಲ್ ೦೧.೦೨.೧೮೯೪ ರಿಂದ ೧೫.೦೫.೧೮೯೪
೮. ಎ.ಎಫ್.ಜಿ. ಮೆಕಾರ್ಡಿ ೧೮.೦೪.೧೯೧೩ ರಿಂದ ೦೮.೦೪.೧೯೧೫
ಎ.ಎಫ್.ಜಿ. ಮೆಕಾರ್ಡಿ ೧೨.೦೫.೧೯೧೫ ರಿಂದ ೦೧.೦೯.೧೯೧೬
ಎ.ಎಫ್.ಜಿ. ಮೆಕಾರ್ಡಿ ೦೧.೧೨.೧೯೧೬ ರಿಂದ ೦೯.೦೯.೧೯೨೧

೩.೨.೧. ಸರ್. ಥಾಮಸ್ ಮನ್ರೋ (೧೭೬೧೧೮೨೭)

ಸರ್. ಥಾಮಸ್ ಮನ್ರೋ ಬಳ್ಳಾರಿ ಜಿಲ್ಲೆಯ ಪ್ರಪ್ರಥಮ ಕಲೆಕ್ಟರನಾಗಿ ಆಡಳಿತ ನಡೆಸಿ ಜನಪ್ರಿಯನಾದವನು. ಅತೀ ಚಾಣಕ್ಷ, ದಕ್ಷ ಆಡಳಿತಗಾರ ಹಾಗೂ ಮಹತ್ವಾಕಾಂಕ್ಷಿಯಾಗಿದ್ದ ಮನ್ರೋ ಇಲ್ಲಿನ ರಾಜಕೀಯ ವಿಪ್ಲವವನ್ನು, ಅಹಿತಕರ ಸನ್ನಿವೇಶವನ್ನು ಬಹು ಜಾಣ್ಮೆಯಿಂದ ಪರಿಹರಿಸಿದನು. ಕನ್ನಡ ಪ್ರದೇಶಗಳಲ್ಲಿ ಒಂದೇ ಆಡಳಿತವನ್ನು ಒಟ್ಟುಗೂಡಿಸ ಬೇಕೆಂದು ಹಂಬಲಿಸಿ, ಕೊನೆಗೆ ಯಶಸ್ವಿಯಾಗುವಲ್ಲಿ ಪ್ರಥಮನಾಗಿದ್ದಾನೆ. ಮತ್ತು ೧೧೨ ಜನ ಕಲೆಕ್ಟರುಗಳಲ್ಲಿ ಅತೀ ಶ್ರಮಿಸಿದ, ಅಸಾಧ್ಯವಾದುದನ್ನು ಸಾಧಿಸಿ ಸೋಲು-ಗೆಲುವುಗಳನ್ನು ಕಂಡುಂಡ ಮನ್ರೋ ಏಕೈಕ ರಾಜಕೀಯ ಆಡಳಿತ ಪಯಣಿಗನಾಗಿದ್ದಾನೆ. ವಿದೇಶಿ ಭಾಷೆಯಿಂದ ನ್ಯಾಯಾಲಯಗಳಲ್ಲಿ ಜನಸಾಮಾನ್ಯರಿಗೆ ಆಗುತ್ತಿದ್ದ ಮುಜುಗರವನ್ನು ತಪ್ಪಿಸಲು ಕನ್ನಡ ಭಾಷೆಯನ್ನು ಪ್ರೋತ್ಸಾಹ ಕನ್ನಡದ ನ್ಯಾಯಾಧೀಶರನ್ನು ನೇಮಿಸಿ ಆಡಳಿತ ನಡೆಸಿದ ಮಹಾಸಾಧಕ.

ಮನ್ರೋ ಮೇ ೨೭, ೧೭೬೧ರಲ್ಲಿ ಇಂಗ್ಲೆಂಡಿನ ಗ್ಲಾಸ್ಗೋ ಎಂಬಲ್ಲಿ ಜನಿಸಿದನು. ತಂದೆ ಅಲೆಗ್ಸಾಂಡರ್ ಮನ್ರೋ. ಈತನು ವ್ಯಾಪಾರ ವೃತ್ತಿಯಿಂದ ವರ್ಜೀನಿಯಾದಲ್ಲಿ ನೆಲಸಿದ್ದನು. ಗ್ಲಾಸ್ಗೊ ಗ್ರಾಮರ್ ಸ್ಕೂಲ್‌ನಲ್ಲಿ ಪದವಿಪೂರ್ವ ಶಿಕ್ಷಣ ಪಡೆದು, ಗ್ಲಾಸ್ಗೊ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದನು. ಯುವಕನಾಗಿರುವಾಗಲೇ ಸೈನ್ಯಕ್ಕೆ ಸೇರಿ ಭಾರತಕ್ಕೆ ಬಂದನು. ಹಳೇಮೈಸೂರು, ಬಾರಮಹಲ್, ಗಡಿಯಾಲ್ ಸ್ಥಳಗಳಲ್ಲಿ ೧೭೯೦ರ ದಶಕ ದವರೆಗೆ ಬಹುದಕ್ಷ ಸೇನಾತಜ್ಞನೆಂದು ಖ್ಯಾತಿ ಪಡೆದ. ಟಿಪ್ಪುವಿನ ಪತನಾನಂತರ ೧೭೯೯ರಲ್ಲಿ ದಕ್ಷಿಣ ಕನ್ನಡಕ್ಕೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಜನಪ್ರಿಯನಾಗಿದ್ದನು. ೧೮೧೯-೨೭ರವರೆಗೆ ಮದ್ರಾಸ್ ಪ್ರಾಂತ್ಯದಲ್ಲಿ ಗವರ್ನರ್‌ನಾಗಿದ್ದಾಗಲೇ ಸ್ವದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ (೧೮೨೭ರಲ್ಲಿ) ಸಾವನ್ನಪ್ಪಿದನು. ಐ.ಎಂ. ಮುತ್ತಣ್ಣ ಅವರು ಭಾರತ ಸಾಹಿತ್ಯ, ಸಂಸ್ಕೃತಿಗೆ ಪಾಶ್ಚಾತ್ಯ ವಿದ್ವಾಂಸರ ಸೇವೆ ಎಂಬ ಕೃತಿಯಲ್ಲಿ ಮನ್ರೋ ಆಡಳಿತ ನೀತಿ ಬಗ್ಗೆ ತಿಳಿಸಿದ್ದಾರೆ

ಭಾಷೆ ಆಡಳಿತ ನಡೆಸಲು ಪ್ರಮುಖ ಸಾಧನ. ಅಧಿಕಾರಿ ಮತ್ತು ಜನರಿಗೆ ಸಂಪರ್ಕ ಕಲ್ಪಿಸುವುದು ಭಾಷೆ. ‘ಆಳುವ ಮತ್ತು ಆಳಿಸಿಕೊಳ್ಳುವವನ ನಡುವೆ ಸೇತುವೆ ನಿರ್ಮಾಣ ಜನಸಾಮಾನ್ಯರ ಭಾಷೆ’ ಎಂದು ಮಹಾದೇವ ಬಣಕಾರ ‘ಆಂಗ್ಲರ ಆಡಳಿತದಲ್ಲಿ ಕನ್ನಡ’ ಎಂಬ ಕೃತಿಯಲ್ಲಿ ತಿಳಿಸಿದ್ದಾರೆ. ಮುಂದುವರೆದು-ಮನ್ರೋನ ಯಶಸ್ವಿ ಆಡಳಿತಕ್ಕೆ ತಜ್ಞರು ಎರಡು ಕಾರಣಗಳನ್ನು ಕೊಟ್ಟಿರುತ್ತಾರೆ. ೧. ಪ್ರಾದೇಶಿಕ ಜನರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ೨. ಪ್ರಾದೇಶಿಕ ಮತ್ತು ಆ ಪ್ರದೇಶದ ಭಾಷೆಯ ಜ್ಞಾನವನ್ನು ಪಡೆಯುವ ನಿರಂತರ ಯತ್ನ. ಮನ್ರೋ ಪರ್ಷಿಯನ್, ಅರೆಬಿಕ್ ಮತ್ತು ಹಿಂದುಸ್ಥಾನಿ ಭಾಷೆಗಳನ್ನು ತಿಳಿದಿದ್ದನು. ಕನ್ನಡ ಮತ್ತು ಮರಾಠಿಯಲ್ಲಿ ಹೆಚ್ಚಿನ ಪರಿಣತಿ ಪಡೆದಿದ್ದ. ಇವನು ಉತ್ತಮ ಗುಣಮಟ್ಟದ ಅಧಿಕಾರಿ, ತೆರಿಗೆಗಳ ಬಗ್ಗೆ ಸಾಮಾನ್ಯ ಜನರೊಂದಿಗೆ ಚರ್ಚಿಸುತ್ತಿದ್ದ. ಆಡಳಿತ ನಡೆಸುವ ಅಧಿಕಾರಿಗಳ ಅರ್ಹತೆ, ನಡವಳಿಕೆಗಳ ಬಗ್ಗೆ ಚಿಂತಿಸಿದ್ದನು. ಸ್ಥಳೀಯರಿಗೆ ಆಡಳಿತದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಇರಬೇಕೆಂದು ಬಯಸಿದ್ದನು. ಆವರೆಗೂ ಕೇವಲ ಯುರೋಪಿಯನ್ನರನ್ನು ಮಾತ್ರ ಆಡಳಿತಕ್ಕೆ ನೇಮಿಸಿಕೊಳ್ಳುತ್ತಿದ್ದರು. ಇದನ್ನು ಮನ್ರೋ ಸಡಿಲಗೊಳಿಸಿ, ಸ್ಥಳೀಯರಿಗೆ ಆದ್ಯತೆ ಕೊಟ್ಟ. ಕನ್ನಡ ಪ್ರದೇಶಗಳನ್ನು ಒಟ್ಟುಗೂಡಿಸಿದ ಕೀರ್ತಿ ಮನ್ರೋಗೆ ಸಲ್ಲುತ್ತದೆ. ಕೃಷ್ಣಾ ನದಿಯ ದಕ್ಷಿಣಕ್ಕಿರುವ ಪ್ರದೇಶಗಳಾದ ಸಾಂಗ್ಲಿ ಮತ್ತು ಮೀರಜ್ ಇವರ ಪ್ರದೇಶ ಗಳನ್ನು ಮುಂಬಾಯಿ ಪ್ರಾಂತ್ಯದಿಂದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿ ಕನ್ನಡಿಗರ ಸಾಮರಸ್ಯ ಒಂದೆಡೆ ಇರಲು ಬಯಸಿದ್ದನು.*       Memorandum on the Progress of the Madras Presidency during the Last Forty Years of British administration – S. Srinivasa Raghvayangar, A.E.S. New Delhi, 1988, Pp. XXIV.

Ceded districts – Bellary and Cuddaph the state of the districts in 1800, when they were ceded by the Nizam, has been thus Described : Probably no part of  Southern India was in a more unsettled state or less acquainted either by experience or by tradition with the blessings of settled Government, the Collection of the Zemindars. Poligars and potalls each of these became the leader of a little army and carried on destructive feuds with the Villages immadiately contiguous to him.

It is computed that in the year 1800, when the ceded districts were transferred to the company’s rule, there were scattered through them, exclusive of the Nizams troops, 30,000 armed peons; the whole of them, under the command of 80 poligars, subsisted by rapine and committed every where the greatest excasses

[1]       ಡಬ್ಲ್ಯೂ. ಫ್ರಾನ್ಸಿಸ್, ಬಳ್ಳಾರಿ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ೧೯೦೪, ಪು. ೪೯.

[2]       ಅದೇ. ಪು. ೪೯.

[3]       ಅದೇ. ಪು. ೪೯.

[4]       ಡಬ್ಲ್ಯೂ. ಫ್ರಾನ್ಸಿಸ್, ಬಳ್ಳಾರಿ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ೧೯೦೪, ಪು. ೪೯.